ಠಾಣೆಯಲ್ಲಿ ಸೌಲಭ್ಯ ಇಲ್ಲದಿದ್ದರೂ ಪರವಾಗಿಲ್ಲ ಅಧಿಕಾರಿಗಳ ಚೇಂಬರ್ ಜಗಜಗಿಸಬೇಕು ಎಂಬುದು ಪೊಲೀಸ್ ಇಲಾಖೆಯ ಅಲಿಖಿತ ನಿಯಮ. ಅಧಿಕಾರಿಗಳು ಬದಲಾದಂತೆ ಅವರ ಚೇಂಬರ್‌ನ ಸ್ಥಿತಿ- ಗತಿ ಕೂಡ ಬದಲಾಗುತ್ತದೆ. ಒಬ್ಬ ಇನ್‌ಸ್ಪೆಕ್ಟರ್ ಅವರು ಆಸೆಪಟ್ಟ ಠಾಣೆಗೆ ವರ್ಗವಾಗಿ ಬರುತ್ತಿದ್ದಂತೆ ಅಲ್ಲಿರುವ ಟೇಬಲ್, ಕುರ್ಚಿ ಯಾವುದೂ ಸರಿಯಿಲ್ಲ ಅನ್ನಿಸಿತು. ಸರಿ ಅವರ ಅಂತಸ್ತಿಗೆ ತಕ್ಕಂತೆ ಚೇಂಬರ್‌ನಲ್ಲಿರುವ ಫರ್ನೀಚರ್ ಬದಲಾಯಿಸಲು ಮನಸು ಮಾಡಿದರು. ಅವರ ಗೆಳೆಯರ ಸಹಾಯದಿಂದ ಚೇಂಬರ್‌ಗೊಂದು ಹೊಸ ಪೊಗದಸ್ತಾದ ಕುರ್ಚಿ, ಟೇಬಲ್, ಅದಕ್ಕೊಂದು ಗ್ಲಾಸು ಎಲ್ಲ ಸಿದ್ಧವಾಯಿತು. ಅದರ ಒಟ್ಟೂ ವೆಚ್ಚ ೨೫-೩೦ ಸಾವಿರ ರೂ. ಅಂತ ಕೇಳಿದರೆ ನಮಗೆ ಅಚ್ಚರಿಯಾಗುತ್ತದೆ.
ಹೀಗೆ ಇನ್‌ಸ್ಪೆಕ್ಟರ್ ಅವರು ಹೊಸ ಕುರ್ಚಿಯಲ್ಲಿ ಹಾಯಾಗಿ ಕಳಿತು ಖುಶಿಯಿಂದ ಕಾಲ ಕಳೆಯುತ್ತಿರಬೇಕಾದರೆ ಒಂದು ದಿನ ಐಜಿ ಎಚ್.ಎನ್. ಸತ್ಯನಾರಾಯಣ ರಾವ್ ಅವರು ಇನ್‌ಸ್ಪೆಕ್ಷನ್‌ಗೆ ಬರುತ್ತಾರೆಂದಾಯಿತು. ಇನ್‌ಸ್ಪೆಕ್ಟರ್‌ಗೆ ಟೆನ್ಶನ್ ಶುರುವಾಯಿತು. ಸತ್ಯನಾರಾಯಣ ರಾವ್ ಅವರಿಗೆ ಕೆಲಸದ ಬಗ್ಗೆ ಆಸಕ್ತಿ ಇರುವವರ ಬಗ್ಗೆ ಪ್ರೀತಿ ಇರುತ್ತೆ ಹೊರತು, ಚೇಂಬರ್ ಪಾಶ್ ಇರಿಸಿಕೊಂಡವರ ಬಗ್ಗೆ ಅಲ್ಲ ಎಂಬುದು ಆ ಇನ್‌ಸ್ಪೆಕ್ಟರ್‌ಗೂ ಗೊತ್ತು. ಈಗೇನು ಮಾಡುವುದು? ಯೋಚನೆ ಮಾಡಿದ ಇನ್‌ಸ್ಪೆಕ್ಟರ್, ಐಜಿ ಇನ್‌ಸ್ಪೆಕ್ಷನ್‌ಗೆ ಆಗಮಿಸುವ ಒಂದು ದಿನ ಮೊದಲೇ ತಮ್ಮ ಚೇಂಬರ್‌ನಿಂದ ಹೊಸ ಫರ್ನೀಚರ್‌ಗಳೆನ್ನೆಲ್ಲ ಎತ್ತಂಗಡಿ ಮಾಡಿದರು. ಹಳೆ ಫರ್ನೀಚರ್‌ಗಳು ಮತ್ತೆ ಚೇಂಬರ್‌ನಲ್ಲಿ ಪ್ರತಿಷ್ಠಾಪನೆಗೊಂಡವು! ಹಳೇ ಫನೀಚರ್ ನೋಡಿದ ಐಜಿ, ಪಾಪ ಇನ್‌ಸ್ಪೆಕ್ಟರ್ ತುಂಬ ಸಾಚಾ ಮನುಷ್ಯ ಎಂದುಕೊಳ್ಳಲಿ ಎಂಬುದು ಅವರ ಪ್ಲಾನ್ ಆಗಿತ್ತು.
ಐಜಿ ಸತ್ಯನಾರಾಯಣ ರಾವ್ ಅವರು ಇನ್‌ಸ್ಪೆಕ್ಷನ್‌ನಲ್ಲಿ ಇನ್‌ಸ್ಪೆಕ್ಟರನ್ನು ಸರಿಯಾಗಿ ತೊಳೆದರು ಎಂಬುದು ಠಾಣೆಯ ಒಳಗಿನವರೆ ಹೇಳುತ್ತಾರೆ. ಅದೇನೇ ಇರಲಿ ಐಜಿ ಇನ್‌ಸ್ಪೆಕ್ಷನ್ ಮುಗಿಯುತ್ತಿದ್ದಂತೆ ಹೊಸ ಫರ್ನೀಚರ್‌ಗಳು ಮತ್ತೆಇನ್‌ಸ್ಪೆಕ್ಟರ್ ಚೇಂಬರನ್ನು ಅಲಂಕರಿಸಿದೆ. ಐಜಿ ಒಮ್ಮೆ ಅನಿರೀಕ್ಷಿತವಾಗಿ ರಾತ್ರಿ ಗಸ್ತಿಗೆ ಆಗಮಿಸಿದ್ದು ನಿಮಗೆ ಗೊತ್ತೇ ಇದೆ. ಅವತ್ತು ಇದೇ ಇನ್‌ಸ್ಪೆಕ್ಟರ್‌ಗೆ ಐಜಿ ಸರಿಯಾಗಿ ಬೈದಿದ್ದರು. ಈ ಇನ್‌ಸ್ಪೆಕ್ಟರ್‌ರ ಕಚೇರಿಯಿಂದ ಕಾಣಿಸುವಂತಿರುವ ಬಾರ್ ಒಂದು ತಡ ರಾತ್ರಿಯೂ ತೆರೆದಿತ್ತು. ಇದರಿಂದ ಕುಪಿತರಾದ ಐಜಿಯವರು ಇನ್‌ಸ್ಪೆಕ್ಟರ್‌ಗೆ ವಯರ್‌ಲೆಸ್‌ನಲ್ಲಿ ಮಾತನಾಡಿ, ನಿಮ್ಮ ಠಾಣೆ ಮುಚ್ಚುವಂತೆ ಸಕಾರಕ್ಕೆ ಮನವಿ ಸಲ್ಲಿಸಿ. ನಿಮ್ಮ ಠಾಣೆಯೆದುರೇ ಬಾರ್ ತೆರೆದಿದೆ. ಇನ್ನು ಬೇರೆ ಕಡೆ ನೀವೇನು ಬಂದ್ ಮಾಡುತ್ತೀರಿ? ಸರಕಾರದ ಅನ್ನ ತಿನ್ನುವ ಬಗ್ಗೆ ಗೌರವ ಇದ್ದರೆ ನಿಯತ್ತಿನಿಂದ ಕಲಸ ಮಾಡಿ ಎಂದು ದಬಾಯಿಸಿದ್ದರು. ಇತ್ತ ಕೊಲೆ ಪ್ರಕರಣದ ಆರೋಪಿಯೊಬ್ಬ ಸಿಗಲಿಲ್ಲ ಎಂಬ ಕಾರಣಕ್ಕೆ ಎಸ್ಪಿ ಕೂಡ ಆಗಾಗ ಈ ಇನ್‌ಸ್ಪೆಕ್ಟರನ್ನು ಸರಿಯಾಗಿ ವಿಚಾರಿಸಿಕೊಳ್ಳುತ್ತಿದ್ದಾರೆ.
ಬುಲ್ ಶಾಟ್: ಒಳ್ಳೆ ಮೆತ್ತಗಿನ ಕುರ್ಚಿಯಿದೆ, ಚೆಂದದ ಟೇಬಲ್ ಇದೆ. ಚೇಂಬರ್ ಸುಂದರವಾಗಿದೆ. ಆದರೇನು ಮಾಡೋದು, ಅದರಲ್ಲಿ ಹಾಯಾಗಿ ಕುಳಿತು ಖುಶಿಪಡುವುದು ಇನ್‌ಸ್ಪೆಕ್ಟರ್ ಹಣೆಯಲ್ಲಿ ಬರೆದಿಲ್ಲ. ಎಲ್ಲ ಅವರವರ ನಸೀಬು!
ಮಸುಕಾದ 2022ರ ಡೈರಿಯಿಂದ....
5 months ago
No comments:
Post a Comment