Monday, May 18, 2009

ಕರಗಿದ ಬಿಜೆಪಿಯ ಉಕ್ಕಿನ ಮನುಷ್ಯಲೋಕಸಭೆ ಚುನಾವಣೆಯಲ್ಲಿನ ಜನಾದೇಶ ಬಿಜೆಪಿಯನ್ನು ರಾಷ್ಟ್ರ ಮಟ್ಟದ ಪಕ್ಷವಾಗಿ, ಅಧಿಕಾರಕ್ಕೇರುವಷ್ಟು ಶಕ್ತಿಯುತವಾಗಿ ಬೆಳೆಸಿದ ಲಾಲಕೃಷ್ಣ ಅಡ್ವಾಣಿ ಅವರ ಪ್ರಧಾನಿ ಕನಸನ್ನು ಭಗ್ನಗೊಳಿಸಿರುವುದರ ಜೊತೆಗೆ ಅವರ ಯುಗಾಂತ್ಯಕ್ಕೆ ಬರೆದ ಮುನ್ನುಡಿಯಂತಿದೆ.

‘ಅಜಾತಶತ್ರು’ ಅಟಲ್ ಬಿಹಾರಿ ವಾಜಪೇಯಿ ೨ ಬಾರಿ ದೇಶದ ಜನರ ಮೇಲೆ ಮಾಡಿದ ಜಾದೂವನ್ನು ಮಾಡಿ ಬಿಜೆಪಿಯನ್ನು ಮತ್ತೆ ಕೇಂದ್ರದಲ್ಲಿ ಅಧಿಕಾರಕ್ಕೆ ತರಲು ಬಿಜೆಪಿಯ ‘ಉಕ್ಕಿನ ಮನುಷ್ಯ’ ಎಂದೇ ಹೆಸರಾಗಿರುವ ಲಾಲಕೃಷ್ಣ ಅಡ್ವಾಣಿ ವಿಫಲರಾಗಿದ್ದಾರೆ. ಪರಿಣಾಮ ಅವರು ಪ್ರಧಾನಿ ಪಟ್ಟದ ಆಕಾಂಕ್ಷಿಯಾಗಿಯೇ ರಾಜಕೀಯ ಜೀವನ ಮುಗಿಸಬೇಕಾದ ಸ್ಥಿತಿ ಉದ್ಭವವಾಗಿದೆ.

ಲಾಲಕೃಷ್ಣ ಅಡ್ವಾಣಿ ಅವರಿಗೆ ಈಗಾಗಲೇ ೮೧. ಮಾನಸಿಕವಾಗಿ ಅಥವಾ ದೈಹಿಕವಾಗಿ ಅಡ್ವಾಣಿ ಮೊದಲಿನಷ್ಟು ದೃಢವಾಗಿ ಉಳಿದಿಲ್ಲ. ಅಲ್ಲದೆ ಈ ಬಾರಿ ಜನ ಕಾಂಗ್ರೆಸ್ ನೇತೃತ್ವದ ಯುಪಿಎಗೆ ಸಾಕಷ್ಟು ಸಂಸದರ ಬೆಂಬಲ ದೊರಕಿಸಿಕೊಟ್ಟಿದ್ದಾರೆ. ಹೀಗಾಗಿ ಮುಂದಿನ ೫ ವರ್ಷದಲ್ಲಿ ಈ ಸರಕಾರ ಬೀಳುವ ಸಾದ್ಯತೆಗಳು ತೀರ ಕಡಿಮೆ. ಇನ್ನು ೫ ವರ್ಷದವರೆಗೆ ಲಾಲಕೃಷ್ಣ ಅಡ್ವಾಣಿ ರಾಜಕೀಯದಲ್ಲಿರುವುದು ಹಾಗೂ ಅದರ ನಂತರ ಅವರು ಮತ್ತೆ ಬಿಜೆಪಿಯ ಪ್ರಧಾನಿ ಅಭ್ಯರ್ಥಿಯಾಗಿ ಚುನಾವಣೆ ನೇತೃತ್ವ ವಹಿಸುವುದು ಬಹುತೇಕ ಅಸಾದ್ಯ ಸಂಗತಿ ಎಂಬುದರಲ್ಲಿ ಅನುಮಾನವಿಲ್ಲ.

ಈ ಲೋಕಸಭೆ ಚುನಾವಣೆ ನಡುವಿನಲ್ಲೇ ಸೋಲಿನ ಸುಳಿವರಿತ ಕೆಲವು ಬಿಜೆಪಿ ನಾಯಕರು ಗುಜರಾತ್ ಮುಖ್ಯಮಂತ್ರಿ ನರೇಂದ್ರ ಮೋದಿ ಅವರನ್ನು ಭವಿಷ್ಯದ ಪ್ರಧಾನಿ ಅಭ್ಯರ್ಥಿ ಎಂದು ಬಹಿರಂಗವಾಗಿಯೇ ಹೇಳಿದರು. ಇದನ್ನು ಸ್ವತಃ ಮೋದಿ ಅಲ್ಲಗಳೆದಿದ್ದಾರಾದರೂ, ವಾಜಪೇಯಿ ನಂತರ ಪ್ರಧಾನಿ ಅಭ್ಯರ್ಥಿಯಾಗಿ ದೇಶಾದ್ಯಂತ ಜನರನ್ನು ಸೆರಳೆಯಬಲ್ಲ ಶಕ್ತಿ ಇರುವುದು ನರೇಂದ್ರ ಮೋದಿಗೆ ಮಾತ್ರ ಎಂಬುದನ್ನು ಬಿಜೆಪಿ ನಾಯಕರು ಒಪ್ಪಿಕೊಳ್ಳುತ್ತಾರೆ. ಹೀಗಾಗಿ ಮುಂದಿನ ಲೋಕಸಭೆ ಚುನಾವಣೆ ಹೊತ್ತಿಗೆ ಮೋದಿ ಪ್ರಧಾನಿ ಅಭ್ಯರ್ಥಿಯಾಗಿ ಹೊರಹೊಮ್ಮುದನ್ನು ಬಹುತೇಕ ಬಿಜೆಪಿ ನಾಯಕರು ಬಯಸುತ್ತಿದ್ದಾರೆ.

೧೯೯೦ರ ದಶಕದಲ್ಲಿ ಅಯೋಧ್ಯೆ ಚಳವಳಿಯ ನೇತೃತ್ವ ವಹಿಸಿದ ಲಾಲಕೃಷ್ಣ ಅಡ್ವಾಣಿ ದೇಶಾದ್ಯಂತ ರಥಯಾತ್ರೆ ನಡೆಸಿ, ಬಿಜೆಪಿಯನ್ನು ರಾಷ್ಟ್ರೀಯ ಮಟ್ಟದ ಪಕ್ಷವನ್ನಾಗಿ ಮಾಡಿದರು. ಅಯೋಧ್ಯಾ ಚಳವಳಿ ಬಿಜೆಪಿಗೆ ಅನಿರೀಕ್ಷಿತ ಜನಬೆಂಬಲ ದೊರಕಿಸಿಕೊಟ್ಟಿತು. ಈ ಚಳವಳಿ ದೇಶದ ರಾಜಕೀಯ ಚಿತ್ರಣವನ್ನೇ ಬದಲಾಯಿಸಿತು.
ಇಷ್ಟೆಲ್ಲ ಹೋರಾಟದ ನೇತೃತ್ವ ವಹಿಸಿ ಪಕ್ಷದ ಸಂಪೂರ್ಣ ಹಿಡಿತ ಲಾಲಕೃಷ್ಣ ಅಡ್ವಾಣಿ ಬಳಿ ಇತ್ತು. ಪಕ್ಷದ ಸೈದ್ಧಾಂತಿಕ ನಿಲುವಿನ ಪ್ರತಿನಿಧಿಯಾಗಿ ಲಾಕೃಷ್ಣ ಅಡ್ವಾಣೀ ಇದ್ದರು. ಸಂಘಪರಿವಾರದ ನಿಯಂತ್ರಣ ಬಿಟ್ಟರೆ ಬಿಜೆಪಿ ಮಟ್ಟಿಗೆ ಲಾಲಕೃಷ್ಣ ಅಡ್ವಾಣಿ ಪ್ರಶ್ನಾತೀತ ನಾಯಕರಾಗಿದ್ದರು. ಅಂತಹ ಸಂದರ್ಭದಲ್ಲಿ ಕೂಡ ಅಡ್ವಾಣಿ ಅವರು ಅಟಲ್ ಬಿಹಾರಿ ವಾಜಪೇಯಿ ಅವರನ್ನು ೧೯೯೯೫ರಲ್ಲಿ ಪ್ರಧಾನಿ ಅಭ್ಯರ್ಥಿಯಾಗಿ ಬಿಂಬಿಸಿದರು. ವಾಜಪೇಯಿ ಪ್ರಧಾನಿಯಾಗಿದ್ದಾಗ ಉಪಪ್ರಧಾನಿಯಾಗಿ ಕಾರ್ಯನಿರ್ವಹಿಸಿದರು. ೨೦೦೫ರಲ್ಲಿ ವಾಜಪೇಯಿ ಅವರು ಅಡ್ವಾಣಿ ಅವರನ್ನು ತಮ್ಮ ಮುಂದಿನ ನಾಯಕ ಎಂದು ಪರೋಕ್ಷವಾಗಿ ಹೇಳುವ ಮೂಲಕ ಅಡ್ವಾಣಿ ಅವರ ಋಣ ತೀರಿಸಿದರು.

ಇದಾದ ಕೆಲವೇ ದಿನದಲ್ಲಿ ಅಡ್ವಾಣಿ ಅವರ ಗೃಹಚಾರ ಕೆಟ್ಟಿರು. ಪಾಕಿಸ್ತಾನಕ್ಕೆ ಹೋದ ಅಡ್ವಾಣಿ ಮಹಮ್ಮದ್ ಅಲಿ ಜಿನ್ಹಾ ಅವರನ್ನು ಜಾತ್ಯತೀತ ನಾಯಕ ಎಂದು ಕೊಂಡಾಡಿದರು. ಅದು ಸಂಘಪರಿವಾರದ ಕಣ್ಣು ಕೆಂಪಾಗಿಸಿತು. ಅಡ್ವಾಣಿ ಅವರಿಗಿದ್ದ ‘ಉಕ್ಕಿನ ಮನುಷ್ಯ’ ಎಂಬ ಬಿರುದು ಕೂಡ ಸದ್ದಿಲ್ಲದೆ ಬದಿಗೆ ಸರಿಯಿತು. ಪರಿಣಾಮ ೨೦೦೫ರ ಡಿ.೩೧ರಂದು ಲಾಲಕೃಷ್ಣ ಅಡ್ವಾಣಿ ಬಿಜೆಪಿ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಬೇಕಾಯಿತು.

ಅದರ ನಂತರ ಲಾಲಕೃಷ್ಣ ಅಡ್ವಾಣಿ ಅವರ ಒಳಗಿನ ‘ಉಕ್ಕಿನ ಮನುಷ್ಯ’ ಹೆಚ್ಚಾಗಿ ಕಾಣಿಸಿಕೊಳ್ಳಲೇ ಇಲ್ಲ. ಅಟಲ್‌ಬಿಹಾರಿ ವಾಜಪೇಯಿ ಅವರಿಗಿದ್ದ ‘ಜಾತ್ಯತೀತ’ ನಿಲುವನ್ನು ತಾನೂ ತಳೆಯಲು ಯತ್ನಿಸಿದ ಲಾಲಕೃಷ್ಣ ಅಡ್ವಾಣಿ ಬಹುತೇಕ ವಿಷಯಗಳಲ್ಲಿ ಮುಂದೆ ರಾಜಿ ಮಾಡಿಕೊಂಡಿದ್ದನ್ನು ಗಮನಿಸಬಹುದು. ಪರಿಣಾಮ ಅವರು ಅತ್ತ ‘ಜಾತ್ಯತೀತ’ರೂ ಆಗಲಿಲ್ಲ, ಕಠೋರ ಹಿಂದೂ ನಾಯಕರಾಗಿಯೂ ಮುಂದುವರಿಯಲಿಲ್ಲ. ಹೀಗೆ ವಯಸ್ಸಿನ ಹೊಡೆತಕ್ಕೊ, ಅನುಭವದ ಭಾರಕ್ಕೊ, ಪ್ರಧಾನಿ ಪಟ್ಟದಾಸೆಗೊ ಅಡ್ವಾಣಿ ಮೆತ್ತಗಾದರು.

೮೧ ವರ್ಷವಾಗಿರುವದನ್ನೂ ಲೆಕ್ಕಿಸದೆ ಈ ಚುನಾವಣೆ ಪ್ರಚಾರದಲ್ಲಿ ಲಾಲಕೃಷ್ಣ ಅಡ್ವಾಣಿ ಯುವಕರಿಗೆ ಕಡಿಮೆ ಇಲ್ಲದಂತೆ ಕೆಲಸ ಮಾಡಿದರು. ಉತ್ತರ ಭಾರತದ ೪೦ ಡಿಗ್ರಿ ಬಿಸಿಲನ್ನೂ ಲೆಕ್ಕಿಸದೆ ಸಾರ್ವಜನಿಕ ಸಭೆಗಳಲ್ಲಿ ಭಾಗವಹಿಸಿದರು. ಪ್ರಚಾರಕ್ಕಾಗಿ ೬೦,೦೦೦ ಕಿ.ಮೀ.ಗಿಂತ ಹೆಚ್ಚು ಪ್ರಯಾಣ ಮಾಡಿದರು. ಆಧುನಿಕ ತಂತ್ರಜ್ಞಾನ, ವೆಬ್‌ಸೈಟ್, ಎಸ್‌ಎಂಎಸ್‌ಗಳನ್ನು ಬಳಸಿದರು. ಯುವ ಮತದಾರರನ್ನು ಸೆಳೆಯುವ ಯತ್ನ ಮಾಡಿದರು. ಇಷ್ಟೆಲ್ಲ ಮಾಡಿಯೂ ಅಡ್ವಾಣಿ ೯೦ರ ದಶಕದಲ್ಲಿ ಗಳಿಸಿದ್ದ ಜನಪ್ರಿಯತೆಯನ್ನು ಗಳಿಸಲು ೨೦೦೯ರಲ್ಲಿ ವಿಫಲರಾದರು.ಪ್ರಧಾನಿಯಾಗುವ ಅವರ ಕನಸು ನನಸಾಗೇ ಉಳಿಯಿತು.

6 comments:

ಹರೀಶ ಮಾಂಬಾಡಿ said...

patrikeyallo nodide. Matte vipaksha nayakaradralla?

Unknown said...

We are loosing all the great leaders. Really very sad that we are loosing these great leaders, Who knows the india very well .. Now only politions know Money and influence .. and bad words ..
We are really missing the advani's sprit words and Gorge's sprit
:-( :-( ..... any way The people gave nice lesson to Renuka to control her tounge ...

Anonymous said...

: ಅಂತಹ ಸಂದರ್ಭದಲ್ಲಿ ಕೂಡ ಅಡ್ವಾಣಿ ಅವರು ಅಟಲ್ ಬಿಹಾರಿ ವಾಜಪೇಯಿ ಅವರನ್ನು ೧೯೯೯೫ರಲ್ಲಿ ಪ್ರಧಾನಿ ಅಭ್ಯರ್ಥಿಯಾಗಿ ಬಿಂಬಿಸಿದರು.
: ಪ್ರಧಾನಿಯಾಗುವ ಅವರ ಕನಸು ನನಸಾಗೇ ಉಳಿಯಿತು.
: ಇದಾದ ಕೆಲವೇ ದಿನದಲ್ಲಿ ಅಡ್ವಾಣಿ ಅವರ ಗೃಹಚಾರ ಕೆಟ್ಟಿರು.
- shabda doshagalu

Ulidante lekhana sarala sundara.

ಮಿಥುನ ಕೊಡೆತ್ತೂರು said...

ಅಧ್ವಾನಿ ಪ್ರಧಾನಿಯಾಗಬೇಕಿತ್ತು, ಸ್ವಿಸ್ ಹಣ ಬರಬೇಕಿತ್ತು.
ಇನ್ನು ಮೋದಿ ಅಥವಾ ಸುಷ್ಮಾ ಸ್ವರಾಜ್ ರಂತಹವರಿಗೆ ಅವಕಾಶ ಕೊಟ್ಟು, ಪಕ್ಷ ಗಟ್ಟಿಗೊಳಿಸುವುದು ಒಳಿತು

ವಿನಾಯಕ ಭಟ್ಟ said...
This comment has been removed by the author.
ವಿನಾಯಕ ಭಟ್ಟ said...

ಪ್ರತಿಕ್ರಿಯೆಗಾಗಿ ಧನ್ಯವಾದ.
ಅನಾಮಧೇಯರೇ ನಿಮ್ಮ ಸಲಹೆಗೆ ಧನ್ಯವಾದಗಳು. ಚುನಾವಣಾ ನಂತರದ ಬ್ಯೂಸಿ ನಡುವೆ ಈ ಲೇಖನ ಬ್ಲಾಗಿಸಿದ್ದರಿಂದ ತಪ್ಪುಗಳು ಉಳಿದುಕೊಂಡುಬಿಟ್ಟಿವೆ. ಅವುಗಳನ್ನು ತಿಳಿಸಿದ್ದಕ್ಕೆ ಧನ್ಯವಾದಗಳು. ಆದರೆ ನಿಮ್ಮ ಹೆಸರು ಹಾಕಿದ್ದರೆ ಇನ್ನಷ್ಟು ಸಂತೋಷವಾಗುತ್ತಿತ್ತು.
ತಮ್ಮಲ್ಲೇ ತಪ್ಪಿಟ್ಟುಕೊಂಡು, ಇನ್ನೊಬ್ಬರ ತಪ್ಪು ಹುಡುಕುವವರು ಮಾತ್ರ ಹೀಗೆ ಅನಾಮಧೇಯರಾಗಿ ತಪ್ಪುಗಳನ್ನು ತಿಳಿಸುತ್ತಾರೆ ಎಂಬುದು ನನ್ನ ನಂಬಿಕೆ. ಇಲ್ಲವಾದಲ್ಲಿ ಹೆಸರು ಹಾಕಲು ಯಾವ ಅಡ್ಡಿಯೂ ಇರಲಿಲ್ಲ.
ಪರವಾಗಿಲ್ಲ. ಇನ್ನು ಮುಂದೆ ತಪ್ಪುಗಳಾಗದಂತೆ ಎಚ್ಚರ ವಹಿಸುತ್ತೇನೆ.