Friday, August 15, 2008

ಸ್ವಾತಂತ್ರ್ಯೋತ್ಸವದಲ್ಲಿಯೇ ಕಾಣದ ಸ್ವಾತಂತ್ರ್ಯ!


೧೫ ದಿನದ ಹಿಂದಿನಿಂದಲೇ ಪ್ರವಾಸಿಗರಿಂದ ಕೆಂಪುಕೋಟೆ, ರಾಷ್ಟ್ರಪತಿ ಭವನ ಮುಂತಾದ ಪ್ರಮುಖ ಪ್ರವಾಸಿ ತಾಣಕ್ಕೆ ಭೇಟಿ ನೀಡುವ ಸ್ವಾತಂತ್ರ್ಯ ಕಸಿದುಕೊಳ್ಳಲಾಗಿದೆ. ನಗರದ ರೈಲು ನಿಲ್ದಾಣಗಳಿಗೆ ೨೦ ದಿನ ಹಿಂದಿನಿಂದಲೇ ಪ್ರಯಾಣಿಕರನ್ನು ಕರೆದುಕೊಂಡು ಬರಲು ಹೋಗುವ ಸಾರ್ವಜನಿಕರಿಗೆ ಪ್ಲಾಟ್‌ಫಾರ್ಮ್ ಪ್ರವೇಶ ನಿಷೇಧಿಸಲಾಗಿದೆ.
೫-೬ ದಿನದಿಂದ ಪ್ರಮುಖ ಸ್ಥಳಗಳಲ್ಲಿನ ಕಟ್ಟಡಗಳು, ಅದರಲ್ಲಿನ ಕಚೇರಿಗಳು ರಾತ್ರಿ ೮.೦೦ ಗಂಟೆ ನಂತರ ಕೆಲಸ ಮಾಡುವ ಸ್ವಾತಂತ್ರ್ಯ ಕಳೆದುಕೊಂಡಿವೆ. ಸ್ವಾತಂತ್ರ್ಯೋತ್ಸವದ ಹಿಂದಿನ ದಿನವಂತೂ ನಮ್ಮ ಕಚೇರಿಯ ಕಟ್ಟಡವೂ ಸೇರಿದಂತೆ ಹಲವು ಕಟ್ಟಡಗಳನ್ನು ಸಂಜೆ ೪.೦೦ ಗಂಟೆ ಹೊತ್ತಿಗೇ ಮುಚ್ಚುವ ಆದೇಶ ಹೊರಬಿದ್ದಿದೆ!
ಹೋಗಲಿ ಸ್ವಾತಂತ್ರ್ಯೋತ್ಸವ ಕಾರ್ಯಕ್ರಮದಲ್ಲಾದರೂ ನೀವು ಸ್ವತಂತ್ರರಾಗಿ ಭಾಗವಹಿಸಬಹುದೇ? ಊಹುಂ. ಕೆಂಪುಕೋಟೆಯೂ ಸೇರಿದಂತೆ ಪ್ರಮುಖ ಸ್ಥಳಗಳಲ್ಲಿ ನಡೆಯುವ ಸ್ವಾತಂತ್ರ್ಯೋತ್ಸವ ಕಾರ್ಯಕ್ರಮಗಳಿಗೆ ನೀವು ಭಾಗವಹಿಸಲು ಹರಸಾಹಸ ಮಾಡಬೇಕಾಗುತ್ತದೆ. ಮೊದಲೇ ಪಾಸು ಮಾಡಿಸಿಕೊಂಡರೆ ಮಾತ್ರ ನಿಮಗೆ ಸ್ವಾತಂತ್ರ್ಯೋತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸಲು ಅವಕಾಶ!
ಸ್ವಾತಂತ್ರ್ಯೋತ್ಸವ ಸಮೀಪಿಸುತ್ತಿದ್ದಂತೆ ನಿಮ್ಮ ಒಂದೊಂದೇ ಸ್ವಾತಂತ್ರ್ಯ ಕಡಿತಗೊಳ್ಳುತ್ತಾ ಹೋಗುತ್ತದೆ! ಹುಡುಕಬೇಕು ನಮಗೆಷ್ಟು ಸ್ವಾತಂತ್ರ್ಯವಿದೆ ಎಂಬುದನ್ನು!!
ಸಾರ್ವಜನಿಕ ಮಾರುಕಟ್ಟೆಗಳೂ ೧೫ ದಿನ ಹಿಂದಿನಿಂದಲೇ
ಮೆಟಲ್ ಡಿಟೆಕ್ಟರಿನೊಳಗೆ ಹಾದು
ಒಳಗೆ ಬಾಯಾತ್ರಿಕನೆ... ಎಂದು ಜನರನ್ನು ಕೋರುತ್ತಿವೆ. ಮಾರುಕಟ್ಟೆಯ ಸುತ್ತಲಿನ ದಾರಿಗಳು ಬಂದ್ ಆಗಿವೆ. ಒಂದಿಡೀ ಮಾರುಕಟ್ಟೆಗೆ ೧ ಅಥವಾ ೨ ಕಡೆ ಮಾತ್ರ ಪ್ರವೇಶ ಸಾಧ್ಯ. ಅದೂ ಮೆಟಲ್‌ಡಿಟೆಕ್ಟರ್ ಎಂಬ ಹೊಸ್ತಿಲ ಮೂಲಕ. ಪ್ರಮುಖ ಸ್ಥಳಗಳಲ್ಲಿರುವ ಕಟ್ಟಡದ ಒಳಕ್ಕೆ ಕಾರು ತೆಗೆದುಕೊಂಡು ಹೋದರೆ ಮನೆಗೆ ಸ್ವಾಮೀಜಿಗಳು ಬಂದಾಗ ಹಾನದಲ್ಲಿ ಮುಖನೋಡಿ ಒಳಕರೆದುಕೊಳ್ಳುತ್ತಾರಲ್ಲ ಹಾಗೆ ಕಾರಿನ ಅಡಿಭಾಗವನ್ನು ಕನ್ನಡಿಯಲ್ಲಿ ಪರಿಶೀಲಿಸಿ ಒಳಬಿಡಲಾಗುತ್ತದೆ. ನೀವು ಒಳಹೋಗಬೇಕೆಂದರೆ ಕೆಲವು ಕಡೆ ಮೊಬೈಲು, ಇನ್ನು ಕೆಲವು ಕಡೆ ನಿಮ್ಮ ಮನೆಯ ಚಾವಿ, ಬೆಲ್ಟ್ ಕೂಡ ರೆಸೆಪ್ಶನಿಸ್ಟ್‌ಗೆ ಕೊಟ್ಟು ಹೋಗಬೇಕು. ನಿಮ್ಮ ಕೈಯಲ್ಲಿ ಚೀಲವಿದ್ದರಂತೂ ಮುಗಿದೇ ಹೋಯಿತು. ಅದರಲ್ಲೇನಿದೆ ಅಂತ ಪೂರ್ತಿ ನೋಡಿದ ನಂತರವೇ ಒಳಪ್ರವೇಶ. ಮಾರುಕಟ್ಟೆ, ಕಟ್ಟಡ ಹೀಗೆ ಎಲ್ಲೆಂದರಲ್ಲಿ ಬಂದು ಕುಳಿತಿರುವ ಸಿಸಿ ಟಿವಿ ಕ್ಯಾಮರಾಗಳು ಅದ್ಯಾವಾಗಲೋ ನಿಮ್ಮ ಪ್ರತಿ ಕ್ಷಣದ ಚಲನೆಯನ್ನೂ ದಾಖಲಿಸುತ್ತಿವೆ.
೬೧ನೇ ಸ್ವಾತಂತ್ರ್ಯೋತ್ಸವದ ದಿನ ಕುಳಿತು ಯೋಚಿಸಿದರೆ...
ಯಾರಿಗೆ ಬಂತು ಸ್ವಾತಂತ್ರ್ಯ?
ಎಲ್ಲಿಗೆ ಬಂತು ಸ್ವಾತಂತ್ರ್ಯ? ಎಂಬ ಪ್ರೊ. ಸಿದ್ದಲಿಂಗಯ್ಯ ಅವರು ಬರೆದ ಈ ಹಾಡು ನೆನಪಾಗುತ್ತದೆ. ಸಿದ್ದಲಿಂಗಯ್ಯ ಅವರು ಬೇರೆಯೇ ಕಾರಣಗಳಿಗಾಗಿ ಈ ಹಾಡು ಬರೆದಿದ್ದರೂ ಅದು ಈಗ ದೇಶದ ಅದರಲ್ಲೂ ವಿಶೇಷವಾಗಿ ರಾಜಧಾನಿಯಾದ ಹೊಸದಿಲ್ಲಿಯನ್ನು ಗಮನದಲ್ಲಿಸಿಕೊಂಡೇ ಬರೆದಂತಿದೆ. ಅಷ್ಟು ಚೆನ್ನಾಗಿ ದಿಲ್ಲಿಗೆ ಹೊಂದಿಕೊಳ್ಳುತ್ತದೆ ಈ ಹಾಡು.
ಈ ಪರಿಸ್ಥಿತಿಯಲ್ಲಿ ಸ್ವಾತಂತ್ರ್ಯೋತ್ಸವ ಆಚರಿಸಬೇಕಾ? ಸ್ವಾತಂತ್ರ್ಯೋತ್ಸವ ಬಂತಲ್ಲಾ ಎಂದು ಖುಷಿಪಡಬೇಕಾ? ದುಃಕ್ಕಿಸಬೇಕಾ? ಎಂಬ ಪ್ರಶ್ನೆ ಕಾಡುತ್ತದೆ.
ಸ್ವಾತಂತ್ರ್ಯೋತ್ಸವ ಅಂದರೆ ಎಲ್ಲೆಡೆ ಖುಶಿ ಇರಬೇಕು. ಪುಟಾಣಿ ಮಕ್ಕಳಲ್ಲಿ ಇರುತ್ತದಲ್ಲ ಅಂತಹ ಖುಷಿ. ಆದರೆ ನಮಗೋ ಹೊಸದಿಲ್ಲಿಯೂ ಸೇರಿದಂತೆ ಹಲವೆಡೆ ಬಾಂಬ್ ಭಯ! ಸ್ವಾತಂತ್ರ್ಯೋತ್ಸವ ಬಂತೆಂದರೆ ಹೊಸದಿಲ್ಲಿಯಂತಹ ಮಹಾನಗರಗಳಲ್ಲಿ ಭಯದ ಛಾಯೆ. ಒಂದು ವಾರದ ಹಿಂದಿನಿಂದಲೇ ಮಾರುಕಟ್ಟೆಗಳಿಗೆ ಬರುವ ಜನರ ಸಂಖ್ಯೆ ಗಣನೀಯವಾಗಿ ಕಡಿಮೆಯಾಗಿದೆ. ಹೊಸದಿಲ್ಲಿಯ ದೊಡ್ಡ ದೊಡ್ಡ ಮಾಲ್‌ಗಳು, ಪ್ರಸಿದ್ಧ ಮಾರುಕಟ್ಟೆಗಳಲ್ಲಿ ಸ್ವಾತಂತ್ರ್ಯೋತ್ಸವ ಸಮೀಪಿಸುತ್ತಿರುವ ೧ ವಾರದಲ್ಲಿ ಆಗಮಿಸುವವರ ಸಂಖ್ಯೆ ಶೇ.೫೦ರಷ್ಟು ಇಳಿದಿದೆಯಂತೆ. ಎಲ್ಲ ಆಫರ್‌ಗಳ ಹೊರತಾಗಿ!
ಕಾರಣ ಉಗ್ರರು. ಸ್ವಾತಂತ್ರ್ಯೋತ್ಸವ ಸಂಭ್ರಮ ಹಾಳು ಮಾಡಲು ಅವರೆಲ್ಲಿ ಬಾಂಬ್ ಸ್ಪೋಟಿಸುತ್ತಾರೊ ಎಂಬ ಭಯ. ಅದಕ್ಕಾಗಿ ಮುನ್ನೆಚ್ಚರಿಕೆ ಹೆಸರಲ್ಲಿ ಕಟ್ಟಡ ಮುಚ್ಚಿಸುವುದು, ರಾತ್ರಿ ೮.೦೦ ಗಂಟೆ ನಂತರ ಕೆಲಸ ಮಾಡದಂತೆ ಸೂಚಿಸುವುದು ನಡೆಯುತ್ತಿದೆ. ಜನ ಭದ್ರತೆ, ನೆಮ್ಮದಿಗಾಗಿ ಅದನ್ನೆಲ್ಲ ಸಹಿಸಿಕೊಳ್ಳುತ್ತಿದ್ದಾರೆ.
ಇದೆಲ್ಲ ಏನನ್ನು ಸೂಚಿಸುತ್ತದೆ? ನಾವು ಭಯದ ನೆರಳಲ್ಲಿ ಸ್ವಾತಂತ್ರ್ಯೋತ್ಸವ ಆಚರಿಸುತ್ತಿದ್ದೇವೆ. ಅನಾಹುತ ರಹಿತ ಸ್ವಾತಂತ್ರ್ಯೋತ್ಸವಕ್ಕಾಗಿ ನಮ್ಮ ಸ್ವಾತಂತ್ರ್ಯ ಹರಣ ಸಹಿಸಿಕೊಳ್ಳುತ್ತೇವೆ. ಮೊದಲ್ಲೆಲ್ಲ ಹೇಳುವಂತೆ ಸಂಭ್ರಮದ ಸ್ವಾತಂತ್ರ್ಯೋತ್ಸವ ಎಂಬುದು ಮಾಯವಾಗಿ ಕೇವಲ ಸ್ವಾತಂತ್ರ್ಯೋತ್ಸವಕ್ಕೆ ಸೀಮಿತವಾಗುತ್ತಿರುವಂತೆ ಭಾಸವಾಗುತ್ತಿದೆ. ೬೧ನೇ ಸ್ವಾತಂತ್ರ್ಯೋತ್ಸವ ಹೊಸ್ತಿಲಲ್ಲಿ ನಿಂತು ನಮಗೆಷ್ಟು ಸ್ವಾತಂತ್ರ್ಯವಿದೆ, ಎಷ್ಟು ಸ್ವಾತಂತ್ರ್ಯ ಮುಂದಿನ ದಿನಗಳಲ್ಲಿ ಉಳಿಯಲಿದೆ ಎಂದು ವಿಚಾರ ಮಾಡುವಂತಾಗಿದೆ.
ನೀಮಗೂ ಹಾಗನ್ನಿಸುತ್ತಿದೆಯೇ? ಹಾಗಾದ್ರೆ ಸೇಮ್ ಪಿಂಚ್!!

4 comments:

sunaath said...

ಸ್ವಾತಂತ್ರ್ಯ ಇಲ್ಲವೇ ಇಲ್ಲ; ಆದರೆ ಸ್ವೇಚ್ಛಾಚಾರ ಸಾಕಷ್ಟಿದೆ.
ಲೇಖನ ಚೆನ್ನಾಗಿದೆ.

ಸಿಂಧು ಭಟ್. said...
This comment has been removed by the author.
Supreeth.K.S said...

ಸ್ವಾತಂತ್ರ್ಯ ಅಭದ್ರತೆಯನ್ನೂ ಜೊತೆಯಲ್ಲೇ ತಂದುಕೊಡುತ್ತದೆಯಲ್ಲವೇ? ಅಭದ್ರತೆ, ಅನಿಶ್ಚಿತತೆ ನಾಳಿನ ಬಗೆಗಿನ ಆತಂಕ ಇವೆಲ್ಲಾ ಸ್ವಾತಂತ್ರಯ ಕೊಡಮಾಡುವ ಉಡುಗೊರೆಗಳು. ದಾಸನಾದವನು, ಗುಲಾಮನಾದವನು ನಾಳಿನ ಬಗ್ಗೆ ಯಾವ ಆತಂಕವೂ ಇಲ್ಲದೆ, ಅನಿಶ್ಚಿತತೆಯ ಕಾಟವಿಲ್ಲದೆ ಬದುಕಬಲ್ಲ.

ತೇಜಸ್ವಿನಿ ಹೆಗಡೆ said...

ಒಂದನ್ನು ಪಡೆದುಕೊಳ್ಳುವಾಗ, ಇನ್ನೊಂದನ್ನು ಕಳೆದುಕೊಳ್ಳಬೇಕಾಗುತ್ತದೆ ಎಂದು ಹೇಳುತ್ತಾರೆ.. ದೇಶಕ್ಕೆ ಸ್ವಾತಂತ್ರ್ಯವನ್ನು ಪಡೆದುಕೊಂಡೆವು,, ಆದರೆ ಕ್ರಮೇಣ ವ್ಯಕ್ತಿ ಸ್ವಾತಂತ್ರ್ಯವನ್ನು ಕಳೆದುಕೊಂಡೆವು... ಕಳೆದುಕೊಳ್ಳುತ್ತಲೇ ಇದ್ದೇವೆ.. ಮುಂದೆಯೂ ?!!