Tuesday, August 05, 2008

ಪೇಜ್ ತ್ರಿ ನೋಡಿ ಏನೆಲ್ಲಾ ನೆನಪಾತ್ರಿ!


ಪೇಜ್ ತ್ರಿ!
ನನ್ನ ತಟ್ಟಿದ, ನೆನಪಲ್ಲುಳಿದ, ಚಿಂತೆಗೀಡು ಮಾಡಿದ, ಮತ್ತೆ ಮತ್ತೆ ನೋಡಿದರೂ ಬೇಸರ ತರಿಸದ ಚಲನಚಿತ್ರಗಳಲ್ಲಿ ಪೇಜ್ ತ್ರಿ ಕೂಡ ಒಂದು. ಅದೊಂಥರದಲ್ಲಿ ನ(ನ್ನ)ಮ್ಮದೇ(!) ಕತೆ. ಅಂದರೆ ಪತ್ರಕರ್ತರ ಕತೆ.
ಫಿಲ್ಮಿ ಚಾನಲ್‌ನಲ್ಲಿ ನಿನ್ನೆ (೪-೦೮-೦೮) ಪೇಜ್ ತ್ರಿ ಫಿಲ್ಮ್ ಇತ್ತು. ಆ ಚಿತ್ರ ಇಷ್ಟವಾಗಲು ಈಗಲೇ ಕೊಟ್ಟ ಕಾರಣಗಳ ಜತೆಗೆ ಇನ್ನೊಂದು ಕಾರಣವೆಂದರೆ ಅದರಲ್ಲಿ ಕ್ರೈಂ ರಿಪೋರ್ಟರ್ ಹೆಸರು ವಿನಾಯಕ ಮತ್ತು ನಾನೂ ೪ ತಿಂಗಳ ಹಿಂದಿನವರೆಗೂ ಕ್ರೈಂ ರಿಪೋರ್ಟರ್ ಆಗಿದ್ದೆ!!
ಹೀಗಾಗಿ ಪೇಜ್ ತ್ರಿ ನೋಡುತ್ತಿದ್ದಂತೆ ನನ್ನ ಮನಸ್ಸು ಹುಂಬುರ್ಕಿ ಓಡತೊಡಗಿತು. ನೆನಪುಗಳತ್ತ, ಮಂಗಳೂರಿನತ್ತ, ಕ್ರೈಂ ರಿಪೋರ್ಟರ್ ಆಗಿದ್ದಾಗ ಆದ ಅನುಭವಗಳತ್ತ, ಮರೆಯಲಾಗದ ಆ ದಿನಗಳತ್ತ, ಹಸಿ ಹಸಿ ಕೊಲೆಗಳತ್ತ...
ನಾನು ನನ್ನ ಗೆಳೆಯರ ಬಳಿ ಈಗಾಗಲೇ ಹೇಳಿಕೊಂಡಿರುವಂತೆ ನಾನು ಬಯಸಿ ಕ್ರೈಂ ರಿಪೋರ್ಟರ್ ಆದದ್ದಲ್ಲ. ಆದರೆ ಕ್ರೈಂ ರಿಪೋರ್ಟರ್ ಆದ ಮೇಲೆ ಬಯಸಿದ್ದು!
ಪತ್ರಿಕೋದ್ಯಮದ ಆರಂಭಿಕ ಹಂತದಲ್ಲಿ ಕಚೇರಿಯೊಳಗೆ ಪ್ರೆಸ್‌ನೋಟ್‌ಗಳನ್ನು ಬರೆಯುತ್ತ ಕುಳಿತಿದ್ದ ನಾನು ಒಂದು ಮಧ್ಯಾಹ್ನ ಆಕಸ್ಮಿಕವಾಗಿ ಮತ್ತು ಅನಿವಾರ್ಯವಾಗಿ ತ್ರಿಬಲ್ ಮರ್ಡರ್ ವರದಿ ಮಾಡಬೇಕಾಗಿ ಬಂತು. ಆ ವರದಿ ನನ್ನನ್ನು ಕ್ರೈಂ ರಿಪೋರ್ಟರ್‌ನನ್ನಾಗಿ ಮಾಡಿತು. ಅಥವಾ ಆ ವರದಿಯೇ ನಾನು ಕ್ರೈಂ ರಿಪೋರ್ಟರ್ ಆಗಲು ಕಾರಣವಾಯಿತು. ಆಮೇಲೆ ತಿಳಿಯಿತು ಕ್ರೈಂ ರಿಪೋರ್ಟಿಂಗ್ ಉಳಿದ ವರದಿಗಾರಿಕೆಗಿಂತ ಆಸಕ್ತಿಕರ ಎಂಬುದು.

ಕ್ರೈಂ ರಿಪೋರ್ಟರ್ ಆಗಿ ಹಲವು ಎನ್‌ಕೌಂಟರ್‌ಗಳು, ನಕ್ಸಲೀಯರ ಬಗೆಗಿನ ಮಾಹಿತಿಗಳು, ಕೋಮುಗಲಭೆಗಳು, ಹಿಂದಿನ ಕಾರಣಗಳು, ಕರ್ಫ್ಯೂ, ಜನರು ಆಗ ಅನುವಿಸುವ ಕಷ್ಟ, ಊಟ, ನಿದ್ರೆ, ಸ್ನಾನವೂ ಇಲ್ಲದೆ ಕಳೆದ ದಿನಗಳು, ಅಪರಾತ್ರಿಯಲ್ಲಿ ಎಬ್ಬಿಸಿದ ಕೊಲೆಗಳು, ಮನಸ್ಸು ಕಲಕಿದ ಸಾವುಗಳು, ಸಹನೆಗೆ ಸವಾಲೆಸೆಯುವಂತೆ ಕಾದು ಕುಳಿತು ನಡೆಸಿದ ತನಿಖಾ ವರದಿಗಳು, ಯಾರಿಗೂ ತಿಳಿಯದ ಹಲವು ವಿಷಯಗಳನ್ನು ತಿಳಿಯಲು, ಕಲಿಯಲು ಅವಕಾಶವಾಯಿತು. ಹೊರನೋಟಕ್ಕೆ ದಕ್ಕದ ಪೊಲೀಸ್ ಇಲಾಖೆಯ ಅಂತರಾಳದ ಪರಿಚಯವಾಯಿತು. ಎಲ್ಲಕ್ಕಿಂತ ಹೆಚ್ಚಾಗಿ ಕೆಲವು ಒಳ್ಳೆ ಪೊಲೀಸ್ ಗೆಳೆಯರು ದೊರೆತರು. ಅವರಿಗೆ ಅದೇನು ಪ್ರೀತಿಯೋ ಕಾಣೆ ನನಗೆ ಎಕ್ಸ್‌ಕ್ಲ್ಯೂಸೀವ್ ಸುದ್ದಿ ಕೋಡೋರು.

ಇಷ್ಟೇ ಸಾಕು. ಹೀಗೇ ಮುಂದುವರಿದರೆ ನನ್ನನ್ನು ನಾನೇ ಹೊಗಳಿಕೊಂಡುಬಿಡುವ ಅಥವಾ ಹಾಗೆ ನಿಮಗನ್ನಿಸಿಬಿಡುವ ಸಾಧ್ಯತೆ ಇದೆ.
ಪೇಜ್ ತ್ರಿ ವಿಷಯಕ್ಕೆ ಬರೋಣ. ಮಂಗಳೂರಿನಲ್ಲಿ ಸಿನಿಮಾ ನೋಡಿದಾಗ ಪೇಜ್ ತ್ರಿ ಪತ್ರಿಕೋದ್ಯಮ ಅಂದರೇನು ಎಂಬುದು ಸರಿಯಾಗಿ ಅರ್ಥವಾಗಿರಲಿಲ್ಲ. ಆದರೆ ಈಗ ದಿಲ್ಲಿಗೆ ಬಂದ ಮೇಲೆ ಅರ್ಥವಾಗುತ್ತಿದೆ. ಇಲ್ಲಿನ ಪತ್ರಕರ್ತರು ಜಿಲ್ಲಾ ವರದಿಗಾರರಂತೆ ಸುದ್ದಿಗಾಗಿ ಒದ್ದಾಡುವುದಿಲ್ಲ. ಇಡೀ ದಿನಕ್ಕೆ ಒಂದೇ ಬೀಟ್. ಕಾಂಗ್ರೆಸ್, ಬಿಜೆಪಿ ಅಥವಾ ಯಾವುದೇ ಪಕ್ಷದ ಕಚೇರಿಗೆ ಹೋಗಿ ಒಂದಿಡೀ ದಿನ ಕುಳಿತು, ಸಿಕ್ಕ ನಾಯಕರೊಂದಿಗೆ ಹರಟಿ, ಪತ್ರಿಕಾಗೋಷ್ಠಿಗಳಿದ್ದರೆ ಅವುಗಳನ್ನು ಅಟೆಂಡ್ ಮಾಡಿ ಸುದ್ದಿ ಬರೆದರೆ ಮುಗಿಯಿತು. ಇದರ ಪರಿಣಾಮ ಕೆಲವರಂತೂ ರಾಜಕಾರಣಿಗಳ ಚೇಲಾಗಳಂತಾಗಿಬಿಟ್ಟಿರುತ್ತಾರೆ. ನ್ಯೂಸ್ ಚಾನಲ್‌ನವರಿಗಂತೂ ಒಬ್ಬ ಮುಖಂಡನ ಬೈಟ್ ಸಿಕ್ಕಿದರೆ ಸಾಕು. ಅವರಿಗೆ ರಾಷ್ಟ್ರಪ್ರಶಸ್ತಿ ಸಿಕ್ಕಷ್ಟು ಸಂತೋಷ. ಆ ಸುದ್ದಿಯ ಆಳ, ಅಗಲ ಅವರಿಗೆ ಬೇಡ. ಇನ್ನು ಪಾರ್ಟಿಗಳನ್ನು ವರದಿ ಮಾಡುವ ಪತ್ರಕರ್ತರ ಕೆಲಸ ಆ ದೇವರಿಗೇ ಪ್ರೀತಿ.

ಇದನ್ನೆಲ್ಲ ನೋಡುವಾಗ ಅನ್ನಿಸುತ್ತದೆ ಇವರಿಗಿಂತ ಜಿಲ್ಲಾ ಮಟ್ಟದ ಕ್ರೈಂ ವರದಿಗಾರ ಮೇಲು ಅಂತ!
ಪೇಜ್ ತ್ರಿ ಸಿನಿಮಾದಲ್ಲಿ ನಾಯಕಿ ಮಾಧವಿ ಮೊದಲು ಪೇಜ್ ತ್ರಿ ಪತ್ರಕರ್ತೆಯಾಗಿದ್ದು, ನಂತರ ಮನಸ್ಸು ಬದಲಿಸಿ ಕ್ರೈಂ ವರದಿಗಾರ್ತಿಯಾಗುತ್ತಾಳೆ. ಹಾಗೆ ಒಂದೊಳ್ಳೆ ತನಿಖಾ ವರದಿ ತರುತ್ತಾಳೆ. ನಗರದ ಅತಿಗಣ್ಯನೊಬ್ಬ ಕ್ಕಳೊಂದಿಗೆ ಸಲಿಂಗಕಾಮದಲ್ಲಿ ನಿರತನಾಗಿದ್ದ, ಅದಕ್ಕಾಗಿ ಹಲವು ಮಕ್ಕಳನ್ನು ಬಳಸಿಕೊಳ್ಳುತ್ತಿದ್ದ ಜಾಲದ ಸುದ್ದಿಯದು. ಆದರೆ ಆತ ಪತ್ರಿಕೆಗೆ ಜಾಹೀರಾತು ನೀಡುತ್ತಾನೆಂಬ ಕಾರಣಕ್ಕೆ ಪತ್ರಿಕೆಯ ಮಾಲಿಕ ಆ ವರದಿ ಪ್ರಕಟಿಸದಂತೆ ಹೇಳುತ್ತಾನೆ. ಸಾಲದ್ದಕ್ಕೆ ಅವಳನ್ನು ಕೆಲಸದಿಂದ ತೆಗೆಯುತ್ತಾನೆ.
ಇದನ್ನು ನೋಡುವಾಗ ನಾನು ಬರೆದೂ ಪ್ರಕಟವಾಗದ, ಪ್ರಕಟವಾಗದು ಎಂಬ ಗ್ಯಾರಂಟಿ ಇದ್ದುದರಿಂದ ಬರೆಯಲೇ ಆಗದ, ಬರೆದು ಪ್ರಕಟವಾಗಿ ನಂತರ ನಾನು ಅನುಭವಿಸಿದ ಕೆಲವು ವರದಿಗಳು, ಅದರ ಹಿಂದುಮುಂದಿನ ಘಟನೆಗಳು ಕಣ್ಣಮುಂದೆ ಹಾದುಹೋದವು.

ಮಾಧ್ಯಮಗಳೂ ಮೊದಲಿನಂತಿಲ್ಲ. ಪತ್ರಿಕಾ ವೃತ್ತಿ ಹೋಗಿ ಪತ್ರಿಕೋದ್ಯಮವಾಗಿದೆ. ರಿಲಯನ್ಸ್ ನಂತಹ ಹಲವಾರು ಉದ್ಯಮ ಹೊಂದಿರುವ ಸಂಸ್ಥೆ ಕೂಡ ಈಗ ಮಾಧ್ಯಮ ಕ್ಷೇತ್ರದ ಮೇಲೆ ಕಣ್ಣು ಹಾಕಿದೆ. ಉದ್ಯಮ ಅಂದ ಮೇಲೆ ಸೇವೆ, ಸಾರ್ವಜನಿಕ ಬದ್ದತೆ ಎಂಬೆಲ್ಲ ಪದಗಳು ಅರ್ಥ ಕಳೆದುಕೊಳ್ಳುತ್ತವೆ. 'ಅರ್ಥ'ಶಾಸ್ತ್ರ ಮಾತ್ರ ಮುಖ್ಯವಾಗುತ್ತದೆ. ಹಾಗಾದಾಗ ಹೀಗಾಗುತ್ತದೆ. ಹೀಗಾದಾಗ ಪತ್ರಕರ್ತ ತಾನೆಣಿಸಿದ್ದನ್ನೆಲ್ಲ ಸತ್ಯ ಎಂಬುದು ಗೊತ್ತಿದ್ದರೂ, ದಾಖಲೆಗಳಿದ್ದರೂ ಬರೆಯಲಾರ. ಆದರೆ ಅದೊಂದು ಸ್ಟೋರಿ ಪ್ರಕಟಿಸಲು ಸಾಧ್ಯವಾಗಲಿಲ್ಲ ಎಂಬ ಕಾರಣಕ್ಕೆ ಕೆಲಸ ಬಿಡಲಾದೀತೆ? ಹಾಗೆ ಮಾಡಿದರೆ ಸಾಧಿಸುವುದೇನು?
ಇದೇ ಅಲ್ವಾ ಪೇಜ್ ತ್ರಿ ಸಿನಿಮಾ ಕೊನೆಯ ಸಂದೇಶ!?
ಪೇಜ್ ತ್ರಿ ಸಿನಿಮಾ ಸತ್ಯಕ್ಕೆ ಕನ್ನಡಿ ಹಿಡಿದಂತಿದೆ. ಪತ್ರಿಕೋದ್ಯಮ ವಿದ್ಯಾರ್ಥಿಗಳು ಇದನ್ನೊಮ್ಮೆ ನೋಡುವುದೊಳಿತು. ಇದರ ಜತೆಗೆ 'ಇಟ್ಸ್ ಬ್ರೇಕಿಂಗ್ ನ್ಯೂಸ್ 'ಎಂಬ ಸಿನಿಮಾ ಕೂಡ ಇಂದಿನ ನ್ಯೂಸ್ ಚಾನಲ್‌ಗಳ ಒಳ ಹೊರಗನ್ನು ತೆರೆದಿಡುತ್ತದೆ. ಇವುಗಳನ್ನು ನೋಡಿದರೆ ಪತ್ರಿಕೋದ್ಯಮ ವಿದ್ಯಾರ್ಥಿಗಳು ಕ್ಷೇತ್ರಕ್ಕಿಳಿಯುವ ಮೊದಲು ಆ ಬಗ್ಗೆ ಒಂದಷ್ಟು ಮಾನಸಿಕ ಸಿದ್ಧತೆಯನ್ನಾದರೂ ಗಳಿಸಬಹುದು. ಯಾಕೆಂದರೆ ಕ್ಲಾಸಿನಲ್ಲಿ ಕಲಿತದ್ದಕ್ಕೂ ಕ್ಷೇತ್ರದಲ್ಲಿ ಅನುಭವಿಸುವುದಕ್ಕೂ ಅಜಗಜಾಂತರವಿದೆ.

12 comments:

ಸಂದೀಪ್ ಕಾಮತ್ said...

’ಪೇಜ್ 3 ' ನನ್ನ ನೆಚ್ಚಿನ ಸಿನೆಮಾ ಕೂಡ!
ಈ ಸಿನೆಮ ನೋಡೊದಕ್ಕೆ ಮುನ್ನ ನನ್ಗೆ ಗೊತಿರ್ಲಿಲ್ಲ ಪೇಜ್ ತ್ರೀ ಅಂದ್ರೆ ಏನೂಂತ ,ಆದ್ರೆ ಟೈಂಸ್ ಆಫ್ ಇಂಡಿಯಾದಲ್ಲಿ ತಪ್ಪದೇ ನೋಡ್ತಾ ಇದ್ದೆ ಅದನ್ನ.
ರೂಬಿ ಚಕ್ರವರ್ತಿ, ಮನೋವಿರಾಜ್ ಖೋಸ್ಲಾ , ಇಂತವರು ದಿನಾ ಬರ್ತಾ ಇರ್ತಾರೆ ಆ ಪೇಜ್ ನಲ್ಲಿ.
ಯಾವಾಗ್ಲೂ ತಲೆ ಕೆಡಿಸ್ಕೋತಾ ಇದ್ದೆ ,ದಿನಾ ಫೋಟೋ ಬರ್ಬೇಕಾದ್ರೆ ಇವರು ಅಂಥ ’ಘನ್ ಕಾರ್ಯ’ ಏನು ಮಾಡಿದ್ದಾರೆ ? ಅಂತ!!!
ಸಿನೆಮಾ ನೋಡಿದ್ ಮೇಲೆ ಗೊತ್ತಾಯ್ತು ಈ ಪಾರ್ಟಿ ಆನಿಮಲ್ ಗಳ ಬಂಢವಾಳ!!!!
ಪಾಪ ಚಿಕ್ಕ ಮಕ್ಕಳನ್ನು ದುರುಪಯೋಗಪಡಿಸಿಕೊಳತಾ ಇದ್ದೋನನ್ನು ಬೇರೆ ಯಾವ ಫಿಲ್ಮಲ್ಲಿ ನೋಡಿದ್ರೂ ಒಂಥರಾ ಅಸಹ್ಯ ಅನ್ನಿಸ್ತ ಇದೆ. ನನ್ನ ದೃಷ್ಟೀಲಿ ಅವನು ಕೆಟ್ಟೋನಾಗ್ಬಿಟ್ಟ!!!

ವಿ.ರಾ.ಹೆ. said...

Page 3 ನನಗೆ ಬಹಳ ಇಷ್ಟವಾದ ಸಿನೆಮಾಗಳಲ್ಲೊಂದು.
ನಾನು ಪತ್ರಿಕೋದ್ಯಮದವನಲ್ಲದಿದ್ದರೂ ಕೂಡ ಪತ್ರಿಕೋದ್ಯಮದ, ಸಮಾಜದ ಕೆಲ ಮಜಲುಗಳನ್ನು ತಿಳಿಸಿಕೊಟ್ಟಿತ್ತದು.

ಅಂದ ಹಾಗೆ ಈ ತಲೆಹಿಡುಕರನ್ನು, ವೇಶ್ಯೆಯರನ್ನು, ಪಾರ್ಟಿ ಪ್ರಾಣಿಗಳನ್ನು ದಿನದಿನವೂ ಫೋಟೋ ಹಾಕಿ ಪರಿಚಯಿಸುವ ಈ ಪೇಜ್ ೩ ಪತ್ರಿಕೋದ್ಯಮದ ಬಗ್ಗೆ ನಿಮ್ಮ ಅಭಿಪ್ರಾಯ ಏನೆಂದು ಹೇಳಲೇ ಇಲ್ಲವಲ್ಲ !(ಹೇಳಲೇ ಬೇಕು ಅಂತ ಇಲ್ಲ ಅಲ್ಲವೇ, ಅದೂ ಪತ್ರಿಕೋದ್ಯಮದ ಲಕ್ಷಣ :))

ನಿಮ್ಮ ಕೊನೆಯ ಪ್ಯಾರಾದ ಸಾರಾಂಶ ಪತ್ರಿಕೋದ್ಯಮವನ್ನು ಒಂದು ಸಂಬಳಕ್ಕೆ ಒಂದು ವೃತ್ತಿಯನ್ನಾಗಿ ನೋಡಿ ಹೊರತು ಬೇರೆನಲ್ಲ ಎಂಬಂತೆ ಅನಿಸಿತು.

ತೇಜಸ್ವಿನಿ ಹೆಗಡೆ said...

Page 3 ಸಿನಿಮಾದಷ್ಟೇ ಚೆನ್ನಾದ, ಅರ್ಥವತ್ತಾದ ಹಾಡು "ಕಿತನೇ ಅಜೀಬ್ ರಿಶ್ತೆ ಹೈ..." ಚಿತ್ರದೊಳಗಿನ ಈ ಸುಂದರವಾದ ಹಾಡು ಎಲ್ಲಾ ತರಹದ ವೃತ್ತಿಗಳಿಗೂ ಕನ್ನಡಿ ಹಿಡಿಯುವಂತಿದೆ. ಅಷ್ಟೇ ಅಲ್ಲಾ ಪ್ರಸ್ತುತ ಜಗತ್ತಿನ ಕಹಿ ಸತ್ಯವನ್ನೂ ಕಾಣಿಸುತ್ತದೆ.

ಮಿಥುನ ಕೊಡೆತ್ತೂರು said...

dinakkondu baraha barali. kelitaa.

ವಿನಾಯಕ ಭಟ್ಟ said...

ಥ್ಯಾಂಕ್ಯು ಫ್ರೆಂಡ್ಸ್. ವಿಕಾಸ್ ಪೇಜ್ ತ್ರಿ ಪತ್ರಿಕೋದ್ಯಮದ ವಿರೋಧಿ ನಾನು. ಅದರ ಬಗ್ಗೆ ಮತ್ಯಾವತ್ತಾದರೂ ಬರೆದೇನು.ಆದರೆ ಇಂದು ಪತ್ರಿಕೋದ್ಯಮ ಅಥವಾ ಪತ್ರಕರ್ತನಾಗುವುದು ಕೇವಲ ಒಂದು ಉದ್ಯೋಗವಷ್ಟೇ. ಹೆಚ್ಚಿನ ಪತ್ರಕರ್ತರು ಸಾದ್ಯವಾದ ಮಟ್ಟಿಗೆ ಸಮಾಜಕ್ಕೆ ಒಳಿತು ಮಾಡಲು ಯತ್ನಿಸುತ್ತಾರೆ ಅಷ್ಟೆ. ಈಗಿನ ಸ್ಥಿತಿಯಲ್ಲಿ ಅದಕ್ಕಿಂತ ಹೆಚ್ಚಿನದನ್ನು ನಿರೀಕ್ಷಿಸುವುದು ಅಸಾದ್ಯವೇನೊ.
ತೇಜಸ್ವಿನಿ ಅವರ ಅಭಿಪ್ರಾಯಕ್ಕೆ ನನ್ನ ಸಹಮತವಿದೆ.
ಎಲವೋ ಮಿಥುನ ನೀನು ಹೇಳಿದ್ದು ಕೇಳಲಿಲ್ಲ ಬದಲಾಗಿ ಕಂಡಿತು.ದಿನಕ್ಕೊಂದು ಲೇಖನ ಹಾಕದಿದ್ದರೂ ವಾರಕ್ಕೊಂದಾದರೂ ಬರೆಯಬೇಕು ಅಂದುಕೊಂಡಿದ್ದೇನೆ. ಆದರೆ ಎಲ್ಲ ಬಾರಿಯೂ ಅಂದುಕೊಂಡಿದ್ದೆಲ್ಲ ಆಗುವುದಿಲ್ಲವಲ್ಲ. ಬ್ಲಾಗಿಗೆ ಬರೆಯುವಾಗ ಅದು ಅಷ್ಟು ಮನಸ್ಸಿಗೆ ತಟ್ಟಬೇಕು. ಬರೆಯಬೇಕು ಅನ್ನಿಸಬೇಕು ಅಂದಾಗ ಮಾತ್ರ ಬರೆಯುತ್ತೇನೆ.

ಕಾರ್ತಿಕ್ ಪರಾಡ್ಕರ್ said...

ಕಿತ್ನೆ ಅಜೀಬ್ ರಿಶ್ತೆ ಹೇ ಯಹಾ ಪೇ, ದೋ ಪಲ್ ಮಿಲ್ತೆ ಹೇ ಸಾತ್ ಸಾತ್ ಚಲ್ತೆ ಹೇ....ಆಶಾ ಭೋಂಸ್ಲೆ ಹಾಡುವ ಈ ಹಾಡಿನೊಳಗೆ ಮಾಧವಿ ಕಂಡುಕೊಂಡ ಸತ್ಯಗಳ ಅನಾವರಣ ಇದೆ ಅಂತ ಅನ್ನಿಸುತ್ತದೆ,ಆರ್ದ್ರಗೊಳಿಸುತ್ತದೆ. ಪೇಜ್ ೩ ಇದೇ ಕಾರಣಕ್ಕೆ ನನಗೂ ಇಷ್ಟ.
ಮಧುರ್ ಭಂಡಾರ್ಕರ್ ಸಿನೆಮಾಗಳು ನಗ್ನ ಸತ್ಯಗಳ ಮೆರವಣಿಗೆ. ಆಯ್ದುಕೊಳ್ಳುವ ವಸ್ತು ನೈಜವಾಗಿರುತ್ತದೆ. ಅದೇ ಕಾರಣಕ್ಕೆ ಖುಷಿ ಕೊಡುತ್ತದೆ.

ವಿಜಯ್ ಜೋಶಿ said...

ಭಟ್ರೆ, ಪೇಜ್ ೩ ಸಿನಿಮಾವನ್ನು ನಾನಿನ್ನೂ ನೋಡಿಲ್ಲ. ಆದ್ರೆ ನಿಮ್ಮ ಲೇಖನ ನೋಡಿದ ಮೇಲೆ ನೋಡಲೇಬೇಕೆಂಬ ಹಠ ಬಂದಿದೆ.
ಅದಿರಲಿ, ನೀವು ಬಿಟ್ಟುಹೋದ ನಂತರ ಮಂಗಳೂರಿನ ಕ್ರೈಂ ಸುದ್ದಿ ಸ್ವಲ್ಪ ನೀರಸ ಅನಿಸುತ್ತಿದೆ. (ನಿಮ್ಮನ್ನು ಹೊಗಳುತ್ತಿಲ್ಲ.)
ನಿಮ್ಮ ಪ್ರಕಾರ, ಪೇಜ್ ೩ ಸಂಸ್ಕೃತಿ ಇವತ್ತಿನ ಪತ್ರಿಕೋದ್ಯಮಕ್ಕೆ ಅನಿವಾರ್ಯವಾ? ಅದರಿಂದ ಹೊರಬರುವ ದಾರಿ ಯಾವುದಾದರೂ ಇದೆಯಾ?

ವಿನಾಯಕ ಭಟ್ಟ said...

ದಿಲ್ಲಿ, ಬೆಂಗಳೂರು, ಮುಂಬಯಿಯಂತಹ ಊರುಗಳನ್ನು, ಅಲ್ಲಿನ ಪತ್ರಿಕೆಗಳನ್ನು ನೋಡಿದರೆ ಪೇಜ್ ತ್ರಿ ಪತ್ರಿಕೋದ್ಯಮ ಅನಿವಾರ್ಯವೇನೋ ಅನ್ನಿಸುತ್ತದೆ. ಅದರಿಂದ ಹೊರಬರುವ ಮಾರ್ಗವೆಂದರೆ ಅದನ್ನು ಪ್ರಕಟಿಸದಿರುವುದು. ಅದು ಮಾಲಿಕರಿಗೆ ಬಿಟ್ಟ ಸಂಗತಿ.
ಕಾರ್ತಿಕ್ ಸಿನಿಮಾಗಳ ಬಗ್ಗೆ ನಿನ್ನ ಜ್ಞಾನ ಅಚ್ಚರಿ ಉಂಟುಮಾಡುತ್ತದೆ. ನಾನು ಪೇಜ್ ತ್ರಿ ಸಿನಿಮಾ ಹಲವು ಬಾರಿ ನೋಡಿ,ಇಷ್ಟಪಟ್ಟಿದ್ದರೂ ಅದರ ನಿರ್ದೇಶಕರ ಬಗ್ಗೆ ನಾನು ತೆಲೆಕೆಡಿಸಿಕೊಂಡಿರಲಿಲ್ಲ. ನೀನು ಅದನ್ನೂ ಗೊತ್ತಿಟ್ಟುಕೊಂಡಿದ್ದೀಯ. ಗುಡ್.

Supreeth.K.S said...

ವಿನಾಯಕರೇ,
ಪತ್ರಿಕೋದ್ಯಮದ ಬಗ್ಗೆ ಅತಿಯಾದ ಆದರ್ಶಗಳಿಲ್ಲದ ಉತ್ತಮ ವಾಸ್ತವಾಂಶಗಳಿಂದ ತುಂಬಿದ ಚಿತ್ರವದು. ಮಧುರ್ ಭಂಡಾರ್ಕರ್‌ನ ಕಾರ್ಪೋರೇಟ್ ಸಹ ಕಾರ್ಪೋರೇಟ್ ಜಗತ್ತಿನ ವಾಸ್ತವಗಳನ್ನು ನಿರ್ಭಾವುಕವಾಗಿ ಹೇಳುತ್ತದೆ.

ಪತ್ರಕರ್ತರಾಗಿ ನೀವು ಆ ಸಿನೆಮಾವನ್ನು ಮೆಚ್ಚಿದ್ದರಿಂದ ಅದಕ್ಕೆ ಹೆಚ್ಚಿನ ಪ್ರಾಮುಖ್ಯತೆ ದಕ್ಕುತ್ತದೆ.

ಸುಧೇಶ್ ಶೆಟ್ಟಿ said...

ಪೇಜ್ ತ್ರೀ ನನಗೂ ಇಷ್ಟವಾದ ಸಿನಿಮಾ.
ಮಧುರ್ ಭ೦ಡಾರ್ಕರ್ ಆರಿಸುವ ವಿಷಯಗಳೇ ಹಾಗೆ.
’ಚಾ೦ದಿನಿ ಬಾರ್’ ಕೂಡ ಅವರದೇ ಸಿನಿಮಾ. ಅವರ ಇನ್ನಿತರ ಸಿನಿಮಾಗಳೆ೦ದರೆ, ’ಕಾರ್ಪೋರೇಟ್’, ’ಟ್ರಾಫಿಕ್ ಸಿಗ್ನಲ್’.

ಹರೀಶ ಮಾಂಬಾಡಿ said...

ನಿಮ್ಮ ಅನುಮಾನ ಅಕ್ಷರಶ ಸತ್ಯ.(ಕೊನೆಯ ಸಾಲಿನ ಬಗ್ಗೆ.)

Unknown said...

i am not safty