Monday, June 30, 2008

ವ್ಹಾ! ವಾಟ್ ಎನ್ ಐಡಿಯಾ ಸರ್ ಜಿ!!!
ಒಂದು ಸಾಧಾರಣ ಊರು. ಬಹುಶಃ ಕೇರಳ ರಾಜ್ಯದ್ದು. ಆ ಊರಿಗೊಂದೇ ಶಾಲೆ. ಅದೂ ಖಾಸಗಿ. ಆ ಊರಿನ ಒಬ್ಬ ಬಡ ಮುದುಕ ತನ್ನ ಮೊಮ್ಮಗಳು ಲಕ್ಷ್ಮಿರಾಧಾಳನ್ನು ಆ ಶಾಲೆಗೆ ಸೇರಿಸಲು ಹೋಗುತ್ತಾನೆ. ಆದರೆ ಅಲ್ಲಿ ಕಂಡದ್ದು ಎಡ್ಮಿಶನ್ ಫುಲ್ ಬೋರ್ಡು. ಮುದಕಪ್ಪನಿಗೆ ಅದನ್ನು ಓದಲು ಬಾರದೆ ಶಾಲೆಯ ಒಳಗೆ ಹೋಗಲು ನೋಡಿದಾಗ, ಅಲ್ಲಿನ ಒಬ್ಬ ಮಾಸ್ತರ ಅಜ್ಜನಿಗೆ ಸೀಟಿಲ್ಲ ಎಂದು ಹೇಳಿ ಕಳುಹಿಸುತ್ತಾನೆ.
ಇದನ್ನು ಆ ಶಾಲೆಯ ಮುಖ್ಯಸ್ಥ ಫಾದರ್ ನೋಡುತ್ತಾನೆ. ಆತನಿಗೆ ಆ ಮುದುಕಪ್ಪನ ಮೊಮ್ಮಗಳನ್ನು ಶಾಲೆಗೆ ಸೇರಿಸಿಕೊಳ್ಳಲಾಗದಿರುವುದಕ್ಕೆ ಬೇಸರವಾಗುತ್ತದೆ. ಅಂತಹವರಿಗೂ ಕಲಿಯಲು ಅವಕಾಶ ಸಿಗುವಂತಾಗಬೇಕು ಎಂದು ಆಶಿಸುತ್ತಾನೆ. ಅದಕ್ಕೆ ಆತ ಒಂದು ಐಡಿಯಾ ಮಾಡುತ್ತಾನೆ. ತನ್ನ ಶಾಲೆಯಲ್ಲಿ ಶಿಕ್ಷಕರು ಕಲಿಸುವಾಗ ಅವರ ಎದುರು ಮೊಬೈಲ್‌ಗಳನ್ನು ಇಡುತ್ತಾನೆ. ಈ ಮೊಬೈಲ್‌ನಲ್ಲಿ ಹಳ್ಳಿಯ ಕೆಲವೆಡೆ ಜಾಗ ಗುರುತಿಸಿ, ಅಲ್ಲಿಟ್ಟ ಮೊಬೈಲ್‌ಗೆ ಸಂಪರ್ಕ ಕಲ್ಪಿಸುತ್ತಾನೆ. ಮೊಬೈಲ್ ಎದುರು ಮಕ್ಕಳು ಕುಳಿತು ಶಾಲೆ ಕಲಿಯುತ್ತಾರೆ. ಹೀಗೆ ಮೊಬೈಲ್ ಎದುರಲ್ಲಿ ಕುಳಿತು ಕಲಿತ ಲಕ್ಷ್ಮಿ ರಾಧಾ ಉತ್ತಮ ವಿದ್ಯಾರ್ಥಿನಿ ಬಹುಮಾನ ಗೆಲ್ಲುತ್ತಾಳೆ.

ಇಷ್ಟು ಕಾನ್ಸೆಪ್ಟು. ಅದಕ್ಕೆ ಅಂದವಾದ ಹಿನ್ನೆಲೆ ಸಂಗೀತ. ಓಹೊಹೊ ಓಹೊಹೊ ಓಹೊಹೋಹೊ ಎಂಬ ಮಕ್ಕಳ ಧ್ವನಿ. ಒಂದಷ್ಟು ಇಷ್ಟವಾಗಬಲ್ಲ ದೃಶ್ಯ. ಅಭಿಷೇಕ್ ಬಚ್ಚನ್‌ಗೆ ಇಲ್ಲಿ ಫಾದರ್ ಪಾತ್ರ.
ಇದು ಇವತ್ತಷ್ಟೇ ಇಡುಗಡೆಯಾದ (ಚಿತ್ರವಲ್ಲ) ಜಾಹೀರಾತು. ಐಡಿಯಾ ಮೊಬೈಲ್‌ನದ್ದು. ಬಹುಶಃ ನನಗೆ ಗೊತ್ತಿರುವ ಮಟ್ಟಿಗೆ ಇದೇ ಮೊದಲ ಬಾರಿಗೆ ಚಲನಚಿತ್ರ ಬಿಡುಗಡೆ ಮಾಡುವಾಗ ಜಾಹೀರಾತು ಪ್ರಕಟಿಸುತ್ತಾರಲ್ಲ ಹಾಗೆ ಜಾಹೀರಾತು ಪ್ರಕಟಿಸಿದ್ದರು. ಇಂದು ರಾತ್ರಿ ೯.೩೦ಕ್ಕೆ ಬಿಡುಗಡೆ ಎಂದು ಇಲ್ಲಿನ ಪತ್ರಿಕೆಗಳಲ್ಲಿ ಪ್ರಕಟವಾಗಿತ್ತು. ಸೋಮವಾರ (೩೦-೦೬-೦೮) ರಾತ್ರಿ ಟಿವಿ ಚಾನಲ್‌ಗಳಲ್ಲಿ (ನಾನು ನೋಡಿದ್ದು ಫಿಲ್ಮಿ ಚಾನಲ್) ೧೦-೧೫ ನಿಮಿಷ ನಿರಂತರವಾಗಿ ಈ ಜಾಹೀರಾತನ್ನು ಮತ್ತೆ ಮತ್ತೆ ತೋರಿಸಲಾಯಿತು.
ರಾತ್ರಿ ಈ ಜಾಹೀರಾತು ನೋಡಿದಾಗ ಅರೆ ಹೊಸತು ಅನ್ನಿಸಿತು. ಇಷ್ಟವಾಯಿತು. ಮತ್ತೆ ಮತ್ತೆ ಅದನ್ನೇ ನೋಡುತ್ತ ನೋಡುತ್ತ ಬೆಳಗ್ಗೆ ಪತ್ರಿಕೆಯಲ್ಲಿ ನೋಡಿದ ಜಾಹೀರಾತು ನೆನಪಾಯಿತು. ಥಟ್ಟನೆ ಪತ್ರಿಕೆ ತೆಗೆದುನೋಡಿದೆ. ಹೌದು ಅದೇ ಜಾಹೀರಾತು. ವ್ಹಾಟೆ ಎನ್ ಐಡಿಯಾ ಸರ್ ಜಿ!
ಏನು ಐಡಿಯಾ ನೋಡಿ!
ನಾನು ಕಲಿತ ಪತ್ರಿಕೋದ್ಯಮ ಪದವಿಯಲ್ಲಿ ಜಾಹೀರಾತು ಒಂದು ವಿಷಯ. ಈಗಲೂ ಪತ್ರಿಕೋದ್ಯಮದಲ್ಲಿದ್ದರೂ ನನಗೆ ಜಾಹೀರಾತಿನ ಬಗ್ಗೆ ಯಾಕೋ ವಿಶೇಷ ಆಸಕ್ತಿ. ನೀವೆಲ್ಲ ರಿಮೋಟ್ ಹಿಡಿದೇ ಟಿವಿ ಮುಂದೆ ಕುಳಿತುಕೊಳ್ಳುತ್ತೀರಿ. ಜಾಹೀರಾತು ಬಂದಾಕ್ಷಣ ಚಾನಲ್ ಬದಲಿಸಲು. ಆದರೆ ನಾನು? ಚಾನಲ್ ಬದಲಿಸುವುದು ಕಡಿಮೆ. ಜಾಹೀರಾತನ್ನೂ ಕಾರ್ಯಕ್ರಮದಷ್ಟೇ ಅಥವಾ ಅದಕ್ಕಿಂತ ಹೆಚ್ಚು ಆಸಕ್ತಿಯಿಂದ ನೋಡುತ್ತೇನೆ. ನೀವೂ ಸರಿಯಾಗಿ ಗಮನಿಸಿ ನೋಡಿ ದಾರಾವಾಹಿ ಅಥವಾ ಇತರೆ ಕಾರ್ಯಕ್ರಮ ನಿರ್ಮಿಸಿರುವುದಕ್ಕಿಂತ ಹೆಚ್ಚಿನ ಬುದ್ದಿವಂತಿಕೆ ಮತ್ತು ಚಾಕಚಕ್ಯತೆಯಿಂದ ಜಾಹೀರಾತು ನಿರ್ಮಿಸಿರುತ್ತಾರೆ.
ವಿಐಪಿ ಸೂಟ್‌ಕೇಸ್ ಜಾಹೀರಾತು ನಂಗಿನ್ನೂ ನೆನಪಿದೆ. ಹಡುಗಿಯೊಟ್ಟಿಗೆ ಒಬ್ಬ ಹುಡುಗ ಕಾರಿನಲ್ಲಿ ಹೋಗುತ್ತಿರುತ್ತಾನೆ. ಕಾರು ಕೆಟ್ಟು ನಿಲ್ಲುತ್ತದೆ. ಕೊಂಚ ಹೊತ್ತಿನಲ್ಲಿ ಬಂದ ಹುಡುಗನ ಬೈಕ್ ಹತ್ತಿ ಹುಡುಗಿ ಕಾರಿನ ಹುಡುಗನಿಗೆ ಟಾಟಾ ಮಾಡುತ್ತಾಳೆ. ಅದರ ನಂತರ ಈತ ಕಾರಿನಲ್ಲಿದ್ದ ಸೂಟ್‌ಕೇಸ್ ತೆಗೆದು, ಬಂದ ಲಾರಿಗೆ ಚತ್ರಿ ಮೂಲಕ ಸಂಪರ್ಕ ಕಲ್ಪಿಸಿ, ಸೂಟ್‌ಕೇಸ್ ಮೇಲೆ ತಾನು ಕುಳಿತುಕೊಳ್ಳುತ್ತಾನೆ. ಅದು ಚಕ್ರ ಇರುವ ಸೂಟ್‌ಕೇಸ್. ಸ್ವಲ್ಪ ದೂರ ಹೋಗುವಷ್ಟರಲ್ಲಿ ಲಾರಿ ಟಾಟಾ ಮಾಡಿ ಹೋಗಿದ್ದ ಹುಡುಗಿ ಕುಳಿತಿದ್ದ ಬೈಕನ್ನು ಓವರ್‌ಟೇಕ್ ಮಾಡುತ್ತದೆ. ಈತ ಅವಳಿಗೆ ಟಾಟಾ ಮಾಡುತ್ತಾನೆ. ಅದಕ್ಕೆ ಹಿಂದಿಯ ಹಳೆಯ ಹಾಡಾದ ಸುಹಾನಾ ಸಫರ್ ಹೇ ಯೆ ಮೋಸಂ ಹಸಿ... ಹಾಡು.
ನೋಡಿ ಎಂತಹ ಅದ್ಭುತ ಕಲ್ಪನೆ. ಹಾಗಾಗಿಯೇ ಇಂದಿಗೂ ಮರೆತಿಲ್ಲ.
ಬ್ರು ಕಾಫೀಯ, ಓಟು ಕೇಳಲು ಬಂದ ರಾಜಕಾರಣಿಗೇ ಪ್ರಶ್ನೆ ಕೇಳುವ ಚಹಾದ ಜಾಹೀರಾತುಗಳು ಇಂದಿಗೂ ನೆನಪಿನಲ್ಲಿವೆ. ಆತ ಸಹಾರಾ ವಿಮೆ ಮಾಡಿಸುತ್ತಾನೆ. ನಂತರ ಸ್ಕೂಟರ್ ಹತ್ತಿ ಬೆಟ್ಟದ ಬಳಿ ಹೋಗಿ ಕುಳಿತು ಸಾಂಬಾ, ವಾಂಬಾ ಎಲ್ಲಿದ್ದೀಯಾ ಇಳಿದು ಬಾ. ನಿನ್ನಮ್ಮನ ಎದೆ ಹಾಲು ಕುಡಿದಿದ್ದರೆ ಇಳಿದು ಬಾ ಎಂದು ಸವಾಲು ಹಾಕುವ ಸಹಾರಾ ಸಂಸ್ಥೆ ಜಾಹೀರಾತೂ ತಕ್ಕಮಟ್ಟಿಗಿದೆ.

ಜಾಹೀರಾತು ವಲಯದಲ್ಲಿ ಕೆಲವರನ್ನು ಆಕರ್ಷಿಸಿದ ಮತ್ತು ಖುಶಿ ಕೊಟ್ಟಿದ್ದು ಪೆಪ್ಸಿ, ಕೋಕ್ ಸಂಸ್ಥೆಗಳ ಜಾಹೀರಾತು ಸಮರ. ಅದು ಇಂದಿಗೂ ಮುಂದುವರೆದಿದೆ. ಥಮ್ಸ್ ಅಪ್‌ಗಾಗಿ ಅಕ್ಷಯ್ ಕುಮಾರ್ ಮಂಗನಂತೆ ಎಲ್ಲೆಲ್ಲೊಂದೋ ಹಾರಿ, ಮೆಟ್ಟಿಲ ಮೇಲೆ ಜಾರಿ, ರಸ್ತೆಗಳ ನಡುವೆ ತೂರಿ ಲಾರಿಯಲ್ಲಿದ್ದ ಬಾಟಲಿ ಎಗರಿಸುತ್ತಾನೆ. (ಕುರ್‌ಕುರೆ ಜಾಹೀರಾತಿನಲ್ಲಿ ಜೂಹಿ ಹೀಗೆ ಪ್ಯಾಂಕು ಪ್ಯಾಂಕು ಎಂಬ ಮೀನು ಮಾರಾಟದ ಹಾರ್ನು ಕೇಳಿ ಯಾಹೀ ಅಂತ ಹಾರಿದ್ದೂ ನಿಮಗೆ ನೆನಪಿರಬಹುದು) ಇದೇ ಜಾಹೀರಾತು ಇರಿಸಿಕೊಂಡು ಪೆಪ್ಸಿಯವರು ಈಗ ಹೊಸ ಜಾಹೀರಾತು ಮಾಡಿದ್ದಾರೆ.
ಅಂಕಲ್ ಈ ವಯಸ್ಸಿನಲ್ಲಿ ಕೋಲ್ಡ್‌ಡ್ರಿಂಕ್ಸ್‌ಗಾಗಿ ಕಟ್ಟಡದಿಂದ ಕಟ್ಟಡಕ್ಕೆ ಹಾರಿ ಕೈಕಾಲು ಮುರಿದುಕೊಳ್ಳಬೇಡ. ಯಾಕೆಂದರೆ ವಯಸ್ಸಾದ ಮೇಲೆ ಮುರಿದ ಎಲುಬು ಕೂಡಿಕೊಳ್ಳುವುದು ಲೇಟು. ಅದನ್ನು ಪೆಪ್ಸಿ ಕುಡಿ. ಎಲ್ಲ ಕಡೆ ಸಿಗುತ್ತೆ ಎಂದು ಜಾಹೀರಾತು ಮಾಡಿ ಥಮ್ಸ್‌ಅಪ್‌ಗೆ ಟಾಂಗ್ ನೀಡಿದ್ದಾರೆ.
ಕೆಲವು ವರ್ಷದ ಹಿಂದಂತೂ ಇದು ಪರಾಕಾಷ್ಠೆಯ ತುದಿ ತಲುಪಿತ್ತು. ನೋಡುಗರಾದ ನಮಗೋ ಮಜವೊ ಮಜಾ.
ಮಾನ ಹಕ್ಕು, ನಾಯಿ ಹಕ್ಕುಗಳು ಏನೇ ಹೇಳಲಿ ನಂಗಂತೂ ಹಚ್ ಜಾಹೀರಾತು ಇಷ್ಟ. ಹಚ್ ಸಂಸ್ಥೆಯ ಗ್ರಾಹಕ ಸೇವಾ ಕೇಂದ್ರ ಯಾವಾಗಲೂ ನಿಮಗೆ ಸಹಾಯ ಮಾಡಲು ಸಿದ್ಧವಾಗಿರುತ್ತದೆ ಎಂದು ನಾಯಿಯ ಸಹಾಯದ ಮೂಲಕ ಎಷ್ಟು ಅಂದವಾಗಿ ತೋರಿಸಿದ್ದಾರೆ. ಅದನ್ನು ನೋಡಿ ಖುಶಿ ಪಡುವುದು ಬಿಟ್ಟು ಅದ್ಯಾರೋ ಕೇಸು ಹಾಕಿದ್ದಾರಂತೆ. ಅದರ ಪರಿಣಾಮ ಹಚ್ ಕಂಪನಿಯವರು ಕೆಲವು ದಿನ ಕಂಪ್ಯೂಟರ್ ನಾಯಿಯನ್ನೂ ತೋರಿಸಿ ಚಟ ತೀರಿಸಿಕೊಂಡರು. ಈಗ ಮತ್ತೆ ಜೀವಂತ ನಾಯಿಯನ್ನೇ ತೋರಿಸುತ್ತಿದ್ದಾರೆ.
ಸರಿಯಾಗಿ ಗಮನಿಸಿ ನೋಡಿ. ಜಾಹೀರಾತು ಮಾಡಲು ಭಾರೀ ಬುದ್ದಿವಂತಿಕೆ ಬೇಕು. ನಿಮ್ಮ ಕಲ್ಪನೆಗಳು ಏನೇ ಇದ್ದರೂ ೧-೨ ನಿಮಿಷದಲ್ಲಿ ಮುಗಿಸಬೇಕು. ಅದು ಗ್ರಾಹಕರ ಮನಸ್ಸಿನ ಮೇಲೆ ಪರಿಣಾಮ ಬೀರಿ, ಅವರು ಆ ವಸ್ತುವನ್ನು ಕೊಳ್ಳುವಂತಾಗಬೇಕು. ನನಗಂತೂ ಬಹುತೇಕ ಜಾಹೀರಾತುಗಳು ಅದ್ಭುತ ಅಂತಲೇ ಅನ್ನಿಸುತ್ತವೆ. ಮೊದಲಾದರೆ ಒಂದು ಜಾಹೀರಾತು ಮಾಡಿದರೆ ಕನಿಷ್ಟ ೬ ತಿಂಗಳು, ಒಂದು ವರ್ಷ ಅಥವಾ ಅದಕ್ಕಿಂತ ಹೆಚ್ಚು ಸಮಯ ನಿಭಾಯಿಸಹುದಿತ್ತು. ಆದರೆ ಈಗ ಹಾಗಿಲ್ಲ. ಒಂದೆರಡು ತಿಂಗಳು. ಅಷ್ಟಕ್ಕೆ ಅದು ಹಳೆತು. ಮತ್ತೆ ಹೊಸ ಸ್ಲೋಗನ್, ಹೊಸ ಕಲ್ಪನೆ, ಹೊಸ ಜಾಹೀರಾತು. ಒಂದೊಂದು ಸಂಸ್ಥೆಯೂ ಜಾಹೀರಾತಿನ ಮೇಲೆ ಕೋಟಿಗಟ್ಟಲೆ ದುಡ್ಡು ಚೆಲ್ಲುತ್ತಿವೆ.
ಇದರ ಪರಿಣಾಮ ಬೇಕಾದಷ್ಟು ಜಾಹೀರಾತು ಏಜೆನ್ಸಿಗಳು ಹುಟ್ಟಿಕೊಂಡಿವೆ. ಒಂದು ಸ್ಲೋಗನ್‌ಗೆ, ಒಂದು ಕಲ್ಪನೆಗೆ ಇಲ್ಲಿ ಕೋಟಿಗೂ ಮೀರಿದ ಬೆಲೆಯಿದೆ. ಇದಕ್ಕೇ ಇರಬೇಕು ನನಗೂ ಜಾಹೀರಾತಿನತ್ತ ಸೆಳೆತ!
ಹಾಗಂತ ಕೆಟ್ಟ ಜಾಹೀರಾತುಗಳೇ ಇಲ್ಲವೆಂದಲ್ಲ. ಲೇಯ್ಸ್ ಚಿಪ್ಸ್‌ನ ಬಾಯಿ ಕಳೆದು ಆ... ಎಂದರಚುವ ಹೊಸ ಜಾಹೀರಾತು ಸ್ವಲ್ಪವೂ ಚೆನ್ನಾಗಿಲ್ಲ. ಅವರ ಮುಸುಡಿಗಳನ್ನು ನೋಡಿದರೆ ಲೇಯ್ಸ್ ಬಿಡಿ ಜನ ಬೇರೆ ಯಾವ ಚಿಪ್ಸೂ ತಿನ್ನದಂತಾಗಿದೆ. ಒಳ್ಳೆಯ ಜಾಹೀರಾತುಗಳು ಇಂತಹ ಕೆಟ್ಟ ಜಾಹೀರಾತುಗಳನ್ನು ಮರೆಸಿ ಮನಸ್ಸಿಗೆ ಮುದ ನೀಡುತ್ತವೆ. ಅದೇ ಸಂತೋಷ.
(ನನಗೆ ಈ ಮೇಲ್ ಮೂಲಕ ಬಂದಿದ್ದ, ಸಂಗ್ರಹಿಸಿಟ್ಟಿದ್ದ ಕೆಲವು ಉತ್ತಮ ಜಾಹೀರಾತು ಫೋಟೋಗಳಿದ್ದವು. ಅವುಗಳನ್ನು ಈ ಲೇಖನದ ಜತೆ ಪ್ರಕಟಿಸಿದ್ದೇನೆ. ನೀವಾ ಹೇರ್ ಕ್ರೀಂ ಜಾಹೀರಾತು ನೋಡಿ,ನೀವು ಸತ್ತು ಮಣ್ಣಲ್ಲಿ ಮಣ್ಣಾದರೂ ಕೂದಲು ಹಾಗೇ ಇರುತ್ತದೆ! ಪೆಡಿಗ್ರೀ ತಿಂದರೆ ನಾಯಿ ಹೆಗ್ಗಣದಂತೆ ಟಾರ್ ರಸ್ತೆಯನ್ನೂ ಅಗೆದು ತೆಗೆಯಲ್ಲದು... ಹೀಗೆ. ನಿಮಗೆ ಇಷ್ಟವಾಗಬಹುದು ಅಂದುಕೊಂಡಿದ್ದೇನೆ)

12 comments:

Anonymous said...

ವಿವಾಯಕ,
ನಂಗೂ ನಿಮ್ಮ ಹಾಗೇನೆ ಜಾಹೀರಾತುಗಳೂ ಅಂದರೆ ಸಖತ್ ಖುಶಿ!! ಪ್ರೋಗ್ರಾಮು ನೋಡೋದಕ್ಕಿಂತ ಅವನ್ನ ನೋಡೋದು, ವನ್ನ ಕ್ರಿಟಿಸೈಜ್ ಮಾಡೋದು ಹೆಚ್ಚಿಗೆ ಮಜಾ ಕೊಡತ್ತೆ. ಅಲ್ಲ?
ಆಮೇಲೆ ನಾನು ಐಡಿಯಾದ ಜಾಹೀರಾತುಗಳನ್ನ ಬಹಳ ಎಂಜಾಯ್ ಮಾಡಿದ್ದೇನೆ. ಅದೊಂದು ಹಳೆಯದಿತ್ತಲ್ಲ, ಜನರ ಹೆಸರು, ಜಾತಿಗಳ ಬದಲು ಅವರಿಗೆ ನಂಬರು ಕೊಟ್ಟುಬಿಡೋದು - ವಾಟ್ ಅನ್ ಐಡಿಯಾ!! ಆದರೆ ಈ ಜಾಹೀರಾತು ಇದೆಯಲ್ಲ, ಇದನ್ನ ಕೊಂಚ ಅರ್ಜೆಂಟಿನಲ್ಲಿ ಮಾಡಿದ ಹಾಗಿದೆ. ಮೊದಲನೇದು, ಮೊಬೈಲ್ ಮೂಲಕ ಶಿಕ್ಷಣದ ಕಾನ್ಸೆಪ್ಟು. ಇಲ್ಲಿ ಮೊಬೈಲ್ ಬಿಲ್ಲನ್ನು ಶಾಲೆ ಭರಿಸುತ್ತದೆಯೆ? ಬೆಳಗಿನಿಂದ ಸಂಜೆಯವರೆಗೆ ಟೀಚರು ಯಾವುದೋ ಹಳ್ಳಿಯ ಮಕ್ಕಳಿಗೆ ಮೊಬೈಲು ಆನ್ ಮಾಡಿಕೊಂಡು ಪಾಠ ಮಾಡಿದರೆ, ತಿಂಗಳಿಗೆ ೨೨ ದಿನ ಅಂತಿಟ್ಟುಕೊಂಡರೂನು ಯಾಪಾಟಿ ಬಿಲ್ಲು ಬರ್ಬಹುದು? ಅದನ್ನ ಭರಿಸುವಂಥ ದೊಡ್ಡ ಹೃದಯವುಳ್ಳ ಶಾಲೆ ಇದೆಯೆ ಅನ್ನೋದು ಕೊಶ್ನೆ. ಎರಡನೇದು ಏನಪ್ಪಾ ಅಂದ್ರೆ, ಇಂಥ ಪಾಠದ ಪ್ರಾಕ್ಟಿಕಾಲಿಟಿ. ಟೀಚರನ್ನೆ ನೋಡದ ಮಕ್ಕಳು ಸರಿಯಾಗಿ ಪಾಠ ಕಲಿತಾರೆಯೆ? ಬೋರ್ಡಿನ ಮೇಲೆ, ವಿಶುಯಲುಗಳನ್ನ , ಟೀಚಿಂಗ್ ಏಯ್ಡುಗಳನ್ನ ಉಪಯೋಗಿಸಿ ಮಾಡಬೇಕಾದ ಪಾಠಗಳು ಮೊಬೈಲ್ ಮೂಲಕ ಹೇಗೆ ನಡೆದಾವು? ಐಡಿಯಾದ ಜಾಹೀರಾತು ವಿಭಾಗ ಈ ಎಲ್ಲ ವಿಷಯಗಳ ಬಗ್ಗೆ ಯೋಚನೆ ಮಾಡದೆ ಈ ಜಾಹೀರಾತನ್ನ ತೋರಿಸಿ ಹಳ್ಳಿಯ ಅಮಾಯಕ ಜನರನ್ನ ಸುಮ್ಮನೇ ಆಕರ್ಷಿಸಲಿಕ್ಕೆ ಯತ್ನಿಸುತ್ತಿದೆಯೆ?
ಜಾಹೀರಾತುಗಳು ಈಗ ಬ್ರೆ ಜಾಹೀರಾತುಗಳಾಗಿ ಉಳಿದಿಲ್ಲ. ಅವು ಈಗಿನ ಜನಜೀವನ, ಸಂಸ್ಕೃತಿಯ ಅವಿಚ್ಛಿನ್ನ ಭಾಗಗಳೂ ಕೂಡ. ಅದಕ್ಕೆ ಈ ಮಾತು.

VENU VINOD said...

ಹಾವೆಲ್ಸ್ ಇಲೆಕ್ಟ್ರಿಕಲ್ಸ್‌ನವರ ಜಾಹೀರಾತೂ ಚೆನ್ನಾಗಿದೆ. ಬಡ ಕಾರ್ಮಿಕ ವರ್ಗದ ತಾಯಿ ಒಂದು ಕೈನಲ್ಲಿ ಮಗು ಹಿಡಿದುಕೊಂಡು ಕೈಸುಟ್ಟು ಕೊಳ್ಳುತ್ತಾ ಚಪಾತಿ ಕಾಯಿಸುತ್ತಿರುತ್ತಾಳೆ. ಅದನ್ನು ನೋಡಿದ ಮತ್ತೊಬ್ಬ ಪುಟ್ಟ ಮಗ ತಂತಿಯೊಂದನ್ನು ಬಗ್ಗಿಸಿ ಇಕ್ಕಳ ಮಾಡಿ ತಾಯಿಗೆ ಕೊಡುತ್ತಾನೆ. ತಾಯಿ ನಗುತ್ತಾ ಚಪಾತಿ ಬೇಯಿಸುತ್ತಾಳೆ, ಮನಮುಟ್ಟುವ ಸಂಗೀತದೊಂದಿಗೆ ಈ ಜಾಹೀರಾತು ಮನಸೆಳೆಯುತ್ತದೆ...good write up ವಿನಾಯಕ

ವಿನಾಯಕ ಭಟ್ಟ said...

ಟಿನಾ ಅವರೆ ನಿಮ್ಮ ಮಾತಿಗೆ ನನ್ನ ಸಹಮತವಿದೆ. ಐಡಿಯಾ ಜಾಹೀರಾತಿನಲ್ಲಿ ತೋರಿಸಿದ ವಿಷಯವೆಲ್ಲ ಆಗಿಹೋಗುವ ಮಾತಲ್ಲ. ಆದರೆ ನನ್ನ ಕಾಮೆಂಟ್ ಇರುವುದು ಅಲ್ಲಿನ ಐಡಿಯಾ ಬಗ್ಗೆ ಮಾತ್ರ.ಬಿಲ್ಲು ಕಡಿಮೆ ಮಾಡಲು ಸಿಯುಜಿ ತಂತ್ರ ಬಳಸಬಹುದು. ಬಿಲ್ಲು ಬಹಳಷ್ಟೇನೂ ಬರದು. ಆದರೆ ಟೀಚರ್ ಕಲಿಸುವಷ್ಟು ಹೊತ್ತು ಮೊಬೈಲ್ ಬ್ಯಾಟರಿ ಬಾಳಬೇಕಲ್ಲ. ನಾನು ಬರೆದದ್ದು ಜಾಹೀರಾತಿನ ಐಡಿಯಾ ಬಗ್ಗೆ ಮಾತ್ರ.


ಹಾಯ್ ವೇಣು. ನೀನು ಬರೆದ ಮೇಲೆ ನೆನಪಾಯಿತು ನೋಡು ಆ ಜಾಹೀರಾತು. ಆರಂಭದಲ್ಲಿ ನೀನು ಹೇಳಿದ ಜಾಹೀರಾತು ನೋಡಿದಾಗ ಯಾಕೋ ಕಣ್ಣಲ್ಲಿ ನೀರೂರಿತ್ತು. ಆದರೆ ಲೇಖನ ಬರೆಯುವಾಗ ಮಾತ್ರ ನೆನಪಿಗೆ ಬರಲಿಲ್ಲ. ನೆನಪಿಸಿದ್ದಕ್ಕೆ ಥ್ಯಾಂಕ್ಸ್.

Anonymous said...

ವಿನಾಯಕ,
ನಾನು ಕೂಡ ಜಾಹೀರಾತಿನ ಐಡಿಯಾದ ಬಗ್ಗೇನೆ ಮಾತಾಡ್ತಾ ಇರೋದು!! ಹೊರನೋಟಕ್ಕೆ ಈ ಜಾಹೀರಾತಿನ ಐಡಿಯಾ ನಮ್ಮ ಎಮೋಶನ್ನುಗಳಿಗೆ ಅಪೀಲಿಂಗ್ ಅನ್ನಿಸಿದರೂನು ಅದರ ಪ್ರಾಕ್ಟಿಕಲ್ ಪಾಸಿಬಿಲಿಟಿಗಳ ಬಗ್ಗೆ ಸರಿಯಾಗಿ ಯೋಚನೆ ಮಾಡಲಾಗಿಲ್ಲ ಅಂತ. ಜಾಹೀರಾತುಗಳ ಹಿಂದಿನ ಐಡಿಯಾಗಳಿಗು, ಎಸ್ಪೆಶಲಿ ಅವು ಪಬ್ಲಿಕ್ ಸರ್ವಿಸಿಗೆ ಸಂಬಂಧಪಟ್ಟವಾಗಿದ್ದರೆ, ಅವುಗಳಿಂದ ಜನರು ಪ್ರಭಾವಿತರಾಗುವ ಸಾಧ್ಯತೆಗಳನ್ನು ಕೂಡ ಆಲೋಚಿಸಬೇಕಲ್ಲ!! ಚಿಪ್ಸು, ಕನ್ನಡಕ ಮುಂತಾದವಕ್ಕೆ ಎಂತಹ ಜಾಹೀರಾತುಗಳೂ ಓಕೆ. ಆದರೆ ಒಂದು ಜಾಹೀರಾತಿನಲ್ಲಿ ಹಳ್ಳಿಯ ಮಕ್ಕಳ ಶಿಕ್ಷಣದ ಐಡಿಯಾ ತೂರಿಕೊಂಡಾಗ ತಾವು ಏನು ಮಾಡುತ್ತ ಇದೇವೆ ಅನ್ನೋ ಐಡಿಯಾ ಕೂಡ ಕಂಪನಿಗೆ ಇದ್ದರೆ ಒಳ್ಳೇದು ಅನ್ನಿಸ್ತು ನಂಗೆ.
-ಟೀನಾ

ವಿನಾಯಕ ಭಟ್ಟ said...

ಅದು ಸರಿ. ಆದರೆ ಇದೊಂದು ಖಾಸಗಿ ಕಂಪನಿ ಜಾಹೀರಾತು. ಅದನ್ನು ತುಂಬ ಗಂಭೀರವಾಗಿ ಪರಿಗಣಿಸಬೇಕಾಗಿಲ್ಲ ಎಂಬುದು ನನ್ನ ಭಾವನೆ. ಅದೇ ಸರಕಾರ ಇಂತಹ ಜಾಹೀರಾತು ಮಾಡಿದರೆ ನಾವು ವಿಚಾರ ಮಾಡಬೇಕಾಗುತ್ತದೆ.
ಒಂದು ವಿಮ್ ಹನಿಯಿಂದ ಸಾವಿರಾರು ಪಾತ್ರೆ ತೊಳೆಯಬಹುದು ಎಂಬಷ್ಟು ಈ ಜಾಹೀರಾತು ಜನರ ದಾರಿ ತಪ್ಪಿಸುವುದಿಲ್ಲ ಅಂತ ನನಗೆ ಅನಿಸುತ್ತದೆ. ಇಡೀ ಊರಿನ ಮಕ್ಕಳಿಗೆ ಕಲಿಸಬಹುದು ಎಂಬ ಕಾರಣಕ್ಕೆ ಯಾರೂ ಮೊಬೈಲ್ ಕೊಳ್ಳಲಾರರು. ನೆಟ್ ವರ್ಕ್, ಆಫರ್ ಚೆನ್ನಾಗಿದ್ದರೆ ಕೊಳ್ಳುತ್ತಾರೆ. ಅಲ್ವಾ?
ಜಾಹೀರಾತು ಮಾಡಿದ ರೀತಿ, ಅದರ ಹಿನ್ನೆಲೆ ಸಂಗೀತ, ಪಿಕ್ಚರೈಸೇಶನ್ ಗಳೆಲ್ಲ ತುಂಬ ಚೆನ್ನಾಗಿವೆ.

ನಾವಡ said...

ಲೇಖನ ಚೆನ್ನಾಗಿದೆ. ವೇಣು ಹೇಳಿದ್ದೂ ಸಹ, ಆ ಜಾಹೀರಾತು ಆಪ್ತ ಎನಿಸುತ್ತದೆ. ಜತೆಗೆ ಏರ್ ಟೆಲ್ ನ "ಕಮ್ಯುನಿಕೇಷನ್ ನೋ ಬ್ಯಾರಿಯರ್ಸ್' ಜಾಹೀರಾತ ಸಹ.
ನಾವಡ

Unknown said...

ವಿನಾಯಕರೆ,
ಬರಹ ಚನ್ನಾಗಿ ಬ೦ದಿದೆ. ಮೊದಲೆಲ್ಲ ಜಾಹಿರಾತುಗಳು emotional aspectಗಳನ್ನು ಬ೦ಡವಾಳ ಮಾಡಿಕೊ೦ಡಿದ್ದರೆ, ಈಗ creativityಗೇ ಒತ್ತು ಜಾಸ್ತಿ ಅ೦ತ ನನ್ನ ಅನಿಸಿಕೆ.

~ಹರ್ಷ

ವಿನಾಯಕ ಭಟ್ಟ said...

ಪ್ರತಿಕ್ರಿಯೆಗೆ ಧನ್ಯವಾದ. ನಿಮ್ಮ ಸ್ಪಂದನ ನನ್ನ ಬರವಣಿಗೆಗೆ ಇಂಧನ. ನೀವು ಸ್ಪಂದಿಸುತ್ತೀರೆಂಬ ನಿರೀಕ್ಷೆ ನನ್ನನ್ನು ಬರೆಯಲು ಕರೆಯುತ್ತದೆ. ಬಹಳ ದಿನ ಬರೆಯದೇ ಇರುವಂತೆ ತಡೆಯುತ್ತದೆ.
ಆದ್ದರಿಂದ ಸ್ಪಂದಿಸುತ್ತಿರಿ, ನನಗೆ ಇಂಧನ ತುಂಬಿಸುತ್ತಿರಿ...

ಯಜ್ಞೇಶ್ (yajnesh) said...

ವಿನಾಯಕ ಭಟ್ಟರೇ,

ಉತ್ತಮ ಬರಹ.

ಈಗಿನ ಕಾಲದಲ್ಲಿ ಜಾಹೀರಾತು ಎನ್ನುವುದು ಮನುಷ್ಯನ ಅವಿಭಾಜ್ಯ ಅಂಗವಾಗಿದೆ. ಉತ್ತಮ ಜಾಹೀರತಿರುವ ಯಾವುದೇ ವಸ್ತು ಬೆಲೆ ಜಾಸ್ತಿಯಿದ್ದರೂ ಸೇಲಾಗತ್ತೆ. ಅದೇ ಜಾಹೀರಾತಿಲ್ಲದ ವಸ್ತು ಸೇಲ್ ಆಗೋದು ಬಹಳ ಕಷ್ಟ.

ಉತ್ತಮ ಜಾಹೀರಾತಿನ ಸಾಲಲ್ಲಿ "ಫೆವಿಕಾಲ್ ಮತ್ತು ಫೆವಿಕ್ರಿಲ್ " ಬರುತ್ತದೆ.ಇದರ ಎಲ್ಲ ಜಾಹೀರಾತುಗಳು ಜನರ ಮನಸ್ಸಲ್ಲಿ ನೆಲೆ ನಿಲ್ಲತ್ತೆ. ಸುಮ್ಮನೆ ಯಾವುದೋ ನಟಿ/ನಟರನ್ನು ತೋರಿಸೋ ಬಿ.ಎಸ್.ಎನ್.ಎಲ್ ನವರು ಇದನ್ನೆಲ್ಲಾ ಗಮನಿಸಬಹುದು.

ಉತ್ತಮವಲ್ಲದ ಜಾಹೀರಾತಿನಲ್ಲಿ ಸರ್ಕಾರಿ ಸೌಮ್ಯದ ಜಾಹೀರಾತುಗಳು ಜಾಸ್ತಿಯೆನ್ನಬಹುದು.

ಸಂದೀಪ್ ಕಾಮತ್ said...

ನನಗೂ ತುಂಬಾ ಇಷ್ಟ ಜಾಹೀರಾತುಗಳಂದ್ರೆ!!
ನಾವು ಚಿಕ್ಕಂದಿನಲ್ಲಿ ನೋಡುತ್ತಿದ್ದ ಜಾಹೀರಾತುಗಳಿಗೂ ಈಗ ಬರುತ್ತಿರೋದಕ್ಕೂ ಅಜಗಜಾಂತರ ವ್ಯತ್ಯಾಸ! ಅಲ್ವೆ??
ಈಗಿಗ ಜಾಹೀರಾತು ಮಾಡೋರು ತುಂಬಾ ಕ್ರಿಯಾಶೀಲರಾಗಿದ್ದಾರೆ.
ಇನ್ನೊಂದು ವಿಷಯ ಅಂದ್ರೆ ಅವರ ಉದ್ದೇಶ ಕೇವಲ ಸುದ್ದಿಯಲ್ಲಿರೋದು .ಅವರು ನಮ್ಮ product ಕೊಳ್ಳಿ ಅನ್ನೋದೆ ಇಲ್ಲ. ಕೇವಲ ಅವರ ಕಂಪೆನಿ ಹೆಸರು ಆಗಾಗ T.V ನಲ್ಲಿ ಬರ್ತಾ ಇರ್ಬೇಕು ಅಷ್ಟೇ!!
ಫೆವಿಕೋಲ್ ಜಾಹೀರಾತಲ್ಲಿ ಒಂದು ಅವಿಭಕ್ತ ಕುಟುಂಬವನ್ನು ತೋರಿಸ್ತಾರೆ;ಜಾಹೀರಾತಿನ ಕೊನೆಗಷ್ಟೇ ಒಂದು ಫೆವಿಕೋಲ್ ಡಬ್ಬಾ ತೋರಿಸ್ತಾರೆ.ಆದ್ರೆಎಲ್ಲೂ ಅವರು ಫೆವಿಕೋಲ್ ಕೊಳ್ಳಿ ಅನ್ನೋದೆ ಇಲ್ಲ.
ಮಾರ್ಕೆಟಿಂಗ್ concept ತುಂಬಾನೆ ಬದಲಾಗಿದೆ.
ವಾಷಿಂಗ್ ಪೌಡರ್ ನಿರ್ಮಾ ಅಂತ ಮೂರು ಹುಡುಗಿಯರು ಕುಣಿಯೋ ಜಾಹೀರಾತು ವರ್ಷಾನುಗಟ್ಟಲೆ ನೋಡಿ ನೋಡಿ ಬೇಜಾರಾಗಿತ್ತು.
ಈಗ ಒಳ್ಳೇ ಟೈಂ ಪಾಸ್!

ವಿನಾಯಕ ಭಟ್ಟ said...

ಜಾಹೀರಾತಿನ ಕುರಿತ ನನ್ನೀ ಲೇಖನ ಯಾವ ಜಾಹೀರಾತೂ ಇಲ್ಲದೆ ನಿಮ್ಮನ್ನೆಲ್ಲ ಸೆಳೆದಿದೆ. ಬಹುಶಃ ನನ್ನ ಬ್ಲಾಗು ಬರವಣಿಗೆಗಳಲ್ಲಿ ಅತ್ಯಂತ ಹೆಚ್ಚು ಪ್ರತಿಕ್ರಿಯೆ ಗಳಿಸಿದ್ದು ಈ ಲೇಖನ. ಅದರ ಕೀರ್ತಿ ಸಲ್ಲಬೇಕಾದ್ದು ನಿಮಗೆ.
ಥ್ಯಾಂಕ್ಯು.

sunaath said...

ತುಂಬಾ ಸ್ವಾರಸ್ಯಕರ ಲೇಖನ.MS cigarettes ಕಂಪನಿಯು
ಆಧುನಿಕ ಯುವತಿಯರು ಸಿಗಾರೆಟ್ ಸೇದುತ್ತಾರೆ ಎನ್ನುವ imageಅನ್ನು ಬಿಂಬಿಸಿ, ತನ್ನನ್ನು ಪ್ರಮೋಟ್ ಮಾಡಿಕೊಳ್ಳಲು ಪ್ರಯತ್ನಿಸಿತ್ತು. ಆದರೆ ಅದು ಸಾಧ್ಯವಾಗಲಿಲ್ಲ.
(ಸಿಗರೇಟ್ ಸೇದುವ ಹುಡುಗಿಯರು MSಗೆ switch ಮಾಡಲಿಲ್ಲ.)