Thursday, May 17, 2007

ನಿದ್ರೆ- ಬಂದ್ರೆರಮಾನಾಥ ರೈಗೆ ಸಭೇಲಿ, ವಿಧಾನಸಭೇಲಿ ನಿಧಾನವಾಗಿ ನಿದ್ರೆ ಬಿದ್ಬಿಡುತ್ತೆ. ದೇವೇಗೌಡ್ರ ಬಳಿ ನಿದ್ರೆ ಮಾಡ್ತೀರಲ್ರಿ ಅಂದ್ರೆ ಇಲ್ರೀ ದೇಶದ ಬಗ್ಗೆ ಚಿಂತೆ ಮಾಡ್ತಾ ಇದೀನಿ ಅಂದ್ರಂತೆ. ಯು.ಟಿ. ಫರೀದರಂತೂ ಕೂತಲ್ಲೆಲ್ಲ ನಿದ್ರಾ ದೇವೀನ ಅಪ್ಕೋತಿದ್ರು. ಕೆಲವರಿಗೆ ಬಸ್ ಹತ್ತುತ್ತಿದ್ದಂತೆ ನಿದ್ರೆ. ಕೆಲವರಿಗೆ ಕಂಡಕ್ಟರ್ ಹತ್ತಿರ ಬಂದ್ಕೂಡ್ಲೆ ಘಾಡ ನಿದ್ರೆ. ಇನ್ನು ಕೆಲವರಿಗೆ ಕಂಡಕ್ಟರ್ ಅವರನ್ನ ದಾಟಿ ಹೋಗೋವರೆಗೂ ನಿದ್ರೆ. ಹೀಗೆ ಕಚೇರಿ, ಬಸ್ಸು, ರೈಲು, ವಿಮಾನ, ಹಾಸಿಗೆ, ಪುಟ್‌ಪಾತು, ಕ್ಲಾಸ್ ರೂಮು, ಬೀಚು, ಸಭೆ, ಮನೆ ಹೀಗೆ ಎಲ್ಲಂದರಲ್ಲಿ ನಮಗೇ ಗೊತ್ತಿಲ್ಲದೆ ಆವರಿಸಿಕೊಂಡು ಬಿಡುತ್ತೆ ನಿದ್ರೆ. ಕೂತ್ಕೊಳೋಕೆ, ತಲೆ ಕೊಡೋಕೆ ಒಂದು ಜಾಗ ಅದು ಬಸ್ಸಿನ ಮುಂದಿನ ಸೀಟಾದರೂ ಆಗಬಹುದು ಇಲ್ಲಾ ಪಕ್ಕದ ಪ್ರಯಾಣಿಕನ ಭುಜವಾದರೂ ನಡೆದೀತು!
ಬಸ್ಸಲ್ಲಿ ನಿದ್ರೆ ಮಾಡೋರ ನೋಡಿದ್ರೆ ಚಾರ್ಲಿ ಚಾಪ್ಲಿನ್ ಸಿನಿಮಾ ನೋಡ್ದಂಗಿರುತ್ತೆ. ಒಮ್ಮೆ ಆಚೆ ಕೂತವನ ಮೇಲೆ ಬೀಳುತ್ತಾ. ಸಾರಿ ಕೇಳುತ್ತಾ. ಬ್ರೇಕ್ ಹಾಕಿದಾಗೊಮ್ಮೆ ಎದುರಿನ ಸೀಟಿಗೆ ಹಣೆ ಘಟ್ಟಿಸುತ್ತಿರುತ್ತಾರೆ.
ಹಾಗಂತ ಎಲ್ರಿಗೂ ಎಲ್ಲೆಂದರಲ್ಲಿ ನಿದ್ರೆ ಬರೋದಿಲ್ಲ. ಎಷ್ಟೋ ಜನಕ್ಕೆ ಮನೆ ಬೆಡ್ ರೂಂನಲ್ಲಿ ಮೆತ್ತನೆ ಹಾಸಿಗೆ, ಎಸಿ ಇರುತ್ತೆ. ಗಿರಗಿರನೆ ತಿರುಗಿ ಗಾಳಿ ಬೀಸೋ ಫ್ಯಾನ್ ಇರುತ್ತೆ. ಆದ್ರೆ ಕರೆಂಟೇ ಇರೊಲ್ಲ. ಕರೆಂಟು ಇತ್ತು ಅಂತ್ಲೇ ಇಟ್ಕೊಳೋಣ ಅವನಿಗೇನೋ ಚಿಂತೆ. ಇವತ್ತು ಬಿಜೆನೆಸ್‌ನಲ್ಲಾದ ಲಾಸು. ವಿರೋಧ ಪಕ್ಷದವ ಮಾಡಿದ ಟೀಕೆ. ನಾಳೆ ಮಾಡಬೇಕಾದ ಕೆಲಸ. ಮಗ ಕೆಟ್ಟ ಚಟ ಕಲಿತದ್ದು. ಮಗಳು ಯಾರನ್ನೋ ಪ್ರೀತಿಸುತ್ತಿರುವುದು. ಇಲ್ಲವೇ ಮಕ್ಕಳು ಶಿಕ್ಷಣದಲ್ಲಿ ಹಿಂದಿರುವುದು. ಹೆಂಡತಿಗೆ ತನ್ನ ಬಗ್ಗೆ ಪ್ರೀತಿ ಕಡಿಮೆ ಆಗಿದೆ ಎಂಬ ಅನುಮಾನ. ಅಯ್ಯೋ ಸಮಸ್ಯೆಯ ಸರಮಾಲೆ. ಆಕಾಶವೇ ಬಿದ್ದಿದೆ ತಲೆಮ್ಯಾಲೆ!
ಜಗತ್ತಿನಲ್ಲಿ ಅತ್ಯಂತ ಸುಖಿ ಯಾರು? ಎಂಬ ಪ್ರಶ್ನೆಗೆ ಕರೆದ ಕೂಡಲೆ ಯಾರಿಗೆ ನಿದ್ರೆ ಬರುತ್ತೋ ಆತ ಎಂದು ಉತ್ತರಿಸಬಹುದು. ತುಂಬ ದುಡ್ಡಿದ್ದು, ಎಲ್ಲ ಸೌಕರ್ಯವಿದ್ದು, ಎಸಿ ಬೆಡ್ ರೂಂ ಇದ್ದೂ ನಿದ್ರೆ ಬಾರದೆ ಹೋದರೆ ಪ್ರಯೋಜನವೇನು? ಖಂಡಿತ ಆತ ಸುಖಿಯಲ್ಲ. ಅದಕ್ಕೇ ಅಲ್ಲವೆ ಹಿರಿಯರು ಚಿಂತೆ ಇಲ್ಲದವನಿಗೆ ಸಂತೆಯಲ್ಲೂ ನಿದ್ರೆ ಅಂದಿರೋದು.
ಫುಟ್‌ಪಾತ್‌ನಲ್ಲಿ ಹಾಯಾಗಿ ಗಾಳಿಗೆ ಮಯ್ಯೊಡ್ಡಿ ಭೂಮ್ತಾಯನ್ನೇ ಮಂಚವಾಗಿಸಿ, ಆಕಾಶಾನೇ ಸೂರಾಗಿಸಿ ಪವಡಿಸಿದ ಮಾಸಲು ಬಟ್ಟೆ ತೊಟ್ಟ ಮನುಷ್ಯನ್ನ ನೋಡಿ. ಎಂಥ ಹಾಯಾಗಿ ಮಲ್ಕೊಂಡಿದಾನೆ. ನೆಮ್ಮದಿಯ ಅಪರಾವತಾರ. ಹಾಯಾಗಿ ನಿದ್ರೆ ಬರೋಕೂ ಪುಣ್ಯ ಮಾಡಿರ್‍ಬೇಕು ಅಂತಾರೆ. ಪುಣ್ಯವೋ? ಪಾಪವೋ? ಗೊತ್ತಿಲ್ಲ. ಮನಸ್ಸು ನಿರುಮ್ಮಳವಾಗಿದ್ದರೆ ನಿದ್ರಾದೇವಿ ತಟ್ಟನೆ ಬಂದು ತಬ್ಕೋತಾಳೆ. ಆಕೆಗೆ ತಲೆಬಿಸಿ ಇರೋರ್‍ನ ಕಂಡ್ರೆ ಅಲರ್ಜಿ.
ಒಬ್ಬ ಮನುಷ್ಯ ದಿನಕ್ಕೆ ಕನಿಷ್ಟ ಆರು ತಾಸಾದರೂ ನಿದ್ರಾದೇವಿಯ ತೆಕ್ಕೆಯಲ್ಲಿರಬೇಕು ಅಂತಾರೆ ನಿದ್ರೆ ಮಹಿಮೆ ತಿಳಿದೋರು. ಸರಿಯಾದ ನಿದ್ರೆಯಿಂದ ನೆನಪಿನ ಶಕ್ತಿ ಹೆಚ್ಚುತ್ತೆ. ಮನಸು ಫ್ರೆಶ್ ಆಗುತ್ತೆ. ಮೆದುಳಿಗೆ, ಕಣ್ಣಿಗೆ ಅಷ್ಟೇ ಏಕೆ ಇಡೀ ದೇಹಕ್ಕೆ ವಿಶ್ರಾಂತಿ ಸಿಗುತ್ತೆ. ರಕ್ತ ಚೆನ್ನಾಗಿ ಪ್ರವಹಿಸುತ್ತೆ. ಅದಕ್ಕೂ ಹೆಚ್ಚೆಂದರೆ ಒಂದೊಳ್ಳೆ ಕನಸು ಬೀಳುತ್ತೆ. ಇಷ್ಟೆಲ್ಲ ಒಳ್ಳೇ ಗುಣಗಳಿರೋ ನಿದ್ರೆ ಯಾರಿಗೆ ತಾನೆ ಬೇಡ.
ಇಂತಹ ಸುಂದರ ನಿದ್ರೆ ಬಿದ್ರೆ ಆಗೋ ಅನಾಹುತಗಳಿಗಳು ಒಂದೆರಡೇ?
ವಾಹನ ಚಲಾಯಿಸುವಾಗ ಚಾಲಕನಿಗೆ ಒಂದು ಸೆಕೆಂಡು ಕಣ್ಣು ತೂಕಡಿಸಿದರೂ ಒಂದಿಷ್ಟು ಜನ ಶಾಶ್ವತವಾಗಿ ಕಣ್ಮುಚ್ಚುತ್ತಾರೆ. ಕಚೇರೀಲಿ ನಿದ್ರೆ ಮಾಡಿದಾಗ ಹಿರಿಯ ಅಧಿಕಾರಿ ಬಂದ್ರೆ ಉಗಿಸ್ಕೋಬೇಕು. ಮನೇಲಿ ಜನ ಮಲ್ಕೊಂಡಿರುವಾಗಲೇ ಕಳ್ಳರು ಮನೆಗೆ ನುಗ್ಗಿ ಕಳ್ಳತನ ಮಾಡೋದಿದೆಯಲ್ಲ ಅದು ನಿದ್ರೆಯಿಂದಾಗೋ ಅನಾಹುತದ ಪರಮಾವಧಿ. ಇತ್ತೀಚೆಗೆ ಮೂಡುಬಿದಿರೆಯ ಮನೆಯೊಂದರಲ್ಲಿ ತುಂಬಾ ಸೆಖೆಯೆಂದು ಎಲ್ಲರೂ ಮನೆಯ ಹೊರಗೆ ಮಲಗಿದ್ದರು. ಕಳ್ಳ ಒಳಗಿದ್ದದ್ದನ್ನೆಲ್ಲ ತೆಗೆದುಕೊಂಡು ಹೋಗಿದ್ದ.
ನಾನೂ ಎಲ್ಲೆಂದರಲ್ಲಿ ನಿದ್ರೆ ಮಾಡಬಲ್ಲೆ. ಅಷ್ಟರಮಟ್ಟಿಗೆ ನಾನು ಸುಖಿ. ಸ್ವಲ್ಪ ಸಮಯವಿದ್ದರೆ ಸಣ್ಣ ನಿದ್ದೆ ಮಾಡಿ ತಟ್ಟನೆ ಫ್ರೆಶ್ ಆಗಬಲ್ಲೆ. ದೊಡ್ಡ ನಿದ್ದೆಗಿಂತ ೧೦ ನಿಮಿಷದ ಸಣ್ಣ ನಿದ್ರೆ ದೊಡ್ಡ ರಿಲೀಫ್ ಕೊಡಬಲ್ಲದು. ಒಮ್ಮೆ ಪಾಂಡೇಶ್ವರ ಇನ್‌ಸ್ಪೆಕ್ಟರ್ ವೆಂಕಟೇಶ ಪ್ರಸನ್ನರನ್ನು ಭೇಟಿ ಮಾಡಲು ಹೋಗಿದ್ದೆ. ಠಾಣೆಗೆ ಹೋದರೆ ಆಯಪ್ಪ ಇರಲಿಲ್ಲ. ಕೇಳಿದ್ದಕ್ಕೆ ೧೫ ನಿಮಿಷದಲ್ಲಿ ಬರ್‍ತೀನಿ ಅಂದ್ರು. ಸರಿ ಅಂತ ಅಲ್ಲೇ ಗೋಡೆಗೆ ತಲೆ ಒರಗಿಸಿ ಕುಳಿತಿದ್ದವನಿಗೆ ನಿದ್ರೆ. ಇನ್‌ಸ್ಪೆಕ್ಟರ್ ಬಂದು ಎಬ್ಬಿಸಿದ್ರು. ಏನ್ ಸ್ವಾಮಿ ನಿದ್ರೇನಾ ಅಂದ್ರು. ಅದ್ಕೆ ನಾನಂದೆ ಹೌದು ಸ್ವಾಮಿ ಪೊಲೀಸ್ ಠಾಣೆಗೆ ಬಂದೂ ನಿಶ್ಚಿಂತವಾಗಿ ನಿದ್ರೆ ಮಾಡೋ ಧೈರ್ಯ ಪತ್ರಕರ್ತರಿಗಲ್ಲದೆ ಇನ್ಯಾರಿಗಿರುತ್ತೆ ಅಂದೆ. ಅವರಿಗೂ ಈ ಮಾತು ಸತ್ಯ ಅನ್ನಿಸಿರಬೇಕು. ನಕ್ಕು ಸುಮ್ಮನಾದರು.
ಕೆಲವು ಘಟನೆ ನೋಡಿದರೆ ಪುರುಷರಿಗಿಂತ ಸ್ತ್ರೀಯರಿಗೆ ನಿದ್ರೆ ಅಷ್ಟು ಒಳ್ಳೇದಲ್ಲ ಅನಿಸಿಬಿಡುತ್ತೆ. ಹಂಗಂತ ನನ್ನ (ಇ)ಸ್ತ್ರೀ ವಿರೋಧಿ ಅಂದ್ಕೋಬೇಡಿ.
ಬುದ್ಧ
ಜಗವೆಲ್ಲ ಮಲಗಿರಲು
ಅವನೊಬ್ಬ ನೆದ್ದ
ಮನೆಯಿಂದ ಹೊರಬಿದ್ದ
ಜಗದ ಜಂಜಡ ಗೆದ್ದ...
ಅನ್ನೋದು ಕರೆಕ್ಟಾ?
ಅವನ ಹೆಂಡತಿಗೆ ಅಷ್ಟೇ ಏಕೆ ಮನೆಯ ಯಾರಿಗೇ ಆದರೂ ಅವನೆದ್ದು ಮನೆಯಿಂದ ಹೊರನಡೆಯುತ್ತಿರುವುದು ಗೊತ್ತಾಗಿದ್ದರೆ ಬಹುಶಃ ಬುದ್ಧನಿಗೆ ಬುದ್ಧ ಎಂದು ಕರೆಸಿಕೊಳ್ಳುವ ಅವಕಾಶವೇ ತಪ್ಪಿ ಹೋಗುತ್ತಿತ್ತೇನೊ.
ನಳ- ದಮಯಂತಿಯನ್ನು ಬಿಟ್ಟು ನಡೆದದ್ದೂ ಆಕೆ ನಿದ್ರಿಸುತ್ತಿರುವಾಗಲೇ ಅಲ್ಲವೇ? ಆದ್ದರಿಂದ ಸ್ರೀಯರೇ ನಿದ್ರಿಸುವಾಗ ಎಚ್ಚರ!

1 comment:

ಚಿತ್ರಾ ಸಂತೋಷ್ said...

'ಸ್ರೀಯರೇ ನಿದ್ರಿಸುವಾಗ ಎಚ್ಚರ'! ನಿಮ್ ಸಲಹೆಗೆ ಥ್ಯಾಂಕ್ಸ್ ಸರ್..ಆದ್ರೆ ರಾತ್ರಿ ಹೊತ್ತು ಗಂಡ ಹೊರಗೆದ್ದು ನಡೀತಾನೆ ಅಂತ ಭಯವಿಲ್ಲ. ಯಾಕೆಂದ್ರೆ ರಾತ್ರಿ ಹೊತ್ತು 'ಎದ್ದು 'ಹೋಗುವ ಗಂಡಸರು ಈಗಿನ ಕಾಲದಲ್ಲಿ ಕಡಿಮೆ. ಹೆಂಡತಿ ತನ್ನ ಜತೆ ಇಲ್ಲದ ಸಮಯ ಹುಡುಕಿ 'ಎದ್ದು' ಹೋಗೋರೇ ಜಾಸ್ತಿ ಇದ್ದಾರೆ ಸ್ವಾಮೀ..ಹೀಗಿರುವಾಗ ನಿದ್ದೆ ಮಾಡದೆ ಕಾದರೇನು ಪ್ರಯೋಜನ ಹೇಳಿ..?