Thursday, March 19, 2009

ನಗ್ಮ ದರ್ಶನ!ಫೇಮಸ್ ಚಿತ್ರನಟಿಯೊಬ್ಬರು ದಿಢೀರನೆ ಸಿಕ್ಕರೆ ನೀವೇನು ಮಾಡುತ್ತೀರಿ? ಹೋಗಿ ಕೈ ಕುಲುಕುತ್ತೀರಿ. ಫೋಟೋ ತೆಗೆಸಿಕೊಳ್ಳಲು ಅತ್ತಿತ್ತ ಫೋಟೋಗ್ರಫರ್‌ಗಾಗಿ ಹುಡುಕುತ್ತೀರಿ. ಅವರ ಆಟೋಗ್ರಾಫ್ ತೆಗೆದುಕೊಳ್ಳುತ್ತೀರಿ. ಚಿತ್ರನಟಿಯರ ಕಂಡಾಗೆಲ್ಲ ಮುತ್ತಿಕೊಳ್ಳುವ ಜನರನ್ನು, ಅವಳ ಒಂದು ಟಚ್ ಗಾಗಿ, ಒಂದು ಸಹಿಗಾಗಿ ಅದೆಷ್ಟು ಕಷ್ಟಪಡುತ್ತಾರೆ ನೀವೇ ನೋಡಿದ್ದೀರಲ್ಲ.

ಅಂತಹ ನಟಿಯೊಬ್ಬಳು ನಮ್ಮ ಮಲ್ಲಿಕಾರ್ಜುನ ಖರ್ಗೆಯನ್ನು ಭೇಟಿಯಾಗಲು ಬಂದಾಗ ಅವರು ಕೇಳಿದ ಮೊದಲ ಪ್ರಶ್ನೆಯೇನು ಗೊತ್ತೇ ‘ನಿಮ್ಮ ಹೆಸರೇನು?’

ಹೌದು. ನೀವು ನಂಬಲೇ ಬೇಕು!

ಸೋಲಿಲ್ಲದ ಸರದಾರ, ಸಿದ್ದುಗಾಗಿ ಪ್ರತಿಪಕ್ಷ ನಾಯಕನ ಸ್ಥಾನ ತೆರವು ಮಾಡಿ, ತ್ಯಾಗಮಯಿ ಅನ್ನಿಸಿಕೊಳ್ಳಲು ಮನಸಿಲ್ಲದ ಮನಿಸಿನಿಂದಲೇ ಸಿದ್ದರಾಗುತ್ತಿರುವ ಮಲ್ಲಿಕಾರ್ಜುನ ಖರ್ಗೆ ಒಂದು ದಿನ ಕರ್ನಾಟಕ ಭವನದ ಕೊಠಡಿಯಲ್ಲಿ ಕುಳಿತಿದ್ದರು. ಪ್ರತಿಪಕ್ಷ ನಾಯಕನ ಸ್ಥಾನ ತಪ್ಪಿಸುವ ಮುನ್ಸೂಚನೆಯಾಗಿ ಖರ್ಗೆಗೆ ಮಹಾರಾಷ್ಟ್ರದ ಅಭ್ಯರ್ಥಿ ಆಯ್ಕೆ ಸಮಿತಿ ಅಧ್ಯಕ್ಷತೆ ವಹಿಸಲಾಗಿದೆ.

ಅದೃಷ್ಟ ನೋಡಿ!

ಚಿತ್ರ ನಟಿ ನಗ್ಮಾ ಖರ್ಗೆ ಭೇಟಿಗೆಂದು ತಾವೇ ಹುಡುಕಿಕೊಂಡು ಬಂದುಬಿಡಬೇಕೆ!

ಮುಂಬಯಿ ಪಶ್ಚಿಮ ಕ್ಷೇತ್ರದಿಂದ ನಗ್ಮಾ ಟಿಕೆಟ್ ಬಯಸಿದ್ದಾರೆ. ಬಹಳ ಪ್ರಯತ್ನವನ್ನೂ ನಡೆಸಿದ್ದಾರೆ. ಈ ಪ್ರಯತ್ನದ ಭಾಗವಾಗಿಯೇ ನಗ್ಮಾ ಅವರು ಖರ್ಗೆ ಭೇಟಿಗೆ ಆಗಮಿಸಿದ್ದರು. ನಗ್ಮಾ ಎಷ್ಟೆಂದರೂ ಫೇಮಸ್ ಅಲ್ಲವೆ. ಬಹುಶಃ ಖರ್ಗೆ ತನ್ನನ್ನು ಗುರುತಿಸಬಹುದು ಅಂದುಕೊಂಡಿದ್ದರು.

ಆದರೆ ಖರ್ಗೆ ಅಮಾಯಕರಂತೆ ನಿಮ್ಮ ಹೆಸರೇನಮ್ಮಾ ಅಂದಾಗ ದಂಗಾಗಿ ಹೋದಳು ನಗ್ಮಾ!

ಆಗ ಖರ್ಗೆ ಪಕ್ಕದಲ್ಲಿದ್ದ ಅವರ ಸ್ನೇಹಿತ ಕೊಂಡಯ್ಯ ಅವರು ಖರ್ಗೆ ಕಿವಿಯಲ್ಲಿ ‘ಸರ್ ಅವಳ ಹೆಸರು ನಗ್ಮಾ ಅಂತ. ಅವಳು ಫೇಮಸ್ ಚಿತ್ರನಟಿ ಸರ್. ಅವಳ ಹೆಸರಿನಲ್ಲಿ ತಮಿಳುನಾಡಿನಲ್ಲಿ ದೇವಸ್ಥಾನಗಳನ್ನೆಲ್ಲ ಕಟ್ಟಿಸಿದ್ದಾರೆ. ಅವಳಿಗೆ ಮುಂಬಯಿನಿಂದ ಟಕೆಟ್ ಬೇಕಂತೆ’ ಎಂದು ಉಸುರಿದರು.

ಆಗ ದಂಗಾಗುವ ಪಾಳಿ ಖರ್ಗೆಯದ್ದು!

ಹೌದಾ? ನಾನು ಅವಳ ಒಂದೂ ಸಿನಿಮಾ ನೋಡಿಲ್ಲಲ್ಲೊ ಎಂದು ಖರ್ಗೆ ಅಮಾಯಕರಂತೆ ನುಡಿದಾಗ ಕೊಠಡಿಯಲ್ಲಿದ್ದವರೆಲ್ಲ ಕಂಗಾಲು. ಆದರೂ ಸಾವರಿಸಿಕೊಂಡ ಖರ್ಗೆ ‘ರಾಜಕೀಯದ ಅನುಭವ ಎಷ್ಟಿದೆ? ನೀನು ಮಾಡಿದ ಸಾಮಾಜಿಕ ಕಾರ್ಯವೇನು?’ ಎಂದೆಲ್ಲ ಕೇಳಿದಾಗ ಚುನಾವಣೆಗೆ ಸ್ಪರ್ಧಿಸಲು ಇದೆಲ್ಲ ಅಗತ್ಯವಿದೆಯಾ ಎಂಬ ಪ್ರಶ್ನಾರ್ಥಕ ಚಿಹ್ನೆ ನಗ್ಮಾಳ ಮುಖದಲ್ಲಿ ಮೂಡಿತು. ಆ ಪ್ರಶ್ನೆ ಹೊತ್ತೇ ಅವರು ಖರ್ಗೆ ಕೊಠಡಿಯಿಂದ ಹೊರಹೋಗಬೇಕಾಯಿತು.

ಇದು ನಡೆದಾಗ ಕೆಲವರೇ ಇದ್ದರು ಕೊಠಡಿಯಲ್ಲಿ. ಆದರೂ ಈ ಸುದ್ದಿ ಹೇಗೋ ಹೊರಗೆ ನುಸುಳಿ ಬಂದುಬಿಟ್ಟಿದೆ. ನಾವೇನೋ ಕನ್ನಡ ಪತ್ರಕರ್ತರು ಇದನ್ನು ಕೇಳಿ, ನಕ್ಕು, ಜೋಕೆಂಬಂತೆ ಕೆಲವರ ಬಳಿ ಹೇಳಿ ಸುಮ್ಮನಿದ್ದೆವು. ಆದರೆ ‘ಮಿಡ್ ಡೇ’ ಪತ್ರಿಕೆಯವರು ಮುಖಪುಟದಲ್ಲಿ ಖರ್ಗೆಗೆ ನಗ್ಮಾ ಪರಿಚಯವೇ ಇಲ್ಲ ಎಂದು ಬರೆದು, ಜಗಜ್ಜಾಹೀರು ಮಾಡಿದರು.

ಅದಕ್ಕೆ ಪಾಪ ಖರ್ಗೆ "ಅಲ್ಲೊ ಹೆಸರೇನು ಅಂತ ಕೇಳಿದರೆ ನನಗೆ ಅವಳ ಪರಿಚವೇ ಇಲ್ಲ ಬರೆದುಬಿಡೋದಾ' ಅಂತ ಕನ್ನಡ ಪರ್ತಕರ್ತರೊಬ್ಬರ ಬಳಿ ದುಃಖ ತೋಡಿಕೊಂಡರಂತೆ.

ಚಿತ್ರನಟಿ ನಗ್ಮಾ ಅವರು ಖರ್ಗೆ ಭೇಟಿಗೆ ಬಂದಿದ್ದಾರೆ ಅಂತ ನನಗೆ ಫೋನ್ ಬಂದಾಗ ನನಗನ್ನಿಸಿತು..... ಖರ್ಗೆ ಜನ್ಮ ಸಾರ್ಥಕವಾಯಿತು ಬಿಡಿ ಅಂತ. ‘ಪ್ರತಿಪಕ್ಷ ನಾಯಕನ ಸ್ಥಾನ ಹೋದರೆ ಹೋಗಲಿ’ ಅಂತ ನಗ್ಮಾ ಭೇಟಿ ನಂತರ ಖರ್ಗೆ ಅವರೇ ಅಂದುಕೊಂಡಿರಬಹುದು ಅಂದುಕೊಂಡು ಮನಸೊಳಗೇ ನಕ್ಕಿದ್ದೆ.

ಒಂದು ಭೇಟಿ ಇಷ್ಟೆಲ್ಲ ಸುದ್ದಿ, ನಗು ಸೃಷ್ಟಿಸಿತು ನೋಡಿ.