Monday, June 30, 2008

ವ್ಹಾ! ವಾಟ್ ಎನ್ ಐಡಿಯಾ ಸರ್ ಜಿ!!!




ಒಂದು ಸಾಧಾರಣ ಊರು. ಬಹುಶಃ ಕೇರಳ ರಾಜ್ಯದ್ದು. ಆ ಊರಿಗೊಂದೇ ಶಾಲೆ. ಅದೂ ಖಾಸಗಿ. ಆ ಊರಿನ ಒಬ್ಬ ಬಡ ಮುದುಕ ತನ್ನ ಮೊಮ್ಮಗಳು ಲಕ್ಷ್ಮಿರಾಧಾಳನ್ನು ಆ ಶಾಲೆಗೆ ಸೇರಿಸಲು ಹೋಗುತ್ತಾನೆ. ಆದರೆ ಅಲ್ಲಿ ಕಂಡದ್ದು ಎಡ್ಮಿಶನ್ ಫುಲ್ ಬೋರ್ಡು. ಮುದಕಪ್ಪನಿಗೆ ಅದನ್ನು ಓದಲು ಬಾರದೆ ಶಾಲೆಯ ಒಳಗೆ ಹೋಗಲು ನೋಡಿದಾಗ, ಅಲ್ಲಿನ ಒಬ್ಬ ಮಾಸ್ತರ ಅಜ್ಜನಿಗೆ ಸೀಟಿಲ್ಲ ಎಂದು ಹೇಳಿ ಕಳುಹಿಸುತ್ತಾನೆ.
ಇದನ್ನು ಆ ಶಾಲೆಯ ಮುಖ್ಯಸ್ಥ ಫಾದರ್ ನೋಡುತ್ತಾನೆ. ಆತನಿಗೆ ಆ ಮುದುಕಪ್ಪನ ಮೊಮ್ಮಗಳನ್ನು ಶಾಲೆಗೆ ಸೇರಿಸಿಕೊಳ್ಳಲಾಗದಿರುವುದಕ್ಕೆ ಬೇಸರವಾಗುತ್ತದೆ. ಅಂತಹವರಿಗೂ ಕಲಿಯಲು ಅವಕಾಶ ಸಿಗುವಂತಾಗಬೇಕು ಎಂದು ಆಶಿಸುತ್ತಾನೆ. ಅದಕ್ಕೆ ಆತ ಒಂದು ಐಡಿಯಾ ಮಾಡುತ್ತಾನೆ. ತನ್ನ ಶಾಲೆಯಲ್ಲಿ ಶಿಕ್ಷಕರು ಕಲಿಸುವಾಗ ಅವರ ಎದುರು ಮೊಬೈಲ್‌ಗಳನ್ನು ಇಡುತ್ತಾನೆ. ಈ ಮೊಬೈಲ್‌ನಲ್ಲಿ ಹಳ್ಳಿಯ ಕೆಲವೆಡೆ ಜಾಗ ಗುರುತಿಸಿ, ಅಲ್ಲಿಟ್ಟ ಮೊಬೈಲ್‌ಗೆ ಸಂಪರ್ಕ ಕಲ್ಪಿಸುತ್ತಾನೆ. ಮೊಬೈಲ್ ಎದುರು ಮಕ್ಕಳು ಕುಳಿತು ಶಾಲೆ ಕಲಿಯುತ್ತಾರೆ. ಹೀಗೆ ಮೊಬೈಲ್ ಎದುರಲ್ಲಿ ಕುಳಿತು ಕಲಿತ ಲಕ್ಷ್ಮಿ ರಾಧಾ ಉತ್ತಮ ವಿದ್ಯಾರ್ಥಿನಿ ಬಹುಮಾನ ಗೆಲ್ಲುತ್ತಾಳೆ.

ಇಷ್ಟು ಕಾನ್ಸೆಪ್ಟು. ಅದಕ್ಕೆ ಅಂದವಾದ ಹಿನ್ನೆಲೆ ಸಂಗೀತ. ಓಹೊಹೊ ಓಹೊಹೊ ಓಹೊಹೋಹೊ ಎಂಬ ಮಕ್ಕಳ ಧ್ವನಿ. ಒಂದಷ್ಟು ಇಷ್ಟವಾಗಬಲ್ಲ ದೃಶ್ಯ. ಅಭಿಷೇಕ್ ಬಚ್ಚನ್‌ಗೆ ಇಲ್ಲಿ ಫಾದರ್ ಪಾತ್ರ.
ಇದು ಇವತ್ತಷ್ಟೇ ಇಡುಗಡೆಯಾದ (ಚಿತ್ರವಲ್ಲ) ಜಾಹೀರಾತು. ಐಡಿಯಾ ಮೊಬೈಲ್‌ನದ್ದು. ಬಹುಶಃ ನನಗೆ ಗೊತ್ತಿರುವ ಮಟ್ಟಿಗೆ ಇದೇ ಮೊದಲ ಬಾರಿಗೆ ಚಲನಚಿತ್ರ ಬಿಡುಗಡೆ ಮಾಡುವಾಗ ಜಾಹೀರಾತು ಪ್ರಕಟಿಸುತ್ತಾರಲ್ಲ ಹಾಗೆ ಜಾಹೀರಾತು ಪ್ರಕಟಿಸಿದ್ದರು. ಇಂದು ರಾತ್ರಿ ೯.೩೦ಕ್ಕೆ ಬಿಡುಗಡೆ ಎಂದು ಇಲ್ಲಿನ ಪತ್ರಿಕೆಗಳಲ್ಲಿ ಪ್ರಕಟವಾಗಿತ್ತು. ಸೋಮವಾರ (೩೦-೦೬-೦೮) ರಾತ್ರಿ ಟಿವಿ ಚಾನಲ್‌ಗಳಲ್ಲಿ (ನಾನು ನೋಡಿದ್ದು ಫಿಲ್ಮಿ ಚಾನಲ್) ೧೦-೧೫ ನಿಮಿಷ ನಿರಂತರವಾಗಿ ಈ ಜಾಹೀರಾತನ್ನು ಮತ್ತೆ ಮತ್ತೆ ತೋರಿಸಲಾಯಿತು.
ರಾತ್ರಿ ಈ ಜಾಹೀರಾತು ನೋಡಿದಾಗ ಅರೆ ಹೊಸತು ಅನ್ನಿಸಿತು. ಇಷ್ಟವಾಯಿತು. ಮತ್ತೆ ಮತ್ತೆ ಅದನ್ನೇ ನೋಡುತ್ತ ನೋಡುತ್ತ ಬೆಳಗ್ಗೆ ಪತ್ರಿಕೆಯಲ್ಲಿ ನೋಡಿದ ಜಾಹೀರಾತು ನೆನಪಾಯಿತು. ಥಟ್ಟನೆ ಪತ್ರಿಕೆ ತೆಗೆದುನೋಡಿದೆ. ಹೌದು ಅದೇ ಜಾಹೀರಾತು. ವ್ಹಾಟೆ ಎನ್ ಐಡಿಯಾ ಸರ್ ಜಿ!
ಏನು ಐಡಿಯಾ ನೋಡಿ!
ನಾನು ಕಲಿತ ಪತ್ರಿಕೋದ್ಯಮ ಪದವಿಯಲ್ಲಿ ಜಾಹೀರಾತು ಒಂದು ವಿಷಯ. ಈಗಲೂ ಪತ್ರಿಕೋದ್ಯಮದಲ್ಲಿದ್ದರೂ ನನಗೆ ಜಾಹೀರಾತಿನ ಬಗ್ಗೆ ಯಾಕೋ ವಿಶೇಷ ಆಸಕ್ತಿ. ನೀವೆಲ್ಲ ರಿಮೋಟ್ ಹಿಡಿದೇ ಟಿವಿ ಮುಂದೆ ಕುಳಿತುಕೊಳ್ಳುತ್ತೀರಿ. ಜಾಹೀರಾತು ಬಂದಾಕ್ಷಣ ಚಾನಲ್ ಬದಲಿಸಲು. ಆದರೆ ನಾನು? ಚಾನಲ್ ಬದಲಿಸುವುದು ಕಡಿಮೆ. ಜಾಹೀರಾತನ್ನೂ ಕಾರ್ಯಕ್ರಮದಷ್ಟೇ ಅಥವಾ ಅದಕ್ಕಿಂತ ಹೆಚ್ಚು ಆಸಕ್ತಿಯಿಂದ ನೋಡುತ್ತೇನೆ. ನೀವೂ ಸರಿಯಾಗಿ ಗಮನಿಸಿ ನೋಡಿ ದಾರಾವಾಹಿ ಅಥವಾ ಇತರೆ ಕಾರ್ಯಕ್ರಮ ನಿರ್ಮಿಸಿರುವುದಕ್ಕಿಂತ ಹೆಚ್ಚಿನ ಬುದ್ದಿವಂತಿಕೆ ಮತ್ತು ಚಾಕಚಕ್ಯತೆಯಿಂದ ಜಾಹೀರಾತು ನಿರ್ಮಿಸಿರುತ್ತಾರೆ.
ವಿಐಪಿ ಸೂಟ್‌ಕೇಸ್ ಜಾಹೀರಾತು ನಂಗಿನ್ನೂ ನೆನಪಿದೆ. ಹಡುಗಿಯೊಟ್ಟಿಗೆ ಒಬ್ಬ ಹುಡುಗ ಕಾರಿನಲ್ಲಿ ಹೋಗುತ್ತಿರುತ್ತಾನೆ. ಕಾರು ಕೆಟ್ಟು ನಿಲ್ಲುತ್ತದೆ. ಕೊಂಚ ಹೊತ್ತಿನಲ್ಲಿ ಬಂದ ಹುಡುಗನ ಬೈಕ್ ಹತ್ತಿ ಹುಡುಗಿ ಕಾರಿನ ಹುಡುಗನಿಗೆ ಟಾಟಾ ಮಾಡುತ್ತಾಳೆ. ಅದರ ನಂತರ ಈತ ಕಾರಿನಲ್ಲಿದ್ದ ಸೂಟ್‌ಕೇಸ್ ತೆಗೆದು, ಬಂದ ಲಾರಿಗೆ ಚತ್ರಿ ಮೂಲಕ ಸಂಪರ್ಕ ಕಲ್ಪಿಸಿ, ಸೂಟ್‌ಕೇಸ್ ಮೇಲೆ ತಾನು ಕುಳಿತುಕೊಳ್ಳುತ್ತಾನೆ. ಅದು ಚಕ್ರ ಇರುವ ಸೂಟ್‌ಕೇಸ್. ಸ್ವಲ್ಪ ದೂರ ಹೋಗುವಷ್ಟರಲ್ಲಿ ಲಾರಿ ಟಾಟಾ ಮಾಡಿ ಹೋಗಿದ್ದ ಹುಡುಗಿ ಕುಳಿತಿದ್ದ ಬೈಕನ್ನು ಓವರ್‌ಟೇಕ್ ಮಾಡುತ್ತದೆ. ಈತ ಅವಳಿಗೆ ಟಾಟಾ ಮಾಡುತ್ತಾನೆ. ಅದಕ್ಕೆ ಹಿಂದಿಯ ಹಳೆಯ ಹಾಡಾದ ಸುಹಾನಾ ಸಫರ್ ಹೇ ಯೆ ಮೋಸಂ ಹಸಿ... ಹಾಡು.
ನೋಡಿ ಎಂತಹ ಅದ್ಭುತ ಕಲ್ಪನೆ. ಹಾಗಾಗಿಯೇ ಇಂದಿಗೂ ಮರೆತಿಲ್ಲ.
ಬ್ರು ಕಾಫೀಯ, ಓಟು ಕೇಳಲು ಬಂದ ರಾಜಕಾರಣಿಗೇ ಪ್ರಶ್ನೆ ಕೇಳುವ ಚಹಾದ ಜಾಹೀರಾತುಗಳು ಇಂದಿಗೂ ನೆನಪಿನಲ್ಲಿವೆ. ಆತ ಸಹಾರಾ ವಿಮೆ ಮಾಡಿಸುತ್ತಾನೆ. ನಂತರ ಸ್ಕೂಟರ್ ಹತ್ತಿ ಬೆಟ್ಟದ ಬಳಿ ಹೋಗಿ ಕುಳಿತು ಸಾಂಬಾ, ವಾಂಬಾ ಎಲ್ಲಿದ್ದೀಯಾ ಇಳಿದು ಬಾ. ನಿನ್ನಮ್ಮನ ಎದೆ ಹಾಲು ಕುಡಿದಿದ್ದರೆ ಇಳಿದು ಬಾ ಎಂದು ಸವಾಲು ಹಾಕುವ ಸಹಾರಾ ಸಂಸ್ಥೆ ಜಾಹೀರಾತೂ ತಕ್ಕಮಟ್ಟಿಗಿದೆ.

ಜಾಹೀರಾತು ವಲಯದಲ್ಲಿ ಕೆಲವರನ್ನು ಆಕರ್ಷಿಸಿದ ಮತ್ತು ಖುಶಿ ಕೊಟ್ಟಿದ್ದು ಪೆಪ್ಸಿ, ಕೋಕ್ ಸಂಸ್ಥೆಗಳ ಜಾಹೀರಾತು ಸಮರ. ಅದು ಇಂದಿಗೂ ಮುಂದುವರೆದಿದೆ. ಥಮ್ಸ್ ಅಪ್‌ಗಾಗಿ ಅಕ್ಷಯ್ ಕುಮಾರ್ ಮಂಗನಂತೆ ಎಲ್ಲೆಲ್ಲೊಂದೋ ಹಾರಿ, ಮೆಟ್ಟಿಲ ಮೇಲೆ ಜಾರಿ, ರಸ್ತೆಗಳ ನಡುವೆ ತೂರಿ ಲಾರಿಯಲ್ಲಿದ್ದ ಬಾಟಲಿ ಎಗರಿಸುತ್ತಾನೆ. (ಕುರ್‌ಕುರೆ ಜಾಹೀರಾತಿನಲ್ಲಿ ಜೂಹಿ ಹೀಗೆ ಪ್ಯಾಂಕು ಪ್ಯಾಂಕು ಎಂಬ ಮೀನು ಮಾರಾಟದ ಹಾರ್ನು ಕೇಳಿ ಯಾಹೀ ಅಂತ ಹಾರಿದ್ದೂ ನಿಮಗೆ ನೆನಪಿರಬಹುದು) ಇದೇ ಜಾಹೀರಾತು ಇರಿಸಿಕೊಂಡು ಪೆಪ್ಸಿಯವರು ಈಗ ಹೊಸ ಜಾಹೀರಾತು ಮಾಡಿದ್ದಾರೆ.
ಅಂಕಲ್ ಈ ವಯಸ್ಸಿನಲ್ಲಿ ಕೋಲ್ಡ್‌ಡ್ರಿಂಕ್ಸ್‌ಗಾಗಿ ಕಟ್ಟಡದಿಂದ ಕಟ್ಟಡಕ್ಕೆ ಹಾರಿ ಕೈಕಾಲು ಮುರಿದುಕೊಳ್ಳಬೇಡ. ಯಾಕೆಂದರೆ ವಯಸ್ಸಾದ ಮೇಲೆ ಮುರಿದ ಎಲುಬು ಕೂಡಿಕೊಳ್ಳುವುದು ಲೇಟು. ಅದನ್ನು ಪೆಪ್ಸಿ ಕುಡಿ. ಎಲ್ಲ ಕಡೆ ಸಿಗುತ್ತೆ ಎಂದು ಜಾಹೀರಾತು ಮಾಡಿ ಥಮ್ಸ್‌ಅಪ್‌ಗೆ ಟಾಂಗ್ ನೀಡಿದ್ದಾರೆ.
ಕೆಲವು ವರ್ಷದ ಹಿಂದಂತೂ ಇದು ಪರಾಕಾಷ್ಠೆಯ ತುದಿ ತಲುಪಿತ್ತು. ನೋಡುಗರಾದ ನಮಗೋ ಮಜವೊ ಮಜಾ.
ಮಾನ ಹಕ್ಕು, ನಾಯಿ ಹಕ್ಕುಗಳು ಏನೇ ಹೇಳಲಿ ನಂಗಂತೂ ಹಚ್ ಜಾಹೀರಾತು ಇಷ್ಟ. ಹಚ್ ಸಂಸ್ಥೆಯ ಗ್ರಾಹಕ ಸೇವಾ ಕೇಂದ್ರ ಯಾವಾಗಲೂ ನಿಮಗೆ ಸಹಾಯ ಮಾಡಲು ಸಿದ್ಧವಾಗಿರುತ್ತದೆ ಎಂದು ನಾಯಿಯ ಸಹಾಯದ ಮೂಲಕ ಎಷ್ಟು ಅಂದವಾಗಿ ತೋರಿಸಿದ್ದಾರೆ. ಅದನ್ನು ನೋಡಿ ಖುಶಿ ಪಡುವುದು ಬಿಟ್ಟು ಅದ್ಯಾರೋ ಕೇಸು ಹಾಕಿದ್ದಾರಂತೆ. ಅದರ ಪರಿಣಾಮ ಹಚ್ ಕಂಪನಿಯವರು ಕೆಲವು ದಿನ ಕಂಪ್ಯೂಟರ್ ನಾಯಿಯನ್ನೂ ತೋರಿಸಿ ಚಟ ತೀರಿಸಿಕೊಂಡರು. ಈಗ ಮತ್ತೆ ಜೀವಂತ ನಾಯಿಯನ್ನೇ ತೋರಿಸುತ್ತಿದ್ದಾರೆ.
ಸರಿಯಾಗಿ ಗಮನಿಸಿ ನೋಡಿ. ಜಾಹೀರಾತು ಮಾಡಲು ಭಾರೀ ಬುದ್ದಿವಂತಿಕೆ ಬೇಕು. ನಿಮ್ಮ ಕಲ್ಪನೆಗಳು ಏನೇ ಇದ್ದರೂ ೧-೨ ನಿಮಿಷದಲ್ಲಿ ಮುಗಿಸಬೇಕು. ಅದು ಗ್ರಾಹಕರ ಮನಸ್ಸಿನ ಮೇಲೆ ಪರಿಣಾಮ ಬೀರಿ, ಅವರು ಆ ವಸ್ತುವನ್ನು ಕೊಳ್ಳುವಂತಾಗಬೇಕು. ನನಗಂತೂ ಬಹುತೇಕ ಜಾಹೀರಾತುಗಳು ಅದ್ಭುತ ಅಂತಲೇ ಅನ್ನಿಸುತ್ತವೆ. ಮೊದಲಾದರೆ ಒಂದು ಜಾಹೀರಾತು ಮಾಡಿದರೆ ಕನಿಷ್ಟ ೬ ತಿಂಗಳು, ಒಂದು ವರ್ಷ ಅಥವಾ ಅದಕ್ಕಿಂತ ಹೆಚ್ಚು ಸಮಯ ನಿಭಾಯಿಸಹುದಿತ್ತು. ಆದರೆ ಈಗ ಹಾಗಿಲ್ಲ. ಒಂದೆರಡು ತಿಂಗಳು. ಅಷ್ಟಕ್ಕೆ ಅದು ಹಳೆತು. ಮತ್ತೆ ಹೊಸ ಸ್ಲೋಗನ್, ಹೊಸ ಕಲ್ಪನೆ, ಹೊಸ ಜಾಹೀರಾತು. ಒಂದೊಂದು ಸಂಸ್ಥೆಯೂ ಜಾಹೀರಾತಿನ ಮೇಲೆ ಕೋಟಿಗಟ್ಟಲೆ ದುಡ್ಡು ಚೆಲ್ಲುತ್ತಿವೆ.
ಇದರ ಪರಿಣಾಮ ಬೇಕಾದಷ್ಟು ಜಾಹೀರಾತು ಏಜೆನ್ಸಿಗಳು ಹುಟ್ಟಿಕೊಂಡಿವೆ. ಒಂದು ಸ್ಲೋಗನ್‌ಗೆ, ಒಂದು ಕಲ್ಪನೆಗೆ ಇಲ್ಲಿ ಕೋಟಿಗೂ ಮೀರಿದ ಬೆಲೆಯಿದೆ. ಇದಕ್ಕೇ ಇರಬೇಕು ನನಗೂ ಜಾಹೀರಾತಿನತ್ತ ಸೆಳೆತ!
ಹಾಗಂತ ಕೆಟ್ಟ ಜಾಹೀರಾತುಗಳೇ ಇಲ್ಲವೆಂದಲ್ಲ. ಲೇಯ್ಸ್ ಚಿಪ್ಸ್‌ನ ಬಾಯಿ ಕಳೆದು ಆ... ಎಂದರಚುವ ಹೊಸ ಜಾಹೀರಾತು ಸ್ವಲ್ಪವೂ ಚೆನ್ನಾಗಿಲ್ಲ. ಅವರ ಮುಸುಡಿಗಳನ್ನು ನೋಡಿದರೆ ಲೇಯ್ಸ್ ಬಿಡಿ ಜನ ಬೇರೆ ಯಾವ ಚಿಪ್ಸೂ ತಿನ್ನದಂತಾಗಿದೆ. ಒಳ್ಳೆಯ ಜಾಹೀರಾತುಗಳು ಇಂತಹ ಕೆಟ್ಟ ಜಾಹೀರಾತುಗಳನ್ನು ಮರೆಸಿ ಮನಸ್ಸಿಗೆ ಮುದ ನೀಡುತ್ತವೆ. ಅದೇ ಸಂತೋಷ.
(ನನಗೆ ಈ ಮೇಲ್ ಮೂಲಕ ಬಂದಿದ್ದ, ಸಂಗ್ರಹಿಸಿಟ್ಟಿದ್ದ ಕೆಲವು ಉತ್ತಮ ಜಾಹೀರಾತು ಫೋಟೋಗಳಿದ್ದವು. ಅವುಗಳನ್ನು ಈ ಲೇಖನದ ಜತೆ ಪ್ರಕಟಿಸಿದ್ದೇನೆ. ನೀವಾ ಹೇರ್ ಕ್ರೀಂ ಜಾಹೀರಾತು ನೋಡಿ,ನೀವು ಸತ್ತು ಮಣ್ಣಲ್ಲಿ ಮಣ್ಣಾದರೂ ಕೂದಲು ಹಾಗೇ ಇರುತ್ತದೆ! ಪೆಡಿಗ್ರೀ ತಿಂದರೆ ನಾಯಿ ಹೆಗ್ಗಣದಂತೆ ಟಾರ್ ರಸ್ತೆಯನ್ನೂ ಅಗೆದು ತೆಗೆಯಲ್ಲದು... ಹೀಗೆ. ನಿಮಗೆ ಇಷ್ಟವಾಗಬಹುದು ಅಂದುಕೊಂಡಿದ್ದೇನೆ)

Thursday, June 26, 2008

ಶಾಲಭಂಜಿಕೆ ಓದಲೇಕೆ ಅಂಜಿಕೆ?



ಅದೇನೋ ಅಂಜಿಕೆ. ಶಾಲಭಂಜಿಕೆ ಎಂಬ ಹೆಸರು, ಅದರಲ್ಲಿನ ಅಪರೂಪದ ಸೆಳೆತಕ್ಕೆ ಸಿಕ್ಕೇ ಅದನ್ನು ತಂದಿದ್ದೆ. ಅದೇ ಅಪರೂಪತ್ವ ಅದನ್ನು ಓದಲು ಅಡ್ಡಿಯಾಯಿತು!

ಇದರ ಪರಿಣಾಮ ಶಾಲಭಂಜಿಕೆ ಪುಸ್ತಕ ಕಪಾಟಿನಲ್ಲಿ ಇತರ ಪುಸ್ತಕಗಳ ನಡುವೆ ಕಣ್ಣಾಮುಚ್ಚಾಲೆ ಆಡುವವರಂತೆ ಅಡಗಿ ಕುಳಿತಿತ್ತು. ಸಾಕಷ್ಟು ಹೊಸ ಪುಸ್ತಕಗಳನ್ನು ತರುತ್ತಿದ್ದೆನಾದ್ದರಿಂದ ಹಳೆಯ ಪುಸ್ತಕಗಳು ನೆನಪಿನಾಳದಲ್ಲಿ ಹೂತುಹೋಗುತ್ತಿದ್ದವು. ಅದನ್ನು ಎಂದೂ ಕೆದಕುತ್ತಿರಲಿಲ್ಲ.

ಆದರೀಗ ದಿಲ್ಲಿಗೆ ಬಂದ ಮೇಲೆ ಹೊಸ ಪುಸ್ತಕಗಳು ಸಿಗದು. ಹೀಗಾಗಿ ಓದದೇ ಕಪಾಟಿನಲ್ಲಿಟ್ಟ ಪುಸ್ತಕಗಳಿಗೆ ಬಿಡುಗಡೆಯ ಭ್ಯಾಗ್ಯ. ಅಂತಹ ಓದದೇ ಉಳಿದ ಪುಸ್ತಕಗಳ ನಡುವಿಂದ ಅಂಜಿಕೆಯಿಂದಲೇ ಕೈಗೆತ್ತಿಕೊಂಡ ಪುಸ್ತಕ ಶಾಲಭಂಜಿಕೆ.

ಲೇಖಕರು ನನ್ನ ಮಟ್ಟಿಗೆ ಹೊಸಬರು. ಡಾ. ಕೆ.ಎನ್. ಗಣೇಶಯ್ಯ. ಅವರ ಬಗ್ಗೆ ಕೇಳಿದ್ದಿಲ್ಲ. ಓದಿದ್ದಂತೂ ಮೊದಲೇ ಇಲ್ಲ. ಆದರೆ ಶಾಲಭಂಜಿಕೆ ಎಂಬ ಹೆಸರೇ ವಿಚಿತ್ರವಾಗಿದೆ. ಪುಸ್ತಕವೂ ವಿಚಿತ್ರವಾಗಿಯೇ ಇರಬಹುದು ಎಂದುಕೊಂಡೇ ಅತ್ರಿ ಬುಕ್‌ಸ್ಟಾಲ್‌ನಿಂದ ಕೊಂಡುತಂದಿದ್ದೆ. ಹಾಗೇ ಇಟ್ಟಿದ್ದೆ. ನಿನ್ನೆ ಕೂಡ ಪುಸ್ತಕ ತೆರೆದಾಗ ಮನದಲ್ಲಿ ಶಾಲಂಜಿಕೆ ಬಗ್ಗೆ ಅಂಜಿಕೆ ಇದ್ದೇ ಇತ್ತು. ಆದರೆ ಓದುತ್ತ ಹೋದಂತೆ ಅಂಜಿಕೆ ದೂರವಾಗಿ ಆಸಕ್ತಿ ಕೆರಳಿತು. ಪುಟ ಪುಟದಲು ಪುಟಿದೆದ್ದಿತು...

ಈ ಪುಸ್ತಕದಲ್ಲಿರುವ ೮ ಕತೆಗಳು ಒಂದಷ್ಟು ಇತಿಹಾಸ ಜ್ಞಾನ, ಹಲವು ದೇಶದ ಕೇಳರಿಯದ ವಿಷಯಗಳ ಜತೆಗೆ ರೋಚಕ ತಿರುವುಗಳನ್ನು ಒದಗಿಸುತ್ತವೆ. ಇಲ್ಲಿನ ಕಥೆಗಳ ವಿಶೇಷವೆಂದರೆ ಪ್ರತಿ ಕಥೆಯೂ ಸತ್ಯಘಟನೆಗಳೊಂದಿಗೆ, ಇತಿಹಾಸದೊಂದಿಗೆ ಥಳಕು ಹಾಕಿಕೊಂಡಿವೆ. ಕೆಲವು ಕತೆಗಳಂತೂ ಗಣೇಶಯ್ಯ ಬರೆದಿದ್ದೇ ಸತ್ಯವಿರಬಹುದೇ ಅನ್ನಿಸಿಬಿಡುತ್ತದೆ. ಈ ಕಥೆಗಳು ಓದಿನ ಸುಖದ ಜತೆಗೆ ಒಂದಷ್ಟು ಜ್ಞಾನವನ್ನೂ ಅರಿಯದಂತೆ ನಿಮ್ಮ ತಲೆಯೊಳಗೆ ತುರುಕಿಬಿಡುತ್ತವೆ.

ನಂಜಾದ ಮಧು ಕಥೆಯಲ್ಲಿ ಜೇನುಹುಳಗಳು ಜೇನು ಸಂಗ್ರಹಿಸಿ ಬಂದ ನಂತರ ಗೂಡಿನಲ್ಲಿ ನೃತ್ಯ ಮಾಡುತ್ತವೆ. ಈ ನೃತ್ಯದ ಮೂಲಕ ಅವು ಇತರ ಹುಳುಗಳಿಗೆ ತಾನು ಜೇನಿನ ಮರ ಇರುವ ದಿಕ್ಕು ಮತ್ತು ದೂರವನ್ನು ತಿಳಿಸುತ್ತವೆ. ಜೇನು ಮೆದ್ದು ಗೊತ್ತಿದ್ದರೂ ಈ ವಿಷಯ ನನಗೆ ತಿಳಿದಿರಲಿಲ್ಲ. ಬಹುಶಃ ಜೇನು ಸಾಕುವ, ತಿನ್ನುವ ಎಷ್ಟೋ ಜನರಿಗೆ ಗೊತ್ತಿಲ್ಲ. ಆದರೆ ಈ ಕಥೆ ಮೂಲಕ ಅದು ಗೊತ್ತಾಯಿತು. ಅದೇರೀತಿ ಹುಲಿಯ ಮಡಿಲ ಹುಳು ಮೂಲಕ ಶ್ರೀಲಂಕಾದಿಂದ ಕಾಫಿ ಹಣ್ಣಿನ ಹುಳುಗಳು ಭಾರತಕ್ಕೆ ಬಂದಿದ್ದು, ಪರಾಗ ತ್ಯಾಗದ ಮೂಲಕ ಆಯಿಲ್ ಪಾಮ್ ಗಿಡಗಳ ವಿಷಯ ತಿಳಿಯುವಂತಾಯಿತು.

ಇದರ ಜತೆಗೆ ಅನಿರೀಕ್ಷಿತ, ಅನೂಹ್ಯ ತಿರುವುಗಳು ಕತೆಯನ್ನು ಓದೆಬಲ್ ಆಗಿಸಿವೆ. ತಡ ಇನ್ನೇಕೆ? ಶಾಲಭಂಜಿಕೆ ಓದಲು ಬೇಡ ಅಂಜಿಕೆ. ಹಾಗಂತ ನಿಮಗೆಲ್ಲ ತಿಳಿಸಲು ಇದನ್ನು ಇಲ್ಲಿ ಬ್ಲಾಗಿಸಿದ್ದೇನೆ.

ಗಣೇಶಯ್ಯ ಕೃಷಿ ವಿಶ್ವವಿದ್ಯಾಲಯದಲ್ಲಿ ಪ್ರಾಧ್ಯಾಪಕರಂತೆ. ಅವರು ಕತೆ ಬರೆದಷ್ಟೇ ಆಸಕ್ತಿಕರವಾಗಿ ಪಾಠ ಮಾಡಿದಲ್ಲಿ ಅವರ ಬಳಿ ಕಲಿತವರು ಪುಣ್ಯವಂತರು. ಯಾಕೆಂದರೆ ನಮ್ಮ ವಿಶ್ವವಿದ್ಯಾಲಯದ ಹೆಚ್ಚಿನ ಪ್ರಾಧ್ಯಾಪಕರು ಆಸಕ್ತಿ ಮೂಡಿಸುವಂತೆ ಕಲಿಸುವುದನ್ನೇ ಮರೆತಿದ್ದಾರೆ. ಬರೆಯುವುದಂತೂ ಗೊತ್ತೇ ಇಲ್ಲ ಬಿಡಿ. ಇದಕ್ಕೆ ಗಣೇಶಯ್ಯ ಅಪವಾದದಂತಿದ್ದಾರೆ.

Saturday, June 21, 2008

ಅಂದು ನೋಡಿದ ದಿಲ್ಲಿ ಹಾಗೇ ಇದೆ ಇಲ್ಲಿ


ಶಾಂತವಾದ, ಹಳೆಯ ಬೆಂಗಳೂರನ್ನು ನೆನಪಿಸುವ ಸೌತ್ ಎವಿನ್ಯು. ಚಿಕ್ಕ ಓಣಿಯಂತಿರುವ ಮೈಸೂರು ಕೆಫೆ. ನಮ್ಮೂರ ಹೆದ್ದಾರಿಯನ್ನೂ ಮೀರಿಸುವಷ್ಟು ಅಗಲವಿರುವ, ವಾಹನಗಳೆಲ್ಲಿ ಜಾರಿಬಿಡುತ್ತವೋ ಅನ್ನುವಂತಹ ರಸ್ತೆಗಳು. ಸೌತ್ ಎವಿನ್ಯುವಿನ ಅಗಲವಾದ ರಸ್ತೆಯಲ್ಲಿ ನಡೆಯುತ್ತಿದ್ದರೆ ಕಣ್ಣೆದುರಿಗೆ ರಾಷ್ಟ್ರಪತಿ ಭವನದ ಭವ್ಯ ದೃಶ್ಯ.

ಅಂದು ನೋಡಿದ, ಮನಸಲ್ಲಿ ಅಚ್ಚೊತ್ತಿದ್ದ ದಿಲ್ಲಿ ಚಿತ್ರಕ್ಕೆ ಈಗಿನ ಚಿತ್ರ ಕರೆಕ್ಟಾಗಿ ಮ್ಯಾಚ್ ಆಗುತ್ತಿದೆ!
೮ ವರ್ಷದ ಹಿಂದೆ ವಿದ್ಯಾರ್ಥಿಯಾಗಿ ದಿಲ್ಲಿಗೆ ಬಂದಿಳಿದಿದ್ದೆ. ಆಗ ರಾಜಧಾನಿ ಮಂಜಿನ ಮುಸುಕು ಹೊದ್ದು ಮಲಗಿದಂತಿತ್ತು. ಮಂಜಿನ ಮಬ್ಬು ಮಬ್ಬು ಮುಸುಕಿನಲ್ಲಿ ರಾಷ್ಟ್ರಪತಿ ಭವನ ನೋಡಿದ್ದೆ. ಮೊದಲ ಬಾರಿ. ಮಂಜು ಮುಸಿಕಿದ ಹಾದಿಯಲ್ಲೇ ನಡೆದುಕೊಂಡು ನಾವು ನಾಲ್ಕೈದು ಮಂದಿ ಇಂಡಿಯಾ ಗೇಟ್‌ಗೆ ನಡೆದುಕೊಂಡು ಹೋಗಿದ್ದೆವು. ಆಹಾ ಎಂಥಾ ಬೆರಗು!

ಆಗಲೂ ಈಗಲೂ ದಿಲ್ಲಿಗೆ ಎಂದು ಹೊರಟು ಬಂದಿಳಿದಿದ್ದು ನಿಜಾಮುದ್ದೀನ್ ರೈಲ್ವೆ ನಿಲ್ದಾಣಕ್ಕೆ. ಅಲ್ಲಿಂದ ಪಯಣ ಸೌತ್ ಎವಿನ್ಯುಗೆ. ಆಗ ಬಂದಾಗ ಸಂಸದ ಸನದಿ ಅವರ ಮನೆಯಲ್ಲಿ ಉಳಿದಿದ್ದೆವು. ಈ ಬಾರಿ ಧಾರವಾಡ ಉತ್ತರ ಕ್ಷೇತ್ರದ ಸಂಸದ ಪ್ರಹ್ಲಾದ ಜೋಷಿ ಅವರ ಮನೆಯಲ್ಲಿ. ಒಬ್ಬನೇ ರೈಲಿನಲ್ಲಿ ಬಂದು ನಿಜಾಮುದ್ದೀನ್‌ನಲ್ಲಿ ಇಳಿದು, ರಿಕ್ಷಾ ಹತ್ತಿ ಸೌತ್‌ಎವಿನ್ಯುಗೆ ಬಂದಿಳಿದೆ. ಅದೊಂದು ಅಪರಿಚಿತ, ಹೊಸ ಜಾಗ ಅನ್ನಿಸಲೇ ಇಲ್ಲ. ನಾನು, ನನ್ನ ಮತ್ತು ಗೆಳೆಯರ ಅಧ್ಯಯನ ಪ್ರವಾಸದ ಗೆಜ್ಜೆ ಗುರುತುಗಳು ಸ್ಪಷ್ಟವಾಗಿ ಅಲ್ಲಿ ಕಾಣುತ್ತಿದ್ದವು. ಸಮೀಪದಲ್ಲಿರುವ ಸರ್ದಾರ್ಜಿಯ ಪರಾಟ ಹೋಟೆಲ್, ಹಾಲಿನ ಡೇರಿ, ತರಕಾರಿ ಅಂಗಡಿ, ಗೆಳೆಯರು ಕುಳಿತು ಸುದ್ದಿ ಹೇಳಿದ, ಪ್ರೀತಿಯ ವಿಷಯಕ್ಕೆ ಜಗಳ ಮಾಡಿದ ಕಟ್ಟೆ ಹೀಗೆ ಎಲ್ಲವೂ ಪರಿಚಿತ ಅನ್ನಿಸಿತು. ಸೌತ್ ಎವಿನ್ಯು ವಿಶೇಷವೇ ಅದು. ದಕ್ಷಿಣ ಭಾರತದವರ ಮಟ್ಟಿಗೆ ಸೌತ್ ಎವಿನ್ಯು ನಮ್ಮದೇ ಊರಿನಂತೆ ಅನ್ನಿಸುತ್ತದೆ. ಸೌತ್ ಎವಿನ್ಯು ಒಂದರ್ಥದಲ್ಲಿ ದಿಲ್ಲಿಯ ಕರ್ನಾಟಕ. ಕರ್ನಾಟಕದವರು ಬಂದರೆ ಉಳಿಯುವುದು ಸೌತ್ ಎವಿನ್ಯುದಲ್ಲೇ ಹೆಚ್ಚು. ಅಲ್ಲಿದ್ದರೆ ನಿಮಗೆ ಕರ್ನಾಟಕದಿಂದ ಬಹಳ ದೂರದಲ್ಲಿದ್ದೇವೆ ಎಂಬ ಅನುಭವವೇ ಆಗದು.

೮ ವರ್ಷ ಹಿಂದಿನ ಅಧ್ಯಯನ ಪ್ರವಾಸ ನನ್ನ ದಿಲ್ಲಿ ಉದ್ಯೋಗದ ಪ್ರಯಾಸ ಕಡಿಮೆ ಮಾಡಿತು.
ನಿಜ ಹೇಳಬೇಕೆಂದರೆ ಸಂಪಾದಕು ದಿಲ್ಲಿಯಲ್ಲಿ ವರದಿಗಾರನಾಗುವ ಅವಕಾಶ ಇರುವ ಬಗ್ಗೆ ತಿಳಿಸಿದಾಗ ನಾನು ಒಪ್ಪಿಕೊಳ್ಳಲು ಅಧ್ಯಯನ ಪ್ರವಾಸವೇ ಕಾರಣ. ನನಗೆ ರಶ್ ಅಂದರೆ ಆಗದು. ಟ್ರಫಿಕ್ ಜಾಂ, ಎಲ್ಲಿ ನೋಡಿದರಲ್ಲಿ ರಶ್. ಹೀಗಾದರೆ ನೆಮ್ಮದಿಯ ಜೀವನ ಅಸಾಧ್ಯ. ನನ್ನ ಮಟ್ಟಿಗೆ. ಆದರೆ ಅಧ್ಯಯನ ಪ್ರವಾಸಕ್ಕೆ ಬಂದಾಗ ನೋಡಿದ ದಿಲ್ಲಿ, ಇಲ್ಲಿನ ಅಗಲವಾದ ರಸ್ತೆ, ಸಿಗ್ನಲ್‌ಗಳ ಬದಲು ವೃತ್ತಗಳು, ಮಂಜು ಮುಸಿಕಿದ ವಾತಾವರಣ ಇವೆಲ್ಲ ನನ್ನನ್ನು ಆಕರ್ಷಿಸಿದ್ದವು. ದಿಲ್ಲಿಯಲ್ಲಿ ವರದಿಗಾರನಾಗಲು ಒಪ್ಪಿಕೊಳ್ಳಲು ಇದೂ ಒಂದು ಕಾರಣವಾಯಿತು. ಬಹುಶಃ ಅಧ್ಯಯನ ಪ್ರವಾಸದ ನೆಪದಲ್ಲಿ ದಿಲ್ಲಿ ನೋಡದೇ ಹೋಗಿದ್ದರೆ ಇಲ್ಲಿಗೆ ಬರಲು ಮನಸ್ಸು ಒಪ್ಪುತ್ತಿರಲಿಲ್ಲವೇನೊ. ಅಥವಾ ಬಂದರೂ ಸ್ವಲ್ಪ ಕಷ್ಟವಾಗುತ್ತಿತ್ತೇನೊ.
ಹಾಗಂತ ದಿಲ್ಲಿಯಲ್ಲಿ ಟ್ರಾಫಿಕ್ ಜಾಂ ಇಲ್ಲ. ರಸ್ತೆಗಳಲ್ಲಿ ಹೊಂಡಗಳೇ ಇಲ್ಲ ಎಂದು ನಾನುಹೇಳುತ್ತಿಲ್ಲ. ಇಲ್ಲೂ ಆಗಾಗ ಟ್ರಾಫಿಕ್ ಜಾಂ ಸಿಗುವುದಿದೆ. ಆದರೆ ಬೆಂಗಳೂರಿನಷ್ಟಲ್ಲ! ಇಲ್ಲೂ ಹೊಂಡಗಳಿವೆ ಆದರೆ ರಾಷ್ಟ್ರೀಯ ಹೆದ್ದಾರಿ ೧೭ ಮತ್ತು ೪೮ರಷ್ಟಲ್ಲ!!
ಅದೇ ಸಮಾದಾನ. ಇನ್ನೂ ಒಂದು ಸಮಾದಾನವೆಂದರೆ ಪೆಟ್ರೋಲ್, ಡೀಸೆಲ್ ಬೆಲೆ ಉಳಿದ ಕಡೆಗಿಂತ ಕಡಿಮೆ ಇದೆ!

Monday, June 16, 2008

ಪದ್ಮಪ್ರಿಯಾ ಸಾವಿಗೊಂದು ಬೆನ್ನುಡಿ...


ಕೊಂಚ ಸಹನೆ, ಶಾಸಕರ ಮಾನದ ಬಗೆಗಿದ್ದ ಕಾಳಜಿಯ ಒಂದಷ್ಟಾದರೂ ಪದ್ಮಪ್ರಿಯಾಳ ಭಾವನೆಯ ಬಗ್ಗೂ ಇರುತ್ತಿದ್ದರೆ ಬಹುಶಃ ಅವಳು ಜೀವನಕ್ಕೆ ದುರಂತ ಅಂತ್ಯ ಕಾಣಿಸಿಕೊಳ್ಳಬೇಕಾಗಿರಲಿಲ್ಲ.
ಪದ್ಮಪ್ರಿಯಾ ಮತ್ತು ಅತುಲ್ ನಡುವಿನ ಪ್ರೇಮ ತೀರ ಗುಪ್ತವಾಗೇನೂ ಉಳಿದಿರಲಿಲ್ಲ. ಸ್ವತಃ ರಘುಪತಿ ಭಟ್ ಸೇರಿದಂತೆ ಎಲ್ಲರಿಗೂ ಗೊತ್ತಿತ್ತು. ಅಧಿಕೃತವಾಗಲ್ಲದಿದ್ದರೂ ಅನಧಿಕೃತವಾಗಿ, ಗಾಳಿಸುದ್ದಿಯಾಗಿ ಅದು ಉಡುಪಿ ಜನರ ಬಾಯಿ- ಕಿವಿಯಲ್ಲಿ ಸುಳಿದಾಡುತ್ತಿತ್ತು. ಇದರಿಂದಾಗಿಯೇ ಪದ್ಮಪ್ರಿಯಾ ನಾಪತ್ತೆಯಾದಾಗ ಉಡುಪಿ ಜನ ಕಣ್ಣು ತಿರುಗಿಸಿದ್ದು ಅತುಲ್ ಕಡೆಗೆ.
ಇಡೀ ಘಟನೆಯಲ್ಲಿ ಸ್ವತಃ ಪದ್ಮಪ್ರಿಯಾ, ಅತುಲ್, ಶಾಸಕರ ರಘುಪತಿ ಭಟ್ ಮತ್ತು ನಮ್ಮ ಸರಕಾರ ಹೀಗೆ ಎಲ್ಲರೂ ಕೊಂಚ ಎಡವಿದವರೇ. ಪದ್ಮಪ್ರಿಯಾ ಗೃಹಿಣಿ. ಆಕೆಯ ಸ್ವಂತ ಭಾವನೆಗಳಿಗೆ ಬೆಲೆ ಖಂಡಿತ ಇದೆ. ಅದನ್ನೇ ಆಕೆ ಇನ್ನಷ್ಟು ಸಹನೆಯಿಂದ, ವ್ಯವಸ್ಥಿತವಾಗಿ ಸಾಧಿಸಿಕೊಳ್ಳಹುದಿತ್ತು. ಮಕ್ಕಳ ಬಗ್ಗೆ ಕೊಂಚ ಯೋಚಿಸಬಹುದಿತ್ತು. ರಘುಪತಿ ಭಟ್ಟರಿಂದ ವಿಚ್ಛೇದನ ಪಡೆದು ತನಗೆ ಇಷ್ಟವಾದಂತೆ ಜೀವನ ನಡೆಸಹುದಿತ್ತು. ಇಲ್ಲವೇ ಹೇಗೂ ಇಬ್ಬರ ಸಂಬಂಧ ಹದಗೆಟ್ಟಿದ್ದೇ ಆದರೆ ಗಂಡನನ್ನು ಒಪ್ಪಿಸಿಯೇ ಇಷ್ಟಪಟ್ಟವರ ಜತೆ ಹೋಗಬಹುದಿತ್ತು. ಇದ್ಯಾವುದನ್ನೂ ಮಾಡದೆಯೂ ಹೋಗುವ ಕೊನೆಯ ಕ್ಷಣದಲ್ಲಿ ಒಂದು ಸಣ್ಣ ಚೀಟಿ ಬರೆದಿಟ್ಟು ಹೋಗಿದ್ದರೂ ಇಷ್ಟು ಗೊಂದಲ, ಕುತೂಹಲ ಸೃಷ್ಟಿಯಾಗುತ್ತಿರಲಿಲ್ಲ.
ಇನ್ನು ಅತುಲ್. ಅವರ ನಡುವಿನ ಸಂಬಂಧ, ಭಾವನೆಗಳು ಏನೇ ಇರಲಿ. ಆತನಿಗೂ ಜವಾದಾರಿಗಳಿವೆ. ಆತನೂ ಸಂಸಾರಸ್ಥ. ಆತ ಆಕೆಗೆ ತಿಳಿಹೇಳಬಹುದಿತ್ತು ಮತ್ತು ತಿಳಿಹೇಳಬೇಕಿತ್ತು. ಆತನೂ ಅದನ್ನು ಮಾಡಲಿಲ್ಲ. ಅಥವಾ ಆತ ಬುದ್ದಿ ಹೇಳಿದರೂ ಈಕೆ ಕೇಳಲಿಲ್ಲವೊ. ಇನ್ನು ಶಾಸಕ ಭಟ್ಟರ ಮನಸ್ಥಿತಿ ಅರ್ಥವಾಗದ್ದು. ಅವರಿಗೆ ಕೌಟುಂಬಿಕ ಸಂಬಂಧ ಹೇಗೇ ಇರಲಿ ಸಾರ್ವಜನಿಕರಿಗೆ ಅದು ಚೆನ್ನಾಗಿಯೇ ಕಾಣಬೇಕು. ಒಬ್ಬ ಶಾಸಕನಾಗಿ ಅದು ಅನಿವಾರ್ಯ. ಇದೇ ಕಾರಣಕ್ಕೆ ಅವರು ವಿಚ್ಛೇದನ ಬೇಡಿಕೆ ಮುಂದೂಡುತ್ತ ಬಂದಿದ್ದರು ಎಂಬುದು ಸುದ್ದಿ. ಒಬ್ಬ ರಾಜಕಾರಣಿಗೆ ಹೆಂಡತಿಕೊಡುವ ವಿಚ್ಛೇದನ ಸೋಲಿಗೂ ಕಾರಣವಾಗಿಬಿಡಹುದು. ಪತ್ನಿ ತಿರಸ್ಕರಿಸಿದಂತೆ ಜನವೂ ತಿರಸ್ಕರಿಬಿಟ್ಟರೆ? ಎಂಬ ಭಯ.
ಇನ್ನು ಸರಕಾರ. ಅದಕ್ಕೆ ಅದರ ಮರ್ಯಾದೆ, ಅದಕ್ಕಾಗುವ ಇರುಸುಮುರುಸುಗಳನ್ನು ತಪ್ಪಿಸಿಕೊಳ್ಳುವುದಷ್ಟೇ ಮುಖ್ಯ. ಅವರು ಶಾಸಕರೇ ಆಗಿರಲಿ, ಅವರ ಪತ್ನಿಯೇ ಆಗಿರಲಿ ಅದನ್ನೊಂದು ಪರಾರಿ ಪ್ರಕರಣವನ್ನಷ್ಟೇ ಆಗಿ ನೋಡುವುದು ಸರಕಾರದಿಂದಲೂ ಸಾಧ್ಯವಾಗಲಿಲ್ಲ. ಸಾಧ್ಯವಾಗುವುದೂ ಇಲ್ಲ. ಶಾಸಕರ ಪತ್ನಿ ಪರಾರಿಯನ್ನು ಸರಕಾರ ತನ್ನ ಪ್ರತಿಷ್ಠೆಯ ವಿಷಯ ಮಾಡಿಕೊಳ್ಳದೇ ಹೋಗಿದ್ದರೆ ಬಹುಶಃ ಸಮಸ್ಯೆ ನಿಧಾನವಾಗಿ ಬಗೆಹರಿಯುತ್ತಿತ್ತೇನೊ. ಅದೂ ಆಗಲಿಲ್ಲ. ಸರಕಾರ ಮತ್ತು ಅದರ ಸಕಲ ಅಂಗಗಳು ಶಾಸಕರ ಮಾನ ಕಾಪಾಡುವ ಮೂಲಕ ತಮ್ಮ ಮಾನವನ್ನೂ ಕಾಪಾಡಿಕೊಳ್ಳುವ ಆತುರದಲ್ಲಿದ್ದವು. ಹಾಗಿಲ್ಲದೇ ಹೋಗಿದ್ದಲ್ಲಿ ಕರ್ನಾಟಕ ಪೊಲೀಸರು ದಿಲ್ಲಿ ಪೊಲೀಸರ ಸಹಾಯ ಪಡೆದುಕೊಳ್ಳುತ್ತಿದ್ದರು. ಹಾಗೆ ಮಾಡಿದ್ದರೆ ಪದ್ಮಪ್ರಿಯಾ ಉಳಿಯುತ್ತಿದ್ದಳೇನೊ.
ಇದರಲ್ಲಿ ಮಾಧ್ಯಮಗಳ ಪಾಲು ತುಂಬ ಕಡಿಮೆ. ಆದರೂ ಸ್ವಲ್ಪ ಇದೆ. ಪದ್ಮಪ್ರಿಯಾ ಆತ್ಮಹತ್ಯೆ ಮಾಡಿಕೊಂಡ ಮನೆಯಲ್ಲಿ ಕನ್ನಡದ ಸುದ್ದಿ ಚಾನಲ್ ಒಂದು ಚಾಲೂ ಆಗಿತ್ತು. ಆಕೆ ಅದನ್ನೇನಾದರೂ ನೋಡಿ ತಕ್ಷಣಕ್ಕೆ ಆತ್ಮಹತ್ಯೆ ನಿರ್ಧಾರ ತೆಗೆದುಕೊಂಡಳೇ? ಎಂಬ ಅನುಮಾನವೂ ಇದೆ. ಯಾಕೆಂದರೆ ಚಾನಲ್‌ನವರು ಟಿಆರ್‌ಪಿ ಗಳಿಸುವ ಗಡಿಬಿಡಿಯಲ್ಲಿ ಸುದ್ದಿಯನ್ನು ಬ್ರೇಕ್ ಮಾಡುವ ಆತುರದಲ್ಲಿ ಬಾಯಿಗೆ ಬಂದಿದ್ದನ್ನೆಲ್ಲ ಒದರುತ್ತಲೇ ಇರುತ್ತಾರೆ. ಅದು ಆ ಪ್ರಕರಣಕ್ಕೆ ಸಂಬಂಧಿಸಿದವರ ಮೇಲೆ ಯಾವ ಪರಿಣಾಮ ಬೀರೀತು ಎಂಬುದು ಅವರಿಗೆ ಮನಸ್ಸಿನಲ್ಲಿ ಇರುವುದೇ ಇಲ್ಲ.ಈ ಎಲ್ಲ ಕಾರಣಗಳೂ ಸೇರಿ ಉಡುಪಿ ಶಾಸಕ ರಘುಪತಿ ಭಟ್ಟರ ಪತ್ನಿ ದಿಲ್ಲಿಯ ಮನೆಯೊಂದರಲ್ಲಿ ನೇಣುಬಿಗಿದು ಆತ್ಮಹತ್ಯೆ ಮಾಡಿಕೊಳ್ಳುವಂತಹ ಅನಿರೀಕ್ಷಿತ ಅಂತ್ಯ ಕಾಣುವಂತಾಯಿತು.
ಯಾವುದೇ ವಿಷಯವಿರಲಿ ಅದು ಅದರ ವ್ಯಾಪ್ತಿ ಮೀರಿ ಬೃಹತ್ತಾಗಿ ಬೆಳೆದಾಗ ಅನಾಹುತಗಳು ಸಂಭವಿಸುತ್ತವೆ. ಪದ್ಮಪ್ರಿಯಾ ವಿಷಯದಲ್ಲಿ ಆಗಿದ್ದೂ ಇದೇ.
ಪದ್ಮಪ್ರಿಯಾ ಸಾವು ಯಾಕೋ ಬೇಸರ ಉಂಟುಮಾಡಿದೆ. ಛೆ ಹೀಗಾಗಬಾರದಾಗಿತ್ತು ಅನಿಸುತ್ತಿದೆ. ಆದರೂ ಹಾಗಾಗಿ ಹೋಗಿದೆ. ನನಗೆ ಇಂತಹ ದುಃಖದಲ್ಲೂ ಒಂದು ಹಾಸ್ಯ ಕಾಣಿಸುತ್ತಿದೆ. ಅದೇನೆಂದರೆ ಭಾನುವಾರ ಬೆಳಗ್ಗೆ ಟಿವಿ ಚಾನಲ್ ಮತ್ತು ಪತ್ರಿಕೆಗಳಲ್ಲಿ ಪದ್ಮಪ್ರಿಯಾ ಕೋಲಾರದಲ್ಲಿ ಪತ್ತೆ. ಉಡುಪಿಗೆ ರವಾನೆ, ಮಂಗಳೂರಿನ ಬಿಜೆಪಿ ಮುಖಂಡರೊಬ್ಬರ ಮನೆಯಲ್ಲಿ ಮನವೊಲಿಕೆ ಮುಂತಾದ ಸುದ್ದಿಗಳನ್ನು ಪ್ರಕಟವಾಗಿದ್ದವು. ಪ್ರಕಟವಾಗುತ್ತಲೇ ಇದ್ದವು. ಆಕೆ ದಿಲ್ಲಿಯ ಮನೆಯೊಂದರಲ್ಲಿ ಕುಳಿತು ಇದನ್ನೆಲ್ಲ ನೋಡುತ್ತಿದ್ದಳು!
ಆಕೆಗೆ ಈ ಮಾಧ್ಯಮಗಳು ಅದೆಷ್ಟು ಸುದ್ದಿ ಬಿತ್ತರಿಸುತ್ತವೆ ಅನ್ನಿಸಿರಬೇಕಲ್ಲ. ಹೀಗೆ ಅನ್ನಿಸಿಯೂ ಅದೇ ಮಾಧ್ಯಮ ಬಿತ್ತರಿಸಿದ ಸುದ್ದಿ ನಂಬಿ ಆತ್ಮಹತ್ಯೆಗೆ ಮನಸ್ಸು ಮಾಡಿರಬಹುದಾ? ಅನುಮಾನ. ಆದರೂ ಸಾಯುವ ಮುಂಚೆ ಮಾಧ್ಯಮಗಳಲ್ಲಿ ಪ್ರಕಟವಾದ ಪದ್ಮಪ್ರಿಯಾ ಕೋಲಾರದಲ್ಲಿ ಪತ್ತೆ ಸುದ್ದಿ ನೋಡಿ ಆಕೆ ನಕ್ಕಿರಬಹುದಲ್ಲಾ...

Saturday, June 07, 2008

ಮಂಜುನಾಥ ಕಲ್ಮನಿಯಿಂದ ಕಲಿಯಬೇಕಾದ್ದು...

ಆತ ಸಾಫ್ಟ್‌ವೇರ್ ಎಂಜಿನಿಯರ್. ಹಣ, ಉತ್ತಮ ಜೀವನ ಹುಡುಕಿ ಅಮೆರಿಕಕ್ಕೆ ಹೋಗಿದ್ದ. ವೆದರ್ ಡಾಟ್ ಕಾಂನಲ್ಲಿ ಕೆಲಸ ಮಾಡಲು. ತಂದೆ- ತಾಯಿ, ಊರು, ರಾಜ್ಯ ಎಲ್ಲದರಿಂದ ದೂರವಾಗಿ, ಹಣಕ್ಕೆ ಹತ್ತಿರವಾಗಲು ಹೊರಟ. ಡಾಟ್ ಕಾಂ ಮುಚ್ಚಿತು. ಬದುಕುಮಗುಚಿತು. ಜೀವನದ ಆಸೆಗೆ ಕಾಮಾ (ಅಲ್ಪವಿರಾಮ) ಬಿತ್ತು. ಅದೇ ಟೆನ್ಶನ್‌ನಲ್ಲಿ ಕಾರು ಓಡಿಸುವಾಗ ಅದು ರಸ್ತೆ ಬದಿ ಮರಕ್ಕೆ ಗುದ್ದಿತು. ಕುತ್ತಿಗೆಗಿಂತ ಕೆಳಗೆ ದೇಹ ನಿಯಂತ್ರಣ ಕಳೆದುಕೊಂಡಿತು. ಹಾಗೇ ಆರು ವರ್ಷ ಅಮೆರಿಕದಲ್ಲಿ ಜೀವಚ್ಛವಾಗಿದ್ದ ಮಂಜುನಾಥ ಕಲ್ಮನಿ. ಮನೆಯವರು ಒಬ್ಬರೂ ಹೋಗಲಿಲ್ಲ. ಯಾಕೆಂದರೆ ಮಂಜುನಾಥ ಕಲ್ಮನಿ ಅಮೆರಿಕಕ್ಕೆ ಹೋದ ನಂತರ ಮನೆಯವರ ಸಂಪರ್ಕವನ್ನೇ ಹೆಚ್ಚುಕಡಿಮೆ ಕಳೆದುಕೊಂಡಿದ್ದ.
ದುಡ್ಡು ಆ ಮಟ್ಟಕ್ಕೆ ಮುಟ್ಟಿಸಿತ್ತು.
ಅವನ ನಸೀಬು ಚೆನ್ನಾಗಿತ್ತು. ೨೦೦೮ರಲ್ಲಿ ವೀಸಾ ಅವಧಿ ಮುಗಿಯಿತು. ಅದೇ ಕಾರಣಕ್ಕೆ ಅಮೆರಿಕ ಆಂಬುಲೆನ್ಸ್ ವಿಮಾನದಲ್ಲಿ ಮಂಜುನಾಥ ಕಲ್ಮನಿಯನ್ನು ಹೊತ್ತುಕೊಂಡು ಬಂದು ದಿಲ್ಲಿಯಲ್ಲಿ ಇಳಿಸಿಹೋಯಿತು. ಅವತ್ತಿನಿಂದ ದಿಲ್ಲಿಯ ಸಫ್ತರ್‌ಜಂಗ್ ಆಸ್ಪತ್ರೆ ಮಂಜುನಾಥ ಕಲ್ಮನಿಯ ಮನೆಯಾಯಿತು. ಮಗ ಏನೇ ಮಾಡಿರಲಿ, ಹೆತ್ತ ಕರುಳು ಕೇಳಬೇಕಲ್ಲ. ಮನೆಯವರು ಮಂಜುನಾಥ ಕಲ್ಮನಿ ನೋಡಲು ಆರಂಭದಲ್ಲಿ ಹಿಂಜರಿದರೂ, ತಾಯಿ ಕಣ್ಣೀರು ಹಾಕುತ್ತ ದಿಲ್ಲಿಗೆ ಆಗಮಿಸಿದಳು. ೮ ವರ್ಷದ ನಂತರ ಮಗನನ್ನು ನೋಡಿದಳು. ೩ ತಿಂಗಳು ಮಗನ ಆರೈಕೆ ಮಾಡಿದರು. ಕೊನೆಗೂ ಮಂಜುನಾಥ ಕಲ್ಮನಿ ಮೇ ೪ರಂದು ಕೊನೆಯುಸಿರೆಳೆದ.
ಇದು ಕರಳು ಹಿಂಡುವ ಕತೆ. ನಾಗತಿಹಳ್ಳಿ ಯಂಥವರು ಈಕತೆಯನ್ನು ಅಮೆರಿಕಾ ಅಮೆರಿಕಾ ಭಾಗ ೧ ಸಿನಿಮಾ ಮಾಡಬಹುದು.
ಇದರಲ್ಲಿ ಒಂದು ವಿಷಯವಿದೆ. ಹೆಚ್ಚಿನ ಮಾಧ್ಯಮಗಳಲ್ಲಿ ಮಂಜುನಾಥ ಕಲ್ಮನಿ ಪರ ವರದಿ ಪ್ರಕಟವಾದವು. ಆತನನ್ನು ಮನೆ ತಲುಪಿಸಲು ಸರಕಾರ ಜವಾಬ್ದಾರಿ ವಹಿಸಬೇಕು ಎಂಬರ್ಥದ ವರದಿಗಳೂ ಬಂದವು.
ಯಾಕೆ? ಯಾಕೆ? ಮಂಜುನಾಥ ಕಲ್ಮನಿ ದೇಶಕ್ಕಾಗಿ ಹೋರಾಡಲು ಅಮೆರಿಕಕ್ಕೆ ತೆರಳಿದ್ದ ಯೋಧನೆ? ಅಮೆರಿಕದಿಂದ ಕೆಲವು ಮಾಹಿತಿಗಳನ್ನು ದೇಶಕ್ಕೆ ಒದಗಿಸುತ್ತಿದ್ದ ಗುಪ್ತಚರನೇ? ದೇಶಕ್ಕೆ, ರಾಜ್ಯಕ್ಕೆ ಹೆಸರು ತಂದ ವ್ಯಕ್ತಿಯೆ? ದೇಶ, ರಾಜ್ಯ ಬಿಡಿ ಮನೆಯವರಿಗಾಗಿ ಏನಾದರೂ ತ್ಯಾಗ ಮಾಡಿದವನೇ? ಊಹುಂ. ಆತ ಉದ್ಯೋಗ ಅರಸಿ ಹೋದ ಒಬ್ಬ ವ್ಯಕ್ತಿ ಅಷ್ಟೆ. ಅದೂ ಮನೆಯವರಿಂದ ದೂರವಾಗಿ! ಮಾನವೀಯ ನೆಲೆಯಲ್ಲಿ ಸರಕಾರ ಸಹಾಯ ಮಾಡಬಹುದೇ ಹೊರತು, ಕರ್ತವ್ಯದ ನೆಲೆಯಲ್ಲಲ್ಲ. ಆ ನೆಲೆಯಲ್ಲಿ ಸರಕಾರ ಸಾಕಷ್ಟು ಮಾಡಿತು.
ಆದರೂ ಅವರ ಮನೆಯವರಿಗೆ ಅದು ಸಾಕಾಗಿಲ್ಲ. ಸರಕಾರ ಅಷ್ಟು ವೆಚ್ಚ ಮಾಡಿ ಆತನನ್ನು ವಿಮಾನದಲ್ಲಿ ಊರಿಗೆ ತಲುಪಿಸಬೇಕಿತ್ತು. ಮನೆಯವರಿಗೆ ಪರಿಹಾರ ಸಿಗಬೇಕಿತ್ತು ಎಂಬೆಲ್ಲ ಭಾವನೆ ಇದ್ದಂತಿದೆ.
ನಮ್ಮದೇ ರಾಜ್ಯದಲ್ಲಿ ಎಷ್ಟು ಮಂದಿ ಬಡವರಿದ್ದಾರೆ. ಅನಾರೋಗ್ಯಕ್ಕೆ ಚಿಕಿತ್ಸೆ ಪಡೆಯಲಾಗದೆ ನರಳುತ್ತಿದ್ದಾರೆ. ಸರಕಾರ ಅವರಿಗೆಲ್ಲ ದಿಲ್ಲಿಯ ಸಫ್ತರ್‌ಜಂಗ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸುತ್ತದೆಯೇ? ಇಲ್ಲ. ಆದರೂ ಮಂಜುನಾಥ ಕಲ್ಮನಿಗೆ ಕೊಡಿಸಿತು. ಎಷ್ಟು ಜನ ಔಷಧಿಗೆ ದುಡ್ಡಿಲ್ಲದೆ ಪರದಾಡುತ್ತಿದ್ದಾರೆ. ಅವರಿಗೆಲ್ಲ ಸರಕಾರ ಸಹಾಯ ಮಾಡಲು ಸಾಧ್ಯವಾಗುತ್ತಿಲ್ಲ. ಹಾಗಿರುವಾಗ ಮಂಜುನಾಥ ಕಲ್ಮನಿಗೆ ಸರಕಾರ ಅದನ್ನೆಲ್ಲ ಮಾಡಬೇಕು ಎಂದು ಮಾಧ್ಯಮದವರು ಬಯಸುವುದೇಕೆ? ತಪ್ಪಲ್ಲವೇ?
ನಾವು ಪತ್ರಕರ್ತರು ಇನ್ನು ಮುಂದಾದರೂ ವರದಿ, ವಿಶೇಷ ವರದಿಯ ಕೊನೆಯಲ್ಲಿ ಇನ್ನು ಮುಂದಾದರೂ ಸರಕಾರ ಇದರ ಬಗ್ಗೆ ಗಮನ ಹರಿಸಬೇಕು ಎಂದು ಬರೆಯುವುದನ್ನು ನಿಲ್ಲಿಸಬೇಕು. ಇದು ನನ್ನ ಮನವಿ. ನಿಜವಾಗಿಯೂ ಸರಕಾರ ಗಮನ ಹರಿಸುವ್ ಅಗತ್ಯವಿದ್ದಲ್ಲಿ ಜಾಡಿಸಿ ಬರೆಯಿರಿ ಬೇಡ ಅನ್ನುವವರಾರು...