Monday, April 30, 2007

ಮೊಸರಲ್ಲೂ ಕಲ್ಲು ಹುಡುಕುವುದು ಏಕೆ ಸುಬ್ಬಯ್ಯ?
ಎಲ್ಲವೂ ಮೋಸ!
ಹೊಸನಗರದ ಶ್ರೀ ರಾಮಚಂದ್ರಾಪುರ ಮಠದಲ್ಲಿ ೯ ದಿನ ನಡೆದ ವಿಶ್ವ ಗೋ ಸಮ್ಮೇಳನದಂತ ಅಧ್ಬುತ, ವಿಶಿಷ್ಟ, ಅಪರೂಪದ ಕಾರ್ಯಕ್ರಮದ ಬಗ್ಗೆ ಮಾಜಿ ಶಾಸಕ ಎ.ಕೆ. ಸುಬ್ಬಯ್ಯ ಹೇಳಿದ ಮಾತು ಇದು.
ಅವರ ಪ್ರಕಾರ... ಗೋ ಸಮ್ಮೇಳನ ಶುದ್ಧ ಮೋಸ. ಕೇವಲ ಹಣ ಮಾಡುವ ದಂಧೆ. ಕರ್ನಾಟಕದಾದ್ಯಂತ ಕೋಮುವಾದ ಹಬ್ಬಿಸುವ ತಂತ್ರದ ಒಂದು ಭಾಗ. ಸ್ವಾಮೀಜಿಗೆ ನಿಜವಾಗಿಯೂ ಗೋವುಗಳ ಸಂತತಿ ಉಳಿಸಲು ಮನಸ್ಸಿದ್ದರೆ ಗೋ ಪಾಲಕರ ಸಮ್ಮೇಳನ ಮಾಡಬೇಕಿತ್ತು. ಅವರ ಸಮಸ್ಯೆಗಳಿಗೆ ಪರಿಹಾರ ಹುಡುಕಬೇಕಿತ್ತು. ಅದರ ಬದಲು ಈಗ ನಡೆದದ್ದು ಗೋ ಪೂಜಕರ ಸಮ್ಮೇಳನ. ವಿಶ್ವ ಗೋ ಸಮ್ಮೇಳನದ ನೆಪದಲ್ಲಿ ಯಾರ್‍ಯಾರಿಂದ ಎಷ್ಟು ಹಣ ಸಂಗ್ರಹಿಸಲಾಯಿತು ಎಂಬುದನ್ನು ಬಹಿರಂಗ ಪಡಿಸಬೇಕು.
ವಿಶ್ವ ಗೋ ಸಮ್ಮೇಳನ ಎಂಬುದೇ ಮೋಸದ ಶಬ್ದ. ವಿಶ್ವದಾದ್ಯಂತದ ಗೋವುಗಳೇ ಇಲ್ಲಿರಲಿಲ್ಲ ಜನರಲ್ಲಿ ಮೌಢ್ಯ ಬೆಳೆಸುವ ಕಾರ್ಯಕ್ರಮ. ಸ್ವಾಮೀಜಿ ಭಾಷಣದಲ್ಲಿ ಹೇಳಿದ್ದೆಲ್ಲ ಸುಳ್ಳು. ನಾನೂ ಗೋವು ಸಾಕಿದ್ದೇನೆ. ಎತ್ತು ಇರಿಸಿಕೊಂಡು ನನಗೇನೂ ಪ್ರಯೋಜನವಿಲ್ಲ. ಅವುಗಳನ್ನು ಹಣ ಕೊಟ್ಟು ಖರೀದಿಸುವವರು ಕಸಾಯಿಖಾನೆಯವರು ಮಾತ್ರ. ನನಗೆ ಲಾಭವಾಗುತ್ತದಾದ್ದರಿಂದ ಅವರಿಗೆ ಕೊಡುತ್ತೇನೆ. ಅದಕ್ಕೆ ಸ್ವಾಮೀಜಿಯದ್ದೇನು ತಕರಾರು. ನಮ್ಮ ಎತ್ತು ನಾನು ಯಾರಿಗೆ ಬೇಕಾದರೂ ಕೊಡುತ್ತೇವೆ. ಅದು ರೈತರ ಹಕ್ಕು. ಅಷ್ಟಿದ್ದರೆ ಎಲ್ಲ ಗೋವುಗಳನ್ನು ಸ್ವಾಮೀಜಿಯೇ ಮಾರುಕಟ್ಟೆ ಕ್ರಯ ಕೊಟ್ಟು ಖರೀದಿಸಲಿ. ಇದನ್ನು ಬಿಟ್ಟು ಆರ್‌ಎಸ್‌ಎಸ್‌ನಂತೆ ಕೋಮುವಾದ ಹಬ್ಬಿಸಲು ಗೋ ಸಮ್ಮೇಳದಂತರಹ ಡೋಂಗಿ ಗೋ ಪ್ರೀತಿ ತೋರಿಸುವುದನ್ನು ಬಿಡಲಿ ಎಂಬುದು ಸುಬ್ಬಯ್ಯ ಅವರ ಅಂಬೋಣ.
ಸುಬಯ್ಯನವರ ಮಾತು ಕೇಳುವಾಗಲೇ ಈ ವಯ್ಯಂದ್ಯಾಕೋ ಜಾಸ್ತಿಯಾಯ್ತು ಅನ್ಸುತ್ತೆ. ಇವರಿಗೆ ಗೋ ಸಮ್ಮೇಳನದ ಬಗ್ಗೆಯಾಗಲಿ, ರಾಮಚಂದ್ರಾಪುರ ಮಠದಲ್ಲಿ ನಡೆಯುತ್ತಿರುವ ಗೋ ಸಂರಕ್ಷಣೆ, ಗೋ ಶಾಲೆ ಬಗ್ಗೆಯಾಗಲಿ ಯಾವುದೇ ಮಾಹಿತಿ ಇಲ್ಲ ಎಂಬುದೂ ಸಾಬೀತಾಗುತ್ತದೆ. ಇಷ್ಟೆಲ್ಲ ಮತಾಡುವ ಸುಬ್ಬಯ್ಯನವರ ಬಳಿ ಸ್ವಾಮಿ ನೀವು ರಾಮಚಂದ್ರಾಪುರ ಮಠಕ್ಕೆ ಹೋಗಿದ್ರಾ ಅಂದ್ರೆ ಇಲ್ಲ ಅಂತಾರೆ. ಹೋಗ್ಲಿ ವಿಶ್ವ ಗೋ ಸಮ್ಮೇಳನಕ್ಕಾದ್ರೂ ಹೋಗಿದ್ರಾ ಅಂದ್ರೆ ಅದಕ್ಕೂ ಅಡ್ಡಡ್ಡ ತಲೆ ಆಡಿಸ್ತಾರೆ. ಈ ಮನುಷ್ಯ ರಾಮಚಂದ್ರಾಪುರ ಮಠಕ್ಕೂ ಹೋಗಿಲ್ಲ. ಗೋ ಸಮ್ಮೇಳನವನ್ನೂ ನೋಡಿಲ್ಲ. ಆದ್ರೂ ಹೋದವರಿಗಿಂತ ಹೆಚ್ಚಾಗಿ ಎಗರಾಡ್ತಾರೆ.
ಇಡೀ ಸಮ್ಮೇಳನ ಜನರಲ್ಲಿ ಮೌಢ್ಯ ಬೆಳೆಸುವ ಕಾರ್ಯಕ್ರಮ ಎಂಬ ಆರೋಪ ಮಾಡುವ ಮೊದಲು ಸುಬ್ಬಯ್ಯ ಒಮ್ಮೆ ಸಮ್ಮೇಳನನೋಡಬೇಕಿತ್ತು. ನೋಡಿದ್ದರೆ ಬಹುಶಃ ಹೀಗೆ ಪೆಕರನಂತೆ, ಅರಳೂ ಮರಳೀಗೆ ತುತ್ತಾದವರಂತೆ ಮಾತಾಡುತ್ತಿರಲಿಲ್ಲ. ಗೋ ಸಮ್ಮೇಳನದ ಅಂಗವಾಗಿ ನಡೆದ ವಸ್ತು ಪ್ರದರ್ಶನದಲ್ಲಿ ಗೋ ಮತ್ತು ವಿeನ ಎಂಬ ವಿಷಯದ ಬಗ್ಗೆ ೧೦ಕ್ಕೂ ಹೆಚ್ಚು ಸ್ಟಾಲ್‌ಗಳಿದ್ದವು. ಗೋ ಮತ್ತು ಕೃಷಿ, ಗೋ ಮತ್ತು ಪುರಾಣ ಹೀಗೆ ಗೋವಿಗೆ ಸಂಬಂಧಿಸಿದ ವಿವಿಧ ವಿಭಾಗಗಳ ಬಗ್ಗೆ ಸ್ಟಾಲ್‌ಗಳಿದ್ದವು. ಅಲ್ಲಿ ಸಾಕ್ಷಿ ಸಮೇತ ವಿಷಯಗಳ ವಿವರಣೆ ಇತ್ತು. ಪಾಪ ಸುಬ್ಬಯ್ಯ. ಇದನ್ನೆಲ್ಲ ನೋಡದೆ ಏನೇನೋ ಮಾತಾಡುತ್ತಾರೆ.
ಗೋವುಗಳ ಬಗ್ಗೆ ಪ್ರೀತಿಯಿದ್ದರೆ ಸ್ವಾಮೀಜಿ ಮಾರುಕಟ್ಟೆ ದರ ಕೊಟ್ಟು ಗೋವು ಖರೀದಿಸಲಿ ಎಂದು ಸುಬ್ಬಯ್ಯ ಒತ್ತಾಯಿಸಿದ್ದಾರೆ. ಆದರೆ ಸ್ವಾಮೀಜಿ ಒಂದು ವರ್ಷದ ಹಿಂದೆಯೇ ಇಂತಹ ಕಲ್ಪನೆಯ ಯೋಜನೆ ಆರಂಭಿಸಿದ್ದಾರೆ. ಪ್ರತಿ ಭಾಷಣದಲ್ಲೂ ಸಂತೆಗೆ ನಡೆಯಿರಿ. ಮಾರಾಟವಾಗುವ ಗೋ ಖರೀದಿಸಿ. ಸಾಧ್ಯವಾಗದಿದ್ದರೆ ಮಠವೇ ಖರೀದಿಸಲಿದೆ ಎಂದು ಭಕ್ತರಿಗೆ ಹೇಳಿದ್ದಾರೆ. ಅದಕ್ಕಾಗಿ ಯೋಜನೆಯನ್ನೂ ಆರಂಭಿಸಿದಾರೆ. ಈ ಯೋಜನೆ ಆರಂಭಗೊಂಡ ಎರಡೇ ದಿನದಲ್ಲಿ ೨.೬೩ ಕೋಟಿ ರೂ. ಸಂಗ್ರಹವಾಗಿದ್ದೂ ಸುಬ್ಬಯ್ಯರಿಗೆ ಗೊತ್ತಿಲ್ಲ. ನನ್ನ ಎತ್ತು ಬೇಕಾದರೆ ಮಠದವರು ಖರೀದಿಸಲಿ ಎಂಬುದು ಅವರ ಗೋಳು. ಸುಬ್ಬಯ್ಯರ ಮನೆಯಲ್ಲಿ ಒಂದು ಎತ್ತು ಕೊಡೋದಿದೆ ಎಂದು ಯಾರಿಗೋ ಕನಸು ಬಿದ್ದು, ಅವರು ಹಣ ಹಿಡಿದು ಬಂದು ಎತ್ತು ಖರೀದಿಸಿ ಹೋಗಬೇಕು ಎಂಬುದು ಸುಬ್ಬಯ್ಯನವರ ಮಾತಿನ ಅರ್ಥ. ಮನೆ ಮನೆಗೆ ಬಂದು ದನ ಕೊಡೋದಿದ್ಯಾ ಎಂದು ಕೇಳೋಕೆ ಅದೇನು ಹಳೇ ಪೇಪರ್, ಪ್ಲಾಸ್ಟಿಕ್, ಚಪ್ಪಲ್, ಬಾಟ್ಲಿ ವ್ಯವಹಾರವಾ?
ಕ್ಷುಲ್ಲಕವಾಗಿ ಮಾತನಾಡುವ ಮುಂಚೆ ಸುಬ್ಬಯ್ಯ ಸ್ವಲ್ಪಯೋಚಿಸಬೇಕು. ಗೋ ಸಮ್ಮೇಳಕ್ಕೆ ಪ್ರತಿ ನಿತ್ಯ ಭೇಟಿ ನೀಡಿದ ಜನರ ಸಂಖ್ಯೆ ಲಕ್ಷವನ್ನೂ ದಾಟಿದೆ. ಮೊದಲ ಎರಡು ದಿನ ಮಾತ್ರ ಸ್ವಲ್ಪ ಕಡಿಮೆ ಜನರಿದ್ದರು. ಆದರೂ ಬಂದವರ ಸಂಖ್ಯೆ ೮೦ ಸಾವಿರ! ಉಳಿದ ಎಲ್ಲ ದಿನವೂ ಒಂದೂವರೆ ಲಕ್ಷ ಮೀರಿದೆ. ಊಟ ಮಾಡಿದವರ ಸಂಖ್ಯೆ. ಊಟ ಮಾಡದೆ ಹೋದವರು ಈ ಲೆಕ್ಕದಲ್ಲಿಲ್ಲ. ಇಷ್ಟು ಜನರನ್ನು ಒಂದೇ ಸಮಯದಲ್ಲಿ ಒಂದೇ ವಿಷಯಕ್ಕೆ ಮೋಸ ಮಾಡಲು ಸಾಧ್ಯವೇ? ಸುಬ್ಬಯ್ಯನವರೇ?
ಇನ್ನು ವಿಶ್ವದ ಗೋವುಗಳೇ ಸಮ್ಮೇಳದಲ್ಲಿ ಇರಲಿಲ್ಲೆಂಬ ಸುಬ್ಬಯ್ಯರ ಹೇಳಿಕೆ ಅತ್ಯಂತ ಬಾಲಿಶ. ಗೋವುಗಳು ಸಮ್ಮೇಳನಕ್ಕೆ ಬಂದು ಆಗಬೇಕಿರುವುದೇನಿಲ್ಲ. ಬದಲಾಗಿ ಗೋವಿನ ಬಗ್ಗೆ ಆಸಕ್ತಿ ಇರುವುವವರು, ಅರಿಯಲು ಇಷ್ಟ ಇದ್ದವರು ಬರಬೇಕು. ಆ ಮೂಲಕ ಗೋ ಸಂರಕ್ಷಣೆ ಆಗಬೇಕು ಎಂಬುದು ಸಮ್ಮೇಳನದ ಉದ್ದೇಶ. ಹೊರತು ಗೋ ಸಮ್ಮೇಳನ ಅಂದಾಕ್ಷಣ ವಿಶ್ವದಾದ್ಯಂತ ಗೋವುಗಳು ಬಂದು ಸೇರುತ್ತವೆ ಎಂದರ್ಥವಲ್ಲ.
ಸುಬ್ಬಯ್ಯ ಮಾತಿನ ಬಗ್ಗೆ ನಂಬಿಕೆಯೇ ಹೊರಟು ಹೋಗುವಂಥ ಇನ್ನೊಂದು ಹೇಳಿಕೆಯೆಂದರೆ ಪ್ರಾಣಿಗಳನ್ನು ಕೊಲ್ಲುವುದು ಪ್ರಕೃತಿ ನಿಯಮ ಎಂಬ ಅವರ ಸ್ಟೇಟ್‌ಮೆಂಟು. ಹುಲಿ ಜಿಂಕೆಯನ್ನು ಕೊಲ್ಲುತ್ತದೆ. ಇಲ್ಲವಾದಲ್ಲಿ ಹುಲಿಯೇ ಸಾಯುತ್ತದೆ. ಜಿಂಕೆಯನ್ನು ಕೊಂದದ್ದಕ್ಕೆ ಹುಲಿಯ ಮೇಲೆ ಕೇಸು ಹಾಕುವುದು ನ್ಯಾಯವೇ? ಹಾಗೆಯೇ ಗೋಹತ್ಯಾ ನಿಷೇಧ ಕೂಡ ಎಂಬ ಸುಬ್ಬಯ್ಯರ ಮಾತು ನಿಜಕ್ಕೂ ಅವರಿಗೆ ಮೊದುಳು ಮತ್ತು ನಾಲಿಗೆ ನಡುವೆ ಸಂಪರ್ಕ ಸರಿಯಿಲ್ಲ ಎಂಬುದನ್ನು ತೋರಿಸುತ್ತದೆ. ಹುಲಿ ಜಿಂಕೆಯನ್ನು ಕಲೊಲ್ಲುವುದಕ್ಕೂ, ಮನುಷ್ಯ ದನವನ್ನು ಕೊಲ್ಲುವುದಕ್ಕೂ ವ್ಯತ್ಯಾಸವಿದೆ. ಹಾಗಿಲ್ಲವಾಗಿದ್ದರೆ ಹುಲಿ, ಜಿಂಕೆ ಕೊಲ್ಲುವ ಮನುಷ್ಯರಿಗೇಕೆ ಶಿಕ್ಷೆ? ಈ ಶಿಕ್ಷೆ ಇಲ್ಲವಾಗಿದ್ದಲ್ಲಿ ಈಗ ನೋಡಲು ಒಂದು ಹುಲಿ ಕೂಡ ಇರುತ್ತಿರಲಿಲ್ಲ ಎಂಬ ಸಿಂಪಲ್ ಸತ್ಯ ಸುಬ್ಬಯ್ಯರಿಗೆ ಗೊತ್ತಿಲ್ಲ.
ಮಠದಲ್ಲಿ ಎಷ್ಟು ಗೋವಿದೆ ಗೊತ್ತಿದ್ಯಾ ಎಂದರೆ ಪೂಜೆ ಮಾಡೋಕೆ ಇಟ್ಕೊಂಡಿರಬಹುದು ಒಂದಷ್ಟು ಅಂತಾರೆ ಸುಬ್ಬಯ್ಯ. ಪೂಜೆ ಮಡೋಕೆ ಒಂದೆರಡು ಹೆಚ್ಚೆಂದರೆ ೧೦ ಗೋವು ಸಾಕು. ಆದರೆ ನೋರಾರು, ಸಾವಿರಾರು ಗೋವುಗಳನ್ನು ಸಾಕುವುದು ಅವುಗಳ ಮೇಲಿನ ಪ್ರೀತಿಯಿಂದ ಹೊರತು ಪೂಜೆಗಾಗಿ ಅಲ್ಲ. ವಿಶ್ವಗೋ ಸಮ್ಮೇಳನ ಗೋ ಪೂಜರ ಸಮ್ಮೇಳನವಾಗಿತ್ತು ಎಂದು ಸುಬ್ಬಯ್ಯ ಹಳಿದಿದ್ದಾರೆ. ಗೋ ಸಾಕುವವರು ಮಾತ್ರ ಗೋವನ್ನು ಪೂಜಿಸುತ್ತಾರೆ. ನನ್ನ ದೃಷ್ಟಿಯಯಲ್ಲಿ ಗೋ ಪಾಲಕ ಮತ್ತು ಗೋ ಪೂಜಕ ಇಬ್ಬರೂ ಒಬ್ಬನೇ ಆಗಿರುತ್ತಾನೆ. ಯಾರೂ ಪಕ್ಕದ ಮನೆ ಗೋವಿಗೆ ಹೋಗಿ ಪೂಜೆ ಮಾಡುವುದಿಲ್ಲ. ಅದೇನಿದ್ದರೂ ಪ್ಯಾಟೆಯವರ ಸಾಮೂಹಿಕ ಗೋ ಪೂಜೆಯಲ್ಲಿ ಮಾತ್ರ. ಹಾಗಾಗಿ ಸುಬ್ಬಯ್ಯನವರು ಗೋ ಪೂಜಕರ ಸಮ್ಮೇಳನ ಎಂದು ಹಳಿದದ್ದು ಎಳ್ಳಷ್ಟೂ ಸರಿಯಲ್ಲ.
ಸುಬ್ಬಯ್ಯ ಸಮಾಜದ ಒಂದು ವರ್ಗದ ಪ್ರತಿನಿಧಿಯಷ್ಟೇ. ರಾಮಚಂದ್ರಾಪುರ ಮಠದಲ್ಲಿ ನಡೆದ ವಿಶ್ವ ಗೋ ಸಮ್ಮೇಳನ, ಅದರ ಯಶಸ್ಸು, ಗಳಿಸಿದ ಜನಾಕರ್ಷಣೆ ಹಲವರ ಕಣ್ಣು ಕುಕ್ಕಿದೆ. ಹೊಟ್ಟೆಯುರಿಸಿದೆ. ಹೊಟ್ಟೆಕಿಚ್ಚು ಬಾಯಿಯ ಮೂಲಕ ಹೀಗೆಲ್ಲ ಹೊರ ಬರುತ್ತಿದೆ. ಗೋವುಗಳ ಬಗ್ಗೆ ಮಾತನಾಡುವುದೇ ಕೋಮುವಾದ ಎಂಬಂತೆ ಮಾತಾಡುತ್ತಾರೆ ಕೆಲವರು. ದನ ಕಡಿಯುವುದರ ಪರವಾಗಿರುವುದು ಕೋಮುವಾದ ಅಂದರೆ ಮಾತ್ರ ಅವರಿಗೆ ಕೋಪ ಬರುತ್ತೆ. ಒಳ್ಳೆ ಕೆಲಸ ಮಾಡಿದವರ ಬಗ್ಗೆ ಹೊಗಳದಿದ್ದರೂ ಪರವಾಗಿಲ್ಲ ಆದರೆ ಇಷ್ಟು ಹಗುರಾಗಿ ಮಾತನಾಡವುದು, ಆಧಾರ ರಹಿತವಾಗಿ ಆರೋಪ ಮಾಡುವುದು ಯಾವ ಕಾರಣಕ್ಕೂ ಸರಿಯಲ್ಲ. ಒಂದು ವರ್ಗವನ್ನು ಮೆಚ್ಚಿಸಲು ಸುಬ್ಬಯ್ಯ ಬಾಯಿಗೆ ಬಂದದ್ದು ಮಾತಾಡಿದ್ದಾರೆ. ಅಲ್ಪಸಂಖ್ಯಾತರನ್ನು (ಈಗ ಅವರು ಅಲ್ಪಸಂಖ್ಯಾತರು ಹೌದೋ ಅಲ್ಲವೋ ಎಂಬ ಅನುಮಾನ ಇದೆ) ಮೆಚ್ಚಿಸಲು. ಅದು ಸುಬ್ಬಯ್ಯರಿಗೆ ರಾಜಕೀಯದಿಂದ ರಕ್ತದಲ್ಲೇ ಬೆರೆತಿರಬಹುದು. ಆದರೆ ಇನ್ನೊಬ್ಬರನ್ನು ಟೀಕಿಸುವುದು, ತುಷ್ಟೀಕರಿಸುವುದೇ ಅಲ್ಪಸಂಖ್ಯಾತರನ್ನು ಮೆಚ್ಚಿಸುವ ಸಾಧನ ಎಂದುಕೊಂಡಿರುವುದು ಸುಬ್ಬಯ್ಯರ ದೌರ್ಬಲ್ಯ.
ಇಷ್ಟಕ್ಕೂ ಸುಬ್ಬಯ್ಯ ಸಾಚಾ ಜನವೇ? ಮೊದಲು ಬಿಜೆಪಿಯಲ್ಲಿದ್ದರು. ಇದೇ ಆರ್‌ಎಸ್‌ಎಸ್ ಮುಖಂಡರ ಮನೆ ಬಾಗಿಲಿಗೆ ಎಡತಾಕಿಒದ್ದರು. ನಂತರ ಜನತಾದಳಕ್ಕೆ ಹೋದರು. ಈಗ ಆವ ಪಕ್ಷದಲ್ಲಿದ್ದಾರೆ? ಅವರಿಗೇ ಗೊತ್ತಿಲ್ಲ. ಕಾಂಗ್ರೆಸ್ ಪರವಾಗಿ ಮಾತಾಡುತ್ತಿದ್ದಾರೆ. ಮೂರುವರೆ ವರ್ಷದ ಹಿಂದೆ ವೀರಪ್ಪ ಮೊಯಿಲಿಯನ್ನು ಸೋಲಿಸಿದ ಪಾಪ ಪ್ರಜ್ಞೆ ಕಾಡುತ್ತಿದೆ ಅಂತ ಈಗ ಬಡಬಡಿಸುತ್ತಾರೆ. ರಾಮಚಂದ್ರಾಪುರ ಸ್ವಾಮೀಜಿ ಜನರಲ್ಲಿ ಮೌಢ್ಯ ಬೆಳೆಸುತ್ತಾರೆ ಎಂದು ಆರೋಪ ಮಾಡುವ ಸುಬ್ಬಯ್ಯ ತಾವೇ ಪಾಪಪ್ರಜ್ಞೆ, ಪಾಪ ವಿಮೋಚನೆ ಎಂಬ ಮೌಢ್ಯದ ಮಾತಾಡುತ್ತಾರೆ.
ಮೊಸರಲ್ಲೂ ಕಲ್ಲು ಹುಡುಕೋದು ಅಂದ್ರೆ ಇದೇನಾ?

Sunday, April 22, 2007

ಲೌ ಎಟ್ ಲಾಸ್ಟ್ ಸೈಟ್!


ಚಲನಚಿತ್ರ ನಿರ್ದೇಶಕರ ಮಟ್ಟಿಗೆ ಅದು ಬತ್ತದ ಸೆಲೆ. ಯುವಕರಿಗೆ ಆಕರ್ಷಣೆಯ ಬಲೆ. ಹದಿ ಹರೆಯದವರಿಗೆ ಕುತೂಹಲದ ನೆಲೆ. ಆಸಕ್ತಿಯ ಸೆಲೆ. ಅದರ ಹೆಸರು ಲವ್ವು. ಕನ್ನಡದಲ್ಲಿ ಪ್ರೀತಿ-ಪ್ರೇಮ. (ನಂತರದ್ದು ಪ್ರಣಯ) ನನ್ನಜ್ಜನ ಕಾಲದಿಂದಲೂ ಲವ್ವನ್ನೇ ವಸ್ತುವಾಗಿಟ್ಟುಕೊಂಡು ಎಷ್ಟು ಸಿನೆಮಾಗಳು ಬಂದಿಲ್ಲ? ಅದನ್ನು ಎಷ್ಟು ಮಂದಿ ನೋಡಿಲ್ಲ? ಇವತ್ತೂ ಲೌ ಸಿನೆಮಾಗಳು ಬರುತ್ತಿವೆ. ಪ್ರೀತಿ ಪ್ರೇಮ ಪ್ರಣಯ ಪಿಚ್ಚರ್ ನೋಡಿದ ಮೇಲಂತೂ ಮುದುಕಿಯರೂ ಮೇಕಪ್ ಮಾಡತೊಡಗಿದ್ದಾರೆ. ಮುಂದೂ ಲೌ ಸಿನೆಮಾಗಳು ಬರುತ್ತವೆ. ಎಲ್ಲಿವರೆಗೆ ಈ ಪ್ರಪಂಚ ಇರುತ್ತೊ ಅಲ್ಲಿವರೆಗೆ ಲೌ ಇರುತ್ತೆ. ನೋಡರೂ ಇರುತ್ತಾರೆ.
ಕಾಗೆಗೆ ಆಹಾರ ಸಿಗೋದು, ಪತ್ರಕರ್ತರಿಗೆ ಸುದ್ದಿ ಸಿದೋದೂ ಒಂದೇ. ಹಾಗೆ ಜನರಿಗೆ ಯಾರಾದ್ರೂ ಲೌ ಮಾಡ್ತಾ ಇರೋ ವಿಷ್ಯ ಗೊತ್ತಾಗೋದು ಕೂಡ. ಪ್ರತಿಯೊಬ್ಬರಿಗೂ ಪರಿಚಿತರ, ಅಕ್ಕಪಕ್ಕದ ಮನೆಯ ಹುಡುಗ- ಹುಡುಗಿಯರ ಲೌ ವಿಷಯ ಮಾತಾಡಬೇಕೆಂದರೆ ಎಲ್ಲಿಲ್ಲದ ಆಸಕ್ತಿ. ಯಾವಾಗ್ಲೂ ಲೌ ಮಾಡೋರು ನಮ್ಮ ವಿಷ್ಯ ಯಾರಿಗೂ ಗೊತ್ತಿಲ್ಲ ಅಂದುಕೊಂಡಿರ್‍ತಾರೆ. ಆದರೆ ಅದು ಎಲ್ಲರಿಗೂ ಗೊತ್ತಾಗ್ತಾ ಇರುತ್ತೆ. ಯಾರೂ ಎದುರಿಗೆ ಹೇಳಿರಲ್ಲ ಅಷ್ಟೆ.
ಕಾಲೇಜಲ್ಲಂತೂ ಹುಡ್ಗ- ಹುಡ್ಗಿ ಪ್ರೀತಿಸ್ತಾ ಇರೋ ವಿಷ್ಯ ಅವರಿಗಿಂತ ಮೊದಲೇ ಬೇರೆಯವರಿಗೆ ಗೊತ್ತಾಗಿರುತ್ತೆ! ಎಲ್ಲರ ಬಾಯಲ್ಲೂ ಅವರ ಲೌ ಸುದ್ದೀನೆ. ದಕ್ಷಿಣ ಕನ್ನಡ- ಉಡುಪಿಯಲ್ಲಿ ಲೌ ಮಾಡಿ ಓಡಿ ಹೋಗೋರು ಜಾಸ್ತಿ. (ಈ ಲವ್ವರ್‌ಗಳು ಓಡಿ ಹೋಗಿ ಯಾಕೆ ಸುಮ್ನೆ ಸುಸ್ತು ಮಾಡಿಕೋತಾರೆ? ಬಸ್ಸೊ, ರೈಲೊ, ಬೈಕೊ ಹತ್ತಿ ಹೋಗ್ಬೋದಿತ್ತು. ಅಲ್ವಾ? ಅಂತ ಎಷ್ಟೋ ಸಾರಿ ಅನ್ನಿಸಿದೆ) ಪೇಟೆಗಳಲ್ಲಿ ಹೇಗೋ ನಡೆಯುತ್ತೆ. ಆಚೆಯವರಿಗೆ ಈಚೆಯವರ ಪರಿಚಯ ಇಲ್ಲ. ಈಚೆವರಿಗೆ ಆಚೆಯವರ ಪರಿಚಯ ಇಲ್ಲ. ಎಷ್ಟೋ ಸಾರಿ ಪತ್ರಿಕೆಯಲ್ಲಿ ಬಂದ ಮೇಲೆಯೇ ಪಕ್ಕದ ಮನೆ ಹುಡ್ಗಿ ಪರಾರಿಯಾಗಿರೋದು ಇವರಿಗೆ ಗೊತ್ತಾಗುತ್ತೆ. ಆಮೇಲೂ ಇವರೇನೂ ಅವರ ಬಿ ಕೇಳಲು ಹೋಗೀದಿಲ್ಲ. ಹೀಗಾಗಿ ಅಷ್ಟು ಸಮಸ್ಯೆ ಆಗಲ್ಲ.
ಹಳ್ಳಿಯಲ್ಲಿ ಯಾರಾದ್ರೂ ಲೌ ಮಾಡಿದ್ರೆ ಮುಗ್ದೇ ಹೋಯ್ತು. ಹಲ್ಲು ಬಿದ್ದು ಹೋದವರ ಬಾಯಲ್ಲೂ ಅದೇ ಸುದ್ದಿ. ಇಡೀ ಊರ ತುಂಬಾ, ಜನರ ಬಾಯು ತುಂಬಾ ಅವರ ಪ್ರೀತಿಯ ವಿಷ್ಯವೇ. ಓಡಿ ಹೋದರಂತೂ ಅವರ ಅಪ್ಪ-ಅಮ್ಮ ಊರೇ ಬಿಡಬೇಕು ಅನ್ನುವಂಥ ಸ್ಥಿತಿ ನಿರ್ಮಾಣವಾಗಿಬಿಡುತ್ತದೆ.
ಒಮ್ಮೆ ನಾನು ಶಾಲೆಯಿಂದ ಮನೆಗೆ ಬರುವಾಗ ನನ್ನ ಅಮ್ಮಮ್ಮ ಗಿರಿಜಜ್ಜಿ ಜತೆ ಲಕ್ಷ್ಮಮ್ಮ ಅನ್ನೋ ಬೊಚ್ಚು ಬಾಯಿಯ ಅಜ್ಜಿ ಸುದ್ದಿ ಹೇಳ್ತಾ ಇದ್ರು. ಗಂಭೀರ ಚರ್ಚೆಯೇ ಇರಬೇಕು ಅಂತ ಕೈಯಲ್ಲಿ ಅಮ್ಮ ಕೊಟ್ಟ ದೋಸೆ ಪ್ಲೇಟ್ ಹಿಡಿದು ಸ್ವಲ್ಪ ಅತ್ತ ಕಿವಿ ಇಟ್ಟೆ. ಕುತೂಹಲ ನೋಡಿ. ಹೊಟ್ಟೆ ಹಸಿವಿನ ಜತೆ ಸುದ್ದಿ ಹಸಿವು ತೀರಿಸಿಕೊಳ್ಳುವ ಬಯಕೆ. ಅದೇನೋ "ಅವರದ್ದು ಹೌ ಮ್ಯಾರೇಜಂತೆ’ ಅನ್ನೋ ಶಬ್ಧ ಕಿವಿಗೆ ಬಿತ್ತು. ಇದೇನಪ್ಪ? ಹೌವ್ವು? ಯಾವತ್ತೂ ಕೇಳೇ ಇಲ್ವಲ್ಲ. ಆದ್ರೂ ಪರ್‍ವಾಗಿಲ್ಲ ಮ್ಯಾರೇಜ್ (ಮದುವೆ) ವಿಷ್ಯ ಇದೆ ಅಂದ್ಕೂಡ್ಲೆ ಆಸಕ್ತಿ ಇನ್ನಷ್ಟು ಜಾಸ್ತಿಯಾಯ್ತು. ಸರಿಯಾಗಿ ವಿಚಾರಿಸಿದ್ರೆ, ಊರಲ್ಲಿ ಯಾರದ್ದೋ ಮದುವೆ ನಡೆದಿತ್ತು ಅವತ್ತು. ಆ ಅಜ್ಜಿ ಮದುವೆಗೆ ಹೋಗಿ ಬಂದಿದ್ದರು.
ಕೇಳಲಾರದ ಕಿವಿಯ ಮೂಲಕ ಕೇಳಿಸಿಕೊಂಡು ಲೌ ಮ್ಯಾರೇಜು ಅನ್ನೋದನ್ನೇ ಹೌ ಮ್ಯಾರೇಜು ಅಂದಿತ್ತು ಅಜ್ಜಿ! (ಮದುವೆ ನೋಇದವರು ಹೌ ಹಾರಿದ್ದರೆ ಅದನ್ನು ಹೌ ಮ್ಯಾರೇಜು ಎಂದು ಕರೆದಿದ್ದರೆ ಸರಿಯಪ್ಪ) ಸರಿಯಾಗಿ ಗೊತ್ತಿಲ್ಲದೇ ಹೋದ್ರೂ ಇಂಗ್ಲಿಷ್ ಮಾತಾಡೋ ಚಟ!
ಇಷ್ಟೆಲ್ಲ ಯಾಕೆ ಹೇಳ್ತಾ ಇದ್ದೀನಿ ಅಂದ್ರೆ ಮಂಗಳೂರು ಸುತ್ತಮುತ್ತ ಲೌ ಮಾಡೋಕೂ ಒಂದು ವಿಸಿಟಿಂಗ್ ಕಾರ್ಡ್ ಹುಟ್ಕೊಂಡಿದೆ! ನಮ್ಮ ಕಚೇರಿಯ ಗೆಳೆಯ ವಸಂತ ಅದನ್ನು ನಂಗೆ ತಂದು ಕೊಟ್ಟಿದ್ದ. ಹಂಗೆ ನೋಡಿದ್ರೆ ಇದನ್ನ ವಿಸಿಟಿಂಗ್ ಕಾರ್ಡ್ ಅನ್ನೋದೇ ತಪ್ಪು. ಇದು ಲೌ ಕಾರ್ಡು. ಹೆಸರಿರೋ ಜಾಗದಲ್ಲಿ ಯು.ಆರ್. ಮೈ ಲವ್ ಅಂತಿದೆ. ದೂರವಾಣಿ ನಂಬರ್ ಇರಬೇಕಾಗಿದ್ದಲ್ಲಿ ಐ ಲವ್ ಯು, ಟೆಲೆಕ್ಸ್ ನಂಬರ್ ಜಾಗದಲ್ಲಿ ಲವ್ ಮಿ, ಫ್ಯಾಕ್ಸ್ ನಂಬರ್ ಜಾಗದಲ್ಲಿ ಲೈಕ್ ಮಿ ಅಂತ ಬರೆಯಲಾಗಿದೆ. ಮನೆ ವಿಳಾಸದ ಸ್ಥಳದಲ್ಲಿ ಇನ್ ಮೈ ಹಾರ್ಟ್ ಅಂತಿದೆ. ಇಷ್ಟೇ ಆಗಿದ್ದರೆ ಬಹುಶಃ ಅದರ ಬಗ್ಗೆ ಬರೆಯುತ್ತಲೇ ಇರಲಿಲ್ಲವೇನೊ? ಅಥವಾ ಒಳ್ಳೆ ಕ್ರಿಯೇಟಿವಿಟಿ ಎಂದು ಬರೆಯಬಹುದಿತ್ತೇನೋ. ಆದರೆ...
ಕಾರ್ಡಿನ ಕೆಳ ಭಾಗದಲ್ಲಿ "ನಾನು ನಿನ್ನೊಂದಿಗೆ "ಡೇಟಿಂಗ್’ ಹೋಗಲು ಇಟ್ಟಪಡುತ್ತೇನೆ. ನಿಂಗೂ ಇಷ್ಟವಿದ್ದಲ್ಲಿ ಈ ಕಾರ್ಡ್ ಇಟ್ಟುಕೊ. ಇಲ್ಲವಾದಲ್ಲಿ ಹಿಂತಿರುಗಿಸು ಅಂತ ಇಂಗ್ಲಿಷ್‌ನಲ್ಲಿ ಬರೆದಿದೆ!! ಎಲ್ಲಿಗೆ ಬಂತು ಲವ್ವು? ಒಂದು ರೂಪಾಯಿಯ ವಿಸಿಟಿಂಗ್ ಕಾರ್ಡ್‌ಗೆ ಇಳಿದುಬಿಟ್ಟಿತಾ? ಮನಸ್ಸು-ಮನಸ್ಸುಗಳ ನಡುವಿನ ಪ್ರೀತಿಯನ್ನ, ಸೆಕ್ಸಿನ ದೃಷ್ಟಿಯಿಂದಲೇ ಹೇಳುವುದಾದರೆ ದೇಹ-ದೇಹಗಳ ನಡುವಿನ ಬಂಧವನ್ನ ಕೇವಲ ಒಂದು ಕಾಗದದ ನಿರ್ಜೀವ ಕಾರ್ಡ್‌ಗೆ ಇಳಿಸಲಾಗಿದೆ. ನೇರವಾಗಿ...
ನೀನಂದ್ರೆ ನಂಗಿಷ್ಟ
ನಿನ್ನ ಮಾತಂದ್ರೆ ನಂಗಿಷ್ಟ (ಅಥವಾ ತುಂಬ ಕಷ್ಟ) ಅಂತಲೋ. ಇಲ್ಲಾ
ನಿನ್ನ ಎತ್ತಿ ಕೊಳ್ಲಾ
ನಿನ್ನ ಅಪ್ಪಿ ಕೊಳ್ಲಾ ಅಂತ ಕೇಳೋದು ಬಿಟ್ಟು ಒಂದು ವಿಸಿಟಿಂಗ್ ಕಾರ್ಡ್ ಕೊಡೋದು ಎಷ್ಟು ನೀರಸ ಅಲ್ವಾ? ಇದನ್ನೆಲ್ಲ ನೋಡ್ತಿದ್ರೆ ನಮ್ಮ ಹುಡುಗ್ರಿಗೆ ಧೈರ್ಯ ಕಡಿಮೆ ಆಗ್ತಿದ್ಯೇನೋ ಅಂತ ಅನುಮಾನ ಬರ್‍ತಿದೆ.
ಓ ದೇವರೆ ಈ ಲೌ ಕಾರ್ಡ್ ಕೋಡೋರ್‍ನ, ತಗೊಳೋರ್‍ನ ಕಾಪಾಡು!! ಅಂತ ವಿನಂತಿಸೋದ ಬಿಟ್ಟು ಬೇರೇನೂ ಮಾಡಲು ಸಾಧ್ಯವಿಲ್ಲ.
ಔಟ್‌ಸ್ವಿಂಗ್: ಲವ್ವಲ್ಲಿ ಹಲವು ವಿಧ. ಪತ್ರ ಪ್ರೇಮ, ಪೆನ್ ಪ್ರೇಮ, ನೋಟ ಪ್ರೇಮ (ನೋಡಿ ನೋಡಿ ಹುಟ್ಟಿದ ಪ್ರೀತಿ) ಹೀಗೆ ಹಲವು ವಿಧ. ಮೊದಲ ನೋಟದ ಲವ್ವು ಇದೆಯಲ್ಲ ಅದನ್ನ ಲವ್ ಅಟ್ ಫಸ್ಟ್ ಸೈಟ್ ಅಂತಾರೆ. ನಾನ್ಹೇಳೋದ್ ಏನಂದ್ರೆ ಒಂದು ಬೀದಿಯ ಕೊನೇ ಮನೆಯ ಹುಡುಗಿಯನ್ನು ಲೌ ಮಾಡಿದ್ರೆ ಅದನ್ನು ಲೌ ಅಟ್ ಲಾಸ್ಟ್ ಸೈಟ್ (ಜಾಗ) ಅಂತ ಕರೀಬಹುದಲ್ವಾ?

ಸೊರಕೆ ಹೇಳಿದ ಬೆಕ್ಕಿನ ಕಥೆ


ವಿನಯ ಕುಮಾರ್ ಸೊರಕೆ. ಹೆಸರು ಕೇಳದವರಾರು? ನಮ್ಮ ಪಕ್ಕದ ಊರಿನ ಮಾಜಿ ಸಂಸದರಲ್ಲವೆ. ನೀವು ಕೆಲವರು ಅವರ ಭಾಷಣ ಕೇಳಿರಬಹುದು ಅಥವಾ ಕೇಳಿರದೇ ಇರಬಹುದು. ಆದರೆ ಅವರು ಹೇಳಿದ ಈ ಕಥೆ ಕೇಳಿರಲಾರಿರಿ.
ಸೊರಕೆ ಅವರು ಭಾಷಣಕ್ಕೆ ನಿಂತರೆ ಸಾಮಾನ್ಯವಾಗಿ ಒಂದು ಕಥೆ ಗ್ಯಾರಂಟಿ. ಮೋಟಮ್ಮ ಭಾಷಣದ ಜತೆ ಹಾಡು ಫ್ರೀ ಇದ್ದಂತೆ. ಆದರೆ ಅವರು ಹೇಳಿದ ಕೆಲವು ಕಥೆಗಳಲ್ಲಿ ನನಗಿಷ್ಟವಾದದ್ದು "ಬೆಕ್ಕಿನ ಕಥೆ’. ಅದನ್ನು ನಿಮಗೇ ಹೇಳಲೇ ಬೇಕು.
ರೋಶನಿ ನಿಲಯದಲ್ಲಿ ಒಂದು ಕಾರ್ಯಕ್ರಮ. ಸೊರಕೆ ಉದ್ಘಾಟಕರು. ಅಲ್ಲಿ ಹೇಳಿದ ಕಥೆ ಇದು.
ಒಮ್ಮೆ ಬೆಕ್ಕುಗಳ ಕುಸ್ತಿ ಪಂದ್ಯ. (ಕೋಳಿ ಹಂಕ ಇದ್ದಂತೆ) ಸೊರಕೆ ಹೇಳಿದ್ದು ಕ್ರಿಕೆಟ್ ವಿಶ್ವಕಪ್ ಇದ್ದಂತೆ ಬೆಕ್ಕುಗಳ ವಿಶ್ವಕಪ್. ಸಹಜವಾಗಿ ಎಲ್ಲರಿಗೂ ಕುತೂಹಲ ಯಾವ ದೇಶದ ಬೆಕ್ಕು ಗೆಲ್ಲಬಹುದು?
ಪಂದ್ಯ ಆರಂಭಗೊಂಡಿತು. ಅಮೆರಿಕದ ಬೆಕ್ಕು ಎಲ್ಲ ದೇಶಗಳ ಬೆಕ್ಕುಗಳನ್ನು ಸೋಲಿಸುತ್ತಾ ಫೈನಲ್ ತಲುಪಿತು. ಪೈನಲ್‌ನಲ್ಲೂ ಅಮೆರಿಕ ಬೆಕ್ಕೇ ಗೆಲ್ಲ ಬೇಕೆ. ನಂತರ ಅದರ ಮಾಲಿಕ ಕೇಳಿದ ಯವುದದರೂ ಬೆಕ್ಕು ನನ್ನ ಬೆಕ್ಕಿನೊಂದಿಗೆ ಹೊಡೆದಾಡಿ ಗೆಲ್ಲುವುದಾದರೆ ಮುಂದೆ ಬನ್ನಿ. ಗೆದ್ದವರಿಗೆ ವಿಶ್ವ ಕಪ್ ನೀಡುತ್ತೇನೆ ಅಂತ ಘೋಷಿಸಿದ.
ಆಗ ನೆರೆದಿದ್ದ ಗುಂಪಿನಲ್ಲಿ ಹಿಂದೆಲ್ಲೋ ಕುಳಿತಿದ್ದ ಸೆಮಾಲಿಯಾ ದೇಶದ ಪ್ರಜೆಯೊಬ್ಬ ತನ್ನ ಬೆಕ್ಕು ಅಮೆರಿಕ ಬೆಕ್ಕಿನೊಂದಿಗೆ ಸೆಣಸಲಿದೆ ಎಂದ. ಸೊಮಲಿಯಾದವನ ಬೆಕ್ಕೋ ಆಹಾರವಿಲ್ಲದೆ ಬಡಕಲಾಗಿ, ಎಲುಬು ಕಾಣುತ್ತಿತ್ತು. ಆತ ಜನರ ಗುಂಪಿನ ನಡುವೆ ಹೋಗುವಾಗ ಕೆಲವರು ಕೇಳಿದರು... ಅಲ್ಲಪ್ಪ. ಸೊಮಾಲಿಯಾದಲ್ಲಿ ಮನುಷ್ಯರಿಗೇ ತಿನ್ನಲು ಆಹಾರವಿಲ್ಲ. ಇನ್ನು ಬೆಕ್ಕಿಗೆ ಎಲ್ಲಿಂದ ಆಹಾರ. ಆಹಾರವಿಲ್ಲದೇ ಬಡಕಲಾಗಿರುವ ಬೆಕ್ಕು ಅಮೆರಿಕದ ದಷ್ಟಪುಷ್ಟವಾದ ಬೆಕ್ಕಿನೊಡನೆ ಹೋರಾಡಿ ಗೆಲ್ಲಲು ಸಾಧ್ಯವೇ. ಈ ಹುಚ್ಚಾಟ ಎಲ್ಲ ಬೇಡ. ಸುಮ್ಮನಿರು ಎಂದು ಕಟಕಿಯಾಡಿದರು. ಸೊಮಲಿಯಾ ಪ್ರಜೆ ಮಾತನಾಡಲಿಲ್ಲ.
ಸರಿ. ಅಮೆರಿಕ ಬೆಕ್ಕಿಗೂ ಸೊಮಾಲಿಯಾ ಬೆಕ್ಕಿಗೂ ಜಗಳ ಆರಂಭವಾಯಿತು. ಆಗ ಸೊಮಾಲಿಯಾ ಬೆಕ್ಕು ಕೊಟ್ಟ ಒಂದೇ ಹೊಡೆತಕ್ಕೆ ಅಮೆರಿಕ ಬೆಕ್ಕು ಬೊಬ್ಬೆ ಹೊಡೆಯುತ್ತಾ ಓಡಿ ಪರಾರಿಯಾಯಿತು. ಸೊಮಾಲಿಯಾದ ಬೆಕ್ಕೇ ವಿಶ್ವ ಚಾಂಪಿಯನ್ ಎಂದು ಘೋಷಿಸಲಾಯ್ತು!
ನಂತರ ಅಲ್ಲಿ ನೆರೆದಿದ್ದ ಜನ ಬಂದು "ನಿನ್ನ ಬೆಕ್ಕು ಅಮೆರಿಕ ಬೆಕ್ಕನ್ನು ಸೋಲಿಸಲು ಕಾರಣ ಏನು. ಅದಕ್ಕೆ ನೀನು ಯಾವ ರೀತಿ ತರಬೇತಿ ನೀಡಿದ್ದೆ’ ಎಂದು ಅಲ್ಲಿ ನೆರೆದಿದ್ದ ಕೆಲವರು ಕೇಳಿದರು. ಬೇರೆ ದೇಶದ ಬೆಕ್ಕುಗಳ ಕೋಚ್‌ಗಳು ಕೂಡ ಸುತ್ತ ನೆರೆದು ಇದನ್ನೇ ಕೇಳಿದರು.
ಆಗ ಸೊಮಲಿಯಾ ಪ್ರಜೆ ತಣ್ಣಗೆ ಉತ್ತರಿಸಿದ. ತರಬೇತಿಯೂ ಇಲ್ಲ ಏನೂ ಇಲ್ಲ. ಇದು ಬೆಕ್ಕೂ ಅಲ್ಲ. ನನ್ನ ಕೈಲಿರುವುದು ಹುಲಿ. ತಿನ್ನಲು ಏನೂ ಸಿಗದೇ ಬೆಕ್ಕಿನ ಹಾಗೆ ಕಾಣುತ್ತೆ ಅಷ್ಟೆ ಅಂದನಂತೆ!

ಪ್ರಶ್ನೆ- ಉತ್ತರ

* ಈಗೀಗ ಶಾಲಾ ಮಕ್ಕಳನ್ನು ಯಾಕೆ ಶಾಲೆಗೆ ಹೋಗುತ್ತೀರಿ ಎಂದರೆ ಊಟ ಮಾಡಲು ಎನ್ನುತ್ತಾರಲ್ಲ?
ಪುಣ್ಯ. ಊಟ ಮಾಡಿ ನಿದ್ರಿಸಲು ಅನ್ನುತ್ತಿಲ್ಲ.

* ಕಂಡುಹಿಡಿಯಬೇಕಾದ್ದನ್ನೆಲ್ಲ ಕಂಡುಹಿಡಿದಾಯಿತು. ನಾನೇನು ಕಂಡುಹಿಡಿಯಲಿ?
ಏನನ್ನು ಕಂಡುಹಿಡಿಯಬೇಕು ಎಂಬುದನ್ನು!

* ಇಂದಿನ ಮಕ್ಕಳು ಮುಂದಿನ ಪ್ರಜೆಗಳು. ಇಂದಿನ ಯುವಕರು ಮುಂದಿನ...?
ಮುದುಕರು!!

* ಚಿತ್ರರಂಗದ ನಟ-ನಟಿಯರು ರಾಜಕೀಯ ಪ್ರವೇಶಿಸಿದರೆ ರಾಜಕಾರಣಿಗಳು ಏನು ಮಾಡಬೇಕು?
ಚಿತ್ರದಲ್ಲಿ ಅಜ್ಜ- ಅಜ್ಜಿ ಪಾರ್ಟ್ ಮಾಡಬೇಕು.

* ಮರದಿಂದ ಮರಕ್ಕೆ ಹಾರುವ ಕೋತಿಗೂ ಪಕ್ಷದಿಂದ ಪಕ್ಷದಿಂದ ಪಕ್ಷಕ್ಕೆ ಹಾರುವ ರಾಜಕಾರಣಿಗಳಿಗೂ ವತ್ಯಾಸ ಏನು?
ಬಾಲ ಮಾತ್ರ!

* ಅಂದ್ಹಾಗೆ ನಿನ್ನ ಲವ್ ಸ್ಟೋರಿ ಎಲ್ಲೀವರೆಗೆ ಬಂದಿದೆ?
ತುಟಿವರೆಗೆ!

* ಪ್ರತೀಕ್ಷಾ ಹಿಂದಿನ ಕಾಲದಲ್ಲಿ ಪತಿಯೇ ಪರದೈವ ಅಂತಿದ್ರು. ಈ ಕಾಲದಲ್ಲಿ?
ಪರಪತಿಯೇ ದೈವ ಅನ್ನೋಣವೇ?

* ಪಕ್ಕದ ಮನೆಯ ಹುಡುಗ ಆಂಟಿಯ ಜತೆ ಪರಾರಿಯಾಗಿದ್ದಾನೆ ಮುಂದೇನಾಗಬಹುದು?
ಹೆಚ್ಚೆಂದರೆ ಮಕ್ಕಳಾಗಬಹುದು!

* ಪ್ರೇಮಿಗಳು ಲಿಂಬೆ ರಸ ಕುಡಿಯಬಾರದು ಅನ್ನುತ್ತಾರಲ್ಲ?
"ಹಾಲಿ’ನಂಥ ಪ್ರೇಮದಲ್ಲಿ ಹುಳಿ ಹಿಂಡುವುದು ಬೇಡ ಅಂತ.

* ಇಂದಿನ ಕಂಪ್ಯೂಟರ್ ಯುಗದಲ್ಲಿ ಕಂಪ್ಯೂಟರ್ ಕಲಿ. ಮುಂದೆ?
ಗಲಿಬಿಲಿ!

* ೫೦ ವರ್ಷದ ಹಿಂದಿನ ರಾಜಕಾರಣಿಗಳಿಗೂ ಈಗಿನ ರಾಜಕಾರಣಿಗಳಿಗೂ ಇರುವ ವತ್ಯಾಸ ಏನು?
ಆಗ ಯುವಕರಾಗಿದ್ದರು. ಈಗ ಮುದುಕರಾಗಿದ್ದಾರೆ!

* ಗುಲಾಬಿ ಪ್ರೀತಿಯ ಸಂಕೇತವಾದರೆ ಮಲ್ಲಿಗೆ ಯಾವುದರ ಸಂಕೇತ?
ಮಲ್ಲಿಗೆ ಎಲ್ಲಿಗೆ ಹೋಗೋಣ ಎಂಬುದರ ಸಂಕೇತ!

* ಕವಿದ ಕತ್ತಲು ಮುದುಡಿದ ಪ್ರೀತಿಯ ಸಂಕೇತವೇ?
ಛೆ! ಛೆ! ಅದು ಪವರ್ ಕಟ್ ಸಂಕೇತ!!

* ಹಾಲಿನ ಮತ್ತು ಅಲ್ಕೋಹಾಲಿನ ಜಾಹೀರಾತಿಗೆ ಉಪೇಂದ್ರನೇ ಬೇಕು. ಯಾಕೆ?
ಯಾಕಂದ್ರೆ "ಉಪ್ಪಿ’ಗಿಂತ ರುಚಿ ಬೇರೆ ಇಲ್ಲ.

* ನಿಮ್ಮನ್ನು ವೀರಪ್ಪನ್ ಅಪಹರಿಸಿದ್ದರೆ ನೀವು ಏನು ಮಾಡುತ್ತೀರಿ?
"ನನ್ನಪ್ಪನ್ ಬಿಟ್ಟು ವೀರಪ್ಪನ್ ಜತೆ’ ಅಂತ ಕವನ ಸಂಕಲನ ಬರೀತೀನಿ.

* ಆಶ್ವಾಸನೆಗೆ ಕೊನೆ ಯಾವಾಗ?
ಆ"ಶ್ವಾಸ’ ನಿಂತಾಗ

* ರಾಜಕೀಯಕ್ಕೆ ಸೇರಿದ ವ್ಯಕ್ತಿಗಳಿಗೆ ಹೊಟ್ಟೆ ಉಬ್ಬಲು ಕಾರಣವೇನು?
ತಿಂದ ದುಡ್ಡು ಕರಗದೇ ಇರುವುದು.

* ಈಗಿನ ಹುಡುಗಿಯರು ಕೂದನ್ನು ಬಾಬ್‌ಕಟ್ ಮಾಡಲು ಕಾರಣ?
ಕೂದಲನ್ನಷ್ಟೇ ಅಲ್ಲ ಬಟ್ಟೆಯನ್ನೂ ಗಿಡ್ಡ ಮಾಡಿದ್ದಾರೆ.

Wednesday, April 18, 2007

ರಾಜ್ಯದಲ್ಲಿ ೩೭ ಮಂದಿ ಪಾಕಿಸ್ಥಾನಿಗಳು!!

ಒಂದಲ್ಲ ಎರಡಲ್ಲ ೩೭ ಮಂದಿ ಪಾಕಿಸ್ಥಾನೀಯರು ರಾಜ್ಯದಲ್ಲಿ ತಲೆ ಮರೆಸಿಕೊಂಡಿದ್ದಾರೆ! ಅವರಲ್ಲಿ ೧೬ ಮಂದಿ ಕ್ರಿಕೆಟ್ ವೀಕ್ಷಣೆಗೆಂದು ಬಂದವರು!!
ನಂಬೋದು ಕಷ್ಟ.ಆದರೂ ಸತ್ಯ. ೩೭ ಮಂದಿಲ್ಲಿ ೨೯ ಮಂದಿ ಬೆಂಗಳೂರಿನಲ್ಲಿ, ೬ ಮಂದಿ ಮೈಸೂರಿನಲ್ಲಿ, ತಲಾ ಒಬ್ಬರು ಮಂಗಳೂರು ಹಾಗೂ ಹುಬ್ಬಳ್ಳಿಗೆ ತೆರಳಿದ್ದು, ನಂತರ ಕಣ್ಮರೆಯಾಗಿದ್ದಾರೆ. ಇವರೆಲ್ಲ ಎಲ್ಲಿದ್ದಾರೆ? ಏನು ಮಾಡುತ್ತಿದ್ದಾರೆ? ಬದುಕಿದ್ದಾರಾ? ಸತ್ತಿದ್ದಾರಾ? ಇವರೇನು ಉಗ್ರಗಾಮಿಗಳಾ? ಅಲ್ಲವಾ? ಇದ್ಯಾವುದರ ಬಗ್ಗೆಯೂ ಪೊಲೀಸ್ ಇಲಾಖೆ ಬಳಿ, ಗುಪ್ತಚರ ಇಲಾಖೆ ಬಳಿ ಮಾಹಿತಿ ಇಲ್ಲ. ಹೆಚ್ಚಿನವರ ಫೋಟೋ ಕೂಡ ಇಲಾಖೆ ಬಳಿ ಇಲ್ಲ.
ಹೀಗೆ ಪಾಕಿಸ್ಥಾನದ ಪಾಸ್‌ಪೋರ್ಟ್, ವೀಸಾ ಹೊಂದಿದವರು ರಾಜ್ಯಕ್ಕೆ ಬಂದು ನಾಪತ್ತೆಯಾಗುತ್ತಿರುವುದು ಇಂದು ನಿನ್ನೆಯದಲ್ಲ. ೧೯೫೬ರಿಂದ ಇದು ಜಾರಿಯಲ್ಲಿದೆ. ಅವತ್ತಿನಿಂದ ಇವತ್ತಿನವರೆಗೂ ನಾಪತ್ತೆ ಆಗಿರುವ ಕೆಲವರಿದ್ದಾರೆ. ಇದರ ಬಗ್ಗೆ ಪೊಲೀಸ್ ಇಲಾಖೆ, ಸರಕಾರ ಗಂಭೀರವಾಗಿ ಚಿಂತಿಸಿಯೇ ಇಲ್ಲ
ಅಪರೂಪಕ್ಕೊಮ್ಮೆ ಉಗ್ರಗಾಮಿಗಳು ಪತ್ತೆಯಾದಾಗ, ಎಲ್ಲೋ ದಾಳಿಗಳು ನಡೆದಾಗ ಇವರನ್ನೆಲ್ಲ ಒಮ್ಮೆ ನೆನಪಿಸಿಕೊಂಡು ಮರೆತುಬಿಡಲಾಗುತ್ತದೆ.
ಕಾಣೆಯಾದವರು: ಅಬ್ದುಲ್ ಶೇಖ್ (ಈಗ ೬೩) ಅಬ್ದುಲ್ ವಹೀದ್ (೭೩), ಸಯ್ಯದ್ ಹಸನ್ ಪಾಶಾ (೬೭, ಮಂಡ್ಯ ಮತ್ತು ಬೆಂಗಳೂರಿನ ವಿಳಾಸ), ಖಾದರ್ ಯಾನೆ ಖಾದರ್ ಶರೀಫ್ (೭೩), ಗುಲಾಂ ನಬಿ (೬೩), ಮಹಮ್ಮದ್ (೬೩), ಖುಲಸೂಮ್ ಬಿ. (೭೮), ಅಬ್ದುಲ್ ಫತೇಹ್ (೪೫), ಅಬ್ದುಲ್ಲ (೭೦), ಮಹಮ್ಮದ್ ಅಲಿ (೫೦), ಮಹಮ್ಮದ್ (೪೬), ಶೌಕತ್ ಅಲಿ (೩೩), ಫಜ್ತರ್ ಖಾನ್ (೪೦) ಬೆಂಗಳೂರಿಗೆ ಬಂದು ಕಾಣೆಯಾದವರು. ಇವರಲ್ಲಿ ಮಹಮ್ಮದ್, ಖುಲ್ಸೂಮ್ ಮತ್ತು ಗುಲಾಮ್ ನಬಿ ಬೆಂಗಳೂರಿನಿಂದ ಮುಂಬಯಿಗೆ ತೆರಳಿದ ಬಗ್ಗೆ ದಾಖಲೆಗಳಿವೆ. ನಂತರ ಏನಾದರು ಎಂಬುದು ತಿಳಿದಿಲ್ಲ.
ವತ್ಥಮ್ ಖಾನ್ (೭೧) ಹುಬ್ಬಳ್ಳಿಯಲ್ಲಿ, ಅಬ್ದುಲ್ ಖಾದರ್ (೪೫) ಮಂಗಳೂರಿನಿಂದ ಕಾಣೆಯಾಗಿದ್ದಾರೆ. ಹಸನ್ ಅಲಿ (೪೭), ಅಬ್ದುಲ್ ಅಜೀಝ್ (೪೩), ಮಹಮ್ಮದ್ ಮೂಸಾ (೩೯), ಮೆಹಬೂಬ್ (೪೪), ಅಬ್ದುಲ್ ಇವರು ಮೈಸೂರು ನಗರದಿಂದ ಕಾಣೆಯಾದವರು. ಇವರೆಲ್ಲ ಮೈಸೂರಿಗೆ ಬಂದು ಹೋಟೆಲ್‌ನಲ್ಲಿ, ಮನೆಯಲ್ಲಿ ಉಳಿದುಕೊಂಡ ಆರಂಭಿಕ ಮಾಹಿತಿ ಮಾತ್ರ ಇದ್ದು, ನಂತರ ಮಾಹಿತಿ ಅಲಭ್ಯವಾಗಿದೆ.
೩೭ ಮಂದಿ ಪಾಕಿಸ್ಥಾನೀಯರಲ್ಲಿ ೧೬ ಮಂದಿ ಕ್ರಿಕೆಟ್ ಮ್ಯಾಚ್ ವೀಕ್ಷಣೆಗೆಂದು ೨೦೦೫ರಲ್ಲಿ ಆಗಮಿಸಿದವರು. ಜಾವೇದ್ ಆಸಿಫ್ (೪೯), ಅನ್ವರ್ (೩೮), ನೂರ್ ಮಹಮ್ಮದ್ (೩೦), ಫರ್‍ಹಾನ್ ಅಯೂಬ್ (೩೦), ಮೌಹುದ್ ಅನ್ವರ್ (೫೯), ಅಬ್ದುಲ್ ವಹೀದ್ ಬಟ್ (೫೦), ಮಹಮ್ಮದ್ ನೂರ್ (೩೮), ಇನಾಯತ್ ಅಲಿ ಖಾನ್ (೪೩), ಮಹಮ್ಮದ್ ಅಕ್ಮಲ್ (೪೧), ಖುರ್ರಂ ಶಹಾದ್ ಅಲಿ (೫೬), ಬಶೀರ್ ಅಹ್ಮದ್ (೨೪), ಬಝ್ ಮಹಮ್ಮದ್ (೨೯), ಮೌಹುದ್ ಬಿಲಾಲ್ (೩೦) ಇವರೆಲ್ಲರೂ ಬೆಂಗಳೂರಿನಿಂದ ಕಾಣೆಯಾಗಿದ್ದಾರೆ.
ಮೈಸೂರಿನಲ್ಲಿ ಬಂಧಿತನಾದ ಇಮ್ರಾನ್ ಎರಡು ತಿಂಗಳಲ್ಲಿ ಲೈಸೆನ್ಸ್, ಪಡಿತರ ಕಾರ್ಡ್ ಮಾಡಿಸಿಕೊಂಡಿದ್ದ. ಇವರು ಅಷ್ಟೆಲ್ಲ ವರ್ಷದಿಂದ ಇಲ್ಲಿದ್ದು, ಏನೇನು ಮಾಡಿರಬಹುದು? ಎಷ್ಟು ಸಂಪರ್ಕ ಬೆಳೆಸಿರಬಹುದು? ಇನ್ನೆಷ್ಟು ಮಂದಿಗೆ ಆಶ್ರಯ ನೀಡಿರಬಹುದು?

Tuesday, April 17, 2007

ದುಬಾರಿ ಫರ್ನೀಚರ್ ಐಜಿ ಕಾ ಡರ್

ಠಾಣೆಯಲ್ಲಿ ಸೌಲಭ್ಯ ಇಲ್ಲದಿದ್ದರೂ ಪರವಾಗಿಲ್ಲ ಅಧಿಕಾರಿಗಳ ಚೇಂಬರ್ ಜಗಜಗಿಸಬೇಕು ಎಂಬುದು ಪೊಲೀಸ್ ಇಲಾಖೆಯ ಅಲಿಖಿತ ನಿಯಮ. ಅಧಿಕಾರಿಗಳು ಬದಲಾದಂತೆ ಅವರ ಚೇಂಬರ್‌ನ ಸ್ಥಿತಿ- ಗತಿ ಕೂಡ ಬದಲಾಗುತ್ತದೆ. ಒಬ್ಬ ಇನ್‌ಸ್ಪೆಕ್ಟರ್ ಅವರು ಆಸೆಪಟ್ಟ ಠಾಣೆಗೆ ವರ್ಗವಾಗಿ ಬರುತ್ತಿದ್ದಂತೆ ಅಲ್ಲಿರುವ ಟೇಬಲ್, ಕುರ್ಚಿ ಯಾವುದೂ ಸರಿಯಿಲ್ಲ ಅನ್ನಿಸಿತು. ಸರಿ ಅವರ ಅಂತಸ್ತಿಗೆ ತಕ್ಕಂತೆ ಚೇಂಬರ್‌ನಲ್ಲಿರುವ ಫರ್ನೀಚರ್ ಬದಲಾಯಿಸಲು ಮನಸು ಮಾಡಿದರು. ಅವರ ಗೆಳೆಯರ ಸಹಾಯದಿಂದ ಚೇಂಬರ್‌ಗೊಂದು ಹೊಸ ಪೊಗದಸ್ತಾದ ಕುರ್ಚಿ, ಟೇಬಲ್, ಅದಕ್ಕೊಂದು ಗ್ಲಾಸು ಎಲ್ಲ ಸಿದ್ಧವಾಯಿತು. ಅದರ ಒಟ್ಟೂ ವೆಚ್ಚ ೨೫-೩೦ ಸಾವಿರ ರೂ. ಅಂತ ಕೇಳಿದರೆ ನಮಗೆ ಅಚ್ಚರಿಯಾಗುತ್ತದೆ.
ಹೀಗೆ ಇನ್‌ಸ್ಪೆಕ್ಟರ್ ಅವರು ಹೊಸ ಕುರ್ಚಿಯಲ್ಲಿ ಹಾಯಾಗಿ ಕಳಿತು ಖುಶಿಯಿಂದ ಕಾಲ ಕಳೆಯುತ್ತಿರಬೇಕಾದರೆ ಒಂದು ದಿನ ಐಜಿ ಎಚ್.ಎನ್. ಸತ್ಯನಾರಾಯಣ ರಾವ್ ಅವರು ಇನ್‌ಸ್ಪೆಕ್ಷನ್‌ಗೆ ಬರುತ್ತಾರೆಂದಾಯಿತು. ಇನ್‌ಸ್ಪೆಕ್ಟರ್‌ಗೆ ಟೆನ್ಶನ್ ಶುರುವಾಯಿತು. ಸತ್ಯನಾರಾಯಣ ರಾವ್ ಅವರಿಗೆ ಕೆಲಸದ ಬಗ್ಗೆ ಆಸಕ್ತಿ ಇರುವವರ ಬಗ್ಗೆ ಪ್ರೀತಿ ಇರುತ್ತೆ ಹೊರತು, ಚೇಂಬರ್ ಪಾಶ್ ಇರಿಸಿಕೊಂಡವರ ಬಗ್ಗೆ ಅಲ್ಲ ಎಂಬುದು ಆ ಇನ್‌ಸ್ಪೆಕ್ಟರ್‌ಗೂ ಗೊತ್ತು. ಈಗೇನು ಮಾಡುವುದು? ಯೋಚನೆ ಮಾಡಿದ ಇನ್‌ಸ್ಪೆಕ್ಟರ್, ಐಜಿ ಇನ್‌ಸ್ಪೆಕ್ಷನ್‌ಗೆ ಆಗಮಿಸುವ ಒಂದು ದಿನ ಮೊದಲೇ ತಮ್ಮ ಚೇಂಬರ್‌ನಿಂದ ಹೊಸ ಫರ್ನೀಚರ್‌ಗಳೆನ್ನೆಲ್ಲ ಎತ್ತಂಗಡಿ ಮಾಡಿದರು. ಹಳೆ ಫರ್ನೀಚರ್‌ಗಳು ಮತ್ತೆ ಚೇಂಬರ್‌ನಲ್ಲಿ ಪ್ರತಿಷ್ಠಾಪನೆಗೊಂಡವು! ಹಳೇ ಫನೀಚರ್ ನೋಡಿದ ಐಜಿ, ಪಾಪ ಇನ್‌ಸ್ಪೆಕ್ಟರ್ ತುಂಬ ಸಾಚಾ ಮನುಷ್ಯ ಎಂದುಕೊಳ್ಳಲಿ ಎಂಬುದು ಅವರ ಪ್ಲಾನ್ ಆಗಿತ್ತು.
ಐಜಿ ಸತ್ಯನಾರಾಯಣ ರಾವ್ ಅವರು ಇನ್‌ಸ್ಪೆಕ್ಷನ್‌ನಲ್ಲಿ ಇನ್‌ಸ್ಪೆಕ್ಟರನ್ನು ಸರಿಯಾಗಿ ತೊಳೆದರು ಎಂಬುದು ಠಾಣೆಯ ಒಳಗಿನವರೆ ಹೇಳುತ್ತಾರೆ. ಅದೇನೇ ಇರಲಿ ಐಜಿ ಇನ್‌ಸ್ಪೆಕ್ಷನ್ ಮುಗಿಯುತ್ತಿದ್ದಂತೆ ಹೊಸ ಫರ್ನೀಚರ್‌ಗಳು ಮತ್ತೆಇನ್‌ಸ್ಪೆಕ್ಟರ್ ಚೇಂಬರನ್ನು ಅಲಂಕರಿಸಿದೆ. ಐಜಿ ಒಮ್ಮೆ ಅನಿರೀಕ್ಷಿತವಾಗಿ ರಾತ್ರಿ ಗಸ್ತಿಗೆ ಆಗಮಿಸಿದ್ದು ನಿಮಗೆ ಗೊತ್ತೇ ಇದೆ. ಅವತ್ತು ಇದೇ ಇನ್‌ಸ್ಪೆಕ್ಟರ್‌ಗೆ ಐಜಿ ಸರಿಯಾಗಿ ಬೈದಿದ್ದರು. ಈ ಇನ್‌ಸ್ಪೆಕ್ಟರ್‌ರ ಕಚೇರಿಯಿಂದ ಕಾಣಿಸುವಂತಿರುವ ಬಾರ್ ಒಂದು ತಡ ರಾತ್ರಿಯೂ ತೆರೆದಿತ್ತು. ಇದರಿಂದ ಕುಪಿತರಾದ ಐಜಿಯವರು ಇನ್‌ಸ್ಪೆಕ್ಟರ್‌ಗೆ ವಯರ್‌ಲೆಸ್‌ನಲ್ಲಿ ಮಾತನಾಡಿ, ನಿಮ್ಮ ಠಾಣೆ ಮುಚ್ಚುವಂತೆ ಸಕಾರಕ್ಕೆ ಮನವಿ ಸಲ್ಲಿಸಿ. ನಿಮ್ಮ ಠಾಣೆಯೆದುರೇ ಬಾರ್ ತೆರೆದಿದೆ. ಇನ್ನು ಬೇರೆ ಕಡೆ ನೀವೇನು ಬಂದ್ ಮಾಡುತ್ತೀರಿ? ಸರಕಾರದ ಅನ್ನ ತಿನ್ನುವ ಬಗ್ಗೆ ಗೌರವ ಇದ್ದರೆ ನಿಯತ್ತಿನಿಂದ ಕಲಸ ಮಾಡಿ ಎಂದು ದಬಾಯಿಸಿದ್ದರು. ಇತ್ತ ಕೊಲೆ ಪ್ರಕರಣದ ಆರೋಪಿಯೊಬ್ಬ ಸಿಗಲಿಲ್ಲ ಎಂಬ ಕಾರಣಕ್ಕೆ ಎಸ್ಪಿ ಕೂಡ ಆಗಾಗ ಈ ಇನ್‌ಸ್ಪೆಕ್ಟರನ್ನು ಸರಿಯಾಗಿ ವಿಚಾರಿಸಿಕೊಳ್ಳುತ್ತಿದ್ದಾರೆ.
ಬುಲ್ ಶಾಟ್: ಒಳ್ಳೆ ಮೆತ್ತಗಿನ ಕುರ್ಚಿಯಿದೆ, ಚೆಂದದ ಟೇಬಲ್ ಇದೆ. ಚೇಂಬರ್ ಸುಂದರವಾಗಿದೆ. ಆದರೇನು ಮಾಡೋದು, ಅದರಲ್ಲಿ ಹಾಯಾಗಿ ಕುಳಿತು ಖುಶಿಪಡುವುದು ಇನ್‌ಸ್ಪೆಕ್ಟರ್ ಹಣೆಯಲ್ಲಿ ಬರೆದಿಲ್ಲ. ಎಲ್ಲ ಅವರವರ ನಸೀಬು!

ಕರೆಂಟು ಇಲ್ಲದ ಮೇಲೆ

ತುಥ್!
ಯಾವಾಗ ನೋಡಿದರೂ ಕೈ ಕೊಡುವ ಕರೆಂಟು. ಈಗೀಗ ಸರಿಯಾಗಿ ರಾತ್ರಿ ೯.೩೦ಕ್ಕೆ ಹೋಗುತ್ತಿದೆ. ಹೀಗಾಗಿ ನೋಡುತ್ತಿದ್ದ ಒಂದೇ ಒಂದು ದಾರಾವಾಹಿಯೂ ತಪ್ಪಿ ಹೋಗುತ್ತಿದೆ. ನನ್ನ ನೆಚ್ಚಿನ ನಟ ಅನಂತನಾಗ್ ಇದ್ದಾರೆ ಎಂಬ ಒಂದೇ ಕಾರಣಕ್ಕೆ ಮತ್ತು ಕಥೆ ಪರವಾಗಿಲ್ಲ ಎಂದುಕೊಂಡು ನೋಡುತ್ತಿರುವ ದಾರವಾಹಿ ಅದು. ಮೆಸ್ಕಾಂ ಕೃಪೆಯಿಂದ ಅದೂ ಸಾಧ್ಯವಾಗುತ್ತಿಲ್ಲ.
ಅದರ ಹೆಸರನ್ನು ಈಗ ಕರೆಂಟು ಇಲ್ಲದ ಮೇಲೆ ಎಂದು ಬದಾಯಿಸಿಕೊಂಡಿದ್ದೇನೆ.
ರಾಷ್ಟ್ರಕವಿ ಖ್ಯಾತಿಗೆ ಪಾತ್ರರಾದ ಜಿ.ಎಸ್. ಶಿವರುದ್ರಪ್ಪ ಅವರು...
ಪ್ರೀತಿ ಇಲ್ಲಿದ ಮೇಲೆ
ಹೂವು ಅರಳೀತು ಹೇಗೆ
ಮೋಡ ಕಟ್ಟೀತು ಹೇಗೆ...
ಎಂದು ಬರೆದರು. ಅದೇ ಹೆಸರಿನ ದಾರವಾಹಿಯ ಸಮಯದಲ್ಲೇ ವಿದ್ಯುತ್ ಕೈ ಕೊಡುತ್ತಿರುವುದರಿಂದ...
ಕರೆಂಟು ಇಲ್ಲದ ಮೇಲೆ
ದೀಪ ಬೆಳಗೀತು ಹೇಗೆ
ಟೀವಿ ಹೊತ್ತೀತು ಹೇಗೆ...
ಎಂದು (ಶಿವರುದ್ರಪ್ಪ ಅವರ ಕ್ಷಮೆ ಕೇಳುತ್ತ) ಹೇಳ್ಬೇಕು ಅನಿಸುತ್ತದೆ.
ಇಷ್ಟಕ್ಕೂ ಕರ್ನಾಟಕದಾದ್ಯಂತ ಪವರ್ ಕಟ್ ಕಾಮನ್ನು. ನಮ್ಮ ರಾಜ್ಯವನ್ನು ಕರುನಾಡು ಎಂದೂ ಕರೆಯುತ್ತಾರೆ. ಇದನ್ನು ಬೇರೆಯವರು ಕರು ಎಂಬುದನ್ನು ಕತ್ತಲ ನಾಡು ಎಂದು ಅಪಾರ್ಥ ಮಾಡಿಕೊಳ್ಳದಿದ್ದರೆ ಸಾಕು. ಕಾಸರಗೋಡು ಕರ್ನಾಟಕಕ್ಕೆ ಸೇರುಏಕು ಅನ್ನುತ್ತಾರೆ. ಕಾಸರಗೋಡಿನವರನ್ನೇ ಕೇಳಿದರೆ... ಬೇಡ ಸ್ವಾಮಿ ನಿಮ್ಮ ರಾಜ್ಯದಲ್ಲಿ ಯಾವಾಗ ನೋಡಿದರೂ ಕರೆಂಟು ಇರಲ್ಲ. ನಾವು ಕೇರಳ ರಾಜ್ಯದಲ್ಲೇ ಅರಾಮಿದ್ದೇವೆ ಅನ್ನುತ್ತಾರೆ. ಕರೆಂಟು ಗಡಿನಾಡಿವವರಲ್ಲಿ ನಮ್ಮ ರಾಜ್ಯದ ಬಗ್ಗೆ ತಾತ್ಸಾರ ಬೆಳೆಸಿದೆ.
ಈಗ ಪಡುಬಿದ್ರಿಯಲ್ಲಿ ನಾಗಾರ್ಜುನ ಯೋಜನೆ ಜಾರಿ ಮಾಡಲು ಉತ್ಸುಕವಾಗಿದೆ. ಭಾರೀ ವೆಚ್ಚದಲ್ಲಿ ಸಿದ್ಧವಾದ ಏಷ್ಯಾದ ಮೊದಲ ನೀರಿನ ಮೇಲೆ ತೇಲುವ ಪವರ್ ಪ್ಲಾಂಟ್ ಎಂಬ ಹೆಸರಿಗೆ ಪಾತ್ರವಾದ ತಣ್ಣೀರುಬಾವಿ ಯೋಜನೆ ಇದೆ. ಅದರಿಂದ ವಿದ್ಯುತ್ ಖರೀದಿ ತುಂಬ ದುಬಾರಿ. ಯುನಿಟ್‌ಗೆ ೫.೪೦ ರೂ. ನೀಡಬೇಕು. ಇಷ್ಟು ದುಬಾರಿ ದರದಲ್ಲಿ ಖರೀದಿಸಿ ಗ್ರಾಹಕರಿಗೆ ಕಡಿಮೆ ದರದಲ್ಲಿ ವಿದ್ಯುತ್ ನೀಡುವುದು ಸಾಧುವಲ್ಲ. ಇದು ಸತ್ಯ. ಆದರೆ ಯೋಜನೆಗೆ ಅನುಮತಿ ನೀಡುವಾಗ ಈ eನೋದಯ ಯಾಕಾಗಲಿಲ್ಲ? ಅದು ಆಗಿನವರಿಗೆ ಗೊತ್ತಿರಲಿಲ್ಲವೆ? ಗೊತ್ತಿತ್ತು. ಯಾರಪ್ಪನ ಗಂಟು? ಅನುಮತಿ ಕೊಟ್ಟರು.
ಆಗಿನ ಒಪ್ಪಂದಂತೆ ಸರಕಾರ ನಿರ್ದಿಷ್ಟ ಮೊತ್ತವನ್ನು ತಣ್ಣೀರುಬಾವಿ ಪವರ್ ಪ್ರಾಜೆಕ್ಟ್ ಸಂಸ್ಥೆಗೆ ನೀಡಬೇಕು. ಕರೆಂಟು ಖರೀದಿಸಿ, ಬಿಡಿ ಸಂಬಂಧವಿಲ್ಲ. ಈಗ ಅದು ದುಬಾರಿ ಎಂಬ ನೆಪ ಹೇಳಿ ಪಡುಬಿದ್ರಿಯಲ್ಲಿ ನಾಗಾರ್ಜುನ ಪವರ್ ಪ್ರಾಜೆಕ್ಟ್ ಆರಂಭಿಸ ಹೊರಟಿದ್ದಾರೆ. ಅತ್ತ ಗೋಕರ್ಣದ ಸಮೀಪದ ತದಡಿಯಂತಹ ಸೂಕ್ಷ್ಮ ಪ್ರದೇಶದಲ್ಲಿ ಉಷ್ಣ ವಿದ್ಯುತ್ ಸ್ಥಾವರ ಸ್ಥಾಪಿಸುವ ಸಿದ್ಧತೆಗಳಾಗುತ್ತಿವೆ. ಕರಾವಳಿ ಹಾಗೂ ಮಲೆನಾಡಿನ ಪ್ರದೇಶ ಸದಾ ಹಲವು ಯೋನೆಗಳಿಗೆ ಬಲಿಯಾಗಿದೆ. ಹಾಗೆಯೇ ವಿದ್ಯುತ್ ಖೊತಾ ಹೆಚ್ಚು ಜಾರಿಗೆ ಬರುವುದು ಕೂಡ ಇದೇ ಪ್ರದೇಶಗಳಲ್ಲಿ. ಬೆಂಗಳೂರಲ್ಲಿ ವಿದ್ಯುತ್ ತೆಗೆಯುವಂತಿಲ್ಲ. ಹಾಗೇನಾದರೂ ಮಾಡಿದರೆ ಅಲ್ಲಿರುವ ಮಲ್ಟಿ ನ್ಯಾಶನಲ್ ಸಂಸ್ಥೆಗಳು ಬಾಗಿಲು ಹಾಕಿ ಬೇರೆ ರಾಜ್ಯಕ್ಕೆ ಗುಳೆ ಹೋದರೆ?
ಈಗ ಪಡುಬಿದ್ರಿ ಬಳಿ ಜನ ನಾಗಾರ್ಜುನ ಯೋಜನೆ ವಿರೋಧಿಸುತ್ತಿದ್ದಾರೆ. ಇದನ್ನು ಹತ್ತಿಕ್ಕಲು ಸಾಕಷ್ಟು ಯತ್ನಗಳು ನಡೆಯುತ್ತಿವೆ. ಅದರಲ್ಲಿ ವಿದ್ಯುತ್ ತೆಗೆಯುವ ತಂತ್ರವೂ ಒಂದು. ವಿದ್ಯುತ್ ಆಗಾಗ ತೆಗೆಯುವ ಮೂಲಕ ಜನರಲ್ಲಿ ಅಸಹನೆ ಸೃಷ್ಟಿಸಲಾಗುತ್ತಿದೆ. ಒಮ್ಮೆ ದಿನವಿಡೀ ವಿದ್ಯುತ್ ಇರುವಂತಾದರೆ ಸಾಕು ಎಂಬ ಸ್ಥಿತಿಗೆ ಜನರನ್ನು ತರಲಾಗುತ್ತದೆ. ದಿನವಿಡೀ ವಿದ್ಯುತ್ ನೀಡುತ್ತೇವೆ ಎಂದು ಹೇಳಿ ನಾಗಾರ್ಜುನ ಸ್ಥಾಪನೆ ಮಾಡಲಾಗುತ್ತದೆ. ವಿದ್ಯುತ್ ಖೋತಾಗೆ ಭಾರೀ ಬೆಳವಣಿಗೆ, ವಿದ್ಯುತ್ ಬೇಡಿಕೆ ಹೆಚ್ಚಳದ ನೆಪ ಹೇಳಲಾಗುತ್ತಿದೆ. ಮೊದಲೇ ತಿಳಿದಿರಲಿಲ್ಲವೆ ವಿದ್ಯುತ್ ಬೇಡಿಕೆ ವರ್ಷದಿಂದ ವರ್ಷಕ್ಕೆ ಹೆಚ್ಚುತ್ತದೆಂದು? ಖಂಡಿತಾ ಗೊತ್ತಿತ್ತು. ಹಾಗಾದರೆ ಯಾಕೆ ಅದರ ಬಗ್ಗೆ ಸೂಕ್ತ ಗಮನ ನೀಡಲಿಲ್ಲ? ಇದನ್ನು ಜನ ರಾಜಕಾರಣಿಗಳ ಜುಟ್ಟು ಹಿಡಿದು ಕೇಳಬೇಕಿದೆ.

Friday, April 13, 2007

ಎಸ್‌ಎಂಎಸ್ ಕಿತಾಪತಿ ಸಂಕಷ್ಟದಲ್ಲಿ ಪತಿ!

ಅಚಾನಕ್ ಆಗಿ ಪ್ರೇಮಿಗಳ ದಿನ ಬಂದ ಎಸ್‌ಎಂಎಸ್ ಒಂದನ್ನು ಹೆಂಡತಿ ನೋಡಿದ ಪರಿಣಾಮ ಸಂಕಷ್ಟಕ್ಕೆ ಸಿಲುಕಿ ಇನ್‌ಸ್ಪೆಕ್ಟರ್ ಪತಿಯೊಬ್ಬರ ಕತೆ ಇದು. ಫೆ.೧೪. ಪ್ರೇಮಿಗಳ ದಿನ. ಇನ್‌ಸ್ಪೆಕ್ಟರ್ ಮನೆಯಲ್ಲಿ ಸ್ನಾನ ಮಾಡಲು ಹೋಗಿದ್ದರು. ಅಷ್ಟೊತ್ತಿಗೆ ಅವರ ಮೊಬೈಲ್ ಕಿರುಚಿಕೊಂಡಿತು. ಇನ್‌ಸ್ಪೆಕ್ಟರ್‌ನ ಪತ್ನಿ ಸುಮ್ಮನಿರುವುದು ಬಿಟ್ಟು ಹೋಗಿ ನೋಡಿಯೇ ಬಿಟ್ಟರು. ಅದೇನಿತ್ತು ಆ ಎಸ್‌ಎಂಎಸ್‌ನಲ್ಲಿ ಎಂಬುದು ಗುಟ್ಟು. ಅನುಮಾನಗೊಂಡ ಇನ್‌ಸ್ಪೆಕ್ಟರ್‌ನ ಪತ್ನಿ ಎಸ್‌ಎಂಎಸ್ ಬಂದ ನಂಬರಿಗೆ ಫೋನ್ ಮಾಡಿದರು. ಆ ಕಡೆಯಿಂದ ಮಾತನಾಡಿದ ಹುಡುಗಿ ನಾನು ರೇಖಾ ತೊಕ್ಕೊಟ್ಟಿನವಳು ಎಂದಳು. ಮತ್ಯಾವ ಪ್ರಶ್ನೆಗೂ ಸರಿಯಾಗಿ ಉತ್ತರಿಸಲಿಲ್ಲ. ಅದು ಆ ಇನ್‌ಸ್ಪೆಕ್ಟರ್‌ನ ವ್ಯಾಪ್ತಿಯ ಸ್ಥಳವೂ ಆಗಿದ್ದರಿಂದ ಪತಿಯ ಮೇಲೆ ಹೆಂಡತಿಯ ಅನುಮಾನ ಬಲಗೊಂಡಿತು. ಅಂತೂ ಇನ್‌ಸ್ಪೆಕ್ಟರ್ ಸ್ನಾನ ಮಾಡಿ ತಂಪಾಗಿ ಹೊರಬರುವಷ್ಟರಲ್ಲಿ ಹೆಂಡತಿ ಬಿಸಿಯಾಗಿದ್ದಳು.
ಸ್ನಾನ ಮಾಡಿದ್ದು ಸ್ವಚ್ಛವಾಗಲಿಲ್ಲ ಎಂಬಂತೆ ಇನ್ನೊಮ್ಮೆ ತೊಳೆದರು. ಯಾರ್ರೀ ಆಕೆ ನಿಮಗೆ ಹಾಗೆ ಎಸ್‌ಎಂಎಸ್ ಕಳುಹಿಸಿದ್ದಾಳೆ. ನಾನಿಲ್ಲಿ ಇರುವಾಗ ನಿಮಗ್ಯಾಕೆ ಇನ್ನೊಬ್ಬಳು ಎಂದು ಜಾಡಿಸಿದಳು. ಎಸ್‌ಎಂಎಸ್ ಬಗ್ಗೆ ಅರಿಯದ ಮತ್ತು ಇನ್ನೊಬ್ಬಳ ಜತೆ ಸಂಬಂಧ ಇರಿಸಿಕೊಂಡಿರದ ಇನ್‌ಸ್ಪೆಕ್ಟರ್ ಕಂಗಾಲು. ಆದರೆ ಅವರೇನು ಹೇಳಿದರೂ ಪತ್ನಿ ನಂಬುವಂತಿರಲಿಲ್ಲ. ಕಾರಣ ದಾಖಲೆಯಂತೆ ಎಸ್‌ಎಂಎಸ್ ಇತ್ತು. ಇನ್‌ಸ್ಪೆಕ್ಟರ್‌ಗೂ ಟೆನ್ಶನ್ ಆಯ್ತು. ಎಸ್‌ಎಂಎಸ್ ಬಂದ ನಂಬರಿಗೆ ಫೋನ್ ಮಾಡಿದರು. ಆದರೆ ಎಸ್‌ಎಂಎಸ್ ಮಾಡಿದ ಹುಡುಗಿಗೆ ಇದು ಇನ್‌ಸ್ಪೆಕ್ಟರ್ ನಂಬರ್ ಎಂಬುದು ಗೊತ್ತಾಗಿತ್ತು. ಆಕೆ ಫೋನ್ ರಿಸೀವ್ ಮಾಡಲಿಲ್ಲ. ತಪ್ಪಾಗಿ ಎಸ್‌ಎಂಎಸ್ ಹೋಗಿದ್ದು ಆಕೆಯೂ ಗಾಬರಿಗೊಂಡಿದ್ದಳು.
ಇನ್‌ಸ್ಪೆಕ್ಟರ್ ಅಂತೂ ಕೈಗೆ ಸಿಕ್ಕವರ ಮೊಬೈಲ್‌ನಿಂದ ಕಾಲ್ ಮಾಡುತ್ತಿದ್ದರು. ಆದರೂ ಆಕೆ ಫೋನ್ ರಿಸೀವ್ ಮಾಡುತ್ತಿರಲಿಲ್ಲ. ಕೊನೆಗೆ ಕಾಯಿನ್ ಫೋನ್‌ನಿಂದ ಕೂಡ ಮಾಡಿದರು. ಊಹುಂ. ಪ್ರಯೋಜನವಾಗಲಿಲ್ಲ. ನಂಬರ್ ಯಾರದ್ದೆಂದು ಪತ್ತೆ ಮಾಡೋಣ ಅಂದರೆ ಅವತು ಭಾನುವಾರ. ಉಳ್ಳಾಲ, ಕೊಣಾಜೆ ಠಾಣೆಗಳ ಸಬ್‌ಇನ್‌ಸ್ಪೆಕ್ಟರ್‌ಗಳಿಗೆ ತಿಳಿಸಿದ ಇನ್‌ಸ್ಪೆಕ್ಟರ್ ಮಂಗಳೂರು ಗ್ರಾಮಾಂತರ ಠಾಣೆ ಹೋದರು. ಅಲ್ಲಿಯ ಸಬ್‌ಇನ್‌ಸ್ಪೆಕ್ಟರ್ ಬೆಳ್ಳಿಯಪ್ಪರ ಮುಂದೆ ಗೋಳು ತೋಡಿಕೊಂಡರು. ಬೆಳ್ಳಿಯಪ್ಪನ ಬಳಿ ಎಸ್‌ಎಂಎಸ್ ಬಂದ ನಂಬರ್ ಹೇಳಿದರು. ನಂಬರ್ ಬರೆದುಕೊಂಡು ಬೆಳ್ಳಿಯಪ್ಪ ಸುಮ್ಮನೆ ಹೀಗೆ ಠಾಣೆಯ ಹೊರಗೆ ಬಂದು ಡಯಲ್ ಮಾಡಿದರು. ಅಲ್ಲೇ ಸಮೀಪದಲ್ಲಿ ಮೊಬೈಲ್ ರಿಂಗ್ ಆಗುತ್ತಿತ್ತು. ಬೆಳ್ಳಿಯಪ್ಪ ಮೊಬೈಲ್ ಕಟ್ ಮಾಡಿದರು. ಮೊಬೈಲ್ ರಿಂಗ್ ಕೂಡ ನಿಂತು ಹೋಯಿತು! ಮತ್ತೆ ಹಾಗೇ ಮಾಡಿದರು. ಆಗ ಗೊತ್ತಾಯಿತು ಆ ಮೊಬೈಲ್ ಲೇಡಿ ಪೊಲೀಸ್ ಒಬ್ಬರು ಎಂದು!
ಆಮೇಲೆ ವಿಚಾರಿಸಿದಾಗ ತಿಳಿಯಿತು. ಲೇಡಿ ಕಾನ್‌ಸ್ಟೇಬಲ್ ಒಬ್ಬಳು ಪ್ರೇಮಿಗಳ ದಿನದ ಅಂಗವಾಗಿ ಗೆಳತಿಯೊಬ್ಬಳಿಗೆ ಎಸ್‌ಎಂಎಸ್ ಮಾಡಲು ಎಳಸಿದ್ದಳು. ಅದೇನೋ ಹೆಚ್ಚು ಕಡಿಮೆಯಾಗಿ ಗೆಳತಿಯ ಹೆಸರಿನ ಸಮೀಪವೇ ಇದ್ದ ಇನ್‌ಸ್ಪೆಕ್ಟರ್ ಅವರ ಮೊಬೈಲ್‌ಗೆ ಹೋಗಿತ್ತು. ಹೋದರೆ ಪರವಾಗಿಲ್ಲ. ಸರ್ ಹೀಗಾಗಿದೆ. ತಪ್ಪಾಯ್ತು ಎಂದಿದ್ದರೆ ಇಷ್ಟೆಲ್ಲ ಗೊಂದಲ ಆಗುತ್ತಿರಲಿಲ್ಲ. ಅಚಿತಿಮವಾಗಿ ಇನ್‌ಸ್ಪೆಕ್ಟರ್‌ಗೆ ನಡೆದ ಘಟನೆ ವಿವರಿಸಿ, ಲೇಡಿ ಕಾನ್‌ಸ್ಟೇಬಲ್ ಸಾರಿ ಕೇಳುವುದರೊಂದಿಗೆ ಕ್ಷಮೆ ಕೇಳುವುದರೊಂದಿಗೆ ಈ ಘಟನೆ ಸುಖಾಂತ್ಯ ಕಂಡಿತು.
ಎಸ್‌ಎಂಎಸ್ ಕಳುಹಿಸೋದು ಕಳಿಸಿದ್ಲು, ನನ್ನ ಕೈಯಲ್ಲಿರೋವಾಗಲೇ ಕಳುಹಿಸಬಾರದೆ. ಎಷ್ಟು ಖುಶಿ ಪಡುತ್ತಿದ್ದೆ ಎಂದು ತನ್ನ ದುರದೃಷ್ಟವನ್ನೇ ಇನ್‌ಸ್ಪೆಕ್ಟರ್ ಹಳಿದುಕೊಂಡರು ಎಂಬುದು ಗುಟ್ಟಿನ ಸಂಗತಿ.
ಕಾರಂತರ ಬಗ್ಗೆ ಇಷ್ಟ್ಯಾಕೆ ತಾತ್ಸಾರ ಅಂತ?

ವಿಶ್ವವಿದ್ಯಾಲಯಕ್ಕೆ ಡಾ. ಶಿವರಾಮ ಕಾರಂತರ ಹೆಸರಿಡುವ ಪ್ರಸ್ತಾವನೆ ಜೀವ ಕಳೆದುಕೊಂಡಿದೆ. ಪಿಲಿಕುಳ ನಿಸರ್ಗ ಧಾಮಕ್ಕೆ ಕಾರಂತರ ಹೆಸರಿಡಿ ಎಂದು ಸರಕಾರ ಆದೇಶಿಸಿದರೆ ಜಿಲ್ಲಾಡಳಿತ ಒಂದು ವಿಭಾಗಕ್ಕೆ ಅವರ ಹೆಸರಿಟ್ಟು ಸುಮ್ಮನಾಗಿದೆ. ತವರು ಜಿಲ್ಲೆಯಲ್ಲೇ ಇಂತಹ ಸ್ಥಿತಿ!ಕಾರಂತರ ಹೆಸರಿನಲ್ಲಿ ಪುತ್ತೂರಿನಲ್ಲಿ ಬಾಲವನ ಇದೆ. ಅದು ಕಾರಂತರ ನೆನಪಿಗಿಂತ ಹೆಚ್ಚಾಗಿ ಮಾಸಿ ಹೋಗಿದೆ. ವಿಶ್ವವಿದ್ಯಾಲಯದಲ್ಲಿ ಹಾಗೂ ಪುತ್ತೂರು ವಿವೇಕಾನಂದ ಕಾಲೇಜಿನಲ್ಲಿ ಕಾರಂತ ಅಧ್ಯಯನ ಪೀಠ ಇದೆ. ಇಷ್ಟೇ ಕಾರಂತರಿಗೆ ತವರು ಜಿಲ್ಲೆ ಕೊಟ್ಟಿದ್ದು! ಈಗ ಪಿಲಿಕುಳ ನಿಸರ್ಗ ಧಾಮಕ್ಕೆ ಅವರ ಹೆಸರಿಡಿ ಎಂದು ಸರಕಾರ ಆದೇಶ ನೀಡಿ ಏಳು ವರ್ಷವಾದರೂ ಅದು ಜಾರಿಯಾಗಿಲ್ಲ. ಅದಕ್ಕೂ ಹೋರಾಟ ಮಾಡಬೇಕಾದ ಸ್ಥಿತಿ?ಡಾ. ಶಿವರಾಮ ಕಾರಂತರಿಂದ ಜಿಲ್ಲೆಗೆ ಸಾಕಷ್ಟು ಹೆಸರು ಬಂದಿದೆ. ರಾಜ್ಯಕ್ಕೆ eನಪೀಠ ಒದಗಿಸಿಕೊಟ್ಟವರು. ಕಾರಂತರು ಕೇವಲ ಸಾಹಿತ್ಯಕ್ಕೆ ಸೀಮಿತವಾಗಿರದೆ ಪರಿಸರದ ಬಗ್ಗೆ ಅಪಾರ ಪ್ರೀತಿ ಹೊಂದಿದ್ದರು. ಪರಿಸರ ಪರ ಹೋರಾಟಗಳಲ್ಲಿ ತೊಡಗಿಸಿಕೊಂಡಿದ್ದರು. ಇಂತಹ ಕಾರಂತರ ಕುರುಹು, ನೆನಪು ಜಿಲ್ಲೆಯಲ್ಲಿ ಅಳಿಸಿ ಹೋಗಬಾರದು. ಅಂತಹ ಸಾಹಿತಿಯ ಹೆಸರು ಜನ ಮಾನಸದಲ್ಲಿ ಹಚ್ಚ ಹಸುರಾಗಿ ಇರಬೇಕು ಎಂಬ ಕಾಳಜಿಯಿಂದ ಕನ್ನಡ ಸಾಹಿತ್ಯ ಪರಿಷತ್ ಮಾಜಿ ಅಧ್ಯಕ್ಷರಾದ ಹರಿಕೃಷ್ಣ ಪುನರೂರು ಹಾಗೂ ಮಾಜಿ ಶಾಸಕ ಕುಂಬ್ಳೆ ಸುಂದರ ರಾವ್ ಅವರು ಪಿಲಿಕುಳ ನಿಸರ್ಗ ಧಾಮಕ್ಕೆ ಡಾ. ಶಿವರಾಮ ಕಾರಂತರ ಹೆಸರಿಡಬೇಕೆಂದು ಸರಕಾರಕ್ಕೆ ೧೯೯ರಲ್ಲಿ ಪ್ರಸ್ತಾವನೆ ಸಲ್ಲಿಸಿದ್ದರು.ಅದನ್ನು ಸರಕಾರ ಪರಿಗಣಿಸಿ, ಕಾರಂತರ ಜನ್ಮ ಸ್ಥಳ ಮತ್ತು ಕರ್ಮ ಸ್ಥಳಕ್ಕೆ ಸಮೀಪದಲ್ಲಿರುವ ಪಿಲಿಕುಳ ನಿಸರ್ಗ ಧಾನಕ್ಕೆ ಕಾರಂತರ ಹೆಸರು ಇಡಬಹುದು. ಅವರು ಪರಿಸರ ಪ್ರೇಮಿಯೂ ಆಗಿದ್ದರಿಂದ ಇದು ಸೂಕ್ತ ಎಂಬ ನಿರ್ಧಾರಕ್ಕೆ ಬಂದು ೧೯೯೯ರಲ್ಲಿಯೇ ಪಿಲುಕುಳ ನಿಸರ್ಗ ಧಾಮಕ್ಕೆ ಡಾ. ಶಿವರಾಮ ಕಾರಂತ ನಿಸರ್ಗ ಧಾಮ ಎಂದು ಹೆಸರಿಡಲು ಆದೇಶ ಹೊರಡಿಸಿತು. ಆದರೆ ಕಾರಂತರ ಬಗ್ಗೆ ಜಿಲ್ಲಾಡಳಿತಕ್ಕಿರುವ ಅಸಡ್ಡೆ, ಪಿಲಿಕುಳಕ್ಕೆ ಕಾರಂತರ ಹೆಸರಿಡಲು ಇಷ್ಟವಿಲ್ಲದ ಕೆಲವು ಅಧಿಕಾರಿಗಳ ನಿರಾಸಕ್ತಿಯಿಂದ ಹಲವು ವರ್ಷ ಕಾರಂತರ ಹೆಸರು ಇಡಲಾಗಲಿಲ್ಲ. ೨೦೦೬ರಲ್ಲಿ ಕೆಲವರು ಇದನ್ನು ಮತ್ತೆ ನೆನಪಿಸಿದಾಗ ಪಿಲಿಕುಳದಲ್ಲಿರುವ ಬಯಾಲಾಜಿಕಲ್ ಪಾರ್ಕ್‌ಗೆ (ಪ್ರಾಣಿ ಸಂಗ್ರಹಾಲಯ) ಶಿವರಾಮ ಕಾರಂತರ ಹೆಸರಿಟ್ಟು ಸುಮ್ಮನಾಗಿದೆ.ಈ ಬಗ್ಗೆ ಹರಿಕೃಷ್ಣ ಪುನರೂರು ಅವರು ಮತ್ತೆ ಸರಕಾರಕ್ಕೆ ಪತ್ರ ಬರೆದಾಗ ‘ಪಿಲಿಕುಳ ನಿಸರ್ಗ ಧಾಮದ ವಿಭಾಗವೊಂದಕ್ಕೆ ಕಾರಂತರ ಹೆಸರಿಡಲಾಗಿದೆ. ಇಲ್ಲಿಗೆ ಈ ವಿಷಯ ಮುಕ್ತಾಗೊಂಡಂತಾಗಿದೆ’ ಎಂಬ ಉತ್ತರ ಬಂದಿದೆ. ಈ ಮೂಲಕ ಸಾಹಿತಿ, ಕಲಾವಿದ ಶಿವರಾಮ ಕಾರಂತರಿಗೆ ಜಿಲ್ಲಾಡಳಿತ ಮತ್ತು ಸರಕಾರ ಅವಮಾನ ಮಾಡಿವೆ. ಈ ಬಗ್ಗೆ ವೈದ್ಯಕೀಯ ಶಿಕ್ಷಣ ಸಚಿವ ಡಾ. ವಿ.ಎಸ್. ಆಚಾರ್ಯ ಅವರು ಮುಖ್ಯಮಂತ್ರಿ ಅವರಿಗೆ ಪತ್ರ ಬರೆದಿದ್ದಾರೆ. ಇದನ್ನು ಗಮನಿಸಿ ಆದ ತಪ್ಪು ಸರಿಪಡಿಸಿ, ಇಡೀ ಪಿಲಿಕುಳ ನಿಸರ್ಗ ಧಾಮಕ್ಕೆ ಡಾ. ಶಿವರಾಮ ಕಾರಂತರ ಹೆಸರಿಡುವಂತೆ ಸಂಬಂಧಪಟ್ಟ ಇಲಾಖೆಗೆ ಸೂಚಿಸಲಾಗಿದೆ. ಪರಿಣಾಮ ಶೂನ್ಯ.ಕುವೆಂಪು ನೆನಪಿಗೆ ವಿಶ್ವವಿದ್ಯಾಲಯವಿದೆ. ಕೊಪ್ಪದ ಸಮೀಪ ಕುವೆಂಪು ವಾಸಿಸುತ್ತಿರುವ ಮನೆಯನ್ನು ಶ್ರೀಶೈಲ ಎಂದು ಹೆಸರಿಟ್ಟು ಚೆನ್ನಾಗಿ ಕಾಪಾಡಲಾಗಿದೆ. ಕುವೆಂಪು ಹೆಸರಿನಲ್ಲಿ ಪ್ರತಿಷ್ಠಾನ ಕೂಡ ಸ್ಥಾಪನೆಯಾಗಿದೆ. ಇದೆಲ್ಲವನ್ನೂ ಸರಕಾರವೇ ಮಾಡಿದೆ. ಏನಿದೆ ಕಾರಂತರದ್ದೂ ಅಂತ? ಹಡುಕಿದರೆ ಕಾಣುವುದು ಒಂದೇ ಒಂದು ಅದು ಪುತ್ತೂರಿನಲ್ಲಿರುವ ಕಾರಂತರ ಬಾಲವನ. ಅದರಲ್ಲಿ ಕಾರಂತರ ಕುರುಹೂ ಇಲ್ಲ. ಕಾರಂತರು ನಿರ್ಮಿಸಿದ ಗ್ರಂಥಾಲಯ, ಕಾಡು ಇಲ್ಲವಾಗಿದೆ. ಕಾಡು ಕಡಿದು ಈಜುಕೊಳ ಮಾಡಲಾಗಿದೆ. ಪರಿಸರ ಪ್ರೇಮಿ ಡಾ. ಶಿವರಾಮ ಕಾರಂತರ ನೆನಪಿಗಾಗಿ ಇರುವ ಬಾಲವನದಲ್ಲಿ ಕಾಡು ಕಡಿದು ಈಜುಕೊಳ ನಿರ್ಮಿಸುವುದು ನಾವು ಕಾರಂತರಿಗೆ ತೋರಿಸುವ ಗೌರವ!ಕಾರಂತರು ಬಾಲವನದ ಪ್ರದೇಶದಲ್ಲಿ ೪೦ ವರ್ಷ ವಾಸವಾಗಿದ್ದರು. ಕಾದಂಬರಿ, ಯಕ್ಷಗಾನ, ಸಿನೆಮಾ ಹೀಗೆ ಎಲ್ಲದರಲ್ಲೂ ಕಾರಂತರು ತೊಡಗಿಕೊಂಡಿದ್ದು, ಇದೇ ಬಾಲವನದಲ್ಲಿದ್ದುಕೊಂಡು. ಕಾರಂತರು ಹುಟ್ಟಿದ್ದು ಕೋಟದಲ್ಲಾದರೂ ಅವರ ಕರ್ಮ ಭೂಮಿ ಪುತ್ತೂರಿನ ಬಾಲವನ. ಇದೇ ಪುತ್ತೂರಿನ ವಿವೇಕಾನಂದ ಕಾಲೇಜಿನಲ್ಲಿ ಕಾರಂತ ಅಧ್ಯಯನ ಪೀಠ ಇದೆ. ಅದರ ಮೂಲಕ ವರ್ಷಕ್ಕೊಂದು ಕಾರಂತ ಪ್ರಶಸ್ತಿ ನೀಡಲಾಗುತ್ತದೆ. ಮಂಗಳೂರು ವಿಶ್ವವಿದ್ಯಾಲಯದಲ್ಲಿ ಕಾರಂತ ಅಧ್ಯಯನ ಪೀಠ ಇದೆ.ಬಾಲವನವನ್ನು ಕಾರಂತರು ೧೯೭೦ರಲ್ಲಿ ಸರಕಾರಕ್ಕೆ ಕೊಟ್ಟರು. ಸರಕಾರ ಅದನ್ನೂ ಸರಿಯಾಗಿ ಉಳಿಸಿಕೊಳ್ಳಲಿಲ್ಲ. ಅವರ ಹೆಸರಿನಲ್ಲಿ ಪ್ರಶಸ್ತಿ ಕೊಡುತ್ತಿರುವುದು ಒಂದು ಕಾಲೇಜು. ಇದು ಸರಕಾರ ಕಾರಂತರ ಬಗ್ಗೆ ತೋರಿಸಿದ ಕಾಳಜಿ!ಸರಕಾರಕ್ಕೆ eನಪೀಠ ಪ್ರಶಸ್ತಿ ವಿಜೇತ ಸಾಹಿತಿ ಡಾ. ಶಿವರಾಮ ಕಾರಂತರ ಬಗ್ಗೆ ಯಾಕಿಷ್ಟು ಅನಾದರ? ಸರಕಾರ ಬಿಡಿ. ನಮ್ಮದೇ ಜಿಲ್ಲಾಡಳಿತಕ್ಕೆ ಕಾರಂತರ ಬಗ್ಗೆ ಅಸಡ್ಡೆ. ಶಾಸಕ ಯೋಗೀಶ್ ಭಟ್, ಸಚಿವ ಬಿ. ನಾಗರಾಜ ಶೆಟ್ಟಿ ಈ ಬಗ್ಗೆ ಕಿಂಚಿತ್ತು ಆಸಕ್ತಿ ಕೂಡ ತೋರಿಸಿಲ್ಲ. ಇಷ್ಟು ಬೇಗ ಕಾರಂತರು ನಮಗೆಲ್ಲ ಬೇಡವಾಗಿ ಹೋದರೆ?