Tuesday, March 10, 2009

ಹೀಗೊಂದು ನಂಬಲಾಗದ ಕತೆ

ಇಂತಹ ಕತೆ ನಾನು ಹಿಂದೆಂದೂ ಕೇಳಿರಲಿಲ್ಲ. ಬಹುಶಃ ಮುಂದೆಯೂ ಕೇಳಲಿಕ್ಕಿಲ್ಲ. ನೀವೂ ಕತೆ ಓದಿದ ನಂತರ ಹೀಗೇ ಹೇಳುತ್ತೀರಿ. ಯಾಕೆಂದರೆ ಹಾಗಿದೆ ಈ ಕತೆ.
ದೆಹಲಿ ಕರ್ನಾಟಕದ ಸಂಘದಲ್ಲೊಂದು ಕಾರ್ಯಕ್ರಮ. ಕರ್ನಾಟಕ ವಾರ್ತಾ ಇಲಾಖೆಯಲ್ಲಿ ದೆಹಲಿ ಕಚೇರಿಯಲ್ಲಿ ವಾರ್ತಾಧಿಕಾರಿಯಾಗಿರುವ ವೀರಣ್ಣ ಆಗಾಗ ದೆಹಲಿ ಕನ್ನಡಿಗರಿಗಾಗಿ ಕನ್ನಡ ಸಿನಿಮಾ ತೋರಿಸುತ್ತಿರುತ್ತಾರೆ. ಹಾಗೇ ಒಮ್ಮೆ ಸಿನಿಮಾ ತೋರಿಸುತ್ತೇನೆ ಬನ್ನಿ ಎಂದು ಕರೆದಿದ್ದರು. ಹೋಗಿದ್ದೆ. ಅಂತಹ ಅವಕಾಶ ತಪ್ಪಿಸುವುದಿಲ್ಲ.
ಯಾಕೆಂದರೆ ದೆಹಲಿಯಲ್ಲಿ ಕನ್ನಡ ಸಿನಿಮಾ ಅಂದರೆ ಸಮುದ್ರದ ನಡುವೆ ಸಿಹಿನೀರು ಸಿಕ್ಕಂತೆ!

ಹಾಗೆ ಸಿನಿಮಾ ನೋಡೋಕೆ ಅಂತ ಕೆಲವು ತಿಂಗಳ ಹಿಂದೆ ಹೋದಾಗ ಒಂದು ಸಭಾ ಕಾರ್ಯಕ್ರಮ ಇಟ್ಟುಕೊಂಡಿದ್ರು. ಅದು ಪಾಪ ವೀರಣ್ಣ ಅವರ ಕುಕೃತ್ಯವಾಗಿರಲಿಲ್ಲ. ಆದರೆ ಅವರು ಅದನ್ನು ತಪ್ಪಿಸುವಂತೆಯೂ ಇರಲಿಲ್ಲ. ಅನಿವಾರ್ಯ ಕರ್ಮ. ಕಾರ್ಯಕ್ರಮಕ್ಕೆ ತಲೆಕೊಟ್ಟವು. ಭಾಷಣ ಕೇಳುವ ಆಸಕ್ತಿ ಯಾರಿಗೂ ಇರಲಿಲ್ಲ. ಆದರೆ ಕೇಳದೆ ಇರುವಂತೆಯೂ ಇರಲಿಲ್ಲ.
ಆಗ ಭಾಷಣ ಮಾಡಿದ ಒಬ್ಬರು ಒಂದು ಕತೆ ಹೇಳಿದರು ನೋಡಿ. ಕೇಳಿ ನಾನು ದಂಗಾಗಿ ಹೋದೆ. ಅರೆ ಇಂತಹ ಕತೆಯೂ ಇದೆಯಾ? ಇದನ್ನು ಇಷ್ಟೆಲ್ಲ ಜನರ ಎದುರು ಹೇಳಲು ಅವರಿಗೆಷ್ಟು ಧೈರ್ಯ? ಏನು ನಮ್ಮನ್ನೆಲ್ಲಾ ದಡ್ಡರೆಂದು ಅವರು ಅಂದುಕೊಂಡಿದ್ದೀರಾ? ಅಥವಾ ಅವರೇ ದಡ್ಡರು ಎಂಬುದನ್ನು ಸಾಬೀತು ಮಾಡಲು ಅವರು ಹೊರಟಿದ್ದರಾ?
ಒಂದೂ ಅರ್ಥವಾಗಲಿಲ್ಲ!
ಕತೆ ಹೀಗಿತ್ತು....
ಅವರು ಒಮ್ಮೆ ಬೆಂಗಳೂರು ಹೊರಭಾಗದಲ್ಲಿ ಒಂದು ಬಸ್ಸಿನಲ್ಲಿ ಹೋಗುತ್ತಿದ್ದಂತೆ. ಅದು ಆ ಊರಿಗಿರುವ ಒಂದೇ ಒಂದು ಬಸ್. ಬಸ್ಸು ತುಂಬ ರಶ್ಶಿತ್ತು. ಅಷ್ಟು ರಶ್ಶಿದ್ದ ಬಸ್ಸಿಗೆ ಮಗು ಕರೆದುಕೊಂಡಿದ್ದ ಒಬ್ಬ ಹೆಂಗಸು ಕೈ ಮಾಡಿದಳು. ನಮ್ಮದು ಎಷ್ಟೆಂದರೂ ಕೈ ತೋರಿಸಿದಲ್ಲಿ ನಿಲ್ಲುವ ವಾಹನವಲ್ಲವೆ? ಬಸ್ಸು ನಿಂತಿತು. ಹೇಗೇಗೋ ಪ್ರಯತ್ನ ಮಾಡಿ ಆಕೆ ಬಸ್ಸು ಹತ್ತಿದಳು. ಸ್ವಲ್ಪ ದೂರ ಹೋದ ನಂತರ ಬಸ್ಸಿನಿಂದ ಏನೋ ಬಿದ್ದಂತಾಯಿತು. ಏನು? ಏನು? ಏನು? ಅಂತ ಎಲ್ಲರೂ ನೋಡಿದ್ದೇ ನೋಡಿದ್ದು. ೧-೨ ಕಿ.ಮೀ ಹೋದ ಮೇಲೆ ಅದು ಮಗುವೇ ಇರಬೇಕು ಎಂಬ ಅನುಮಾನ ತಾಯಿಗೆ ಆರಂಭವಾಯಿತು.
ನೋಡಿದರೆ ಹೌದು!
ತಾಯಿ ಮಗುವನ್ನು ಬುಟ್ಟಿಯಲ್ಲಿ ಹಾಕಿ ಬಸ್ಸಿನ ಟಾಪ್ ಮೇಲಿಟ್ಟಿದ್ದಳು. ಬಸ್ಸಿನ ಓಲಾಡುವಿಕೆಯಲ್ಲಿ ಮಗು ಕೆಳಗೆ ಬಿದ್ದಿತ್ತು. ಬಸ್ಸು ನಿಲ್ಲಿಸಿ ತಾಯಿ ಇಳಿದಳು. ಅವಳ ಜತೆ ನಮಗೆ ಕತೆ ಹೇಳಿದವರು ಹಾಗೂ ಮತ್ತೊಂದಿಬ್ಬರು ಬಸ್ ಇಳಿದರಂತೆ. ನಡೆದುಕೊಂಡು ಹೋಗಿ ನೋಡಿದರೆ ಮಗು ರಸ್ತೆ ಬದಿಗೆ ಬಿದ್ದಿತ್ತಂತೆ. ಬುಟ್ಟಿಯಲ್ಲಿದ್ದಿದ್ದರಿಂದ ಗಾಯವೇನೂ ಆಗಿರಲಿಲ್ಲ.
ಇಷ್ಟೇ ಅವರ ಕತೆ. ಅಲ್ಲಲ್ಲ ಸತ್ಯ ಘಟನೆ.
ನನ್ನ ಸಂಶಯ ಇಷ್ಟೆ. ಯಾವ ತಾಯಿಯೂ ಬಸ್ ಟಾಪ್ ಮೇಲೆ ಮಗುವನ್ನಿಟ್ಟು ತಾನು ಮಾತ್ರ ಒಳಗೆ ಕೂರುವುದಿಲ್ಲ. ಒಂದೋ ಆಕೆಯೂ ಮಗುವಿನ ಜತೆಯೇ ಬಸ್ ಟಾಪಿನ ಮೇಲೆ ಕೂರುತ್ತಾಳೆ. ಕರುನಾಡಲ್ಲಿ ಇನ್ನೂ ಅಂತಹ ತಾಯಂದಿರು ಇಲ್ಲ ಎಂಬುದು ನನ್ನ ಭಾವನೆ. ಹೀಗಿರುವಾಗ ಆ ಹಿರಿಯರು ಹೇಳಿದ ಘಟನೆ ಸತ್ಯಾಸತ್ಯತೆ ಬಗ್ಗೇ ನನಗೆ ಅನುಮಾನವಿದೆ. ಅವರು ಏನೋ ಹೇಳಲು ಹೋಗಿ ಏನೋ ಹೇಳಿದ್ದರು. ಯಾಕೆ ಕೆಲವರು ದೊಡ್ಡ ಸ್ಥಾನದಲ್ಲಿದ್ದರೂ ಹೀಗೆಲ್ಲ ಮಾತನಾಡುತ್ತಾರೊ? ಅಥವಾ ಮಾತನಾಡುವ ತೆವಲು ಅವರಿಂದ ಹೀಗೆಲ್ಲ ಆಡಿಸುತ್ತದೊ? ಒಂದೂ ಅರ್ಥವಾಗುತ್ತಿಲ್ಲ. ಅಂತೂ ಅವರ ಕತೆಯಿಂದಾಗಿ ನಿಷ್ಪ್ರಯೋಜಕ ಕಾರ್ಯಮವೊಂದು ನಮ್ಮನ್ನು ಚಿಂತೆಗೆ ಹಚ್ಚಿದ್ದು ಸುಳ್ಳಲ್ಲ.
ಈ ಕತೆ ನಿಮ್ಮನ್ನೂ ಚಿಂತೆಗೆ ಹಚ್ಚಿದರೆ ನಾನು ಅದಕ್ಕೆ ಕಾರಣವಲ್ಲ ಎಂದು ಈ ಮೂಲಕ ಸ್ಪಷ್ಟಪಡಿಸುತ್ತೇನೆ. ಆ ಕೀರ್ತಿ ಏನಿದ್ದೂ ಕತೆ ಹೇಳಿದವರಿಗೇ ಸೇರಬೇಕು.

10 comments:

ಸಂದೀಪ್ ಕಾಮತ್ said...

ಭಟ್ರೆ ಕಥೆ ನಿಜ ಇದ್ರೂ ಇರಬಹುದು.

ನಾನು ಒಂದು ಸಲ ಬಸ್ ನಲ್ಲಿ ಊರಿಗೆ ಹೋಗ್ತಾ ಇದ್ದೆ .ಸೀಟ್ ನಲ್ಲೇ ಕಾಲು ಚಾಚಿ ಮಲಗಿದ್ದೆ.ಪದೆ ಪದೆ ಕಾಲಿಗೆ ಒಂದು ವಸ್ತು ತಾಗ್ತಾ ಇತ್ತು.ಮುಂದೆ ಕುಳಿತಿರುವವರ ಬ್ಯಾಗ್ ಇರಬೇಕೇನೋ ಅಂದುಕೊಂಡು ಸುಮ್ಮನಾದೆ.

ಮೆತ್ತನೆ ಅನುಭವವಾದಾಗ ಬಗ್ಗಿ ನೋಡಿದ್ರೆ ಮಗು. ’ಹೆತ್ತವರು’ ಮಗುವನ್ನು ಸೀಟ್ ಅಡಿಯಲ್ಲಿಟ್ಟು ಚಕ್ಕಂದ ಆಡ್ತಾ ಇದ್ರು !

ಈಗ ಇದನ್ನು ನಂಬೋದು ಬಿಡೋದು ನಿಮಗೆ ಬಿಟ್ಟಿದ್ದು..

ಆದರೆ ಇದನ್ನೆಲ್ಲ ನೋಡಿದ-ಕೇಳಿದ ಮೇಲೆ ನಮಗೆ ಮೂಡುವ ಕಟ್ಟ ಕಡೆಯ ಪ್ರಶ್ನೆ....

’ಹೀಗೂ ಉಂಟೆ.....’

ಹರೀಶ ಮಾಂಬಾಡಿ said...

haudaa?

ಹರೀಶ ಮಾಂಬಾಡಿ said...

haudaa?

ತೇಜಸ್ವಿನಿ ಹೆಗಡೆ said...

"ಕೆಟ್ಟ ಮಗನಾದರೂ ಇರುತ್ತಾನೆ ಹೊರತು ಕೆಟ್ಟ ತಾಯಿ ಇರಳು" ಎಂದು ಶಂಕರಾಚಾರ್ಯರು ಹೇಳಿದ್ದಾರೆ. ಆದರೆ ಇದು ಅಪ್ಪಟ ಕಲಿಯುಗ ಇಲ್ಲಿ ಏನೂ ಸಾಧ್ಯವಿದೆ. ಶಂಕರಾಚಾರ್ಯರು ಹೇಳಿದ್ದಕ್ಕೆ ಅಪವಾದವೆಂಬಂತೆ ಕಲವು ತಾಯಂದಿರಿರುವುದು ಮಾತ್ರ ಸುಳ್ಳಲ್ಲ! ಇದು ನಿಜವಾಗಿದ್ದಲ್ಲಿ, ಆ ಮಗುವಿನ ದೌರ್ಭಾಗ್ಯವಷ್ಟೇ.

VENU VINOD said...

ಆ ಮಹಾತ್ಮರು ಹೇಳಿದ ಕಥೆಯ ಬಗ್ಗೆ ನಿಮ್ಮ ಕಥೆ ಅದನ್ನೋದಿದ ಕಾಮತರ ಪ್ರತಿಕ್ರಿಯೆ ಎರಡೂ ಖುಷಿಕೊಟ್ಟಿತು...

ವಿನಾಯಕ ಭಟ್ಟ said...

ತೊಂದ್ರೆ ಇಲ್ಲಾ ಕಣ್ರಿ ನನ್ನ ಬ್ಲಾಗ್ ಗೂ ಒಳ್ಳೆ ಟಿಆರ್ ಪಿ ಇದೆ. ಒಂದೇ ದಿನಕ್ಕೆ 5 ಕಾಮೆಂಟ್ ಬಂದಿದೆ.
ಸಂದೀಪ್ ನೀವು ಹೇಳಿದ್ದು ಸರಿ. ನಾನು ಮಂಗಳೂರಿನಲ್ಲಿದ್ದಾಗ ಅದೆಷ್ಟು ತಾಯಂದಿರು ಮಕ್ಕಳನ್ನು ಕಸದಬುಟ್ಟಿಯಲ್ಲಿ ಬಿಟ್ಟು ಹೋಗಿದ್ದನ್ನು ನೋಡಿಲ್ಲ. ಅಂತಹ ಒಂದು ಮಗುವನ್ನು ಲೇಡಿಗೋಶನ್ ಆಸ್ಪತ್ರೆಯವರೇ ಸಾಕಿದ್ದರ ಬಗ್ಗೆ ನಾನೇ ಬರೆದಿದ್ದೆ.
ನಿಮ್ಮ ಕತೆ ನಂಬುವಂಥದ್ದೆ. ಪಾಪ ಅವರು ಚಕ್ಕಂದ ಆಡದಿದ್ದರೆ ಇನ್ನೊಂದು ಮಗು ಭೂಮಿಗೆ ಬರುವುದಾದರೂ ಹೇಗೆ? ಆದರೂ ಈ ಮಹಾನುಭಾವರ ಕತೆ ನಂಬಲಾಗಲಿಲ್ಲ. ಹೀಗೂ ಉಂಟೆ?
ಮಾಂಬಾಡಿ ಅವರೇ ನಿಮ್ಮ ಪ್ರಶ್ನೆಯೇ ನನ್ನದೂ ಆಗಿದೆ.
ತೇಜಸ್ವಿನಿ ಅವರೆ ಮಗುವಿನದಷ್ಟೇ ಅಲ್ಲ ನಮ್ಮದೂ ಕೂಡ!
ಥ್ಯಾಂಕ್ಯು ವೇಣು....

ಮಿಥುನ ಕೊಡೆತ್ತೂರು said...

ಹ್ಹ ಹ್ಹ ಹ್ಹ!

ಶ್ರೀನಿಧಿ.ಡಿ.ಎಸ್ said...

ho ho!:)

Unknown said...

un believable ..!!!!!!! what happened to that child ? alive or dead? or some injury??.Really it is not possible i think??? simply they told i think.....

ಕೆ. ರಾಘವ ಶರ್ಮ said...

ಭಟ್ರೆ, ನೆಕ್ಸ್ಟ್ ಸಿನಿಮಾ ಇದ್ದಾಗ ಮತ್ತೆ ಹೋಗುವ. ಇನ್ನೇನಾದ್ರು ರೋಚಕ ಕಥೆ ಹೇಳುವವರು ಬರಬಹುದು :)