Thursday, March 27, 2008

ಬಯಸದೇ ಬಂದ ಭಾಗ್ಯ!

ಇದು ಹಳೆಯ ಕನ್ನಡ ಸಿನಿಮಾ ಹೆಸರು. ಈಗ ಯಾಕೋ ನನಗೆ ಮತ್ತೆ ಮತ್ತೆ ನೆನಪಾಗುತ್ತಿದೆ. ನನಗಾಗೇ ಹೇಳಿದ್ದೇನೋ ಅನ್ನಿಸ್ತಿದೆ. ಕಾರಣ ನನಗೆ ಬಯಸದೇ ಕೆಲವು ಭಾಗ್ಯಗಳು ಒಲಿದುಬಂದಿವೆ. ಅದ್ಯಾರೋ ದೊಡ್ಡವರು ಕನಸು ಕಾಣುವುದು ಕಲಿಯಿರಿ. ನಂತರ ಅದನ್ನು ನನಸು ಮಾಡಲು ಯತ್ನಿಸಿ ಎಂದಿದ್ದಾರಂತೆ. ಆದರೆ ಕಂಡ ಕನಸು ಪ್ರಯತ್ನವಿಲ್ಲದೇ ನನಸಾದಾಗ ಅದನ್ನು ಬಯಸದೇ ಬಂದ ಭಾಗ್ಯ ಅನ್ನಬಹುದೇನೊ.
ಅದೊಂದು ದಿನ ಮಧ್ಯಾಹ್ನದ ಹೊತ್ತಿಗೆ ಕಚೇರಿಯಿಂದ ಕೃಷ್ಣ ಭಟ್ಟರು ಫೋನ್ ಮಾಡಿ "ಭಟ್ರೆ ಹೊಸ ವರುಷಕ್ಕೆ ನಿಮ್ಮ ಕನಸೇನು?' ಅಂದರು. ನಿಜಕ್ಕೂ ನಾನು ಯಾವ ಕನಸೂ ಕಂಡಿರಲೇ ಇಲ್ಲ. ಸಾಪ್ತಾಹಿಕಕ್ಕೆ ಕೇಳ್ತಿದಾರೆ ಅಂದರು. ತಕ್ಷಣಕ್ಕೆ ಮನಸ್ಸಿಗೆ ಅನ್ನಿಸಿದ್ದು ಬರೆದುಕೊಟ್ಟೆ. ಅದು ಪ್ರಕಟವೂ ಆಯ್ತು.
ನಾನೋ ಕಂಡ ಅಥವಾ ಹೇಳಿಕೊಂಡ ಕನಸು ನನಸು ಮಾಡಲು ಒಂಚೂರು ಯತ್ನಿಸಿರಲಿಲ್ಲ. ಅಷ್ಟರಲ್ಲಿ ಒಂದು ದಿನ ಆರ್ ಟಿಒ ಇನ್ಸ್ಪೆಕ್ಟರ್ ಕೇಶವ ಧರಣಿ ಸಿಕ್ಕಿದವರು "ನೀವು ಅವತ್ತು ಅಪಘಾತಗಳ ಬಗ್ಗೆ ಸರಣಿ ಲೇಖನ ಬರೆದಿದ್ದಿರಲ್ಲ. ಕೆಲವು ನನ್ನಲ್ಲಿವೆ. ಎಲ್ಲವೂ ಇದ್ದರೆ ಕೊಡಿ. ಈ ಬಾರಿಯ ರಸ್ತೆ ಸುರಕ್ಷತಾ ಸಪ್ತಾಹದ ಸಮಾರೋಪ ಸಮಾರಂಭದಲ್ಲಿ ಪುಸ್ತಕ ಮಾಡಿ ಬಿಡುಗಡೆ ಮಾಡುವ. ಲೇಖನಗಳು ತುಂಬಾ ಚೆನ್ನಾಗಿದ್ದವು' ಅಂದರು. ಹುಂ. ಅಂದೆ. ಹಾಗಂದ ತಪ್ಪಿಗೆ ಹಳೆಯ ಲೇಖನಗಳನ್ನೆಲ್ಲ ಸ್ವಲ್ಪ ತಿದ್ದಿ, ಅಪ್ ಗ್ರೇಡ್ ಮಾಡಿ ಕೊಟ್ಟೆ. ಪುಸ್ತಕವಾಗಿ ಬಿಡುಗಡೆಯೂ ನಡೆದುಹೋಯಿತು. ಸರಿಯಾಗಿ ನನಗೂ ಗೊತ್ತಾಗದೆ!
ಇವತ್ತು ಗೋಪಾಲಕೃಷ್ಣ ಕುಂಟಿನಿ ಫೋನ್ ಮಾಡಿ "ಭಟ್ರೆ ನಿಮ್ಮ ಬ್ಲಾಗಿನ ಬಗ್ಗೆ ಕೆಂಡಸಂಪಿಗೆ ಡಾಟ್ ಕಾಂನಲ್ಲಿ ಚೆನ್ನಾಗಿ ಬರೆದಿದ್ದಾರೆ' ಅಂದರು. ನೋಡಿದರೆ ಹೌದು. ಏನೋ ನಮ್ಮ ತೆವಲಿಗೆ ಪುರುಸೊತ್ತಾದಾಗ ಬರೆದು ಬ್ಲಾಗಿಸುತ್ತೇವೆ. ಪಾಪ ನಾಲ್ಕೈದು ಜನ ಓದಿ ಕಾಮೆಂಟಿಸ್ತಾರೆ ಅಂದ್ಕೊಡಿದ್ದೆ. ಆದರೆ ಈ ಅನಿರೀಕ್ಷಿತ ಹೊಗಳಿಕೆ ಬಂದಿದೆ. ಕೆಂಡಸಂಪಿಗೆ ಡಾಟ್ ಕಾಂ ಮಾಲಿಕರಿಗೆ ನಾನು ಋಣಿ. ನನ್ನ ಬ್ಲಾಗಿನ ಬಗ್ಗೆ ಬರೆದಿದ್ದಕ್ಕೆ, ನನ್ನನ್ನು ಹುರಿದುಂಬಿಸಿದ್ದಕ್ಕೆ.
ಅವರು ನನ್ನ ಬ್ಲಾಗಿನ ಮೇಲೆ ಅಷ್ಟು ಬರೆದ ಮೇಲೂ ನಾನು ತುಂಬ ದಿನ ಬ್ಲಾಗು ಅಪ್ ಡೇಟ್ ಮಾಡದಿದ್ದರೆ ಹೇಗೆ? ಅನ್ನಿಸಿ ಭಾರೀ ಹುರುಪಿನಲ್ಲಿ ಕುಂತ ಮೆಟ್ಟಿನಲ್ಲಿ 3 ಲೇಖನ ಬರೆದು ಹಾಕಿದ್ದೇನೆ. ಓದಿಕೊಳ್ಳುವ ಇಷ್ಟ-ಕಷ್ಟ ನಿಮಗಿರಲಿ.

ಒಂದು ಬದಿ ಕಡಲು: ಸಮಯ ಮಾಡಿಕೊಳ್ಳಿ ಓದಲು

ಚುಕು ಬುಕು ರೈಲು ಹಳಿಗಳ ಮೇಲೆ ಗಡಗಡ ಸದ್ದು ಮಾಡುತ್ತ ಮಂಗಳೂರಿನಿಂದ ಗೋವೆಯ ಕಡೆಗೆ ಹೊರಟಿತ್ತು. ರೈಲಿನಲ್ಲಿ ಹೋಗುವಾಗ ಒಂದು ಬದಿಗೆ ಕಡಲೇ! ನಾನು ರೈಲಿನಲ್ಲಿ ಕುಳಿತು ವಿವೇಕ ಶ್ಯಾನುಭಾಗರ ಒಂದು ಬದಿ ಕಡಲು ಓದುತ್ತಿದ್ದೆ.
ನನ್ನ ಊರಿಗೆ ಹತ್ತಿರದಲ್ಲೇ ಇರುವ ಹೊನ್ನಾವರ ಒಂದು ಬದಿ ಕಡಲು ಕಾದಂಬರಿ ನಡೆಯುವ ಸ್ಥಳವಾದ್ದರಿಂದಲೋ ಏನೋ ಇಲ್ಲೇ ಎಲ್ಲೋ ನನ್ನ ಮನೆಯ ಪಕ್ಕದಲ್ಲಿಯೇ ಈ ಘಟನೆಗಳು ಸಂಭವಿಸಿದವೇನೋ ಅನ್ನಿಸಿಬಿಟ್ಟಿತು. ರೈಲಿನಲ್ಲಿ ಊರಿಗೆ ಹೋಗಿ, ಎರಡು ದಿನ ಬಿಟ್ಟು ಬರುವಾಗ ಹೀಗೆ ರೈಲಿನಲ್ಲಿಯೇ ವಿವೇಕ ಶ್ಯಾನುಭಾಗರ ಒಂದು ಬದಿ ಕಡಲು ಓದಿ ಮುಗಿಸಿದ್ದೇನೆ.
ಊರಿಗೆ ಹೋಗಿ ಬಂದ ಖುಶಿ ಒಂದೆಡೆಯಾದರೆ, ಕಾದಂಬರಿ ಓದಿದ ತೃಪ್ತಿ ಇನ್ನೊಂದೆಡೆ. ಹೀಗಾಗಿಯೇ ಊರಿಗೆ ಹೋಗಿ ಬಂದರೆ ಮನಸ್ಸು ತುಂಬ ಖುಶ್ ಖುಶ್!
ವಿವೇಕ ಶ್ಯಾನುಭಾಗರು ಸಾಕಷ್ಟು ಬರೆದಿದ್ದಾರೆ. ಸತ್ಯ ಹೇಳ್ತೇನೆ. ನಾನು ಉತ್ತರ ಕನ್ನಡದವನಾಗಿಯೂ ಅವರ ಒಂದೇ ಒಂದು ಪುಸ್ತಕ ಓದಿರಲಿಲ್ಲ. ಒಂದು ಬದಿ ಕಡಲು ಓದಿದೆ ನೋಡಿ, ಅವರು ಇಷ್ಟವಾಗಿಬಿಟ್ಟರು. ಕಾದಂಬರಿಯಂತೆ!
ಕಾದಂಬರಿಯುದ್ದಕ್ಕೂ ಉತ್ತರ ಕನ್ನಡದ ಜನಜೀವನ, ಅವರ ವರ್ತನೆಗಳೂ, ಎರಡೂ ಮನೆಯ ನಡುವೆ ಪಾಗಾರವೂ, ಬಾಂದುಕಲ್ಲೂ ಇರದ ಗಡಿಗಳು, ಅವರ ಜಗಳಗಳು, ಅಲ್ಲೇ ಒಳಗಿನ ಪ್ರೀತಿ ಎಲ್ಲವೂ ಸಹಜವಾಗಿ ಕಾದಂಬರಿಯಲ್ಲಿ ಬೆರೆತುಹೋಗಿದೆ. ಉತ್ತರ ಕನ್ನಡ ಕೆಲವು ಅಪರೂಪದ ಶಬ್ದಗಳು ಕೂಡ ಕಾದಂಬರಿಯಲ್ಲಿ ನಿಮಗೆ ಲಭ್ಯ.
ನೀವು ಉತ್ತರ ಕನ್ನಡದವರಾಗಿದ್ದರೂ ಈ ಕಾದಂಬರಿ ಓದಿ. ಉತ್ತರ ಕನ್ನದವರಾಗಿರದಿದ್ದರೂ ಅದನ್ನು ಓದಿ!! ನೀವು ಉತ್ತರ ಕನ್ನಡದವರೇ ಆಗಿದ್ದರೆ ನಿಮಗೆ ಕಾದಂಬರಿ ಆಪ್ತ ಅನ್ನಿಸೀತು. ನೀವು ಉತ್ತರ ಕನ್ನಡದವರಲ್ಲದೇ ಇದ್ದಲ್ಲಿ ಕಾದಂಬರಿ ನಿಮಗೆ ಉತ್ತರ ಕನ್ನಡದ ಜನ ಜೀವನದ ಪರಿಚಯ ಮಾಡಿಸೀತು. ಕಾದಂಬರಿ ಓದಿದವನಾಗಿ ಧೈರ್ಯದಿಂದ ಹೇಳಬಲ್ಲೆ ಒಂದು ಬದಿ ಕಡಲು ನಿಮಗೆ ಖಂಡಿತ ಇಷ್ಟವಾಗುತ್ತದೆ.

ರೇಸ್: ನೋಡಿದ್ರೆ ಆಗಲ್ಲ ಲಾಸ್!

ಒಂದೆಡೆ ಸಂತೋಷ. ಇನ್ನೊಂದೆಡೆ ದುಗುಡ!
ಒಂದೊಳ್ಳೆ ಸಿನಿಮಾ ನೋಡಿದ ಸಂತೋಷ. ಕನ್ನಡದಲ್ಲಿ ಇಂತಹ ಸಿನಿಮಾಗಳು ಯಾಕೆ ಬರ್ತಾ ಇಲ್ಲ ಎಂಬ ಕೊರಗು! ಹಿಂದಿಯ ರೇಸ್ ಸಿನಿಮಾ ನೋಡಿ ಹೆಂಡತಿಯ ಕೈ ಹಿಡಿದು ಹೊರಬರುತ್ತಿದ್ದರೆ ಮನಸ್ಸಿನಲ್ಲಿ ದ್ವಂದ್ವ!!
ಅದೆಷ್ಟು ಚೆನ್ನಾಗಿದೆ ಚಿತ್ರ. ಕಥೆಯೇನು ಅಂತಹ ಮಹಾನ್ ಅಲ್ಲ. ಆದರೆ ಚಿತ್ರದ ತುಂಬ ಅದ್ಭುತ ತಿರುವುಗಳು, ಅನೂಹ್ಯ ಒಳಸುಳಿಗಳು, ಸಖತ್ ಸ್ಟಂಟ್‌ಗಳು, ಎಲ್ಲೂ ಅನಗತ್ಯ ಎನಿಸದ ದೃಶ್ಯಗಳು ಚಿತ್ರವನ್ನು ಉಸಿರು ಬಿಗಿ ಹಿಡಿದು ನೋಡುವಂತೆ ಮಾಡಿವೆ. ರೇಸ್ ಸಿನಿಮಾ ಪೋಸ್ಟರ್‌ನಲ್ಲಿ ಬಿಪಾಶಾ (‘ಬಿ’ಪಿ ಏರಿಸಿ ಜೀವಕ್ಕೆ ‘ಪಾಶಾ’ ಹಾಕುವವಳು ಎನ್ನಬಹುದೇ?) ಪೋಸ್ಟರ್ ನೋಡಿ ಸಿನಿಮಾಕ್ಕೆ ಹೋದರೂ, ಹೊರಬರುವಾಗ ಅದೊಂದು ಬಿಟ್ಟು ಉಳಿದೆಲ್ಲ ನಿಮ್ಮ ಮನಸ್ಸಿನಲ್ಲಿ ಅಚ್ಚೊತ್ತಿರುತ್ತದೆ. ಸಿನಿಮಾ ನೋಡಿ ಹೊರಬಂದವರು ಅಬ್ಬಾಸ್ ಮಸ್ತಾನ್‌ಗೆ ಒಂದು ಶಬ್ಬಾಸ್ ಕೊಡ್ತಾರೆ. ಆರಂಭದಿಂದ ಅಂತ್ಯದವರೆಗೆ ಆಸಕ್ತಿ ಕೆರಳಿಸುವಂತೆ ಸಿನಿಮಾ ನಿರೂಪಿಸುತ್ತ ಹೋಗಿದ್ದಾನೆ ನಿರ್ದೇಶಕ. ಒಂದೆರಡು ಹಾಡುಗಳು ಮಾತ್ರ ಹೆಚ್ಚಿನಿಸುವಂತಿದ್ದವು.
ಇದು ಖಂಡಿತ ಸಖತ್ ಸಿನಿಮಾ. ಸಮಯ ಸಿಕ್ಕರೆ ನೋಡಿ. ರೇಸ್ ಸಿನಿಮಾ ನೋಡಿದರೆ ಖಂಡಿತ ಆಗಲ್ಲ ಲಾಸ್!
ಒಳ್ಳೆ ಸಿನಿಮಾ ನೋಡಿಯಾದ ಮೇಲೆ ನಿಂಗ್ಯಾಕಪ್ಪ ದುಗುಡ ಅಂತ ಕ್ಯಾತೆ ತೆಗಿಬೇಡಿ. ಇತ್ತೀಚೆಗೆ ರವಿ ಬೆಳೆಗೆರೆ ಅಭಿನಯದ ವಾರಸ್ದಾರ ನೋಡ್ದೆ. ನಾನು ಬೆಳೆಗೆರ ಅವರ ಅಭಿಮಾನಿ. ಅವರ ಎಲ್ಲ ಕಾದಂಬರಿ ಓದಿ ಮೆಚ್ಚಿದವನು. ತುಂಬ ಆಸೆಯಿಂದ ವಾರಸ್ದಾರಕ್ಕೆ ಹೋದರೆ, ಆದದ್ದು ನಿರಾಸೆ!
ನಿಜಕ್ಕೂ ಚಿತ್ರ ಚೆನ್ನಾಗಿಲ್ಲ. ಬೆಳೆಗೆರೆ ಅವರ ಮೇಲಿನ ಪ್ರೀತಿಯಿಂದಲೋ ಏನೋ ಮಾಧ್ಯಮಗಳು ಚಿತ್ರವನ್ನು ತೆಗಳಿಲ್ಲ. ಆದರೆ ಹೊಗಳಲೂ ಇಲ್ಲ! ಇಲ್ಲಿ ಬೆಳೆಗೆರೆಯ ತಪ್ಪಿಲ್ಲ. ಅವರ ನಟನೆ ಗುಡ್. ಆದರೆ ನಿರ್ದೇಶಕ ಗುರುದೇಶಪಾಂಡೆ ಎಡವಿದ್ದಾರೆ. ಅಷ್ಟೇ ಅಲ್ಲ ಎಡವಿ ಮುಗ್ಗರಿಸಿ ಬಿದ್ದಿದ್ದಾರೆ!
ವಾರಸ್ದಾರ ಹಿಂದಿಯ ಸರ್ಕಾರ್ ಸಿನಿಮಾ ಹೋಲುತ್ತದೆ. ಸರ್ಕಾರ್ ಸಿನಿಮಾಕ್ಕೆ ಹೋಲಿಸದೇ ಇದ್ದರೂ ವಾರಸ್ದಾರ ಚೆನ್ನಾಗಿಲ್ಲ. ಇನ್ನು ಸರ್ಕಾರ್ ನೋಡಿ ಹೋದರಂತೂ ಕತೆ ಮುಗಿದಂತೆಯೇ. ಸರ್ಕಾರ್ ಸಿನಿಮಾದಲ್ಲಿ ಅಮಿತಾಬ್ ನಟನೆ, ಉಂಟೋ ಇಲ್ಲವೋ ಎಂಬಷ್ಟೇ ಮಾತು, ಕೇವಲ ಕೈ, ಬಾಯಿ, ಕಣ್ಣು ಇಷ್ಟನ್ನೇ ತೋರಿಸುವ ಕ್ಯಾಮರಾ ವರ್ಕ್, ಭೂಗತ ಜಗತ್ತಿನ ಒಳಸುಳಿಗಳು ಚೆನ್ನಾಗಿ ಬಿಂಬಿತವಾಗಿವೆ. ರವಿ ಬೆಳೆಗಯಂತಹ ಒಬ್ಬ ಭೂಗತ ಲೋಕದ ಪರಿಚಯ ಇದ್ದವರಾಗಿ, ಭೂಗತ ಲೋಕದಲ್ಲಿ ಗೆಳೆಯರನ್ನು ಹೊಂದಿದವರಾಗಿ ವಾರಸ್ದಾರ ಚಿತ್ರವನ್ನು ಇನ್ನಷ್ಟು ಚೆನ್ನಾಗಿ ಮಾಡಬಹುದಿತ್ತು. ಆದರೆ ಬೆಳೆಗೆರೆ ಅಷ್ಟಾಗಿ ಅತ್ತ ತಲೆ ಹಾಕದಿರುವುದು ಇದಕ್ಕೆ ಕಾರಣವೂ ಇರಬಹುದು. ಅದಕ್ಕೇ ಹೇಳಿದ್ದು ನಿರ್ದೇಶಕ ಎಡವಿದ್ದಾನೆ ಎಂದು. ಚಿತ್ರ ನೋಡಿ ನಿಜಕ್ಕೂ ಬೇಜಾರಾಯಿತು.
ಗುರು ದೇಶಪಾಂಡೆ ಇನ್ನು ಮುಂದಾದರೂ ಸುಧಾರಿಸಿಕೊಳ್ಳಲಿ. ಒಳ್ಳೆ ಚಿತ್ರ ನೀಡಲಿ. ಅದನ್ನು ಕನ್ನಡದ ಜನ ನೋಡಲಿ.

Sunday, March 09, 2008

ಅಂಚಿ, ಇಂಚಿ ಎಲ್ಲಿ ಹೋದರೂ ಬೇಕು ಸಂಚಿ!

ಸಂಚಿ! ಅಲಿಯಾಸ್ ಚಂಚಿ!! ಯಾನೆ ಕವಳ್ಚಂಚಿ!!!
ಉತ್ತರ ಕನ್ನಡದವರಿಗೆ ಈ ಶಬ್ದ ಚಿರಪರಿಚಿತ. ಕವಳ ಸಂಚಿ ಎಂಬುದು ಉತ್ತರ ಕನ್ನಡದ ಕರಾವಳಿಯಲ್ಲಿರುವ ಹಾಲಕ್ಕಿ ಜನಾಂಗದವರ ದೇಹದ್ದೇ ಒಂದು ಅವಿಭಾಜ್ಯ ಅಂಗ!
ಅಂಗಿ ಇಲ್ಲದಿದ್ದರೂ ನಡೆದೀತು. ಸಂಚಿ ಇಲ್ಲದೇ ಸಾಧ್ಯವಿಲ್ಲ. ಮುಂಡು ಹರಿದಿದ್ದರೂ ಆದೀತು. ಸಂಚಿ ಸರಿಯಾಗಿ ಇರಬೇಕು. ಅಂಚಿ(ಅಲ್ಲಿ), ಇಂಚಿ (ಇಲ್ಲಿ) ಎಲ್ಲೇ ಹೋದರೂ ಅವರ ಸೊಂಟಕ್ಕೆ ಸಂಚಿ ಇರಲೇಬೇಕು. ಪ್ಯಾಂಟು ಹೊಲಿದು, ಉಳಿದ ಬಟ್ಟೆಯಿಂದ ಸಂಚಿ ಮಾಡುವುದು ಹೆಚ್ಚು ಜನಪ್ರಿಯ.
ಇದರಲ್ಲಿ ಒಂದು ಸುಣ್ಣದ ಡಬ್ಬ. ಒಂದಷ್ಟು ವೀಳ್ಯದೆಲೆ. ೩-೪ ಅಡಕೆ. ೧ ತಂಬಾಕಿನ ಎಸಳು. ಇವಿಷ್ಟು ಇರಲೇಬೇಕು. ಇಲ್ಲದಿದ್ದರೆ ಸಂಚಿಗೆ ಮರ್ಯಾದೆಯಿಲ್ಲ. ಬೆಲೆಯೂ ಇಲ್ಲ.
ಇತ್ತೀಚೆಗೆ ಊರಿಗೆ ಹೋಗುವಾಗ ರೈಲಿನಲ್ಲಿ ಕಿಟಕಿಯ ಹೊರಗೆ ಕಣ್ಣು ನೆಟ್ಟು ಕುಳಿತಿದ್ದಾಗ ಹೊನ್ನಾವರ ಸಮೀಪ ಒಬ್ಬ ಸಂಚಿ ಹಿಡಿದು ಹೋಗುವುದು ಕಾಣಿಸಿತು. ಪಕ್ಕದಲ್ಲಿದ್ದ ಹೆಂಡತಿಗೆ ಸಂಚಿಯ ಕುರಿತು ಹೇಳಿದೆ. ಆಕೆ ಕನ್ನಡ ಎಂ.ಎ. ಹಾಗಾಗಿ ಸಂಚಿ ಎಂದ ಕೂಡಲೆ ಆಕೆಗೆ ಸಂಚಿ ಹೊನ್ನಮ್ಮ ನೆನಪಾದಳು.
ನೋಡಿ ಎಲ್ಲಿಂದೆಲ್ಲಿಯ ಸಂಬಂಧ!
ಎಲ್ಲಿಯ ಹಾಲಕ್ಕಿ ಜನಾಂಗದವರ ಕವಳ ಸಂಚಿ, ಎಲ್ಲಿ ‘ಹದಿಬದೆಯ ಧರ್ಮ’ ಬರೆದ ಸಂಚಿ ಹೊನ್ನಮ್ಮ!
ಸಂಬಂಧ ಇದೆ! ಅದು ಸಂಚಿಯದ್ದು. ರಾಜ ಮಹಾರಾಜರೂ ಕವಳ ಹಾಕುತ್ತಿದ್ದರು. ಥೂ! ಅಲ್ಲ ವೀಳ್ಯ ಹಾಕುತ್ತಿದ್ದರು. ಅದಕ್ಕೆ ಅಗತ್ಯ ಪರಿಕರಗಳು ಸಂಚಿಯಲ್ಲಿ ಇರುತ್ತಿದ್ದವು. ಅದನ್ನು ಹಿಡಿದುಕೊಳ್ಳಲು ಒಬ್ಬ ಆಳು ಬೇಕಲ್ಲ. ಆ ಕೆಲಸಕ್ಕೆ ಹೊನ್ನಮ್ಮ ಇದ್ದಳಂತೆ!
ಉತ್ತರ ಕನ್ನಡದ ಕರಾವಳಿಯಲ್ಲಿ ಸಂಚಿ ಚಂಚಿಯಾಗಿದೆ. ನನ್ನ ಅಮ್ಮ ಪ್ರಾಥಮಿಕ ಶಾಲೆ ಶಿಕ್ಷಕಿಯಾಗಿ ಸೇರುವ ಮೊದಲು ಮನೆಯಲ್ಲೇ ಹೊಲಿಗೆ ಮಾಡುತ್ತಿದ್ದಳು. ಆಗೆಲ್ಲ ಆಳುಗಳದ್ದು (ಕೆಲಸಕ್ಕೆ ಬರುವವರದ್ದು) ಒಂದೇ ವರಾತ. ಅಬ್ಬೇರೆ (ಹೆಂಗಸರನ್ನು ಕೆಲಸದವರು ಕರೆಯುವುದೇ ಹೀಗೆ. ಗಂಡಸರು ಅಥವಾ ಮನೆಯ ಯಜಮಾನರನ್ನು ವಡಿದೀರು ಎಂದು ಕರೆಯುವುದು ರೂಢಿ) ಒಂದು ಚೆಂಚಿ ಹೊಲ್ಕೊಡ್ರಾ! ಅಬ್ಬೇರು ಹೊಲಿದು ಕೊಡುವ ಒಂದು ಚೆಂಚಿಗಾಗಿ ಅವರು ಯಾವ ಕೆಲಸ ಮಾಡಲೂ ಸಿದ್ಧರಿದ್ದರು. ಹೊಸ ಚೆಂಚಿ ಅವರ ಮುಖದಲ್ಲಿ ಅಪ್ಪ ಚಾಕಲೇಟು ತಂದಾಗ ಮಕ್ಕಳ ಮುಖದಲ್ಲಿ ಉಂಟಾಗುವಷ್ಟು ಸಂತಸ ಮೂಡಿಸುತ್ತಿದ್ದುದು ನಂಗೀಗಲೂ ನೆನಪಿದೆ. ಚಂಚಿ ಹೊಲಿದುಕೊಟ್ಟ ಅಬ್ಬೇರಿಗೆ ಅವರ ನಿಷ್ಟೆ ಒಂದು ಕೆ.ಜಿ. ಜಾಸ್ತಿಯೇ.
ಕಾರಂತರ ಜ್ಞಾನಪೀಠ ವಿಜೇತ ಕೃತಿ ಮೂಕಜ್ಜಿಯ ಕನಸಿನಲ್ಲೂ ಸಂಚಿಯ ಪ್ರಸ್ತಾಪ ಬರುತ್ತದೆ. ನೋಡಿ ಎಲ್ಲಿಯ ಸಂಚಿ, ಎಲ್ಲಿಯ ಜ್ಞಾನಪೀಠ ಪ್ರಶಸ್ತಿ ಪಡೆದ ಕಾದಂಬರಿ! ಅಲ್ಲೂ ಸಂಚಿಗೆ ಬೆಲೆ ಇದೆ.
ರಾಜ ಮಹಾರಾಜರೂ ಕವಳ ಹಾಕುತ್ತಿದ್ದರು ಮತ್ತು ಅವರು ಕವಳದ ವಸ್ತುಗಳನ್ನು ಇರಿಸಿಕೊಳ್ಳುತ್ತಿದ್ದ ಚೀಲವನ್ನೂ ಸಂಚಿ ಎಂದು ಕರೆಯುತ್ತಿದ್ದರು. ಆ ಸಂಚಿ ಹಿಡಿದುಕೊಳ್ಳುತ್ತಿದ್ದ ಹೊನ್ನಮ್ಮ ಒಂದು ಕೃತಿಯನ್ನೂ ರಚಿಸಿದ್ದಾಳೆ ಎಂಬುದು ಕವಳದ ಸಂಚಿ ಇರಿಸಿಕೊಳ್ಳುವವರಿಗೆಲ್ಲ ನಿಜಕ್ಕೂ ಹೆಮ್ಮೆಯ ಸಂಗತಿ. ಆದರೆ ಈ ಸಂಗತಿ ಅವರಿಗೆ ಗೊತ್ತಿಲ್ಲ! ಆದರೂ ಅವರಿಗೆ ಸಂಚಿ ಹೊಂದುವುದು ಹೆಮ್ಮೆಯ ಸಂಗತಿಯೇ ಆಗಿದೆ ಎಂಬುದು ನಿಜಕ್ಕೂ ಹೆಮ್ಮೆಯ ಸಂಗತಿ!!

Friday, March 07, 2008

ಮಂಜು ಮುಸುಕಿದ ಹಾದಿಯಲ್ಲಿ...

ಇಬ್ಬನಿ ತಬ್ಬಿದ ಇಳೆಯಲಿ
ರವಿ ತೇಜ ಕಣ್ಣ ತೆರೆದು
ಬಾನಕೋಟಿ ಕಿರಣ
ಇಳಿದು ಬಂತು ಭೂಮಿಗೆ...

೩ ದಿನದಿಂದ ಮಂಗಳೂರಿನಲ್ಲೂ ಮಂಜು ಸುರಿವ ಮುಂಜಾವು. ಮಂಗಳೂರಲ್ಲಿ, ಅದೂ ಮಾರ್ಚ್ ತಿಂಗಳಲ್ಲಿ ಮಂಜು ಸುರಿಯುವುದು ಅಪರೂಪದಲ್ಲಿ ಅಪರೂಪ. ಫೆಬ್ರವರಿಯಲ್ಲೇ ಮಂಗಳೂರಿನಲ್ಲಿ ಬೆವರು ಸುರಿಯುವ ಸಮಯ. ಆದರೆ ಈ ವರ್ಷ ಮಾರ್ಚ್‌ನಲ್ಲೂ ಮಂಜು ಸುರಿಯುವ ಸಮಯ!
ಮಂಜು ಮುಸುಕಿದ ಹಾದಿಯಲ್ಲಿ ಬೆಳ್ಳಂಬೆಳಗ್ಗೆ ಸ್ವೆಟರ್ ಹಾಕಿ, ಮಫ್ಲರ್ ಸುತ್ತಿ ವಾಕಿಂಗ್ ಮಾಡುವ ಮೋಜು ಮಡಿಕೇರಿಯವರಿಗೆ ಹಾಗೂ ಘಟ್ಟದ ಮೇಲಿನವರಿಗೆ ಮಾತ್ರ ಸಾಧ್ಯ. ಘಟ್ಟದ ಮೇಲಿನವರಿಗೆ ಘನಘೋರ ಚಳಿಗಾಲ ಇರುವಾಗ ಮಂಗಳೂರಿನಲ್ಲಿ ಬೆಳಗ್ಗೆ ಮಾತ್ರ ಚುಮುಚುಮು ಚಳಿ. ಅದನ್ನು ಚಳಿ ಅನ್ನುವುದಕ್ಕಿಂತ ತಂಪು ಎನ್ನುವುದು ಹೆಚ್ಚು ಸೂಕ್ತ. ೯.೦೦ ಗಂಟೆಯ ನಂತರ ಸಖತ್ ಹಾಟ್ ಮಗಾ!
ಈ ಬಾರಿ ಪರಿಸ್ಥಿತಿ ಬದಲಾಗಿದೆ. ಚಳಿ ಇತ್ತು. ಈಗ ನೋಡಿದರೆ ಮಂಜು ಮುಸುಕಿದ ಹಾದಿಯೂ!
ಗೆಳೆಯ ವೇಣು ಕರಾವಳಿಯವನೇ. ಆದರೆ ಅವನಿಗೆ ಕಾಡು ತಿರುಗುವ ಹವ್ಯಾಸ. ಹಾಗಾಗಿ ಅವರು ಕರಾವಳಿಯಲ್ಲಿದ್ದೂ ತಮ್ಮ ಬ್ಲಾಗಿಗೆ ಕಾಶ್ಮೀರದಲ್ಲಿರೋರ ಥರ ‘ಮಂಜು ಮುಸುಕಿದ ದಾರಿಯಲ್ಲಿ’ ಎಂಬ ಹೆಸರು ಕೊಟ್ಟಿದ್ದಾನೆ. ಪ್ರಕೃತಿ ಮಂಗಳೂರಿನ ದಾರಿಗೇ ಮಂಜು ಮುಸುಕುವ ಮೂಲಕ ಅವರ ಆಸೆಯನ್ನೂ ಈಡೇರಿಸಿದೆ.
ಅಣ್ಣ ಗೋಪಾಲಕೃಷ್ಣ ಕುಂಟಿನಿ ನಾಲ್ಕೇ ಸಾಲು ಕವನಗಳನ್ನು ಬರೆಯುತ್ತಿದ್ದಾರೆ. ಕವಿಯಾಗುವ ಅಪಾಯದ ಮುನ್ಸೂಚನೆ ತೋರುತ್ತಿದ್ದಾರೆ. ಕೆಲವು ನನಗೆ ಅರ್ಥವಾಗದಿದ್ದರಿಂದ ಅವುಗಳು ಅಧ್ಬುತ ಎನ್ನಲು ಅಡ್ಡಿಯಿಲ್ಲ. ಇನ್ನು ಹಲವು ಅರ್ಥವಾಗಿದ್ದರಿಂದ ನಿಜಕ್ಕೂ ಅದ್ಭುತ ಅನ್ನಿಸುತ್ತವೆ. ಅವರೇ ಬರೆದ ಇಬ್ಬನಿ ಕುರಿತ ನಾಲ್ಕು ಸಾಲು ಹೀಗಿದೆ...
ಎಲೆಗಳಲ್ಲಿದ್ದ ರಾತ್ರಿ ಇಬ್ಬನಿ
ಕತ್ತಲಿನ ಅಚ್ಚರಿಗಳನ್ನು
ಹಗಲಿಗೆ ಹೇಳದೆ
ಆರಿಹೋಯಿತು.... ಎಂಥ ಚಂದ, ಎಂಥ ಅಂದ!
ಜಿ.ಪಿ. ರಾಜತ್ನಂ ಅವರು ಮಡಿಕೇರಿ ಮೇಲೆ ಮಂಜು ಕವನದಲ್ಲಿ...
ಮಡಿಕೇರಿ ಮೇಲ್ ಮಂಜು
ಭೂಮಿನ್ ತಬ್ಬಿದ ಮೋಡಿದ್ದಂಗೆ
ಬೆಳ್ಳಿ ಬಳಿದಿದ್ ರೋಡಿದ್ದಂಗೆ
ಸಾಫಾಗಿ ಅಳ್ಳಾಟಿಟ್ಟಿಲ್ದಂಗೆ
ಮಡಗಿದ್ದಲ್ಲೆ ಮಡಗಿದ್ದಂಗೆ.... ಎಂದು ಬರೆಯುತ್ತಾರೆ.
ಈ ಎಲ್ಲ ಕವಿತೆಗಳನ್ನು ನೆನಪಿಗೆ ತರುವಂತೆ ಮಂಗಳೂರಿಗೂ ಮಂಜು ಕವಿದಿದೆ. ಮಂಗಳೂರನ್ನೇ ಬಿಳಿ ಮೋಡ ತಬ್ಬಿದ ಹಾಗೆ, ರಸ್ತೆಗಳಿಗೆಲ್ಲ ಬೆಳ್ಳಿ ಮೆತ್ತಿದ ಹಾಗೆ...
ಮಂಗಳೂರಿಗೂ ಕವಿದ ಮಂಜು ನನಗೆ ಮುದ ನೀಡಿತು. ಇದೆಲ್ಲದರ ಜತೆ ನನ್ನ ಕೆಲವು ಹಳೆ ನೆನಪುಗಳನ್ನು ಸ್ಮೃತಿ ಪಟಲದ ಎದುರು ತಂದು ನಿಲ್ಲಿಸಿತು. ನಾನು ಜರ್ನಲಿಸಂ ಕಲಿಯುವಾಗ ದಿಲ್ಲಿ ಸೇರಿದಂತೆ ಉತ್ತರ ಭಾರತಕ್ಕೆ ಪ್ರವಾಸ ತೆರಳಿದ್ದೆವು. ದೆಹಲಿಯಲ್ಲಿ ದಟ್ಟವಾದ ಮಂಜು. ನಾವು ಒಂದು ರಾತ್ರಿ ಒಳಗೆ ಕುಳಿತು ಹರಟುತ್ತಿದ್ದಾಗ ನನ್ನ ಸಹಪಾಠಿ ಲಕ್ಷ್ಮಣ ನಾಯಕ ಒಂದು ಕವಿತೆ ಬರೆದಿದ್ದೇನೆ ಎಂದ.
ಇಬ್ಬನಿ
ನೀನೊಂದು ಕಂಬನಿ... ಹೀಗೆ (ಈಗ ಸರಿಯಾಗಿ ನೆನಪಿಲ್ಲ) ಒಟ್ಟಾರೆ ಅಂತ್ಯ ಪ್ರಾಸದಲ್ಲಿ, ಕೇಳಲು ತುಂಬ ತ್ರಾಸವಾಗಿ ಸಾಗಿತ್ತು. ನಾನು ಮತ್ತು ಆಪ್ತ ಗೆಳೆಯ ಪ್ರಸನ್ನ ಹಿರೇಮಠ ಕೇಳಿ ಒಳಗೊಳಗೇ ನಕ್ಕರೂ, ತುಂಬ ಚೆನ್ನಾಗಿದೆ ಎಂದು ಹುರಿದುಂಬಿಸಿ ಎಲ್ಲರೆದರೂ ಕವನ ಓದಲು ಹೇಳಿದವು. ಆತ ಓದಿದ. ಅದರ ಪರಿಣಾಮ ಎಲ್ಲರೂ ನಕ್ಕಿದ್ದಲ್ಲದೆ, ಆತನಿಗೆ ‘ಇಬ್ಬನಿ’ ಎಂದೇ ಕರೆಯಲಾರಂಭಿಸಿದರು. ಪ್ರವಾಸ ಮುಗಿದು ತರಗತಿಗೆ ಬಂದಾಗ ಎಲ್ಲರೂ, ಅವರವರ ಅನುಭವನ ಕಥನ ಹೇಳಬೇಕಿತ್ತು. ಆಗ ಲಕ್ಷ್ಮಣ ನಾಯ್ಕ ವೇದಿಕೆಯ ಮೇಲೆ ಹೋಗಿ ನಿಂತಾಗ ನಾವು ಹಿಂದಿನಿಂದ ‘ಇಬ್ಬನಿ’ ಎಂದು ಕೂಗಿದ್ದೇ ತಡ ಕ್ಲಾಸಿನಲ್ಲಿದ್ದವರ ನಗೆಯ ಅಣೆಕಟ್ಟು ಒಡೆದಿತ್ತು.
ತನ್ನಷ್ಟಕ್ಕೆ ಸದ್ದಿಲ್ಲದೆ, ನಾವು ಬರೆಯದೆ ಹೋದರೆ ಸುದ್ದಿಯೂ ಇಲ್ಲದೆ ಸುರಿಯುವ, ಮೇಸ್ಟ್ರು ಬರುತ್ತಿದ್ದಂತೆ ಸದ್ದಿಲ್ಲದೆ ಸರಿಯಾಗಿ ಕುಳಿತುಕೊಳ್ಳುವ ಮಕ್ಕಳಂತೆ ಸೂರ್ಯ ಬರುತ್ತಿದ್ದಂತೆ ಸದ್ದಿಲ್ಲದೆ ಸರಿದೂ ಹೋಗುವ ಇಬ್ಬನಿ ನಮ್ಮ ಮನಸೊಳಗೆ ಅದಷ್ಟು ನೆನಪಿನ ಹನಿಗಳನ್ನು ಬಿಟ್ಟುಹೋಗಬಲ್ಲದು!
ಚಿತ್ರಗಳು: ಜಿ.ಕೆ. ಹೆಗಡೆ

Wednesday, February 13, 2008

ಅವ್ವ: ಯವ್ವಾ ಯವ್ವಾ ಎಷ್ಟು ಚೆನಾಗೈತವ್ವ!

ಆಡಂಬರವಿಲ್ಲ. ಭಾರೀ ಸುಂದರ ಸೀನುಗಳಿಲ್ಲ. ಅನಗತ್ಯ ಹಾಡುಗಳಿಲ್ಲ. ಡೈಲಾಗುಗಳಂತೂ ನಾವು ನೀವು ಆಡುವ ಮಾತುಗಳೇ.
ಇದಕ್ಕಾಗಿಯೇ ನೀವು ‘ಅವ್ವ’ಳನ್ನೊಮ್ಮೆ ನೋಡಬೇಕು!
ಇವತ್ತು ನಾನು- ಹೆಂಡತಿ ಅವ್ವ ಸಿನಿಮಾ ನೋಡಿ ಬಂದೆವು. ಚೆನ್ನಾಗಿದೆ. ನಾನು ಅವ್ವಳನ್ನು ನೋಡುವ ಆಸಕ್ತಿಯಲ್ಲಿರಲಿಲ್ಲ. ಆದರೆ ನನ್ನ ಹೆಂಡತಿ ಎಂ.ಎ. ಕಲಿಯುವಾಗ ಮುಸ್ಸಂಜೆಯ ಕಥಾ ಪ್ರಸಂಗ ಕಾದಂಬರಿ ಪಠ್ಯವಾಗಿತ್ತು. ಆಕೆ ಸಿನಿಮಾ ನೋಡಲೇಬೇಕು ಅಂದಳು. ಅದಕ್ಕೆ ಹೋದೆ. ಈಗ ಅನ್ನಿಸುತ್ತಿದೆ ಆಕೆ ಸಿನಿಮಾಕ್ಕೆ ಹೋಗಬೇಕೆಂದು ಕಾಟಕೊಡದಿದ್ದರೆ ನಾನು ಒಂದೊಳ್ಳೆ ಸಿನಿಮಾ ತಪ್ಪಿಸಿಕೊಳ್ಳುತ್ತಿದೆ. ಹಾಗಾಗಿ ಹೆಂಡತಿಯರು ಕಾಟಕೊಡುವುದೂ ಕೆಲವು ಬಾರಿ ಒಳ್ಳೆಯದೇ!
ಲಂಕೇಶ ಕತೆಯನ್ನು ಓದುವದಕ್ಕಿಂತ ನೋಡುವುದನ್ನು ಚೆಂದವಾಗಿಸಿದ್ದಾರೆ ಮಗಳು ಕವಿತಾ. ಕೊಂಚ ಹಾಸ್ಯ, ಗಂಭೀರ, ಸಹಜ ಮಿಶ್ರಣದ ಒಂದು ಹಳ್ಳಿಯಲ್ಲಿ ನಡೆಯುವ ಕತೆ. ಒಂದೇ ಪರಿಸರದಲ್ಲಿ ಸಿಗುವ ಸಹಜವಾದ ಪ್ರಕೃತಿ ಸೌಂದರ್ಯವನ್ನು ಚಿತ್ರಕ್ಕೆ ತಕ್ಕನಾಗಿ ಬಳಸಿಕೊಳ್ಳಲಾಗಿದೆ. ಹೊರತು ಸುಂದರ ದೃಶ್ಯಗಳಿಗಾಗಿ ಸಿನಿಮಾ ಬಳಸಿಕೊಳ್ಳಲಾಗಿಲ್ಲ ಎಂಬುದು ಚಿತ್ರದ ಪ್ಲಸ್ ಪಾಯಿಂಟ್. ಹಿಂಭಾಗದಲ್ಲಿ ಬಿಸಿಲಿರುವ ಮರದ ಎದುರು ಒಂದು ದೃಶ್ಯ, ಕೆರೆಯ ಏರಿ ಮೇಲೆ ಸೈಕಲ್ ಓಡಿಸುವುದು ಇವೆಲ್ಲ ಕತೆಗೆ, ಹಳ್ಳಿ ಪರಿಸರಕ್ಕೆ ತಕ್ಕಂತೆ ಮೂಡಿಬಂದಿವೆ. ಎಲ್ಲೂ ಅನಗತ್ಯ ಹಾಡು, ದೃಶ್ಯ ತುರುಕಿಸಲಾಗಿಲ್ಲ.
ಡೈಲಾಗುಗಳು ಸೋಕಾಲ್ಡ್ ಸುಸಂಕೃತರು ಎನಿಸಿಕೊಂಡವರಿಗೆ ಅಸಭ್ಯ, ಅಸಹ್ಯ ಅನಿಸಬಹುದು. ಅದಕ್ಕೆ ಸೆನ್ಸಾರ್ ಮಂಡಳಿ ಚಿತ್ರಕ್ಕೆ ‘ಎ’ ಸರ್ಟಿಪಿಕೇಟ್ ನೀಡಿದೆ! ಆದರೆ ಕತೆ ನಡೆಯುವುದು ಬಯಲು ಸೀಮೆಯಲ್ಲಿ. ಅಲ್ಲಿಯದ್ದೇ ಭಾಷೆ, ಶೈಲಿ ಬಳಸಿಕೊಳ್ಳಲಾಗಿದೆ. ಅಲ್ಲಿ ನಿಮ್ಮವ್ವನ್, ಬೋಳಿ ಮಗನೆ, ಬೋಸುಡಿ ಮಗನೆ ಎಂಬುದೆಲ್ಲ ಬೈಗುಳಗಳಲ್ಲ. ಮಾತಿನ ಆರಂಭದಲ್ಲಿ ಬರುವ ವಿಶೇಷಣಗಳು ಅವು. ಅವನ್ನು ಒಂದು ಜನರ ಭಾಷೆ ಎಂದು ಪರಿಗಣಿಸಿದರೆ ಸಾಕು. ಹಾಗಿರುವುದರಿಂದಲೇ ಚಿತ್ರ ಸಹಜ ಅನ್ನಿಸುವುದು.
ಒಮ್ಮೆ ನಾಯಕನ ಗೆಳೆಯ ಕೊಟ್ಟ ಹಣವನ್ನು ನಾಯಕಿ ಕುಪ್ಪುಸದೊಳಗೆ ಇರಿಸಿಕೊಳ್ಳುತ್ತಾಳೆ. ‘ಅದ್ಕೇ ನೋಡು ಹೆಂಗಸ್ರ ಕೈಲಿ ದುಡ್ಡು ಬೆಚ್ಚಗಿರತ್ತಂತೆ...’ ಅನ್ನುತ್ತಾನೆ ನಾಯಕ ವಿಜಯ್. ಎಲ್ಲರೊಟ್ಟಿಗೆ ಕುಳಿತು ಸಿನಿಮಾ ನೋಡುವಾಗ ಇದು ಸ್ವಲ್ಪ ಇರಿಸುಮುರಿಸು ಉಂಟು ಮಾಡುತ್ತದಾದರೂ, ವಿಷಯ ಸತ್ಯವೇ ಅಲ್ಲವೇ?
ಚಿತ್ರದಲ್ಲಿರೋದು ಎರಡೇ ಹಾಡು. ಒಂದು ‘ಗುರುವೇ ನಿನ್ನಾಟ ಬಲ್ಲವರು ಯಾರ್‍ಯಾರೊ’ ಇಂಪಾಗಿದೆ. ಇನ್ನೊಂದು ಹಾಡು ಹಿಂದಿಯದ್ದು, ‘ಆ ಆ ಆಜಾ ಆ ಆ ಆ ಆಜಾ’ ಇದರಲ್ಲಿ ನೃತ್ಯ ಉತ್ತಮವಾಗಿದೆ. ಇಕ್ಬಾಲ್ ಕುತ್ತಿಗೆ ಕುಣಿಸುವ ನೃತ್ಯದಲ್ಲಿ ಶಮ್ಮಿಕಪೂರ್‌ನನ್ನೂ ಮೀರಿಸಿದ್ದಾರೆ. ಇದೊಂದು ನೃತ್ಯಕ್ಕಾಗಿಯಾದರೂ ನೀವು ಸಿನಿಮಾ ನೋಡಬೇಕು. ನಕ್ಕು ನಕ್ಕು ಸುಸ್ತಾಗುವುದು ಖಂಡಿತ.
ಸಾವಂತ್ರಿಯಾಗಿ ನಾಯಕಿ, ಬ್ಯಾಡರ ಮಂಜನಾಗಿ ವಿಜಯ್, ಅವ್ವಳ ಪಾತ್ರದಲ್ಲಿ ಶೃತಿ ಉತ್ತಮ ಅಭಿನಯ ನೀಡಿದ್ದಾರೆ. ವಿಜಯ್‌ಗೆ ಇಂತಹ ಹಳ್ಳಿ ಹುಡುಗುನ ಪಾತ್ರ ಸಹಜವಾಗಿ ಒಪ್ಪುತ್ತದೆ. ಆತ ಇಂತಹ ಪಾತ್ರಗಳಲ್ಲಿ ಸಹಜವಾಗಿ ನಟಿಸುತ್ತಾನೆ. ಶೃತಿಯಂತಹ ನಟಿಯ ಬಾಯಲ್ಲಿ ಕೆಟ್ಟ ಶಬ್ದದ ಡೈಲಾಗುಗಳು, ಅಳುಮುಂಜಿ ಪಾತ್ರಕ್ಕೇ ಸೀಮಿತವಾಗಿದ್ದ ಅವರನ್ನು ಮಾಂಕಾಳಿ ಪಾತ್ರದಲ್ಲಿ ನೋಡುವುದು ಒಂದು ಅಪರೂಪವೇ. ಆದರೂ ಶೃತಿಯ ಬದಲು ಉಮಾಶ್ರಿ ಅವ್ವಳ ಪಾತ್ರವನ್ನು ಇನ್ನೂ ಚೆನ್ನಾಗಿ ನಿಭಾಯಿಸುತ್ತಿದ್ದರೇನೋ ಅನ್ನೋದು ನನ್ನ ಭಾವನೆ.
ನಾಯಕಿ ಸಾವಂತ್ರಿಯ ಗೆಳತಿ ಶಿವಿ ಸಾಯುತ್ತಾಳೆ. ಆಕೆ ಯಾಕೆ ಸಾಯುತ್ತಾಳೆ? ಎಂಬುದು ಗೊತ್ತಾಗುವುದಿಲ್ಲ. ಆದರೆ ಆಕೆಯ ಸಾವಿಗೆ ಜನ ಏನೇನೋ ಮಾತಾಡಿಕೊಳ್ಳುತ್ತಾರೆ. ಆಕೆ ಸತ್ತಾಗ ಮನೆಯವರು, ಅಕ್ಕಪಕ್ಕದವರು ಅಳುವುದನ್ನು ಹಾಗೂ ಚಿತ್ರ ಮುಗಿಯುತ್ತ ಬರುವಾಗ ನಾಯಕ- ನಾಯಕಿಯ ಸರಸವನ್ನು ಸ್ವಲ್ಪ ಹೆಚ್ಚೇ ಎನ್ನುವಷ್ಟು ತೋರಿಸಲಾಗಿದೆ. ಎರಡೂ ಬಹುಶಃ ಅನಗತ್ಯವಾಗಿತ್ತು.
ಚಿತ್ರದುದ್ದಕ್ಕೂ ಬೈಗುಳ ಕೇಳಿರುತ್ತೀರಿ. ಅಂತ್ಯದಲ್ಲಿ ಪ್ರೇಕ್ಷಕರಿಗೂ ಬೈಗುಳವೇ!?
ಸಾಮಾನ್ಯವಾಗಿ ಚಿತ್ರದ ಕೊನೆಯಲ್ಲಿ ಇನ್ನೊಮ್ಮೆ ನೀವೂ ಬನ್ನಿ, ನಿಮ್ಮವರನ್ನೂ ಕರೆತನ್ನಿ ಎಂದೆಲ್ಲ ಹೇಳುವುದು ಸಾಮಾನ್ಯ. ಆದರೆ ಅವ್ವ ಮಾತ್ರ ಏನು ಕೋತಿ ಕುಣಿತೈತ್ರಾ ಇಲ್ಲಿ. ಹ್ವೋಗಿ ಹ್ವೋಗಿ ಕೆಲಸ ನೋಡ್ವೋಗಿ ಎಂದು ಬೀಳ್ಕೊಡುತ್ತಾಳೆ!ಹೋಗಿ ನೋಡಿ ಖುಶಿಪಟ್ಟು, ಉಗಿಸ್ಕೊಂಡು ಬನ್ನಿ! ದುಡ್ಕೊಟ್ಟು ಉಗಿಸ್ಕೊಳ್ಳೋದು ಅಂದ್ರೆ ಏನೂಂತ ನಿಮಗೂ ಸ್ವಲ್ಪ ಗೊತ್ತಾಗ್ಲಿ...!!

Tuesday, February 12, 2008

ಅವರ ಪ್ರೀತಿ ಮದುವೆಯಲ್ಲಿ ಅಂತ್ಯವಾಯಿತು!



ಗಣೇಶ್ ಮತ್ತು ಶಿಲ್ಪಾ ೨ ವರ್ಷದ ಹಿಂದೆ ಭೇಟಿಯಾದರು. ಪರಿಚಯ ಪ್ರೇಮಕ್ಕೆ ತಿರುಗಿತು. ಅದೀಗ ಮದುವೆಯಲ್ಲಿ ಮುಕ್ತಾಯವಾಗಿದೆ!
ಹಾಗಂತ ಟಿವಿ ೯ನಲ್ಲಿ ಒದರುತ್ತಿದ್ದರು. ನಮ್ಮದೇ ವಿಜಯ ಕರ್ನಾಟಕ ಪತ್ರಿಕೆಯಲ್ಲೂ ಹಾಗೇ ಬಂದಿದೆ ಅನ್ನಿ. ಹಾಸ್ಯಕ್ಕೆ ಅವರ ಪ್ರೀತಿ ಮದುವೆಯಲ್ಲಿ ಅಂತ್ಯವಾಯಿತು ಅನ್ನುವುದು ವಾಡಿಕೆ. ಆದರೆ ನಿಜವಾಗಿಯೂ ಸುದ್ದಿ ನಿರೂಪಿಸುವಾಗಲೂ ಹಾಗೆ ಹೇಳಬೇಕೆ?

ಜೋಗಿಯವರು ಜಾನಕಿ ಕಾಲಂನಲ್ಲಿ ಬರೆದ ‘ಪ್ರೀತಿಯೆಂಬ ಮಾಯಾಂಜಿಕೆಯೂ ಮನಸ್ಸೆಂಬ ವೈದಹಿಯೂ’ ಲೇಖನದಲ್ಲಿ ಪ್ರೀತಿಯ ಬಗೆಗೆ ಹಾಸ್ಯಮಯವಾಗಿ, ವಿಶೇಷವಾಗಿ ಮತ್ತು ವಿಶಿಷ್ಟವಾಗಿ ಬರೆದಿದ್ದಾರೆ. ಓದಿರದೇ ಇದ್ದರೆ ಒಮ್ಮೆ ಓದಿ.
ಅವರು ಬರೆಯುತ್ತಾರೆ...

ಪ್ರೀತಿಸದೇ ವರ್ಷಾನುಗಟ್ಟಲೆ ಸಂತೋಷವಾಗಿ ಇದ್ದುಬಿಡಬಹುದು. ಪ್ರೀತಿಸುತ್ತಲೂ ಸಂತೋಷವಾಗಿರಬಹುದು. ಆದರೆ ಪ್ರೀತಿ ಏನನ್ನೋ ಬೇಡುತ್ತದೆ. ಏನನ್ನೋ ಕಾಡುತ್ತದೆ. ಸುಮ್ಮನಿದ್ದವರನ್ನು ಮದುವೆಗೆ ದೂಡುತ್ತದೆ. ಮದುವೆಯಾದರೆ ಪ್ರೀತಿ ಉಳಿಯುತ್ತದೆ ಅಂದುಕೊಳ್ಳುತ್ತಾರೆ. ಮದುವೆಯೆಂಬ ಪಂಜರದಲ್ಲಿ ಪ್ರೀತಿಯನ್ನು ಬಂಧಿಸಲು ಯತ್ನಿಸುತ್ತಾರೆ. ಆದರೆ ಗಿಣಿಯು ಪಂಜರದೊಳಿಲ್ಲ ಎಂಬುದು ಆಮೇಲೆ ತಿಳಿಯುತ್ತದೆ’... ಹೀಗೆ ಸಾಗುತ್ತದೆ ಬರವಣಿಗೆ.
ಅಂತ್ಯ ಇನ್ನೂ ರೋಚಕ!

‘ಮದುವೆಗೆ ಮೊದಲು ಐ ಲವ್‌ ಯು ಅನ್ನುವುದು ಹೇಗೆ ಎಂಬ ಸಂಕಟ. ಮದುವೆಯಾದ ನಂತರ ಐ ಲವ್ ಯು ಅನ್ನಬೇಕಲ್ಲ ಎಂಬ ಪ್ರಾಣಸಂಕಟ. ಮದುವೆಗೆ ಮೊದಲು ಎಲ್ಲಿ ಪ್ರೀತಿಸ್ತೀನಿ ಅಂದುಬಿಡುತ್ತಾನೋ ಎಂಬ ಭಯ. ಆಮೇಲೆ ಎಲ್ಲಿ ಪ್ರೀತಿಸುತ್ತೇನೆ ಅನ್ನೋದಿಲ್ಲವೋ ಎಂಬ ಭಯ. ಮೊದಲು ಪ್ರೀತಿಸಲಿ ಅನ್ನೋ ಆಸೆ. ನಂತರ ಪ್ರೀತಿಸೋದಿಲ್ಲ ಎಂಬ ಗುಮಾನಿ.

ಒಮ್ಮೆ ಐ ಲವ್ ಯು ಅಂದೆ. ಥ್ಯಾಂಕ್ಯು ಅನ್ನುವ ಉತ್ತರ ಬಂತು. ಮದುವೆಯಾದ ಮೇಲೆ ಅದನ್ನೇ ಅಂದೆ ನೋ ಮೆನ್ಶನ್ ಪ್ಲೀಸ್ ಅನ್ನುವ ಉತ್ತರ ಬಂತು. ಐ ಹೇಟ್ ಯು ಅಂದೆ. ಸೇಮ್ ಟು ಯು ಎಂಬ ಮರುತ್ತರ ಬಂತು. ಸಧ್ಯ ಇಬ್ಬರೂ ಪ್ರೀತಿಸುತ್ತಿಲ್ಲ. ಆದ್ದರಿಂದ ಸುಖವಾಗಿದ್ದೇವೆ ಅಂದುಕೊಂಡೆ’ ಎಂದು ಬರೆಯುತ್ತಾರೆ ಜೋಗಿ. ಪ್ರೀತಿಯ ಬಗ್ಗೆ ಇಷ್ಟು ಅದ್ಭುತವಾಗಿ, ಹಾಸ್ಯಮಿಶ್ರಿತ ಸತ್ಯ ವಿವರಿಸಿದ್ದನ್ನು ನಾನಂತೂ ಎಲ್ಲೂ ಓದಿಲ್ಲ.

ಇಷ್ಟೆಲ್ಲ ನೆನಪಾದದ್ದು ಗಣೇಶ್ ಮದುವೆಯಿಂದ. ಟಿವಿ೯ ಚಾನಲ್‌ನಲ್ಲಂತೂ ಇಡೀ ದಿನ ಅದೇ ಸುದ್ದಿ. ಸಂಜೆಯ ನಂತರ ಬೇರೆ ವಿಷಯವೇ ಇಲ್ಲ. ರಾತ್ರಿ ೧೦.೦೦ ಗಂಟೆಗೆ ಇದೆಂಥಾ ಮದುವೆ!? ಎಂಬ ಕಾರ್ಯಕ್ರಮ. ಯಾಕೆ? ಒಬ್ಬ ಸಿನಿಮಾ ಸ್ಟಾರ್‌ನ ಖಾಸಗಿ ಜೀವನದ ಬಗ್ಗೆ ಯಾಕಿಷ್ಟು ಆಸಕ್ತಿ? ಆತನ ಮದುವೆಯನ್ನು ಇದೆಂಥಾ ಮದುವೆ ಎಂದು ಪ್ರಶ್ನಿಸಲು ಮಾಧ್ಯಮಕ್ಕೆ ಅಧಿಕಾರ ಕೊಟ್ಟವರು ಯಾರು? ಮಾಧ್ಯಮದ ಮಂದಿ ಹದ್ದುಮೀರಿ ವರ್ತಿಸುತ್ತಿದ್ದಾರಾ? ಎಂಬೆಲ್ಲಾ ಪ್ರಶ್ನೆಗಳು ಪತ್ರಕರ್ತನಾದ ನನ್ನಲ್ಲಿಯೇ ಮೂಡುತ್ತಿದೆ.

ಮಾಧ್ಯಮಗಳ ಮತ್ತು ಮಾಧ್ಯಮದಲ್ಲಿರುವ ಕೆಲವರ ಅತ್ಯಾಸಕ್ತಿಯ ಪರಿಣಾಮ ಪ್ರಸಿದ್ಧ ವ್ಯಕ್ತಿಗಳ ಖಾಸಗಿ ಜೀವನ ಹಾಳಾಗಿದೆ. ಖಾಸಗಿ ಜೀವನ ಎಂಬ ಶಬ್ದವೇ ಅವರ ಮಟ್ಟಿಗೆ ಅರ್ಥ ಕಳೆದುಕೊಳ್ಳುತ್ತಿದೆ. ಸಿನಿಮಾ ನಟಿಯರು ಬಂದರೆ ಸಾಕು ಮಧ್ಯಮದವರು ಮುತ್ತುತ್ತಾರೆ. ಮಂಗಳೂರಿಗೆ ಐಶ್ವರ್ಯಾ ರೈ ಬಂದರೆ ಎಲ್ಲ ಮಾಧ್ಯಮ ಪ್ರತಿನಿಧಿಗಳು ಐಶ್ವರ್ಯಾ ರೈ ಇರುವ ಹೋಟೆಲ್ ಎದುರು ಒಂದಿಡೀ ದಿನ ಕಾದು ಕುಳಿತಿರುತ್ತಾರೆ. (ಸಾಮಾನ್ಯರು ಪತ್ರಿಕಾಗೋಷ್ಠಿ ೫ ನಿಮಿಷ ತಡವಾದರೆ ಬೊಬ್ಬೆಹೊಡೆಯುತ್ತಾರೆ!). ಆಕೆಯೋ ಪತ್ರಕರ್ತರನ್ನು ಬಳಿಯೂ ಬಿಟ್ಟುಕೊಳ್ಳುವುದಿಲ್ಲ. ಇದೆಂಥ ಕರ್ಮ ಪತ್ರಕರ್ತರದ್ದು!

ಖಾಸಗಿ ಜೀವನ. ಅವರವರದ್ದು ಅವರವರಿಗೆ. ಒಬ್ಬೆ ಒಳ್ಳೆ ನಟನಾದರೆ ಅವನ ನಟನೆ ಇಷ್ಟಪಡೋಣ. ಲೇಖಕನ ಲೇಖನ ಇಷ್ಟಪಡೋಣ. ಅವರ ಪ್ರೀಮ, ಕಾಮದ ಖಾಸಗಿ ಜೀವನವನ್ನಲ್ಲ. ಸಾರ್ವಜನಿಕ ಜೀವನದಲ್ಲಿ ಇರುವವರು ಉತ್ತಮ ನಡತೆ, ಆದರ್ಶ ಜೀವನ ನಡೆಸಬೇಕು ಎಂದು ಬಯಸುವುದು ತಪ್ಪಲ್ಲ. ಆದರೆ ಹಾಗೇ ಇರಬೇಕು ಎಂದು ನಿರ್ದೇಶಿಸುವುದು ಸರಿಯಲ್ಲ.

ಗಣೇಶ್ ಇಷ್ಟ ಪಟ್ಟ ಹುಡುಗಿಯನ್ನು ಮದುವೆಯಾಗಿದ್ದಾರೆ. ವಿಚ್ಛೇದಿತೆಯನ್ನು ಮದುವೆಯಾಗಲು ಅಂತಹ ಮನಸ್ಥಿತಿ ಬೇಕು ಎಂಬುದು ಸತ್ಯ. ಆದರೆ ಆಕೆಗೆ ಆತನ ಜೀವನ ಕೊಟ್ಟ, ಬಾಳು ಕೊಟ್ಟ ಎಂಬುದು ಸುಳ್ಳು. ಯಾಕೆಂದರೆ ಜೀವನ ಆಕೆಯದು. ವಿಚ್ಛೇದಿತರಾಗಿ ಮದುವೆಯಾಗದೇ ಇರುವವರೂ ಬಾಳು ನಡೆಸುತ್ತಿದ್ದಾರೆ. ಅಥವಾ ಆಕೆ ವಿಚ್ಛೇದಿತೆ. ಬಾಳು ಕತ್ತಲಲ್ಲಿದೆ ಎಂದು ಗಣೇಶ ಮದುವೆಯಾಗಿದ್ದಲ್ಲ. ಇಬ್ಬರೂ ಪರಸ್ಪರ ಇಷ್ಟಪಟ್ಟು ಮದುವೆಯಾಗಿದ್ದಾರೆ. ಅದನ್ನೊಂದು ದೊಡ್ಡ ಆದರ್ಶವೆಂದಾಗಲಿ, ಟಿವಿ೯ ಚಾನಲ್ ಥರ ಇದೆಂಥಾ ಮದುವೆ ಎಂದಾಗಲಿ ಬಿಂಬಿಸುವ, ಭಾರೀ ಪ್ರಚಾರ ಕೊಡುವ ಅಗತ್ಯಗಳು ನನಗಂತೂ ಸರಿ ಅನಿಸುತ್ತಿಲ್ಲ. ಏನಂತೀರಾ?

ಹೆಂಡತಿಗೂ ನದಿಯ ಗು(ಹ)oಗು

ನಾನಿನ್ನೂ ಜೋಗಿಯವರ ನದಿಯ ನೆನಪಿನ ಹ(ಗು)ಂಗಿನಿಂದ ಹೊರಬಂದಿಲ್ಲ. ಆಗಲೇ ನನ್ನ ಹೆಂಡತಿ ನದಿಯ ಗುಂಗಿಗೆ ಸಿಲುಕಿದ್ದಾಳೆ. ಸಾಮಾನ್ಯವಾಗಿ ಆಕೆ ಓದುವುದು ತುಸು ನಿಧಾನ. ದಿನವೂ ಅಷ್ಟಷ್ಟೇ ಪುಟಗಳನ್ನು ಓದುತ್ತ ಹೋಗುವುದು ಆಕೆ ಅಭ್ಯಾಸ. ಆದರೆ ಜೋಗಿಯವರ ನದಿಯ ನೆನಪಿನ ಹಂಗು ಪುಸ್ತಕ ಹಿಡಿದ ಆಕೆ ಅದನ್ನು ಕೆಳಗೇ ಇಡುತ್ತಿಲ್ಲ.
ಫೆ.೧೧ರಂದು ಓದಲು ಆರಂಭಿಸಿದವಳು ಫೆ.೧೨ಕ್ಕೆ ಮುಗಿಸುವ ಹಂತಕ್ಕೆ ಬಂದಿದ್ದಾಳೆ! ದಾರವಾಹಿಯನ್ನೂ ನೋಡದೆ, ಇಂಟರ್‌ನೆಟ್ ಆನ್ ಮಾಡದೆ ಪುಸ್ತಕಕ್ಕೆ ಅಂಟಿ ಕೂತಿದ್ದಾಳೆ.
ಇವತ್ತೇ ಮುಗಿಸಿಬಿಡುವಷ್ಟು ಇಂಟರೆಸ್ಟಿಂಗ್ ಆಗಿದ್ಯೇನೆ ಅಂದೆ? ಅದಕ್ಕೆ ಹೌದು ಅಂದಳು. ಆದರೆ ಅವಳಿಗೆ ಇಂದೇ ಓದಿ ಮುಗಿಸುವದೂ ಇಷ್ಟವಿಲ್ಲ ಯಾಕೆಂದರೆ ಮುಗಿದೇ ಹೋಗುತ್ತಲ್ಲ ಎಂಬ ಬೇಜಾರು!
ನೋಡಿ ಜೋಗಿ ಯಾರ್‍ಯಾರನ್ನೋ ಎಂಥೆಂಥ ಸಂಕಷ್ಟಕ್ಕೆ ಸಿಲುಕಿಸಿದ್ದಾರೆ!

Monday, February 11, 2008

ನದಿಯ ನೆನಪಿನ ಗು(ಹ)೦ಗಿನಲ್ಲಿ...


ಅದೊಂದು ಕೊಲೆ ಪ್ರಕರಣ. ನಾನು ಮಂಗಳೂರಿಗೆ ಬರುವ ಮೊದಲೇ ಅದು ನಡೆದಿತ್ತಾದರೂ, ಕ್ರೈಂ ರಿಪೋರ್ಟರ್ ಆಗಿ ನಾನು ಹಳೆಯ ಕ್ರೈಂಗಳ ಕಥಾನಕ ಬರೆಯುತ್ತಿದ್ದಾಗ, ಗೋಪಾಲಕೃಷ್ಣ ಕುಂಟಿನಿ ಸಲಹೆಯಂತೆ ಆ ಕೊಲೆಯ ಬಗ್ಗೆ ಬರೆದಿದ್ದೆ.

ಆದೇ ಕೊಲೆಯ ಸುತ್ತಮುತ್ತ ಜೋಗಿಯ ನದಿಯ ನೆನಪಿನ ಹಂಗು ಕಾದಂಬರಿ ಹಬ್ಬಿಕೊಂಡಿದೆ. ಕೊಲೆಯಾದಾತ ಜೋಗಿ ಮತ್ತು ಕುಂಟಿನಿಯ ಗೆಳೆಯನೂ ಆಗಿದ್ದ. ದಕ್ಷಿಣ ಕನ್ನಡದವರ ಮಟ್ಟಿಗೆ ಈ ಕಾದಂಬರಿ ನಮ್ಮ ಸುತ್ತಲಿನಲ್ಲೇ ನಡೆದ ಘಟನೆ ಎಂಬಷ್ಟು ಆಪ್ತವಾಗುವಂಥದ್ದು. ಕೊಲೆಯ ಸುತ್ತ ಹಲವಾರು ಘಟನೆಗಳು ಸೃಷ್ಟಿಯಾಗುತ್ತವೆ. ಹೆಚ್ಚಿನವೆಲ್ಲ ಸತ್ಯ ಘಟನೆಗಳೇ. ಅದನ್ನು ಜೋಗಿ ಕತೆ ಎಂಬಂತೆ ವಿವರಿಸಿದ್ದಾರೆ. ಸ್ಥಳಗಳು ಅದೇ, ಹೆಸರುಗಳು ಮಾತ್ರ ಬೇರೆ ಬೇರೆ.

ಸುಬ್ರಹ್ಮಣ್ಯ ಮಠದ ಸ್ವಾಮೀಜಿ ಮದುವೆಯಾದ ಘಟನೆಯೂ ಕಾದಂಬರಿಯಲ್ಲಿ ಬರುತ್ತದೆ. ಸ್ವಾಮೀಜಿಯ ತುಮುಲ, ಅವರ ಮದುವೆಗೆ ಉಂಟಾಗುವ ಅಡ್ಡಿಗಳು, ಸ್ವಾಮೀಜಿಯಾಗಿಯೇ ಇರಿ, ಹುಡುಗಿಯೊಂದಿಗಿನ ಸಂಬಂಧ ಮುಂದುವರಿಸಿ ಎಂಬಂಥ ಮರ್ಯಾದೆ ಉಳಿಸುವ ಸಲಹೆಗಳನ್ನೆಲ್ಲ ಜೋಗಿ ಸ್ವಾರ್‍ಯಸ್ಯವಾಗಿ ವಿವರಿಸಿದ್ದಾರೆ.

ಸರಾಗವಾಗಿ ಓದಿಸಿಕೊಂಡು ಹೋಗುವ ಕಾದಂಬರಿ ನಂಗಂತೂ ಖುಷಿಕೊಟ್ಟಿದೆ. ನೀವೂ ಓದಿ. ನಿಮಗೂ ಇಷ್ಟವಾಗುವುದು ಖಂಡಿತ.

ಜೋಗಿ ಸಿಕ್ಕಾಬಟ್ಟೆ ಬರೆಯುತ್ತಾರೆ. ಅವರು ಎಷ್ಟು ಬರೆಯುತ್ತಾರೆಂದರೆ ಅವರು ಒಂದು ವಾರದಲ್ಲಿ ಬರೆದಷ್ಟನ್ನು ನಾವು ಒಂದು ವಾರದಲ್ಲಿ ಓದಲು ಸಾಧ್ಯವಿಲ್ಲ. ಅಷ್ಟು ಬರೆಯುತ್ತಾರೆ. ಅವರು ಬರೆಯುತ್ತಲೇ ಇರಲಿ. ಅದರಲ್ಲಿ ಒಂದಷ್ಟನ್ನಾದರೂ ಓದಿ ಖುಷಿಪಡಲು ನಮಗೆ ಸಮಯ ಸಿಗಲಿ!

Wednesday, January 30, 2008

ಹಿಡಿವ ಬಸ್ಸು ಬಿಟ್ಟು, ಬಿಡುವ ಬಸ್ಸು ಹಿಡಿದು...

ಎಂಥೆಂಥದ್ದೋ ಪ್ರಕರಣಗಳ ಆರೋಪಿಗಳನ್ನು, ಚಾಲಾಕಿಗಳನ್ನು ಹಿಡಿಯುವ ಪೊಲೀಸರು ಒಮ್ಮೊಮ್ಮೆ ಎಡವಟ್ಟು ಮಾಡಿಬಿಡುತ್ತಾರೆ. ಹೋಳಿದ್ದೊಂದನ್ನು ಬಿಟ್ಟು ಇನ್ನೆಲ್ಲವನ್ನು ಅಚ್ಚುಕಟ್ಟಾಗಿ ಮಾಡಿ ಇಕ್ಕಟ್ಟಿಗೆ ಸಿಲುಕುತ್ತಾರೆ.
ಒಂದು ದಿನ (ಎರಡು ವರ್ಷದ ಹಿಂದೆ) ನಡೆದ ಈ ಘಟನೆ ಅದಕ್ಕೊಂದು ಸಾಕ್ಷಿ.
ಬೆಳಗಾಂನ ನಾಗರಿಕ ಹಕ್ಕು ಜಾರಿ ನಿರ್ದೇಶನಾಲಯದ ಎಸ್ಪಿ ಮಂಗಳೂರಿಗೆ ಬಂದಿದ್ದರು. ರಾತ್ರಿ ಬಸ್ಸಿಗೆ ಮರಳಿ ಬೆಳಗಾಂಗೆ ಹೋಗಬೇಕಿತ್ತು. ೧೦.೦೦ ಗಂಟೆ ಬಸ್‌ಗೆ ಟಿಕೆಟ್ ಬುಕ್ ಆಗಿತ್ತು. ಅವರು ಎಲ್ಲೆಲ್ಲೋ ಹೋಗಿ, ಏನೇನೋ ಹಕ್ಕುಗಳನ್ನು ಜಾರಿ ಮಾಡಿ ಮರಳಿ ಮಂಗಳೂರಿಗೆ ಬರುವಾಗ ರಾತ್ರಿ ೮.೩೦ ಗಂಟೆ ಆಗಿಬಿಟ್ಟಿತ್ತು. ಅವರನ್ನು ಭೇಟಿ ಮಾಡಲು ಹೆಚ್ಚುವರಿ ಎಸ್ಪಿ ಲೋಕೇಶ್ ಕುಮಾರ್, ಡಿವೈಎಸ್ಪಿ ಎಸ್.ಎಂ. ಮಂಟೂರ್ ಹಾಗೂ ಮಂಗಳೂರು ಗ್ರಾಮಾಂತರ ಸರ್ಕಲ್ ಇನ್‌ಸ್ಪೆಕ್ಟರ್ ಉದಯ್ ನಾಯ್ಕ್ ಕಾದು ಕುಳಿತಿದ್ದರು.
ಭೇಟಿ ಅಂದರೆ ಸುಮ್ಮನೆ ಆಗುತ್ಯೆ? ಸ್ವಲ್ಪ ಹೊತ್ತಿನ ಹರಟೆಯ ನಂತರ ಊಟ ಮಾಡಲು ಹೋದರು. ಎಷ್ಟೇ ಬೇಗ ಬೇಗ ಆರ್ಡರ್ ಮಾಡಿ ತರಿಸಿಕೊಂಡು ಊಟ ಮಾಡಿದರೂ ೧೦.೦೦ ಗಂಟೆ ಆಗಿಬಿಟ್ಟಿತ್ತು. ಬಸ್ ತಪ್ಪಿಹೋಗುತ್ತಲ್ಲ? ಪೊಲೀಸ್ ಬುದ್ದಿ ಕರ್ಚು ಮಾಡಿ ಕೂಡಲೆ ಸಂಚಾರ ವಿಭಾಗ ಪೊಲೀಸರಿಗೆ ವಯರ್‌ಲೆಸ್ ಮೂಲಕ ಮಾಹಿತಿ ನೀಡಿ ಬಸ್ ನಿಲ್ಲಿಸುವಂತೆ ಸೂಚಿಸಲಾಯಿತು.
ಹೆಚ್ಚುವರಿ ಎಸ್ಪಿ, ಡಿವೈಎಸ್ಪಿ ಅವರ ವಾಹನ ಕೆಂಪು ಲೈಟ್ ಹಾಕಿಕೊಂಡು ಸರ್ವೀಸ್ ಬಸ್ ನಿಲ್ದಾಣದ ಬಳಿ ನಿಲ್ಲಿಸಲಾದ ಬಸ್ ಬಳಿಗೆ ಹೋಗುವಾಗ ೧೦-೧೫ ನಿಮಿಷ ವಿಳಂಬವಾಗಿತ್ತು. ಅಲ್ಲಿ ಹೋಗಿ ನೋಡಿದರೆ ಸಂಚಾರ ಪೊಲೀಸರು ಎರಡು ಬಸ್ ಹಿಡಿದು ನಿಲ್ಲಿಸಿದ್ದರು. ಹಿರಿಯ ಅಧಿಕಾರಿಗಳ ವಾಹನ ಬಂದ ತಕ್ಷಣ ಸೆಲ್ಯೂಟ್ ಹೊಡೆದ ಒಬ್ಬ ಸರ್ ಎರಡೂ ಬಸ್ ನಿಲ್ಲಿಸಿದ್ದೇವೆ ಎಂದ ವರದಿ ಒಪ್ಪಿಸಿದ. ಹೋಗಿ ನೋಡಿದರೆ ಬೇಕಾದ ಬಸ್ಸೇ ಇರಲಿಲ್ಲ. ಸಂಚಾರ ಪೊಲೀಸರು ಗಡಿಬಿಡಿಯಲ್ಲಿ ಬೆಂಗಳೂರು ಹಾಗೂ ಹುಬ್ಬಳ್ಳಿಗೆ ಹೋಗುವ ಬಸ್ ಹಿಡಿದು ನಿಲ್ಲಿಸಿದ್ದರು. ಬೆಳಗಾಂಗೆ ಹೋಗುವ ಬಸ್ ಹೋಗಿಯಾಗಿತ್ತು!!
ನಗರ ಸಂಚಾರ ಮುಗಿಸಿ ಹೊರ ಹೋಗುತ್ತಿದ್ದ ಬಸ್ಸನ್ನು ಕೆಎಸ್‌ಆರ್‌ಟಿಸಿ ಬಳಿ ಕೊನೆಗೆ ಅಂತೂ ಇಂತೂ ಹಿಡಿದು ಬೆಳಗಾಂ ನಾಗರಿಕ ಹಕ್ಕು ಜಾರಿ ನಿರ್ದೇಶನಾಲಯ ಎಸ್ಪಿಯವರನ್ನು ಹತ್ತಿಸಿದ ಅವರ ಗೆಳೆಯರು ಕೊನೆಗೂ ಸಿಕ್ಕೆದೆಯಲ್ಲ ಖಾಸಗಿ ಬಸ್ಸೆ ಎಂದು ನಿಟ್ಟುಸಿರು ಬಿಟ್ಟರು!!
ಇದು ನನಗೆ ಹೇಗೆ ಗೊತ್ತಾಯಿತು ಅಂದ್ರೆ, ನಾನು ಮನೆಗೆ ಮರಳುವಾಗ ಈ ಮೂವರು ಪೊಲೀಸ್ ಅಧಿಕಾರಿಗಳು ಆಗಷ್ಟೇ ಗೆಳೆಯನನ್ನು ಬಸ್ ಹತ್ತಿಸಿ, ಉಫ್! ಅಂತ ಉಸಿರು ಬಿಟ್ಟು, ರಸ್ತೆ ಬದಿಗೆ ಸುದ್ದಿ ಹೇಳುತ್ತ ನಿಂತಿದ್ದರು. ನಾನು ಬೈಕ್ ನಿಲ್ಲಿಸಿ ಮಾತನಾಡಿಸಿದಾಗ ಇದೆಲ್ಲ ಪುರಾಣ ಹೊರಬಿತ್ತು.

Tuesday, January 22, 2008

ಹೊಂಗನಸು ಅಲ್ಲವಿದು ಕೆಟ್ಟ ಕನಸು!

ಆ ಮನೆಯ ಯಜಮಾನ ಆಗಷ್ಟೇ ಸತ್ತಿರುತ್ತಾನೆ. ಅಂತ್ಯ ಸಂಸ್ಕಾರಕ್ಕೆಂದು ಆತನ ಹೆಣವನ್ನು ಗುಡ್ಡದ ಮೇಲೆ ತೆಗೆದುಕೊಂಡು ಹೋಗಿ ಇಟ್ಟಿರುತ್ತಾರೆ. ಆಗ ಅಷ್ಟೂ ಹೊತ್ತು ನಿಮಗೆ ಗೊತ್ತಿಲ್ಲದ ಒಬ್ಬ ವ್ಯಕ್ತಿ ಬರುತ್ತಾನೆ. ಸತ್ತವನ ಹೆಂಡತಿ ಬಳಿ ಹೋಗಿ, ಏನಿಲ್ಲ ವರ್ಷದೊಳಗೆ ಮನೆಯಲ್ಲಿ ಶುಭ ಕಾರ್ಯ ನೆರವೇರಿದರೆ ಎಲ್ಲ ಸರಿ ಹೋಗುತ್ತದೆ. ನಿನ್ನ ಮಗಳಿಗೆ ಒಂದು ಸಂಬಂಧ ಇದೆ ನೋಡಲೆ? ಎನ್ನುತ್ತಾನೆ.
ಇಂತಹ ಘಟನೆ, ಸನ್ನಿವೇಶವನ್ನು ನೀವೆಲ್ಲೂ ನೋಡಿಲ್ಲವೆಂದರೆ ಖಂಡಿತ ಹೊಂಗನಸು ಸಿನಿಮಾ ನೋಡಿ. ಅದರಲ್ಲಿ ಅಪ್ಪನ ಹೆಣ ಇರಿಸಿಕೊಂಡೇ ಮಗಳ ಮದುವೆ ಮಾತನಾಡುವ ಸನ್ನಿವೇಶ ಇದೆ! ನಿಮಗೆ ಇಷ್ಟವಾಗಬಹುದು!!
ಚಿತ್ರದ ನಾಯಕ ಮತ್ತು ನಾಯಕಿ ಹಳ್ಳಿ ಮತ್ತು ನಗರದಲ್ಲಿ ವಾಸವಾಗಿರುವವರು. ಆದರೆ ಹಾಡಲ್ಲಿ ಮಾತ್ರ ಇವರು ಟೈಗರ್ ಪ್ರಭಾಕರ್‌ನ ‘ಕಾಡಿನ ರಾಜ’ ಅಥವಾ ಎಂ.ಪಿ. ಶಂಕರ್‌ನ ಚಿತ್ರಗಳಲ್ಲಿ ಕಾಣುತ್ತಿದ್ದ ‘ಜುಂಬಲಿಕ್ಕಾ ಜುಂಬಿಕ್ಕಾ ಜುಂಬ ಜುಂಬಾಲೆ’ ಹಾಡಿನ ನಮೂನೆಯ ಕಾಡು ಮನುಷ್ಯರ ಬಟ್ಟೆ ಧರಿಸಿ ಬೆರಗು ಮೂಡಿಸುತ್ತಾರೆ. ಇನ್ನು ನಾಯಕಿಯೋ? ಅವಳ ಮುಖ, ನಟನೆ ನಿರ್ದೇಶಕರಿಗೇ ಚೆಂದ.
ನಾಯಕನ ಜತೆ ನಾಯಕಿ ಹಾಗೂ ಗೆಳತಿಯರು ಕೇರಳಕ್ಕೆ ಓಣಂಗಾಗಿ ತೆರಳುತ್ತಾರೆ. ಆಗ ಚಹಾ ತೋಟದಿಂದ ಕಂಗೊಳಿಸುವ ಮುನಾರ್ ತೋರಿಸಲಾಗುತ್ತದೆ. ನಂತರ ಕೆಲವೇ ಕ್ಷಣದಲ್ಲಿ ಆ ಮನೆಯ ಮಾಲಿಕ ಕನ್ನಡದಲ್ಲಿ ಮಾತನಾಡಿ ಬೆಚ್ಚಿ ಬೀಳಿಸುತ್ತಾನೆ. ಅವರದ್ದೇ ಬಾಯಲ್ಲಿ "ಕಾಸರಗೋಡು ಮೊದಲು ಕರ್ನಾಟಕದ ಭಾಗವಾಗಿತ್ತು. ನೀವು ಅದನ್ನು ಉಳಿಸಿಕೊಳ್ಳಲಿಲ್ಲ.’ ಎಂಬ ಡೈಲಾಗುಗಳನ್ನು ನಿರ್ದೇಶಕ ಮಹಾಶಯರು ಹೇಳಿಸುತ್ತಾರೆ. ಆದರೆ ಕಾಸರಗೋಡಿನಲ್ಲಿ ಚಹಾ ತೋಟವೇ ಇಲ್ಲ!
ಇಡೀ ಸಿನಿಮಾದಲ್ಲಿ ನಗು ಬರೋದು ಒಂದೆರಡು ಕಡೆ ಮಾತ್ರ. ಶರಣ್ ಫೋಟೋಗ್ರಾಫರ್ ಆಗಿ ನಗಿಸುತ್ತಾನೆ. ಅರ್ಧ ಸಿನಿಮಾದಿಂದ ಈತ ಕಾಣೆ. ಅಟ್ ಲೀಸ್ಟ್ ಸಿನಿಮಾದ ಅಂತ್ಯದಲ್ಲಿ ನಡೆಯುವ ಮದುವೆಗೆ ಫೋಟೋ ತೆಗೆಯುವ ಆರ್ಡರನ್ನಾದರೂ ಆತನಿಗೆ ನಿರ್ದೇಶಕರು ದಯಪಾಲಿಸ ಬಹುದಿತ್ತು.!
ನಿಜ ಹೇಳೇಕೆಂದರೆ ಹೊಂಗನಸು ಚಿತ್ರಕ್ಕೆ ಈ ಹೆಸರು ಸ್ವಲ್ಪವೂ ಹೊಂದಿಕೊಳ್ಳುವುದಿಲ್ಲ. ಬದಲಾಗಿ ಈ ಚಿತ್ರಕ್ಕೆ ‘ಅತ್ಗೆಗಾಗಿ’ ಎಂದು ಇಟ್ಟಿದ್ದರೆ ಅತ್ಯಂತ ಸೂಕ್ತವಾಗಿತ್ತು. ಯಾಕೆಂದರೆ ನಾಯಕ ಸಿನಿಮಾದುದ್ದಕ್ಕೂ ಆತ ಏನೇ ಮಾಡಿದರೂ ಅದು ಅತ್ತಿಗೆಗಾಗಿ. ಅದೂ ಅಣ್ಣನನ್ನು ಮದುವೆಯಾಗದ!
ಅನಂತನಾಗು ಮತ್ತು ರಮೇಶ್ ಭಟ್ ಗೆಳೆಯರು. ಚಿಕ್ಕವರಿರುವಾಗಲೇ ಅನಂತನಾಗಿನ ಹಿರಿಯ ಮಗನಿಗೂ, ರಮೇಶ ಭಟ್ ಮಗಳಿಗೂ ಮದುವೆ ಎಂದು ಮಾತಾಡಿಕೊಂಡಿರುತ್ತಾರೆ. ಇದನ್ನು ಮದುವೆಯಾಗಬೇಕಾದ ಹಿರಿಯ ಮಗಿನಿಂದ ಕಿರಿಯ ಮಗ (ಚಿತ್ರದ ನಾಯಕ) ಹೆಚ್ಚು ನೆನಪಿಟ್ಟುಕೊಳ್ಳುತ್ತಾನೆ. ಅಂದಿನಿಂದಲೇ ಅವನ ವರ್ತನೆಗಳು ಅತ್ತಿಗೆಯನ್ನು ಬೆಂಬಲಿಸುತ್ತದೆ. ಎಷ್ಟರ ಮಟ್ಟಿಗೆ ಅಂದರೆ ಅವಳನ್ನು ಎಲ್ಲರೂ ಸಾಗರ್‌ನ (ಚಿತ್ರದಲ್ಲಿ ನಾಯಕ ಹೆಸರು) ಅತ್ತಿಗೆ ಎಂದೇ ಕರೆಯುತ್ತಾರೆ. ಇವನೋ ಅತ್ತಿಗೆಗಾಗಿ ಏನೂ ಮಾಡಬಲ್ಲ. ಅಥವಾ ಆತ ಏನೇ ಮಾಡಿದರೂ ಅದು ಅತ್ತಿಗೆಗಾಗಿ (ಕಡಗೆ ಅಣ್ಣ ಇದೇ ಕಾರಣಕ್ಕೆ ಅವಳನ್ನು ಮದುವೆಯಾಗಲು ಒಪ್ಪುವುದಿಲ್ಲ.) ಅತ್ತಿಗೆಗಾಗಿಯೇ ಒಂದು ಹುಡುಗಿಯನ್ನು ಹುಡುಕಿ, ಪ್ರೀತಿಸಿ ಮದುವೆಯಾಗುತ್ತಾನೆ!
ಸಿನಿಮಾ ಆರಂಭವಾಗಿ ಅರ್ಧ ಮುಗಿಯುವವೆಗೂ ಈ ಸುದ್ದಿಯೇ ಇರುವುದಿಲ್ಲ. ನಾಯಕ- ನಾಯಕಿ ಆಕಸ್ಮಿಕವಾಗಿ ಒಂದೆರಡು ಬಾರಿಯಲ್ಲ ಪ್ರೇಕ್ಷಕರಿಗೆ ಬೇಜಾರು ಬರುವಷ್ಟು ಬಾರಿ ಭೇಟಿಯಾಗುತ್ತಾರೆ. ಅಂತೂ ಅರ್ಧ ಮುಗೀತು ಅಂತ ಹೊರ ಹೋಗಿ ಬಂದು ಕುಳಿತರೆ, ಮೊದಲಿನರ್ಧಕ್ಕೆ ಸಂಬಂಧವೇ ಇಲ್ಲದಂತೆ ಕತೆ ಮುಂದುವರಿಯುತ್ತದೆ. ಹೆಚ್ಚು ಕಮ್ಮಿ ಸಿನಿಮಾ ಮುಗಿಯುವವರೆಗೂ ಪ್ರೇಕ್ಷಕರಿಗೆ ಎರಡು ಸಿನಿಮಾ ನೋಡಿದ ಅನುಭವವಾದರೆ, ಆರಂಭದಿಂದ ಮಧ್ಯಂತರವರೆಗೆ ಹಾಗೂ ಮಧ್ಯಂತರದಿಂದ ಅಂತ್ಯದವರೆಗೆ ಎರಡು ಸಿನಿಮಾಗಳನ್ನು ನಿರ್ಮಿಸಿ, ಎರಡನ್ನೂ ಜೋಡಿಸಿದರೆ ಹೇಗಾಗುತ್ತದೆ? ಹಾಗಾಗಿಗೆ ಎಂದು ‘ಹೊಂಗನಸು’ ಸಿನಿಮಾ ಮುಗಿಯುವ ಹೊತ್ತಿಗೆ ಅನಿಸಿರುತ್ತದೆ.
‘ಹೊಂಗನಸು’ ಸಿನಿಮಾವನ್ನು ಪ್ರೇಕ್ಷಕರು ಒಂದು ಕೆಟ್ಟ ಕನಸು ಎಂದು ಮರೆಯಬೇಕಾದ ಸ್ಥಿತಿ ಇದೆ. ಮಂಗಳವಾರ ‘ಗಾಳಿಪಟ’ ಸಿನಿಮಾ ನೋಡಲೆಂದು ಹೋಗಿದ್ದೆವು. ಟಿಕೆಟ್ ಸಿಗದೆ ನಮ್ಮ ಆಸೆಗಳು ದಾರ ಹರಿದ ಗಾಳಿಪಟದಂತೆ ಎಲ್ಲೆಲ್ಲೋ ಸುತ್ತಾಡಿ ಅಂತಿಮವಾಗಿ ಹೊಂಗನಸಾಗಿ ಮಾರ್ಪಾಟಾದವು. ಈಗ ಆ ಹೊಂಗನಸನ್ನು ಕೆಟ್ಟ ಕನಸೆಂದು ಮರೆಯಬೇಕಾಗಿದೆ.
ಆದರೆ ಸಿನಿಮಾಕ್ಕೆ ಹೋಗುವಾಗ ತಲೆನೋವೆಂದು ಹೇಳುತ್ತಿದ್ದ ನನ್ನ ಹೆಂಡತಿಗೆ ಹೊಂಗನಸು ನೋಡಿ ಹೊರಬರುವಾಗ ತಲೆ ನೋವು ಮಂಗಮಾಯವಾಗಿದ್ದು ಮಾತ್ರ ಸತ್ಯ. ಅಷ್ಟರ ಮಟ್ಟಿಗೆ ನಿರ್ದೇಶಕ ಯಶಸ್ವಿಯಾಗಿದ್ದಾನೆ.
ಗೂಗ್ಲಿ: ಹೊಂಗನಸಿನಂತಹ ಸಿನಿಮಾಗಳನ್ನೂ ನೋಡಬೇಕು. ಯಾಕೆಂದರೆ ಒಳ್ಳೆಯ ಸಿನಿಮಾಕ್ಕೂ ಕೆಟ್ಟ ಸಿನಿಮಾಕ್ಕೂ ಇರುವ ವ್ಯತ್ಯಾಸ ಅರಿಯಲು.

Friday, January 18, 2008

ಸಿನಿಮಾ ನೋಡಿ ಅಳದೇ ಅದೆಷ್ಟು ವರ್ಷವಾಗಿತ್ತು!


ಸಿನಿಮಾ ನೋಡಿ ನಾನು ಅತ್ತಿದ್ದು ಯಾವಾಗ?

ಎಷ್ಟು ಪ್ರಯತ್ನಪಟ್ಟರೂ ನೆನಪಾಗುತ್ತಿಲ್ಲ.

ನನಗೆ ತಿಳಿಯಲು ಆರಂಭವಾದಾಗಿನಿಂದ ಸಿನಿಮಾ ನೋಡಿ ಅತ್ತಿದ್ದು ಹೆಚ್ಚೆಂದರೆ ಒಂದೆರಡು ಬಾರಿ ಮಾತ್ರ. ಹೈಸ್ಕೂಲ್ ದಾಟಿದ ಮೇಲೆ ಸಿನಿಮಾ ನೋಡಿ ಅತ್ತ ದಾಖಲೆಯೇ ಇಲ್ಲ.

ಆದರೆ ಮೊನ್ನೆ ಅತ್ತುಬಿಟ್ಟೆ. ತಾರೆ ಜಮೀನ್ ಪರ್ ಸಿನಿಮಾ ನೋಡಿ ಅತ್ತುಬಿಟ್ಟೆ. ಅತ್ತುಬಿಟ್ಟೆ ಅನ್ನುವುದಕ್ಕಿಂತ ಹಲವು ಬಾರಿ ಅಳು ಬಂತು ಅನ್ನುವುದು ಹೆಚ್ಚು ಸೂಕ್ತ.

ಸಾಮಾನ್ಯವಾಗಿ ಸಿನಿಮಾ ನೋಡಿ ನಾನು ಅಳುವುದಿಲ್ಲ. ಸಿನಿಮಾವನ್ನು ಕೇವಲ ಸಿನಿಮಾ ಎಂದು ನೋಡಿದವನು ನಾನು. ಅದರಲ್ಲೂ ಒಬ್ಬ ಪತ್ರಿಕೋದ್ಯಮ ವಿದ್ಯಾರ್ಥಿಯಾಗಿ, ಸಿನಿಮಾ ನೋಡುವುದು ಹೇಗೆ ಎಂಬುದನ್ನು ಮೇಸ್ಟ್ರರಿಂದ ಹೇಳಿಸಿಕೊಂಡವನಾಗಿ ಸಿನಿಮಾದೊಳಗೆ ಭಾವನಾತ್ಮಕವಾಗಿ ಸೇರಿ ಹೋಗುವುದು ಬಹಳ ಕಡಿಮೆ. ಆದರೆ ತಾರೆ ಜಮೀನ್ ಪರ್ ನೋಡುವಾಗ ಮಾತ್ರ ಅದು ಸಾಧ್ಯವೇ ಆಗಲಿಲ್ಲ.

ಯಾಕಿರಬಹುದು?

ನಾನೂ ಚಿಕ್ಕವನಿರುವಾಗ ಬೇಕಾದಷ್ಟು ಬಾರಿ ಅಪ್ಪನಿಂದ ಬೈಸಿ, ಹೊಡೆಸಿಕೊಂಡಿದ್ದಕ್ಕಾ? ಕಡಿಮೆ ಮಾರ್ಕ್ಸ್ ತಗೊಂಡೆ ಎಂದು ಬೈಸಿಕೊಂಡಿದ್ದಕ್ಕಾ? ಹೆಚ್ಚು ಮಾರ್ಕ್ಸ್ ಪಡೆಯದೇ, ಓದದೇ, ಕ್ರಿಕೆಟ್ ಆಡಿದ್ದಕ್ಕೆ ಒಂದಿಡೀ ದಿನ ಮನೆಯ ಹೊರಗೇ ನಿಲ್ಲುವ ಶಿಕ್ಷೆ ಅನುಭವಿಸಿದ್ದಕ್ಕಾ? ಇದೆಲ್ಲದರ ಪರಿಣಾಮ ನಾನು ತಾರೆ ಜಮೀನ್ ಪರ್ ಹಿರೋ ಬಾಲಕನ ಜತೆ ನನ್ನನ್ನೇ ಗುರುತಿಸಿಕೊಂಡೆನಾ?

ಬಹುಶಃ ಹೌದು. ಅದರ ಪರಿಣಾಮವೇ ಕಣ್ಣು ನೀರಾಡಿದ್ದು.

ನಾನಾದರೋ ಕಲಿಯುವಾಗ ಅಷ್ಟೇನೂ ಸ್ಪರ್ಧೆ ಇರಲಿಲ್ಲ. ಕಲಿಯದಿದ್ದರೆ, ಶೇ.೮೫ಕ್ಕಿಂತ ಹೆಚ್ಚು ಮಾರ್ಕ್ಸ್ ಪಡೆಯದಿದ್ದರೆ ಕೆಲಸ ಸಿಗದೇ ನಿಷ್ಪ್ರಯೋಜಕ ಎನಿಸಿಕೊಳ್ಳಬೇಕಾದ ಸ್ಥಿತಿ ಬರುತ್ತದೆ ಎಂಬ ಸ್ಥಿತಿ ಇರಲಿಲ್ಲ. ಈಗಿನ ಹಾಗೆ ೧೦೦ಕ್ಕೆ ೯೯, ೯೮ ಮಾರ್ಕ್ಸ್‌ಗಳೂ ಆಗ ಸಿಗುತ್ತಿರಲಿಲ್ಲ. ನಾನು ಯಾರ ಬಳಿಯೂ ಟ್ಯೂಶನ್ ಹೇಳಿಸಿಕೊಳ್ಳದೆ ಎಂಎ ಮುಗಿಸಿದೆ. ಈಗ ನೋಡಿದರೆ ೧-೨-೩ನೇ ತರಗತಿಗೇ ಟ್ಯೂಶನ್. ಎಸ್ಸೆಸ್ಸೆಲ್ಸಿ, ಪಿಯುಸಿ ಮಕ್ಕಳಿಗಂತೂ ಬೆಳಗ್ಗೆ ಟ್ಯೂಶನ್, ನಂತರ ಕ್ಲಾಸು. ಅದರ ನಂತರ ಮತ್ತೆ ಸಂಜೆ ಟ್ಯೂಶನ್, ರಜೆಯಲ್ಲಿ ಟ್ಯೂಶನ್. ಆ ಮಕ್ಕಳ ಮೇಲೆ ಅದೆಷ್ಟು ಒತ್ತಡ ಇರಬಹುದು? ಶೇ.೯೦, ೮೦ ಅಂಕ ಪಡೆಯುವ ಮಕ್ಕಳು ಒಳಗೊಳಿಂದೊಳಗೆ ಅದೆಷ್ಟು ಕುಸಿಯುತ್ತಿರಬಹುದು? ಕಲ್ಪನೆಗೂ ನಿಲುಕದ್ದು.

ಹೆಚ್ಚು ಅಂಕ ಪಡೆಯಲು ಮಕ್ಕಳ ಮೇಲೆ ಒತ್ತಡ ಹೇರುವ ಪಾಲಕರು ತಾರೆ ಜಮೀನ್ ಪರ್ ಸಿನಿಮಾ ನೋಡುವುದೊಳಿತು.

Tuesday, January 15, 2008

ಮನಸು ಮರೆಯದ ಮುನಾರ್

ಮೈ ಕೊರೆವ ಚಳಿ, ನೋಡಿದಲ್ಲೆಲ್ಲ ಹಚ್ಚ ಹಸಿರು. ಜತೆಯಲ್ಲಿ ಪ್ರೇಯಸಿಯ (ಹೆಂಡತಿಯದ್ದೂ ಆಗಬಹುದು) ಬೆಚ್ಚನೆಯ ಉಸಿರು. ಸ್ವರ್ಗಕ್ಕೆ ಕಿಚ್ಚು ಹಚ್ಚಲು ಇನ್ನೇನು ಬೇಕು?

ಒಂದಲ್ಲ ಎರಡಲ್ಲ 22 ಸಾವಿರ ಹೆಕ್ಟೇರ್ ಚಹಾ ತೋಟ! ಕಣ್ಣೋಟದುದ್ದಕ್ಕೂ ಸಮತಟ್ಟಾದ ಹಸಿರು! ಹದವಾಗಿ ಸುರಿಯುವ ಮಂಜು. ಅದರಿಂದುಂಟಾದ ಮಸುಕು ವಾತಾವರಣ. ಹತ್ತಿಯುಂಡೆಗಳಂತೆ ಕೈಗೆಟಕುವಷ್ಟು ದೂರದಲ್ಲಿ ಕಾಣುವ ಮೋಡಗಳು. ಸಿನಿಮಾಗಳಲ್ಲಿ ಹೊಗೆ ಹಾಕಿ ತೋರಿಸುವ ದೇವಲೋಕದ ಚಿತ್ರ ನೆನಪಾಗುತ್ತದೆ.
ಇದೆಲ್ಲ ಇಲ್ಲದೆ ಅದನ್ನು ದೇವರನಾಡು ಎಂದು ಕರೆಯುತ್ತಾರಾ?

ನಾನು ಕೇರಳದ ಮುನಾರ್ಗೆ ಹೋಗಿ ಬಂದು ಆಗಲೇ ಏಳು ತಿಂಗಳಾಯಿತು. ಮನಸಲ್ಲಿ ಮಾತ್ರ ಮುನಾರ್ ಸ್ವಲ್ಪವೂ ಮಸುಕಾಗಿಲ್ಲ. ಅಷ್ಟರಲ್ಲೇ ಮತ್ತೊಮ್ಮೆ ಮುನಾರ್‌ಗೆ ಹೋಗುವ ಆಸೆ ಮನಸಲ್ಲಿ. ಮುನಾರ್ ನಿಜಕ್ಕೂ ಕಣ್ಣು- ಮನಸ್ಸುಗಳಿಗೆ ಹಬ್ಬ! ನನ್ನ ಗೆಳೆಯ ಮಂಜು (ಮಿಸ್ಟ್ ಅಲ್ಲ) ಮುನಾರಿನ ಮಂಜಿನ ನಡುವೆ ತೆಗೆದ ಚಿತ್ರಗಳು ಆಗಾಗ ಮುನಾರ್ ನೆನಪನ್ನು ಹಸಿರಾಗಿಸಿ, ಮನಸನ್ನು ಹಸಿ ಮಾಡುತ್ತಲೇ ಇರುತ್ತವೆ.
ಮುನಾರ್ನಲ್ಲಿರುವ ರಾಜಮಲೈ ನಿಜಕ್ಕೂ ಭೂಲೋಕದ ಸ್ವರ್ಗ. ಅಪರೂಪದ ಮತ್ತು ವಿನಾಶದಂಚಿನಲ್ಲಿರುವ ನೀಲಗಿರಿ ಥಾರ್ ಹೆಸರಿನ ಆಡು ಜಾತಿಗೆ ಸೇರಿದ ಪ್ರಾಣಿಗಳು ಇಲ್ಲಿ ಮಾತ್ರ ಇವೆ. ಅತಿ ಎತ್ತರದ ಬೆಟ್ಟದ ಮೇಲಿರುವ ಈ ಸ್ಥಳಕ್ಕೆ ಅರಣ್ಯ ಇಲಾಖೆ ವಾಹನದಲ್ಲಿ ನಿಮ್ಮನ್ನು ಕರೆದುಕೊಂಡು ಹೋಗಿ ಬಿಡಲಾಗುತ್ತದೆ. ಅಲ್ಲಿ ಎಷ್ಟೊತ್ತು ಬೇಕಾದರೂ ನೀವು ಇರಬಹುದು. ಯಾರೂ ತಕರಾರು ಮಾಡುವುದಿಲ್ಲ.

ಈ ಸ್ಥಳದ ವಿಶೇಷತೆಯೆಂದರೆ ಪ್ರತಿ ೧೫ ನಿಮಿಷಕ್ಕೊಮ್ಮೆ ಇಲ್ಲಿ ವಾತಾವರಣ ಬದಲಾಗುತ್ತದೆ. ಅರೆಕ್ಷಣಕ್ಕೆ ಮಂಜು ಆವರಿಸಿಕೊಂಡು ಕೈ ಅಳತೆ ಅಂತರದಲ್ಲಿದ್ದವರು ಕಾಣದಂತಾಗುತ್ತದೆ. ಮಂಜೇ ಮಳೆಯಾಗಿ ಬದಲಾಗುತ್ತದೆ. ನಿಧಾನವಾಗಿ ಮಂಜು ಸರಿದು ತಿಳಿಯಾಗುತ್ತದೆ. ಮಂಜು ನಿಧಾನವಾಗಿ ಆಗಮಿಸಿ, ನಿಮ್ಮನ್ನಾವರಿಸಿ ಆಚೆ ಹೋಗುವುದನ್ನು ಇಲ್ಲಿ ಅನುಭವಿಸಬಹುದು.

ಇಲ್ಲಿ ಹೋದರೆ ಸಮಯ, ಮನೆ, ಕೆಲಸ, ಕೊನೆಗೆ ಪಕ್ಕದಲ್ಲಿರುವ ಹೆಂಡತಿ ಎಲ್ಲವೂ ಮರೆತೇ ಹೋಗುತ್ತದೆ. ಕೇರಳ ಸರಕಾರ ಅನುಮತಿ ಕೊಟ್ಟರೆ ಅಲ್ಲೇ ಸಣ್ಣದೊಂದು ಗುಡಿಸಲು ಕಟ್ಟಿಕೊಂಡು ಇದ್ದುಬಿಡೋಣ ಅನಿಸುವಷ್ಟು ಚೆಂದಗಿದೆ ಆ ಸ್ಥಳ.

ಹತ್ತಿರದಲ್ಲೇ ಒಂದೆರಡು ಡ್ಯಾಂಗಳಿವೆ. ಸಂಜೆಯಾದರೆ ಅದರ ಹಿನ್ನೀರು ಪ್ರದೇಶದಲ್ಲಿ ಆನೆಗಳು ನೀರಿಗೆಂದು ಬೆಟ್ಟ ಇಳಿದು ಬರುತ್ತವೆ. ಜತೆಗೇ ಮರಿಗಳೂ ಇದ್ದರೆ ಅದು ನಿಮಗೆ ಬೋನಸ್.

ಮುನಾರ್ ಬಹಳ ದೂರವೇನಿಲ್ಲ. ಮಂಗಳೂರಿನಿಂದ ೫೩೦ ಕಿ.ಮೀ. ಮಂಗಳೂರಿನಿಂದ ರೈಲಿನಲ್ಲಿಯೂ ಪ್ರಯಾಣಿಸಬಹುದು. (ಪೂರ್ತಿ ಮುನಾರ್‌ವರೆಗೆ ಅಲ್ಲ). ಆದರೆ ನಾವೇ ವಾಹನ ಮಾಡಿಸಿಕೊಂಡು ಹೋದರೆ ಅದರ ಮಜವೇ ಬೇರೆ. (ನಾವು ಸ್ಕಾರ್ಪಿಯೋ ತೆಗೆದುಕೊಂಡು ಹೋಗಿದ್ದೆವು.) ಕೇರಳ ನೋಡಿ ಕಲೀಬೇಕು ಕಣ್ರೀ ನಾವು ಕರ್ನಾಟಕದೋರು.

ಮುನಾರ್ ಎಂಬ ಊರನ್ನು ಆವರಿಸಿಕೊಂಡಿರುವ 22 ಸಾವಿರ ಹೆಕ್ಟೇರ್ ಚಹಾ ತೋಟ ಟಾಟಾದವರಿಗೆ ಸೇರಿದ್ದು. ಖಾಸಗಿಯವರಿಗೆ ಚಹಾ ತೋಟ ಮಾಡಲು ಕೊಟ್ಟೂ, ಅದನ್ನು ಪ್ರವಾಸಿ ತಾಣವಾಗಿ ಮಾಡುವಲ್ಲಿ ಮತ್ತು ಯಾವ ಪ್ರವಾಸಿಗರಿಗೂ ಅದೊಂದು ಖಾಸಗಿ ಚಹಾ ತೋಟ ಎಂಬ ಭಾವನೆ ಬರದ ರೀತಿಯಲ್ಲಿ ನಿಭಾಯಿಸಲಾಗಿದೆ. ಚಹಾ ತೋಟಗಳ ಮೇಲಿನ ಗುಡ್ಡದಲ್ಲಿ ರಾಜಮಲೈನಂತರ ಸುಂದರ ಸ್ಥಳವಿದೆ. ಅಲ್ಲಿ ನೀಲಗಿರಿ ಥಾರ್ ಎಂಬ ಅಪರೂಪದ ಪ್ರಾಣಿಗಳ ವಂಶವೃದ್ಧಿ ನಡೆದಿದೆ.
ನಮ್ಮ ರಾಜ್ಯದಲ್ಲೂ ಪ್ರವಾಸಿ ತಾಣಗಳಿವೆ. ಅವುಗಳನ್ನು ಜನರಿಗೆ ಸರಿಯಾಗಿ ಬಿಂಬಿಸಲು, ಸೌಲಭ್ಯ ಕಲ್ಪಿಸಲು ನಮ್ಮ ಸರಕಾರಕ್ಕೆ ಸಾಧ್ಯವಾಗಿಲ್ಲ. ನನ್ನ ಜಿಲ್ಲೆಯಾದ ಉತ್ತರ ಕನ್ನಡಕ್ಕೆ ಜಲಪಾತಗಳ ತವರೂರು ಎಂಬ ಹೆಸರಿದೆ. ಜೋಗ ಜಲಪಾತವನ್ನೂ ಮೀರಿಸುವಷ್ಟು ಸುಂದರವಾಗಿರುವ, ಹೆಚ್ಚು ನೀರಿರುವ ಜಲಪಾತಗಳು ಉತ್ತರ ಕನ್ನಡ ಜಿಲ್ಲೆಯಲ್ಲಿದೆ. ಆದರೆ ಅಲ್ಲಿಗೆ ಹೊರಟಿರೋ, ಒಂದು ರಸ್ತೆಗೂ ಸರಿಯಾದ ಬೋರ್ಡ್ ಇಲ್ಲ. ಹೊಸಬರು ನೇರವಾಗಿ ಜಲಪಾತದ ದಾರಿಗೆ ಹೋಗುವುದು ಸಾಧ್ಯವೇ ಇಲ್ಲ. ರಸ್ತೆಗಳ ಬಗ್ಗೆ ಮಾತಾಡದಿರುವುದೇ ಒಳ್ಳೆಯದು. ಯಾಣದಂತಹ ಪ್ರವಾಸಿ ತಾಣ ಪ್ರಸಿದ್ಧವಾಗಬೇಕಾದರೆ ನಮ್ಮೂರ ಮಂದಾರ ಹೂವೆ ಚಿತ್ರದಲ್ಲಿ ಅದನ್ನು ತೋರಿಸಬೇಕಾಯಿತು.
ಕೇರಳವನ್ನು ಸ್ವಲ್ಪ ಮಟ್ಟಿಗಾದರೂ ಅನುಸರಿಸಿದರೆ ಕರ್ನಾಟಕವೂ ದೇವರ ರಾಜ್ಯವಾದೀತು. ಏನಂತೀರಾ?

Thursday, January 03, 2008

ಮಾಂಸಾಹಾರಿ ಆಡು


ಆಡಿನ ಮಾಂಸ ಮನುಷ್ಯ ತಿನ್ನೋದು ಗೊತ್ತು. ಆಡು ಮಾಂಸ ತಿನ್ನೋದೇ?

ನಂಬಲಸಾಧ್ಯ. ಆದರೆ ನಂಬದೆ ಬೇರೆ ದಾರಿಯಿಲ್ಲ. ದೇವಸ್ಥಾನಗಳ ರಾಜ್ಯ ಎಂದೇ ಹೆಸರಾಗಿರುವ ಓರಿಸ್ಸಾದಲ್ಲಿ ಇಂತಹದ್ದೊಂದು ಆಡಿದೆ. ಅದು ಮಾಂಸವನ್ನೂ ತಿನ್ನುತ್ತದೆ ಸಾರಾಯಿ ಕುಡಿದು ಟೈಟೂ ಆಗುತ್ತದೆ. ಈ ವಿಶೇಷತೆಯೇ ಈ ಆಡಿನ ದೀರ್ಘಾಯಸ್ಸಿನ ಮೂಲ!

ಓರಿಸ್ಸಾದ ರಾಜಧಾನಿ ಭುವನೇಶ್ವರದಿಂದ ೩೫೦ ಕಿ.ಮೀ. ದೂರದಲ್ಲಿ ಹೆದ್ದಾರಿ ಬದಿಯಲ್ಲೇ ಇರುವ ಸನಾ ಬಡಾ ದಾಬಾದಲ್ಲಿದೆ ಈ ಆಡು. ಅದರ ಹೆಸರು ಮಂಟು. ಎರಡೂವರೆ ವರ್ಷದ ಈ ಮಂಟುವಿಗೆ ಬೇಯಿಸಿದ ಮಾಂಸ ತಿನ್ನುತ್ತದೆ. ದಾಬಾದಲ್ಲಿ ಆಡು ಕಡಿದು ಬೇಯಿಸಿ ಮಾಡುವ ಮಾಂಸವನ್ನೇ ಈ ಆಡು ತಿನ್ನುತ್ತದೆ. ಇದು ಮಾತು ಕೂಡ ಕೇಳುತ್ತದೆ. ಟೈಟಾದಾಗ ಕೂಡ! ಸತ್ತಂತೆ ಮಲಗಲು, ಹೊಡೆದಾಟದ ಪೋಸು ನೀಡಲು ಹೇಳಿದರೆ ಅರೆ ಕ್ಷಣದಲ್ಲಿ ಮಾಡಿ ತೋರಿಸುತ್ತದೆ ಈ ಆಡು.

ದಾಬಾದ ಮಾಲಿಕ ಸನಾ ನಾಯಕ್ ದಾಬಾದಲ್ಲಿ ಅಡುಗೆಗೆಂದೇ ಆಡು ಸಾಕುತ್ತಾರೆ. ಆದರೆ ಈ ವಿಶೇಷತೆ ಇರುವುದರಿಂದ ಮಂಟುವನ್ನು ಕಡಿದು ಅಡುಗೆ ಮಾಡಿಲ್ಲ. ಈ ಆಡಿನ ಆಕರ್ಷಣೆಗೆ ಜನ ಬರುತ್ತಾರೆ. ಜನ ಆಡಿನೊಂದಿಗೆ ಆಹಾರ ಹಂಚಿಕೊಳ್ಳುತ್ತಾರೆ ಎನ್ನುತ್ತಾನೆ ಮಾಲಿಕ.ಇಷ್ಟೇ ಅಲ್ಲ, ಗ್ರಾಕರ ಆಕರ್ಷಣೆಯ ಕೇಂದ್ರವಾಗಿರುವ ಈ ಆಡಿನ ಮದುವೆಯನ್ನು ಧಾಂ ಧೂಂ ಜೋರಾಗಿ ನಡೆಸಲು ಮಾಲಿಕ ಸಿದ್ಧತೆ ನಡೆಸಿದ್ದಾನೆ. ಸಚಿವರು, ಶಾಸಕರನ್ನೂ ಕರೆಸುವ ಯೋಚನೆ ಮಾಡಿದ್ದಾನೆ. ಅನುರೂಪವಾದ ಹೆಣ್ಣು (ಆಡು) ಸಿಗಬೇಕಷ್ಟೆ!

Monday, December 24, 2007

ಚುಕುಬುಕು ಚುಕುಬುಕು ರೈಲೆ ಆಹಾ ನಿನ್ನ ಸ್ಟೈಲೆ


ತಿರುವುಗಳಲ್ಲಿ ಬಳುಕುತ್ತ, ಘಾಟಿಯಲ್ಲಿ ತೇಕುತ್ತ, ಎಡಕುಮೇರಿಯಲ್ಲಿ ತೆವಳುತ್ತ, ಪಶ್ಚಿಮ ಘಟ್ಟವನ್ನು ಬಳಸುತ್ತ ಮಂಗಳೂರು- ಬೆಂಗಳೂರು ರೈಲೆಂಬ ಸಿಂಗರಿತ ಚೆಲುವೆ ಮೆಲ್ಲಗೆ...


ಬಿಂಕದ ಸಿಂಗಾರಿ

ಮೈ ಡೊಂಕಿನ ವಯ್ಯಾರಿ...

ಎಂದು ಘಾಟಿ ಹತ್ತುತ್ತಿದ್ದರೆ ರೋಮಾಂಚನ!
೧೧ ವರ್ಷದ ನಂತರ ಆರಂಭವಾದ ಮಂಗಳೂರು- ಬೆಂಗಳೂರು ರೈಲಿನ ಮೊದಲ ಪ್ರಯಾಣದಲ್ಲೇ ಆದ ಅನುಭವಗಳು, ಕಂಡ ದೃಶ್ಯಗಳು ಅಧ್ಬುತ. ಅತ್ಯಧ್ಬುತ!! ಕೆಲವು ದೃಶ್ಯಗಳು ರುದ್ರ ರಮಣೀಯ!
ಮೊದಲ ರೈಲು ಮಂಗಳೂರಿನಿಂದ ಮಧ್ಯಾಹ್ನ ೩.೦೦ ಗಂಟೆಗೆ ಬಿಟ್ಟಿದ್ದರಿಂದಸುಂದರ ದೃಶ್ಯಗಳು ನೋಡಲು ಸಿಕ್ಕವು.ಒಟ್ಟು ೬೭೦ ಸೇತುವೆಗಳು, ೫೭ ಸುರಂಗಗಳು, ಹಚ್ಚಹಸಿರಿನ ಪಶ್ಚಿಮ ಘಟ್ಟದ ಗಿರಿಗಳು. ಸಮುದ್ರ ಮಟ್ಟದಲ್ಲಿರುವ ಮಂಗಳೂರಿನಿಂದ ಹೊರಡುವ ರೈಲು ಸಮುದ್ರ ಮಟ್ಟದಿಂದ ೯೬೭ ಮೀ. ಎತ್ತರದಲ್ಲಿರುವ ಸಕಲೇಶಪುರಕ್ಕೆ ಹತ್ತುವ ಪರಿ ನೀವೊಮ್ಮೆ ನೋಡಬೇಕು. ನೋಡಲೇಬೇಕು.ಸುಬ್ರಹ್ಮಣ್ಯ- ಸಕಲೇಶಪುರದ ನಡುವಿನ ೫೫ ಕಿ.ಮೀ. ಹಳಿ ಮಂಗಳೂರು- ಬೆಂಗಳೂರು ರೈಲಿನ ಹೈಲೈಟ್. ಈ ೫೫ ಕಿ.ಮೀ. ವ್ಯಾಪ್ತಿಯಲ್ಲಿ ೫೭ ಸುರಂಗಗಳಿವೆ. ಒಟ್ಟು ಸುರಂಗಳ ಮಾರ್ಗದ ಉದ್ದ ೧೧ ಕಿ.ಮೀ. ರೈಲಿನ ಹಿಂಭಾಗ ಒಂದು ಸುರಂಗದಿಂದ ಹೊರಬಿದ್ದಿರುವುದಿಲ್ಲ ಆಗಲೇ ಮುಂಭಾಗ ಇನ್ನೊಂದು ಸುರಂಗ ಹೊಕ್ಕಿರುತ್ತದೆ.
ಈ ದಾರಿಯಲ್ಲಿ ಒಟ್ಟು ೨೪೧ ಸೇತುವೆಗಳಿವೆ. ಇವು ಬರೇ ಸೇತುವೆಗಳಲ್ಲ ಮೈನವಿರೇಳಿಸುವ ತಾಣಗಳು, ಎಂಜಿನಿಯರಿಂಗ್‌ನ ಅಧ್ಬುತ ನಿರ್ಮಾಣಗಳು. ೧೦೦-೨೦೦ ಅಡಿ ಎತ್ತರದ ಸಿಮೆಂಟ್ ಕಂಬಗಳನ್ನು ನಿರ್ಮಿಸಿ ಅದರ ಮೇಲೆ ಹಳಿ ಹಾಕಿ ರೈಲು ಓಡಿಸುವುದು ಸಾಮಾನ್ಯಾದ ಕೆಲಸವೇ? ಇಂತಹ ಎತ್ತರದ ಸೇತುವೆಗಳ ಮೇಲೆ ಹೋಗುವಾಗ ಕೆಳಗಿನ ಪ್ರಪಾತ ನೋಡಿದರೋ ಹೃದಯ ಬಾಯಿಗೆ ಬರುವುದು ಅಂದರೇನು ಎಂಬುದು ಅರ್ಥವಾಗುತ್ತದೆ. ಅಲ್ಲದೆ ಪ್ರಯಾಣಿಕರ ರೈಲು ಓಡಿಸಲು ಅಧಿಕಾರಿಗಳು ಯಾಕಿಷ್ಟು ಹಿಂಜರಿಯುತ್ತಾರೆ ಎಂಬುದೂ ಅರಿವಿಗೆ ಬರುತ್ತದೆ.
ಘಾಟಿಯಲ್ಲಿ ೧೧೦ ತಿರುವುಗಳಿವೆ, ಎಡಕುಮೇರಿ ಕಮರಿಯನ್ನು ಸುತ್ತು ಬಳಸುವಾಗ ರೈಲು ಸರಿಯಾಗಿ ಅರ್ಧಚಂದ್ರಾಕೃತಿಯಾಗಿ ಮಾರ್ಪಾಡಾಗುತ್ತದೆ. ಆಗ ಇಡೀ ಗಿರಿಗಳ ಸಾಲಿಗೆ ಸಣ್ಣದೊಂದು ಅರ್ಧಚಂದ್ರದ ನೆಕ್ಲೆಸ್ ತೊಡಿಸಿದಂತೆ ಕಾಣುತ್ತದೆ!
ಹತ್ತು ಹಲವು ಅಚ್ಚರಿಗಳು
ಸುಬ್ರಹ್ಮಣ್ಯದಿಂದ ಸಕಲೇಶಪುರ ನಡುವೆ ೭ ನಿಲ್ದಾಣಗಳಿವೆ. ಇವುಗಳಲ್ಲಿ ೩ ನಿಲ್ದಾಣಗಳಿಗೆ ರೈಲ್ವೆ ಹಳಿ ಬಿಟ್ಟರೆ ಬೇರೆ ಸಂಪರ್ಕ ರಸ್ತೆಗಳೇ ಇಲ್ಲ! ಐದು ನಿಲ್ದಾಣಗಳಿಗೆ ವಿದ್ಯುತ್ ಸಂಪರ್ಕವೇ ಇಲ್ಲ. ಈ ನಿಲ್ದಾಣಗಳು ಜನರೇಟರ್ ಅಥವಾ ಸೋಲಾರ್ ಬೆಳಕಿನ ಆಧಾರದಲ್ಲಿ ಕೆಲಸ ನಿರ್ವಹಿಸುತ್ತವೆ. ಎಡಕುಮೇರಿ ನಿಲ್ದಾಣ ಭಾರತೀಯ ರೈಲ್ವೆಯ ಮೊದಲ ಸೋಲಾರ್ ಆಧಾರಿತ ನಿಲ್ದಾಣ ಎಂಬ ಹೆಗ್ಗಳಿಗೆ ಪಾತ್ರವಾಗಿರುವುದು ನಿಮಗೆ ಗೊತ್ತೇ ಇರಬಹುದು. ಎಡಕುಮೇರಿ ರೈಲು ನಿಲ್ದಾಣವಂತೂ ಸುತ್ತಣ ಸುಂದರ ಪರಿಸರದಿಂದಾಗಿ ಒಂದೊಳ್ಳೆ ರೆಸಾರ್ಟಿನಂತೆ ಕಂಗೊಳಿಸುತ್ತದೆ.
ಘಾಟಿ ಹತ್ತುವ ಧಾಟಿ
ಇಂತಹ ಘಾಟಿಯನ್ನು ರೈಲು ಹೇಗೆ ಹತ್ತುತ್ತದೆ? ನಿಮ್ಮಲ್ಲೊಂದು ಅನುಮಾನ ಇರಬಹುದು. ಪ್ಯಾಸೆಂಜರ್ ರೈಲು ಘಟ್ಟ ಹತ್ತುವಾಗ ಹಿಂದಿನಿಂದ ಎರಡು ಎಂಜಿನ್ ಜೋಡಿಸಲಾಗುತ್ತದೆ. ಇವು ಹಿಂದಿನಿಂದ ರೈಲನ್ನು ಒತ್ತಿಕೊಡುತ್ತವೆ. ಘಾಟಿ ಹತ್ತುವಾಗ ರೈಲಿನ ವೇಗ ಕೇವಲ ೩೦ಕಿ.ಮೀ. ಅದಕ್ಕಿಂತ ಹೆಚ್ಚಿನ ವೇಗ ಹೋಗುವ ಹಾಗಿಲ್ಲ. ಎಂಜಿನ್‌ಗಳಿಗೆ ಅಟೋಮ್ಯಾಟಿಕ್ ಬ್ರೇಕಿಂಗ್ ಸಿಸ್ಟಂ (ಎಬಿಎಸ್) ಅಳವಡಿಸಲಾಗಿದೆ.ಬರುವಾಗ? ೩ ಎಂಜಿನ್‌ಗಳನ್ನು ಮುಂದೆ ಅಳವಡಿಸಲಾಗುತ್ತದೆ. ಹೀಗಾಗಿ ಹೋಗುವಾಗ ಸುಬ್ರಹ್ಮಣ್ಯದಲ್ಲಿ ಹಾಗೂ ಬರುವಾಗ ಸಕಲೇಶಪುರದಲ್ಲಿ ರೈಲಿಗೆ ಹೆಚ್ಚುವರಿ ಎಂಜಿನ್ ಜೋಡಿಸಲಾಗುತ್ತದೆ.ಸುಬ್ರಹ್ಮಣ್ಯದಿಂದ ಸಕಲೇಶಪುರಕ್ಕಿರುವ ಘಾಟಿಯ ೫೫ ಕಿ.ಮೀ. ಕ್ರಮಿಸಲು ರೈಲು ಎರಡೂವರೆ ತಾಸು ತೆಗೆದುಕೊಳ್ಳುತ್ತದೆ. ಒಂದು ಘಾಟಿ ಹತ್ತಲು ಅಥವಾ ಇಳಿಯಲು ಆರಂಭಿಸಿತೆಂದರೆ ಅದು ಘ್ಯಾಟಿಯ ವ್ಯಾಪ್ತಿ ದಾಟುವವರೆಗೆ ಇನ್ನೊಂದು ರೈಲು ಘಾಟಿ ಪ್ರದೇಶ ಪ್ರವೇಶಿಸುವಂತಿಲ್ಲ.
ಒಂದು ರೈಲಿಗೆ ಎರಡೂವರೆ ತಾಸಿನಂತೆ ದಿನಕ್ಕೆ ೮ ರೈಲು ಮಾತ್ರ ಘಾಟಿ ಹತ್ತಿಯಲು ಸಾಧ್ಯ. ಈಗಾಗಲೇ ದಿನಕ್ಕೆ ೫ ಗೂಡ್ಸ್ ರೈಲು ಹಾಗೂ ೨ ಪ್ರಯಾಣಿಕರ ರೈಲು ಓಡಾಡುತ್ತಿದೆ. ಅಂದರೆ ಇನ್ನೊಂದು ರೈಲು ಮಾತ್ರ ಓಡಿಸಲು ಸಾಧ್ಯವಾ?ಹೌದು. ಬೆಳಗ್ಗೆ ಇನ್ನೊಂದು ಮಂಗಳೂರು-ಬೆಂಗಳೂರು ರೈಲು ಆರಂಭವಾದರೆ ಸರಕು ಸಾಗಣೆ ರೈಲು ಓಡಾಟ ಕಡಿತ ಮಾಡಬೇಕಾಗುತ್ತದೆ.
ಶೇ.೧೦೦ರಷ್ಟು ಬ್ರೇಕ್ ಸರಿ ಇದ್ದರೆ ಮಾತ್ರ ರೈಲು ಬಿಡಬೇಕು. ಘಾಟಿ ಇಳಿಯುವಾಗ ೩ ಎಂಜಿನ್‌ಗಳನ್ನು ಮುಂದೆ ಇರಿಸಿದ್ದರೂ ರೈಲು ನಿಯಂತ್ರಣಕ್ಕೆ ಬಾರದಿದ್ದಲ್ಲಿ ನಿಲ್ಲಿಸಲೆಂದು ೨ ನಿಲ್ದಾಣಗಳಲ್ಲಿ ಕ್ಯಾಚ್ ಸ್ಲೈಡಿಂಗ್ ವ್ಯವಸ್ಥೆ ಕಲ್ಪಿಸಲಾಗಿದೆ. ಘಾಟಿಯಲ್ಲಿರುವ ಎಲ್ಲ ನಿಲ್ದಾಣಗಳನ್ನೂ ಇದನ್ನು ನಿರ್ಮಿಸಬೇಕಿದೆ. ಅಕಸ್ಮಾತ್ ರೈಲು ಬ್ರೇಕು ಸರಿಯಾಗಿ ಹಿಡಿಯದೇ ಇದ್ದಲ್ಲಿ ಕ್ಯಾಚ್ ಸ್ಲೈಡಿಂಗ್ ಹಳಿಯಲ್ಲಿ ಹೋಗಿ ಉಸುಕಿನಲ್ಲಿ ಹುಗಿಯುತ್ತದೆ.. ಇದರಿಂದ ಎಂಜಿನ್ ಮತ್ತು ಮೊದಲೆರಡು ಭೋಗಿಗೆ ಕೊಂಚ ಹಾನಿಯಾಗಬಹುದು. ಉಳಿದವುಗಳಿಗೆ ಏನೂ ಹಾನಿಯಿಲ್ಲ.
ಮಂಗಳೂರು- ಬೆಂಗಳೂರು ಮೊದಲ ರೈಲಿನಲ್ಲಿ ಕುಳಿತು ಪ್ರಯಾಣಿಸುತ್ತಿದ್ದರೆ ಒಳಗೊಳಗೇ ಖುಶಿ. ಆಗಾಗ ರೋಮಾಂಚನ. ಜನ ಹಳಿಯುದ್ದಕ್ಕೂ ಅಲ್ಲಲ್ಲಿ ನಿಂತು ರೈಲಿಗೆ ಕೈಬೀಸುತ್ತಿದ್ದರು. ಎಷ್ಟು ವಿಚಿತ್ರ ಅಂದರೆ ಒಂದು ರೈಲೆ ಆರಂಭ ನಮ್ಮನ್ನೆಲ್ಲ ಅದೆಷ್ಟು ಸಂತೋಷಕ್ಕೆ ಈಡುಮಾಡಿದೆ ನೋಡಿ. ರೈಲು ಆರಂಭವಾಗುತ್ತಿದ್ದಂತೆ ನಾವು ರೈಲು ವಿಳಂಬವಾಗಿರುವುದನ್ನು, ಅದರಿಂದ ನಾವು ಪಟ್ಟ ಪಾಡನ್ನು ಮರೆತಿದ್ದೇವೆ. ಒಂದು ಸಾರ್ಥಕ್ಯದ ಭಾವ ಮೂಡಿದೆ. ಆದರೆ ಘಾಟಿಯ ಸೌಂದರ್ಯ ಸವಿಯೇಕೆಂದರೆ ನೀವು ಬೆಳಗ್ಗಿನ ಸಮಯದಲ್ಲಿ ಓಡಾಡುವ ರೈಲು ಬರುವವರೆಗೆ ಕಾಯಲೇಬೇಕು.

Saturday, November 17, 2007

ಮೂರೂರು ಎಂಬ ಸದಾ ಚಟುವಟಿಕೆಯ ಊರು

ಮೂರೂರು ಅಂದರೆ ಅದೇಕೋ ಖುಶಿ. ಹಬ್ಬದ ದಿನಗಳೇ ಇರಲಿ, ಖಾಲಿ ದಿನಗಳೇ ಇರಲಿ ಮೂರೂರು ಸದಾ ಚಟುವಟಿಕೆಯಿಂದ ಕೂಡಿರುತ್ತದೆ. ಈಗ ನಾನು ಮೂರೂರು ಬಿಟ್ಟು ಮೂರ್ ‍ನಾಲ್ಕು ವರ್ಷಗಳೇ ಆಯಿತು. ಆದರೂ ಮೂರೂರು ಮಾತ್ರ ಸದಾ ಅಚ್ಚುಮೆಚ್ಚು.
ಮೊನ್ನೆ ದೀಪಾವಳಿಗೆ ಊರಿಗೆ ಹೋಗಿದ್ದಾಗ ಮೂರೂರಿಗೂ ಹೋಗಿದ್ದೆ. ಮೂರೂರು ಬಸ್ ನಿಲ್ದಾಣದಲ್ಲಿ ಸೋಲ್‌ಗಾಯಿ ಒಡೆಯೋ (ಒಂದು ಸಣ್ಣ ತೆಂಗಿನ ಕಾಯನ್ನು ಇಟ್ಟು, ನಿಗದಿತ ದೂರದಿಂದ ವ್ಯಕ್ತಿಗಳು ಕಲ್ಲುಎಸೆದು ಆ ತೆಂಗಿನ ಕಾಯನ್ನು ಒಡೆಯಬೇಕು. ೫ ರೂ. ನೀಡಿದರೆ ೩ ಕಲ್ಲು. ಆದರಲ್ಲಿ ೧ ಕಲ್ಲು ತಾಗಿಸಿದರೆ ಇನ್ನೊಂದು ಚಾನ್ಸು ಫ್ರೀ.) ಕಾರ್ಯ ನಡೆಯುತ್ತಿತ್ತು. ಈಗ ನನ್ನ ಊರಾದ ಕತಗಾಲದಲ್ಲಿ ಅಂತಹ ಯಾವುದೇ ಚಟುವಟಿಕೆ ಇರಲಿಲ್ಲ. ಬೋರ್ ಬೋರ್. ಮೂರೂರಿನ ಬಸ್ ನಿಲ್ದಾಣದಲ್ಲಿ ದೀಪಾವಳಿಯ ೩ ದಿನವೂ ಸೋಲ್‌ಗಯಿ ಒಡೆಯೋದು ನಡೆಯುತ್ತಲೇ ಇರುತ್ತದೆ. ಅದರ ಜತೆಗೇ ಹಲವು ಮನೆಗಳ ಜನರು ಒಟ್ಟಾಗಿ ತಮ್ಮ ಕೇರಿಯಲ್ಲೇ ಇಂತಹ ಆಟಗಳನ್ನು ಆಡುತ್ತಿರುತ್ತಾರೆ.
ಮೊದಲೆಲ್ಲ (ನಾನು ಸಣ್ಣವನಿದ್ದಾಗ) ದೀಪಾವಳಿಯ ಸಂದರ್ಭದಲ್ಲಿ ಮೂರೂರಿನಲ್ಲಿ ಕಬಡ್ಡಿ ಪಂದ್ಯಾವಳಿಯೇ ನಡೆಯುತ್ತಿತ್ತು. ಆಸುಪಾಸಿನ ಊರಿನ ತಂಡಗಳೆಲ್ಲ ಬರುತ್ತಿದ್ದವು. ಸಾವಿರಾರು ಜನ ಸೇರುತ್ತಿದ್ದರು. ಜಗಳಗಳೂ ಆಗುತ್ತಿದ್ದವು ಎನ್ನಿ. ಆದರೂ ಹಬ್ಬದ ಸಮಯದಲ್ಲಿ ಒಂದಷ್ಟು ಚಟುವಟಿಕೆ, ಮನೋರಂಜನೆ ಇರುತ್ತಿತ್ತು. ಹಾಗಾಗಿಯೇ ದೀಪಾವಳಿ ಬಂತೆಂದರೆ ಖುಶಿ ಖುಶಿ.
ಇನ್ನು ಚೌತಿ ಹಬ್ಬವಾದರೆ ಸಾರ್ವಜನಿಕ ಗಣಪತಿ, ವಾಲಿಬಾಲ್ ಪಂದ್ಯಾವಳಿ ಇರುತ್ತದೆ. ತುಳಸಿ ಐನದ ಸಂದರ್ಭದಲ್ಲಿ ಆಸುಪಾಸಿನ ಮನೆಯವರು ಸೇರಿಯೇ ಪಟಾಕಿ ಹೊಡೆಯುತ್ತಾರೆ. ಇದ್ಯಾವುದೂ ಇಲ್ಲ ಆಂದುಕೊಳ್ಳಿ, ನಾವೆಲ್ಲ ಮೂರೂರು ಹೈಸ್ಕೂಲಲ್ಲೋ, ಗೋಳಿಬೈಲು ಹಕ್ಕಲಿನಲ್ಲೋ (ಮೈದಾನ) ಸೇರಿ ಕ್ರಿಕೆಟ್ ಆಡುತ್ತಿದ್ದೆವು. ಒಂದಲ್ಲ ಒಂದು ಚಟುವಟಿಕೆ ಇದ್ದೇ ಇರುತ್ತಿತ್ತು. ಇದ್ಯಾವುದೂ ಇಲ್ಲದಿದ್ದರೆ ಸಾರಾಯಿ ಕುಡಿದು ಗಲಾಟೆ ಮಾಡುವುದನ್ನಾದರೂ ನೋಡಬಹುದಿತ್ತು.
ಹೀಗಾಗಿಯೇ ನನಗೆ ಮೂರೂರು ಅಚ್ಚುಮೆಚ್ಚು. ಇಂದಿಗೂ. ಕೆಲಸಕ್ಕೆ ರಜೆ ಹಾಕಿ ಊರಿಗೆ ಹೋದಾಗ ಒಮ್ಮೆಯಾದರೂ ಮೂರೂರಿಗೆ ಹೋಗದೇ ಇದ್ದರೆ ಮನಸಿಗ್ಯಾಕೋ ಕಿರಿಕಿರಿ.
ದೇಹ ಮಾತ್ರ ಮೂರೂರು ಬಿಟ್ಟು ಕತಗಾಲಕ್ಕೆ ತೆರಳಿದೆ. ಮನಸಿನ್ನೂ ಮೂರೂರಲ್ಲೇ ಇದೆ. ಎಷ್ಟಾದರೂ ಹುಟ್ಟಿ ಬೆಳೆದ ಊರಲ್ಲವೇ? ಆದಕ್ಕೇ ಊರು ಬಿಟ್ಟರೂ ನನ್ನ ಹೆಸರಿನೊಂದಿಗೆ ವಿನಾಯಕ ಭಟ್ಟ ಮೂರೂರು ಎಂದು ಊರು ಇನ್ನೂ ಉಳಿದುಕೊಂಡಿದೆ.

Sunday, October 28, 2007

ರಾಮನೇ ಇಲ್ಲ ಎಂದುಬಿಟ್ಟರೆ...

‘ದೇವರೆ ಅಗಾಧ ನಿನ್ನ ಕರುಣೆಯ ಕಡಲು
ನನಗೆ ಸಾಧ್ಯವೇ ಅದರ ಆಳ ಅಳೆಯಲು’ ಎಂಬ ಹಾಡಿನಲ್ಲಿ...
‘ತಾಮಸಕ್ಕೆ ಬಲವ ಕೊಟ್ಟೆ, ರಾಜಸಕ್ಕೆ ಫಲವ ಕೊಟ್ಟೆ,
ಸತ್ವಕೆ ಶಂಢತ್ವ ಕೊಟ್ಟೆ, ತತ್ವ ಗೊಣಗಲುಕ
ಯ್ಯ ಕೊಟ್ಟೆ ಕೆಡವೆಂಲೆಂದು, ಕಾಲು ಕೊಟ್ಟೆ ಎಡವಲೆಂದು
ಬುದ್ದಿಕೊಟ್ಟೆ ನಿನ್ನನೇ ಅಲ್ಲಗಳೆಯಲು...’
ಎಂದು ಕವಿ ಬಿ.ಆರ್. ಲಕ್ಷಣ ರಾವ್ ಬರೆದಿದ್ದಾರೆ. ಕರುಣಾನಿಧಿಯಂಥ ಜನರ ಕುರಿತೇ ಬರೆದಂತಿಗೆ ಈ ಸಾಲುಗಳು.
ಹಿಂದೂ ಧರ್ಮದಷ್ಟು ವ್ಯಕ್ತಿ ಸ್ವಾತಂತ್ರ್ಯ ನೀಡಿದ ಧರ್ಮ ಇನ್ನೊಂದಿಲ್ಲ. ನೀನು ದೇವಸ್ಥಾನಕ್ಕೆ ಬಾ-ಬಾರದಿರು, ಪೂಜೆ ಮಾಡಿಸು- ಮಾಡಿಸದಿರು, ಕುಂಕುಮ ಹಚ್ಚು-ಹಚ್ಚದಿರು ಹಿಂದೂ ಧರ್ಮ ಕೇಳುವುದಿಲ್ಲ. ದಿನಕ್ಕಿಷ್ಟೇ ಬಾರಿ, ಹೀಗೇ ದೇವರಿಗೆ ಕೈ ಮುಗಿ ಎಂದೂ ಹಿಂದೂ ಧರ್ಮ ಆರ್ಡರ್ ಮಾಡುವುದಿಲ್ಲ. ಹಾಗೆ ಮಾಡದಿದ್ದರೆ ನೀನು ಧರ್ಮಭ್ರಷ್ಟ ಎಂದು ಹಿಂದೂ ಧರ್ಮ ಹೆದರಿಸುವುದಿಲ್ಲ. ಕಾಶಿಗೆ ಹೋದರೆ ಮಾತ್ರ ಮೋಕ್ಷ ಎಂದು ಹೇಳುವುದಿಲ್ಲ. ಕಾಶಿಗೆ ಹೋಗುವುದು ಅಸಧ್ಯವಾ? ದಕ್ಷಿಣದ ಕಾಶಿಯೆಂದು ಹತ್ತಿರದಲ್ಲಿ ಗೋಕರ್ಣವನ್ನು ಇಟ್ಟಿದೆ ಹಿಂದೂ ಧರ್ಮ. ಹೀಗಾಗಿಯೇ...
‘ನೂರು ದೇವರನೆಲ್ಲ ನೂಕಾಚೆ ದೂರ
ಭಾರತಾಂಬೆಯೇ ದೇವಿ ನಮಗಿಂದು
ಪೂಜಿಸುವಾ ಬಾರಾ ಬಾರಾ
ಶತಮಾನಗಳು ಬರಿಯ ಜಡಶಿಲೆಯ ಪೂಜಿಸಾಯ್ತು,
ಹಾವ್ಗಳಿಗೆ ಹಾಲೆರೆದು ಪೋಷಿಸಾಯ್ತು,
ಬಿಸಲು ಮಳೆ-ಗಾಳಿ ಬೆಂಕಿಯನೆಲ್ಲ ಬೇಡಿಯಾಯ್ತು,
ದಾಸರನು ಪೂಜಿಸಿಯೇ ದಾಸ್ಯವಾಯ್ತು’
ಎಂದು ಹಾಡಿದವರನ್ನೂ ಹಿಂದೂ ಧರ್ಮ ತರಾಟೆಗೆ ತೆಗೆದುಕೊಂಡಿಲ್ಲ. ಧರ್ಮದಿಂದ ಹೊರಹಾಕಿಲ್ಲ.
ನಿಮ್ಮ ಧರ್ಮವನ್ನು, ದೈವ ಭಕ್ತಿಯನ್ನು ನಿನಗಿಷ್ಟ ಬಂದ ರೀತಿಯಲ್ಲಿ, ನಿಮಗೆ ಸಾಧ್ಯವಾದ ರೀತಿಯಲ್ಲಿ ಆಚರಿಸು. ದೇಶವನ್ನೇ ಬೇಕಾದರೂ ದೇವರೆಂದು ಪೂಜಿಸು. ಅದರಿಂದ ನಿನ್ನ ಮನಸ್ಸಿಗೆ ಶಾಂತಿ ದೊರೆತರಾಯಿತು ಎನ್ನುತ್ತದೆ ಹಿಂದೂ ಧರ್ಮ. ಆದರೆ ಒಬ್ಬ ಕ್ರೈಸ್ಥ ಯುವಕ ಒಂದು ಭಾನುವಾರ ಚರ್ಚ್‌ಗೆ ಹೋಗದಿದ್ದರೆ, ಚರ್ಚಿನವರು ನೇಮಿಸಿದ ವ್ಯಕ್ತಿ ಆತನ ಮನೆಗೆ ಬರುತ್ತಾನೆ. ಚರ್ಚಿಗೆ ತಪ್ಪಿಸದೆ ಬರುವಂತೆ ಸೂಚಿಸುತ್ತಾನೆ. ಮತ್ತೆ ತಪ್ಪಿಸಿದರೆ ದಂಡ ಹಾಕುತ್ತಾನೆ. ಮುಸ್ಲಿಮರ ಧರ್ಮ ಒಂದೇ ಮಾತರಂ ಹಾಡುವುದನ್ನೂ ವಿರೋಧಿಸುತ್ತದೆ! ಸಲ್ಮಾನ್ ಖಾನ್ ಕುಟುಂಬ ಸಮೇತ ಗಣಪತಿ ಪೂಜೆ ಮಾಡಿದ ಎಂಬ ಕಾರಣಕ್ಕೆ ಆತನನ್ನು ಧರ್ಮದಿಂದ ಹೊರಹಾಕುವಂತೆ ಫತ್ವಾ ಹೊರಡಿಸುವ ಅಧಿಕಾರವನ್ನು ಮುಸ್ಲಿಂ ಧರ್ಮ ಕೆಲವರಿಗೆ ನೀಡುತ್ತದೆ. ಹೀಗಿರುವಾಗ ಅವರೆಲ್ಲ ಧರ್ಮದ ವಿರುದ್ಧ ಮಾತಾಡುವುದು ದೂರವೇ ಉಳಿಯಿತು.
ಚರ್ಚ್‌ಗೆ ಅಥವಾ ಮಸೀದಿಗೆ ಹೋದ ಕಾರಣಕ್ಕೆ ಧರ್ಮದಿಂದ ಹೊರ ಹಾಕಿಸಿಕೊಂಡವರಂತೆ ಅಥವಾ ಹೆದರಿಕೊಂಡವರಂತೆ ದೇವಸ್ಥಾನಕ್ಕೆ ಹೋಗದೆ ಹೆದರಿದ ಒಬ್ಬ ಹಿಂದುವೂ ಸಿಗುವುದಿಲ್ಲ. ಇಂತಹ ಉದಾತ್ತ ಧರ್ಮವನ್ನು ಗೌರವಿಸುವ ಬದಲು ಅದೇ ಧರ್ಮ ನೀಡಿದ ಸ್ವಾತಂತ್ರ್ಯವನ್ನು ದುರ್ಬಳಕೆ ಮಾಡಿಕೊಂಡು ಧರ್ಮವನ್ನು ನಿಂದಿಸುವವರೇ ಹೆಚ್ಚು.
ತಮಿಳುನಾಡು ಮುಖ್ಯಮಂತ್ರಿ ಕರುಣಾನಿಧಿ ರಾಮನೇ ಇಲ್ಲ, ಆತ ಮಹಾ ಕುಡುಕ ಎಂದು ಹೇಳಿಕೆ ನೀಡಿದಾಗ ನನ್ನಷ್ಟಕ್ಕೆ ಬರೆದಿಟ್ಟಿದ್ದೆ. ಈಗ ಬ್ಲಾಗಿಸುತ್ತಿದ್ದೇನೆ.
ರಾಮ ಕೇವಲ ಐತಿಹಾಸಿಕ ವ್ಯಕ್ತಿಯಲ್ಲ. ಆತ ಕೇವಲ ಕತೆಯ ನಾಯಕನೂ ಅಲ್ಲ. ವಾಲ್ಮೀಕಿ ರಚಿತ ರಾಮಾಯಣದ ಪಾತ್ರ ಮಾತ್ರವಂತೂ ಖಂಡಿತ ಅಲ್ಲ.ರಾಮ ಹಿಂದೂ ಸಮಾಜದ ಅಷ್ಟೇ ಅಲ್ಲ ಒಬ್ಬ ವ್ಯಕ್ತಿ ಹೇಗಿರಬೇಕೆಂಬುದಕ್ಕೆ ಆದರ್ಶ. ಸಮಾಜದ ಸ್ವಾಸ್ಥ್ಯಕ್ಕೊಂದು ಭದ್ರ ಅಡಿಪಾಯ. ಹಾಗಾಗಿ ರಾಮನ ಅಸ್ತಿತ್ವವೆಂದರೆ ಅದು ಹಿಂದೂ ಸಮಾಜದ ಪ್ರತಿಯೊಬ್ಬನ ಅಸ್ತಿತ್ವ.ನೆನಪು ಮಾಡಿಕೊಳ್ಳಿ... ಚಿಕ್ಕಂದಿನಲ್ಲಿ ಆಲಿಸಿದ ರಾಮಾಯಣ, ಕಣ್ಣಲ್ಲಿ ನೀರುಕ್ಕಿಸಿದ ಪುಣ್ಯಕೋಟಿ ಗೋವಿನ ಕತೆ, ಸತ್ಯ ಹರಿಶ್ಚಂದ್ರನ ಕತೆ ಇವೆಲ್ಲ ನಮ್ಮ ಜೀವನದ ಮೇಲೆ, ನಮ್ಮ ವ್ಯಕ್ತಿತ್ವದ ಮೇಲೆ ಅದೆಂತಹ ಪರಿಣಾಮ ಬೀರಿವೆ. ಕೊಟ್ಟ ಮಾತಿಗೆ ತಪ್ಪದಿರುವುದನ್ನು ಪುಣ್ಯಕೋಟಿ ಕತೆಯಿಂದ, ಕಷ್ಟ ಬಂದರೂ ಪರವಾಗಿಲ್ಲ ಸತ್ಯ ಹೇಳಬೇಕಂಬುದನ್ನು ಸತ್ಯ ಹರಿಶ್ಚಂದ್ರನ ಕತೆಯಿಂದ, ಒಬ್ಬ ಆದರ್ಶ ವ್ಯಕ್ತಿ ಹೇಗಿರಬೇಕೆಂಬುದನ್ನು ರಾಮನಿಂದ, ಯಾವುದು ಮಾಡಿದರೆ ತಪ್ಪು ಮತ್ತು ಹಾಗೆ ಮಾಡಿದರೆ ಏನಾಗುತ್ತದೆಂಬುದನ್ನು ರಾವಣನಿಂದ ಕಲಿತವರು ನಾವು.
ಯಾವ ವ್ಯಕ್ತಿಯೂ ಕರುಣಾನಿಧಿಯನ್ನು, ವಾಜಪೇಯಿ, ಮನಮೋಹನ ಸಿಂಗರನ್ನು, ಗಾಂಧಿ ಕುಟುಂಬವನ್ನು ಆದರ್ಶವಾಗಿಸಿಕೊಂಡು ಬೆಳೆದಿಲ್ಲ. ಮಹಾತ್ಮಾಗಾಂಧಿ ಸೇರಿದಂತೆ ಇವರೆಲ್ಲ ಬರುವುದು ರಾಜಕೀಯ ಬುದ್ದಿಯ ಮಂದಿ ರಚಿಸಿದ ಇತಿಹಾಸ ಓದಲು ಆರಂಭಿಸಿದ ನಂತರ. ಆದರೆ ಆರಂಭದಲ್ಲಿ ಅಚ್ಚೊತ್ತುವುದು ಕತೆಗಳಲ್ಲಿನ ಆದರ್ಶಗಳೇ. ಅವುಗಳೇ ನಮ್ಮ ಜೀವನವನ್ನು, ವ್ಯಕ್ತಿತ್ವವನ್ನು ರೂಪಿಸುತ್ತವೆ.
ಇಂದಿಗೂ ಹನುಮನಿಗೆ ಗೌರವ ಸಿಗುವುದು ರಾಮಯಣದಿಂದ. ಮನೆಯ ಸುತ್ತಮುತ್ತ ಓಡಾಡಿಕೊಂಡಿರುವ ಇಣಚಿಯನ್ನು ಒಬ್ಬ ವ್ಯಕ್ತಿಯೂ ಇಂದಿಗೂ ಹೊಡೆದು ಕೊಲ್ಲುವುದಿಲ್ಲ. ಅದೆಷ್ಟು ಲೂಟಿ ಮಾಡಿದರೂ. ರಾಮಾಯಣದಲ್ಲಿ ರಾಮೇಶ್ವರದಿಂದ ಶ್ರೀಲಂಕಾಕ್ಕೆ (ಆಗಿನ ಲಂಕೆಗೆ) ಸೇತುವೆ (ಈಗ ವಿವಾದಕ್ಕೆ ತುತ್ತಾಗಿರುವ ರಾಮಸೇತು) ನಿರ್ಮಾಣ ಮಾಡುವಾಗ ಅಳಿಲು ಚಿಕ್ಕ ಸೇವೆ (ಅಳಿಲು ಸೇವೆ ಎಂಬ ಮಾತು ಇಂದಿಗೂ ಜಾರಿಯಲ್ಲಿದೆ) ಸಲ್ಲಿಸಿತು. ಇದರಿಂದ ಸಂತೋಷಗೊಂಡ ರಾಮ ಅದರ ಬೆನ್ನ ಮೇಲೆ ಕೈಯಿಂದ ತಡವಿದ. ಅದು ಮೂರು ಚಿನ್ನದ ಗೆರೆಗಳಾಗಿ ಮೂಡಿದವು ಎನ್ನುತ್ತದೆ ಕತೆ. ಇಂದಿಗೂ ಇಣಚಿಯ ಬೆನ್ನ ಮೇಲೆ ಮೂರು ಗೆರೆ ಇರುವುದನ್ನು ನಾವು ಕಾಣಬಹುದು. ಅದರಿಂದಾಗಿಯೇ ಯಾರೂ ಇಣಚಿಯನ್ನು ಹೊಡೆದು ಕೊಲ್ಲುವುದಿಲ್ಲ. ಅಷ್ಟರಮಟ್ಟಿಗೆ ರಮಾಯಣ ನಮ್ಮ ಮೇಲೆ, ನಮ್ಮ ವರ್ತನೆಗಳ ಮೇಲೆ ಪರಿಣಾಮ ಬೀರಿದೆ.
ರಾಮಾಯಣ ಹಾಗೂ ನಮ್ಮ ಇತರ ಕತೆಗಳ ಇನ್ನೊಂದು ಮುಖ್ಯ ಅಂಶ ಅಂತಿಮವಾಗಿ ಸತ್ಯಕ್ಕೆ, ಒಳ್ಳೆಯವರಿಗೆ ಜಯವಾಗುತ್ತದೆ ಎಂಬ ಸಂದೇಶ. ಇದು ಅತ್ಯಂತ ಮುಖ್ಯ. ಕಷ್ಟಗಳು ಎಷ್ಟು ಬಂದರೂ ಅಂತಿಮವಾಗಿ ಒಳ್ಳೆಯವರಿಗೆ, ಸತ್ಯವಂತರಿಗೆ ಜಯ ದೊರೆಯುತ್ತದೆ. ಮುದೊಂದು ದಿನ ಸುಖ ಬಂದೇ ಬರುತ್ತದೆ ಎಂಬ ನಂಬಿಕೆಯನ್ನು ಮೂಡಿಸುತ್ತವೆ. ಇದರಿಂದಾಗಿಯೇ ಬಹುತೇಕ ಜನ ಕಷ್ಟಗಳ ನಡುವೆಯೂ ಮುಂದೊಂದು ದಿನದ ಸುಖ ಎದುರು ನೋಡುತ್ತ ಜೀವನ ನಡೆಸುತ್ತಿದ್ದಾರೆ. ನಮ್ಮಲ್ಲಿ ಇಂತಹ ಆಶಾವಾದ ಬೆಳೆಸಿದ್ದು ನಮ್ಮ ಪುರಾಣಗಳ ದೊಡ್ಡ ಸಾಧನೆ.ಮುಂದೊಂದು ದಿನ ಸುಖ ಬರುತ್ತದೆ ಎಂಬ ಕಾರಣಕ್ಕೆ ಇಂದು ಸತ್ಯದ, ಸನ್ಮಾರ್ಗದಲ್ಲಿ ನಡೆಯುತ್ತಿದ್ದಾರೆ. ಈಗ ಇದ್ದಕ್ಕಿದ್ದಂತೆ ರಾಮಾಯಣ ಇಲ್ಲ. ರಾಮ ಇದ್ದಿದ್ದೇ ಸುಳ್ಳು. ಪುಣ್ಯಕೋಟಿ ಎಂಬ ಪುಣ್ಯಕೋಟಿ ಗೋವು ಕೇವಲ ಕಟ್ಟು ಕತೆ. ಸತ್ಯ ಹರಿಶ್ಚಂದ್ರ ಇದ್ದಿದ್ದೇ ಸುಳ್ಳು ಎಂದುಬಿಟ್ಟರೆ...
ಹೇಗಾಗಬೇಡ ಅದನ್ನು ನಂಬಿಕೊಂಡವರಿಗೆ. ಅದನ್ನು ನಂಬಿಕೊಂಡೇ ಜೀವನ ನಡೆಸುತ್ತಿರುವ ನಮ್ಮಂಥವರಿಗೆ? ಅವೆಲ್ಲ ಸತ್ಯವೋ ಸುಳ್ಳೋ ಎಂಬ ತರ್ಕಕ್ಕಿಂತ ಒಂದೊಮ್ಮೆ ಇಂತಹ ವಿಷಯಗಳು ನಮಗೆ ಚಿಕ್ಕಂದಿನಲ್ಲಿ ಮನಸಿಗೆ ನಾಟದೇ ಹೋಗಿದ್ದರೆ ನಾವೆಂತಹ ವ್ಯಕ್ತಿಗಳಾಗಿರುತ್ತೆದ್ದೆವು. ಸಮಾಜದಲ್ಲಿ ಅದ್ಯಾವ ಸ್ಥಿತಿ, ಅನೈತಿಕತೆ ನೆಲೆಸಿರುತ್ತಿತ್ತು?ಕರುಣಾನಿಧಿ ನೆಪ ಮಾತ್ರ. ಅಂತಹ ಬೇಕಾದಷ್ಟು ವ್ಯಕ್ತಿಗಳಿದ್ದಾರೆ. ಅವರಿಗೆ ಹಿಂದೂ ಧರ್ಮವನ್ನು ಹಿಯಾಳಿಸುವುದು, ಅದನ್ನು ಸುಳ್ಳೆಂದು ಜರೆಯುವುದು ದೊಡ್ಡ ಹಾಬಿ. ಅದೇ ವ್ಯಕ್ತಿ ಮುಸ್ಲಿಂ ಮತ್ತು ಕ್ರೈಸ್ಥ ಧರ್ಮದ ಬಗ್ಗೆ ಮಾತಾಡಲಾರ. ಅದೇ ವ್ಯಕ್ತಿ ಮುಸ್ಲಿಮರ ಉಪವಾಸ ಅಂತ್ಯಗೊಳ್ಳುವ ದಿನ ಇಫ್ತಾರ್ ಕೂಟದಲ್ಲಿ ಬಿಳಿ ಟೋಪಿ ಹಾಕಿಕೊಂಡು ಬಿರ್ಯಾನಿ ಮೆದ್ದು ಬರುತ್ತಾನೆ ಆದರೆ ಗಣಪತಿ ಹಬ್ಬ ಆಚರಿಸಿದೇ ಜಾತ್ಯಾತೀತತೆ ಮೆರೆಯುತ್ತಾನೆ.

Friday, October 26, 2007

ಸಿಎಂ ಚಪ್ಲಿ

ಇದು ಧರ್ಮಸಿಂಗ್ ಅವ್ರು ಸಿಎಂ ಆಗಿದ್ದಾಗ ಮಂಗಳೂರಿನ ಕುದ್ರೋಳಿ ದೇವಸ್ಥಾನಕ್ಕೆ ಬಂದಾಗ ನಡೆದ ಘಟನೆ. ಧರ್ಮಸಿಂಗ್ ಅವರು ದೇವಸ್ಥಾನದ ಒಳಗೆ ಹೋಗುವಾಗ ಹೊರಗೆ ಚಪ್ಪಲಿ ತೆಗೆದಿಟ್ಟಿದ್ದರು. ಎಷ್ಟೋ ದೇವಸ್ಥಾನದಲ್ಲಿ ದಿನವೂ ಭಕ್ತರ ಚಪ್ಪಲಿಗಳು ಕಳವಾಗುತ್ತಲೇ ಇರುತ್ತವೆ. ಅದ್ಯಾವುದೂ ಸುದ್ದಿಯಾಗಲ್ಲ. ಅಟ್ಲೀಸ್ಟ್ ಪೊಲೀಸರಿಗೆ ಮಾಹಿತಿನೂ ಹೋಗಲ್ಲ. ಆದರೆ ಸಿಎಂ ಚಪ್ಲಿ ಕಳವಾದ್ರೆ ಮಾತ್ರ ಅದು ಸುದ್ದಿ.
ಧರಂ ಅವ್ರು ಚಪ್ಪಲಿ ಕಾಣ್ದೆ ಗರಂ ಆಗಿಬಿಟ್ರೆ? ಅವರು ಕುದ್ರೋಳಿ ಬಂದಿದ್ದಾಗ ಒಮ್ಮೆ ಹೀಗೆ ಆಯ್ತು...
ಧರ್ಮಸಿಂಗ್ ಅವರು ದೇವರ ದರ್ಶನ ಮಾಡಿ ಹೊರಬಂದು ಪಕ್ಕದಲ್ಲಿರುವ ಕಲ್ಯಾಣ ಮಂಟಪ ನೋಡಲು ಹೋದರು. ದೇವಸ್ಥಾನದ ಎದುರಲ್ಲಿದ್ದ ಚಪ್ಪಲಿ ನೋಡಿಕೊಳ್ಳುವಂತೆ ಅವರ ಅಂಗರಕ್ಷಕನಿಗೆ ಸೂಚಿಸಲಾಗಿತ್ತು. ಆತ ಅದನ್ನು ಇನ್ನೊಬ್ಬ ಪೊಲೀಸ್ ಕಾನ್‌ಸ್ಟೇಬಲ್‌ಗೆ ವಹಿಸಿ ತಾನೂ ದೇವಸ್ಥಾನದ ಒಳಗೆ ಹೋಗಿದ್ದ. ಸಿಎಂ ಅವ್ರು ಕಲ್ಯಾಣ ಮಂಟಪಕ್ಕೆ ಹೋದಾಗ ಅಲ್ಲಿಗೇ ಅವರ ಚಪ್ಪಲಿ ತರುವಂತೆ ಹೇಳಲಾಯಿತು. ಇದು ಅಂಗರಕ್ಷಕನಿಗೆ ಗೊತ್ತಿರಲಿಲ್ಲ. ಆತ ಬಂದು ದೇವಸ್ಥಾನದ ಎದುರು ಹುಡುಕುತ್ತಾನೆ ಚಪ್ಪಲಿ ನಾಪತ್ತೆ!
ಅಂಗರಕ್ಷಕ ಒಮ್ಮೆ ಕಂಗಾಲಾದ. ತನ್ನ ರಕ್ಷಣೆಗೆ ಬರೋರ್ಯಾರಾದರೂ ಇದ್ದಾರಾ ಎಂದು ಹುಡುಕಿದ. ಕಂಡಿದ್ದು ಪೊಲೀಸರು. ತಕ್ಷಣ ಅವರಿಗೆ ವಿಷಯ ತಿಳಿಸಿದ. ಒಬ್ಬರ ಕಿವಿಯಿಂದ ಒಬ್ಬರ ಕಿವಿಗೆ ತಲುಪಿತು ಸಿಎಂ ಚಪ್ಲಿ ಕಳವಾದ ವಿಷಯ. ಕೋಲಾಹಲ. ನಗರದಲ್ಲಿ ದೊಡ್ಡ ಕಳ್ಳತನ ಆದರೂ ನಮ್ಮ ಪೊಲೀಸರಿಗಾಗದಷ್ಟು ತಲೆಬಿಸಿ ಸಿಎಂ ಚಪ್ಲಿ ಕಳವಾದ್ರೆ ಆಗುತ್ತೆ.
ಎಲ್ಲರೂ ಟೆನ್ಶನ್‌ನಲ್ಲಿ ಸಿಎಂ ಚಪ್ಲಿ ಹುಡುಕಿದ್ದೇ ಹುಡುಕಿದ್ದು. ಅಷ್ಟರಲ್ಲಿ ಅಲ್ಲೇ ಇದ್ದ ಪೊಲೀಸ್ ಅಧಿಕಾರಿಯೊಬ್ಬರು ತಮ್ಮ ಹಿರಿಯ ಅಧಿಕಾರಿ ಬಳಿ "ಸರ್ ಸಿಎಂ ಅವ್ರ ಚಪ್ಲಿ ಕಾಣ್ತಾ ಇಲ್ವಂತೆ. ಬೇಕಾದ್ರೆ ಹೇಳಿ ಸಾರ್ ಹೊಸ ಚಪ್ಲಿ ತಂದ್ಬಿಡ್ತೀನಿ. ಸುಮ್ನೆ ಟೆನ್ಶನ್ ಯಾಕೆ? ಸೈಝ್ ಹೇಗೂ ಗೊತ್ತಿದೆ’ ಅಂತ್ಲೂ ಸಲಹೆ ಕೊಟ್ರು!
ಆದ್ರೆ ಕಾನ್‌ಸ್ಟೇಬಲ್ ಬಳಿ ಸಿಎಂ ಚಪ್ಲಿ ಇರುವುದು ಆ ಹಿರಿಯ ಪೊಲೀಸ್ ಅಧಿಕಾರಿಗೆ ಗೊತ್ತಿತ್ತು. ಹಾಗಾಗಿ ಅವ್ರು ಹೊಸ ಚಪ್ಲಿ ಎಲ್ಲ ತರೋದೇನು ಬೇಡ ವಾಯರ್‌ಲೆಸ್‌ನಲ್ಲಿ ಚಪ್ಲಿ ಹಿಡ್ಕೊಂಡಿರೋ ಕಾನ್‌ಸ್ಟೇಬಲ್‌ಗೆ ಕಲ್ಯಾಣ ಮಂಟಪದ ಎದ್ರು ಬರಲು ಹೇಳಿ ಸಾಕು ಅಂದ್ರಂತೆ. ಆಗ ಪೊಲೀಸರಿಗೆ, ಅಂಗರಕ್ಷಕನಿಗೆ ಹೋದ ಜೀವ ಬಂದಂತಾಯ್ತು. ಹೀಗೆ ಸಿಎಂ ಚಪ್ಲಿ ಕಳವು ಎಂಬ ಗಂಭೀರ ಪ್ರಕರಣ ತಿಳಿ ಹಾಸ್ಯದಲ್ಲಿ ಮುಗಿದಿತ್ತು.

Monday, October 01, 2007

ಕಾವಲು ನಾಯಿ ಕಳವು!



ನಾಯಿಗೆ ಇನ್ನೊಂದು ಹೆಸರೇ ಕಾವಲು ನಾಯಿ. ನಂಬಿಕೆಯನ್ನೂ ಕೆಲವೊಮ್ಮೆ ನಾಯಿಗೆ ಹೋಲಿಸೋದಿದೆ. ಮನೆ ಮತ್ತು ಮಂದಿಯನ್ನು ಕಾಯೋದೇ ಅದರ ಡ್ಯೂಟಿ. ಮನೆಗೆ ಕಳ್ಳ ಬಂದರೆ ಕೂಗಲಿ ಅಂತ ನಾಯಿ ಸಾಕುವವರೇ ಹೆಚ್ಚು. ಕೆಲವರ ಮನೆಯ ನಾಯಿಯ ಸೈಜು ನೋಡಿದರೆ ಕಳ್ಳ ಕೂಗಿಕೊಳ್ಳುವ ಸಾಧ್ಯತೆಗಳೂ ಹೆಚ್ಚಿವೆ!

ಎಷ್ಟೋ ಬಾರಿ ಕಳ್ಳತನಗಳು ನಡೆಯುವಾಗ ಕಳ್ಳನ ಪತ್ತೆಗೆ ಪೊಲೀಸರು ನಾಯಿ ಕರೆಸುತ್ತಾರೆ. ಮನುಷ್ಯರಿಗಿಂತ ನಾಯಿಯ ಸುಳಿವಿನ ಬಗ್ಗೆ ಹೆಚ್ಚು ನಂಬಿಕೆ. ಕೆಲವು ಸಾರಿ ಕಳ್ಳತನ ಆಗದಿರಲು ನಾಯಿ ಸಾಕಿ ಎಂದು ಪೊಲೀಸರೇ ಸಲಹೆ ನೀಡೋದೂ ಇದೆ. ಅಶ್ಟಕ್ಕೆ ಸುಮ್ಮನಾಗದೆ ಪೊಲೀಸರೇ ನಾಯಿ ಮರಿ ಕೂಡ ತಂದುಕೊಟ್ಟ ಉದಾಹರಣೆಗಳಿವೆ.

ಆದರೆ ನಾಯಿಯೇ ಕಳುವಾದರೆ?

ಹೌದು. ಮಂಗಳೂರಿನಲ್ಲೊಂದು ಇಂತಹ ಪ್ರಕರಣ ನಡೆದಿದೆ. ಬರೀ ಕಳವಾಗಿದ್ದರೆ ನನಗೆ ಗೊತ್ತಾಗುತ್ತಿರಲಿಲ್ಲವೇನೊ. ಕಳವಾದ ನಾಯಿ ಹುಡುಕುವ ಕಾರ್ಯ ಪೊಲೀಸರ ಪಾಲಿಗೆ ಬಂದಿತ್ತು. ಅವರ ಮೂಲಕ ನನ್ನ ಕಿವಿಗೂ ಬಿತ್ತು.

ತಮ್ಮ ಮನೆಯಲ್ಲಿದ್ದ ಏಳೂವರೆ ವರ್ಷದ ಬಾಕ್ಸರ್ ನಾಯಿ ೨೦೦೫ರ ಆ.೧೭ರಂದು ಕಳವಾಗಿತ್ತು. ಅದನ್ನು ಹುಡುಕಿಕೊಡುವಂತೆ ಮಂಗಳೂರಿನ ಬಲ್ಮಠ ನಿವಾಸಿ ಪ್ಯಾಟ್ರಿಕ್ ಸಲ್ಡಾನಾ ಅವರು ಕದ್ರಿ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಈ ನಾಯಿ ೨೦೦೨ರ ನಾಯಿ ಸ್ಪರ್ಧೆಯಲ್ಲಿ ಉತ್ತಮ ಥಳಿಯ ನಾಯಿ ಪ್ರಶಸ್ತಿ ಪಡೆದಿತ್ತು. ಬಾಕ್ಸರ್ ಥಳಿಯಲ್ಲಿ ಮಂಗಳೂರಿನಲ್ಲಿದ್ದ ಏಕೈಕ ಗಂಡು ನಾಯಿ ಎಂಬ ಹೆಗ್ಗಳಿಕೆಯೂ ಇದಕ್ಕಿತ್ತು! ಎಂದೂ ಅವರು ದೂರಿನಲ್ಲಿ ತಿಳಿಸಿದ್ದರು.

ಈ ದೂರು ದಾಖಲಾದ ನಂತರ ಕದ್ರಿ ಪೊಲೀಸರು ಕಂಡ ಕಂಡ ನಾಯಿಯನ್ನೆಲ್ಲ ಪರೀಕ್ಷಿಸಿ ನೋಡುತ್ತಿದ್ದಾರೆ. ಕೆಲವು ಬಾರಿ ಬಾಲ ಎತ್ತಿ!? ಎರಡು ವರ್ಷ ಕಳೆದರೂ ನಾಯಿ ಪತ್ತೆಯಾಗಿಲ್ಲ. ಪೊಲೀಸ್ ಇಲಾಖೆಯಲ್ಲಿ ಅಪರಾಧ ಪತ್ತೆ ದಳ, ರೌಡಿ ನಿಗ್ರಹ ದಳ, ಬಾಂಬ್ ಪತ್ತೆ ದಳ ಹೀಗೆ ಬೇರೆ ಬೇರೆ ದಳಗಳಿವೆ. ಶ್ವಾನ ದಳವೂ ಇದೆ. ಆದರೆ ಶ್ವಾನ ಪತ್ತೆ ದಳ ಎಂಬುದು ಇನ್ನೂ ರಚನೆಯಾಗಿಲ್ಲ. ಕದ್ರಿ ಪೊಲೀಸರಿಗೆ ಬೇಕಾದಷ್ಟು ಕೆಲಸಗಳಿವೆ. ಅದರಿಂದಾಗಿ ನಾಯಿಯ ವಾಸನೆ ಹಿಡಿದು ಹೊಗಲು ಸಾಧ್ಯವಾಗಿಲ್ಲ. ನಾಯಿ ಪತ್ತೆ ದಳ ಎಂಬುದೊಂದು ಇದ್ದರೆ ಅದಕ್ಕೆ ಈ ಪ್ರಕರಣ ವಹಿಸಿಕೊಟ್ಟು ಸುಮ್ಮನಾಗಬಹುದಿತ್ತು. ನಾಯಿ ಪತ್ತೆ ದಳ ಇಲ್ಲದ ಕಾರಣ ಕಳವಾದ ನಾಯಿ ಪತ್ತೆ ಅಸಾಧ್ಯವಾಗಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ. ಆದರೂ ಶ್ವಾನ ದಳದ (ಅಂದರೆ ಹೆಣ್ಣು ನಾಯಿಯ) ಸಹಾಯ ಬಳಸಿಕೊಂಡು ಕಳವಾಗಿರುವ ಅಥವಾ ನಾಪತ್ತೆಯಾಗಿರುವ ಮಂಗಳೂರಿನ ಏಕೈಕ ಗಂಡು ಬಾಕ್ಸರ್ ನಾಯಿಯನ್ನು ಹುಡುಕಲು ಪೊಲೀಸರು ತಂತ್ರ ರೂಪಿಸುವ ಸಾಧ್ಯತೆಗಳಿವೆ. ಈ ಬಗ್ಗೆ ಪೊಲೀಸರು ಕಾನೂನು ಸಲಹೆ ಕೇಳಲು ತೀರ್ಮಾನಿಸಿದ್ದಾರಂತೆ!

ಅದೇನೇ ಇರಲಿ ಕಳವಾದ ಬಾಕ್ಸರ್ ನಾಯಿ ಯಾವುದಾದರೂ ಹೆಣ್ಣು ನಾಯಿಯ ಜತೆಗೆ ಬಂದು ನಿಮ್ಮ ಮನೆ ಹಿತ್ತಲಲ್ಲೇನಾದರೂ ಮಲಗಿದ್ದರೆ, ಅಥವಾ ನೀವೇ ಅದನ್ನು ಇಟ್ಟುಕೊಂಡಿದ್ದರೆ ಅದನ್ನು ಪೊಲೀಸರಿಗೆ ಕೊಟ್ಟುಬಿಡಿ.

ಇಷ್ಟಕ್ಕೂ ಇದು ಸತ್ಯಕತೆ. ನಂಬಿ ಪ್ಲೀಸ್!!

Tuesday, August 28, 2007

ಇಗ್ಗಣ್ಣ ಎಂಬ ಅಂಚೆಯಣ್ಣನ ನೆನಪಲ್ಲಿ...

ನಮ್ಮನೆಗೊಬ್ಬರು ಪರಿಚಿತರು ಬೇರೆ ಊರಿನಿಂದ ಬಂದಿದ್ದರು. ಆಗ ಇಗ್ಗಣ್ಣ ಬಂದು ಪತ್ರಗಳನ್ನು ಕೊಟ್ಟು ಹೋದ. ನಾವು ಇಗ್ಗಣ್ಣನ ಬಗ್ಗೆ ಮಾತಾಡುವಾಗ, ನಮ್ಮನೆಗೆ ಬಂದ ಅಪರಿಚಿತರು ನಮ್ಮೂರಲ್ಲಿ ಪೋಸ್ಟ್‌ಮ್ಯಾನ್ ಅಂತಾರೆ ನಿಮ್ಮಲ್ಲಿ ಅವರನ್ನ ಇಗ್ಗಣ್ಣ ಅಂತಾರಾ ಎಂದು ಪ್ರಶ್ನಿಸಿದ್ದರು.ಅವರು ಕೇಳಿದ್ದರಲ್ಲಿ ತಪ್ಪಿರಲಿಲ್ಲ. ಕಾರಣ ನನ್ನೂರಲ್ಲಿ ಆತನನ್ನು ಪೋಸ್ಟ್‌ಮ್ಯಾನ್ ಅಂತಲೋ ಪದ್ಯವೊಂದರಲ್ಲಿ ಬರುವ ಅಂಚೆಯಣ್ಣ ಅಂತಲೋ ಯಾರೂ ಕರೆಯುತ್ತಿರಲಿಲ್ಲ. ಆತ ಎಲ್ಲರಿಗೂ ಇಗ್ಗಣ್ಣನಾಗಿದ್ದ. ಹೆಚ್ಚಿನ ಜನರ ಫ್ಯಾಮಿಲಿ ಫ್ರೆಂಡ್ ಕೂಡ ಆಗಿದ್ದ.
ಊರಿನ ಜನ ಕೂಡ ಆತನನ್ನು ಯಾವತ್ತೂ ಪೋಸ್ಟ್‌ಮ್ಯಾನ್ ಎಂಬ ದೃಷ್ಟಿಯಿಂದ ನೋಡಿಯೂ ಇರಲಿಲ್ಲ. ಪ್ರತಿಯೊಬ್ಬರು ಕುಡಿಯಲು ಮಜ್ಜಿಗೆಯೋ, ಬೆಲ್ಲ ನೀರೋ ಬೇಕಾ ಎಂದು ವಿಚಾರಿಸಿಯೇ ಕಳುಹಿಸುತ್ತಿದ್ದರು. ಬಿಸಿಲಲ್ಲಿ ತಿರುಗಿ ತಿರುಗಿ ಸಾಕಾಗಿದ್ದರೆ ಇಗ್ಗಣ್ಣ ಕೂಡ ಮನೆಯ ಆರಾಮ ಕುರ್ಚಿಯಲ್ಲಿ ಕೊಂಚ ಕೂತು, ಮಜ್ಜಿಗೆ ಕುಡಿದು ಸುಧಾರಿಸಿಕೊಂಡು ಪತ್ರ ಹಂಚುವ ಕೆಲಸ ಮುಂದುವರಿಸುತ್ತಿದ್ದ. ಊಟ ಮಾಡೋ ಅಂದರೆ ‘ಕಾಮಾಕ್ಷಿ ನಿಲಯದಲ್ಲಿ ಊಟ ಸಿದ್ಧವಿದೆ’ ಎನ್ನುತ್ತಿದ್ದ. ಕಾಮಾಕ್ಷಿ ಆತನ ಹೆಂಡತಿ. ಇಗ್ಗಣ್ಣ ಆಗಾಗ ಆಕ್ಷಿ ಹೊಡೆಯುತ್ತಿದ್ದನಾದ್ದರಿಂದ ನಾವೆಲ್ಲ ಇದು ಹೆಂಡತಿ ಕಾಮಾಕ್ಷಿಯ ಪ್ರಭಾವ ಎಂದು ಆತನನ್ನು ಕಿಚಾಯಿಸುತ್ತಿದ್ದೆವು.
ಆಗೆಲ್ಲ ಫೋನು ಇರಲಿಲ್ಲ. ಅಂಚೆಯೇ ಸಂಪರ್ಕದ ಪ್ರಮುಖ ಮೂಲ. ಅಂಚೆ ಪತ್ರಗಳ ಜತೆಗೆ ಇಗ್ಗಣ್ಣ ಊರ ಸುದ್ದಿಗಳನ್ನು, ಜಂಬ್ರ (ಸೂತಗದ) ಸುದ್ದಿಗಳನ್ನು ಹೊತ್ತು ತರುತ್ತಿದ್ದ. ಸರಕಾರ ಕೊಡುತ್ತಿದ್ದ ಸ್ಯಾಲರಿ ಏನೇನೂ ಇರಲಿಲ್ಲ. ಬಹುಶಃ ಸರಿಯಾಗಿ ತಿರುಗಾಡಿದರೆ ತಿಂಗಳಿಗೆ ಸವೆಸುವ ಚಪ್ಪಲಿಗೆ ಸಾಕಾಗುತ್ತಿತ್ತು ಸ್ಯಾಲರಿ. ಆದರೂ ಇಗ್ಗಣ್ಣ ಬಿಡದೆ ಸುತ್ತುತ್ತಿದ್ದ.
ನನ್ನ ಊರಾದ ಮೂರೂರಿನ ವ್ಯಾಪ್ತಿ ದೊಡ್ಡದು. ಹಾಗಾಗಿ ಕನ್ನಡ ಶಾಲೆ ಮುಗಿಸಿ ಮನೆಗೆ ಹೋಗುವ ಮಕ್ಕಳೇ ಪತ್ರ ತಲುಪಿಸುವ ಇಗ್ಗಣ್ಣ ಮೂಲಾಧಾರ. ಪತ್ರ ತಲುಪಿಸಬೇಕಾದ ಮನೆಯ ಮಕ್ಕಳೇ ಸಿಕ್ಕದರೆ ಪರವಾಗಿಲ್ಲ. ಇಲ್ಲವಾದಲ್ಲಿ ಆ ಮಕ್ಕಳ ಬಳಿಯಲ್ಲೇ ಅಕ್ಕಪಕ್ಕದ ಮನೆಗೆ ಪತ್ರ ತಲುಪಿಸಿ ಕೆಲಸ ಹಗುರ ಮಾಡಿಕೊಳ್ಳುತ್ತಿದ್ದ ಇಗ್ಗಣ್ಣ. ಹೀಗಾಗಿ ಇಗ್ಗಣ್ಣ ಶಾಲೆ ಮಕ್ಕಳಿಗೆಲ್ಲ ಪರಿಚಿತನಾಗಿದ್ದ. ಜತೆಗೆ ಶಾಲೆ ಮಕ್ಕಳೆಲ್ಲರ ಪರಿಚಯವನ್ನೂ ಇರಿಸಿಕೊಂಡಿದ್ದ. ಮಕ್ಕಳಿಗೆ ಮುಖ್ಯಮಂತ್ರಿಯ, ಪ್ರಧಾನ ಮಂತ್ರಿಯ ಕೊನೆಗೆ ಗ್ರಾಮ ಪಂಚಾಯತ್ ಅಧ್ಯಕ್ಷರ ಪರಿಚಯ ಇಲ್ಲದಿದ್ದರೂ ಇಗ್ಗಣ್ಣನ ಪರಿಚಯ ಚೆನ್ನಾಗಿತ್ತು. ಅಂಚೆ ಬರುವುದು ತಡವಾಗಿ ಮಕ್ಕಳು ಮನೆಗೆ ಹೋದರೋ ಅಂದು ಇಗ್ಗಣ್ಣನಿಗೆ ದಿನವಿಡೀ ಕೆಲಸ.
ನನ್ನಪ್ಪ ಎಲೈಸಿ ಏಜೆಂಟ್. ಹಾಗಾಗಿ ನಮ್ಮನೆಗೆ ಸಾಕಷ್ಟು ಪತ್ರಗಳು, ಎಲೈಸಿ ಕಚೇರಿಯ ಅಂಚೆಗಳು ಬರುತ್ತಿದ್ದವು. ಹೀಗಾಗಿ ಇಗ್ಗಣ್ಣ ಎಸ್.ಎಂ. ಭಟ್ ಎಂದು ನೋಡಿದ ಕೂಡಲೆ ನಮ್ಮನೆಗೆ ತಂದು ಹಾಕುತ್ತಿದ್ದ. ಮೂರೂರಿನಲ್ಲಿ ಅಂಗಡಿ ನಡೆಸುತ್ತಿದ್ದ ಸುಬ್ಬಣ್ಣ ಎಂಬವರ ಹೆಸರೂ ಎಸ್.ಎಂ. ಭಟ್. ಇನ್ನೊಂದು ಹೋಲಿಕೆಯಂದರೆ ಸುಬ್ಬಣ್ಣ ಹೆಂಡತಿ ಹೆಸರೂ ಲೀಲಾ. ನನ್ನಪ್ಪನ ಹೆಂಡತಿ ಅರ್ಥಾತ್ ನನ್ನಮ್ಮನ ಹೆಸರೂ ಲೀಲಾ. ಹೀಗಾಗಿ ಸಂಕ್ರಾತಿ, ಯುಗಾದಿ, ದೀಪಾವಳಿ ಸಂದರ್ಭಗಳಲ್ಲಿ ಸುಬ್ಬಣ್ಣನಿಗೆ, ಅವರ ಹೆಂಡತಿಗೆ ಬಂದ ಗ್ರೀಟಿಂಗ್ಸ್‌ಗಳೂ ನಮ್ಮನೆಗೆ ಬಂದು ಬೀಳುತ್ತಿತ್ತು. ಒಡೆದು ನೋಡಿದ ಮೇಲೆ, ಶುಭಾಷಯ ತಿಳಿಸಿದವರ ಹೆಸರು ನಮಗೆ ಪರಿಚಿತವಲ್ಲ ಎಂದು ನೋಡುವಾಗ ಅದು ಸುಬ್ಬಣ್ಣನಿಗೆ, ಅವನ ಹೆಂಡತಿಗೆ ಬಂದ ಗ್ರೀಟಿಂಗ್ಸ್ ಎಂಬುದು ಗೊತ್ತಾಗುತ್ತಿತ್ತು. ಸುಬ್ಬಣ್ಣನಿಗೆ ಈ ವಿಷಯ ಹೇಳಿದರೆ.. ನೀವೇ ಕೊಟ್ಟುಬಿಡಿ ಅವರಿಗೆ ಎಂದು ಬಿಡುತ್ತಿದ್ದ.
ಅದೇನೇ ಇದ್ದರೂ ಇಗ್ಗಣ್ಣ ಮೂರೂರಿನ ಒಂದು ಭಾಗವಾಗಿದ್ದ. ಆತ ಕೆಲಸ ಬಿಟ್ಟ ಮೇಲೆ ಅಂಚೆ ಹಂಚಲೂ ಒಂದು ಸರಿಯಾದ ಜನ ಸಿಗಲಿಲ್ಲ. ಕೆಲವರು ಈ ಕೆಲಸ ಮಾಡಿದರಾದರೂ ಇಗ್ಗಣ್ಣನಷ್ಟು ದೀರ್ಘಕಾಲ ಈ ಕೆಲಸಕ್ಕೆ ನಿಲ್ಲಲಿಲ್ಲ. ಹೀಗಾಗಿಯೇ ನಮ್ಮೂರದಲ್ಲಿ ಪೋಸ್ಟ್‌ಮ್ಯಾನ್, ಅಂಚೆಯಣ್ಣ ಎಂಬ ಶಬ್ದಗಳ ಬದಲು ಇಗ್ಗಣ್ಣ ಎಂಬ ಹೆಸರಿತ್ತು. ಹೀಗಾಗಿಯೇ ದೊಡ್ಡ ಸಾಧನೆ ಮಾಡದಿದ್ದರೂ ಇಗ್ಗಣ್ಣ ಊರವರಿಗೆಲ್ಲ ಪರಿಚಯ. ಮೂರೂರಿನಲ್ಲಿ ಇಗ್ಗಣ್ಣನಿಗೆ ಪರಿಚಯವಿಲ್ಲದ ಜನರಿಲ್ಲ, ಇಗ್ಗಣ್ಣನ ಪರಿಚಯವಿಲ್ಲದವರಿಲ್ಲ.
ಇಂದಿಗೂ ಇಗ್ಗಣ್ಣನ ಜಾಗದಲ್ಲಿ ಬೇರೊಬ್ಬರನ್ನು ಕಲ್ಪಿಸಿಕೊಳ್ಳುವುದು ನನ್ನಿಂದ ಸಾಧ್ಯವಾಗಿಲ್ಲ. ಬಹುಶಃ ನನ್ನೂರಿನ ಜನರಿಂದಲೂ ಸಾಧ್ಯವಾಗಿಲ್ಲ. ಈ ನಗರಗಳಲ್ಲೋ ಇಂತಹ ಸಂಬಂಧಗಳೇ ಇಲ್ಲ. ಪತ್ರ ವ್ಯವಹಾರವೇ ಕಡಿಮೆಯಾಗಿ ಈಗ ಇಂತಹ ಸಂಬಂಧಗಳೇ ಇಲ್ಲದಂತಾಗಿವೆ.