ಗಣೇಶ್ ಮತ್ತು ಶಿಲ್ಪಾ ೨ ವರ್ಷದ ಹಿಂದೆ ಭೇಟಿಯಾದರು. ಪರಿಚಯ ಪ್ರೇಮಕ್ಕೆ ತಿರುಗಿತು. ಅದೀಗ ಮದುವೆಯಲ್ಲಿ ಮುಕ್ತಾಯವಾಗಿದೆ!
ಹಾಗಂತ ಟಿವಿ ೯ನಲ್ಲಿ ಒದರುತ್ತಿದ್ದರು. ನಮ್ಮದೇ ವಿಜಯ ಕರ್ನಾಟಕ ಪತ್ರಿಕೆಯಲ್ಲೂ ಹಾಗೇ ಬಂದಿದೆ ಅನ್ನಿ. ಹಾಸ್ಯಕ್ಕೆ ಅವರ ಪ್ರೀತಿ ಮದುವೆಯಲ್ಲಿ ಅಂತ್ಯವಾಯಿತು ಅನ್ನುವುದು ವಾಡಿಕೆ. ಆದರೆ ನಿಜವಾಗಿಯೂ ಸುದ್ದಿ ನಿರೂಪಿಸುವಾಗಲೂ ಹಾಗೆ ಹೇಳಬೇಕೆ?
ಜೋಗಿಯವರು ಜಾನಕಿ ಕಾಲಂನಲ್ಲಿ ಬರೆದ ‘ಪ್ರೀತಿಯೆಂಬ ಮಾಯಾಂಜಿಕೆಯೂ ಮನಸ್ಸೆಂಬ ವೈದಹಿಯೂ’ ಲೇಖನದಲ್ಲಿ ಪ್ರೀತಿಯ ಬಗೆಗೆ ಹಾಸ್ಯಮಯವಾಗಿ, ವಿಶೇಷವಾಗಿ ಮತ್ತು ವಿಶಿಷ್ಟವಾಗಿ ಬರೆದಿದ್ದಾರೆ. ಓದಿರದೇ ಇದ್ದರೆ ಒಮ್ಮೆ ಓದಿ.
ಅವರು ಬರೆಯುತ್ತಾರೆ...
ಪ್ರೀತಿಸದೇ ವರ್ಷಾನುಗಟ್ಟಲೆ ಸಂತೋಷವಾಗಿ ಇದ್ದುಬಿಡಬಹುದು. ಪ್ರೀತಿಸುತ್ತಲೂ ಸಂತೋಷವಾಗಿರಬಹುದು. ಆದರೆ ಪ್ರೀತಿ ಏನನ್ನೋ ಬೇಡುತ್ತದೆ. ಏನನ್ನೋ ಕಾಡುತ್ತದೆ. ಸುಮ್ಮನಿದ್ದವರನ್ನು ಮದುವೆಗೆ ದೂಡುತ್ತದೆ. ಮದುವೆಯಾದರೆ ಪ್ರೀತಿ ಉಳಿಯುತ್ತದೆ ಅಂದುಕೊಳ್ಳುತ್ತಾರೆ. ಮದುವೆಯೆಂಬ ಪಂಜರದಲ್ಲಿ ಪ್ರೀತಿಯನ್ನು ಬಂಧಿಸಲು ಯತ್ನಿಸುತ್ತಾರೆ. ಆದರೆ ಗಿಣಿಯು ಪಂಜರದೊಳಿಲ್ಲ ಎಂಬುದು ಆಮೇಲೆ ತಿಳಿಯುತ್ತದೆ’... ಹೀಗೆ ಸಾಗುತ್ತದೆ ಬರವಣಿಗೆ.
ಅಂತ್ಯ ಇನ್ನೂ ರೋಚಕ!
‘ಮದುವೆಗೆ ಮೊದಲು ಐ ಲವ್ ಯು ಅನ್ನುವುದು ಹೇಗೆ ಎಂಬ ಸಂಕಟ. ಮದುವೆಯಾದ ನಂತರ ಐ ಲವ್ ಯು ಅನ್ನಬೇಕಲ್ಲ ಎಂಬ ಪ್ರಾಣಸಂಕಟ. ಮದುವೆಗೆ ಮೊದಲು ಎಲ್ಲಿ ಪ್ರೀತಿಸ್ತೀನಿ ಅಂದುಬಿಡುತ್ತಾನೋ ಎಂಬ ಭಯ. ಆಮೇಲೆ ಎಲ್ಲಿ ಪ್ರೀತಿಸುತ್ತೇನೆ ಅನ್ನೋದಿಲ್ಲವೋ ಎಂಬ ಭಯ. ಮೊದಲು ಪ್ರೀತಿಸಲಿ ಅನ್ನೋ ಆಸೆ. ನಂತರ ಪ್ರೀತಿಸೋದಿಲ್ಲ ಎಂಬ ಗುಮಾನಿ.
ಒಮ್ಮೆ ಐ ಲವ್ ಯು ಅಂದೆ. ಥ್ಯಾಂಕ್ಯು ಅನ್ನುವ ಉತ್ತರ ಬಂತು. ಮದುವೆಯಾದ ಮೇಲೆ ಅದನ್ನೇ ಅಂದೆ ನೋ ಮೆನ್ಶನ್ ಪ್ಲೀಸ್ ಅನ್ನುವ ಉತ್ತರ ಬಂತು. ಐ ಹೇಟ್ ಯು ಅಂದೆ. ಸೇಮ್ ಟು ಯು ಎಂಬ ಮರುತ್ತರ ಬಂತು. ಸಧ್ಯ ಇಬ್ಬರೂ ಪ್ರೀತಿಸುತ್ತಿಲ್ಲ. ಆದ್ದರಿಂದ ಸುಖವಾಗಿದ್ದೇವೆ ಅಂದುಕೊಂಡೆ’ ಎಂದು ಬರೆಯುತ್ತಾರೆ ಜೋಗಿ. ಪ್ರೀತಿಯ ಬಗ್ಗೆ ಇಷ್ಟು ಅದ್ಭುತವಾಗಿ, ಹಾಸ್ಯಮಿಶ್ರಿತ ಸತ್ಯ ವಿವರಿಸಿದ್ದನ್ನು ನಾನಂತೂ ಎಲ್ಲೂ ಓದಿಲ್ಲ.
ಇಷ್ಟೆಲ್ಲ ನೆನಪಾದದ್ದು ಗಣೇಶ್ ಮದುವೆಯಿಂದ. ಟಿವಿ೯ ಚಾನಲ್‌ನಲ್ಲಂತೂ ಇಡೀ ದಿನ ಅದೇ ಸುದ್ದಿ. ಸಂಜೆಯ ನಂತರ ಬೇರೆ ವಿಷಯವೇ ಇಲ್ಲ. ರಾತ್ರಿ ೧೦.೦೦ ಗಂಟೆಗೆ ಇದೆಂಥಾ ಮದುವೆ!? ಎಂಬ ಕಾರ್ಯಕ್ರಮ. ಯಾಕೆ? ಒಬ್ಬ ಸಿನಿಮಾ ಸ್ಟಾರ್‌ನ ಖಾಸಗಿ ಜೀವನದ ಬಗ್ಗೆ ಯಾಕಿಷ್ಟು ಆಸಕ್ತಿ? ಆತನ ಮದುವೆಯನ್ನು ಇದೆಂಥಾ ಮದುವೆ ಎಂದು ಪ್ರಶ್ನಿಸಲು ಮಾಧ್ಯಮಕ್ಕೆ ಅಧಿಕಾರ ಕೊಟ್ಟವರು ಯಾರು? ಮಾಧ್ಯಮದ ಮಂದಿ ಹದ್ದುಮೀರಿ ವರ್ತಿಸುತ್ತಿದ್ದಾರಾ? ಎಂಬೆಲ್ಲಾ ಪ್ರಶ್ನೆಗಳು ಪತ್ರಕರ್ತನಾದ ನನ್ನಲ್ಲಿಯೇ ಮೂಡುತ್ತಿದೆ.
ಮಾಧ್ಯಮಗಳ ಮತ್ತು ಮಾಧ್ಯಮದಲ್ಲಿರುವ ಕೆಲವರ ಅತ್ಯಾಸಕ್ತಿಯ ಪರಿಣಾಮ ಪ್ರಸಿದ್ಧ ವ್ಯಕ್ತಿಗಳ ಖಾಸಗಿ ಜೀವನ ಹಾಳಾಗಿದೆ. ಖಾಸಗಿ ಜೀವನ ಎಂಬ ಶಬ್ದವೇ ಅವರ ಮಟ್ಟಿಗೆ ಅರ್ಥ ಕಳೆದುಕೊಳ್ಳುತ್ತಿದೆ. ಸಿನಿಮಾ ನಟಿಯರು ಬಂದರೆ ಸಾಕು ಮಧ್ಯಮದವರು ಮುತ್ತುತ್ತಾರೆ. ಮಂಗಳೂರಿಗೆ ಐಶ್ವರ್ಯಾ ರೈ ಬಂದರೆ ಎಲ್ಲ ಮಾಧ್ಯಮ ಪ್ರತಿನಿಧಿಗಳು ಐಶ್ವರ್ಯಾ ರೈ ಇರುವ ಹೋಟೆಲ್ ಎದುರು ಒಂದಿಡೀ ದಿನ ಕಾದು ಕುಳಿತಿರುತ್ತಾರೆ. (ಸಾಮಾನ್ಯರು ಪತ್ರಿಕಾಗೋಷ್ಠಿ ೫ ನಿಮಿಷ ತಡವಾದರೆ ಬೊಬ್ಬೆಹೊಡೆಯುತ್ತಾರೆ!). ಆಕೆಯೋ ಪತ್ರಕರ್ತರನ್ನು ಬಳಿಯೂ ಬಿಟ್ಟುಕೊಳ್ಳುವುದಿಲ್ಲ. ಇದೆಂಥ ಕರ್ಮ ಪತ್ರಕರ್ತರದ್ದು!
ಖಾಸಗಿ ಜೀವನ. ಅವರವರದ್ದು ಅವರವರಿಗೆ. ಒಬ್ಬೆ ಒಳ್ಳೆ ನಟನಾದರೆ ಅವನ ನಟನೆ ಇಷ್ಟಪಡೋಣ. ಲೇಖಕನ ಲೇಖನ ಇಷ್ಟಪಡೋಣ. ಅವರ ಪ್ರೀಮ, ಕಾಮದ ಖಾಸಗಿ ಜೀವನವನ್ನಲ್ಲ. ಸಾರ್ವಜನಿಕ ಜೀವನದಲ್ಲಿ ಇರುವವರು ಉತ್ತಮ ನಡತೆ, ಆದರ್ಶ ಜೀವನ ನಡೆಸಬೇಕು ಎಂದು ಬಯಸುವುದು ತಪ್ಪಲ್ಲ. ಆದರೆ ಹಾಗೇ ಇರಬೇಕು ಎಂದು ನಿರ್ದೇಶಿಸುವುದು ಸರಿಯಲ್ಲ.
ಗಣೇಶ್ ಇಷ್ಟ ಪಟ್ಟ ಹುಡುಗಿಯನ್ನು ಮದುವೆಯಾಗಿದ್ದಾರೆ. ವಿಚ್ಛೇದಿತೆಯನ್ನು ಮದುವೆಯಾಗಲು ಅಂತಹ ಮನಸ್ಥಿತಿ ಬೇಕು ಎಂಬುದು ಸತ್ಯ. ಆದರೆ ಆಕೆಗೆ ಆತನ ಜೀವನ ಕೊಟ್ಟ, ಬಾಳು ಕೊಟ್ಟ ಎಂಬುದು ಸುಳ್ಳು. ಯಾಕೆಂದರೆ ಜೀವನ ಆಕೆಯದು. ವಿಚ್ಛೇದಿತರಾಗಿ ಮದುವೆಯಾಗದೇ ಇರುವವರೂ ಬಾಳು ನಡೆಸುತ್ತಿದ್ದಾರೆ. ಅಥವಾ ಆಕೆ ವಿಚ್ಛೇದಿತೆ. ಬಾಳು ಕತ್ತಲಲ್ಲಿದೆ ಎಂದು ಗಣೇಶ ಮದುವೆಯಾಗಿದ್ದಲ್ಲ. ಇಬ್ಬರೂ ಪರಸ್ಪರ ಇಷ್ಟಪಟ್ಟು ಮದುವೆಯಾಗಿದ್ದಾರೆ. ಅದನ್ನೊಂದು ದೊಡ್ಡ ಆದರ್ಶವೆಂದಾಗಲಿ, ಟಿವಿ೯ ಚಾನಲ್ ಥರ ಇದೆಂಥಾ ಮದುವೆ ಎಂದಾಗಲಿ ಬಿಂಬಿಸುವ, ಭಾರೀ ಪ್ರಚಾರ ಕೊಡುವ ಅಗತ್ಯಗಳು ನನಗಂತೂ ಸರಿ ಅನಿಸುತ್ತಿಲ್ಲ. ಏನಂತೀರಾ?
3 comments:
ನಾವೆಲ್ಲರೂ ನಮ್ಮನ್ನೆ ಪರೀಕ್ಷಿಸಿಕೊಳ್ಳುವ ವಿಚಾರ ಇದು.
ಸ್ಪರ್ಧೆಗೆ ಬಿದ್ದು ಬೇಕಾದ್ದೋ ಬೇಡದ್ದೋ ಅನ್ನೋ ಆತ್ಮವಿಮರ್ಶೆ ಮಾಡದೆ ಜನರಿಗೆ ಇದೇ ಬೇಕು ಎಂಬ ಡಿಫೆನ್ಸ್ ಇಟ್ಟುಕೊಂಡು ಏನೇನೋ ಕೊಡುತ್ತೇವೆ. ನಮ್ಮಲ್ಲಿ ನಡೆಯುವ ಎಷ್ಟೋ ಕಾರ್ಯಕ್ರಮಗಳಲ್ಲಿ ಮಾಧ್ಯಮದ ಮಂದಿ ನಡೆದುಕೊಳ್ಳುವ ರೀತಿ ನೋಡಿ....ಅಷ್ಟು ಸಾಕು.
it's upto them to decide. who are we to comment on it. It's ridiculous. mass medias are behaving irrationally. someone has to teach these medias a lesson
what can i coment?
Post a Comment