Tuesday, August 28, 2007

ಇಗ್ಗಣ್ಣ ಎಂಬ ಅಂಚೆಯಣ್ಣನ ನೆನಪಲ್ಲಿ...

ನಮ್ಮನೆಗೊಬ್ಬರು ಪರಿಚಿತರು ಬೇರೆ ಊರಿನಿಂದ ಬಂದಿದ್ದರು. ಆಗ ಇಗ್ಗಣ್ಣ ಬಂದು ಪತ್ರಗಳನ್ನು ಕೊಟ್ಟು ಹೋದ. ನಾವು ಇಗ್ಗಣ್ಣನ ಬಗ್ಗೆ ಮಾತಾಡುವಾಗ, ನಮ್ಮನೆಗೆ ಬಂದ ಅಪರಿಚಿತರು ನಮ್ಮೂರಲ್ಲಿ ಪೋಸ್ಟ್‌ಮ್ಯಾನ್ ಅಂತಾರೆ ನಿಮ್ಮಲ್ಲಿ ಅವರನ್ನ ಇಗ್ಗಣ್ಣ ಅಂತಾರಾ ಎಂದು ಪ್ರಶ್ನಿಸಿದ್ದರು.ಅವರು ಕೇಳಿದ್ದರಲ್ಲಿ ತಪ್ಪಿರಲಿಲ್ಲ. ಕಾರಣ ನನ್ನೂರಲ್ಲಿ ಆತನನ್ನು ಪೋಸ್ಟ್‌ಮ್ಯಾನ್ ಅಂತಲೋ ಪದ್ಯವೊಂದರಲ್ಲಿ ಬರುವ ಅಂಚೆಯಣ್ಣ ಅಂತಲೋ ಯಾರೂ ಕರೆಯುತ್ತಿರಲಿಲ್ಲ. ಆತ ಎಲ್ಲರಿಗೂ ಇಗ್ಗಣ್ಣನಾಗಿದ್ದ. ಹೆಚ್ಚಿನ ಜನರ ಫ್ಯಾಮಿಲಿ ಫ್ರೆಂಡ್ ಕೂಡ ಆಗಿದ್ದ.
ಊರಿನ ಜನ ಕೂಡ ಆತನನ್ನು ಯಾವತ್ತೂ ಪೋಸ್ಟ್‌ಮ್ಯಾನ್ ಎಂಬ ದೃಷ್ಟಿಯಿಂದ ನೋಡಿಯೂ ಇರಲಿಲ್ಲ. ಪ್ರತಿಯೊಬ್ಬರು ಕುಡಿಯಲು ಮಜ್ಜಿಗೆಯೋ, ಬೆಲ್ಲ ನೀರೋ ಬೇಕಾ ಎಂದು ವಿಚಾರಿಸಿಯೇ ಕಳುಹಿಸುತ್ತಿದ್ದರು. ಬಿಸಿಲಲ್ಲಿ ತಿರುಗಿ ತಿರುಗಿ ಸಾಕಾಗಿದ್ದರೆ ಇಗ್ಗಣ್ಣ ಕೂಡ ಮನೆಯ ಆರಾಮ ಕುರ್ಚಿಯಲ್ಲಿ ಕೊಂಚ ಕೂತು, ಮಜ್ಜಿಗೆ ಕುಡಿದು ಸುಧಾರಿಸಿಕೊಂಡು ಪತ್ರ ಹಂಚುವ ಕೆಲಸ ಮುಂದುವರಿಸುತ್ತಿದ್ದ. ಊಟ ಮಾಡೋ ಅಂದರೆ ‘ಕಾಮಾಕ್ಷಿ ನಿಲಯದಲ್ಲಿ ಊಟ ಸಿದ್ಧವಿದೆ’ ಎನ್ನುತ್ತಿದ್ದ. ಕಾಮಾಕ್ಷಿ ಆತನ ಹೆಂಡತಿ. ಇಗ್ಗಣ್ಣ ಆಗಾಗ ಆಕ್ಷಿ ಹೊಡೆಯುತ್ತಿದ್ದನಾದ್ದರಿಂದ ನಾವೆಲ್ಲ ಇದು ಹೆಂಡತಿ ಕಾಮಾಕ್ಷಿಯ ಪ್ರಭಾವ ಎಂದು ಆತನನ್ನು ಕಿಚಾಯಿಸುತ್ತಿದ್ದೆವು.
ಆಗೆಲ್ಲ ಫೋನು ಇರಲಿಲ್ಲ. ಅಂಚೆಯೇ ಸಂಪರ್ಕದ ಪ್ರಮುಖ ಮೂಲ. ಅಂಚೆ ಪತ್ರಗಳ ಜತೆಗೆ ಇಗ್ಗಣ್ಣ ಊರ ಸುದ್ದಿಗಳನ್ನು, ಜಂಬ್ರ (ಸೂತಗದ) ಸುದ್ದಿಗಳನ್ನು ಹೊತ್ತು ತರುತ್ತಿದ್ದ. ಸರಕಾರ ಕೊಡುತ್ತಿದ್ದ ಸ್ಯಾಲರಿ ಏನೇನೂ ಇರಲಿಲ್ಲ. ಬಹುಶಃ ಸರಿಯಾಗಿ ತಿರುಗಾಡಿದರೆ ತಿಂಗಳಿಗೆ ಸವೆಸುವ ಚಪ್ಪಲಿಗೆ ಸಾಕಾಗುತ್ತಿತ್ತು ಸ್ಯಾಲರಿ. ಆದರೂ ಇಗ್ಗಣ್ಣ ಬಿಡದೆ ಸುತ್ತುತ್ತಿದ್ದ.
ನನ್ನ ಊರಾದ ಮೂರೂರಿನ ವ್ಯಾಪ್ತಿ ದೊಡ್ಡದು. ಹಾಗಾಗಿ ಕನ್ನಡ ಶಾಲೆ ಮುಗಿಸಿ ಮನೆಗೆ ಹೋಗುವ ಮಕ್ಕಳೇ ಪತ್ರ ತಲುಪಿಸುವ ಇಗ್ಗಣ್ಣ ಮೂಲಾಧಾರ. ಪತ್ರ ತಲುಪಿಸಬೇಕಾದ ಮನೆಯ ಮಕ್ಕಳೇ ಸಿಕ್ಕದರೆ ಪರವಾಗಿಲ್ಲ. ಇಲ್ಲವಾದಲ್ಲಿ ಆ ಮಕ್ಕಳ ಬಳಿಯಲ್ಲೇ ಅಕ್ಕಪಕ್ಕದ ಮನೆಗೆ ಪತ್ರ ತಲುಪಿಸಿ ಕೆಲಸ ಹಗುರ ಮಾಡಿಕೊಳ್ಳುತ್ತಿದ್ದ ಇಗ್ಗಣ್ಣ. ಹೀಗಾಗಿ ಇಗ್ಗಣ್ಣ ಶಾಲೆ ಮಕ್ಕಳಿಗೆಲ್ಲ ಪರಿಚಿತನಾಗಿದ್ದ. ಜತೆಗೆ ಶಾಲೆ ಮಕ್ಕಳೆಲ್ಲರ ಪರಿಚಯವನ್ನೂ ಇರಿಸಿಕೊಂಡಿದ್ದ. ಮಕ್ಕಳಿಗೆ ಮುಖ್ಯಮಂತ್ರಿಯ, ಪ್ರಧಾನ ಮಂತ್ರಿಯ ಕೊನೆಗೆ ಗ್ರಾಮ ಪಂಚಾಯತ್ ಅಧ್ಯಕ್ಷರ ಪರಿಚಯ ಇಲ್ಲದಿದ್ದರೂ ಇಗ್ಗಣ್ಣನ ಪರಿಚಯ ಚೆನ್ನಾಗಿತ್ತು. ಅಂಚೆ ಬರುವುದು ತಡವಾಗಿ ಮಕ್ಕಳು ಮನೆಗೆ ಹೋದರೋ ಅಂದು ಇಗ್ಗಣ್ಣನಿಗೆ ದಿನವಿಡೀ ಕೆಲಸ.
ನನ್ನಪ್ಪ ಎಲೈಸಿ ಏಜೆಂಟ್. ಹಾಗಾಗಿ ನಮ್ಮನೆಗೆ ಸಾಕಷ್ಟು ಪತ್ರಗಳು, ಎಲೈಸಿ ಕಚೇರಿಯ ಅಂಚೆಗಳು ಬರುತ್ತಿದ್ದವು. ಹೀಗಾಗಿ ಇಗ್ಗಣ್ಣ ಎಸ್.ಎಂ. ಭಟ್ ಎಂದು ನೋಡಿದ ಕೂಡಲೆ ನಮ್ಮನೆಗೆ ತಂದು ಹಾಕುತ್ತಿದ್ದ. ಮೂರೂರಿನಲ್ಲಿ ಅಂಗಡಿ ನಡೆಸುತ್ತಿದ್ದ ಸುಬ್ಬಣ್ಣ ಎಂಬವರ ಹೆಸರೂ ಎಸ್.ಎಂ. ಭಟ್. ಇನ್ನೊಂದು ಹೋಲಿಕೆಯಂದರೆ ಸುಬ್ಬಣ್ಣ ಹೆಂಡತಿ ಹೆಸರೂ ಲೀಲಾ. ನನ್ನಪ್ಪನ ಹೆಂಡತಿ ಅರ್ಥಾತ್ ನನ್ನಮ್ಮನ ಹೆಸರೂ ಲೀಲಾ. ಹೀಗಾಗಿ ಸಂಕ್ರಾತಿ, ಯುಗಾದಿ, ದೀಪಾವಳಿ ಸಂದರ್ಭಗಳಲ್ಲಿ ಸುಬ್ಬಣ್ಣನಿಗೆ, ಅವರ ಹೆಂಡತಿಗೆ ಬಂದ ಗ್ರೀಟಿಂಗ್ಸ್‌ಗಳೂ ನಮ್ಮನೆಗೆ ಬಂದು ಬೀಳುತ್ತಿತ್ತು. ಒಡೆದು ನೋಡಿದ ಮೇಲೆ, ಶುಭಾಷಯ ತಿಳಿಸಿದವರ ಹೆಸರು ನಮಗೆ ಪರಿಚಿತವಲ್ಲ ಎಂದು ನೋಡುವಾಗ ಅದು ಸುಬ್ಬಣ್ಣನಿಗೆ, ಅವನ ಹೆಂಡತಿಗೆ ಬಂದ ಗ್ರೀಟಿಂಗ್ಸ್ ಎಂಬುದು ಗೊತ್ತಾಗುತ್ತಿತ್ತು. ಸುಬ್ಬಣ್ಣನಿಗೆ ಈ ವಿಷಯ ಹೇಳಿದರೆ.. ನೀವೇ ಕೊಟ್ಟುಬಿಡಿ ಅವರಿಗೆ ಎಂದು ಬಿಡುತ್ತಿದ್ದ.
ಅದೇನೇ ಇದ್ದರೂ ಇಗ್ಗಣ್ಣ ಮೂರೂರಿನ ಒಂದು ಭಾಗವಾಗಿದ್ದ. ಆತ ಕೆಲಸ ಬಿಟ್ಟ ಮೇಲೆ ಅಂಚೆ ಹಂಚಲೂ ಒಂದು ಸರಿಯಾದ ಜನ ಸಿಗಲಿಲ್ಲ. ಕೆಲವರು ಈ ಕೆಲಸ ಮಾಡಿದರಾದರೂ ಇಗ್ಗಣ್ಣನಷ್ಟು ದೀರ್ಘಕಾಲ ಈ ಕೆಲಸಕ್ಕೆ ನಿಲ್ಲಲಿಲ್ಲ. ಹೀಗಾಗಿಯೇ ನಮ್ಮೂರದಲ್ಲಿ ಪೋಸ್ಟ್‌ಮ್ಯಾನ್, ಅಂಚೆಯಣ್ಣ ಎಂಬ ಶಬ್ದಗಳ ಬದಲು ಇಗ್ಗಣ್ಣ ಎಂಬ ಹೆಸರಿತ್ತು. ಹೀಗಾಗಿಯೇ ದೊಡ್ಡ ಸಾಧನೆ ಮಾಡದಿದ್ದರೂ ಇಗ್ಗಣ್ಣ ಊರವರಿಗೆಲ್ಲ ಪರಿಚಯ. ಮೂರೂರಿನಲ್ಲಿ ಇಗ್ಗಣ್ಣನಿಗೆ ಪರಿಚಯವಿಲ್ಲದ ಜನರಿಲ್ಲ, ಇಗ್ಗಣ್ಣನ ಪರಿಚಯವಿಲ್ಲದವರಿಲ್ಲ.
ಇಂದಿಗೂ ಇಗ್ಗಣ್ಣನ ಜಾಗದಲ್ಲಿ ಬೇರೊಬ್ಬರನ್ನು ಕಲ್ಪಿಸಿಕೊಳ್ಳುವುದು ನನ್ನಿಂದ ಸಾಧ್ಯವಾಗಿಲ್ಲ. ಬಹುಶಃ ನನ್ನೂರಿನ ಜನರಿಂದಲೂ ಸಾಧ್ಯವಾಗಿಲ್ಲ. ಈ ನಗರಗಳಲ್ಲೋ ಇಂತಹ ಸಂಬಂಧಗಳೇ ಇಲ್ಲ. ಪತ್ರ ವ್ಯವಹಾರವೇ ಕಡಿಮೆಯಾಗಿ ಈಗ ಇಂತಹ ಸಂಬಂಧಗಳೇ ಇಲ್ಲದಂತಾಗಿವೆ.

3 comments:

VENU VINOD said...

ಬಹುಷಃ ಎಲ್ಲ ಹಳ್ಳಿಗಳಲ್ಲೂ ಇಂತಹ ಇಗ್ಗಣ್ಣಂದಿರು ಇರುತ್ತಾರೆ. ಅಂಚೆಯಣ್ಣ ನಿಮ್ಮ ಊರಲ್ಲಿ ಫ್ಯಾಮಿಲಿ ಫ್ರೆಂಡ್ ಸ್ಥಾನ ಪಡೆದಿದ್ದು ಆತನ ಹಿರಿಮೆ ಸೂಚಿಸುತ್ತೆ. ಆತ್ಮೀಯ ಬರಹ.

Anonymous said...

ಕನ್ನಡ ಮಿತ್ರರೇ,
ನಾಡ ಪರ ಭಾಷಣಗಳು ಇಲ್ಲಿಯವರೆವಿಗು ಎಷ್ಟೊ ಬಂದು ಹೋದವು. ಆದರೆ, ಅದರಲ್ಲಿ ಎಚ್ಚರಿಕೆಯ ಮಾತುಗಳು ಕೆಚ್ಚಿನ ನುಡಿಗಳು ಇಣುಕಿಯೂ ಕೂಡ ಇರಲಿಲ್ಲ.

ಪ್ರತಿ ವರುಷ, ಕನ್ನಡಿಗರಲ್ಲಿ ಜಾಗೃತಿ ಹಾಗೂ ಆತ್ಮಸ್ಥಿರ್ಯ ತುಂಬಲು ಕರ್ನಾಟಕ ರಕ್ಷಣಾ ವೇದಿಕೆಯ ವತಿ ಇಂದ ಸ್ವಾಭಿಮಾನಿ ಕನ್ನಡಿಗರ ಸಮಾವೇಶ ನಡೆಯುತ್ತದೆ.

ಕಳೆದ ವರುಷ ಬಳ್ಳಾರಿಯಲ್ಲಿ ಜರುಗಿತು. ಟಿ.ಏ.ನಾರಾಯಣ ಗೌಡರು ಬೆಂಕಿಯ ನುಡಿಗಳ್ಳನ್ನಾಡಿದರು. ವಲಸಿಗರ ಧರ್ಮದ ಬಗ್ಗೆ ತಿಳುವಳಿಕೆ ಹಾಗು ಎಚ್ಚರಿಕೆಯನ್ನು ನೀಡಿದರು.

ಅವರ ಕೆಲವು ಮಾತುಗಳು ಹೀಗಿದ್ದವು -

"ನುಡಿ ಕಾಯಿ, ಗಡಿ ಕಾಯಿ, ಇಲ್ಲಿ ಬದುಕ್ತ ಇದ್ದೀಯ, ಬಾಳ್ತ ಇದ್ದಿಯ, ನಮ್ಮ ನಾಡಿನ ಭಾಷೆಯನ್ನ ಕಾಯಿ ನಮ್ಮ ನಾಡಿನ ಜನರ ಹಿತವನ್ನ ಕಾಯಿ, ಈ ನಾಡಿನ ನೆಲ ಜಲಗಳನ್ನ ಕಾಯಿ ಇಲ್ದಿದ್ರೆ ...."ಮುಂದೆ ಕೇಳಲು ಇಲ್ಲಿ ನೋಡಿ
http://www.karave.blogspot.com/


http://www.karnatakarakshanavedike.org/app/webroot/files/samaavesha_varadi.pdf


೬ ನೇಯ ಸ್ವಾಭಿಮಾನಿ ಕನ್ನಡಿಗರ ಸಮಾವೇಶ,
ಬೆಂಗಳೂರುನಲ್ಲಿ, ಸೆ ೨೮-೨೯ ರಂದು
ಅರಮನೆ ಮೈದಾನ
ತಪ್ಪದೆ ಬನ್ನಿ
ಸ್ವಾಭಿಮಾನಿಗಳಾಗಿ

ಶ್ರೀನಿವಾಸ ಕುಲಕರ್ಣಿ ತುರ್ವಿಹಾಳ್ said...

ಚೆನ್ನಾಗಿದೆ.

ನನ್ನ ಬ್ಲಾಗ್ ಡಿಯರ್ ಫ್ರೆಂಡ್,

http://kavimanasu.blogspot.com/