Friday, October 26, 2007

ಸಿಎಂ ಚಪ್ಲಿ

ಇದು ಧರ್ಮಸಿಂಗ್ ಅವ್ರು ಸಿಎಂ ಆಗಿದ್ದಾಗ ಮಂಗಳೂರಿನ ಕುದ್ರೋಳಿ ದೇವಸ್ಥಾನಕ್ಕೆ ಬಂದಾಗ ನಡೆದ ಘಟನೆ. ಧರ್ಮಸಿಂಗ್ ಅವರು ದೇವಸ್ಥಾನದ ಒಳಗೆ ಹೋಗುವಾಗ ಹೊರಗೆ ಚಪ್ಪಲಿ ತೆಗೆದಿಟ್ಟಿದ್ದರು. ಎಷ್ಟೋ ದೇವಸ್ಥಾನದಲ್ಲಿ ದಿನವೂ ಭಕ್ತರ ಚಪ್ಪಲಿಗಳು ಕಳವಾಗುತ್ತಲೇ ಇರುತ್ತವೆ. ಅದ್ಯಾವುದೂ ಸುದ್ದಿಯಾಗಲ್ಲ. ಅಟ್ಲೀಸ್ಟ್ ಪೊಲೀಸರಿಗೆ ಮಾಹಿತಿನೂ ಹೋಗಲ್ಲ. ಆದರೆ ಸಿಎಂ ಚಪ್ಲಿ ಕಳವಾದ್ರೆ ಮಾತ್ರ ಅದು ಸುದ್ದಿ.
ಧರಂ ಅವ್ರು ಚಪ್ಪಲಿ ಕಾಣ್ದೆ ಗರಂ ಆಗಿಬಿಟ್ರೆ? ಅವರು ಕುದ್ರೋಳಿ ಬಂದಿದ್ದಾಗ ಒಮ್ಮೆ ಹೀಗೆ ಆಯ್ತು...
ಧರ್ಮಸಿಂಗ್ ಅವರು ದೇವರ ದರ್ಶನ ಮಾಡಿ ಹೊರಬಂದು ಪಕ್ಕದಲ್ಲಿರುವ ಕಲ್ಯಾಣ ಮಂಟಪ ನೋಡಲು ಹೋದರು. ದೇವಸ್ಥಾನದ ಎದುರಲ್ಲಿದ್ದ ಚಪ್ಪಲಿ ನೋಡಿಕೊಳ್ಳುವಂತೆ ಅವರ ಅಂಗರಕ್ಷಕನಿಗೆ ಸೂಚಿಸಲಾಗಿತ್ತು. ಆತ ಅದನ್ನು ಇನ್ನೊಬ್ಬ ಪೊಲೀಸ್ ಕಾನ್‌ಸ್ಟೇಬಲ್‌ಗೆ ವಹಿಸಿ ತಾನೂ ದೇವಸ್ಥಾನದ ಒಳಗೆ ಹೋಗಿದ್ದ. ಸಿಎಂ ಅವ್ರು ಕಲ್ಯಾಣ ಮಂಟಪಕ್ಕೆ ಹೋದಾಗ ಅಲ್ಲಿಗೇ ಅವರ ಚಪ್ಪಲಿ ತರುವಂತೆ ಹೇಳಲಾಯಿತು. ಇದು ಅಂಗರಕ್ಷಕನಿಗೆ ಗೊತ್ತಿರಲಿಲ್ಲ. ಆತ ಬಂದು ದೇವಸ್ಥಾನದ ಎದುರು ಹುಡುಕುತ್ತಾನೆ ಚಪ್ಪಲಿ ನಾಪತ್ತೆ!
ಅಂಗರಕ್ಷಕ ಒಮ್ಮೆ ಕಂಗಾಲಾದ. ತನ್ನ ರಕ್ಷಣೆಗೆ ಬರೋರ್ಯಾರಾದರೂ ಇದ್ದಾರಾ ಎಂದು ಹುಡುಕಿದ. ಕಂಡಿದ್ದು ಪೊಲೀಸರು. ತಕ್ಷಣ ಅವರಿಗೆ ವಿಷಯ ತಿಳಿಸಿದ. ಒಬ್ಬರ ಕಿವಿಯಿಂದ ಒಬ್ಬರ ಕಿವಿಗೆ ತಲುಪಿತು ಸಿಎಂ ಚಪ್ಲಿ ಕಳವಾದ ವಿಷಯ. ಕೋಲಾಹಲ. ನಗರದಲ್ಲಿ ದೊಡ್ಡ ಕಳ್ಳತನ ಆದರೂ ನಮ್ಮ ಪೊಲೀಸರಿಗಾಗದಷ್ಟು ತಲೆಬಿಸಿ ಸಿಎಂ ಚಪ್ಲಿ ಕಳವಾದ್ರೆ ಆಗುತ್ತೆ.
ಎಲ್ಲರೂ ಟೆನ್ಶನ್‌ನಲ್ಲಿ ಸಿಎಂ ಚಪ್ಲಿ ಹುಡುಕಿದ್ದೇ ಹುಡುಕಿದ್ದು. ಅಷ್ಟರಲ್ಲಿ ಅಲ್ಲೇ ಇದ್ದ ಪೊಲೀಸ್ ಅಧಿಕಾರಿಯೊಬ್ಬರು ತಮ್ಮ ಹಿರಿಯ ಅಧಿಕಾರಿ ಬಳಿ "ಸರ್ ಸಿಎಂ ಅವ್ರ ಚಪ್ಲಿ ಕಾಣ್ತಾ ಇಲ್ವಂತೆ. ಬೇಕಾದ್ರೆ ಹೇಳಿ ಸಾರ್ ಹೊಸ ಚಪ್ಲಿ ತಂದ್ಬಿಡ್ತೀನಿ. ಸುಮ್ನೆ ಟೆನ್ಶನ್ ಯಾಕೆ? ಸೈಝ್ ಹೇಗೂ ಗೊತ್ತಿದೆ’ ಅಂತ್ಲೂ ಸಲಹೆ ಕೊಟ್ರು!
ಆದ್ರೆ ಕಾನ್‌ಸ್ಟೇಬಲ್ ಬಳಿ ಸಿಎಂ ಚಪ್ಲಿ ಇರುವುದು ಆ ಹಿರಿಯ ಪೊಲೀಸ್ ಅಧಿಕಾರಿಗೆ ಗೊತ್ತಿತ್ತು. ಹಾಗಾಗಿ ಅವ್ರು ಹೊಸ ಚಪ್ಲಿ ಎಲ್ಲ ತರೋದೇನು ಬೇಡ ವಾಯರ್‌ಲೆಸ್‌ನಲ್ಲಿ ಚಪ್ಲಿ ಹಿಡ್ಕೊಂಡಿರೋ ಕಾನ್‌ಸ್ಟೇಬಲ್‌ಗೆ ಕಲ್ಯಾಣ ಮಂಟಪದ ಎದ್ರು ಬರಲು ಹೇಳಿ ಸಾಕು ಅಂದ್ರಂತೆ. ಆಗ ಪೊಲೀಸರಿಗೆ, ಅಂಗರಕ್ಷಕನಿಗೆ ಹೋದ ಜೀವ ಬಂದಂತಾಯ್ತು. ಹೀಗೆ ಸಿಎಂ ಚಪ್ಲಿ ಕಳವು ಎಂಬ ಗಂಭೀರ ಪ್ರಕರಣ ತಿಳಿ ಹಾಸ್ಯದಲ್ಲಿ ಮುಗಿದಿತ್ತು.

2 comments:

Anonymous said...

ಇಂಗೇ ಒಂದ್ಸಲಾ ಸೋನಿಯಾ ಗಾಂದಿ ಆಕ್ಕೊಂಡಿದ್ದ ಚಪ್ಪಲಿಗಳು ಕಳ್ದೋದ್ವಂತೆ. ಎನ್ಮಾಡಿದ್ರೂ ಸಿಕ್ಲೇ ಇಲ್ವಂತೆ. ಆಮೇಲೆ ಗೊತ್ತಾಯ್ತಂತೆ. ದೆಲ್ಲಿಗೆ ಎಸ್.ಎಮ್. ಕಿಶ್ಣ, ದರಮ್ ಸಿಂಗ್ ಓಗಿದ್ದಾಗ ಇಬ್ರೂ ಒಂದೊಂದು ಚಪ್ಲಿ ಕದ್ಗಂಡು ಬಂದು ಅದನ್ನ ತಮ್ಮನೆಯೊಳಗೆ ಬದ್ರವಾಗಿ ಇಟ್ಕೊಂಡು ನೆಕ್ತಾ ಕೂತಿದ್ರಂತೆ!

-ಮಾದೇವ

Anonymous said...

ಹ್ಹ ಹ್ಹ , ಮಾದೇವ.. ಸೂಪರ್.

ತನ್ನ ಚಪ್ಲಿಗಳನ್ನೆಲ್ಲಾ ಕಾಂಗ್ರೆಸ್ ನಾಯಕರು ಎತ್ಕಂಡೋಗಿಬಿಡ್ತಾರೆ ಇವ್ರು ಅಂತ ಇತ್ತೀಚೆಗೆ ಸೋನಿಯಾ ಚಪ್ಲಿ ಹಾಕೋ ಬಿಟ್ಟಿದ್ದಾರೆ ಅಂತ ಲೇಟೆಸ್ಟು ಸುದ್ದಿ. :-)