ನಾನು ಕರ್ನಾಟಕದಲ್ಲೇ ಇದ್ದಿದ್ದರೆ ಇವತ್ತು ಹೋಗಲೇ ಬೇಕಿತ್ತು. ಆದರೆ ದೂರದ ದಿಲ್ಲಿಯಲ್ಲಿದ್ದೇನಲ್ಲಾ. ನನ್ನ ಆತ್ಮೀಯ ಗೆಳೆಯ ಮಿಥುನನ ಮದುವೆ ಇವತ್ತು. ನನ್ನ ಪರವಾಗಿ ನನ್ನ ಹೆಂಡತಿ ಹೋಗಿ ಬಂದಳು. ಆದರೆ ನಾನು ಮಿಸ್!
ಮಿಥುನ್ ಸದಾ ಚಟುವಟಿಕೆಯ ಹುಡುಗ. ಅದಕ್ಕೆ ತಕ್ಕಂತೆ ಗಡಿಬಿಡಿ. ಫೋನು ಮಾಡಿದರೆ ಕಟ್ ಮಾಡುವ ಬಟನ್ ಮೇಲೆ ಬೆರಳಿಟ್ಟೇ ಮಾತನಾಡುತ್ತಾನೆ. ಕಿನ್ನಿಗೋಳಿಯಂತಹ ಸಣ್ಣ ಊರಲ್ಲಿ ಕುಳಿತು ದೊಡ್ಡ ದೊಡ್ಡ ವಿಷಯಗಳ ಬೆನ್ನುಹತ್ತುತ್ತಾನೆ. ತುಂಬ ಚುರುಕು. ಅಸೂಯೆಯಾಗುವಷ್ಟು!
ಆದರೆ ಆತ ನನ್ನ ಲೇಖನ ಪತ್ರಿಕೆಯಲ್ಲಿ ಬಂದಾಗೆಲ್ಲ ಉರಿದುಕೊಳ್ಳುತ್ತಿರುತ್ತಾನೆ. ಬೆಳ್ಳಂಬೆಳಗ್ಗೆ ಆತನ ಮಿಸ್ ಕಾಲ್ ಬಂದಿದೆ ಎಂದರೆ ಆ ದಿನ ನನ್ನ ಲೇಖನ ಪ್ರಕಟವಾಗಿದೆ ಎಂದೇ ಅರ್ಥ. ಓದದಿದ್ದರೂ ನೋಡಿದ ಕೂಡಲೆ ಒಂದು ಮಿಸ್ ಕಾಲ್ ಕೊಡುವುದು ಆತನ ಪದ್ಧತಿ.
ನನ್ನ ಗೆಳೆಯನ ಮದುವೆಯಾಗಿದ್ದರೆ ಬ್ಲಾಗಿಗೆ ಬರೆಯುತ್ತಿರಲಿಲ್ಲ. ಅವನ ಮದುವೆಗೂ ನನಗೂ ಸಂಬಂಧ ಉಂಟು! ನನ್ನ ಗೆಳೆಯನಾದರೂ ನನ್ನ ಬಳಿ ಹುಡುಗಿಯರು ಮಾತನಾಡುವುದು ಕಂಡು ಅವನಿಗೆ ಒಳಗೊಳಗಷ್ಟೇ ಅಲ್ಲ ಹೊರಗೂ (ನನ್ನ ಬಳಿಯೇ ಹೇಳಿದ್ದಾನೆ ಹಾಗಾಗಿ) ಅಸೂಯೆ. ಒಂದಾದರೂ ಹುಡುಗಿಯನ್ನು ಪಟಾಯಿಸಿ ಮಿಂಚಬೇಕೆಂದು ಆಸೆ. ಅವಳನ್ನೇ ಮದುವೆಯಾಗಲೂ ಸಿದ್ಧನಿದ್ದ ಬಿಡಿ. ಮೂಡುಬಿದಿರೆಯ ನುಡಿಸಿರಿ, ಉಡುಪಿಯ ಸಾಹಿತ್ಯ ಸಮ್ಮೇಳನ ಹೀಗೆ ದೊಡ್ಡ ಕಾರ್ಯಕ್ರಮಗಳಲ್ಲಿ ಉತ್ತಮ ವರದಿಯ ಜತೆ ಹುಡುಗಿಯೂ ಸಿಗುತ್ತಾಳೇನೋ ಹುಡುಕಿದ್ದೇ ಹುಡುಕಿದ್ದು.
ನಾನಾವಾಗಲೇ ಹೇಳಿದ್ದೆ ನನ್ನ ಜತೆ ತಿರುಗಬೇಡ. ನಿನಗೆ ಹುಡುಗಿ ಸಿಗುವುದಿಲ್ಲ ಎಂದು. ಆತ ಕೇಳಬೇಕಲ್ಲ. ನನ್ನ ಜತೆಯೇ ಇರುತ್ತಿದ್ದ. ನನಗೂ ಅವನ ಜತೆ ಇಷ್ಟವಾಗುತ್ತಿತ್ತು. ಹೀಗೆ ಹೋದಲ್ಲೆಲ್ಲ ಯಾವುದೋ ಹುಡುಗಿಯನ್ನು ಸುಮ್ಮನೆ ಕಣ್ಣುಹಾಕಿ ಇಟ್ಟಿರುತ್ತಿದ್ದ. ದುರಂತವೆಂದರೆ ಆ ಹುಡುಗಿ ನನ್ನ ಬಳಿ ನಗುನಗುತ್ತ ಮಾತನಾಡಿ, ಪರಿಚಯ ಮಾಡಿಕೊಂಡು ಹೋಗುತ್ತಿದ್ದರು. ಅವರು ಹೋದ ಮೇಲೆ ಈತ ನನಗೆ ಶಾಪಹಾಕುತ್ತಿದ್ದ! ಪ್ರೀತಿಯಿಂದ!!
ಎಷ್ಟು ಕಾರ್ಯಕ್ರಮ ಸುತ್ತಿದರೂ ವರದಿ ಹೊರತು ಬೇರೇನೂ ಲಾಭವಾಗಲಿಲ್ಲ. ಅಂತೂ ನಾನು ಮಂಗಳೂರು ಬಿಟ್ಟೆ. ಅದೇನು ಕಾಕತಾಳೀಯವೋ? ಆತನಿಗೆ ಹುಡುಗಿ ಸಿಕ್ಕಿ ಮದುವೆ ನಿಕ್ಕಿಯಾಯಿತು! ಅಂತೂ ಅವನಿಗೆ ಹುಡುಗಿ ಸಿಗಬೇಕಾದರೆ ನಾನು ಮಂಗಳೂರು ಬಿಡಬೇಕಲಾಯಿತು!!
ಇವತ್ತು ಯಾರೋ ಅವನ ಮದುವೆಯಲ್ಲಿ 'ಮಿಥುನನ ರಿಮೋಟ್ ಪೋಂಡಾ ಅಂದು' (ಮಿಥುನನ ರಿಮೋಟ್ ಹೋಯ್ತು) ಅಂದರಂತೆ. ಹೋಗಿಬಂದ ಗೆಳೆಯರ ವರದಿ ಪ್ರಕಾರ ಮಿಥುನನ ಪರಿಸ್ಥಿತಿ ಇನ್ನುಮುಂದೆ ಕಷ್ಟ ಎಂಬಂತಿತ್ತು. ಏನೇ ಇರಲಿ. ಅವರಿಬ್ಬರೂ ಸುಖವಾಗಿರಲಿ.
ಹನಿಮೂನಿಗೆ ದಿಲ್ಲಿಗೆ ಬಾ ಎಂದಿದ್ದೇನೆ. ಮದುವೆಯಾದ ಗಡಿಬಿಡಿಯಲ್ಲಿ ಎಲ್ಲಾ ಅಲ್ಲೇ ಮುಗಿಸುತ್ತಾನೊ, ದಿಲ್ಲಿಗಾಗಿ ಏನಾದ್ರೂ ಉಳಿಸಿಕೊಳ್ಳುತ್ತಾನೊ? ನೋಡಬೇಕು...
(ವಿಸೂ: ವಿಶೇಷ ಸೂಚನೆ ಅಥವಾ ವಿನಾಯಕನ ಸೂಚನೆ!: ಮದುವೆಯ ದಿನವೇ ಸಂಸಾರ ಹಾಳು ಮಾಡುವ ಯತ್ನಕ್ಕೆ ಕೈಹಾಕಿದ್ದಾನೆ ಎಂದು ಅಪಾರ್ಥ ಮಾಡಿಕೊಳ್ಳಬೇಡಿ. ಯಾಕೆಂದರೆ ಅವರವರ ಸಂಸಾರಕ್ಕೆ ಅವರೇ ಜವಾಬ್ದಾರರು!)
ಮಸುಕಾದ 2022ರ ಡೈರಿಯಿಂದ....
5 months ago
9 comments:
ಹಹಹಾ....
ಚೆನ್ನಾಗಿ ಬರದ್ದಿ ಬಿಡು...
ಮಿಥುನನ ಮದ್ವೆಗೆ ಹೋಗಿದ್ದೆ...ಅಲ್ಲೂ ಅವಂದು ಗಡಿಬಿಡೀನೇ!
ಮದುವೆಯಲ್ಲಿ ಗಡಿಬಿಡಿ ಮಾಡಿದರೆ ಓಕೆ. ಮುಂದಿನ ಕಾರ್ಯಕ್ಕೂ ಗಡಿಬಿಡಿ ಮಾಡಿದರೆ ಕಷ್ಟ....
ಭಟ್ರೆ,
ಸಂಜೆ ಕಿನ್ನಿಗೋಳಿಯಲ್ಲಿ ರಿಸೆಪ್ಷನ್-ಗೆ ತೆರಳಿದ್ದೆ. ಮಿಥುನ ನನಗೆ ಕಳೆದ ನಾಲ್ಕಾರು ವರ್ಷಗಳಿಂದ ಪರಿಚಯ. ನಿಮ್ಮ ಲೇಖನ ಓದಿದ ನಂತರ ತಿಳಿಯಿತು ಆತ ಯಾಕೆ ಫೋನ್ ಬೇಗ ’ಕಟ್’ ಮಾಡುತ್ತಾನೆ ಎಂದು!
ಮಿಥುನನ ಮದುವೆಗೆ ಅದ್ಯಪಾಡಿ ಎಂಬ ಕಾಡಿನ ನಡುವಿನ ಚೆಂದದ ಊರಿಗೆ ಹೋಗಿದ್ದೆ. ತುಂಬ ಖುಷಿ ಕೊಡೋ ದೇವಸ್ಥಾನ, ತಂಪು ವಾತಾವಜ... ಬೈಕ್ನಲ್ಲಿ ಮರಗಳ ಸಾಲಿನ ನಡುವೆ ಹೋಗ್ಬೇಕಾದ್ರೆ ಅಂದ್ಕೊಂಡೆ, ಮಿಥುನ ಮದುವೆಗೂ ಚಾರಣ ಮಾಡಿ ತಲಪೋ ಜಾಗ ಹುಡುಕಿದ್ರಾ ಅಂತ...! ವೇದಿಕೆ ಮೇಲಿಂದನೇ, ಊಟ ಮಾಡಿದ್ರಾ ಅಂತ ವಿಚಾರಿಸಿದ್ರು. ಅಂದ ಹಾಗೆ, ಮಿಥುನನ ತಮ್ಮ ಶಕುನ ಮಿಥುನನಿಗಿಂತ್ಲೂ ಚಂದ... ನೋಡಿದ್ದೀರ?
ನನ್ನ ಮಾನ ಮರ್ಯಾದೆ ಹರಾಜು ಹಾಕಲು ಗೆಳೆಯರೆಲ್ಲ ಸಿದ್ಧವಾದಂತಿದೆ!
ಆದ್ರೂ ನಿಮ್ಮ ಪ್ರೀತಿಗೆ ನಾನು ಋಣಿ.
mithuna nige rasna sikkida haage , shakuna nige thums up athava bikojoy sikkoto eano?
ಅಯ್ಯೊ,ಅಯ್ಯೊ!!!! ಅದೆಷ್ಟು ಪ್ರತಿಕ್ರಿಯೆಗಳು!ಅದೇನು ನನ್ನ ಬರವಣಿಗೆ ಪ್ರಭಾವವೋ,ಮಿಥುನನ ಪ್ರಭಾವವೋ?
ಏನಾದ್ರೂ ಇರ್ಲಿ. ಮಿಥುನನಿಂದಾಗಿ ನನ್ನ ಬ್ಲಾಗಿಗೆ ಒಳ್ಳೆ ಟಿಆರ್ಪಿ ಬಂತು!!
ಯಾವಾಗಲೂ ಪ್ರತಿಕ್ರಿಯಸದಿರೋ ನರೇಶ್ ಕೂಡ ಪ್ರತಿಕ್ರಿಯಿಸಿದ್ದಾರೆ....!!! ನನ್ನ ಕಣ್ಣನ್ನು ನಾನೇ ನಂಬದಾದೆ...!
ನೋಡಿ ಮಿಥುನ ಇಷ್ಟವಾಗೋದು ಇದಕ್ಕೆ. ನಾನು ಅವನ ಬಗ್ಗೆ ಬರೆದಿದ್ದನ್ನು ನೋಡಿ ಆತನೇ ಪ್ರೀತಿಯಿಂದ ಪ್ರತಿಕ್ರಿಯಿಸಬಲ್ಲ!
ಕೃಷ್ಣ ಅವರೆ,
ಮಿಥುನನ ತಮ್ಮ ಶಕುನನ್ನು ನೋಡಿಲ್ಲ. ಆದರೆ ಮಿಥುನನ ನೋಡಿದಾಗೆಲ್ಲ 'ಶಕುನ' ಚೆನ್ನಾಗೇ ಇರುತ್ತದೆ!
ಶಕುನ ನನ್ನ ಕೊನೆಯ ತಮ್ಮ. ಅವನ ಅಣ್ಣ, ನನ್ನ ಎರಡನೆಯ ತಮ್ಮ ರತುನ. ಇವತ್ತು ಅವನಿಗೂ ಹೆಣ್ಣು ನೋಡಲು ಹೋಗಿದ್ದಾರೆ ಅಪ್ಪ ಅಮ್ಮ! ರತುನ ಇಂಜಿನಿಯರ್. ಮೊದ್ಲು ಅವನಿಗೂ ತುಂಬ ಲೈನ್ ಇತ್ತು! ಯಾಕೆಂದ್ರೆ ಒಬ್ಬ ಫಿಲ್ಮ್ ಹೀರೋ ತರನೇ ಇದ್ದಾನೆ ಮಂಗ!
ನಾನು ಆ ಬರಹಕ್ಕೆ ಕಮೆಂಟನ್ನು ಕಿನ್ನಿಗೋಳಿಯ ಸೈಬರ್ ನಿಂದಲೇ ಬರೆಯುತ್ತಿದ್ದೇನೆ!:) ಮಿಥುನನನ್ನು ಈಗ ತಾನೇ ಅವನ ಪ್ರಿಂಟಿಂಗ್ ಪ್ರೆಸ್ಸಿನಲ್ಲೇ ಹೆಂಡತಿ ಸಮೇತನಾಗಿ ಕಂಡಬಂದೆ. ನಾನು ಮದುವೆಗೆ ಹೋಗಲಿಲ್ಲ..
ಹೆಂಡತಿಗೆ ಅಡೋಬ್ ಪೇಜ್ ಮೇಕರ್ ನಲ್ಲಿ ಕೆಲಸ ಮಾಡುವುದು ಹೇಗೆ ಅಂತ ಹೇಳಿಕೊಡುತ್ತಿದ್ದ ಆಸಾಮಿ, ಆಕೆಯನ್ನು ಹನಿಮೂನಿಗೆ ಕರೆದುಕೊಂಡು ಹೋಗಲು ಸಾಧ್ಯವಿಲ್ಲ ಅನ್ನಿಸುತ್ತದೆ!:)
Post a Comment