Tuesday, May 26, 2009

ಬ್ಲಾಗು, ಹೂಂಸು ಮತ್ತು ಬಕ್‌ಬಕ್!ಬಹಳ ಜನರಿಗೆ ಬ್ಲಾಗು ಬೋರಾಗುತ್ತಿದೆ!
ನಾವು ಭಾರತೀಯರೇ ಹಾಗೆ. ನಮಗೆ ಆರಂಭ ಶೂರತ್ವ. ಬ್ಲಾಗು ಎಂಬ ಹೊಸ ಲೋಕ ತೆರೆದುಕೊಂಡಾಗ ಎಲ್ಲರೂ ಬ್ಲಾಗು ಆರಂಭಿಸಿದ್ದೇ ಆರಂಭಿಸಿದ್ದು. ಈಗ ಬಹುತೇಕ ಜನ ಅದನ್ನು ನಿಲ್ಲಿಸಿದ್ದಾರೆ. ನನ್ನಂಥ ಕೆಲವರು ಆಗಾಗ ನೆಪಕ್ಕೆ ಏನೋ ಬರೆದು ಸುಮ್ಮನಾಗುತ್ತಿದ್ದಾರೆ.
ಬ್ಲಾಗಿನ ಬಗೆಗಿದ್ದ ಬೆರಗು ಕಡಿಮೆಯಾಗಿದೆ. ಬರೆಯುವ ತೆವಲು ತೀರಿದೆ!
ನನ್ನ ಬಹಳ ಆತ್ಮೀಯರೊಬ್ಬರು ಯಾವಾಗಲು ಬ್ಲಾಗು ಬರವಣಿಗೆಯನ್ನು ಟೀಕಿಸುತ್ತಿರುತ್ತಾರೆ. ಅವರು ಇತ್ತೀಚೆಗೆ ಬ್ಲಾಗಿನ ಬಗ್ಗೆ ಹೇಳುತ್ತ ‘ಬ್ಲಾಗೆಂದರೆ ಒಂದು ಕೋಣೆಯಲ್ಲಿ ಒಬ್ಬನೇ ಕುಳಿತು ಹೂಂಸು ಬಿಟ್ಟು ಒಬ್ಬನೇ ಆಸ್ವಾದಿಸಿದಂತೆ’ ಎಂದು ವ್ಯಾಖ್ಯಾನಿಸಿದ್ದರು.
ಅವರ ಮಾತಿಗೆ ನಾನು ನಕ್ಕು ಸುಮ್ಮನಾಗಿದ್ದೆ. ಆದರೆ ನಂತರ ಯೋಚಿಸುವಾಗ ಬ್ಲಾಗೆಂದರೆ ಒಬ್ಬನೇ ಹೂಂಸು ಬಿಟ್ಟು ಒಬ್ಬನೇ ಆಸ್ವಾದಿಸುವುದಾದರೆ, ಪತ್ರಿಕೆಗಳಿಗೆ ಬರೆಯುವುದು ಹೂಂಸು ಬಿಟ್ಟು ಊರಿಗೆಲ್ಲ ನಾಥ ಕೊಟ್ಟಂತೆಯಾ? ಎಂಬ ಅನುಮಾನ ಶುರುವಾಗಿಬಿಟ್ಟಿತು!
ಬ್ಲಾಗು ಯಾರು ಓದುತ್ತಾರೆ? ಓದಿದರೂ ಎಷ್ಟು ಜನ ಓದಿಯಾರು? ಅದರಿಂದ ಸಿಗುವುದೇನು? ಬ್ಲಾಗಿಗೆ ಬರೆಯುವ ಸಮಯವನ್ನು ಬೇರೆಯದಕ್ಕೆ ಬಳಸಿಕೊಳ್ಳಬಹುದಲ್ಲವಾ? ಎಂಬುದು ಅವರ ಪ್ರಶ್ನೆ.
ಅದು ಸರಿಯೇ ಬ್ಲಾಗೇನು ಲಕ್ಷಾಂತರ ಜನ ಓದುವುದಿಲ್ಲ. ಆದರೆ ನಮಗೆ ಅನ್ನಿಸಿದ್ದನ್ನೆಲ್ಲ ಬರೆಯಲು ಬ್ಲಾಗೊಂದು ವೇದಿಕೆ ಅಷ್ಟೆ. ನಾಲ್ಕೇ ಜನ ಓದಲಿ. ಇಬ್ಬರೇ ಪ್ರತಿಕ್ರಿಯಿಸಲಿ. ಅಷ್ಟೇ ಸಮಾದಾನ. ನನ್ನ ಮನದೊಳಗಿನ ಮಾತನ್ನು ಒಂದಿಬ್ಬರಾದರೂ ಕೇಳಿಸಿಕೊಂಡರೆ ಅಷ್ಟೇ ಸಾಕು. ಅದಕ್ಕಾಗಿ ಬ್ಲಾಗು ಬರೆಯೋದು.
ಲಕ್ಷಾಂತರ ಜನ ಓದಲಿ, ನೋಡಲಿ. ಅದರಿಂದ ನನಗೆ ಸಾವಿರಾರು ಆದಾಯ ಬರಲಿ ಎಂದು ಬಯಸುವವರು ಖಂಡಿತ ಬ್ಲಾಗು ಬರೆಯುವುದಿಲ್ಲ.
ಅವರು ಧಾರಾವಾಹಿ ಬರೆಯುತ್ತಾರೆ!
ಬರವಣಿಗೆಯ ಲೋಕದಲ್ಲಿ ಅಂಬೆಗಾಲಿಡುತ್ತಿರುವ ನನ್ನಂಥಹ ಅದೆಷ್ಟೋ ಮಂದಿಗೆ ಬ್ಲಾಗು ಸಹಾಯಮಾಡಿದೆ. ನಮಗನ್ನಿಸಿದ್ದನ್ನು ಬರೆದು, ಅದರ ಬಗ್ಗೆ ಬೇರೆಯವರ ಅಭಿಪ್ರಾಯ ತಿಳಿದುಕೊಳ್ಳಲು, ನಮ್ಮ ಬರವಣಿಗೆ ಶೈಲಿ ಉತ್ತಮ ಪಡಿಸಿಕೊಳ್ಳಲು ಬ್ಲಾಗು ಸಾಧನವಾಗಿದೆ. ಇದರಿಂದಲೇ ಪರಿಚಯವಾದರು ಅದೆಷ್ಟೋ ಮಂದಿ. ಅವರ ಊರು, ಜಾತಿ ಯಾವುದೂ ಗೊತ್ತಿಲ್ಲ. ಬ್ಲಾಗು ಗೆಳೆತನಕ್ಕೂ ದಾರಿ ಮಾಡಿಕೊಟ್ಟಿದೆ.
ಹಾಗಂತ ಬ್ಲಾಗೇನು ಮಹಾ ಸುಬಗರ ಬೀಡಾಗೇನೂ ಉಳಿದಿಲ್ಲ. ಹುಡುಗಿಯರ ಬ್ಲಾಗಿಗೆ ಕೆಟ್ಟ ಕಾಮೆಂಟು ಹಾಕುವ, ಅನಾಮಧೇಯವಾಗಿ ಅನಗತ್ಯ ಟೀಕಿಸಿ ಬರೆಯುವವರೂ ಬ್ಲಾಗನ್ನು ದುರುಪಯೋಗ ಮಾಡಿಕೊಂಡಿದ್ದಾರೆ. ನಮಗಾಗದವರ ಬಗ್ಗೆ ಬರೆಯಲೂ ಬಳಸಿದ್ದಾರೆ. ಏನೇನೋ ಬರೆಯುತ್ತೇನೆ ಎಂದು ಹೆದರಿಸುವವರೂ ಇದ್ದಾರೆ. ನನಗೆ ಬಹಳ ಗೊತ್ತಿದೆ ಎಂದು ಆತ್ಮ ರತಿಯಲ್ಲಿ ಮುಳುಗಿದವರೂ ಇದ್ದಾರೆ.
ಇದೆಲ್ಲ ಏನೇ ಇರಲಿ ಬ್ಲಾಗಿಗೆ ಮೊದಲಿನ ಬೆರಗು ಉಳಿದಿಲ್ಲ ಎಂಬುದಂತೂ ಸತ್ಯ. ಅದೇನು ಬ್ಲಾಗಿನ ಸಂಖ್ಯೆ ಹೆಚ್ಚಾಗಿದ್ದಕ್ಕೋ ಅಥವಾ ದಿನಕಳೆದಂತೆ ಪ್ರತಿಯೊಂದೂ ಆಕರ್ಷಣೆ ಕಳೆದುಕೊಳ್ಳುತ್ತದೆ ಎಂಬ ನಿಯಮ ಬ್ಲಾಗಿಗೂ ಅನ್ವಯವಾದದ್ದಕ್ಕೋ ತಿಳಿಯದಾಗಿದೆ.
ಅಂತೂ ಒಬ್ಬರು ಬ್ಲಾಗು ಟೀಕಿಸಿದ್ದಕ್ಕೆ ಈ ಚಿಕ್ಕ ಬರಹ ಹುಟ್ಟಿಕೊಂಡಿತು. ಇಂಥದ್ದನ್ನೆಲ್ಲ ಬ್ಲಾಗಿನಲ್ಲಿ ಬರೆಯದೇ ವಿಜಯ ಕರ್ನಾಟಕದಲ್ಲಿ ಪ್ರಕಟಿಸಲು ಸಾದ್ಯವೇ? ಅಥವಾ ಇಂಥದ್ದಕ್ಕಾಗಿ ನಾನೇ ಒಂದು ಪತ್ರಿಕೆ ಆರಂಭಿಸೋದು ಸಾದ್ಯವೇ? ಇಲ್ಲ.
ಹೀಗಾಗಿ ಬ್ಲಾಗು. ಇದಕ್ಕೇನು ಮಹಾ ಸಮಯ ಬೇಕಾಗಿಲ್ಲ. ಇದಿಷ್ಟು ಬರೆಯಲು ೫ ನಿಮಿಷ ಸಾಕು. ಆದ್ದರಿಂದ ಬ್ಲಾಗು ಬರವಣಿಗೆಯಿಂದ ಮಹಾ ಸಮಯ ಹಾಳು ಎಂಬುದು ಸರಿಯಲ್ಲ ಎಂಬುದು ನನ್ನ ವಾದ.
ಹೂಂ ಅಂತೀರಾ? ಉಹೂಂ ಅಂತೀರಾ?

Monday, May 18, 2009

ಕರಗಿದ ಬಿಜೆಪಿಯ ಉಕ್ಕಿನ ಮನುಷ್ಯಲೋಕಸಭೆ ಚುನಾವಣೆಯಲ್ಲಿನ ಜನಾದೇಶ ಬಿಜೆಪಿಯನ್ನು ರಾಷ್ಟ್ರ ಮಟ್ಟದ ಪಕ್ಷವಾಗಿ, ಅಧಿಕಾರಕ್ಕೇರುವಷ್ಟು ಶಕ್ತಿಯುತವಾಗಿ ಬೆಳೆಸಿದ ಲಾಲಕೃಷ್ಣ ಅಡ್ವಾಣಿ ಅವರ ಪ್ರಧಾನಿ ಕನಸನ್ನು ಭಗ್ನಗೊಳಿಸಿರುವುದರ ಜೊತೆಗೆ ಅವರ ಯುಗಾಂತ್ಯಕ್ಕೆ ಬರೆದ ಮುನ್ನುಡಿಯಂತಿದೆ.

‘ಅಜಾತಶತ್ರು’ ಅಟಲ್ ಬಿಹಾರಿ ವಾಜಪೇಯಿ ೨ ಬಾರಿ ದೇಶದ ಜನರ ಮೇಲೆ ಮಾಡಿದ ಜಾದೂವನ್ನು ಮಾಡಿ ಬಿಜೆಪಿಯನ್ನು ಮತ್ತೆ ಕೇಂದ್ರದಲ್ಲಿ ಅಧಿಕಾರಕ್ಕೆ ತರಲು ಬಿಜೆಪಿಯ ‘ಉಕ್ಕಿನ ಮನುಷ್ಯ’ ಎಂದೇ ಹೆಸರಾಗಿರುವ ಲಾಲಕೃಷ್ಣ ಅಡ್ವಾಣಿ ವಿಫಲರಾಗಿದ್ದಾರೆ. ಪರಿಣಾಮ ಅವರು ಪ್ರಧಾನಿ ಪಟ್ಟದ ಆಕಾಂಕ್ಷಿಯಾಗಿಯೇ ರಾಜಕೀಯ ಜೀವನ ಮುಗಿಸಬೇಕಾದ ಸ್ಥಿತಿ ಉದ್ಭವವಾಗಿದೆ.

ಲಾಲಕೃಷ್ಣ ಅಡ್ವಾಣಿ ಅವರಿಗೆ ಈಗಾಗಲೇ ೮೧. ಮಾನಸಿಕವಾಗಿ ಅಥವಾ ದೈಹಿಕವಾಗಿ ಅಡ್ವಾಣಿ ಮೊದಲಿನಷ್ಟು ದೃಢವಾಗಿ ಉಳಿದಿಲ್ಲ. ಅಲ್ಲದೆ ಈ ಬಾರಿ ಜನ ಕಾಂಗ್ರೆಸ್ ನೇತೃತ್ವದ ಯುಪಿಎಗೆ ಸಾಕಷ್ಟು ಸಂಸದರ ಬೆಂಬಲ ದೊರಕಿಸಿಕೊಟ್ಟಿದ್ದಾರೆ. ಹೀಗಾಗಿ ಮುಂದಿನ ೫ ವರ್ಷದಲ್ಲಿ ಈ ಸರಕಾರ ಬೀಳುವ ಸಾದ್ಯತೆಗಳು ತೀರ ಕಡಿಮೆ. ಇನ್ನು ೫ ವರ್ಷದವರೆಗೆ ಲಾಲಕೃಷ್ಣ ಅಡ್ವಾಣಿ ರಾಜಕೀಯದಲ್ಲಿರುವುದು ಹಾಗೂ ಅದರ ನಂತರ ಅವರು ಮತ್ತೆ ಬಿಜೆಪಿಯ ಪ್ರಧಾನಿ ಅಭ್ಯರ್ಥಿಯಾಗಿ ಚುನಾವಣೆ ನೇತೃತ್ವ ವಹಿಸುವುದು ಬಹುತೇಕ ಅಸಾದ್ಯ ಸಂಗತಿ ಎಂಬುದರಲ್ಲಿ ಅನುಮಾನವಿಲ್ಲ.

ಈ ಲೋಕಸಭೆ ಚುನಾವಣೆ ನಡುವಿನಲ್ಲೇ ಸೋಲಿನ ಸುಳಿವರಿತ ಕೆಲವು ಬಿಜೆಪಿ ನಾಯಕರು ಗುಜರಾತ್ ಮುಖ್ಯಮಂತ್ರಿ ನರೇಂದ್ರ ಮೋದಿ ಅವರನ್ನು ಭವಿಷ್ಯದ ಪ್ರಧಾನಿ ಅಭ್ಯರ್ಥಿ ಎಂದು ಬಹಿರಂಗವಾಗಿಯೇ ಹೇಳಿದರು. ಇದನ್ನು ಸ್ವತಃ ಮೋದಿ ಅಲ್ಲಗಳೆದಿದ್ದಾರಾದರೂ, ವಾಜಪೇಯಿ ನಂತರ ಪ್ರಧಾನಿ ಅಭ್ಯರ್ಥಿಯಾಗಿ ದೇಶಾದ್ಯಂತ ಜನರನ್ನು ಸೆರಳೆಯಬಲ್ಲ ಶಕ್ತಿ ಇರುವುದು ನರೇಂದ್ರ ಮೋದಿಗೆ ಮಾತ್ರ ಎಂಬುದನ್ನು ಬಿಜೆಪಿ ನಾಯಕರು ಒಪ್ಪಿಕೊಳ್ಳುತ್ತಾರೆ. ಹೀಗಾಗಿ ಮುಂದಿನ ಲೋಕಸಭೆ ಚುನಾವಣೆ ಹೊತ್ತಿಗೆ ಮೋದಿ ಪ್ರಧಾನಿ ಅಭ್ಯರ್ಥಿಯಾಗಿ ಹೊರಹೊಮ್ಮುದನ್ನು ಬಹುತೇಕ ಬಿಜೆಪಿ ನಾಯಕರು ಬಯಸುತ್ತಿದ್ದಾರೆ.

೧೯೯೦ರ ದಶಕದಲ್ಲಿ ಅಯೋಧ್ಯೆ ಚಳವಳಿಯ ನೇತೃತ್ವ ವಹಿಸಿದ ಲಾಲಕೃಷ್ಣ ಅಡ್ವಾಣಿ ದೇಶಾದ್ಯಂತ ರಥಯಾತ್ರೆ ನಡೆಸಿ, ಬಿಜೆಪಿಯನ್ನು ರಾಷ್ಟ್ರೀಯ ಮಟ್ಟದ ಪಕ್ಷವನ್ನಾಗಿ ಮಾಡಿದರು. ಅಯೋಧ್ಯಾ ಚಳವಳಿ ಬಿಜೆಪಿಗೆ ಅನಿರೀಕ್ಷಿತ ಜನಬೆಂಬಲ ದೊರಕಿಸಿಕೊಟ್ಟಿತು. ಈ ಚಳವಳಿ ದೇಶದ ರಾಜಕೀಯ ಚಿತ್ರಣವನ್ನೇ ಬದಲಾಯಿಸಿತು.
ಇಷ್ಟೆಲ್ಲ ಹೋರಾಟದ ನೇತೃತ್ವ ವಹಿಸಿ ಪಕ್ಷದ ಸಂಪೂರ್ಣ ಹಿಡಿತ ಲಾಲಕೃಷ್ಣ ಅಡ್ವಾಣಿ ಬಳಿ ಇತ್ತು. ಪಕ್ಷದ ಸೈದ್ಧಾಂತಿಕ ನಿಲುವಿನ ಪ್ರತಿನಿಧಿಯಾಗಿ ಲಾಕೃಷ್ಣ ಅಡ್ವಾಣೀ ಇದ್ದರು. ಸಂಘಪರಿವಾರದ ನಿಯಂತ್ರಣ ಬಿಟ್ಟರೆ ಬಿಜೆಪಿ ಮಟ್ಟಿಗೆ ಲಾಲಕೃಷ್ಣ ಅಡ್ವಾಣಿ ಪ್ರಶ್ನಾತೀತ ನಾಯಕರಾಗಿದ್ದರು. ಅಂತಹ ಸಂದರ್ಭದಲ್ಲಿ ಕೂಡ ಅಡ್ವಾಣಿ ಅವರು ಅಟಲ್ ಬಿಹಾರಿ ವಾಜಪೇಯಿ ಅವರನ್ನು ೧೯೯೯೫ರಲ್ಲಿ ಪ್ರಧಾನಿ ಅಭ್ಯರ್ಥಿಯಾಗಿ ಬಿಂಬಿಸಿದರು. ವಾಜಪೇಯಿ ಪ್ರಧಾನಿಯಾಗಿದ್ದಾಗ ಉಪಪ್ರಧಾನಿಯಾಗಿ ಕಾರ್ಯನಿರ್ವಹಿಸಿದರು. ೨೦೦೫ರಲ್ಲಿ ವಾಜಪೇಯಿ ಅವರು ಅಡ್ವಾಣಿ ಅವರನ್ನು ತಮ್ಮ ಮುಂದಿನ ನಾಯಕ ಎಂದು ಪರೋಕ್ಷವಾಗಿ ಹೇಳುವ ಮೂಲಕ ಅಡ್ವಾಣಿ ಅವರ ಋಣ ತೀರಿಸಿದರು.

ಇದಾದ ಕೆಲವೇ ದಿನದಲ್ಲಿ ಅಡ್ವಾಣಿ ಅವರ ಗೃಹಚಾರ ಕೆಟ್ಟಿರು. ಪಾಕಿಸ್ತಾನಕ್ಕೆ ಹೋದ ಅಡ್ವಾಣಿ ಮಹಮ್ಮದ್ ಅಲಿ ಜಿನ್ಹಾ ಅವರನ್ನು ಜಾತ್ಯತೀತ ನಾಯಕ ಎಂದು ಕೊಂಡಾಡಿದರು. ಅದು ಸಂಘಪರಿವಾರದ ಕಣ್ಣು ಕೆಂಪಾಗಿಸಿತು. ಅಡ್ವಾಣಿ ಅವರಿಗಿದ್ದ ‘ಉಕ್ಕಿನ ಮನುಷ್ಯ’ ಎಂಬ ಬಿರುದು ಕೂಡ ಸದ್ದಿಲ್ಲದೆ ಬದಿಗೆ ಸರಿಯಿತು. ಪರಿಣಾಮ ೨೦೦೫ರ ಡಿ.೩೧ರಂದು ಲಾಲಕೃಷ್ಣ ಅಡ್ವಾಣಿ ಬಿಜೆಪಿ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಬೇಕಾಯಿತು.

ಅದರ ನಂತರ ಲಾಲಕೃಷ್ಣ ಅಡ್ವಾಣಿ ಅವರ ಒಳಗಿನ ‘ಉಕ್ಕಿನ ಮನುಷ್ಯ’ ಹೆಚ್ಚಾಗಿ ಕಾಣಿಸಿಕೊಳ್ಳಲೇ ಇಲ್ಲ. ಅಟಲ್‌ಬಿಹಾರಿ ವಾಜಪೇಯಿ ಅವರಿಗಿದ್ದ ‘ಜಾತ್ಯತೀತ’ ನಿಲುವನ್ನು ತಾನೂ ತಳೆಯಲು ಯತ್ನಿಸಿದ ಲಾಲಕೃಷ್ಣ ಅಡ್ವಾಣಿ ಬಹುತೇಕ ವಿಷಯಗಳಲ್ಲಿ ಮುಂದೆ ರಾಜಿ ಮಾಡಿಕೊಂಡಿದ್ದನ್ನು ಗಮನಿಸಬಹುದು. ಪರಿಣಾಮ ಅವರು ಅತ್ತ ‘ಜಾತ್ಯತೀತ’ರೂ ಆಗಲಿಲ್ಲ, ಕಠೋರ ಹಿಂದೂ ನಾಯಕರಾಗಿಯೂ ಮುಂದುವರಿಯಲಿಲ್ಲ. ಹೀಗೆ ವಯಸ್ಸಿನ ಹೊಡೆತಕ್ಕೊ, ಅನುಭವದ ಭಾರಕ್ಕೊ, ಪ್ರಧಾನಿ ಪಟ್ಟದಾಸೆಗೊ ಅಡ್ವಾಣಿ ಮೆತ್ತಗಾದರು.

೮೧ ವರ್ಷವಾಗಿರುವದನ್ನೂ ಲೆಕ್ಕಿಸದೆ ಈ ಚುನಾವಣೆ ಪ್ರಚಾರದಲ್ಲಿ ಲಾಲಕೃಷ್ಣ ಅಡ್ವಾಣಿ ಯುವಕರಿಗೆ ಕಡಿಮೆ ಇಲ್ಲದಂತೆ ಕೆಲಸ ಮಾಡಿದರು. ಉತ್ತರ ಭಾರತದ ೪೦ ಡಿಗ್ರಿ ಬಿಸಿಲನ್ನೂ ಲೆಕ್ಕಿಸದೆ ಸಾರ್ವಜನಿಕ ಸಭೆಗಳಲ್ಲಿ ಭಾಗವಹಿಸಿದರು. ಪ್ರಚಾರಕ್ಕಾಗಿ ೬೦,೦೦೦ ಕಿ.ಮೀ.ಗಿಂತ ಹೆಚ್ಚು ಪ್ರಯಾಣ ಮಾಡಿದರು. ಆಧುನಿಕ ತಂತ್ರಜ್ಞಾನ, ವೆಬ್‌ಸೈಟ್, ಎಸ್‌ಎಂಎಸ್‌ಗಳನ್ನು ಬಳಸಿದರು. ಯುವ ಮತದಾರರನ್ನು ಸೆಳೆಯುವ ಯತ್ನ ಮಾಡಿದರು. ಇಷ್ಟೆಲ್ಲ ಮಾಡಿಯೂ ಅಡ್ವಾಣಿ ೯೦ರ ದಶಕದಲ್ಲಿ ಗಳಿಸಿದ್ದ ಜನಪ್ರಿಯತೆಯನ್ನು ಗಳಿಸಲು ೨೦೦೯ರಲ್ಲಿ ವಿಫಲರಾದರು.ಪ್ರಧಾನಿಯಾಗುವ ಅವರ ಕನಸು ನನಸಾಗೇ ಉಳಿಯಿತು.

Wednesday, May 13, 2009

ಸಿಬಿಐ= ಕ್ಲೀನ್‌ಚಿಟ್ ಬ್ಯೂರೋ ಆಫ್ ಇನ್ವೆಸ್ಟಿಗೇಷನ್


ದೇಶದ ಉನ್ನತ ತನಿಖಾ ಸಂಸ್ಥೆ ಸೆಂಟ್ರಲ್ ಬ್ಯೂರೋ ಆಫ್ ಇನ್‌ವೆಸ್ಟಿಗೇಷನ್ ಅಲಿಯಾಸ್ ಸಿಬಿಐ ಮತ್ತೆ ಸುದ್ದಿಯಲ್ಲಿದೆ. ಕೆಟ್ಟ ಕಾರಣಕ್ಕಾಗಿ.
೧೯೮೪ರ ಗಲಭೆಗೆ ಸಂಬಂಧಿಸಿದಂತೆ ಕಾಂಗ್ರೆಸ್ ನಾಯಕರಾದ ಜಗದೀಶ್ ಟೈಟ್ಲರ್ ಹಾಗೂ ಸಜ್ಜನ್‌ಕುಮಾರ್ ಅವರನ್ನು ದೋಷಮುಕ್ತ ಎಂದು ವರದಿ ನೀಡುವ ಮೂಲಕ ಸಿಖ್ಖರ ಕೆಂಗಣ್ಣಿಗೆ ಗುರಿಯಾಗಿದ್ದ ಸಿಬಿಐ ಈಗ ಬೊಫೋರ್ಸ್ ಹಗಣದ ಆರೋಪಿಗಳಲ್ಲಿ ಒಬ್ಬನಾದ ಇಟಲಿಯ ಒಟೆವಿಯೊ ಕೊಟ್ರೋಚಿಯ ಮೇಲಿರುವ ಪ್ರಕರಣವನ್ನೂ ಕೈಬಿಟ್ಟು, ಹೊರಡಿಸಿದ್ದ ರೆಡ್‌ಕಾರ್ನನ್ ನೋಟೀಸ್ ರದ್ದುಪಡಿಸುವ ಮೂಲಕ ಮೂಲಕ ದೇಶದ ಜನರನ್ನು ಬೆಚ್ಚಿ ಬೀಳಿಸಿದೆ. ಜಗದೀಶ ಟೈಟ್ಲರ್ ಹಾಗೂ ಸಜ್ಜನ್ ಕುಮಾರ್ ಕಾಂಗ್ರೆಸ್ಸಿಗರಾದರೆ, ಒಟೆವಿಯೊ ಕೊಟ್ರೋಚಿ ಸೋನಿಯಾ ಕುಟುಂಬಕ್ಕೆ ಹತ್ತಿರದವರು ಎಂಬುದು ಗುಟ್ಟೇನಲ್ಲ. ಈ ಎರಡೂ ಕ್ಲೀನ್‌ಚಿಟ್‌ಗಳು ಯುಪಿಎ ಅಧಿಕಾರಾವಧಿ ಅಂತಿಮ ಸಮಯದಲ್ಲಿ ಹೊರಬಿದ್ದಿರುವುದು ಸಿಬಿಐ ಮೇಲೆ ಜನರಿಗಿರುವ ನಂಬಿಕೆ ಕುಸಿಯುವಂತೆ ಮಾಡಿದೆ. ಸಿಬಿಐ ಸ್ವತಂತ್ರ ತನಿಖಾ ಸಂಸ್ಥೆಯಾಗಿ ಉಳಿದಿಲ್ಲ ಎಂಬುದು ಮತ್ತೊಮ್ಮೆ ಸಾಬೀತಾಗಿದೆ.
ಸಿಬಿಐನ ಮಾಜಿ ನಿರ್ದೇಶಕರಾದ ಜೋಗಿಂದರ್ ಸಿಂಗ್ ಅವರು ಕೊಟ್ರೋಚಿ ವಿರುದ್ಧ ಸಾಕಷ್ಟು ಸಾಕ್ಷ್ಯ ಇತ್ತು. ತಾವೇ ಸ್ವತಃ ಸ್ವಿಸ್ ಬ್ಯಾಂಕ್ ತೆರಳಿ ಖಾತೆ ಪರಿಶೀಲನೆ ನಡೆಸಿದ್ದನ್ನು ಬಹಿರಂಗಪಡಿಸಿದ್ದಾರೆ. ಅವರಿದ್ದಾಗ ಇದ್ದ ಸಾಕ್ಷ್ಯ ಆಮೇಲೇನಾಯಿತು?
ಇತ್ತೀಚಿನ ವರ್ಷಗಳಲ್ಲಿ ಸಿಬಿಐ ಒಳ್ಳೆಯ ಕೆಲಸಕ್ಕಾಗಿ ಸುದ್ದಿಯಾಗಿದ್ದು ಯಾರಿಗೂ ನೆನಪಿಲ್ಲ. ಸಿಬಿಐ ತನಿಖೆಗೊಳಗಾದ ಯಾವ ಪ್ರಕರಣವೂ ಆರೋಪಿಗಳ ಶಿಕ್ಷೆಯೊಂದಿಗೆ ಮುಕ್ತಾಯವಾದದ್ದು ಇತ್ತೀಚೆಗೆ ಸಂಭವಿಸಿಲ್ಲ. ಸಿಬಿಐ ಯಾವುದೇ ನಿರ್ಣಯ ಕೈಗೊಳ್ಳಲಿ ಅದರ ಬಗ್ಗೆ ಸಾರ್ವಜನಿಕರು ಅನುಮಾನದಿಂದ ನೋಡುವಂತಾಗಿದೆ. ಕಾರಣ ಕೇಂದ್ರ ಸರಕಾರದ ಅಧಿಕಾರದ ಚಿತ್ರಣ ಬದಲಾಗುತ್ತಿದ್ದಂತೆ ಸಿಬಿಐ ನಿಲುವುಗಳೂ, ಸಾಕ್ಷ್ಯಗಳು ಕೂಡ ಬದಲಾಗಿವೆ.
ಮಾಯಾವತಿ ವಿರುದ್ಧ ತಾಜ್ ಕಾರಿಡಾರ್ ಪ್ರಕರಣದಲ್ಲಿ ಸಿಬಿಐ ನಿಲುವು ಆಗಾಗ ಬದಲಾಗಿದ್ದನ್ನು ಕಂಡಿದ್ದೇವೆ. ಮಾಯಾವತಿ ಜತೆ ಸಖ್ಯ ಇರುವಾಗ ಸಮಾಜವಾದಿ ಪಕ್ಷದ ಮುಖ್ಯಸ್ಥ ಮುಲಾಯಂ ಸಿಂಗ್ ವಿರುದ್ಧ ಅತಿಯಾದ ಆಸ್ತಿ ಸಂಗ್ರಹ ಪ್ರಕರಣವನ್ನು ಸಿಬಿಐ ಕೈಗೆತ್ತಿಕೊಂಡಿತು. ಅದೇ ಮಾಯಾವತಿ ಜತೆ ಕಾಂಗ್ರಸ್ ಮೈತ್ರಿ ಮುರಿದಾಗ ಮುಲಾಯಂ ಸಿಂಗ್ ವಿರುದ್ಧದ ಪ್ರಕರಣದಲ್ಲಿ ಸಿಬಿಐ ನಿಲುವು ಬದಲಾಯಿತು. ಸಮಾಜವಾದಿ ಪಕ್ಷ ೨೦೦೮ರ ಜುಲೈನಲ್ಲಿ ಅವಿಶ್ವಾಸಮತ ನಿರ್ಣಯ ಸಂದರ್ಭ ಯುಪಿಎ ಪರ ನಿಲ್ಲಲು ಸಿಬಿಐ ಪ್ರಕರಣ ಕೂಡ ಒಂದು ಕಾರಣ ಎಂಬುದರಲ್ಲಿ ಈಗ ಅನುಮಾನ ಉಳಿದಿಲ್ಲ. ಇದರ ನಂತರ ಮುಲಾಯಂ ಸಿಂಗ್ ಸಮೀಪ ವರ್ತಿಗಳು ಹಾಗೂ ಸಿಬಿಐ ಅಧಿಕಾರಿಗಳು ಒಟ್ಟಿಗೆ ಕುಳಿತು ನ್ಯಾಯಾಲಯದಲ್ಲಿ ಯಾವ ರೀತಿ ಪ್ರಕರಣ ನಿಲ್ಲದಂತೆ ದಾಖಲೆಗಳನ್ನು ಸಲ್ಲಿಸಬೇಕು ಎಂಬುದರ ಬಗ್ಗೆ ಚರ್ಚಿಸುತ್ತಿದ್ದರು ಎಂಬ ಆರೋಪ ಕೇಳಿಬಂದಿದೆ. ಸರಕಾರಗಳೂ ಅಷ್ಟೆ ಮೊದಲೆಲ್ಲ ಸಿಬಿಐ ತನಿಖೆಯಲ್ಲಿ ಹಸ್ತಕ್ಷೇಪ ಮಾಡುವಾಗ ಬಹಳ ಜಾಗರೂಕವಾಗಿರುತ್ತಿದ್ದವು. ಈಗ ಕೊಟ್ರೋಚಿಗೂ ಕ್ಲೀನ್‌ಚಿಟ್ ಕೊಡಿಸುವಷ್ಟು ರಾಜಾರೋಷವಾಗಿ ಸಿಬಿಐನಲ್ಲಿ ಹಸ್ತಕ್ಷೇಪ ಮಾಡಲಾರಂಭಿಸಿವೆ.
ತಮಿಳುನಾಡಿನ ಮಾಜಿ ಮುಖ್ಯಮಂತ್ರಿ ಜಯಲಲಿತಾ ವಿರುದ್ಧದ ಅಕ್ರಮ ಆಸ್ತಿ ಸಂಗ್ರಹ ಪ್ರಕರಣದಲ್ಲೂ ಸಿಬಿಐ ನಿಲುವು ಕಾಲಕ್ಕೆ ತಕ್ಕಂತೆ ಬದಲಾಗಿದ್ದು ಜಗತ್ತಿಗೇ ಗೊತ್ತಿದೆ.ಇದನ್ನೆಲ್ಲ ಗಮನಿಸಿದರೆ ಸಿಬಿಐ ನಿಜಕ್ಕೂ ಸ್ವತಂತ್ರ ತನಿಖಾ ಸಂಸ್ಥೆಯಾಗಿ ಉಳೀದಿದೆಯೇ? ಎಂಬ ಪ್ರಶ್ನೆ ಉದ್ಭವಿಸುತ್ತದೆ. ನಮ್ಮ ಅನುಭವದ ಪ್ರಕಾರವೇ ಇದಕ್ಕೆ ಇಲ್ಲ ಎಂಬ ಉತ್ತರ ದೊರೆಯುತ್ತದೆ. ಅಲ್ಲಿದೆ ದೇಶದಲ್ಲಿ ಜನರ ನಂಬಿಕೆ ಉಳಿದಿಸಿಕೊಂಡಿರುವ ಒಂದೇ ಒಂದು ತನಿಖಾ ಸಂಸ್ಥೆಯೂ ಇಲ್ಲದಂತಾಗಿಬಿಟ್ಟಿದೆ.
ಒಂದು ಕಾಲದಲ್ಲಿ ಸಿಬಿಐಗೆ ಒಳ್ಳೆಯ ಹೆಸರಿತ್ತು. ಸಿಬಿಐ ತನಿಖೆ ಅಂದರೆ ಅದೇ ಅಂತಿಮ. ಜನ ಕೂಡ ಅದನ್ನು ಮನ್ನಿಸುತ್ತಿದ್ದರು. ಸಿಬಿಐ ತನಿಖೆ ಅಂದರೆ ಸಾಕು ರಾಜಕಾರಣಿಗಳೂ ಕೂಡ ಹೆದರುತ್ತಿದ್ದರು. ರಾಜೀವ್ ಗಾಂಧಿ ಹತ್ಯೆ ಸಮಯದಲ್ಲಿ ಸಾಕ್ಷಿಗಳೇ ಇರಲಿಲ್ಲ ಎನ್ನಬಹುದಾದ ಸ್ಥಿತಿ. ಅಂತಹ ಪ್ರಕರಣವನ್ನೂ ಸಿಬಿಐ ತಂಡ ಸಮರ್ಥವಾಗಿ ನಡೆಸಿ, ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಯಿತು. ಆದರೆ ಅದೇ ತನಿಖಾ ಸಂಸ್ಥೆ ಭಟ್ಕಳದ ಶಾಸಕ ಯು. ಚಿತ್ತರಂಜನ್ ಅವರ ಕೊಲೆ ಪ್ರಕರಣ ಬಗೆಹರಿಸಲು ವಿಫಲವಾಯಿತು. ಚಿತ್ತರಂಜನ್ ಪ್ರಕರಣದಂತೆ ಹಲವಾರು ಪ್ರಕರಣಗಳು ಸಿಬಿಐ ಕಚೇರಿ ಕಪಾಟಿನಲ್ಲಿ ಧೂಳುತಿನ್ನುತ್ತಿವೆ.
ಹಿಂದೆಲ್ಲ ಒಂದು ಪ್ರಕರಣವನ್ನು ಸಿಬಿಐಗೆ ನೀಡಿದರು ಎಂದರೆ ಸತ್ಯ ಹೊರಬಂದಂತೆ ಎಂಬ ನಂಬಿಕೆಯಿತ್ತು. ಈಗ? ಒಂದು ಪ್ರಕರಣವನ್ನು ಸಿಬಿಐಗೆ ನೀಡಿದರೆಂದರೆ ಅಲ್ಲಿಗೆ ಆ ಪ್ರಕರಣ ಮುಗಿಯಿತು ಎಂದರ್ಥ!
ಸಿಬಿಐ ನ್ಯಾಯಾಲಯಕ್ಕೆ ತನಿಖಾ ವರದಿ ಒಪ್ಪಿಸಿತು ಅಂದರೆ ಅದೇ ಅಂತಿಮ. ಆರೋಪಿಯನ್ನು ದೋಷಮುಕ್ತ ಎಂದು ಸಿಬಿಐ ಹೇಳಿದ್ದರೂ ನ್ಯಾಯಾಲಯಗಳು ಅದನ್ನು ಒಪ್ಪಿಕೊಳ್ಳುತ್ತಿದ್ದವು. ಆದರೆ ಸಿಬಿಐ ವಿಶ್ವಾಸರ್ಹತೆ ಕುಸಿಯುತ್ತಿದ್ದಂತೆ ಈಗ ನ್ಯಾಯಾಲಯಗಳೂ ಕೂಡ ಸಿಬಿಐ ವರದಿ ಸಲ್ಲಿಸಿದ ನಂತರವೂ ಮತ್ತೆ ತನಿಖೆಗೆ ಆದೇಶಿಸುತ್ತಿವೆ.
ದೇಶದ ಉನ್ನತ ತನಿಖಾ ಸಂಸ್ಥೆಯ ಗುಣಮಟ್ಟ ಕುಸಿಯಲು ಯಾರು ಕಾರಣ?
ನಿಸ್ಸಂಶಯವಾಗಿ ನಮ್ಮನ್ನಾಳುವವರು.
ತಾಜ್ ಕಾರಿಡಾರ್ ಪ್ರಕರಣದ ವಿಚಾರಣೆ ಸಂದರ್ಭ ಸುಪ್ರೀಂ ಕೋರ್ಟ್ ಸಿಬಿಐ ಕುರಿತು ‘ಸರಕಾರಿ ಸಂಸ್ಥೆಗಳ ಕಾರ್ಯಕ್ಷಮತೆ ಹಾಗೂ ಮೌಲ್ಯಗಳು ಶೀಘ್ರವಾಗಿ ಕುಸಿಯುತ್ತಿರುವುದು ನ್ಯಾಯಾಲಯದ ಗಮನಕ್ಕೆ ಬಂದಿದೆ. ಹೀಗೇ ಮುಂದುವರಿದರೆ ಕಾನೂನು ಸುವ್ಯವಸ್ಥೆ ಕುಸಿಯುವ ಸ್ಥಿತಿ ಬರಬಹುದು’ ಎಂದು ಅಭಿಪ್ರಾಯಪಟ್ಟಿತ್ತು. ಅದರಿಂದಲೂ ನಮ್ಮ ಸಿಬಿಐ ಅಧಿಕಾರಿಗಳು ಹಾಗೂ ಕೇಂದ್ರ ಸರಕಾರ ಎಚ್ಚೆತ್ತುಕೊಳ್ಳಲಿಲ್ಲ.ನಿಜವಾಗಿ ಸಿಬಿಐ ಯಾರ ನಿಯಂತ್ರಣದಲ್ಲೂ ಇಲ್ಲ. ದೆಹಲಿ ವಿಶೇಷ ಪೊಲೀಸ್ ಕಾನೂನಿನ ಅಡಿಯಲ್ಲಿ ಸ್ಥಾಪನೆಯಾದ ಸಿಬಿಐ ಕೇಂದ್ರ ಸರಕಾರದ ಖಾಸಗಿ ಹಾಗೂ ತರಬೇತಿ ವಿಭಾಗಕ್ಕೆ ಸೇರಿದ್ದು. ಅಂದರೆ ಕೇಂದ್ರ ಸರಕಾರದ ‘ಮೇಲ್ವಿಚಾರಣೆಯಲ್ಲಿ’ ಎಂದಷ್ಟೇ ಹೇಳಲಾಗಿದೆ. ‘ಮೇಲ್ವಿಚಾರಣೆ’ ಎಂಬುದನ್ನೇ ನಮ್ಮವರು ‘ಮೇಲ್ವಿಚಾರಣೆ, ನಿಯಂತ್ರಣ ಮತ್ತು ನಿರ್ದೇಶನ’ ಎಂದು ವ್ಯಾಖ್ಯಾನಿಸಿ ಸಿಬಿಐನ ವಿಶ್ವಾಸರ್ಹತೆಯನ್ನೇ ಹಾಳು ಮಾಡಿದ್ದಾರೆ.
ಸಿಬಿಐ ಕೇಂದ್ರ ಸರಕಾರದ ಇಶಾರೆಗಳ ಮೇಲೆ ನಡೆಯುತ್ತದೆ ಎಂಬುದು ಇಂದು ಗುಟ್ಟಾಗಿ ಉಳಿದಿಲ್ಲ. ಸಿಬಿಐ ನಿರ್ದೇಶಕರ ನೇಮಕದಲ್ಲಿ ಕೂಡ ರಾಜಕೀಯ ಮೂಗು ತೂರಿಸದೇ ಬಿಟ್ಟಿಲ್ಲ. ಹಾಗೆ ನೇಮಕವಾದ ನಿರ್ದೇಶಕರು ನೇಮಕ ಮಾಡಿದ ರಾಜಕೀಯ ಪಕ್ಷಕ್ಕೆ ನಿಷ್ಟರಾಗಿರುವುದು ಸಹಜ.
ಹೀಗಾಗಿ ಸಿಬಿಐಯನ್ನು ಸೆಂಟ್ರಲ್ ಬ್ಯೂರೋ ಆಫ್ ಇನ್‌ವೆಸ್ಟಿಗೇಷನ್ ಎಂದು ಕರೆಯುವ ಬದಲು ಕ್ಲೀನ್‌ಚಿಟ್ ಬ್ಯೂರೋ ಆಫ್ ಇನ್‌ವೆಸ್ಟಿಗೇಷನ್ ಎಂದು ಕರೆಯುವಂತಾಗಿದೆ. ನಮಗೀಗ ಬೇಕಿರುವುದು ಸೆಂಟ್ರಲ್ ಬ್ಯೂರೋ ಆಫ್ ಇನ್‌ವೆಸ್ಟಿಗೇಷನ್ (ಸಿಬಿಐ) ಅಲ್ಲ. ಬದಲಾಗಿ ಇಂಡಿಪೆಂಡೆಂಟ್ ಬ್ಯೂರೋ ಆಫ್ ಇನ್‌ವೆಸ್ಟಿಗೇಷನ್ (ಐಬಿಐ) ಬೇಕು.ಸಿಬಿಐ ಅಮೂಲಾಗ್ರ ಬದಲಾವಣೆ ಆಗಬೇಕಿದೆ. ಸಿಬಿಐ ನಿರ್ದೇಶಕರ ನೇಮಕವೂ ಸೇರಿದಂತೆ ಒಟ್ಟಾರೆ ಸಿಬಿಐ ಎಂಬ ಸಂಸ್ಥೆ ಸರಕಾರದ ನಿಯಂತ್ರದಿಂದ ದೂರವಾಗಿ ಸ್ವತಂತ್ರವಾಗಬೇಕಿದೆ. ನ್ಯಾಯಾಲಯ ಹೊರತು ಪಡಿಸಿ ಜನರಿಗೆ ಸರಕಾರ ಹಾಗೂ ಸರಕಾರಿ ಸಂಸ್ಥೆಗಳ ಮೇಲೆ ನಂಬಿಕೆ ಮೂಡಿಸುವ ಒಂದಾದರೂ ಸಂಸ್ಥೆ ಬೇಕೇಬೇಕು. ಅದಕ್ಕಾಗಿಯಾದರೂ ಈ ಕೆಲಸ ಮಾಡಬೇಕು.
ಯಾಕೆಂದರೆ ಜನ ಸರಕಾರ ಹಾಗೂ ಅದರ ಸಂಸ್ಥೆಗಳ ಮೇಲೆ ನಂಬಿಕೆ ಕಳೆದುಕೊಂಡರೆ ಅಲ್ಲಿಗೆ ಎಲ್ಲವೂ ಮುಗಿದಂತೆ.