Wednesday, May 13, 2009

ಸಿಬಿಐ= ಕ್ಲೀನ್‌ಚಿಟ್ ಬ್ಯೂರೋ ಆಫ್ ಇನ್ವೆಸ್ಟಿಗೇಷನ್


ದೇಶದ ಉನ್ನತ ತನಿಖಾ ಸಂಸ್ಥೆ ಸೆಂಟ್ರಲ್ ಬ್ಯೂರೋ ಆಫ್ ಇನ್‌ವೆಸ್ಟಿಗೇಷನ್ ಅಲಿಯಾಸ್ ಸಿಬಿಐ ಮತ್ತೆ ಸುದ್ದಿಯಲ್ಲಿದೆ. ಕೆಟ್ಟ ಕಾರಣಕ್ಕಾಗಿ.
೧೯೮೪ರ ಗಲಭೆಗೆ ಸಂಬಂಧಿಸಿದಂತೆ ಕಾಂಗ್ರೆಸ್ ನಾಯಕರಾದ ಜಗದೀಶ್ ಟೈಟ್ಲರ್ ಹಾಗೂ ಸಜ್ಜನ್‌ಕುಮಾರ್ ಅವರನ್ನು ದೋಷಮುಕ್ತ ಎಂದು ವರದಿ ನೀಡುವ ಮೂಲಕ ಸಿಖ್ಖರ ಕೆಂಗಣ್ಣಿಗೆ ಗುರಿಯಾಗಿದ್ದ ಸಿಬಿಐ ಈಗ ಬೊಫೋರ್ಸ್ ಹಗಣದ ಆರೋಪಿಗಳಲ್ಲಿ ಒಬ್ಬನಾದ ಇಟಲಿಯ ಒಟೆವಿಯೊ ಕೊಟ್ರೋಚಿಯ ಮೇಲಿರುವ ಪ್ರಕರಣವನ್ನೂ ಕೈಬಿಟ್ಟು, ಹೊರಡಿಸಿದ್ದ ರೆಡ್‌ಕಾರ್ನನ್ ನೋಟೀಸ್ ರದ್ದುಪಡಿಸುವ ಮೂಲಕ ಮೂಲಕ ದೇಶದ ಜನರನ್ನು ಬೆಚ್ಚಿ ಬೀಳಿಸಿದೆ. ಜಗದೀಶ ಟೈಟ್ಲರ್ ಹಾಗೂ ಸಜ್ಜನ್ ಕುಮಾರ್ ಕಾಂಗ್ರೆಸ್ಸಿಗರಾದರೆ, ಒಟೆವಿಯೊ ಕೊಟ್ರೋಚಿ ಸೋನಿಯಾ ಕುಟುಂಬಕ್ಕೆ ಹತ್ತಿರದವರು ಎಂಬುದು ಗುಟ್ಟೇನಲ್ಲ. ಈ ಎರಡೂ ಕ್ಲೀನ್‌ಚಿಟ್‌ಗಳು ಯುಪಿಎ ಅಧಿಕಾರಾವಧಿ ಅಂತಿಮ ಸಮಯದಲ್ಲಿ ಹೊರಬಿದ್ದಿರುವುದು ಸಿಬಿಐ ಮೇಲೆ ಜನರಿಗಿರುವ ನಂಬಿಕೆ ಕುಸಿಯುವಂತೆ ಮಾಡಿದೆ. ಸಿಬಿಐ ಸ್ವತಂತ್ರ ತನಿಖಾ ಸಂಸ್ಥೆಯಾಗಿ ಉಳಿದಿಲ್ಲ ಎಂಬುದು ಮತ್ತೊಮ್ಮೆ ಸಾಬೀತಾಗಿದೆ.
ಸಿಬಿಐನ ಮಾಜಿ ನಿರ್ದೇಶಕರಾದ ಜೋಗಿಂದರ್ ಸಿಂಗ್ ಅವರು ಕೊಟ್ರೋಚಿ ವಿರುದ್ಧ ಸಾಕಷ್ಟು ಸಾಕ್ಷ್ಯ ಇತ್ತು. ತಾವೇ ಸ್ವತಃ ಸ್ವಿಸ್ ಬ್ಯಾಂಕ್ ತೆರಳಿ ಖಾತೆ ಪರಿಶೀಲನೆ ನಡೆಸಿದ್ದನ್ನು ಬಹಿರಂಗಪಡಿಸಿದ್ದಾರೆ. ಅವರಿದ್ದಾಗ ಇದ್ದ ಸಾಕ್ಷ್ಯ ಆಮೇಲೇನಾಯಿತು?
ಇತ್ತೀಚಿನ ವರ್ಷಗಳಲ್ಲಿ ಸಿಬಿಐ ಒಳ್ಳೆಯ ಕೆಲಸಕ್ಕಾಗಿ ಸುದ್ದಿಯಾಗಿದ್ದು ಯಾರಿಗೂ ನೆನಪಿಲ್ಲ. ಸಿಬಿಐ ತನಿಖೆಗೊಳಗಾದ ಯಾವ ಪ್ರಕರಣವೂ ಆರೋಪಿಗಳ ಶಿಕ್ಷೆಯೊಂದಿಗೆ ಮುಕ್ತಾಯವಾದದ್ದು ಇತ್ತೀಚೆಗೆ ಸಂಭವಿಸಿಲ್ಲ. ಸಿಬಿಐ ಯಾವುದೇ ನಿರ್ಣಯ ಕೈಗೊಳ್ಳಲಿ ಅದರ ಬಗ್ಗೆ ಸಾರ್ವಜನಿಕರು ಅನುಮಾನದಿಂದ ನೋಡುವಂತಾಗಿದೆ. ಕಾರಣ ಕೇಂದ್ರ ಸರಕಾರದ ಅಧಿಕಾರದ ಚಿತ್ರಣ ಬದಲಾಗುತ್ತಿದ್ದಂತೆ ಸಿಬಿಐ ನಿಲುವುಗಳೂ, ಸಾಕ್ಷ್ಯಗಳು ಕೂಡ ಬದಲಾಗಿವೆ.
ಮಾಯಾವತಿ ವಿರುದ್ಧ ತಾಜ್ ಕಾರಿಡಾರ್ ಪ್ರಕರಣದಲ್ಲಿ ಸಿಬಿಐ ನಿಲುವು ಆಗಾಗ ಬದಲಾಗಿದ್ದನ್ನು ಕಂಡಿದ್ದೇವೆ. ಮಾಯಾವತಿ ಜತೆ ಸಖ್ಯ ಇರುವಾಗ ಸಮಾಜವಾದಿ ಪಕ್ಷದ ಮುಖ್ಯಸ್ಥ ಮುಲಾಯಂ ಸಿಂಗ್ ವಿರುದ್ಧ ಅತಿಯಾದ ಆಸ್ತಿ ಸಂಗ್ರಹ ಪ್ರಕರಣವನ್ನು ಸಿಬಿಐ ಕೈಗೆತ್ತಿಕೊಂಡಿತು. ಅದೇ ಮಾಯಾವತಿ ಜತೆ ಕಾಂಗ್ರಸ್ ಮೈತ್ರಿ ಮುರಿದಾಗ ಮುಲಾಯಂ ಸಿಂಗ್ ವಿರುದ್ಧದ ಪ್ರಕರಣದಲ್ಲಿ ಸಿಬಿಐ ನಿಲುವು ಬದಲಾಯಿತು. ಸಮಾಜವಾದಿ ಪಕ್ಷ ೨೦೦೮ರ ಜುಲೈನಲ್ಲಿ ಅವಿಶ್ವಾಸಮತ ನಿರ್ಣಯ ಸಂದರ್ಭ ಯುಪಿಎ ಪರ ನಿಲ್ಲಲು ಸಿಬಿಐ ಪ್ರಕರಣ ಕೂಡ ಒಂದು ಕಾರಣ ಎಂಬುದರಲ್ಲಿ ಈಗ ಅನುಮಾನ ಉಳಿದಿಲ್ಲ. ಇದರ ನಂತರ ಮುಲಾಯಂ ಸಿಂಗ್ ಸಮೀಪ ವರ್ತಿಗಳು ಹಾಗೂ ಸಿಬಿಐ ಅಧಿಕಾರಿಗಳು ಒಟ್ಟಿಗೆ ಕುಳಿತು ನ್ಯಾಯಾಲಯದಲ್ಲಿ ಯಾವ ರೀತಿ ಪ್ರಕರಣ ನಿಲ್ಲದಂತೆ ದಾಖಲೆಗಳನ್ನು ಸಲ್ಲಿಸಬೇಕು ಎಂಬುದರ ಬಗ್ಗೆ ಚರ್ಚಿಸುತ್ತಿದ್ದರು ಎಂಬ ಆರೋಪ ಕೇಳಿಬಂದಿದೆ. ಸರಕಾರಗಳೂ ಅಷ್ಟೆ ಮೊದಲೆಲ್ಲ ಸಿಬಿಐ ತನಿಖೆಯಲ್ಲಿ ಹಸ್ತಕ್ಷೇಪ ಮಾಡುವಾಗ ಬಹಳ ಜಾಗರೂಕವಾಗಿರುತ್ತಿದ್ದವು. ಈಗ ಕೊಟ್ರೋಚಿಗೂ ಕ್ಲೀನ್‌ಚಿಟ್ ಕೊಡಿಸುವಷ್ಟು ರಾಜಾರೋಷವಾಗಿ ಸಿಬಿಐನಲ್ಲಿ ಹಸ್ತಕ್ಷೇಪ ಮಾಡಲಾರಂಭಿಸಿವೆ.
ತಮಿಳುನಾಡಿನ ಮಾಜಿ ಮುಖ್ಯಮಂತ್ರಿ ಜಯಲಲಿತಾ ವಿರುದ್ಧದ ಅಕ್ರಮ ಆಸ್ತಿ ಸಂಗ್ರಹ ಪ್ರಕರಣದಲ್ಲೂ ಸಿಬಿಐ ನಿಲುವು ಕಾಲಕ್ಕೆ ತಕ್ಕಂತೆ ಬದಲಾಗಿದ್ದು ಜಗತ್ತಿಗೇ ಗೊತ್ತಿದೆ.ಇದನ್ನೆಲ್ಲ ಗಮನಿಸಿದರೆ ಸಿಬಿಐ ನಿಜಕ್ಕೂ ಸ್ವತಂತ್ರ ತನಿಖಾ ಸಂಸ್ಥೆಯಾಗಿ ಉಳೀದಿದೆಯೇ? ಎಂಬ ಪ್ರಶ್ನೆ ಉದ್ಭವಿಸುತ್ತದೆ. ನಮ್ಮ ಅನುಭವದ ಪ್ರಕಾರವೇ ಇದಕ್ಕೆ ಇಲ್ಲ ಎಂಬ ಉತ್ತರ ದೊರೆಯುತ್ತದೆ. ಅಲ್ಲಿದೆ ದೇಶದಲ್ಲಿ ಜನರ ನಂಬಿಕೆ ಉಳಿದಿಸಿಕೊಂಡಿರುವ ಒಂದೇ ಒಂದು ತನಿಖಾ ಸಂಸ್ಥೆಯೂ ಇಲ್ಲದಂತಾಗಿಬಿಟ್ಟಿದೆ.
ಒಂದು ಕಾಲದಲ್ಲಿ ಸಿಬಿಐಗೆ ಒಳ್ಳೆಯ ಹೆಸರಿತ್ತು. ಸಿಬಿಐ ತನಿಖೆ ಅಂದರೆ ಅದೇ ಅಂತಿಮ. ಜನ ಕೂಡ ಅದನ್ನು ಮನ್ನಿಸುತ್ತಿದ್ದರು. ಸಿಬಿಐ ತನಿಖೆ ಅಂದರೆ ಸಾಕು ರಾಜಕಾರಣಿಗಳೂ ಕೂಡ ಹೆದರುತ್ತಿದ್ದರು. ರಾಜೀವ್ ಗಾಂಧಿ ಹತ್ಯೆ ಸಮಯದಲ್ಲಿ ಸಾಕ್ಷಿಗಳೇ ಇರಲಿಲ್ಲ ಎನ್ನಬಹುದಾದ ಸ್ಥಿತಿ. ಅಂತಹ ಪ್ರಕರಣವನ್ನೂ ಸಿಬಿಐ ತಂಡ ಸಮರ್ಥವಾಗಿ ನಡೆಸಿ, ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಯಿತು. ಆದರೆ ಅದೇ ತನಿಖಾ ಸಂಸ್ಥೆ ಭಟ್ಕಳದ ಶಾಸಕ ಯು. ಚಿತ್ತರಂಜನ್ ಅವರ ಕೊಲೆ ಪ್ರಕರಣ ಬಗೆಹರಿಸಲು ವಿಫಲವಾಯಿತು. ಚಿತ್ತರಂಜನ್ ಪ್ರಕರಣದಂತೆ ಹಲವಾರು ಪ್ರಕರಣಗಳು ಸಿಬಿಐ ಕಚೇರಿ ಕಪಾಟಿನಲ್ಲಿ ಧೂಳುತಿನ್ನುತ್ತಿವೆ.
ಹಿಂದೆಲ್ಲ ಒಂದು ಪ್ರಕರಣವನ್ನು ಸಿಬಿಐಗೆ ನೀಡಿದರು ಎಂದರೆ ಸತ್ಯ ಹೊರಬಂದಂತೆ ಎಂಬ ನಂಬಿಕೆಯಿತ್ತು. ಈಗ? ಒಂದು ಪ್ರಕರಣವನ್ನು ಸಿಬಿಐಗೆ ನೀಡಿದರೆಂದರೆ ಅಲ್ಲಿಗೆ ಆ ಪ್ರಕರಣ ಮುಗಿಯಿತು ಎಂದರ್ಥ!
ಸಿಬಿಐ ನ್ಯಾಯಾಲಯಕ್ಕೆ ತನಿಖಾ ವರದಿ ಒಪ್ಪಿಸಿತು ಅಂದರೆ ಅದೇ ಅಂತಿಮ. ಆರೋಪಿಯನ್ನು ದೋಷಮುಕ್ತ ಎಂದು ಸಿಬಿಐ ಹೇಳಿದ್ದರೂ ನ್ಯಾಯಾಲಯಗಳು ಅದನ್ನು ಒಪ್ಪಿಕೊಳ್ಳುತ್ತಿದ್ದವು. ಆದರೆ ಸಿಬಿಐ ವಿಶ್ವಾಸರ್ಹತೆ ಕುಸಿಯುತ್ತಿದ್ದಂತೆ ಈಗ ನ್ಯಾಯಾಲಯಗಳೂ ಕೂಡ ಸಿಬಿಐ ವರದಿ ಸಲ್ಲಿಸಿದ ನಂತರವೂ ಮತ್ತೆ ತನಿಖೆಗೆ ಆದೇಶಿಸುತ್ತಿವೆ.
ದೇಶದ ಉನ್ನತ ತನಿಖಾ ಸಂಸ್ಥೆಯ ಗುಣಮಟ್ಟ ಕುಸಿಯಲು ಯಾರು ಕಾರಣ?
ನಿಸ್ಸಂಶಯವಾಗಿ ನಮ್ಮನ್ನಾಳುವವರು.
ತಾಜ್ ಕಾರಿಡಾರ್ ಪ್ರಕರಣದ ವಿಚಾರಣೆ ಸಂದರ್ಭ ಸುಪ್ರೀಂ ಕೋರ್ಟ್ ಸಿಬಿಐ ಕುರಿತು ‘ಸರಕಾರಿ ಸಂಸ್ಥೆಗಳ ಕಾರ್ಯಕ್ಷಮತೆ ಹಾಗೂ ಮೌಲ್ಯಗಳು ಶೀಘ್ರವಾಗಿ ಕುಸಿಯುತ್ತಿರುವುದು ನ್ಯಾಯಾಲಯದ ಗಮನಕ್ಕೆ ಬಂದಿದೆ. ಹೀಗೇ ಮುಂದುವರಿದರೆ ಕಾನೂನು ಸುವ್ಯವಸ್ಥೆ ಕುಸಿಯುವ ಸ್ಥಿತಿ ಬರಬಹುದು’ ಎಂದು ಅಭಿಪ್ರಾಯಪಟ್ಟಿತ್ತು. ಅದರಿಂದಲೂ ನಮ್ಮ ಸಿಬಿಐ ಅಧಿಕಾರಿಗಳು ಹಾಗೂ ಕೇಂದ್ರ ಸರಕಾರ ಎಚ್ಚೆತ್ತುಕೊಳ್ಳಲಿಲ್ಲ.ನಿಜವಾಗಿ ಸಿಬಿಐ ಯಾರ ನಿಯಂತ್ರಣದಲ್ಲೂ ಇಲ್ಲ. ದೆಹಲಿ ವಿಶೇಷ ಪೊಲೀಸ್ ಕಾನೂನಿನ ಅಡಿಯಲ್ಲಿ ಸ್ಥಾಪನೆಯಾದ ಸಿಬಿಐ ಕೇಂದ್ರ ಸರಕಾರದ ಖಾಸಗಿ ಹಾಗೂ ತರಬೇತಿ ವಿಭಾಗಕ್ಕೆ ಸೇರಿದ್ದು. ಅಂದರೆ ಕೇಂದ್ರ ಸರಕಾರದ ‘ಮೇಲ್ವಿಚಾರಣೆಯಲ್ಲಿ’ ಎಂದಷ್ಟೇ ಹೇಳಲಾಗಿದೆ. ‘ಮೇಲ್ವಿಚಾರಣೆ’ ಎಂಬುದನ್ನೇ ನಮ್ಮವರು ‘ಮೇಲ್ವಿಚಾರಣೆ, ನಿಯಂತ್ರಣ ಮತ್ತು ನಿರ್ದೇಶನ’ ಎಂದು ವ್ಯಾಖ್ಯಾನಿಸಿ ಸಿಬಿಐನ ವಿಶ್ವಾಸರ್ಹತೆಯನ್ನೇ ಹಾಳು ಮಾಡಿದ್ದಾರೆ.
ಸಿಬಿಐ ಕೇಂದ್ರ ಸರಕಾರದ ಇಶಾರೆಗಳ ಮೇಲೆ ನಡೆಯುತ್ತದೆ ಎಂಬುದು ಇಂದು ಗುಟ್ಟಾಗಿ ಉಳಿದಿಲ್ಲ. ಸಿಬಿಐ ನಿರ್ದೇಶಕರ ನೇಮಕದಲ್ಲಿ ಕೂಡ ರಾಜಕೀಯ ಮೂಗು ತೂರಿಸದೇ ಬಿಟ್ಟಿಲ್ಲ. ಹಾಗೆ ನೇಮಕವಾದ ನಿರ್ದೇಶಕರು ನೇಮಕ ಮಾಡಿದ ರಾಜಕೀಯ ಪಕ್ಷಕ್ಕೆ ನಿಷ್ಟರಾಗಿರುವುದು ಸಹಜ.
ಹೀಗಾಗಿ ಸಿಬಿಐಯನ್ನು ಸೆಂಟ್ರಲ್ ಬ್ಯೂರೋ ಆಫ್ ಇನ್‌ವೆಸ್ಟಿಗೇಷನ್ ಎಂದು ಕರೆಯುವ ಬದಲು ಕ್ಲೀನ್‌ಚಿಟ್ ಬ್ಯೂರೋ ಆಫ್ ಇನ್‌ವೆಸ್ಟಿಗೇಷನ್ ಎಂದು ಕರೆಯುವಂತಾಗಿದೆ. ನಮಗೀಗ ಬೇಕಿರುವುದು ಸೆಂಟ್ರಲ್ ಬ್ಯೂರೋ ಆಫ್ ಇನ್‌ವೆಸ್ಟಿಗೇಷನ್ (ಸಿಬಿಐ) ಅಲ್ಲ. ಬದಲಾಗಿ ಇಂಡಿಪೆಂಡೆಂಟ್ ಬ್ಯೂರೋ ಆಫ್ ಇನ್‌ವೆಸ್ಟಿಗೇಷನ್ (ಐಬಿಐ) ಬೇಕು.ಸಿಬಿಐ ಅಮೂಲಾಗ್ರ ಬದಲಾವಣೆ ಆಗಬೇಕಿದೆ. ಸಿಬಿಐ ನಿರ್ದೇಶಕರ ನೇಮಕವೂ ಸೇರಿದಂತೆ ಒಟ್ಟಾರೆ ಸಿಬಿಐ ಎಂಬ ಸಂಸ್ಥೆ ಸರಕಾರದ ನಿಯಂತ್ರದಿಂದ ದೂರವಾಗಿ ಸ್ವತಂತ್ರವಾಗಬೇಕಿದೆ. ನ್ಯಾಯಾಲಯ ಹೊರತು ಪಡಿಸಿ ಜನರಿಗೆ ಸರಕಾರ ಹಾಗೂ ಸರಕಾರಿ ಸಂಸ್ಥೆಗಳ ಮೇಲೆ ನಂಬಿಕೆ ಮೂಡಿಸುವ ಒಂದಾದರೂ ಸಂಸ್ಥೆ ಬೇಕೇಬೇಕು. ಅದಕ್ಕಾಗಿಯಾದರೂ ಈ ಕೆಲಸ ಮಾಡಬೇಕು.
ಯಾಕೆಂದರೆ ಜನ ಸರಕಾರ ಹಾಗೂ ಅದರ ಸಂಸ್ಥೆಗಳ ಮೇಲೆ ನಂಬಿಕೆ ಕಳೆದುಕೊಂಡರೆ ಅಲ್ಲಿಗೆ ಎಲ್ಲವೂ ಮುಗಿದಂತೆ.

2 comments:

Unknown said...

nice article .. informative ..

ಕೆ. ರಾಘವ ಶರ್ಮ said...

ಅರುಣ್ ಜೇಟ್ಲಿ ಸಿಬಿಐಯನ್ನು ಹೀಗೆ ವ್ಯಾಖ್ಯಾನಿಸಿದ್ದರು.
ಸಿಬಿಐ: "ಕಾಂಗ್ರೆಸ್ ಬ್ಯೂರೋ ಆಫ್ ಇನ್ವೆಸ್ಟಿಗೇಷನ್"!