Monday, December 24, 2007

ಚುಕುಬುಕು ಚುಕುಬುಕು ರೈಲೆ ಆಹಾ ನಿನ್ನ ಸ್ಟೈಲೆ


ತಿರುವುಗಳಲ್ಲಿ ಬಳುಕುತ್ತ, ಘಾಟಿಯಲ್ಲಿ ತೇಕುತ್ತ, ಎಡಕುಮೇರಿಯಲ್ಲಿ ತೆವಳುತ್ತ, ಪಶ್ಚಿಮ ಘಟ್ಟವನ್ನು ಬಳಸುತ್ತ ಮಂಗಳೂರು- ಬೆಂಗಳೂರು ರೈಲೆಂಬ ಸಿಂಗರಿತ ಚೆಲುವೆ ಮೆಲ್ಲಗೆ...


ಬಿಂಕದ ಸಿಂಗಾರಿ

ಮೈ ಡೊಂಕಿನ ವಯ್ಯಾರಿ...

ಎಂದು ಘಾಟಿ ಹತ್ತುತ್ತಿದ್ದರೆ ರೋಮಾಂಚನ!
೧೧ ವರ್ಷದ ನಂತರ ಆರಂಭವಾದ ಮಂಗಳೂರು- ಬೆಂಗಳೂರು ರೈಲಿನ ಮೊದಲ ಪ್ರಯಾಣದಲ್ಲೇ ಆದ ಅನುಭವಗಳು, ಕಂಡ ದೃಶ್ಯಗಳು ಅಧ್ಬುತ. ಅತ್ಯಧ್ಬುತ!! ಕೆಲವು ದೃಶ್ಯಗಳು ರುದ್ರ ರಮಣೀಯ!
ಮೊದಲ ರೈಲು ಮಂಗಳೂರಿನಿಂದ ಮಧ್ಯಾಹ್ನ ೩.೦೦ ಗಂಟೆಗೆ ಬಿಟ್ಟಿದ್ದರಿಂದಸುಂದರ ದೃಶ್ಯಗಳು ನೋಡಲು ಸಿಕ್ಕವು.ಒಟ್ಟು ೬೭೦ ಸೇತುವೆಗಳು, ೫೭ ಸುರಂಗಗಳು, ಹಚ್ಚಹಸಿರಿನ ಪಶ್ಚಿಮ ಘಟ್ಟದ ಗಿರಿಗಳು. ಸಮುದ್ರ ಮಟ್ಟದಲ್ಲಿರುವ ಮಂಗಳೂರಿನಿಂದ ಹೊರಡುವ ರೈಲು ಸಮುದ್ರ ಮಟ್ಟದಿಂದ ೯೬೭ ಮೀ. ಎತ್ತರದಲ್ಲಿರುವ ಸಕಲೇಶಪುರಕ್ಕೆ ಹತ್ತುವ ಪರಿ ನೀವೊಮ್ಮೆ ನೋಡಬೇಕು. ನೋಡಲೇಬೇಕು.ಸುಬ್ರಹ್ಮಣ್ಯ- ಸಕಲೇಶಪುರದ ನಡುವಿನ ೫೫ ಕಿ.ಮೀ. ಹಳಿ ಮಂಗಳೂರು- ಬೆಂಗಳೂರು ರೈಲಿನ ಹೈಲೈಟ್. ಈ ೫೫ ಕಿ.ಮೀ. ವ್ಯಾಪ್ತಿಯಲ್ಲಿ ೫೭ ಸುರಂಗಗಳಿವೆ. ಒಟ್ಟು ಸುರಂಗಳ ಮಾರ್ಗದ ಉದ್ದ ೧೧ ಕಿ.ಮೀ. ರೈಲಿನ ಹಿಂಭಾಗ ಒಂದು ಸುರಂಗದಿಂದ ಹೊರಬಿದ್ದಿರುವುದಿಲ್ಲ ಆಗಲೇ ಮುಂಭಾಗ ಇನ್ನೊಂದು ಸುರಂಗ ಹೊಕ್ಕಿರುತ್ತದೆ.
ಈ ದಾರಿಯಲ್ಲಿ ಒಟ್ಟು ೨೪೧ ಸೇತುವೆಗಳಿವೆ. ಇವು ಬರೇ ಸೇತುವೆಗಳಲ್ಲ ಮೈನವಿರೇಳಿಸುವ ತಾಣಗಳು, ಎಂಜಿನಿಯರಿಂಗ್‌ನ ಅಧ್ಬುತ ನಿರ್ಮಾಣಗಳು. ೧೦೦-೨೦೦ ಅಡಿ ಎತ್ತರದ ಸಿಮೆಂಟ್ ಕಂಬಗಳನ್ನು ನಿರ್ಮಿಸಿ ಅದರ ಮೇಲೆ ಹಳಿ ಹಾಕಿ ರೈಲು ಓಡಿಸುವುದು ಸಾಮಾನ್ಯಾದ ಕೆಲಸವೇ? ಇಂತಹ ಎತ್ತರದ ಸೇತುವೆಗಳ ಮೇಲೆ ಹೋಗುವಾಗ ಕೆಳಗಿನ ಪ್ರಪಾತ ನೋಡಿದರೋ ಹೃದಯ ಬಾಯಿಗೆ ಬರುವುದು ಅಂದರೇನು ಎಂಬುದು ಅರ್ಥವಾಗುತ್ತದೆ. ಅಲ್ಲದೆ ಪ್ರಯಾಣಿಕರ ರೈಲು ಓಡಿಸಲು ಅಧಿಕಾರಿಗಳು ಯಾಕಿಷ್ಟು ಹಿಂಜರಿಯುತ್ತಾರೆ ಎಂಬುದೂ ಅರಿವಿಗೆ ಬರುತ್ತದೆ.
ಘಾಟಿಯಲ್ಲಿ ೧೧೦ ತಿರುವುಗಳಿವೆ, ಎಡಕುಮೇರಿ ಕಮರಿಯನ್ನು ಸುತ್ತು ಬಳಸುವಾಗ ರೈಲು ಸರಿಯಾಗಿ ಅರ್ಧಚಂದ್ರಾಕೃತಿಯಾಗಿ ಮಾರ್ಪಾಡಾಗುತ್ತದೆ. ಆಗ ಇಡೀ ಗಿರಿಗಳ ಸಾಲಿಗೆ ಸಣ್ಣದೊಂದು ಅರ್ಧಚಂದ್ರದ ನೆಕ್ಲೆಸ್ ತೊಡಿಸಿದಂತೆ ಕಾಣುತ್ತದೆ!
ಹತ್ತು ಹಲವು ಅಚ್ಚರಿಗಳು
ಸುಬ್ರಹ್ಮಣ್ಯದಿಂದ ಸಕಲೇಶಪುರ ನಡುವೆ ೭ ನಿಲ್ದಾಣಗಳಿವೆ. ಇವುಗಳಲ್ಲಿ ೩ ನಿಲ್ದಾಣಗಳಿಗೆ ರೈಲ್ವೆ ಹಳಿ ಬಿಟ್ಟರೆ ಬೇರೆ ಸಂಪರ್ಕ ರಸ್ತೆಗಳೇ ಇಲ್ಲ! ಐದು ನಿಲ್ದಾಣಗಳಿಗೆ ವಿದ್ಯುತ್ ಸಂಪರ್ಕವೇ ಇಲ್ಲ. ಈ ನಿಲ್ದಾಣಗಳು ಜನರೇಟರ್ ಅಥವಾ ಸೋಲಾರ್ ಬೆಳಕಿನ ಆಧಾರದಲ್ಲಿ ಕೆಲಸ ನಿರ್ವಹಿಸುತ್ತವೆ. ಎಡಕುಮೇರಿ ನಿಲ್ದಾಣ ಭಾರತೀಯ ರೈಲ್ವೆಯ ಮೊದಲ ಸೋಲಾರ್ ಆಧಾರಿತ ನಿಲ್ದಾಣ ಎಂಬ ಹೆಗ್ಗಳಿಗೆ ಪಾತ್ರವಾಗಿರುವುದು ನಿಮಗೆ ಗೊತ್ತೇ ಇರಬಹುದು. ಎಡಕುಮೇರಿ ರೈಲು ನಿಲ್ದಾಣವಂತೂ ಸುತ್ತಣ ಸುಂದರ ಪರಿಸರದಿಂದಾಗಿ ಒಂದೊಳ್ಳೆ ರೆಸಾರ್ಟಿನಂತೆ ಕಂಗೊಳಿಸುತ್ತದೆ.
ಘಾಟಿ ಹತ್ತುವ ಧಾಟಿ
ಇಂತಹ ಘಾಟಿಯನ್ನು ರೈಲು ಹೇಗೆ ಹತ್ತುತ್ತದೆ? ನಿಮ್ಮಲ್ಲೊಂದು ಅನುಮಾನ ಇರಬಹುದು. ಪ್ಯಾಸೆಂಜರ್ ರೈಲು ಘಟ್ಟ ಹತ್ತುವಾಗ ಹಿಂದಿನಿಂದ ಎರಡು ಎಂಜಿನ್ ಜೋಡಿಸಲಾಗುತ್ತದೆ. ಇವು ಹಿಂದಿನಿಂದ ರೈಲನ್ನು ಒತ್ತಿಕೊಡುತ್ತವೆ. ಘಾಟಿ ಹತ್ತುವಾಗ ರೈಲಿನ ವೇಗ ಕೇವಲ ೩೦ಕಿ.ಮೀ. ಅದಕ್ಕಿಂತ ಹೆಚ್ಚಿನ ವೇಗ ಹೋಗುವ ಹಾಗಿಲ್ಲ. ಎಂಜಿನ್‌ಗಳಿಗೆ ಅಟೋಮ್ಯಾಟಿಕ್ ಬ್ರೇಕಿಂಗ್ ಸಿಸ್ಟಂ (ಎಬಿಎಸ್) ಅಳವಡಿಸಲಾಗಿದೆ.ಬರುವಾಗ? ೩ ಎಂಜಿನ್‌ಗಳನ್ನು ಮುಂದೆ ಅಳವಡಿಸಲಾಗುತ್ತದೆ. ಹೀಗಾಗಿ ಹೋಗುವಾಗ ಸುಬ್ರಹ್ಮಣ್ಯದಲ್ಲಿ ಹಾಗೂ ಬರುವಾಗ ಸಕಲೇಶಪುರದಲ್ಲಿ ರೈಲಿಗೆ ಹೆಚ್ಚುವರಿ ಎಂಜಿನ್ ಜೋಡಿಸಲಾಗುತ್ತದೆ.ಸುಬ್ರಹ್ಮಣ್ಯದಿಂದ ಸಕಲೇಶಪುರಕ್ಕಿರುವ ಘಾಟಿಯ ೫೫ ಕಿ.ಮೀ. ಕ್ರಮಿಸಲು ರೈಲು ಎರಡೂವರೆ ತಾಸು ತೆಗೆದುಕೊಳ್ಳುತ್ತದೆ. ಒಂದು ಘಾಟಿ ಹತ್ತಲು ಅಥವಾ ಇಳಿಯಲು ಆರಂಭಿಸಿತೆಂದರೆ ಅದು ಘ್ಯಾಟಿಯ ವ್ಯಾಪ್ತಿ ದಾಟುವವರೆಗೆ ಇನ್ನೊಂದು ರೈಲು ಘಾಟಿ ಪ್ರದೇಶ ಪ್ರವೇಶಿಸುವಂತಿಲ್ಲ.
ಒಂದು ರೈಲಿಗೆ ಎರಡೂವರೆ ತಾಸಿನಂತೆ ದಿನಕ್ಕೆ ೮ ರೈಲು ಮಾತ್ರ ಘಾಟಿ ಹತ್ತಿಯಲು ಸಾಧ್ಯ. ಈಗಾಗಲೇ ದಿನಕ್ಕೆ ೫ ಗೂಡ್ಸ್ ರೈಲು ಹಾಗೂ ೨ ಪ್ರಯಾಣಿಕರ ರೈಲು ಓಡಾಡುತ್ತಿದೆ. ಅಂದರೆ ಇನ್ನೊಂದು ರೈಲು ಮಾತ್ರ ಓಡಿಸಲು ಸಾಧ್ಯವಾ?ಹೌದು. ಬೆಳಗ್ಗೆ ಇನ್ನೊಂದು ಮಂಗಳೂರು-ಬೆಂಗಳೂರು ರೈಲು ಆರಂಭವಾದರೆ ಸರಕು ಸಾಗಣೆ ರೈಲು ಓಡಾಟ ಕಡಿತ ಮಾಡಬೇಕಾಗುತ್ತದೆ.
ಶೇ.೧೦೦ರಷ್ಟು ಬ್ರೇಕ್ ಸರಿ ಇದ್ದರೆ ಮಾತ್ರ ರೈಲು ಬಿಡಬೇಕು. ಘಾಟಿ ಇಳಿಯುವಾಗ ೩ ಎಂಜಿನ್‌ಗಳನ್ನು ಮುಂದೆ ಇರಿಸಿದ್ದರೂ ರೈಲು ನಿಯಂತ್ರಣಕ್ಕೆ ಬಾರದಿದ್ದಲ್ಲಿ ನಿಲ್ಲಿಸಲೆಂದು ೨ ನಿಲ್ದಾಣಗಳಲ್ಲಿ ಕ್ಯಾಚ್ ಸ್ಲೈಡಿಂಗ್ ವ್ಯವಸ್ಥೆ ಕಲ್ಪಿಸಲಾಗಿದೆ. ಘಾಟಿಯಲ್ಲಿರುವ ಎಲ್ಲ ನಿಲ್ದಾಣಗಳನ್ನೂ ಇದನ್ನು ನಿರ್ಮಿಸಬೇಕಿದೆ. ಅಕಸ್ಮಾತ್ ರೈಲು ಬ್ರೇಕು ಸರಿಯಾಗಿ ಹಿಡಿಯದೇ ಇದ್ದಲ್ಲಿ ಕ್ಯಾಚ್ ಸ್ಲೈಡಿಂಗ್ ಹಳಿಯಲ್ಲಿ ಹೋಗಿ ಉಸುಕಿನಲ್ಲಿ ಹುಗಿಯುತ್ತದೆ.. ಇದರಿಂದ ಎಂಜಿನ್ ಮತ್ತು ಮೊದಲೆರಡು ಭೋಗಿಗೆ ಕೊಂಚ ಹಾನಿಯಾಗಬಹುದು. ಉಳಿದವುಗಳಿಗೆ ಏನೂ ಹಾನಿಯಿಲ್ಲ.
ಮಂಗಳೂರು- ಬೆಂಗಳೂರು ಮೊದಲ ರೈಲಿನಲ್ಲಿ ಕುಳಿತು ಪ್ರಯಾಣಿಸುತ್ತಿದ್ದರೆ ಒಳಗೊಳಗೇ ಖುಶಿ. ಆಗಾಗ ರೋಮಾಂಚನ. ಜನ ಹಳಿಯುದ್ದಕ್ಕೂ ಅಲ್ಲಲ್ಲಿ ನಿಂತು ರೈಲಿಗೆ ಕೈಬೀಸುತ್ತಿದ್ದರು. ಎಷ್ಟು ವಿಚಿತ್ರ ಅಂದರೆ ಒಂದು ರೈಲೆ ಆರಂಭ ನಮ್ಮನ್ನೆಲ್ಲ ಅದೆಷ್ಟು ಸಂತೋಷಕ್ಕೆ ಈಡುಮಾಡಿದೆ ನೋಡಿ. ರೈಲು ಆರಂಭವಾಗುತ್ತಿದ್ದಂತೆ ನಾವು ರೈಲು ವಿಳಂಬವಾಗಿರುವುದನ್ನು, ಅದರಿಂದ ನಾವು ಪಟ್ಟ ಪಾಡನ್ನು ಮರೆತಿದ್ದೇವೆ. ಒಂದು ಸಾರ್ಥಕ್ಯದ ಭಾವ ಮೂಡಿದೆ. ಆದರೆ ಘಾಟಿಯ ಸೌಂದರ್ಯ ಸವಿಯೇಕೆಂದರೆ ನೀವು ಬೆಳಗ್ಗಿನ ಸಮಯದಲ್ಲಿ ಓಡಾಡುವ ರೈಲು ಬರುವವರೆಗೆ ಕಾಯಲೇಬೇಕು.

Saturday, November 17, 2007

ಮೂರೂರು ಎಂಬ ಸದಾ ಚಟುವಟಿಕೆಯ ಊರು

ಮೂರೂರು ಅಂದರೆ ಅದೇಕೋ ಖುಶಿ. ಹಬ್ಬದ ದಿನಗಳೇ ಇರಲಿ, ಖಾಲಿ ದಿನಗಳೇ ಇರಲಿ ಮೂರೂರು ಸದಾ ಚಟುವಟಿಕೆಯಿಂದ ಕೂಡಿರುತ್ತದೆ. ಈಗ ನಾನು ಮೂರೂರು ಬಿಟ್ಟು ಮೂರ್ ‍ನಾಲ್ಕು ವರ್ಷಗಳೇ ಆಯಿತು. ಆದರೂ ಮೂರೂರು ಮಾತ್ರ ಸದಾ ಅಚ್ಚುಮೆಚ್ಚು.
ಮೊನ್ನೆ ದೀಪಾವಳಿಗೆ ಊರಿಗೆ ಹೋಗಿದ್ದಾಗ ಮೂರೂರಿಗೂ ಹೋಗಿದ್ದೆ. ಮೂರೂರು ಬಸ್ ನಿಲ್ದಾಣದಲ್ಲಿ ಸೋಲ್‌ಗಾಯಿ ಒಡೆಯೋ (ಒಂದು ಸಣ್ಣ ತೆಂಗಿನ ಕಾಯನ್ನು ಇಟ್ಟು, ನಿಗದಿತ ದೂರದಿಂದ ವ್ಯಕ್ತಿಗಳು ಕಲ್ಲುಎಸೆದು ಆ ತೆಂಗಿನ ಕಾಯನ್ನು ಒಡೆಯಬೇಕು. ೫ ರೂ. ನೀಡಿದರೆ ೩ ಕಲ್ಲು. ಆದರಲ್ಲಿ ೧ ಕಲ್ಲು ತಾಗಿಸಿದರೆ ಇನ್ನೊಂದು ಚಾನ್ಸು ಫ್ರೀ.) ಕಾರ್ಯ ನಡೆಯುತ್ತಿತ್ತು. ಈಗ ನನ್ನ ಊರಾದ ಕತಗಾಲದಲ್ಲಿ ಅಂತಹ ಯಾವುದೇ ಚಟುವಟಿಕೆ ಇರಲಿಲ್ಲ. ಬೋರ್ ಬೋರ್. ಮೂರೂರಿನ ಬಸ್ ನಿಲ್ದಾಣದಲ್ಲಿ ದೀಪಾವಳಿಯ ೩ ದಿನವೂ ಸೋಲ್‌ಗಯಿ ಒಡೆಯೋದು ನಡೆಯುತ್ತಲೇ ಇರುತ್ತದೆ. ಅದರ ಜತೆಗೇ ಹಲವು ಮನೆಗಳ ಜನರು ಒಟ್ಟಾಗಿ ತಮ್ಮ ಕೇರಿಯಲ್ಲೇ ಇಂತಹ ಆಟಗಳನ್ನು ಆಡುತ್ತಿರುತ್ತಾರೆ.
ಮೊದಲೆಲ್ಲ (ನಾನು ಸಣ್ಣವನಿದ್ದಾಗ) ದೀಪಾವಳಿಯ ಸಂದರ್ಭದಲ್ಲಿ ಮೂರೂರಿನಲ್ಲಿ ಕಬಡ್ಡಿ ಪಂದ್ಯಾವಳಿಯೇ ನಡೆಯುತ್ತಿತ್ತು. ಆಸುಪಾಸಿನ ಊರಿನ ತಂಡಗಳೆಲ್ಲ ಬರುತ್ತಿದ್ದವು. ಸಾವಿರಾರು ಜನ ಸೇರುತ್ತಿದ್ದರು. ಜಗಳಗಳೂ ಆಗುತ್ತಿದ್ದವು ಎನ್ನಿ. ಆದರೂ ಹಬ್ಬದ ಸಮಯದಲ್ಲಿ ಒಂದಷ್ಟು ಚಟುವಟಿಕೆ, ಮನೋರಂಜನೆ ಇರುತ್ತಿತ್ತು. ಹಾಗಾಗಿಯೇ ದೀಪಾವಳಿ ಬಂತೆಂದರೆ ಖುಶಿ ಖುಶಿ.
ಇನ್ನು ಚೌತಿ ಹಬ್ಬವಾದರೆ ಸಾರ್ವಜನಿಕ ಗಣಪತಿ, ವಾಲಿಬಾಲ್ ಪಂದ್ಯಾವಳಿ ಇರುತ್ತದೆ. ತುಳಸಿ ಐನದ ಸಂದರ್ಭದಲ್ಲಿ ಆಸುಪಾಸಿನ ಮನೆಯವರು ಸೇರಿಯೇ ಪಟಾಕಿ ಹೊಡೆಯುತ್ತಾರೆ. ಇದ್ಯಾವುದೂ ಇಲ್ಲ ಆಂದುಕೊಳ್ಳಿ, ನಾವೆಲ್ಲ ಮೂರೂರು ಹೈಸ್ಕೂಲಲ್ಲೋ, ಗೋಳಿಬೈಲು ಹಕ್ಕಲಿನಲ್ಲೋ (ಮೈದಾನ) ಸೇರಿ ಕ್ರಿಕೆಟ್ ಆಡುತ್ತಿದ್ದೆವು. ಒಂದಲ್ಲ ಒಂದು ಚಟುವಟಿಕೆ ಇದ್ದೇ ಇರುತ್ತಿತ್ತು. ಇದ್ಯಾವುದೂ ಇಲ್ಲದಿದ್ದರೆ ಸಾರಾಯಿ ಕುಡಿದು ಗಲಾಟೆ ಮಾಡುವುದನ್ನಾದರೂ ನೋಡಬಹುದಿತ್ತು.
ಹೀಗಾಗಿಯೇ ನನಗೆ ಮೂರೂರು ಅಚ್ಚುಮೆಚ್ಚು. ಇಂದಿಗೂ. ಕೆಲಸಕ್ಕೆ ರಜೆ ಹಾಕಿ ಊರಿಗೆ ಹೋದಾಗ ಒಮ್ಮೆಯಾದರೂ ಮೂರೂರಿಗೆ ಹೋಗದೇ ಇದ್ದರೆ ಮನಸಿಗ್ಯಾಕೋ ಕಿರಿಕಿರಿ.
ದೇಹ ಮಾತ್ರ ಮೂರೂರು ಬಿಟ್ಟು ಕತಗಾಲಕ್ಕೆ ತೆರಳಿದೆ. ಮನಸಿನ್ನೂ ಮೂರೂರಲ್ಲೇ ಇದೆ. ಎಷ್ಟಾದರೂ ಹುಟ್ಟಿ ಬೆಳೆದ ಊರಲ್ಲವೇ? ಆದಕ್ಕೇ ಊರು ಬಿಟ್ಟರೂ ನನ್ನ ಹೆಸರಿನೊಂದಿಗೆ ವಿನಾಯಕ ಭಟ್ಟ ಮೂರೂರು ಎಂದು ಊರು ಇನ್ನೂ ಉಳಿದುಕೊಂಡಿದೆ.

Sunday, October 28, 2007

ರಾಮನೇ ಇಲ್ಲ ಎಂದುಬಿಟ್ಟರೆ...

‘ದೇವರೆ ಅಗಾಧ ನಿನ್ನ ಕರುಣೆಯ ಕಡಲು
ನನಗೆ ಸಾಧ್ಯವೇ ಅದರ ಆಳ ಅಳೆಯಲು’ ಎಂಬ ಹಾಡಿನಲ್ಲಿ...
‘ತಾಮಸಕ್ಕೆ ಬಲವ ಕೊಟ್ಟೆ, ರಾಜಸಕ್ಕೆ ಫಲವ ಕೊಟ್ಟೆ,
ಸತ್ವಕೆ ಶಂಢತ್ವ ಕೊಟ್ಟೆ, ತತ್ವ ಗೊಣಗಲುಕ
ಯ್ಯ ಕೊಟ್ಟೆ ಕೆಡವೆಂಲೆಂದು, ಕಾಲು ಕೊಟ್ಟೆ ಎಡವಲೆಂದು
ಬುದ್ದಿಕೊಟ್ಟೆ ನಿನ್ನನೇ ಅಲ್ಲಗಳೆಯಲು...’
ಎಂದು ಕವಿ ಬಿ.ಆರ್. ಲಕ್ಷಣ ರಾವ್ ಬರೆದಿದ್ದಾರೆ. ಕರುಣಾನಿಧಿಯಂಥ ಜನರ ಕುರಿತೇ ಬರೆದಂತಿಗೆ ಈ ಸಾಲುಗಳು.
ಹಿಂದೂ ಧರ್ಮದಷ್ಟು ವ್ಯಕ್ತಿ ಸ್ವಾತಂತ್ರ್ಯ ನೀಡಿದ ಧರ್ಮ ಇನ್ನೊಂದಿಲ್ಲ. ನೀನು ದೇವಸ್ಥಾನಕ್ಕೆ ಬಾ-ಬಾರದಿರು, ಪೂಜೆ ಮಾಡಿಸು- ಮಾಡಿಸದಿರು, ಕುಂಕುಮ ಹಚ್ಚು-ಹಚ್ಚದಿರು ಹಿಂದೂ ಧರ್ಮ ಕೇಳುವುದಿಲ್ಲ. ದಿನಕ್ಕಿಷ್ಟೇ ಬಾರಿ, ಹೀಗೇ ದೇವರಿಗೆ ಕೈ ಮುಗಿ ಎಂದೂ ಹಿಂದೂ ಧರ್ಮ ಆರ್ಡರ್ ಮಾಡುವುದಿಲ್ಲ. ಹಾಗೆ ಮಾಡದಿದ್ದರೆ ನೀನು ಧರ್ಮಭ್ರಷ್ಟ ಎಂದು ಹಿಂದೂ ಧರ್ಮ ಹೆದರಿಸುವುದಿಲ್ಲ. ಕಾಶಿಗೆ ಹೋದರೆ ಮಾತ್ರ ಮೋಕ್ಷ ಎಂದು ಹೇಳುವುದಿಲ್ಲ. ಕಾಶಿಗೆ ಹೋಗುವುದು ಅಸಧ್ಯವಾ? ದಕ್ಷಿಣದ ಕಾಶಿಯೆಂದು ಹತ್ತಿರದಲ್ಲಿ ಗೋಕರ್ಣವನ್ನು ಇಟ್ಟಿದೆ ಹಿಂದೂ ಧರ್ಮ. ಹೀಗಾಗಿಯೇ...
‘ನೂರು ದೇವರನೆಲ್ಲ ನೂಕಾಚೆ ದೂರ
ಭಾರತಾಂಬೆಯೇ ದೇವಿ ನಮಗಿಂದು
ಪೂಜಿಸುವಾ ಬಾರಾ ಬಾರಾ
ಶತಮಾನಗಳು ಬರಿಯ ಜಡಶಿಲೆಯ ಪೂಜಿಸಾಯ್ತು,
ಹಾವ್ಗಳಿಗೆ ಹಾಲೆರೆದು ಪೋಷಿಸಾಯ್ತು,
ಬಿಸಲು ಮಳೆ-ಗಾಳಿ ಬೆಂಕಿಯನೆಲ್ಲ ಬೇಡಿಯಾಯ್ತು,
ದಾಸರನು ಪೂಜಿಸಿಯೇ ದಾಸ್ಯವಾಯ್ತು’
ಎಂದು ಹಾಡಿದವರನ್ನೂ ಹಿಂದೂ ಧರ್ಮ ತರಾಟೆಗೆ ತೆಗೆದುಕೊಂಡಿಲ್ಲ. ಧರ್ಮದಿಂದ ಹೊರಹಾಕಿಲ್ಲ.
ನಿಮ್ಮ ಧರ್ಮವನ್ನು, ದೈವ ಭಕ್ತಿಯನ್ನು ನಿನಗಿಷ್ಟ ಬಂದ ರೀತಿಯಲ್ಲಿ, ನಿಮಗೆ ಸಾಧ್ಯವಾದ ರೀತಿಯಲ್ಲಿ ಆಚರಿಸು. ದೇಶವನ್ನೇ ಬೇಕಾದರೂ ದೇವರೆಂದು ಪೂಜಿಸು. ಅದರಿಂದ ನಿನ್ನ ಮನಸ್ಸಿಗೆ ಶಾಂತಿ ದೊರೆತರಾಯಿತು ಎನ್ನುತ್ತದೆ ಹಿಂದೂ ಧರ್ಮ. ಆದರೆ ಒಬ್ಬ ಕ್ರೈಸ್ಥ ಯುವಕ ಒಂದು ಭಾನುವಾರ ಚರ್ಚ್‌ಗೆ ಹೋಗದಿದ್ದರೆ, ಚರ್ಚಿನವರು ನೇಮಿಸಿದ ವ್ಯಕ್ತಿ ಆತನ ಮನೆಗೆ ಬರುತ್ತಾನೆ. ಚರ್ಚಿಗೆ ತಪ್ಪಿಸದೆ ಬರುವಂತೆ ಸೂಚಿಸುತ್ತಾನೆ. ಮತ್ತೆ ತಪ್ಪಿಸಿದರೆ ದಂಡ ಹಾಕುತ್ತಾನೆ. ಮುಸ್ಲಿಮರ ಧರ್ಮ ಒಂದೇ ಮಾತರಂ ಹಾಡುವುದನ್ನೂ ವಿರೋಧಿಸುತ್ತದೆ! ಸಲ್ಮಾನ್ ಖಾನ್ ಕುಟುಂಬ ಸಮೇತ ಗಣಪತಿ ಪೂಜೆ ಮಾಡಿದ ಎಂಬ ಕಾರಣಕ್ಕೆ ಆತನನ್ನು ಧರ್ಮದಿಂದ ಹೊರಹಾಕುವಂತೆ ಫತ್ವಾ ಹೊರಡಿಸುವ ಅಧಿಕಾರವನ್ನು ಮುಸ್ಲಿಂ ಧರ್ಮ ಕೆಲವರಿಗೆ ನೀಡುತ್ತದೆ. ಹೀಗಿರುವಾಗ ಅವರೆಲ್ಲ ಧರ್ಮದ ವಿರುದ್ಧ ಮಾತಾಡುವುದು ದೂರವೇ ಉಳಿಯಿತು.
ಚರ್ಚ್‌ಗೆ ಅಥವಾ ಮಸೀದಿಗೆ ಹೋದ ಕಾರಣಕ್ಕೆ ಧರ್ಮದಿಂದ ಹೊರ ಹಾಕಿಸಿಕೊಂಡವರಂತೆ ಅಥವಾ ಹೆದರಿಕೊಂಡವರಂತೆ ದೇವಸ್ಥಾನಕ್ಕೆ ಹೋಗದೆ ಹೆದರಿದ ಒಬ್ಬ ಹಿಂದುವೂ ಸಿಗುವುದಿಲ್ಲ. ಇಂತಹ ಉದಾತ್ತ ಧರ್ಮವನ್ನು ಗೌರವಿಸುವ ಬದಲು ಅದೇ ಧರ್ಮ ನೀಡಿದ ಸ್ವಾತಂತ್ರ್ಯವನ್ನು ದುರ್ಬಳಕೆ ಮಾಡಿಕೊಂಡು ಧರ್ಮವನ್ನು ನಿಂದಿಸುವವರೇ ಹೆಚ್ಚು.
ತಮಿಳುನಾಡು ಮುಖ್ಯಮಂತ್ರಿ ಕರುಣಾನಿಧಿ ರಾಮನೇ ಇಲ್ಲ, ಆತ ಮಹಾ ಕುಡುಕ ಎಂದು ಹೇಳಿಕೆ ನೀಡಿದಾಗ ನನ್ನಷ್ಟಕ್ಕೆ ಬರೆದಿಟ್ಟಿದ್ದೆ. ಈಗ ಬ್ಲಾಗಿಸುತ್ತಿದ್ದೇನೆ.
ರಾಮ ಕೇವಲ ಐತಿಹಾಸಿಕ ವ್ಯಕ್ತಿಯಲ್ಲ. ಆತ ಕೇವಲ ಕತೆಯ ನಾಯಕನೂ ಅಲ್ಲ. ವಾಲ್ಮೀಕಿ ರಚಿತ ರಾಮಾಯಣದ ಪಾತ್ರ ಮಾತ್ರವಂತೂ ಖಂಡಿತ ಅಲ್ಲ.ರಾಮ ಹಿಂದೂ ಸಮಾಜದ ಅಷ್ಟೇ ಅಲ್ಲ ಒಬ್ಬ ವ್ಯಕ್ತಿ ಹೇಗಿರಬೇಕೆಂಬುದಕ್ಕೆ ಆದರ್ಶ. ಸಮಾಜದ ಸ್ವಾಸ್ಥ್ಯಕ್ಕೊಂದು ಭದ್ರ ಅಡಿಪಾಯ. ಹಾಗಾಗಿ ರಾಮನ ಅಸ್ತಿತ್ವವೆಂದರೆ ಅದು ಹಿಂದೂ ಸಮಾಜದ ಪ್ರತಿಯೊಬ್ಬನ ಅಸ್ತಿತ್ವ.ನೆನಪು ಮಾಡಿಕೊಳ್ಳಿ... ಚಿಕ್ಕಂದಿನಲ್ಲಿ ಆಲಿಸಿದ ರಾಮಾಯಣ, ಕಣ್ಣಲ್ಲಿ ನೀರುಕ್ಕಿಸಿದ ಪುಣ್ಯಕೋಟಿ ಗೋವಿನ ಕತೆ, ಸತ್ಯ ಹರಿಶ್ಚಂದ್ರನ ಕತೆ ಇವೆಲ್ಲ ನಮ್ಮ ಜೀವನದ ಮೇಲೆ, ನಮ್ಮ ವ್ಯಕ್ತಿತ್ವದ ಮೇಲೆ ಅದೆಂತಹ ಪರಿಣಾಮ ಬೀರಿವೆ. ಕೊಟ್ಟ ಮಾತಿಗೆ ತಪ್ಪದಿರುವುದನ್ನು ಪುಣ್ಯಕೋಟಿ ಕತೆಯಿಂದ, ಕಷ್ಟ ಬಂದರೂ ಪರವಾಗಿಲ್ಲ ಸತ್ಯ ಹೇಳಬೇಕಂಬುದನ್ನು ಸತ್ಯ ಹರಿಶ್ಚಂದ್ರನ ಕತೆಯಿಂದ, ಒಬ್ಬ ಆದರ್ಶ ವ್ಯಕ್ತಿ ಹೇಗಿರಬೇಕೆಂಬುದನ್ನು ರಾಮನಿಂದ, ಯಾವುದು ಮಾಡಿದರೆ ತಪ್ಪು ಮತ್ತು ಹಾಗೆ ಮಾಡಿದರೆ ಏನಾಗುತ್ತದೆಂಬುದನ್ನು ರಾವಣನಿಂದ ಕಲಿತವರು ನಾವು.
ಯಾವ ವ್ಯಕ್ತಿಯೂ ಕರುಣಾನಿಧಿಯನ್ನು, ವಾಜಪೇಯಿ, ಮನಮೋಹನ ಸಿಂಗರನ್ನು, ಗಾಂಧಿ ಕುಟುಂಬವನ್ನು ಆದರ್ಶವಾಗಿಸಿಕೊಂಡು ಬೆಳೆದಿಲ್ಲ. ಮಹಾತ್ಮಾಗಾಂಧಿ ಸೇರಿದಂತೆ ಇವರೆಲ್ಲ ಬರುವುದು ರಾಜಕೀಯ ಬುದ್ದಿಯ ಮಂದಿ ರಚಿಸಿದ ಇತಿಹಾಸ ಓದಲು ಆರಂಭಿಸಿದ ನಂತರ. ಆದರೆ ಆರಂಭದಲ್ಲಿ ಅಚ್ಚೊತ್ತುವುದು ಕತೆಗಳಲ್ಲಿನ ಆದರ್ಶಗಳೇ. ಅವುಗಳೇ ನಮ್ಮ ಜೀವನವನ್ನು, ವ್ಯಕ್ತಿತ್ವವನ್ನು ರೂಪಿಸುತ್ತವೆ.
ಇಂದಿಗೂ ಹನುಮನಿಗೆ ಗೌರವ ಸಿಗುವುದು ರಾಮಯಣದಿಂದ. ಮನೆಯ ಸುತ್ತಮುತ್ತ ಓಡಾಡಿಕೊಂಡಿರುವ ಇಣಚಿಯನ್ನು ಒಬ್ಬ ವ್ಯಕ್ತಿಯೂ ಇಂದಿಗೂ ಹೊಡೆದು ಕೊಲ್ಲುವುದಿಲ್ಲ. ಅದೆಷ್ಟು ಲೂಟಿ ಮಾಡಿದರೂ. ರಾಮಾಯಣದಲ್ಲಿ ರಾಮೇಶ್ವರದಿಂದ ಶ್ರೀಲಂಕಾಕ್ಕೆ (ಆಗಿನ ಲಂಕೆಗೆ) ಸೇತುವೆ (ಈಗ ವಿವಾದಕ್ಕೆ ತುತ್ತಾಗಿರುವ ರಾಮಸೇತು) ನಿರ್ಮಾಣ ಮಾಡುವಾಗ ಅಳಿಲು ಚಿಕ್ಕ ಸೇವೆ (ಅಳಿಲು ಸೇವೆ ಎಂಬ ಮಾತು ಇಂದಿಗೂ ಜಾರಿಯಲ್ಲಿದೆ) ಸಲ್ಲಿಸಿತು. ಇದರಿಂದ ಸಂತೋಷಗೊಂಡ ರಾಮ ಅದರ ಬೆನ್ನ ಮೇಲೆ ಕೈಯಿಂದ ತಡವಿದ. ಅದು ಮೂರು ಚಿನ್ನದ ಗೆರೆಗಳಾಗಿ ಮೂಡಿದವು ಎನ್ನುತ್ತದೆ ಕತೆ. ಇಂದಿಗೂ ಇಣಚಿಯ ಬೆನ್ನ ಮೇಲೆ ಮೂರು ಗೆರೆ ಇರುವುದನ್ನು ನಾವು ಕಾಣಬಹುದು. ಅದರಿಂದಾಗಿಯೇ ಯಾರೂ ಇಣಚಿಯನ್ನು ಹೊಡೆದು ಕೊಲ್ಲುವುದಿಲ್ಲ. ಅಷ್ಟರಮಟ್ಟಿಗೆ ರಮಾಯಣ ನಮ್ಮ ಮೇಲೆ, ನಮ್ಮ ವರ್ತನೆಗಳ ಮೇಲೆ ಪರಿಣಾಮ ಬೀರಿದೆ.
ರಾಮಾಯಣ ಹಾಗೂ ನಮ್ಮ ಇತರ ಕತೆಗಳ ಇನ್ನೊಂದು ಮುಖ್ಯ ಅಂಶ ಅಂತಿಮವಾಗಿ ಸತ್ಯಕ್ಕೆ, ಒಳ್ಳೆಯವರಿಗೆ ಜಯವಾಗುತ್ತದೆ ಎಂಬ ಸಂದೇಶ. ಇದು ಅತ್ಯಂತ ಮುಖ್ಯ. ಕಷ್ಟಗಳು ಎಷ್ಟು ಬಂದರೂ ಅಂತಿಮವಾಗಿ ಒಳ್ಳೆಯವರಿಗೆ, ಸತ್ಯವಂತರಿಗೆ ಜಯ ದೊರೆಯುತ್ತದೆ. ಮುದೊಂದು ದಿನ ಸುಖ ಬಂದೇ ಬರುತ್ತದೆ ಎಂಬ ನಂಬಿಕೆಯನ್ನು ಮೂಡಿಸುತ್ತವೆ. ಇದರಿಂದಾಗಿಯೇ ಬಹುತೇಕ ಜನ ಕಷ್ಟಗಳ ನಡುವೆಯೂ ಮುಂದೊಂದು ದಿನದ ಸುಖ ಎದುರು ನೋಡುತ್ತ ಜೀವನ ನಡೆಸುತ್ತಿದ್ದಾರೆ. ನಮ್ಮಲ್ಲಿ ಇಂತಹ ಆಶಾವಾದ ಬೆಳೆಸಿದ್ದು ನಮ್ಮ ಪುರಾಣಗಳ ದೊಡ್ಡ ಸಾಧನೆ.ಮುಂದೊಂದು ದಿನ ಸುಖ ಬರುತ್ತದೆ ಎಂಬ ಕಾರಣಕ್ಕೆ ಇಂದು ಸತ್ಯದ, ಸನ್ಮಾರ್ಗದಲ್ಲಿ ನಡೆಯುತ್ತಿದ್ದಾರೆ. ಈಗ ಇದ್ದಕ್ಕಿದ್ದಂತೆ ರಾಮಾಯಣ ಇಲ್ಲ. ರಾಮ ಇದ್ದಿದ್ದೇ ಸುಳ್ಳು. ಪುಣ್ಯಕೋಟಿ ಎಂಬ ಪುಣ್ಯಕೋಟಿ ಗೋವು ಕೇವಲ ಕಟ್ಟು ಕತೆ. ಸತ್ಯ ಹರಿಶ್ಚಂದ್ರ ಇದ್ದಿದ್ದೇ ಸುಳ್ಳು ಎಂದುಬಿಟ್ಟರೆ...
ಹೇಗಾಗಬೇಡ ಅದನ್ನು ನಂಬಿಕೊಂಡವರಿಗೆ. ಅದನ್ನು ನಂಬಿಕೊಂಡೇ ಜೀವನ ನಡೆಸುತ್ತಿರುವ ನಮ್ಮಂಥವರಿಗೆ? ಅವೆಲ್ಲ ಸತ್ಯವೋ ಸುಳ್ಳೋ ಎಂಬ ತರ್ಕಕ್ಕಿಂತ ಒಂದೊಮ್ಮೆ ಇಂತಹ ವಿಷಯಗಳು ನಮಗೆ ಚಿಕ್ಕಂದಿನಲ್ಲಿ ಮನಸಿಗೆ ನಾಟದೇ ಹೋಗಿದ್ದರೆ ನಾವೆಂತಹ ವ್ಯಕ್ತಿಗಳಾಗಿರುತ್ತೆದ್ದೆವು. ಸಮಾಜದಲ್ಲಿ ಅದ್ಯಾವ ಸ್ಥಿತಿ, ಅನೈತಿಕತೆ ನೆಲೆಸಿರುತ್ತಿತ್ತು?ಕರುಣಾನಿಧಿ ನೆಪ ಮಾತ್ರ. ಅಂತಹ ಬೇಕಾದಷ್ಟು ವ್ಯಕ್ತಿಗಳಿದ್ದಾರೆ. ಅವರಿಗೆ ಹಿಂದೂ ಧರ್ಮವನ್ನು ಹಿಯಾಳಿಸುವುದು, ಅದನ್ನು ಸುಳ್ಳೆಂದು ಜರೆಯುವುದು ದೊಡ್ಡ ಹಾಬಿ. ಅದೇ ವ್ಯಕ್ತಿ ಮುಸ್ಲಿಂ ಮತ್ತು ಕ್ರೈಸ್ಥ ಧರ್ಮದ ಬಗ್ಗೆ ಮಾತಾಡಲಾರ. ಅದೇ ವ್ಯಕ್ತಿ ಮುಸ್ಲಿಮರ ಉಪವಾಸ ಅಂತ್ಯಗೊಳ್ಳುವ ದಿನ ಇಫ್ತಾರ್ ಕೂಟದಲ್ಲಿ ಬಿಳಿ ಟೋಪಿ ಹಾಕಿಕೊಂಡು ಬಿರ್ಯಾನಿ ಮೆದ್ದು ಬರುತ್ತಾನೆ ಆದರೆ ಗಣಪತಿ ಹಬ್ಬ ಆಚರಿಸಿದೇ ಜಾತ್ಯಾತೀತತೆ ಮೆರೆಯುತ್ತಾನೆ.

Friday, October 26, 2007

ಸಿಎಂ ಚಪ್ಲಿ

ಇದು ಧರ್ಮಸಿಂಗ್ ಅವ್ರು ಸಿಎಂ ಆಗಿದ್ದಾಗ ಮಂಗಳೂರಿನ ಕುದ್ರೋಳಿ ದೇವಸ್ಥಾನಕ್ಕೆ ಬಂದಾಗ ನಡೆದ ಘಟನೆ. ಧರ್ಮಸಿಂಗ್ ಅವರು ದೇವಸ್ಥಾನದ ಒಳಗೆ ಹೋಗುವಾಗ ಹೊರಗೆ ಚಪ್ಪಲಿ ತೆಗೆದಿಟ್ಟಿದ್ದರು. ಎಷ್ಟೋ ದೇವಸ್ಥಾನದಲ್ಲಿ ದಿನವೂ ಭಕ್ತರ ಚಪ್ಪಲಿಗಳು ಕಳವಾಗುತ್ತಲೇ ಇರುತ್ತವೆ. ಅದ್ಯಾವುದೂ ಸುದ್ದಿಯಾಗಲ್ಲ. ಅಟ್ಲೀಸ್ಟ್ ಪೊಲೀಸರಿಗೆ ಮಾಹಿತಿನೂ ಹೋಗಲ್ಲ. ಆದರೆ ಸಿಎಂ ಚಪ್ಲಿ ಕಳವಾದ್ರೆ ಮಾತ್ರ ಅದು ಸುದ್ದಿ.
ಧರಂ ಅವ್ರು ಚಪ್ಪಲಿ ಕಾಣ್ದೆ ಗರಂ ಆಗಿಬಿಟ್ರೆ? ಅವರು ಕುದ್ರೋಳಿ ಬಂದಿದ್ದಾಗ ಒಮ್ಮೆ ಹೀಗೆ ಆಯ್ತು...
ಧರ್ಮಸಿಂಗ್ ಅವರು ದೇವರ ದರ್ಶನ ಮಾಡಿ ಹೊರಬಂದು ಪಕ್ಕದಲ್ಲಿರುವ ಕಲ್ಯಾಣ ಮಂಟಪ ನೋಡಲು ಹೋದರು. ದೇವಸ್ಥಾನದ ಎದುರಲ್ಲಿದ್ದ ಚಪ್ಪಲಿ ನೋಡಿಕೊಳ್ಳುವಂತೆ ಅವರ ಅಂಗರಕ್ಷಕನಿಗೆ ಸೂಚಿಸಲಾಗಿತ್ತು. ಆತ ಅದನ್ನು ಇನ್ನೊಬ್ಬ ಪೊಲೀಸ್ ಕಾನ್‌ಸ್ಟೇಬಲ್‌ಗೆ ವಹಿಸಿ ತಾನೂ ದೇವಸ್ಥಾನದ ಒಳಗೆ ಹೋಗಿದ್ದ. ಸಿಎಂ ಅವ್ರು ಕಲ್ಯಾಣ ಮಂಟಪಕ್ಕೆ ಹೋದಾಗ ಅಲ್ಲಿಗೇ ಅವರ ಚಪ್ಪಲಿ ತರುವಂತೆ ಹೇಳಲಾಯಿತು. ಇದು ಅಂಗರಕ್ಷಕನಿಗೆ ಗೊತ್ತಿರಲಿಲ್ಲ. ಆತ ಬಂದು ದೇವಸ್ಥಾನದ ಎದುರು ಹುಡುಕುತ್ತಾನೆ ಚಪ್ಪಲಿ ನಾಪತ್ತೆ!
ಅಂಗರಕ್ಷಕ ಒಮ್ಮೆ ಕಂಗಾಲಾದ. ತನ್ನ ರಕ್ಷಣೆಗೆ ಬರೋರ್ಯಾರಾದರೂ ಇದ್ದಾರಾ ಎಂದು ಹುಡುಕಿದ. ಕಂಡಿದ್ದು ಪೊಲೀಸರು. ತಕ್ಷಣ ಅವರಿಗೆ ವಿಷಯ ತಿಳಿಸಿದ. ಒಬ್ಬರ ಕಿವಿಯಿಂದ ಒಬ್ಬರ ಕಿವಿಗೆ ತಲುಪಿತು ಸಿಎಂ ಚಪ್ಲಿ ಕಳವಾದ ವಿಷಯ. ಕೋಲಾಹಲ. ನಗರದಲ್ಲಿ ದೊಡ್ಡ ಕಳ್ಳತನ ಆದರೂ ನಮ್ಮ ಪೊಲೀಸರಿಗಾಗದಷ್ಟು ತಲೆಬಿಸಿ ಸಿಎಂ ಚಪ್ಲಿ ಕಳವಾದ್ರೆ ಆಗುತ್ತೆ.
ಎಲ್ಲರೂ ಟೆನ್ಶನ್‌ನಲ್ಲಿ ಸಿಎಂ ಚಪ್ಲಿ ಹುಡುಕಿದ್ದೇ ಹುಡುಕಿದ್ದು. ಅಷ್ಟರಲ್ಲಿ ಅಲ್ಲೇ ಇದ್ದ ಪೊಲೀಸ್ ಅಧಿಕಾರಿಯೊಬ್ಬರು ತಮ್ಮ ಹಿರಿಯ ಅಧಿಕಾರಿ ಬಳಿ "ಸರ್ ಸಿಎಂ ಅವ್ರ ಚಪ್ಲಿ ಕಾಣ್ತಾ ಇಲ್ವಂತೆ. ಬೇಕಾದ್ರೆ ಹೇಳಿ ಸಾರ್ ಹೊಸ ಚಪ್ಲಿ ತಂದ್ಬಿಡ್ತೀನಿ. ಸುಮ್ನೆ ಟೆನ್ಶನ್ ಯಾಕೆ? ಸೈಝ್ ಹೇಗೂ ಗೊತ್ತಿದೆ’ ಅಂತ್ಲೂ ಸಲಹೆ ಕೊಟ್ರು!
ಆದ್ರೆ ಕಾನ್‌ಸ್ಟೇಬಲ್ ಬಳಿ ಸಿಎಂ ಚಪ್ಲಿ ಇರುವುದು ಆ ಹಿರಿಯ ಪೊಲೀಸ್ ಅಧಿಕಾರಿಗೆ ಗೊತ್ತಿತ್ತು. ಹಾಗಾಗಿ ಅವ್ರು ಹೊಸ ಚಪ್ಲಿ ಎಲ್ಲ ತರೋದೇನು ಬೇಡ ವಾಯರ್‌ಲೆಸ್‌ನಲ್ಲಿ ಚಪ್ಲಿ ಹಿಡ್ಕೊಂಡಿರೋ ಕಾನ್‌ಸ್ಟೇಬಲ್‌ಗೆ ಕಲ್ಯಾಣ ಮಂಟಪದ ಎದ್ರು ಬರಲು ಹೇಳಿ ಸಾಕು ಅಂದ್ರಂತೆ. ಆಗ ಪೊಲೀಸರಿಗೆ, ಅಂಗರಕ್ಷಕನಿಗೆ ಹೋದ ಜೀವ ಬಂದಂತಾಯ್ತು. ಹೀಗೆ ಸಿಎಂ ಚಪ್ಲಿ ಕಳವು ಎಂಬ ಗಂಭೀರ ಪ್ರಕರಣ ತಿಳಿ ಹಾಸ್ಯದಲ್ಲಿ ಮುಗಿದಿತ್ತು.

Monday, October 01, 2007

ಕಾವಲು ನಾಯಿ ಕಳವು!



ನಾಯಿಗೆ ಇನ್ನೊಂದು ಹೆಸರೇ ಕಾವಲು ನಾಯಿ. ನಂಬಿಕೆಯನ್ನೂ ಕೆಲವೊಮ್ಮೆ ನಾಯಿಗೆ ಹೋಲಿಸೋದಿದೆ. ಮನೆ ಮತ್ತು ಮಂದಿಯನ್ನು ಕಾಯೋದೇ ಅದರ ಡ್ಯೂಟಿ. ಮನೆಗೆ ಕಳ್ಳ ಬಂದರೆ ಕೂಗಲಿ ಅಂತ ನಾಯಿ ಸಾಕುವವರೇ ಹೆಚ್ಚು. ಕೆಲವರ ಮನೆಯ ನಾಯಿಯ ಸೈಜು ನೋಡಿದರೆ ಕಳ್ಳ ಕೂಗಿಕೊಳ್ಳುವ ಸಾಧ್ಯತೆಗಳೂ ಹೆಚ್ಚಿವೆ!

ಎಷ್ಟೋ ಬಾರಿ ಕಳ್ಳತನಗಳು ನಡೆಯುವಾಗ ಕಳ್ಳನ ಪತ್ತೆಗೆ ಪೊಲೀಸರು ನಾಯಿ ಕರೆಸುತ್ತಾರೆ. ಮನುಷ್ಯರಿಗಿಂತ ನಾಯಿಯ ಸುಳಿವಿನ ಬಗ್ಗೆ ಹೆಚ್ಚು ನಂಬಿಕೆ. ಕೆಲವು ಸಾರಿ ಕಳ್ಳತನ ಆಗದಿರಲು ನಾಯಿ ಸಾಕಿ ಎಂದು ಪೊಲೀಸರೇ ಸಲಹೆ ನೀಡೋದೂ ಇದೆ. ಅಶ್ಟಕ್ಕೆ ಸುಮ್ಮನಾಗದೆ ಪೊಲೀಸರೇ ನಾಯಿ ಮರಿ ಕೂಡ ತಂದುಕೊಟ್ಟ ಉದಾಹರಣೆಗಳಿವೆ.

ಆದರೆ ನಾಯಿಯೇ ಕಳುವಾದರೆ?

ಹೌದು. ಮಂಗಳೂರಿನಲ್ಲೊಂದು ಇಂತಹ ಪ್ರಕರಣ ನಡೆದಿದೆ. ಬರೀ ಕಳವಾಗಿದ್ದರೆ ನನಗೆ ಗೊತ್ತಾಗುತ್ತಿರಲಿಲ್ಲವೇನೊ. ಕಳವಾದ ನಾಯಿ ಹುಡುಕುವ ಕಾರ್ಯ ಪೊಲೀಸರ ಪಾಲಿಗೆ ಬಂದಿತ್ತು. ಅವರ ಮೂಲಕ ನನ್ನ ಕಿವಿಗೂ ಬಿತ್ತು.

ತಮ್ಮ ಮನೆಯಲ್ಲಿದ್ದ ಏಳೂವರೆ ವರ್ಷದ ಬಾಕ್ಸರ್ ನಾಯಿ ೨೦೦೫ರ ಆ.೧೭ರಂದು ಕಳವಾಗಿತ್ತು. ಅದನ್ನು ಹುಡುಕಿಕೊಡುವಂತೆ ಮಂಗಳೂರಿನ ಬಲ್ಮಠ ನಿವಾಸಿ ಪ್ಯಾಟ್ರಿಕ್ ಸಲ್ಡಾನಾ ಅವರು ಕದ್ರಿ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಈ ನಾಯಿ ೨೦೦೨ರ ನಾಯಿ ಸ್ಪರ್ಧೆಯಲ್ಲಿ ಉತ್ತಮ ಥಳಿಯ ನಾಯಿ ಪ್ರಶಸ್ತಿ ಪಡೆದಿತ್ತು. ಬಾಕ್ಸರ್ ಥಳಿಯಲ್ಲಿ ಮಂಗಳೂರಿನಲ್ಲಿದ್ದ ಏಕೈಕ ಗಂಡು ನಾಯಿ ಎಂಬ ಹೆಗ್ಗಳಿಕೆಯೂ ಇದಕ್ಕಿತ್ತು! ಎಂದೂ ಅವರು ದೂರಿನಲ್ಲಿ ತಿಳಿಸಿದ್ದರು.

ಈ ದೂರು ದಾಖಲಾದ ನಂತರ ಕದ್ರಿ ಪೊಲೀಸರು ಕಂಡ ಕಂಡ ನಾಯಿಯನ್ನೆಲ್ಲ ಪರೀಕ್ಷಿಸಿ ನೋಡುತ್ತಿದ್ದಾರೆ. ಕೆಲವು ಬಾರಿ ಬಾಲ ಎತ್ತಿ!? ಎರಡು ವರ್ಷ ಕಳೆದರೂ ನಾಯಿ ಪತ್ತೆಯಾಗಿಲ್ಲ. ಪೊಲೀಸ್ ಇಲಾಖೆಯಲ್ಲಿ ಅಪರಾಧ ಪತ್ತೆ ದಳ, ರೌಡಿ ನಿಗ್ರಹ ದಳ, ಬಾಂಬ್ ಪತ್ತೆ ದಳ ಹೀಗೆ ಬೇರೆ ಬೇರೆ ದಳಗಳಿವೆ. ಶ್ವಾನ ದಳವೂ ಇದೆ. ಆದರೆ ಶ್ವಾನ ಪತ್ತೆ ದಳ ಎಂಬುದು ಇನ್ನೂ ರಚನೆಯಾಗಿಲ್ಲ. ಕದ್ರಿ ಪೊಲೀಸರಿಗೆ ಬೇಕಾದಷ್ಟು ಕೆಲಸಗಳಿವೆ. ಅದರಿಂದಾಗಿ ನಾಯಿಯ ವಾಸನೆ ಹಿಡಿದು ಹೊಗಲು ಸಾಧ್ಯವಾಗಿಲ್ಲ. ನಾಯಿ ಪತ್ತೆ ದಳ ಎಂಬುದೊಂದು ಇದ್ದರೆ ಅದಕ್ಕೆ ಈ ಪ್ರಕರಣ ವಹಿಸಿಕೊಟ್ಟು ಸುಮ್ಮನಾಗಬಹುದಿತ್ತು. ನಾಯಿ ಪತ್ತೆ ದಳ ಇಲ್ಲದ ಕಾರಣ ಕಳವಾದ ನಾಯಿ ಪತ್ತೆ ಅಸಾಧ್ಯವಾಗಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ. ಆದರೂ ಶ್ವಾನ ದಳದ (ಅಂದರೆ ಹೆಣ್ಣು ನಾಯಿಯ) ಸಹಾಯ ಬಳಸಿಕೊಂಡು ಕಳವಾಗಿರುವ ಅಥವಾ ನಾಪತ್ತೆಯಾಗಿರುವ ಮಂಗಳೂರಿನ ಏಕೈಕ ಗಂಡು ಬಾಕ್ಸರ್ ನಾಯಿಯನ್ನು ಹುಡುಕಲು ಪೊಲೀಸರು ತಂತ್ರ ರೂಪಿಸುವ ಸಾಧ್ಯತೆಗಳಿವೆ. ಈ ಬಗ್ಗೆ ಪೊಲೀಸರು ಕಾನೂನು ಸಲಹೆ ಕೇಳಲು ತೀರ್ಮಾನಿಸಿದ್ದಾರಂತೆ!

ಅದೇನೇ ಇರಲಿ ಕಳವಾದ ಬಾಕ್ಸರ್ ನಾಯಿ ಯಾವುದಾದರೂ ಹೆಣ್ಣು ನಾಯಿಯ ಜತೆಗೆ ಬಂದು ನಿಮ್ಮ ಮನೆ ಹಿತ್ತಲಲ್ಲೇನಾದರೂ ಮಲಗಿದ್ದರೆ, ಅಥವಾ ನೀವೇ ಅದನ್ನು ಇಟ್ಟುಕೊಂಡಿದ್ದರೆ ಅದನ್ನು ಪೊಲೀಸರಿಗೆ ಕೊಟ್ಟುಬಿಡಿ.

ಇಷ್ಟಕ್ಕೂ ಇದು ಸತ್ಯಕತೆ. ನಂಬಿ ಪ್ಲೀಸ್!!

Tuesday, August 28, 2007

ಇಗ್ಗಣ್ಣ ಎಂಬ ಅಂಚೆಯಣ್ಣನ ನೆನಪಲ್ಲಿ...

ನಮ್ಮನೆಗೊಬ್ಬರು ಪರಿಚಿತರು ಬೇರೆ ಊರಿನಿಂದ ಬಂದಿದ್ದರು. ಆಗ ಇಗ್ಗಣ್ಣ ಬಂದು ಪತ್ರಗಳನ್ನು ಕೊಟ್ಟು ಹೋದ. ನಾವು ಇಗ್ಗಣ್ಣನ ಬಗ್ಗೆ ಮಾತಾಡುವಾಗ, ನಮ್ಮನೆಗೆ ಬಂದ ಅಪರಿಚಿತರು ನಮ್ಮೂರಲ್ಲಿ ಪೋಸ್ಟ್‌ಮ್ಯಾನ್ ಅಂತಾರೆ ನಿಮ್ಮಲ್ಲಿ ಅವರನ್ನ ಇಗ್ಗಣ್ಣ ಅಂತಾರಾ ಎಂದು ಪ್ರಶ್ನಿಸಿದ್ದರು.ಅವರು ಕೇಳಿದ್ದರಲ್ಲಿ ತಪ್ಪಿರಲಿಲ್ಲ. ಕಾರಣ ನನ್ನೂರಲ್ಲಿ ಆತನನ್ನು ಪೋಸ್ಟ್‌ಮ್ಯಾನ್ ಅಂತಲೋ ಪದ್ಯವೊಂದರಲ್ಲಿ ಬರುವ ಅಂಚೆಯಣ್ಣ ಅಂತಲೋ ಯಾರೂ ಕರೆಯುತ್ತಿರಲಿಲ್ಲ. ಆತ ಎಲ್ಲರಿಗೂ ಇಗ್ಗಣ್ಣನಾಗಿದ್ದ. ಹೆಚ್ಚಿನ ಜನರ ಫ್ಯಾಮಿಲಿ ಫ್ರೆಂಡ್ ಕೂಡ ಆಗಿದ್ದ.
ಊರಿನ ಜನ ಕೂಡ ಆತನನ್ನು ಯಾವತ್ತೂ ಪೋಸ್ಟ್‌ಮ್ಯಾನ್ ಎಂಬ ದೃಷ್ಟಿಯಿಂದ ನೋಡಿಯೂ ಇರಲಿಲ್ಲ. ಪ್ರತಿಯೊಬ್ಬರು ಕುಡಿಯಲು ಮಜ್ಜಿಗೆಯೋ, ಬೆಲ್ಲ ನೀರೋ ಬೇಕಾ ಎಂದು ವಿಚಾರಿಸಿಯೇ ಕಳುಹಿಸುತ್ತಿದ್ದರು. ಬಿಸಿಲಲ್ಲಿ ತಿರುಗಿ ತಿರುಗಿ ಸಾಕಾಗಿದ್ದರೆ ಇಗ್ಗಣ್ಣ ಕೂಡ ಮನೆಯ ಆರಾಮ ಕುರ್ಚಿಯಲ್ಲಿ ಕೊಂಚ ಕೂತು, ಮಜ್ಜಿಗೆ ಕುಡಿದು ಸುಧಾರಿಸಿಕೊಂಡು ಪತ್ರ ಹಂಚುವ ಕೆಲಸ ಮುಂದುವರಿಸುತ್ತಿದ್ದ. ಊಟ ಮಾಡೋ ಅಂದರೆ ‘ಕಾಮಾಕ್ಷಿ ನಿಲಯದಲ್ಲಿ ಊಟ ಸಿದ್ಧವಿದೆ’ ಎನ್ನುತ್ತಿದ್ದ. ಕಾಮಾಕ್ಷಿ ಆತನ ಹೆಂಡತಿ. ಇಗ್ಗಣ್ಣ ಆಗಾಗ ಆಕ್ಷಿ ಹೊಡೆಯುತ್ತಿದ್ದನಾದ್ದರಿಂದ ನಾವೆಲ್ಲ ಇದು ಹೆಂಡತಿ ಕಾಮಾಕ್ಷಿಯ ಪ್ರಭಾವ ಎಂದು ಆತನನ್ನು ಕಿಚಾಯಿಸುತ್ತಿದ್ದೆವು.
ಆಗೆಲ್ಲ ಫೋನು ಇರಲಿಲ್ಲ. ಅಂಚೆಯೇ ಸಂಪರ್ಕದ ಪ್ರಮುಖ ಮೂಲ. ಅಂಚೆ ಪತ್ರಗಳ ಜತೆಗೆ ಇಗ್ಗಣ್ಣ ಊರ ಸುದ್ದಿಗಳನ್ನು, ಜಂಬ್ರ (ಸೂತಗದ) ಸುದ್ದಿಗಳನ್ನು ಹೊತ್ತು ತರುತ್ತಿದ್ದ. ಸರಕಾರ ಕೊಡುತ್ತಿದ್ದ ಸ್ಯಾಲರಿ ಏನೇನೂ ಇರಲಿಲ್ಲ. ಬಹುಶಃ ಸರಿಯಾಗಿ ತಿರುಗಾಡಿದರೆ ತಿಂಗಳಿಗೆ ಸವೆಸುವ ಚಪ್ಪಲಿಗೆ ಸಾಕಾಗುತ್ತಿತ್ತು ಸ್ಯಾಲರಿ. ಆದರೂ ಇಗ್ಗಣ್ಣ ಬಿಡದೆ ಸುತ್ತುತ್ತಿದ್ದ.
ನನ್ನ ಊರಾದ ಮೂರೂರಿನ ವ್ಯಾಪ್ತಿ ದೊಡ್ಡದು. ಹಾಗಾಗಿ ಕನ್ನಡ ಶಾಲೆ ಮುಗಿಸಿ ಮನೆಗೆ ಹೋಗುವ ಮಕ್ಕಳೇ ಪತ್ರ ತಲುಪಿಸುವ ಇಗ್ಗಣ್ಣ ಮೂಲಾಧಾರ. ಪತ್ರ ತಲುಪಿಸಬೇಕಾದ ಮನೆಯ ಮಕ್ಕಳೇ ಸಿಕ್ಕದರೆ ಪರವಾಗಿಲ್ಲ. ಇಲ್ಲವಾದಲ್ಲಿ ಆ ಮಕ್ಕಳ ಬಳಿಯಲ್ಲೇ ಅಕ್ಕಪಕ್ಕದ ಮನೆಗೆ ಪತ್ರ ತಲುಪಿಸಿ ಕೆಲಸ ಹಗುರ ಮಾಡಿಕೊಳ್ಳುತ್ತಿದ್ದ ಇಗ್ಗಣ್ಣ. ಹೀಗಾಗಿ ಇಗ್ಗಣ್ಣ ಶಾಲೆ ಮಕ್ಕಳಿಗೆಲ್ಲ ಪರಿಚಿತನಾಗಿದ್ದ. ಜತೆಗೆ ಶಾಲೆ ಮಕ್ಕಳೆಲ್ಲರ ಪರಿಚಯವನ್ನೂ ಇರಿಸಿಕೊಂಡಿದ್ದ. ಮಕ್ಕಳಿಗೆ ಮುಖ್ಯಮಂತ್ರಿಯ, ಪ್ರಧಾನ ಮಂತ್ರಿಯ ಕೊನೆಗೆ ಗ್ರಾಮ ಪಂಚಾಯತ್ ಅಧ್ಯಕ್ಷರ ಪರಿಚಯ ಇಲ್ಲದಿದ್ದರೂ ಇಗ್ಗಣ್ಣನ ಪರಿಚಯ ಚೆನ್ನಾಗಿತ್ತು. ಅಂಚೆ ಬರುವುದು ತಡವಾಗಿ ಮಕ್ಕಳು ಮನೆಗೆ ಹೋದರೋ ಅಂದು ಇಗ್ಗಣ್ಣನಿಗೆ ದಿನವಿಡೀ ಕೆಲಸ.
ನನ್ನಪ್ಪ ಎಲೈಸಿ ಏಜೆಂಟ್. ಹಾಗಾಗಿ ನಮ್ಮನೆಗೆ ಸಾಕಷ್ಟು ಪತ್ರಗಳು, ಎಲೈಸಿ ಕಚೇರಿಯ ಅಂಚೆಗಳು ಬರುತ್ತಿದ್ದವು. ಹೀಗಾಗಿ ಇಗ್ಗಣ್ಣ ಎಸ್.ಎಂ. ಭಟ್ ಎಂದು ನೋಡಿದ ಕೂಡಲೆ ನಮ್ಮನೆಗೆ ತಂದು ಹಾಕುತ್ತಿದ್ದ. ಮೂರೂರಿನಲ್ಲಿ ಅಂಗಡಿ ನಡೆಸುತ್ತಿದ್ದ ಸುಬ್ಬಣ್ಣ ಎಂಬವರ ಹೆಸರೂ ಎಸ್.ಎಂ. ಭಟ್. ಇನ್ನೊಂದು ಹೋಲಿಕೆಯಂದರೆ ಸುಬ್ಬಣ್ಣ ಹೆಂಡತಿ ಹೆಸರೂ ಲೀಲಾ. ನನ್ನಪ್ಪನ ಹೆಂಡತಿ ಅರ್ಥಾತ್ ನನ್ನಮ್ಮನ ಹೆಸರೂ ಲೀಲಾ. ಹೀಗಾಗಿ ಸಂಕ್ರಾತಿ, ಯುಗಾದಿ, ದೀಪಾವಳಿ ಸಂದರ್ಭಗಳಲ್ಲಿ ಸುಬ್ಬಣ್ಣನಿಗೆ, ಅವರ ಹೆಂಡತಿಗೆ ಬಂದ ಗ್ರೀಟಿಂಗ್ಸ್‌ಗಳೂ ನಮ್ಮನೆಗೆ ಬಂದು ಬೀಳುತ್ತಿತ್ತು. ಒಡೆದು ನೋಡಿದ ಮೇಲೆ, ಶುಭಾಷಯ ತಿಳಿಸಿದವರ ಹೆಸರು ನಮಗೆ ಪರಿಚಿತವಲ್ಲ ಎಂದು ನೋಡುವಾಗ ಅದು ಸುಬ್ಬಣ್ಣನಿಗೆ, ಅವನ ಹೆಂಡತಿಗೆ ಬಂದ ಗ್ರೀಟಿಂಗ್ಸ್ ಎಂಬುದು ಗೊತ್ತಾಗುತ್ತಿತ್ತು. ಸುಬ್ಬಣ್ಣನಿಗೆ ಈ ವಿಷಯ ಹೇಳಿದರೆ.. ನೀವೇ ಕೊಟ್ಟುಬಿಡಿ ಅವರಿಗೆ ಎಂದು ಬಿಡುತ್ತಿದ್ದ.
ಅದೇನೇ ಇದ್ದರೂ ಇಗ್ಗಣ್ಣ ಮೂರೂರಿನ ಒಂದು ಭಾಗವಾಗಿದ್ದ. ಆತ ಕೆಲಸ ಬಿಟ್ಟ ಮೇಲೆ ಅಂಚೆ ಹಂಚಲೂ ಒಂದು ಸರಿಯಾದ ಜನ ಸಿಗಲಿಲ್ಲ. ಕೆಲವರು ಈ ಕೆಲಸ ಮಾಡಿದರಾದರೂ ಇಗ್ಗಣ್ಣನಷ್ಟು ದೀರ್ಘಕಾಲ ಈ ಕೆಲಸಕ್ಕೆ ನಿಲ್ಲಲಿಲ್ಲ. ಹೀಗಾಗಿಯೇ ನಮ್ಮೂರದಲ್ಲಿ ಪೋಸ್ಟ್‌ಮ್ಯಾನ್, ಅಂಚೆಯಣ್ಣ ಎಂಬ ಶಬ್ದಗಳ ಬದಲು ಇಗ್ಗಣ್ಣ ಎಂಬ ಹೆಸರಿತ್ತು. ಹೀಗಾಗಿಯೇ ದೊಡ್ಡ ಸಾಧನೆ ಮಾಡದಿದ್ದರೂ ಇಗ್ಗಣ್ಣ ಊರವರಿಗೆಲ್ಲ ಪರಿಚಯ. ಮೂರೂರಿನಲ್ಲಿ ಇಗ್ಗಣ್ಣನಿಗೆ ಪರಿಚಯವಿಲ್ಲದ ಜನರಿಲ್ಲ, ಇಗ್ಗಣ್ಣನ ಪರಿಚಯವಿಲ್ಲದವರಿಲ್ಲ.
ಇಂದಿಗೂ ಇಗ್ಗಣ್ಣನ ಜಾಗದಲ್ಲಿ ಬೇರೊಬ್ಬರನ್ನು ಕಲ್ಪಿಸಿಕೊಳ್ಳುವುದು ನನ್ನಿಂದ ಸಾಧ್ಯವಾಗಿಲ್ಲ. ಬಹುಶಃ ನನ್ನೂರಿನ ಜನರಿಂದಲೂ ಸಾಧ್ಯವಾಗಿಲ್ಲ. ಈ ನಗರಗಳಲ್ಲೋ ಇಂತಹ ಸಂಬಂಧಗಳೇ ಇಲ್ಲ. ಪತ್ರ ವ್ಯವಹಾರವೇ ಕಡಿಮೆಯಾಗಿ ಈಗ ಇಂತಹ ಸಂಬಂಧಗಳೇ ಇಲ್ಲದಂತಾಗಿವೆ.

Saturday, August 18, 2007

ಬಳ್ಳಾಲ್‌ಬಾಗ್‌ನಲ್ಲೊಂದು ಭೂತ ಭಾದೆ


ನಗರದ ಮಧ್ಯದಲ್ಲೊಂದು ಅರ್ಧ ನಿರ್ಮಿತ ಮನೆ. ಗವ್ವೆನ್ನುವ ರಾತ್ರಿಯ ಕತ್ತಲು. ನೀರವ ಮೌನ. ಕಿಟಾರನೆ ವಿಕಾರವಾಗಿ ಕಿರುಚಿದ ಸದ್ದು ಮೌನ ಸೀಳಿಕೊಂಡು ಹೊರಡುತ್ತದೆ. ಮಲಗಿದ್ದವರು ಬೆಚ್ಚಿ ಕಣ್ಣು ಬಿಡುತ್ತಾರೆ. ಎಚ್ಚರಿದ್ದವರು ಹೆದರಿ ಮುದುರಿಕೊಳ್ಳುತ್ತಾರೆ.

ಮತ್ತದೇ ಮೌನ. ಕೊಂಚ ಹೊತ್ತು ಅಷ್ಟೆ. ಮತ್ತೆ ಕೇಳುತ್ತದೆ ಮಗು ಅಳುವ ಸದ್ದು, ಬೆಕ್ಕು ದೀರ್ಘವಾಗಿ ಕೂಗುವ ಸದ್ದು. ಯಾರೂ ತೋಡಿನ ನೀರಲ್ಲಿ ನಡೆದಾಡಿದ ಸಪ್ಪಳ. ಇಷ್ಟಾದ ಮೇಲೆ ರಾತ್ರಿ ಪೂರ ನಿದ್ರೆ ಇಲ್ಲ ಕಣ್ಣಿಗೆ...

ಇದು ‘ಡರ್ ನಾ ಮನಾಹೆ’ ಎಂಬ ಹಿಂದಿ ಚಲನಚಿತ್ರದ ಕತೆಯಲ್ಲ. ಕನ್ನಡದ ‘ಮೋಹಿನಿ’ ಸಿನಿಮಾ ಕತೆಯೂ ಅಲ್ಲ. ಬದಲಾಗಿ ಆಧುನಿಕ ಜಗತ್ತಿನತ್ತ ದಾಪುಗಾಲಿಕ್ಕುತ್ತಿರುವ ಮಂಗಳೂರಿನಲ್ಲಿರವ ಬಲ್ಲಾಳ್‌ಭಾಗ್ ನಿವಾಸಿಗಳ ನಿತ್ಯದ ಕತೆ. ಈಗ ಬಳ್ಳಾಲ್‌ಭಾಗ್ ತುಂಬೆಲ್ಲ ಇದೇ ಸುದ್ದಿ. ಇಷ್ಟು ದಿನ ಯಾರೂ ಗಮನಿಸದೇ ಖಾಲಿ ಬಿದ್ದಿದ್ದ ಮನೆ ಬಗ್ಗೆ ಈಗ ಎಲ್ಲರಿಗೂ ಕುತೂಹಲ ಮಿಶ್ರಿತ ಭಯ. ಹೋಗುವಾಗೊಮ್ಮೆ, ಬರುವಾಗೊಮ್ಮೆ ಆ ಮನೆಯತ್ತ ದೃಷ್ಟಿ ಹಾಯಿಸದೆ ಹೋಗುವುದಿಲ್ಲ. ಮಕ್ಕಳಂತೂ ಈ ಮನೆಯ ಬಳಿ ಹೋಗುವಾಗ ಗುಂಪಾಗಿಯೇ ಹೋಗುತ್ತಾರೆ. ತಪ್ಪಿಯೂ ಅತ್ತ ನೋಡುವುದಿಲ್ಲ. ಊಟ ಮಾಡದೆ ರಚ್ಚೆ ಹಿಡಿದ ಮಕ್ಕಳನ್ನು ಗುಮ್ಮ ಬರುತ್ತೆ ಅಂತ ಹೆದರಿಸುತ್ತಿದ್ದ ಅಮ್ಮಂದಿರಿಗೂ ಈಗ ಗುಮ್ಮನ ಭಯ!

ಬಲ್ಲಾಳ್‌ಭಾಗ್‌ನಲ್ಲಿರುವ ಶ್ರೀದೇವಿ ಕಾಲೇಜಿನ ಬಳಿ ಒಂದು ಅರೆ ನಿರ್ಮಿತ ಮನೆಯಿದೆ. ಅಲ್ಲಿಂದ ಮಧ್ಯಾರಾತ್ರಿ ನಂತರ ನಂತರ ಮಹಿಳೆ ಭಯಾನಕವಾಗಿ ಕಿರುಚಿದ, ಮಗು ಅತ್ತ, ಬೆಕ್ಕು ವಿಕಾರವಾಗಿ ಕೂಗಿದ, ಯಾರೋ ನೀರಲ್ಲಿ ನಡೆದಾಡಿದಂತೆ ಅನಿಸುವ ಸದ್ದುಗಳು ಕೇಳುತ್ತಿವೆ ಎಂಬುದು ಬಲ್ಲಾಳ ಭಾಗ್ ನಿವಾಸಿಗಳ ಅಂಬೋಣ.

ಕಾಲೇಜಿನಲ್ಲಿ ಕಾವಲುಗಾರ ಕದಂ ಪ್ರಕಾರ ‘ಒಂದು ವಾರದಿಂದ ಈ ಸದ್ದು ಕೇಳುತ್ತಿದೆ. ಮೊದ ಮೊದಲು ಕೆಲವರು ಹೇಳಿದಾಗ ನಾನೂ ನಂಬಲಿಲ್ಲ. ಅದಕ್ಕಾಗಿ ಎಚ್ಚರಿದ್ದು ನೋಡಿದಾಗ ಸದ್ದು ಕೇಳಿಸಿದೆ. ಯಾರೂ ಮನೆಯತ್ತ ಹೋದದ್ದು, ಬಂದದ್ದು ಕಾಣಲಿಲ್ಲ. ಸದ್ದು ಮಾತ್ರ ಕೇಳಿಸಿತು. ಅತ್ಯಂತ ಭಯಾನಕ ಸದ್ದು’ ಎಂದು ಆತ ವಿವರಿಸಿದ್ದಾನೆ.

ಸಮೀಪದಲ್ಲಿ ವಾಸವಾಗಿರುವ ವಿದ್ಯಾರ್ಥಿಯೊಬ್ಬ ‘ಇಂತಹ ಸದ್ದು ಕೇಳಿಸುತ್ತದೆ. ನನಗೆ ಇಂತಹ ಸಂಗತಿಗಳಲ್ಲಿ ನಂಬಿಕೆ ಇರಲಿಲ್ಲ. ಆದರೂ ಸದ್ದು ಕೇಳಿದ ಮೇಲೆ ವಿಚಿತ್ರ ಅನ್ನಿಸುತ್ತಿದೆ. ನಂಬಲೂ ಆಗುತ್ತಿಲ್ಲ, ನಂಬದಿರಲೂ ಆಗುತ್ತಿಲ್ಲ’ ಎಂದು ವಿವರಿಸಿದ್ದಾನೆ.

ಪೊಲೀಸರು, ಪತ್ರಕರ್ತರು, ಒಂದಿಬ್ಬರು ಸಾರ್ವಜನಿಕರು ಮನೆಯೊಳಗೆ ಹೋಗಿ ನೋಡಿದರು. ಅಲ್ಲಿ ಯಾರೂ ಇರಲಿಲ್ಲ. ಆದರೆ ಮಾಡಿದ ಶೌಚ, ಕೆಲವು ಖಾಲಿ ಮದ್ಯದ ಬಾಟಲಿಗಳು ಕಂಡುಬಂದಿವೆ. ಇದರಿಂದಾಗಿ ಜನ ಅಲ್ಲಗೆ ಹೋಗಿ ಬರುತ್ತಿದ್ದಾರೆ ಎಂಬುದು ಸಾಬೀತಾಗಿದೆ. ಒಂದೆರಡು ಸಿಗರೇಟ್ ಬಾಕಿ ಇದ್ದ ಪ್ಯಾಕ್ ಕೂಡ ದೊರೆತಿದೆ. ಸಮೀಪವೇ ವಿದ್ಯಾರ್ಥಿನಿಯರ ವಸತಿ ನಿಲಯ ಇರುವುದರಿಂದ ಕೀಟಲೆಗಾಗಿ ಅಥವಾ ಮದ್ಯಪಾನ ಮಾಡಿ ಕಿಡಿಗೇಡಿಗಳು ಇಂತಹ ಕೃತ್ಯ ಎಸಗುತ್ತಿರಬಹುದೇ?ಜಾಗ ಅಥವಾ ಅರೆ ನಿರ್ಮಿತ ಕಟ್ಟಡದ ಮಾಲೀಕರ ವಿರೋಧಿಗಳು ಅಥವಾ ಅದಕ್ಕೆ ಸಂಬಂಧಿಸಿದ ವಿವಾದದಿಂದಾಗಿಯೂ ಇಂತಹ ಹೆದರಿಸುವ ಕೃತ್ಯಗಳು ನಡೆಯುವ ಸಾಧ್ಯತೆ ಅಲ್ಲಗಳೆಯುವಂತಿಲ್ಲ. ಹಲವು ಸಮಯದಿಂದ ಖಾಲಿ ಇರುವ ಈ ಮನೆಯಲ್ಲಿ ಅನೈತಿಕ ಚಟುವಟಿಕೆ ನಡೆಯುತ್ತಿದ್ದು, ರಾತ್ರಿ ಸಾರ್ವಜನಿಕರಾರೂ ಸಮೀಪಕ್ಕೆ ಬರಬಾರದು ಎಂಬ ಉದ್ದೇಶದಿಂದ ಹೀಗೆ ಹೆದರಿಕೆ ಹುಟ್ಟಿಸುವ ತಂತ್ರವಾಗಿಯೂ ಇಂತಹ ಕೃತ್ಯ ನಡೆಯುವ ಸಾಧ್ಯತೆ ಖಂಡಿತ ಇದೆ.ಈ ಎಲ್ಲ ಕಾರಣಗಳಿಗೆ ಇಂತಹ ಭೂತ ಚೇಷ್ಟೆಗಳು ನಡೆಯಬಹುದು.

ವಿಚಾರವಾದಿ ಎಂದು ತನ್ನನ್ನು ತಾನು ಕರೆದುಕೊಳ್ಳುವ ನರೇಂದ್ರ ನಾಯಕ್ ಎಂಬವರು ಶನಿವಾರ ರಾತ್ರಿ ಈ ಪರಿಸರದಲ್ಲಿ ಉಳಿದು, ಅದೇನು ಶಬ್ದ ಎಂದು ನೋಡುವುದಾಗಿ ಹೇಳಿದ್ದಾರೆ. ನರೇಂದ್ರ ನಾಯಕ್ ಹೀಗೆ ಪವಾಡಗಳನ್ನು ಬಯಲು ಮಾಡುವಲ್ಲಿ ಸಿದ್ಧ ಹಸ್ತರು. ಆಗಾಗ ಶಾಲೆ- ಕಾಲೇಜುಗಳಲ್ಲಿ ಅವರು ಕಾರ್ಯಕ್ರಮವನ್ನೂ ಮಾಡುತ್ತಾರೆ. ಅವರಿಂದಾದರೂ ಈ ಭೂತ ಚೇಷ್ಟೆಯ ಹಿಂದಿನ ರಹಸ್ಯ ಬಯಲಾಗಬಹುದಾ? ಕಾದು ನೋಡೋಣ. ಬಯಲಾದ ರಹಸ್ಯದ ಬಗ್ಗೆ ತಿಳಿದಲ್ಲಿ ಮತ್ತೆ ಬ್ಲಾಗಿಸಲಾಗುವುದು.

Friday, August 17, 2007

ಮುಂಗಾರು ಮಳೆ ಗುಂಗಿನಲ್ಲಿ, ಜೋಗದ ಕೆಟ್ಟ ರಶ್ಶಿನಲ್ಲಿ




‘ಜೋಗದ ಸಿರಿ ಬೆಳಕಿನಲ್ಲಿ


ತುಂಗೆಯ ತೆನೆ ಬಳುಕಿನಲ್ಲಿ


ಸಹ್ಯಾದ್ರಿಯ ಲೋಕದುದಿನ


ಉತ್ತುಂಗದ ಶಿಖರದಲ್ಲಿ...’


ಕವಿ ನಿಸಾರ್ ಅಹ್ಮದ್ ಅವರ ‘ನಿತ್ಯೋತ್ಸವ’ ಹಾಡಿನ ಜೋಗದ ವರ್ಣನೆಯನ್ನು ಈಗ ಕಣ್ಣಾರೆ ಕಂಡು ಅನುಭವಿಸಬಹುದು. ಒಂದು ಸಿನಿಮಾ ಏನೆಲ್ಲಾ ಮಾಡಬಹುದು ಎಂಬುದಕ್ಕೆ ಮುಂಗಾರು ಮಳೆಯ ನಂತರದ ಜೋಗ ಸಾಕ್ಷಿ. ಮುಂಗಾರು ಮಳೆಯಲ್ಲಿ ಜೋಗ ನೋಡಿದ ಜನ ಈ ಬಾರಿ ಮೈ ತುಂಬಿ ಧುಮ್ಮಕ್ಕುತ್ತಿರುವ ಜೋಗದತ್ತ ಹೊರಟಿದ್ದಾರೆ ಬೇಗ.


ಜೋಗ ಅದೆಷ್ಟೋ ವರ್ಷದಿಂದ ಇದೆ. ನಾನೂ ಹಲವು ವರ್ಷದಿಂದ ಹೋಗಿ ಬರುತ್ತಿದ್ದೇನೆ. ಈ ವರ್ಷದಷ್ಟು ಜನ! ಊಹೂಂ. ನಾನು ಇವತ್ತಿನವರೆಗೆ ನೋಡಿಲ್ಲ. ನಾನಷ್ಟೇ ಏಕೆ ಜೋಗದ ಜನರೇ ಇಷ್ಟು ಜನರನ್ನು ಜೀವಮಾನದಲ್ಲಿ ನೋಡಿರಲಿಲ್ಲ. ಶರಾವತಿ ನದಿಯಲ್ಲಿ ಹರಿದು ಬರುವ ನದಿಯನ್ನೂ ಮೀರಿಸುವಷ್ಟು ಜನ!


ಹೀಗೆ ಹರಿದು ಬಂದ ಜನರಲ್ಲಿ ಒಂದು ಹುಡುಗಿ ಅವಳ ಹುಡುಗನ ಬಳಿ ‘ಮುಂಗಾರು ಮಳೆ ಕಲ್ಲಿಗೆ ಹೋಗೋಣ್ವಾ’ ಅಂದಿದ್ದು ಸಿನೆಮಾದ ಎಫೆಕ್ಟಲ್ಲದೇ ಇನ್ನೇನು. ಆ ಕಲ್ಲೋ ಅದೆಷ್ಟೋ ವರ್ಷದಿಂದ ಅಲ್ಲೇ, ಹಾಗೇ ಇತ್ತು. ಮುಂಗಾರು ಮಳೆ ಸಿನಿಮಾದಲ್ಲಿ ಗಣೇಶ ಮತ್ತು ಸಂಜನಾ ಗಾಂಧಿ ಯಾನೆ ಪೂಜಾ ಗಾಂಧಿ ಕಲ್ಲಿನ ಮೇಲೆ ಮಲಗಿ ಹಾಡಿದ್ದೇ ಹಾಡಿದ್ದು, ಆ ಕಲ್ಲಿಗೆ ಅಯಾಚಿತವಾಗಿ ಮುಂಗಾರು ಮಳೆ ಕಲ್ಲು ಎಂಬ ಹೆಸರು ಬಂದಿದೆ. ಅಲ್ಲೇ ಇರುವ ಅಂಗಡಿ ಸಾಲಿನಲ್ಲಿ ನಡೆದು ಹೊರಟಿರೋ ಮುಂಗಾರು ಮಳೆ ಚರುಮುರಿ, ಮುಂಗಾರು ಬಳೆ ಬಜೆ, ಬೊಂಡಾ ಎಲ್ಲವೂ ಸಿಗುತ್ತವೆ. ಇಡೀ ಜೋಗವೇ ಮುಂಗಾರು ಮಳೆ ಮಯ. ಎಲ್ಲ ವಾಹನಗಳನ್ನೂ ‘ಮುಂಗಾರು ಮಳೆಯೇ ಏನು ನಿನ್ನ ಹನಿಗಳ ಲೀಲೆ’ ಎಂಬ ಹಾಡು. ಸಿನಿಮಾದಿಂದ ಉಂಟಾದ ‘ಮೇನಿಯಾ’ದ ಪರಿಣಾಮ ಆಗಸ್ಟ್ ೧೨ರಂದು ಜೋಗದಲ್ಲಿ ಜನರ ಮಹಾಪೂರ. ಪರಿಣಾಮ ಟ್ರಾಫಿಕ್ ಜಾಮ್!


ಜೋಗದಲ್ಲಿ ಆ.೧೨ರಂದು ಉಂಟಾದ ಟ್ರಾಫಿಕ್ ಜಾಂನ ಪ್ರಭಾವ ನೀವು ನೋಡಬೇಕಿತ್ತು. ಬೆಂಗಳೂರನ್ನೂ ಮೀರಿಸುವಂತಿತ್ತು. ನೀವು ನಂಬಿ ಬಿಡಿ ನಾನು ಮೂರೂವರೆ ತಾಸು ಜೋಗದಲ್ಲಿ ಶರಾವತಿ ನದಿಗೆ ಕಟ್ಟಲಾದ ಸೇತುವೆ ಮೇಲೆ ಸ್ಕಾರ್ಪಿಯೋದಲ್ಲಿ ಕುಳಿತಿದ್ದೆ. ಒಂದಿಂಚು ಗಾಡಿ ಮುಂದೆ ಚಲಿಸಲಿಲ್ಲ. ಬಾಡಿ ಗಾಡಿಯಿಂದ ಇಳಿಯಲಿಲ್ಲ. ನನ್ನ ಜತೆಗೆ ಜೋಗಕ್ಕೆ ಹೋಗಿದ್ದವರೆಲ್ಲ ನಡೆದುಕೊಂಡು ಹೋಗಿ ಜೋಗ ಫಾಲ್ಸನ್ನು ಒಂದು ಬದಿಯಿಂದ ನೋಡಿ ಬಂದರೂ ನಾನು ಮಾತ್ರ ಸ್ಕಾರ್ಪಿಯೋದಲ್ಲಿ ಸೇತುವೆ ಮೇಲೆಯೇ ಇದ್ದೆ.


ರಾಷ್ಟ್ರೀಯ, ಅಂತಾರಾಷ್ಟ್ರೀಯ ಮಟ್ಟದ ಪ್ರವಾಸಿ ಕೇಂದ್ರವೆಂದು ಜೋಗ ಹೆಸರು ಮಾಡಿದ್ದರೂ, ನಿರೀಕ್ಷೆಗೂ ಮೀರಿ ಜನ ಬಂದಾಗ ಅಲ್ಲಿವ ವ್ಯವಸ್ಥೆ ಮಗುಚಿ ಬೀಳುತ್ತದೆ. ನಮ್ಮ ವ್ಯವಸ್ಥೆಗಳೇ ಹಾಗೆ. ಅಲ್ಲಿ ಮುಂದಾಲೊಚನೆಯಿಲ್ಲ. ಸಿನಿಮಾದ ಪರಿಣಾಮ ಜೋಗಕ್ಕೆ ಇಷ್ಟು ಪ್ರಮಾಣದ ಜನ ಬರಬಹುದು ಎಂಬುದನ್ನು ಮೊದಲೇ ಜಿಲ್ಲಾಡಳಿತ ಗ್ರಹಿಸಿದ್ದರೆ ಬಹುಶಃ ಈ ಜಾಮ್ ಆಗುತ್ತಿರಲಿಲ್ಲ. ಜೋಗಕ್ಕೆ ಒಂದು ಬದಿಯಿಂದ ಬಂದು ಇನ್ನೊಂದು ಬದಿಯಿಂದ ಹೋಗಲು ವ್ಯವಸ್ಥೆ ಮಾಡುತ್ತಿದ್ದರೆ, ವಾಹನಗಳ ಪಾರ್ಕಿಂಗ್‌ಗೆ ತುಂಬ ಸ್ಥಳ ಕಲ್ಪಿಸುತ್ತಿದ್ದರೆ ಇಂತಹ ಅವ್ಯವಸ್ಥೆ ತಪ್ಪಿಸಬಹುದಿತ್ತು.ಆದರೂ ಹೀಗೆ ಜೋಗದತ್ತ ಜನ ಧುಮುಕಿ ಬರಲು ಮುಂಗಾರು ಮಳೆ ಸಿನಿಮಾ ಕಾರಣ ಎಂಬುದು ಸತ್ಯ. ಜೋಗದ ವೈಭವವನ್ನು ಜನರಿಗೆ ತೆರೆದು ತೋರಿಸಿದ್ದಕ್ಕೆ ಯೋಗರಾಜ್ ಭಟ್ ಅವರಿಗೆ ಥ್ಯಾಂಕ್ಸ್ ಹೇಳಲೇ ಬೇಕು.


ನಮ್ಮೂರ ಮಂದಾರ ಹೂವೆ ಸಿನಿಮಾದಲ್ಲಿ ಉತ್ತರ ಕನ್ನಡದ ಯಾಣವನ್ನು ತೋರಿಸಿದಾಗಲೂ ಹೀಗೇ ಆಗಿತ್ತು. ಈ ದೃಷ್ಟಿಯಿಂದ ಎರಡೂ ಸನಿಮಾಗಳ ನಿರ್ದೇಶಕರು ಅಭಿನಂದನಾರ್ಹರು.
(ಚಿತ್ರಗಳು: ಸಿಂಧುಶ್ರೀ ಭಟ್)

Thursday, August 09, 2007

ಮನೆಗಳ ಮನಗಳಲಿ ಜಿನುಗುತಿರುವ ಹನಿ ಸೋನೆಗಳು

ಇಡೀ ದಿನ ಜಿಟಿಜಿಟಿ ಮಳೆ. ದಿನವಿಡೀ ಬಿಟ್ಟೂ ಬಿಡದೆ ಕಾಡುವಂಥ ಪ್ರೇಮಿಯ ಮಳೆ. ಬಸ್ ಸ್ಟ್ಯಾಂಡ್ ಎದುರಿರುವ ಅಂಗಡಿಯಲ್ಲಿ ಚಾಕಲೇಟು ಕೊಡಿಸುವಂತೆ ಅಮ್ಮನ ಸೆರಗು ಜಗ್ಗಿ ರಚ್ಚೆ ಹಿಡಿದ ಮಗುವಿನಂಥ ಮಳೆ. ಮೊಬೈಲ್‌ಗೆ ಬಂದು ಬೀಳುವ ಪ್ರೇಮಿಯ ಸಾಕೆನಿಸುವಷ್ಟು ಎಸ್‌ಎಂಎಸ್‌ನಂಥ ಮಳೆ. ಹೊದ್ದು ಮಲಗುವಂತೆ ಮುದ್ದು ಮಾಡುವ ಮಳೆ. ಭಾವನೆಗಳ ನೆರೆ ಉಕ್ಕಿಸುವ ಮಳೆ. ನೆನಪುಗಳ ಸೆಳೆದು ತರುವ ಮಳೆ.
ಕಳೆದೆರಡು ವರ್ಷದಿಂದ ಮಂಗಳೂರಲ್ಲಿ ಈ ರೀತಿಯ ಮಳೆಯೇ ಇರಲಿಲ್ಲ. ಬರ್ರನೆ ಬಂದು ಸರ್ರನೆ ಹೋಗುತ್ತಿತ್ತು. ಆದರೆ ಈ ಬಾರಿ ಮತ್ತೆ ಹಿಂದಿನ ವೈಭವ ಪಡೆದುಕೊಂಡಿದೆ. ಈ ಮಳೆಯೇ ಕವನಗಳ ಗಾಳಕ್ಕೆ ನನ್ನನ್ನು ಸಿಕ್ಕಿಸಿದ್ದು.
ಕೆರೆಗಳ ಉಕ್ಕಿಸಿ, ತೊರೆಗಳ ಸೊಕ್ಕೊಸಿ
ಗುಡ್ಡವ ಬೆಟ್ಟವ ಕೊರೆಕೊರೆದು
ಕಡಲಿನ ತೆರೆಗಳ ರಿಂಗಣ ಗುಣಿಯಿಸಿ
ಮೊರೆಮೊರೆವುದದೋ ಸರಿ ಸುರಿದು...
ಮಧ್ಯಾಹ್ನದ ಹೊತ್ತಿಗೇ ರಾತ್ರಿ ಸೃಷ್ಟಿಸುವ ಆಷಾಢದ ಕಪ್ಪು ಮೋಡ. ಎಡಬಿಡದೆ ಸುರಿಯುವ ಮಳೆ. ತುಂಬಿದ ಕೆರೆ, ನೆರೆ ಉಕ್ಕಿಸಿದ ನದಿ. ಇವೆಲ್ಲ ನೋಡುವಾಗ ಕಡೆಂಗೊಡ್ಲು ಶಂಕರ ಭಟ್ಟರ ಈ ಕವಿತೆ ನೆನಪಾಗದಿದ್ದೀತೆ?
ಸತತ ಮೂರು ದಿನದಿಂದ ಬಿಡದೆ ಸುರುಯುತ್ತಿದೆ ಮಳೆ. ಪತ್ರಿಕೆ, ಟಿವಿ ಎಲ್ಲಿ ನೋಡಿದರೂ ನೀರು. ಹೆದ್ದಾರಿಯಲ್ಲೂ ತೆಪ್ಪ ಹಾಕಿ ಹೋಗಬೇಕಾದ ಸ್ಥಿತಿ. ಕಡೆಂಗೊಡ್ಲು ಶಂಕರ ಭಟ್ಟರು ಬರೆದಂತೆ...
‘ಹಗಲಿರುಳೆನ್ನದೆ ಹೊಡೆಯುವ ಜಡಿಮಳೆ
ಬಡಿಕೋಲ್ ಮಿಂಚಿನ ಲಾಗುಗಳು
ಮನೆಗಳ ಮನಗಳ ಒಳಗೂ ಹೊರಗೂ
ಜಿನುಗಿತಿರುವ ಹನಿ ಸೋನೆಗಳು...’
ಇದು ಮಳೆಯ ಅದ್ಭುತ ವರ್ಣನೆ. ಬಹುಶಃ ಮಳೆಯ ಬಗ್ಗೆ ಬರೆಯದ ಕವಿಗಳು ಇಲ್ಲವೇ ಇಲ್ಲ ಅಂದರೂ ತಪ್ಪಲ್ಲ. ಒಬ್ಬೊಬ್ಬ ಕವಿಗೂ ಮಳೆ ಹಲವು ಥರ. ಅವರವರ ಭಾವಕ್ಕೆ ತಕ್ಕಂತೆ. ದಕ್ಷಿಣ ಕನ್ನಡದವರೇ ಆದ ಇನ್ನೊಬ್ಬ ಕವಿ ಸುಬ್ರಾಯ ಚೊಕ್ಕಾಡಿ ಅವರು ಮಳೆಗಾಲದ ರಾತ್ರಿಯನ್ನು ಸೊಗಸಾಗಿ ವರ್ಣಿಸಿದ್ದಾರೆ. ಮಳೆ ಬರುವುದು ಅವರಿಗೆ ಆಕಾಶ ಬಿಕ್ಕುತಿರುವಂತೆ ಭಾಸವಾಗಿದೆ.
ಆಕಾಶ ಬಿಕ್ಕುತಿದೆ
ಮುಗಿಲ ಮುಸುಕ ಮರೆಗೆ
ಮಾತಿರದ ತಾರೆಗಳು
ಅಡಗಿ ಕುಳಿತ ಗಳಿಗೆ...
ಸೂರ್ಯ ಚಂದ್ರರಿರದೆ
ರಿದ ಕಪ್ಪು ಸುತ್ತ ಚೆಲ್ಲಿ
ಹಸಿರ ಉಸಿರು ಅಡಗಿ ಹೋಗಿ
ಹೊಳೆವ ದಾರಿಯಲ್ಲಿ...
ಕಪ್ಪುಗಟ್ಟಿದ ಮೋಡ, ಸುರಿವ ಮಳೆಯ ನಡುವೆ ಮನೆಯೊಳಗೆ ಬೆಚ್ಚಗೆ ಕುಳಿತು ಈ ಹಾಡನ್ನು ಸಿ. ಅಶ್ವಥ್ ಅವರ ಕಂಠದಲ್ಲಿ ಕೇಳುತ್ತಿದ್ದರೆ ಸ್ವರ್ಗಕ್ಕೆ ಮೂರೇಗೇಣು. ಈ ಹಾಡು ಅಂತಲ್ಲ ಮಳೆಯ ಕುರಿತ ಹಾಡುಗಳೇ ಹಾಗೆ ಮಳೆಯಂತೆ. ಕೇಳುತ್ತಿದ್ದರೆ ಭಾವನೆಗಳ ಲೋಕದಲ್ಲಿ ಮುಳುಗಿ ಹೋಗುತ್ತೇವೆ. ನೆನಪುಗಳಲ್ಲಿ ತೋಯ್ದು ಬಿಡುತ್ತೇವೆ. ಸಮಯ, ಕೆಲಸ, ಊಟ, ತಿಂಡಿ ಯಾವುದರ ಪರಿವೆಯೇ ಇರುವುದಿಲ್ಲ.
ಮಳೆಗಾಲ ಅದೆಷ್ಟು ಸುಂದರ! ಕವಿಯ ಕಲ್ಪನೆ ಅದಕ್ಕಿಂತ ಚೆಂದ!!
ಮಳೆಯ ಕುರಿತು ಹಾಡುಗಳನ್ನು ಹುಡುಕುತ್ತ ಹೊರಟರೆ ಓದಲು ಸಮಯ ಸಾಲದು. ಯಾಕೆಂದರೆ ಮಳೆಯ ಬಗ್ಗೆ ಬರೆಯದ ಕವಿಗಳಿಲ್ಲ. ಯಾಕೆಂದ್ರೆ ಮಳೆಗಾಲಕ್ಕೂ ಪ್ರೇಮಕ್ಕೂ ಅಂಟಿದೆ ನಂಟು. ಪ್ರೇಮಕ್ಕೂ ಕವಿಗಳಿಗೂ ಬಿಡಲಾರದ ಅಂಟು. ಈ ಬಗ್ಗೆ ತುಂಟ ಕವಿ ಎಂದೇ ಹೆಸರಾಗಿರುವ ಬಿ.ಆರ್. ಲಕ್ಷ್ಮಣ ರಾವ್ ಒಂದು ಕವನ ಬರೆದು ಮಳೆಯನ್ನೇ ವಿನಂತಿಸಿದ ಪರಿ ನೋಡಿ...
ಬಾ ಮಳೆಯೆ ಬಾ
ಅಷ್ಟು ಬಿರುಸಾಗಿ ಬಾರದಿರು
ನನ ನಲ್ಲೆ ಬರಲಾಗದಂತೆ
ಅವಳಿಲ್ಲಿ ಬಂದೊಡನೆಯೆ
ಬಿಡದೆ ಬಿರುಸಾಗಿ ಸುರಿ
ಹಿಂತಿರುಗಿ ಹೋಗದಂತೆ...
ಮಳೆಯಲ್ಲಿ ಜನ ನೆನೆಯಲು ಬಯಸಿದರೆ ಪ್ರೀತಿಯಲ್ಲಿ ತೋಯಲು ಇಷ್ಟಪಡುತ್ತಾರೆ. ಸಿನಿಮಾಗಳಲ್ಲೂ ಪ್ರೇಮಿಗಳಿಬ್ಬರು ಹಾಡುವಾಗ ಮಳೆ ಬರಿಸಲಾಗುತ್ತದೆ. ಪ್ರೇಮಿಗಳಿಬ್ಬರು ಮಳೆ ಬಂದು ಒಂಟಿ ಕಾಲಿ ಮನೆ ಹೊಕ್ಕಿದಾಗ ಛಟೀರನೆ ಹೊಡೆದ ಮಿಂಚಿನಿಂದ ಹೆದರಿದ ಪ್ರೇಯಸಿ ಪ್ರಿಯಕರನನ್ನು ಅಪ್ಪಿ... ಮುಂದೇನಾಗುತ್ತದೆ ನೀವೇ ಕಂಡಿದ್ದೀರಿ ಅಥವಾ ಊಹಿಸಬಲ್ಲಿರಿ. ಬೈಕಲ್ಲಿ ಒದ್ದೆಯಾದ ಪ್ರೇಮಿಗಳು ಗಟ್ಟಿಯಾಗಿ ಅಪ್ಪಿಕೊಂಡು ಹೋಗುತ್ತಿದ್ದರೆ ನೋಡುಗರ ಹೊಟ್ಟೆ ತಂಪಾದ ಮಳೆಯಲ್ಲೂ ಧಗಧಗನೆ ಉರಿಯುತ್ತದೆ. ಬಹುಶಃ ಸಮೀಕ್ಷೆ ನಡೆಸಿದರೆ ಹೆಚ್ಚಿನ ಪ್ರೇಮಗಳು ಅರಳೋದೇ ಮಳೆಗಾಲದಲ್ಲಿ. ಯಾಕೆಂದರೆ ಬಯಕೆಗಳು ಅರಳೋದು ಈ ಕಾಲದಲ್ಲೇ. ಅದಕ್ಕೆ ರಾಷ್ಟ್ರಕವಿ ಬಿರುದು ಪಡೆದ ಜಿ.ಎಸ್. ಶಿವರುದ್ರಪ್ಪ ಅವರು...
ಮುಂಗಾರಿನ ಅಭಿಷೇಕಕೆ
ಮಿದುವಾಯಿತು ನೆಲವು
ಹಗೆಯಾರಿದ ಹೃದಯದಲ್ಲಿ
ಪುಟಿದೆದ್ದಿತು ಚೆಲುವು
ಬಾಯಾರಿದ ಬಯಕೆಗಳಲ್ಲಿ

ಥಳಥಳಿಸುವ ನೀರು
ಕಣ್ಣಿಗೆ ತಣ್ಣಗೆ ಮುತ್ತಿಡುತಿದೆ
ಪ್ರೀತಿಯರ್ಥ ಹಸಿರು
ಮೈಮನಗಳ ಕೊಂಬೆಯಲ್ಲಿ
ಹೊಮ್ಮುವ ದನಿ ಇಂಪು
ನಾಳೆಗೆ ನನಸಾಗುವ
ಕನಸಿನ ಹೂ ಅರಳುವ ಕಂಪು... ಅಂದಿದ್ದಾರೆ.
ಮಳೆಗಾಲದಲ್ಲಿ ಅರಳುವ ಪ್ರೇಮದ ಬಗ್ಗೆ ಇನ್ನೊಬ್ಬ ಕವಿ...
ಮುಂಗಾರು ಮೋಡ ಕವಿದಾಗ
ಸಿಂಗಾರಿ ನಿನ್ನ ನೆನಪಾದಾಗ
ಹನಿ ಹನಿ ಜಿನುಗಲು
ಮುತ್ತಿನ ಮಣಿಗಳು
ಮನದಲ್ಲಿ ಏನೋ ಆವೇಗ... ಅಂದಿದ್ದಾನೆ. ಕಾಳಿದಾಸನ ಮೇಘ ಸಂದೇಶ ಕಾವ್ಯದಲ್ಲಿ ಮಳೆಗಾಲದಲ್ಲಿ ಪ್ರೇಮಿಯೊಬ್ಬನ ವಿರಹ ಮನೋಜ್ಞ ವರ್ಣನೆಯಿದೆ. ಈಗ ಎರಡು ಮೂರು ದಿನದಿಂದ ಬಿಡದೆ ಸುರಿಯುತ್ತಿರುವ ಮಳೆ ನೋಡಿದಾಗ ಪತ್ರಕರ್ತ ಚಿದಂಬರ ಬೈಕಂಪಾಡಿ ಅವರ ಹಾಡೊಂದು ನೆನಪಾಗುತ್ತಿದೆ. ಬಹುಶಃ ಚಿದಂಬರ ಪತ್ರಕರ್ತರೂ ಆಗಿರುವುದರಿಂದ ಅವರಿಗೆ ಮಳೆಯಿಂದಾಗಿ ಅನಾಹುತಗಳನ್ನು ವರ್ಣಿಸಿದ್ದಾರೆ. ಮನೆ ಬೀಳುವುದು, ರಸ್ತೆ ಹಾಳಾಗುವುದು ಎಲ್ಲವೂ ಕವನವಾಗಿವೆ ನೋಡಿ..
ನಿನ್ನೆ ಮಳೆ ಬಂತು
ಬೇಡವೆನ್ನುವಷ್ಟು
ಆಗಸವೇ ತೂತಾದಂತೆ
ಕುಸಿದು ಬೀಳುವಂತೆ
ಮನೆಯ ಮಾಡು
ಮಳೆ ಹನಿಗಳು...
ಯಾರೂ ಪ್ರಶ್ನಿಸದ
ಕಳಪೆ ಕಾಮಗಾರಿಯನ್ನು
ಪ್ರಶ್ನಿಸಿದಂತಿತ್ತು ಮಳೆ;
ಸಾಲು ಸಾಲು ಮನೆಗಳು
ನೆಲಕಚ್ಚಿದಾಗ-
ಚರಂಡಿಯನ್ನೇ ಮರೆಮಾಚಿದಾಗ
ಕರಗಿ ಇಟ್ಟಿಗೆ...
ಮಳೆ ಬಂತು
ಬೇಡಬೇಡವೆನ್ನುವಷ್ಟು
ಮಕ್ಕಳು ಶಾಲೆ ಮರೆವಷ್ಟು
ದೋಣಿಯಾಟ ಹಿತವೆನಿವಷ್ಟು...... ಎಂದು ಬರೆಯುತ್ತಾರೆ ಅವರು. ಬಾಲ್ಯ ನೆನಪಿಸುತ್ತಾರೆ. ಈಗಿನ ಮಕ್ಕಳಿಗೆಲ್ಲಿಯ ದೋಣಿಯಾಟ? ಅವರಿಗದು ಮರೆತೇ ಹೋಗಿದೆ. ಅವರಿಗಿಷ್ಟವಿದ್ದರೂ ಮಕ್ಕಳಾಡುವ ದೋಣಿಯಾಟಕ್ಕೆ ಅಪ್ಪ- ಅಮ್ಮಂದಿರ ಬಿರುಗಾಳಿ ಅಡ್ಡಿಯಾಗುತ್ತದೆ.ಅದೇನೇ ಇರಲಿ ಮಳೆ ಒಬ್ಬೊಬ್ಬ ಕವಿಗೆ ಒಂದೊಂದು ರೀತಿ. ಒಬ್ಬೊರಿಗೆ ಆಕಾಶ ಬಿಕ್ಕಿದಂತೆ, ಇನ್ನೊಬರಿಗೆ ಭೂಮಿ ಮೆದುವಾದಂತೆ, ಇನ್ನೊಬ್ಬರಿಗೆ ಮಾಯದಮಥ ಮಳೆಯಂತೆ ಕಂಡಿದೆ. ಮತ್ತೊಬ್ಬ ಕವಿ ಮಳೆಯಿಂದ ನಮ್ಮೊಳಗಿನ ಸ್ವಾರ್ಥ, ದುರಾಸೆಗಳೇ ಮಳೆಯಲ್ಲಿ ಕೊಚ್ಚಿ ಹೋಗಲಿ ಅಂದಿದ್ದಾರೆ.
ಸುರಿಯಲಿ, ತಂಪೆರೆಯಲಿ
ಅವಳ ಪ್ರೀತಿಯ ಮಳೆ
ಹರಿಯಲಿ ಬೋರ್ಗರೆಯಲಿ
ಬತ್ತಿದೆದೆಗಳಲೀ ಹೊಳೆ
ಕೊಚ್ಚಿ ಹೋಗಲಿ ಸ್ವಾರ್ಥ ದುರಾಸೆ
ಸ್ವಚ್ಛವಾಗಲಿ ಇಳೆ
ಚಿಮ್ಮಲಿ ಹಚ್ಚನೆ ಹಸಿರು...
ಕವಿಯ ಆಶಯಗಳು ಈಡೇರಲಿ. ಜನಕ್ಕೆ ಮಳೆಯ ಸಂತಸ ಅನುಭವಿಸುವ ಸಮಯ ದೊರೆಯಲಿ. ಪ್ರೇಮ ಅರಳಿ ದ್ವೇಷ ಮರೆಯಲಿ. ಟಿಪ್ ಟಿಪ್ ಬರಸಾ ಪಾನಿಯಲ್ಲಿ ನೆನೆಯುತ್ತ ಮಕ್ಕಳು ದೋಣಿ ಬಿಟ್ಟು ಹರ್ಷಿಸಲಿ.

Sunday, August 05, 2007

ಹೆಂಡತಿಯೊಬ್ಬಳು ಮನೆಯೊಳಗಿದ್ದರೆ...!

ಹೆಂಡತಿಯೊಬ್ಬಳು ಮನೆಯೊಳಗಿದ್ದರೆ
ನನಗದು ಕೋಟಿ ರೂಪಾಯಿ
ಹೆಂಡತಿಯೊಬ್ಬಳು ಮನೆಯೊಳಗಿದ್ದರೆ
ನಾನೂ ಒಬ್ಬ ಸಿಪಾಯಿ...
ಹಾಗಂತ ಪ್ರೇಮ ಕವಿ ಮೈಸೂರು ಕೆ.ಎಸ್. ನರಸಿಂಹ ಸ್ವಾಮಿ ಹಾಡಿದ್ದು ಅದೆಷ್ಟು ಸತ್ಯ ಅಂತ ಈಗ ಅರ್ಥವಾಗ್ತಿದೆ.
ಮನುಷ್ಯ ಅದೆಷ್ಟು ಬೇಗ ಒಂದು ವಾತಾವರಣಕ್ಕೆ, ವ್ಯವಸ್ಥೆಗೆ ಹೊಂದಿಕೊಂಡು ಬಿಡುತ್ತಾನೆ ಅಲ್ವಾ? ನಂಗೆ ಮದುವೆಯಾಗಿ ಒಂದು ವರ್ಷದ ಎರಡು ತಿಂಗಳಾಯಿತಷ್ಟೇ. ಈಗಲೇ ಹೆಂಡತಿ ಮನೆಯಲ್ಲಿಲ್ಲದಿದ್ದರೆ ಬೋರು ಬೋರು. ಐದಾರು ವರ್ಷ ರೂಂ ಮೇಟ್‌ಗಳೊಟ್ಟಿಗೆ ಇದ್ದು, ಹೋಟೆಲ್‌ನಲ್ಲೇ ಊಟ ಮಾಡಿ ಜೀವನ ಸಾಗಿಸಿ, ಕರೆದು ಕಟ್ಟುವವರಿಲ್ಲ, ತುರಿಸಿ ಹುಲ್ಲು ಹಾಕುವವರಿಲ್ಲ ಎಂಬಂತಿದ್ದೆ. ಈಗ ಕೇವಲ ಒಂದು ವರ್ಷದ ಹೆಂಡತಿ ಕೈ ಅಡುಗೆಯ ಊಟ ಹೋಟೆಲ್ ಹತ್ತಿರ ಹೋಗಲೂ ಬಿಡುತ್ತಿಲ್ಲ. ಹೆಂಡತಿ ಇಲ್ಲದಿದ್ದರೂ ಅಡುಗೆ ಮಾಡಿಟ್ಟು ಹೋಗು ಎಂದು ಹೇಳಿ ಮನೆಯಲ್ಲೇ ಊಟ ಮಾಡುವ ತವಕ.
ಅವಳೆಷ್ಟೇ ಅಡುಗೆ ಮಾಡಿಟ್ಟು ಹೋದರೂ ಅವಳ ಜತೆ ಪಕ್ಕದಲ್ಲಿ ಕೂತು ಉಂಡಂಗೆ ಆಗುತ್ತದೆಯೇ? ಅವಳೇ ಬಡಿಸಿ ತಂದುಕೊಂಟ್ಟಂಗೆ ಇರುತ್ತದೆಯೇ? ಊಹುಂ.
ಅದಕ್ಕೆ ಹೇಳಿದ್ದು ಕೆಎಸ್‌ನ ‘ಹೆಂಡತಿಯೊಬ್ಬಳು ಮನೆಯೊಳಗಿದ್ದರೆ ನನಗದು ಕೋಟಿ ರೂಪಾಯಿ’ ಅಂತ. ಇಷ್ಟೆಲ್ಲ ಬರೆಯುವಾಗ ನನ್ನ ಹೆಂಡತಿ ಮನೆಯಲ್ಲಿಲ್ಲ ಅಂತ ನಿಮಗೂ ಅರ್ಥವಾಗಿರಹುದು. ಹೌದು ಅವಳು ಎರಡು ದಿನದ ಮಟ್ಟಿಗೆ ಅಪ್ಪನ ಮನೆಗೆ ಹೋಗಿದ್ದಾಳೆ. ಹೆಂಡತಿ ಇಲ್ಲದಾಗಿನ ಕಷ್ಟ ಅರ್ಥವಾಗುತ್ತಿದೆ.
ಬೆಳಗ್ಗೆ ನಾನು ಕೆಲಸ ಮುಗಿಸಿ ಬರುವಷ್ಟರಲ್ಲಿ ಅಥವಾ ಮನೆಯಲ್ಲೇ ಕುಳಿತು ಕೆಲಸ ಮುಗಿಸುವಷ್ಟರಲ್ಲಿ ತಿಂಡಿ ರೆಡಿ. ಮಧ್ಯಾಹ್ನ- ರಾತ್ರಿಯ ಬಿಸಿ ಬಿಸಿ ಊಟ, ಮಧ್ಯದಲ್ಲೆಲ್ಲಾದರೂ ಏನಾದರು ತಿಂಡಿ ಹೀಗೆ ಏನೇ ಇರಲಿ ಹೆಂಡತಿ ಕೈಗೆ ತಂದಿಟ್ಟು ರೂಢಿ ಮಾಡಿಸಿಬಿಟ್ಟಿದ್ದಾಳೆ. ಹೊರಗೆ ಹೋಗಿ ಬರುವಷ್ಟರಲ್ಲಿ ಮನೆಯೂ ಸ್ವಚ್ಛ ಸ್ವಚ್ಛ. ಈಗ ಅವಳಿಲ್ಲದಿದ್ದರೆ ಊಟವೂ ಬೇಡ, ತಿಂಡಿಯೂ ಬೇಡ ಅನ್ನೋ ಸ್ಥಿತಿ. ಮನೆಯೋ ಕಸದ ಗೂಡು. ನಾನು ಊಟ ಮಾಡಿದ ಬಟ್ಟಲು ನಾನೇ ತೊಳೆಯೋದು. ಆದರೆ ಅನ್ನ, ಸಾಂಬಾರಿಗೆ ಹಾಕಿದ ಹುಟ್ಟು, ಖಾಲಿಯಾದ ಪಾತ್ರ ತೊಳೆಯೋಕೆ ಬೇಜಾರು. ಆಮೇಲೆ ತೊಳೆದರಾಯಿತು ಅಂತ ಸಿಂಕ್‌ನಲ್ಲೇ ಇಡೋ ಆಲಸಿತನ. ಎರಡು ದಿನ ಹೀಗೇ ದೂಡಿದರೆ ಸಿಂಕ್ ತುಂಬ ಪಾತ್ರ! ಅಯ್ಯೋ ಇಷ್ಟು ಪಾತ್ರ ತೊಳೀಬೇಕಾ ಅನ್ನಿಸುತ್ತೆ. ಆದ್ರೂ ತೊಳೀತೇನೆ ಅದು ಬೇರೆ ಮಾತು. ಹಸಿವಾಯಿತು ಊಟ ಮಾಡುವ ಅಂತ ಅಡುಗೆ ಕೋಣೆಗೆ ಹೋದ ಮೇಲೆ ನೆನಪಾಗುತ್ತೆ ಅನ್ನ, ಸಾಂಬಾರ್ ಬಿಸಿ ಮಾಡಿಲ್ಲ ಅಂತ. ನಂತರ ಬಿಸಿ ಮಾಡಿ ಊಟ ಮಾಡುವಷ್ಟರಲ್ಲಿ ಊಟದ ಮೂಡೇ ಇರುವುದಿಲ್ಲ.
ಎಷ್ಟೋ ಮನೆಗಳನ್ನು ಹೊಕ್ಕಿದ ಕೂಡಲೆ ಗೊತ್ತಾಗುತ್ತದೆ ‘ಅವರ ಹೆಂಡತಿ ಮನೆಯಲ್ಲಿಲ್ಲ’ ಅಂತ. ಹೆಂಡತಿ ಮನೆಯಲ್ಲಿದ್ದಾಗ ಗೆಳೆಯರೋ, ಸಂಬಂಧಿಕರೋ ಬಂದರೆ ಚಿಂತೆಯಿಲ್ಲ. ಆದರೆ ಅವಳಿಲ್ಲದಾಗ ಯಾರಾದರೂ ಬಂದರೆ ಮನೆಗೆ ಕರೆಯದೇ ಸಾಗಹಾಕುವುದು ಹೇಗೆ ಎಂದು ಯೋಚಿಸಬೇಕಾಗುತ್ತದೆ. (ಹೆಂಡತಿ ಇಲ್ಲದಾಗೇ ಮನೆಗೆ ಕರೆತರುವ ಫ್ರೆಂಡ್ಸ್ ಆದರೆ ತೊಂದರೆಯಿಲ್ಲ)
ಇದನ್ನೆಲ್ಲ ಅನುಭಿಸಿದ ಮೇಲೆ ನಿಜಕ್ಕೂ ಹೆಂಡತಿಯೊಬ್ಬಳು ಮನೆಯೊಳಗಿದ್ದರೆ ನನಗದು ಕೋಟಿ ರೂಪಾಯಿ ಅನ್ನಿಸುತ್ತಿದೆ. ಹೆಂತಿಯೊಬ್ಬಳು ಮನೆಯೊಳಗಿದ್ದರೆ ನಾನೂ ಒಬ್ಬ ಸಿಪಾಯಿ ಅಂತ ಕೆಎಸ್‌ನ ಹೇಳಿದ್ದು, ಮನೆ ಕೆಲಸ ಮಾಡುತ್ತೇನೆಂದಲ್ಲ. ಬದಲಾಗಿ ಹೆಂಡತಿ ಇದ್ದರೆ ಮನೆ ಬದಿಗೆ ನಿಶ್ಚಿಂತೆ. ಹಾಗಾಗಿ ಮಾಡುವ ಕೆಲಸದಲ್ಲಿ ಸಿಪಾಯಿಯಂತೆ ದುಡಿಯಬಹುದು ಎಂಬರ್ಥದಲ್ಲಿ ಇರಬಹುದಾ?
(ಕೆಲವರು ಹೆಂಡತಿಯೊಟ್ಟಿಗಿದ್ದು ಬೇಜಾರು ಬಂದಾಗ ಅವರನ್ನು ಅಪ್ಪನ ಮನೆಗೆ ಕಳುಹಿಸಿ ಹಾಯಾಗಿ ಇರುವವರಿದ್ದಾರೆ. ಸಧ್ಯ ನನಗಂಥ ಸ್ಥಿತಿ ಬಂದಿಲ್ಲ!)

Tuesday, July 31, 2007

ಅಮರ್ ಆಳ್ವ ಹ್ಯಾಂಗ್ ಕೊಲೆ ಆಗ್ಬಿಟ್ಟ ಅಲ್ವ?

ಅದು ಮಂಗಳೂರಲ್ಲಿ ನಡೆದ ಭೂಗತ ಲೋಕದ ದೊಡ್ಡ ವ್ಯಕ್ತಿಯ ಮೊದಲ ಕೊಲೆ!
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಹೆಚ್ಚು ಚರ್ಚೆಗೊಳಗಾದ ಕೊಲೆ. ಜನರನ್ನು ಒಮ್ಮೆ ಬೆಚ್ಚಿ ಬೀಳಿಸಿದ ಕೊಲೆ. ಅದು ಭೂಗತ ಲೋಕದ ಸಂಪರ್ಕ ಹೊಂದಿದ್ದ ಉದ್ಯಮಿ ಅಮರ್ ಆಳ್ವ ಕೊಲೆ.
೧೬ ವರ್ಷಗಳ ಹಿಂದೆ ನಡೆದ ಈ ಕೊಲೆ ಇಂದಿಗೂ ಜನರ ಮನದಲ್ಲಿದೆ. ಅಮರ್ ಆಳ್ವ ಆಗಾಗ ಮಿಲಾಗ್ರಿಸ್‌ನಲ್ಲಿದ್ದ ಸೂಪರ್ ಮಾರ್ಕೆಟ್‌ಗೆ ಬರುತ್ತಿದ್ದ. ಅದನ್ನು ಹಂತಕರು ಗಮನಿಸಿದ್ದರು. ೧೯೯೨ರ ಜುಲೈ ೧೪ರಂದು ಸಂಜೆ ಅಮರ್ ಆಳ್ವ ಕೆಲವೇ ಹೊತ್ತಿನಲ್ಲಿ ತಾನು ಹಂತಕರ ಗುಂಡಿಗೆ ಗುರಿಯಾಗಲಿದ್ದೇನೆ ಎಂಬ ಅರಿವಿಲ್ಲದೇ ಗೆಳೆಯರೊಂದಿಗೆ ಹರಟುತ್ತಿದ್ದ.
ಆಗ ಸಿಡಿಯಿತು ಗುಂಡು...!
ನಾಲ್ಕು ಜನರಿದ್ದ ಹಂತಕ ಪಡೆ ಯದ್ವಾತದ್ವಾ ಗುಂಡು ಹಾರಿಸಿತು. ಅಮರ್ ಆಳ್ವರ ಅವರ ಕಡೆಯವರೂ ಗುಂಡು ಸಿಡಿಸಿದರು. ಗುಂಡು ತಾಗಿ ಗಾಯಗೊಂಡ ಅಮರ್ ಆಳ್ವ ಫಳ್ನೀರ್ ಕಡೆ ಓಡಿದ. ಹಂತಕರು ಅಟ್ಟಿಸಿಕೊಂಡು ಹೋದರು. ರಸ್ತೆ ಮದ್ಯದಲ್ಲಿ ಬಿದ್ದ ಅಮರ್ ಆಳ್ವನಿಗೆ ಕಡಿದರು. ಇನ್ನು ಆತ ಬದುಕಲಾರ ಎಂಬುದು ಗ್ಯಾರಂಟಿಯಾದಾಗ ಹಂತಕ ಪಡೆ ರಿಕ್ಷಾ ಹತ್ತಿ ಪರಾರಿಯಾಯಿತು. ಅಮರ್ ಆಳ್ವನನ್ನು ಆಸ್ಪತ್ರೆಗೆ ಸೇರಿದರೂ ಪ್ರಯೋಜನವಾಗಲಿಲ್ಲ. ಅವರ ತಲೆಗೆ ಗುಂಡು ತಾಗಿದ್ದರೆ, ಕುತ್ತಿಗೆ, ಕೈ ಮೇಲೆಲ್ಲ ಕಡಿದ ಗಾಯಗಳಿದ್ದವು.
ಈ ಘಟನೆಯಲ್ಲಿ ಮಂಜುನಾಥ ಶೆಟ್ಟಿ, ಜಗನ್ನಾಥ್ ಶೆಟ್ಟಿ, ವಿಜಯ ನಾಯ್ಕ್, ರಮೇಶ್ ಭಟ್, ಕೇದಾರನಾಥ್, ಸುದರ್ಶನ್, ಬಾಲಕೃಷ್ಣ ರಾವ್ ಗಾಯಗೊಂಡಿದ್ದರು. ಕೆಲವರು ಅಮರ್ ಆಳ್ವನೊಟ್ಟಿಗೆ ಸಂಬಂಧ ಇಲ್ಲದವರೂ ಇದ್ದರು.ಇಷ್ಟೆಲ್ಲ ನಡೆದದ್ದು ಸಂಜೆ ೭.೪೫ಕ್ಕೆ. ಕೊಲೆ ಸುದ್ದಿ ಹಬ್ಬುತ್ತಿದ್ದಂತೆ ಅಮರ್ ಆಳ್ವ ಅವರ ಶವ ಇರಿಸಿದ್ದ ಸಿಟಿ ಆಸ್ಪತ್ರೆ ಎದುರು ಅಪಾರ ಸಂಖ್ಯೆಯ ಜನ ಸೇರಿದ್ದರು. ಮಂಗಳೂರು ಭಾಗಶಃ ಬಂದ್ ಆಗಿತ್ತು. ಮೆರವಣಿಗೆಯಲ್ಲಿಯೆ ಅಮರ್ ಆಳ್ವ ಶವ ಮನೆಗೆ ತೆಗೆದುಕೊಂಡು ಹೋಗಿ, ಅವತ್ತೇ ಅಂತ್ಯ ಸಂಸ್ಕಾರ ಮಾಡಲಾಯಿತು. ಮಂಗಳೂರು ಮಟ್ಟಿಗೆ ದೊಡ್ಡ ಹೆಸರು ಮಾಡಿದ್ದ ಅಮರ್ ಆಳ್ವ ಕತೆ ಮುಗಿದೇಹೋಗಿತ್ತು.
ಕೊಲೆ ನಡೆದ ಸ್ಥಳದಲ್ಲಿ ಎರಡು ಜೀವಂತ ಹಾಗೂ ಐದು ಖಾಲಿ ಗುಂಡುಗಳು ದೊರಕಿದ್ದವು.
ಸಿಕ್ಕಿಬಿದ್ದ ಆರೋಪಿ: ಅಮರ್ ಆಳ್ವನ ಕಡೆರಯವರು ಹಾರಿಸಿದ ಗುಂಡಿನಿಂದ ಹಂತಕ ಪಡೆಯ ಒಬ್ಬ ಗಾಯಗೊಂಡಿದ್ದ. ಹಾಗೆ ಪೊಲೀಸರು ಆಸ್ಪತ್ರೆಗಳ ಮೇಲೆ ಕಣ್ಣಿಟ್ಟರು. ಪರಾರಿಯಾಗುವ ದಾರಿಯಲ್ಲಿ ಗಾಯಗೊಂಡ ಆರೋಪಿ ಕಿನ್ನಿಗೋಳಿಯ ಆಸ್ಪತ್ರೆಯೊಂದರಲ್ಲಿ ದಾಖಲಾಗಿದ್ದ. ಸ್ಥಿತಿ ಗಂಭೀರವಾಗಿದ್ದರಿಂದ ಆತನನ್ನು ಮಣಿಪಾಲ ಆಸ್ಪತ್ರೆಗೆ ದಾಖಲಿಸಲಾಯಿತು. ಆತನ ಹೆಸರು ಯತೀಶ ಶೆಟ್ಟಿ. ಸುಳ್ಳು ಹೆಸರು, ವಿಳಾಸ ನೀಡಿ ಈತನನ್ನು ಆಸ್ಪತ್ರೆಯಲ್ಲಿ ಇಡಲಾಗಿತ್ತಾದರೂ ಪೊಲೀಸರಿಗೆ ಗೊತ್ತಾಗಿಬಿಟ್ಟಿತ್ತು. ಎರಡು ದಿನ ಬಿಟ್ಟು ಆತನನ್ನು ಪೊಲೀಸರು ವಿಚಾರಣೆಗೆ ಗುರುಪಡಿಸಿದರು. ಆಗ ಇತರ ಆರೋಪಿಗಳಾದ ಮುರಳಿ ಯಾನೆ ಮುರಳೀಧರ, ಶ್ರೀಕರ, ಬಾಲಕೃಷ್ಣ ಶೆಟ್ಟಿ ಯಾನೆ ಬಾಲೇಶ ಎಂಬವರೊಂದಿಗೆ ಸೇರಿ ಅಮರ್ ಆಳ್ವನನ್ನು ಕೊಲೆ ಮಾಡಿದ್ದಾಗಿ ಒಪ್ಪಿಕೊಂಡ.
ಕಾರಣ: ೧೯೯೧ರ ಡಿಸೆಂಬರ್ ೩೧ರಂದು ಉಡುಪಿಯ ಎಂಜಿಎಂ ಕಾಲೇಜು ಬಳಿ ಬಶೀರ್ ಎಂಬವರು ತೆಗೆದುಕೊಂಡು ಹೋಗುತ್ತಿದ್ದ ೬ ಲಕ್ಷ ರೂ.ಗಳನ್ನು ಯಾರೋ ಅಪಹರಿಸಿದ್ದರು. ಆರೋಪಿಗಳನ್ನು ಪತ್ತೆ ಹಚ್ಚಿ ಹಣ ವಾಪಸ್ ಕೊಡಿಸುವಂತೆ ಬಶೀರ್ ಪುರುಷೋತ್ತಮ ಶೆಟ್ಟಿ ಎಂಬವರ ಬಳಿ ಕೇಳಿಕೊಂಡಿದ್ದ. ಯತೀಶ್, ಮುರುಳಿ ಹಾಗೂ ಇತರರೆ ಆ ಹಣ ಅಪಹರಿಸಿದ್ದು ಎಂಬುದನ್ನು ಪತ್ತೆ ಮಾಡಿದ ಪುರುಷೋತ್ತಮ ಶೆಟ್ಟಿ, ಅವರಿಂದ ಹಣ ವಾಪಸ್ ಕೊಡಿಸುವಂತೆ ಅಮರ್ ಆಳ್ವನಿಗೆ ವಿನಂತಿಸಿದ್ದ. ಅವನ ವಿನಂತಿಯಂತೆ ಅಮರ್ ಆಳ್ವನ ಸಹಚರರು ಯತೀಶನಿಗೆ ಹಣ ಕೊಡುವಂತೆ ಬೆದರಿಸಿದ್ದರು. ಒಮ್ಮೆ ಯತೀಶ ಇಲ್ಲದಾಗ ಆತನ ಮನೆಗೆ ಹೊದ ಕೆಲವರು ಬಂದೂಕು ತೋರಿಸಿ ಹೆದರಿಸಿ ಬಂದಿದ್ದರು. ಇದರಿಂದ ಹೆದರಿದ ಯತೀಶ ಹಾಗೂ ಸಂಗಡಿಗರು ಮುಂಬಯಿ, ಗೋವಾಕ್ಕೆ ಹೋಗಿ ಅಡಗಿಕೊಂಡರು. ಅಲ್ಲೂ ಅಮರ್ ಆಳ್ವ ಅನುಚರರು ಅವರನ್ನು ಬೆಂಬತ್ತಿದರು. ಯತೀಶನಿಗೆ ದಿನ ಕಳೆದಂತೆ ಅಭದ್ರತೆ ಕಾಡತೊಡಗಿತ್ತು. ತಾನು ಎಷ್ಟೊತ್ತಿಗೆ ಅಮರ್ ಆಳ್ವ ಸಂಗಡಿಗರಿಂದ ಕೊಲೆಯಾಗಿ ಬಿಡತ್ತೇನೊ ಎಂಬ ಆತಂಕ.
ಈ ಆತಂಕದಿಂದಾಗಿಯೇ ಆತನ ತಲೆಯಲ್ಲಿ ಅಮರ್ ಆಳ್ವನನ್ನು ಮುಗಿಸದೆ ತಾನು ಸಮಾಧಾನದಿಂದಿರುವುದು ಸಾಧ್ಯವೇ ಇಲ್ಲ ಎಂಬ ಅರಿವು ಮೂಡಿತು. ತಕ್ಷಣ ಆತ ಮುಂಬಯಿಯ ಕೆಲವು ಭೂಗತ ಲೋಕದ ವ್ಯಕ್ತಿಗಳನ್ನು ಸಂಪರ್ಕಿಸಿದ. ಅವರಲ್ಲಿ ಬಲ್ಲಾಳ್‌ಭಾಗ್ ರಘು ಎಂಬವನ ಮೂಲಕ ಮೂಲಕ ದುಬೈನಲ್ಲಿರುವ ಅಮರ್ ಆಳ್ವನ ವಿರೋಧಿ ಅಶೋಕ್ ಶೆಟ್ಟಿಯ ಸಂಪರ್ಕ ಸಿಕ್ಕಿತು. ಅಮರ್ ಆಳ್ವನ ಕೊಲೆ ಮಾಡುವ ಯತೀಶ ಐಡಿಯಾಕ್ಕೆ ಅಶೋಕ್ ಶೆಟ್ಟಿ ಹಣ ಒದಗಿಸಿ ನೀರೆರೆದ. ಅಮರ್ ಕೊಲೆ ಸ್ಕೆಚ್ ರೆಡಿಯಾಯ್ತು.
ಯೋಜನೆಯಂತೆ ೧೯೯೨ರ ಜೂ.೧೧ರಂದು ಅಂದರೆ ಅಮರ್ ಆಳ್ವನ ಕೊಲೆಯಾಗುವ ೩೩ ದಿನ ಮೊದಲು ಯತೀಶ ಹಾಗೂ ಸಂಗಡಿಗರು ಬಂದೂಕುಗಳೊಂದಿಗೆ ಮಂಗಳೂರಿನಲ್ಲೊಂದು ಬಾಡಿಗೆ ಮನೆ ಪಡೆದು ಠಿಕಾಣಿ ಹೂಡಿದರು. ಅವರಲ್ಲಿ ಇಬ್ಬರು ಹಂಪನಕಟ್ಟೆಯಲ್ಲಿರುವ ಹೋಟೆಲ್ ಒಂದರಲ್ಲಿ ರೂಂ ಮಾಡಿ ಅಮರ್ ಆಳ್ವನ ಚಲನವಲನ ವೀಕ್ಷಿಸುತ್ತಿದ್ದರು. ಅಮರ್ ಆಳ್ವ ಆಗಾಗ ಮಿಲಾಗ್ರಿಸ್‌ನ ಸೂಪರ್ ಮಾರ್ಕೆಟ್‌ಗೆ ಬರುತ್ತಿರುವುದು ಅವರ ಕಣ್ಣಿಗೆ ಬಿದ್ದಿತ್ತು. ಒಮ್ಮೆ ಅಮರ್ ಆಳ್ವ ಕೊಲೆ ಮಾಡಲು ಹಂತಕರು ನಿರ್ಧರಿಸಿದ್ದರಾದರೂ ಹೆಂಡತಿ- ಮಕ್ಕಳು ಜತೆಯಲ್ಲಿದ್ದರು. ಅವತ್ತು ಅಮರ್ ಆಳ್ವ ಬದುಕಿದ್ದ. ಆದರೆ ಜು.೧೪ರಂದು ಹಂತಕರು ಯಾವುದೇ ದಾಕ್ಷಿಣ್ಯ ತೋರಲಿಲ್ಲ. ಗುಂಡು ಹಾರಿಸಿಯೇ ಬಿಟ್ಟರು.
ಪೊಲೀಸರು ಅಮರ್ ಆಳ್ವ ಪ್ರಕರಣದಲ್ಲಿ ಒಟ್ಟು ೭ ಮಂದಿ ಆರೋಪಿಗಳನ್ನು ಗುರುತಿಸಿದರು. ಅವರಲ್ಲಿ ಯತೀಶ, ಮುರಳಿ, ಶ್ರೀಕರ ಹಾಗೂ ಬಾಲಕೃಷ್ಣನನ್ನು ಬಂಧಿಸಿದರು. ಉಳಿದವರು ನಾಪತ್ತೆಯಾಗಿಯೇ ಉಳಿದರು. ದುಬೈನಲ್ಲಿರುವ ಅಶೋಕ ಶೆಟ್ಟಿ ಗಡಿಪಾರಿಗೆ ದಾಖಲೆಗಳನ್ನು ಕಳುಹಿಸಿದರು. ಅದಕ್ಕೆ ಇವತಿನವರೆಗೂ ಉತ್ತರ ಬಂದಿಲ್ಲ.ಪ್ರಕರಣ ವಿಚಾರಣೆ ನಡೆಸಿದ ನ್ಯಾಯಾಲಯ ಅಮರ್ ಆಳ್ವ ಕೊಲೆಯ ಬಂಧಿತ ನಾಲ್ಕು ಮಂದಿ ಆರೋಪಿಗಳನ್ನು ದೋಷಮುಕ್ತಗೊಳಿಸಿ ತೀರ್ಪು ನೀಡಿತು. ಹಂಪನಕಟ್ಟೆಯಂಥ ಸಾರ್ವಜನಿಕ ಸ್ಥಳದಲ್ಲಿ ಹಲವಾರು ಕಣ್ಣುಗಳ ಎದುರೇ ಕೊಲೆ ನಡೆದರೂ ಸರಿಯಾದ ಸಾಕ್ಷಿ ಯಾರೂ ಇರಲಿಲ್ಲ. ಇದ್ದರೂ ಹೇಳಲಿಲ್ಲ. ಭೂಗತ ಲೋಕದ ಮಂದಿಗೆ ಹೆದರಿದ ಜನ ಸಾಕ್ಷಿ ಹೇಳಲು ಹೆದರುತ್ತಾರೆ. ಅಮರ್ ಆಳ್ವ ಪ್ರಕರಣದಲ್ಲಿ ಆದದ್ದೂ ಅದೇ. ಭುಹುಶಃ ಸುಬ್ಬರಾವ್ ಪ್ರಕರಣದಲ್ಲೂ ಆಗುವುದು ಅದೇ.

೧೬ ವರ್ಷಗಳ ನಂತರ

ಮೊದಲಿಗೆ ಹೋಲಿಸಿದರೆ ಮಂಗಳೂರಿನಲ್ಲಿ ಭೂಗತ ಲೋಕದ ಚಟುವಟಿಕೆಗಳು ಗಣನೀಯವಾಗಿ ಕಡಿಮೆಯಾಗಿವೆ. ಹೀಗಿದ್ದೂ ೧೬ ವರ್ಷಗಳ ನಂತರ ಮಂಗಳೂರಿನಲ್ಲಿ ವ್ಯಕ್ತಿಯೊಬ್ಬರನ್ನು ಗುಂಡಿಕ್ಕಿ ಕೊಲೆ ಮಾಡಲಾಗಿದೆ. ಎರಡೂ ಹತ್ಯೆ ನಡೆದಿರುವುದು ಜುಲೈ ತಿಂಗಳಲ್ಲಿ!೧೯೯೨ರದಲ್ಲಿ ರಂದು ಸಂಜೆ ಅಮರ್ ಆಳ್ವನನ್ನು ಹಂಪನಕಟ್ಟೆ ಸಮೀಪ ಲಾಟರಿ ಅಂಗಡಿಯಲ್ಲಿ ಮೆಶಿನ್‌ಗನ್‌ನಿಂದ ಗುಂಡಿಕ್ಕಿ ಕೊಲೆ ಮಾಡಲಾಗಿತ್ತು. ಅದರ ನಂತರ ಈಗ ನಡೆದಿರುವ ಸುಬ್ಬರಾವ್ ಹತ್ಯೆ. ಇದು ಮಂಗಳೂರು ನಗರದಲ್ಲಿ ನಡೆದ ಎರಡನೇ ಶೂಟೌಟ್ ಪ್ರಕರಣ.೧೯೯೨ರ ಜು.೧೪ರಂದು ರಾತ್ರಿ ೭.೪೫ಕ್ಕೆ ನಾಲ್ಕು ಜನರಿದ್ದ ಹಂತಕ ಪಡೆ ಲಾಟರಿ ಅಂಗಡಿ ಎದುರಿದ್ದ ಅಮರ ಆಳ್ವ ಮೇಲೆ ಯದ್ವಾತದ್ವಾ ಗುಂಡು ಹಾರಿಸಿತ್ತು.ಸುಬ್ಬರಾವ್ ಹತ್ಯೆ ಕೂಡ ನಡೆದಿರುವುದು ಕೂಡ ರಾತ್ರಿ ೯.೪೫ಕ್ಕೆ. ೧೬ ವರ್ಷದ ಹಿಂದೆ ಶೂಟೌಟ್ ನಡೆದ ಹಂಪನಕಟ್ಟೆಯಿಂದ ಕೇವಲ ೧ ಕಿ.ಮೀ. ಅಂತರದಲ್ಲಿ ಈಗ ಇನ್ನೊಂದು ಶೂಟೌಟ್ ನಡೆದಿದೆ. ಇದರಲ್ಲಿ ಸುಬ್ಬರಾವ್ ಅವರಿಗೆ ತೀರ ಸಮೀಪದಿಂದ ಅಂದರೆ ೧೦ ಅಡಿ ಅಂತರದೊಳಗಿನಿಂದ ಗುಂಡು ಹಾರಿಸಲಾಗಿದೆ.ಸಾಮಾನ್ಯವಾಗಿ ದಕ್ಷಿಣ ಕನ್ನಡ ಜಿಲ್ಲೆಯ ಭೂಗತ ಜಗತ್ತಿನ ವ್ಯಕ್ತಿಗಳು ತಲವಾರು ಬಳಸುತ್ತಾರೆ. ಗುಂಡು ಹಾರಿಸಿರುವ ಕಾರಣ ಮುಂಬಯಿ ಭೂಗತ ಜಗತ್ತಿನ ಕೈವಾಡ ಇರುವ ಶಂಕೆ ವ್ಯಕ್ತವಾಗಿದೆ.

ಬಿಲ್ಡರ್ ಸುಬ್ಬರಾವ್ ಹತ್ಯೆ




ಮಯೂರ ಬಿಲ್ಡರ್ ಸಂಸ್ಥೆ ಮಾಲಿಕ ಸುಬ್ಬರಾವ್ ಅವರನ್ನು ಸೋಮವಾರ ರಾತ್ರಿ ಗುಂಡಿಕ್ಕಿ ಹತ್ಯೆ ಮಾಡಲಾಗಿದೆ.
ಕೆ.ಎಸ್.ರಾವ್ ರಸ್ತೆಯ ಗಣೇಶ ಮಹಲ್ ಕಾಂಪ್ಲೆಕ್ಸ್‌ನ ಕೆಳಮಹಡಿಯಲ್ಲಿರುವ ಕಚೇರಿಯಿಂದ ಮನೆಗೆ ಹೋಗಲೆಂದು ಸೋಮವಾರ ರಾತ್ರಿ ೯.೪೫ಕ್ಕೆ ಸುಬ್ಬರಾವ್ ಅವರು ಕೆ.ಎಸ್. ರಾವ್ ರಸ್ತೆಗೆ ಆಗಮಿಸಿದಾಗ ದುಷ್ಕರ್ಮಿ ಪಿಸ್ತೂಲಿನಿಂದ ಗುಂಡು ಹಾರಿಸಿದ್ದಾನೆ. ಸುಬ್ಬರಾವ್ ಅವರಿಗೆ ಮೂರು ಗುಂಡು ತಾಗಿದ್ದರೆ, ಇನ್ನೊಂದು ಗುಂಡು ಕಾರಿನ ಕಿಟಕಿ ಗಾಜಿಗೆ ತಾಗಿ ಕರಾವಳಿ ಮಾರುತ ಪತ್ರಿಕೆಯ ಸಂಪಾದಕ ಸುದೇಶ್ ಅವರ ಕೈಗೆ ಸವರಿಕೊಂಡು ಹೋಗಿದೆ. ಒಂದು ಗುಂಡು ಗುರಿತಪ್ಪಿದೆ. ಘಟನಾ ಸ್ಥಳದಲ್ಲಿ ಒಂದು ಸಜೀವ ಗುಂಡು ದೊರೆತಿದೆ. ಕಾರಿನಲ್ಲಿ ಕೂಡ ಗುಂಡು ತಾಗಿದ ಕುರುಹು ಪತ್ತೆಯಾಗಿದೆ.ಒಟ್ಟು ಮೂವರು ಈ ಕೃತ್ಯದಲ್ಲಿ ಪಾಲ್ಗೊಂಡಿದ್ದಾರೆ ಎಂದು ಶಂಕಿಸಲಾಗಿದೆ.
ಸುಬ್ಬರಾವ್ ಅವರನ್ನು ಮನೆಗೆ ಕರೆದುಕೊಂಡು ಹೋಗಲೆಂದು ಸುದೇಶ್ ಕಾರನ್ನು ಕೆ.ಎಸ್. ರಾವ್ ರಸ್ತೆಯಲ್ಲಿ ತಂದು ನಿಲ್ಲಿಸಿದ್ದರು. ಸುದೇಶ್ ಮತ್ತು ಸುಬ್ಬರಾವ್ ಕಚೇರಿಯಿಂದ ರಸ್ತೆಗೆ ಬಂದಿದ್ದರು. ಸುದೇಶ್ ಚಾಲಕ ಸೀಟಿನಲ್ಲಿ ಕುಳಿತಿದ್ದರು. ಸುಬ್ಬರಾವ್ ಅವರು ಕಾರಿನ ಇನ್ನೊಂದು ಬದಿಯಿಂದ ಮುಂದಿನ ಸೀಟಿನಲ್ಲಿ ಕುಳಿತುಕೊಳ್ಳಲೆಂದು ಬಾಗಿಲು ತೆಗೆಯಲು ಕೈ ಇಟ್ಟ ಸಂದರ್ಭ ದುಷ್ಕರ್ಮಿ ಮೊದಲ ಗುಂಡು ಹಾರಿಸಿದ್ದಾನೆ. ಪ್ರತ್ಯಕ್ಷದರ್ಶಿಗಳ ಪ್ರಕಾರ ಮೊದಲ ಗುಂಡು ಯಾರಿಗೂ ತಾಗಿಲ್ಲ. ಎರಡು, ಮೂರು ಮತ್ತು ನಾಲ್ಕನೇ ಗುಂಡು ಸುಬ್ಬರಾವ್ ಅವರಿಗೆ ತಾಗಿದೆ. ಸುಬ್ಬರಾವ್ ಕುಸಿದು ಬಿದ್ದ ಪರಿಣಾಮ ಐದನೇ ಗುಂಡು ಕಾರಿನ ಕಿಟಕಿ ಗಾಜು ಪುಡಿ ಮಾಡಿ ಒಳ ನುಗ್ಗಿ ಸುದೇಶ್ ಅವರ ಎಡಗೈ ತೋಳು ಸವರಿಕೊಂಡು ಹೋಗಿದೆ.
ಘಟನಾ ಸ್ಥಳದಲ್ಲಿಯೇ ಇದ್ದ ಮಿಥುನ್ ತಕ್ಷಣ ಚೇತರಿಸಿಕೊಂಡು ಗುಂಡಿಕ್ಕಿದವನ ಬೆನ್ನಟ್ಟಲು ಯತ್ನಿಸಿದರು. ಆದರೆ ದುಷ್ಕರ್ಮಿಗಳಲ್ಲಿ ಒಬ್ಬ ಸುಜಾತ ಹೋಟೆಲ್ ತಿರುವಿನಲ್ಲಿ ಬೈಕ್ ಚಾಲೂ ಇಟ್ಟು ಕಾಯುತ್ತಿದ್ದ. ಗುಂಡಿಕ್ಕಿದ ವ್ಯಕ್ತಿ ಬೈಕ್ ಏರಿ ಪರಾರಿಯಾಗಿದ್ದಾರೆ. ಮಿಥುನ್ ಓಡುವಾಗ ಆರಂಭದಲ್ಲಿಯೇ ಒಬ್ಬ ವ್ಯಕ್ತಿ ಅಡ್ಡ ಬಂದಿದ್ದು, ಆತನೂ ಕೊಲೆಯ ಸಂಚಿನ ಭಾಗೀದಾರನಾಗಿರುವ ಸಾಧ್ಯತೆ ಇದೆ. ಹತ್ಯೆ ನಡೆಸಿದ ವ್ಯಕ್ತಿ ಕುಳ್ಳಗೆ, ತೆಳ್ಳಗೆ ಇದ್ದು, ಯುವಕನಂತಿದ್ದ ಎಂದು ಸುದೇಶ್ ಹೇಳುತ್ತಾರೆ.ಸುಬ್ಬರಾವ್ ನಗರದಲ್ಲಿ ಹಲವು ವರ್ಷದಿಂದ ಮಯೂರ ಮಿನಿ ಥಿಯೇಟರ್, ಸಿಡಿ ಅಂಗಡಿಗಳನ್ನು ನಡೆಸುತ್ತಿದ್ದರು. ಭ್ಲ್ಯೂಫಿಲಂ ಮಾಫಿಯಾದಲ್ಲೂ ಗುರುತಿಸಿಗೊಂಡಿದ್ದರು. ಎರಡೂವರೆ- ಮೂರು ವರ್ಷದ ಹಿಂದೆ ಸುಬ್ಬರಾವ್ ಅವರು ರಿಯಲ್ ಎಸ್ಟೇಟ್ ಮತ್ತು ಕಟ್ಟಡ ನಿರ್ಮಾಣ ಉದ್ಯಮಕ್ಕೆ ಇಳಿದಿದ್ದರು. ಅದರ ನಂತರವೇ ಅಂದರೆ ಒಂದೂವರೆ ವರ್ಷದ ಹಿಂದೆ ಅವರಿಗೆ ಬೆದರಿಕೆ ಕರೆಗಳು ಬಂದಿದ್ದವು. ಆದರೆ ಇತ್ತೀಚೆಗೆ ಸುಬ್ಬರಾವ್ ಸುದ್ದಿಯಲ್ಲಿ ಇರಲಿಲ್ಲ. ಮಯೂರ ಬಿಲ್ಡರ್ಸ್ ವತಿಯಿಂದ ಪಾಂಡೇಶ್ವರದಲ್ಲಿ ಒಂದು ಅಪಾರ್ಟ್‌ಮೆಂಟ್ ನಿರ್ಮಾಣ ಪೂರ್ಣಗೊಂಡಿದ್ದು, ಕದ್ರಿಯಲ್ಲಿ ಇನ್ನೊಂದು ಅಪಾರ್ಟ್‌ಮೆಂಟ್ ನಿರ್ಮಾಣ ಕಾರ್ಯ ಆರಂಭಗೊಂಡಿದೆ. ಉದ್ಯಮದಲ್ಲಿನ ದ್ವೇಷ ಅಥವಾ ವ್ಯವಹಾರದಲ್ಲಿನ ದ್ವೇಷವೇ ಹತ್ಯೆಗೆ ಕಾರಣ ಎಂದು ಶಂಕಿಸಲಾಗಿದೆ.
ಸುಬ್ಬರಾವ್ ಅವರಿಗೆ ಸಧ್ಯ ಬೆದರಿಕೆ ಕರೆಗಳು ಬಂದ ಬಗ್ಗೆ ಮಾಹಿತಿ ಇಲ್ಲ ಎಂದು ಎಸ್ಪಿ ಸತೀಶ ಕುಮಾರ್ ಹೇಳಿದ್ದಾರೆ. ಮಂಗಳೂರು ಗ್ರಾಮಾಂತರ ಸರ್ಕಲ್ ಇನ್‌ಸ್ಪೆಕ್ಟರ್ ಜಯಂತ ವಿ. ಶೆಟ್ಟಿ ಅವರ ನೇತೃತ್ವದಲ್ಲಿ ಒಂದು ತಂಡ ಈಗಾಗಲೇ ಆರೋಪಿಗಳ ಪತ್ತೆಗೆ ಕಾರ್ಯ ಪ್ರವೃತ್ತವಾಗಿದೆ. ಬಂದರು ಇನ್‌ಸ್ಪೆಕ್ಟರ್ ಉಮೇಶ ಶೇಟ್ ನೇತೃತ್ವದಲ್ಲಿ ಇನ್ನೊಂದು ತಂಡ ತನಿಖೆ ನಡೆಸಲಿದೆ.

Sunday, July 29, 2007

ಮಂಥನದ ಕುರಿತು ಚಿಕ್ಕ ಚಿಂತನೆ

ಚಿಕ್ಕ ವಾಕ್ಯ. ಎಲ್ಲ ಅರ್ಧರ್ಧ. ನ್ಯಾಚುರಲ್ಲು ಅನಿಸಲ್ಲ. ವಾಕ್ಯ ಆರ್ಧಕ್ಕೇ ತುಂಡಾಗುತ್ತೆ. ಮನಸ್ಸಿಗೆ ಹರ್ಟಾಗುತ್ತೆ. ಧಾರಾವಾಹಿ ನೋಡೋದು ಸಾಕು ಅನ್ಸತ್ತೆ. ಚಾನಲ್ ಬದಲಾಯಿಸಿದ್ರೆ ಮನ್ಸು ನಿರಾಳ.
ಅಯ್ಯೋ! ಈ ಮಂಥನ ಧಾರವಾಹಿ ಪ್ರಭಾವ. ಈಟಿವಿಲಿ ರಾತ್ರಿ ೧೦.೦೦ ಗಂಟೆಗೆ ಪ್ರಸಾರವಾಗೋ ಧಾರಾವಾಹಿ ನೋಡಿದ ಪರಿಣಾಮ. ನಾನೂ ಅದೇ ಥರ ಬರೆಯೋಕೆ ಶುರುಮಾಡಿಬಿಟ್ಟೆ. ಅದೇಕೋ? ಅದೇನೋ? ಇತ್ತೀಚೆಗೆ ಮಂಥನ ಧಾರವಾಹಿ ನೋಡೋಕೆ ಕಷ್ಟ ಆಗ್ತಿದೆ. ಡೈಲಾಗ್‌ಗಳೆಲ್ಲ ಅರ್ಧರ್ಧ. ಒಂಥರಾ ಆರ್ಟಿಫಿಶಿಯಲ್ಲು ಅನ್ನಿಸೋಕೆ ಶುರುವಾಗಿದೆ. ಲಂಚ ಪಡೆಯದಿರೋ ಅಪರೂಪದ (ಸೌಂದರ್ಯದಲ್ಲಿ ಮತ್ತು ನಿಯತ್ತಿನಲ್ಲಿ) ಡಿಸಿಯನ್ನೇ ಕೇಂದ್ರೀಕರಿಸಿ ಇರೋ ಕಥೆ ಆರಂಭದಲ್ಲಿ ಚೆನ್ನಾಗಿದೆ ಅನ್ನಿಸುತ್ತಿತ್ತು. ಬರಬರುತ್ತ ಬೋರ್ ಆಗ್ತಿದೆ. ಅಪ್ಪ- ಮಗಳು ಮಾತಾಡುವಾಗಲೂ ಹರ್ಟ್ ಆಗುತ್ತೆ, ಮನಸ್ಸು ನಿರಾಳ ಅಂತೆಲ್ಲ ಶಬ್ದಗಳ ಪ್ರಯೋಗ. ನಾವು ನಮ್ಮ ತಂದೆ-ತಾಯಿಯ ಬಳಿ ಮಾತಾಡುವಾಗ ‘ಹರ್ಟ್-ನಿರಾಳ’ ಎಂಬೆಲ್ಲ ಶಬ್ದ ಬಳಸುತ್ತೇವಾ? ಖಂಡಿತ ಇಲ್ಲ. ಆಡು ಭಾಷೆಯಲ್ಲಿ ನಿರಾಳ ಅನ್ನೋ ಶಬ್ದದ ಬಳಕೆಯೇ ನಿಂತುಹೋಗಿದೆ. ಇದ್ದುದರಲ್ಲಿ ಶಿವಶಂಕರ ರೆಡ್ಡಿ ಡೈಲಾಗ್‌ಗಳು ಚೆನ್ನಾಗಿರುತ್ತವೆ.
ಇಂತಹ ಕಾರಣಗಳಿಗಾಗಿಯೇ ಮಂಥನ ನೋಡೋವಾಗ ಕಿರಿಕಿರಿ ಅನ್ನಿಸ್ತಾ ಇದೆ. ನಿಮಗ್ಯಾರಿಗಾದ್ರೂ ಮಂಥನ ಧಾರವಾಹಿ ಡೈಲಾಗ್ ಬರೆಯೋರು ಪರಿಚಯ ಇದ್ರೆ ಪ್ಲೀಸ್ ಅವ್ರಿಗೆ ತಿಳ್ಸಿ.
ಇದೇ ಥರದ ಸಮಸ್ಯೆ ಟಿವಿ೯ ನ್ಯೂಸ್ ನೋಡೋವಾಗಲೂ ಉಂಟು. ಅವರೂ ಅಷ್ಟೆ ಸುದ್ದಿಯನ್ನು ಮಾತನಾಡುವ ಭಾಷೆಯಲ್ಲಿ ಓದುತ್ತಾರೆ. ಅದು ಕೇಳೋಕೆ ಅಷ್ಟು ಚೆನ್ನಾಗಿರುವುದಿಲ್ಲ. ಸುದ್ದಿಯನ್ನು ಹೇಗೆ ಓದಬೇಕೋ ಹಾಗೆ ಓದಬೇಕು. ಅದು ನಮ್ಮ ಮನಸ್ಸಿನಲ್ಲಿ ಸ್ಥಿರವಾಗಿದೆ. ಸುದ್ದಿ ಎಂದರೆ ಹೀಗೇ ಓದಬೇಕು ಅಂತ ಮನಸ್ಸಿನಲ್ಲಿ ಪಕ್ಕಾಗಿದೆ. ಹಾಗಾಗಿ ಬೇರೆ ಥರ ಓದಿದರೆ ಸ್ವೀಕರಿಸೋದು ಕಷ್ಟ. ಅದಕ್ಕಿಂತ ಹೆಚ್ಚಾಗಿ ಆಡು ಬಾಷೆಯಲ್ಲಿ ಸುದ್ದಿ ಓದಿದರೆ ಗಂಭೀರ ಅಂತ ಅನ್ನಿಸೋದೇ ಇಲ್ಲ. ನೀವೇನಂತೀರಾ?

Wednesday, July 25, 2007

ಹೆ(ವಿ)ಲಿಕಾಪ್ಟರು ಮತ್ತು ಕಾಲೇಜು



ಕ್ರಿಕೆಟ್ಟು, ಫಿಲ್ಮು ನೋಡುವಾಗ ಪಕ್ಕನೆ ಕರೆಂಟ್ ಹೋಗೋದು, ಹಾರೋ ಹೆಲಿಕಾಪ್ಟರ್‌ಗಳು ತಟ್ಟನೆ ಕೆಳಗಿಳಿಯೋದು ಎರಡೂ ಇತ್ತೀಚೆಗೆ ಹೆಚ್ಚಾಗ್ಬಿಟ್ಟಿವೆ. ಒಂದು ವರ್ಷದ ಹಿಂದೆ ಶಿರಸಿಯಲ್ಲಿ ಒಂದು ಹೆಲಿಕಾಪ್ಟರ್ ಬಂದು ಮರದ ಮೇಲೆ ಪವಡಿಸಿತ್ತು. ಕಳೆದ ವಾರ ಸೋನಿಯಾ ಗಾಂಧಿಯ ಕಾರ್ಯಕ್ರಮದಲ್ಲಿ ಒಂದು ಹೆಲಿಕಾಫ್ಟರ್ ಗಡಿಬಿಡಿಯಲ್ಲಿ ಕೆಳಗಿಳಿಯಿತು. ಹಿಂದಿನ ವಾರ ಹೀಗೆ ಗಡಿಬಿಡಿ ಮಾಡಿದ ಚಿಕ್ಕ ವಿಮಾನ ಸೌಂದರ್ಯ ಸೇರಿದಂತೆ ನಾಲ್ಕು ಜನರ ಜೀವ ತಗೊಂಡು ಹೋಯ್ತು.

ಇತ್ತೀಚೆಗೆ ಮುಖ್ಯಮಂತ್ರಿ ಕುಮಾರಸ್ವಾಮಿ ಎರಡು ಬಾರಿ ಇಳಿಯಬೇಕಾದಲ್ಲಿ ಇಳಿಯದೆ ಇನ್ನೆಲ್ಲೋ ಇಳಿದರು. ಒಮ್ಮೆ ಕೆರೆಯಲ್ಲಿ ಹೆಲಿಕಾಫ್ಟರ್ ಇಳಿದರೂ, ನೀರಿಲ್ಲದೇ ಇದ್ದುದರಿಂದ ಬಚಾವಾದರು.ಈ ಹೆಲಿಕಾಫ್ಟರ್‌ಗಳು ಯಾಕ್ಬೀಳ್ತವೆ? ಹಾರೋವಾಗ ಇದ್ದಕ್ಕಿಂದ್ದಂಗೆ ಭೂಮಿಗೆ ಗುರುತ್ವಾಕರ್ಷಣ ಶಕ್ತಿ ಇದೆ ಅಂತ ಅದ್ಕೆ ನೆನಪಾಗಿ ಬಿಡುತ್ತಾ? ಅಥವಾ ಈ ರಾಜಕಾರಣಿಗಳಿಗೆ ಒಂದು ಪಾಠ ಕಲ್ಸೋಣ ಅಂತ ವಿಚಾರ ಮಾಡುತ್ತಾ? ಹೋಗ್ತಿದ್ದಂಗೆ ಸುಸ್ತಾಗಿ ಬಿಡುತ್ತಾ? ಗೊತ್ತಾಗಿಲ್ಲ.

ಈ ಹೆಲಿಕಾಪ್ಟರ್‌ಗಳು ಬೀಳೋ ಬಗ್ಗೆ ಒಂದು ಜೋಕಿದೆ. ಒಬ್ಬ ಹೆಲಿಕಾಪ್ಟರ್ ಚಲಾಯಿಸ್ಕೊಂಡು ಹಿಮಾಲಯದ ಮೇಲೆ ಹೋಗ್ತಿದ್ನಂತೆ. ಆಗ ಚಳಿ ಆಯ್ತು ಅಂತ ಹೆಲಿಕಾಪ್ಟರ್‌ನ ಫ್ಯಾನ್ (ಮೇಲೆ ತಿರುಗುತ್ತಾ ಇರುತ್ತಲ್ಲ) ಆಫ್ ಮಾಡಿಬಿಟ್ನಂತೆ. ಹಾಗೆ ಮೇಲೆ ಹಾರಾಡ್ತಿದ್ದವ ಕೆಳಗೆ ಬರೋದ್ಕಿಂತ ಮೇಲೆ ಹೋಗೋದೆ ಹತ್ರ ಹಂತ ಮೇಲೇ ಹೋಗ್ಬಿಟ್ನಂತೆ.ಈ ಹೆಲಿಕಾಪ್ಟರ್‌ಗಳು ಒಂಥರಾ ವಿಚಿತ್ರ. ಅದರಲ್ಲಿ ಯಾರೇ ಕುಳಿತಿರಲಿ. ಎಲ್ಲೇ ಹಾರುತ್ತಿರಲಿ ಇಳೀಬೇಕು ಅನ್ನಿಸಿದರೆ ಯಾರ ಮಾತೂ ಕೇಳದೇ ಅಲ್ಲೇ ತಕ್ಷಣ ಇಳಿದೇ ಬಿಡುತ್ವೆ. ಹೆಲಿಕಾಪ್ಟರ್ರೇ ಹಾಗೆ. ಅದು ಯಾರನ್ನೂ ಕ್ಯಾರ್ ಮಾಡಲ್ಲ. ಒಪ್ತೀರಿ ತಾನೆ. ಒಪ್ಲೇ ಬೇಕು. ಹಂಗಿದೆ ಹೆಲಿಕಾಪ್ಟರ್ ಮಹಿಮೆ.

ನಮ್ಮ ಯು.ಬಿ. ಕಂಪನಿ ಮಾಲಿಕ ಹಂಗನ್ನೋದಕ್ಕಿಂತ ಜನತಾಪಕ್ಷದ ಸಂಸ್ಥಾಪಕ ಅನ್ನೋದು ಸೂಕ್ತ. ಇಲೆಕ್ಷನ್ ಹತ್ರ ಬಂತಲ್ಲಾ ಅದ್ಕೆ. ಅವರ್‍ನ ಹೊತ್ಕೊಂಡು ಹೊಂಟಿದ್ದ ಹೆಲಿಕಾಪ್ಟರ್ ಇದ್ದಂಕ್ಕಿಂದ್ದಂಗೆ ಕೆಳಗಿಳಿದು ಬಿಡ್ತು. ಜನರಿಗೆ ಬಿಯರ್ ಕುಡಿಸಿದ ಪುಣ್ಯ ಮಲ್ಯ ಸಾಹೇಬ್ರು ಬಚಾವಾದ್ರು. ನಮ್ಮ ಮಾಜಿ ಪ್ರಧಾನಿ ಮುರಾರ್ಜಿ ದೇಸಾಯಿ ಅವರಿದ್ದಾರಲ್ಲ. ಅವರನ್ನೂ ಈ ಹೆಲಿಕಾಪ್ಟರ್ ಒಮ್ಮೆ ಕೆಳಗಿಳಿಸಿಬಿಟಿತ್ತು. ಮೊರಾರ್ಜಿ ಅವರು ಹಿಂಗೆ ಹಾರ್‍ಕೊಂಡು ಹೊಯ್ತಾ ಇರೋವಾಗ ಆ ಹೆಲಿಕಾಫ್ಟರ್‌ಗೆ ಎನನ್ಸಿತೋ ಏನೋ ಚಾಲಕನ ಮಾತು ಕೇಳದೆ ಹಠ ಹಿಡೀತು. ಅದರ ಹಠಕ್ಕೆ ಚಾಲಕ ಬಗ್ಗಿದನೋ ಇಲ್ಲವೋ ಹೆಲಿಕಾಪ್ಟರ್ ಕೆಳಗಿಳಿದಿತ್ತು.

ಇಳಿದು ಇಳಿದು ಲ್ಯಾಂಡ್ ಆದ್ದು ಎಲ್ಲಿ ಗೊತ್ತಾ? ಪಕ್ಕಾ ಕೆಸರು ಗದ್ದೆಯಲ್ಲಿ. ಅದೂ ನಾಟಿ ಕೆಲಸ ಮಾಡುತ್ತಿದ್ದವರ ಎದುರಲ್ಲೇ!ಪ್ರಧಾನಿಯಾದರೇನು? ಅನಿವಾರ್ಯ. ಕೆಸರಲ್ಲಿ ಇಳೀಲೇ ಬೇಕು. ಹಾರೋ ಲೋಹದ ಹಕ್ಕಿಯೊಂದು ಪಕ್ಕನೆ ಗದ್ದೆಯಲ್ಲೇ ಇಳಿದದ್ದು ಕಂಡು ಜನ ಬೆರಗಾಗಿ ನೋಡುತ್ತಿರುವಂತೆ ಮುರಾರ್ಜಿ ಕೆಸರು ಗದ್ದೆಯಲ್ಲಿ ಪಚಪಚನೆ ನಡೆದು ಬಂದರು. ಬಿಳಿ ಧೋತಿ ಉಟ್ಟ ಮನುಷ್ಯ ಗದ್ದೆಯಲ್ಲಿ ಬಂದಿದ್ದು ನೋಡಿ ಅಲ್ಲಿರೋರಿಗೆಲ್ಲ ಆಶ್ಚರ್ಯ. ಅವರಿಗೇನು ಗೊತ್ತು ದೇಶದ ಪ್ರಧಾನಿ ಇಳ್ದು ಬರ್‍ತಿರೋದು ಅಂತ!! ಎದ್ನೋ ಬಿದ್ನೋ ಅಂತ ಸ್ಥಳಕ್ಕೆ ಧಾವಿಸಿದ ಪೊಲೀಸರು ಅವರನ್ನು ಕರೆದುಕೊಂಡು ಹೋದರು.

ಹುಬ್ಬಳ್ಳಿ ಸಮೀಪ ರಾಜೀವ ಗಾಂಧಿ ಅವರ ಹೆಲಿಕಾಪ್ಟರ್ ಇಳಿದಾಗ ಅವರು ರಸ್ತೆವರೆಗೆ ನಡೆದುಕೊಂಡು ಬಂದು ಹೋಗುತ್ತಿರುವ ವಾಹನಕ್ಕೆ ಕೈ ಮಾಡಿ ಹತ್ತಿ ಹುಬ್ಬಳ್ಳಿ ತಲುಪಿದ್ದರು. ಬುಲೆಟ್‌ಪ್ರೂಫ್ ಕಾರಿಲ್ಲ. ಬೆಂಗಾವಲು ಪಡೆಯಿಲ್ಲ. ಏನೂ ಇಲ್ಲ. ಸಾದಾ ಮನುಷ್ಯನಂತೆ ರಸ್ತೆ ಬದಿಗೆ ನಿಂತು ಕೈ ಮಾಡಿದ್ದರು. ರಾಜೀವ ಗಾಂಧಿ ಅಂತ ಗುರುತಿಸಿದ ಯಾರೋ ಕಾರು ನಿಲ್ಲಿಸಿದ್ದರು.

ಇದೆಲ್ಲದಕ್ಕಿಂತ ಇಂಟರೆಸ್ಟಿಂಗ್ ಆದ ವಿಷ್ಯ ಇನ್ನೊಂದಿದೆ. ಮಾಜಿ ಮುಖ್ಯಮಂತ್ರಿ ದಿವಂಗತ ರಾಮಕೃಷ್ಣ ಹೆಗಡೆ. ಅವರನ್ನೂ ಹೆಲಿಕಾಪ್ಟರ್ ಕೆಳೆಗಿಳಿಸದೇ ಬಿಟ್ಟಿಲ್ಲ. ಒಮ್ಮೆ ರಾಮಕೃಷ್ಣ ಹೆಗಡೆ ಅವರಿದ್ದ ಹೆಲಿಕಾಪ್ಟರ್ ಕಡೂರಿನ ಪಂಚನಹಳ್ಳಿಯಲ್ಲಿ ಕೆಳಗಿಳೀತು. ಪುಣ್ಯಕ್ಕೆ ಮೈದಾನದಲ್ಲೇ ಇಳಿದಿತ್ತು. ಮುಖ್ಯಮಂತ್ರಿ ಅಲ್ವಾ? ಕೆಲವರಿಗೆ ಪರಿಚಯ ಇತ್ತು. ಒಂದು ಮನೆಗೆ ಕರೆದುಕೊಂಡು ಹೋಗಿ ಕೂರಿಸಿದ್ರು. ಚಹಾನೂ ಕೊಟ್ರು. ಹೀಗೆ ಮಾತಾಡ್ತಾ ಮಾತಾಡ್ತಾ ಹೇಗೂ ಹೆಲಿಕಾಪ್ಟರ್ ಮಹಿಮೆಯಿಂದ ಪಂಚನಹಳ್ಳಿಯಲ್ಲಿ ಇಳಿದ್ದೀರಿ. ಸುರಕ್ಷಿತವಾಗೂ ಇದ್ದೀರಿ. ಅದರ ನೆನಪಿಗೆ ಊರಿಗೆ ಏನಾದರೊಂದು ಯೋಜನೆ ಘೋಷಣೆ ಮಾಡಿ ಅಂತ ಯಾರೋ ಸಲಹೆ ಮುಂದಿಟ್ಟರು.

ಮುಖ್ಯಮಂತ್ರಿ ಅಲ್ವಾ? ಏನ್ಬೇಕೋ ಕೇಳಿ ಅಂದ್ಬಿಟ್ರು ಹೆಗಡೆ. ಸರಿ ಜನ ಕಾಲೇಜು ಕೇಳಿದ್ರು. ಹೆಗಡೆ ತಥಾಸ್ತು ಅಂದ್ರು. ಇಂದು ಹೆಗಡೆ ಇಲ್ಲ. ಆದರೆ ಅಂದು ಅವರ ಹೆಲಿಕಾಪ್ಟರ್ ಇಳಿದ ಪಂಚನಹಳ್ಳಿ ಮೈದಾನದಲ್ಲಿ ಸರಕಾರಿ ಕಾಲೇಜು ಇದೆ. ಅದನ್ನು ನೋಡಿದಾಗೆಲ್ಲ ಅಲ್ಲಿನವರಿಗೆ ರಾಮಕೃಷ್ಣ ಹೆಗಡೆ ನೆನಪಿಗೆ ಬರ್‍ತಾರೆ.

ಹೆಲಿಕಾಪ್ಟರ್ ಬಿದ್ದು ಏನಾದರೊಂದು ಲಾಭ ಆಗೋ ಹಾಗಿದ್ರೆ ನಮ್ಮೂರಲ್ಲೂ ಒಂದು ಹೆಲಿಕಾಫ್ಟರ್ ಬೀಳ್ಲಿ ಅಥವಾ ಇಳೀಲಿ ಅಂತ ದೇವರಲ್ಲಿ ಪ್ರಾರ್ಥಿಸೋಕೆ ಶುರುಮಾಡ್ಬೇಡಿ!ಒಂದ್ಮಾತ್ ಹೇಳಿ. ಮೇಲೇರಿದವನು ಕೆಳಗಿಳಿಯಲೇ ಬೇಕು ಅಂತ ಎಲ್ಲೆಂದರಲ್ಲಿ ಇಳಿಯೋ ಇಂಥ ಹೆಲಿಕಾಫ್ಟರ್ ನೋಡಿಯೇ ಹೇಳಿದ್ದಾರಾ?

Saturday, July 21, 2007

ಹ್ಯಾಟ್ಸ್ ಆಫ್ ಟು ಜೋಗಿ

ಪ್ರತಿ ಬಾರಿ ಚಲನಚಿತ್ರ ಪ್ರಶಸ್ತಿ ಘೋಷಣೆಯಾದಾಗ ಅಷ್ಟೇನೂ ಸಂತೋಷ ಇರಲಿಲ್ಲ. ಆದರೆ ಈ ಬಾರಿ ಸಂತೋಷವಾಗಿದೆ. ಕಾರಣ ನನ್ನ ಪರಿಚಿತರಿಗೆ, ನಾನು ಮೆಚ್ಚಿಕೊಂಡ ಬರಹಗಾರನಿಗೆ ಪ್ರಶಸ್ತಿ ಬಂದಿದೆ.ಅವರು ನಿಮಗೂ ಗೊತ್ತು. ಬ್ಲಾಗುಗಳ ಲೋಕದಲ್ಲೂ ಅವರು ಮಿಂಚುತ್ತಿದ್ದಾರೆ. ಅವರ ಹೆಸರು ಜೋಗಿ. ಅವರು ಬರೆದ ಸಿನೆಮಾ ಕಥೆಗೆ ಉತ್ತಮ ಕಥೆ ಪ್ರಶಸ್ತಿ ದೊರೆತಿದೆ.ಜೋಗಿ ತುಂಬ ಬರೆಯುತ್ತಾರೆ. ಪುರುಸೊತ್ತಿಲ್ಲದಂತೆ ಬರೆಯುತ್ತಾರೆ. ಅದರ ನಡುವೆ ಬಿಡುವು ಮಾಡಿಕೊಂಡು ಬರೆದದ್ದನ್ನು ಬ್ಲಾಗಿಸುತ್ತಲೂ ಇರುತ್ತಾರೆ. ಬರೆದದ್ದೆಲ್ಲವನ್ನೂ ಚೆನ್ನಾಗಿ ಬರೆಯುತ್ತಾರೆ. ಬಹುಶಃ ಕನ್ನಡದಲ್ಲಿ ತುಂಬ ಬರೆಯುವ ಮತ್ತು ಚೆನ್ನಾಗಿ ಬರೆಯುವ ಮೂವರು ಮಾತ್ರ ಇರೋದು. ವಿಶ್ವೇಶ್ವರ ಭಟ್, ಜೋಗಿ ಮತ್ತುರವಿ ಬೆಳೆಗೆರೆ. ಕೇವಲ ಬರೆದೇ ಹೇಗೆ ಹಣ, ಗೌರವ ಎರಡನ್ನೂ ಗಳಿಸಬಹುದು ಎಂಬುದನ್ನು ತೋರಿಸಿಕೊಟ್ಟವರು ಈ ತ್ರಿಮೂರ್ತಿಗಳು. ಸುದೈವ ಮೂವರೂ ಗೆಳೆಯರು. ಈ ಮೂವರ ಸಾಮಾನ್ಯ ಗುಣವೆಂದರೆ ಗರ್ವ- ಅಹಂ ಇಲ್ಲದೆ ಇರುವುದು. ಇನ್ನೊದು ಸಂತೋಷವೆಂದರೆ ಈ ಮೂವರು ನನಗೆ ಪರಿಚಯ!ಮೂವರ ಬಗ್ಗೆಯೂ ಬರೆಯುತ್ತ ಹೋದರೆ ಸಾಕಷ್ಟಿದೆ. ಆದರೆ ಈಗ ಸಧ್ಯಕ್ಕೆ ಪ್ರಶಸ್ತಿ ಪಡೆದ ಜೋಗಿ ಬಗ್ಗೆ ಮಾತ್ರ ಬರೆಯುತ್ತೇನೆ. ಜೋಗಿ ದಕ್ಷಿಣ ಕನ್ನಡದ ಉಪ್ಪಿನಂಗಡಿಯವರು. ಬಡತನದಲ್ಲಿ ಬೆಳೆದವರು. ಅವರು ಬರಹಗಾರರಾಗಿ ಪ್ರಸಿದ್ಧರಾಗುವುದಕ್ಕಿಂತ ಮೊದಲು ಪಟ್ಟ ಕಷ್ಟ ನೋಡಿದರೆ ಅವರ ಕತೆಯೇ ಒಂದು ಸಿನೆಮಾಕ್ಕೆ ಆಹಾರವಾಗಬಲ್ಲದು ಅನಿಸುತ್ತದೆ.ಜೋಗಿ ಮತ್ತುನನ್ನ ಇನ್ನೊಬ್ಬ ಗೆಳೆಯ ಪ್ಲಸ್ ಗುರು ಪುತ್ತೂರಿನ ಗೋಪಾಲಕೃಷ್ಣ ಕುಂಟಿನಿ ಗೆಳೆಯರು. ಸಹಪಾಠಿಗಳು. ಕುಂಟಿನಿ ಮೂಲಕವೇ ಜೋಗಿಯ ಪರಿಚಯವಾಗಿದ್ದು. ಇಲ್ಲವಾದಲ್ಲಿ ಜೋಗಿಯ ಪರಿಚಯ ನನ್ನಂಥವಿನಗೆಲ್ಲಿ? ಜೋಗಿಯನ್ನು ಮೊದಲ ಬಾರಿಗೆ ನೋಡಿದಾಗ ಸಂತೋಷ. ಬೆಕ್ಕಸ ಬೆರಗು. ಅಷ್ಟು ದೊಡ್ಡ ಬರಹಗಾರ. ಹೇಗಿರುತ್ತಾರೊ ಏನೊ? ನನ್ನಂಥವನ ಬಳಿ ಮಾತಾಡುತ್ತಾರೊ ಇಲ್ಲವೊ ಅಂದುಕೊಂಡಿದ್ದೆ. ಆದರೂ ಗೆಳೆಯ ಕುಂಟಿನ ಜತೆಯಲ್ಲಿದ್ದರಿಂದ ತೊಂದರೆಯಿಲ್ಲ ಅಂತ ಸಮಾದಾನ ಮಾಡಿಕೊಂಡಿದ್ದೆ.ನೋಡಿದಾಗಲೇ ಗೊತ್ತಾದ್ದು ಜೋಗಿ ನನಗಿಂತ ಸಿಂಪಲ್ಲು ಅಂತ. ನೋಡಿದವರು ಯಾರೂ ಜೋಗಿ ಅಷ್ಟು ಚೆನ್ನಾಗಿ ಬರೀತಾನೆ ಅಥವಾ ಈತ ಸಿನೆಮಾಕ್ಕೆ, ಪತ್ರಿಕೆ ಬರೆಯುವವ ಅಂತ ಹೇಳಲು ಸಾಧ್ಯವೇ ಇಲ್ಲ. ಜೋಗಿ ಹಣ ಮಾಡಿರಬಹುದು. ಬೆಂಗಳೂರಲ್ಲಿ ಮನೆ ಕಟ್ಟಿಸಿರಬಹುದು. ಹೆಸರು ಗಳಿಸಿರಬಹುದು. ಆದರೆ ನೋಡಲು ಹಾಗೂ ಊರಿನವರ ಪಾಲಿಗೆ ಅದೇ ಹಳೆಯ ಗಿರೀಶನೇ. ಗಿರೀಶನ ಸಾಧನೆಗೆ ವಂದನೆ.ಜೋಗಿ ಎಷ್ಟು ಚೆನ್ನಾಗಿ ಬರೆಯುತ್ತಾರೆಂದು ಅರಿಯಬೇಕಿದ್ದರೆ ನೀವು ಅವರ ಜಾನಕಿ ಕಾಲಂ ಅಂತ ಪುಸ್ತಕ ಇದೆ. ಓದಿ.ಜೋಗಿ ಏರಿದ ಎತ್ತರ ನೋಡಿದರೆ ನನಗೂ ಅಷ್ಟೆತ್ತರಕ್ಕೆ ಏರಬೇಕೆಂಬ ಆಸೆ. ಸಾಧ್ಯವಾ? ಅದು ಸಾಧ್ಯವಾಗದಿದ್ದರೂ ಪರವಾಗಿಲ್ಲ ಅವರು ದಿನಕ್ಕೆ ಬರೆಯುವ ಅರ್ಧ ಬೇಡ ಕಾಲು ಅಂಶದಷ್ಟಾದರೂ ನನಗೆ ಬರೆಯಲು ಸಾಧ್ಯವಾದರೂ ಸಂತೋಷ.

ಮುಂಗಾರು- ದುನಿಯಾ- ಕಹಾನಿಯಾ

ಎಷ್ಟೋ ದಿನದಿಂದ ಬರೀಬೇಕು ಅಂದ್ಕೊಂಡಿದ್ದೆ. ಆಗಿರ‍ಲಿಲ್ಲ. ಅಥವಾ ಆಲಸಿತನ ಅಂತಾದರೂ ಅಂದ್ಕೊಳ್ಳೀ. ಈಗ ಮುಂಗಾರು ಮಳೆ ಅತ್ಯುತ್ತಮ ಚಿತ್ರ, ದುನಿಯಾ ಎರಡನೇ ಅತ್ಯುತ್ತಮ ಚಿತ್ರ ಅಂತ ಪ್ರಶಸ್ತಿ ಪಡೆದಿವೆ. ಈಗಲೂ ಬರೆಯದೇ ಹೋದರೆ ಮನಸಿನ್ಯಾಗಿನ ಮಾತು ಮನಸಲ್ಲೇ ಉಳಿಯುವ ಸಾಧ್ಯತೆಯಿದೆ.ಮುಂಗಾರು ಮಳೆಗೆ ಜನ ತೋಯ್ದು ಹೋಗಿದ್ದಾರೆ.
ದುನಿಯಾದಲ್ಲಿ ಜನ ಜೀವಿಸುತ್ತಿದ್ದಾರೆ. ಬ್ಲಾಗುಗಳ ಲೋಕದಲ್ಲಿ ಇಣುಕಿದರೂ ಮುಂಗಾರು ಮಳೆಯದ್ದೇ ಸಿಂಚನ. ಮುಂಗಾರು ಮಳೆಯನ್ನು ಹೊಗಳದ ಬ್ಲಾಗೋತ್ತಮರೇ ಇಲ್ಲ ಎಂದರೂ ತಪ್ಪಿಲ್ಲ. ಆದರೆ ನಾನು ಹೇಳ್ತೀನಿ ಮುಂಗಾರು ಮಳೆಗಿಂತ ದುನಿಯಾ ಒಳ್ಳೆಯ ಚಿತ್ರ. ಜೀವನಕ್ಕೆ ಹತ್ತಿರವಾದ ಚಿತ್ರ.ಮುಂಗಾರು ಮಳೆ ಮತ್ತು ದುನಿಯಾ ಎರಡೂ ಸಿನೆಮಾ ನೋಡಿದವನಾಗಿ ನಾನು ಈ ಮಾತು ಹೇಳುತ್ತಿದ್ದೇನೆ. ಮುಂಗಾರು ಮಳೆಯಂತಹ ಚಿತ್ರ ಇರುವಾಗ ಅದಕ್ಕೆ ಸರಿಸಮನಾಗಿ ಶತಕ ಬಾರಿಸಿದ್ದು ದುನಿಯಾದ ಸಾಧನೆ.
ಮುಂಗಾರು ಮಳೆ ಚಿತ್ರ ನೋಡಿದ್ದರೆ ನೆನಪಿಸಿಕೊಳ್ಳಿ. ಗೆಳತಿಯರು ಮದುವೆಗೆ ಬರುತ್ತಾರೆಂದು ನಾಯಕಿ ರೈಲು ನಿಲ್ದಾಣಕ್ಕೆ ಹೊರಟು ನಿಲ್ಲುತ್ತಾಳೆ. ಆಕೆ ಇರುವುದು ಮಡಿಕೇರಿಯಲ್ಲಿ. ಅಲ್ಲಿಗೆ ಹತ್ತಿರ ರೈಲ್ವೆ ನಿಲ್ದಾಣವೆಂದರೆ ಮೈಸೂರು ಅಥವಾ ಮಂಗಳೂರು. ಈ ಎರಡೂ ಊರುಗಳಿಗೆ ಹೋಗುವಾಗಲೂ ಜೋಗ ಸಿಗುವುದಿಲ್ಲ. ಜೋಗ ಇರುವುದು ಉತ್ತರ ಕನ್ನಡ ಹೊನ್ನಾವರದಿಂದ ಸಾಗರಕ್ಕೆ ಅಥವಾ ಶಿವಮೊಗ್ಗಕ್ಕೆ ಹೋಗುವ ರಸ್ತೆಯಲ್ಲಿ. ಆದರೂ ನಾಯಕ- ನಾಯಕಿ ಜೋಗಕ್ಕೆ ಹೋಗುತ್ತಾರೆ. ಇರಲಿ ಅಂದ-ಚೆಂದಕ್ಕೆ ತೋರಿಸಿದ್ದಾರೆ ಅಂದುಕೊಳ್ಳೋಣ.ಹೀಗೆ ನಾಯಕಿ ಗೆಳತಿಯರನ್ನು ಕರೆತರಲು ಹೊರಟಾಗ ಅವಳಪ್ಪ ‘ನೀನು ಮದುಮಗಳು. ಒಬ್ಬಳೇ ಹೋಗಬೇಡ’ ಅಂತ ಹೇಳಿ ಜತೆಯಲ್ಲಿ ಗಣೇಶನನ್ನು ಕಳುಹಿಸುತ್ತಾನೆ. ಅವರು ಜೋಗ-ಗೀಗ ಎಲ್ಲೋ ಸುತ್ತಾಡಿ, ಕುಡಿದು ತೂರಾಡಿ, ಮಯ್ಯಿ-ಮನಸು ಎರಡನ್ನೂ ರಾಡಿ ಮಾಡಿಕೊಂಡು ಎಷ್ಟೋ ಹೊತ್ತಿನ ನಂತರ ಮನೆಗೆ ಮರಳಿ ಬರುತ್ತಾರೆ.
ಅಷ್ಟರಲ್ಲಿ ಗೆಳತಿಯರು ಮನೆ ತಲುಪಿರುತ್ತಾರೆ. ಗೆಳತಿಯರನ್ನು ಕರೆತರಲು ಮನೆಯಿಂದ ಹೋಗುವಾಗ ನಾಯಕಿಯನ್ನು ಒಬ್ಬಳೆ ಕಳುಹಿಸಲು ಒಪ್ಪದ ಅಪ್ಪ ಗೆಳತಿಯರು ಮನೆಗೆ ಬಂದು ಎಷ್ಟೋ ಹೊತ್ತಾದ ನಂತರ ಮನೆಗೆ ಮರಳಿದ ಮಗಳನ್ನು ಏಕೆ? ಏನು? ಎಲ್ಹೋಗಿದ್ರಿ? ಅಂತ ಕೇಳೋದಿಲ್ಲ.ಕೆಲವು ಮನೆಗಳಲ್ಲಿ ಮಗಳು ಕಾಲೇಜಿಂದ ಬರುವಾಗ ೧೫ ನಿಮಿಷ ತಡವಾದರೆ ರಂಪವೆದ್ದು ಹೋಗುತ್ತದೆ. ಅಫ್‌ಕೋರ್ಸ್ ಮುಂಗಾರು ಮಳೆಯ ಥರ ಆಗಿದ್ದರೆ ಯಾರ ಮನೆಯಲ್ಲಾದರೂ ಕೇಳಿರೋರು. ಬೈದಿರೋರು.
ಇದಕ್ಕಿಂತ ತರ್ಕದ ವಿಷಯ ಇನ್ನೊಂದಿದೆ. ನಾಯಕಿಯನ್ನು ಮದುವೆಯಾಗಲು ಬರುವ ಮಿಲಿಟ್ರಿ ಮಾಮ ಹಾಗೂ ಗೆಳೆಯರು ಮದುವೆ ಹಿಂದಿನ ದಿನವಷ್ಟೇ ಮದುವೆ ಮನೆ ಕಡೆ ಬರುತ್ತಿರುತ್ತಾರೆ. ಅವರನ್ನು ದಾರಿಯಲ್ಲಿ ಅಡ್ಡಗಟ್ಟಿ ಹಲ್ಲೆ ನೆಡೆಸಲಾಗುತ್ತದೆ. ಮಿಲ್ಟ್ರಿ ಮಾಮನ ಗೆಳೆಯರೆಲ್ಲ ಎಚ್ಚರ ತಪ್ಪಿ ಬಿದ್ದಿರುವ ದೃಶ್ಯವನ್ನು ಕೂಡ ನಿಮಗೆ ತೋರಿಸಲಾಗುತ್ತದೆ. ಆದರೆ ಮರುದಿನ ಬೆಳಗ್ಗೆ ಮದುವೆಗೆ ಬರುವಾಗ ಮಿಲ್ಟ್ರಿ ಮಾಮ ಅಥವಾ ಅವನ ಗೆಳೆಯರು ಮರ್ಯಾದೆಗೂ ಒಂದು ಚಿಕ್ಕ ಬ್ಯಾಂಡೇಜ್ ಹಾಕಿಕೊಂಡಿರುವುದಿಲ್ಲ. ಇದಪ್ಪ ಸಿನೆಮಾ ಅಂದ್ರೆ!!
ಈ ಕಾರಣಗಳನ್ನು ಇರಿಸಿಕೊಂಡು ನೋಡಿದರೆ ಮುಂಗಾರು ಮಳೆಗೆ ಮಾರ್ಕ್ಸ್ ಕಟ್. ಅದೇನೇ ಇರಲಿ ಜನ ಮೆಚ್ಚಿದ್ದಾರೆ. ತಜ್ಞರು ಪ್ರಶಸ್ತಿ ಕೊಟ್ಟಿದ್ದಾರೆ. ಆದರೂ ನನ್ನದೊಂದು ಸಣ್ಣ ಕ್ಯಾತೆ ಇರಲಿ. ಮುಂದಾದರೂ ಯೋಗರಾಜ ಭಟ್ಟರು ಅವರ ಸಿನಿಮಾದಲ್ಲಿ ಅಲ್ಲಲ್ಲಿ ಇಂತಹ ಸಿಲ್ಲಿ ಮಿಸ್ಟೇಕ್ ಮಾಡದಿರಲಿ.

Friday, July 20, 2007

ರಾಷ್ಟ್ರಪತ್ನಿ!?

ಒಬ್ಬ ಗೆಳೆಯ ಸಿನಿಮಾ ಟಾಕೀಸಿನಲ್ಲಿ ಟಿಕೆಟ್ ಕ್ಯೂನಲ್ಲಿ ನಿಂತಾದ ಸಿಗುತ್ತಾನೆ. ಆದರೂ ಆತ ಕೇಳೋದು "ಸಿನಿಮಾಕ್ಕಾ’? ಸಿನಿಮಾ ಟಿಕೆಟ್ ತಗೊಂಡು ಸಿನೆಮಾಕ್ಕಲ್ಲದೆ ವಿಮಾನದಲ್ಲಿ ಹೋಗೋಕಾಗುತ್ತಾ? ಬೆಳಗ್ಗೆ ಚೆನ್ನಾಗಿ ಡ್ರೆಸ್ ಮಾಡಿ ಬುಕ್ ಹಿಡ್ದು ಕಾಲೇಜಿಗೆ ಹೊರಟಿದ್ರೆ ಪಕ್ಕದ ಮನೆಯವ ಎದುರಿಗೆ ಬಂದು "ಕಾಲೇಜಿಗಾ?’ ಅನ್ನುತ್ತಾನೆ. ಸಿಟ್ಟು ಬಂದ್ರೆ ಇಲ್ಲಾ ಸುಡುಗಾಡಿಗೆ ಅನ್ನಬೇಕಷ್ಟೆ! ನಡ್ಕೊಂಡು ಹೊರಟ್ರೆ ಎದುರಿಗೆ ಸಿಕ್ಕಿದ ಪರಿಚಿತರು ಆರಾಮಾ? ಅಂತಾರೆ. ಎಲಾ ಇವನಾ! ಆರಾಮಿಲ್ಲದೇ ಹೋಗಿದ್ದರೆ ಹೀಗೆ ನಡ್ಕೊಂಡು ಬರೋಕಾಗ್ತಿತ್ತಾ? ಬೆಳಗ್ಗೆ ಸಿಕ್ಕರೆ ತಿಂಡಿ ಆಯ್ತಾ ಅಂತ ಕೇಳ್ತಾರೆ. ಅಕಸ್ಮಾತ್ ನೀವು ಇಲ್ಲಾ ಅಂತ ಹೇಳಿ ನೋಡಿ. ಆತನೇನೂ ನಿಮ್ಮನ್ನ ಹೋಟೆಲ್‌ಗೆ ಕರ್‍ಕೊಂಡು ಹೋಗಿ ತಿಂಡಿ ತಿನ್ಸಲ್ಲ. ಆರಾಮಿಲ್ಲ ಅಂತಂದ್ರೆ ಆಸ್ಪತ್ರೆ ಕರ್‍ಕೊಂಡು ಹೋಗಿ ಔಷಧಿ ಕೊಡಿಸಲ್ಲ.ಪ್ರಶ್ನೆ ಕೇಳೋರಿಗೂ ಗೊತ್ತು ನೀವು ಹೊರಟಿದ್ದು ಸಿನೇಮಾಕ್ಕೆ, ಕಾಲೇಜಿಗೆ ಅಂತ. ಆದ್ರೆ ಎದ್ರು ಕಂಡ ಕೂಡ್ಲೆ ಏನಾದ್ರೂ ಮಾತಾಡ್ಬೇಕಲ್ವಾ? ಅದ್ಕೆ ಹಾಗೆಲ್ಲ ಕೇಳೀಬಿಡ್ತಾರೆ. ನಾವು ಕೂಡ ಅದ್ಕೆ ಹೊರತಲ್ಲ.ಕೆಲವರು ಸಭೆ ಸಮಾರಂಭಗಳಲ್ಲಿ ಮಾತನಾಡುವುದನ್ನು ಗಮನಿಸುತ್ತ ಹೋದರೆ ನಗು ಬರುತ್ತದೆ. ಗಮನಿಸಿದರೆ ನಿಮಗೂ ಇಂಥವು ಸಾಕಷ್ಟು ಸಿಕ್ಕಾವು. ಕೆಲವರು ಮಾತನಾಡುವಾಗ "ನಮ್ಮ ಘನ ಸರಕಾರದ’... ಅಂತ್ಲೇ ಮಾತಿಗೆ ಶುರುವಿಡುತ್ತಾರೆ. ಅಂದರೆ ದ್ರವ ಸರಕಾರ, ಅನಿಲ ಸರಕಾರ ಅಂತ ಬೇರೆ ಸರಕಾರಗಳಿವೆಯೇ? ಅವರು ಮಾತನ್ನು ಮುಂದುವರಿಸುತ್ತ ನಮ್ಮ ಘನ ಸರಕಾರದ ಗೌರವಾನ್ವಿತ ಮಂತ್ರಿಯವರಾದ... ಅನ್ನುತ್ತಾರೆ. ಅರೆ! ಗೌರವಾನ್ವಿತ ಸಚಿವರು ಅಂದರೆ? ಅಗೌರವಾನ್ವಿತ ಸಚಿವರೂ ಇದ್ದಾರೆಯೇ? ಎಂಬ ಸಂಶಯ ಹುಟ್ಟಿಕೊಂಡು ಬಿಡುತ್ತದೆ. ಕೆಲವರು ಗೌರವಾನ್ವಿತ ಶಬ್ದದ ಬದಲು ಮಾನ್ಯ (ಅಮಾನ್ಯ ಸಚಿವರು ಇದ್ದಾರಾ?) ಬಳಸ್ತಾರೆ. ಇನ್ನೂ ಕೆಲವರಿದ್ದಾರೆ ಅವರು ಪೂಜ್ಯ (ಸೊನ್ನೆ-ಝೀರೊ) ಮೇಯರ್ ಅಂತೆಲ್ಲ ಕರೆದು ಅವರನ್ನು (ಅವ)ಮಾನಿಸ್ತಾ ಇರ್‍ತಾರೆ. ಆದ್ರೂ ಪಾಪ ನಮ್ಮ ರಾಜಕಾರಣಿಗಳಿಗೆ ಗೊತ್ತಾಗೋದೇ ಇಲ್ಲ!! ಅವರು ಅದನ್ನೇ ದೊಡ್ಡ ಗೌರವದ ಶಬ್ದ ಅಂದ್ಕೊಡು ಹುಳ್ಳನೆಯ ನಗುವಿನ ಪೋಜ಼ು ಕೊಡುತ್ತಿರುತ್ತಾರೆ.ಸ್ವಾಮೀಜಿಗಳ ವಿಷಯದಲ್ಲೂ ಅಷ್ಟೆ. ಶ್ರೀ ಶ್ರೀ ಶ್ರೀ ಹೀಗೆ ಎಷ್ಟು ಸಾಧ್ಯವೋ ಅಷ್ಟು ಶ್ರೀಗಳನ್ನು ಹಿಂದೆ ಸಿಕ್ಕಿಸಿಯೇ ಅವರ ಹೆಸರು ಬರೆಯಲಾಗುತ್ತದೆ. ಸ್ವಾಮೀಜಿಗಳಿಗೆ ಈ ಶ್ರೀ ಬಗ್ಗೆ ತೀವ್ರ ಆಸಕ್ತಿ- ಆಕ್ಷೇಪ ಇಲ್ಲದಿದ್ದರೂ, ಅಭಿಮಾನಿಗಳಿಗೆ ಮಾತ್ರ ಸ್ವಾಮೀಜಿ ಹೆಸರಿನ ಹಿಂದೆ ಎಷ್ಟು ಸಾಧ್ಯವೋ ಅಷ್ಟು ಶ್ರೀ ಹಾಕಿದಾಗ ಮಾತ್ರ ಸಮಾಧಾನ. ಸತ್ಯವಾಗಿ ಹೇಳಬೇಕೆಂದರೆ ಸ್ವಾಮೀಜಿ ಶಬ್ದ ಇದೆಯಲ್ಲ ಅದರಲ್ಲಿ "ಜಿ’ ಅದು ಗೌರವ ಸೂಚಕ ಶಬ್ಧ. ಹೀಗಿರುವಾಗ ಪುನಃ ಹಿಂದೆ ಶ್ರೀ ಶ್ರೀ ಶ್ರೀ ಬೇಕೆ? ಹೀಗೆ ಹೇಳಿದೆ ಅಂತ ಅಡಿಕೆ ಪತ್ರಿಕೆ ಸಂಪಾದಕರ ಹೆಸರನ್ನು (ಶ್ರೀಪಡ್ರೆ) ಶ್ರೀ ಬಳಸದೇ ಬರೆಯ(ಹೇಳ)ಬೇಡಿ!!ನಮ್ಮ ಕಚೇರಿಯ ಒಬ್ಬರನ್ನು ಕೇಳಿಕೊಂಡು ಒಂದು ದಿನ ಒಬ್ರು ಕಚೇರಿಗೆ ಬಂದಿದ್ರು. ನಾನು ಅವರಿಲ್ಲ ನಾಲ್ಕು ಗಂಟೆ ಮೇಲೆ ಬರ್‍ತಾರೆ ಅಂದೆ. ಅಷ್ಟಂದದ್ದೇ ಸಾಕು ಅಲ್ಲೇ ಸಮೀಪದಲ್ಲಿದ್ದ ಉಜಿರೆ ಕಾಲೇಜು ವಿದ್ಯಾರ್ಥಿ ವಿನುತ "ಸರ್ ನಾಲ್ಕು ಗಂಟೆ ಮೇಲೆ’ ಅಂದೆ ಏನು? ಎನ್ನಬೇಕೆ. ಅದಕ್ಕೆ ಅದೇ ಕಾಲೇಜಿನ ಚೇತನಾ ಕೂಡ ಧ್ವನಿಗೂಡಿಸಿದರು. ಅವರನ್ನು ಯಾವಾಗಲೂ ಇಕ್ಕಟ್ಟಿಗೆ ಸಿಲುಕಿಸುತ್ತಿದ್ದ ನನ್ನನ್ನು ಪೇಚಿಗೀಡು ಮಾಡುವುದು ಅವರ ಉದ್ದೇಶವಾಗಿತ್ತು. ಆದರೆ ನಮ್ಮ ಕಚೇರಿ ಮೊದಲ ಮಹಡಿಯಲ್ಲಿರುವುದರಿಂದ ನಾಲ್ಕು ಗಂಟೆಗೆ ಅವರು ಮೇಲೆ (ಮೊದಲ ಮಹಡಿಗೆ) ಬರುತ್ತಾರೆ. ಅದನ್ನೇ ನಾನು ನಾಲ್ಕು ಗಂಟೆ ಮೇಲೆ ಬರುತ್ತಾರೆ ಎಂದದ್ದು ಎಂದು ವಿವರಿಸಿ ಇಕ್ಕಟ್ಟಿನಿಂದ ಬಚಾವಾದೆ. ಆದರೆ ನಾನಾಡಿದ ಮಾತು ವಾಸ್ತವದಲ್ಲಿ ತಪ್ಪೇ ಆಗಿತ್ತು.ಕೆಲವು ಪದವಿ ಸೂಚಕಗಳನ್ನು ನಾವು ಸ್ತ್ರೀಲಿಂಗ, [ಲ್ಲಿಂಗ ಬಳಸಿ ಕರೆಯೋದರ ಕುರಿತು ಸಾಲಿಗ್ರಾಮದ ನರಸಿಂಹ ಐತಾಳ್ ಅವರು ನನ್ನ ಬಳಿ ಯಾವಾಗಲೂ ತಕರಾರು ತೆಗೆಯುತ್ತಾರೆ. ಅಧ್ಯಕ್ಷ ಶಬ್ದವನ್ನು ಮಹಿಳೆಯರಿಗೆ ಅಧ್ಯಕ್ಷೆ ಎಂದು ಬಳಸುವುದು ತಪ್ಪು ಎಂಬುದು ಅವರ ಅಂಬೋಣ. ಅದೇರೀತಿ ಉಪಾಧ್ಯಕ್ಷೆ, ಪ್ರಾಂಶುಪಾಲೆ, ರಾಜ್ಯಪಾಲೆ ಅಂತೆಲ್ಲ ಬಳಸುತ್ತಾರೆ. ಆದರೆ ಕಾರ್ಯದರ್ಶಿ ಸ್ಥಾನದಲ್ಲಿ ಸ್ತ್ರೀಯರಿದ್ದಾಗ ಕಾರ್ಯ"ದರ್ಶಿನಿ’ ಎಂದು ಬಳಸಬಹುದಲ್ಲ ಅಂತ ಅವರು ಹೇಳುತ್ತಿರುತ್ತಾರೆ.ನಾನು ಅವರು ಒಂದೆರಡು ಬಾರಿ ಈ ವಿಷಯದಲ್ಲಿ ಚರ್ಚಿಸಿದ್ದಿದೆ. ಈ ಚರ್ಚೆ ಏನಿದ್ದರೂ ನಮ್ಮೊಳಗೆ ಇತ್ತು. ಆದರೆ ಇದೇ ಚರ್ಚೆ ರಾಷ್ಟ್ರದಾದ್ಯಂತ ಚರ್ಚೆಗೆ ಬಂದೀತು ಎಂದು ನಾನ್ಯಾವತ್ತೂ ಅಂದುಕೊಂಡಿರಲಿಲ್ಲ. ಪ್ರತಿಭಾ ಪಾಟೀಲ್ ರಾಷ್ಟ್ರಪತಿ ಸ್ಥಾನದ ಅಭ್ಯರ್ಥಿಯಾಗುವುದರೊಂದಿಗೆ ಅದೂ ಆಗಿಹೋಯಿತು.ಔಟ್‌ಸ್ವಿಂಗ್: ಅಧ್ಯಕ್ಷೆ, ಪ್ರಾಂಶುಪಾಲೆ, ರಾಜ್ಯಪಾಲೆ ಎಂದೆಲ್ಲ ಕರೆಯಬಹುದಾದರೆ ಮಹಿಳೆ ರಾಷ್ಟ್ರಪತಿ ಹುದ್ದೆ ಅಲಂಕಿಸಿದರೆ ಆಗ ರಾಷ್ಟ್ರಪತ್ನಿ ಎಂದೂ, ವಿಶ್ವವಿದ್ಯಾಲಯದ (ಕುಲಪತಿ) ಮುಖ್ಯಸ್ಥರಾದ ಮಹಿಳೆಯರನ್ನು "ಕುಲಪತ್ನಿ’ದು ಕರೆದರೂ ಕರೆಯಬಹುದು!!

Sunday, May 20, 2007

ರಿಸ(ಇನ್‌ಸ)ಲ್ಟು

ಪರೀಕ್ಷೆ ದಿನ ಹೆಚ್ಚು ಟೆನ್ಶನ್ ಇರುತ್ತೊ? ರಿಸಲ್ಟ್ ದಿನಾನೊ? ಅಂತ ಯಾರಿಗಾದರೂ ಪ್ರಶ್ನೆ ಕೇಳಿ ನೋಡಿ. ರಿಸಲ್ಟಿನ ದಿನ ಅಂದಾರು. ನನ್ನ ದೃಷ್ಟೀಲಿ ರಿಸಲ್ಟ್ (ಫಲಿತಾಂಶ) ಪ್ರಕಟವಾಗೊ ದಿನಾನೇ ಹೆಚ್ಚು ಟೆನ್ಶನ್ ಇರುತ್ತೆ. ನಿಜವಾದ ಬಣ್ಣ ಗೊತ್ತಾಗೋದೇ ರಿಸಲ್ಟ್‌ನಲ್ಲಲ್ವೆ. ಪರೀಕ್ಷೆ ಆದ್ರೆ ಬರ್‍ದು ಮನೆಗೆ ಬಂದು "ಚೆನ್ನಾಗಾಗಿದೆ’ ಎಂದು ಹೇಳಿ ಬಿಟ್ಟರೆ ಮುಗೀತು. ರಿಸಲ್ಟ್‌ವರೆಗೆ ಹಾಯಾಗಿರಬಹುದು.ನಾನಂತೂ ಒಂದು ರೂಢಿ ಅಥವಾ ಚಟ ಬೆಳೆಸಿಕೊಂಡು ಬಿಟ್ಟಿದ್ದೆ. ಅದೇನಂದ್ರೆ ಪರೀಕ್ಷೆಯಲ್ಲಿ ಉತ್ತರ ಎಷ್ಟೇ ಕೆಟ್ಟದಾಗಿ ಬರೆದಿರಲಿ. ಪಾಸಾಗೋದು ಕಷ್ಟ ಅಂತ್ಲೇ ಅನಿಸಿರಲಿ. ಮನೆಗೆ ಬಂದು ಅಪ್ಪ-ಅಮ್ಮನಿಗೆ ಪರೀಕ್ಷೆ ಚಲೋ ಆಗಿದೆ ಅಂತ್ಲೇ ಹೇಳ್ತಿದ್ದೆ. ಅಟಲೀಸ್ಟ್ ಅವರು ರಿಸಲ್ಟ್ ಬರೋವರೆಗಾದ್ರೂ ಹಾಯಾಗಿರ್‍ಲಿ ಅನ್ನೋದು ನನ್ನಾಸೆ. ಪರೀಕ್ಷೆ ಚೆನ್ನಾಗಾಗಿಲ್ಲ ಅಂದ್ಬಿಟ್ರೆ ಅವತ್ನಿಂದ ರಿಸಲ್ಟ್ ಬರೋವರೆಗೂ ಟೆನ್ಶನ್. ರಿಸಲ್ಟ್ ಬಂದ್ಮೇಲೆ ಟೆನ್ಶನ್ ಆಗೋದು ಗ್ಯಾರಂಟಿ ಅಂತ ನಂಗೆ ಗೊತ್ತು. ಪರೀಕ್ಷೆ ಚೆನ್ನಾಗಾಗಿದೆ ಅಂದ್ರೆ ರಿಸಲ್ಟ್ ಬರೋತನ್ಕ ಅವರಿವರಿಂದ ಇನ್‌ಸಲ್ಟ್ (ಅವಮಾನ) ಮಾಡಿಸ್ಕೊಳ್ದೆ ನಾನೂ ಆರಾಮಾಗಿರಬಹುದಲ್ವಾ?ನಮ್ಮ ಜನಾನೇ ಹಾಗೆ ಮಕ್ಕಳ ರಿಸಲ್ಟ್ ಬಗ್ಗೆ ಮಕ್ಕಳಿಗಿಂತ ಹೆಚ್ಚು ಟೆನ್ಶನ್ ಮಾಡ್ಕೊಂಡು, ಮಕ್ಕಳಿಗೂ ಟೆನ್ಶನ್ ಕೊಡ್ತಾರೆ. ಫೇಲಾದ ಮಕ್ಳ ಅಪ್ಪ- ಅಮ್ಮ ಮಾತಾಡೋದು ನೋಡಿದ್ರೆ ಪರೀಕ್ಷೇಲಿ ಫೇಲಾದೋರು, ಕಮ್ಮಿ ಮಾರ್ಕ್ಸ್ ತಗೊಂಡೋರು ಜಗತ್ತಲ್ಲಿ ಏನೂ ಸಾಧಿಸಿಯೇ ಇಲ್ಲ ಅನ್ನಿಸಿಬಿಡುತ್ತೆ. ಸಮಾಜದಲ್ಲಿ ಸರಿಯಾಗಿ ನೋಡಿದ್ರೆ ಫಸ್ಟ್ ರ್‍ಯಾಂಕ್ ಬಂದೋರಿಗಿಂತ ಪಾಸ್ ಕ್ಲಾಸಲ್ಲಿ ಪಾಸಾದೋರು ಸಾಧಿಸಿದ್ದೇ ಹೆಚ್ಚು. ಮೊನ್ನೆ ನಮ್ಮ ಸಂಬಂಧಿಕರೊಬ್ಬರ ಪಿಯುಸಿ ಫಲಿತಾಂಶವನ್ನು ಮೊಬೈಲ್‌ನಲ್ಲಿ ಕೇಳಿದೆ. ಆಗ "ನಿಮ್ಮ ಒಟ್ಟು ಅಂಕ ೨೧೯. ನೀವು ಪರೀಕ್ಷೆಯಲ್ಲಿ ಉತ್ತೀರ್ಣರಾಗಿಲ್ಲ. ಧನ್ಯವಾದ!’ (ಉತ್ತೀರ್ಣರಾಗದೇ ಇರುವುದಕ್ಕಾ?) ಎಂದಿತು ಹೆಣ್ಣಿನ ಧ್ವನಿ.ನಂಗಂತೂ ರಿಸಲ್ಟ್ ಅಂದ್ರೆ ಸ್ವಲ್ಪಾನೂ ಹೆದರಿಕೆ ಇರ್‍ಲಿಲ್ಲ. ಒಂಬತ್ತೇ ಕ್ಲಾಸಿನವರೆಗೂ ನಾನು ಏ.೧೦ರಂದು ರಿಸಲ್ಟ್ ನೋಡಲು ಶಾಲೆಗೆ ಹೋದದ್ದೇ ಇಲ್ಲ. ನೇರವಾಗಿ ಮುಂದಿನ ಕ್ಲಾಸಿಗೆ. ನಾನು ಹೈಸ್ಕೂಲು ಕಲಿಯುವಾಗ ನನ್ಗೆ ಬರ್‍ತಿದ್ದ ಮಾರ್ಕ್ಸು ಶೇ. ೫೯-೬೦ ಅಷ್ಟೆ. ಅದೇ ನನ್ನ ಪಕ್ಕದ್ಮನೆ ಹುಡುಗೀಗೆ ಶೇ.೮೫-೯೦ ರಷ್ಟು ಮಾರ್ಕ್ಸ್ ಬರ್‍ತಿತ್ತು. ಪ್ರತೀ ಬಾರಿಯ ರಿಸಲ್ಟ್ ಬಂದಾಗ್ಲೂ ಅಮ್ಮ "ನೋಡು ಆ ಹುಡ್ಗೀನ. (ನಾನು ನೋಡ್ತಾ ಇಲ್ಲ ಅಂತಲ್ಲ) ಎಷ್ಟು ಚೆನ್ನಾಗಿ ಓದಿ ಮಾರ್ಕ್ಸ್ ತೆಗೀತಾಳೆ. ನೀನೂ ಇದ್ದೀಯಾ. ಅವಳ್ನ ನೋಡಿ ಕಲಿ. ನನಗೂ ಮಗಳೇ ಹುಟ್ಟಿದ್ರೆ ಚೆನ್ನಾಗಿತ್ತು. ಯಾಕಾದ್ರೂ ಗಂಡು ಹಡೆದೆನೋ’ ಅಂತೆಲ್ಲ ಬಯ್ದು ನನ್ನ ಇನ್‌ಸಲ್ಟ್ ಮಾಡ್ತಾ ಇದ್ರು. (ಅಮ್ಮನ ಬಯ್ಯುವಿಕೆಯಿಂದ ಪಕ್ಕದ್ಮನೆ ಹುಡುಗಿ ಮೇಲೆ ಪ್ರೀತಿ ಹುಟ್ಟೋ ಬದಲು ಸಿಟ್ಟು ಬರ್‍ತಾ ಇತ್ತು). ಪಕ್ಕದ್ಮನೆ ಹುಡುಗಿ ಅಂತಪ್ಪ ಸಂಬಂಧಿಕರ ನನ್ನದೇ ಕ್ಲಾಸಿನ ಮಕ್ಕಳು, ಪರಿಚಿತರ ಮಕ್ಕಳು ಎಲ್ಲರೂ ನನಗಿಂತ ಹುಶಾರು. ಹೀಗಾಗಿ ಅಮ್ಮ ಅವರನ್ನ ನನಗೆ ಹೋಲಿಸಿ, ತೋರಿಸಿ ಬೈದೇ ಬೈತಿದ್ರು. ಆದ್ರೆ ಅಪ್ಪ ಮಾತ್ರ ಬೈತಾನೇ ಇರ್‍ಲಿಲ್ಲ. ಬೈದ್ರೆ ನಾನು ಬೇಜಾರು ಮಾಡ್ಕೊಂಡು ಆತ್ಮ,ಹತ್ಯೆ ಮಾಡ್ಕೊಂಡು ಬಿಟ್ರೆ ಇರೋ ಒಬ್ಬ ಮಗನೂ ಇಲ್ಲದಾಗಿಬಿಟ್ರೆ ಅನ್ನೋ ಭಯ ಇತ್ತು ಅನ್ಸುತ್ತೆ. ಆದ್ರೆ ಅಮ್ಮಂಗೆ- ಏನ್ಮಾಡಿದ್ರೂ ನನ್ಮಗ ಆತ್ಮಹತ್ಯೆ ಮಾಡ್ಕೊಳಲ್ಲ ಅನ್ನೋದು ಗ್ಯಾರಂಟಿ ಗೊತ್ತಿತ್ತು.ಮುಂದೆ ಪಿಯುಸಿ ದ್ವಿತೀಯ ವರ್ಷದಲ್ಲಿ ನಾನು ಶೇ.೬೦ ಅಂಕ ಪಡೆದು ಪಾಸಾದೆ. ಪಕ್ಕದ ಮನೆ ಹುಡುಗಿ ಅದೇ ನನ್ನಮ್ಮ ಅವಳ್ನ ತೋರಿಸಿ ನನ್ಗೆ ಬೈತಿದ್ರಲ್ಲ ಅವ್ಳು ಫೇಲಾಗಿಬಿಟ್ಳು!! ನನ್ನ ಸಂಂಧಿಕರ ಹುಡುಗ, ತುಂಬ ಹತ್ತಿರದ (ನನ್ನಮ್ಮನ ದೃಷ್ಟಿಯಲ್ಲಿ ಮಹಾ ಬುದ್ದಿವಂತೆ) ಇನ್ನೊಬ್ಬಳು ಹುಡುಗಿ ಎಲ್ಲರೂ ಪಿಯುಸಿಯಲ್ಲಿ ಡುಮ್ಕಿ. ಮುಂದೆ ಡಿಪ್ಲೋಮಾ ಮಾಡಿದ್ಳು. ಅದ್ರಲ್ಲೂ ಡುಮುಕಿ. ನಾನು ರಾಹುಲ್ ದ್ರಾವಿಡ್ ಥರ ಶೇ ೫೯-೬೦ರ ಎವರೇಜ್ ಕಾದ್ಕೊಂಡು ಎಲ್ಲ ಕ್ಲಾಸಲ್ಲೂ ಪಾಸಾಗಿ ಎಂಎನೂ ಮುಗಿಸಿದೆ. ನೌಕರಿಯೂ ಸಿಕ್ಕಿತು. ಜರ್ನಲಿಸಂನಲ್ಲಿ ಚಿನ್ನದ ಪದಕ ಗೆದ್ದೋರು ಯಾವ್ಯಾವುದೋ ಲಾಟ್‌ಪುಟ್ ನೌಕರಿ ಮಾಡ್ಕೊಂಡಿದ್ದಾರೆ. ಎಂಎಯಲ್ಲಿ ನನಗಿಂತ ಹೆಚ್ಚು ಅಂಕ ಪಡೆದವರು ಕಾಲ್ ಸೆಂಟರ್ ಹಾಗೂ ಪಿಆರ್‌ಒ ಕೆಲಸ ಮಾಡಿಕೊಂಡಿದ್ದಾರೆ.ಪಕ್ಕದ್ಮನೆ ಹುಡುಗಿ ಅಂತಲ್ಲ ನನ್ನಮ್ಮ ಯಾರ್‍ಯಾರ ಉದಾಹರಣೆ ಕೊಟ್ಟು ಅವರ ಥರ ನೀನಾಗು ಅಂತ ನನಗೆ ಬೈದಿದ್ರೋ ಅವರ್‍ಯಾರೂ ಜೀವನದಲ್ಲಿ ಈವರೆಗೆ ಒಂದು ದಡ ಸೇರಿಲ್ಲ. ಪಾಪ! ನನ್ನಮ್ಮ ಅವರ್‍ನ ತೋರಿಸಿ ನನಗೆ ಬೈದ ತಪ್ಪಿಗೆ ಅವರು ಈಗ ಕಷ್ಟ ಅನುಭವಿಸ್ತಾ ಇದ್ದಾರೆ. ನಾನು ಪತ್ರಿಕೇಲಿ ಬೆದು ಒಂದಷ್ಟು ಜನರಿಗೆ ಪರಿಚಿತನಾದೆ. ನನಗೆ ಕೆಲಸ ಕೊಡಿಸಿದವರ ಗೌರವವನ್ನೂ ಉಳಿಸಿದೆ. ಈಗ ನನ್ನಮ್ಮನಿಗೆ ನಾನು ಅಂದ್ರೆ ಬಾರೀ ಗೌರವ. ಸಾರ್ವಜನಿಕ ವಲಯದಲ್ಲಿ ಮಗ ಒಳ್ಳೆ ಹೆಸರು ಮಾಡಿದ್ದಾನೆ ಎಂಬ ಹೆಮ್ಮೆ.ಔಟ್‌ಸ್ವಿಂಗ್: ಪರೀಕ್ಷೇಲಿ ಕಮ್ಮಿ ಮಾಕ್ಸ್ ತಗೊಂಡ ವಿದ್ಯಾರ್ಥಿಗಳನ್ನ ಕೇಳಿದರೆ ನಾನ್ ಚೆನ್ನಾಗಿಯೇ ಬರ್‍ದಿದ್ದೆ ಪೇಪರ್ ನೋಡ್ದೋರು ಮಾರ್ಕ್ಸ್ ಕೊಟ್ಟಿಲ್ಲ ಅಂತಾರೆ. ಅದೇ ಶೇ. ೯೫ಕ್ಕಿಂತ ಹೆಚ್ಚು ಮಾರ್ಕ್ಸ್ ತಂಗೊಂಡೋರ್‍ಯಾರೂ ಪೇಪರ್ ನೋಡ್ದೋರು ಒಳ್ಳೆ ಮಾರ್ಕ್ಸ್ ಕೊಟ್ಟಿದಾರೆ ಅಂತ ಹೇಳೋದೇ ಇಲ್ಲ. ಯಾಕೆ?

Saturday, May 19, 2007

ಪರೀಕ್ಷೇಲಿ ಫೇಲು: ನೇಣಾಗದಿರಲಿ ಶಾಲು


ಎಸ್ಸೆಸ್ಸೆಲ್ಸಿಯಲ್ಲಿ ಬಂಪರ್ ಬೆಳೆ ಬಂದರೂ, ಪಿಯುಸಿಯಲ್ಲಿ ಶೇ.೪೯.೩೬ ಶೇ. ವಿದಯಾರ್ಥಿಗಳು ಅನುತ್ತೀರ್ಣರಾಗಿದ್ದಾರೆ. ಅಂದರೆ ೨,೨೫,೬೭೩ ವಿದ್ಯಾರ್ಥಿಗಳು ಅನುತ್ತೀರ್ಣರಾಗಿದ್ದಾರೆ. ಇಷ್ಟು ದೊಡ್ಡ ಮೊತ್ತದ ವಿದ್ಯಾರ್ಥಿಗಳ ಮನಸ್ಥಿತಿ ಹೇಗಿರಬಹುದು ಎಂಬುದನ್ನು ವಿಚಾರ ಮಾಡಿದರೆ ಮನಸ್ಸು ಕಲ್ಲವಿಲವಾಗುತ್ತದೆ. ಅವರ ಬದುಕಿನ ಬಗ್ಗೆ ಮನಸ ತುಂಬ ಆತಂಕ. ಪಿಯುಸಿ ಫಲಿತಾಂಶ ಬಂದ ಎರಡೇ ದಿನದಲ್ಲಿ ರಾಜ್ಯದಲ್ಲಿ ಆರು ಮಂದಿ ವಿದ್ಯಾರ್ಥಿಗಳು ಆತ್ಮಹತ್ಯೆ ಮೂಲಕ ಜೀವನ ಅಂತ್ಯಗೊಳಿಸಿದ್ದಾರೆ.
ಪರೀಕ್ಷೆಯಲ್ಲಿ ವಿಫಲವಾದ ವಿದ್ಯಾರ್ಥಿ ಮಾನಸಿಕವಾಗಿ ಕುಗ್ಗಿ ಹೋಗುತ್ತಾನೆ. ಮನೆಯವರ ಮುಖ ನೋಡಲು, ಪಕ್ಕದ ಮನೆಯವರೊಡನೆ ಮಾತಾಡಲು, ಗೆಳೆಯರೊಂದಿಗೆ ಮಾತಾಡಲೂ ಆಗದ ಸ್ಥಿತಿ ತಲುಪಿಬಿಡುತ್ತಾರೆ. ಮನೆಯವರ ಕೆಂಗಣ್ಣು, ಪಕ್ಕದ ಮನೆಯವರ ಕೀಟಲೆ ಮಿಶ್ರಿತ ಓರೆಗಣ್ಣ ನೋಟ, ಸಂಬಂಧಿಕರ ಚಚ್ಚುಮಾತು, ಫೇಲಾದ್ದರಿಂದ ಮನಸ್ಸಿನಲ್ಲಿ ಉಂಟಾದ ಸೋಲಿನ ಭಾವನೆ, ಪಾಸಾಗುವ ಮೂಲಕ ಗೆದ್ದ ಗೆಳೆಯ ಇವೆಲ್ಲ ವಿದ್ಯಾರ್ಥಿ ಮನಸ್ಸಿನ ಮೇಲೆ ನಿಯಂತ್ರಿಸಲಾಗದ ಪರಿಣಾಮ ಬೀರುತ್ತವೆ.
ಇದಕ್ಕೆಲ್ಲ ಪರೀಕ್ಷೆಯನ್ನು ನಾವು ನೋಡುವ, ಅದರಲ್ಲಿ ಅನುತ್ತೀರ್ಣರಾದರೆ ಜೀವನೇ ಮುಗಿದು ಹೋಯಿತು ಎಂಬಂತೆ ವರ್ತಿಸುವ ನಮ್ಮ ವರ್ತನೆಗಳೇ ಕಾರಣ. ಪಾಲಕರಿಗೆ ಮಕ್ಕಳ ಮೇಲೆ ಹೆಚ್ಚಿದ ನಿರೀಕ್ಷೆ, ಮಕ್ಕಳು ಪರೀಕ್ಷೆಯಲ್ಲಿ ಪಡೆದ ಅಂಕಗಳನ್ನೇ ಪಾಲಕರು ಪ್ರತಿಷ್ಠೆಯ, ಅಂತಸ್ತಿನ ಪ್ರಶ್ನೆಯಾಗಿಸಿಕೊಂಡಿರುವುದು, ಹೆಚ್ಚಿದ ಸ್ಪರ್ಧೆ ಮಕ್ಕಳನ್ನು ಪರೀಕ್ಷೆಯಲ್ಲಿ ಹಾಗೂ ಫಲಿತಾಂಶದ ಸಮಯದಲ್ಲಿ ಅಪಾರ ಒತ್ತಡಕ್ಕೆ ಸಿಲುಕಿಸುತ್ತಿದೆ.
ಆ ಗೊಂದಲ, ಒತ್ತಡದಲ್ಲಿ ಈ ಎಲ್ಗ ಕಷ್ಟಕ್ಕೂ ಪರಿಹಾರದ ಸುಲಭ ಮಾರ್ಗವಾಗಿ ಅವರಿಗೆ ಕಾಣಿಸುವುದು ಆತ್ಮಹತ್ಯೆ ಮಾತ್ರ. ತಾನು ಪರೀಕ್ಷೆಯಲ್ಲಿ ಅನುತ್ತೀರ್ಣರಾಗಿದ್ದರಿಂದ ತಂದೆ-ತಾಯಿ ಗೌರವ ಹಾಳಾಗಿದೆ. ಇದ್ದು ಅವರಿಗೆ ಇನ್ನಷ್ಟು ಅವಮಾನ ಕೊಡುವುದಕ್ಕಿಂತ ಸಾಯುವುದೇ ಮೇಲು ಅಂತ ಅವರ ಸಣ್ಣ ಮನಸ್ಸು ದೊಡ್ಡ ತೀರ್ಮಾನ ತೆಗೆದುಕೊಂಡು ಬಿಡುತ್ತದೆ. ಹೆದರಿದವನಿಗೆ ಹೂವೂ ಹಾವಾಗುವಂತೆ ಆತ್ಮಹತ್ಯೆಯತ್ತ ಮುಖ ಮಡಿದವರಿಗೆ ಶಾಲೂ ನೇಣಾಗುತ್ತದೆ.
ಈ ವಿಷಯದಲ್ಲಿ ಮಕ್ಕಳಿಗಿಂತ ಪಾಲಕರಿಗೆ ಹೆಚ್ಚು ತಿಳವಳಿಕೆ ಇರಬೇಕಾದ್ದು ಅಗತ್ಯ. ಯಾಕೆಂದರೆ ಪಾಲಕರು ಹಿರಿಯರು. ಜೀವನ ಅರಿತವರು. ಮಕ್ಕಳು ಪರೀಕ್ಗಷೆಯಲ್ಲಿ ಫೇಲಾಗಿರುವುದನ್ನೇ ದೊಡ್ಡ ರಂಪ ಮಾಡಬಾರದು. ಫಲಿತಾಂಶ ಬಂದಾಗಿದೆ. ರಂಪ ಮಾಡಿ ಪ್ರಯೋಜನವೇನೂ ಇಲ್ಲ ಎಂಬುದನ್ನು ಅರಿಯಬೇಕು. ನಿಮಗಿಂತ ಕೆಟ್ಟ ಮನಸ್ಥಿತಿಯಲ್ಲಿ ಮಕ್ಕಳಿರುತ್ತಾರೆ ಎಂದು ಅರ್ಥ ಮಾಡಿಕೊಳ್ಳಬೇಕು. ಇದನ್ನು ಅರಿಯದೆ ಪಾಲಕರು ಪರೀಕ್ಷೆಯಲ್ಲಿ ಅನುತ್ತೀರ್ಣರಾದ ಮಕ್ಕಳನ್ನು ಹಿಗ್ಗಾಮುಗ್ಗಾ ಬಯ್ಯುತ್ತಾರೆ. ಇಷ್ಟೆಲ್ಲ ವ್ಯವಸ್ಥೆ ಮಾಡಿಕೊಟ್ಟೂ ನೀನು ಇಷ್ಟೇ ಮಾಡಿದ್ದು, ಆಚೆ ಮನಯೆ ಹುಡುಗಿ ಅಥವಾ ಹುಡುಗನ್ನು ನೋಡು ಎಂದು ಹೋಳಿಕೆ ಮಾಡಿ ಜರೆಯುತ್ತಾರೆ. ಈತ ಬದುಕಿರುವುದೇ ವೇಸ್ಟು ಎಂಭರ್ಥದಲ್ಲಿ ಬಯ್ಯುತ್ತಾರೆ. ಇದು ಮಕ್ಕಳ ಮೇಲೆ ಎಂಥ ಪರಿಣಾಮ ಬೀರಬಹುದು ಎಂಬುದನ್ನು ಆ ಕ್ಷಣಕ್ಕೆ ಅವರು ಗಮನಿಸುವುದಿಲ್ಲ. ನಂತರ ಮಕ್ಕಳು ಆತ್ಮಹತ್ಯೆ ಮಾಡಿಕೊಂಡರೆ, ಮನೆ ಬಿಟ್ಟು ಹೋದರೆ ಆಗ ಗೋಳೋ ಎಂದು ಕಣ್ಣೀರಿಡುತ್ತ ಪರಿತಪಿಸುತ್ತಾರೆ.
ತಮ್ಮ ಮಕ್ಕಳು ಆತ್ಮಹತ್ಯೆ ಮಾಡಿಕೊಳ್ಳಬಹುದೆಂದು ಯಾರೂ ಎಣಿಸಿರುವುದಿಲ್ಲ. ಆದರೆ ಮಕ್ಕಳು ಪರೀಕ್ಷೆಯಲ್ಲಿ ಅನುತ್ತೀರ್ಣರಾದರೆ ಹದಿನೈದು ದಿನದ ಮಟ್ಟಿಗಾದರೂ ಅವರನ್ನು ಏಕಾಂಗಿಯಾಗಿ ಬಿಡದಿರುವುದು ಒಳ್ಳೆಯದು. ಏಕಾಂಗಿಯಾದರೆ ಮಕ್ಕಳಿಗೆ ಆತ್ಮಹತ್ಯೆ ಮಾಡುವ ಅವಕಾಶ ದೊರೆತಂತಾಗುತ್ತದೆ. ಏಕಾಂಗಿಯಾಗಿರುವಾಗ ಇಲ್ಲದ ಆಲೋಚನೆಗಳೂ ಮಕ್ಕಳ ತಲೆಯಲ್ಲಿ ಬಂದು ಅವರು ಆತ್ಮಹತ್ಯೆ ನಿರ್ಧಾರದತ್ತ ನಡೆದು ಹೋಗುವಂತೆ ಮಾಡುತ್ತದೆ. ಅದರ ಬದಲು ಯಾರಾದರೂ ಸದಾ ಅವರ ಜತೆ ಇದ್ದರೆ ಮನಸ್ಸಿಗೂ ಸ್ವಲ್ಪ ಸಮಾದಾನ. ಆತ್ಮಹತ್ಯೆ ಅವಕಾಶಗಳೂ ದೊರೆಯುವುದಿಲ್ಲ.
ಇದೆಲ್ಲಕ್ಕಿಂತ ಮುಖ್ಯವಾಗಿ ನಮ್ಮ ಪಾಲಕರು ಮಕ್ಕಳನ್ನು ಇಂತಹ ಸನ್ನಿವೇಶಕ್ಕೆ ಸಿದ್ಧಗೊಳಿಸುವುದನ್ನು, ಸ್ವತಃ ತಾವು ಸಿದ್ಧಗೊಳ್ಳುವುದನ್ನು ಕಲಿಯಬೇಕಿದೆ. ಯಾರೂ ತಮ್ಮ ಮಕ್ಕಳು ಫೇಲಾಗಲೆಂದು ಬಯಸುವುದಿಲ್ಲ. ಆದರೆ ಒಂದೊಮ್ಮೆ ಫೇಲಾದರೆ ಎಂಬುದನ್ನೂ ಚಿಂತಿಸಿಟ್ಟುಕೊಂಡರೆ ಅಷ್ಟು ಸಮಸ್ಯೆಯಾಗಲಾರದು.
ಪ್ರತಿ ಪಾಲಕರು ಪರೀಕ್ಷೆಗೆ, ಫಲಿತಾಂಶ ನೋಡಲು ಹೋಗುವ ಮಕ್ಕಳನ್ನು ಕೂರಿಸಿ ಒಂದೈದು ನಿಮಿಷ ಮಾತಾಡಬೇಕು. ‘ಪರೀಕ್ಷೆ ಫಲಿತಾಂಶವೊಂದೇ ಮುಖ್ಯವಲ್ಲ. ಪರೀಕ್ಷೆಯಲ್ಲಿ ಫೇಲಾದ ಎಷ್ಟೋ ಜನ ಜೀವನದ ಪರೀಕ್ಷೆಯಲ್ಲಿ ಪಾಸಾಗಿದ್ದಾರೆ. ಪರೀಕ್ಷೆಯಲ್ಲಿ ಅತ್ಯಂತ ಕಡಿಮೆ ಅಂಕ ತೆಗೆದುಕೊಂಡವರು ಜೀವನ ಪರೀಕ್ಷೆಯಲ್ಲಿ ಫಸ್ಟ್ ರೆಂಕ್ ಪಡೆದಿದ್ದಾರೆ. ಎಂಬಿಎ ಕಲಿಯದ ವಿಜಯ ಸಂಕೇಶ್ವರ ಅಷ್ಟು ದೊಡ್ಡ ವಿಆರ್‌ಎಲ್ ಸಂಸ್ಥೆ ಸ್ಥಾಪಿಸಿದ್ದಾರೆ. ಕಾಲೇಜಿಗೂ ಹೋಗದ ಆರ್.ಎನ್. ಶೆಟ್ಟಿ ಯಶಸ್ವೀ ಉದ್ಯಮಿಯಾಗಿದ್ದಾರೆ. ಇವುಗಳನ್ನು ಮಕ್ಕಳಿಗೆ ಹೇಳಬೇಕು.’ ಪರೀಕ್ಷೆ ಫಲಿತಾಂಶ ಜೀವನದ ಒಂದು ಭಾಗ. ಪರೀಕ್ಷೆ ಮುಂದಿನ ವರ್ಷವೂ ಬರುತ್ತದೆ ಎಂಬುದನ್ನೂ ಅವರಿಗೆ ಅರುಹಬೇಕು. ಆಗ ಫಲಿತಾಂಶ ನೋಡಲು ಹೋಗುವ ಮಕ್ಕಳ ಮನಸ್ಸು ಸ್ವಲ್ಪ ತಿಳಿಯಾದೀತು.
ಇನ್ನಾದರೂ ಪಾಲಕರು ತಮ್ಮ ಮಕ್ಕಳ ಬಗೆಗಿರುವ ಅತೀ ಆಸೆ ಬಿಡಬೇಕು. ಮಕ್ಕಳು ಎಂಜಿನಿಯರ್ ಆಗಬೇಕು, ವೈದ್ಯನಾಗಬೇಕು. ಆ ಮೂಲಕ ತಾನು ಸಮಾಜದಲ್ಲಿ ಪ್ರತಿಷ್ಠೆ ಹೆಚ್ಚಿಸಕೊಳ್ಳಬೇಕು ಎಂಬ ಆಸೆ ಮನಸ್ಸಿನಲ್ಲಿದ್ದರೆ, ನೀವೇ ಇಟ್ಟುಕೊಳ್ಳಿ. ಅದನ್ನು ಮಕ್ಕಳ ಮೇಲೆ ಹೇರಲು ಹೋಗಬೇಡಿ. ಎಂಜಿನಿರಿಂಗ್, ವೈದ್ಯ, ಸಾಫ್ಟ್‌ವೇರ್ ಅಲ್ಲದೇ ಪ್ರಪಂಚದಲ್ಲಿ ಸಾಕಷ್ಟು ವೃತ್ತಿಗಳಿವೆ ಮತ್ತು ಆ ವೃತ್ತಿ ಮಾಡುವ ಜನರು ನೆಮ್ಮದಿಯ ಜೀವನ ಸಾಗಿಸುತ್ತಿದ್ದಾರೆ ಎಂಬುದನ್ನು ಪಾಲಕರು ಅರ್ಥ ಮಾಡಿಕೊಂಡು,ಅದನ್ನು ಮಕ್ಕಳಿಗೂ ಅರ್ಥ ಮಾಡಿಸಬೇಕು.
ಇದನ್ನೆಲ್ಲ ಪಾಲಕರು ಅರ್ಥ ಮಾಡಿಕೊಂಡರೆ ಮಾತ್ರ ಫಲಿತಾಂಶದ ನಂತರ ಮಕ್ಕಳನ್ನು ಆವರಿಸುವ ಆತಂಕ, ಆತ್ಮಹತ್ಯೆಯ ಸನ್ನಿ ನಿವಾರಣೆಯಾದೀತು. ಒಂದಷ್ಟು ಎಳೆ ಜೀವಗಳು ಉಳಿದೀತು.

Thursday, May 17, 2007

ನಿದ್ರೆ- ಬಂದ್ರೆ



ರಮಾನಾಥ ರೈಗೆ ಸಭೇಲಿ, ವಿಧಾನಸಭೇಲಿ ನಿಧಾನವಾಗಿ ನಿದ್ರೆ ಬಿದ್ಬಿಡುತ್ತೆ. ದೇವೇಗೌಡ್ರ ಬಳಿ ನಿದ್ರೆ ಮಾಡ್ತೀರಲ್ರಿ ಅಂದ್ರೆ ಇಲ್ರೀ ದೇಶದ ಬಗ್ಗೆ ಚಿಂತೆ ಮಾಡ್ತಾ ಇದೀನಿ ಅಂದ್ರಂತೆ. ಯು.ಟಿ. ಫರೀದರಂತೂ ಕೂತಲ್ಲೆಲ್ಲ ನಿದ್ರಾ ದೇವೀನ ಅಪ್ಕೋತಿದ್ರು. ಕೆಲವರಿಗೆ ಬಸ್ ಹತ್ತುತ್ತಿದ್ದಂತೆ ನಿದ್ರೆ. ಕೆಲವರಿಗೆ ಕಂಡಕ್ಟರ್ ಹತ್ತಿರ ಬಂದ್ಕೂಡ್ಲೆ ಘಾಡ ನಿದ್ರೆ. ಇನ್ನು ಕೆಲವರಿಗೆ ಕಂಡಕ್ಟರ್ ಅವರನ್ನ ದಾಟಿ ಹೋಗೋವರೆಗೂ ನಿದ್ರೆ. ಹೀಗೆ ಕಚೇರಿ, ಬಸ್ಸು, ರೈಲು, ವಿಮಾನ, ಹಾಸಿಗೆ, ಪುಟ್‌ಪಾತು, ಕ್ಲಾಸ್ ರೂಮು, ಬೀಚು, ಸಭೆ, ಮನೆ ಹೀಗೆ ಎಲ್ಲಂದರಲ್ಲಿ ನಮಗೇ ಗೊತ್ತಿಲ್ಲದೆ ಆವರಿಸಿಕೊಂಡು ಬಿಡುತ್ತೆ ನಿದ್ರೆ. ಕೂತ್ಕೊಳೋಕೆ, ತಲೆ ಕೊಡೋಕೆ ಒಂದು ಜಾಗ ಅದು ಬಸ್ಸಿನ ಮುಂದಿನ ಸೀಟಾದರೂ ಆಗಬಹುದು ಇಲ್ಲಾ ಪಕ್ಕದ ಪ್ರಯಾಣಿಕನ ಭುಜವಾದರೂ ನಡೆದೀತು!
ಬಸ್ಸಲ್ಲಿ ನಿದ್ರೆ ಮಾಡೋರ ನೋಡಿದ್ರೆ ಚಾರ್ಲಿ ಚಾಪ್ಲಿನ್ ಸಿನಿಮಾ ನೋಡ್ದಂಗಿರುತ್ತೆ. ಒಮ್ಮೆ ಆಚೆ ಕೂತವನ ಮೇಲೆ ಬೀಳುತ್ತಾ. ಸಾರಿ ಕೇಳುತ್ತಾ. ಬ್ರೇಕ್ ಹಾಕಿದಾಗೊಮ್ಮೆ ಎದುರಿನ ಸೀಟಿಗೆ ಹಣೆ ಘಟ್ಟಿಸುತ್ತಿರುತ್ತಾರೆ.
ಹಾಗಂತ ಎಲ್ರಿಗೂ ಎಲ್ಲೆಂದರಲ್ಲಿ ನಿದ್ರೆ ಬರೋದಿಲ್ಲ. ಎಷ್ಟೋ ಜನಕ್ಕೆ ಮನೆ ಬೆಡ್ ರೂಂನಲ್ಲಿ ಮೆತ್ತನೆ ಹಾಸಿಗೆ, ಎಸಿ ಇರುತ್ತೆ. ಗಿರಗಿರನೆ ತಿರುಗಿ ಗಾಳಿ ಬೀಸೋ ಫ್ಯಾನ್ ಇರುತ್ತೆ. ಆದ್ರೆ ಕರೆಂಟೇ ಇರೊಲ್ಲ. ಕರೆಂಟು ಇತ್ತು ಅಂತ್ಲೇ ಇಟ್ಕೊಳೋಣ ಅವನಿಗೇನೋ ಚಿಂತೆ. ಇವತ್ತು ಬಿಜೆನೆಸ್‌ನಲ್ಲಾದ ಲಾಸು. ವಿರೋಧ ಪಕ್ಷದವ ಮಾಡಿದ ಟೀಕೆ. ನಾಳೆ ಮಾಡಬೇಕಾದ ಕೆಲಸ. ಮಗ ಕೆಟ್ಟ ಚಟ ಕಲಿತದ್ದು. ಮಗಳು ಯಾರನ್ನೋ ಪ್ರೀತಿಸುತ್ತಿರುವುದು. ಇಲ್ಲವೇ ಮಕ್ಕಳು ಶಿಕ್ಷಣದಲ್ಲಿ ಹಿಂದಿರುವುದು. ಹೆಂಡತಿಗೆ ತನ್ನ ಬಗ್ಗೆ ಪ್ರೀತಿ ಕಡಿಮೆ ಆಗಿದೆ ಎಂಬ ಅನುಮಾನ. ಅಯ್ಯೋ ಸಮಸ್ಯೆಯ ಸರಮಾಲೆ. ಆಕಾಶವೇ ಬಿದ್ದಿದೆ ತಲೆಮ್ಯಾಲೆ!
ಜಗತ್ತಿನಲ್ಲಿ ಅತ್ಯಂತ ಸುಖಿ ಯಾರು? ಎಂಬ ಪ್ರಶ್ನೆಗೆ ಕರೆದ ಕೂಡಲೆ ಯಾರಿಗೆ ನಿದ್ರೆ ಬರುತ್ತೋ ಆತ ಎಂದು ಉತ್ತರಿಸಬಹುದು. ತುಂಬ ದುಡ್ಡಿದ್ದು, ಎಲ್ಲ ಸೌಕರ್ಯವಿದ್ದು, ಎಸಿ ಬೆಡ್ ರೂಂ ಇದ್ದೂ ನಿದ್ರೆ ಬಾರದೆ ಹೋದರೆ ಪ್ರಯೋಜನವೇನು? ಖಂಡಿತ ಆತ ಸುಖಿಯಲ್ಲ. ಅದಕ್ಕೇ ಅಲ್ಲವೆ ಹಿರಿಯರು ಚಿಂತೆ ಇಲ್ಲದವನಿಗೆ ಸಂತೆಯಲ್ಲೂ ನಿದ್ರೆ ಅಂದಿರೋದು.
ಫುಟ್‌ಪಾತ್‌ನಲ್ಲಿ ಹಾಯಾಗಿ ಗಾಳಿಗೆ ಮಯ್ಯೊಡ್ಡಿ ಭೂಮ್ತಾಯನ್ನೇ ಮಂಚವಾಗಿಸಿ, ಆಕಾಶಾನೇ ಸೂರಾಗಿಸಿ ಪವಡಿಸಿದ ಮಾಸಲು ಬಟ್ಟೆ ತೊಟ್ಟ ಮನುಷ್ಯನ್ನ ನೋಡಿ. ಎಂಥ ಹಾಯಾಗಿ ಮಲ್ಕೊಂಡಿದಾನೆ. ನೆಮ್ಮದಿಯ ಅಪರಾವತಾರ. ಹಾಯಾಗಿ ನಿದ್ರೆ ಬರೋಕೂ ಪುಣ್ಯ ಮಾಡಿರ್‍ಬೇಕು ಅಂತಾರೆ. ಪುಣ್ಯವೋ? ಪಾಪವೋ? ಗೊತ್ತಿಲ್ಲ. ಮನಸ್ಸು ನಿರುಮ್ಮಳವಾಗಿದ್ದರೆ ನಿದ್ರಾದೇವಿ ತಟ್ಟನೆ ಬಂದು ತಬ್ಕೋತಾಳೆ. ಆಕೆಗೆ ತಲೆಬಿಸಿ ಇರೋರ್‍ನ ಕಂಡ್ರೆ ಅಲರ್ಜಿ.
ಒಬ್ಬ ಮನುಷ್ಯ ದಿನಕ್ಕೆ ಕನಿಷ್ಟ ಆರು ತಾಸಾದರೂ ನಿದ್ರಾದೇವಿಯ ತೆಕ್ಕೆಯಲ್ಲಿರಬೇಕು ಅಂತಾರೆ ನಿದ್ರೆ ಮಹಿಮೆ ತಿಳಿದೋರು. ಸರಿಯಾದ ನಿದ್ರೆಯಿಂದ ನೆನಪಿನ ಶಕ್ತಿ ಹೆಚ್ಚುತ್ತೆ. ಮನಸು ಫ್ರೆಶ್ ಆಗುತ್ತೆ. ಮೆದುಳಿಗೆ, ಕಣ್ಣಿಗೆ ಅಷ್ಟೇ ಏಕೆ ಇಡೀ ದೇಹಕ್ಕೆ ವಿಶ್ರಾಂತಿ ಸಿಗುತ್ತೆ. ರಕ್ತ ಚೆನ್ನಾಗಿ ಪ್ರವಹಿಸುತ್ತೆ. ಅದಕ್ಕೂ ಹೆಚ್ಚೆಂದರೆ ಒಂದೊಳ್ಳೆ ಕನಸು ಬೀಳುತ್ತೆ. ಇಷ್ಟೆಲ್ಲ ಒಳ್ಳೇ ಗುಣಗಳಿರೋ ನಿದ್ರೆ ಯಾರಿಗೆ ತಾನೆ ಬೇಡ.
ಇಂತಹ ಸುಂದರ ನಿದ್ರೆ ಬಿದ್ರೆ ಆಗೋ ಅನಾಹುತಗಳಿಗಳು ಒಂದೆರಡೇ?
ವಾಹನ ಚಲಾಯಿಸುವಾಗ ಚಾಲಕನಿಗೆ ಒಂದು ಸೆಕೆಂಡು ಕಣ್ಣು ತೂಕಡಿಸಿದರೂ ಒಂದಿಷ್ಟು ಜನ ಶಾಶ್ವತವಾಗಿ ಕಣ್ಮುಚ್ಚುತ್ತಾರೆ. ಕಚೇರೀಲಿ ನಿದ್ರೆ ಮಾಡಿದಾಗ ಹಿರಿಯ ಅಧಿಕಾರಿ ಬಂದ್ರೆ ಉಗಿಸ್ಕೋಬೇಕು. ಮನೇಲಿ ಜನ ಮಲ್ಕೊಂಡಿರುವಾಗಲೇ ಕಳ್ಳರು ಮನೆಗೆ ನುಗ್ಗಿ ಕಳ್ಳತನ ಮಾಡೋದಿದೆಯಲ್ಲ ಅದು ನಿದ್ರೆಯಿಂದಾಗೋ ಅನಾಹುತದ ಪರಮಾವಧಿ. ಇತ್ತೀಚೆಗೆ ಮೂಡುಬಿದಿರೆಯ ಮನೆಯೊಂದರಲ್ಲಿ ತುಂಬಾ ಸೆಖೆಯೆಂದು ಎಲ್ಲರೂ ಮನೆಯ ಹೊರಗೆ ಮಲಗಿದ್ದರು. ಕಳ್ಳ ಒಳಗಿದ್ದದ್ದನ್ನೆಲ್ಲ ತೆಗೆದುಕೊಂಡು ಹೋಗಿದ್ದ.
ನಾನೂ ಎಲ್ಲೆಂದರಲ್ಲಿ ನಿದ್ರೆ ಮಾಡಬಲ್ಲೆ. ಅಷ್ಟರಮಟ್ಟಿಗೆ ನಾನು ಸುಖಿ. ಸ್ವಲ್ಪ ಸಮಯವಿದ್ದರೆ ಸಣ್ಣ ನಿದ್ದೆ ಮಾಡಿ ತಟ್ಟನೆ ಫ್ರೆಶ್ ಆಗಬಲ್ಲೆ. ದೊಡ್ಡ ನಿದ್ದೆಗಿಂತ ೧೦ ನಿಮಿಷದ ಸಣ್ಣ ನಿದ್ರೆ ದೊಡ್ಡ ರಿಲೀಫ್ ಕೊಡಬಲ್ಲದು. ಒಮ್ಮೆ ಪಾಂಡೇಶ್ವರ ಇನ್‌ಸ್ಪೆಕ್ಟರ್ ವೆಂಕಟೇಶ ಪ್ರಸನ್ನರನ್ನು ಭೇಟಿ ಮಾಡಲು ಹೋಗಿದ್ದೆ. ಠಾಣೆಗೆ ಹೋದರೆ ಆಯಪ್ಪ ಇರಲಿಲ್ಲ. ಕೇಳಿದ್ದಕ್ಕೆ ೧೫ ನಿಮಿಷದಲ್ಲಿ ಬರ್‍ತೀನಿ ಅಂದ್ರು. ಸರಿ ಅಂತ ಅಲ್ಲೇ ಗೋಡೆಗೆ ತಲೆ ಒರಗಿಸಿ ಕುಳಿತಿದ್ದವನಿಗೆ ನಿದ್ರೆ. ಇನ್‌ಸ್ಪೆಕ್ಟರ್ ಬಂದು ಎಬ್ಬಿಸಿದ್ರು. ಏನ್ ಸ್ವಾಮಿ ನಿದ್ರೇನಾ ಅಂದ್ರು. ಅದ್ಕೆ ನಾನಂದೆ ಹೌದು ಸ್ವಾಮಿ ಪೊಲೀಸ್ ಠಾಣೆಗೆ ಬಂದೂ ನಿಶ್ಚಿಂತವಾಗಿ ನಿದ್ರೆ ಮಾಡೋ ಧೈರ್ಯ ಪತ್ರಕರ್ತರಿಗಲ್ಲದೆ ಇನ್ಯಾರಿಗಿರುತ್ತೆ ಅಂದೆ. ಅವರಿಗೂ ಈ ಮಾತು ಸತ್ಯ ಅನ್ನಿಸಿರಬೇಕು. ನಕ್ಕು ಸುಮ್ಮನಾದರು.
ಕೆಲವು ಘಟನೆ ನೋಡಿದರೆ ಪುರುಷರಿಗಿಂತ ಸ್ತ್ರೀಯರಿಗೆ ನಿದ್ರೆ ಅಷ್ಟು ಒಳ್ಳೇದಲ್ಲ ಅನಿಸಿಬಿಡುತ್ತೆ. ಹಂಗಂತ ನನ್ನ (ಇ)ಸ್ತ್ರೀ ವಿರೋಧಿ ಅಂದ್ಕೋಬೇಡಿ.
ಬುದ್ಧ
ಜಗವೆಲ್ಲ ಮಲಗಿರಲು
ಅವನೊಬ್ಬ ನೆದ್ದ
ಮನೆಯಿಂದ ಹೊರಬಿದ್ದ
ಜಗದ ಜಂಜಡ ಗೆದ್ದ...
ಅನ್ನೋದು ಕರೆಕ್ಟಾ?
ಅವನ ಹೆಂಡತಿಗೆ ಅಷ್ಟೇ ಏಕೆ ಮನೆಯ ಯಾರಿಗೇ ಆದರೂ ಅವನೆದ್ದು ಮನೆಯಿಂದ ಹೊರನಡೆಯುತ್ತಿರುವುದು ಗೊತ್ತಾಗಿದ್ದರೆ ಬಹುಶಃ ಬುದ್ಧನಿಗೆ ಬುದ್ಧ ಎಂದು ಕರೆಸಿಕೊಳ್ಳುವ ಅವಕಾಶವೇ ತಪ್ಪಿ ಹೋಗುತ್ತಿತ್ತೇನೊ.
ನಳ- ದಮಯಂತಿಯನ್ನು ಬಿಟ್ಟು ನಡೆದದ್ದೂ ಆಕೆ ನಿದ್ರಿಸುತ್ತಿರುವಾಗಲೇ ಅಲ್ಲವೇ? ಆದ್ದರಿಂದ ಸ್ರೀಯರೇ ನಿದ್ರಿಸುವಾಗ ಎಚ್ಚರ!

ಟಿಕ್ಲಿ ಕುಂಕುಮ ನುಂಗಿತ್ತ...



ಕೋಡಗನ ಕೋಳಿ ನುಂಗಿತ್ತ ನೋಡವ್ವ ತಂಗಿ... ಹಾಡು ಕೇಳಿದ್ದೀರಲ್ಲ. ಕೋಡಗನ ಕೋಳಿ ನುಂಗಲು ಸಾಧ್ಯವೊ ಇಲ್ಲವೊ? ನೀವೇ ಯೋಚನೆ ಮಾಡಿ. ನನಗಂತೂ ಪುರುಸೊತ್ತಿಲ್ಲ. ಆದರೆ ಎಷ್ಟೋ ಸಂಗತಿಗಳು ನಮ್ಮ ನಿಮ್ಮ ನಡುವಿನ ಹಲವನ್ನು ನುಂಗಿ ನೀರು ಕುಡಿದಿವೆ. ಎಷ್ಟು ನುಣ್ಣಗೆ ಅಂದರೆ ಅವು ಒಂದನ್ನೊಂದು ನುಂಗುತ್ತಿರುವುದು ಅಥವಾ ನುಂಗಿವೆ ಅಂತ ನನಗೆ-ನಿಮಗೆ ಗೊತ್ತೇ ಆಗಿಲ್ಲ.
ನನ್ನ ಅಲ್ಲಲ್ಲ ನಮ್ಮೆಲ್ಲರ ಅಜ್ಜಿ ಹಣೆಗೆ ಕುಂಕುಮ ಇಡುತ್ತಿದ್ದರು. ಬರೋಬ್ಬರಿ ಒಂದು ರೂಪಾಯಿ ನಾಣ್ಯದಷ್ಟು ದೊಡ್ಡದು (ಉದಾ: ಪಾರ್ವತಮ್ಮ). ಅಂತಹ ಕುಂಕುಮವನ್ನು ಇಂದು ಒಂದು ಬಾಲ್ ಪೆನ್ ತುದಿಯಷ್ಟು ಅಗಲ ಇಲ್ಲದ ಟಿಕ್ಲಿ ನುಂಗಿ ಹಾಕಿದೆ. ಈಗಿನವರು ಹಣೆಗೆ ಇಟ್ಟಿದ್ದಾರೊ ಇಲ್ಲವೊ ಎಂಬುದನ್ನು ಮುಟ್ಟಿ ನೋಡಿ!! ಅಥವಾ ಅತಿ ಹತ್ತಿರದಿಂದ ನೋಡಿಯೇ ಹೇಳಲು ಸಾಧ್ಯ.
ಮುಖಕ್ಕೆ ಅರಿಶಿನ ಹಚ್ಚುತ್ತಿದ್ದರು. ಅದನ್ನು ಫ್ಯಾರ್ ಆಂಡ್ ಲೌಲಿ (ಆರು ವಾರಗಳಲ್ಲಿ ಟ್ಯೂಬ್ ಖಾಲಿ!!!) ಹೊಟ್ಟೆಗೆ ಹಾಕಿಕೊಂಡಿದೆ. ಸನ್‌ಸಿಲ್ಕ್, ಆಲ್‌ಕ್ಲಿಯರ್ (ಕಿಸೇನಾ? ಕೂದಲಾ?), ಕ್ಲಿನಿಕ್ ಪ್ಲಸ್ (ಹೇರ್ ಪ್ಲಸ್ ಅಂತ ಇಡಬಹುದಿತ್ತು), ತಲೆ ಮತ್ತು ಹೆಗಲು (ಹೆಡ್ ಆಂಡ್ ಶೋಲ್ಡರ್‍ಸ್) ಕಂಪನಿಗಳ ಶ್ಯಾಂಪೂಗಳು ಶೀಗೇಕಾಯಿ ಪುಡಿಯನ್ನು ಬಚ್ಚಲು ಮನೆಯಿಂದ ಓಡಿಸಿವೆ. ಅಪ್ಪ-ಗಂಡಂದಿರ ಕಿಸೆಗೆ ಕೈ ಹಾಕಿವೆ.
ರೆಡಿಮೇಡ್ ಬಟ್ಟೆ, ಹೊಸ ಫ್ಯಾಶನ್‌ಗಳು ಹೊಲಿಗೆಯವರ ಅನ್ನ ನುಂಗಿವೆ. ಟೀವಿ ಮನೆಯೊಳಗೆ ಬಂದು ಮನೆ ಜನರ ನಡುವಿನ ಮಾತು-ಬಾಂಧವ್ಯವನ್ನು ಮನೆಯಿಂದ ಹೊರಹಾಕಿದೆ. ರೇಡಿಯೋವನ್ನು ಮಾತಾಡದಂತೆ ಮಾಡಿದೆ. ಸಿಡಿ ಕ್ಯಾಸೆಟ್‌ಗಳನ್ನು ಸುತ್ತಿ ಆಚೆಗೆಸೆದು, ಧೂಳು ತಿನ್ನುವಂತೆ ಮಾಡಿದೆ. ಚಾನಲ್‌ಗಳು ಚಿತ್ರ ಮಂದಿರಕ್ಕೆ ಹೋಗುವ ಜನರನ್ನು ನುಂಗಿವೆ. ಟೆರಿಕೋಟ್ ಮತ್ತು ಆಧುನಿಕ ಮಾದರಿ ಸೀರೆ, ಡ್ರೆಸ್ ಮಟಿರಿಯಲ್‌ಗಳು ಗಾಂಧಿ ಅಜ್ಜನಿಗೆ ಪ್ರೀತಿಯಾಗಿದ್ದ ಹತ್ತಿ ಬಟ್ಟೆಗಳನ್ನು ಮರೆಸಿವೆ. ಸಿಗರೇಟು ಹೊಗೆಯಲ್ಲಿ ಬೀಡಿ ಕಾಣದಾಗಿದೆ. ಗ್ಯಾಸ್‌ನ ಹೀಟಿಗೆ ಮಣ್ಣಿನ ಒಲೆ ಒಡೆದೇ ಹೋಗಿದೆ. ಮಣಿನ್ಣ ಮಡಕೆ, ಅಲ್ಯೂಮಿನಿಯಂ- ತಾಮ್ರದ ಪಾತ್ರಗಳು ಸ್ಟೀಲ್ ಪಾತ್ರದ ಹೊಳಪಲ್ಲಿ ಕಾಣದಾಗಿವೆ.
ಕಾಂಕ್ರೀಟ್ ಕಾಡುಗಳು, ಮನುಷ್ಯನ ದುರಾಸೆಗಳು ಕಾಡನ್ನು ನುಂಗಿ ನೀರು ಕುಡಿದಿವೆ. ಬೇಟೆಯ ಹುಚ್ಚು ಪ್ರಾಣಿಗಳನ್ನು ಕಣ್ಣಿಗೆ ಕಾಣದಂತೆ ಮಾಡಿದೆ. ಮನುಷ್ಯನ ದುರಾಸೆ, ಅತಿ ಆಸೆ ಅಂತರ್ಜಲವನ್ನೇ ಹೀರಿ ಬಿಟ್ಟಿದೆ. ಟೆಂಪೋಗಳಿಂದ ಎತ್ತಿನ ಗಾಡಿಯೂ, ರಿಕ್ಷಾಗಳಿಂದ ಜಟಕಾ ಬಂಡಿಗಳೂ ನಾಪತ್ತೆಯಾಗಿವೆ. ಬೈಕು- ಕಾರುಗಳು ನಡೆಯುವ ಹವ್ಯಾಸ ಬಿಡಿಸಿವೆ. ವಾಹನದ ಹೊಗೆ ಶುದ್ಧ ಗಾಳಿಯನ್ನು ಸೇವಿಸದಂತೆ ಮಾಡಿದೆ. ಕ್ರಿಕೆಟ್ ಗ್ರಾಮೀಣ ಆಟಗಳಾದ ಖೊ ಖೊ, ಕಬಡ್ಡಿಗಳನ್ನು ಮೈದಾನದಿಂದ ಔಟ್ ಮಾಡಿದೆ.
ಮೊಬೈಲ್ ಪೇಜರನ್ನು ನಾಪತ್ತೆ ಮಾಡಿದೆ. ವಿದ್ಯುತ್ ಚಿಮಣಿ ಬುರಡೆಗೆ ಡಸ್ಟ್ ಮತ್ತು ರಸ್ಟ್ ಹಿಡಿಯುವಂತೆ ಮಾಡಿದೆ. ಫೋನು ಪತ್ರಗಳನ್ನು ಅಗಿದು, ನುಂಗಿದೆ. ಕಂಪ್ಯೂಟರ್ ಹಲವರ ಕೆಲಸ ಕಸಿದುಕೊಂಡಿದೆ. ಎಳನೀರು, ಎಳ್ಳು ನೀರು, ಮಜ್ಜಿಗೆಗಳ ಜಾಗದಲ್ಲಿ ಕೋಲಾಗಳು ಕುಳಿತು ಕೇಕೆ ಹಾಕಿದೆ. ಏನ್ಮಾಡೋದು...
ಕುಂಕುಮವ ಟಿಕ್ಲಿ ನುಂಗಿತ್ತ... ನೋಡವ್ವ ತಂಗಿ....
ಅರಿಶಿಣವ ಪ್ಯಾರ್ ಆಂಡ್ ಲೌಲಿ ನುಂಗಿತ್ತ...
ಬೈಕು ಪೆಟ್ರೋಲ ನುಂಗಿ, ಎಂಜಿನ್ನು ಪೆಟ್ರೋಲ ನುಂಗಿ
ಅದು ಬಿಟ್ಟ ಹೊಗೆ ನಮ್ಮನೆ ನುಂಗಿತ್ತ ನೋಡವ್ವ....

Tuesday, May 01, 2007

ಹೀಗೂ ಒಂದು ಶಿಕ್ಷೆ...!

ಪೊಲೀಸ್ ಇಲಾಖೆಯಲ್ಲಿ ತಪ್ಪಿಗೊಂದು ಶಿಕ್ಷೆ ಗ್ಯಾರಂಟಿ. ಹೆಚ್ಚಾಗಿ ವರ್ಗಾವಣೆ, ಅಮಾನತು ಸಾರ್ವಜನಿಕರಿಗೆ ಕಾಣುವ ಶಿಕ್ಷೆ. ಪೊಲೀಸ್ ಅಧಿಕಾರಿಗಳನ್ನು ಕಚೇರಿ ಒಳಗಿನ ಕೆಲಸಕ್ಕೆ ಸೀಮಿತಗೊಳಿಸುವುದು ಅಥವಾ ಸಾರ್ವಜನಿಕ ಕರ್ತವ್ಯಕ್ಕೆ ನೇಮಿಸದಿರುವುದೂ ಇಲಾಖೆಯ ಶಿಕ್ಷಾ ನೀತಿಯಲ್ಲೊಂದು. ಆದರೆ ಇಲ್ಲಿ ಹೇಳುತ್ತಿರುವ ಶಿಕ್ಷೆ ಒಂಥರಾ ವಿಶಿಷ್ಟ ಮತ್ತು ವಿಚಿತ್ರ. ಸುಮ್ಮನೆ ನೋಡಿದವರಿಗೆ ಅದು ಶಿಕ್ಷೆ ಎಂದು ಅನಿಸುವುದೇ ಇಲ್ಲ. ಶಿಕ್ಷೆ ಅನುಭವಿಸುತ್ತಿರುವವನಿಗೆ ಹಾಗೂ ಶಿಕ್ಷೆ ಕೊಟ್ಟವರಿಗೆ ಮಾತ್ರ ಗೊತ್ತು ಅದು ಶಿಕ್ಷೆಯೆಂದು...
ಪೊಲೀಸರಿಗೆ ರೇಶನ್ (ಅಕ್ಕಿ, ಗೋದಿ, ಸಕ್ಕರೆ) ಬರುತ್ತೆ. ಹೆಚ್ಚು ಉಳಿದರೆ ಅದನ್ನು ಹಿಂತಿರುಗಿಸಲಾಗುತ್ತದೆ. ಸಾಧಾರಣವಾಗಿ ಪೊಲೀಸರು ಬೇರೆ ಬೇರೆ ಕಡೆ ಕರ್ತವ್ಯ ನಿರ್ವಹಿಸುವುದರಿಂದ ಎಲ್ಲರೂ ರೇಶನ್ ತೆಗೆದುಕೊಂಡು ಹೋಗುವವರೆಗೂ ರೇಶನ್ ಹಿಂತಿರುಗಿಸುವುದಿಲ್ಲ. ಒಮ್ಮೆ ೫೨ ಮಂದಿ ಇನ್ನೂ ರೇಶನ್ ತೆಗೆದುಕೊಂಡಿರಲಿಲ್ಲ. ಆದರೂ ರೇಶನ್ ಹಿಂತಿರುಗಿಸಲಾಯಿತು. ೫೨ ಮಂದಿ ರೇಶನ್‌ನಿಂದ ವಂಚಿತರಾದರು.
ಈ ವಿಷಯ ಹಿರಿಯ ಅಧಿಕಾರಿಗಳ ಕಿವಿ ತಲುಪಿತು. ತಪ್ಪಿಗೊಂದು ಶಿಕ್ಷೆಯಾಗಲೇಬೇಕಲ್ಲ. ರೇಶನ್ ವಿತರಣೆ ಜವಾಬ್ದಾರಿ ಹೊತ್ತಿದ್ದ ಜಿಲ್ಲಾ ಸಶಸ್ತ್ರ ಮೀಸಲು ಪಡೆ ಕಾನ್‌ಸ್ಟೇಬಲ್‌ಗೆ ಹೆಚ್ಚುವರಿ ಎಸ್ಪಿ ಲೋಕೇಶ್ ಕುಮಾರ್ ಕೊಟ್ಟ ಶಿಕ್ಷೆ ಏನು ಗೊತ್ತಾ? ಆತ ಏಳು ದಿನ ಲೋಕೇಶ್ ಕುಮಾರ್ ಅವರ ಕಚೇರಿಯ ಬಾಗಿಲಲ್ಲಿ ಭಾರದ ಗನ್ ಹಿಡಿದು ನಿಂತಿರಬೇಕು ಅಷ್ಟೆ. ದಿನವೂ ಲೋಕೇಶ್ ಕುಮಾರ್ ಬರುವುದಕ್ಕಿಂತ ಮೊದಲೇ ಬರಬೇಕು. ಅವರು ಊಟಕ್ಕೆ ಹೋದಾಗ ಈತನೂ ಊಟ ಮಾಡಿ ಬರಬೇಕು. ರಾತ್ರಿ ಅವರು ಹೋದ ನಂತರ ಮನೆಗೆ ಹೋಗಬೇಕು. ಅವರ ಕಚೇರಿಗೆ ನಿಮಿಷಕ್ಕೊಮ್ಮೆ ಬರುವ ಪೊಲೀಸ್ ಅಧಿಕಾರಿಗಳಿಗೆ ಸೆಲ್ಯೂಟ್ ಹೊಡೀಬೇಕು.
ನೋಡೋಕೆ ಇದು ಶಿಕ್ಷೆ ಅನಿಸದು. ಆದರೆ ಎಸ್ಪಿ ಕಚೇರಿ ಹೋದವರಿಗೆ, ಅಲ್ಲಿ ಹೊರಗೆ ಕುಳಿತವರಿಗೆ ಗೊತ್ತು... ಅಲ್ಲಿ ಹೊರಗೆ ನಿಲ್ಲೋದೂ ಒಂದು ಶಿಕ್ಷೆ ಅಂತ. ಯಾಕಂದ್ರೆ ಮಂಗಳೂರಿನ ಅರ್ಧ ಸೊಳ್ಳೆ ಎಸ್ಪಿ ಕಚೇರಿಯಲ್ಲೇ ಇರುತ್ತೆ. ಸಂಜೆ ೫.೦೦ ಗಂಟೆ ನಂತರ ಹೆಚ್ಚುವರಿ ಎಸ್ಪಿ ಲೋಕೇಶ್ ಕುಮಾರ್ ಅವರ ಕಚೇರಿ ಹೊರಗೆ ಅರ್ಧ ಗಂಟೆ ಕುಳಿತರೆ ಸಾಕು "ಬರಿಗೈಯಲ್ಲಿ ಸೊಳ್ಳೆ ಹೊಡೆಯುವ ಕಲೆ’ ಎಂಬ ವಿಷಯದ ಕುರಿತು ಒಂದು ಪ್ರಬಂಧ ಮಂಡಿಸಿ ವಿಶ್ವವಿದ್ಯಾಲಯದಿಂದ ಪಿಎಚ್‌ಡಿ ಪಡೆದುಕೊಳ್ಳಬಹುದು. ಅಷ್ಟು ಸೊಳ್ಳೆ. ಸೈಜೂ ಭಾರಿಯಾಗಿಯೇ ಇರುತ್ತೆ.
ಅಂಥ ಸೊಳ್ಳೆ ಇರುವಲ್ಲಿ ಅರ್ಧ ಗಂಟೆ ಇರೋದೇ ಶಿಕ್ಷೆ ಅನಿಸುವಾಗ, ಲೋಕೇಶ್ ಕುಮಾರ್ ಮನೆಗೆ ಹೋಗುವವರೆಗೆ ಅಂದರೆ ಕನಿಷ್ಟ ರಾತ್ರಿ ೯.೩೦ರವರೆಗೆ ಆ ಕಾನ್‌ಸ್ಟೇಬಲ್ ಅವರ ಕಚೇರಿ ಹೊರಗೆ ನಿಂತಿರಬೇಕಲ್ಲ. ಬಹುಶಃ ಆತ ಮಾಡಿದ ತಪ್ಪಿಗೆ ಅದಕ್ಕಿಂತ ದೊಡ್ಡ ಶಿಕ್ಷೆ ಕೊಡೋಕೆ ಸಾಧ್ಯವೇ ಇರಲಿಲ್ಲವೇನೊ?
ಇದಪ್ಪ ಲೋಕೇಶ್ ಕುಮಾರ್ ಐಡಿಯಾ ಅಂದ್ರೆ!

ತೆಂಗಿನ ಕಾಯಿ ಕಳವು

ಉಳ್ಳಾಲದ ಮನೆಯೊಂದರಲ್ಲಿ ಏನು ಮಾಡಿದರೂ ನಿಲ್ಲದ ತೆಂಗಿನ ಕಾಯಿ ಕಳವು. ಅಜ್ಜ- ಅಜ್ಜಿ ಮಾತ್ರ ಇರುವ ಆ ಮನೆ ಮೇಲೆ ಕಳ್ಳರ ಕಣ್ಣು ಶಾಶ್ವತವಾಗಿ ನೆಟ್ಟಿರುತ್ತಿತ್ತು. ಅಜ್ಜ- ಅಜ್ಜಿ ಬೆಳಗ್ಗೆ ಏಳುವುದರೊಳಗೆ ತೆಂಗಿನಕಾಯಿಗಳು ನಾಪತ್ತೆಯಾಗಿ ಬಿಡುತ್ತಿದ್ದವು!
ಈ ಸಮಸ್ಯೆ ಕುರಿತು ಅವರು ಪೊಲೀಸರ ಬಳಿ ದೂರಿಕೊಂಡರು. ಸರಿ ಪೊಲೀಸರು ರಾತ್ರಿ ಅವರ ಮನೆ ಬಳಿ ಗಸ್ತು ಮಾಡುತ್ತಿದ್ದರು. ಆದರೂ ಕಳವು ನಿರಂತರವಾಗಿತ್ತು. ಏನು ಮಾಡಿದರೂ ಹೆಚ್ಚಿನ ತೆಂಗಿನಕಾಯಿಗಳು ಕಳ್ಳತನ ಆಗುವುದರಿಂದ ಮರವನ್ನೇ ಕಡಿಸಿಬಿಡಿ ಎಂಬ ಪೊಲೀಸರ ಸಲಹೆಗೆ ಅಜ್ಜ ಒಪ್ಪಲಿಲ್ಲ. ಪೊಲೀಸರಿಗೆ ಅಜ್ಜನ ಕಾಟ ತಪ್ಪಲಿಲ್ಲ. ಅಜ್ಜಾ ನಿಮ್ಮ ಮನೆ ಕಂಪೌಂಡೆಲ್ಲ ಕಾಣುವ ಹಾಗೆ ಲೈಟ್ ಹಾಕಿಸಿ, ಆಗ ಕಳ್ಳರು ಬರುವುದಿಲ್ಲ. ಬಂದರೂ ಲೈಟ್ ಇರುವುದರಿಂದ ಕಾಣಿಸುತ್ತಾರೆ ಎಂದು ಪುಕ್ಕಟೆ ಸಲಹೆ ಎಸೆದರು.
ಮಾತು ನಂಬಿದ ಅಜ್ಜ ಲೈಟ್ ಹಾಕಿಸಿದ. ಸಲಹೆಯನ್ನು ಸ್ವಲ್ಪ ಜೋರಾಗಿಯೇ ಜಾರಿಗೆ ತಂದ ಅಜ್ಜ ೧೦೦ ವೋಲ್ಟ್‌ನ ಬಲ್ಬ್ ಹಾಕಿ ಇಡೀ ಕಂಪೌಂಡ್ ಜಗಜಗಿಸುವಂತೆ ಮಾಡಿದ. ಆದರೂ ಕಳವು ನಡೆಯುತ್ತಿತ್ತು. ಒಂದು ತಿಂಗಳು ಹೀಗೇ ಕಳೆಯಿತು. ಬಿಲ್ ಬರುವಾಗ ೧೦೦ ವೋಲ್ಟಿನ ಬಲ್ಬ್‌ನ ಶಕ್ತಿ ಗೊತ್ತಾಗಿತ್ತು. ಬಿಲ್ ಅಜ್ಜನಿಗೆ ಶಾಕ್ ಕೊಟ್ಟಿತ್ತು. ಪೊಲೀಸ್ ಠಾಣೆಗೆ ಕರೆ ಮಾಡಿದ ಅಜ್ಜ "ಲೈಟ್ ಹಾಕಿಸಿದ್ದರಿಂದ ಕಳ್ಳತನ ನಿಲ್ಲಲಿಲ್ಲ. ಬದಲಾಗಿ ಬಿಲ್ ಹೆಚ್ಚು ಬಂದಿದೆ. ಲೈಟ್ ಹಾಕಿದರೂ ತೆಂಗಿನಕಾಯಿ ಕಳವು ಮುಂದುವರಿದಿರುವುದರಿಂದ ಲೈಟ್ ತೆಗೆಸುತ್ತೇನೆ’ ಅಂದ. ಅಂದಂತೆ ಮಾಡಿಯೂ ಬಿಟ್ಟ.
ಪೊಲೀಸರಿಗೂ ಅಜ್ಜನ ದೂರು ಕೇಳಿ ಬೇಜಾರಾಗಿತ್ತು. ಕನಿಕರವೂ ಮೂಡಿತ್ತು. ಅಜ್ಜನ ಮನೆಯ ತೆಂಗಿನಕಾಯಿ ಕಳುವು ಮಾಡುವವರನ್ನು ಹಿಡಿಯಲು ನಿರ್ಧರಿಸಿದರು. ಐನಾತಿ ಐವಿಯಾ ಮಾಡಿದರು. ಯೋಜನೆಯಂತೆ ಒಂದಷ್ಟು ತೆಂಗಿನ ಕಾಯಿಗಳನ್ನು ಮರದ ಕೆಳಗೇ ಇಟ್ಟಿದ್ದರು. ಅದನ್ನು ಕಳ್ಳರು ತೆಗೆದುಕೊಂಡು ಹೋಗುವಾಗ ಅವರನ್ನು ಅಡಗಿ ಕುಳಿತ ಪೊಲೀಸರು ಹಿಡಿಯುವುದು ಯೋಜನೆ. ಕಳ್ಳರನ್ನು ಹಿಡಿಯುವ ಕನಸು ಕಾಣುತ್ತ ಅಜ್ಜ ಹಾಯಾಗಿ ಮಲಗಿದ.
ಬೆಳಗ್ಗೆ ಎದ್ದು ನೋಡಿದರೆ ತೆಂಗಿನ ಕಾಯಿ ಇಲ್ಲ. ಹಾಗಾದರೆ ಕಳ್ಳನನ್ನು ಪೊಲೀಸರು ಹಿಡಿದಿರಬಹುದು ಎಂದು ಖುಶಿಯಲ್ಲಿ ಪೊಲೀಸ್ ಠಾಣೆಗೆ ಫೋನಾಯಿಸಿದ. ಆದರೆ ಹಿಂದಿನ ದಿನ ರಾತ್ರಿ ಉಳ್ಳಾಲ ಪರಿಸರದಲ್ಲಿ ಕೊಲೆ ನಡೆದದ್ದರಿಂದ ತೆಂಗಿನಕಾಯಿ ಕಳ್ಳನ ಹಿಡಿಯಲು ಕಾದು ಕೂರಬೇಕಿದ್ದ ಪೊಲೀಸರು ಬಂದೇ ಇರಲಿಲ್ಲ! ಮನೆಯೊಳಗೆ ಭದ್ರವಾಗಿದ್ದ ತೆಂಗಿನಕಾಯಿಗಳೂ ಕಳ್ಳರ ಪಾಲಾಗಿದ್ದವು!
ಹೇಗಿದೆ? ಕಳ್ಳ ಪೊಲೀಸ್ ಆಟ?

Monday, April 30, 2007

ಮೊಸರಲ್ಲೂ ಕಲ್ಲು ಹುಡುಕುವುದು ಏಕೆ ಸುಬ್ಬಯ್ಯ?




ಎಲ್ಲವೂ ಮೋಸ!
ಹೊಸನಗರದ ಶ್ರೀ ರಾಮಚಂದ್ರಾಪುರ ಮಠದಲ್ಲಿ ೯ ದಿನ ನಡೆದ ವಿಶ್ವ ಗೋ ಸಮ್ಮೇಳನದಂತ ಅಧ್ಬುತ, ವಿಶಿಷ್ಟ, ಅಪರೂಪದ ಕಾರ್ಯಕ್ರಮದ ಬಗ್ಗೆ ಮಾಜಿ ಶಾಸಕ ಎ.ಕೆ. ಸುಬ್ಬಯ್ಯ ಹೇಳಿದ ಮಾತು ಇದು.
ಅವರ ಪ್ರಕಾರ... ಗೋ ಸಮ್ಮೇಳನ ಶುದ್ಧ ಮೋಸ. ಕೇವಲ ಹಣ ಮಾಡುವ ದಂಧೆ. ಕರ್ನಾಟಕದಾದ್ಯಂತ ಕೋಮುವಾದ ಹಬ್ಬಿಸುವ ತಂತ್ರದ ಒಂದು ಭಾಗ. ಸ್ವಾಮೀಜಿಗೆ ನಿಜವಾಗಿಯೂ ಗೋವುಗಳ ಸಂತತಿ ಉಳಿಸಲು ಮನಸ್ಸಿದ್ದರೆ ಗೋ ಪಾಲಕರ ಸಮ್ಮೇಳನ ಮಾಡಬೇಕಿತ್ತು. ಅವರ ಸಮಸ್ಯೆಗಳಿಗೆ ಪರಿಹಾರ ಹುಡುಕಬೇಕಿತ್ತು. ಅದರ ಬದಲು ಈಗ ನಡೆದದ್ದು ಗೋ ಪೂಜಕರ ಸಮ್ಮೇಳನ. ವಿಶ್ವ ಗೋ ಸಮ್ಮೇಳನದ ನೆಪದಲ್ಲಿ ಯಾರ್‍ಯಾರಿಂದ ಎಷ್ಟು ಹಣ ಸಂಗ್ರಹಿಸಲಾಯಿತು ಎಂಬುದನ್ನು ಬಹಿರಂಗ ಪಡಿಸಬೇಕು.
ವಿಶ್ವ ಗೋ ಸಮ್ಮೇಳನ ಎಂಬುದೇ ಮೋಸದ ಶಬ್ದ. ವಿಶ್ವದಾದ್ಯಂತದ ಗೋವುಗಳೇ ಇಲ್ಲಿರಲಿಲ್ಲ ಜನರಲ್ಲಿ ಮೌಢ್ಯ ಬೆಳೆಸುವ ಕಾರ್ಯಕ್ರಮ. ಸ್ವಾಮೀಜಿ ಭಾಷಣದಲ್ಲಿ ಹೇಳಿದ್ದೆಲ್ಲ ಸುಳ್ಳು. ನಾನೂ ಗೋವು ಸಾಕಿದ್ದೇನೆ. ಎತ್ತು ಇರಿಸಿಕೊಂಡು ನನಗೇನೂ ಪ್ರಯೋಜನವಿಲ್ಲ. ಅವುಗಳನ್ನು ಹಣ ಕೊಟ್ಟು ಖರೀದಿಸುವವರು ಕಸಾಯಿಖಾನೆಯವರು ಮಾತ್ರ. ನನಗೆ ಲಾಭವಾಗುತ್ತದಾದ್ದರಿಂದ ಅವರಿಗೆ ಕೊಡುತ್ತೇನೆ. ಅದಕ್ಕೆ ಸ್ವಾಮೀಜಿಯದ್ದೇನು ತಕರಾರು. ನಮ್ಮ ಎತ್ತು ನಾನು ಯಾರಿಗೆ ಬೇಕಾದರೂ ಕೊಡುತ್ತೇವೆ. ಅದು ರೈತರ ಹಕ್ಕು. ಅಷ್ಟಿದ್ದರೆ ಎಲ್ಲ ಗೋವುಗಳನ್ನು ಸ್ವಾಮೀಜಿಯೇ ಮಾರುಕಟ್ಟೆ ಕ್ರಯ ಕೊಟ್ಟು ಖರೀದಿಸಲಿ. ಇದನ್ನು ಬಿಟ್ಟು ಆರ್‌ಎಸ್‌ಎಸ್‌ನಂತೆ ಕೋಮುವಾದ ಹಬ್ಬಿಸಲು ಗೋ ಸಮ್ಮೇಳದಂತರಹ ಡೋಂಗಿ ಗೋ ಪ್ರೀತಿ ತೋರಿಸುವುದನ್ನು ಬಿಡಲಿ ಎಂಬುದು ಸುಬ್ಬಯ್ಯ ಅವರ ಅಂಬೋಣ.
ಸುಬಯ್ಯನವರ ಮಾತು ಕೇಳುವಾಗಲೇ ಈ ವಯ್ಯಂದ್ಯಾಕೋ ಜಾಸ್ತಿಯಾಯ್ತು ಅನ್ಸುತ್ತೆ. ಇವರಿಗೆ ಗೋ ಸಮ್ಮೇಳನದ ಬಗ್ಗೆಯಾಗಲಿ, ರಾಮಚಂದ್ರಾಪುರ ಮಠದಲ್ಲಿ ನಡೆಯುತ್ತಿರುವ ಗೋ ಸಂರಕ್ಷಣೆ, ಗೋ ಶಾಲೆ ಬಗ್ಗೆಯಾಗಲಿ ಯಾವುದೇ ಮಾಹಿತಿ ಇಲ್ಲ ಎಂಬುದೂ ಸಾಬೀತಾಗುತ್ತದೆ. ಇಷ್ಟೆಲ್ಲ ಮತಾಡುವ ಸುಬ್ಬಯ್ಯನವರ ಬಳಿ ಸ್ವಾಮಿ ನೀವು ರಾಮಚಂದ್ರಾಪುರ ಮಠಕ್ಕೆ ಹೋಗಿದ್ರಾ ಅಂದ್ರೆ ಇಲ್ಲ ಅಂತಾರೆ. ಹೋಗ್ಲಿ ವಿಶ್ವ ಗೋ ಸಮ್ಮೇಳನಕ್ಕಾದ್ರೂ ಹೋಗಿದ್ರಾ ಅಂದ್ರೆ ಅದಕ್ಕೂ ಅಡ್ಡಡ್ಡ ತಲೆ ಆಡಿಸ್ತಾರೆ. ಈ ಮನುಷ್ಯ ರಾಮಚಂದ್ರಾಪುರ ಮಠಕ್ಕೂ ಹೋಗಿಲ್ಲ. ಗೋ ಸಮ್ಮೇಳನವನ್ನೂ ನೋಡಿಲ್ಲ. ಆದ್ರೂ ಹೋದವರಿಗಿಂತ ಹೆಚ್ಚಾಗಿ ಎಗರಾಡ್ತಾರೆ.
ಇಡೀ ಸಮ್ಮೇಳನ ಜನರಲ್ಲಿ ಮೌಢ್ಯ ಬೆಳೆಸುವ ಕಾರ್ಯಕ್ರಮ ಎಂಬ ಆರೋಪ ಮಾಡುವ ಮೊದಲು ಸುಬ್ಬಯ್ಯ ಒಮ್ಮೆ ಸಮ್ಮೇಳನನೋಡಬೇಕಿತ್ತು. ನೋಡಿದ್ದರೆ ಬಹುಶಃ ಹೀಗೆ ಪೆಕರನಂತೆ, ಅರಳೂ ಮರಳೀಗೆ ತುತ್ತಾದವರಂತೆ ಮಾತಾಡುತ್ತಿರಲಿಲ್ಲ. ಗೋ ಸಮ್ಮೇಳನದ ಅಂಗವಾಗಿ ನಡೆದ ವಸ್ತು ಪ್ರದರ್ಶನದಲ್ಲಿ ಗೋ ಮತ್ತು ವಿeನ ಎಂಬ ವಿಷಯದ ಬಗ್ಗೆ ೧೦ಕ್ಕೂ ಹೆಚ್ಚು ಸ್ಟಾಲ್‌ಗಳಿದ್ದವು. ಗೋ ಮತ್ತು ಕೃಷಿ, ಗೋ ಮತ್ತು ಪುರಾಣ ಹೀಗೆ ಗೋವಿಗೆ ಸಂಬಂಧಿಸಿದ ವಿವಿಧ ವಿಭಾಗಗಳ ಬಗ್ಗೆ ಸ್ಟಾಲ್‌ಗಳಿದ್ದವು. ಅಲ್ಲಿ ಸಾಕ್ಷಿ ಸಮೇತ ವಿಷಯಗಳ ವಿವರಣೆ ಇತ್ತು. ಪಾಪ ಸುಬ್ಬಯ್ಯ. ಇದನ್ನೆಲ್ಲ ನೋಡದೆ ಏನೇನೋ ಮಾತಾಡುತ್ತಾರೆ.
ಗೋವುಗಳ ಬಗ್ಗೆ ಪ್ರೀತಿಯಿದ್ದರೆ ಸ್ವಾಮೀಜಿ ಮಾರುಕಟ್ಟೆ ದರ ಕೊಟ್ಟು ಗೋವು ಖರೀದಿಸಲಿ ಎಂದು ಸುಬ್ಬಯ್ಯ ಒತ್ತಾಯಿಸಿದ್ದಾರೆ. ಆದರೆ ಸ್ವಾಮೀಜಿ ಒಂದು ವರ್ಷದ ಹಿಂದೆಯೇ ಇಂತಹ ಕಲ್ಪನೆಯ ಯೋಜನೆ ಆರಂಭಿಸಿದ್ದಾರೆ. ಪ್ರತಿ ಭಾಷಣದಲ್ಲೂ ಸಂತೆಗೆ ನಡೆಯಿರಿ. ಮಾರಾಟವಾಗುವ ಗೋ ಖರೀದಿಸಿ. ಸಾಧ್ಯವಾಗದಿದ್ದರೆ ಮಠವೇ ಖರೀದಿಸಲಿದೆ ಎಂದು ಭಕ್ತರಿಗೆ ಹೇಳಿದ್ದಾರೆ. ಅದಕ್ಕಾಗಿ ಯೋಜನೆಯನ್ನೂ ಆರಂಭಿಸಿದಾರೆ. ಈ ಯೋಜನೆ ಆರಂಭಗೊಂಡ ಎರಡೇ ದಿನದಲ್ಲಿ ೨.೬೩ ಕೋಟಿ ರೂ. ಸಂಗ್ರಹವಾಗಿದ್ದೂ ಸುಬ್ಬಯ್ಯರಿಗೆ ಗೊತ್ತಿಲ್ಲ. ನನ್ನ ಎತ್ತು ಬೇಕಾದರೆ ಮಠದವರು ಖರೀದಿಸಲಿ ಎಂಬುದು ಅವರ ಗೋಳು. ಸುಬ್ಬಯ್ಯರ ಮನೆಯಲ್ಲಿ ಒಂದು ಎತ್ತು ಕೊಡೋದಿದೆ ಎಂದು ಯಾರಿಗೋ ಕನಸು ಬಿದ್ದು, ಅವರು ಹಣ ಹಿಡಿದು ಬಂದು ಎತ್ತು ಖರೀದಿಸಿ ಹೋಗಬೇಕು ಎಂಬುದು ಸುಬ್ಬಯ್ಯನವರ ಮಾತಿನ ಅರ್ಥ. ಮನೆ ಮನೆಗೆ ಬಂದು ದನ ಕೊಡೋದಿದ್ಯಾ ಎಂದು ಕೇಳೋಕೆ ಅದೇನು ಹಳೇ ಪೇಪರ್, ಪ್ಲಾಸ್ಟಿಕ್, ಚಪ್ಪಲ್, ಬಾಟ್ಲಿ ವ್ಯವಹಾರವಾ?
ಕ್ಷುಲ್ಲಕವಾಗಿ ಮಾತನಾಡುವ ಮುಂಚೆ ಸುಬ್ಬಯ್ಯ ಸ್ವಲ್ಪಯೋಚಿಸಬೇಕು. ಗೋ ಸಮ್ಮೇಳಕ್ಕೆ ಪ್ರತಿ ನಿತ್ಯ ಭೇಟಿ ನೀಡಿದ ಜನರ ಸಂಖ್ಯೆ ಲಕ್ಷವನ್ನೂ ದಾಟಿದೆ. ಮೊದಲ ಎರಡು ದಿನ ಮಾತ್ರ ಸ್ವಲ್ಪ ಕಡಿಮೆ ಜನರಿದ್ದರು. ಆದರೂ ಬಂದವರ ಸಂಖ್ಯೆ ೮೦ ಸಾವಿರ! ಉಳಿದ ಎಲ್ಲ ದಿನವೂ ಒಂದೂವರೆ ಲಕ್ಷ ಮೀರಿದೆ. ಊಟ ಮಾಡಿದವರ ಸಂಖ್ಯೆ. ಊಟ ಮಾಡದೆ ಹೋದವರು ಈ ಲೆಕ್ಕದಲ್ಲಿಲ್ಲ. ಇಷ್ಟು ಜನರನ್ನು ಒಂದೇ ಸಮಯದಲ್ಲಿ ಒಂದೇ ವಿಷಯಕ್ಕೆ ಮೋಸ ಮಾಡಲು ಸಾಧ್ಯವೇ? ಸುಬ್ಬಯ್ಯನವರೇ?
ಇನ್ನು ವಿಶ್ವದ ಗೋವುಗಳೇ ಸಮ್ಮೇಳದಲ್ಲಿ ಇರಲಿಲ್ಲೆಂಬ ಸುಬ್ಬಯ್ಯರ ಹೇಳಿಕೆ ಅತ್ಯಂತ ಬಾಲಿಶ. ಗೋವುಗಳು ಸಮ್ಮೇಳನಕ್ಕೆ ಬಂದು ಆಗಬೇಕಿರುವುದೇನಿಲ್ಲ. ಬದಲಾಗಿ ಗೋವಿನ ಬಗ್ಗೆ ಆಸಕ್ತಿ ಇರುವುವವರು, ಅರಿಯಲು ಇಷ್ಟ ಇದ್ದವರು ಬರಬೇಕು. ಆ ಮೂಲಕ ಗೋ ಸಂರಕ್ಷಣೆ ಆಗಬೇಕು ಎಂಬುದು ಸಮ್ಮೇಳನದ ಉದ್ದೇಶ. ಹೊರತು ಗೋ ಸಮ್ಮೇಳನ ಅಂದಾಕ್ಷಣ ವಿಶ್ವದಾದ್ಯಂತ ಗೋವುಗಳು ಬಂದು ಸೇರುತ್ತವೆ ಎಂದರ್ಥವಲ್ಲ.
ಸುಬ್ಬಯ್ಯ ಮಾತಿನ ಬಗ್ಗೆ ನಂಬಿಕೆಯೇ ಹೊರಟು ಹೋಗುವಂಥ ಇನ್ನೊಂದು ಹೇಳಿಕೆಯೆಂದರೆ ಪ್ರಾಣಿಗಳನ್ನು ಕೊಲ್ಲುವುದು ಪ್ರಕೃತಿ ನಿಯಮ ಎಂಬ ಅವರ ಸ್ಟೇಟ್‌ಮೆಂಟು. ಹುಲಿ ಜಿಂಕೆಯನ್ನು ಕೊಲ್ಲುತ್ತದೆ. ಇಲ್ಲವಾದಲ್ಲಿ ಹುಲಿಯೇ ಸಾಯುತ್ತದೆ. ಜಿಂಕೆಯನ್ನು ಕೊಂದದ್ದಕ್ಕೆ ಹುಲಿಯ ಮೇಲೆ ಕೇಸು ಹಾಕುವುದು ನ್ಯಾಯವೇ? ಹಾಗೆಯೇ ಗೋಹತ್ಯಾ ನಿಷೇಧ ಕೂಡ ಎಂಬ ಸುಬ್ಬಯ್ಯರ ಮಾತು ನಿಜಕ್ಕೂ ಅವರಿಗೆ ಮೊದುಳು ಮತ್ತು ನಾಲಿಗೆ ನಡುವೆ ಸಂಪರ್ಕ ಸರಿಯಿಲ್ಲ ಎಂಬುದನ್ನು ತೋರಿಸುತ್ತದೆ. ಹುಲಿ ಜಿಂಕೆಯನ್ನು ಕಲೊಲ್ಲುವುದಕ್ಕೂ, ಮನುಷ್ಯ ದನವನ್ನು ಕೊಲ್ಲುವುದಕ್ಕೂ ವ್ಯತ್ಯಾಸವಿದೆ. ಹಾಗಿಲ್ಲವಾಗಿದ್ದರೆ ಹುಲಿ, ಜಿಂಕೆ ಕೊಲ್ಲುವ ಮನುಷ್ಯರಿಗೇಕೆ ಶಿಕ್ಷೆ? ಈ ಶಿಕ್ಷೆ ಇಲ್ಲವಾಗಿದ್ದಲ್ಲಿ ಈಗ ನೋಡಲು ಒಂದು ಹುಲಿ ಕೂಡ ಇರುತ್ತಿರಲಿಲ್ಲ ಎಂಬ ಸಿಂಪಲ್ ಸತ್ಯ ಸುಬ್ಬಯ್ಯರಿಗೆ ಗೊತ್ತಿಲ್ಲ.
ಮಠದಲ್ಲಿ ಎಷ್ಟು ಗೋವಿದೆ ಗೊತ್ತಿದ್ಯಾ ಎಂದರೆ ಪೂಜೆ ಮಾಡೋಕೆ ಇಟ್ಕೊಂಡಿರಬಹುದು ಒಂದಷ್ಟು ಅಂತಾರೆ ಸುಬ್ಬಯ್ಯ. ಪೂಜೆ ಮಡೋಕೆ ಒಂದೆರಡು ಹೆಚ್ಚೆಂದರೆ ೧೦ ಗೋವು ಸಾಕು. ಆದರೆ ನೋರಾರು, ಸಾವಿರಾರು ಗೋವುಗಳನ್ನು ಸಾಕುವುದು ಅವುಗಳ ಮೇಲಿನ ಪ್ರೀತಿಯಿಂದ ಹೊರತು ಪೂಜೆಗಾಗಿ ಅಲ್ಲ. ವಿಶ್ವಗೋ ಸಮ್ಮೇಳನ ಗೋ ಪೂಜರ ಸಮ್ಮೇಳನವಾಗಿತ್ತು ಎಂದು ಸುಬ್ಬಯ್ಯ ಹಳಿದಿದ್ದಾರೆ. ಗೋ ಸಾಕುವವರು ಮಾತ್ರ ಗೋವನ್ನು ಪೂಜಿಸುತ್ತಾರೆ. ನನ್ನ ದೃಷ್ಟಿಯಯಲ್ಲಿ ಗೋ ಪಾಲಕ ಮತ್ತು ಗೋ ಪೂಜಕ ಇಬ್ಬರೂ ಒಬ್ಬನೇ ಆಗಿರುತ್ತಾನೆ. ಯಾರೂ ಪಕ್ಕದ ಮನೆ ಗೋವಿಗೆ ಹೋಗಿ ಪೂಜೆ ಮಾಡುವುದಿಲ್ಲ. ಅದೇನಿದ್ದರೂ ಪ್ಯಾಟೆಯವರ ಸಾಮೂಹಿಕ ಗೋ ಪೂಜೆಯಲ್ಲಿ ಮಾತ್ರ. ಹಾಗಾಗಿ ಸುಬ್ಬಯ್ಯನವರು ಗೋ ಪೂಜಕರ ಸಮ್ಮೇಳನ ಎಂದು ಹಳಿದದ್ದು ಎಳ್ಳಷ್ಟೂ ಸರಿಯಲ್ಲ.
ಸುಬ್ಬಯ್ಯ ಸಮಾಜದ ಒಂದು ವರ್ಗದ ಪ್ರತಿನಿಧಿಯಷ್ಟೇ. ರಾಮಚಂದ್ರಾಪುರ ಮಠದಲ್ಲಿ ನಡೆದ ವಿಶ್ವ ಗೋ ಸಮ್ಮೇಳನ, ಅದರ ಯಶಸ್ಸು, ಗಳಿಸಿದ ಜನಾಕರ್ಷಣೆ ಹಲವರ ಕಣ್ಣು ಕುಕ್ಕಿದೆ. ಹೊಟ್ಟೆಯುರಿಸಿದೆ. ಹೊಟ್ಟೆಕಿಚ್ಚು ಬಾಯಿಯ ಮೂಲಕ ಹೀಗೆಲ್ಲ ಹೊರ ಬರುತ್ತಿದೆ. ಗೋವುಗಳ ಬಗ್ಗೆ ಮಾತನಾಡುವುದೇ ಕೋಮುವಾದ ಎಂಬಂತೆ ಮಾತಾಡುತ್ತಾರೆ ಕೆಲವರು. ದನ ಕಡಿಯುವುದರ ಪರವಾಗಿರುವುದು ಕೋಮುವಾದ ಅಂದರೆ ಮಾತ್ರ ಅವರಿಗೆ ಕೋಪ ಬರುತ್ತೆ. ಒಳ್ಳೆ ಕೆಲಸ ಮಾಡಿದವರ ಬಗ್ಗೆ ಹೊಗಳದಿದ್ದರೂ ಪರವಾಗಿಲ್ಲ ಆದರೆ ಇಷ್ಟು ಹಗುರಾಗಿ ಮಾತನಾಡವುದು, ಆಧಾರ ರಹಿತವಾಗಿ ಆರೋಪ ಮಾಡುವುದು ಯಾವ ಕಾರಣಕ್ಕೂ ಸರಿಯಲ್ಲ. ಒಂದು ವರ್ಗವನ್ನು ಮೆಚ್ಚಿಸಲು ಸುಬ್ಬಯ್ಯ ಬಾಯಿಗೆ ಬಂದದ್ದು ಮಾತಾಡಿದ್ದಾರೆ. ಅಲ್ಪಸಂಖ್ಯಾತರನ್ನು (ಈಗ ಅವರು ಅಲ್ಪಸಂಖ್ಯಾತರು ಹೌದೋ ಅಲ್ಲವೋ ಎಂಬ ಅನುಮಾನ ಇದೆ) ಮೆಚ್ಚಿಸಲು. ಅದು ಸುಬ್ಬಯ್ಯರಿಗೆ ರಾಜಕೀಯದಿಂದ ರಕ್ತದಲ್ಲೇ ಬೆರೆತಿರಬಹುದು. ಆದರೆ ಇನ್ನೊಬ್ಬರನ್ನು ಟೀಕಿಸುವುದು, ತುಷ್ಟೀಕರಿಸುವುದೇ ಅಲ್ಪಸಂಖ್ಯಾತರನ್ನು ಮೆಚ್ಚಿಸುವ ಸಾಧನ ಎಂದುಕೊಂಡಿರುವುದು ಸುಬ್ಬಯ್ಯರ ದೌರ್ಬಲ್ಯ.
ಇಷ್ಟಕ್ಕೂ ಸುಬ್ಬಯ್ಯ ಸಾಚಾ ಜನವೇ? ಮೊದಲು ಬಿಜೆಪಿಯಲ್ಲಿದ್ದರು. ಇದೇ ಆರ್‌ಎಸ್‌ಎಸ್ ಮುಖಂಡರ ಮನೆ ಬಾಗಿಲಿಗೆ ಎಡತಾಕಿಒದ್ದರು. ನಂತರ ಜನತಾದಳಕ್ಕೆ ಹೋದರು. ಈಗ ಆವ ಪಕ್ಷದಲ್ಲಿದ್ದಾರೆ? ಅವರಿಗೇ ಗೊತ್ತಿಲ್ಲ. ಕಾಂಗ್ರೆಸ್ ಪರವಾಗಿ ಮಾತಾಡುತ್ತಿದ್ದಾರೆ. ಮೂರುವರೆ ವರ್ಷದ ಹಿಂದೆ ವೀರಪ್ಪ ಮೊಯಿಲಿಯನ್ನು ಸೋಲಿಸಿದ ಪಾಪ ಪ್ರಜ್ಞೆ ಕಾಡುತ್ತಿದೆ ಅಂತ ಈಗ ಬಡಬಡಿಸುತ್ತಾರೆ. ರಾಮಚಂದ್ರಾಪುರ ಸ್ವಾಮೀಜಿ ಜನರಲ್ಲಿ ಮೌಢ್ಯ ಬೆಳೆಸುತ್ತಾರೆ ಎಂದು ಆರೋಪ ಮಾಡುವ ಸುಬ್ಬಯ್ಯ ತಾವೇ ಪಾಪಪ್ರಜ್ಞೆ, ಪಾಪ ವಿಮೋಚನೆ ಎಂಬ ಮೌಢ್ಯದ ಮಾತಾಡುತ್ತಾರೆ.
ಮೊಸರಲ್ಲೂ ಕಲ್ಲು ಹುಡುಕೋದು ಅಂದ್ರೆ ಇದೇನಾ?

Sunday, April 22, 2007

ಲೌ ಎಟ್ ಲಾಸ್ಟ್ ಸೈಟ್!


ಚಲನಚಿತ್ರ ನಿರ್ದೇಶಕರ ಮಟ್ಟಿಗೆ ಅದು ಬತ್ತದ ಸೆಲೆ. ಯುವಕರಿಗೆ ಆಕರ್ಷಣೆಯ ಬಲೆ. ಹದಿ ಹರೆಯದವರಿಗೆ ಕುತೂಹಲದ ನೆಲೆ. ಆಸಕ್ತಿಯ ಸೆಲೆ. ಅದರ ಹೆಸರು ಲವ್ವು. ಕನ್ನಡದಲ್ಲಿ ಪ್ರೀತಿ-ಪ್ರೇಮ. (ನಂತರದ್ದು ಪ್ರಣಯ) ನನ್ನಜ್ಜನ ಕಾಲದಿಂದಲೂ ಲವ್ವನ್ನೇ ವಸ್ತುವಾಗಿಟ್ಟುಕೊಂಡು ಎಷ್ಟು ಸಿನೆಮಾಗಳು ಬಂದಿಲ್ಲ? ಅದನ್ನು ಎಷ್ಟು ಮಂದಿ ನೋಡಿಲ್ಲ? ಇವತ್ತೂ ಲೌ ಸಿನೆಮಾಗಳು ಬರುತ್ತಿವೆ. ಪ್ರೀತಿ ಪ್ರೇಮ ಪ್ರಣಯ ಪಿಚ್ಚರ್ ನೋಡಿದ ಮೇಲಂತೂ ಮುದುಕಿಯರೂ ಮೇಕಪ್ ಮಾಡತೊಡಗಿದ್ದಾರೆ. ಮುಂದೂ ಲೌ ಸಿನೆಮಾಗಳು ಬರುತ್ತವೆ. ಎಲ್ಲಿವರೆಗೆ ಈ ಪ್ರಪಂಚ ಇರುತ್ತೊ ಅಲ್ಲಿವರೆಗೆ ಲೌ ಇರುತ್ತೆ. ನೋಡರೂ ಇರುತ್ತಾರೆ.
ಕಾಗೆಗೆ ಆಹಾರ ಸಿಗೋದು, ಪತ್ರಕರ್ತರಿಗೆ ಸುದ್ದಿ ಸಿದೋದೂ ಒಂದೇ. ಹಾಗೆ ಜನರಿಗೆ ಯಾರಾದ್ರೂ ಲೌ ಮಾಡ್ತಾ ಇರೋ ವಿಷ್ಯ ಗೊತ್ತಾಗೋದು ಕೂಡ. ಪ್ರತಿಯೊಬ್ಬರಿಗೂ ಪರಿಚಿತರ, ಅಕ್ಕಪಕ್ಕದ ಮನೆಯ ಹುಡುಗ- ಹುಡುಗಿಯರ ಲೌ ವಿಷಯ ಮಾತಾಡಬೇಕೆಂದರೆ ಎಲ್ಲಿಲ್ಲದ ಆಸಕ್ತಿ. ಯಾವಾಗ್ಲೂ ಲೌ ಮಾಡೋರು ನಮ್ಮ ವಿಷ್ಯ ಯಾರಿಗೂ ಗೊತ್ತಿಲ್ಲ ಅಂದುಕೊಂಡಿರ್‍ತಾರೆ. ಆದರೆ ಅದು ಎಲ್ಲರಿಗೂ ಗೊತ್ತಾಗ್ತಾ ಇರುತ್ತೆ. ಯಾರೂ ಎದುರಿಗೆ ಹೇಳಿರಲ್ಲ ಅಷ್ಟೆ.
ಕಾಲೇಜಲ್ಲಂತೂ ಹುಡ್ಗ- ಹುಡ್ಗಿ ಪ್ರೀತಿಸ್ತಾ ಇರೋ ವಿಷ್ಯ ಅವರಿಗಿಂತ ಮೊದಲೇ ಬೇರೆಯವರಿಗೆ ಗೊತ್ತಾಗಿರುತ್ತೆ! ಎಲ್ಲರ ಬಾಯಲ್ಲೂ ಅವರ ಲೌ ಸುದ್ದೀನೆ. ದಕ್ಷಿಣ ಕನ್ನಡ- ಉಡುಪಿಯಲ್ಲಿ ಲೌ ಮಾಡಿ ಓಡಿ ಹೋಗೋರು ಜಾಸ್ತಿ. (ಈ ಲವ್ವರ್‌ಗಳು ಓಡಿ ಹೋಗಿ ಯಾಕೆ ಸುಮ್ನೆ ಸುಸ್ತು ಮಾಡಿಕೋತಾರೆ? ಬಸ್ಸೊ, ರೈಲೊ, ಬೈಕೊ ಹತ್ತಿ ಹೋಗ್ಬೋದಿತ್ತು. ಅಲ್ವಾ? ಅಂತ ಎಷ್ಟೋ ಸಾರಿ ಅನ್ನಿಸಿದೆ) ಪೇಟೆಗಳಲ್ಲಿ ಹೇಗೋ ನಡೆಯುತ್ತೆ. ಆಚೆಯವರಿಗೆ ಈಚೆಯವರ ಪರಿಚಯ ಇಲ್ಲ. ಈಚೆವರಿಗೆ ಆಚೆಯವರ ಪರಿಚಯ ಇಲ್ಲ. ಎಷ್ಟೋ ಸಾರಿ ಪತ್ರಿಕೆಯಲ್ಲಿ ಬಂದ ಮೇಲೆಯೇ ಪಕ್ಕದ ಮನೆ ಹುಡ್ಗಿ ಪರಾರಿಯಾಗಿರೋದು ಇವರಿಗೆ ಗೊತ್ತಾಗುತ್ತೆ. ಆಮೇಲೂ ಇವರೇನೂ ಅವರ ಬಿ ಕೇಳಲು ಹೋಗೀದಿಲ್ಲ. ಹೀಗಾಗಿ ಅಷ್ಟು ಸಮಸ್ಯೆ ಆಗಲ್ಲ.
ಹಳ್ಳಿಯಲ್ಲಿ ಯಾರಾದ್ರೂ ಲೌ ಮಾಡಿದ್ರೆ ಮುಗ್ದೇ ಹೋಯ್ತು. ಹಲ್ಲು ಬಿದ್ದು ಹೋದವರ ಬಾಯಲ್ಲೂ ಅದೇ ಸುದ್ದಿ. ಇಡೀ ಊರ ತುಂಬಾ, ಜನರ ಬಾಯು ತುಂಬಾ ಅವರ ಪ್ರೀತಿಯ ವಿಷ್ಯವೇ. ಓಡಿ ಹೋದರಂತೂ ಅವರ ಅಪ್ಪ-ಅಮ್ಮ ಊರೇ ಬಿಡಬೇಕು ಅನ್ನುವಂಥ ಸ್ಥಿತಿ ನಿರ್ಮಾಣವಾಗಿಬಿಡುತ್ತದೆ.
ಒಮ್ಮೆ ನಾನು ಶಾಲೆಯಿಂದ ಮನೆಗೆ ಬರುವಾಗ ನನ್ನ ಅಮ್ಮಮ್ಮ ಗಿರಿಜಜ್ಜಿ ಜತೆ ಲಕ್ಷ್ಮಮ್ಮ ಅನ್ನೋ ಬೊಚ್ಚು ಬಾಯಿಯ ಅಜ್ಜಿ ಸುದ್ದಿ ಹೇಳ್ತಾ ಇದ್ರು. ಗಂಭೀರ ಚರ್ಚೆಯೇ ಇರಬೇಕು ಅಂತ ಕೈಯಲ್ಲಿ ಅಮ್ಮ ಕೊಟ್ಟ ದೋಸೆ ಪ್ಲೇಟ್ ಹಿಡಿದು ಸ್ವಲ್ಪ ಅತ್ತ ಕಿವಿ ಇಟ್ಟೆ. ಕುತೂಹಲ ನೋಡಿ. ಹೊಟ್ಟೆ ಹಸಿವಿನ ಜತೆ ಸುದ್ದಿ ಹಸಿವು ತೀರಿಸಿಕೊಳ್ಳುವ ಬಯಕೆ. ಅದೇನೋ "ಅವರದ್ದು ಹೌ ಮ್ಯಾರೇಜಂತೆ’ ಅನ್ನೋ ಶಬ್ಧ ಕಿವಿಗೆ ಬಿತ್ತು. ಇದೇನಪ್ಪ? ಹೌವ್ವು? ಯಾವತ್ತೂ ಕೇಳೇ ಇಲ್ವಲ್ಲ. ಆದ್ರೂ ಪರ್‍ವಾಗಿಲ್ಲ ಮ್ಯಾರೇಜ್ (ಮದುವೆ) ವಿಷ್ಯ ಇದೆ ಅಂದ್ಕೂಡ್ಲೆ ಆಸಕ್ತಿ ಇನ್ನಷ್ಟು ಜಾಸ್ತಿಯಾಯ್ತು. ಸರಿಯಾಗಿ ವಿಚಾರಿಸಿದ್ರೆ, ಊರಲ್ಲಿ ಯಾರದ್ದೋ ಮದುವೆ ನಡೆದಿತ್ತು ಅವತ್ತು. ಆ ಅಜ್ಜಿ ಮದುವೆಗೆ ಹೋಗಿ ಬಂದಿದ್ದರು.
ಕೇಳಲಾರದ ಕಿವಿಯ ಮೂಲಕ ಕೇಳಿಸಿಕೊಂಡು ಲೌ ಮ್ಯಾರೇಜು ಅನ್ನೋದನ್ನೇ ಹೌ ಮ್ಯಾರೇಜು ಅಂದಿತ್ತು ಅಜ್ಜಿ! (ಮದುವೆ ನೋಇದವರು ಹೌ ಹಾರಿದ್ದರೆ ಅದನ್ನು ಹೌ ಮ್ಯಾರೇಜು ಎಂದು ಕರೆದಿದ್ದರೆ ಸರಿಯಪ್ಪ) ಸರಿಯಾಗಿ ಗೊತ್ತಿಲ್ಲದೇ ಹೋದ್ರೂ ಇಂಗ್ಲಿಷ್ ಮಾತಾಡೋ ಚಟ!
ಇಷ್ಟೆಲ್ಲ ಯಾಕೆ ಹೇಳ್ತಾ ಇದ್ದೀನಿ ಅಂದ್ರೆ ಮಂಗಳೂರು ಸುತ್ತಮುತ್ತ ಲೌ ಮಾಡೋಕೂ ಒಂದು ವಿಸಿಟಿಂಗ್ ಕಾರ್ಡ್ ಹುಟ್ಕೊಂಡಿದೆ! ನಮ್ಮ ಕಚೇರಿಯ ಗೆಳೆಯ ವಸಂತ ಅದನ್ನು ನಂಗೆ ತಂದು ಕೊಟ್ಟಿದ್ದ. ಹಂಗೆ ನೋಡಿದ್ರೆ ಇದನ್ನ ವಿಸಿಟಿಂಗ್ ಕಾರ್ಡ್ ಅನ್ನೋದೇ ತಪ್ಪು. ಇದು ಲೌ ಕಾರ್ಡು. ಹೆಸರಿರೋ ಜಾಗದಲ್ಲಿ ಯು.ಆರ್. ಮೈ ಲವ್ ಅಂತಿದೆ. ದೂರವಾಣಿ ನಂಬರ್ ಇರಬೇಕಾಗಿದ್ದಲ್ಲಿ ಐ ಲವ್ ಯು, ಟೆಲೆಕ್ಸ್ ನಂಬರ್ ಜಾಗದಲ್ಲಿ ಲವ್ ಮಿ, ಫ್ಯಾಕ್ಸ್ ನಂಬರ್ ಜಾಗದಲ್ಲಿ ಲೈಕ್ ಮಿ ಅಂತ ಬರೆಯಲಾಗಿದೆ. ಮನೆ ವಿಳಾಸದ ಸ್ಥಳದಲ್ಲಿ ಇನ್ ಮೈ ಹಾರ್ಟ್ ಅಂತಿದೆ. ಇಷ್ಟೇ ಆಗಿದ್ದರೆ ಬಹುಶಃ ಅದರ ಬಗ್ಗೆ ಬರೆಯುತ್ತಲೇ ಇರಲಿಲ್ಲವೇನೊ? ಅಥವಾ ಒಳ್ಳೆ ಕ್ರಿಯೇಟಿವಿಟಿ ಎಂದು ಬರೆಯಬಹುದಿತ್ತೇನೋ. ಆದರೆ...
ಕಾರ್ಡಿನ ಕೆಳ ಭಾಗದಲ್ಲಿ "ನಾನು ನಿನ್ನೊಂದಿಗೆ "ಡೇಟಿಂಗ್’ ಹೋಗಲು ಇಟ್ಟಪಡುತ್ತೇನೆ. ನಿಂಗೂ ಇಷ್ಟವಿದ್ದಲ್ಲಿ ಈ ಕಾರ್ಡ್ ಇಟ್ಟುಕೊ. ಇಲ್ಲವಾದಲ್ಲಿ ಹಿಂತಿರುಗಿಸು ಅಂತ ಇಂಗ್ಲಿಷ್‌ನಲ್ಲಿ ಬರೆದಿದೆ!! ಎಲ್ಲಿಗೆ ಬಂತು ಲವ್ವು? ಒಂದು ರೂಪಾಯಿಯ ವಿಸಿಟಿಂಗ್ ಕಾರ್ಡ್‌ಗೆ ಇಳಿದುಬಿಟ್ಟಿತಾ? ಮನಸ್ಸು-ಮನಸ್ಸುಗಳ ನಡುವಿನ ಪ್ರೀತಿಯನ್ನ, ಸೆಕ್ಸಿನ ದೃಷ್ಟಿಯಿಂದಲೇ ಹೇಳುವುದಾದರೆ ದೇಹ-ದೇಹಗಳ ನಡುವಿನ ಬಂಧವನ್ನ ಕೇವಲ ಒಂದು ಕಾಗದದ ನಿರ್ಜೀವ ಕಾರ್ಡ್‌ಗೆ ಇಳಿಸಲಾಗಿದೆ. ನೇರವಾಗಿ...
ನೀನಂದ್ರೆ ನಂಗಿಷ್ಟ
ನಿನ್ನ ಮಾತಂದ್ರೆ ನಂಗಿಷ್ಟ (ಅಥವಾ ತುಂಬ ಕಷ್ಟ) ಅಂತಲೋ. ಇಲ್ಲಾ
ನಿನ್ನ ಎತ್ತಿ ಕೊಳ್ಲಾ
ನಿನ್ನ ಅಪ್ಪಿ ಕೊಳ್ಲಾ ಅಂತ ಕೇಳೋದು ಬಿಟ್ಟು ಒಂದು ವಿಸಿಟಿಂಗ್ ಕಾರ್ಡ್ ಕೊಡೋದು ಎಷ್ಟು ನೀರಸ ಅಲ್ವಾ? ಇದನ್ನೆಲ್ಲ ನೋಡ್ತಿದ್ರೆ ನಮ್ಮ ಹುಡುಗ್ರಿಗೆ ಧೈರ್ಯ ಕಡಿಮೆ ಆಗ್ತಿದ್ಯೇನೋ ಅಂತ ಅನುಮಾನ ಬರ್‍ತಿದೆ.
ಓ ದೇವರೆ ಈ ಲೌ ಕಾರ್ಡ್ ಕೋಡೋರ್‍ನ, ತಗೊಳೋರ್‍ನ ಕಾಪಾಡು!! ಅಂತ ವಿನಂತಿಸೋದ ಬಿಟ್ಟು ಬೇರೇನೂ ಮಾಡಲು ಸಾಧ್ಯವಿಲ್ಲ.
ಔಟ್‌ಸ್ವಿಂಗ್: ಲವ್ವಲ್ಲಿ ಹಲವು ವಿಧ. ಪತ್ರ ಪ್ರೇಮ, ಪೆನ್ ಪ್ರೇಮ, ನೋಟ ಪ್ರೇಮ (ನೋಡಿ ನೋಡಿ ಹುಟ್ಟಿದ ಪ್ರೀತಿ) ಹೀಗೆ ಹಲವು ವಿಧ. ಮೊದಲ ನೋಟದ ಲವ್ವು ಇದೆಯಲ್ಲ ಅದನ್ನ ಲವ್ ಅಟ್ ಫಸ್ಟ್ ಸೈಟ್ ಅಂತಾರೆ. ನಾನ್ಹೇಳೋದ್ ಏನಂದ್ರೆ ಒಂದು ಬೀದಿಯ ಕೊನೇ ಮನೆಯ ಹುಡುಗಿಯನ್ನು ಲೌ ಮಾಡಿದ್ರೆ ಅದನ್ನು ಲೌ ಅಟ್ ಲಾಸ್ಟ್ ಸೈಟ್ (ಜಾಗ) ಅಂತ ಕರೀಬಹುದಲ್ವಾ?

ಸೊರಕೆ ಹೇಳಿದ ಬೆಕ್ಕಿನ ಕಥೆ


ವಿನಯ ಕುಮಾರ್ ಸೊರಕೆ. ಹೆಸರು ಕೇಳದವರಾರು? ನಮ್ಮ ಪಕ್ಕದ ಊರಿನ ಮಾಜಿ ಸಂಸದರಲ್ಲವೆ. ನೀವು ಕೆಲವರು ಅವರ ಭಾಷಣ ಕೇಳಿರಬಹುದು ಅಥವಾ ಕೇಳಿರದೇ ಇರಬಹುದು. ಆದರೆ ಅವರು ಹೇಳಿದ ಈ ಕಥೆ ಕೇಳಿರಲಾರಿರಿ.
ಸೊರಕೆ ಅವರು ಭಾಷಣಕ್ಕೆ ನಿಂತರೆ ಸಾಮಾನ್ಯವಾಗಿ ಒಂದು ಕಥೆ ಗ್ಯಾರಂಟಿ. ಮೋಟಮ್ಮ ಭಾಷಣದ ಜತೆ ಹಾಡು ಫ್ರೀ ಇದ್ದಂತೆ. ಆದರೆ ಅವರು ಹೇಳಿದ ಕೆಲವು ಕಥೆಗಳಲ್ಲಿ ನನಗಿಷ್ಟವಾದದ್ದು "ಬೆಕ್ಕಿನ ಕಥೆ’. ಅದನ್ನು ನಿಮಗೇ ಹೇಳಲೇ ಬೇಕು.
ರೋಶನಿ ನಿಲಯದಲ್ಲಿ ಒಂದು ಕಾರ್ಯಕ್ರಮ. ಸೊರಕೆ ಉದ್ಘಾಟಕರು. ಅಲ್ಲಿ ಹೇಳಿದ ಕಥೆ ಇದು.
ಒಮ್ಮೆ ಬೆಕ್ಕುಗಳ ಕುಸ್ತಿ ಪಂದ್ಯ. (ಕೋಳಿ ಹಂಕ ಇದ್ದಂತೆ) ಸೊರಕೆ ಹೇಳಿದ್ದು ಕ್ರಿಕೆಟ್ ವಿಶ್ವಕಪ್ ಇದ್ದಂತೆ ಬೆಕ್ಕುಗಳ ವಿಶ್ವಕಪ್. ಸಹಜವಾಗಿ ಎಲ್ಲರಿಗೂ ಕುತೂಹಲ ಯಾವ ದೇಶದ ಬೆಕ್ಕು ಗೆಲ್ಲಬಹುದು?
ಪಂದ್ಯ ಆರಂಭಗೊಂಡಿತು. ಅಮೆರಿಕದ ಬೆಕ್ಕು ಎಲ್ಲ ದೇಶಗಳ ಬೆಕ್ಕುಗಳನ್ನು ಸೋಲಿಸುತ್ತಾ ಫೈನಲ್ ತಲುಪಿತು. ಪೈನಲ್‌ನಲ್ಲೂ ಅಮೆರಿಕ ಬೆಕ್ಕೇ ಗೆಲ್ಲ ಬೇಕೆ. ನಂತರ ಅದರ ಮಾಲಿಕ ಕೇಳಿದ ಯವುದದರೂ ಬೆಕ್ಕು ನನ್ನ ಬೆಕ್ಕಿನೊಂದಿಗೆ ಹೊಡೆದಾಡಿ ಗೆಲ್ಲುವುದಾದರೆ ಮುಂದೆ ಬನ್ನಿ. ಗೆದ್ದವರಿಗೆ ವಿಶ್ವ ಕಪ್ ನೀಡುತ್ತೇನೆ ಅಂತ ಘೋಷಿಸಿದ.
ಆಗ ನೆರೆದಿದ್ದ ಗುಂಪಿನಲ್ಲಿ ಹಿಂದೆಲ್ಲೋ ಕುಳಿತಿದ್ದ ಸೆಮಾಲಿಯಾ ದೇಶದ ಪ್ರಜೆಯೊಬ್ಬ ತನ್ನ ಬೆಕ್ಕು ಅಮೆರಿಕ ಬೆಕ್ಕಿನೊಂದಿಗೆ ಸೆಣಸಲಿದೆ ಎಂದ. ಸೊಮಲಿಯಾದವನ ಬೆಕ್ಕೋ ಆಹಾರವಿಲ್ಲದೆ ಬಡಕಲಾಗಿ, ಎಲುಬು ಕಾಣುತ್ತಿತ್ತು. ಆತ ಜನರ ಗುಂಪಿನ ನಡುವೆ ಹೋಗುವಾಗ ಕೆಲವರು ಕೇಳಿದರು... ಅಲ್ಲಪ್ಪ. ಸೊಮಾಲಿಯಾದಲ್ಲಿ ಮನುಷ್ಯರಿಗೇ ತಿನ್ನಲು ಆಹಾರವಿಲ್ಲ. ಇನ್ನು ಬೆಕ್ಕಿಗೆ ಎಲ್ಲಿಂದ ಆಹಾರ. ಆಹಾರವಿಲ್ಲದೇ ಬಡಕಲಾಗಿರುವ ಬೆಕ್ಕು ಅಮೆರಿಕದ ದಷ್ಟಪುಷ್ಟವಾದ ಬೆಕ್ಕಿನೊಡನೆ ಹೋರಾಡಿ ಗೆಲ್ಲಲು ಸಾಧ್ಯವೇ. ಈ ಹುಚ್ಚಾಟ ಎಲ್ಲ ಬೇಡ. ಸುಮ್ಮನಿರು ಎಂದು ಕಟಕಿಯಾಡಿದರು. ಸೊಮಲಿಯಾ ಪ್ರಜೆ ಮಾತನಾಡಲಿಲ್ಲ.
ಸರಿ. ಅಮೆರಿಕ ಬೆಕ್ಕಿಗೂ ಸೊಮಾಲಿಯಾ ಬೆಕ್ಕಿಗೂ ಜಗಳ ಆರಂಭವಾಯಿತು. ಆಗ ಸೊಮಾಲಿಯಾ ಬೆಕ್ಕು ಕೊಟ್ಟ ಒಂದೇ ಹೊಡೆತಕ್ಕೆ ಅಮೆರಿಕ ಬೆಕ್ಕು ಬೊಬ್ಬೆ ಹೊಡೆಯುತ್ತಾ ಓಡಿ ಪರಾರಿಯಾಯಿತು. ಸೊಮಾಲಿಯಾದ ಬೆಕ್ಕೇ ವಿಶ್ವ ಚಾಂಪಿಯನ್ ಎಂದು ಘೋಷಿಸಲಾಯ್ತು!
ನಂತರ ಅಲ್ಲಿ ನೆರೆದಿದ್ದ ಜನ ಬಂದು "ನಿನ್ನ ಬೆಕ್ಕು ಅಮೆರಿಕ ಬೆಕ್ಕನ್ನು ಸೋಲಿಸಲು ಕಾರಣ ಏನು. ಅದಕ್ಕೆ ನೀನು ಯಾವ ರೀತಿ ತರಬೇತಿ ನೀಡಿದ್ದೆ’ ಎಂದು ಅಲ್ಲಿ ನೆರೆದಿದ್ದ ಕೆಲವರು ಕೇಳಿದರು. ಬೇರೆ ದೇಶದ ಬೆಕ್ಕುಗಳ ಕೋಚ್‌ಗಳು ಕೂಡ ಸುತ್ತ ನೆರೆದು ಇದನ್ನೇ ಕೇಳಿದರು.
ಆಗ ಸೊಮಲಿಯಾ ಪ್ರಜೆ ತಣ್ಣಗೆ ಉತ್ತರಿಸಿದ. ತರಬೇತಿಯೂ ಇಲ್ಲ ಏನೂ ಇಲ್ಲ. ಇದು ಬೆಕ್ಕೂ ಅಲ್ಲ. ನನ್ನ ಕೈಲಿರುವುದು ಹುಲಿ. ತಿನ್ನಲು ಏನೂ ಸಿಗದೇ ಬೆಕ್ಕಿನ ಹಾಗೆ ಕಾಣುತ್ತೆ ಅಷ್ಟೆ ಅಂದನಂತೆ!

ಪ್ರಶ್ನೆ- ಉತ್ತರ

* ಈಗೀಗ ಶಾಲಾ ಮಕ್ಕಳನ್ನು ಯಾಕೆ ಶಾಲೆಗೆ ಹೋಗುತ್ತೀರಿ ಎಂದರೆ ಊಟ ಮಾಡಲು ಎನ್ನುತ್ತಾರಲ್ಲ?
ಪುಣ್ಯ. ಊಟ ಮಾಡಿ ನಿದ್ರಿಸಲು ಅನ್ನುತ್ತಿಲ್ಲ.

* ಕಂಡುಹಿಡಿಯಬೇಕಾದ್ದನ್ನೆಲ್ಲ ಕಂಡುಹಿಡಿದಾಯಿತು. ನಾನೇನು ಕಂಡುಹಿಡಿಯಲಿ?
ಏನನ್ನು ಕಂಡುಹಿಡಿಯಬೇಕು ಎಂಬುದನ್ನು!

* ಇಂದಿನ ಮಕ್ಕಳು ಮುಂದಿನ ಪ್ರಜೆಗಳು. ಇಂದಿನ ಯುವಕರು ಮುಂದಿನ...?
ಮುದುಕರು!!

* ಚಿತ್ರರಂಗದ ನಟ-ನಟಿಯರು ರಾಜಕೀಯ ಪ್ರವೇಶಿಸಿದರೆ ರಾಜಕಾರಣಿಗಳು ಏನು ಮಾಡಬೇಕು?
ಚಿತ್ರದಲ್ಲಿ ಅಜ್ಜ- ಅಜ್ಜಿ ಪಾರ್ಟ್ ಮಾಡಬೇಕು.

* ಮರದಿಂದ ಮರಕ್ಕೆ ಹಾರುವ ಕೋತಿಗೂ ಪಕ್ಷದಿಂದ ಪಕ್ಷದಿಂದ ಪಕ್ಷಕ್ಕೆ ಹಾರುವ ರಾಜಕಾರಣಿಗಳಿಗೂ ವತ್ಯಾಸ ಏನು?
ಬಾಲ ಮಾತ್ರ!

* ಅಂದ್ಹಾಗೆ ನಿನ್ನ ಲವ್ ಸ್ಟೋರಿ ಎಲ್ಲೀವರೆಗೆ ಬಂದಿದೆ?
ತುಟಿವರೆಗೆ!

* ಪ್ರತೀಕ್ಷಾ ಹಿಂದಿನ ಕಾಲದಲ್ಲಿ ಪತಿಯೇ ಪರದೈವ ಅಂತಿದ್ರು. ಈ ಕಾಲದಲ್ಲಿ?
ಪರಪತಿಯೇ ದೈವ ಅನ್ನೋಣವೇ?

* ಪಕ್ಕದ ಮನೆಯ ಹುಡುಗ ಆಂಟಿಯ ಜತೆ ಪರಾರಿಯಾಗಿದ್ದಾನೆ ಮುಂದೇನಾಗಬಹುದು?
ಹೆಚ್ಚೆಂದರೆ ಮಕ್ಕಳಾಗಬಹುದು!

* ಪ್ರೇಮಿಗಳು ಲಿಂಬೆ ರಸ ಕುಡಿಯಬಾರದು ಅನ್ನುತ್ತಾರಲ್ಲ?
"ಹಾಲಿ’ನಂಥ ಪ್ರೇಮದಲ್ಲಿ ಹುಳಿ ಹಿಂಡುವುದು ಬೇಡ ಅಂತ.

* ಇಂದಿನ ಕಂಪ್ಯೂಟರ್ ಯುಗದಲ್ಲಿ ಕಂಪ್ಯೂಟರ್ ಕಲಿ. ಮುಂದೆ?
ಗಲಿಬಿಲಿ!

* ೫೦ ವರ್ಷದ ಹಿಂದಿನ ರಾಜಕಾರಣಿಗಳಿಗೂ ಈಗಿನ ರಾಜಕಾರಣಿಗಳಿಗೂ ಇರುವ ವತ್ಯಾಸ ಏನು?
ಆಗ ಯುವಕರಾಗಿದ್ದರು. ಈಗ ಮುದುಕರಾಗಿದ್ದಾರೆ!

* ಗುಲಾಬಿ ಪ್ರೀತಿಯ ಸಂಕೇತವಾದರೆ ಮಲ್ಲಿಗೆ ಯಾವುದರ ಸಂಕೇತ?
ಮಲ್ಲಿಗೆ ಎಲ್ಲಿಗೆ ಹೋಗೋಣ ಎಂಬುದರ ಸಂಕೇತ!

* ಕವಿದ ಕತ್ತಲು ಮುದುಡಿದ ಪ್ರೀತಿಯ ಸಂಕೇತವೇ?
ಛೆ! ಛೆ! ಅದು ಪವರ್ ಕಟ್ ಸಂಕೇತ!!

* ಹಾಲಿನ ಮತ್ತು ಅಲ್ಕೋಹಾಲಿನ ಜಾಹೀರಾತಿಗೆ ಉಪೇಂದ್ರನೇ ಬೇಕು. ಯಾಕೆ?
ಯಾಕಂದ್ರೆ "ಉಪ್ಪಿ’ಗಿಂತ ರುಚಿ ಬೇರೆ ಇಲ್ಲ.

* ನಿಮ್ಮನ್ನು ವೀರಪ್ಪನ್ ಅಪಹರಿಸಿದ್ದರೆ ನೀವು ಏನು ಮಾಡುತ್ತೀರಿ?
"ನನ್ನಪ್ಪನ್ ಬಿಟ್ಟು ವೀರಪ್ಪನ್ ಜತೆ’ ಅಂತ ಕವನ ಸಂಕಲನ ಬರೀತೀನಿ.

* ಆಶ್ವಾಸನೆಗೆ ಕೊನೆ ಯಾವಾಗ?
ಆ"ಶ್ವಾಸ’ ನಿಂತಾಗ

* ರಾಜಕೀಯಕ್ಕೆ ಸೇರಿದ ವ್ಯಕ್ತಿಗಳಿಗೆ ಹೊಟ್ಟೆ ಉಬ್ಬಲು ಕಾರಣವೇನು?
ತಿಂದ ದುಡ್ಡು ಕರಗದೇ ಇರುವುದು.

* ಈಗಿನ ಹುಡುಗಿಯರು ಕೂದನ್ನು ಬಾಬ್‌ಕಟ್ ಮಾಡಲು ಕಾರಣ?
ಕೂದಲನ್ನಷ್ಟೇ ಅಲ್ಲ ಬಟ್ಟೆಯನ್ನೂ ಗಿಡ್ಡ ಮಾಡಿದ್ದಾರೆ.

Wednesday, April 18, 2007

ರಾಜ್ಯದಲ್ಲಿ ೩೭ ಮಂದಿ ಪಾಕಿಸ್ಥಾನಿಗಳು!!

ಒಂದಲ್ಲ ಎರಡಲ್ಲ ೩೭ ಮಂದಿ ಪಾಕಿಸ್ಥಾನೀಯರು ರಾಜ್ಯದಲ್ಲಿ ತಲೆ ಮರೆಸಿಕೊಂಡಿದ್ದಾರೆ! ಅವರಲ್ಲಿ ೧೬ ಮಂದಿ ಕ್ರಿಕೆಟ್ ವೀಕ್ಷಣೆಗೆಂದು ಬಂದವರು!!
ನಂಬೋದು ಕಷ್ಟ.ಆದರೂ ಸತ್ಯ. ೩೭ ಮಂದಿಲ್ಲಿ ೨೯ ಮಂದಿ ಬೆಂಗಳೂರಿನಲ್ಲಿ, ೬ ಮಂದಿ ಮೈಸೂರಿನಲ್ಲಿ, ತಲಾ ಒಬ್ಬರು ಮಂಗಳೂರು ಹಾಗೂ ಹುಬ್ಬಳ್ಳಿಗೆ ತೆರಳಿದ್ದು, ನಂತರ ಕಣ್ಮರೆಯಾಗಿದ್ದಾರೆ. ಇವರೆಲ್ಲ ಎಲ್ಲಿದ್ದಾರೆ? ಏನು ಮಾಡುತ್ತಿದ್ದಾರೆ? ಬದುಕಿದ್ದಾರಾ? ಸತ್ತಿದ್ದಾರಾ? ಇವರೇನು ಉಗ್ರಗಾಮಿಗಳಾ? ಅಲ್ಲವಾ? ಇದ್ಯಾವುದರ ಬಗ್ಗೆಯೂ ಪೊಲೀಸ್ ಇಲಾಖೆ ಬಳಿ, ಗುಪ್ತಚರ ಇಲಾಖೆ ಬಳಿ ಮಾಹಿತಿ ಇಲ್ಲ. ಹೆಚ್ಚಿನವರ ಫೋಟೋ ಕೂಡ ಇಲಾಖೆ ಬಳಿ ಇಲ್ಲ.
ಹೀಗೆ ಪಾಕಿಸ್ಥಾನದ ಪಾಸ್‌ಪೋರ್ಟ್, ವೀಸಾ ಹೊಂದಿದವರು ರಾಜ್ಯಕ್ಕೆ ಬಂದು ನಾಪತ್ತೆಯಾಗುತ್ತಿರುವುದು ಇಂದು ನಿನ್ನೆಯದಲ್ಲ. ೧೯೫೬ರಿಂದ ಇದು ಜಾರಿಯಲ್ಲಿದೆ. ಅವತ್ತಿನಿಂದ ಇವತ್ತಿನವರೆಗೂ ನಾಪತ್ತೆ ಆಗಿರುವ ಕೆಲವರಿದ್ದಾರೆ. ಇದರ ಬಗ್ಗೆ ಪೊಲೀಸ್ ಇಲಾಖೆ, ಸರಕಾರ ಗಂಭೀರವಾಗಿ ಚಿಂತಿಸಿಯೇ ಇಲ್ಲ
ಅಪರೂಪಕ್ಕೊಮ್ಮೆ ಉಗ್ರಗಾಮಿಗಳು ಪತ್ತೆಯಾದಾಗ, ಎಲ್ಲೋ ದಾಳಿಗಳು ನಡೆದಾಗ ಇವರನ್ನೆಲ್ಲ ಒಮ್ಮೆ ನೆನಪಿಸಿಕೊಂಡು ಮರೆತುಬಿಡಲಾಗುತ್ತದೆ.
ಕಾಣೆಯಾದವರು: ಅಬ್ದುಲ್ ಶೇಖ್ (ಈಗ ೬೩) ಅಬ್ದುಲ್ ವಹೀದ್ (೭೩), ಸಯ್ಯದ್ ಹಸನ್ ಪಾಶಾ (೬೭, ಮಂಡ್ಯ ಮತ್ತು ಬೆಂಗಳೂರಿನ ವಿಳಾಸ), ಖಾದರ್ ಯಾನೆ ಖಾದರ್ ಶರೀಫ್ (೭೩), ಗುಲಾಂ ನಬಿ (೬೩), ಮಹಮ್ಮದ್ (೬೩), ಖುಲಸೂಮ್ ಬಿ. (೭೮), ಅಬ್ದುಲ್ ಫತೇಹ್ (೪೫), ಅಬ್ದುಲ್ಲ (೭೦), ಮಹಮ್ಮದ್ ಅಲಿ (೫೦), ಮಹಮ್ಮದ್ (೪೬), ಶೌಕತ್ ಅಲಿ (೩೩), ಫಜ್ತರ್ ಖಾನ್ (೪೦) ಬೆಂಗಳೂರಿಗೆ ಬಂದು ಕಾಣೆಯಾದವರು. ಇವರಲ್ಲಿ ಮಹಮ್ಮದ್, ಖುಲ್ಸೂಮ್ ಮತ್ತು ಗುಲಾಮ್ ನಬಿ ಬೆಂಗಳೂರಿನಿಂದ ಮುಂಬಯಿಗೆ ತೆರಳಿದ ಬಗ್ಗೆ ದಾಖಲೆಗಳಿವೆ. ನಂತರ ಏನಾದರು ಎಂಬುದು ತಿಳಿದಿಲ್ಲ.
ವತ್ಥಮ್ ಖಾನ್ (೭೧) ಹುಬ್ಬಳ್ಳಿಯಲ್ಲಿ, ಅಬ್ದುಲ್ ಖಾದರ್ (೪೫) ಮಂಗಳೂರಿನಿಂದ ಕಾಣೆಯಾಗಿದ್ದಾರೆ. ಹಸನ್ ಅಲಿ (೪೭), ಅಬ್ದುಲ್ ಅಜೀಝ್ (೪೩), ಮಹಮ್ಮದ್ ಮೂಸಾ (೩೯), ಮೆಹಬೂಬ್ (೪೪), ಅಬ್ದುಲ್ ಇವರು ಮೈಸೂರು ನಗರದಿಂದ ಕಾಣೆಯಾದವರು. ಇವರೆಲ್ಲ ಮೈಸೂರಿಗೆ ಬಂದು ಹೋಟೆಲ್‌ನಲ್ಲಿ, ಮನೆಯಲ್ಲಿ ಉಳಿದುಕೊಂಡ ಆರಂಭಿಕ ಮಾಹಿತಿ ಮಾತ್ರ ಇದ್ದು, ನಂತರ ಮಾಹಿತಿ ಅಲಭ್ಯವಾಗಿದೆ.
೩೭ ಮಂದಿ ಪಾಕಿಸ್ಥಾನೀಯರಲ್ಲಿ ೧೬ ಮಂದಿ ಕ್ರಿಕೆಟ್ ಮ್ಯಾಚ್ ವೀಕ್ಷಣೆಗೆಂದು ೨೦೦೫ರಲ್ಲಿ ಆಗಮಿಸಿದವರು. ಜಾವೇದ್ ಆಸಿಫ್ (೪೯), ಅನ್ವರ್ (೩೮), ನೂರ್ ಮಹಮ್ಮದ್ (೩೦), ಫರ್‍ಹಾನ್ ಅಯೂಬ್ (೩೦), ಮೌಹುದ್ ಅನ್ವರ್ (೫೯), ಅಬ್ದುಲ್ ವಹೀದ್ ಬಟ್ (೫೦), ಮಹಮ್ಮದ್ ನೂರ್ (೩೮), ಇನಾಯತ್ ಅಲಿ ಖಾನ್ (೪೩), ಮಹಮ್ಮದ್ ಅಕ್ಮಲ್ (೪೧), ಖುರ್ರಂ ಶಹಾದ್ ಅಲಿ (೫೬), ಬಶೀರ್ ಅಹ್ಮದ್ (೨೪), ಬಝ್ ಮಹಮ್ಮದ್ (೨೯), ಮೌಹುದ್ ಬಿಲಾಲ್ (೩೦) ಇವರೆಲ್ಲರೂ ಬೆಂಗಳೂರಿನಿಂದ ಕಾಣೆಯಾಗಿದ್ದಾರೆ.
ಮೈಸೂರಿನಲ್ಲಿ ಬಂಧಿತನಾದ ಇಮ್ರಾನ್ ಎರಡು ತಿಂಗಳಲ್ಲಿ ಲೈಸೆನ್ಸ್, ಪಡಿತರ ಕಾರ್ಡ್ ಮಾಡಿಸಿಕೊಂಡಿದ್ದ. ಇವರು ಅಷ್ಟೆಲ್ಲ ವರ್ಷದಿಂದ ಇಲ್ಲಿದ್ದು, ಏನೇನು ಮಾಡಿರಬಹುದು? ಎಷ್ಟು ಸಂಪರ್ಕ ಬೆಳೆಸಿರಬಹುದು? ಇನ್ನೆಷ್ಟು ಮಂದಿಗೆ ಆಶ್ರಯ ನೀಡಿರಬಹುದು?

Tuesday, April 17, 2007

ದುಬಾರಿ ಫರ್ನೀಚರ್ ಐಜಿ ಕಾ ಡರ್

ಠಾಣೆಯಲ್ಲಿ ಸೌಲಭ್ಯ ಇಲ್ಲದಿದ್ದರೂ ಪರವಾಗಿಲ್ಲ ಅಧಿಕಾರಿಗಳ ಚೇಂಬರ್ ಜಗಜಗಿಸಬೇಕು ಎಂಬುದು ಪೊಲೀಸ್ ಇಲಾಖೆಯ ಅಲಿಖಿತ ನಿಯಮ. ಅಧಿಕಾರಿಗಳು ಬದಲಾದಂತೆ ಅವರ ಚೇಂಬರ್‌ನ ಸ್ಥಿತಿ- ಗತಿ ಕೂಡ ಬದಲಾಗುತ್ತದೆ. ಒಬ್ಬ ಇನ್‌ಸ್ಪೆಕ್ಟರ್ ಅವರು ಆಸೆಪಟ್ಟ ಠಾಣೆಗೆ ವರ್ಗವಾಗಿ ಬರುತ್ತಿದ್ದಂತೆ ಅಲ್ಲಿರುವ ಟೇಬಲ್, ಕುರ್ಚಿ ಯಾವುದೂ ಸರಿಯಿಲ್ಲ ಅನ್ನಿಸಿತು. ಸರಿ ಅವರ ಅಂತಸ್ತಿಗೆ ತಕ್ಕಂತೆ ಚೇಂಬರ್‌ನಲ್ಲಿರುವ ಫರ್ನೀಚರ್ ಬದಲಾಯಿಸಲು ಮನಸು ಮಾಡಿದರು. ಅವರ ಗೆಳೆಯರ ಸಹಾಯದಿಂದ ಚೇಂಬರ್‌ಗೊಂದು ಹೊಸ ಪೊಗದಸ್ತಾದ ಕುರ್ಚಿ, ಟೇಬಲ್, ಅದಕ್ಕೊಂದು ಗ್ಲಾಸು ಎಲ್ಲ ಸಿದ್ಧವಾಯಿತು. ಅದರ ಒಟ್ಟೂ ವೆಚ್ಚ ೨೫-೩೦ ಸಾವಿರ ರೂ. ಅಂತ ಕೇಳಿದರೆ ನಮಗೆ ಅಚ್ಚರಿಯಾಗುತ್ತದೆ.
ಹೀಗೆ ಇನ್‌ಸ್ಪೆಕ್ಟರ್ ಅವರು ಹೊಸ ಕುರ್ಚಿಯಲ್ಲಿ ಹಾಯಾಗಿ ಕಳಿತು ಖುಶಿಯಿಂದ ಕಾಲ ಕಳೆಯುತ್ತಿರಬೇಕಾದರೆ ಒಂದು ದಿನ ಐಜಿ ಎಚ್.ಎನ್. ಸತ್ಯನಾರಾಯಣ ರಾವ್ ಅವರು ಇನ್‌ಸ್ಪೆಕ್ಷನ್‌ಗೆ ಬರುತ್ತಾರೆಂದಾಯಿತು. ಇನ್‌ಸ್ಪೆಕ್ಟರ್‌ಗೆ ಟೆನ್ಶನ್ ಶುರುವಾಯಿತು. ಸತ್ಯನಾರಾಯಣ ರಾವ್ ಅವರಿಗೆ ಕೆಲಸದ ಬಗ್ಗೆ ಆಸಕ್ತಿ ಇರುವವರ ಬಗ್ಗೆ ಪ್ರೀತಿ ಇರುತ್ತೆ ಹೊರತು, ಚೇಂಬರ್ ಪಾಶ್ ಇರಿಸಿಕೊಂಡವರ ಬಗ್ಗೆ ಅಲ್ಲ ಎಂಬುದು ಆ ಇನ್‌ಸ್ಪೆಕ್ಟರ್‌ಗೂ ಗೊತ್ತು. ಈಗೇನು ಮಾಡುವುದು? ಯೋಚನೆ ಮಾಡಿದ ಇನ್‌ಸ್ಪೆಕ್ಟರ್, ಐಜಿ ಇನ್‌ಸ್ಪೆಕ್ಷನ್‌ಗೆ ಆಗಮಿಸುವ ಒಂದು ದಿನ ಮೊದಲೇ ತಮ್ಮ ಚೇಂಬರ್‌ನಿಂದ ಹೊಸ ಫರ್ನೀಚರ್‌ಗಳೆನ್ನೆಲ್ಲ ಎತ್ತಂಗಡಿ ಮಾಡಿದರು. ಹಳೆ ಫರ್ನೀಚರ್‌ಗಳು ಮತ್ತೆ ಚೇಂಬರ್‌ನಲ್ಲಿ ಪ್ರತಿಷ್ಠಾಪನೆಗೊಂಡವು! ಹಳೇ ಫನೀಚರ್ ನೋಡಿದ ಐಜಿ, ಪಾಪ ಇನ್‌ಸ್ಪೆಕ್ಟರ್ ತುಂಬ ಸಾಚಾ ಮನುಷ್ಯ ಎಂದುಕೊಳ್ಳಲಿ ಎಂಬುದು ಅವರ ಪ್ಲಾನ್ ಆಗಿತ್ತು.
ಐಜಿ ಸತ್ಯನಾರಾಯಣ ರಾವ್ ಅವರು ಇನ್‌ಸ್ಪೆಕ್ಷನ್‌ನಲ್ಲಿ ಇನ್‌ಸ್ಪೆಕ್ಟರನ್ನು ಸರಿಯಾಗಿ ತೊಳೆದರು ಎಂಬುದು ಠಾಣೆಯ ಒಳಗಿನವರೆ ಹೇಳುತ್ತಾರೆ. ಅದೇನೇ ಇರಲಿ ಐಜಿ ಇನ್‌ಸ್ಪೆಕ್ಷನ್ ಮುಗಿಯುತ್ತಿದ್ದಂತೆ ಹೊಸ ಫರ್ನೀಚರ್‌ಗಳು ಮತ್ತೆಇನ್‌ಸ್ಪೆಕ್ಟರ್ ಚೇಂಬರನ್ನು ಅಲಂಕರಿಸಿದೆ. ಐಜಿ ಒಮ್ಮೆ ಅನಿರೀಕ್ಷಿತವಾಗಿ ರಾತ್ರಿ ಗಸ್ತಿಗೆ ಆಗಮಿಸಿದ್ದು ನಿಮಗೆ ಗೊತ್ತೇ ಇದೆ. ಅವತ್ತು ಇದೇ ಇನ್‌ಸ್ಪೆಕ್ಟರ್‌ಗೆ ಐಜಿ ಸರಿಯಾಗಿ ಬೈದಿದ್ದರು. ಈ ಇನ್‌ಸ್ಪೆಕ್ಟರ್‌ರ ಕಚೇರಿಯಿಂದ ಕಾಣಿಸುವಂತಿರುವ ಬಾರ್ ಒಂದು ತಡ ರಾತ್ರಿಯೂ ತೆರೆದಿತ್ತು. ಇದರಿಂದ ಕುಪಿತರಾದ ಐಜಿಯವರು ಇನ್‌ಸ್ಪೆಕ್ಟರ್‌ಗೆ ವಯರ್‌ಲೆಸ್‌ನಲ್ಲಿ ಮಾತನಾಡಿ, ನಿಮ್ಮ ಠಾಣೆ ಮುಚ್ಚುವಂತೆ ಸಕಾರಕ್ಕೆ ಮನವಿ ಸಲ್ಲಿಸಿ. ನಿಮ್ಮ ಠಾಣೆಯೆದುರೇ ಬಾರ್ ತೆರೆದಿದೆ. ಇನ್ನು ಬೇರೆ ಕಡೆ ನೀವೇನು ಬಂದ್ ಮಾಡುತ್ತೀರಿ? ಸರಕಾರದ ಅನ್ನ ತಿನ್ನುವ ಬಗ್ಗೆ ಗೌರವ ಇದ್ದರೆ ನಿಯತ್ತಿನಿಂದ ಕಲಸ ಮಾಡಿ ಎಂದು ದಬಾಯಿಸಿದ್ದರು. ಇತ್ತ ಕೊಲೆ ಪ್ರಕರಣದ ಆರೋಪಿಯೊಬ್ಬ ಸಿಗಲಿಲ್ಲ ಎಂಬ ಕಾರಣಕ್ಕೆ ಎಸ್ಪಿ ಕೂಡ ಆಗಾಗ ಈ ಇನ್‌ಸ್ಪೆಕ್ಟರನ್ನು ಸರಿಯಾಗಿ ವಿಚಾರಿಸಿಕೊಳ್ಳುತ್ತಿದ್ದಾರೆ.
ಬುಲ್ ಶಾಟ್: ಒಳ್ಳೆ ಮೆತ್ತಗಿನ ಕುರ್ಚಿಯಿದೆ, ಚೆಂದದ ಟೇಬಲ್ ಇದೆ. ಚೇಂಬರ್ ಸುಂದರವಾಗಿದೆ. ಆದರೇನು ಮಾಡೋದು, ಅದರಲ್ಲಿ ಹಾಯಾಗಿ ಕುಳಿತು ಖುಶಿಪಡುವುದು ಇನ್‌ಸ್ಪೆಕ್ಟರ್ ಹಣೆಯಲ್ಲಿ ಬರೆದಿಲ್ಲ. ಎಲ್ಲ ಅವರವರ ನಸೀಬು!

ಕರೆಂಟು ಇಲ್ಲದ ಮೇಲೆ

ತುಥ್!
ಯಾವಾಗ ನೋಡಿದರೂ ಕೈ ಕೊಡುವ ಕರೆಂಟು. ಈಗೀಗ ಸರಿಯಾಗಿ ರಾತ್ರಿ ೯.೩೦ಕ್ಕೆ ಹೋಗುತ್ತಿದೆ. ಹೀಗಾಗಿ ನೋಡುತ್ತಿದ್ದ ಒಂದೇ ಒಂದು ದಾರಾವಾಹಿಯೂ ತಪ್ಪಿ ಹೋಗುತ್ತಿದೆ. ನನ್ನ ನೆಚ್ಚಿನ ನಟ ಅನಂತನಾಗ್ ಇದ್ದಾರೆ ಎಂಬ ಒಂದೇ ಕಾರಣಕ್ಕೆ ಮತ್ತು ಕಥೆ ಪರವಾಗಿಲ್ಲ ಎಂದುಕೊಂಡು ನೋಡುತ್ತಿರುವ ದಾರವಾಹಿ ಅದು. ಮೆಸ್ಕಾಂ ಕೃಪೆಯಿಂದ ಅದೂ ಸಾಧ್ಯವಾಗುತ್ತಿಲ್ಲ.
ಅದರ ಹೆಸರನ್ನು ಈಗ ಕರೆಂಟು ಇಲ್ಲದ ಮೇಲೆ ಎಂದು ಬದಾಯಿಸಿಕೊಂಡಿದ್ದೇನೆ.
ರಾಷ್ಟ್ರಕವಿ ಖ್ಯಾತಿಗೆ ಪಾತ್ರರಾದ ಜಿ.ಎಸ್. ಶಿವರುದ್ರಪ್ಪ ಅವರು...
ಪ್ರೀತಿ ಇಲ್ಲಿದ ಮೇಲೆ
ಹೂವು ಅರಳೀತು ಹೇಗೆ
ಮೋಡ ಕಟ್ಟೀತು ಹೇಗೆ...
ಎಂದು ಬರೆದರು. ಅದೇ ಹೆಸರಿನ ದಾರವಾಹಿಯ ಸಮಯದಲ್ಲೇ ವಿದ್ಯುತ್ ಕೈ ಕೊಡುತ್ತಿರುವುದರಿಂದ...
ಕರೆಂಟು ಇಲ್ಲದ ಮೇಲೆ
ದೀಪ ಬೆಳಗೀತು ಹೇಗೆ
ಟೀವಿ ಹೊತ್ತೀತು ಹೇಗೆ...
ಎಂದು (ಶಿವರುದ್ರಪ್ಪ ಅವರ ಕ್ಷಮೆ ಕೇಳುತ್ತ) ಹೇಳ್ಬೇಕು ಅನಿಸುತ್ತದೆ.
ಇಷ್ಟಕ್ಕೂ ಕರ್ನಾಟಕದಾದ್ಯಂತ ಪವರ್ ಕಟ್ ಕಾಮನ್ನು. ನಮ್ಮ ರಾಜ್ಯವನ್ನು ಕರುನಾಡು ಎಂದೂ ಕರೆಯುತ್ತಾರೆ. ಇದನ್ನು ಬೇರೆಯವರು ಕರು ಎಂಬುದನ್ನು ಕತ್ತಲ ನಾಡು ಎಂದು ಅಪಾರ್ಥ ಮಾಡಿಕೊಳ್ಳದಿದ್ದರೆ ಸಾಕು. ಕಾಸರಗೋಡು ಕರ್ನಾಟಕಕ್ಕೆ ಸೇರುಏಕು ಅನ್ನುತ್ತಾರೆ. ಕಾಸರಗೋಡಿನವರನ್ನೇ ಕೇಳಿದರೆ... ಬೇಡ ಸ್ವಾಮಿ ನಿಮ್ಮ ರಾಜ್ಯದಲ್ಲಿ ಯಾವಾಗ ನೋಡಿದರೂ ಕರೆಂಟು ಇರಲ್ಲ. ನಾವು ಕೇರಳ ರಾಜ್ಯದಲ್ಲೇ ಅರಾಮಿದ್ದೇವೆ ಅನ್ನುತ್ತಾರೆ. ಕರೆಂಟು ಗಡಿನಾಡಿವವರಲ್ಲಿ ನಮ್ಮ ರಾಜ್ಯದ ಬಗ್ಗೆ ತಾತ್ಸಾರ ಬೆಳೆಸಿದೆ.
ಈಗ ಪಡುಬಿದ್ರಿಯಲ್ಲಿ ನಾಗಾರ್ಜುನ ಯೋಜನೆ ಜಾರಿ ಮಾಡಲು ಉತ್ಸುಕವಾಗಿದೆ. ಭಾರೀ ವೆಚ್ಚದಲ್ಲಿ ಸಿದ್ಧವಾದ ಏಷ್ಯಾದ ಮೊದಲ ನೀರಿನ ಮೇಲೆ ತೇಲುವ ಪವರ್ ಪ್ಲಾಂಟ್ ಎಂಬ ಹೆಸರಿಗೆ ಪಾತ್ರವಾದ ತಣ್ಣೀರುಬಾವಿ ಯೋಜನೆ ಇದೆ. ಅದರಿಂದ ವಿದ್ಯುತ್ ಖರೀದಿ ತುಂಬ ದುಬಾರಿ. ಯುನಿಟ್‌ಗೆ ೫.೪೦ ರೂ. ನೀಡಬೇಕು. ಇಷ್ಟು ದುಬಾರಿ ದರದಲ್ಲಿ ಖರೀದಿಸಿ ಗ್ರಾಹಕರಿಗೆ ಕಡಿಮೆ ದರದಲ್ಲಿ ವಿದ್ಯುತ್ ನೀಡುವುದು ಸಾಧುವಲ್ಲ. ಇದು ಸತ್ಯ. ಆದರೆ ಯೋಜನೆಗೆ ಅನುಮತಿ ನೀಡುವಾಗ ಈ eನೋದಯ ಯಾಕಾಗಲಿಲ್ಲ? ಅದು ಆಗಿನವರಿಗೆ ಗೊತ್ತಿರಲಿಲ್ಲವೆ? ಗೊತ್ತಿತ್ತು. ಯಾರಪ್ಪನ ಗಂಟು? ಅನುಮತಿ ಕೊಟ್ಟರು.
ಆಗಿನ ಒಪ್ಪಂದಂತೆ ಸರಕಾರ ನಿರ್ದಿಷ್ಟ ಮೊತ್ತವನ್ನು ತಣ್ಣೀರುಬಾವಿ ಪವರ್ ಪ್ರಾಜೆಕ್ಟ್ ಸಂಸ್ಥೆಗೆ ನೀಡಬೇಕು. ಕರೆಂಟು ಖರೀದಿಸಿ, ಬಿಡಿ ಸಂಬಂಧವಿಲ್ಲ. ಈಗ ಅದು ದುಬಾರಿ ಎಂಬ ನೆಪ ಹೇಳಿ ಪಡುಬಿದ್ರಿಯಲ್ಲಿ ನಾಗಾರ್ಜುನ ಪವರ್ ಪ್ರಾಜೆಕ್ಟ್ ಆರಂಭಿಸ ಹೊರಟಿದ್ದಾರೆ. ಅತ್ತ ಗೋಕರ್ಣದ ಸಮೀಪದ ತದಡಿಯಂತಹ ಸೂಕ್ಷ್ಮ ಪ್ರದೇಶದಲ್ಲಿ ಉಷ್ಣ ವಿದ್ಯುತ್ ಸ್ಥಾವರ ಸ್ಥಾಪಿಸುವ ಸಿದ್ಧತೆಗಳಾಗುತ್ತಿವೆ. ಕರಾವಳಿ ಹಾಗೂ ಮಲೆನಾಡಿನ ಪ್ರದೇಶ ಸದಾ ಹಲವು ಯೋನೆಗಳಿಗೆ ಬಲಿಯಾಗಿದೆ. ಹಾಗೆಯೇ ವಿದ್ಯುತ್ ಖೊತಾ ಹೆಚ್ಚು ಜಾರಿಗೆ ಬರುವುದು ಕೂಡ ಇದೇ ಪ್ರದೇಶಗಳಲ್ಲಿ. ಬೆಂಗಳೂರಲ್ಲಿ ವಿದ್ಯುತ್ ತೆಗೆಯುವಂತಿಲ್ಲ. ಹಾಗೇನಾದರೂ ಮಾಡಿದರೆ ಅಲ್ಲಿರುವ ಮಲ್ಟಿ ನ್ಯಾಶನಲ್ ಸಂಸ್ಥೆಗಳು ಬಾಗಿಲು ಹಾಕಿ ಬೇರೆ ರಾಜ್ಯಕ್ಕೆ ಗುಳೆ ಹೋದರೆ?
ಈಗ ಪಡುಬಿದ್ರಿ ಬಳಿ ಜನ ನಾಗಾರ್ಜುನ ಯೋಜನೆ ವಿರೋಧಿಸುತ್ತಿದ್ದಾರೆ. ಇದನ್ನು ಹತ್ತಿಕ್ಕಲು ಸಾಕಷ್ಟು ಯತ್ನಗಳು ನಡೆಯುತ್ತಿವೆ. ಅದರಲ್ಲಿ ವಿದ್ಯುತ್ ತೆಗೆಯುವ ತಂತ್ರವೂ ಒಂದು. ವಿದ್ಯುತ್ ಆಗಾಗ ತೆಗೆಯುವ ಮೂಲಕ ಜನರಲ್ಲಿ ಅಸಹನೆ ಸೃಷ್ಟಿಸಲಾಗುತ್ತಿದೆ. ಒಮ್ಮೆ ದಿನವಿಡೀ ವಿದ್ಯುತ್ ಇರುವಂತಾದರೆ ಸಾಕು ಎಂಬ ಸ್ಥಿತಿಗೆ ಜನರನ್ನು ತರಲಾಗುತ್ತದೆ. ದಿನವಿಡೀ ವಿದ್ಯುತ್ ನೀಡುತ್ತೇವೆ ಎಂದು ಹೇಳಿ ನಾಗಾರ್ಜುನ ಸ್ಥಾಪನೆ ಮಾಡಲಾಗುತ್ತದೆ. ವಿದ್ಯುತ್ ಖೋತಾಗೆ ಭಾರೀ ಬೆಳವಣಿಗೆ, ವಿದ್ಯುತ್ ಬೇಡಿಕೆ ಹೆಚ್ಚಳದ ನೆಪ ಹೇಳಲಾಗುತ್ತಿದೆ. ಮೊದಲೇ ತಿಳಿದಿರಲಿಲ್ಲವೆ ವಿದ್ಯುತ್ ಬೇಡಿಕೆ ವರ್ಷದಿಂದ ವರ್ಷಕ್ಕೆ ಹೆಚ್ಚುತ್ತದೆಂದು? ಖಂಡಿತಾ ಗೊತ್ತಿತ್ತು. ಹಾಗಾದರೆ ಯಾಕೆ ಅದರ ಬಗ್ಗೆ ಸೂಕ್ತ ಗಮನ ನೀಡಲಿಲ್ಲ? ಇದನ್ನು ಜನ ರಾಜಕಾರಣಿಗಳ ಜುಟ್ಟು ಹಿಡಿದು ಕೇಳಬೇಕಿದೆ.