ಅದೊಂದು ಕೊಲೆ ಪ್ರಕರಣ. ನಾನು ಮಂಗಳೂರಿಗೆ ಬರುವ ಮೊದಲೇ ಅದು ನಡೆದಿತ್ತಾದರೂ, ಕ್ರೈಂ ರಿಪೋರ್ಟರ್ ಆಗಿ ನಾನು ಹಳೆಯ ಕ್ರೈಂಗಳ ಕಥಾನಕ ಬರೆಯುತ್ತಿದ್ದಾಗ, ಗೋಪಾಲಕೃಷ್ಣ ಕುಂಟಿನಿ ಸಲಹೆಯಂತೆ ಆ ಕೊಲೆಯ ಬಗ್ಗೆ ಬರೆದಿದ್ದೆ.
ಆದೇ ಕೊಲೆಯ ಸುತ್ತಮುತ್ತ ಜೋಗಿಯ ನದಿಯ ನೆನಪಿನ ಹಂಗು ಕಾದಂಬರಿ ಹಬ್ಬಿಕೊಂಡಿದೆ. ಕೊಲೆಯಾದಾತ ಜೋಗಿ ಮತ್ತು ಕುಂಟಿನಿಯ ಗೆಳೆಯನೂ ಆಗಿದ್ದ. ದಕ್ಷಿಣ ಕನ್ನಡದವರ ಮಟ್ಟಿಗೆ ಈ ಕಾದಂಬರಿ ನಮ್ಮ ಸುತ್ತಲಿನಲ್ಲೇ ನಡೆದ ಘಟನೆ ಎಂಬಷ್ಟು ಆಪ್ತವಾಗುವಂಥದ್ದು. ಕೊಲೆಯ ಸುತ್ತ ಹಲವಾರು ಘಟನೆಗಳು ಸೃಷ್ಟಿಯಾಗುತ್ತವೆ. ಹೆಚ್ಚಿನವೆಲ್ಲ ಸತ್ಯ ಘಟನೆಗಳೇ. ಅದನ್ನು ಜೋಗಿ ಕತೆ ಎಂಬಂತೆ ವಿವರಿಸಿದ್ದಾರೆ. ಸ್ಥಳಗಳು ಅದೇ, ಹೆಸರುಗಳು ಮಾತ್ರ ಬೇರೆ ಬೇರೆ.
ಸುಬ್ರಹ್ಮಣ್ಯ ಮಠದ ಸ್ವಾಮೀಜಿ ಮದುವೆಯಾದ ಘಟನೆಯೂ ಕಾದಂಬರಿಯಲ್ಲಿ ಬರುತ್ತದೆ. ಸ್ವಾಮೀಜಿಯ ತುಮುಲ, ಅವರ ಮದುವೆಗೆ ಉಂಟಾಗುವ ಅಡ್ಡಿಗಳು, ಸ್ವಾಮೀಜಿಯಾಗಿಯೇ ಇರಿ, ಹುಡುಗಿಯೊಂದಿಗಿನ ಸಂಬಂಧ ಮುಂದುವರಿಸಿ ಎಂಬಂಥ ಮರ್ಯಾದೆ ಉಳಿಸುವ ಸಲಹೆಗಳನ್ನೆಲ್ಲ ಜೋಗಿ ಸ್ವಾರ್‍ಯಸ್ಯವಾಗಿ ವಿವರಿಸಿದ್ದಾರೆ.
ಸರಾಗವಾಗಿ ಓದಿಸಿಕೊಂಡು ಹೋಗುವ ಕಾದಂಬರಿ ನಂಗಂತೂ ಖುಷಿಕೊಟ್ಟಿದೆ. ನೀವೂ ಓದಿ. ನಿಮಗೂ ಇಷ್ಟವಾಗುವುದು ಖಂಡಿತ.
ಜೋಗಿ ಸಿಕ್ಕಾಬಟ್ಟೆ ಬರೆಯುತ್ತಾರೆ. ಅವರು ಎಷ್ಟು ಬರೆಯುತ್ತಾರೆಂದರೆ ಅವರು ಒಂದು ವಾರದಲ್ಲಿ ಬರೆದಷ್ಟನ್ನು ನಾವು ಒಂದು ವಾರದಲ್ಲಿ ಓದಲು ಸಾಧ್ಯವಿಲ್ಲ. ಅಷ್ಟು ಬರೆಯುತ್ತಾರೆ. ಅವರು ಬರೆಯುತ್ತಲೇ ಇರಲಿ. ಅದರಲ್ಲಿ ಒಂದಷ್ಟನ್ನಾದರೂ ಓದಿ ಖುಷಿಪಡಲು ನಮಗೆ ಸಮಯ ಸಿಗಲಿ!
1 comment:
ಕಾದಂಬರಿ ಪರಿಚಯ ಮಾಡಿಕೊಟ್ಟಿದ್ದಕ್ಕೆ ಥ್ಯಾಂಕ್ಸ್. ಹುಡುಕಾಡಿ ತರಿಸಿಕೊಂಡು ಓದಿದೆ. ಮಾಮೂಲು ಕಾದಂಬರಿಯ ಹಾಗೇ ಇರುತ್ತೆ ಎಂದು ಕೊಂಡು ಓದಿದರೆ ಎಷ್ಟು ಚೆನ್ನಾಗಿದೆ. ಹೀಗೆ ಹೊಸ ಕಾದಂಬರಿಗಳ ಪರಿಚಯ ಮಾಡಿಕೊಡುತ್ತಿರಿ.
-ಕೇಶವ್
Post a Comment