Friday, August 15, 2008

ಸ್ವಾತಂತ್ರ್ಯೋತ್ಸವದಲ್ಲಿಯೇ ಕಾಣದ ಸ್ವಾತಂತ್ರ್ಯ!


೧೫ ದಿನದ ಹಿಂದಿನಿಂದಲೇ ಪ್ರವಾಸಿಗರಿಂದ ಕೆಂಪುಕೋಟೆ, ರಾಷ್ಟ್ರಪತಿ ಭವನ ಮುಂತಾದ ಪ್ರಮುಖ ಪ್ರವಾಸಿ ತಾಣಕ್ಕೆ ಭೇಟಿ ನೀಡುವ ಸ್ವಾತಂತ್ರ್ಯ ಕಸಿದುಕೊಳ್ಳಲಾಗಿದೆ. ನಗರದ ರೈಲು ನಿಲ್ದಾಣಗಳಿಗೆ ೨೦ ದಿನ ಹಿಂದಿನಿಂದಲೇ ಪ್ರಯಾಣಿಕರನ್ನು ಕರೆದುಕೊಂಡು ಬರಲು ಹೋಗುವ ಸಾರ್ವಜನಿಕರಿಗೆ ಪ್ಲಾಟ್‌ಫಾರ್ಮ್ ಪ್ರವೇಶ ನಿಷೇಧಿಸಲಾಗಿದೆ.
೫-೬ ದಿನದಿಂದ ಪ್ರಮುಖ ಸ್ಥಳಗಳಲ್ಲಿನ ಕಟ್ಟಡಗಳು, ಅದರಲ್ಲಿನ ಕಚೇರಿಗಳು ರಾತ್ರಿ ೮.೦೦ ಗಂಟೆ ನಂತರ ಕೆಲಸ ಮಾಡುವ ಸ್ವಾತಂತ್ರ್ಯ ಕಳೆದುಕೊಂಡಿವೆ. ಸ್ವಾತಂತ್ರ್ಯೋತ್ಸವದ ಹಿಂದಿನ ದಿನವಂತೂ ನಮ್ಮ ಕಚೇರಿಯ ಕಟ್ಟಡವೂ ಸೇರಿದಂತೆ ಹಲವು ಕಟ್ಟಡಗಳನ್ನು ಸಂಜೆ ೪.೦೦ ಗಂಟೆ ಹೊತ್ತಿಗೇ ಮುಚ್ಚುವ ಆದೇಶ ಹೊರಬಿದ್ದಿದೆ!
ಹೋಗಲಿ ಸ್ವಾತಂತ್ರ್ಯೋತ್ಸವ ಕಾರ್ಯಕ್ರಮದಲ್ಲಾದರೂ ನೀವು ಸ್ವತಂತ್ರರಾಗಿ ಭಾಗವಹಿಸಬಹುದೇ? ಊಹುಂ. ಕೆಂಪುಕೋಟೆಯೂ ಸೇರಿದಂತೆ ಪ್ರಮುಖ ಸ್ಥಳಗಳಲ್ಲಿ ನಡೆಯುವ ಸ್ವಾತಂತ್ರ್ಯೋತ್ಸವ ಕಾರ್ಯಕ್ರಮಗಳಿಗೆ ನೀವು ಭಾಗವಹಿಸಲು ಹರಸಾಹಸ ಮಾಡಬೇಕಾಗುತ್ತದೆ. ಮೊದಲೇ ಪಾಸು ಮಾಡಿಸಿಕೊಂಡರೆ ಮಾತ್ರ ನಿಮಗೆ ಸ್ವಾತಂತ್ರ್ಯೋತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸಲು ಅವಕಾಶ!
ಸ್ವಾತಂತ್ರ್ಯೋತ್ಸವ ಸಮೀಪಿಸುತ್ತಿದ್ದಂತೆ ನಿಮ್ಮ ಒಂದೊಂದೇ ಸ್ವಾತಂತ್ರ್ಯ ಕಡಿತಗೊಳ್ಳುತ್ತಾ ಹೋಗುತ್ತದೆ! ಹುಡುಕಬೇಕು ನಮಗೆಷ್ಟು ಸ್ವಾತಂತ್ರ್ಯವಿದೆ ಎಂಬುದನ್ನು!!
ಸಾರ್ವಜನಿಕ ಮಾರುಕಟ್ಟೆಗಳೂ ೧೫ ದಿನ ಹಿಂದಿನಿಂದಲೇ
ಮೆಟಲ್ ಡಿಟೆಕ್ಟರಿನೊಳಗೆ ಹಾದು
ಒಳಗೆ ಬಾಯಾತ್ರಿಕನೆ... ಎಂದು ಜನರನ್ನು ಕೋರುತ್ತಿವೆ. ಮಾರುಕಟ್ಟೆಯ ಸುತ್ತಲಿನ ದಾರಿಗಳು ಬಂದ್ ಆಗಿವೆ. ಒಂದಿಡೀ ಮಾರುಕಟ್ಟೆಗೆ ೧ ಅಥವಾ ೨ ಕಡೆ ಮಾತ್ರ ಪ್ರವೇಶ ಸಾಧ್ಯ. ಅದೂ ಮೆಟಲ್‌ಡಿಟೆಕ್ಟರ್ ಎಂಬ ಹೊಸ್ತಿಲ ಮೂಲಕ. ಪ್ರಮುಖ ಸ್ಥಳಗಳಲ್ಲಿರುವ ಕಟ್ಟಡದ ಒಳಕ್ಕೆ ಕಾರು ತೆಗೆದುಕೊಂಡು ಹೋದರೆ ಮನೆಗೆ ಸ್ವಾಮೀಜಿಗಳು ಬಂದಾಗ ಹಾನದಲ್ಲಿ ಮುಖನೋಡಿ ಒಳಕರೆದುಕೊಳ್ಳುತ್ತಾರಲ್ಲ ಹಾಗೆ ಕಾರಿನ ಅಡಿಭಾಗವನ್ನು ಕನ್ನಡಿಯಲ್ಲಿ ಪರಿಶೀಲಿಸಿ ಒಳಬಿಡಲಾಗುತ್ತದೆ. ನೀವು ಒಳಹೋಗಬೇಕೆಂದರೆ ಕೆಲವು ಕಡೆ ಮೊಬೈಲು, ಇನ್ನು ಕೆಲವು ಕಡೆ ನಿಮ್ಮ ಮನೆಯ ಚಾವಿ, ಬೆಲ್ಟ್ ಕೂಡ ರೆಸೆಪ್ಶನಿಸ್ಟ್‌ಗೆ ಕೊಟ್ಟು ಹೋಗಬೇಕು. ನಿಮ್ಮ ಕೈಯಲ್ಲಿ ಚೀಲವಿದ್ದರಂತೂ ಮುಗಿದೇ ಹೋಯಿತು. ಅದರಲ್ಲೇನಿದೆ ಅಂತ ಪೂರ್ತಿ ನೋಡಿದ ನಂತರವೇ ಒಳಪ್ರವೇಶ. ಮಾರುಕಟ್ಟೆ, ಕಟ್ಟಡ ಹೀಗೆ ಎಲ್ಲೆಂದರಲ್ಲಿ ಬಂದು ಕುಳಿತಿರುವ ಸಿಸಿ ಟಿವಿ ಕ್ಯಾಮರಾಗಳು ಅದ್ಯಾವಾಗಲೋ ನಿಮ್ಮ ಪ್ರತಿ ಕ್ಷಣದ ಚಲನೆಯನ್ನೂ ದಾಖಲಿಸುತ್ತಿವೆ.
೬೧ನೇ ಸ್ವಾತಂತ್ರ್ಯೋತ್ಸವದ ದಿನ ಕುಳಿತು ಯೋಚಿಸಿದರೆ...
ಯಾರಿಗೆ ಬಂತು ಸ್ವಾತಂತ್ರ್ಯ?
ಎಲ್ಲಿಗೆ ಬಂತು ಸ್ವಾತಂತ್ರ್ಯ? ಎಂಬ ಪ್ರೊ. ಸಿದ್ದಲಿಂಗಯ್ಯ ಅವರು ಬರೆದ ಈ ಹಾಡು ನೆನಪಾಗುತ್ತದೆ. ಸಿದ್ದಲಿಂಗಯ್ಯ ಅವರು ಬೇರೆಯೇ ಕಾರಣಗಳಿಗಾಗಿ ಈ ಹಾಡು ಬರೆದಿದ್ದರೂ ಅದು ಈಗ ದೇಶದ ಅದರಲ್ಲೂ ವಿಶೇಷವಾಗಿ ರಾಜಧಾನಿಯಾದ ಹೊಸದಿಲ್ಲಿಯನ್ನು ಗಮನದಲ್ಲಿಸಿಕೊಂಡೇ ಬರೆದಂತಿದೆ. ಅಷ್ಟು ಚೆನ್ನಾಗಿ ದಿಲ್ಲಿಗೆ ಹೊಂದಿಕೊಳ್ಳುತ್ತದೆ ಈ ಹಾಡು.
ಈ ಪರಿಸ್ಥಿತಿಯಲ್ಲಿ ಸ್ವಾತಂತ್ರ್ಯೋತ್ಸವ ಆಚರಿಸಬೇಕಾ? ಸ್ವಾತಂತ್ರ್ಯೋತ್ಸವ ಬಂತಲ್ಲಾ ಎಂದು ಖುಷಿಪಡಬೇಕಾ? ದುಃಕ್ಕಿಸಬೇಕಾ? ಎಂಬ ಪ್ರಶ್ನೆ ಕಾಡುತ್ತದೆ.
ಸ್ವಾತಂತ್ರ್ಯೋತ್ಸವ ಅಂದರೆ ಎಲ್ಲೆಡೆ ಖುಶಿ ಇರಬೇಕು. ಪುಟಾಣಿ ಮಕ್ಕಳಲ್ಲಿ ಇರುತ್ತದಲ್ಲ ಅಂತಹ ಖುಷಿ. ಆದರೆ ನಮಗೋ ಹೊಸದಿಲ್ಲಿಯೂ ಸೇರಿದಂತೆ ಹಲವೆಡೆ ಬಾಂಬ್ ಭಯ! ಸ್ವಾತಂತ್ರ್ಯೋತ್ಸವ ಬಂತೆಂದರೆ ಹೊಸದಿಲ್ಲಿಯಂತಹ ಮಹಾನಗರಗಳಲ್ಲಿ ಭಯದ ಛಾಯೆ. ಒಂದು ವಾರದ ಹಿಂದಿನಿಂದಲೇ ಮಾರುಕಟ್ಟೆಗಳಿಗೆ ಬರುವ ಜನರ ಸಂಖ್ಯೆ ಗಣನೀಯವಾಗಿ ಕಡಿಮೆಯಾಗಿದೆ. ಹೊಸದಿಲ್ಲಿಯ ದೊಡ್ಡ ದೊಡ್ಡ ಮಾಲ್‌ಗಳು, ಪ್ರಸಿದ್ಧ ಮಾರುಕಟ್ಟೆಗಳಲ್ಲಿ ಸ್ವಾತಂತ್ರ್ಯೋತ್ಸವ ಸಮೀಪಿಸುತ್ತಿರುವ ೧ ವಾರದಲ್ಲಿ ಆಗಮಿಸುವವರ ಸಂಖ್ಯೆ ಶೇ.೫೦ರಷ್ಟು ಇಳಿದಿದೆಯಂತೆ. ಎಲ್ಲ ಆಫರ್‌ಗಳ ಹೊರತಾಗಿ!
ಕಾರಣ ಉಗ್ರರು. ಸ್ವಾತಂತ್ರ್ಯೋತ್ಸವ ಸಂಭ್ರಮ ಹಾಳು ಮಾಡಲು ಅವರೆಲ್ಲಿ ಬಾಂಬ್ ಸ್ಪೋಟಿಸುತ್ತಾರೊ ಎಂಬ ಭಯ. ಅದಕ್ಕಾಗಿ ಮುನ್ನೆಚ್ಚರಿಕೆ ಹೆಸರಲ್ಲಿ ಕಟ್ಟಡ ಮುಚ್ಚಿಸುವುದು, ರಾತ್ರಿ ೮.೦೦ ಗಂಟೆ ನಂತರ ಕೆಲಸ ಮಾಡದಂತೆ ಸೂಚಿಸುವುದು ನಡೆಯುತ್ತಿದೆ. ಜನ ಭದ್ರತೆ, ನೆಮ್ಮದಿಗಾಗಿ ಅದನ್ನೆಲ್ಲ ಸಹಿಸಿಕೊಳ್ಳುತ್ತಿದ್ದಾರೆ.
ಇದೆಲ್ಲ ಏನನ್ನು ಸೂಚಿಸುತ್ತದೆ? ನಾವು ಭಯದ ನೆರಳಲ್ಲಿ ಸ್ವಾತಂತ್ರ್ಯೋತ್ಸವ ಆಚರಿಸುತ್ತಿದ್ದೇವೆ. ಅನಾಹುತ ರಹಿತ ಸ್ವಾತಂತ್ರ್ಯೋತ್ಸವಕ್ಕಾಗಿ ನಮ್ಮ ಸ್ವಾತಂತ್ರ್ಯ ಹರಣ ಸಹಿಸಿಕೊಳ್ಳುತ್ತೇವೆ. ಮೊದಲ್ಲೆಲ್ಲ ಹೇಳುವಂತೆ ಸಂಭ್ರಮದ ಸ್ವಾತಂತ್ರ್ಯೋತ್ಸವ ಎಂಬುದು ಮಾಯವಾಗಿ ಕೇವಲ ಸ್ವಾತಂತ್ರ್ಯೋತ್ಸವಕ್ಕೆ ಸೀಮಿತವಾಗುತ್ತಿರುವಂತೆ ಭಾಸವಾಗುತ್ತಿದೆ. ೬೧ನೇ ಸ್ವಾತಂತ್ರ್ಯೋತ್ಸವ ಹೊಸ್ತಿಲಲ್ಲಿ ನಿಂತು ನಮಗೆಷ್ಟು ಸ್ವಾತಂತ್ರ್ಯವಿದೆ, ಎಷ್ಟು ಸ್ವಾತಂತ್ರ್ಯ ಮುಂದಿನ ದಿನಗಳಲ್ಲಿ ಉಳಿಯಲಿದೆ ಎಂದು ವಿಚಾರ ಮಾಡುವಂತಾಗಿದೆ.
ನೀಮಗೂ ಹಾಗನ್ನಿಸುತ್ತಿದೆಯೇ? ಹಾಗಾದ್ರೆ ಸೇಮ್ ಪಿಂಚ್!!

Tuesday, August 05, 2008

ಪೇಜ್ ತ್ರಿ ನೋಡಿ ಏನೆಲ್ಲಾ ನೆನಪಾತ್ರಿ!


ಪೇಜ್ ತ್ರಿ!
ನನ್ನ ತಟ್ಟಿದ, ನೆನಪಲ್ಲುಳಿದ, ಚಿಂತೆಗೀಡು ಮಾಡಿದ, ಮತ್ತೆ ಮತ್ತೆ ನೋಡಿದರೂ ಬೇಸರ ತರಿಸದ ಚಲನಚಿತ್ರಗಳಲ್ಲಿ ಪೇಜ್ ತ್ರಿ ಕೂಡ ಒಂದು. ಅದೊಂಥರದಲ್ಲಿ ನ(ನ್ನ)ಮ್ಮದೇ(!) ಕತೆ. ಅಂದರೆ ಪತ್ರಕರ್ತರ ಕತೆ.
ಫಿಲ್ಮಿ ಚಾನಲ್‌ನಲ್ಲಿ ನಿನ್ನೆ (೪-೦೮-೦೮) ಪೇಜ್ ತ್ರಿ ಫಿಲ್ಮ್ ಇತ್ತು. ಆ ಚಿತ್ರ ಇಷ್ಟವಾಗಲು ಈಗಲೇ ಕೊಟ್ಟ ಕಾರಣಗಳ ಜತೆಗೆ ಇನ್ನೊಂದು ಕಾರಣವೆಂದರೆ ಅದರಲ್ಲಿ ಕ್ರೈಂ ರಿಪೋರ್ಟರ್ ಹೆಸರು ವಿನಾಯಕ ಮತ್ತು ನಾನೂ ೪ ತಿಂಗಳ ಹಿಂದಿನವರೆಗೂ ಕ್ರೈಂ ರಿಪೋರ್ಟರ್ ಆಗಿದ್ದೆ!!
ಹೀಗಾಗಿ ಪೇಜ್ ತ್ರಿ ನೋಡುತ್ತಿದ್ದಂತೆ ನನ್ನ ಮನಸ್ಸು ಹುಂಬುರ್ಕಿ ಓಡತೊಡಗಿತು. ನೆನಪುಗಳತ್ತ, ಮಂಗಳೂರಿನತ್ತ, ಕ್ರೈಂ ರಿಪೋರ್ಟರ್ ಆಗಿದ್ದಾಗ ಆದ ಅನುಭವಗಳತ್ತ, ಮರೆಯಲಾಗದ ಆ ದಿನಗಳತ್ತ, ಹಸಿ ಹಸಿ ಕೊಲೆಗಳತ್ತ...
ನಾನು ನನ್ನ ಗೆಳೆಯರ ಬಳಿ ಈಗಾಗಲೇ ಹೇಳಿಕೊಂಡಿರುವಂತೆ ನಾನು ಬಯಸಿ ಕ್ರೈಂ ರಿಪೋರ್ಟರ್ ಆದದ್ದಲ್ಲ. ಆದರೆ ಕ್ರೈಂ ರಿಪೋರ್ಟರ್ ಆದ ಮೇಲೆ ಬಯಸಿದ್ದು!
ಪತ್ರಿಕೋದ್ಯಮದ ಆರಂಭಿಕ ಹಂತದಲ್ಲಿ ಕಚೇರಿಯೊಳಗೆ ಪ್ರೆಸ್‌ನೋಟ್‌ಗಳನ್ನು ಬರೆಯುತ್ತ ಕುಳಿತಿದ್ದ ನಾನು ಒಂದು ಮಧ್ಯಾಹ್ನ ಆಕಸ್ಮಿಕವಾಗಿ ಮತ್ತು ಅನಿವಾರ್ಯವಾಗಿ ತ್ರಿಬಲ್ ಮರ್ಡರ್ ವರದಿ ಮಾಡಬೇಕಾಗಿ ಬಂತು. ಆ ವರದಿ ನನ್ನನ್ನು ಕ್ರೈಂ ರಿಪೋರ್ಟರ್‌ನನ್ನಾಗಿ ಮಾಡಿತು. ಅಥವಾ ಆ ವರದಿಯೇ ನಾನು ಕ್ರೈಂ ರಿಪೋರ್ಟರ್ ಆಗಲು ಕಾರಣವಾಯಿತು. ಆಮೇಲೆ ತಿಳಿಯಿತು ಕ್ರೈಂ ರಿಪೋರ್ಟಿಂಗ್ ಉಳಿದ ವರದಿಗಾರಿಕೆಗಿಂತ ಆಸಕ್ತಿಕರ ಎಂಬುದು.

ಕ್ರೈಂ ರಿಪೋರ್ಟರ್ ಆಗಿ ಹಲವು ಎನ್‌ಕೌಂಟರ್‌ಗಳು, ನಕ್ಸಲೀಯರ ಬಗೆಗಿನ ಮಾಹಿತಿಗಳು, ಕೋಮುಗಲಭೆಗಳು, ಹಿಂದಿನ ಕಾರಣಗಳು, ಕರ್ಫ್ಯೂ, ಜನರು ಆಗ ಅನುವಿಸುವ ಕಷ್ಟ, ಊಟ, ನಿದ್ರೆ, ಸ್ನಾನವೂ ಇಲ್ಲದೆ ಕಳೆದ ದಿನಗಳು, ಅಪರಾತ್ರಿಯಲ್ಲಿ ಎಬ್ಬಿಸಿದ ಕೊಲೆಗಳು, ಮನಸ್ಸು ಕಲಕಿದ ಸಾವುಗಳು, ಸಹನೆಗೆ ಸವಾಲೆಸೆಯುವಂತೆ ಕಾದು ಕುಳಿತು ನಡೆಸಿದ ತನಿಖಾ ವರದಿಗಳು, ಯಾರಿಗೂ ತಿಳಿಯದ ಹಲವು ವಿಷಯಗಳನ್ನು ತಿಳಿಯಲು, ಕಲಿಯಲು ಅವಕಾಶವಾಯಿತು. ಹೊರನೋಟಕ್ಕೆ ದಕ್ಕದ ಪೊಲೀಸ್ ಇಲಾಖೆಯ ಅಂತರಾಳದ ಪರಿಚಯವಾಯಿತು. ಎಲ್ಲಕ್ಕಿಂತ ಹೆಚ್ಚಾಗಿ ಕೆಲವು ಒಳ್ಳೆ ಪೊಲೀಸ್ ಗೆಳೆಯರು ದೊರೆತರು. ಅವರಿಗೆ ಅದೇನು ಪ್ರೀತಿಯೋ ಕಾಣೆ ನನಗೆ ಎಕ್ಸ್‌ಕ್ಲ್ಯೂಸೀವ್ ಸುದ್ದಿ ಕೋಡೋರು.

ಇಷ್ಟೇ ಸಾಕು. ಹೀಗೇ ಮುಂದುವರಿದರೆ ನನ್ನನ್ನು ನಾನೇ ಹೊಗಳಿಕೊಂಡುಬಿಡುವ ಅಥವಾ ಹಾಗೆ ನಿಮಗನ್ನಿಸಿಬಿಡುವ ಸಾಧ್ಯತೆ ಇದೆ.
ಪೇಜ್ ತ್ರಿ ವಿಷಯಕ್ಕೆ ಬರೋಣ. ಮಂಗಳೂರಿನಲ್ಲಿ ಸಿನಿಮಾ ನೋಡಿದಾಗ ಪೇಜ್ ತ್ರಿ ಪತ್ರಿಕೋದ್ಯಮ ಅಂದರೇನು ಎಂಬುದು ಸರಿಯಾಗಿ ಅರ್ಥವಾಗಿರಲಿಲ್ಲ. ಆದರೆ ಈಗ ದಿಲ್ಲಿಗೆ ಬಂದ ಮೇಲೆ ಅರ್ಥವಾಗುತ್ತಿದೆ. ಇಲ್ಲಿನ ಪತ್ರಕರ್ತರು ಜಿಲ್ಲಾ ವರದಿಗಾರರಂತೆ ಸುದ್ದಿಗಾಗಿ ಒದ್ದಾಡುವುದಿಲ್ಲ. ಇಡೀ ದಿನಕ್ಕೆ ಒಂದೇ ಬೀಟ್. ಕಾಂಗ್ರೆಸ್, ಬಿಜೆಪಿ ಅಥವಾ ಯಾವುದೇ ಪಕ್ಷದ ಕಚೇರಿಗೆ ಹೋಗಿ ಒಂದಿಡೀ ದಿನ ಕುಳಿತು, ಸಿಕ್ಕ ನಾಯಕರೊಂದಿಗೆ ಹರಟಿ, ಪತ್ರಿಕಾಗೋಷ್ಠಿಗಳಿದ್ದರೆ ಅವುಗಳನ್ನು ಅಟೆಂಡ್ ಮಾಡಿ ಸುದ್ದಿ ಬರೆದರೆ ಮುಗಿಯಿತು. ಇದರ ಪರಿಣಾಮ ಕೆಲವರಂತೂ ರಾಜಕಾರಣಿಗಳ ಚೇಲಾಗಳಂತಾಗಿಬಿಟ್ಟಿರುತ್ತಾರೆ. ನ್ಯೂಸ್ ಚಾನಲ್‌ನವರಿಗಂತೂ ಒಬ್ಬ ಮುಖಂಡನ ಬೈಟ್ ಸಿಕ್ಕಿದರೆ ಸಾಕು. ಅವರಿಗೆ ರಾಷ್ಟ್ರಪ್ರಶಸ್ತಿ ಸಿಕ್ಕಷ್ಟು ಸಂತೋಷ. ಆ ಸುದ್ದಿಯ ಆಳ, ಅಗಲ ಅವರಿಗೆ ಬೇಡ. ಇನ್ನು ಪಾರ್ಟಿಗಳನ್ನು ವರದಿ ಮಾಡುವ ಪತ್ರಕರ್ತರ ಕೆಲಸ ಆ ದೇವರಿಗೇ ಪ್ರೀತಿ.

ಇದನ್ನೆಲ್ಲ ನೋಡುವಾಗ ಅನ್ನಿಸುತ್ತದೆ ಇವರಿಗಿಂತ ಜಿಲ್ಲಾ ಮಟ್ಟದ ಕ್ರೈಂ ವರದಿಗಾರ ಮೇಲು ಅಂತ!
ಪೇಜ್ ತ್ರಿ ಸಿನಿಮಾದಲ್ಲಿ ನಾಯಕಿ ಮಾಧವಿ ಮೊದಲು ಪೇಜ್ ತ್ರಿ ಪತ್ರಕರ್ತೆಯಾಗಿದ್ದು, ನಂತರ ಮನಸ್ಸು ಬದಲಿಸಿ ಕ್ರೈಂ ವರದಿಗಾರ್ತಿಯಾಗುತ್ತಾಳೆ. ಹಾಗೆ ಒಂದೊಳ್ಳೆ ತನಿಖಾ ವರದಿ ತರುತ್ತಾಳೆ. ನಗರದ ಅತಿಗಣ್ಯನೊಬ್ಬ ಕ್ಕಳೊಂದಿಗೆ ಸಲಿಂಗಕಾಮದಲ್ಲಿ ನಿರತನಾಗಿದ್ದ, ಅದಕ್ಕಾಗಿ ಹಲವು ಮಕ್ಕಳನ್ನು ಬಳಸಿಕೊಳ್ಳುತ್ತಿದ್ದ ಜಾಲದ ಸುದ್ದಿಯದು. ಆದರೆ ಆತ ಪತ್ರಿಕೆಗೆ ಜಾಹೀರಾತು ನೀಡುತ್ತಾನೆಂಬ ಕಾರಣಕ್ಕೆ ಪತ್ರಿಕೆಯ ಮಾಲಿಕ ಆ ವರದಿ ಪ್ರಕಟಿಸದಂತೆ ಹೇಳುತ್ತಾನೆ. ಸಾಲದ್ದಕ್ಕೆ ಅವಳನ್ನು ಕೆಲಸದಿಂದ ತೆಗೆಯುತ್ತಾನೆ.
ಇದನ್ನು ನೋಡುವಾಗ ನಾನು ಬರೆದೂ ಪ್ರಕಟವಾಗದ, ಪ್ರಕಟವಾಗದು ಎಂಬ ಗ್ಯಾರಂಟಿ ಇದ್ದುದರಿಂದ ಬರೆಯಲೇ ಆಗದ, ಬರೆದು ಪ್ರಕಟವಾಗಿ ನಂತರ ನಾನು ಅನುಭವಿಸಿದ ಕೆಲವು ವರದಿಗಳು, ಅದರ ಹಿಂದುಮುಂದಿನ ಘಟನೆಗಳು ಕಣ್ಣಮುಂದೆ ಹಾದುಹೋದವು.

ಮಾಧ್ಯಮಗಳೂ ಮೊದಲಿನಂತಿಲ್ಲ. ಪತ್ರಿಕಾ ವೃತ್ತಿ ಹೋಗಿ ಪತ್ರಿಕೋದ್ಯಮವಾಗಿದೆ. ರಿಲಯನ್ಸ್ ನಂತಹ ಹಲವಾರು ಉದ್ಯಮ ಹೊಂದಿರುವ ಸಂಸ್ಥೆ ಕೂಡ ಈಗ ಮಾಧ್ಯಮ ಕ್ಷೇತ್ರದ ಮೇಲೆ ಕಣ್ಣು ಹಾಕಿದೆ. ಉದ್ಯಮ ಅಂದ ಮೇಲೆ ಸೇವೆ, ಸಾರ್ವಜನಿಕ ಬದ್ದತೆ ಎಂಬೆಲ್ಲ ಪದಗಳು ಅರ್ಥ ಕಳೆದುಕೊಳ್ಳುತ್ತವೆ. 'ಅರ್ಥ'ಶಾಸ್ತ್ರ ಮಾತ್ರ ಮುಖ್ಯವಾಗುತ್ತದೆ. ಹಾಗಾದಾಗ ಹೀಗಾಗುತ್ತದೆ. ಹೀಗಾದಾಗ ಪತ್ರಕರ್ತ ತಾನೆಣಿಸಿದ್ದನ್ನೆಲ್ಲ ಸತ್ಯ ಎಂಬುದು ಗೊತ್ತಿದ್ದರೂ, ದಾಖಲೆಗಳಿದ್ದರೂ ಬರೆಯಲಾರ. ಆದರೆ ಅದೊಂದು ಸ್ಟೋರಿ ಪ್ರಕಟಿಸಲು ಸಾಧ್ಯವಾಗಲಿಲ್ಲ ಎಂಬ ಕಾರಣಕ್ಕೆ ಕೆಲಸ ಬಿಡಲಾದೀತೆ? ಹಾಗೆ ಮಾಡಿದರೆ ಸಾಧಿಸುವುದೇನು?
ಇದೇ ಅಲ್ವಾ ಪೇಜ್ ತ್ರಿ ಸಿನಿಮಾ ಕೊನೆಯ ಸಂದೇಶ!?
ಪೇಜ್ ತ್ರಿ ಸಿನಿಮಾ ಸತ್ಯಕ್ಕೆ ಕನ್ನಡಿ ಹಿಡಿದಂತಿದೆ. ಪತ್ರಿಕೋದ್ಯಮ ವಿದ್ಯಾರ್ಥಿಗಳು ಇದನ್ನೊಮ್ಮೆ ನೋಡುವುದೊಳಿತು. ಇದರ ಜತೆಗೆ 'ಇಟ್ಸ್ ಬ್ರೇಕಿಂಗ್ ನ್ಯೂಸ್ 'ಎಂಬ ಸಿನಿಮಾ ಕೂಡ ಇಂದಿನ ನ್ಯೂಸ್ ಚಾನಲ್‌ಗಳ ಒಳ ಹೊರಗನ್ನು ತೆರೆದಿಡುತ್ತದೆ. ಇವುಗಳನ್ನು ನೋಡಿದರೆ ಪತ್ರಿಕೋದ್ಯಮ ವಿದ್ಯಾರ್ಥಿಗಳು ಕ್ಷೇತ್ರಕ್ಕಿಳಿಯುವ ಮೊದಲು ಆ ಬಗ್ಗೆ ಒಂದಷ್ಟು ಮಾನಸಿಕ ಸಿದ್ಧತೆಯನ್ನಾದರೂ ಗಳಿಸಬಹುದು. ಯಾಕೆಂದರೆ ಕ್ಲಾಸಿನಲ್ಲಿ ಕಲಿತದ್ದಕ್ಕೂ ಕ್ಷೇತ್ರದಲ್ಲಿ ಅನುಭವಿಸುವುದಕ್ಕೂ ಅಜಗಜಾಂತರವಿದೆ.

Friday, August 01, 2008

ರೈ ಹೇಳಿದ ಚೇಳಿನ ಕಥೆ


ಅವರಾಗ ರಾಜ್ಯದ ಸಾರಿಗೆ ಸಚಿವರು. ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವರೂ ಹೌದು. ದಿನಕ್ಕೆ ನಾಲ್ಕೈದು ಕಾರ್ಯಕ್ರಮದಲ್ಲಿ ಭಾಗವಹಿಸದಿದ್ರೆ ಅವರಿಗೆ ನಿದ್ರೆ ಬರಲ್ಲ. ಅವ್ರೇರೀ... ರಮಾನಾಥ ರೈ.

ರೈ ಸಚಿವರಾಗಿದ್ದಾಗ ಸದಾ ಕಾರ್ಯಕ್ರಮದಲ್ಲಿ ಭಾಗವಹಿಸುವುದೇ ಒಂದು ದೊಡ್ಡ ಕೆಲಸ. ಎಲ್ಲ ಕಾರ್ಯಕ್ರಮಕ್ಕೂ ವಿಳಂಬವಾಗಿ ಬರೋದು ಮಾಮೂಲು. ಒಮ್ಮೆ ಬಂಟ್ವಾಳದ ಶಾಲಾ ವಾಷಿಱಕೋತ್ಸವ ಕಾರ್ಯಕ್ರಮಕ್ಕೆ ಮಧ್ಯರಾತ್ರಿ ೧೨.೦೦ ಗಂಟೆಗೆ ಹೋಗಿದ್ದರು. ಅದಕ್ಕೆ ರೈ ಅವರನ್ನು ಯಾವ ಕಾರ್ಯಕ್ರಮಕ್ಕೆ ಕರೆದರೂ ಮದುವೆಗೆ ಮಾತ್ರ ಕರೆಯಬಾರದು ಎಂದು ಅಲ್ಲಿನ ಜನ ಹೇಳುತ್ತಿದ್ದರು. ಯಾಕೆಂದರೆ ಅವರು ಮದುವೆಗೆ ಕರೆದರೆ ಫಸ್ಟ್ ನೈಟಿನ ಹೊತ್ತಿಗೆ ಬರುತ್ತಾರೆಂಬ ಭಯ!

ರೈ ಅವರು ಲೆಕ್ಕತಪ್ಪುವಷ್ಟು, ಸುಸ್ತಾಗುವಷ್ಟು ಕಾರ್ಯಕ್ರಮದಲ್ಲಿ ಭಾಗವಹಿಸಿದರೂ ಎಂದೂ ಯದ್ವಾತದ್ವಾ ಮಾತನಾಡಿದವರಲ್ಲ. ಯಾರನ್ನೂ ಬೈದವರಲ್ಲ. ಕಥೆ ಹೇಳಿದವರೇ ಅಲ್ಲ. ಅಂತಹ ಸಚಿವರು ಮಂಗಳೂರಿನ ತಿರುವೈಲಿನಲ್ಲಿ ರಸ್ತೆ ಕಾಮಗಾರಿ ಉದ್ಘಾಟನೆ ಸಂದರ್ಭ ಭಾಷಣ ಮಾಡುವಾಗ ಚೇಳಿನ ಕಥೆ ಹೇಳಿದ್ದರು.

ಒಬ್ಬ ತೊರೆ ಬದಿಯಲ್ಲಿ ನಡೆದುಕೊಂಡು ಹೋಗುತ್ತಿದ್ದ. ಆಗ ಒಂದು ಚೇಳು ನೀರಲ್ಲಿ ಬಿದ್ದಿರುವುದು ಕಂಡಿತು. ಅದು ಮೇಲೆ ಬರಲು ಯತ್ನಿಸಿ, ಯತ್ನಿಸಿ ವಿಫಲವಾಗುತ್ತಿತ್ತು. ಅದನ್ನು ನೋಡಿದ ಆತ ಚೇಳನ್ನು ಹಿಡಿದು ಮೇಲೆ ಬಿಡಲು ನಿರ್ಧರಿಸಿ ಅದನ್ನು ಹಿಡಿದ. ಆದರೆ ಚೇಳು ಅವನ ಕೈ ಕಡಿದಿದ್ದರಿಂದ ಆತ ಅದನ್ನು ಬಿಟ್ಟ. ಚೇಳು ಪುನಃ ನೀರಿಗೆ ಬಿತ್ತು. ಮತ್ತೆ ಚೇಳನ್ನು ನೀರಿನಿಂದ ಮೇಲೆತ್ತಲು ಹೋದ. ಅದು ಕಡಿಯಿತು. ಈತ ಬಿಟ್ಟ ಚೇಳು ನೀರಿಗೆ ಬಿತ್ತು!!

ಹೀಗೆ ಮಾಡುತ್ತಿರುವಾಗ ಇನ್ನೊಬ್ಬ ದಾರಿಹೋಕ ಆ ವಿಚಿತ್ರ ವ್ಯಕ್ತಿಯಲ್ಲಿ ಹೇಳಿದ: ಅಲ್ಲಯ್ಯ ಅದು ಕಡಿದರೂ ನೀನೇಕೆ ಅದನ್ನು ಮತ್ತೆ ಮತ್ತೆ ನೀರಿನಿಂದ ಮೇಲೆತ್ತಲು ಯತ್ನಿಸುವೆ. ನಿನಗೆ ಬೇರೆ ಕೆಲಸ ವಿಲ್ಲವೇ? ಅದಕ್ಕೆ ಆ ವ್ಯಕ್ತಿ ಅದು ನೀರಲ್ಲಿ ಬಿದ್ದು ಸಾಯುತ್ತಿದೆ. ಅದನ್ನು ಬದುಕಿಸುವುದು ನನ್ನ ಧರ್ಮ. ಆದರೆ ಕಡಿಯುವುದು ಅದರ ಗುಣ ಅಂದನಂತೆ.

ಈ ಕತೆ ಕೇಳಿದ ಮೇಲೆ ರೈ ಯಾಕೆ ಈ ಕಥೆ ಹೇಳಿರಬಹುದು ಎಂದು ಯೋಚಿಸಿದೆ. ಅವರು ಕಥೆ ಹೇಳಿದ್ದರ ಅರ್ಥ ಇಷ್ಟೆ. ತನ್ನ ವಿರೋಧಿಗಳು ಚೇಳಿದ್ದಂತೆ. ನೀರಲ್ಲಿ ಬಿದ್ದ (ಕಷ್ಟದಲ್ಲಿರುವ) ಅವರನ್ನು ಎಷ್ಟು ಸರಿ ನಾನು ಎತ್ತಲು ಹೋದರೂ ನನಗೇ ಕಡಿಯುತ್ತಾರೆ. ಕಡಿಯುವುದು ಅವರ ಗುಣ. ಆದರೆ ಅವರನ್ನು ಬದುಕಿಸುವುದು ನನ್ನ ಧರ್ಮ ಎಂದು ನಾನು ತಿಳಿದುಕೊಂಡಿದ್ದೇನೆ ಎಂಬುದು ಒಳ ಅರ್ಥ. ಇದನ್ನು ರೈ ಸುಚ್ಯವಾಗಿ ಚೇಳಿನ ಕಥೆ ಮೂಲಕ ಹೇಳಿದ್ದರು.

ತಿರುವೈಲು ಗ್ರಾಮವನ್ನು ಮಹಾನಗರ ಪಾಲಿಕೆಗೆ ಸೇರಿಸುವ ಸಂದರ್ಭ ಹಲವರು ವಿರೋಧ ವ್ಯಕ್ತಪಡಿಸಿದ್ದಲ್ಲದೆ, ಒಳ ರಾಜಕೀಯ ನಡೆಸಿದ್ದರು. ಇದು ರೈ ಸಿಟ್ಟಿಗೆ ಕಾರಣವಾಗಿತ್ತು. ಚೇಳಿನ ಕಥೆ ಮೂಲಕ ರೈ ವಿರೋಧಿಗಳನ್ನು ಕುಟುಕಿದರು.