Wednesday, February 13, 2008

ಅವ್ವ: ಯವ್ವಾ ಯವ್ವಾ ಎಷ್ಟು ಚೆನಾಗೈತವ್ವ!

ಆಡಂಬರವಿಲ್ಲ. ಭಾರೀ ಸುಂದರ ಸೀನುಗಳಿಲ್ಲ. ಅನಗತ್ಯ ಹಾಡುಗಳಿಲ್ಲ. ಡೈಲಾಗುಗಳಂತೂ ನಾವು ನೀವು ಆಡುವ ಮಾತುಗಳೇ.
ಇದಕ್ಕಾಗಿಯೇ ನೀವು ‘ಅವ್ವ’ಳನ್ನೊಮ್ಮೆ ನೋಡಬೇಕು!
ಇವತ್ತು ನಾನು- ಹೆಂಡತಿ ಅವ್ವ ಸಿನಿಮಾ ನೋಡಿ ಬಂದೆವು. ಚೆನ್ನಾಗಿದೆ. ನಾನು ಅವ್ವಳನ್ನು ನೋಡುವ ಆಸಕ್ತಿಯಲ್ಲಿರಲಿಲ್ಲ. ಆದರೆ ನನ್ನ ಹೆಂಡತಿ ಎಂ.ಎ. ಕಲಿಯುವಾಗ ಮುಸ್ಸಂಜೆಯ ಕಥಾ ಪ್ರಸಂಗ ಕಾದಂಬರಿ ಪಠ್ಯವಾಗಿತ್ತು. ಆಕೆ ಸಿನಿಮಾ ನೋಡಲೇಬೇಕು ಅಂದಳು. ಅದಕ್ಕೆ ಹೋದೆ. ಈಗ ಅನ್ನಿಸುತ್ತಿದೆ ಆಕೆ ಸಿನಿಮಾಕ್ಕೆ ಹೋಗಬೇಕೆಂದು ಕಾಟಕೊಡದಿದ್ದರೆ ನಾನು ಒಂದೊಳ್ಳೆ ಸಿನಿಮಾ ತಪ್ಪಿಸಿಕೊಳ್ಳುತ್ತಿದೆ. ಹಾಗಾಗಿ ಹೆಂಡತಿಯರು ಕಾಟಕೊಡುವುದೂ ಕೆಲವು ಬಾರಿ ಒಳ್ಳೆಯದೇ!
ಲಂಕೇಶ ಕತೆಯನ್ನು ಓದುವದಕ್ಕಿಂತ ನೋಡುವುದನ್ನು ಚೆಂದವಾಗಿಸಿದ್ದಾರೆ ಮಗಳು ಕವಿತಾ. ಕೊಂಚ ಹಾಸ್ಯ, ಗಂಭೀರ, ಸಹಜ ಮಿಶ್ರಣದ ಒಂದು ಹಳ್ಳಿಯಲ್ಲಿ ನಡೆಯುವ ಕತೆ. ಒಂದೇ ಪರಿಸರದಲ್ಲಿ ಸಿಗುವ ಸಹಜವಾದ ಪ್ರಕೃತಿ ಸೌಂದರ್ಯವನ್ನು ಚಿತ್ರಕ್ಕೆ ತಕ್ಕನಾಗಿ ಬಳಸಿಕೊಳ್ಳಲಾಗಿದೆ. ಹೊರತು ಸುಂದರ ದೃಶ್ಯಗಳಿಗಾಗಿ ಸಿನಿಮಾ ಬಳಸಿಕೊಳ್ಳಲಾಗಿಲ್ಲ ಎಂಬುದು ಚಿತ್ರದ ಪ್ಲಸ್ ಪಾಯಿಂಟ್. ಹಿಂಭಾಗದಲ್ಲಿ ಬಿಸಿಲಿರುವ ಮರದ ಎದುರು ಒಂದು ದೃಶ್ಯ, ಕೆರೆಯ ಏರಿ ಮೇಲೆ ಸೈಕಲ್ ಓಡಿಸುವುದು ಇವೆಲ್ಲ ಕತೆಗೆ, ಹಳ್ಳಿ ಪರಿಸರಕ್ಕೆ ತಕ್ಕಂತೆ ಮೂಡಿಬಂದಿವೆ. ಎಲ್ಲೂ ಅನಗತ್ಯ ಹಾಡು, ದೃಶ್ಯ ತುರುಕಿಸಲಾಗಿಲ್ಲ.
ಡೈಲಾಗುಗಳು ಸೋಕಾಲ್ಡ್ ಸುಸಂಕೃತರು ಎನಿಸಿಕೊಂಡವರಿಗೆ ಅಸಭ್ಯ, ಅಸಹ್ಯ ಅನಿಸಬಹುದು. ಅದಕ್ಕೆ ಸೆನ್ಸಾರ್ ಮಂಡಳಿ ಚಿತ್ರಕ್ಕೆ ‘ಎ’ ಸರ್ಟಿಪಿಕೇಟ್ ನೀಡಿದೆ! ಆದರೆ ಕತೆ ನಡೆಯುವುದು ಬಯಲು ಸೀಮೆಯಲ್ಲಿ. ಅಲ್ಲಿಯದ್ದೇ ಭಾಷೆ, ಶೈಲಿ ಬಳಸಿಕೊಳ್ಳಲಾಗಿದೆ. ಅಲ್ಲಿ ನಿಮ್ಮವ್ವನ್, ಬೋಳಿ ಮಗನೆ, ಬೋಸುಡಿ ಮಗನೆ ಎಂಬುದೆಲ್ಲ ಬೈಗುಳಗಳಲ್ಲ. ಮಾತಿನ ಆರಂಭದಲ್ಲಿ ಬರುವ ವಿಶೇಷಣಗಳು ಅವು. ಅವನ್ನು ಒಂದು ಜನರ ಭಾಷೆ ಎಂದು ಪರಿಗಣಿಸಿದರೆ ಸಾಕು. ಹಾಗಿರುವುದರಿಂದಲೇ ಚಿತ್ರ ಸಹಜ ಅನ್ನಿಸುವುದು.
ಒಮ್ಮೆ ನಾಯಕನ ಗೆಳೆಯ ಕೊಟ್ಟ ಹಣವನ್ನು ನಾಯಕಿ ಕುಪ್ಪುಸದೊಳಗೆ ಇರಿಸಿಕೊಳ್ಳುತ್ತಾಳೆ. ‘ಅದ್ಕೇ ನೋಡು ಹೆಂಗಸ್ರ ಕೈಲಿ ದುಡ್ಡು ಬೆಚ್ಚಗಿರತ್ತಂತೆ...’ ಅನ್ನುತ್ತಾನೆ ನಾಯಕ ವಿಜಯ್. ಎಲ್ಲರೊಟ್ಟಿಗೆ ಕುಳಿತು ಸಿನಿಮಾ ನೋಡುವಾಗ ಇದು ಸ್ವಲ್ಪ ಇರಿಸುಮುರಿಸು ಉಂಟು ಮಾಡುತ್ತದಾದರೂ, ವಿಷಯ ಸತ್ಯವೇ ಅಲ್ಲವೇ?
ಚಿತ್ರದಲ್ಲಿರೋದು ಎರಡೇ ಹಾಡು. ಒಂದು ‘ಗುರುವೇ ನಿನ್ನಾಟ ಬಲ್ಲವರು ಯಾರ್‍ಯಾರೊ’ ಇಂಪಾಗಿದೆ. ಇನ್ನೊಂದು ಹಾಡು ಹಿಂದಿಯದ್ದು, ‘ಆ ಆ ಆಜಾ ಆ ಆ ಆ ಆಜಾ’ ಇದರಲ್ಲಿ ನೃತ್ಯ ಉತ್ತಮವಾಗಿದೆ. ಇಕ್ಬಾಲ್ ಕುತ್ತಿಗೆ ಕುಣಿಸುವ ನೃತ್ಯದಲ್ಲಿ ಶಮ್ಮಿಕಪೂರ್‌ನನ್ನೂ ಮೀರಿಸಿದ್ದಾರೆ. ಇದೊಂದು ನೃತ್ಯಕ್ಕಾಗಿಯಾದರೂ ನೀವು ಸಿನಿಮಾ ನೋಡಬೇಕು. ನಕ್ಕು ನಕ್ಕು ಸುಸ್ತಾಗುವುದು ಖಂಡಿತ.
ಸಾವಂತ್ರಿಯಾಗಿ ನಾಯಕಿ, ಬ್ಯಾಡರ ಮಂಜನಾಗಿ ವಿಜಯ್, ಅವ್ವಳ ಪಾತ್ರದಲ್ಲಿ ಶೃತಿ ಉತ್ತಮ ಅಭಿನಯ ನೀಡಿದ್ದಾರೆ. ವಿಜಯ್‌ಗೆ ಇಂತಹ ಹಳ್ಳಿ ಹುಡುಗುನ ಪಾತ್ರ ಸಹಜವಾಗಿ ಒಪ್ಪುತ್ತದೆ. ಆತ ಇಂತಹ ಪಾತ್ರಗಳಲ್ಲಿ ಸಹಜವಾಗಿ ನಟಿಸುತ್ತಾನೆ. ಶೃತಿಯಂತಹ ನಟಿಯ ಬಾಯಲ್ಲಿ ಕೆಟ್ಟ ಶಬ್ದದ ಡೈಲಾಗುಗಳು, ಅಳುಮುಂಜಿ ಪಾತ್ರಕ್ಕೇ ಸೀಮಿತವಾಗಿದ್ದ ಅವರನ್ನು ಮಾಂಕಾಳಿ ಪಾತ್ರದಲ್ಲಿ ನೋಡುವುದು ಒಂದು ಅಪರೂಪವೇ. ಆದರೂ ಶೃತಿಯ ಬದಲು ಉಮಾಶ್ರಿ ಅವ್ವಳ ಪಾತ್ರವನ್ನು ಇನ್ನೂ ಚೆನ್ನಾಗಿ ನಿಭಾಯಿಸುತ್ತಿದ್ದರೇನೋ ಅನ್ನೋದು ನನ್ನ ಭಾವನೆ.
ನಾಯಕಿ ಸಾವಂತ್ರಿಯ ಗೆಳತಿ ಶಿವಿ ಸಾಯುತ್ತಾಳೆ. ಆಕೆ ಯಾಕೆ ಸಾಯುತ್ತಾಳೆ? ಎಂಬುದು ಗೊತ್ತಾಗುವುದಿಲ್ಲ. ಆದರೆ ಆಕೆಯ ಸಾವಿಗೆ ಜನ ಏನೇನೋ ಮಾತಾಡಿಕೊಳ್ಳುತ್ತಾರೆ. ಆಕೆ ಸತ್ತಾಗ ಮನೆಯವರು, ಅಕ್ಕಪಕ್ಕದವರು ಅಳುವುದನ್ನು ಹಾಗೂ ಚಿತ್ರ ಮುಗಿಯುತ್ತ ಬರುವಾಗ ನಾಯಕ- ನಾಯಕಿಯ ಸರಸವನ್ನು ಸ್ವಲ್ಪ ಹೆಚ್ಚೇ ಎನ್ನುವಷ್ಟು ತೋರಿಸಲಾಗಿದೆ. ಎರಡೂ ಬಹುಶಃ ಅನಗತ್ಯವಾಗಿತ್ತು.
ಚಿತ್ರದುದ್ದಕ್ಕೂ ಬೈಗುಳ ಕೇಳಿರುತ್ತೀರಿ. ಅಂತ್ಯದಲ್ಲಿ ಪ್ರೇಕ್ಷಕರಿಗೂ ಬೈಗುಳವೇ!?
ಸಾಮಾನ್ಯವಾಗಿ ಚಿತ್ರದ ಕೊನೆಯಲ್ಲಿ ಇನ್ನೊಮ್ಮೆ ನೀವೂ ಬನ್ನಿ, ನಿಮ್ಮವರನ್ನೂ ಕರೆತನ್ನಿ ಎಂದೆಲ್ಲ ಹೇಳುವುದು ಸಾಮಾನ್ಯ. ಆದರೆ ಅವ್ವ ಮಾತ್ರ ಏನು ಕೋತಿ ಕುಣಿತೈತ್ರಾ ಇಲ್ಲಿ. ಹ್ವೋಗಿ ಹ್ವೋಗಿ ಕೆಲಸ ನೋಡ್ವೋಗಿ ಎಂದು ಬೀಳ್ಕೊಡುತ್ತಾಳೆ!ಹೋಗಿ ನೋಡಿ ಖುಶಿಪಟ್ಟು, ಉಗಿಸ್ಕೊಂಡು ಬನ್ನಿ! ದುಡ್ಕೊಟ್ಟು ಉಗಿಸ್ಕೊಳ್ಳೋದು ಅಂದ್ರೆ ಏನೂಂತ ನಿಮಗೂ ಸ್ವಲ್ಪ ಗೊತ್ತಾಗ್ಲಿ...!!

Tuesday, February 12, 2008

ಅವರ ಪ್ರೀತಿ ಮದುವೆಯಲ್ಲಿ ಅಂತ್ಯವಾಯಿತು!



ಗಣೇಶ್ ಮತ್ತು ಶಿಲ್ಪಾ ೨ ವರ್ಷದ ಹಿಂದೆ ಭೇಟಿಯಾದರು. ಪರಿಚಯ ಪ್ರೇಮಕ್ಕೆ ತಿರುಗಿತು. ಅದೀಗ ಮದುವೆಯಲ್ಲಿ ಮುಕ್ತಾಯವಾಗಿದೆ!
ಹಾಗಂತ ಟಿವಿ ೯ನಲ್ಲಿ ಒದರುತ್ತಿದ್ದರು. ನಮ್ಮದೇ ವಿಜಯ ಕರ್ನಾಟಕ ಪತ್ರಿಕೆಯಲ್ಲೂ ಹಾಗೇ ಬಂದಿದೆ ಅನ್ನಿ. ಹಾಸ್ಯಕ್ಕೆ ಅವರ ಪ್ರೀತಿ ಮದುವೆಯಲ್ಲಿ ಅಂತ್ಯವಾಯಿತು ಅನ್ನುವುದು ವಾಡಿಕೆ. ಆದರೆ ನಿಜವಾಗಿಯೂ ಸುದ್ದಿ ನಿರೂಪಿಸುವಾಗಲೂ ಹಾಗೆ ಹೇಳಬೇಕೆ?

ಜೋಗಿಯವರು ಜಾನಕಿ ಕಾಲಂನಲ್ಲಿ ಬರೆದ ‘ಪ್ರೀತಿಯೆಂಬ ಮಾಯಾಂಜಿಕೆಯೂ ಮನಸ್ಸೆಂಬ ವೈದಹಿಯೂ’ ಲೇಖನದಲ್ಲಿ ಪ್ರೀತಿಯ ಬಗೆಗೆ ಹಾಸ್ಯಮಯವಾಗಿ, ವಿಶೇಷವಾಗಿ ಮತ್ತು ವಿಶಿಷ್ಟವಾಗಿ ಬರೆದಿದ್ದಾರೆ. ಓದಿರದೇ ಇದ್ದರೆ ಒಮ್ಮೆ ಓದಿ.
ಅವರು ಬರೆಯುತ್ತಾರೆ...

ಪ್ರೀತಿಸದೇ ವರ್ಷಾನುಗಟ್ಟಲೆ ಸಂತೋಷವಾಗಿ ಇದ್ದುಬಿಡಬಹುದು. ಪ್ರೀತಿಸುತ್ತಲೂ ಸಂತೋಷವಾಗಿರಬಹುದು. ಆದರೆ ಪ್ರೀತಿ ಏನನ್ನೋ ಬೇಡುತ್ತದೆ. ಏನನ್ನೋ ಕಾಡುತ್ತದೆ. ಸುಮ್ಮನಿದ್ದವರನ್ನು ಮದುವೆಗೆ ದೂಡುತ್ತದೆ. ಮದುವೆಯಾದರೆ ಪ್ರೀತಿ ಉಳಿಯುತ್ತದೆ ಅಂದುಕೊಳ್ಳುತ್ತಾರೆ. ಮದುವೆಯೆಂಬ ಪಂಜರದಲ್ಲಿ ಪ್ರೀತಿಯನ್ನು ಬಂಧಿಸಲು ಯತ್ನಿಸುತ್ತಾರೆ. ಆದರೆ ಗಿಣಿಯು ಪಂಜರದೊಳಿಲ್ಲ ಎಂಬುದು ಆಮೇಲೆ ತಿಳಿಯುತ್ತದೆ’... ಹೀಗೆ ಸಾಗುತ್ತದೆ ಬರವಣಿಗೆ.
ಅಂತ್ಯ ಇನ್ನೂ ರೋಚಕ!

‘ಮದುವೆಗೆ ಮೊದಲು ಐ ಲವ್‌ ಯು ಅನ್ನುವುದು ಹೇಗೆ ಎಂಬ ಸಂಕಟ. ಮದುವೆಯಾದ ನಂತರ ಐ ಲವ್ ಯು ಅನ್ನಬೇಕಲ್ಲ ಎಂಬ ಪ್ರಾಣಸಂಕಟ. ಮದುವೆಗೆ ಮೊದಲು ಎಲ್ಲಿ ಪ್ರೀತಿಸ್ತೀನಿ ಅಂದುಬಿಡುತ್ತಾನೋ ಎಂಬ ಭಯ. ಆಮೇಲೆ ಎಲ್ಲಿ ಪ್ರೀತಿಸುತ್ತೇನೆ ಅನ್ನೋದಿಲ್ಲವೋ ಎಂಬ ಭಯ. ಮೊದಲು ಪ್ರೀತಿಸಲಿ ಅನ್ನೋ ಆಸೆ. ನಂತರ ಪ್ರೀತಿಸೋದಿಲ್ಲ ಎಂಬ ಗುಮಾನಿ.

ಒಮ್ಮೆ ಐ ಲವ್ ಯು ಅಂದೆ. ಥ್ಯಾಂಕ್ಯು ಅನ್ನುವ ಉತ್ತರ ಬಂತು. ಮದುವೆಯಾದ ಮೇಲೆ ಅದನ್ನೇ ಅಂದೆ ನೋ ಮೆನ್ಶನ್ ಪ್ಲೀಸ್ ಅನ್ನುವ ಉತ್ತರ ಬಂತು. ಐ ಹೇಟ್ ಯು ಅಂದೆ. ಸೇಮ್ ಟು ಯು ಎಂಬ ಮರುತ್ತರ ಬಂತು. ಸಧ್ಯ ಇಬ್ಬರೂ ಪ್ರೀತಿಸುತ್ತಿಲ್ಲ. ಆದ್ದರಿಂದ ಸುಖವಾಗಿದ್ದೇವೆ ಅಂದುಕೊಂಡೆ’ ಎಂದು ಬರೆಯುತ್ತಾರೆ ಜೋಗಿ. ಪ್ರೀತಿಯ ಬಗ್ಗೆ ಇಷ್ಟು ಅದ್ಭುತವಾಗಿ, ಹಾಸ್ಯಮಿಶ್ರಿತ ಸತ್ಯ ವಿವರಿಸಿದ್ದನ್ನು ನಾನಂತೂ ಎಲ್ಲೂ ಓದಿಲ್ಲ.

ಇಷ್ಟೆಲ್ಲ ನೆನಪಾದದ್ದು ಗಣೇಶ್ ಮದುವೆಯಿಂದ. ಟಿವಿ೯ ಚಾನಲ್‌ನಲ್ಲಂತೂ ಇಡೀ ದಿನ ಅದೇ ಸುದ್ದಿ. ಸಂಜೆಯ ನಂತರ ಬೇರೆ ವಿಷಯವೇ ಇಲ್ಲ. ರಾತ್ರಿ ೧೦.೦೦ ಗಂಟೆಗೆ ಇದೆಂಥಾ ಮದುವೆ!? ಎಂಬ ಕಾರ್ಯಕ್ರಮ. ಯಾಕೆ? ಒಬ್ಬ ಸಿನಿಮಾ ಸ್ಟಾರ್‌ನ ಖಾಸಗಿ ಜೀವನದ ಬಗ್ಗೆ ಯಾಕಿಷ್ಟು ಆಸಕ್ತಿ? ಆತನ ಮದುವೆಯನ್ನು ಇದೆಂಥಾ ಮದುವೆ ಎಂದು ಪ್ರಶ್ನಿಸಲು ಮಾಧ್ಯಮಕ್ಕೆ ಅಧಿಕಾರ ಕೊಟ್ಟವರು ಯಾರು? ಮಾಧ್ಯಮದ ಮಂದಿ ಹದ್ದುಮೀರಿ ವರ್ತಿಸುತ್ತಿದ್ದಾರಾ? ಎಂಬೆಲ್ಲಾ ಪ್ರಶ್ನೆಗಳು ಪತ್ರಕರ್ತನಾದ ನನ್ನಲ್ಲಿಯೇ ಮೂಡುತ್ತಿದೆ.

ಮಾಧ್ಯಮಗಳ ಮತ್ತು ಮಾಧ್ಯಮದಲ್ಲಿರುವ ಕೆಲವರ ಅತ್ಯಾಸಕ್ತಿಯ ಪರಿಣಾಮ ಪ್ರಸಿದ್ಧ ವ್ಯಕ್ತಿಗಳ ಖಾಸಗಿ ಜೀವನ ಹಾಳಾಗಿದೆ. ಖಾಸಗಿ ಜೀವನ ಎಂಬ ಶಬ್ದವೇ ಅವರ ಮಟ್ಟಿಗೆ ಅರ್ಥ ಕಳೆದುಕೊಳ್ಳುತ್ತಿದೆ. ಸಿನಿಮಾ ನಟಿಯರು ಬಂದರೆ ಸಾಕು ಮಧ್ಯಮದವರು ಮುತ್ತುತ್ತಾರೆ. ಮಂಗಳೂರಿಗೆ ಐಶ್ವರ್ಯಾ ರೈ ಬಂದರೆ ಎಲ್ಲ ಮಾಧ್ಯಮ ಪ್ರತಿನಿಧಿಗಳು ಐಶ್ವರ್ಯಾ ರೈ ಇರುವ ಹೋಟೆಲ್ ಎದುರು ಒಂದಿಡೀ ದಿನ ಕಾದು ಕುಳಿತಿರುತ್ತಾರೆ. (ಸಾಮಾನ್ಯರು ಪತ್ರಿಕಾಗೋಷ್ಠಿ ೫ ನಿಮಿಷ ತಡವಾದರೆ ಬೊಬ್ಬೆಹೊಡೆಯುತ್ತಾರೆ!). ಆಕೆಯೋ ಪತ್ರಕರ್ತರನ್ನು ಬಳಿಯೂ ಬಿಟ್ಟುಕೊಳ್ಳುವುದಿಲ್ಲ. ಇದೆಂಥ ಕರ್ಮ ಪತ್ರಕರ್ತರದ್ದು!

ಖಾಸಗಿ ಜೀವನ. ಅವರವರದ್ದು ಅವರವರಿಗೆ. ಒಬ್ಬೆ ಒಳ್ಳೆ ನಟನಾದರೆ ಅವನ ನಟನೆ ಇಷ್ಟಪಡೋಣ. ಲೇಖಕನ ಲೇಖನ ಇಷ್ಟಪಡೋಣ. ಅವರ ಪ್ರೀಮ, ಕಾಮದ ಖಾಸಗಿ ಜೀವನವನ್ನಲ್ಲ. ಸಾರ್ವಜನಿಕ ಜೀವನದಲ್ಲಿ ಇರುವವರು ಉತ್ತಮ ನಡತೆ, ಆದರ್ಶ ಜೀವನ ನಡೆಸಬೇಕು ಎಂದು ಬಯಸುವುದು ತಪ್ಪಲ್ಲ. ಆದರೆ ಹಾಗೇ ಇರಬೇಕು ಎಂದು ನಿರ್ದೇಶಿಸುವುದು ಸರಿಯಲ್ಲ.

ಗಣೇಶ್ ಇಷ್ಟ ಪಟ್ಟ ಹುಡುಗಿಯನ್ನು ಮದುವೆಯಾಗಿದ್ದಾರೆ. ವಿಚ್ಛೇದಿತೆಯನ್ನು ಮದುವೆಯಾಗಲು ಅಂತಹ ಮನಸ್ಥಿತಿ ಬೇಕು ಎಂಬುದು ಸತ್ಯ. ಆದರೆ ಆಕೆಗೆ ಆತನ ಜೀವನ ಕೊಟ್ಟ, ಬಾಳು ಕೊಟ್ಟ ಎಂಬುದು ಸುಳ್ಳು. ಯಾಕೆಂದರೆ ಜೀವನ ಆಕೆಯದು. ವಿಚ್ಛೇದಿತರಾಗಿ ಮದುವೆಯಾಗದೇ ಇರುವವರೂ ಬಾಳು ನಡೆಸುತ್ತಿದ್ದಾರೆ. ಅಥವಾ ಆಕೆ ವಿಚ್ಛೇದಿತೆ. ಬಾಳು ಕತ್ತಲಲ್ಲಿದೆ ಎಂದು ಗಣೇಶ ಮದುವೆಯಾಗಿದ್ದಲ್ಲ. ಇಬ್ಬರೂ ಪರಸ್ಪರ ಇಷ್ಟಪಟ್ಟು ಮದುವೆಯಾಗಿದ್ದಾರೆ. ಅದನ್ನೊಂದು ದೊಡ್ಡ ಆದರ್ಶವೆಂದಾಗಲಿ, ಟಿವಿ೯ ಚಾನಲ್ ಥರ ಇದೆಂಥಾ ಮದುವೆ ಎಂದಾಗಲಿ ಬಿಂಬಿಸುವ, ಭಾರೀ ಪ್ರಚಾರ ಕೊಡುವ ಅಗತ್ಯಗಳು ನನಗಂತೂ ಸರಿ ಅನಿಸುತ್ತಿಲ್ಲ. ಏನಂತೀರಾ?

ಹೆಂಡತಿಗೂ ನದಿಯ ಗು(ಹ)oಗು

ನಾನಿನ್ನೂ ಜೋಗಿಯವರ ನದಿಯ ನೆನಪಿನ ಹ(ಗು)ಂಗಿನಿಂದ ಹೊರಬಂದಿಲ್ಲ. ಆಗಲೇ ನನ್ನ ಹೆಂಡತಿ ನದಿಯ ಗುಂಗಿಗೆ ಸಿಲುಕಿದ್ದಾಳೆ. ಸಾಮಾನ್ಯವಾಗಿ ಆಕೆ ಓದುವುದು ತುಸು ನಿಧಾನ. ದಿನವೂ ಅಷ್ಟಷ್ಟೇ ಪುಟಗಳನ್ನು ಓದುತ್ತ ಹೋಗುವುದು ಆಕೆ ಅಭ್ಯಾಸ. ಆದರೆ ಜೋಗಿಯವರ ನದಿಯ ನೆನಪಿನ ಹಂಗು ಪುಸ್ತಕ ಹಿಡಿದ ಆಕೆ ಅದನ್ನು ಕೆಳಗೇ ಇಡುತ್ತಿಲ್ಲ.
ಫೆ.೧೧ರಂದು ಓದಲು ಆರಂಭಿಸಿದವಳು ಫೆ.೧೨ಕ್ಕೆ ಮುಗಿಸುವ ಹಂತಕ್ಕೆ ಬಂದಿದ್ದಾಳೆ! ದಾರವಾಹಿಯನ್ನೂ ನೋಡದೆ, ಇಂಟರ್‌ನೆಟ್ ಆನ್ ಮಾಡದೆ ಪುಸ್ತಕಕ್ಕೆ ಅಂಟಿ ಕೂತಿದ್ದಾಳೆ.
ಇವತ್ತೇ ಮುಗಿಸಿಬಿಡುವಷ್ಟು ಇಂಟರೆಸ್ಟಿಂಗ್ ಆಗಿದ್ಯೇನೆ ಅಂದೆ? ಅದಕ್ಕೆ ಹೌದು ಅಂದಳು. ಆದರೆ ಅವಳಿಗೆ ಇಂದೇ ಓದಿ ಮುಗಿಸುವದೂ ಇಷ್ಟವಿಲ್ಲ ಯಾಕೆಂದರೆ ಮುಗಿದೇ ಹೋಗುತ್ತಲ್ಲ ಎಂಬ ಬೇಜಾರು!
ನೋಡಿ ಜೋಗಿ ಯಾರ್‍ಯಾರನ್ನೋ ಎಂಥೆಂಥ ಸಂಕಷ್ಟಕ್ಕೆ ಸಿಲುಕಿಸಿದ್ದಾರೆ!

Monday, February 11, 2008

ನದಿಯ ನೆನಪಿನ ಗು(ಹ)೦ಗಿನಲ್ಲಿ...


ಅದೊಂದು ಕೊಲೆ ಪ್ರಕರಣ. ನಾನು ಮಂಗಳೂರಿಗೆ ಬರುವ ಮೊದಲೇ ಅದು ನಡೆದಿತ್ತಾದರೂ, ಕ್ರೈಂ ರಿಪೋರ್ಟರ್ ಆಗಿ ನಾನು ಹಳೆಯ ಕ್ರೈಂಗಳ ಕಥಾನಕ ಬರೆಯುತ್ತಿದ್ದಾಗ, ಗೋಪಾಲಕೃಷ್ಣ ಕುಂಟಿನಿ ಸಲಹೆಯಂತೆ ಆ ಕೊಲೆಯ ಬಗ್ಗೆ ಬರೆದಿದ್ದೆ.

ಆದೇ ಕೊಲೆಯ ಸುತ್ತಮುತ್ತ ಜೋಗಿಯ ನದಿಯ ನೆನಪಿನ ಹಂಗು ಕಾದಂಬರಿ ಹಬ್ಬಿಕೊಂಡಿದೆ. ಕೊಲೆಯಾದಾತ ಜೋಗಿ ಮತ್ತು ಕುಂಟಿನಿಯ ಗೆಳೆಯನೂ ಆಗಿದ್ದ. ದಕ್ಷಿಣ ಕನ್ನಡದವರ ಮಟ್ಟಿಗೆ ಈ ಕಾದಂಬರಿ ನಮ್ಮ ಸುತ್ತಲಿನಲ್ಲೇ ನಡೆದ ಘಟನೆ ಎಂಬಷ್ಟು ಆಪ್ತವಾಗುವಂಥದ್ದು. ಕೊಲೆಯ ಸುತ್ತ ಹಲವಾರು ಘಟನೆಗಳು ಸೃಷ್ಟಿಯಾಗುತ್ತವೆ. ಹೆಚ್ಚಿನವೆಲ್ಲ ಸತ್ಯ ಘಟನೆಗಳೇ. ಅದನ್ನು ಜೋಗಿ ಕತೆ ಎಂಬಂತೆ ವಿವರಿಸಿದ್ದಾರೆ. ಸ್ಥಳಗಳು ಅದೇ, ಹೆಸರುಗಳು ಮಾತ್ರ ಬೇರೆ ಬೇರೆ.

ಸುಬ್ರಹ್ಮಣ್ಯ ಮಠದ ಸ್ವಾಮೀಜಿ ಮದುವೆಯಾದ ಘಟನೆಯೂ ಕಾದಂಬರಿಯಲ್ಲಿ ಬರುತ್ತದೆ. ಸ್ವಾಮೀಜಿಯ ತುಮುಲ, ಅವರ ಮದುವೆಗೆ ಉಂಟಾಗುವ ಅಡ್ಡಿಗಳು, ಸ್ವಾಮೀಜಿಯಾಗಿಯೇ ಇರಿ, ಹುಡುಗಿಯೊಂದಿಗಿನ ಸಂಬಂಧ ಮುಂದುವರಿಸಿ ಎಂಬಂಥ ಮರ್ಯಾದೆ ಉಳಿಸುವ ಸಲಹೆಗಳನ್ನೆಲ್ಲ ಜೋಗಿ ಸ್ವಾರ್‍ಯಸ್ಯವಾಗಿ ವಿವರಿಸಿದ್ದಾರೆ.

ಸರಾಗವಾಗಿ ಓದಿಸಿಕೊಂಡು ಹೋಗುವ ಕಾದಂಬರಿ ನಂಗಂತೂ ಖುಷಿಕೊಟ್ಟಿದೆ. ನೀವೂ ಓದಿ. ನಿಮಗೂ ಇಷ್ಟವಾಗುವುದು ಖಂಡಿತ.

ಜೋಗಿ ಸಿಕ್ಕಾಬಟ್ಟೆ ಬರೆಯುತ್ತಾರೆ. ಅವರು ಎಷ್ಟು ಬರೆಯುತ್ತಾರೆಂದರೆ ಅವರು ಒಂದು ವಾರದಲ್ಲಿ ಬರೆದಷ್ಟನ್ನು ನಾವು ಒಂದು ವಾರದಲ್ಲಿ ಓದಲು ಸಾಧ್ಯವಿಲ್ಲ. ಅಷ್ಟು ಬರೆಯುತ್ತಾರೆ. ಅವರು ಬರೆಯುತ್ತಲೇ ಇರಲಿ. ಅದರಲ್ಲಿ ಒಂದಷ್ಟನ್ನಾದರೂ ಓದಿ ಖುಷಿಪಡಲು ನಮಗೆ ಸಮಯ ಸಿಗಲಿ!