Tuesday, January 22, 2008

ಹೊಂಗನಸು ಅಲ್ಲವಿದು ಕೆಟ್ಟ ಕನಸು!

ಆ ಮನೆಯ ಯಜಮಾನ ಆಗಷ್ಟೇ ಸತ್ತಿರುತ್ತಾನೆ. ಅಂತ್ಯ ಸಂಸ್ಕಾರಕ್ಕೆಂದು ಆತನ ಹೆಣವನ್ನು ಗುಡ್ಡದ ಮೇಲೆ ತೆಗೆದುಕೊಂಡು ಹೋಗಿ ಇಟ್ಟಿರುತ್ತಾರೆ. ಆಗ ಅಷ್ಟೂ ಹೊತ್ತು ನಿಮಗೆ ಗೊತ್ತಿಲ್ಲದ ಒಬ್ಬ ವ್ಯಕ್ತಿ ಬರುತ್ತಾನೆ. ಸತ್ತವನ ಹೆಂಡತಿ ಬಳಿ ಹೋಗಿ, ಏನಿಲ್ಲ ವರ್ಷದೊಳಗೆ ಮನೆಯಲ್ಲಿ ಶುಭ ಕಾರ್ಯ ನೆರವೇರಿದರೆ ಎಲ್ಲ ಸರಿ ಹೋಗುತ್ತದೆ. ನಿನ್ನ ಮಗಳಿಗೆ ಒಂದು ಸಂಬಂಧ ಇದೆ ನೋಡಲೆ? ಎನ್ನುತ್ತಾನೆ.
ಇಂತಹ ಘಟನೆ, ಸನ್ನಿವೇಶವನ್ನು ನೀವೆಲ್ಲೂ ನೋಡಿಲ್ಲವೆಂದರೆ ಖಂಡಿತ ಹೊಂಗನಸು ಸಿನಿಮಾ ನೋಡಿ. ಅದರಲ್ಲಿ ಅಪ್ಪನ ಹೆಣ ಇರಿಸಿಕೊಂಡೇ ಮಗಳ ಮದುವೆ ಮಾತನಾಡುವ ಸನ್ನಿವೇಶ ಇದೆ! ನಿಮಗೆ ಇಷ್ಟವಾಗಬಹುದು!!
ಚಿತ್ರದ ನಾಯಕ ಮತ್ತು ನಾಯಕಿ ಹಳ್ಳಿ ಮತ್ತು ನಗರದಲ್ಲಿ ವಾಸವಾಗಿರುವವರು. ಆದರೆ ಹಾಡಲ್ಲಿ ಮಾತ್ರ ಇವರು ಟೈಗರ್ ಪ್ರಭಾಕರ್‌ನ ‘ಕಾಡಿನ ರಾಜ’ ಅಥವಾ ಎಂ.ಪಿ. ಶಂಕರ್‌ನ ಚಿತ್ರಗಳಲ್ಲಿ ಕಾಣುತ್ತಿದ್ದ ‘ಜುಂಬಲಿಕ್ಕಾ ಜುಂಬಿಕ್ಕಾ ಜುಂಬ ಜುಂಬಾಲೆ’ ಹಾಡಿನ ನಮೂನೆಯ ಕಾಡು ಮನುಷ್ಯರ ಬಟ್ಟೆ ಧರಿಸಿ ಬೆರಗು ಮೂಡಿಸುತ್ತಾರೆ. ಇನ್ನು ನಾಯಕಿಯೋ? ಅವಳ ಮುಖ, ನಟನೆ ನಿರ್ದೇಶಕರಿಗೇ ಚೆಂದ.
ನಾಯಕನ ಜತೆ ನಾಯಕಿ ಹಾಗೂ ಗೆಳತಿಯರು ಕೇರಳಕ್ಕೆ ಓಣಂಗಾಗಿ ತೆರಳುತ್ತಾರೆ. ಆಗ ಚಹಾ ತೋಟದಿಂದ ಕಂಗೊಳಿಸುವ ಮುನಾರ್ ತೋರಿಸಲಾಗುತ್ತದೆ. ನಂತರ ಕೆಲವೇ ಕ್ಷಣದಲ್ಲಿ ಆ ಮನೆಯ ಮಾಲಿಕ ಕನ್ನಡದಲ್ಲಿ ಮಾತನಾಡಿ ಬೆಚ್ಚಿ ಬೀಳಿಸುತ್ತಾನೆ. ಅವರದ್ದೇ ಬಾಯಲ್ಲಿ "ಕಾಸರಗೋಡು ಮೊದಲು ಕರ್ನಾಟಕದ ಭಾಗವಾಗಿತ್ತು. ನೀವು ಅದನ್ನು ಉಳಿಸಿಕೊಳ್ಳಲಿಲ್ಲ.’ ಎಂಬ ಡೈಲಾಗುಗಳನ್ನು ನಿರ್ದೇಶಕ ಮಹಾಶಯರು ಹೇಳಿಸುತ್ತಾರೆ. ಆದರೆ ಕಾಸರಗೋಡಿನಲ್ಲಿ ಚಹಾ ತೋಟವೇ ಇಲ್ಲ!
ಇಡೀ ಸಿನಿಮಾದಲ್ಲಿ ನಗು ಬರೋದು ಒಂದೆರಡು ಕಡೆ ಮಾತ್ರ. ಶರಣ್ ಫೋಟೋಗ್ರಾಫರ್ ಆಗಿ ನಗಿಸುತ್ತಾನೆ. ಅರ್ಧ ಸಿನಿಮಾದಿಂದ ಈತ ಕಾಣೆ. ಅಟ್ ಲೀಸ್ಟ್ ಸಿನಿಮಾದ ಅಂತ್ಯದಲ್ಲಿ ನಡೆಯುವ ಮದುವೆಗೆ ಫೋಟೋ ತೆಗೆಯುವ ಆರ್ಡರನ್ನಾದರೂ ಆತನಿಗೆ ನಿರ್ದೇಶಕರು ದಯಪಾಲಿಸ ಬಹುದಿತ್ತು.!
ನಿಜ ಹೇಳೇಕೆಂದರೆ ಹೊಂಗನಸು ಚಿತ್ರಕ್ಕೆ ಈ ಹೆಸರು ಸ್ವಲ್ಪವೂ ಹೊಂದಿಕೊಳ್ಳುವುದಿಲ್ಲ. ಬದಲಾಗಿ ಈ ಚಿತ್ರಕ್ಕೆ ‘ಅತ್ಗೆಗಾಗಿ’ ಎಂದು ಇಟ್ಟಿದ್ದರೆ ಅತ್ಯಂತ ಸೂಕ್ತವಾಗಿತ್ತು. ಯಾಕೆಂದರೆ ನಾಯಕ ಸಿನಿಮಾದುದ್ದಕ್ಕೂ ಆತ ಏನೇ ಮಾಡಿದರೂ ಅದು ಅತ್ತಿಗೆಗಾಗಿ. ಅದೂ ಅಣ್ಣನನ್ನು ಮದುವೆಯಾಗದ!
ಅನಂತನಾಗು ಮತ್ತು ರಮೇಶ್ ಭಟ್ ಗೆಳೆಯರು. ಚಿಕ್ಕವರಿರುವಾಗಲೇ ಅನಂತನಾಗಿನ ಹಿರಿಯ ಮಗನಿಗೂ, ರಮೇಶ ಭಟ್ ಮಗಳಿಗೂ ಮದುವೆ ಎಂದು ಮಾತಾಡಿಕೊಂಡಿರುತ್ತಾರೆ. ಇದನ್ನು ಮದುವೆಯಾಗಬೇಕಾದ ಹಿರಿಯ ಮಗಿನಿಂದ ಕಿರಿಯ ಮಗ (ಚಿತ್ರದ ನಾಯಕ) ಹೆಚ್ಚು ನೆನಪಿಟ್ಟುಕೊಳ್ಳುತ್ತಾನೆ. ಅಂದಿನಿಂದಲೇ ಅವನ ವರ್ತನೆಗಳು ಅತ್ತಿಗೆಯನ್ನು ಬೆಂಬಲಿಸುತ್ತದೆ. ಎಷ್ಟರ ಮಟ್ಟಿಗೆ ಅಂದರೆ ಅವಳನ್ನು ಎಲ್ಲರೂ ಸಾಗರ್‌ನ (ಚಿತ್ರದಲ್ಲಿ ನಾಯಕ ಹೆಸರು) ಅತ್ತಿಗೆ ಎಂದೇ ಕರೆಯುತ್ತಾರೆ. ಇವನೋ ಅತ್ತಿಗೆಗಾಗಿ ಏನೂ ಮಾಡಬಲ್ಲ. ಅಥವಾ ಆತ ಏನೇ ಮಾಡಿದರೂ ಅದು ಅತ್ತಿಗೆಗಾಗಿ (ಕಡಗೆ ಅಣ್ಣ ಇದೇ ಕಾರಣಕ್ಕೆ ಅವಳನ್ನು ಮದುವೆಯಾಗಲು ಒಪ್ಪುವುದಿಲ್ಲ.) ಅತ್ತಿಗೆಗಾಗಿಯೇ ಒಂದು ಹುಡುಗಿಯನ್ನು ಹುಡುಕಿ, ಪ್ರೀತಿಸಿ ಮದುವೆಯಾಗುತ್ತಾನೆ!
ಸಿನಿಮಾ ಆರಂಭವಾಗಿ ಅರ್ಧ ಮುಗಿಯುವವೆಗೂ ಈ ಸುದ್ದಿಯೇ ಇರುವುದಿಲ್ಲ. ನಾಯಕ- ನಾಯಕಿ ಆಕಸ್ಮಿಕವಾಗಿ ಒಂದೆರಡು ಬಾರಿಯಲ್ಲ ಪ್ರೇಕ್ಷಕರಿಗೆ ಬೇಜಾರು ಬರುವಷ್ಟು ಬಾರಿ ಭೇಟಿಯಾಗುತ್ತಾರೆ. ಅಂತೂ ಅರ್ಧ ಮುಗೀತು ಅಂತ ಹೊರ ಹೋಗಿ ಬಂದು ಕುಳಿತರೆ, ಮೊದಲಿನರ್ಧಕ್ಕೆ ಸಂಬಂಧವೇ ಇಲ್ಲದಂತೆ ಕತೆ ಮುಂದುವರಿಯುತ್ತದೆ. ಹೆಚ್ಚು ಕಮ್ಮಿ ಸಿನಿಮಾ ಮುಗಿಯುವವರೆಗೂ ಪ್ರೇಕ್ಷಕರಿಗೆ ಎರಡು ಸಿನಿಮಾ ನೋಡಿದ ಅನುಭವವಾದರೆ, ಆರಂಭದಿಂದ ಮಧ್ಯಂತರವರೆಗೆ ಹಾಗೂ ಮಧ್ಯಂತರದಿಂದ ಅಂತ್ಯದವರೆಗೆ ಎರಡು ಸಿನಿಮಾಗಳನ್ನು ನಿರ್ಮಿಸಿ, ಎರಡನ್ನೂ ಜೋಡಿಸಿದರೆ ಹೇಗಾಗುತ್ತದೆ? ಹಾಗಾಗಿಗೆ ಎಂದು ‘ಹೊಂಗನಸು’ ಸಿನಿಮಾ ಮುಗಿಯುವ ಹೊತ್ತಿಗೆ ಅನಿಸಿರುತ್ತದೆ.
‘ಹೊಂಗನಸು’ ಸಿನಿಮಾವನ್ನು ಪ್ರೇಕ್ಷಕರು ಒಂದು ಕೆಟ್ಟ ಕನಸು ಎಂದು ಮರೆಯಬೇಕಾದ ಸ್ಥಿತಿ ಇದೆ. ಮಂಗಳವಾರ ‘ಗಾಳಿಪಟ’ ಸಿನಿಮಾ ನೋಡಲೆಂದು ಹೋಗಿದ್ದೆವು. ಟಿಕೆಟ್ ಸಿಗದೆ ನಮ್ಮ ಆಸೆಗಳು ದಾರ ಹರಿದ ಗಾಳಿಪಟದಂತೆ ಎಲ್ಲೆಲ್ಲೋ ಸುತ್ತಾಡಿ ಅಂತಿಮವಾಗಿ ಹೊಂಗನಸಾಗಿ ಮಾರ್ಪಾಟಾದವು. ಈಗ ಆ ಹೊಂಗನಸನ್ನು ಕೆಟ್ಟ ಕನಸೆಂದು ಮರೆಯಬೇಕಾಗಿದೆ.
ಆದರೆ ಸಿನಿಮಾಕ್ಕೆ ಹೋಗುವಾಗ ತಲೆನೋವೆಂದು ಹೇಳುತ್ತಿದ್ದ ನನ್ನ ಹೆಂಡತಿಗೆ ಹೊಂಗನಸು ನೋಡಿ ಹೊರಬರುವಾಗ ತಲೆ ನೋವು ಮಂಗಮಾಯವಾಗಿದ್ದು ಮಾತ್ರ ಸತ್ಯ. ಅಷ್ಟರ ಮಟ್ಟಿಗೆ ನಿರ್ದೇಶಕ ಯಶಸ್ವಿಯಾಗಿದ್ದಾನೆ.
ಗೂಗ್ಲಿ: ಹೊಂಗನಸಿನಂತಹ ಸಿನಿಮಾಗಳನ್ನೂ ನೋಡಬೇಕು. ಯಾಕೆಂದರೆ ಒಳ್ಳೆಯ ಸಿನಿಮಾಕ್ಕೂ ಕೆಟ್ಟ ಸಿನಿಮಾಕ್ಕೂ ಇರುವ ವ್ಯತ್ಯಾಸ ಅರಿಯಲು.

5 comments:

ಶಾಂತಲಾ ಭಂಡಿ (ಸನ್ನಿಧಿ) said...

@ವಿನಾಯಕ ಅವರೆ...

ಸಿನೆಮಾ ನೋಡದಿದ್ದರೇನಂತೆ, ಈ ಲೇಖನದುದ್ದಕ್ಕೂ ನಕ್ಕುಬಿಟ್ಟೆ.

ಸಿದ್ಧಾರ್ಥ said...

ವಿನಯಕ ಭಟ್ರೆ, ತುಂಬಾ ಧನ್ಯವಾದಗಳು.
ಮೂರು ತಾಸು ಊಳಿಸಿದ್ದಕ್ಕೆ, ೧೦ ನಿಮಿಷ ನಗಿಸಿದ್ದಕ್ಕೆ!

VENU VINOD said...

ಅತ್ತಿಗೆಗಾಗಿ :)
ಹಹ್ಹಹ್ಹ...
ಹೊಂಗನಸು ನೋಡುವ ಕನಸಿನಲ್ಲಿ ನಾನೂ ಇದ್ದೆ, ಸದ್ಯ ಬಚಾವ್ ಮಾಡಿದ್ರಿ
ಒಳ್ಳೆ ರಿವ್ಯೂ

ವಿನಾಯಕ ಭಟ್ಟ said...

ಓದಿದ್ದಕ್ಕೆ, ನಕ್ಕಿದ್ದಕ್ಕೆ, ನಕ್ಕಿದ್ದನ್ನು, ಮೆಚ್ಚಿದ್ದನ್ನು ಮುಚ್ಚಿಡದೆ ಬರೆದದ್ದಕ್ಕೆ ಧನ್ಯವಾದ. ನಿಮ್ಮ ೩ ತಾಸು, ಒಂದಷ್ಟು ಕಾಸು ಉಳಿಸಿದ ಭಾಗ್ಯ ನನ್ನದಾದದ್ದು ಸಂತೋಷ.

ತೇಜಸ್ವಿನಿ ಹೆಗಡೆ said...

ಹೊಂಗನಸು ಚಿತ್ರವನ್ನು ನೋಡುವ ಕನಸೇನೂ ಇರಲಿಲ್ಲ. ನಿಮ್ಮ ವಿಮರ್ಶೆ ನೋಡಿದಮೇಲಂತೂ ನೋಡುವ ಹೊಂಗನಸೂ ಮೂಡುವಂತಿಲ್ಲ. ಇನ್ನು ಗಾಳಿಪಟ ಚಿತ್ರ.. ನಿಮ್ಮ ಕಾಸು, ಸಮಯ ಉಳಿಯಬೇಕೇ ಬೇಡವೇ ಎಂಬುದನ್ನು ಈ ಕೆಳಗಿನ ಲಿಂಕ್ ನಲ್ಲಿರುವ ಶ್ರೀನಿಧಿಯವರ ವಿಮರ್ಶೆ ನೋಡಿ ನಿರ್ಧರಿಸಿ..
http://shree-lazyguy.blogspot.com