ಆಡಂಬರವಿಲ್ಲ. ಭಾರೀ ಸುಂದರ ಸೀನುಗಳಿಲ್ಲ. ಅನಗತ್ಯ ಹಾಡುಗಳಿಲ್ಲ. ಡೈಲಾಗುಗಳಂತೂ ನಾವು ನೀವು ಆಡುವ ಮಾತುಗಳೇ.
ಇದಕ್ಕಾಗಿಯೇ ನೀವು ‘ಅವ್ವ’ಳನ್ನೊಮ್ಮೆ ನೋಡಬೇಕು!
ಇವತ್ತು ನಾನು- ಹೆಂಡತಿ ಅವ್ವ ಸಿನಿಮಾ ನೋಡಿ ಬಂದೆವು. ಚೆನ್ನಾಗಿದೆ. ನಾನು ಅವ್ವಳನ್ನು ನೋಡುವ ಆಸಕ್ತಿಯಲ್ಲಿರಲಿಲ್ಲ. ಆದರೆ ನನ್ನ ಹೆಂಡತಿ ಎಂ.ಎ. ಕಲಿಯುವಾಗ ಮುಸ್ಸಂಜೆಯ ಕಥಾ ಪ್ರಸಂಗ ಕಾದಂಬರಿ ಪಠ್ಯವಾಗಿತ್ತು. ಆಕೆ ಸಿನಿಮಾ ನೋಡಲೇಬೇಕು ಅಂದಳು. ಅದಕ್ಕೆ ಹೋದೆ. ಈಗ ಅನ್ನಿಸುತ್ತಿದೆ ಆಕೆ ಸಿನಿಮಾಕ್ಕೆ ಹೋಗಬೇಕೆಂದು ಕಾಟಕೊಡದಿದ್ದರೆ ನಾನು ಒಂದೊಳ್ಳೆ ಸಿನಿಮಾ ತಪ್ಪಿಸಿಕೊಳ್ಳುತ್ತಿದೆ. ಹಾಗಾಗಿ ಹೆಂಡತಿಯರು ಕಾಟಕೊಡುವುದೂ ಕೆಲವು ಬಾರಿ ಒಳ್ಳೆಯದೇ!
ಲಂಕೇಶ ಕತೆಯನ್ನು ಓದುವದಕ್ಕಿಂತ ನೋಡುವುದನ್ನು ಚೆಂದವಾಗಿಸಿದ್ದಾರೆ ಮಗಳು ಕವಿತಾ. ಕೊಂಚ ಹಾಸ್ಯ, ಗಂಭೀರ, ಸಹಜ ಮಿಶ್ರಣದ ಒಂದು ಹಳ್ಳಿಯಲ್ಲಿ ನಡೆಯುವ ಕತೆ. ಒಂದೇ ಪರಿಸರದಲ್ಲಿ ಸಿಗುವ ಸಹಜವಾದ ಪ್ರಕೃತಿ ಸೌಂದರ್ಯವನ್ನು ಚಿತ್ರಕ್ಕೆ ತಕ್ಕನಾಗಿ ಬಳಸಿಕೊಳ್ಳಲಾಗಿದೆ. ಹೊರತು ಸುಂದರ ದೃಶ್ಯಗಳಿಗಾಗಿ ಸಿನಿಮಾ ಬಳಸಿಕೊಳ್ಳಲಾಗಿಲ್ಲ ಎಂಬುದು ಚಿತ್ರದ ಪ್ಲಸ್ ಪಾಯಿಂಟ್. ಹಿಂಭಾಗದಲ್ಲಿ ಬಿಸಿಲಿರುವ ಮರದ ಎದುರು ಒಂದು ದೃಶ್ಯ, ಕೆರೆಯ ಏರಿ ಮೇಲೆ ಸೈಕಲ್ ಓಡಿಸುವುದು ಇವೆಲ್ಲ ಕತೆಗೆ, ಹಳ್ಳಿ ಪರಿಸರಕ್ಕೆ ತಕ್ಕಂತೆ ಮೂಡಿಬಂದಿವೆ. ಎಲ್ಲೂ ಅನಗತ್ಯ ಹಾಡು, ದೃಶ್ಯ ತುರುಕಿಸಲಾಗಿಲ್ಲ.
ಡೈಲಾಗುಗಳು ಸೋಕಾಲ್ಡ್ ಸುಸಂಕೃತರು ಎನಿಸಿಕೊಂಡವರಿಗೆ ಅಸಭ್ಯ, ಅಸಹ್ಯ ಅನಿಸಬಹುದು. ಅದಕ್ಕೆ ಸೆನ್ಸಾರ್ ಮಂಡಳಿ ಚಿತ್ರಕ್ಕೆ ‘ಎ’ ಸರ್ಟಿಪಿಕೇಟ್ ನೀಡಿದೆ! ಆದರೆ ಕತೆ ನಡೆಯುವುದು ಬಯಲು ಸೀಮೆಯಲ್ಲಿ. ಅಲ್ಲಿಯದ್ದೇ ಭಾಷೆ, ಶೈಲಿ ಬಳಸಿಕೊಳ್ಳಲಾಗಿದೆ. ಅಲ್ಲಿ ನಿಮ್ಮವ್ವನ್, ಬೋಳಿ ಮಗನೆ, ಬೋಸುಡಿ ಮಗನೆ ಎಂಬುದೆಲ್ಲ ಬೈಗುಳಗಳಲ್ಲ. ಮಾತಿನ ಆರಂಭದಲ್ಲಿ ಬರುವ ವಿಶೇಷಣಗಳು ಅವು. ಅವನ್ನು ಒಂದು ಜನರ ಭಾಷೆ ಎಂದು ಪರಿಗಣಿಸಿದರೆ ಸಾಕು. ಹಾಗಿರುವುದರಿಂದಲೇ ಚಿತ್ರ ಸಹಜ ಅನ್ನಿಸುವುದು.
ಒಮ್ಮೆ ನಾಯಕನ ಗೆಳೆಯ ಕೊಟ್ಟ ಹಣವನ್ನು ನಾಯಕಿ ಕುಪ್ಪುಸದೊಳಗೆ ಇರಿಸಿಕೊಳ್ಳುತ್ತಾಳೆ. ‘ಅದ್ಕೇ ನೋಡು ಹೆಂಗಸ್ರ ಕೈಲಿ ದುಡ್ಡು ಬೆಚ್ಚಗಿರತ್ತಂತೆ...’ ಅನ್ನುತ್ತಾನೆ ನಾಯಕ ವಿಜಯ್. ಎಲ್ಲರೊಟ್ಟಿಗೆ ಕುಳಿತು ಸಿನಿಮಾ ನೋಡುವಾಗ ಇದು ಸ್ವಲ್ಪ ಇರಿಸುಮುರಿಸು ಉಂಟು ಮಾಡುತ್ತದಾದರೂ, ವಿಷಯ ಸತ್ಯವೇ ಅಲ್ಲವೇ?
ಚಿತ್ರದಲ್ಲಿರೋದು ಎರಡೇ ಹಾಡು. ಒಂದು ‘ಗುರುವೇ ನಿನ್ನಾಟ ಬಲ್ಲವರು ಯಾರ್‍ಯಾರೊ’ ಇಂಪಾಗಿದೆ. ಇನ್ನೊಂದು ಹಾಡು ಹಿಂದಿಯದ್ದು, ‘ಆ ಆ ಆಜಾ ಆ ಆ ಆ ಆಜಾ’ ಇದರಲ್ಲಿ ನೃತ್ಯ ಉತ್ತಮವಾಗಿದೆ. ಇಕ್ಬಾಲ್ ಕುತ್ತಿಗೆ ಕುಣಿಸುವ ನೃತ್ಯದಲ್ಲಿ ಶಮ್ಮಿಕಪೂರ್‌ನನ್ನೂ ಮೀರಿಸಿದ್ದಾರೆ. ಇದೊಂದು ನೃತ್ಯಕ್ಕಾಗಿಯಾದರೂ ನೀವು ಸಿನಿಮಾ ನೋಡಬೇಕು. ನಕ್ಕು ನಕ್ಕು ಸುಸ್ತಾಗುವುದು ಖಂಡಿತ.
ಸಾವಂತ್ರಿಯಾಗಿ ನಾಯಕಿ, ಬ್ಯಾಡರ ಮಂಜನಾಗಿ ವಿಜಯ್, ಅವ್ವಳ ಪಾತ್ರದಲ್ಲಿ ಶೃತಿ ಉತ್ತಮ ಅಭಿನಯ ನೀಡಿದ್ದಾರೆ. ವಿಜಯ್‌ಗೆ ಇಂತಹ ಹಳ್ಳಿ ಹುಡುಗುನ ಪಾತ್ರ ಸಹಜವಾಗಿ ಒಪ್ಪುತ್ತದೆ. ಆತ ಇಂತಹ ಪಾತ್ರಗಳಲ್ಲಿ ಸಹಜವಾಗಿ ನಟಿಸುತ್ತಾನೆ. ಶೃತಿಯಂತಹ ನಟಿಯ ಬಾಯಲ್ಲಿ ಕೆಟ್ಟ ಶಬ್ದದ ಡೈಲಾಗುಗಳು, ಅಳುಮುಂಜಿ ಪಾತ್ರಕ್ಕೇ ಸೀಮಿತವಾಗಿದ್ದ ಅವರನ್ನು ಮಾಂಕಾಳಿ ಪಾತ್ರದಲ್ಲಿ ನೋಡುವುದು ಒಂದು ಅಪರೂಪವೇ. ಆದರೂ ಶೃತಿಯ ಬದಲು ಉಮಾಶ್ರಿ ಅವ್ವಳ ಪಾತ್ರವನ್ನು ಇನ್ನೂ ಚೆನ್ನಾಗಿ ನಿಭಾಯಿಸುತ್ತಿದ್ದರೇನೋ ಅನ್ನೋದು ನನ್ನ ಭಾವನೆ.
ನಾಯಕಿ ಸಾವಂತ್ರಿಯ ಗೆಳತಿ ಶಿವಿ ಸಾಯುತ್ತಾಳೆ. ಆಕೆ ಯಾಕೆ ಸಾಯುತ್ತಾಳೆ? ಎಂಬುದು ಗೊತ್ತಾಗುವುದಿಲ್ಲ. ಆದರೆ ಆಕೆಯ ಸಾವಿಗೆ ಜನ ಏನೇನೋ ಮಾತಾಡಿಕೊಳ್ಳುತ್ತಾರೆ. ಆಕೆ ಸತ್ತಾಗ ಮನೆಯವರು, ಅಕ್ಕಪಕ್ಕದವರು ಅಳುವುದನ್ನು ಹಾಗೂ ಚಿತ್ರ ಮುಗಿಯುತ್ತ ಬರುವಾಗ ನಾಯಕ- ನಾಯಕಿಯ ಸರಸವನ್ನು ಸ್ವಲ್ಪ ಹೆಚ್ಚೇ ಎನ್ನುವಷ್ಟು ತೋರಿಸಲಾಗಿದೆ. ಎರಡೂ ಬಹುಶಃ ಅನಗತ್ಯವಾಗಿತ್ತು.
ಚಿತ್ರದುದ್ದಕ್ಕೂ ಬೈಗುಳ ಕೇಳಿರುತ್ತೀರಿ. ಅಂತ್ಯದಲ್ಲಿ ಪ್ರೇಕ್ಷಕರಿಗೂ ಬೈಗುಳವೇ!?
ಸಾಮಾನ್ಯವಾಗಿ ಚಿತ್ರದ ಕೊನೆಯಲ್ಲಿ ಇನ್ನೊಮ್ಮೆ ನೀವೂ ಬನ್ನಿ, ನಿಮ್ಮವರನ್ನೂ ಕರೆತನ್ನಿ ಎಂದೆಲ್ಲ ಹೇಳುವುದು ಸಾಮಾನ್ಯ. ಆದರೆ ಅವ್ವ ಮಾತ್ರ ಏನು ಕೋತಿ ಕುಣಿತೈತ್ರಾ ಇಲ್ಲಿ. ಹ್ವೋಗಿ ಹ್ವೋಗಿ ಕೆಲಸ ನೋಡ್ವೋಗಿ ಎಂದು ಬೀಳ್ಕೊಡುತ್ತಾಳೆ!ಹೋಗಿ ನೋಡಿ ಖುಶಿಪಟ್ಟು, ಉಗಿಸ್ಕೊಂಡು ಬನ್ನಿ! ದುಡ್ಕೊಟ್ಟು ಉಗಿಸ್ಕೊಳ್ಳೋದು ಅಂದ್ರೆ ಏನೂಂತ ನಿಮಗೂ ಸ್ವಲ್ಪ ಗೊತ್ತಾಗ್ಲಿ...!!
ಮಸುಕಾದ 2022ರ ಡೈರಿಯಿಂದ....
8 months ago