Sunday, March 09, 2008

ಅಂಚಿ, ಇಂಚಿ ಎಲ್ಲಿ ಹೋದರೂ ಬೇಕು ಸಂಚಿ!

ಸಂಚಿ! ಅಲಿಯಾಸ್ ಚಂಚಿ!! ಯಾನೆ ಕವಳ್ಚಂಚಿ!!!
ಉತ್ತರ ಕನ್ನಡದವರಿಗೆ ಈ ಶಬ್ದ ಚಿರಪರಿಚಿತ. ಕವಳ ಸಂಚಿ ಎಂಬುದು ಉತ್ತರ ಕನ್ನಡದ ಕರಾವಳಿಯಲ್ಲಿರುವ ಹಾಲಕ್ಕಿ ಜನಾಂಗದವರ ದೇಹದ್ದೇ ಒಂದು ಅವಿಭಾಜ್ಯ ಅಂಗ!
ಅಂಗಿ ಇಲ್ಲದಿದ್ದರೂ ನಡೆದೀತು. ಸಂಚಿ ಇಲ್ಲದೇ ಸಾಧ್ಯವಿಲ್ಲ. ಮುಂಡು ಹರಿದಿದ್ದರೂ ಆದೀತು. ಸಂಚಿ ಸರಿಯಾಗಿ ಇರಬೇಕು. ಅಂಚಿ(ಅಲ್ಲಿ), ಇಂಚಿ (ಇಲ್ಲಿ) ಎಲ್ಲೇ ಹೋದರೂ ಅವರ ಸೊಂಟಕ್ಕೆ ಸಂಚಿ ಇರಲೇಬೇಕು. ಪ್ಯಾಂಟು ಹೊಲಿದು, ಉಳಿದ ಬಟ್ಟೆಯಿಂದ ಸಂಚಿ ಮಾಡುವುದು ಹೆಚ್ಚು ಜನಪ್ರಿಯ.
ಇದರಲ್ಲಿ ಒಂದು ಸುಣ್ಣದ ಡಬ್ಬ. ಒಂದಷ್ಟು ವೀಳ್ಯದೆಲೆ. ೩-೪ ಅಡಕೆ. ೧ ತಂಬಾಕಿನ ಎಸಳು. ಇವಿಷ್ಟು ಇರಲೇಬೇಕು. ಇಲ್ಲದಿದ್ದರೆ ಸಂಚಿಗೆ ಮರ್ಯಾದೆಯಿಲ್ಲ. ಬೆಲೆಯೂ ಇಲ್ಲ.
ಇತ್ತೀಚೆಗೆ ಊರಿಗೆ ಹೋಗುವಾಗ ರೈಲಿನಲ್ಲಿ ಕಿಟಕಿಯ ಹೊರಗೆ ಕಣ್ಣು ನೆಟ್ಟು ಕುಳಿತಿದ್ದಾಗ ಹೊನ್ನಾವರ ಸಮೀಪ ಒಬ್ಬ ಸಂಚಿ ಹಿಡಿದು ಹೋಗುವುದು ಕಾಣಿಸಿತು. ಪಕ್ಕದಲ್ಲಿದ್ದ ಹೆಂಡತಿಗೆ ಸಂಚಿಯ ಕುರಿತು ಹೇಳಿದೆ. ಆಕೆ ಕನ್ನಡ ಎಂ.ಎ. ಹಾಗಾಗಿ ಸಂಚಿ ಎಂದ ಕೂಡಲೆ ಆಕೆಗೆ ಸಂಚಿ ಹೊನ್ನಮ್ಮ ನೆನಪಾದಳು.
ನೋಡಿ ಎಲ್ಲಿಂದೆಲ್ಲಿಯ ಸಂಬಂಧ!
ಎಲ್ಲಿಯ ಹಾಲಕ್ಕಿ ಜನಾಂಗದವರ ಕವಳ ಸಂಚಿ, ಎಲ್ಲಿ ‘ಹದಿಬದೆಯ ಧರ್ಮ’ ಬರೆದ ಸಂಚಿ ಹೊನ್ನಮ್ಮ!
ಸಂಬಂಧ ಇದೆ! ಅದು ಸಂಚಿಯದ್ದು. ರಾಜ ಮಹಾರಾಜರೂ ಕವಳ ಹಾಕುತ್ತಿದ್ದರು. ಥೂ! ಅಲ್ಲ ವೀಳ್ಯ ಹಾಕುತ್ತಿದ್ದರು. ಅದಕ್ಕೆ ಅಗತ್ಯ ಪರಿಕರಗಳು ಸಂಚಿಯಲ್ಲಿ ಇರುತ್ತಿದ್ದವು. ಅದನ್ನು ಹಿಡಿದುಕೊಳ್ಳಲು ಒಬ್ಬ ಆಳು ಬೇಕಲ್ಲ. ಆ ಕೆಲಸಕ್ಕೆ ಹೊನ್ನಮ್ಮ ಇದ್ದಳಂತೆ!
ಉತ್ತರ ಕನ್ನಡದ ಕರಾವಳಿಯಲ್ಲಿ ಸಂಚಿ ಚಂಚಿಯಾಗಿದೆ. ನನ್ನ ಅಮ್ಮ ಪ್ರಾಥಮಿಕ ಶಾಲೆ ಶಿಕ್ಷಕಿಯಾಗಿ ಸೇರುವ ಮೊದಲು ಮನೆಯಲ್ಲೇ ಹೊಲಿಗೆ ಮಾಡುತ್ತಿದ್ದಳು. ಆಗೆಲ್ಲ ಆಳುಗಳದ್ದು (ಕೆಲಸಕ್ಕೆ ಬರುವವರದ್ದು) ಒಂದೇ ವರಾತ. ಅಬ್ಬೇರೆ (ಹೆಂಗಸರನ್ನು ಕೆಲಸದವರು ಕರೆಯುವುದೇ ಹೀಗೆ. ಗಂಡಸರು ಅಥವಾ ಮನೆಯ ಯಜಮಾನರನ್ನು ವಡಿದೀರು ಎಂದು ಕರೆಯುವುದು ರೂಢಿ) ಒಂದು ಚೆಂಚಿ ಹೊಲ್ಕೊಡ್ರಾ! ಅಬ್ಬೇರು ಹೊಲಿದು ಕೊಡುವ ಒಂದು ಚೆಂಚಿಗಾಗಿ ಅವರು ಯಾವ ಕೆಲಸ ಮಾಡಲೂ ಸಿದ್ಧರಿದ್ದರು. ಹೊಸ ಚೆಂಚಿ ಅವರ ಮುಖದಲ್ಲಿ ಅಪ್ಪ ಚಾಕಲೇಟು ತಂದಾಗ ಮಕ್ಕಳ ಮುಖದಲ್ಲಿ ಉಂಟಾಗುವಷ್ಟು ಸಂತಸ ಮೂಡಿಸುತ್ತಿದ್ದುದು ನಂಗೀಗಲೂ ನೆನಪಿದೆ. ಚಂಚಿ ಹೊಲಿದುಕೊಟ್ಟ ಅಬ್ಬೇರಿಗೆ ಅವರ ನಿಷ್ಟೆ ಒಂದು ಕೆ.ಜಿ. ಜಾಸ್ತಿಯೇ.
ಕಾರಂತರ ಜ್ಞಾನಪೀಠ ವಿಜೇತ ಕೃತಿ ಮೂಕಜ್ಜಿಯ ಕನಸಿನಲ್ಲೂ ಸಂಚಿಯ ಪ್ರಸ್ತಾಪ ಬರುತ್ತದೆ. ನೋಡಿ ಎಲ್ಲಿಯ ಸಂಚಿ, ಎಲ್ಲಿಯ ಜ್ಞಾನಪೀಠ ಪ್ರಶಸ್ತಿ ಪಡೆದ ಕಾದಂಬರಿ! ಅಲ್ಲೂ ಸಂಚಿಗೆ ಬೆಲೆ ಇದೆ.
ರಾಜ ಮಹಾರಾಜರೂ ಕವಳ ಹಾಕುತ್ತಿದ್ದರು ಮತ್ತು ಅವರು ಕವಳದ ವಸ್ತುಗಳನ್ನು ಇರಿಸಿಕೊಳ್ಳುತ್ತಿದ್ದ ಚೀಲವನ್ನೂ ಸಂಚಿ ಎಂದು ಕರೆಯುತ್ತಿದ್ದರು. ಆ ಸಂಚಿ ಹಿಡಿದುಕೊಳ್ಳುತ್ತಿದ್ದ ಹೊನ್ನಮ್ಮ ಒಂದು ಕೃತಿಯನ್ನೂ ರಚಿಸಿದ್ದಾಳೆ ಎಂಬುದು ಕವಳದ ಸಂಚಿ ಇರಿಸಿಕೊಳ್ಳುವವರಿಗೆಲ್ಲ ನಿಜಕ್ಕೂ ಹೆಮ್ಮೆಯ ಸಂಗತಿ. ಆದರೆ ಈ ಸಂಗತಿ ಅವರಿಗೆ ಗೊತ್ತಿಲ್ಲ! ಆದರೂ ಅವರಿಗೆ ಸಂಚಿ ಹೊಂದುವುದು ಹೆಮ್ಮೆಯ ಸಂಗತಿಯೇ ಆಗಿದೆ ಎಂಬುದು ನಿಜಕ್ಕೂ ಹೆಮ್ಮೆಯ ಸಂಗತಿ!!

5 comments:

ತೇಜಸ್ವಿನಿ ಹೆಗಡೆ said...

ನನ್ನ ಅಜ್ಜಿ ಹತ್ತ್ರನೂ ಒಂದು ಕವಳ್ಚಂಚಿಯಿತ್ತು. ಅದ್ರಲ್ಲಿ ನೀವ್ಹೇಳಿದ ವಸ್ತುಗಳಲ್ದೇ ಅಡಕತ್ರಿ, ಏಲಕ್ಕಿ ಚೂರುಗಳೂ ಇದ್ವು. ಈಗ ಊರು ಕಡೆ ಎಲ್ಲಾ(ಹೆಚ್ಚಾಗಿ ಶಿರಸಿಯ ಕಡೆ) ಕವಳ್ದ್ ಬಟ್ಲು ಹೇಳಿ ಹೇಳುದು ಹೆಚ್ಚು. ಸಂಚಿ ಕ್ರಮೇಣ ಈಗ ಅಂಚಿಗೆ ಸರಿಯುತ್ತಿದೆಯೇನೋ!?...ನಿಮ್ಮ ಕವಳ್ದಸಂಚಿಯ ಸುಂದರ ಪರಿಚಯ ನನ್ನನ್ನ ಗತದಿನಗಳೆಡೆ ಕರೆದೊಯ್ದಿತು... ;-)

bhavagana said...

en sancheeri nimdu.. chennagide..

ವಿ.ರಾ.ಹೆ. said...

ವಿನಾಯಕ ಭಟ್ರೇ, ಇದೆಂತದು? ಕವಳಸಂಚಿ ಹವ್ಯಕ್ರದ್ದೂ ಅವಿಭಾಜ್ಯ ಅಂಗ ಅಲ್ವಾ? ಬರೀ ಹಾಲಕ್ಕಿಗಳದ್ದು ಅಂತ ಹೇಳಿದ್ದೀರ !!

ನಾವಡ said...

ನಿನ್ನ ಸಂಚಿ ಪುರಾಣ ಚೆನ್ನಾಗಿದೆ. ಎಷ್ಟು ದಿನ ಇದಕ್ಕೆ ಹೊಂಚ್ ಹಾಕಿದ್ಯೋ ? ಆಗಾಗ ಬ್ಲಾಗ್ ಗೆ ಅಪ್ ಲೋಡ್ ಮಾಡು ಮಾರಾಯಾ...
ನಾವಡ

ವಿನಾಯಕ ಭಟ್ಟ said...

ಥ್ಯಾಂಕ್ಸ್. ನೋಡಿದ್ದಕ್ಕೆ, ಕಾಮೆಂಟಿಸಿದ್ದಕ್ಕೆ, ಸಂಚಿ ಕುರಿದು ಹಂಚಿಕೊಂಡಿದ್ದಕ್ಕೆ.
* ತೇಜಸ್ವಿನಿ ಹೆಗಡೆ ಅವರೇ ನೀವು ಹೇಳಿದ ಹಾಗೆ ಅಡಕತ್ತರಿ, ಅಡಕೆ ಕೆರೆಯಲು ಸನ್ಣದೊಂದು ಚಾಕು ಅದರೊಳಗಿರುತ್ತೆ ಅನ್ನೋದು ಮರೆತೇ ಹೋಗಿತ್ತು ನೋಡಿ. ನೆನಪು ಮಾಡಿದ್ದಕ್ಕೆ ಥ್ಯಾಂಕ್ಸ್.
* ಓ ಮನಸೇ, ನನ್ನ ಸಂಚಿಯಲ್ಲಿ ಕೆಲವು ವಿಷಯಗಳು ತುಂಬಿಕೊಂಡಿರುವೆ. ಅವುಗಳನ್ನು ಆಗಾಗ ಹೆಕ್ಕಿ ಬ್ಲಾಗಿಸುತ್ತ ನಿಮಗೆ ನೀಡುತ್ತಿರುವೆ. ನಿಮ್ಮ ಮನಸ್ಸು ಸದಾ ನನ್ನ ಬ್ಲಾಗು ನೋಡುತ್ತಿರಲಿ.
* ವಿಕಾಸ ಹೆಗಡೆ ಅವರೆ ನೀವು ಹೇಳಿದ್ದನ್ನು ನಾನು ಎಲ್ಲ ಒಪ್ಪಲಾರೆ. ಯಾಕೆಂದರೆ ಎಲ್ಲ ಹವ್ಯಕರ ಬಳಿಯೂ ಕವಳಚಂಚಿ ಇರುವುದಿಲ್ಲ. ಇದ್ದರೂ ಘಟ್ಟದ ಮೇಲಿನವರ ಬಳಿ. ಘಟ್ಟದ ಕೆಳಗೆ ಹಂಗಿಲ್ಲ. ಮನೆಯಲ್ಲಿರುವ ಕವಳ ಬಟ್ಟಲು ಬಳಸಿ ಕವಳ ಹಾಕುವವರೇ ಹೆಚ್ಚು.
* ನಮಸ್ಕಾರ ನಾವುಡ ಸರ್. ನಿಮ್ಮಂಥೋರು ನನ್ನ ಬ್ಲಾಗು ಓದಿ ಕಾಮೆಂಟಿಸೋದು ನನ್ನ ಭಾಗ್ಯ ಅಂದ್ಕೋತೀನಿ. ಸಂಚಿಗಾಗಿ ನಾನು ತುಂಬ ದಿನ ಹೊಂಚು ಹಾಕಿಲ್ಲ. ಏನೋ ಸುಮ್ನೆ ನೆನಪಾಯ್ತು ಬರೆದೆ. ಕಭೀ ಕಭೀ ಮೇರೆ ದಿಲ್ ಮೆ ಖಯಾಲ್ ಆತಾ ಹೆ!
ಆಗಾಗ ಅಪ್ಲೋಡ್ ಮಾಡಲು ಯತ್ನಿಸುವುವೆ.