Friday, April 24, 2009

ಕಪ್ಪು ಹಣ ತರುವುದು ಹೇಳಿದಷ್ಟು ಸುಲಭವೇ?ಯಾರೂ ನಿರೀಕ್ಷಿಸದ ರೀತಿಯಲ್ಲಿ ೨೦೦೯ರ ಲೋಕಸಭಾ ಚುನಾವಣಾ ವಿಷಯವಾಗಿ ಹೊರಹೊಮ್ಮಿದ್ದು ಸ್ವಿಸ್ ಬ್ಯಾಂಕ್‌ನಲ್ಲಿರುವ ಕಪ್ಪು ಹಣ. ಚುನಾವಣೆ ಘೊಷಣೆಯಾಗುವವರೆಗೂ ಇದೊಂದು ಚುನಾವಣಾ ವಿಷಯ ಅಂತ ಯಾರಿಗೂ ಅನಿಸಿರಲೇ ಇಲ್ಲ. ಹಾಗಾಗಬಹುದು ಎಂಬ ಕಲ್ಪನೆಯೂ ಇರಲಿಲ್ಲ. ಆದರೆ ಬಿಜೆಪಿ ಚುನಾವಣಾ ವಿಷಯವೆಂದು ಪರಿಗಣಿಸಿದ್ದ ಹಣದುಬ್ಬರ ಕಡಿಮೆಯಾಗಿ, ದರಗಳು ಸ್ವಲ್ಪ ನಿಯಂತ್ರಣಕ್ಕೆ ಬಂದಿದ್ದರಿಂದ ಅದನ್ನು ಚುನಾವಣಾ ವಿಷಯವಾಗಿ ಬಳಸಿಕೊಳ್ಳೂವುದು ಸಾದ್ಯವಿರಲಿಲ್ಲ. ಭಯೋತ್ಪಾದನೆ ಬಗ್ಗೆ ಮಾತಾಡ ಹೊರಟರೆ ಕಾಂಗ್ರೆಸ್ಸಿಗರು ‘ಕಂದಹಾರ್ ಪ್ರಕರಣ’ವನ್ನು ಪ್ರತಿ ಅಸ್ತ್ರವಾಗಿ ಬಳಸಿದರು.
ಹೀಗಾಗಿ ಬಿಜೆಪಿಗೆ ಹೊಸತೊಂದು ಚುನಾವಣಾ ವಿಷಯ ಬೇಕಿತ್ತು. ಬ್ರಹ್ಮಾಸ್ತ್ರದಂತೆ ಸಿಕ್ಕಿದ್ದು ಸ್ವಿಸ್ ಬ್ಯಾಂಕ್‌ನಲ್ಲಿರುವ ಕಪ್ಪು ಹಣ. ಬಿಜೆಪಿ ತನ್ನ ಪ್ರಣಾಳಿಕೆಯಲ್ಲಿ ಕೂಡ ಇದನ್ನು ಪ್ರಸ್ತಾಪಿಸಿತು. ಇದೊಂದು ಚುಣಾವಣಾ ವಿಷಯ ಆಗಬಹುದು ಎಂದು ಕಾಂಗ್ರೆಸ್ ನಿರೀಕ್ಷಿಸಿರಲಿಲ್ಲ. ಹಾಗಾಗಿ ಆ ವಿಷಯದ ಬಗ್ಗೆ ಅದು ಮೌನವಾಗಿತ್ತು. ಯಾವಾಗ ಬಿಜೆಪಿ ಅದನ್ನೊಂದು ಚುನಾವಣಾ ಅಸ್ತ್ರವಾಗಿ ಬಳಸಲಾರಂಭಿಸಿತೊ ಆಗ ಅದು ವಿದೇಶದಲ್ಲಿರುವ ಕಪ್ಪು ಹಣದ ಬಗ್ಗೆ ಬಾಯ್ಬಿಡತೊಡಗಿತು.
ಎರಡೂ ಪಕ್ಷಗಳ ಆರೋಪ ಪ್ರತ್ಯಾರೋಪಗಳ ನಡುವೆ ಜನ ಗೊಂದಲಕ್ಕೆ ಸಿಲುಕಿದ್ದಾರೆ. ಆ ಗೊಂದಲಗಳಿಗೆ ಉತ್ತರ ಹುಡುಕುವ ಸಣ್ಣ ಯತ್ನ ಇದು.
ಬಹುತೇಕವಾಗಿ ಸ್ವಿಸ್ ಬ್ಯಾಂಕ್ ಹೆಸರು ಮಾತ್ರ ಕೇಳಿಬರುತ್ತಿದ್ದರೂ, ಸ್ವಿಟ್ಜರ್‌ಲ್ಯಾಂಡ್, ಮಾರಿಶಸ್, ಸಿಪ್ರಸ್ ದೇಶದ ಬ್ಯಾಂಕುಗಳು ಇದ್ದುದರಲ್ಲಿ ಪ್ರಸಿದ್ಧ. ಇವುಗಳಲ್ಲಿ ಭಾರತದ ಪ್ರಜೆಗಳು ಎಷ್ಟು ಹಣ ಇಟ್ಟಿದ್ದಾರೆ ಎಂಬುದು ಬ್ಯಾಂಕ್ ಅಧಿಕಾರಿಗಳಿಗೆ ಬಿಟ್ಟರೆ ಬೇರೆ ಯಾರಿಗೂ ಗೊತ್ತಿಲ್ಲ. ಯಾಕೆಂದರೆ ಬ್ಯಾಂಕುಗಳು ಈ ಮಾಹಿತಿಯನ್ನು ಈವರೆಗೆ ಬಹಿರಂಗಗೊಳಿಸಿಲ್ಲ. ಗೌಪ್ಯವೇ ಆ ಬ್ಯಾಂಕುಗಳ ಬಡವಾಳ. ಬಿಜೆಪಿ ಪ್ರಕಾರ ೨೫,೦೦,೦೦ ಕೋಟಿ ರೂ. ಕಪ್ಪು ಹಣ ವಿದೇಶಿ ಬ್ಯಾಂಕುಗಳಲ್ಲಿದೆ. ಇದೊಂದು ಅಂದಾಜು ಅಷ್ಟೆ. ಅದು ಹೆಚ್ಚೂ ಆಗಿರಬಹುದು. ಕಡಿಮೆಯೂ ಆಗಿರಬಹುದು.
ಬಿಜೆಪಿ ಹೇಳುತ್ತಿರುವ ವಿದೇಶಿ ಬ್ಯಾಂಕುಗಳಲ್ಲಿರುವ ಹಣದ ಮೊತ್ತದ ಬಗ್ಗೆಯೇ ಕಾಂಗ್ರೆಸ್ ತಕರಾರು ತೆಗೆದಿದೆ. ಅದಕ್ಕೆ ಯಾವುದೇ ಆಧಾರವಿಲ್ಲ ಎಂದಿದೆ. ಹೌದು. ಬಿಜೆಪಿ ಹೇಳುತ್ತಿರುವ ಮೊತ್ತಕ್ಕೆ ಸೂಕ್ತ ಆಧಾರವಿಲ್ಲ. ಆದರೆ ಎಷ್ಟಿದ್ದರೇನು? ಬೇಕಾದರೆ ಒಂದು ಲಕ್ಷ ರೂ. ಇರಲಿ. ಅದನ್ನು ದೇಶಕ್ಕೆ ತರುವುದರಲ್ಲಿ ಖಂಡಿತ ತಪ್ಪಿಲ್ಲವಲ್ಲ. ಹೀಗಾಗಿ ಎಷ್ಟು ಹಣವಿದೆ ಎಂದು ಕಾಂಗ್ರೆಸ್ ಪಕ್ಷ ಪ್ರಶ್ನಿಸುತ್ತಿರುವುದರಲ್ಲಿ ಅಥವಾ ಎಷ್ಟು ಹಣ ಇರಬಹುದು ಎಂಬುದರ ಬಗ್ಗೆ ತಲೆಕೆಡಿಸಿಕೊಳ್ಳುವುದರಲ್ಲಿ ಅರ್ಥವಿಲ್ಲ. ಎಷ್ಟಾದರೂ ಇರಲಿ. ಅದನ್ನು ತರೋಣ.
ಅಮೆರಿಕ ಇತ್ತೀಚೆಗಷ್ಟೇ ಸ್ವಿಸ್ ಬ್ಯಾಂಕ್‌ನಲ್ಲಿರುವ ಅಮೆರಿಕ ಪ್ರಜೆಗಳ ಖಾತೆಗಳ ವಿವರ ಪಡೆದುಕೊಳ್ಳಲು ಯಶಸ್ವಿಯಾಗಿದೆ. ಸ್ವಿಸ್‌ಬ್ಯಾಂಕ್‌ನಲ್ಲಿದ್ದ ತನ್ನ ದೇಶದ ಪ್ರಜೆಗಳ ಹಣ ಪಡೆದುಕೊಳ್ಳಲು ಐರ್‍ಲೆಂಡ್ ಯಶಸ್ವಿಯಾಗಿದೆ. ಆದರೆ ಇದೆಲ್ಲ ಸಾದ್ಯವಾಗಿದ್ದು, ಆಯಾ ದೇಶಗಳ ಆಂತರಿಕ ತನಿಖಾ ತಂಡಗಳು ಸೂಕ್ತ ದಾಖಲೆಗಳನ್ನು ಒದಗಿಸಿದ ಮೇಲೆ ಎಂಬುದು ಗಮನಾರ್ಹ. ಇದನ್ನು ಭಾರತ ಸರಿಯಾಗಿ ಮಾಡಲು ಸಾದ್ಯವೇ ಎಂಬುದು ಈಗಿರುವ ಪ್ರಶ್ನೆ.
ಬಿಜೆಪಿ ಬಾಯಲ್ಲಿ ಹೇಳಿದಷ್ಟು ಸುಲಭವಲ್ಲ ವಿದೇಶಿ ಬ್ಯಾಂಕುಗಳಲ್ಲಿರುವ ಕಪ್ಪು ಹಣ ತರುವುದು. ಯಾಕೆಂದರೆ ನಮ್ಮಲ್ಲಿ ಎಂತೆಂತಹ ಪ್ರಕರಣಗಳು ಹೇಗೆ ಹಳ್ಳ ಹಿಡಿದಿವೆ ಎಂಬುದನ್ನು ನಾವು ಕಣ್ಣಾರೆ ಕಂಡಿದ್ದೇವೆ. ಸಿಬಿಐನಂತಹ ಉನ್ನತ ತನಿಖಾ ಸಂಸ್ಥೆ ಕೂಡ ದೇಶದ ನಾಗರಿಕರ ನಂಬಿಕೆ ಕಳೆದುಕೊಂಡಿದೆ. ಒಂದು ಪಕ್ಷದ ಸರಕಾರ ಇದ್ದಾಗ ಒಂದು ನಮೂನೆ ತನಿಖೆಯಾದರೆ, ಇನ್ನೊಂದು ಪಕ್ಷ ಅಧಿಕಾರಕ್ಕೆ ಬರುತ್ತಿದ್ದಂತೆ ತನಿಖೆ ಇನ್ನೊಂದು ರೀತಿಯಲ್ಲಿ ಮುಕ್ತಾಯವಾಗುವುದನ್ನು ಕಂಡಿದ್ದೇವೆ. ೧೯೮೪ರ ಗಲಭೆ ಪ್ರಕರಣದಲ್ಲಿ ಜಗದೀಶ್ ಟೈಟ್ಲರ್ ಹಾಗೂ ಸಜ್ಜನ್ ಕುಮಾರ್‌ರನ್ನು ಆರೋಪ ಮುಕ್ತ ಎಂದು ವರದಿ ನೀಡಿರುವುದು ಇತ್ತೀಚಿನ ಉದಾಹರಣೆ. ಅದನ್ನು ಸಿಖರು ಉಗ್ರವಾಗಿ ಖಂಡಿಸಿದ್ದು ಜನಕ್ಕೆ ಸಿಬಿಐ ಮೇಲೆ ಕೂಡ ನಂಬಿಕೆ ಹೊರಟುಹೋಗಿದೆ ಎಂಬುದಕ್ಕೆ ಸೂಚನೆ.
ಭಾರತದ ವಿದೇಶಾಂಗ ನೀತಿ ಕೂಡ ಕಪ್ಪು ಹಣ ತರಲು ಅಡ್ಡಿಯಾಗಬಹುದು. ಹಲವಾರು ಅಂತರಾಷ್ಟ್ರೀಯ ಕಾನೂನುಗಳು ಅಡೆತಡೆ ಒಡ್ಡಬಹುದು. ಇದನ್ನೆಲ್ಲ ಸರಿಪಡಿಸಿ, ಕಪ್ಪು ಹಣ ತರುವುದು ಎಂದರೆ ಕಪ್ಪು ಆನೆಯನ್ನು ತೊಳೆದು ಬಿಳಿ ಮಾಡಿದಂತೆಯೆ. ಅದೊಂದು ಸಾಹಸವೇ ಸರಿ. ಆದರೆ ದೇಶದ ಒಳಿತಿಗಾಗಿ ಅಂತಹ ಸಾಹಸ ಮಾಡುವುದೇ ಉತ್ತಮ.
ಈ ವಿಷಯವನ್ನು ಬಿಜೆಪಿ ಚುನಾವಣಾ ಅಸ್ತ್ರವನ್ನಾಗಿ ಬಳತೊಡಗಿದ ನಂತರ ಕಾಂಗ್ರೆಸ್ ಕಂಗಾಲಾಗಿದ್ದು ಸತ್ಯ. ಅದರ ವಕ್ತಾರರು ಒಬ್ಬೊಬ್ಬರು ಒಂದೊಂದು ಹೇಳಿಕೆ ನೀಡಿ, ಇನ್ನಷ್ಟು ಗೊಂಲದ ಸೃಷ್ಟಿಸಿದರು. ಆದರೆ ಕಾಂಗ್ರೆಸ್ ಆರೋಪದಂತೆ ಚುನಾವಣೆ ಹೊಸ್ತಿಲಲ್ಲಿ ಬಿಜೆಪಿ ಈ ವಿಷಯ ಆರಂಭಿಸಿಲ್ಲ. ಚುನಾವಣೆ ಸಮಯದಲ್ಲಿ ಇದರ ಬಗ್ಗೆ ಹೆಚ್ಚಾಗಿ ಮಾತಾಡಿರಬಹುದು. ಆದರೆ ೨೦೦೮ರ ಏಪ್ರಿಲ್ ತಿಂಗಳಲ್ಲಿಯೇ ಪ್ರಧಾನಿ ಮನಮೋಹನ ಸಿಂಗ್ ಅವರೊಂದಿಗೆ ಚರ್ಚಿಸಿದ್ದರು. ಜರ್ಮನಿ ಸರಕಾರ ವಿದೇಶಿ ಬ್ಯಾಂಕೊಂದರಲ್ಲಿದ್ದ ಜರ್ಮನ್ ಪ್ರಜೆಗಳ ವಿವರ ಪಡೆದುಕೊಂಡ ಸುದ್ದಿ ಗಮನಿಸಿದ ಅಡ್ವಾಣಿ, ಪ್ರಧಾನಿಗೆ ಪತ್ರ ಬರೆದು ಗಮನ ಸೆಳೆದಿದ್ದರು. ಅದಕ್ಕೆ ಆಗ ಹಣಕಾಸು ಸಚಿವರಾಗಿದ್ದ ಪಿ. ಚಿದಂಬರಂ ಉತ್ತರ ಬರೆದು, ‘ಈ ಬಗ್ಗೆ ಕ್ರಮ ಕೈಗೊಳ್ಳುವ ಭರವಸೆ ನೀಡಿದ್ದರು.’
ಇದಾದ ಸ್ವಲ್ಪ ಸಮಯದಲ್ಲೇ ಹಣಕಾಸು ಇಲಾಖೆ ಹಿರಿಯ ಅಧಿಕಾರಿಯೊಬ್ಬರು ಜರ್ಮನಿಯಲ್ಲಿರುವ ಭಾರತದ ರಾಯಬಾರಿ ಅವರಿಗೆ ‘ಕಪ್ಪು ಹಣದ ವಿವರ ಬಹಿರಂಗಕ್ಕೆ ಅಲ್ಲಿನ ಸರಕಾರದ ಮೇಲೆ ಜಾಸ್ತಿ ಒತ್ತಡ ಹೇರುವ ಅಗತ್ಯವಿಲ್ಲ’ ಎಂಬರ್ಥದ ಪತ್ರ ಬರೆದಿರುವ ವಿಷಯ ಕೂಡ ಬಹಿರಂಗಗೊಂಡಿತ್ತು. ಲೋಕಸಭೆಯಲ್ಲಿ ಕೂಡ ಚರ್ಚೆಯಾಗಿದೆ. ಪಿ. ಚಿದಂಬರಂ ಇತ್ತೀಚೆಗೆ ಪತ್ರಿಕಾಗೋಷ್ಠಿಯಲ್ಲಿ ‘ಕೇಂದ್ರ ಸರಕಾರ ಸ್ವಿಸ್ ಬ್ಯಾಂಕ್‌ಗೆ ಭಾರತದ ಪ್ರಜೆಗಳ ಖಾತೆ ವಿವರ ನೀಡುವಂತೆ ಪತ್ರ ಬರೆದಿದೆ. ೬ ತಿಂಗಳಾದರೂ ಬೇಕು ಉತ್ತರ ಬರಲು’ ಎಂದು ಹೇಳಿದ್ದರು.
ಆದರೆ ಏಪ್ರಿಲ್ ೧೮ರಂದು ಟೈಮ್ಸ್ ಆಫ್ ಇಂಡಿಯಾ ಪತ್ರಿಕೆ ಸ್ವಿಸ್ ರಾಯಭಾರಿ ಅವರ ಹೇಳೀಕೆಯನ್ನು ಆಧರಿಸಿ ಲೇಖನವೊಂದನ್ನು ಪ್ರಕಟಿಸಿದೆ. ಸ್ವಿಸ್ ರಾಯಭಾರಿ ಅವರ ಪ್ರಕಾರ ‘ಅವರು ಈವರೆಗೆ ಸ್ವಿಸ್ ಸರಕಾರ ಅಂತಹ ಯಾವುದೇ ಮನವಿ ಅಥವಾ ಪತ್ರವನ್ನು ಸ್ವೀಕರಿಸಿಲ್ಲ’ ಎಂದಿದ್ದಾರೆ. ಇಷ್ಟೆಲ್ಲ ಆದಮೇಲೆ ಅದನ್ನೊಂದು ಚುನಾವಣಾ ವಿಷಯವನ್ನಾಗಿ ಮಾಡಿ, ಜನರ ಪ್ರತಿಕ್ರಿಯೆ ನಿರೀಕ್ಷಿಸಿದರೆ ತಪ್ಪೇನು?
ಇಷ್ಟೆಲ್ಲ ಚರ್ಚೆ ನಡೆಯುವ ಸಮಯದಲ್ಲಿ ಸಾಮಾನ್ಯ ಜನರ ಮನಸಲ್ಲಿ ಮೂಡುವ ಮತ್ತೊಂದು ಪ್ರಶ್ನೆಯೆಂದರೆ ಇದೆಲ್ಲ ಚರ್ಚೆಯಿಂದ ಸ್ವಿಸ್‌ಬ್ಯಾಂಕ್‌ನಲ್ಲಿ ಹಣ ಇಟ್ಟವರು ಅದನ್ನು ತೆಗೆದು ಬೇರೆಡೆ ಸಾಗಿಸಲಾರರೇ ಎಂಬುದು. ಈ ಸಾದ್ಯತೆಯಿದೆ. ಆದರೆ ಈ ಕಪ್ಪು ಹಣವನ್ನು ಅವರು ತೆರಿಗೆದಾರರ ಸ್ವರ್ಗ ಎಂದು ಕರೆಯಲಾಗುವ ಬೇರೆ ರಾಷ್ಟ್ರಗಳ ಬ್ಯಾಂಕ್‌ಗಳಲ್ಲಿ ಇಡಬೇಕಾಗುತ್ತದೆ. ಅಲ್ಲದೆ ದಿಢೀರನೆ ದೊಡ್ಡ ಮೊತ್ತದ ಹಣವನ್ನು ಬೇಕಾದಲ್ಲಿಗೆ ಸಾಗಿಸುವುದು ಕೂಡ ಅಷ್ಟು ಸುಲಭವಲ್ಲ.
ಒಂದಂತೂ ಸತ್ಯ. ವಿದೇಶಿ ಬ್ಯಾಂಕುಗಳಲ್ಲಿರುವ ನಮ್ಮ ದೇಶದ ಪ್ರಜೆಗಳ ಕಪ್ಪು ಹಣ ತರಲು ರಾಜಕೀಯ ಇಚ್ಛಾ ಶಕ್ತಿ ಅತ್ಯಂತ ಅಗತ್ಯ. ಯಾಕೆಂದರೆ ದೇಶದೊಳಗೆ ಕಠಿಣ ತನಿಖೆ ನಡೆಸಿ ಕಪ್ಪು ಹಣ ಇಟ್ಟಿರುವವರ ಬಗ್ಗೆ ಸೂಕ್ತವಾದ ಸಾಕ್ಷ್ಯ ಸಂಗ್ರಹಿಸಬೇಕು. ಅದರ ಜೊತೆ ಜೊತೆಗೆ ವಿದೇಶಾಂಗ ವ್ಯವಹಾರ ನೀತಿಗಳ ಮೂಲಕ ವಿದೇಶಿ ಬ್ಯಾಂಕು ಹಾಗೂ ಸರಕಾರಗಳನ್ನು ವಿಶ್ವಾಸಕ್ಕೆ ತೆಗೆದುಕೊಳ್ಳಬೇಕು. ಅವುಗಳ ಜತೆ ಅಗತ್ಯ ಒಪ್ಪಂದಗಳನ್ನು ಮಾಡಿಕೊಳ್ಳಬೇಕು. ಒಟ್ಟು ೭೦ ತೆರಿಗೆದಾರರ ಸ್ವರ್ಗ ಎಂದು ಕರೆಯಲಾಗುವ ದೇಶಗಳೊಂದಿಗೆ ಇಂತಹ ವ್ಯಾವಹಾರಿಕ ಒಪ್ಪಂದ ಮಾಡಿಕೊಂಡು ಅವರ ಬ್ಯಾಂಕುಗಳಲ್ಲಿರುವ ಹಣ ತರಿಸುವ ಹೊತ್ತಿಗೆ ದಶಕಗಳೇ ಬೇಕಾಗಬಹುದು. ಅಷ್ಟು ಸಮಯವೂ ರಾಜಕೀಯ ಇಚ್ಛಾ ಶಕ್ತಿಯನ್ನು ಕಾಪಾಡಿಕೊಂಡು ಕೆಲಸ ಮಾಡುವ ಅಗತ್ಯವಿರುತ್ತದೆ.
ಆದರೆ ಕಪ್ಪು ಹಣ ಈ ಬಾರಿ ಚುನಾವಣಾ ವಿಷಯವಾಗುವುದರಿಂದ ದೇಶಾದ್ಯಂತ ಈ ಬಗ್ಗೆ ಜನಾಭಿಪ್ರಾಯ, ಜಾಗೃತಿ ಮೂಡುತ್ತಿದೆ. ಬಿಜೆಪಿಯೊಂದೇ ಅಲ್ಲ ಸಿಪಿಎಂ, ಎಸ್ಪಿ, ಬಿಎಸ್ಪಿ, ಎಐಎಡಿಎಂಕೆ ಮುಂತಾದ ಪಕ್ಷಗಳು ಕೂಡ ಕಪ್ಪು ಹಣ ತರುವ ಬಗ್ಗೆ ಒಲವು ವ್ಯಕ್ತಪಡಿಸಿವೆ. ಈ ನಡುವೆ ರಾಮಜೇಠ ಮಲಾನಿಯಂತಹ ಪ್ರಸಿದ್ಧ ವಕೀಕಲರು ಕಪ್ಪು ಹಣದ ಬಗ್ಗೆ ಸುಪ್ರೀಂ ಕೋರ್ಟ್‌ನಲ್ಲಿ ದಾವೆ ಖೂಡ ಹೂಡಿದ್ದಾರೆ. ಏನೇ ಹೆಣಗಾಡಿದರೂ ಹಣ ತರಲು ವರ್ಷಗಟ್ಟಲೆ ಹೆಣಗಬೇಕಾಗಬಹುದು. ಅದರ ಬಗ್ಗೆ ಉತ್ತಮ ಆರಂಭವನ್ನಂತೂ ಮಾಡಿದಂತಾಗಿದೆ.
ಆದರೆ ಇದು ಕೇವಲ ಚುನಾವಣಾ ಪ್ರಚಾರಕ್ಕೆ ಸೀಮಿತವಾಗದಿರಲಿ. ದೇಶಕ್ಕೆ ಒಳಿತಾಗಲಿ.

2 comments:

Govinda Nelyaru said...

ಎಂಬತ್ತು ವರ್ಷ ಚಿಲ್ಲರೆ ಪ್ರಾಯದ ಅಡ್ವಾಣಿ ಇದನ್ನು ಕರೆತರುವುದು ಅಸಂಭವ. ಅವರಿಗೊಂದು issue ಬೇಕಾಗಿತ್ತು. ಅಷ್ಟೇ.

ಈ ಬಗೆಗೆ ನಾನೊಂದು ಬರಹ ಬರೆದಿದ್ದೇನೆ. ದಯವಿಟ್ಟು ನೋಡಿ..

ವಿನಾಯಕ ಭಟ್ಟ said...

ನಿಮ್ಮ ಬ್ಲಾಗು ನೋಡೋಣ ಅಂದ್ರೆ ಕನೆಕ್ಟ್ ಆಗ್ತಾ ಇಲವೆ... ಲಿಂಕ್ ಹಾಕಿ. ಓದ್ತೀನಿ....