Saturday, June 07, 2008

ಮಂಜುನಾಥ ಕಲ್ಮನಿಯಿಂದ ಕಲಿಯಬೇಕಾದ್ದು...

ಆತ ಸಾಫ್ಟ್‌ವೇರ್ ಎಂಜಿನಿಯರ್. ಹಣ, ಉತ್ತಮ ಜೀವನ ಹುಡುಕಿ ಅಮೆರಿಕಕ್ಕೆ ಹೋಗಿದ್ದ. ವೆದರ್ ಡಾಟ್ ಕಾಂನಲ್ಲಿ ಕೆಲಸ ಮಾಡಲು. ತಂದೆ- ತಾಯಿ, ಊರು, ರಾಜ್ಯ ಎಲ್ಲದರಿಂದ ದೂರವಾಗಿ, ಹಣಕ್ಕೆ ಹತ್ತಿರವಾಗಲು ಹೊರಟ. ಡಾಟ್ ಕಾಂ ಮುಚ್ಚಿತು. ಬದುಕುಮಗುಚಿತು. ಜೀವನದ ಆಸೆಗೆ ಕಾಮಾ (ಅಲ್ಪವಿರಾಮ) ಬಿತ್ತು. ಅದೇ ಟೆನ್ಶನ್‌ನಲ್ಲಿ ಕಾರು ಓಡಿಸುವಾಗ ಅದು ರಸ್ತೆ ಬದಿ ಮರಕ್ಕೆ ಗುದ್ದಿತು. ಕುತ್ತಿಗೆಗಿಂತ ಕೆಳಗೆ ದೇಹ ನಿಯಂತ್ರಣ ಕಳೆದುಕೊಂಡಿತು. ಹಾಗೇ ಆರು ವರ್ಷ ಅಮೆರಿಕದಲ್ಲಿ ಜೀವಚ್ಛವಾಗಿದ್ದ ಮಂಜುನಾಥ ಕಲ್ಮನಿ. ಮನೆಯವರು ಒಬ್ಬರೂ ಹೋಗಲಿಲ್ಲ. ಯಾಕೆಂದರೆ ಮಂಜುನಾಥ ಕಲ್ಮನಿ ಅಮೆರಿಕಕ್ಕೆ ಹೋದ ನಂತರ ಮನೆಯವರ ಸಂಪರ್ಕವನ್ನೇ ಹೆಚ್ಚುಕಡಿಮೆ ಕಳೆದುಕೊಂಡಿದ್ದ.
ದುಡ್ಡು ಆ ಮಟ್ಟಕ್ಕೆ ಮುಟ್ಟಿಸಿತ್ತು.
ಅವನ ನಸೀಬು ಚೆನ್ನಾಗಿತ್ತು. ೨೦೦೮ರಲ್ಲಿ ವೀಸಾ ಅವಧಿ ಮುಗಿಯಿತು. ಅದೇ ಕಾರಣಕ್ಕೆ ಅಮೆರಿಕ ಆಂಬುಲೆನ್ಸ್ ವಿಮಾನದಲ್ಲಿ ಮಂಜುನಾಥ ಕಲ್ಮನಿಯನ್ನು ಹೊತ್ತುಕೊಂಡು ಬಂದು ದಿಲ್ಲಿಯಲ್ಲಿ ಇಳಿಸಿಹೋಯಿತು. ಅವತ್ತಿನಿಂದ ದಿಲ್ಲಿಯ ಸಫ್ತರ್‌ಜಂಗ್ ಆಸ್ಪತ್ರೆ ಮಂಜುನಾಥ ಕಲ್ಮನಿಯ ಮನೆಯಾಯಿತು. ಮಗ ಏನೇ ಮಾಡಿರಲಿ, ಹೆತ್ತ ಕರುಳು ಕೇಳಬೇಕಲ್ಲ. ಮನೆಯವರು ಮಂಜುನಾಥ ಕಲ್ಮನಿ ನೋಡಲು ಆರಂಭದಲ್ಲಿ ಹಿಂಜರಿದರೂ, ತಾಯಿ ಕಣ್ಣೀರು ಹಾಕುತ್ತ ದಿಲ್ಲಿಗೆ ಆಗಮಿಸಿದಳು. ೮ ವರ್ಷದ ನಂತರ ಮಗನನ್ನು ನೋಡಿದಳು. ೩ ತಿಂಗಳು ಮಗನ ಆರೈಕೆ ಮಾಡಿದರು. ಕೊನೆಗೂ ಮಂಜುನಾಥ ಕಲ್ಮನಿ ಮೇ ೪ರಂದು ಕೊನೆಯುಸಿರೆಳೆದ.
ಇದು ಕರಳು ಹಿಂಡುವ ಕತೆ. ನಾಗತಿಹಳ್ಳಿ ಯಂಥವರು ಈಕತೆಯನ್ನು ಅಮೆರಿಕಾ ಅಮೆರಿಕಾ ಭಾಗ ೧ ಸಿನಿಮಾ ಮಾಡಬಹುದು.
ಇದರಲ್ಲಿ ಒಂದು ವಿಷಯವಿದೆ. ಹೆಚ್ಚಿನ ಮಾಧ್ಯಮಗಳಲ್ಲಿ ಮಂಜುನಾಥ ಕಲ್ಮನಿ ಪರ ವರದಿ ಪ್ರಕಟವಾದವು. ಆತನನ್ನು ಮನೆ ತಲುಪಿಸಲು ಸರಕಾರ ಜವಾಬ್ದಾರಿ ವಹಿಸಬೇಕು ಎಂಬರ್ಥದ ವರದಿಗಳೂ ಬಂದವು.
ಯಾಕೆ? ಯಾಕೆ? ಮಂಜುನಾಥ ಕಲ್ಮನಿ ದೇಶಕ್ಕಾಗಿ ಹೋರಾಡಲು ಅಮೆರಿಕಕ್ಕೆ ತೆರಳಿದ್ದ ಯೋಧನೆ? ಅಮೆರಿಕದಿಂದ ಕೆಲವು ಮಾಹಿತಿಗಳನ್ನು ದೇಶಕ್ಕೆ ಒದಗಿಸುತ್ತಿದ್ದ ಗುಪ್ತಚರನೇ? ದೇಶಕ್ಕೆ, ರಾಜ್ಯಕ್ಕೆ ಹೆಸರು ತಂದ ವ್ಯಕ್ತಿಯೆ? ದೇಶ, ರಾಜ್ಯ ಬಿಡಿ ಮನೆಯವರಿಗಾಗಿ ಏನಾದರೂ ತ್ಯಾಗ ಮಾಡಿದವನೇ? ಊಹುಂ. ಆತ ಉದ್ಯೋಗ ಅರಸಿ ಹೋದ ಒಬ್ಬ ವ್ಯಕ್ತಿ ಅಷ್ಟೆ. ಅದೂ ಮನೆಯವರಿಂದ ದೂರವಾಗಿ! ಮಾನವೀಯ ನೆಲೆಯಲ್ಲಿ ಸರಕಾರ ಸಹಾಯ ಮಾಡಬಹುದೇ ಹೊರತು, ಕರ್ತವ್ಯದ ನೆಲೆಯಲ್ಲಲ್ಲ. ಆ ನೆಲೆಯಲ್ಲಿ ಸರಕಾರ ಸಾಕಷ್ಟು ಮಾಡಿತು.
ಆದರೂ ಅವರ ಮನೆಯವರಿಗೆ ಅದು ಸಾಕಾಗಿಲ್ಲ. ಸರಕಾರ ಅಷ್ಟು ವೆಚ್ಚ ಮಾಡಿ ಆತನನ್ನು ವಿಮಾನದಲ್ಲಿ ಊರಿಗೆ ತಲುಪಿಸಬೇಕಿತ್ತು. ಮನೆಯವರಿಗೆ ಪರಿಹಾರ ಸಿಗಬೇಕಿತ್ತು ಎಂಬೆಲ್ಲ ಭಾವನೆ ಇದ್ದಂತಿದೆ.
ನಮ್ಮದೇ ರಾಜ್ಯದಲ್ಲಿ ಎಷ್ಟು ಮಂದಿ ಬಡವರಿದ್ದಾರೆ. ಅನಾರೋಗ್ಯಕ್ಕೆ ಚಿಕಿತ್ಸೆ ಪಡೆಯಲಾಗದೆ ನರಳುತ್ತಿದ್ದಾರೆ. ಸರಕಾರ ಅವರಿಗೆಲ್ಲ ದಿಲ್ಲಿಯ ಸಫ್ತರ್‌ಜಂಗ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸುತ್ತದೆಯೇ? ಇಲ್ಲ. ಆದರೂ ಮಂಜುನಾಥ ಕಲ್ಮನಿಗೆ ಕೊಡಿಸಿತು. ಎಷ್ಟು ಜನ ಔಷಧಿಗೆ ದುಡ್ಡಿಲ್ಲದೆ ಪರದಾಡುತ್ತಿದ್ದಾರೆ. ಅವರಿಗೆಲ್ಲ ಸರಕಾರ ಸಹಾಯ ಮಾಡಲು ಸಾಧ್ಯವಾಗುತ್ತಿಲ್ಲ. ಹಾಗಿರುವಾಗ ಮಂಜುನಾಥ ಕಲ್ಮನಿಗೆ ಸರಕಾರ ಅದನ್ನೆಲ್ಲ ಮಾಡಬೇಕು ಎಂದು ಮಾಧ್ಯಮದವರು ಬಯಸುವುದೇಕೆ? ತಪ್ಪಲ್ಲವೇ?
ನಾವು ಪತ್ರಕರ್ತರು ಇನ್ನು ಮುಂದಾದರೂ ವರದಿ, ವಿಶೇಷ ವರದಿಯ ಕೊನೆಯಲ್ಲಿ ಇನ್ನು ಮುಂದಾದರೂ ಸರಕಾರ ಇದರ ಬಗ್ಗೆ ಗಮನ ಹರಿಸಬೇಕು ಎಂದು ಬರೆಯುವುದನ್ನು ನಿಲ್ಲಿಸಬೇಕು. ಇದು ನನ್ನ ಮನವಿ. ನಿಜವಾಗಿಯೂ ಸರಕಾರ ಗಮನ ಹರಿಸುವ್ ಅಗತ್ಯವಿದ್ದಲ್ಲಿ ಜಾಡಿಸಿ ಬರೆಯಿರಿ ಬೇಡ ಅನ್ನುವವರಾರು...

7 comments:

ಅಮರ said...

ಮಂಜುನಾಥ ಕಲ್ಮನಿಯ ಬಗ್ಗೆ ಇಂಗ್ಲೀಷ್ ಪತ್ರಿಕೆಯಲ್ಲಿ ಓದಿದ ನೆನಪು, ಅದರಲ್ಲಿ ನೀವು ಪ್ರಸ್ಥಾಪಿಸಿದ ಧಾಟಿಯಲ್ಲೆ ಬರೆದಿದ್ದರು. ಒಮ್ಮೊಮ್ಮೆ ಈ ತರಹದ ಬರಹಗಳು ವಾಸ್ತವಕ್ಕಿಂತ ತುಂಬಾ ದೂರ ಇರುತ್ತವೆ, ಆಗ ಖಂಡಿತ ಸಾಮಾನ್ಯ ಓದುಗ ಗೊಂದಲಕ್ಕೆ ಒಳಗಾಗುತ್ತಾನೆ. ನಿಮ್ಮ ದೃಷ್ಟಿಕೊನವನ್ನ ನಾನು ಒಪ್ಪುವೆ.
-ಅಮರ

ವಿನಾಯಕ ಭಟ್ಟ said...

Thank you...

ರಾಧಾಕೃಷ್ಣ ಆನೆಗುಂಡಿ. said...

ಖಂಡಿತಾ ನಿನ್ನ ಮಾತುಗಳಿಗೆ ನನ್ನ ಸಹಮತವಿದೆ. ಮಾಧ್ಯಮವೇ ಹೀಗೆ ಅನ್ನಿಸುತ್ತದೆ. ಹಿಂದೆ ಮಂಗಳೂರಿನಲ್ಲಿ ಕಿರಣ್ ಪಾರ್ದನದ ಬಗ್ಗೆ story ಮಾಡಿದಾಗ ಹೈದರಬಾದ್ ಮಂದಿ ಪಾರ್ದನದ ಉಳಿವಿಗೆ ಸರ್ಕಾರ ಕ್ರಮ ಕೈಗೊಳ್ಳಬೇಕು ಎಂದು ಕೈಯಾಡಿಸಿದ್ದರು. ಹೀಗೆ ಅಜ್ಜ ನೆಟ್ಟ ಆಲದ ಮರಕ್ಕೆ ಜೋತು ಬಿದ್ದಿದ್ದೆವೆ. ಬದಲಾವಣಿಯಾಗಲಿ ಎನ್ನುವುದಷ್ಟೆ ಆಶಯ.

ಕಚೇರಿಯಲ್ಲಿ ಮಾತನಾಡುತ್ತಿರುತ್ತೇವೆ.
ಕಾದು ನೋಡಬೇಕು,ಭವಿಷ್ಯವೇ ನಿರ್ಧರಿಸಲಿದೆ.ಸರ್ಕಾರ ಕ್ರಮ ಕೈಗೊಳ್ಳಬೇಕು...... ಹೀಗೆ ಹನವು ಪದಗಳನ್ನು ಮಾಧ್ಯಮದಲ್ಲಿ ನಿಷೇಧಿಸಬೇಕು ಎಂದು.

ಅಂದ ಹಾಗೆ ದೆಹಲಿ ಹೇಗಿದೆ.ತಮ್ಮ ದೂರವಾಣಿ ಸಂಖ್ಯೆ ಸಿಕ್ಕರೆ ಚೆನ್ನಾಗಿತ್ತು.

೯೯೭೨೫೭೦೦೦೮

ವಿ.ರಾ.ಹೆ. said...

ನಮ್ಮ ಕೆಲ ಮಾಧ್ಯಮಗಳೇ ಹಾಗೆ. ಅವರಿಗೆ ಸಾಫ್ಟ್ ವೇರು, ಕಾಲ್ ಸೆಂಟರು, ಅಮೆರಿಕಾ ಸುದ್ದಿಗಳದ್ದೇ ಜಾಸ್ತಿ ತೂಕ !

ವಿನಾಯಕ ಭಟ್ಟ said...

ನಾವು ಅದಲಾಗದೆ ಬೇರೆಯವರನ್ನು ಬದಲು ಮಾಡಲು ಸಾಧ್ಯವಿಲ್ಲ. ಆದ್ದರಿಂದ ನಮ್ಮ ಮಿತಿಯಲ್ಲಿ ನಾವು ಬದಲಾಗಹುದು. ಎಲ್ಲೆಡೆ ಮಾಧ್ಯಮ,ಅವರ ವರ್ತನೆ ಚರ್ಚೆಗೆ,ಟೀಗೆ ಗುರಿಯಾಗುತ್ತಿದೆ. ಇದರಿಂದಾಗಿ ಮಾಧ್ಯಮದ ಮತ್ತು ಅದರ ಪ್ರತಿನಿಧಿಗಳ ಮೇಲಿದ್ದ ಗೌರವ ಕಡಿಮೆಯಾಗುತ್ತಿದೆ. ನಿಮ್ಮ ಅಭಿಪ್ರಾಯಕ್ಕೆ ನನ್ನ ಸಂಪೂರ್ಣ ಬೆಂಬಲವಿದೆ.

Anonymous said...

ಮಾಧ್ಯಮಗಳ ಅತಿರೇಕಕ್ಕೆ ಇದೊಂದು ಒಳ್ಳೆಯ ಉದಾಹರಣೆ. ಡಾ| ಹನೀಫ್ ಇನ್ನೊಂದು. ಮಂಜುನಾಥ್ ಕಲ್ಮನಿ ಯಾವುದಾದರೂ ಬೇರೆ ಧರ್ಮದವನಾಗಿದ್ದರೆ ರಾಜಕೀಯದ ಬಣ್ಣದಿಂದ ಇನ್ನೂ ಹೆಚ್ಚಿನ Media hype ಕಾಣಬಹುದಾಗಿತ್ತು.

Anonymous said...

ninna dantavuu vakra buddiyuu vakra !!!
sindhu