Monday, February 23, 2009

‘ಸ್ಲಂ ಡಾಗ್’ ಕಾಲದಲ್ಲಿ ‘ಶೌರ್ಯ’ದ ಬೊ(ಹೊ)ಗಳಿಕೆ



ಒಮ್ಮೊಮ್ಮೆ ಹೀಗೇ ಆಗೋದು ನೋಡಿ. ಆ ಡಿವಿಡಿ ತಂದು ಅದೆಷ್ಟೋ ದಿನವಾಗಿತ್ತು. ನನಗೆ ಅತ್ಯಂತ ಪ್ರಿಯವಾದ, ಇಷ್ಟವಾದ ‘ಎ ವೆನ್ಸಡೆ’ ಡಿವಿಡಿಯೊಟ್ಟಿಗೆ ಶೌರ್ಯ ಸಿನಿಮಾದ ಡಿವಿಡಿಯೂ ಇತ್ತು. ಒಮ್ಮೆ ಹಚ್ಚಿ ನೋಡಲು ಕುಳಿತು, ತುರ್ತು ಕೆಲಸದಿಂದ ಬಂದ್ ಮಾಡಿದ್ದೆ. ಶೌರ್ಯ ನೋಡಬೇಕು ಅಂತ ಹಲವು ಬಾರಿ ಅಂದುಕೊಂಡಿದ್ದೆನಾದರೂ, ಕಾಲ ಕೂಡಿ ಬಂದಿರಲಿಲ್ಲ. ಹಿಂದೊಮ್ಮೆ ಗಣೇಶಯ್ಯ ಅವರ ‘ಶಾಲಭಂಜಿಕೆ’ ಪುಸ್ತಕ ಕೂಡ ಹೀಗೇ ಆಗಿತ್ತು. ಆಮೇಲೆ ಓದಿದಾಗ ಛೆ ಮೊದಲೇ ಓದಬಾರದಿತ್ತೆ ಅನ್ನಿಸಿತ್ತು.

ಶೌರ್ಯ ಸಿನಿಮಾ ನೋಡಿದಾಗಲೂ ಹಾಗೇ ಅನ್ನಿಸಬೇಕೆ!

ಇವತ್ತು ಕಚೇರಿಯಿಂದ ಮನೆಗೆ ಬರುವಾಗ ಯಾಕೋ ಶೌರ್ಯ ನೆನಪಾಯಿತು. ಮನೆಗೆ ಬಂದವನೆ ಬೇರೇನೂ ವಿಚಾರ ಮಾಡದೆ ಕಂಪ್ಯೂಟರ್ ಆನ್ ಮಾಡಿ ಕುಳಿತೆ.

ವಾವ್.... ಸೂಪರ್.... ಫೆಂಟಾಸ್ಟಿಕ್....

ಒಮ್ಮೊಮ್ಮೆ ಅಲ್ಲ ಹಲವು ಬಾರಿ ಹೀಗೇ ಆಗುತ್ತೆ ನೋಡಿ. ಎಷ್ಟೋ ಜನ ಈ ಸಿನಿಮಾದ ಹೆಸರನ್ನಾದರೂ ಕೇಳಿದ್ದಾರೊ ಇಲ್ಲವೊ. ಸಾಮಾನ್ಯವಾಗಿ ನಾವು ಬಹುಜನರ ಅಭಿಪ್ರಾಯದಲ್ಲಿ ತೇಲಿಹೋಗುತ್ತೇವೆ. ‘ಸ್ಲಂ ಡಾಗ್’ ಸಿನಿಮಾದಂತೆ!

ನಮ್ಮ ಕಚೇರಿಯಲ್ಲಿರುವ ವಿನಯ್ ಶೇಷಗಿರಿ ‘ಸ್ಲಂ ಡಾಗ್’ ನೋಡಿ ಬಂದು, ಛೆ ಪ್ರಯೋಜನವಿಲ್ಲ. ಒಬ್ಬ ಭಾರತೀಯನಾಗಿ ನಾನು ಅದನ್ನು ಇಷ್ಟಪಡುವುದಿಲ್ಲ ಎಂದರು. ಆ ಸಿನಿಮಾ ನೋಡಬೇಕೆಂದು ಇದ್ದ ಸಣ್ಣ ಉದ್ದೇಶವನ್ನೂ ಕೈಬಿಟ್ಟೆ.

‘ಶೌರ್ಯ’ ಸಿನಿಮಾ ನೋಡಿದಾಗ ಮಾಧ್ಯಮಗಳು ಹೇಗೆ ನಮ್ಮ ಟೇಸ್ಟ್‌ಗಳನ್ನು, ನಿರ್ಣಯಗಳನ್ನು ಬದಲಿಸಿಬಿಡುತ್ತವೆ ಅಂದುಕೊಂಡೆ. ‘ಸ್ಲಂ ಡಾಗ್’ ಬಗ್ಗೆ ನಮ್ಮಲ್ಲಿರುವ ಸ್ಲಂಗಳ ಬಗ್ಗೆ ವರದಿ ಮಾಡಿದ್ದಕ್ಕಿಂತ ಬೇಕಾದಷ್ಟು ಹೆಚ್ಚು ವರದಿ ಮಾಡಿದ ಮಾಧ್ಯಮಗಳು, ನಾವೂ ಆ ಸಿನಿಮಾ ನೋಡಬೇಕು ಅನ್ನಿಸುವಂತೆ ಮಾಡಿಬಿಟ್ಟವು. ನೀವು ಆ ಸಿನಿಮಾ ನೋಡದಿದ್ದರೇ ಬದುಕಿರುವುದೇ ವೇಸ್ಟು ಎಂಬಂತೆ ಬರೆದವು. ಅದೇ ಮಾಧ್ಯಮಗಳು ‘ಶೌರ್ಯ’ದ ಬಗ್ಗೆ ನಿಮಗೆ ಗೊತ್ತೇ ಆಗದಷ್ಟು ಚಿಕ್ಕದಾಗಿ ಬರೆದವು.

ಸಮಸ್ಯೆಯೆಂದರೆ ಬಹುತೇಕ ಬಾರಿ ನಾವು ಸಿನಿಮಾ ರಿವ್ಯೂ ಆಧರಿಸಿ ಸಿನಿಮಾ ನೋಡುತ್ತೇವೆ. ನಾನು ಸಿನಿಮಾ ರಿವ್ಯೂ ಓದುವುದು ಕಡಿಮೆ, ನನಗೆ ನೋಡಬೇಕು ಅನ್ನಿಸಿದರೆ ನೋಡುತ್ತೇನೆ. ಇಲ್ಲವಾದಲ್ಲಿ ಅದೆಷ್ಟೇ ಸೂಪರ್ ಹಿಟ್ ಆಗಿರಲಿ ನಾನು ನೋಡುವುದಿಲ್ಲ.

ಜನರೆಲ್ಲ ನೋಡಿದ ಸಿನಿಮಾ ನಾನು ನೋಡುವುದಿಲ್ಲ. ಬಹುತೇಕ ಸಿನಿಮಾಗಳು ನಾನು ನೋಡಿದ್ದನ್ನು ಹೆಚ್ಚಿನ ಜನ ನೋಡಿರುವುದಿಲ್ಲ.

ಶೌರ್ಯ ಅಂತಹ ಸಿನಿಮಾಗಳಲ್ಲೊಂದು. ಶೌರ್ಯ ನಿಜಕ್ಕೂ ಅದ್ಭುತ ಸಿನಿಮಾ. ಸೈನ್ಯಾಧಾರಿತ ಕತೆ. ನಿಮ್ಮನ್ನು ಆಕರ್ಷಿಸುವ ನಟರಿಲ್ಲ. ದೊಡ್ಡ ದೊಡ್ಡ ಬಾಡಿಗಳ ನಾಯಕರಿಲ್ಲ. ಹೊಕ್ಕಳ ಕೆಳಗೆ ಸೀರೆ ಉಡುವ, 'ಪಿಂಕ್' ಚಡ್ಡಿ ಕಾಣಿಸುವಷ್ಟು ಚಿಕ್ಕ ಸ್ಕರ್ಟ್ ಹಾಕುವ ನಾಯಕಿಯಿಲ್ಲ. ಐಟಂ ಸಾಂಗ್ ಇಲ್ಲ. ಆದರೆ ಒಳ್ಳೆ ಕತೆಯಿದೆ. ನಿಮ್ಮನ್ನು ಆಸಕ್ತಿಯಿಂದ ನೋಡುವಂತೆ ಮಾಡುವ ಸ್ಕ್ರೀನ್ ಪ್ಲೇ ಇದೆ. ಸೈನ್ಯದ ಬಗ್ಗೆ ಒಂದೊಳ್ಳೆ ಮೆಸೇಜ್ ಇದೆ.

ಚಿತ್ರದ ನಾಯಕ ರಾಹುಲ್ ಭೋಸ್ ನ ವಿಚಿತ್ರವಾದ, ಕನ್‌ಫ್ಯೂಸ್ ಆದಂತಿರುವ ಆತನ ಪಿಕ್ಯುಲರ್ ಮ್ಯಾನರಿಸಂ ನಂಗಿಷ್ಟ. ಈತ ಸಿನಿಮಾದಲ್ಲಿ ಒಬ್ಬ ಬೇಜವಾಬ್ದಾರಿ, ಜಾಲಿ ಮನುಷ್ಯ. ಈತನ ಹೆಸರು ಮೇಜರ್ ಸಿದ್ದಾರ್ಥ ಚೌಧರಿ. ಈತನ ಗೆಳೆಯ ಮೇಜರ್ ಆಕಾಶ್ ಚೌಧರಿ. ಒಂದು ದಿನ ಆಕಾಶ್ ಕೇಸೊಂದನ್ನು ತಂದು ಸಿದ್ದಾರ್ಥನಿಗೆ ನೀಡುತ್ತಾನೆ. ಸೈನ್ಯದ ಅಧಿಕಾರಿಯೊಬ್ಬ ತನ್ನ ಕಮಾಂಡಿಂಗ್ ಅಧಿಕಾರಿಯನ್ನೇ ಕೊಂದಿರುತ್ತಾನೆ. ಆತನ ಕೋರ್ಟ್ ಮಾರ್ಷಲ್ ನಡೆಯಬೇಕಿರುತ್ತದೆ. ಅದರಲ್ಲಿ ಆತನ ಪರವಾಗಿ ಸಿದ್ದಾರ್ಥ ವಾದಿಸಬೇಕು. ಇಷ್ಟವಿಲ್ಲದ ಮನಸ್ಸಿನಿಂದ ಒಪ್ಪಿಕೊಂಡ ಸಿದ್ದಾರ್ಥನಿಗೆ ಪತ್ರಕರ್ತೆ (ಚಿತ್ರದ ನಾಯಕಿ) ಭೇಟಿಯಾಗುತ್ತಾಳೆ. ಆಕೆ ಕೇಸಿನ ಬಗ್ಗೆ ಕೇಳಿದಾಗ ಸಿದ್ದಾರ್ಥ ಸರಿಯಾಗಿ ಉತ್ತರಿಸುವುದಿಲ್ಲ. ಆಕೆ ಅದನ್ನೇ ಪ್ರಕಟಿಸಿಬಿಡುತ್ತಾಳೆ. ಹಾಗೆ ಪತ್ರಿಕೆಯಲ್ಲಿ ಬಂದರೆ ಏನಾಗುತ್ತದೆಂದು ನಿಮಗೆ ಗೊತ್ತಿದೆ.

ಈತ ಅವಳಿಗೆ ಬಯ್ಯಲು ಹೋದಾಗ ಆಕೆ ಪ್ರಕರಣದ ಗಂಭೀರತೆಯನ್ನು ಹೇಳುತ್ತಾಳೆ. ಅಂದಿನಿಂದ ಸಿದ್ದಾರ್ಥ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸುತ್ತಾನೆ.

ಆಗ ಆತನಿಗೆ ಬ್ರಿಗೇಡಿಯರ್ ಪ್ರತಾಪ್‌ನ ಭೇಟಿಯಾಗುತ್ತದೆ. ಆತ ಪ್ರತಾಪಗಳ ಪರಿಚಯವಾಗುತ್ತದೆ. ಆರೋಪಿ ಜಾವೇದ್ ಖಾನ್ ತನ್ನ ಅಧಿಕಾರಿ ಮೇಜರ್ ರಾಠೋಡ್‌ನನ್ನು ಕೊಂದಿರುತ್ತಾನೆ. ಆದರೆ ಜಾವೇದ್ ಮಾತೇ ಆಡುವುದಿಲ್ಲ. ಬೇಕಂತಲೇ ಮೌನಿಯಾಗಿರುತ್ತಾನೆ. ನಿಧಾನವಾಗಿ ಕತೆ ಬಿಚ್ಚಿಕೊಳ್ಳುತ್ತ ಹೋಗುತ್ತದೆ. ಹಂತಹಂತವಾಗಿ, ಕುತೂಹಲಕಾರಿಯಾಗಿ.

ಈ ಚಿತ್ರದಲ್ಲಿ ಕತೆಯ ಜತೆಗೆ ಬ್ರಿಗೇಡಿಯರ್ ಪ್ರತಾಪ್‌ನ ಡೈಲಾಗ್‌ಗಳು, ಮ್ಯಾನರಿಸಂ, ಮೆಡಲ್ ಪಡೆದ ಅಧಿಕಾರಿಯೊಬ್ಬನ ದರ್ಪ, ಆತನ ಸಮರ್ಥನೆಗಳು ನಿಮಗಿಷ್ಟವಾಗುತ್ತವೆ. ಅದೇರೀತಿ ಪೆಕ್ರನಂತೆ ಆಡುವ ಸಿದ್ದಾರ್ಥ ಚೌಧರಿ ನಟನೆ ಕೂಡ. ಹಾಸ್ಯ ಕೂಡ ಅಲ್ಲಲ್ಲಿ ಚಕ್ಕನೆ ಇಣುಕಿ, ಕಚಗುಳಿ ಇಟ್ಟು ಮರೆಯಾಗುತ್ತದೆ.

ಕೇವಲ ಮುಸ್ಲಿಂ ಎಂಬ ಕಾರಣಕ್ಕೆ ಯಾವನೂ ದೇಶದ್ರೋಹಿಯಲ್ಲ ಎಂಬ ಸಂದೇಶದ ಜತೆಗೆ ಭಾರತದ ಸೇನೆ ಜಾತಿ, ಧರ್ಮ ಮೀರಿ ನಿಂತಿದೆ ಎಂಬುದನ್ನೂ ನಿರ್ದೇಶಕ ಸಮರ್ ಖಾನ್ ಬಿಂಬಿಸಿದ್ದಾರೆ. ಮಾಲೇಗಾಂವ್ ಬಾಂಬ್ ಸ್ಫೋಟ ಆರೋಪಿಗಳಿಗೆ ಲೆಫ್ಟಿನೆಂಟ್ ಪುರೋಹಿತ್ ತರಬೇತಿ ನೀಡಿದ್ದಾರೆ ಎಂಬ ಆರೋಪದ ಹಿನ್ನೆಲೆಯಲ್ಲೂ ಈ ಸಿನಿಮಾ ನೋಡಬಹುದು.

ಇಷ್ಟು ಕತೆ ಸಾಕು. ಉಳಿದದ್ದನ್ನು ನೀವು ಸಿನಿಮಾ ನೋಡಿಯೇ ಆನಂದಿಸಿ. ದಯವಿಟ್ಟು ಸಮಯ ಸಿಕ್ಕರೆ ‘ಶೌರ್ಯ’ ಡಿವಿಡಿ ತಂದು ನೋಡಿ. ನಿಮಗಿಷ್ಟವಾಗಬಹುದು. ಕೊಂಚ ದೇಶಭಕ್ತಿಯೂ ಮೂಡಬಹುದು. ನಿಮಗಿಷ್ಟವಾದರೆ ತಿಳಿಸಿ. ಅಷ್ಟೇ ನನಗೆ ತೃಪ್ತಿ.

ಇಷ್ಟಕ್ಕೂ ಈ ‘ಸ್ಲಂ ಡಾಗ್’ ಕಾಲದಲ್ಲಿ ಹಳೆಯ ‘ಶೌರ್ಯ’ದ ಬಗ್ಗೆ ಬೊಗಳಿದ್ದಕ್ಕೆ ಕ್ಷಮೆ ಇರಲಿ.