ಎಂಥೆಂಥದ್ದೋ ಪ್ರಕರಣಗಳ ಆರೋಪಿಗಳನ್ನು, ಚಾಲಾಕಿಗಳನ್ನು ಹಿಡಿಯುವ ಪೊಲೀಸರು ಒಮ್ಮೊಮ್ಮೆ ಎಡವಟ್ಟು ಮಾಡಿಬಿಡುತ್ತಾರೆ. ಹೋಳಿದ್ದೊಂದನ್ನು ಬಿಟ್ಟು ಇನ್ನೆಲ್ಲವನ್ನು ಅಚ್ಚುಕಟ್ಟಾಗಿ ಮಾಡಿ ಇಕ್ಕಟ್ಟಿಗೆ ಸಿಲುಕುತ್ತಾರೆ.
ಒಂದು ದಿನ (ಎರಡು ವರ್ಷದ ಹಿಂದೆ) ನಡೆದ ಈ ಘಟನೆ ಅದಕ್ಕೊಂದು ಸಾಕ್ಷಿ.
ಬೆಳಗಾಂನ ನಾಗರಿಕ ಹಕ್ಕು ಜಾರಿ ನಿರ್ದೇಶನಾಲಯದ ಎಸ್ಪಿ ಮಂಗಳೂರಿಗೆ ಬಂದಿದ್ದರು. ರಾತ್ರಿ ಬಸ್ಸಿಗೆ ಮರಳಿ ಬೆಳಗಾಂಗೆ ಹೋಗಬೇಕಿತ್ತು. ೧೦.೦೦ ಗಂಟೆ ಬಸ್‌ಗೆ ಟಿಕೆಟ್ ಬುಕ್ ಆಗಿತ್ತು. ಅವರು ಎಲ್ಲೆಲ್ಲೋ ಹೋಗಿ, ಏನೇನೋ ಹಕ್ಕುಗಳನ್ನು ಜಾರಿ ಮಾಡಿ ಮರಳಿ ಮಂಗಳೂರಿಗೆ ಬರುವಾಗ ರಾತ್ರಿ ೮.೩೦ ಗಂಟೆ ಆಗಿಬಿಟ್ಟಿತ್ತು. ಅವರನ್ನು ಭೇಟಿ ಮಾಡಲು ಹೆಚ್ಚುವರಿ ಎಸ್ಪಿ ಲೋಕೇಶ್ ಕುಮಾರ್, ಡಿವೈಎಸ್ಪಿ ಎಸ್.ಎಂ. ಮಂಟೂರ್ ಹಾಗೂ ಮಂಗಳೂರು ಗ್ರಾಮಾಂತರ ಸರ್ಕಲ್ ಇನ್‌ಸ್ಪೆಕ್ಟರ್ ಉದಯ್ ನಾಯ್ಕ್ ಕಾದು ಕುಳಿತಿದ್ದರು.
ಭೇಟಿ ಅಂದರೆ ಸುಮ್ಮನೆ ಆಗುತ್ಯೆ? ಸ್ವಲ್ಪ ಹೊತ್ತಿನ ಹರಟೆಯ ನಂತರ ಊಟ ಮಾಡಲು ಹೋದರು. ಎಷ್ಟೇ ಬೇಗ ಬೇಗ ಆರ್ಡರ್ ಮಾಡಿ ತರಿಸಿಕೊಂಡು ಊಟ ಮಾಡಿದರೂ ೧೦.೦೦ ಗಂಟೆ ಆಗಿಬಿಟ್ಟಿತ್ತು. ಬಸ್ ತಪ್ಪಿಹೋಗುತ್ತಲ್ಲ? ಪೊಲೀಸ್ ಬುದ್ದಿ ಕರ್ಚು ಮಾಡಿ ಕೂಡಲೆ ಸಂಚಾರ ವಿಭಾಗ ಪೊಲೀಸರಿಗೆ ವಯರ್‌ಲೆಸ್ ಮೂಲಕ ಮಾಹಿತಿ ನೀಡಿ ಬಸ್ ನಿಲ್ಲಿಸುವಂತೆ ಸೂಚಿಸಲಾಯಿತು.
ಹೆಚ್ಚುವರಿ ಎಸ್ಪಿ, ಡಿವೈಎಸ್ಪಿ ಅವರ ವಾಹನ ಕೆಂಪು ಲೈಟ್ ಹಾಕಿಕೊಂಡು ಸರ್ವೀಸ್ ಬಸ್ ನಿಲ್ದಾಣದ ಬಳಿ ನಿಲ್ಲಿಸಲಾದ ಬಸ್ ಬಳಿಗೆ ಹೋಗುವಾಗ ೧೦-೧೫ ನಿಮಿಷ ವಿಳಂಬವಾಗಿತ್ತು. ಅಲ್ಲಿ ಹೋಗಿ ನೋಡಿದರೆ ಸಂಚಾರ ಪೊಲೀಸರು ಎರಡು ಬಸ್ ಹಿಡಿದು ನಿಲ್ಲಿಸಿದ್ದರು. ಹಿರಿಯ ಅಧಿಕಾರಿಗಳ ವಾಹನ ಬಂದ ತಕ್ಷಣ ಸೆಲ್ಯೂಟ್ ಹೊಡೆದ ಒಬ್ಬ ಸರ್ ಎರಡೂ ಬಸ್ ನಿಲ್ಲಿಸಿದ್ದೇವೆ ಎಂದ ವರದಿ ಒಪ್ಪಿಸಿದ. ಹೋಗಿ ನೋಡಿದರೆ ಬೇಕಾದ ಬಸ್ಸೇ ಇರಲಿಲ್ಲ. ಸಂಚಾರ ಪೊಲೀಸರು ಗಡಿಬಿಡಿಯಲ್ಲಿ ಬೆಂಗಳೂರು ಹಾಗೂ ಹುಬ್ಬಳ್ಳಿಗೆ ಹೋಗುವ ಬಸ್ ಹಿಡಿದು ನಿಲ್ಲಿಸಿದ್ದರು. ಬೆಳಗಾಂಗೆ ಹೋಗುವ ಬಸ್ ಹೋಗಿಯಾಗಿತ್ತು!!
ನಗರ ಸಂಚಾರ ಮುಗಿಸಿ ಹೊರ ಹೋಗುತ್ತಿದ್ದ ಬಸ್ಸನ್ನು ಕೆಎಸ್‌ಆರ್‌ಟಿಸಿ ಬಳಿ ಕೊನೆಗೆ ಅಂತೂ ಇಂತೂ ಹಿಡಿದು ಬೆಳಗಾಂ ನಾಗರಿಕ ಹಕ್ಕು ಜಾರಿ ನಿರ್ದೇಶನಾಲಯ ಎಸ್ಪಿಯವರನ್ನು ಹತ್ತಿಸಿದ ಅವರ ಗೆಳೆಯರು ಕೊನೆಗೂ ಸಿಕ್ಕೆದೆಯಲ್ಲ ಖಾಸಗಿ ಬಸ್ಸೆ ಎಂದು ನಿಟ್ಟುಸಿರು ಬಿಟ್ಟರು!!
ಇದು ನನಗೆ ಹೇಗೆ ಗೊತ್ತಾಯಿತು ಅಂದ್ರೆ, ನಾನು ಮನೆಗೆ ಮರಳುವಾಗ ಈ ಮೂವರು ಪೊಲೀಸ್ ಅಧಿಕಾರಿಗಳು ಆಗಷ್ಟೇ ಗೆಳೆಯನನ್ನು ಬಸ್ ಹತ್ತಿಸಿ, ಉಫ್! ಅಂತ ಉಸಿರು ಬಿಟ್ಟು, ರಸ್ತೆ ಬದಿಗೆ ಸುದ್ದಿ ಹೇಳುತ್ತ ನಿಂತಿದ್ದರು. ನಾನು ಬೈಕ್ ನಿಲ್ಲಿಸಿ ಮಾತನಾಡಿಸಿದಾಗ ಇದೆಲ್ಲ ಪುರಾಣ ಹೊರಬಿತ್ತು.
ಮಸುಕಾದ 2022ರ ಡೈರಿಯಿಂದ....
8 months ago