Saturday, May 24, 2008

ಅಲ್ಲಿಂ‘ದಿಲ್ಲಿ’ಗೆ ಬಂದಾಯ್ತು...


ಮಂಗಳೂರಿನಿಂದ ನನ್ನ ಬ್ಲಾಗಿನ ಕೊನೆಯ ಪೋಸ್ಟ್ "ಬಯಸದೆ ಬಂದ ಭಾಗ್ಯ’! ಅಂಥದ್ದೇ ಭಾಗ್ಯ ನನ್ನನ್ನು ಅಲ್ಲಿಂ‘ದಿಲ್ಲಿ’ಗೆ ತಂದು ನಿಲ್ಲಿಸಿದೆ. ಅವಕಾಶ ಬಾಗಿಲು ತಟ್ಟಿದಾಗ ಬಿಡಬಾರದು ಅಂತಾರೆ. ಆದರೆ ಅವಕಾಶಕ್ಕೆ ಬಾಗಿಲು ತಟ್ಟುವ ಅವಕಾಶವನ್ನೂ ನಾನು ಕೊಡಲಿಲ್ಲ. ಯಾಕೆಂದರೆ ಬಾಗಿಲು ತೆರೆದೇ ಇತ್ತು!!

ಆ ಅವಕಾಶದ ಮೂಲಕವೇ ಮಂಗಳೂರು ಬಿಟ್ಟು ದಿಲ್ಲಿಗೆ ಬಂದಾಯ್ತು. ನಾನು ಮಂಗಳೂರು ಬಿಟ್ಟಿದ್ದರಿಂದ ಕೆಲವರಿಗೆ ಸಂತೋಷವಾಗಿದೆ. ವಿಪರ್ಯಾಸವೆಂದರೆ ನನ್ನ ವರ್ಗಾವಣೆಯಿಂದ ನನಗೂ ಸಂತೋಷವೇ ಆಗಿದೆ! ಅದು ಅವರಿಗೆ ಸ್ವಲ್ಪ ಬೇಸರ ತಂದಿದೆ!!

ನನ್ನ ವರ್ಗ ಹಲವರಿಗೆ ಬೇಸರ ತಂದಿದೆ. ಅವರು ನನ್ನನ್ನು ನಿಜವಾಗಿಯೂ ಪ್ರೀತಿಸಿದವರು. ನನಗೂ ಅಂತಹ ಗೆಳೆಯರನ್ನು ಬಿಟ್ಟು ಬರಲು ನಿಜಕ್ಕೂ ಬೇಸರವೇ. ಆದರೆ ಒಂದೇ ಊರು, ಒಂದೇ ನಮೂನೆಯ ಕೆಲಸ ನಮ್ಮ ಉತ್ಸಾಹ, ಜೀವನ ಪ್ರೀತಿ ಹಾಳು ಮಾಡುವ ಮೊದಲು ಆ ಊರು ಬಿಟ್ಟರೆ ಒಳ್ಳೆಯದು. ಯಾವುದೇ ಊರಿಗೆ ಹೊಸದಾಗಿ ಹೋದಾಗ ಚೆನ್ನಾಗೇ ಇರುತ್ತದೆ. ಎಲ್ಲರೂ ಒಳ್ಳೆಯವರೇ ಆಗಿರುತ್ತಾರೆ. ಊರುತುಂಬ ಸುಂದರವಾಗಿ ಕಾಣುತ್ತದೆ. ನಿಧಾನವಾಗಿ ಜಾತಿ, ಅಸೂಯೆ, ಏನೇನೋ ರಾಜಕೀಯಗಳು ಆರಂಭವಾಗುತ್ತವೆ. ಹಾಗಾದಾಗ ಅಂತಹ ಸ್ಥಳದಲ್ಲಿ ವಿಶೇಷವಾಗಿ ನನಗೆ ಕೆಲಸ ಮಾಡುವುದು ಕಷ್ಟ.

ಏಕೆಂದರೆ ನಾನು ಎದುರಿನಿಂದ ಚೂರಿ ಹಾಕುವುದನ್ನಾದರೂ ಸಹಿಸಿಕೊಂಡೇನು ಹಿಂದಿನಿಂದ ಚೂರಿ ಹಾಕುವವರನ್ನು ಸಹಿಸಿಕೊಳ್ಳಲಾರೆ. ಕೆಲವೊಮ್ಮೆ ಹಿಂದಿನಿಂದ ಚೂರಿ ಹಾಕುವವರ ಚಾಲಾಕಿತನ ಮೀರಿಸಿ ಅವರ ಹಿಂದಿನಿಂದ ಇರಿಯಬೇಕಾದ ಅನಿವಾರ್ಯವೂ ಉಂಟಾಗಿಬಿಡುತ್ತದೆ.

ನಾನು ವರ್ಗವಾಗಿದ್ದಕ್ಕೆ ಫೋನ್ ಮೂಲಕ, ಈಮೇಲ್ ಮೂಲಕ ಬೇಸರ ವ್ಯಕ್ತಪಡಿಸಿ, ರಾಜ್ಯದಲ್ಲೇ ಇರಿ ಅಂತ ಒತ್ತಾಯಿಸಿದವರು ಸಾಕಷ್ಟು ಮಂದಿ. ಮಂಗಳೂರು ಬೇಸರ ಬಂದರೆ ಬೆಂಗಳೂರಿಗೆ ಹೋಗಿ. ಅದು ಬಿಟ್ಟು ದೂರದ ದಿಲ್ಲಿಗೆ ಯಾಕೆ ಹೊಗ್ತೀರಿ ಅಂದವರು ಕೆಲವರು. ಒಳ್ಳೆ ಅವಕಾಶ ಹೋಗಿ ಬನ್ನಿ ಅಂದರು ಇನ್ನು ಕೆಲವರು. ಅವರಿಗೆ ನಾನು ಚಿರಋಣಿ. ಹಾಗೆಯೇ ವರ್ಗವಾದ್ ಮೇಲೆ ಒಂದೂ ಫೋನ್ ಮಾಡದೆ ಪೀಡೆ ತೊಲಗಿತು ಎಂದು ಸಂತೋಷ ಪಟ್ಟವರೂ ಇದ್ದಾರೆ. ಅವರಿಗೂ ನಾನು ಋಣಿ. ಒಟ್ಟಿಗಿದ್ದಾಗೆಲ್ಲ ಭಾರೀ ಚೆನ್ನಾಗಿ ವರ್ತಿಸಿ, ವರ್ಗವಾದ ಮೇಲಾದರೂ ನಿಜ ಬಣ್ಣ ತೋರಿಸಿದರಲ್ಲ. ಅದಕ್ಕೆ.

ಅಂಥವರ ಬಗ್ಗೆ ಮಾತಾಡುವುದಕ್ಕಿಂತ ನನ್ನ ಆತ್ಮೀಯರ ಬಗ್ಗೆ ಮಾತಾಡುವುದು ನಂಗಿಷ್ಟ.

ಮಂಗಳೂರು ನನಗೆ ೬ ವರ್ಷದಲ್ಲಿ ಸಾಕಷ್ಟು ಕಲಿಸಿದೆ. ಒಳ್ಳೆಯದನ್ನೇ ಕಲಿಸಿದೆ. ಸಾಕಷ್ಟು ಒಳ್ಳೆ ಗೆಳೆಯರನ್ನು ದಯಪಾಲಿಸಿದೆ. ಬಹುಶಃ ನಾನು ಮಂಗಳೂರಿಗೆ ಹೋಗದೆ ಇದ್ದಲ್ಲಿ ನನ್ನ ಜೀವನದ ಅತ್ಯುತ್ತಮ ಗೆಳೆಯರನ್ನು ನಾನು ಮಿಸ್ ಮಾಡಿಕೊಳ್ತಾ ಇದ್ದೆ ಅನ್ನಿಸ್ತಾ ಇದೆ. ಎಷ್ಟೊಂದು ಮಾಹಿತಿದಾರರು, ಒಂದು ಸಕೆಂಡ್ ಕೂಡ ಯೋಚನೆ ಮಾಡದೆ ಎಂಥ್ಥದ್ದೇ ಸಹಾಯಕ್ಕೂ ಸಿದ್ಧರಾಗುತ್ತಿದ್ದ ಗೆಳೆಯರು ನನಗೆ ಮಂಗಳೂರಿನಲ್ಲಿ ದಕ್ಕಿದ್ದರು. ಅವರ ಋಣ ನಾನೆಂದಿಗೂ ತೀರಿಸಲಾರೆ.

ಲ್ಯಾನ್ಸಿ, ಮಂಜು ನೀರೇಶ್ವಾಲ್ಯ, ನರೇಶ್ ಶೆಣೈ, ಗುರುವಪ್ಪ ಬಾಳೆಪುಣಿಯಂತಹ ಗೆಳೆಯ್ರನ್ನು, ಕುಂಟಿನಿಯಂತಹ ಅಣ್ಣನನ್ನು ಗಿಟ್ಟಿಸಿಕೊಂಡೆ. ಕನಿಷ್ಟ ದಿನಕ್ಕೊಂದು ಸಾರಿಯಾದರೂ ಫೋನಲ್ಲಿ ಮಾತಾಡುತ್ತ ಪ್ರೋತ್ಸಾಹ ನೀಡುತ್ತ, ಜೋಕ್ ಮಾಡುತ್ತಿದ್ದರು ಕುಂಟಿನಿ. ನಾನು ಮತ್ತು ವೇಣುವಿನೋದ್ ಸುದ್ದಿ ಯಾವತ್ತಿಗೂ ಹಂಚಿಕೊಂಡಿರಲಿಲ್ಲ. ಆದರೆ ನಮ್ಮಲ್ಲಿ ಒಂದು ಆತ್ಮೀಯತೆ ಇತ್ತು. ನನ್ನ ಲೇಖನಗಳಿಗೆ ಸ್ಪಂದಿಸುವ, ಪ್ರತಿಕ್ರಿಯಸುವ ಅವನ ಸಹೃದಯತೆ ಎಲ್ಲರಲ್ಲೂ ಇರುವಂಥದ್ದಲ್ಲ. ಅವರೆಲ್ಲ ದಿಲ್ಲಿಯಲ್ಲಿ ಕ್ಷಣ ಕ್ಷಣಕ್ಕೂ ನೆನಪಾಗುತ್ತಾರೆ. ಅವರಿಗೂ ಒಂದಲ್ಲ ಒಂದು ಕ್ಷಣದಲ್ಲಿ ನಾನು ನೆನಪಾಗುತ್ತಿರಬಹುದು. ಹಾಗಿತ್ತು ನಮ್ಮ ಆತ್ಮೀಯತೆ.

ಕಚೇರಿಯೊಳಗೂ ಸಾಕಷ್ಟು ಆತ್ಮೀಯರಿದ್ದಾರೆ. ಆದರೆ ಅವರ ಹೆಸರು ಹಾಕಿದರೆ ಅವರಿಗೆ ಅದು ತಿರುಮಂತ್ರವಾದೀತು. ಅದಕ್ಕೆ ಅವರ ಹೆಸರು ನನ್ನ ಮನಸ್ಸಿನಲ್ಲೇ ಇರಲಿ. ಇಷ್ಟೇ ಅಲ್ಲ. ಸಾಕಷ್ಟು ಮಂದಿ ಇದ್ದಾರೆ. ನನ್ನನ್ನು ಅನವಶಕ್ಯವಾಗಿ ಮೆಚ್ಚಿಕೊಂಡವರು, ವಿನಾಕಾರಣ ಪ್ರೀತಿಸಿದವರು, ಸಕಾರಣವಾಗಿ ದ್ವೇಷಿಸುವವರು ಎಲ್ಲರೂ ಮಂಗಳೂರಿನಲ್ಲಿ ನನಗೆ ದೊರೆತರು. ಇವತ್ತಿಗೂ ಮಂಗಳೂರಿನಲ್ಲಿ ಏನಾದರೂ ಕ್ರೈಂ ಆದರೆ ಭಟ್ಟರೆ ‘ನೀವಿರಬೇಕಿತ್ತು’ ಎನ್ನುವ ಜನರಿದ್ದಾರಲ್ಲ. ಅಷ್ಟು ಸಾಕು. ನಾನು ಮಂಗಳೂರಿನಲ್ಲಿ ೬ ವರ್ಷ ಕೆಲಸ ಮಾಡಿದ್ದು ಸಾರ್ಥಕ.

ಲ್ಯಾನ್ಸಿ ಮತ್ತು ನನ್ನ ಗೆಳೆತನ ವಿವರಿಸಲಾಗದ್ದು. ನಾವಿಬ್ಬರೂ ಪ್ರತಿ ದಿನ ಸಂಜೆ ಇಂದ್ರಭವನದಲ್ಲಿ ಚಹಾ ಕುಡಿಯಲು ಹೋಗುತ್ತಿದ್ದೆವು. ಕೆಲಸ ಒತ್ತಡ ಹೆಚ್ಚಿದ್ದ ದಿನ ಮತ್ತು ಭಾನುವಾರ ಇಂದ್ರಭವನ ಬಂದ್ ಇದ್ದ ದಿನ ಬಿಟ್ಟರೆ ಉಳಿದ ದಿನ ನಾವು ಇಂದ್ರಭವನ ಭೇಟಿ ತಪ್ಪಿಸುತ್ತಿರಲಿಲ್ಲ. ನೋಡೋರಿಗೆ ಚಾ ಕುಡಿಯೋ ಚಟ ಅನ್ನಿಸಿದರೂ ನಮ್ಮಿಬ್ಬರ ಪಾಲಿಗೆ ಚಾ ಕೇವಲ ನೆಪ. ಅದೇನಿದ್ದರೂ ನಮ್ಮೆ ಭೇಟಿಗೊಂದು ನೆಪವಾಗಿತ್ತು. ನನ್ನ ವರ್ಗಾವಣೆಯಿಂದ ನಮ್ಮಿಬ್ಬರಿಗೂ ಪ್ರತಿ ದಿನ ಸಂಜೆಯ ಚಾ ತಪ್ಪಿದೆ. ನಂಗೊತ್ತು ಲ್ಯಾನ್ಸಿ ನನ್ನ ಬಿಟ್ಟು ಬೇರೆ ಯಾರೊಂದಿಗೂ ಪ್ರತಿ ದಿನ ಚಾ ಕುಡಿಯುವಷ್ಟು ಆತ್ಮೀಯತೆ ಹೊಂದಿಲ್ಲ.

ನಾನು ಮಂಗಳೂರಿಗೆ ಹೋದಾಗ ಆರಂಭದಲ್ಲಿ ಆತ ಅದೆಷ್ಟು ಸಹಾಯ ಮಾಡಿದ್ದನೋ ಅದಕ್ಕಿಂತ ಹೆಚ್ಚಿನ ಸಹಾಯ ನಾನು ವರ್ಗವಾಗಿ ದಿಲ್ಲಿಗೆ ಬಂದ ನಂತರ ಮಾಡಿದ್ದಾನೆ. ನಾನು ಬಂದ ನಂತರ ನನ್ನ ಮನೆಯ ವಸ್ತುಗಳನ್ನೆಲ್ಲ ತಾನೇ ಮುಂದೆ ನಿಂತು ಪ್ಯಾಕ್ ಮಾಡಿಸಿ ಕಳುಹಿಸಿದ್ದಾನೆ. ಆತನಿಗೆ ತುಂಬ ಸಹನೆ. ಆತ ಗೆಳೆಯನಿಗೆ ಅಷ್ಟು ಸ್ಪಂದಿಸಬಲ್ಲ, ಎಲ್ಲ ಕೆಲಸಗಳ ನಡುವೆಯೂ ಗೆಳೆಯರ ಬೇಡಿಕೆ ಈಡೇರಿಸಬಲ್ಲ. ನಾನಂತೂ ಪ್ರತಿಯೊಂದಕ್ಕೂ ಆತನನ್ನೇ ಅವಲಂಬಿಸಿಬಿಟ್ಟಿದ್ದೆ. ಎಷ್ಟೋ ಸಾರಿ ಸಿಲ್ಲಿ ಕಾರಣಗಳಿಗೆ ಆತನಿಗೆ ಫೋನ್ ಮಾಡುತ್ತಿದ್ದೆ. ಹೊತ್ತಲ್ಲದ ಹೊತ್ತಲ್ಲಿ ಆತನ ಸಹಾಯ ಕೇಳುತ್ತಿದೆ.

ಬಹುಶಃ ಅಂತಹ ಒಬ್ಬ ಗೆಳೆಯನ್ನು ನಾನು ಭವಿಷ್ಯದಲ್ಲಿ ಪಡೆಯುವುದು ನನಗಂತೂ ಅನುಮಾನ. ಯಾಕೆಂದರೆ ಅಂತಹ ಗೆಳೆಯರು ಮತ್ತೆ ಮತ್ತೆ ಸಿಗುವುದಿಲ್ಲ.

ಮಂಗಳೂರಿನ ಎಲ್ಲ ನನ್ನ ಆತ್ಮೀಯರ ಪ್ರೀತಿಗೆ, ಅಗಾಧ ಗೆಳೆತನಕ್ಕೆ ನಾನು ಅರ್ಹನಾಗಿದ್ದೆನೋ ಇಲ್ಲೆವೋ, ನನಗೆ ಅನುಮಾನವಿದೆ. ಆದರೆ ಅವರ ಗೆಳೆತನ ನನ್ನ ಮಂಗಳೂರಿನ ಜೀವನವನ್ನು ಸುಂದರವಾಗಿಸಿತು, ಸಿಹಿಯಾಗಿಸಿತು ಎಂಬುದಂತೂ ಸತ್ಯ. ಇವತ್ತಿಗೂ ನನ್ನ ಮನಸ್ಸು ಮಂಗಳೂರನ್ನು ನೆನಪಿಸಿಕೊಳ್ಳುತ್ತಿದ್ದರೆ ಅದು ಅವರಿಂದಾಗಿ. ಮುಂದೆದಾದರೂ ಅವಕಾಶ ಸಿಕ್ಕರೆ ಮಂಗಳೂರಿಗೆ ಹೋಗಬೇಕು ಅನ್ನಿಸಿದರೆ ಅದೂ ಅವರಿಂದಾಗಿಯೇ.

Friday, May 23, 2008

ಕಣ್ಣೀರ ಧಾರೆ ಇದೇಕೆ? ಇದೇಕೆ...?


ಮಂಗಳೂರು ಬಿಟ್ಟು ರೈಲು ನಿಧಾನಕ್ಕೆ ಹೊರಡುತ್ತಿದ್ದಂತೆ ಹೊಟ್ಟೆಯೊಳಗೇನೋ ತಳಮಳ. ಮಂಗಳೂರು ಬಿಟ್ಟು ದಿಲ್ಲಿಗೆ ಹೋಗೇಕೆಂಬುದು ತೀರ್ಮಾನವಾಗಿ ಕೆಲ ದಿನಗಳು ಕಳೆದಿತ್ತು. ಮನಸ್ಸು ಮರುಗಿರಲಿಲ್ಲ. ಹೊಸ ಊರು ನೋಡುವ ಸುಖ ಹಳೆ ಊರು ಬಿಡುವ ದುಃಖ ಮರೆಸಿತ್ತು.

ಆದರೆ ರೈಲು ಮಂಗಳೂರು ನಿಲ್ದಾಣದಿಂದ ಚಲಿಸಲಾರಂಭಿಸಿದಂತೆ, ಕಳುಹಿಸಲು ಬಂದಿದ್ದ ಹೆಂಡತಿ ಸಿಂಧು, ಗೆಳೆಯ ಲ್ಯಾನ್ಸಿ ದೂರವಾಗುತ್ತ ಕೈಬೀಸುತ್ತಿದ್ದಂತೆ ಕಣ್ಣು ಕೊಳವಾಯಿತು. ಕೈಬೀಸುತ್ತಿದ್ದವರ ಮತ್ತು ಮಂಗಳೂರಿನ ಚಿತ್ರ ಮಸುಕಾಯಿತು.

ಯಾಕೋ ಇದ್ದಕ್ಕಿದ್ದಂತೆ ನಾನು ಒಂಟಿ ಅನ್ನಿಸಿ ದುಃಖ ಒತ್ತರಿಸಿಬಂತು. ಕಣ್ಣೋಟಕ್ಕೆ ನಿಲುಕುವವರೆಗೂ ಅವರಿಬ್ಬರನ್ನು ನೋಡುತ್ತಿದ್ದೆ. ರೈಲು ಮಂಗಳೂರು ಬಿಟ್ಟು ದೂರ ಓಡುತ್ತಿದ್ದರೂ ಮನಸ್ಸು ಮಾತ್ರ ಹಿಂದಕ್ಕೋಡಬಯಸುತ್ತಿತ್ತು. ಇದ್ದಕ್ಕಿದ್ದಂತೆ ದಿಲ್ಲಿಯೂ ಬೇಡ, ಬಡ್ತಿಯೂ ಬೇಡ, ಮಂಗಳೂರಲ್ಲೇ ಉಳಿದುಬಿಡೋಣ ಅನ್ನಿಸೋಕೆ ಶುರುವಾಯಿತು. ರೈಲು ಹಾಳಾಗಿ ಪ್ರಯಾಣವೇ ರದ್ದಾಗಿಬಿಡಾರದೆ ಅನ್ನಿಸಿತು.

ಬೇಕಾದಷ್ಟು ಪ್ರೀತಿ ಮಾಡೋ ಗೆಳೆಯರು. ಎಲ್ಲರಿಗಿಂತ ಮೊದಲು ಸುದ್ದಿಕೊಡೋ ಮಾಹಿತಿದಾರರು. ಸಾಕು ಸಾಕೆನ್ನುವಷ್ಟು ಪ್ರೀತಿ ಮಾಡೋ ಹೆಂಡತಿ. ಇವನ್ನೆಲ್ಲ ಹಿಂದೆ ಬಿಟ್ಟು ನಾನು ದಿಲ್ಲಿಗೆ ಹೊರಟಿದ್ದೆ. ಜೀವನದಲ್ಲಿ ಮಹಾತ್ವಾಕಾಂಕ್ಷೆಗಳನ್ನು ಇರಿಸಿಕೊಳ್ಳದ, ದೊಡ್ಡ ಹುದ್ದೆಯ ಕನಸೂ ಕಾಣದ, ಇದ್ದುದರಲ್ಲೇ ಇದ್ದಷ್ಟು ದಿನ ನನ್ನವರೊಂದಿಗೆ ಹಾಯಾಗಿದ್ದುಬಿಡುವ ಮನಸ್ಥಿತಿಯ ನಾನು ದಿಲ್ಲಿಗೆ ಹೋಗಲು ಯಾಕೆ ಒಪ್ಪಿಕೊಂಡೆ ಎಂಬುದು ನನಗೀಗಲೂ ಪ್ರಶ್ನೆಯೇ. ಬಹುಶಃ ದಿಲ್ಲಿಯ ಬಗೆಗಿದ್ದ ಸುಂದರ ಕಲ್ಪನೆ ಮತ್ತು ವರದಿಗಳ ಮೂಲಕ ಕೊಂಚ ಹೆಸರು ಮಾಡಬಹುದು, ಒಂದಷ್ಟು ಸುಂದರ ಸ್ಥಳಗಳನ್ನು ನೋಡಬಹುದು ಎಂಬುದೇ ಇದಕ್ಕೆ ಕಾರಣವೇನೊ. ಅಥವಾ ಮಂಗಳೂರು ನಿಧಾನಕ್ಕೆ ಬೋರಾಗಲಾರಂಭಿಸಿತ್ತೊ.

ಆದರೂ ಮಂಗಳೂರು ಬಿಡುವಾಗ ಮುಳು ಮುಳು ಅತ್ತಿದ್ದು ನಿಜ. ಯಾಕೆಂದರೆ ನನಗೆ...

ಒಂಟಿ ಒಂಟಿಯಾಗಿರುವುದು

ಬೋರೋ ಬೋರು...

ದಿಲ್ಲಿಗೆ ಹೋಗುವುದು ಮತ್ತು ಹೆಂಡತಿ ಸ್ವಲ್ಪ ಸಮಯ ಬಿಟ್ಟು ಬರುವುದು ಎಂದು ತೀರ್ಮಾನ ಆದಾಗಿನಿಂದ ಹೆಂಡತಿ ಆಗಾಗ ಅಳುತ್ತಿದ್ದಳು. ಯಾಕೆಂದರೆ ಮದುವೆಯಾಗಿ 2 ವರ್ಷದಲ್ಲಿ ನಾವಿಬ್ಬರೂ ೧ ವಾರಕ್ಕಿಂತ ಹೆಚ್ಚು ಬಿಟ್ಟಿದ್ದಿದ್ದೇ ಇಲ್ಲ. ಅವಳಿಗೆ ಧೈರ್ಯ ಹೇಳಿ, ಹೇಳಿ ದಿಲ್ಲಿಗೆ ಹೊರಡುವ ದಿನ ಬರುವಷ್ಟರಲ್ಲಿ ನಾನೇ ಅಳುವ ಸ್ಥಿತಿ ತಲುಪಿದ್ದೆ. ದಿಲ್ಲಿಗೆ ಹೋದರೆ ಮನೆಗೆ ಬರೋದು ವರ್ಷಕ್ಕೊಂದೇ ಸಲ ಎಂಬುದು ನೆನೆದೇ ಅಪ್ಪ-ಅಮ್ಮ ಬೇಜಾರು ಮಾಡಿಕೊಂಡಿದ್ದಾರೆ. ಫೋನು ಮಾಡಿದರೆ ಮಾತಾಡಲಾಗದಷ್ಟು ದುಃಖ.

ಅವರಿಗೆಲ್ಲ ಸಮಾದಾನ ಮಾಡುತ್ತ ಮಾಡುತ್ತ ನಾನೇ ಸಮಾದಾನ ಮಾಡಿಸಿಕೊಳ್ಳುವ ಸ್ಥಿತಿ ತಲುಪಿದ್ದೆ. ಆದರೆ ನಾನು ಧೈರ್ಯ ಹೇಳುವುದು ಬಿಟ್ಟು ಅತ್ತರೆ ಅವರು ಇನ್ನಷ್ಟು ಅತ್ತಾರು ಎಂಬ ಕಾರಣಕ್ಕೆ ದುಃಖ ಹೊರಗೆಡಹಿರಲಿಲ್ಲ. ಅಲ್ಲದೆ ವರ್ಗಾವಣೆಯಿಂದಾಗಿ ಮಾಡೇಕಾಗಿದ್ದ ಕೆಲಸಗಳೂ ಸಾಕಷ್ಟಿದ್ದವು. ಹೀಗಾಗಿ ದುಃಖಿಸಲು ಸಮಯವೂ ಸಿಕ್ಕಿರಲಿಲ್ಲ.

ರೈಲು ಮಂಗಳೂರು ಬಿಡುತ್ತಿದ್ದಂತೆ ಅಳುವೇ ತುಟಿಗೆ ಬಂದಂತೆ...ಏನು ಮಾಡಿದರೂ ಅಳು ತಡೆಯದಾದೆ. ಸುಮ್ಮನೆ ಕುಳಿತು ಅತ್ತೆ. ರೈಲು ಮಂಗಳೂರು ಬಿಟ್ಟು ೩ ತಾಸು ಕಳೆದರೂ ಕಣ್ಣು ಮಾತ್ರ ಒಣಗಲೇ ಇಲ್ಲ.

ಕಣ್ಣೀರ ಧಾರೆ

ಇದೇಕೆ ಇದೇಕೆ...

ಹಾಗಂತ ಕೇಳಲು ಅಲ್ಲಿ ಯಾರೂ ಇರಲಿಲ್ಲ. ಅಂತೂ ಸಮಾದಾನವಾಗುವ ಹೊತ್ತಿಗೆ ನನ್ನ ಹಿಂದಿನ ಸೀಟಿನಿಂದಲೂ ಮೂಗು ಸೇರಿಸುವ ಸೊರ್ ಸೊರ್ ಶಬ್ದ ಕೇಳತೊಡಗಿತು. ನೀನೊಬ್ಬನೇ ಅಲ್ಲ ಊರು ಬಿಟ್ಟು ಹೊರಟ ಎಲ್ಲರಿಗೂ ಹೀಗೇ ಆಗುತ್ತದೆ ಎಂದು ಸೊರ್ ಸೊರ್ ಶಬ್ದವೇ ಸಮಾದಾನ ಮಾಡಿದಂತಾಗಿ ನಿಧಾನವಾಗಿ ಜೋಗಿ ಕತೆಗಳು ಪುಸ್ತಕ ಕೈಗೆತ್ತಿಕೊಂಡೆ. ಮನಸ್ಸು ಕತೆಗಳಲ್ಲಿ ಮುಳುಗಲಾರಂಭಿಸಿತು. ರೈಲು ದಿಲ್ಲಿಯತ್ತ ನನಗಿಂತ ಅರ್ಜೆಂಟಿನಲ್ಲಿ ಓಡಲಾರಂಭಿಸಿತು.