Tuesday, August 28, 2007

ಇಗ್ಗಣ್ಣ ಎಂಬ ಅಂಚೆಯಣ್ಣನ ನೆನಪಲ್ಲಿ...

ನಮ್ಮನೆಗೊಬ್ಬರು ಪರಿಚಿತರು ಬೇರೆ ಊರಿನಿಂದ ಬಂದಿದ್ದರು. ಆಗ ಇಗ್ಗಣ್ಣ ಬಂದು ಪತ್ರಗಳನ್ನು ಕೊಟ್ಟು ಹೋದ. ನಾವು ಇಗ್ಗಣ್ಣನ ಬಗ್ಗೆ ಮಾತಾಡುವಾಗ, ನಮ್ಮನೆಗೆ ಬಂದ ಅಪರಿಚಿತರು ನಮ್ಮೂರಲ್ಲಿ ಪೋಸ್ಟ್‌ಮ್ಯಾನ್ ಅಂತಾರೆ ನಿಮ್ಮಲ್ಲಿ ಅವರನ್ನ ಇಗ್ಗಣ್ಣ ಅಂತಾರಾ ಎಂದು ಪ್ರಶ್ನಿಸಿದ್ದರು.ಅವರು ಕೇಳಿದ್ದರಲ್ಲಿ ತಪ್ಪಿರಲಿಲ್ಲ. ಕಾರಣ ನನ್ನೂರಲ್ಲಿ ಆತನನ್ನು ಪೋಸ್ಟ್‌ಮ್ಯಾನ್ ಅಂತಲೋ ಪದ್ಯವೊಂದರಲ್ಲಿ ಬರುವ ಅಂಚೆಯಣ್ಣ ಅಂತಲೋ ಯಾರೂ ಕರೆಯುತ್ತಿರಲಿಲ್ಲ. ಆತ ಎಲ್ಲರಿಗೂ ಇಗ್ಗಣ್ಣನಾಗಿದ್ದ. ಹೆಚ್ಚಿನ ಜನರ ಫ್ಯಾಮಿಲಿ ಫ್ರೆಂಡ್ ಕೂಡ ಆಗಿದ್ದ.
ಊರಿನ ಜನ ಕೂಡ ಆತನನ್ನು ಯಾವತ್ತೂ ಪೋಸ್ಟ್‌ಮ್ಯಾನ್ ಎಂಬ ದೃಷ್ಟಿಯಿಂದ ನೋಡಿಯೂ ಇರಲಿಲ್ಲ. ಪ್ರತಿಯೊಬ್ಬರು ಕುಡಿಯಲು ಮಜ್ಜಿಗೆಯೋ, ಬೆಲ್ಲ ನೀರೋ ಬೇಕಾ ಎಂದು ವಿಚಾರಿಸಿಯೇ ಕಳುಹಿಸುತ್ತಿದ್ದರು. ಬಿಸಿಲಲ್ಲಿ ತಿರುಗಿ ತಿರುಗಿ ಸಾಕಾಗಿದ್ದರೆ ಇಗ್ಗಣ್ಣ ಕೂಡ ಮನೆಯ ಆರಾಮ ಕುರ್ಚಿಯಲ್ಲಿ ಕೊಂಚ ಕೂತು, ಮಜ್ಜಿಗೆ ಕುಡಿದು ಸುಧಾರಿಸಿಕೊಂಡು ಪತ್ರ ಹಂಚುವ ಕೆಲಸ ಮುಂದುವರಿಸುತ್ತಿದ್ದ. ಊಟ ಮಾಡೋ ಅಂದರೆ ‘ಕಾಮಾಕ್ಷಿ ನಿಲಯದಲ್ಲಿ ಊಟ ಸಿದ್ಧವಿದೆ’ ಎನ್ನುತ್ತಿದ್ದ. ಕಾಮಾಕ್ಷಿ ಆತನ ಹೆಂಡತಿ. ಇಗ್ಗಣ್ಣ ಆಗಾಗ ಆಕ್ಷಿ ಹೊಡೆಯುತ್ತಿದ್ದನಾದ್ದರಿಂದ ನಾವೆಲ್ಲ ಇದು ಹೆಂಡತಿ ಕಾಮಾಕ್ಷಿಯ ಪ್ರಭಾವ ಎಂದು ಆತನನ್ನು ಕಿಚಾಯಿಸುತ್ತಿದ್ದೆವು.
ಆಗೆಲ್ಲ ಫೋನು ಇರಲಿಲ್ಲ. ಅಂಚೆಯೇ ಸಂಪರ್ಕದ ಪ್ರಮುಖ ಮೂಲ. ಅಂಚೆ ಪತ್ರಗಳ ಜತೆಗೆ ಇಗ್ಗಣ್ಣ ಊರ ಸುದ್ದಿಗಳನ್ನು, ಜಂಬ್ರ (ಸೂತಗದ) ಸುದ್ದಿಗಳನ್ನು ಹೊತ್ತು ತರುತ್ತಿದ್ದ. ಸರಕಾರ ಕೊಡುತ್ತಿದ್ದ ಸ್ಯಾಲರಿ ಏನೇನೂ ಇರಲಿಲ್ಲ. ಬಹುಶಃ ಸರಿಯಾಗಿ ತಿರುಗಾಡಿದರೆ ತಿಂಗಳಿಗೆ ಸವೆಸುವ ಚಪ್ಪಲಿಗೆ ಸಾಕಾಗುತ್ತಿತ್ತು ಸ್ಯಾಲರಿ. ಆದರೂ ಇಗ್ಗಣ್ಣ ಬಿಡದೆ ಸುತ್ತುತ್ತಿದ್ದ.
ನನ್ನ ಊರಾದ ಮೂರೂರಿನ ವ್ಯಾಪ್ತಿ ದೊಡ್ಡದು. ಹಾಗಾಗಿ ಕನ್ನಡ ಶಾಲೆ ಮುಗಿಸಿ ಮನೆಗೆ ಹೋಗುವ ಮಕ್ಕಳೇ ಪತ್ರ ತಲುಪಿಸುವ ಇಗ್ಗಣ್ಣ ಮೂಲಾಧಾರ. ಪತ್ರ ತಲುಪಿಸಬೇಕಾದ ಮನೆಯ ಮಕ್ಕಳೇ ಸಿಕ್ಕದರೆ ಪರವಾಗಿಲ್ಲ. ಇಲ್ಲವಾದಲ್ಲಿ ಆ ಮಕ್ಕಳ ಬಳಿಯಲ್ಲೇ ಅಕ್ಕಪಕ್ಕದ ಮನೆಗೆ ಪತ್ರ ತಲುಪಿಸಿ ಕೆಲಸ ಹಗುರ ಮಾಡಿಕೊಳ್ಳುತ್ತಿದ್ದ ಇಗ್ಗಣ್ಣ. ಹೀಗಾಗಿ ಇಗ್ಗಣ್ಣ ಶಾಲೆ ಮಕ್ಕಳಿಗೆಲ್ಲ ಪರಿಚಿತನಾಗಿದ್ದ. ಜತೆಗೆ ಶಾಲೆ ಮಕ್ಕಳೆಲ್ಲರ ಪರಿಚಯವನ್ನೂ ಇರಿಸಿಕೊಂಡಿದ್ದ. ಮಕ್ಕಳಿಗೆ ಮುಖ್ಯಮಂತ್ರಿಯ, ಪ್ರಧಾನ ಮಂತ್ರಿಯ ಕೊನೆಗೆ ಗ್ರಾಮ ಪಂಚಾಯತ್ ಅಧ್ಯಕ್ಷರ ಪರಿಚಯ ಇಲ್ಲದಿದ್ದರೂ ಇಗ್ಗಣ್ಣನ ಪರಿಚಯ ಚೆನ್ನಾಗಿತ್ತು. ಅಂಚೆ ಬರುವುದು ತಡವಾಗಿ ಮಕ್ಕಳು ಮನೆಗೆ ಹೋದರೋ ಅಂದು ಇಗ್ಗಣ್ಣನಿಗೆ ದಿನವಿಡೀ ಕೆಲಸ.
ನನ್ನಪ್ಪ ಎಲೈಸಿ ಏಜೆಂಟ್. ಹಾಗಾಗಿ ನಮ್ಮನೆಗೆ ಸಾಕಷ್ಟು ಪತ್ರಗಳು, ಎಲೈಸಿ ಕಚೇರಿಯ ಅಂಚೆಗಳು ಬರುತ್ತಿದ್ದವು. ಹೀಗಾಗಿ ಇಗ್ಗಣ್ಣ ಎಸ್.ಎಂ. ಭಟ್ ಎಂದು ನೋಡಿದ ಕೂಡಲೆ ನಮ್ಮನೆಗೆ ತಂದು ಹಾಕುತ್ತಿದ್ದ. ಮೂರೂರಿನಲ್ಲಿ ಅಂಗಡಿ ನಡೆಸುತ್ತಿದ್ದ ಸುಬ್ಬಣ್ಣ ಎಂಬವರ ಹೆಸರೂ ಎಸ್.ಎಂ. ಭಟ್. ಇನ್ನೊಂದು ಹೋಲಿಕೆಯಂದರೆ ಸುಬ್ಬಣ್ಣ ಹೆಂಡತಿ ಹೆಸರೂ ಲೀಲಾ. ನನ್ನಪ್ಪನ ಹೆಂಡತಿ ಅರ್ಥಾತ್ ನನ್ನಮ್ಮನ ಹೆಸರೂ ಲೀಲಾ. ಹೀಗಾಗಿ ಸಂಕ್ರಾತಿ, ಯುಗಾದಿ, ದೀಪಾವಳಿ ಸಂದರ್ಭಗಳಲ್ಲಿ ಸುಬ್ಬಣ್ಣನಿಗೆ, ಅವರ ಹೆಂಡತಿಗೆ ಬಂದ ಗ್ರೀಟಿಂಗ್ಸ್‌ಗಳೂ ನಮ್ಮನೆಗೆ ಬಂದು ಬೀಳುತ್ತಿತ್ತು. ಒಡೆದು ನೋಡಿದ ಮೇಲೆ, ಶುಭಾಷಯ ತಿಳಿಸಿದವರ ಹೆಸರು ನಮಗೆ ಪರಿಚಿತವಲ್ಲ ಎಂದು ನೋಡುವಾಗ ಅದು ಸುಬ್ಬಣ್ಣನಿಗೆ, ಅವನ ಹೆಂಡತಿಗೆ ಬಂದ ಗ್ರೀಟಿಂಗ್ಸ್ ಎಂಬುದು ಗೊತ್ತಾಗುತ್ತಿತ್ತು. ಸುಬ್ಬಣ್ಣನಿಗೆ ಈ ವಿಷಯ ಹೇಳಿದರೆ.. ನೀವೇ ಕೊಟ್ಟುಬಿಡಿ ಅವರಿಗೆ ಎಂದು ಬಿಡುತ್ತಿದ್ದ.
ಅದೇನೇ ಇದ್ದರೂ ಇಗ್ಗಣ್ಣ ಮೂರೂರಿನ ಒಂದು ಭಾಗವಾಗಿದ್ದ. ಆತ ಕೆಲಸ ಬಿಟ್ಟ ಮೇಲೆ ಅಂಚೆ ಹಂಚಲೂ ಒಂದು ಸರಿಯಾದ ಜನ ಸಿಗಲಿಲ್ಲ. ಕೆಲವರು ಈ ಕೆಲಸ ಮಾಡಿದರಾದರೂ ಇಗ್ಗಣ್ಣನಷ್ಟು ದೀರ್ಘಕಾಲ ಈ ಕೆಲಸಕ್ಕೆ ನಿಲ್ಲಲಿಲ್ಲ. ಹೀಗಾಗಿಯೇ ನಮ್ಮೂರದಲ್ಲಿ ಪೋಸ್ಟ್‌ಮ್ಯಾನ್, ಅಂಚೆಯಣ್ಣ ಎಂಬ ಶಬ್ದಗಳ ಬದಲು ಇಗ್ಗಣ್ಣ ಎಂಬ ಹೆಸರಿತ್ತು. ಹೀಗಾಗಿಯೇ ದೊಡ್ಡ ಸಾಧನೆ ಮಾಡದಿದ್ದರೂ ಇಗ್ಗಣ್ಣ ಊರವರಿಗೆಲ್ಲ ಪರಿಚಯ. ಮೂರೂರಿನಲ್ಲಿ ಇಗ್ಗಣ್ಣನಿಗೆ ಪರಿಚಯವಿಲ್ಲದ ಜನರಿಲ್ಲ, ಇಗ್ಗಣ್ಣನ ಪರಿಚಯವಿಲ್ಲದವರಿಲ್ಲ.
ಇಂದಿಗೂ ಇಗ್ಗಣ್ಣನ ಜಾಗದಲ್ಲಿ ಬೇರೊಬ್ಬರನ್ನು ಕಲ್ಪಿಸಿಕೊಳ್ಳುವುದು ನನ್ನಿಂದ ಸಾಧ್ಯವಾಗಿಲ್ಲ. ಬಹುಶಃ ನನ್ನೂರಿನ ಜನರಿಂದಲೂ ಸಾಧ್ಯವಾಗಿಲ್ಲ. ಈ ನಗರಗಳಲ್ಲೋ ಇಂತಹ ಸಂಬಂಧಗಳೇ ಇಲ್ಲ. ಪತ್ರ ವ್ಯವಹಾರವೇ ಕಡಿಮೆಯಾಗಿ ಈಗ ಇಂತಹ ಸಂಬಂಧಗಳೇ ಇಲ್ಲದಂತಾಗಿವೆ.

Saturday, August 18, 2007

ಬಳ್ಳಾಲ್‌ಬಾಗ್‌ನಲ್ಲೊಂದು ಭೂತ ಭಾದೆ


ನಗರದ ಮಧ್ಯದಲ್ಲೊಂದು ಅರ್ಧ ನಿರ್ಮಿತ ಮನೆ. ಗವ್ವೆನ್ನುವ ರಾತ್ರಿಯ ಕತ್ತಲು. ನೀರವ ಮೌನ. ಕಿಟಾರನೆ ವಿಕಾರವಾಗಿ ಕಿರುಚಿದ ಸದ್ದು ಮೌನ ಸೀಳಿಕೊಂಡು ಹೊರಡುತ್ತದೆ. ಮಲಗಿದ್ದವರು ಬೆಚ್ಚಿ ಕಣ್ಣು ಬಿಡುತ್ತಾರೆ. ಎಚ್ಚರಿದ್ದವರು ಹೆದರಿ ಮುದುರಿಕೊಳ್ಳುತ್ತಾರೆ.

ಮತ್ತದೇ ಮೌನ. ಕೊಂಚ ಹೊತ್ತು ಅಷ್ಟೆ. ಮತ್ತೆ ಕೇಳುತ್ತದೆ ಮಗು ಅಳುವ ಸದ್ದು, ಬೆಕ್ಕು ದೀರ್ಘವಾಗಿ ಕೂಗುವ ಸದ್ದು. ಯಾರೂ ತೋಡಿನ ನೀರಲ್ಲಿ ನಡೆದಾಡಿದ ಸಪ್ಪಳ. ಇಷ್ಟಾದ ಮೇಲೆ ರಾತ್ರಿ ಪೂರ ನಿದ್ರೆ ಇಲ್ಲ ಕಣ್ಣಿಗೆ...

ಇದು ‘ಡರ್ ನಾ ಮನಾಹೆ’ ಎಂಬ ಹಿಂದಿ ಚಲನಚಿತ್ರದ ಕತೆಯಲ್ಲ. ಕನ್ನಡದ ‘ಮೋಹಿನಿ’ ಸಿನಿಮಾ ಕತೆಯೂ ಅಲ್ಲ. ಬದಲಾಗಿ ಆಧುನಿಕ ಜಗತ್ತಿನತ್ತ ದಾಪುಗಾಲಿಕ್ಕುತ್ತಿರುವ ಮಂಗಳೂರಿನಲ್ಲಿರವ ಬಲ್ಲಾಳ್‌ಭಾಗ್ ನಿವಾಸಿಗಳ ನಿತ್ಯದ ಕತೆ. ಈಗ ಬಳ್ಳಾಲ್‌ಭಾಗ್ ತುಂಬೆಲ್ಲ ಇದೇ ಸುದ್ದಿ. ಇಷ್ಟು ದಿನ ಯಾರೂ ಗಮನಿಸದೇ ಖಾಲಿ ಬಿದ್ದಿದ್ದ ಮನೆ ಬಗ್ಗೆ ಈಗ ಎಲ್ಲರಿಗೂ ಕುತೂಹಲ ಮಿಶ್ರಿತ ಭಯ. ಹೋಗುವಾಗೊಮ್ಮೆ, ಬರುವಾಗೊಮ್ಮೆ ಆ ಮನೆಯತ್ತ ದೃಷ್ಟಿ ಹಾಯಿಸದೆ ಹೋಗುವುದಿಲ್ಲ. ಮಕ್ಕಳಂತೂ ಈ ಮನೆಯ ಬಳಿ ಹೋಗುವಾಗ ಗುಂಪಾಗಿಯೇ ಹೋಗುತ್ತಾರೆ. ತಪ್ಪಿಯೂ ಅತ್ತ ನೋಡುವುದಿಲ್ಲ. ಊಟ ಮಾಡದೆ ರಚ್ಚೆ ಹಿಡಿದ ಮಕ್ಕಳನ್ನು ಗುಮ್ಮ ಬರುತ್ತೆ ಅಂತ ಹೆದರಿಸುತ್ತಿದ್ದ ಅಮ್ಮಂದಿರಿಗೂ ಈಗ ಗುಮ್ಮನ ಭಯ!

ಬಲ್ಲಾಳ್‌ಭಾಗ್‌ನಲ್ಲಿರುವ ಶ್ರೀದೇವಿ ಕಾಲೇಜಿನ ಬಳಿ ಒಂದು ಅರೆ ನಿರ್ಮಿತ ಮನೆಯಿದೆ. ಅಲ್ಲಿಂದ ಮಧ್ಯಾರಾತ್ರಿ ನಂತರ ನಂತರ ಮಹಿಳೆ ಭಯಾನಕವಾಗಿ ಕಿರುಚಿದ, ಮಗು ಅತ್ತ, ಬೆಕ್ಕು ವಿಕಾರವಾಗಿ ಕೂಗಿದ, ಯಾರೋ ನೀರಲ್ಲಿ ನಡೆದಾಡಿದಂತೆ ಅನಿಸುವ ಸದ್ದುಗಳು ಕೇಳುತ್ತಿವೆ ಎಂಬುದು ಬಲ್ಲಾಳ ಭಾಗ್ ನಿವಾಸಿಗಳ ಅಂಬೋಣ.

ಕಾಲೇಜಿನಲ್ಲಿ ಕಾವಲುಗಾರ ಕದಂ ಪ್ರಕಾರ ‘ಒಂದು ವಾರದಿಂದ ಈ ಸದ್ದು ಕೇಳುತ್ತಿದೆ. ಮೊದ ಮೊದಲು ಕೆಲವರು ಹೇಳಿದಾಗ ನಾನೂ ನಂಬಲಿಲ್ಲ. ಅದಕ್ಕಾಗಿ ಎಚ್ಚರಿದ್ದು ನೋಡಿದಾಗ ಸದ್ದು ಕೇಳಿಸಿದೆ. ಯಾರೂ ಮನೆಯತ್ತ ಹೋದದ್ದು, ಬಂದದ್ದು ಕಾಣಲಿಲ್ಲ. ಸದ್ದು ಮಾತ್ರ ಕೇಳಿಸಿತು. ಅತ್ಯಂತ ಭಯಾನಕ ಸದ್ದು’ ಎಂದು ಆತ ವಿವರಿಸಿದ್ದಾನೆ.

ಸಮೀಪದಲ್ಲಿ ವಾಸವಾಗಿರುವ ವಿದ್ಯಾರ್ಥಿಯೊಬ್ಬ ‘ಇಂತಹ ಸದ್ದು ಕೇಳಿಸುತ್ತದೆ. ನನಗೆ ಇಂತಹ ಸಂಗತಿಗಳಲ್ಲಿ ನಂಬಿಕೆ ಇರಲಿಲ್ಲ. ಆದರೂ ಸದ್ದು ಕೇಳಿದ ಮೇಲೆ ವಿಚಿತ್ರ ಅನ್ನಿಸುತ್ತಿದೆ. ನಂಬಲೂ ಆಗುತ್ತಿಲ್ಲ, ನಂಬದಿರಲೂ ಆಗುತ್ತಿಲ್ಲ’ ಎಂದು ವಿವರಿಸಿದ್ದಾನೆ.

ಪೊಲೀಸರು, ಪತ್ರಕರ್ತರು, ಒಂದಿಬ್ಬರು ಸಾರ್ವಜನಿಕರು ಮನೆಯೊಳಗೆ ಹೋಗಿ ನೋಡಿದರು. ಅಲ್ಲಿ ಯಾರೂ ಇರಲಿಲ್ಲ. ಆದರೆ ಮಾಡಿದ ಶೌಚ, ಕೆಲವು ಖಾಲಿ ಮದ್ಯದ ಬಾಟಲಿಗಳು ಕಂಡುಬಂದಿವೆ. ಇದರಿಂದಾಗಿ ಜನ ಅಲ್ಲಗೆ ಹೋಗಿ ಬರುತ್ತಿದ್ದಾರೆ ಎಂಬುದು ಸಾಬೀತಾಗಿದೆ. ಒಂದೆರಡು ಸಿಗರೇಟ್ ಬಾಕಿ ಇದ್ದ ಪ್ಯಾಕ್ ಕೂಡ ದೊರೆತಿದೆ. ಸಮೀಪವೇ ವಿದ್ಯಾರ್ಥಿನಿಯರ ವಸತಿ ನಿಲಯ ಇರುವುದರಿಂದ ಕೀಟಲೆಗಾಗಿ ಅಥವಾ ಮದ್ಯಪಾನ ಮಾಡಿ ಕಿಡಿಗೇಡಿಗಳು ಇಂತಹ ಕೃತ್ಯ ಎಸಗುತ್ತಿರಬಹುದೇ?ಜಾಗ ಅಥವಾ ಅರೆ ನಿರ್ಮಿತ ಕಟ್ಟಡದ ಮಾಲೀಕರ ವಿರೋಧಿಗಳು ಅಥವಾ ಅದಕ್ಕೆ ಸಂಬಂಧಿಸಿದ ವಿವಾದದಿಂದಾಗಿಯೂ ಇಂತಹ ಹೆದರಿಸುವ ಕೃತ್ಯಗಳು ನಡೆಯುವ ಸಾಧ್ಯತೆ ಅಲ್ಲಗಳೆಯುವಂತಿಲ್ಲ. ಹಲವು ಸಮಯದಿಂದ ಖಾಲಿ ಇರುವ ಈ ಮನೆಯಲ್ಲಿ ಅನೈತಿಕ ಚಟುವಟಿಕೆ ನಡೆಯುತ್ತಿದ್ದು, ರಾತ್ರಿ ಸಾರ್ವಜನಿಕರಾರೂ ಸಮೀಪಕ್ಕೆ ಬರಬಾರದು ಎಂಬ ಉದ್ದೇಶದಿಂದ ಹೀಗೆ ಹೆದರಿಕೆ ಹುಟ್ಟಿಸುವ ತಂತ್ರವಾಗಿಯೂ ಇಂತಹ ಕೃತ್ಯ ನಡೆಯುವ ಸಾಧ್ಯತೆ ಖಂಡಿತ ಇದೆ.ಈ ಎಲ್ಲ ಕಾರಣಗಳಿಗೆ ಇಂತಹ ಭೂತ ಚೇಷ್ಟೆಗಳು ನಡೆಯಬಹುದು.

ವಿಚಾರವಾದಿ ಎಂದು ತನ್ನನ್ನು ತಾನು ಕರೆದುಕೊಳ್ಳುವ ನರೇಂದ್ರ ನಾಯಕ್ ಎಂಬವರು ಶನಿವಾರ ರಾತ್ರಿ ಈ ಪರಿಸರದಲ್ಲಿ ಉಳಿದು, ಅದೇನು ಶಬ್ದ ಎಂದು ನೋಡುವುದಾಗಿ ಹೇಳಿದ್ದಾರೆ. ನರೇಂದ್ರ ನಾಯಕ್ ಹೀಗೆ ಪವಾಡಗಳನ್ನು ಬಯಲು ಮಾಡುವಲ್ಲಿ ಸಿದ್ಧ ಹಸ್ತರು. ಆಗಾಗ ಶಾಲೆ- ಕಾಲೇಜುಗಳಲ್ಲಿ ಅವರು ಕಾರ್ಯಕ್ರಮವನ್ನೂ ಮಾಡುತ್ತಾರೆ. ಅವರಿಂದಾದರೂ ಈ ಭೂತ ಚೇಷ್ಟೆಯ ಹಿಂದಿನ ರಹಸ್ಯ ಬಯಲಾಗಬಹುದಾ? ಕಾದು ನೋಡೋಣ. ಬಯಲಾದ ರಹಸ್ಯದ ಬಗ್ಗೆ ತಿಳಿದಲ್ಲಿ ಮತ್ತೆ ಬ್ಲಾಗಿಸಲಾಗುವುದು.

Friday, August 17, 2007

ಮುಂಗಾರು ಮಳೆ ಗುಂಗಿನಲ್ಲಿ, ಜೋಗದ ಕೆಟ್ಟ ರಶ್ಶಿನಲ್ಲಿ




‘ಜೋಗದ ಸಿರಿ ಬೆಳಕಿನಲ್ಲಿ


ತುಂಗೆಯ ತೆನೆ ಬಳುಕಿನಲ್ಲಿ


ಸಹ್ಯಾದ್ರಿಯ ಲೋಕದುದಿನ


ಉತ್ತುಂಗದ ಶಿಖರದಲ್ಲಿ...’


ಕವಿ ನಿಸಾರ್ ಅಹ್ಮದ್ ಅವರ ‘ನಿತ್ಯೋತ್ಸವ’ ಹಾಡಿನ ಜೋಗದ ವರ್ಣನೆಯನ್ನು ಈಗ ಕಣ್ಣಾರೆ ಕಂಡು ಅನುಭವಿಸಬಹುದು. ಒಂದು ಸಿನಿಮಾ ಏನೆಲ್ಲಾ ಮಾಡಬಹುದು ಎಂಬುದಕ್ಕೆ ಮುಂಗಾರು ಮಳೆಯ ನಂತರದ ಜೋಗ ಸಾಕ್ಷಿ. ಮುಂಗಾರು ಮಳೆಯಲ್ಲಿ ಜೋಗ ನೋಡಿದ ಜನ ಈ ಬಾರಿ ಮೈ ತುಂಬಿ ಧುಮ್ಮಕ್ಕುತ್ತಿರುವ ಜೋಗದತ್ತ ಹೊರಟಿದ್ದಾರೆ ಬೇಗ.


ಜೋಗ ಅದೆಷ್ಟೋ ವರ್ಷದಿಂದ ಇದೆ. ನಾನೂ ಹಲವು ವರ್ಷದಿಂದ ಹೋಗಿ ಬರುತ್ತಿದ್ದೇನೆ. ಈ ವರ್ಷದಷ್ಟು ಜನ! ಊಹೂಂ. ನಾನು ಇವತ್ತಿನವರೆಗೆ ನೋಡಿಲ್ಲ. ನಾನಷ್ಟೇ ಏಕೆ ಜೋಗದ ಜನರೇ ಇಷ್ಟು ಜನರನ್ನು ಜೀವಮಾನದಲ್ಲಿ ನೋಡಿರಲಿಲ್ಲ. ಶರಾವತಿ ನದಿಯಲ್ಲಿ ಹರಿದು ಬರುವ ನದಿಯನ್ನೂ ಮೀರಿಸುವಷ್ಟು ಜನ!


ಹೀಗೆ ಹರಿದು ಬಂದ ಜನರಲ್ಲಿ ಒಂದು ಹುಡುಗಿ ಅವಳ ಹುಡುಗನ ಬಳಿ ‘ಮುಂಗಾರು ಮಳೆ ಕಲ್ಲಿಗೆ ಹೋಗೋಣ್ವಾ’ ಅಂದಿದ್ದು ಸಿನೆಮಾದ ಎಫೆಕ್ಟಲ್ಲದೇ ಇನ್ನೇನು. ಆ ಕಲ್ಲೋ ಅದೆಷ್ಟೋ ವರ್ಷದಿಂದ ಅಲ್ಲೇ, ಹಾಗೇ ಇತ್ತು. ಮುಂಗಾರು ಮಳೆ ಸಿನಿಮಾದಲ್ಲಿ ಗಣೇಶ ಮತ್ತು ಸಂಜನಾ ಗಾಂಧಿ ಯಾನೆ ಪೂಜಾ ಗಾಂಧಿ ಕಲ್ಲಿನ ಮೇಲೆ ಮಲಗಿ ಹಾಡಿದ್ದೇ ಹಾಡಿದ್ದು, ಆ ಕಲ್ಲಿಗೆ ಅಯಾಚಿತವಾಗಿ ಮುಂಗಾರು ಮಳೆ ಕಲ್ಲು ಎಂಬ ಹೆಸರು ಬಂದಿದೆ. ಅಲ್ಲೇ ಇರುವ ಅಂಗಡಿ ಸಾಲಿನಲ್ಲಿ ನಡೆದು ಹೊರಟಿರೋ ಮುಂಗಾರು ಮಳೆ ಚರುಮುರಿ, ಮುಂಗಾರು ಬಳೆ ಬಜೆ, ಬೊಂಡಾ ಎಲ್ಲವೂ ಸಿಗುತ್ತವೆ. ಇಡೀ ಜೋಗವೇ ಮುಂಗಾರು ಮಳೆ ಮಯ. ಎಲ್ಲ ವಾಹನಗಳನ್ನೂ ‘ಮುಂಗಾರು ಮಳೆಯೇ ಏನು ನಿನ್ನ ಹನಿಗಳ ಲೀಲೆ’ ಎಂಬ ಹಾಡು. ಸಿನಿಮಾದಿಂದ ಉಂಟಾದ ‘ಮೇನಿಯಾ’ದ ಪರಿಣಾಮ ಆಗಸ್ಟ್ ೧೨ರಂದು ಜೋಗದಲ್ಲಿ ಜನರ ಮಹಾಪೂರ. ಪರಿಣಾಮ ಟ್ರಾಫಿಕ್ ಜಾಮ್!


ಜೋಗದಲ್ಲಿ ಆ.೧೨ರಂದು ಉಂಟಾದ ಟ್ರಾಫಿಕ್ ಜಾಂನ ಪ್ರಭಾವ ನೀವು ನೋಡಬೇಕಿತ್ತು. ಬೆಂಗಳೂರನ್ನೂ ಮೀರಿಸುವಂತಿತ್ತು. ನೀವು ನಂಬಿ ಬಿಡಿ ನಾನು ಮೂರೂವರೆ ತಾಸು ಜೋಗದಲ್ಲಿ ಶರಾವತಿ ನದಿಗೆ ಕಟ್ಟಲಾದ ಸೇತುವೆ ಮೇಲೆ ಸ್ಕಾರ್ಪಿಯೋದಲ್ಲಿ ಕುಳಿತಿದ್ದೆ. ಒಂದಿಂಚು ಗಾಡಿ ಮುಂದೆ ಚಲಿಸಲಿಲ್ಲ. ಬಾಡಿ ಗಾಡಿಯಿಂದ ಇಳಿಯಲಿಲ್ಲ. ನನ್ನ ಜತೆಗೆ ಜೋಗಕ್ಕೆ ಹೋಗಿದ್ದವರೆಲ್ಲ ನಡೆದುಕೊಂಡು ಹೋಗಿ ಜೋಗ ಫಾಲ್ಸನ್ನು ಒಂದು ಬದಿಯಿಂದ ನೋಡಿ ಬಂದರೂ ನಾನು ಮಾತ್ರ ಸ್ಕಾರ್ಪಿಯೋದಲ್ಲಿ ಸೇತುವೆ ಮೇಲೆಯೇ ಇದ್ದೆ.


ರಾಷ್ಟ್ರೀಯ, ಅಂತಾರಾಷ್ಟ್ರೀಯ ಮಟ್ಟದ ಪ್ರವಾಸಿ ಕೇಂದ್ರವೆಂದು ಜೋಗ ಹೆಸರು ಮಾಡಿದ್ದರೂ, ನಿರೀಕ್ಷೆಗೂ ಮೀರಿ ಜನ ಬಂದಾಗ ಅಲ್ಲಿವ ವ್ಯವಸ್ಥೆ ಮಗುಚಿ ಬೀಳುತ್ತದೆ. ನಮ್ಮ ವ್ಯವಸ್ಥೆಗಳೇ ಹಾಗೆ. ಅಲ್ಲಿ ಮುಂದಾಲೊಚನೆಯಿಲ್ಲ. ಸಿನಿಮಾದ ಪರಿಣಾಮ ಜೋಗಕ್ಕೆ ಇಷ್ಟು ಪ್ರಮಾಣದ ಜನ ಬರಬಹುದು ಎಂಬುದನ್ನು ಮೊದಲೇ ಜಿಲ್ಲಾಡಳಿತ ಗ್ರಹಿಸಿದ್ದರೆ ಬಹುಶಃ ಈ ಜಾಮ್ ಆಗುತ್ತಿರಲಿಲ್ಲ. ಜೋಗಕ್ಕೆ ಒಂದು ಬದಿಯಿಂದ ಬಂದು ಇನ್ನೊಂದು ಬದಿಯಿಂದ ಹೋಗಲು ವ್ಯವಸ್ಥೆ ಮಾಡುತ್ತಿದ್ದರೆ, ವಾಹನಗಳ ಪಾರ್ಕಿಂಗ್‌ಗೆ ತುಂಬ ಸ್ಥಳ ಕಲ್ಪಿಸುತ್ತಿದ್ದರೆ ಇಂತಹ ಅವ್ಯವಸ್ಥೆ ತಪ್ಪಿಸಬಹುದಿತ್ತು.ಆದರೂ ಹೀಗೆ ಜೋಗದತ್ತ ಜನ ಧುಮುಕಿ ಬರಲು ಮುಂಗಾರು ಮಳೆ ಸಿನಿಮಾ ಕಾರಣ ಎಂಬುದು ಸತ್ಯ. ಜೋಗದ ವೈಭವವನ್ನು ಜನರಿಗೆ ತೆರೆದು ತೋರಿಸಿದ್ದಕ್ಕೆ ಯೋಗರಾಜ್ ಭಟ್ ಅವರಿಗೆ ಥ್ಯಾಂಕ್ಸ್ ಹೇಳಲೇ ಬೇಕು.


ನಮ್ಮೂರ ಮಂದಾರ ಹೂವೆ ಸಿನಿಮಾದಲ್ಲಿ ಉತ್ತರ ಕನ್ನಡದ ಯಾಣವನ್ನು ತೋರಿಸಿದಾಗಲೂ ಹೀಗೇ ಆಗಿತ್ತು. ಈ ದೃಷ್ಟಿಯಿಂದ ಎರಡೂ ಸನಿಮಾಗಳ ನಿರ್ದೇಶಕರು ಅಭಿನಂದನಾರ್ಹರು.
(ಚಿತ್ರಗಳು: ಸಿಂಧುಶ್ರೀ ಭಟ್)

Thursday, August 09, 2007

ಮನೆಗಳ ಮನಗಳಲಿ ಜಿನುಗುತಿರುವ ಹನಿ ಸೋನೆಗಳು

ಇಡೀ ದಿನ ಜಿಟಿಜಿಟಿ ಮಳೆ. ದಿನವಿಡೀ ಬಿಟ್ಟೂ ಬಿಡದೆ ಕಾಡುವಂಥ ಪ್ರೇಮಿಯ ಮಳೆ. ಬಸ್ ಸ್ಟ್ಯಾಂಡ್ ಎದುರಿರುವ ಅಂಗಡಿಯಲ್ಲಿ ಚಾಕಲೇಟು ಕೊಡಿಸುವಂತೆ ಅಮ್ಮನ ಸೆರಗು ಜಗ್ಗಿ ರಚ್ಚೆ ಹಿಡಿದ ಮಗುವಿನಂಥ ಮಳೆ. ಮೊಬೈಲ್‌ಗೆ ಬಂದು ಬೀಳುವ ಪ್ರೇಮಿಯ ಸಾಕೆನಿಸುವಷ್ಟು ಎಸ್‌ಎಂಎಸ್‌ನಂಥ ಮಳೆ. ಹೊದ್ದು ಮಲಗುವಂತೆ ಮುದ್ದು ಮಾಡುವ ಮಳೆ. ಭಾವನೆಗಳ ನೆರೆ ಉಕ್ಕಿಸುವ ಮಳೆ. ನೆನಪುಗಳ ಸೆಳೆದು ತರುವ ಮಳೆ.
ಕಳೆದೆರಡು ವರ್ಷದಿಂದ ಮಂಗಳೂರಲ್ಲಿ ಈ ರೀತಿಯ ಮಳೆಯೇ ಇರಲಿಲ್ಲ. ಬರ್ರನೆ ಬಂದು ಸರ್ರನೆ ಹೋಗುತ್ತಿತ್ತು. ಆದರೆ ಈ ಬಾರಿ ಮತ್ತೆ ಹಿಂದಿನ ವೈಭವ ಪಡೆದುಕೊಂಡಿದೆ. ಈ ಮಳೆಯೇ ಕವನಗಳ ಗಾಳಕ್ಕೆ ನನ್ನನ್ನು ಸಿಕ್ಕಿಸಿದ್ದು.
ಕೆರೆಗಳ ಉಕ್ಕಿಸಿ, ತೊರೆಗಳ ಸೊಕ್ಕೊಸಿ
ಗುಡ್ಡವ ಬೆಟ್ಟವ ಕೊರೆಕೊರೆದು
ಕಡಲಿನ ತೆರೆಗಳ ರಿಂಗಣ ಗುಣಿಯಿಸಿ
ಮೊರೆಮೊರೆವುದದೋ ಸರಿ ಸುರಿದು...
ಮಧ್ಯಾಹ್ನದ ಹೊತ್ತಿಗೇ ರಾತ್ರಿ ಸೃಷ್ಟಿಸುವ ಆಷಾಢದ ಕಪ್ಪು ಮೋಡ. ಎಡಬಿಡದೆ ಸುರಿಯುವ ಮಳೆ. ತುಂಬಿದ ಕೆರೆ, ನೆರೆ ಉಕ್ಕಿಸಿದ ನದಿ. ಇವೆಲ್ಲ ನೋಡುವಾಗ ಕಡೆಂಗೊಡ್ಲು ಶಂಕರ ಭಟ್ಟರ ಈ ಕವಿತೆ ನೆನಪಾಗದಿದ್ದೀತೆ?
ಸತತ ಮೂರು ದಿನದಿಂದ ಬಿಡದೆ ಸುರುಯುತ್ತಿದೆ ಮಳೆ. ಪತ್ರಿಕೆ, ಟಿವಿ ಎಲ್ಲಿ ನೋಡಿದರೂ ನೀರು. ಹೆದ್ದಾರಿಯಲ್ಲೂ ತೆಪ್ಪ ಹಾಕಿ ಹೋಗಬೇಕಾದ ಸ್ಥಿತಿ. ಕಡೆಂಗೊಡ್ಲು ಶಂಕರ ಭಟ್ಟರು ಬರೆದಂತೆ...
‘ಹಗಲಿರುಳೆನ್ನದೆ ಹೊಡೆಯುವ ಜಡಿಮಳೆ
ಬಡಿಕೋಲ್ ಮಿಂಚಿನ ಲಾಗುಗಳು
ಮನೆಗಳ ಮನಗಳ ಒಳಗೂ ಹೊರಗೂ
ಜಿನುಗಿತಿರುವ ಹನಿ ಸೋನೆಗಳು...’
ಇದು ಮಳೆಯ ಅದ್ಭುತ ವರ್ಣನೆ. ಬಹುಶಃ ಮಳೆಯ ಬಗ್ಗೆ ಬರೆಯದ ಕವಿಗಳು ಇಲ್ಲವೇ ಇಲ್ಲ ಅಂದರೂ ತಪ್ಪಲ್ಲ. ಒಬ್ಬೊಬ್ಬ ಕವಿಗೂ ಮಳೆ ಹಲವು ಥರ. ಅವರವರ ಭಾವಕ್ಕೆ ತಕ್ಕಂತೆ. ದಕ್ಷಿಣ ಕನ್ನಡದವರೇ ಆದ ಇನ್ನೊಬ್ಬ ಕವಿ ಸುಬ್ರಾಯ ಚೊಕ್ಕಾಡಿ ಅವರು ಮಳೆಗಾಲದ ರಾತ್ರಿಯನ್ನು ಸೊಗಸಾಗಿ ವರ್ಣಿಸಿದ್ದಾರೆ. ಮಳೆ ಬರುವುದು ಅವರಿಗೆ ಆಕಾಶ ಬಿಕ್ಕುತಿರುವಂತೆ ಭಾಸವಾಗಿದೆ.
ಆಕಾಶ ಬಿಕ್ಕುತಿದೆ
ಮುಗಿಲ ಮುಸುಕ ಮರೆಗೆ
ಮಾತಿರದ ತಾರೆಗಳು
ಅಡಗಿ ಕುಳಿತ ಗಳಿಗೆ...
ಸೂರ್ಯ ಚಂದ್ರರಿರದೆ
ರಿದ ಕಪ್ಪು ಸುತ್ತ ಚೆಲ್ಲಿ
ಹಸಿರ ಉಸಿರು ಅಡಗಿ ಹೋಗಿ
ಹೊಳೆವ ದಾರಿಯಲ್ಲಿ...
ಕಪ್ಪುಗಟ್ಟಿದ ಮೋಡ, ಸುರಿವ ಮಳೆಯ ನಡುವೆ ಮನೆಯೊಳಗೆ ಬೆಚ್ಚಗೆ ಕುಳಿತು ಈ ಹಾಡನ್ನು ಸಿ. ಅಶ್ವಥ್ ಅವರ ಕಂಠದಲ್ಲಿ ಕೇಳುತ್ತಿದ್ದರೆ ಸ್ವರ್ಗಕ್ಕೆ ಮೂರೇಗೇಣು. ಈ ಹಾಡು ಅಂತಲ್ಲ ಮಳೆಯ ಕುರಿತ ಹಾಡುಗಳೇ ಹಾಗೆ ಮಳೆಯಂತೆ. ಕೇಳುತ್ತಿದ್ದರೆ ಭಾವನೆಗಳ ಲೋಕದಲ್ಲಿ ಮುಳುಗಿ ಹೋಗುತ್ತೇವೆ. ನೆನಪುಗಳಲ್ಲಿ ತೋಯ್ದು ಬಿಡುತ್ತೇವೆ. ಸಮಯ, ಕೆಲಸ, ಊಟ, ತಿಂಡಿ ಯಾವುದರ ಪರಿವೆಯೇ ಇರುವುದಿಲ್ಲ.
ಮಳೆಗಾಲ ಅದೆಷ್ಟು ಸುಂದರ! ಕವಿಯ ಕಲ್ಪನೆ ಅದಕ್ಕಿಂತ ಚೆಂದ!!
ಮಳೆಯ ಕುರಿತು ಹಾಡುಗಳನ್ನು ಹುಡುಕುತ್ತ ಹೊರಟರೆ ಓದಲು ಸಮಯ ಸಾಲದು. ಯಾಕೆಂದರೆ ಮಳೆಯ ಬಗ್ಗೆ ಬರೆಯದ ಕವಿಗಳಿಲ್ಲ. ಯಾಕೆಂದ್ರೆ ಮಳೆಗಾಲಕ್ಕೂ ಪ್ರೇಮಕ್ಕೂ ಅಂಟಿದೆ ನಂಟು. ಪ್ರೇಮಕ್ಕೂ ಕವಿಗಳಿಗೂ ಬಿಡಲಾರದ ಅಂಟು. ಈ ಬಗ್ಗೆ ತುಂಟ ಕವಿ ಎಂದೇ ಹೆಸರಾಗಿರುವ ಬಿ.ಆರ್. ಲಕ್ಷ್ಮಣ ರಾವ್ ಒಂದು ಕವನ ಬರೆದು ಮಳೆಯನ್ನೇ ವಿನಂತಿಸಿದ ಪರಿ ನೋಡಿ...
ಬಾ ಮಳೆಯೆ ಬಾ
ಅಷ್ಟು ಬಿರುಸಾಗಿ ಬಾರದಿರು
ನನ ನಲ್ಲೆ ಬರಲಾಗದಂತೆ
ಅವಳಿಲ್ಲಿ ಬಂದೊಡನೆಯೆ
ಬಿಡದೆ ಬಿರುಸಾಗಿ ಸುರಿ
ಹಿಂತಿರುಗಿ ಹೋಗದಂತೆ...
ಮಳೆಯಲ್ಲಿ ಜನ ನೆನೆಯಲು ಬಯಸಿದರೆ ಪ್ರೀತಿಯಲ್ಲಿ ತೋಯಲು ಇಷ್ಟಪಡುತ್ತಾರೆ. ಸಿನಿಮಾಗಳಲ್ಲೂ ಪ್ರೇಮಿಗಳಿಬ್ಬರು ಹಾಡುವಾಗ ಮಳೆ ಬರಿಸಲಾಗುತ್ತದೆ. ಪ್ರೇಮಿಗಳಿಬ್ಬರು ಮಳೆ ಬಂದು ಒಂಟಿ ಕಾಲಿ ಮನೆ ಹೊಕ್ಕಿದಾಗ ಛಟೀರನೆ ಹೊಡೆದ ಮಿಂಚಿನಿಂದ ಹೆದರಿದ ಪ್ರೇಯಸಿ ಪ್ರಿಯಕರನನ್ನು ಅಪ್ಪಿ... ಮುಂದೇನಾಗುತ್ತದೆ ನೀವೇ ಕಂಡಿದ್ದೀರಿ ಅಥವಾ ಊಹಿಸಬಲ್ಲಿರಿ. ಬೈಕಲ್ಲಿ ಒದ್ದೆಯಾದ ಪ್ರೇಮಿಗಳು ಗಟ್ಟಿಯಾಗಿ ಅಪ್ಪಿಕೊಂಡು ಹೋಗುತ್ತಿದ್ದರೆ ನೋಡುಗರ ಹೊಟ್ಟೆ ತಂಪಾದ ಮಳೆಯಲ್ಲೂ ಧಗಧಗನೆ ಉರಿಯುತ್ತದೆ. ಬಹುಶಃ ಸಮೀಕ್ಷೆ ನಡೆಸಿದರೆ ಹೆಚ್ಚಿನ ಪ್ರೇಮಗಳು ಅರಳೋದೇ ಮಳೆಗಾಲದಲ್ಲಿ. ಯಾಕೆಂದರೆ ಬಯಕೆಗಳು ಅರಳೋದು ಈ ಕಾಲದಲ್ಲೇ. ಅದಕ್ಕೆ ರಾಷ್ಟ್ರಕವಿ ಬಿರುದು ಪಡೆದ ಜಿ.ಎಸ್. ಶಿವರುದ್ರಪ್ಪ ಅವರು...
ಮುಂಗಾರಿನ ಅಭಿಷೇಕಕೆ
ಮಿದುವಾಯಿತು ನೆಲವು
ಹಗೆಯಾರಿದ ಹೃದಯದಲ್ಲಿ
ಪುಟಿದೆದ್ದಿತು ಚೆಲುವು
ಬಾಯಾರಿದ ಬಯಕೆಗಳಲ್ಲಿ

ಥಳಥಳಿಸುವ ನೀರು
ಕಣ್ಣಿಗೆ ತಣ್ಣಗೆ ಮುತ್ತಿಡುತಿದೆ
ಪ್ರೀತಿಯರ್ಥ ಹಸಿರು
ಮೈಮನಗಳ ಕೊಂಬೆಯಲ್ಲಿ
ಹೊಮ್ಮುವ ದನಿ ಇಂಪು
ನಾಳೆಗೆ ನನಸಾಗುವ
ಕನಸಿನ ಹೂ ಅರಳುವ ಕಂಪು... ಅಂದಿದ್ದಾರೆ.
ಮಳೆಗಾಲದಲ್ಲಿ ಅರಳುವ ಪ್ರೇಮದ ಬಗ್ಗೆ ಇನ್ನೊಬ್ಬ ಕವಿ...
ಮುಂಗಾರು ಮೋಡ ಕವಿದಾಗ
ಸಿಂಗಾರಿ ನಿನ್ನ ನೆನಪಾದಾಗ
ಹನಿ ಹನಿ ಜಿನುಗಲು
ಮುತ್ತಿನ ಮಣಿಗಳು
ಮನದಲ್ಲಿ ಏನೋ ಆವೇಗ... ಅಂದಿದ್ದಾನೆ. ಕಾಳಿದಾಸನ ಮೇಘ ಸಂದೇಶ ಕಾವ್ಯದಲ್ಲಿ ಮಳೆಗಾಲದಲ್ಲಿ ಪ್ರೇಮಿಯೊಬ್ಬನ ವಿರಹ ಮನೋಜ್ಞ ವರ್ಣನೆಯಿದೆ. ಈಗ ಎರಡು ಮೂರು ದಿನದಿಂದ ಬಿಡದೆ ಸುರಿಯುತ್ತಿರುವ ಮಳೆ ನೋಡಿದಾಗ ಪತ್ರಕರ್ತ ಚಿದಂಬರ ಬೈಕಂಪಾಡಿ ಅವರ ಹಾಡೊಂದು ನೆನಪಾಗುತ್ತಿದೆ. ಬಹುಶಃ ಚಿದಂಬರ ಪತ್ರಕರ್ತರೂ ಆಗಿರುವುದರಿಂದ ಅವರಿಗೆ ಮಳೆಯಿಂದಾಗಿ ಅನಾಹುತಗಳನ್ನು ವರ್ಣಿಸಿದ್ದಾರೆ. ಮನೆ ಬೀಳುವುದು, ರಸ್ತೆ ಹಾಳಾಗುವುದು ಎಲ್ಲವೂ ಕವನವಾಗಿವೆ ನೋಡಿ..
ನಿನ್ನೆ ಮಳೆ ಬಂತು
ಬೇಡವೆನ್ನುವಷ್ಟು
ಆಗಸವೇ ತೂತಾದಂತೆ
ಕುಸಿದು ಬೀಳುವಂತೆ
ಮನೆಯ ಮಾಡು
ಮಳೆ ಹನಿಗಳು...
ಯಾರೂ ಪ್ರಶ್ನಿಸದ
ಕಳಪೆ ಕಾಮಗಾರಿಯನ್ನು
ಪ್ರಶ್ನಿಸಿದಂತಿತ್ತು ಮಳೆ;
ಸಾಲು ಸಾಲು ಮನೆಗಳು
ನೆಲಕಚ್ಚಿದಾಗ-
ಚರಂಡಿಯನ್ನೇ ಮರೆಮಾಚಿದಾಗ
ಕರಗಿ ಇಟ್ಟಿಗೆ...
ಮಳೆ ಬಂತು
ಬೇಡಬೇಡವೆನ್ನುವಷ್ಟು
ಮಕ್ಕಳು ಶಾಲೆ ಮರೆವಷ್ಟು
ದೋಣಿಯಾಟ ಹಿತವೆನಿವಷ್ಟು...... ಎಂದು ಬರೆಯುತ್ತಾರೆ ಅವರು. ಬಾಲ್ಯ ನೆನಪಿಸುತ್ತಾರೆ. ಈಗಿನ ಮಕ್ಕಳಿಗೆಲ್ಲಿಯ ದೋಣಿಯಾಟ? ಅವರಿಗದು ಮರೆತೇ ಹೋಗಿದೆ. ಅವರಿಗಿಷ್ಟವಿದ್ದರೂ ಮಕ್ಕಳಾಡುವ ದೋಣಿಯಾಟಕ್ಕೆ ಅಪ್ಪ- ಅಮ್ಮಂದಿರ ಬಿರುಗಾಳಿ ಅಡ್ಡಿಯಾಗುತ್ತದೆ.ಅದೇನೇ ಇರಲಿ ಮಳೆ ಒಬ್ಬೊಬ್ಬ ಕವಿಗೆ ಒಂದೊಂದು ರೀತಿ. ಒಬ್ಬೊರಿಗೆ ಆಕಾಶ ಬಿಕ್ಕಿದಂತೆ, ಇನ್ನೊಬರಿಗೆ ಭೂಮಿ ಮೆದುವಾದಂತೆ, ಇನ್ನೊಬ್ಬರಿಗೆ ಮಾಯದಮಥ ಮಳೆಯಂತೆ ಕಂಡಿದೆ. ಮತ್ತೊಬ್ಬ ಕವಿ ಮಳೆಯಿಂದ ನಮ್ಮೊಳಗಿನ ಸ್ವಾರ್ಥ, ದುರಾಸೆಗಳೇ ಮಳೆಯಲ್ಲಿ ಕೊಚ್ಚಿ ಹೋಗಲಿ ಅಂದಿದ್ದಾರೆ.
ಸುರಿಯಲಿ, ತಂಪೆರೆಯಲಿ
ಅವಳ ಪ್ರೀತಿಯ ಮಳೆ
ಹರಿಯಲಿ ಬೋರ್ಗರೆಯಲಿ
ಬತ್ತಿದೆದೆಗಳಲೀ ಹೊಳೆ
ಕೊಚ್ಚಿ ಹೋಗಲಿ ಸ್ವಾರ್ಥ ದುರಾಸೆ
ಸ್ವಚ್ಛವಾಗಲಿ ಇಳೆ
ಚಿಮ್ಮಲಿ ಹಚ್ಚನೆ ಹಸಿರು...
ಕವಿಯ ಆಶಯಗಳು ಈಡೇರಲಿ. ಜನಕ್ಕೆ ಮಳೆಯ ಸಂತಸ ಅನುಭವಿಸುವ ಸಮಯ ದೊರೆಯಲಿ. ಪ್ರೇಮ ಅರಳಿ ದ್ವೇಷ ಮರೆಯಲಿ. ಟಿಪ್ ಟಿಪ್ ಬರಸಾ ಪಾನಿಯಲ್ಲಿ ನೆನೆಯುತ್ತ ಮಕ್ಕಳು ದೋಣಿ ಬಿಟ್ಟು ಹರ್ಷಿಸಲಿ.

Sunday, August 05, 2007

ಹೆಂಡತಿಯೊಬ್ಬಳು ಮನೆಯೊಳಗಿದ್ದರೆ...!

ಹೆಂಡತಿಯೊಬ್ಬಳು ಮನೆಯೊಳಗಿದ್ದರೆ
ನನಗದು ಕೋಟಿ ರೂಪಾಯಿ
ಹೆಂಡತಿಯೊಬ್ಬಳು ಮನೆಯೊಳಗಿದ್ದರೆ
ನಾನೂ ಒಬ್ಬ ಸಿಪಾಯಿ...
ಹಾಗಂತ ಪ್ರೇಮ ಕವಿ ಮೈಸೂರು ಕೆ.ಎಸ್. ನರಸಿಂಹ ಸ್ವಾಮಿ ಹಾಡಿದ್ದು ಅದೆಷ್ಟು ಸತ್ಯ ಅಂತ ಈಗ ಅರ್ಥವಾಗ್ತಿದೆ.
ಮನುಷ್ಯ ಅದೆಷ್ಟು ಬೇಗ ಒಂದು ವಾತಾವರಣಕ್ಕೆ, ವ್ಯವಸ್ಥೆಗೆ ಹೊಂದಿಕೊಂಡು ಬಿಡುತ್ತಾನೆ ಅಲ್ವಾ? ನಂಗೆ ಮದುವೆಯಾಗಿ ಒಂದು ವರ್ಷದ ಎರಡು ತಿಂಗಳಾಯಿತಷ್ಟೇ. ಈಗಲೇ ಹೆಂಡತಿ ಮನೆಯಲ್ಲಿಲ್ಲದಿದ್ದರೆ ಬೋರು ಬೋರು. ಐದಾರು ವರ್ಷ ರೂಂ ಮೇಟ್‌ಗಳೊಟ್ಟಿಗೆ ಇದ್ದು, ಹೋಟೆಲ್‌ನಲ್ಲೇ ಊಟ ಮಾಡಿ ಜೀವನ ಸಾಗಿಸಿ, ಕರೆದು ಕಟ್ಟುವವರಿಲ್ಲ, ತುರಿಸಿ ಹುಲ್ಲು ಹಾಕುವವರಿಲ್ಲ ಎಂಬಂತಿದ್ದೆ. ಈಗ ಕೇವಲ ಒಂದು ವರ್ಷದ ಹೆಂಡತಿ ಕೈ ಅಡುಗೆಯ ಊಟ ಹೋಟೆಲ್ ಹತ್ತಿರ ಹೋಗಲೂ ಬಿಡುತ್ತಿಲ್ಲ. ಹೆಂಡತಿ ಇಲ್ಲದಿದ್ದರೂ ಅಡುಗೆ ಮಾಡಿಟ್ಟು ಹೋಗು ಎಂದು ಹೇಳಿ ಮನೆಯಲ್ಲೇ ಊಟ ಮಾಡುವ ತವಕ.
ಅವಳೆಷ್ಟೇ ಅಡುಗೆ ಮಾಡಿಟ್ಟು ಹೋದರೂ ಅವಳ ಜತೆ ಪಕ್ಕದಲ್ಲಿ ಕೂತು ಉಂಡಂಗೆ ಆಗುತ್ತದೆಯೇ? ಅವಳೇ ಬಡಿಸಿ ತಂದುಕೊಂಟ್ಟಂಗೆ ಇರುತ್ತದೆಯೇ? ಊಹುಂ.
ಅದಕ್ಕೆ ಹೇಳಿದ್ದು ಕೆಎಸ್‌ನ ‘ಹೆಂಡತಿಯೊಬ್ಬಳು ಮನೆಯೊಳಗಿದ್ದರೆ ನನಗದು ಕೋಟಿ ರೂಪಾಯಿ’ ಅಂತ. ಇಷ್ಟೆಲ್ಲ ಬರೆಯುವಾಗ ನನ್ನ ಹೆಂಡತಿ ಮನೆಯಲ್ಲಿಲ್ಲ ಅಂತ ನಿಮಗೂ ಅರ್ಥವಾಗಿರಹುದು. ಹೌದು ಅವಳು ಎರಡು ದಿನದ ಮಟ್ಟಿಗೆ ಅಪ್ಪನ ಮನೆಗೆ ಹೋಗಿದ್ದಾಳೆ. ಹೆಂಡತಿ ಇಲ್ಲದಾಗಿನ ಕಷ್ಟ ಅರ್ಥವಾಗುತ್ತಿದೆ.
ಬೆಳಗ್ಗೆ ನಾನು ಕೆಲಸ ಮುಗಿಸಿ ಬರುವಷ್ಟರಲ್ಲಿ ಅಥವಾ ಮನೆಯಲ್ಲೇ ಕುಳಿತು ಕೆಲಸ ಮುಗಿಸುವಷ್ಟರಲ್ಲಿ ತಿಂಡಿ ರೆಡಿ. ಮಧ್ಯಾಹ್ನ- ರಾತ್ರಿಯ ಬಿಸಿ ಬಿಸಿ ಊಟ, ಮಧ್ಯದಲ್ಲೆಲ್ಲಾದರೂ ಏನಾದರು ತಿಂಡಿ ಹೀಗೆ ಏನೇ ಇರಲಿ ಹೆಂಡತಿ ಕೈಗೆ ತಂದಿಟ್ಟು ರೂಢಿ ಮಾಡಿಸಿಬಿಟ್ಟಿದ್ದಾಳೆ. ಹೊರಗೆ ಹೋಗಿ ಬರುವಷ್ಟರಲ್ಲಿ ಮನೆಯೂ ಸ್ವಚ್ಛ ಸ್ವಚ್ಛ. ಈಗ ಅವಳಿಲ್ಲದಿದ್ದರೆ ಊಟವೂ ಬೇಡ, ತಿಂಡಿಯೂ ಬೇಡ ಅನ್ನೋ ಸ್ಥಿತಿ. ಮನೆಯೋ ಕಸದ ಗೂಡು. ನಾನು ಊಟ ಮಾಡಿದ ಬಟ್ಟಲು ನಾನೇ ತೊಳೆಯೋದು. ಆದರೆ ಅನ್ನ, ಸಾಂಬಾರಿಗೆ ಹಾಕಿದ ಹುಟ್ಟು, ಖಾಲಿಯಾದ ಪಾತ್ರ ತೊಳೆಯೋಕೆ ಬೇಜಾರು. ಆಮೇಲೆ ತೊಳೆದರಾಯಿತು ಅಂತ ಸಿಂಕ್‌ನಲ್ಲೇ ಇಡೋ ಆಲಸಿತನ. ಎರಡು ದಿನ ಹೀಗೇ ದೂಡಿದರೆ ಸಿಂಕ್ ತುಂಬ ಪಾತ್ರ! ಅಯ್ಯೋ ಇಷ್ಟು ಪಾತ್ರ ತೊಳೀಬೇಕಾ ಅನ್ನಿಸುತ್ತೆ. ಆದ್ರೂ ತೊಳೀತೇನೆ ಅದು ಬೇರೆ ಮಾತು. ಹಸಿವಾಯಿತು ಊಟ ಮಾಡುವ ಅಂತ ಅಡುಗೆ ಕೋಣೆಗೆ ಹೋದ ಮೇಲೆ ನೆನಪಾಗುತ್ತೆ ಅನ್ನ, ಸಾಂಬಾರ್ ಬಿಸಿ ಮಾಡಿಲ್ಲ ಅಂತ. ನಂತರ ಬಿಸಿ ಮಾಡಿ ಊಟ ಮಾಡುವಷ್ಟರಲ್ಲಿ ಊಟದ ಮೂಡೇ ಇರುವುದಿಲ್ಲ.
ಎಷ್ಟೋ ಮನೆಗಳನ್ನು ಹೊಕ್ಕಿದ ಕೂಡಲೆ ಗೊತ್ತಾಗುತ್ತದೆ ‘ಅವರ ಹೆಂಡತಿ ಮನೆಯಲ್ಲಿಲ್ಲ’ ಅಂತ. ಹೆಂಡತಿ ಮನೆಯಲ್ಲಿದ್ದಾಗ ಗೆಳೆಯರೋ, ಸಂಬಂಧಿಕರೋ ಬಂದರೆ ಚಿಂತೆಯಿಲ್ಲ. ಆದರೆ ಅವಳಿಲ್ಲದಾಗ ಯಾರಾದರೂ ಬಂದರೆ ಮನೆಗೆ ಕರೆಯದೇ ಸಾಗಹಾಕುವುದು ಹೇಗೆ ಎಂದು ಯೋಚಿಸಬೇಕಾಗುತ್ತದೆ. (ಹೆಂಡತಿ ಇಲ್ಲದಾಗೇ ಮನೆಗೆ ಕರೆತರುವ ಫ್ರೆಂಡ್ಸ್ ಆದರೆ ತೊಂದರೆಯಿಲ್ಲ)
ಇದನ್ನೆಲ್ಲ ಅನುಭಿಸಿದ ಮೇಲೆ ನಿಜಕ್ಕೂ ಹೆಂಡತಿಯೊಬ್ಬಳು ಮನೆಯೊಳಗಿದ್ದರೆ ನನಗದು ಕೋಟಿ ರೂಪಾಯಿ ಅನ್ನಿಸುತ್ತಿದೆ. ಹೆಂತಿಯೊಬ್ಬಳು ಮನೆಯೊಳಗಿದ್ದರೆ ನಾನೂ ಒಬ್ಬ ಸಿಪಾಯಿ ಅಂತ ಕೆಎಸ್‌ನ ಹೇಳಿದ್ದು, ಮನೆ ಕೆಲಸ ಮಾಡುತ್ತೇನೆಂದಲ್ಲ. ಬದಲಾಗಿ ಹೆಂಡತಿ ಇದ್ದರೆ ಮನೆ ಬದಿಗೆ ನಿಶ್ಚಿಂತೆ. ಹಾಗಾಗಿ ಮಾಡುವ ಕೆಲಸದಲ್ಲಿ ಸಿಪಾಯಿಯಂತೆ ದುಡಿಯಬಹುದು ಎಂಬರ್ಥದಲ್ಲಿ ಇರಬಹುದಾ?
(ಕೆಲವರು ಹೆಂಡತಿಯೊಟ್ಟಿಗಿದ್ದು ಬೇಜಾರು ಬಂದಾಗ ಅವರನ್ನು ಅಪ್ಪನ ಮನೆಗೆ ಕಳುಹಿಸಿ ಹಾಯಾಗಿ ಇರುವವರಿದ್ದಾರೆ. ಸಧ್ಯ ನನಗಂಥ ಸ್ಥಿತಿ ಬಂದಿಲ್ಲ!)