ಸಿನಿಮಾ ನೋಡಿ ನಾನು ಅತ್ತಿದ್ದು ಯಾವಾಗ?
ಎಷ್ಟು ಪ್ರಯತ್ನಪಟ್ಟರೂ ನೆನಪಾಗುತ್ತಿಲ್ಲ.
ನನಗೆ ತಿಳಿಯಲು ಆರಂಭವಾದಾಗಿನಿಂದ ಸಿನಿಮಾ ನೋಡಿ ಅತ್ತಿದ್ದು ಹೆಚ್ಚೆಂದರೆ ಒಂದೆರಡು ಬಾರಿ ಮಾತ್ರ. ಹೈಸ್ಕೂಲ್ ದಾಟಿದ ಮೇಲೆ ಸಿನಿಮಾ ನೋಡಿ ಅತ್ತ ದಾಖಲೆಯೇ ಇಲ್ಲ.
ಆದರೆ ಮೊನ್ನೆ ಅತ್ತುಬಿಟ್ಟೆ. ತಾರೆ ಜಮೀನ್ ಪರ್ ಸಿನಿಮಾ ನೋಡಿ ಅತ್ತುಬಿಟ್ಟೆ. ಅತ್ತುಬಿಟ್ಟೆ ಅನ್ನುವುದಕ್ಕಿಂತ ಹಲವು ಬಾರಿ ಅಳು ಬಂತು ಅನ್ನುವುದು ಹೆಚ್ಚು ಸೂಕ್ತ.
ಸಾಮಾನ್ಯವಾಗಿ ಸಿನಿಮಾ ನೋಡಿ ನಾನು ಅಳುವುದಿಲ್ಲ. ಸಿನಿಮಾವನ್ನು ಕೇವಲ ಸಿನಿಮಾ ಎಂದು ನೋಡಿದವನು ನಾನು. ಅದರಲ್ಲೂ ಒಬ್ಬ ಪತ್ರಿಕೋದ್ಯಮ ವಿದ್ಯಾರ್ಥಿಯಾಗಿ, ಸಿನಿಮಾ ನೋಡುವುದು ಹೇಗೆ ಎಂಬುದನ್ನು ಮೇಸ್ಟ್ರರಿಂದ ಹೇಳಿಸಿಕೊಂಡವನಾಗಿ ಸಿನಿಮಾದೊಳಗೆ ಭಾವನಾತ್ಮಕವಾಗಿ ಸೇರಿ ಹೋಗುವುದು ಬಹಳ ಕಡಿಮೆ. ಆದರೆ ತಾರೆ ಜಮೀನ್ ಪರ್ ನೋಡುವಾಗ ಮಾತ್ರ ಅದು ಸಾಧ್ಯವೇ ಆಗಲಿಲ್ಲ.
ಯಾಕಿರಬಹುದು?
ನಾನೂ ಚಿಕ್ಕವನಿರುವಾಗ ಬೇಕಾದಷ್ಟು ಬಾರಿ ಅಪ್ಪನಿಂದ ಬೈಸಿ, ಹೊಡೆಸಿಕೊಂಡಿದ್ದಕ್ಕಾ? ಕಡಿಮೆ ಮಾರ್ಕ್ಸ್ ತಗೊಂಡೆ ಎಂದು ಬೈಸಿಕೊಂಡಿದ್ದಕ್ಕಾ? ಹೆಚ್ಚು ಮಾರ್ಕ್ಸ್ ಪಡೆಯದೇ, ಓದದೇ, ಕ್ರಿಕೆಟ್ ಆಡಿದ್ದಕ್ಕೆ ಒಂದಿಡೀ ದಿನ ಮನೆಯ ಹೊರಗೇ ನಿಲ್ಲುವ ಶಿಕ್ಷೆ ಅನುಭವಿಸಿದ್ದಕ್ಕಾ? ಇದೆಲ್ಲದರ ಪರಿಣಾಮ ನಾನು ತಾರೆ ಜಮೀನ್ ಪರ್ ಹಿರೋ ಬಾಲಕನ ಜತೆ ನನ್ನನ್ನೇ ಗುರುತಿಸಿಕೊಂಡೆನಾ?
ಬಹುಶಃ ಹೌದು. ಅದರ ಪರಿಣಾಮವೇ ಕಣ್ಣು ನೀರಾಡಿದ್ದು.
ನಾನಾದರೋ ಕಲಿಯುವಾಗ ಅಷ್ಟೇನೂ ಸ್ಪರ್ಧೆ ಇರಲಿಲ್ಲ. ಕಲಿಯದಿದ್ದರೆ, ಶೇ.೮೫ಕ್ಕಿಂತ ಹೆಚ್ಚು ಮಾರ್ಕ್ಸ್ ಪಡೆಯದಿದ್ದರೆ ಕೆಲಸ ಸಿಗದೇ ನಿಷ್ಪ್ರಯೋಜಕ ಎನಿಸಿಕೊಳ್ಳಬೇಕಾದ ಸ್ಥಿತಿ ಬರುತ್ತದೆ ಎಂಬ ಸ್ಥಿತಿ ಇರಲಿಲ್ಲ. ಈಗಿನ ಹಾಗೆ ೧೦೦ಕ್ಕೆ ೯೯, ೯೮ ಮಾರ್ಕ್ಸ್‌ಗಳೂ ಆಗ ಸಿಗುತ್ತಿರಲಿಲ್ಲ. ನಾನು ಯಾರ ಬಳಿಯೂ ಟ್ಯೂಶನ್ ಹೇಳಿಸಿಕೊಳ್ಳದೆ ಎಂಎ ಮುಗಿಸಿದೆ. ಈಗ ನೋಡಿದರೆ ೧-೨-೩ನೇ ತರಗತಿಗೇ ಟ್ಯೂಶನ್. ಎಸ್ಸೆಸ್ಸೆಲ್ಸಿ, ಪಿಯುಸಿ ಮಕ್ಕಳಿಗಂತೂ ಬೆಳಗ್ಗೆ ಟ್ಯೂಶನ್, ನಂತರ ಕ್ಲಾಸು. ಅದರ ನಂತರ ಮತ್ತೆ ಸಂಜೆ ಟ್ಯೂಶನ್, ರಜೆಯಲ್ಲಿ ಟ್ಯೂಶನ್. ಆ ಮಕ್ಕಳ ಮೇಲೆ ಅದೆಷ್ಟು ಒತ್ತಡ ಇರಬಹುದು? ಶೇ.೯೦, ೮೦ ಅಂಕ ಪಡೆಯುವ ಮಕ್ಕಳು ಒಳಗೊಳಿಂದೊಳಗೆ ಅದೆಷ್ಟು ಕುಸಿಯುತ್ತಿರಬಹುದು? ಕಲ್ಪನೆಗೂ ನಿಲುಕದ್ದು.
ಹೆಚ್ಚು ಅಂಕ ಪಡೆಯಲು ಮಕ್ಕಳ ಮೇಲೆ ಒತ್ತಡ ಹೇರುವ ಪಾಲಕರು ತಾರೆ ಜಮೀನ್ ಪರ್ ಸಿನಿಮಾ ನೋಡುವುದೊಳಿತು.
3 comments:
ನಮಸ್ತೇ.
ನೀವು ಹೇಳಿದ್ದು ನಿಜ. ಈ ಸಿನೆಮಾ ನೋಡಿ ನಾನೂ ಅತ್ತಿದ್ದು ಹೌದು. ಆದರೆ ನೆನಪಾಗಿದ್ದು ಶತ ಪ್ರಯತ್ನ ಮಾಡಿದ ನಂತರವೂ ದಡ್ಡ ಅನಿಸಿಕೊಳ್ಳುತ್ತಲೇ ಉಳಿದ, ಕೀಳರಿಮೆಯಿಂದ ಇದೀಗ ಜೀವನ ನಡೆಸಲಿಕ್ಕೆ ಹರ ಸಾಹಸ ಮಾಡ್ತಿರುವ ನನ್ನ ಸಮೀಪದ ಬಂಧುವೊಬ್ಬ. ಇಂಥವರು ಅದೆಷ್ಟೋ... ಅಮೀರ್ ಖಾನನಂಥವರು ಪಿಚ್ಚರಿನಲ್ಲಿ ಮಾತ್ರ ಸಿಗೋದಾ?
- ಚೇತನಾ ತೀರ್ಥಹಳ್ಳಿ
ಚೇತನಾ ಅವರೆ, ಅಮೀರ್ ಖಾನ್ ನಂಥವರು ನಿಜ ಜೀವನದಲ್ಲಿ ಸಿಗಬಹುದಾ ಅಂದಿದ್ದೀರಿ. ಸಿಗಬಹುದು. ಆದರೆ ನಿಜ ಜೀವನದಲ್ಲಿ ಅಮೀರ್ ಖಾನ್ ನದೇ ಸಾಕಷ್ಟು ಕಿರಿಕಿರಿಗಳಿವೆಯಲ್ಲ!
ನಾನೂ ಚಿಕ್ಕವನಿರೋವಾಗ ಬೇಕಾದಷ್ಟು ಅನುಭವಿಸಿದ್ದೀನಿ. ಅವಮಾನಗಳನ್ನ. ಕಾಲೇಜು ಮುಗಿಯೋವರೆಗೂ ನಾನು ಗಳಿಸಿದ ಅಂಕ ಶೇ.೫೯ ಮೀರಿಲ್ಲ. ಇವತ್ತು ನೋಡಿ ಹ್ಯಾಗಿದ್ದೀನಿ. ಎಂ.ಎ.ಯಲ್ಲಿ ಗೋಲ್ಡ್ ಮೆಡಲ್ ಪಡೆದವನಿಗಿಂತ ಚೆನ್ನಾಗಿದ್ದೇನೆ.
ನಾನು ಸಹ ತಾರೆ ಜಮೀನ್ ಪರ್ ನೋಡಿದೆ. ನನಗೆ ಅಳು ಬಂದೇ ಇಲ್ಲ. ಬಹುಶಃ ಪೂರ್ಣ ಸರ್ ನನಗೂ ಸಿನಿಮಾ ನೋಡುವ ಕಲೆ ಬಗ್ಗೆ ವಿವರಿಸಿದ್ದರ ಪ್ರಭಾವ ಇರಬೇಕು. ಅದ್ರೆ ನನ್ನ ಬಾಲ್ಯದ ದಿನಗಳು ನೆನಪಾದವು. ಅ ದಿನಗಳು ಮತ್ತೆ ಬರಬಾರದೇ ಎಂದು ಅನ್ನಿಸಿದ್ದು ನಿಜ.
Post a Comment