Tuesday, October 14, 2008

ನನಗೆ ಅಂಥ ಪಿಚ್ಚರುಗಳೇ ಯಾಕೆ ಇಷ್ಟವಾಗುತ್ತವೆ?


ಅಬ್‌ತಕ್ ಚಪ್ಪನ್, ರಿಸ್ಕ್, ಶೂಟ್‌ಔಟ್ ಎಟ್ ಲೋಖಂಡ್ವಾಲಾ, ಎ ವೆನ್ಸಡೆ, ಗಂಗಾಜಲ್...

ಓಹ್! ಗಂಗಾಜಲ್, ಅಬ್ತಕ್ ಚಪ್ಪನ್ ಪಿಚ್ಚರ್ಗಳನ್ನು ಹಲವು ಬಾರಿ ನೋಡಿದ್ದೇನೆ. ನೀವು ಇನ್ನೊಮ್ಮೆ ತೋರಿಸಿದರೂ ಮೊದಲ ಸಾರಿ ನೋಡಿದಾಗಿನಿಗಿಂತ ಹೆಚ್ಚು ಆಸಕ್ತಿಯಿಂದ ನೋಡುತ್ತೇನೆ. ನನಗೆ ಇಷ್ಟವಾಗೋ ಪಿಚ್ಚರ್(ಸಿನಿಮಾ)ಗಳ ಲೀಸ್ಟು ನೋಡಿದರೆ ಎಲ್ಲವೂ ಒಂದೇ ಥರದವು. ಅವುಗಳ ಕತೆ, ಅಲ್ಲಿನ ತಿರುವುಗಳಲ್ಲಿ ವ್ಯತ್ಯಾಸ ಇದೆಯಾದರೂ ಹೆಚ್ಚಿನವೆಲ್ಲ ಪೊಲೀಸರಿಗೆ ಸಂಬಂಧಿಸಿದ ಕತೆಗಳು. ಅದರಲ್ಲೂ ನಿಯತ್ತಿನ, ಧಕ್ಷ ಪೊಲೀಸ್ ಅಧಿಕಾರಿಗಳ ಕತೆಗಳು. ಒಳ್ಳೆ ಪೊಲೀಸರ ಕತೆಗಳು!

ಒಂದು ಕಾಲದಲ್ಲಿ ಪೊಲೀಸರು ಅಂದರೆ ಕೆಟ್ಟವರು. ಎಲ್ಲ ಮುಗಿದ ಮೇಲೆ ಬರುವವರು. ಲಂಚ ತಿನ್ನುವವರು. ಖಾಕಿ ಧಾರಿ ಗೂಂಡಾಗಳು ಎಂದು ಬಿಂಬಿಸುವ ಪಿಚ್ಚುಗಳೇ ಬರುತ್ತಿದ್ದವು. ಅವುಗಳನ್ನೂ ನೋಡಿದ್ದೇನೆ. ಈಗಿನ ಪೊಲೀಸ್ ಪರ ಪಿಚ್ಚರ್ ಗಳನ್ನೂ ನೋಡುತ್ತಿದ್ದೇನೆ.

ಚಿಕ್ಕನಿರುವಾಗ ನನ್ನ ಫೇವರಿಟ್ ಹೀರೊ ದೇವರಾಜ್! ಯಾಕೆಂದರೆ ಆತ ದಕ್ಷ ಪೊಲೀಸ್ ಅಧಿಕಾರಿಗಳ ಪಾತ್ರ ಮಾಡುತ್ತಿದ್ದ. ಒರಿಜಿನಲ್ ಸಾಂಗ್ಲಿಯಾನಾ ಇಷ್ಟವಾಗದಿದ್ದರೂ ಶಂಕರ್‌ನಾಗ್‌ನ ಎಸ್ಪಿ ಸಾಂಗ್ಲಿಯಾನಾ ಪಿಚ್ಚರ್ ಇಷ್ಟವಾಗಿತ್ತು! ನಂತರ ಸಾಯಿಕುಮಾರ್ ಬಂದ. ಪೊಲೀಸ್‌ಸ್ಟೋರಿ ಮೂಲಕ ಇಷ್ಟವಾದ.

ಈಗಲ್ಲ. ಚಿಕ್ಕವನಿರುವಾಗಿನಿಂದಲೂ ನನಗೆ ಪೊಲೀಸರ ಕತೆಯ ಪಿಚ್ಚರ್‌ಗಳೆಂದರೆ ಇಷ್ಟ. ಕೊಂಚ ಮಟ್ಟಿಗೆ ಭೂಗತಲೋಕದ ಕತೆಗಳು ಕೂಡ! ಸೈನಿಕರ ಕತೆಗಳು ಇಷ್ಟವಾಗುತ್ತವಾದರೂ ಪೊಲೀಸರ ಕತೆಗಳಷ್ಟು ಅವು ನನ್ನನ್ನು ಸೆಳೆಯಲಿಲ್ಲ. ಮನಸಲ್ಲಿ ನಿಲ್ಲಲಿಲ್ಲ.

ಯಾಕೆ?

ನಾನಗೆ ಪೊಲೀಸ್ ಆಗಬೇಕೆಂಬ ಆಸೆ ಇದ್ದದ್ದಕ್ಕಾ? ಆ ಮೂಲಕ ಸಮಾಜಕ್ಕೆ ಒಂದಷ್ಟಾದರೂ ಒಳ್ಳೆಯದು ಮಾಡಬೇಕು ಅಂದುಕೊಂಡಿದ್ದಕ್ಕಾ? ಸೈನಿಕನಾಗಿ ಹೊರಗಿನ ಶತ್ರುಗಳ ವಿರುದ್ಧ ಹೋರಾಡುವುದಕ್ಕಿಂತ ಪೊಲೀಸ್ ಅಧಿಕಾರಿಯಾಗಿ ದೇಶದೊಳಗಿನ ಶತ್ರುಗಳ ವಿರುದ್ಧ ಹೋರಾಡುವ ಮನಸ್ಸಿದ್ದಿದ್ದಕ್ಕಾ? ಅಥವಾ ಇಂಥ ಪಿಚ್ಚರ್ ನೋಡಿಯೇ ನಾನೂ ಒಬ್ಬ ದಕ್ಷ ಪೊಲೀಸ್ ಅಧಿಕಾರಿ ಆಗಬೇಕು ಅನ್ನಿಸಿತಾ?

ಇವತ್ತಿಗೂ ನನಗೆ ಈ ಪ್ರಶ್ನೆಗಳಿಗೆ ಸರಿಯಾದ ಉತ್ತರ ಸಿಕ್ಕಿಲ್ಲ. ಆದರೂ ನಾನು ಒಬ್ಬ ಒಳ್ಳೆ ಪೊಲೀಸ್ ಅಧಿಕಾರಿಯಾಗಬೇಕು ಅದುಕೊಂಡಿದ್ದು ಸತ್ಯ. ಹಲವು ಕಾರಣಗಳು. ಅದಾಗಲಿಲ್ಲ. ಬದಲಾಗಿ ಪತ್ರಕರ್ತನಾದೆ. ಈ ಮೂಲಕವೂ ಸಮಾಜಕ್ಕೆ ಸೇವೆ ಸಲ್ಲಿಸಬಹುದಲ್ಲ ಎಂಬ ಸಮಾದಾನ. ಅಷ್ಟೇ ಅಲ್ಲ ಕ್ರೈಂ ವರದಿಗಾರನೂ ಆದೆ. ಆ ಮೂಲಕ ಮತ್ತೆ ನನಗಿಷ್ಟವಾದ ಪೊಲೀಸ್ ಇಲಾಖೆ ಸಂಪರ್ಕ ಪಡೆದೆ.

ಒಳ್ಳೆ ಅಧಿಕಾರಿಗಳ ಪರಿಚಯವಾಯಿತು. ಹೆಸರು ಬರೆಯುತ್ತ ಹೋದರೆ ಸಾಕಷ್ಟಿದೆ. ಹಾಗೆ ಬರೆದರೂ ಅವರಿಗೂ ಹಾನಿ! ಅಂತೂ ಒಳ್ಳೆ ಅಧಿಕಾರಿಗಳ ಪರಿಚಯವೇ ಆಯಿತು. ಯಾರಿಗೂ ಗೊತ್ತಾಗದ ಅದೆಷ್ಟೋ ಸಂಗತಿಗಳು ಕಿವಿಗೆ ಬೀಳತೊಡಗಿದವು. ಕಿವಿಗೆ ಬಿದ್ದಿದ್ದು ಕಣ್ಣಿಗೂ ಕಂಡವು. ಏನೇ ಹೇಳಿ ನನಗಂತೂ ಸಾಕಷ್ಟು ಒಳ್ಳೆ ಅಧಿಕಾರಿಗಳೇ ಕಂಡರು. ಅಥವಾ ನನ್ನ ಮನಸ್ಸಲ್ಲಿ ಒಳ್ಳೆಯದೇ ಇದ್ದಿದ್ದಕ್ಕೆ ಅವರಲ್ಲಿದ್ದ ಒಳ್ಳೆಯದನ್ನಷ್ಟೇ ಕಂಡೆನೊ? ಕೆಲವು ವಿಷಯದಲ್ಲಿ ಪತ್ರಕರ್ತನಾಗಿ ಅವರಿಗೆ ಸಹಾಯವನ್ನೂ ಮಾಡಿದೆ. ಆ ಮೂಲಕ ಸಮಾಜಕ್ಕೂ ಅಂತ ಅಂದುಕೊಂಡೆ. ಈಗಲೂ ಅವರೊಂದಿಗೆ ಗೆಳತನ ನನಗಿಷ್ಟ.

ಇಂದಿಗೂ ಅದೆಷ್ಟೋ ಒಳ್ಳೆ ಅಧಿಕಾರಿಗಳಿದ್ದಾರೆ. ಅವರನ್ನೆಲ್ಲ ಅರ್ಧ ಹಾಳು ಮಾಡುತ್ತಿರುವವರು ನಮ್ಮ ರಾಜಕಾರಣಿಗಳು. ಅವರ ಲಾಭಕ್ಕೆ ಪೊಲೀಸರು ದಾಳಗಳು. ಸಾರ್ವಜನಿಕರು ನಡೆಸುವ ಕಾಯಿಗಳು. ಕಾನೂನು ಮುರಿಯುವವನಿಗೆ ಯಾವುದೂ ಇಲ್ಲ. ಅದೇ ಕಾನೂನು ಪಾಲಕರು ಸಮಾಜದ ಒಳ್ಳೆಯದಕ್ಕೆ ಎನ್‌ಕೌಂಟರ್ ನಡೆಸಿದರೆ ಮಾನವ ಹಕ್ಕು ನಾಶವಾದ ಬಗ್ಗೆ ಬೊಬ್ಬೆ ಹೊಡೆಯಲಾಗುತ್ತದೆ! ಕಾನೂನು ಪಾಲಿಸದೆ ಸಮಾಜಕ್ಕೆ ಕೆಡುಕುಂಟು ಮಾಡುವವನ ನಾಶಕ್ಕೆ ಕಾನೂನು ಪಾಲಕರು ಕೊಂಚ ಕಾನೂನು ಬಿಟ್ಟು ಹೋದರೆ ತಪ್ಪೇನು?

ನಿಮಗೆ ನೆನಪಿರಬಹುದು, ಶೂಟೌಟ್ ಎಟ್ ಲೋಖಂಡ್ವಾಲಾದಲ್ಲಿ ಪ್ರಕರಣದ ತನಿಖೆ ನಡೆಸುವ ನ್ಯಾಯಾಧೀಶರ ಬಳಿ ಅಮಿತಾಬ್ ಕೊನೆಯಲ್ಲೊಂದು ಪ್ರಶ್ನೆ ಕೇಳುತ್ತಾನೆ... ನೀವು ನ್ಯಾಯಾಲಯದಲ್ಲಿದ್ದೀರಿ. ಹೆಂಡತಿ- ಮಕ್ಕಳು ಮನೆಯಲ್ಲಿದ್ದಾರೆ. ಒಬ್ಬ ವ್ಯಕ್ತಿ ನಿಮ್ಮ ಮನೆಯ ಹೊರಗೆ ಪಿಸ್ತೂಲ್ ಹಿಡಿದು ನಿಂತಿದ್ದಾನೆ. ಆತ ಪೊಲೀಸ್ ಆಗಿರಲಿ ಎಂದು ಬಯಸುತ್ತೀರೊ? ಗೂಂಡಾ ಆಗಿರಲಿ ಎಂದು ಬಯಸುತ್ತೀರೊ?

ಸಹಜ. ಆತ ಪೊಲೀಸ್ ಆಗಿರಲಿ ಎಂದೇ ಬಯಸುತ್ತೇವೆ. ಎಲ್ಲದಕ್ಕೂ ಉತ್ತರ ಅಲ್ಲಿಯೇ ಇದೆ. ಎಷ್ಟೇ ಕೆಟ್ಟವರಿರಲಿ, ಪೊಲೀಸರಿಗೆ ಕಾನೂನಿನ ತಡೆಯಿರುತ್ತದೆ. ಆತನನ್ನು ನಿಯಂತ್ರಿಸುವುದು ಕಷ್ಟವಲ್ಲ. ಆದರೆ ಕಾನೂನೇ ಇಲ್ಲದ ಗೂಂಡಾಗಳು ಹಾಗಲ್ಲ. ದುರತವೆಂದರೆ ಅಂಥವರು ಈಗ ಖಾದಿ ಧರಿಸಿ, ನಮ್ಮನ್ನೇ ಆಳುವಂತಾಗಿದ್ದಾರೆ!

ಅದೇನು ನಾನು ಬೆಳೆದ ವಾತಾವರಣವೋ? ನನ್ನಪ್ಪ-ಅಮ್ಮ ನೀಡಿದ ಸಂಸ್ಕಾರವೋ? ಅಥವಾ ಅವರೇ ಸ್ವತಃ ನಿಯತ್ತಿನಿಂದ, ಭಾರತದ ಉತ್ತಮ ಪ್ರಜೆಗಳಾಗಿರುವುದೋ? ನನ್ನ ಮನಸ್ಸಿನಲ್ಲಿ ಚಿಕ್ಕಂದಿನಿಂದಲೂ ಲಂಚ, ಅನ್ಯಾಯ ವಿರೋಧಿ ಮನಸ್ಸು ರೂಪುಗೊಂಡುಬಿಟ್ಟಿದೆ. ಇವತ್ತಿಗೂ ಅನ್ಯಾಯ, ಲಂಚ ಕಂಡರೆ ಅದು ಸಹಿಸದು. ಎಲ್ಲ ಕಡೆ ಲಂಚ ಇದೆ ಅಂತ ಅನ್ನಿಸಿದರೂ ನಾನು ಇವತ್ತಿನವರೆಗೆ ಯಾರಿಗೂ ಲಂಚಕೊಟ್ಟಿಲ್ಲ. ಪತ್ರಕರ್ತನಾಗಿಯೂ, ದೊಡ್ಡ ಪೊಲೀಸ್ ಅಧಿಕಾರಿಗಳ ಪರಿಚಯವಿದ್ದೂ ಪೊಲೀಸರಿಗೆ ದಂಡ ಕಟ್ಟಿದ್ದೇನೆ. ಲಂಚಕೊಟ್ಟಿಲ್ಲ. ಇವತ್ತಿಗೂ ನನಗೆ ಲಂಚಕೋರರನ್ನು, ಕೊಳಕು ರಾಜಕಾರಣಿಗಳನ್ನು ಕಂಡರೆ ಎಲ್ಲಿಲ್ಲದ ದ್ವೇಷ. ಅಂಥವರ ವಿರುದ್ಧ ಬರೆಯಲು ಸಿಕ್ಕ ಒಂದು ಅವಕಾಶವನ್ನೂ ನಾನು ಇವತ್ತಿನವರೆಗೆ ಸುಮ್ಮನೆ ಬಿಟ್ಟಿಲ್ಲ. ನನಗೆ ಅವರ ಮೇಲೆ ಸೇಡು ತೀರಿಸಿಕೊಳ್ಳು ಕಾನೂನು ಬದ್ಧವಾಗಿರುವ ಮಾರ್ಗ ಅದು.

ಎಲ್ಲರೂ ಕಳ್ಳರು. ಲಂಚ ಎಲ್ಲೆಲ್ಲೂ ಆವರಿಸಿದೆ ಅಂತ ಎಷ್ಟೇ ಅಂದರೂ ನನಗೆ ಈಗಲೂ ನಂಬಿಕೆಯಿದೆ. ಅದೇನೆಂದರೆ ಇವತ್ತಿಗೂ ನಿಯತ್ತಿನ ಜನ ಇದ್ದಾರೆ. ಧಕ್ಷ ಅಧಿಕಾರಿಗಳಿದ್ದಾರೆ. ರಾಜಕಾರಣಿಗಳೂ! ಸಂಖ್ಯೆ ಕಡಿಮೆ ಇರಬಹುದು. ಹೆಚ್ಚಿದ್ದರೂ ನಮಗೆ ಕಡಿಮೆ ಅನ್ನಿಸಬಹುದು. ಅವರಿಗೆ ಕೆಟ್ಟವರು ಕಿರಿಕಿರಿ ನೀಡಬಹುದು. ಅದೇನಾದರೂ ಇರಲಿ. ನಾವು ನಮ್ಮಷ್ಟಕ್ಕೆ ನಿಯತ್ತಿನಿಂದ ಇರಬೇಕು. ಇಲ್ಲಿದ್ದುಕೊಂಡೇ ಕೈಲಾದಷ್ಟು ಬದಲಾವಣೆ ಮಾಡಬಹುದು ಅಥವಾ ನಿಯತ್ತು ಇನ್ನಷ್ಟು ಕೆಡದಂತೆ, ಭಷ್ಟತೆ ಹರಡದಂತೆ ತಡೆಯಬಹುದು.

ನಾವು ಮಾಡಬೇಕಾದ್ದಿಷ್ಟೆ, ನಾವು ನಿಯತ್ತಿನಿಂದಿರಬೇಕು. ಲಂಚ ಕೊಡಬಾರದು. ನಮ್ಮ ಮಕ್ಕಳೂ ನಿಯತ್ತಾಗಿ ಭಾರತದ ಉತ್ತಮ ಪ್ರಜೆಯಾಗುವಂತೆ ನೋಡಿಕೊಳ್ಳಬೇಕು. ಅಷ್ಟು ಸಾಕು. ಅದೇ ನಾವು ದೇಶಕ್ಕೆ ಕೊಡಬಹುದಾದ ಕೊಡುಗೆ. ಅದಕ್ಕಾಗಿ ನಮಗೆ ಯಾರೂ ಭಾರತ ರತ್ನ ಪ್ರಶಸ್ತಿ ನೀಡಬೇಕಿಲ್ಲ. ಯಾರೂ ನಮ್ಮನ್ನು ಗುರುತಿಸಬೇಕಾಗಿಯೂ ಇಲ್ಲ.

(ವಿ.ಸೂ: ಇವತ್ತು (೧೪-೧೦-೦೮) ರಾತ್ರಿ ಯುಟಿವಿಯಲ್ಲಿ ರಿಸ್ಕ್ ಸಿನಿಮಾ ನೋಡ್ತಾ ಇದ್ದೆ. ನನಗೆ ಪೊಲೀಸ್ ಸಿನಿಮಾಗಳು ಇಷ್ಟವಾಗುವ ಬಗ್ಗೆ ಯಾಕೊಂದು ಚಿಕ್ಕ ಬರಹ ಬ್ಲಾಗಿಸಬಾರದು ಅನ್ನಿಸಿತು. ಪಿಚ್ಚರ್‌ನೋಡುತ್ತ, ಜಾಹೀರಾತು ಬಂದಾಗ ಬರೆಯುತ್ತ ಹೋದೆ. ಪಿಚ್ಚರ್ ಬಗ್ಗೆ ಬರೆಯಬೇಕು ಅದುಕೊಂಡು ಹೊರಟವ, ಅದು ಎಲ್ಲಿಗೋ ಹೋಯಿತು. ತುಂಬ ಸೀರಿಯಸ್ ಅನ್ನಿಸಿ ಬೋರು ಹೊಡೆಸಿದ್ದರೆ, ಬಯ್ಯಬೇಡಿ. ಬರೆಯುತ್ತ ನನ್ನ ಬಗ್ಗೇ ಹೆಚ್ಚು ಹೊಗಳಿಕೊಂಡಿದ್ದೇನೆ ಅನ್ನಿಸಿದರೆ ಕ್ಷಮಿಸಿ. ನಿಯತ್ತಿನ ಮನುಷ್ಯನಾಗಿ ನನಗಷ್ಟು ನೈತಿಕ ಅಧಿಕಾರ ಇದೆ ಅಂದುಕೊಳ್ಳುತ್ತೇನೆ.)

Monday, October 13, 2008

ಆಹಾ ಮಿಥುನನ ಮದ್ವೆಯಂತೆ!

ನಾನು ಕರ್ನಾಟಕದಲ್ಲೇ ಇದ್ದಿದ್ದರೆ ಇವತ್ತು ಹೋಗಲೇ ಬೇಕಿತ್ತು. ಆದರೆ ದೂರದ ದಿಲ್ಲಿಯಲ್ಲಿದ್ದೇನಲ್ಲಾ. ನನ್ನ ಆತ್ಮೀಯ ಗೆಳೆಯ ಮಿಥುನನ ಮದುವೆ ಇವತ್ತು. ನನ್ನ ಪರವಾಗಿ ನನ್ನ ಹೆಂಡತಿ ಹೋಗಿ ಬಂದಳು. ಆದರೆ ನಾನು ಮಿಸ್!
ಮಿಥುನ್ ಸದಾ ಚಟುವಟಿಕೆಯ ಹುಡುಗ. ಅದಕ್ಕೆ ತಕ್ಕಂತೆ ಗಡಿಬಿಡಿ. ಫೋನು ಮಾಡಿದರೆ ಕಟ್ ಮಾಡುವ ಬಟನ್ ಮೇಲೆ ಬೆರಳಿಟ್ಟೇ ಮಾತನಾಡುತ್ತಾನೆ. ಕಿನ್ನಿಗೋಳಿಯಂತಹ ಸಣ್ಣ ಊರಲ್ಲಿ ಕುಳಿತು ದೊಡ್ಡ ದೊಡ್ಡ ವಿಷಯಗಳ ಬೆನ್ನುಹತ್ತುತ್ತಾನೆ. ತುಂಬ ಚುರುಕು. ಅಸೂಯೆಯಾಗುವಷ್ಟು!
ಆದರೆ ಆತ ನನ್ನ ಲೇಖನ ಪತ್ರಿಕೆಯಲ್ಲಿ ಬಂದಾಗೆಲ್ಲ ಉರಿದುಕೊಳ್ಳುತ್ತಿರುತ್ತಾನೆ. ಬೆಳ್ಳಂಬೆಳಗ್ಗೆ ಆತನ ಮಿಸ್ ಕಾಲ್ ಬಂದಿದೆ ಎಂದರೆ ಆ ದಿನ ನನ್ನ ಲೇಖನ ಪ್ರಕಟವಾಗಿದೆ ಎಂದೇ ಅರ್ಥ. ಓದದಿದ್ದರೂ ನೋಡಿದ ಕೂಡಲೆ ಒಂದು ಮಿಸ್ ಕಾಲ್ ಕೊಡುವುದು ಆತನ ಪದ್ಧತಿ.
ನನ್ನ ಗೆಳೆಯನ ಮದುವೆಯಾಗಿದ್ದರೆ ಬ್ಲಾಗಿಗೆ ಬರೆಯುತ್ತಿರಲಿಲ್ಲ. ಅವನ ಮದುವೆಗೂ ನನಗೂ ಸಂಬಂಧ ಉಂಟು! ನನ್ನ ಗೆಳೆಯನಾದರೂ ನನ್ನ ಬಳಿ ಹುಡುಗಿಯರು ಮಾತನಾಡುವುದು ಕಂಡು ಅವನಿಗೆ ಒಳಗೊಳಗಷ್ಟೇ ಅಲ್ಲ ಹೊರಗೂ (ನನ್ನ ಬಳಿಯೇ ಹೇಳಿದ್ದಾನೆ ಹಾಗಾಗಿ) ಅಸೂಯೆ. ಒಂದಾದರೂ ಹುಡುಗಿಯನ್ನು ಪಟಾಯಿಸಿ ಮಿಂಚಬೇಕೆಂದು ಆಸೆ. ಅವಳನ್ನೇ ಮದುವೆಯಾಗಲೂ ಸಿದ್ಧನಿದ್ದ ಬಿಡಿ. ಮೂಡುಬಿದಿರೆಯ ನುಡಿಸಿರಿ, ಉಡುಪಿಯ ಸಾಹಿತ್ಯ ಸಮ್ಮೇಳನ ಹೀಗೆ ದೊಡ್ಡ ಕಾರ್ಯಕ್ರಮಗಳಲ್ಲಿ ಉತ್ತಮ ವರದಿಯ ಜತೆ ಹುಡುಗಿಯೂ ಸಿಗುತ್ತಾಳೇನೋ ಹುಡುಕಿದ್ದೇ ಹುಡುಕಿದ್ದು.
ನಾನಾವಾಗಲೇ ಹೇಳಿದ್ದೆ ನನ್ನ ಜತೆ ತಿರುಗಬೇಡ. ನಿನಗೆ ಹುಡುಗಿ ಸಿಗುವುದಿಲ್ಲ ಎಂದು. ಆತ ಕೇಳಬೇಕಲ್ಲ. ನನ್ನ ಜತೆಯೇ ಇರುತ್ತಿದ್ದ. ನನಗೂ ಅವನ ಜತೆ ಇಷ್ಟವಾಗುತ್ತಿತ್ತು. ಹೀಗೆ ಹೋದಲ್ಲೆಲ್ಲ ಯಾವುದೋ ಹುಡುಗಿಯನ್ನು ಸುಮ್ಮನೆ ಕಣ್ಣುಹಾಕಿ ಇಟ್ಟಿರುತ್ತಿದ್ದ. ದುರಂತವೆಂದರೆ ಆ ಹುಡುಗಿ ನನ್ನ ಬಳಿ ನಗುನಗುತ್ತ ಮಾತನಾಡಿ, ಪರಿಚಯ ಮಾಡಿಕೊಂಡು ಹೋಗುತ್ತಿದ್ದರು. ಅವರು ಹೋದ ಮೇಲೆ ಈತ ನನಗೆ ಶಾಪಹಾಕುತ್ತಿದ್ದ! ಪ್ರೀತಿಯಿಂದ!!
ಎಷ್ಟು ಕಾರ್ಯಕ್ರಮ ಸುತ್ತಿದರೂ ವರದಿ ಹೊರತು ಬೇರೇನೂ ಲಾಭವಾಗಲಿಲ್ಲ. ಅಂತೂ ನಾನು ಮಂಗಳೂರು ಬಿಟ್ಟೆ. ಅದೇನು ಕಾಕತಾಳೀಯವೋ? ಆತನಿಗೆ ಹುಡುಗಿ ಸಿಕ್ಕಿ ಮದುವೆ ನಿಕ್ಕಿಯಾಯಿತು! ಅಂತೂ ಅವನಿಗೆ ಹುಡುಗಿ ಸಿಗಬೇಕಾದರೆ ನಾನು ಮಂಗಳೂರು ಬಿಡಬೇಕಲಾಯಿತು!!
ಇವತ್ತು ಯಾರೋ ಅವನ ಮದುವೆಯಲ್ಲಿ 'ಮಿಥುನನ ರಿಮೋಟ್ ಪೋಂಡಾ ಅಂದು' (ಮಿಥುನನ ರಿಮೋಟ್ ಹೋಯ್ತು) ಅಂದರಂತೆ. ಹೋಗಿಬಂದ ಗೆಳೆಯರ ವರದಿ ಪ್ರಕಾರ ಮಿಥುನನ ಪರಿಸ್ಥಿತಿ ಇನ್ನುಮುಂದೆ ಕಷ್ಟ ಎಂಬಂತಿತ್ತು. ಏನೇ ಇರಲಿ. ಅವರಿಬ್ಬರೂ ಸುಖವಾಗಿರಲಿ.
ಹನಿಮೂನಿಗೆ ದಿಲ್ಲಿಗೆ ಬಾ ಎಂದಿದ್ದೇನೆ. ಮದುವೆಯಾದ ಗಡಿಬಿಡಿಯಲ್ಲಿ ಎಲ್ಲಾ ಅಲ್ಲೇ ಮುಗಿಸುತ್ತಾನೊ, ದಿಲ್ಲಿಗಾಗಿ ಏನಾದ್ರೂ ಉಳಿಸಿಕೊಳ್ಳುತ್ತಾನೊ? ನೋಡಬೇಕು...
(ವಿಸೂ: ವಿಶೇಷ ಸೂಚನೆ ಅಥವಾ ವಿನಾಯಕನ ಸೂಚನೆ!: ಮದುವೆಯ ದಿನವೇ ಸಂಸಾರ ಹಾಳು ಮಾಡುವ ಯತ್ನಕ್ಕೆ ಕೈಹಾಕಿದ್ದಾನೆ ಎಂದು ಅಪಾರ್ಥ ಮಾಡಿಕೊಳ್ಳಬೇಡಿ. ಯಾಕೆಂದರೆ ಅವರವರ ಸಂಸಾರಕ್ಕೆ ಅವರೇ ಜವಾಬ್ದಾರರು!)

Tuesday, October 07, 2008

ಕಟ್ಟಿದೆ ಮೂಗು, ತೆರೆದಿದೆ ಬ್ಲಾಗು!


ಮೂಗು ಕಟ್ಟಿದೆ. ಪರಿಣಾಮ ನಿದ್ದೆ ಕೆಟ್ಟಿದೆ.

ಈ ಸಿಂಬಳ ಹಿಡಿದಿಡಲಾಗದೆ

ಮೂಗು ಸೋತಿದೆ...

ಈ ಶೀತ ಹಿಡಿದಿಡಲು

ಬೆಡ್‌ಶೀಟೂ ಸಾಲದೆ...

(ದುಂಡಿರಾಜರ 'ಈ ಚೆಲುವೆಯ ಬಣ್ಣಿಸಲಾಗದೆ ಕವಿತೆ ಸೋತಿದೆ, ನಿನ್ನ ರೂಪ ಬಣ್ಣಿಸಲು ಪದಗಳೂ ಸಾಲದೆ' ಹಾಡಿನಿಂದ ಸ್ಪೂರ್ತಿ ಪಡೆದು) ಅಷ್ಟು ಶೀತ. ಮೇಲೆ ಮುಖಮಾಡಿ ಮಲಗಿದರೆ ಸಿಂಬಳ ಮೂಗಿನ ಕೆಳಭಾಗದಲ್ಲಿ ಕಟ್ಟುತ್ತದೆ. ಕೆಳಮುಖಮಾಡಿ ಮಲಗಿದರೆ ಸಿಂಬಳ ಮೇಲ್ಭಾಗದಲ್ಲಿ ಕಟ್ಟುತ್ತದೆ. ಒಟ್ಟಿನಲ್ಲಿ ನಿದ್ರೆ ಇಲ್ಲದ ರಾತ್ರಿ!

ಬಹುತೇಕ ಜನರಿಗೆ ಹೀಗಾದಾಗ ಮೂಡು ಕೆಡುತ್ತದೆ. ವಕ್ರದಂತನಾದ ನಾನು ಇಲ್ಲೂ ವಕ್ರ. ನನಗೆ ಮೂಡು ಬಂತು. ಆಗಸ್ಟ್ 1೫ರಂದು ಒಂದು ಲೇಖನ ಬರೆದು ಬ್ಲಾಗಿಗೆ ಹಾಕಿದವ ಮತ್ತೆ ಬ್ಲಾಗಿಸಿಯೇ ಇರಲಿಲ್ಲ. ಅಷ್ಟೇ ಏಕೆ ಬೇರೆ ಬ್ಲಾಗಿನತ್ತ ಬಗ್ಗಿ, ಬಾಗಿಯೂ ನೋಡಿರಲಿಲ್ಲ. ಆ.೨೯ರಿಂದ ೧೫ ದಿನ ಊರಿಗೆ ಹೋಗಿದ್ದೆ. ಪತ್ರಿಕೋದ್ಯಮ ಸೇರಿದ ಮೇಲೆ ಮದುವೆಗೆ ೧೨ ದಿನ ರಜೆ ಹಾಕಿದ್ದು ಬಿಟ್ಟರೆ ಮತ್ತೆ ೧೫ ದಿನದ ದೀರ್ಘ ರಜೆ ಇದೇ ಮೊದಲು. ಆಗಸ್ಟ್ ೧೫ರ ನಂತರ ಊರಿಗೆ ಹೋಗುವ ಸಂಭ್ರಮ. ಬ್ಲಾಗು ಬೋರನ್ನಿಸಿತು. ಊರಿನಲ್ಲಿ ಲ್ಯಾಪ್‌ಟಾಪ್ ಜತೆಯಲ್ಲಿತ್ತಾದರೂ ಯಾಕೋ ಬ್ಯಾಗಿನಿಂದ ಹೊರತೆಗೆಯುವ ಮನಸ್ಸಾಗಲಿಲ್ಲ. ಬಂದ ಮೇಲೆ ಊರಿನ ರಂಗು, ರಜೆಯ ಗುಂಗು ಏನೂ ಬರೆಯಲಾಗಲಿಲ್ಲ.

ಹಾಗಂತ ಬರೆಯೋಕೆ ವಿಷಯ ಇರಲಿಲ್ಲ ಅಂತಲ್ಲ. ಓದಿದ ಪುಸ್ತಕ, ನೋಡಿದ ಸಿನಿಮಾ ಎಲ್ಲ ಸಾಕಷ್ಟಿದ್ದವು. ರೈಲಿನಲ್ಲಿ ಜೋಗಿಯವರ ಯಾಮಿನಿ, ಚೇತನಾ ಅವರ ಭಾಮಿನಿ ಓದಿದೆ. ದಿಲ್ಲಿಯಲ್ಲಿ ಮನೆಯಲ್ಲಿ ಕುಳೀತು ಜಯಂತ ಕಾಯ್ಕಿಣಿ ಅವರ ಕತೆಗಳನ್ನು ಓದಿ ಮತ್ತೆ ಮಾನಸಿಕವಾಗಿ ದೀವಗಿ ಸೇತುವೆ ಮೇಲೆ, ಗೋಕರ್ಣದ ಬೀದಿಯಲ್ಲಿ ಓಡಾಡಲಾರಂಭಿಸಿದೆ. ಇವುಗಳನ್ನೆಲ್ಲ ಓದುತ್ತಿದ್ದಂತೆ ಕೆಲವು ಸಿನಿಮಾ ನೋಡುತ್ತಿದ್ದಂತೆ ಇದರ ಬಗ್ಗೆ ಬರೆದು ಬ್ಲಾಗಿಸಬೇಕು ಅಂದುಕೊಳ್ಳುತ್ತಿದ್ದೆ. ಸಾಮಾನ್ಯವಾಗಿ ಹಾಗೆ ಮಾಡುತ್ತೇನೆ. ಆದರೆ ಲ್ಯಾಪ್‌ಟಾಪ್‌ನ ಮುಂದೆ ಕುಳಿತರೆ ಬರೆಯಲೇಕೋ ಮನಸ್ಸಿಲ್ಲ. ಇಂದು ಹುಡುಗಿಗೆ ಐಲವ್ ಯು ಹೇಳಲೇ ಬೇಕು ಅಂತ ಬೇಗ ಎದ್ದು ಚೆಂದವಾಗಿ ರೆಡಿಯಾಗಿ ಕಾಲೇಜಿಗೆ ಬಂದ ಹುಡುಗ ಯಾಕೋ ಇವತ್ತು ಬೇಡ ಎಂದು ೭೨ನೇ ಬಾರಿಯೂ ಶುಭ ಕಾರ್ಯ ಮುಂದೂಡಿದಂತೆ!

ಈ ನಡುವೆ ಬ್ಲಾಗಿನ ಬಗ್ಗೆ ಒಂದು ನಮೂನೆ ನಶ್ವರ ಭಾವ. ರವಿ ಬೆಳೆಗೆರೆ ಅವರು ಹಾಯ್ ಬೆಂಗಳೂರಿನಲ್ಲಿ ಜೋಗಿ ಅವರ ಬಗ್ಗೆ ಬರೆಯುತ್ತ ನಯ್ಯಾಪೈಸೆ ಲಾಭವಿಲ್ಲದ ಬ್ಲಾಗೂ ನಡೆಸುತ್ತಾನೆ ಎಂದು ಶರಾ ಬರೆದಿದ್ದರು. ಅದರಿಂದ ಸ್ಪೂರ್ತಿ ಪಡೆದರೋ ಎಂಬಂತೆ ಜೋಗಿ ಕೂಡ ಹಿಟ್‌ವಿಕೆಟ್ ಆದವರಂತೆ ಬ್ಲಾಗ್ಲೋಕದಿಂದ ನಿರ್ಗಮಿಸಿಬಿಟ್ಟರು. ಈ ನಡುವೆ ವಿಶ್ವೇಶ್ವರ ಭಟ್ಟರು ಸುಮ್ಮನೆ ಬ್ಲಾಗಿಗೆ ಬರೆದು ಯಾಕೆ ಸಮಯ ಹಾಳು ಮಾಡ್ತೆ. ಪತ್ರಿಕೆಗೆ ಬರೆ. ಅದನ್ನು ಬೇಕಾದ್ರೆ ಬ್ಲಾಗಿಸು ಎಂದಿದ್ದರು. ಬಹುಶಃ ಇಷ್ಟೆಲ್ಲ ವಿಷಯಗಳು ಒಟ್ಟಿಗೆ ಸೇರಿ ನನಗೆ ಬ್ಲಾಗಿನ ಬಗ್ಗೆ ಬ್ಯಾಸರ ಮೂಡುವಂತೆ ಮಾಡಿತು.

ಕಳ್ಳಂಗೊಂದು ಪಿಳ್ಳೆ ನೆವ ಅಂತಾರಲ್ಲ ಹಾಗೆ ನನ್ನ ಆಲಸಿತನಕ್ಕೆ ಇಷ್ಟೆಲ್ಲ ದೊಡ್ಡ ಜನರ ಸಮರ್ಥನೆ ಸಿಕ್ಕಿಬಿಟ್ಟತ್ತು! ಪರಿಣಾಮ ನನ್ನ ಬ್ಲಾಗು ಬಂದಿತ್ತು. ಕೆಲವು ಗೆಳೆಯರು ಆರ್ಕುಟ್‌ನಲ್ಲಿ ಯಾಕೋ ನಿನ್ನ ಬ್ಲಾಗನ್ನು ಸ್ಕ್ಯಾಪ್ ಮಾಡಿದ್ದೀಯಾ ಅಂದರು. ಹಾಗೇನಿಲ್ಲ ಅಂತ ನಾನು ಸ್ಕ್ರ್ಯಾಪ್ ಮಾಡಿದೆ. ಏನೋ ಅನಿವಾರ್ಯ ಅನ್ನೋ ಶೈಲಿಯಲ್ಲಿ ಪತ್ರಿಕರ್ತನ ಕೆಲಸವನ್ನು ಮಾಡುತ್ತಿದ್ದೆ. ಅದೂ ಪೂರ್ತಿ ನನಗೇ ಸಮಾದಾನ ಕೊಡುತ್ತಿರಲಿಲ್ಲ.

ಎಲ್ಲ ಚಟಗಳಂತೆ ಬರೆವಣಿಗೆ ಚಟ ಕೂಡ. ನೀವು ಅದನ್ನು ಸ್ವಲ್ಪ ದಿನ ಬಿಟ್ಟಿರೋ ಬಿಟ್ಟೇಹೋಗುತ್ತದೆ. ಮತ್ತೆ ಅದನ್ನು ಶುರುಮಾಡಬೇಕಾಗುತ್ತದೆ.

ಆದರೆ ನನ್ನ ಕಟ್ಟಿದ ಮೂಗು ನನ್ನನ್ನು ಮತ್ತೆ ಬ್ಲಾಗಿನೊಳು ಮೂಗುತೂರಿಸುವಂತೆ ಮಾಡಿತು. ಬ್ಲಾಗಿನಲ್ಲಿ ನಾನು ಇಷ್ಟು ದಿನ ಕಾಣಿಸಿಕೊಳ್ಳದಿರುವುದರ ಬಗ್ಗೆ ಬರೆದೇ ಯಾಕೆ ಪುನಾರಂಭ ಮಾಡಬಾರದು ಎಂದು ಯೋಚಿಸಿದೆ. ಮಧ್ಯರಾತ್ರಿ ೧೨.೦೦ ಗಂಟೆಗೆ ಎದ್ದೆ. ಬರೆದೆ. ಬ್ಲಾಗಿಸಿದೆ.

ಬ್ಲಾಗಿಗೆ ಮರುಹುಟ್ಟು ನೀಡಲು ಕಟ್ಟಿದ ಮೂಗು ಕಾರಣವಾದರೂ ಬರೆಯದೇ ಗರಬಡಿದವನಂತೆ ಇದ್ದ ನನ್ನನ್ನು ಬರೆಯಲು ಹಚ್ಚಿದ್ದು ಪ್ರತಾಪಸಿಂಹ. ಏನು ವಿನಾಯಕ್? ಬರವಣಿಗೆ ನಿಲ್ಲಿಸಿಬಿಟ್ಟಿದ್ದೀಯಾ? ಏನಾದ್ರೂ ಬರೆದುಕೊಡಿ. ಅಪರೂಪಕ್ಕಾದರೂ ಪತ್ರಿಕೆಯಲ್ಲಿ ಕಾಣಿಸಿಕೊಳ್ತಾ ಇರಬೇಕು ಎಂದು ತಿದಿಯೊತ್ತಿದರು.

ಬರವಣಿಗೆ ಆರಂಭಿಸಲು ಒಂದು ನೆಪ ಬೇಕಿತ್ತು. ಅದು ಸಿಕ್ಕಂತಾಯಿತು. ಒಂದು ಲೇಖನ ಬರೆದೆ. ನನಗೇಕೋ ಪೂರ್ಣ ಸಮಾದಾನ ಆಗಿರಲಿಲ್ಲ. ಆದರೂ ಸೋಮವಾರ ಕಳುಹಿಸಿತ್ತೇನೆ ಅಂದಿದ್ದೆ. ಕಳುಹಿಸಿದೆ. ಆದರೆ ಸೋಮವಾರ ಸಂಜೆ ವೈನಾಗಿ (ಕುಡಿದು ಅಲ್ಲ) ಕುಳಿತು ಇನ್ನೊಂದು ಲೇಖನ ಬರೆದೆ. ನನಗೆ ಖುಶಿಕೊಟ್ಟಿತು. ಅದನ್ನೇ ಪ್ರತಾಪ್‌ಗೆ ಕಳುಹಿಸಿದೆ. ಯಾಕೋ ಬಹಳ ದಿನದ ನಂತರ ನಾನು ಉಲ್ಲಸಿತನಾಗಿದ್ದೆ. ಬಹುಶಃ ಕಟ್ಟಿದ ಮೂಗಿಗಿಂತ ಮನಸ್ಸಿಗೆ ಕಟ್ಟಿದ ಮೋಡ ಚದುರಿ ಹೋದದ್ದಕ್ಕೇ ಇರಬೇಕು ನಿದ್ರೆ ಬರುತ್ತಿಲ್ಲ!

ಚಿಕ್ಕವರಿರುವಾಗ ಪ್ರವಾಸಕ್ಕೆ ಹೋಗುವ ಹಿಂದಿನ ದಿನ ನಿದ್ರೆ ಬರುತ್ತಿರಲಿಲ್ಲವಲ್ಲ ಹಾಗೆ!