Wednesday, December 03, 2008

ಪಾಪಿ ಚಿರಾಯು...


ಯಾರೂ ಸಾಯಬಾರದು. ಹಾಗೆಂದು ಬಯಸಬಾರದು. ಹಾಗೆ ಬಯಸುವುದು ಮಾನಸಿಕ ಅದಃಪಥನದ ಸೂಚನೆ. ಇವತ್ತಿನವರೆಗೂ ನನಗೆ ಹಾಗೆ ಅನ್ನಿಸಿದ್ದೂ ಇಲ್ಲ.

ಮೊನ್ನೆ ಹಾಗನ್ನಿಸಿತು. ಉಗ್ರರು ಮುಂಬಯಿಗೆ ದಾಳಿ ನಡೆಸಿದಾಗ!

ದಾಳಿ ನಡೆಸಿದ ಉಗ್ರರೆಲ್ಲ ಸಾಯಬೇಕು ಅಂತ ಎಲ್ಲರಿಗೂ ಅನ್ನಿಸಿದೆ. ನನಗನ್ನಿಸಿದ್ದು ಬೇರೆ. ದಾಳಿಯ ಗಡಿಬಿಡಿಯಲ್ಲಿ ನೀವು ಗಮನಿಸಿದ್ದೀರೋ ಇಲ್ಲವೊ. ನಾನು ಸರಿಯಾಗಿ ಗಮನಿಸಿದೆ.

ತಾಜ್‌ಗೆ ಉಗ್ರರು ದಾಳಿ ನಡೆಸಿದಾಗ ಅದರಲ್ಲಿ ನಮ್ಮ ನಾಲ್ಕು ಸಂಸದರು (ಎಂಪಿಗಳು) ಇದ್ದರು. ಇಬ್ಬರು ಆರಂಭದಲ್ಲೇ ತಪ್ಪಿಸಿಕೊಂಡರೆ, ಇನ್ನಿಬ್ಬರು ೩೨ ಗಂಟೆಗಳ ನಂತರ ಪಾರಾದರು!

ಆಗ ನನಗೆ ಅನ್ನಿಸಿತು. ಇಷ್ಟೆಲ್ಲ ಜನ ಅಮಾಯಕರು, ನಿತ್ಯ ಜೀವನದ ಅನಿವಾರ್ಯಕ್ಕೆ ಹೆಣಗುತ್ತಿರುವವರು ಸತ್ತರು. ನಮ್ಮ ಸೈನಿಕರು, ಪೊಲೀಸರು ಸತ್ತರು. ಛೆ! ಹಾಗಿರುವಾಗ ಇವರೂ ಸಾಯಬಾರದಿತ್ತೇ ಅನ್ನಿಸಿಬಿಟ್ಟಿತು. ವಿಚಿತ್ರವೆಂದರೆ ಇಂದಿಗೂ ನನಗೆ ಹಾಗೆ ಅನ್ನಿಸುತ್ತಲೇ ಇದೆ. ಇನ್ನೂ ಭಯಂಕರವೆಂದರೆ ಛೆ, ನಮ್ಮ ಭದ್ರತಾ ದಳದವರಾದರೂ ಯಾಕೆ ಅವರನ್ನು ಹೊರಗೆ ಸುರಕ್ಷಿತವಾಗಿ ಕರೆತಂದರು. ಅವರನ್ನು ಎಳೆದುಕೊಂಡು ಉಗ್ರರ ಎದುರಿಗೆ ನಿಲ್ಲಿಸಿಬಿಡಬೇಕಿತ್ತು. ಇಲ್ಲವೇ ಭದ್ರತಾ ದಳದ ಸಿಬ್ಬಂದಿಯೇ ಗುಂಡುಹೊಡೆದರೂ ಆಗುತ್ತಿತ್ತು!

ಹೀಗೆಲ್ಲ ಯೋಚಿಸುವುದು ಸ್ವಸ್ಥ ಮನಿಸಿನ ಚಿಂತನೆಯಲ್ಲ ಎಂಬುದು ನನಗೆ ಅರಿವಿದೆ. ಆದರೂ ಅವರ ಮೇಲಿನ ಕೋಪ ಹೀಗೆಲ್ಲ ಯೋಚಿಸುವಂತೆ ಮಾಡುತ್ತಿದೆ. ಮತ್ತು ಅದೇ ಸರಿ ಅಂತಲೂ ಅನ್ನಿಸುತ್ತಿದೆ.

ಹೌದು. ಅವರು ಸಾಯಬೇಕಿತ್ತು. ಆಗಲಾದರೂ ನಮ್ಮ ರಾಜಕಾರಣಿಗಳು ಉಗ್ರರ ದಾಳಿ, ಬಾಂಬ್ ಸ್ಫೋಟಗಳನ್ನು ಗಂಭೀರವಾಗಿ ಪರಿಗಣಿಸುತ್ತಿದ್ದರೇನೊ. ಇಲ್ಲವಾದಲ್ಲಿ ನಮ್ಮನ್ನಾಳುವವರು ಇದನ್ನೆಲ್ಲ ಮತಕ್ಕಾಗಿ ಬಳಸಿಕೊಳ್ಳುವುದನ್ನೇ ವೃತ್ತಿಯಾಗಿಸಿಕೊಂಡಿದ್ದಾರೆ. ಅವರದ್ದೇ ಕಾಲಬುಡಕ್ಕೆ ಬಂದಾಗ, ಅವರದ್ದೇ ಜನ ಸತ್ತಾಗಲಾದರೂ ಸ್ವಲ್ಪ ಎಚ್ಚೆತ್ತುಕೊಳ್ಳುತ್ತಾರೇನೋ ಎಂಬ ಕಾರಣಕ್ಕಾಗಿಯೇ ನನಗೆ ಹಾಗನ್ನಿಸಿತು.

ಅವತ್ತು ತಾಜ್‌ನಲ್ಲಿ ಬಿಜೆಪಿಯ ಗೋದ್ರಾ ಸಂಸದ, ಮಹಾರಾಷ್ಟ್ರ ಎನ್‌ಸಿಪಿ ಸಂಸದ, ಕಾಂಗ್ರೆಸ್‌ನ ಸಂದರು ಇದ್ದರು. ಸರ್ವ ಪಕ್ಷ ಸಮನ್ವಯವೂ ಆಗುತ್ತಿತ್ತು. ತಥ್. ಹಾಗಾಗಲಿಲ್ಲ.

ನಾಲ್ಕು ಎಂಪಿಗಳು ಪಾರಾಗಿದ್ದು, ಅದರಲ್ಲೂ ೩೨ ಗಂಟೆಗಳ ನಂತರ ಇಬ್ಬರು ಎಂಪಿಗಳು ಪಾರಾದ ಸುದ್ದಿ ಓದಿದಾಗ ನೆನಪಾಯ್ತು...

ಪಾಪಿ ಚಿರಾಯು!

ಹಾಂ... ಅಂದಹಾಗೆ ಜೋಗಿ ಇತ್ತೀಚೆಗೆ ಬರೆದ ಯಾಮಿನಿ ಕಾದಂಬರಿಯ ಹೀರೋ ಹೆಸರು ಚಿರಾಯು!

ಅದರ ಬಗ್ಗೆ ಇನ್ನೊಮ್ಮೆ ಬರೆಯುತ್ತೇನೆ.

Monday, December 01, 2008

ಇನ್ನೆಷ್ಟು ವರ್ಷ ಕಾಶ್ಮೀರಕ್ಕೆ ವಿಶೇಷ ರಾಜ್ಯದ ಕಿರೀಟ?


ಕಾಶ್ಮೀರಿಗಳೆಲ್ಲ ಭಾರತದ ಪ್ರಜೆಗಳು. ಆದರೆ ಭಾರತದ ಪ್ರಜೆಯೊಬ್ಬ ಕಾಶ್ಮೀರಿಯಾಗಲು ಸಾಧ್ಯವಿಲ್ಲ! ನೀವು ಎಂದಿಗೂ ಕಾಶ್ಮೀರದ ಚುನಾವಣೆಯಲ್ಲಿ ಮತ ಚಲಾಯಿಸಲಾರಿರಿ. ಅಲ್ಲಿ ಭೂಮಿ ಕೊಳ್ಳಲಾರಿರಿ. ಅದೇ ಒಬ್ಬ ಕಾಶ್ಮೀರಿ ಪ್ರಜೆ ಹಂಪಿಗೆ ಬಂದು ಮತದಾರರ ಗುರುತುಪತ್ರ ಪಡೆಯಬಲ್ಲ. ವಿಜಾಪುರದಲ್ಲಿ ಭೂಮಿ ಖರೀದಿಸಿ, ಗಲ್ಲಿಯಲ್ಲಿ ವ್ಯಾಪಾರಿಯಾಗಲ್ಲ.

೬೧ ವರ್ಷದಲ್ಲಿ ಜಮ್ಮು-ಕಾಶ್ಮೀರ ಒಬ್ಬೇ ಒಬ್ಬ ಹಿಂದೂ ಮುಖ್ಯಮಂತ್ರಿಯನ್ನು ಕಂಡಿಲ್ಲ. ಒಬ್ಬ ಹಿಂದುವೂ ಪ್ರಮುಖ ಖಾತೆಯ ಸಚಿವನಾಗಲಿಲ್ಲ. ಕೇಂದ್ರ ಸರಕಾರ ಈ ರಾಜ್ಯದ ಪ್ರಜೆಗಳಿಗೆ ವರ್ಷಕ್ಕೆ ತಲಾ ೯,೭೫೪ ರೂ. ದೊರೆಯುವಷ್ಟು ಅನುದಾನ ನೀಡುತ್ತದೆ. ಬಿಹಾರದಂತಹ ರಾಜ್ಯಕ್ಕೆ ದಕ್ಕುವುದು ತಲಾ ೮೭೬ ರೂ.ನಷ್ಟು ಅನುದಾನ ಮಾತ್ರ. ಇಷ್ಟಾಗಿಯೂ ವಿದೇಶಾಂಗ, ಭದ್ರತೆ ಹಾಗೂ ಸಂಪರ್ಕ ಸಂಬಂಧಿ ಕಾನೂನುಗಳುನ್ನು ಬಿಟ್ಟರೆ ದೇಶದ ಅತ್ಯುನ್ನತ ಕೇಂದ್ರವಾದ ಲೋಕಸಭೆ ಜಾರಿ ಮಾಡಿದ ಕಾನೂನುಗಳು ಕಾಶ್ಮೀರಕ್ಕೆ ಲಾಗೂ ಆಗುವುದಿಲ್ಲ!

ವಿಶೇಷ ರಾಜ್ಯದ ಸವಲತ್ತುಗಳನ್ನು ಕಾಶ್ಮೀರ ಇಷ್ಟೂ ವರ್ಷ ತಕರಾರಿಲ್ಲದೆ, ಸುಖದಿಂದ ಅನುಭವಿಸಿಕೊಂಡುಬಂದಿದೆ. ಇಷ್ಟೆಲ್ಲ ಅನುಭವಿಸಿದ ಕಾಶ್ಮೀರಿಗಳು ಮಾಡಿದ್ದೇನು?

೬೧ನೇ ಸ್ವಾತಂತ್ರ್ಯೋತ್ಸವದ ದಿನ ಶ್ರೀನಗರದ ಲಾಲ್‌ಚೌಕ್‌ನಲ್ಲಿ ಹಾರಿಸಲಾಗಿದ್ದ ಭಾರತ ಧ್ವಜವನ್ನು ಕೆಲವೇ ಕ್ಷಣದಲ್ಲಿ ಇಳಿಸಿ, ಪಾಕಿಸ್ಥಾನ ಧ್ವಜ ಹಾರಿಸಿದರು. ಪಾಕಿಸ್ಥಾನಕ್ಕೆ ಜಯಕಾರ ಕೂಗಿದರು. ಭಾರತದ ಸೈನ್ಯ ಜಮ್ಮು-ಕಾಶ್ಮೀರ ಹೆದ್ದಾರಿಯನ್ನು ಸಂಚಾರಕ್ಕೆ ಮುಕ್ತವಾಗಿರಿಸಿತ್ತು. ಸರಕಾರಿ ಅಧಿಕೃತ ದಾಖಲೆಗಳ ಪ್ರಕಾರ ಆಗಸ್ಟ್ ತಿಂಗಳ ೧ ರಿಂದ ೧೦ನೇ ತಾರೀಕಿನವರೆಗೆ ೩,೦೭೨ ಲಾರಿಗಳು ಔಷಧಿ ಸೇರಿದಂತೆ ಅಗತ್ಯ ವಸ್ತುಗಳನ್ನು ಶ್ರೀನಗರಕ್ಕೆ ತಲುಪಿಸಿವೆ. ೨,೧೪೨ ಲಾರಿಗಳು ಕಾಶ್ಮೀರದಿಂದ ಹಣ್ಣು ತುಂಬಿಕೊಂಡು ಲಖನಪುರ ದಾಟಿ ದೇಶದ ಇತರ ಭಾಗಗಳಿಗೆ ಪ್ರಯಾಣ ಬೆಳೆಸಿವೆ. ಜುಲೈ ತಿಂಗಳಲ್ಲಿ ೨೫,೬೫೩ ಲಾರಿಗಳು ಈ ರಾಜ್ಯ ಪ್ರವೇಶಿಸಿ, ೧೫,೪೦೧ ಲಾರಿಗಳು ಹೊರಹೋಗಿವೆ. ಹೀಗಿದ್ದೂ ತಮ್ಮ ಬೆಳೆಗಳನ್ನು ಪಾಕಿಸ್ಥಾನದ ಮುಜಫಾರಾಬಾದಿಗೆ ತೆಗೆದುಕೊಂಡು ಹೋಗಿ ಮಾರಾಟ ಮಾಡುತ್ತೇವೆ ಎಂದು ಹೆದರಿಸಿದರು.

ಪ್ರತ್ಯೇಕತಾವಾದಿಗಳ ನಾಯಕ ಸಯ್ಯದ್ ಅಲಿ ಗೀಲಾನಿ ಸಾರ್ವಜನಿಕವಾಗಿ `ಪಾಕಿಸ್ತಾನ ಸೇರಬಯಸುತ್ತೇವೆ. ಕಾಶ್ಮೀರಿಗಳೆಲ್ಲ ಪಾಕಿಸ್ತಾನಿಗಳು' ಎಂದ. ಕಾಫಿರರೇ ಕಾಶ್ಮೀರ ಬಿಟ್ಟು ತೊಲಗಿ ಎಂದು ಘೋಷಣೆ ಮೊಳಗಿತು. ನಮ್ಮ ತೆರಿಗೆ ದುಡ್ಡಿನಲ್ಲಿ ಇಷ್ಟು ವರ್ಷ ಸಕಲ ಸವಲತ್ತು ನೀಡಿ ಸಾಕಿದ್ದಕ್ಕೆ ಈಗ ದಕ್ಕಿದ್ದು `ಕಾಫಿರರು' ಎಂಬ ಬಿರುದು!

ನಮ್ಮ ಕೇಂದ್ರ ಸರಕಾರ ಮಾತ್ರ ಇನ್ನೂ `ಪಾಪ ಕಾಶ್ಮೀರಿ ಮುಸ್ಲಿಮರಿಗೆ ಬೇಸರವಾಗುತ್ತದೆ. ಹಾಗಾದರೆ ಮುಂಬರುವ ಲೋಕಸಭೆ ಚುನಾವಣೆಯಲ್ಲಿ ಮುಸ್ಲಿಮರ ಮತಗಳು ಸಿಗದೇ ಹೋಗುತ್ತದೆ' ಎಂದು ಮಾತಾಡದೆ ಸುಮ್ಮನೆ ಕುಳಿತಿತು.`ಪಾಕಿಸ್ತಾನದ ಮುಜಫರಾಬಾದಿಗೆ ಹೋಗುವವರು ಹೋಗಬಹುದು. ಆದರೆ ಮರಳಿ ಬರುವಂತಿಲ್ಲ. ಅವರು ಅಲ್ಲೇ ಉಳಿಯಲಿ' ಎಂದು ಹೇಳುವ, `ಪಾಕಿಸ್ತಾನ ಧ್ವಜ ಹಾರಿಸಿದವನಿಗೆ ಗುಂಡಿಕ್ಕಲು ಹಿಂಜರಿಯುವುದಿಲ್ಲ' ಎಂದಬ್ಬರಿಸುವ ಒಬ್ಬ ಗಂಡು ಕೇಂದ್ರ ಸರಕಾರದಲ್ಲಿ ಕಾಣಲಿಲ್ಲ.

ಹಾಗೇನಾದರೂ ಹೇಳಿದ್ದಲ್ಲಿ ಮುಜಫರಾಬಾದಿಗೆ ಹೊರಟವರ ಬಾಯಿ ಕಟ್ಟಿಹೋಗುತ್ತಿತ್ತು. ರಾಲಿ ಸದ್ದಿಲ್ಲದೆ ನಿಂತುಹೋಗುತ್ತಿತ್ತು. ಅಷ್ಟರ ಹೊರತಾಗಿಯೂ ಅವರು ಹೋಗಿದ್ದರೆ ದೇಶಕ್ಕೆ ನಷ್ಟವೇನೂ ಆಗುತ್ತಿರಲಿಲ್ಲ ಬಿಡಿ.

ಪ್ರತ್ಯೇಕತೆಯ ಕೂಗು ಭಾರತಕ್ಕೆ ಹೊಸದಲ್ಲ. ನಾಗಾಲ್ಯಾಂಡ್, ಆಸ್ಸಾಂ, ಮಿಜೋರಾಂ, ತಮಿಳುನಾಡು, ಪಂಜಾಬ ಕೂಡ ಪ್ರತ್ಯೇಕವಾಗಬಯಸಿದ್ದವು. ಆದರೆ ಭಾರತದ ಪ್ರಜಾಪ್ರಭುತ್ವ ವ್ಯವಸ್ಥೆ ಅವಕ್ಕೆಲ್ಲ ಒಂದು ಪರಿಹಾರ ಕಂಡುಕೊಂಡಿದೆ. ಆ ಮೂಲಕ ಏಕಾಗ್ರತೆ ಉಳಿಸಿಕೊಂಡು, ಅವರನ್ನೂ ದೇಶದೊಳಗೊಂದಾಗಿಸಿದೆ. ಕ್ರೂರ, ಅತಿಕ್ರೂರವಾಗಿ ಶಕ್ತಿಯ ಬಳಕೆ, ಪ್ರತ್ಯೇಕತಾವಾದಿ ನಾಯಕರನ್ನು ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ತೊಡಗಿಸಿಕೊಂಡಿದ್ದು ಹಾಗೂ ಉದಾರ ಅನುದಾನ ಹೀಗೆ ೩ ವಿಧಾನಗಳ ಮೂಲಕ ಪ್ರತ್ಯೇಕತೆಯ ಸದ್ದಡಗಿಸಲಾಗಿದೆ. ಇದರ ಪರಿಣಾಮ ನಾಗಾಗಳು ಕೂಡ ಈಗ ರಾಜ್ಯದ ಗಡಿ ವ್ಯತ್ಯಾಸಕ್ಕೆ ಹೋರಾಟ ಸೀಮಿಗೊಳಿಸಿದ್ದಾರೆ. ತಮಿಳುನಾಡಿನ ಹಿಂದಿ ವಿರುದ್ಧದ ಪ್ರತಿಭಟನೆ ಈಗ ಮಸುಕು ನೆನಪು ಮಾತ್ರ.

ಆದರೆ ಕಾಶ್ಮೀರ? ಊಹುಂ. ಕೇಂದ್ರ ಉದಾರವಾಗಿ ಹಣ ನೀಡಿದೆ. ವಾರ್ಷಿಕ ಅನುದಾನದ ಜತೆಗೆ ೨೦೦೪ರಲ್ಲಿ ೫೦,೦೦೦ ಕೋಟಿ ವಿಶೇಷ ಅನುದಾನ ನೀಡಿದೆ. ವಿಶೇಷ ಸ್ಥಾನಮಾನ ಮೊದಲಿಂದಲೂ ಇದೆ. ಎಲ್ಲವನ್ನೂ ಪಡೆದು ಅನುಭವಿಸುತ್ತಲೇ ಕಾಶ್ಮೀರಿಗಳು ರಾಜಕೀಯ ಸ್ವಾತಂತ್ರ್ಯ ಇಲ್ಲ ಎಂದರು. ಅದನ್ನೂ ಕೊಡಲಾಯಿತು. ೨೦೦೪ರಲ್ಲಿ ವಿಶ್ವವೆ ಮೆಚ್ಚುಗೆ ವ್ಯಕ್ತಪಡಿಸುವಂತೆ ಚುನಾವಣೆಯೂ ನಡೆಯಿತು. ಇದಕ್ಕಿಂತ ಹೆಚ್ಚಿನದೇನನ್ನು ಕೊಡಲು ಸಾಧ್ಯ? ಪಾಕ್ ಆಕ್ರಮಿತ ಕಾಶ್ಮೀರಕ್ಕೆ ಇದೆಲ್ಲ ದಕ್ಕಿದೆಯೇನು?ಆದರೂ ಕಾಶ್ಮೀರಿಗಳಿಗೆ ಸಮಾದಾನವಿಲ್ಲ. ಅಮರನಾಥ ದೇವಸ್ಥಾನ ಮಂಡಳಿಗೆ ಭೂಮಿ ಕೊಟ್ಟಿದ್ದನ್ನೆ (ಪುಕ್ಕಟೆ ಕೊಟ್ಟಿದ್ದೂ ಅಲ್ಲ) ನೆಪಮಾಡಿ ದೊಡ್ಡ ಗಲಾಟೆ ಎಬ್ಬಿಸಿದರು. ಅವರ ೨ ದಿನದ ಪ್ರತಿಭಟನೆಗೆ ಹೆದರಿದ ಸರಕಾರ ಭೂಮಿ ಹಿಂಪಡೆಯಿತು. ಅಲ್ಲಿಗೆ ಕಾಶ್ಮೀರಿಗಳ ಪ್ರತಿಭಟನೆ ನಿಲ್ಲಬೇಕಿತ್ತು. ಹಾಗಾಗಲಿಲ್ಲ. ಈಗ ಅಮರನಾಥ ಭೂ ವಿವಾದ ಕಾಶ್ಮೀರಿಗರ ಬೇಡಿಕೆಯಾಗಿ ಉಳಿದಿಲ್ಲ. ಅವರದ್ದು ಮತ್ತದೇ ಪ್ರತ್ಯೇಕತೆಯ ಕೂಗು.

ಕಾಶ್ಮೀರ ಭಾರತದ ತಲೆ ಇದ್ದಂತೆ ಎಂದು ಅದ್ಯಾವ ಮಹಾನುಭಾವರು ಹೇಳಿದರೋ? ಕಾಶ್ಮೀರ ಸದಾ ದೇಶಕ್ಕೆ ತಲೆನೋವಾಗೇ ಉಳಿದಿದೆ. ಇನ್ನೂ ಎಷ್ಟು ದಿನ ಅದನ್ನು ಸಹಿಸಿಕೊಳ್ಳುವುದು? ಇನ್ನೆಷ್ಟು ವರ್ಷ ವಿಶೇಷ ರಾಜ್ಯದ ಕಿರೀಟ ತೊಡಿಸುವುದು? ಅಥವಾ ದೇಶವಿರುವಷ್ಟು ಕಾಲವೂ ಕಾಶ್ಮೀರ ವಿಶೇಷ ರಾಜ್ಯವಾಗೇ ಉಳಿಯಬೇಕೇ?

ವಿಶೇಷ ರಾಜ್ಯ ಎಂಬ ನೆಪದಲ್ಲಿ ಕಾಶ್ಮೀರಕ್ಕೆ ಸಿಗುವ ಸವಲತ್ತುಗಳನ್ನು ನೋಡಿದರೆ ಎಲ್ಲ ರಾಜ್ಯಗಳು `ನಮ್ಮನ್ನೂ ವಿಶೇಷ ರಾಜ್ಯ ಎಂದು ಘೋಷಿಸಿ' ಎಂದು ಹೋರಾಟ ಆರಂಭಿಸುವ ಅಪಾಯವಿದೆ. ಭಾರತದೊಂದಿಗೆ ಸೇರಿದ ೬೧ ವರ್ಷಗಳ ನಂತರವೂ ಕಾಶ್ಮೀರದ ಜನ ಭಾರತದೊಂದಿಗೆ ಮಾನಸಿಕವಾಗಿ ಬೆರೆತೇ ಇಲ್ಲ. (ಭಾರತದ ಪರವಾಗಿದ್ದ ಪಂಡಿತರನ್ನೆಲ್ಲ ಅಲ್ಲಿಂದ ಓಡಿಸಲಾಗಿದೆ ಬಿಡಿ) ಅದೆಲ್ಲಕ್ಕಿಂತ ಹೆಚ್ಚಾಗಿ ಅವರು ಪ್ರತ್ಯೇಕತೆಯ ಅಸ್ತ್ರವನ್ನು ದೇಶವನ್ನು ಹೆದರಿಸಲೆಂದೇ ಬಳಸಿಕೊಂಡುಬಂದಿದ್ದಾರೆ.`ಸಣ್ಣ ಮಕ್ಕಳು ಆಟವಾಡುವಾಗ ನೀನು ಹಂಗೆಲ್ಲ ಮಾಡಿದರೆ ನಾನು ಬರಲ್ಲ ಅಂತ ಮುಖ ತಿರುಗಿಸುತ್ತಾರಲ್ಲ, ವಯಸ್ಸಿಗೆ ಬಂದ ಮಗ ಅಪ್ಪನನ್ನು ಮನೆ ಬಿಟ್ಟುಹೋಗುತ್ತೇನೆಂದು ಹೆದರಿಸುತ್ತಾನಲ್ಲ ಹಾಗೆ...

ಕಾಶ್ಮೀರಿಗಳು ಭಾರತದೊಂದಿಗಿದ್ದೇ ಸುಖವಾಗಿದ್ದಾರೆ. ಹಾಗೊಮ್ಮೆ ಅವರು ಸುಖವಾಗಿಲ್ಲವಾಗಿದ್ದರೆ ಹಿಂಸೆಗೆ ಹೆದರಿ ಪಂಡಿತರು ಕಾಶ್ಮೀರ ತೊರೆದಂತೆ ಅವರೂ ಕಾಶ್ಮೀರ ಬಿಟ್ಟು ಹೋಗುತ್ತಿದ್ದರು. ಪಾಕ್ ಆಕ್ರಮಿತ ಕಾಶ್ಮೀರದ ಸ್ಥಿತಿ ನೋಡಿ ಪಾಕಿಸ್ತಾನಕ್ಕೆ ಸೇರಿದರೆ ಏನಾಗುತ್ತದೆ ಎಂಬುದನ್ನು ಅವರು ಅರಿತಿದ್ದಾರೆ. ಹಾಗಾಗಿ ಪಾಕಿಸ್ತಾನ ಸೇರುವುದು ಇಷ್ಟವಿಲ್ಲ. ಸ್ವತಂತ್ರ್ಯ ರಾಷ್ಟ್ರ ಅನ್ನುತ್ತಾರೆ. ಒಂದೊಮ್ಮೆ ಕಾಶ್ಮೀರಕ್ಕೆ ಸ್ವಾತಂತ್ರ್ಯ ಕೊಟ್ಟರೆ ಪಾಕಿಸ್ತಾನ ಅದನ್ನು ಬಿಟ್ಟೀತೇ? ಹಾಗೊಮ್ಮೆ ಬಿಟ್ಟರೂ ಒಂದು ರಾಷ್ಟ್ರವಾಗಿ, ಪ್ರಜೆಗಳು ಸುಖವಾಗಿ ಬದುಕುವ ರಾಷ್ಟ್ರವಾಗಿ ಉಳಿಯಲು ಸಾಧ್ಯವಾದೀತೇ?

ಇದೆಲ್ಲ ಆಗದ ಮಾತು ಎಂಬುದು ಕಾಶ್ಮೀರಿಗಳಿಗೂ ಗೊತ್ತಿದೆ. ನ್ಯಾಶನಲ್ ಕಾನ್ಫರೆನ್ಸ್ ಪಕ್ಷದ ಮುಖ್ಯಸ್ಥ ಫಾರೂಕ್ ಅಬ್ದುಲ್ಲಾ `ಪ್ರತ್ಯೇಕತೆಯ ಕೂಗು ಕ್ಷೀಣಿಸುತ್ತದೆ. ಸ್ವತಂತ್ರ್ಯ ರಾಷ್ಟ್ರವಾಗಿ ಉಳಿಯುವುದು ಸಾಧ್ಯವಿಲ್ಲ. ಮಾತುಕತೆ, ಹೊಂದಾಣಿಕೆಯಲ್ಲಿ ಮುಕ್ತಾಯವಾಗಲಿದೆ' ಎಂದು ಹೇಳಿರುವುದು ಇದಕ್ಕೆ ಸಾಕ್ಷಿ.

ಆದರೇನು ಮಾಡುವುದು ಅವರಿಗೆ ಹಠ ಮಾಡಿ ರೂಢಿಯಾಗಿದೆ. ಕೆಲವು ಮಕ್ಕಳು ರಚ್ಚೆ ಹಿಡಿಯುತ್ತಾರಲ್ಲ ಹಾಗೆ. ಆಗಾಗ ನಾವು ಪಾಕಿಸ್ತಾನಕ್ಕೆ ಸೇರುತ್ತೇವೆ ಅನ್ನುವುದು. ಸ್ವಾತಂತ್ರ್ಯ ಕೊಡಿ ಅನ್ನುವುದು. ಅದಕ್ಕೆ ಹೆದರಿ ದಿಲ್ಲಿ ದೊರೆಗಳು ಕೊಡುವ ವಿಶೇಷ ಕೊಡುಗೆ ಸ್ವೀಕರಿಸಿ ಸುಮ್ಮನಾಗುವುದು. ಅವರಿಗೆ ಹಠ ಮಾಡುವ ಚಟ, ಇವರಿಗೆ ಸಮಾದಾನ ಮಾಡುವ ಸಂಭ್ರಮ!

ಸಾಕು, ಇಷ್ಟು ವರ್ಷ ಅವರನ್ನು ವಿಶೇಷವಾಗಿ ಸಲಹಿದ್ದು ಸಾಕು. ಸ್ವಾತಂತ್ರ್ಯ ಬಂದಾಗ, ಅದ್ಯಾವುದೋ ಅನಿವಾರ್ಯ ಸ್ಥಿತಿಯಲ್ಲಿ ಭಾರತಕ್ಕೆ ಸೇರಿದಾಗ ಇದ್ದ ಜನಾಂಗ ಈಗಿಲ್ಲ. ಈಗ ಕಾಶ್ಮೀರದಲ್ಲಿರುವುದು ಹೊಸ ಜನಾಂಗ. ಚಾನಲ್‌ಗಳಲ್ಲಿ ನೋಡಿದರೆ ೧೫-೪೦ ವರ್ಷದವರೇ ಪ್ರತಿಭಟನೆಗಳಲ್ಲಿ ಕಾಣಸಿಗುತ್ತಾರೆ. ಅಂದರೆ ಅವರು ಹುಟ್ಟಾ ಭಾರತೀಯರು. ಭಾರತಕ್ಕೆ ಕಾಶ್ಮೀರ ಸೇರುವಾಗ ಇದ್ದ ಜನರಿಗೆ ವಿಶೇಷ ಸೌಲಭ್ಯಗಳನ್ನು ಕೊಡುವುದು ನ್ಯಾಯಯುತ. ಒಪ್ಪಿಕೊಳ್ಳೋಣ. ಈಗಿನವರಿಗೂ ಅದನ್ನು ನೀಡುವ ಅಗತ್ಯ ಖಂಡಿತ ಇಲ್ಲ.

ಕಾಶ್ಮೀರ ವಿಶೇಷ ರಾಜ್ಯವಾಗಿ ಮೆರಿದಿದ್ದು ಸಾಕು. ಅದನ್ನೂ ದೇಶದ ಇತರ ರಾಜ್ಯಗಳಂತೆ ಪರಿಗಣಿಸುವತಾಗಲಿ. ಅವರೂ ನಮ್ಮ ಹಾಗೆ ಹೊಂಡದಿಂದ ಕೂಡಿದ, ರಸಗೊಬ್ಬರ ಸಿಗದ, ನಮ್ಮ ರಾಜ್ಯಗಳಷ್ಟೇ ಅನುದಾನ ಪಡೆಯುವ, ದಕ್ಕಬೇಕಾದ್ದನ್ನೂ ಹೋರಾಟ ಮಾಡಿಯೇ ದಕ್ಕಿಸಿಕೊಳ್ಳಬೇಕಾದ ಸ್ಥಿತಿ ಅನುಭವಿಸಲಿ. ಆಗ ಅವರ ಹಠ ಕಡಿಮೆಯಾದೀತು.

ಬಗ್ಗಿದವನ ಬೆನ್ನಿಗೊಂದು ಗುದ್ದು ಎಂದು ಹಳೇ ಮಾತಿದೆ. ಹಾಗೆ ದಿಲ್ಲಿಯಲ್ಲಿನ ಕೇಂದ್ರ ಸರಕಾರಗಳು ಕಾಶ್ಮೀರಿಗಳ ಎದುರು ಬಗ್ಗಿದ್ದಷ್ಟೇ ಅಲ್ಲ ಕುಕ್ಕುರುಗಾಲಿನಲ್ಲಿ ಕುಳಿತಿದೆ. ಅದಕ್ಕೇ ಅವರು ಆಗಾಗ ಗುದ್ದುತ್ತಿರುತ್ತಾರೆ. ಕೇಂದ್ರ ಸರಕಾರ ಸೆಟೆದು ನಿಂತುಕೊಳ್ಳಲಿ. ದೇಶದ ಮುಸ್ಲಿಮರಿಗೆಲ್ಲಿ ಬೇಸರವಾಗುತ್ತದೋ ಎಂದು ಅಂಜುವ ಅಗ್ಯವಿಲ್ಲ. ಯಾಕೆಂದರೆ ಕಾಶ್ಮೀರಿ ಮುಸ್ಲಿಮರ ಬಗ್ಗೆ ದೇಶದ ಇತರೆಡೆಯ ಮುಸ್ಲಿಮರೇನು ವಿಶೇಷ ಒಲವು ಹೊಂದಿಲ್ಲ. ಇದು ಮೊದಲು ಮತ್ತು ಈಗ ಸಾಬೀತಾಗಿದೆ. ಹಾಗಾಗಿ ಕೇಂದ್ರ ಸರಕಾರ ಧೈರ್ಯದಿಂದ ಈ ನಿರ್ಧಾರ ತೆಗೆದುಕೊಳ್ಳಬಹುದು.

ಇಷ್ಟೆಲ್ಲ ಆದ ನಂತರವೂ ಕಾಶ್ಮೀರಕ್ಕೆ ವಿಶೇಷ ಸ್ಥಾನ-ಮಾನ ಮುಂದುವರಿಸಿದರೆ, ವಿಶೇಷ ಸ್ಥಾನಮಾನದ ಆಸೆಗಾಗಿ ಪ್ರತ್ಯೇಕತೆಯ ಪೀಪಿ ಮೊಳಗಿಸುವಂತೆ ಇತರೆ ರಾಜ್ಯಗಳಿಗೆ ನಾವೇ ಪ್ರೋತ್ಸಾಹ ನೀಡಿದಂತಾಗುತ್ತದೆ.

Tuesday, October 14, 2008

ನನಗೆ ಅಂಥ ಪಿಚ್ಚರುಗಳೇ ಯಾಕೆ ಇಷ್ಟವಾಗುತ್ತವೆ?


ಅಬ್‌ತಕ್ ಚಪ್ಪನ್, ರಿಸ್ಕ್, ಶೂಟ್‌ಔಟ್ ಎಟ್ ಲೋಖಂಡ್ವಾಲಾ, ಎ ವೆನ್ಸಡೆ, ಗಂಗಾಜಲ್...

ಓಹ್! ಗಂಗಾಜಲ್, ಅಬ್ತಕ್ ಚಪ್ಪನ್ ಪಿಚ್ಚರ್ಗಳನ್ನು ಹಲವು ಬಾರಿ ನೋಡಿದ್ದೇನೆ. ನೀವು ಇನ್ನೊಮ್ಮೆ ತೋರಿಸಿದರೂ ಮೊದಲ ಸಾರಿ ನೋಡಿದಾಗಿನಿಗಿಂತ ಹೆಚ್ಚು ಆಸಕ್ತಿಯಿಂದ ನೋಡುತ್ತೇನೆ. ನನಗೆ ಇಷ್ಟವಾಗೋ ಪಿಚ್ಚರ್(ಸಿನಿಮಾ)ಗಳ ಲೀಸ್ಟು ನೋಡಿದರೆ ಎಲ್ಲವೂ ಒಂದೇ ಥರದವು. ಅವುಗಳ ಕತೆ, ಅಲ್ಲಿನ ತಿರುವುಗಳಲ್ಲಿ ವ್ಯತ್ಯಾಸ ಇದೆಯಾದರೂ ಹೆಚ್ಚಿನವೆಲ್ಲ ಪೊಲೀಸರಿಗೆ ಸಂಬಂಧಿಸಿದ ಕತೆಗಳು. ಅದರಲ್ಲೂ ನಿಯತ್ತಿನ, ಧಕ್ಷ ಪೊಲೀಸ್ ಅಧಿಕಾರಿಗಳ ಕತೆಗಳು. ಒಳ್ಳೆ ಪೊಲೀಸರ ಕತೆಗಳು!

ಒಂದು ಕಾಲದಲ್ಲಿ ಪೊಲೀಸರು ಅಂದರೆ ಕೆಟ್ಟವರು. ಎಲ್ಲ ಮುಗಿದ ಮೇಲೆ ಬರುವವರು. ಲಂಚ ತಿನ್ನುವವರು. ಖಾಕಿ ಧಾರಿ ಗೂಂಡಾಗಳು ಎಂದು ಬಿಂಬಿಸುವ ಪಿಚ್ಚುಗಳೇ ಬರುತ್ತಿದ್ದವು. ಅವುಗಳನ್ನೂ ನೋಡಿದ್ದೇನೆ. ಈಗಿನ ಪೊಲೀಸ್ ಪರ ಪಿಚ್ಚರ್ ಗಳನ್ನೂ ನೋಡುತ್ತಿದ್ದೇನೆ.

ಚಿಕ್ಕನಿರುವಾಗ ನನ್ನ ಫೇವರಿಟ್ ಹೀರೊ ದೇವರಾಜ್! ಯಾಕೆಂದರೆ ಆತ ದಕ್ಷ ಪೊಲೀಸ್ ಅಧಿಕಾರಿಗಳ ಪಾತ್ರ ಮಾಡುತ್ತಿದ್ದ. ಒರಿಜಿನಲ್ ಸಾಂಗ್ಲಿಯಾನಾ ಇಷ್ಟವಾಗದಿದ್ದರೂ ಶಂಕರ್‌ನಾಗ್‌ನ ಎಸ್ಪಿ ಸಾಂಗ್ಲಿಯಾನಾ ಪಿಚ್ಚರ್ ಇಷ್ಟವಾಗಿತ್ತು! ನಂತರ ಸಾಯಿಕುಮಾರ್ ಬಂದ. ಪೊಲೀಸ್‌ಸ್ಟೋರಿ ಮೂಲಕ ಇಷ್ಟವಾದ.

ಈಗಲ್ಲ. ಚಿಕ್ಕವನಿರುವಾಗಿನಿಂದಲೂ ನನಗೆ ಪೊಲೀಸರ ಕತೆಯ ಪಿಚ್ಚರ್‌ಗಳೆಂದರೆ ಇಷ್ಟ. ಕೊಂಚ ಮಟ್ಟಿಗೆ ಭೂಗತಲೋಕದ ಕತೆಗಳು ಕೂಡ! ಸೈನಿಕರ ಕತೆಗಳು ಇಷ್ಟವಾಗುತ್ತವಾದರೂ ಪೊಲೀಸರ ಕತೆಗಳಷ್ಟು ಅವು ನನ್ನನ್ನು ಸೆಳೆಯಲಿಲ್ಲ. ಮನಸಲ್ಲಿ ನಿಲ್ಲಲಿಲ್ಲ.

ಯಾಕೆ?

ನಾನಗೆ ಪೊಲೀಸ್ ಆಗಬೇಕೆಂಬ ಆಸೆ ಇದ್ದದ್ದಕ್ಕಾ? ಆ ಮೂಲಕ ಸಮಾಜಕ್ಕೆ ಒಂದಷ್ಟಾದರೂ ಒಳ್ಳೆಯದು ಮಾಡಬೇಕು ಅಂದುಕೊಂಡಿದ್ದಕ್ಕಾ? ಸೈನಿಕನಾಗಿ ಹೊರಗಿನ ಶತ್ರುಗಳ ವಿರುದ್ಧ ಹೋರಾಡುವುದಕ್ಕಿಂತ ಪೊಲೀಸ್ ಅಧಿಕಾರಿಯಾಗಿ ದೇಶದೊಳಗಿನ ಶತ್ರುಗಳ ವಿರುದ್ಧ ಹೋರಾಡುವ ಮನಸ್ಸಿದ್ದಿದ್ದಕ್ಕಾ? ಅಥವಾ ಇಂಥ ಪಿಚ್ಚರ್ ನೋಡಿಯೇ ನಾನೂ ಒಬ್ಬ ದಕ್ಷ ಪೊಲೀಸ್ ಅಧಿಕಾರಿ ಆಗಬೇಕು ಅನ್ನಿಸಿತಾ?

ಇವತ್ತಿಗೂ ನನಗೆ ಈ ಪ್ರಶ್ನೆಗಳಿಗೆ ಸರಿಯಾದ ಉತ್ತರ ಸಿಕ್ಕಿಲ್ಲ. ಆದರೂ ನಾನು ಒಬ್ಬ ಒಳ್ಳೆ ಪೊಲೀಸ್ ಅಧಿಕಾರಿಯಾಗಬೇಕು ಅದುಕೊಂಡಿದ್ದು ಸತ್ಯ. ಹಲವು ಕಾರಣಗಳು. ಅದಾಗಲಿಲ್ಲ. ಬದಲಾಗಿ ಪತ್ರಕರ್ತನಾದೆ. ಈ ಮೂಲಕವೂ ಸಮಾಜಕ್ಕೆ ಸೇವೆ ಸಲ್ಲಿಸಬಹುದಲ್ಲ ಎಂಬ ಸಮಾದಾನ. ಅಷ್ಟೇ ಅಲ್ಲ ಕ್ರೈಂ ವರದಿಗಾರನೂ ಆದೆ. ಆ ಮೂಲಕ ಮತ್ತೆ ನನಗಿಷ್ಟವಾದ ಪೊಲೀಸ್ ಇಲಾಖೆ ಸಂಪರ್ಕ ಪಡೆದೆ.

ಒಳ್ಳೆ ಅಧಿಕಾರಿಗಳ ಪರಿಚಯವಾಯಿತು. ಹೆಸರು ಬರೆಯುತ್ತ ಹೋದರೆ ಸಾಕಷ್ಟಿದೆ. ಹಾಗೆ ಬರೆದರೂ ಅವರಿಗೂ ಹಾನಿ! ಅಂತೂ ಒಳ್ಳೆ ಅಧಿಕಾರಿಗಳ ಪರಿಚಯವೇ ಆಯಿತು. ಯಾರಿಗೂ ಗೊತ್ತಾಗದ ಅದೆಷ್ಟೋ ಸಂಗತಿಗಳು ಕಿವಿಗೆ ಬೀಳತೊಡಗಿದವು. ಕಿವಿಗೆ ಬಿದ್ದಿದ್ದು ಕಣ್ಣಿಗೂ ಕಂಡವು. ಏನೇ ಹೇಳಿ ನನಗಂತೂ ಸಾಕಷ್ಟು ಒಳ್ಳೆ ಅಧಿಕಾರಿಗಳೇ ಕಂಡರು. ಅಥವಾ ನನ್ನ ಮನಸ್ಸಲ್ಲಿ ಒಳ್ಳೆಯದೇ ಇದ್ದಿದ್ದಕ್ಕೆ ಅವರಲ್ಲಿದ್ದ ಒಳ್ಳೆಯದನ್ನಷ್ಟೇ ಕಂಡೆನೊ? ಕೆಲವು ವಿಷಯದಲ್ಲಿ ಪತ್ರಕರ್ತನಾಗಿ ಅವರಿಗೆ ಸಹಾಯವನ್ನೂ ಮಾಡಿದೆ. ಆ ಮೂಲಕ ಸಮಾಜಕ್ಕೂ ಅಂತ ಅಂದುಕೊಂಡೆ. ಈಗಲೂ ಅವರೊಂದಿಗೆ ಗೆಳತನ ನನಗಿಷ್ಟ.

ಇಂದಿಗೂ ಅದೆಷ್ಟೋ ಒಳ್ಳೆ ಅಧಿಕಾರಿಗಳಿದ್ದಾರೆ. ಅವರನ್ನೆಲ್ಲ ಅರ್ಧ ಹಾಳು ಮಾಡುತ್ತಿರುವವರು ನಮ್ಮ ರಾಜಕಾರಣಿಗಳು. ಅವರ ಲಾಭಕ್ಕೆ ಪೊಲೀಸರು ದಾಳಗಳು. ಸಾರ್ವಜನಿಕರು ನಡೆಸುವ ಕಾಯಿಗಳು. ಕಾನೂನು ಮುರಿಯುವವನಿಗೆ ಯಾವುದೂ ಇಲ್ಲ. ಅದೇ ಕಾನೂನು ಪಾಲಕರು ಸಮಾಜದ ಒಳ್ಳೆಯದಕ್ಕೆ ಎನ್‌ಕೌಂಟರ್ ನಡೆಸಿದರೆ ಮಾನವ ಹಕ್ಕು ನಾಶವಾದ ಬಗ್ಗೆ ಬೊಬ್ಬೆ ಹೊಡೆಯಲಾಗುತ್ತದೆ! ಕಾನೂನು ಪಾಲಿಸದೆ ಸಮಾಜಕ್ಕೆ ಕೆಡುಕುಂಟು ಮಾಡುವವನ ನಾಶಕ್ಕೆ ಕಾನೂನು ಪಾಲಕರು ಕೊಂಚ ಕಾನೂನು ಬಿಟ್ಟು ಹೋದರೆ ತಪ್ಪೇನು?

ನಿಮಗೆ ನೆನಪಿರಬಹುದು, ಶೂಟೌಟ್ ಎಟ್ ಲೋಖಂಡ್ವಾಲಾದಲ್ಲಿ ಪ್ರಕರಣದ ತನಿಖೆ ನಡೆಸುವ ನ್ಯಾಯಾಧೀಶರ ಬಳಿ ಅಮಿತಾಬ್ ಕೊನೆಯಲ್ಲೊಂದು ಪ್ರಶ್ನೆ ಕೇಳುತ್ತಾನೆ... ನೀವು ನ್ಯಾಯಾಲಯದಲ್ಲಿದ್ದೀರಿ. ಹೆಂಡತಿ- ಮಕ್ಕಳು ಮನೆಯಲ್ಲಿದ್ದಾರೆ. ಒಬ್ಬ ವ್ಯಕ್ತಿ ನಿಮ್ಮ ಮನೆಯ ಹೊರಗೆ ಪಿಸ್ತೂಲ್ ಹಿಡಿದು ನಿಂತಿದ್ದಾನೆ. ಆತ ಪೊಲೀಸ್ ಆಗಿರಲಿ ಎಂದು ಬಯಸುತ್ತೀರೊ? ಗೂಂಡಾ ಆಗಿರಲಿ ಎಂದು ಬಯಸುತ್ತೀರೊ?

ಸಹಜ. ಆತ ಪೊಲೀಸ್ ಆಗಿರಲಿ ಎಂದೇ ಬಯಸುತ್ತೇವೆ. ಎಲ್ಲದಕ್ಕೂ ಉತ್ತರ ಅಲ್ಲಿಯೇ ಇದೆ. ಎಷ್ಟೇ ಕೆಟ್ಟವರಿರಲಿ, ಪೊಲೀಸರಿಗೆ ಕಾನೂನಿನ ತಡೆಯಿರುತ್ತದೆ. ಆತನನ್ನು ನಿಯಂತ್ರಿಸುವುದು ಕಷ್ಟವಲ್ಲ. ಆದರೆ ಕಾನೂನೇ ಇಲ್ಲದ ಗೂಂಡಾಗಳು ಹಾಗಲ್ಲ. ದುರತವೆಂದರೆ ಅಂಥವರು ಈಗ ಖಾದಿ ಧರಿಸಿ, ನಮ್ಮನ್ನೇ ಆಳುವಂತಾಗಿದ್ದಾರೆ!

ಅದೇನು ನಾನು ಬೆಳೆದ ವಾತಾವರಣವೋ? ನನ್ನಪ್ಪ-ಅಮ್ಮ ನೀಡಿದ ಸಂಸ್ಕಾರವೋ? ಅಥವಾ ಅವರೇ ಸ್ವತಃ ನಿಯತ್ತಿನಿಂದ, ಭಾರತದ ಉತ್ತಮ ಪ್ರಜೆಗಳಾಗಿರುವುದೋ? ನನ್ನ ಮನಸ್ಸಿನಲ್ಲಿ ಚಿಕ್ಕಂದಿನಿಂದಲೂ ಲಂಚ, ಅನ್ಯಾಯ ವಿರೋಧಿ ಮನಸ್ಸು ರೂಪುಗೊಂಡುಬಿಟ್ಟಿದೆ. ಇವತ್ತಿಗೂ ಅನ್ಯಾಯ, ಲಂಚ ಕಂಡರೆ ಅದು ಸಹಿಸದು. ಎಲ್ಲ ಕಡೆ ಲಂಚ ಇದೆ ಅಂತ ಅನ್ನಿಸಿದರೂ ನಾನು ಇವತ್ತಿನವರೆಗೆ ಯಾರಿಗೂ ಲಂಚಕೊಟ್ಟಿಲ್ಲ. ಪತ್ರಕರ್ತನಾಗಿಯೂ, ದೊಡ್ಡ ಪೊಲೀಸ್ ಅಧಿಕಾರಿಗಳ ಪರಿಚಯವಿದ್ದೂ ಪೊಲೀಸರಿಗೆ ದಂಡ ಕಟ್ಟಿದ್ದೇನೆ. ಲಂಚಕೊಟ್ಟಿಲ್ಲ. ಇವತ್ತಿಗೂ ನನಗೆ ಲಂಚಕೋರರನ್ನು, ಕೊಳಕು ರಾಜಕಾರಣಿಗಳನ್ನು ಕಂಡರೆ ಎಲ್ಲಿಲ್ಲದ ದ್ವೇಷ. ಅಂಥವರ ವಿರುದ್ಧ ಬರೆಯಲು ಸಿಕ್ಕ ಒಂದು ಅವಕಾಶವನ್ನೂ ನಾನು ಇವತ್ತಿನವರೆಗೆ ಸುಮ್ಮನೆ ಬಿಟ್ಟಿಲ್ಲ. ನನಗೆ ಅವರ ಮೇಲೆ ಸೇಡು ತೀರಿಸಿಕೊಳ್ಳು ಕಾನೂನು ಬದ್ಧವಾಗಿರುವ ಮಾರ್ಗ ಅದು.

ಎಲ್ಲರೂ ಕಳ್ಳರು. ಲಂಚ ಎಲ್ಲೆಲ್ಲೂ ಆವರಿಸಿದೆ ಅಂತ ಎಷ್ಟೇ ಅಂದರೂ ನನಗೆ ಈಗಲೂ ನಂಬಿಕೆಯಿದೆ. ಅದೇನೆಂದರೆ ಇವತ್ತಿಗೂ ನಿಯತ್ತಿನ ಜನ ಇದ್ದಾರೆ. ಧಕ್ಷ ಅಧಿಕಾರಿಗಳಿದ್ದಾರೆ. ರಾಜಕಾರಣಿಗಳೂ! ಸಂಖ್ಯೆ ಕಡಿಮೆ ಇರಬಹುದು. ಹೆಚ್ಚಿದ್ದರೂ ನಮಗೆ ಕಡಿಮೆ ಅನ್ನಿಸಬಹುದು. ಅವರಿಗೆ ಕೆಟ್ಟವರು ಕಿರಿಕಿರಿ ನೀಡಬಹುದು. ಅದೇನಾದರೂ ಇರಲಿ. ನಾವು ನಮ್ಮಷ್ಟಕ್ಕೆ ನಿಯತ್ತಿನಿಂದ ಇರಬೇಕು. ಇಲ್ಲಿದ್ದುಕೊಂಡೇ ಕೈಲಾದಷ್ಟು ಬದಲಾವಣೆ ಮಾಡಬಹುದು ಅಥವಾ ನಿಯತ್ತು ಇನ್ನಷ್ಟು ಕೆಡದಂತೆ, ಭಷ್ಟತೆ ಹರಡದಂತೆ ತಡೆಯಬಹುದು.

ನಾವು ಮಾಡಬೇಕಾದ್ದಿಷ್ಟೆ, ನಾವು ನಿಯತ್ತಿನಿಂದಿರಬೇಕು. ಲಂಚ ಕೊಡಬಾರದು. ನಮ್ಮ ಮಕ್ಕಳೂ ನಿಯತ್ತಾಗಿ ಭಾರತದ ಉತ್ತಮ ಪ್ರಜೆಯಾಗುವಂತೆ ನೋಡಿಕೊಳ್ಳಬೇಕು. ಅಷ್ಟು ಸಾಕು. ಅದೇ ನಾವು ದೇಶಕ್ಕೆ ಕೊಡಬಹುದಾದ ಕೊಡುಗೆ. ಅದಕ್ಕಾಗಿ ನಮಗೆ ಯಾರೂ ಭಾರತ ರತ್ನ ಪ್ರಶಸ್ತಿ ನೀಡಬೇಕಿಲ್ಲ. ಯಾರೂ ನಮ್ಮನ್ನು ಗುರುತಿಸಬೇಕಾಗಿಯೂ ಇಲ್ಲ.

(ವಿ.ಸೂ: ಇವತ್ತು (೧೪-೧೦-೦೮) ರಾತ್ರಿ ಯುಟಿವಿಯಲ್ಲಿ ರಿಸ್ಕ್ ಸಿನಿಮಾ ನೋಡ್ತಾ ಇದ್ದೆ. ನನಗೆ ಪೊಲೀಸ್ ಸಿನಿಮಾಗಳು ಇಷ್ಟವಾಗುವ ಬಗ್ಗೆ ಯಾಕೊಂದು ಚಿಕ್ಕ ಬರಹ ಬ್ಲಾಗಿಸಬಾರದು ಅನ್ನಿಸಿತು. ಪಿಚ್ಚರ್‌ನೋಡುತ್ತ, ಜಾಹೀರಾತು ಬಂದಾಗ ಬರೆಯುತ್ತ ಹೋದೆ. ಪಿಚ್ಚರ್ ಬಗ್ಗೆ ಬರೆಯಬೇಕು ಅದುಕೊಂಡು ಹೊರಟವ, ಅದು ಎಲ್ಲಿಗೋ ಹೋಯಿತು. ತುಂಬ ಸೀರಿಯಸ್ ಅನ್ನಿಸಿ ಬೋರು ಹೊಡೆಸಿದ್ದರೆ, ಬಯ್ಯಬೇಡಿ. ಬರೆಯುತ್ತ ನನ್ನ ಬಗ್ಗೇ ಹೆಚ್ಚು ಹೊಗಳಿಕೊಂಡಿದ್ದೇನೆ ಅನ್ನಿಸಿದರೆ ಕ್ಷಮಿಸಿ. ನಿಯತ್ತಿನ ಮನುಷ್ಯನಾಗಿ ನನಗಷ್ಟು ನೈತಿಕ ಅಧಿಕಾರ ಇದೆ ಅಂದುಕೊಳ್ಳುತ್ತೇನೆ.)

Monday, October 13, 2008

ಆಹಾ ಮಿಥುನನ ಮದ್ವೆಯಂತೆ!

ನಾನು ಕರ್ನಾಟಕದಲ್ಲೇ ಇದ್ದಿದ್ದರೆ ಇವತ್ತು ಹೋಗಲೇ ಬೇಕಿತ್ತು. ಆದರೆ ದೂರದ ದಿಲ್ಲಿಯಲ್ಲಿದ್ದೇನಲ್ಲಾ. ನನ್ನ ಆತ್ಮೀಯ ಗೆಳೆಯ ಮಿಥುನನ ಮದುವೆ ಇವತ್ತು. ನನ್ನ ಪರವಾಗಿ ನನ್ನ ಹೆಂಡತಿ ಹೋಗಿ ಬಂದಳು. ಆದರೆ ನಾನು ಮಿಸ್!
ಮಿಥುನ್ ಸದಾ ಚಟುವಟಿಕೆಯ ಹುಡುಗ. ಅದಕ್ಕೆ ತಕ್ಕಂತೆ ಗಡಿಬಿಡಿ. ಫೋನು ಮಾಡಿದರೆ ಕಟ್ ಮಾಡುವ ಬಟನ್ ಮೇಲೆ ಬೆರಳಿಟ್ಟೇ ಮಾತನಾಡುತ್ತಾನೆ. ಕಿನ್ನಿಗೋಳಿಯಂತಹ ಸಣ್ಣ ಊರಲ್ಲಿ ಕುಳಿತು ದೊಡ್ಡ ದೊಡ್ಡ ವಿಷಯಗಳ ಬೆನ್ನುಹತ್ತುತ್ತಾನೆ. ತುಂಬ ಚುರುಕು. ಅಸೂಯೆಯಾಗುವಷ್ಟು!
ಆದರೆ ಆತ ನನ್ನ ಲೇಖನ ಪತ್ರಿಕೆಯಲ್ಲಿ ಬಂದಾಗೆಲ್ಲ ಉರಿದುಕೊಳ್ಳುತ್ತಿರುತ್ತಾನೆ. ಬೆಳ್ಳಂಬೆಳಗ್ಗೆ ಆತನ ಮಿಸ್ ಕಾಲ್ ಬಂದಿದೆ ಎಂದರೆ ಆ ದಿನ ನನ್ನ ಲೇಖನ ಪ್ರಕಟವಾಗಿದೆ ಎಂದೇ ಅರ್ಥ. ಓದದಿದ್ದರೂ ನೋಡಿದ ಕೂಡಲೆ ಒಂದು ಮಿಸ್ ಕಾಲ್ ಕೊಡುವುದು ಆತನ ಪದ್ಧತಿ.
ನನ್ನ ಗೆಳೆಯನ ಮದುವೆಯಾಗಿದ್ದರೆ ಬ್ಲಾಗಿಗೆ ಬರೆಯುತ್ತಿರಲಿಲ್ಲ. ಅವನ ಮದುವೆಗೂ ನನಗೂ ಸಂಬಂಧ ಉಂಟು! ನನ್ನ ಗೆಳೆಯನಾದರೂ ನನ್ನ ಬಳಿ ಹುಡುಗಿಯರು ಮಾತನಾಡುವುದು ಕಂಡು ಅವನಿಗೆ ಒಳಗೊಳಗಷ್ಟೇ ಅಲ್ಲ ಹೊರಗೂ (ನನ್ನ ಬಳಿಯೇ ಹೇಳಿದ್ದಾನೆ ಹಾಗಾಗಿ) ಅಸೂಯೆ. ಒಂದಾದರೂ ಹುಡುಗಿಯನ್ನು ಪಟಾಯಿಸಿ ಮಿಂಚಬೇಕೆಂದು ಆಸೆ. ಅವಳನ್ನೇ ಮದುವೆಯಾಗಲೂ ಸಿದ್ಧನಿದ್ದ ಬಿಡಿ. ಮೂಡುಬಿದಿರೆಯ ನುಡಿಸಿರಿ, ಉಡುಪಿಯ ಸಾಹಿತ್ಯ ಸಮ್ಮೇಳನ ಹೀಗೆ ದೊಡ್ಡ ಕಾರ್ಯಕ್ರಮಗಳಲ್ಲಿ ಉತ್ತಮ ವರದಿಯ ಜತೆ ಹುಡುಗಿಯೂ ಸಿಗುತ್ತಾಳೇನೋ ಹುಡುಕಿದ್ದೇ ಹುಡುಕಿದ್ದು.
ನಾನಾವಾಗಲೇ ಹೇಳಿದ್ದೆ ನನ್ನ ಜತೆ ತಿರುಗಬೇಡ. ನಿನಗೆ ಹುಡುಗಿ ಸಿಗುವುದಿಲ್ಲ ಎಂದು. ಆತ ಕೇಳಬೇಕಲ್ಲ. ನನ್ನ ಜತೆಯೇ ಇರುತ್ತಿದ್ದ. ನನಗೂ ಅವನ ಜತೆ ಇಷ್ಟವಾಗುತ್ತಿತ್ತು. ಹೀಗೆ ಹೋದಲ್ಲೆಲ್ಲ ಯಾವುದೋ ಹುಡುಗಿಯನ್ನು ಸುಮ್ಮನೆ ಕಣ್ಣುಹಾಕಿ ಇಟ್ಟಿರುತ್ತಿದ್ದ. ದುರಂತವೆಂದರೆ ಆ ಹುಡುಗಿ ನನ್ನ ಬಳಿ ನಗುನಗುತ್ತ ಮಾತನಾಡಿ, ಪರಿಚಯ ಮಾಡಿಕೊಂಡು ಹೋಗುತ್ತಿದ್ದರು. ಅವರು ಹೋದ ಮೇಲೆ ಈತ ನನಗೆ ಶಾಪಹಾಕುತ್ತಿದ್ದ! ಪ್ರೀತಿಯಿಂದ!!
ಎಷ್ಟು ಕಾರ್ಯಕ್ರಮ ಸುತ್ತಿದರೂ ವರದಿ ಹೊರತು ಬೇರೇನೂ ಲಾಭವಾಗಲಿಲ್ಲ. ಅಂತೂ ನಾನು ಮಂಗಳೂರು ಬಿಟ್ಟೆ. ಅದೇನು ಕಾಕತಾಳೀಯವೋ? ಆತನಿಗೆ ಹುಡುಗಿ ಸಿಕ್ಕಿ ಮದುವೆ ನಿಕ್ಕಿಯಾಯಿತು! ಅಂತೂ ಅವನಿಗೆ ಹುಡುಗಿ ಸಿಗಬೇಕಾದರೆ ನಾನು ಮಂಗಳೂರು ಬಿಡಬೇಕಲಾಯಿತು!!
ಇವತ್ತು ಯಾರೋ ಅವನ ಮದುವೆಯಲ್ಲಿ 'ಮಿಥುನನ ರಿಮೋಟ್ ಪೋಂಡಾ ಅಂದು' (ಮಿಥುನನ ರಿಮೋಟ್ ಹೋಯ್ತು) ಅಂದರಂತೆ. ಹೋಗಿಬಂದ ಗೆಳೆಯರ ವರದಿ ಪ್ರಕಾರ ಮಿಥುನನ ಪರಿಸ್ಥಿತಿ ಇನ್ನುಮುಂದೆ ಕಷ್ಟ ಎಂಬಂತಿತ್ತು. ಏನೇ ಇರಲಿ. ಅವರಿಬ್ಬರೂ ಸುಖವಾಗಿರಲಿ.
ಹನಿಮೂನಿಗೆ ದಿಲ್ಲಿಗೆ ಬಾ ಎಂದಿದ್ದೇನೆ. ಮದುವೆಯಾದ ಗಡಿಬಿಡಿಯಲ್ಲಿ ಎಲ್ಲಾ ಅಲ್ಲೇ ಮುಗಿಸುತ್ತಾನೊ, ದಿಲ್ಲಿಗಾಗಿ ಏನಾದ್ರೂ ಉಳಿಸಿಕೊಳ್ಳುತ್ತಾನೊ? ನೋಡಬೇಕು...
(ವಿಸೂ: ವಿಶೇಷ ಸೂಚನೆ ಅಥವಾ ವಿನಾಯಕನ ಸೂಚನೆ!: ಮದುವೆಯ ದಿನವೇ ಸಂಸಾರ ಹಾಳು ಮಾಡುವ ಯತ್ನಕ್ಕೆ ಕೈಹಾಕಿದ್ದಾನೆ ಎಂದು ಅಪಾರ್ಥ ಮಾಡಿಕೊಳ್ಳಬೇಡಿ. ಯಾಕೆಂದರೆ ಅವರವರ ಸಂಸಾರಕ್ಕೆ ಅವರೇ ಜವಾಬ್ದಾರರು!)

Tuesday, October 07, 2008

ಕಟ್ಟಿದೆ ಮೂಗು, ತೆರೆದಿದೆ ಬ್ಲಾಗು!


ಮೂಗು ಕಟ್ಟಿದೆ. ಪರಿಣಾಮ ನಿದ್ದೆ ಕೆಟ್ಟಿದೆ.

ಈ ಸಿಂಬಳ ಹಿಡಿದಿಡಲಾಗದೆ

ಮೂಗು ಸೋತಿದೆ...

ಈ ಶೀತ ಹಿಡಿದಿಡಲು

ಬೆಡ್‌ಶೀಟೂ ಸಾಲದೆ...

(ದುಂಡಿರಾಜರ 'ಈ ಚೆಲುವೆಯ ಬಣ್ಣಿಸಲಾಗದೆ ಕವಿತೆ ಸೋತಿದೆ, ನಿನ್ನ ರೂಪ ಬಣ್ಣಿಸಲು ಪದಗಳೂ ಸಾಲದೆ' ಹಾಡಿನಿಂದ ಸ್ಪೂರ್ತಿ ಪಡೆದು) ಅಷ್ಟು ಶೀತ. ಮೇಲೆ ಮುಖಮಾಡಿ ಮಲಗಿದರೆ ಸಿಂಬಳ ಮೂಗಿನ ಕೆಳಭಾಗದಲ್ಲಿ ಕಟ್ಟುತ್ತದೆ. ಕೆಳಮುಖಮಾಡಿ ಮಲಗಿದರೆ ಸಿಂಬಳ ಮೇಲ್ಭಾಗದಲ್ಲಿ ಕಟ್ಟುತ್ತದೆ. ಒಟ್ಟಿನಲ್ಲಿ ನಿದ್ರೆ ಇಲ್ಲದ ರಾತ್ರಿ!

ಬಹುತೇಕ ಜನರಿಗೆ ಹೀಗಾದಾಗ ಮೂಡು ಕೆಡುತ್ತದೆ. ವಕ್ರದಂತನಾದ ನಾನು ಇಲ್ಲೂ ವಕ್ರ. ನನಗೆ ಮೂಡು ಬಂತು. ಆಗಸ್ಟ್ 1೫ರಂದು ಒಂದು ಲೇಖನ ಬರೆದು ಬ್ಲಾಗಿಗೆ ಹಾಕಿದವ ಮತ್ತೆ ಬ್ಲಾಗಿಸಿಯೇ ಇರಲಿಲ್ಲ. ಅಷ್ಟೇ ಏಕೆ ಬೇರೆ ಬ್ಲಾಗಿನತ್ತ ಬಗ್ಗಿ, ಬಾಗಿಯೂ ನೋಡಿರಲಿಲ್ಲ. ಆ.೨೯ರಿಂದ ೧೫ ದಿನ ಊರಿಗೆ ಹೋಗಿದ್ದೆ. ಪತ್ರಿಕೋದ್ಯಮ ಸೇರಿದ ಮೇಲೆ ಮದುವೆಗೆ ೧೨ ದಿನ ರಜೆ ಹಾಕಿದ್ದು ಬಿಟ್ಟರೆ ಮತ್ತೆ ೧೫ ದಿನದ ದೀರ್ಘ ರಜೆ ಇದೇ ಮೊದಲು. ಆಗಸ್ಟ್ ೧೫ರ ನಂತರ ಊರಿಗೆ ಹೋಗುವ ಸಂಭ್ರಮ. ಬ್ಲಾಗು ಬೋರನ್ನಿಸಿತು. ಊರಿನಲ್ಲಿ ಲ್ಯಾಪ್‌ಟಾಪ್ ಜತೆಯಲ್ಲಿತ್ತಾದರೂ ಯಾಕೋ ಬ್ಯಾಗಿನಿಂದ ಹೊರತೆಗೆಯುವ ಮನಸ್ಸಾಗಲಿಲ್ಲ. ಬಂದ ಮೇಲೆ ಊರಿನ ರಂಗು, ರಜೆಯ ಗುಂಗು ಏನೂ ಬರೆಯಲಾಗಲಿಲ್ಲ.

ಹಾಗಂತ ಬರೆಯೋಕೆ ವಿಷಯ ಇರಲಿಲ್ಲ ಅಂತಲ್ಲ. ಓದಿದ ಪುಸ್ತಕ, ನೋಡಿದ ಸಿನಿಮಾ ಎಲ್ಲ ಸಾಕಷ್ಟಿದ್ದವು. ರೈಲಿನಲ್ಲಿ ಜೋಗಿಯವರ ಯಾಮಿನಿ, ಚೇತನಾ ಅವರ ಭಾಮಿನಿ ಓದಿದೆ. ದಿಲ್ಲಿಯಲ್ಲಿ ಮನೆಯಲ್ಲಿ ಕುಳೀತು ಜಯಂತ ಕಾಯ್ಕಿಣಿ ಅವರ ಕತೆಗಳನ್ನು ಓದಿ ಮತ್ತೆ ಮಾನಸಿಕವಾಗಿ ದೀವಗಿ ಸೇತುವೆ ಮೇಲೆ, ಗೋಕರ್ಣದ ಬೀದಿಯಲ್ಲಿ ಓಡಾಡಲಾರಂಭಿಸಿದೆ. ಇವುಗಳನ್ನೆಲ್ಲ ಓದುತ್ತಿದ್ದಂತೆ ಕೆಲವು ಸಿನಿಮಾ ನೋಡುತ್ತಿದ್ದಂತೆ ಇದರ ಬಗ್ಗೆ ಬರೆದು ಬ್ಲಾಗಿಸಬೇಕು ಅಂದುಕೊಳ್ಳುತ್ತಿದ್ದೆ. ಸಾಮಾನ್ಯವಾಗಿ ಹಾಗೆ ಮಾಡುತ್ತೇನೆ. ಆದರೆ ಲ್ಯಾಪ್‌ಟಾಪ್‌ನ ಮುಂದೆ ಕುಳಿತರೆ ಬರೆಯಲೇಕೋ ಮನಸ್ಸಿಲ್ಲ. ಇಂದು ಹುಡುಗಿಗೆ ಐಲವ್ ಯು ಹೇಳಲೇ ಬೇಕು ಅಂತ ಬೇಗ ಎದ್ದು ಚೆಂದವಾಗಿ ರೆಡಿಯಾಗಿ ಕಾಲೇಜಿಗೆ ಬಂದ ಹುಡುಗ ಯಾಕೋ ಇವತ್ತು ಬೇಡ ಎಂದು ೭೨ನೇ ಬಾರಿಯೂ ಶುಭ ಕಾರ್ಯ ಮುಂದೂಡಿದಂತೆ!

ಈ ನಡುವೆ ಬ್ಲಾಗಿನ ಬಗ್ಗೆ ಒಂದು ನಮೂನೆ ನಶ್ವರ ಭಾವ. ರವಿ ಬೆಳೆಗೆರೆ ಅವರು ಹಾಯ್ ಬೆಂಗಳೂರಿನಲ್ಲಿ ಜೋಗಿ ಅವರ ಬಗ್ಗೆ ಬರೆಯುತ್ತ ನಯ್ಯಾಪೈಸೆ ಲಾಭವಿಲ್ಲದ ಬ್ಲಾಗೂ ನಡೆಸುತ್ತಾನೆ ಎಂದು ಶರಾ ಬರೆದಿದ್ದರು. ಅದರಿಂದ ಸ್ಪೂರ್ತಿ ಪಡೆದರೋ ಎಂಬಂತೆ ಜೋಗಿ ಕೂಡ ಹಿಟ್‌ವಿಕೆಟ್ ಆದವರಂತೆ ಬ್ಲಾಗ್ಲೋಕದಿಂದ ನಿರ್ಗಮಿಸಿಬಿಟ್ಟರು. ಈ ನಡುವೆ ವಿಶ್ವೇಶ್ವರ ಭಟ್ಟರು ಸುಮ್ಮನೆ ಬ್ಲಾಗಿಗೆ ಬರೆದು ಯಾಕೆ ಸಮಯ ಹಾಳು ಮಾಡ್ತೆ. ಪತ್ರಿಕೆಗೆ ಬರೆ. ಅದನ್ನು ಬೇಕಾದ್ರೆ ಬ್ಲಾಗಿಸು ಎಂದಿದ್ದರು. ಬಹುಶಃ ಇಷ್ಟೆಲ್ಲ ವಿಷಯಗಳು ಒಟ್ಟಿಗೆ ಸೇರಿ ನನಗೆ ಬ್ಲಾಗಿನ ಬಗ್ಗೆ ಬ್ಯಾಸರ ಮೂಡುವಂತೆ ಮಾಡಿತು.

ಕಳ್ಳಂಗೊಂದು ಪಿಳ್ಳೆ ನೆವ ಅಂತಾರಲ್ಲ ಹಾಗೆ ನನ್ನ ಆಲಸಿತನಕ್ಕೆ ಇಷ್ಟೆಲ್ಲ ದೊಡ್ಡ ಜನರ ಸಮರ್ಥನೆ ಸಿಕ್ಕಿಬಿಟ್ಟತ್ತು! ಪರಿಣಾಮ ನನ್ನ ಬ್ಲಾಗು ಬಂದಿತ್ತು. ಕೆಲವು ಗೆಳೆಯರು ಆರ್ಕುಟ್‌ನಲ್ಲಿ ಯಾಕೋ ನಿನ್ನ ಬ್ಲಾಗನ್ನು ಸ್ಕ್ಯಾಪ್ ಮಾಡಿದ್ದೀಯಾ ಅಂದರು. ಹಾಗೇನಿಲ್ಲ ಅಂತ ನಾನು ಸ್ಕ್ರ್ಯಾಪ್ ಮಾಡಿದೆ. ಏನೋ ಅನಿವಾರ್ಯ ಅನ್ನೋ ಶೈಲಿಯಲ್ಲಿ ಪತ್ರಿಕರ್ತನ ಕೆಲಸವನ್ನು ಮಾಡುತ್ತಿದ್ದೆ. ಅದೂ ಪೂರ್ತಿ ನನಗೇ ಸಮಾದಾನ ಕೊಡುತ್ತಿರಲಿಲ್ಲ.

ಎಲ್ಲ ಚಟಗಳಂತೆ ಬರೆವಣಿಗೆ ಚಟ ಕೂಡ. ನೀವು ಅದನ್ನು ಸ್ವಲ್ಪ ದಿನ ಬಿಟ್ಟಿರೋ ಬಿಟ್ಟೇಹೋಗುತ್ತದೆ. ಮತ್ತೆ ಅದನ್ನು ಶುರುಮಾಡಬೇಕಾಗುತ್ತದೆ.

ಆದರೆ ನನ್ನ ಕಟ್ಟಿದ ಮೂಗು ನನ್ನನ್ನು ಮತ್ತೆ ಬ್ಲಾಗಿನೊಳು ಮೂಗುತೂರಿಸುವಂತೆ ಮಾಡಿತು. ಬ್ಲಾಗಿನಲ್ಲಿ ನಾನು ಇಷ್ಟು ದಿನ ಕಾಣಿಸಿಕೊಳ್ಳದಿರುವುದರ ಬಗ್ಗೆ ಬರೆದೇ ಯಾಕೆ ಪುನಾರಂಭ ಮಾಡಬಾರದು ಎಂದು ಯೋಚಿಸಿದೆ. ಮಧ್ಯರಾತ್ರಿ ೧೨.೦೦ ಗಂಟೆಗೆ ಎದ್ದೆ. ಬರೆದೆ. ಬ್ಲಾಗಿಸಿದೆ.

ಬ್ಲಾಗಿಗೆ ಮರುಹುಟ್ಟು ನೀಡಲು ಕಟ್ಟಿದ ಮೂಗು ಕಾರಣವಾದರೂ ಬರೆಯದೇ ಗರಬಡಿದವನಂತೆ ಇದ್ದ ನನ್ನನ್ನು ಬರೆಯಲು ಹಚ್ಚಿದ್ದು ಪ್ರತಾಪಸಿಂಹ. ಏನು ವಿನಾಯಕ್? ಬರವಣಿಗೆ ನಿಲ್ಲಿಸಿಬಿಟ್ಟಿದ್ದೀಯಾ? ಏನಾದ್ರೂ ಬರೆದುಕೊಡಿ. ಅಪರೂಪಕ್ಕಾದರೂ ಪತ್ರಿಕೆಯಲ್ಲಿ ಕಾಣಿಸಿಕೊಳ್ತಾ ಇರಬೇಕು ಎಂದು ತಿದಿಯೊತ್ತಿದರು.

ಬರವಣಿಗೆ ಆರಂಭಿಸಲು ಒಂದು ನೆಪ ಬೇಕಿತ್ತು. ಅದು ಸಿಕ್ಕಂತಾಯಿತು. ಒಂದು ಲೇಖನ ಬರೆದೆ. ನನಗೇಕೋ ಪೂರ್ಣ ಸಮಾದಾನ ಆಗಿರಲಿಲ್ಲ. ಆದರೂ ಸೋಮವಾರ ಕಳುಹಿಸಿತ್ತೇನೆ ಅಂದಿದ್ದೆ. ಕಳುಹಿಸಿದೆ. ಆದರೆ ಸೋಮವಾರ ಸಂಜೆ ವೈನಾಗಿ (ಕುಡಿದು ಅಲ್ಲ) ಕುಳಿತು ಇನ್ನೊಂದು ಲೇಖನ ಬರೆದೆ. ನನಗೆ ಖುಶಿಕೊಟ್ಟಿತು. ಅದನ್ನೇ ಪ್ರತಾಪ್‌ಗೆ ಕಳುಹಿಸಿದೆ. ಯಾಕೋ ಬಹಳ ದಿನದ ನಂತರ ನಾನು ಉಲ್ಲಸಿತನಾಗಿದ್ದೆ. ಬಹುಶಃ ಕಟ್ಟಿದ ಮೂಗಿಗಿಂತ ಮನಸ್ಸಿಗೆ ಕಟ್ಟಿದ ಮೋಡ ಚದುರಿ ಹೋದದ್ದಕ್ಕೇ ಇರಬೇಕು ನಿದ್ರೆ ಬರುತ್ತಿಲ್ಲ!

ಚಿಕ್ಕವರಿರುವಾಗ ಪ್ರವಾಸಕ್ಕೆ ಹೋಗುವ ಹಿಂದಿನ ದಿನ ನಿದ್ರೆ ಬರುತ್ತಿರಲಿಲ್ಲವಲ್ಲ ಹಾಗೆ!

Friday, August 15, 2008

ಸ್ವಾತಂತ್ರ್ಯೋತ್ಸವದಲ್ಲಿಯೇ ಕಾಣದ ಸ್ವಾತಂತ್ರ್ಯ!


೧೫ ದಿನದ ಹಿಂದಿನಿಂದಲೇ ಪ್ರವಾಸಿಗರಿಂದ ಕೆಂಪುಕೋಟೆ, ರಾಷ್ಟ್ರಪತಿ ಭವನ ಮುಂತಾದ ಪ್ರಮುಖ ಪ್ರವಾಸಿ ತಾಣಕ್ಕೆ ಭೇಟಿ ನೀಡುವ ಸ್ವಾತಂತ್ರ್ಯ ಕಸಿದುಕೊಳ್ಳಲಾಗಿದೆ. ನಗರದ ರೈಲು ನಿಲ್ದಾಣಗಳಿಗೆ ೨೦ ದಿನ ಹಿಂದಿನಿಂದಲೇ ಪ್ರಯಾಣಿಕರನ್ನು ಕರೆದುಕೊಂಡು ಬರಲು ಹೋಗುವ ಸಾರ್ವಜನಿಕರಿಗೆ ಪ್ಲಾಟ್‌ಫಾರ್ಮ್ ಪ್ರವೇಶ ನಿಷೇಧಿಸಲಾಗಿದೆ.
೫-೬ ದಿನದಿಂದ ಪ್ರಮುಖ ಸ್ಥಳಗಳಲ್ಲಿನ ಕಟ್ಟಡಗಳು, ಅದರಲ್ಲಿನ ಕಚೇರಿಗಳು ರಾತ್ರಿ ೮.೦೦ ಗಂಟೆ ನಂತರ ಕೆಲಸ ಮಾಡುವ ಸ್ವಾತಂತ್ರ್ಯ ಕಳೆದುಕೊಂಡಿವೆ. ಸ್ವಾತಂತ್ರ್ಯೋತ್ಸವದ ಹಿಂದಿನ ದಿನವಂತೂ ನಮ್ಮ ಕಚೇರಿಯ ಕಟ್ಟಡವೂ ಸೇರಿದಂತೆ ಹಲವು ಕಟ್ಟಡಗಳನ್ನು ಸಂಜೆ ೪.೦೦ ಗಂಟೆ ಹೊತ್ತಿಗೇ ಮುಚ್ಚುವ ಆದೇಶ ಹೊರಬಿದ್ದಿದೆ!
ಹೋಗಲಿ ಸ್ವಾತಂತ್ರ್ಯೋತ್ಸವ ಕಾರ್ಯಕ್ರಮದಲ್ಲಾದರೂ ನೀವು ಸ್ವತಂತ್ರರಾಗಿ ಭಾಗವಹಿಸಬಹುದೇ? ಊಹುಂ. ಕೆಂಪುಕೋಟೆಯೂ ಸೇರಿದಂತೆ ಪ್ರಮುಖ ಸ್ಥಳಗಳಲ್ಲಿ ನಡೆಯುವ ಸ್ವಾತಂತ್ರ್ಯೋತ್ಸವ ಕಾರ್ಯಕ್ರಮಗಳಿಗೆ ನೀವು ಭಾಗವಹಿಸಲು ಹರಸಾಹಸ ಮಾಡಬೇಕಾಗುತ್ತದೆ. ಮೊದಲೇ ಪಾಸು ಮಾಡಿಸಿಕೊಂಡರೆ ಮಾತ್ರ ನಿಮಗೆ ಸ್ವಾತಂತ್ರ್ಯೋತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸಲು ಅವಕಾಶ!
ಸ್ವಾತಂತ್ರ್ಯೋತ್ಸವ ಸಮೀಪಿಸುತ್ತಿದ್ದಂತೆ ನಿಮ್ಮ ಒಂದೊಂದೇ ಸ್ವಾತಂತ್ರ್ಯ ಕಡಿತಗೊಳ್ಳುತ್ತಾ ಹೋಗುತ್ತದೆ! ಹುಡುಕಬೇಕು ನಮಗೆಷ್ಟು ಸ್ವಾತಂತ್ರ್ಯವಿದೆ ಎಂಬುದನ್ನು!!
ಸಾರ್ವಜನಿಕ ಮಾರುಕಟ್ಟೆಗಳೂ ೧೫ ದಿನ ಹಿಂದಿನಿಂದಲೇ
ಮೆಟಲ್ ಡಿಟೆಕ್ಟರಿನೊಳಗೆ ಹಾದು
ಒಳಗೆ ಬಾಯಾತ್ರಿಕನೆ... ಎಂದು ಜನರನ್ನು ಕೋರುತ್ತಿವೆ. ಮಾರುಕಟ್ಟೆಯ ಸುತ್ತಲಿನ ದಾರಿಗಳು ಬಂದ್ ಆಗಿವೆ. ಒಂದಿಡೀ ಮಾರುಕಟ್ಟೆಗೆ ೧ ಅಥವಾ ೨ ಕಡೆ ಮಾತ್ರ ಪ್ರವೇಶ ಸಾಧ್ಯ. ಅದೂ ಮೆಟಲ್‌ಡಿಟೆಕ್ಟರ್ ಎಂಬ ಹೊಸ್ತಿಲ ಮೂಲಕ. ಪ್ರಮುಖ ಸ್ಥಳಗಳಲ್ಲಿರುವ ಕಟ್ಟಡದ ಒಳಕ್ಕೆ ಕಾರು ತೆಗೆದುಕೊಂಡು ಹೋದರೆ ಮನೆಗೆ ಸ್ವಾಮೀಜಿಗಳು ಬಂದಾಗ ಹಾನದಲ್ಲಿ ಮುಖನೋಡಿ ಒಳಕರೆದುಕೊಳ್ಳುತ್ತಾರಲ್ಲ ಹಾಗೆ ಕಾರಿನ ಅಡಿಭಾಗವನ್ನು ಕನ್ನಡಿಯಲ್ಲಿ ಪರಿಶೀಲಿಸಿ ಒಳಬಿಡಲಾಗುತ್ತದೆ. ನೀವು ಒಳಹೋಗಬೇಕೆಂದರೆ ಕೆಲವು ಕಡೆ ಮೊಬೈಲು, ಇನ್ನು ಕೆಲವು ಕಡೆ ನಿಮ್ಮ ಮನೆಯ ಚಾವಿ, ಬೆಲ್ಟ್ ಕೂಡ ರೆಸೆಪ್ಶನಿಸ್ಟ್‌ಗೆ ಕೊಟ್ಟು ಹೋಗಬೇಕು. ನಿಮ್ಮ ಕೈಯಲ್ಲಿ ಚೀಲವಿದ್ದರಂತೂ ಮುಗಿದೇ ಹೋಯಿತು. ಅದರಲ್ಲೇನಿದೆ ಅಂತ ಪೂರ್ತಿ ನೋಡಿದ ನಂತರವೇ ಒಳಪ್ರವೇಶ. ಮಾರುಕಟ್ಟೆ, ಕಟ್ಟಡ ಹೀಗೆ ಎಲ್ಲೆಂದರಲ್ಲಿ ಬಂದು ಕುಳಿತಿರುವ ಸಿಸಿ ಟಿವಿ ಕ್ಯಾಮರಾಗಳು ಅದ್ಯಾವಾಗಲೋ ನಿಮ್ಮ ಪ್ರತಿ ಕ್ಷಣದ ಚಲನೆಯನ್ನೂ ದಾಖಲಿಸುತ್ತಿವೆ.
೬೧ನೇ ಸ್ವಾತಂತ್ರ್ಯೋತ್ಸವದ ದಿನ ಕುಳಿತು ಯೋಚಿಸಿದರೆ...
ಯಾರಿಗೆ ಬಂತು ಸ್ವಾತಂತ್ರ್ಯ?
ಎಲ್ಲಿಗೆ ಬಂತು ಸ್ವಾತಂತ್ರ್ಯ? ಎಂಬ ಪ್ರೊ. ಸಿದ್ದಲಿಂಗಯ್ಯ ಅವರು ಬರೆದ ಈ ಹಾಡು ನೆನಪಾಗುತ್ತದೆ. ಸಿದ್ದಲಿಂಗಯ್ಯ ಅವರು ಬೇರೆಯೇ ಕಾರಣಗಳಿಗಾಗಿ ಈ ಹಾಡು ಬರೆದಿದ್ದರೂ ಅದು ಈಗ ದೇಶದ ಅದರಲ್ಲೂ ವಿಶೇಷವಾಗಿ ರಾಜಧಾನಿಯಾದ ಹೊಸದಿಲ್ಲಿಯನ್ನು ಗಮನದಲ್ಲಿಸಿಕೊಂಡೇ ಬರೆದಂತಿದೆ. ಅಷ್ಟು ಚೆನ್ನಾಗಿ ದಿಲ್ಲಿಗೆ ಹೊಂದಿಕೊಳ್ಳುತ್ತದೆ ಈ ಹಾಡು.
ಈ ಪರಿಸ್ಥಿತಿಯಲ್ಲಿ ಸ್ವಾತಂತ್ರ್ಯೋತ್ಸವ ಆಚರಿಸಬೇಕಾ? ಸ್ವಾತಂತ್ರ್ಯೋತ್ಸವ ಬಂತಲ್ಲಾ ಎಂದು ಖುಷಿಪಡಬೇಕಾ? ದುಃಕ್ಕಿಸಬೇಕಾ? ಎಂಬ ಪ್ರಶ್ನೆ ಕಾಡುತ್ತದೆ.
ಸ್ವಾತಂತ್ರ್ಯೋತ್ಸವ ಅಂದರೆ ಎಲ್ಲೆಡೆ ಖುಶಿ ಇರಬೇಕು. ಪುಟಾಣಿ ಮಕ್ಕಳಲ್ಲಿ ಇರುತ್ತದಲ್ಲ ಅಂತಹ ಖುಷಿ. ಆದರೆ ನಮಗೋ ಹೊಸದಿಲ್ಲಿಯೂ ಸೇರಿದಂತೆ ಹಲವೆಡೆ ಬಾಂಬ್ ಭಯ! ಸ್ವಾತಂತ್ರ್ಯೋತ್ಸವ ಬಂತೆಂದರೆ ಹೊಸದಿಲ್ಲಿಯಂತಹ ಮಹಾನಗರಗಳಲ್ಲಿ ಭಯದ ಛಾಯೆ. ಒಂದು ವಾರದ ಹಿಂದಿನಿಂದಲೇ ಮಾರುಕಟ್ಟೆಗಳಿಗೆ ಬರುವ ಜನರ ಸಂಖ್ಯೆ ಗಣನೀಯವಾಗಿ ಕಡಿಮೆಯಾಗಿದೆ. ಹೊಸದಿಲ್ಲಿಯ ದೊಡ್ಡ ದೊಡ್ಡ ಮಾಲ್‌ಗಳು, ಪ್ರಸಿದ್ಧ ಮಾರುಕಟ್ಟೆಗಳಲ್ಲಿ ಸ್ವಾತಂತ್ರ್ಯೋತ್ಸವ ಸಮೀಪಿಸುತ್ತಿರುವ ೧ ವಾರದಲ್ಲಿ ಆಗಮಿಸುವವರ ಸಂಖ್ಯೆ ಶೇ.೫೦ರಷ್ಟು ಇಳಿದಿದೆಯಂತೆ. ಎಲ್ಲ ಆಫರ್‌ಗಳ ಹೊರತಾಗಿ!
ಕಾರಣ ಉಗ್ರರು. ಸ್ವಾತಂತ್ರ್ಯೋತ್ಸವ ಸಂಭ್ರಮ ಹಾಳು ಮಾಡಲು ಅವರೆಲ್ಲಿ ಬಾಂಬ್ ಸ್ಪೋಟಿಸುತ್ತಾರೊ ಎಂಬ ಭಯ. ಅದಕ್ಕಾಗಿ ಮುನ್ನೆಚ್ಚರಿಕೆ ಹೆಸರಲ್ಲಿ ಕಟ್ಟಡ ಮುಚ್ಚಿಸುವುದು, ರಾತ್ರಿ ೮.೦೦ ಗಂಟೆ ನಂತರ ಕೆಲಸ ಮಾಡದಂತೆ ಸೂಚಿಸುವುದು ನಡೆಯುತ್ತಿದೆ. ಜನ ಭದ್ರತೆ, ನೆಮ್ಮದಿಗಾಗಿ ಅದನ್ನೆಲ್ಲ ಸಹಿಸಿಕೊಳ್ಳುತ್ತಿದ್ದಾರೆ.
ಇದೆಲ್ಲ ಏನನ್ನು ಸೂಚಿಸುತ್ತದೆ? ನಾವು ಭಯದ ನೆರಳಲ್ಲಿ ಸ್ವಾತಂತ್ರ್ಯೋತ್ಸವ ಆಚರಿಸುತ್ತಿದ್ದೇವೆ. ಅನಾಹುತ ರಹಿತ ಸ್ವಾತಂತ್ರ್ಯೋತ್ಸವಕ್ಕಾಗಿ ನಮ್ಮ ಸ್ವಾತಂತ್ರ್ಯ ಹರಣ ಸಹಿಸಿಕೊಳ್ಳುತ್ತೇವೆ. ಮೊದಲ್ಲೆಲ್ಲ ಹೇಳುವಂತೆ ಸಂಭ್ರಮದ ಸ್ವಾತಂತ್ರ್ಯೋತ್ಸವ ಎಂಬುದು ಮಾಯವಾಗಿ ಕೇವಲ ಸ್ವಾತಂತ್ರ್ಯೋತ್ಸವಕ್ಕೆ ಸೀಮಿತವಾಗುತ್ತಿರುವಂತೆ ಭಾಸವಾಗುತ್ತಿದೆ. ೬೧ನೇ ಸ್ವಾತಂತ್ರ್ಯೋತ್ಸವ ಹೊಸ್ತಿಲಲ್ಲಿ ನಿಂತು ನಮಗೆಷ್ಟು ಸ್ವಾತಂತ್ರ್ಯವಿದೆ, ಎಷ್ಟು ಸ್ವಾತಂತ್ರ್ಯ ಮುಂದಿನ ದಿನಗಳಲ್ಲಿ ಉಳಿಯಲಿದೆ ಎಂದು ವಿಚಾರ ಮಾಡುವಂತಾಗಿದೆ.
ನೀಮಗೂ ಹಾಗನ್ನಿಸುತ್ತಿದೆಯೇ? ಹಾಗಾದ್ರೆ ಸೇಮ್ ಪಿಂಚ್!!

Tuesday, August 05, 2008

ಪೇಜ್ ತ್ರಿ ನೋಡಿ ಏನೆಲ್ಲಾ ನೆನಪಾತ್ರಿ!


ಪೇಜ್ ತ್ರಿ!
ನನ್ನ ತಟ್ಟಿದ, ನೆನಪಲ್ಲುಳಿದ, ಚಿಂತೆಗೀಡು ಮಾಡಿದ, ಮತ್ತೆ ಮತ್ತೆ ನೋಡಿದರೂ ಬೇಸರ ತರಿಸದ ಚಲನಚಿತ್ರಗಳಲ್ಲಿ ಪೇಜ್ ತ್ರಿ ಕೂಡ ಒಂದು. ಅದೊಂಥರದಲ್ಲಿ ನ(ನ್ನ)ಮ್ಮದೇ(!) ಕತೆ. ಅಂದರೆ ಪತ್ರಕರ್ತರ ಕತೆ.
ಫಿಲ್ಮಿ ಚಾನಲ್‌ನಲ್ಲಿ ನಿನ್ನೆ (೪-೦೮-೦೮) ಪೇಜ್ ತ್ರಿ ಫಿಲ್ಮ್ ಇತ್ತು. ಆ ಚಿತ್ರ ಇಷ್ಟವಾಗಲು ಈಗಲೇ ಕೊಟ್ಟ ಕಾರಣಗಳ ಜತೆಗೆ ಇನ್ನೊಂದು ಕಾರಣವೆಂದರೆ ಅದರಲ್ಲಿ ಕ್ರೈಂ ರಿಪೋರ್ಟರ್ ಹೆಸರು ವಿನಾಯಕ ಮತ್ತು ನಾನೂ ೪ ತಿಂಗಳ ಹಿಂದಿನವರೆಗೂ ಕ್ರೈಂ ರಿಪೋರ್ಟರ್ ಆಗಿದ್ದೆ!!
ಹೀಗಾಗಿ ಪೇಜ್ ತ್ರಿ ನೋಡುತ್ತಿದ್ದಂತೆ ನನ್ನ ಮನಸ್ಸು ಹುಂಬುರ್ಕಿ ಓಡತೊಡಗಿತು. ನೆನಪುಗಳತ್ತ, ಮಂಗಳೂರಿನತ್ತ, ಕ್ರೈಂ ರಿಪೋರ್ಟರ್ ಆಗಿದ್ದಾಗ ಆದ ಅನುಭವಗಳತ್ತ, ಮರೆಯಲಾಗದ ಆ ದಿನಗಳತ್ತ, ಹಸಿ ಹಸಿ ಕೊಲೆಗಳತ್ತ...
ನಾನು ನನ್ನ ಗೆಳೆಯರ ಬಳಿ ಈಗಾಗಲೇ ಹೇಳಿಕೊಂಡಿರುವಂತೆ ನಾನು ಬಯಸಿ ಕ್ರೈಂ ರಿಪೋರ್ಟರ್ ಆದದ್ದಲ್ಲ. ಆದರೆ ಕ್ರೈಂ ರಿಪೋರ್ಟರ್ ಆದ ಮೇಲೆ ಬಯಸಿದ್ದು!
ಪತ್ರಿಕೋದ್ಯಮದ ಆರಂಭಿಕ ಹಂತದಲ್ಲಿ ಕಚೇರಿಯೊಳಗೆ ಪ್ರೆಸ್‌ನೋಟ್‌ಗಳನ್ನು ಬರೆಯುತ್ತ ಕುಳಿತಿದ್ದ ನಾನು ಒಂದು ಮಧ್ಯಾಹ್ನ ಆಕಸ್ಮಿಕವಾಗಿ ಮತ್ತು ಅನಿವಾರ್ಯವಾಗಿ ತ್ರಿಬಲ್ ಮರ್ಡರ್ ವರದಿ ಮಾಡಬೇಕಾಗಿ ಬಂತು. ಆ ವರದಿ ನನ್ನನ್ನು ಕ್ರೈಂ ರಿಪೋರ್ಟರ್‌ನನ್ನಾಗಿ ಮಾಡಿತು. ಅಥವಾ ಆ ವರದಿಯೇ ನಾನು ಕ್ರೈಂ ರಿಪೋರ್ಟರ್ ಆಗಲು ಕಾರಣವಾಯಿತು. ಆಮೇಲೆ ತಿಳಿಯಿತು ಕ್ರೈಂ ರಿಪೋರ್ಟಿಂಗ್ ಉಳಿದ ವರದಿಗಾರಿಕೆಗಿಂತ ಆಸಕ್ತಿಕರ ಎಂಬುದು.

ಕ್ರೈಂ ರಿಪೋರ್ಟರ್ ಆಗಿ ಹಲವು ಎನ್‌ಕೌಂಟರ್‌ಗಳು, ನಕ್ಸಲೀಯರ ಬಗೆಗಿನ ಮಾಹಿತಿಗಳು, ಕೋಮುಗಲಭೆಗಳು, ಹಿಂದಿನ ಕಾರಣಗಳು, ಕರ್ಫ್ಯೂ, ಜನರು ಆಗ ಅನುವಿಸುವ ಕಷ್ಟ, ಊಟ, ನಿದ್ರೆ, ಸ್ನಾನವೂ ಇಲ್ಲದೆ ಕಳೆದ ದಿನಗಳು, ಅಪರಾತ್ರಿಯಲ್ಲಿ ಎಬ್ಬಿಸಿದ ಕೊಲೆಗಳು, ಮನಸ್ಸು ಕಲಕಿದ ಸಾವುಗಳು, ಸಹನೆಗೆ ಸವಾಲೆಸೆಯುವಂತೆ ಕಾದು ಕುಳಿತು ನಡೆಸಿದ ತನಿಖಾ ವರದಿಗಳು, ಯಾರಿಗೂ ತಿಳಿಯದ ಹಲವು ವಿಷಯಗಳನ್ನು ತಿಳಿಯಲು, ಕಲಿಯಲು ಅವಕಾಶವಾಯಿತು. ಹೊರನೋಟಕ್ಕೆ ದಕ್ಕದ ಪೊಲೀಸ್ ಇಲಾಖೆಯ ಅಂತರಾಳದ ಪರಿಚಯವಾಯಿತು. ಎಲ್ಲಕ್ಕಿಂತ ಹೆಚ್ಚಾಗಿ ಕೆಲವು ಒಳ್ಳೆ ಪೊಲೀಸ್ ಗೆಳೆಯರು ದೊರೆತರು. ಅವರಿಗೆ ಅದೇನು ಪ್ರೀತಿಯೋ ಕಾಣೆ ನನಗೆ ಎಕ್ಸ್‌ಕ್ಲ್ಯೂಸೀವ್ ಸುದ್ದಿ ಕೋಡೋರು.

ಇಷ್ಟೇ ಸಾಕು. ಹೀಗೇ ಮುಂದುವರಿದರೆ ನನ್ನನ್ನು ನಾನೇ ಹೊಗಳಿಕೊಂಡುಬಿಡುವ ಅಥವಾ ಹಾಗೆ ನಿಮಗನ್ನಿಸಿಬಿಡುವ ಸಾಧ್ಯತೆ ಇದೆ.
ಪೇಜ್ ತ್ರಿ ವಿಷಯಕ್ಕೆ ಬರೋಣ. ಮಂಗಳೂರಿನಲ್ಲಿ ಸಿನಿಮಾ ನೋಡಿದಾಗ ಪೇಜ್ ತ್ರಿ ಪತ್ರಿಕೋದ್ಯಮ ಅಂದರೇನು ಎಂಬುದು ಸರಿಯಾಗಿ ಅರ್ಥವಾಗಿರಲಿಲ್ಲ. ಆದರೆ ಈಗ ದಿಲ್ಲಿಗೆ ಬಂದ ಮೇಲೆ ಅರ್ಥವಾಗುತ್ತಿದೆ. ಇಲ್ಲಿನ ಪತ್ರಕರ್ತರು ಜಿಲ್ಲಾ ವರದಿಗಾರರಂತೆ ಸುದ್ದಿಗಾಗಿ ಒದ್ದಾಡುವುದಿಲ್ಲ. ಇಡೀ ದಿನಕ್ಕೆ ಒಂದೇ ಬೀಟ್. ಕಾಂಗ್ರೆಸ್, ಬಿಜೆಪಿ ಅಥವಾ ಯಾವುದೇ ಪಕ್ಷದ ಕಚೇರಿಗೆ ಹೋಗಿ ಒಂದಿಡೀ ದಿನ ಕುಳಿತು, ಸಿಕ್ಕ ನಾಯಕರೊಂದಿಗೆ ಹರಟಿ, ಪತ್ರಿಕಾಗೋಷ್ಠಿಗಳಿದ್ದರೆ ಅವುಗಳನ್ನು ಅಟೆಂಡ್ ಮಾಡಿ ಸುದ್ದಿ ಬರೆದರೆ ಮುಗಿಯಿತು. ಇದರ ಪರಿಣಾಮ ಕೆಲವರಂತೂ ರಾಜಕಾರಣಿಗಳ ಚೇಲಾಗಳಂತಾಗಿಬಿಟ್ಟಿರುತ್ತಾರೆ. ನ್ಯೂಸ್ ಚಾನಲ್‌ನವರಿಗಂತೂ ಒಬ್ಬ ಮುಖಂಡನ ಬೈಟ್ ಸಿಕ್ಕಿದರೆ ಸಾಕು. ಅವರಿಗೆ ರಾಷ್ಟ್ರಪ್ರಶಸ್ತಿ ಸಿಕ್ಕಷ್ಟು ಸಂತೋಷ. ಆ ಸುದ್ದಿಯ ಆಳ, ಅಗಲ ಅವರಿಗೆ ಬೇಡ. ಇನ್ನು ಪಾರ್ಟಿಗಳನ್ನು ವರದಿ ಮಾಡುವ ಪತ್ರಕರ್ತರ ಕೆಲಸ ಆ ದೇವರಿಗೇ ಪ್ರೀತಿ.

ಇದನ್ನೆಲ್ಲ ನೋಡುವಾಗ ಅನ್ನಿಸುತ್ತದೆ ಇವರಿಗಿಂತ ಜಿಲ್ಲಾ ಮಟ್ಟದ ಕ್ರೈಂ ವರದಿಗಾರ ಮೇಲು ಅಂತ!
ಪೇಜ್ ತ್ರಿ ಸಿನಿಮಾದಲ್ಲಿ ನಾಯಕಿ ಮಾಧವಿ ಮೊದಲು ಪೇಜ್ ತ್ರಿ ಪತ್ರಕರ್ತೆಯಾಗಿದ್ದು, ನಂತರ ಮನಸ್ಸು ಬದಲಿಸಿ ಕ್ರೈಂ ವರದಿಗಾರ್ತಿಯಾಗುತ್ತಾಳೆ. ಹಾಗೆ ಒಂದೊಳ್ಳೆ ತನಿಖಾ ವರದಿ ತರುತ್ತಾಳೆ. ನಗರದ ಅತಿಗಣ್ಯನೊಬ್ಬ ಕ್ಕಳೊಂದಿಗೆ ಸಲಿಂಗಕಾಮದಲ್ಲಿ ನಿರತನಾಗಿದ್ದ, ಅದಕ್ಕಾಗಿ ಹಲವು ಮಕ್ಕಳನ್ನು ಬಳಸಿಕೊಳ್ಳುತ್ತಿದ್ದ ಜಾಲದ ಸುದ್ದಿಯದು. ಆದರೆ ಆತ ಪತ್ರಿಕೆಗೆ ಜಾಹೀರಾತು ನೀಡುತ್ತಾನೆಂಬ ಕಾರಣಕ್ಕೆ ಪತ್ರಿಕೆಯ ಮಾಲಿಕ ಆ ವರದಿ ಪ್ರಕಟಿಸದಂತೆ ಹೇಳುತ್ತಾನೆ. ಸಾಲದ್ದಕ್ಕೆ ಅವಳನ್ನು ಕೆಲಸದಿಂದ ತೆಗೆಯುತ್ತಾನೆ.
ಇದನ್ನು ನೋಡುವಾಗ ನಾನು ಬರೆದೂ ಪ್ರಕಟವಾಗದ, ಪ್ರಕಟವಾಗದು ಎಂಬ ಗ್ಯಾರಂಟಿ ಇದ್ದುದರಿಂದ ಬರೆಯಲೇ ಆಗದ, ಬರೆದು ಪ್ರಕಟವಾಗಿ ನಂತರ ನಾನು ಅನುಭವಿಸಿದ ಕೆಲವು ವರದಿಗಳು, ಅದರ ಹಿಂದುಮುಂದಿನ ಘಟನೆಗಳು ಕಣ್ಣಮುಂದೆ ಹಾದುಹೋದವು.

ಮಾಧ್ಯಮಗಳೂ ಮೊದಲಿನಂತಿಲ್ಲ. ಪತ್ರಿಕಾ ವೃತ್ತಿ ಹೋಗಿ ಪತ್ರಿಕೋದ್ಯಮವಾಗಿದೆ. ರಿಲಯನ್ಸ್ ನಂತಹ ಹಲವಾರು ಉದ್ಯಮ ಹೊಂದಿರುವ ಸಂಸ್ಥೆ ಕೂಡ ಈಗ ಮಾಧ್ಯಮ ಕ್ಷೇತ್ರದ ಮೇಲೆ ಕಣ್ಣು ಹಾಕಿದೆ. ಉದ್ಯಮ ಅಂದ ಮೇಲೆ ಸೇವೆ, ಸಾರ್ವಜನಿಕ ಬದ್ದತೆ ಎಂಬೆಲ್ಲ ಪದಗಳು ಅರ್ಥ ಕಳೆದುಕೊಳ್ಳುತ್ತವೆ. 'ಅರ್ಥ'ಶಾಸ್ತ್ರ ಮಾತ್ರ ಮುಖ್ಯವಾಗುತ್ತದೆ. ಹಾಗಾದಾಗ ಹೀಗಾಗುತ್ತದೆ. ಹೀಗಾದಾಗ ಪತ್ರಕರ್ತ ತಾನೆಣಿಸಿದ್ದನ್ನೆಲ್ಲ ಸತ್ಯ ಎಂಬುದು ಗೊತ್ತಿದ್ದರೂ, ದಾಖಲೆಗಳಿದ್ದರೂ ಬರೆಯಲಾರ. ಆದರೆ ಅದೊಂದು ಸ್ಟೋರಿ ಪ್ರಕಟಿಸಲು ಸಾಧ್ಯವಾಗಲಿಲ್ಲ ಎಂಬ ಕಾರಣಕ್ಕೆ ಕೆಲಸ ಬಿಡಲಾದೀತೆ? ಹಾಗೆ ಮಾಡಿದರೆ ಸಾಧಿಸುವುದೇನು?
ಇದೇ ಅಲ್ವಾ ಪೇಜ್ ತ್ರಿ ಸಿನಿಮಾ ಕೊನೆಯ ಸಂದೇಶ!?
ಪೇಜ್ ತ್ರಿ ಸಿನಿಮಾ ಸತ್ಯಕ್ಕೆ ಕನ್ನಡಿ ಹಿಡಿದಂತಿದೆ. ಪತ್ರಿಕೋದ್ಯಮ ವಿದ್ಯಾರ್ಥಿಗಳು ಇದನ್ನೊಮ್ಮೆ ನೋಡುವುದೊಳಿತು. ಇದರ ಜತೆಗೆ 'ಇಟ್ಸ್ ಬ್ರೇಕಿಂಗ್ ನ್ಯೂಸ್ 'ಎಂಬ ಸಿನಿಮಾ ಕೂಡ ಇಂದಿನ ನ್ಯೂಸ್ ಚಾನಲ್‌ಗಳ ಒಳ ಹೊರಗನ್ನು ತೆರೆದಿಡುತ್ತದೆ. ಇವುಗಳನ್ನು ನೋಡಿದರೆ ಪತ್ರಿಕೋದ್ಯಮ ವಿದ್ಯಾರ್ಥಿಗಳು ಕ್ಷೇತ್ರಕ್ಕಿಳಿಯುವ ಮೊದಲು ಆ ಬಗ್ಗೆ ಒಂದಷ್ಟು ಮಾನಸಿಕ ಸಿದ್ಧತೆಯನ್ನಾದರೂ ಗಳಿಸಬಹುದು. ಯಾಕೆಂದರೆ ಕ್ಲಾಸಿನಲ್ಲಿ ಕಲಿತದ್ದಕ್ಕೂ ಕ್ಷೇತ್ರದಲ್ಲಿ ಅನುಭವಿಸುವುದಕ್ಕೂ ಅಜಗಜಾಂತರವಿದೆ.

Friday, August 01, 2008

ರೈ ಹೇಳಿದ ಚೇಳಿನ ಕಥೆ


ಅವರಾಗ ರಾಜ್ಯದ ಸಾರಿಗೆ ಸಚಿವರು. ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವರೂ ಹೌದು. ದಿನಕ್ಕೆ ನಾಲ್ಕೈದು ಕಾರ್ಯಕ್ರಮದಲ್ಲಿ ಭಾಗವಹಿಸದಿದ್ರೆ ಅವರಿಗೆ ನಿದ್ರೆ ಬರಲ್ಲ. ಅವ್ರೇರೀ... ರಮಾನಾಥ ರೈ.

ರೈ ಸಚಿವರಾಗಿದ್ದಾಗ ಸದಾ ಕಾರ್ಯಕ್ರಮದಲ್ಲಿ ಭಾಗವಹಿಸುವುದೇ ಒಂದು ದೊಡ್ಡ ಕೆಲಸ. ಎಲ್ಲ ಕಾರ್ಯಕ್ರಮಕ್ಕೂ ವಿಳಂಬವಾಗಿ ಬರೋದು ಮಾಮೂಲು. ಒಮ್ಮೆ ಬಂಟ್ವಾಳದ ಶಾಲಾ ವಾಷಿಱಕೋತ್ಸವ ಕಾರ್ಯಕ್ರಮಕ್ಕೆ ಮಧ್ಯರಾತ್ರಿ ೧೨.೦೦ ಗಂಟೆಗೆ ಹೋಗಿದ್ದರು. ಅದಕ್ಕೆ ರೈ ಅವರನ್ನು ಯಾವ ಕಾರ್ಯಕ್ರಮಕ್ಕೆ ಕರೆದರೂ ಮದುವೆಗೆ ಮಾತ್ರ ಕರೆಯಬಾರದು ಎಂದು ಅಲ್ಲಿನ ಜನ ಹೇಳುತ್ತಿದ್ದರು. ಯಾಕೆಂದರೆ ಅವರು ಮದುವೆಗೆ ಕರೆದರೆ ಫಸ್ಟ್ ನೈಟಿನ ಹೊತ್ತಿಗೆ ಬರುತ್ತಾರೆಂಬ ಭಯ!

ರೈ ಅವರು ಲೆಕ್ಕತಪ್ಪುವಷ್ಟು, ಸುಸ್ತಾಗುವಷ್ಟು ಕಾರ್ಯಕ್ರಮದಲ್ಲಿ ಭಾಗವಹಿಸಿದರೂ ಎಂದೂ ಯದ್ವಾತದ್ವಾ ಮಾತನಾಡಿದವರಲ್ಲ. ಯಾರನ್ನೂ ಬೈದವರಲ್ಲ. ಕಥೆ ಹೇಳಿದವರೇ ಅಲ್ಲ. ಅಂತಹ ಸಚಿವರು ಮಂಗಳೂರಿನ ತಿರುವೈಲಿನಲ್ಲಿ ರಸ್ತೆ ಕಾಮಗಾರಿ ಉದ್ಘಾಟನೆ ಸಂದರ್ಭ ಭಾಷಣ ಮಾಡುವಾಗ ಚೇಳಿನ ಕಥೆ ಹೇಳಿದ್ದರು.

ಒಬ್ಬ ತೊರೆ ಬದಿಯಲ್ಲಿ ನಡೆದುಕೊಂಡು ಹೋಗುತ್ತಿದ್ದ. ಆಗ ಒಂದು ಚೇಳು ನೀರಲ್ಲಿ ಬಿದ್ದಿರುವುದು ಕಂಡಿತು. ಅದು ಮೇಲೆ ಬರಲು ಯತ್ನಿಸಿ, ಯತ್ನಿಸಿ ವಿಫಲವಾಗುತ್ತಿತ್ತು. ಅದನ್ನು ನೋಡಿದ ಆತ ಚೇಳನ್ನು ಹಿಡಿದು ಮೇಲೆ ಬಿಡಲು ನಿರ್ಧರಿಸಿ ಅದನ್ನು ಹಿಡಿದ. ಆದರೆ ಚೇಳು ಅವನ ಕೈ ಕಡಿದಿದ್ದರಿಂದ ಆತ ಅದನ್ನು ಬಿಟ್ಟ. ಚೇಳು ಪುನಃ ನೀರಿಗೆ ಬಿತ್ತು. ಮತ್ತೆ ಚೇಳನ್ನು ನೀರಿನಿಂದ ಮೇಲೆತ್ತಲು ಹೋದ. ಅದು ಕಡಿಯಿತು. ಈತ ಬಿಟ್ಟ ಚೇಳು ನೀರಿಗೆ ಬಿತ್ತು!!

ಹೀಗೆ ಮಾಡುತ್ತಿರುವಾಗ ಇನ್ನೊಬ್ಬ ದಾರಿಹೋಕ ಆ ವಿಚಿತ್ರ ವ್ಯಕ್ತಿಯಲ್ಲಿ ಹೇಳಿದ: ಅಲ್ಲಯ್ಯ ಅದು ಕಡಿದರೂ ನೀನೇಕೆ ಅದನ್ನು ಮತ್ತೆ ಮತ್ತೆ ನೀರಿನಿಂದ ಮೇಲೆತ್ತಲು ಯತ್ನಿಸುವೆ. ನಿನಗೆ ಬೇರೆ ಕೆಲಸ ವಿಲ್ಲವೇ? ಅದಕ್ಕೆ ಆ ವ್ಯಕ್ತಿ ಅದು ನೀರಲ್ಲಿ ಬಿದ್ದು ಸಾಯುತ್ತಿದೆ. ಅದನ್ನು ಬದುಕಿಸುವುದು ನನ್ನ ಧರ್ಮ. ಆದರೆ ಕಡಿಯುವುದು ಅದರ ಗುಣ ಅಂದನಂತೆ.

ಈ ಕತೆ ಕೇಳಿದ ಮೇಲೆ ರೈ ಯಾಕೆ ಈ ಕಥೆ ಹೇಳಿರಬಹುದು ಎಂದು ಯೋಚಿಸಿದೆ. ಅವರು ಕಥೆ ಹೇಳಿದ್ದರ ಅರ್ಥ ಇಷ್ಟೆ. ತನ್ನ ವಿರೋಧಿಗಳು ಚೇಳಿದ್ದಂತೆ. ನೀರಲ್ಲಿ ಬಿದ್ದ (ಕಷ್ಟದಲ್ಲಿರುವ) ಅವರನ್ನು ಎಷ್ಟು ಸರಿ ನಾನು ಎತ್ತಲು ಹೋದರೂ ನನಗೇ ಕಡಿಯುತ್ತಾರೆ. ಕಡಿಯುವುದು ಅವರ ಗುಣ. ಆದರೆ ಅವರನ್ನು ಬದುಕಿಸುವುದು ನನ್ನ ಧರ್ಮ ಎಂದು ನಾನು ತಿಳಿದುಕೊಂಡಿದ್ದೇನೆ ಎಂಬುದು ಒಳ ಅರ್ಥ. ಇದನ್ನು ರೈ ಸುಚ್ಯವಾಗಿ ಚೇಳಿನ ಕಥೆ ಮೂಲಕ ಹೇಳಿದ್ದರು.

ತಿರುವೈಲು ಗ್ರಾಮವನ್ನು ಮಹಾನಗರ ಪಾಲಿಕೆಗೆ ಸೇರಿಸುವ ಸಂದರ್ಭ ಹಲವರು ವಿರೋಧ ವ್ಯಕ್ತಪಡಿಸಿದ್ದಲ್ಲದೆ, ಒಳ ರಾಜಕೀಯ ನಡೆಸಿದ್ದರು. ಇದು ರೈ ಸಿಟ್ಟಿಗೆ ಕಾರಣವಾಗಿತ್ತು. ಚೇಳಿನ ಕಥೆ ಮೂಲಕ ರೈ ವಿರೋಧಿಗಳನ್ನು ಕುಟುಕಿದರು.

Monday, June 30, 2008

ವ್ಹಾ! ವಾಟ್ ಎನ್ ಐಡಿಯಾ ಸರ್ ಜಿ!!!




ಒಂದು ಸಾಧಾರಣ ಊರು. ಬಹುಶಃ ಕೇರಳ ರಾಜ್ಯದ್ದು. ಆ ಊರಿಗೊಂದೇ ಶಾಲೆ. ಅದೂ ಖಾಸಗಿ. ಆ ಊರಿನ ಒಬ್ಬ ಬಡ ಮುದುಕ ತನ್ನ ಮೊಮ್ಮಗಳು ಲಕ್ಷ್ಮಿರಾಧಾಳನ್ನು ಆ ಶಾಲೆಗೆ ಸೇರಿಸಲು ಹೋಗುತ್ತಾನೆ. ಆದರೆ ಅಲ್ಲಿ ಕಂಡದ್ದು ಎಡ್ಮಿಶನ್ ಫುಲ್ ಬೋರ್ಡು. ಮುದಕಪ್ಪನಿಗೆ ಅದನ್ನು ಓದಲು ಬಾರದೆ ಶಾಲೆಯ ಒಳಗೆ ಹೋಗಲು ನೋಡಿದಾಗ, ಅಲ್ಲಿನ ಒಬ್ಬ ಮಾಸ್ತರ ಅಜ್ಜನಿಗೆ ಸೀಟಿಲ್ಲ ಎಂದು ಹೇಳಿ ಕಳುಹಿಸುತ್ತಾನೆ.
ಇದನ್ನು ಆ ಶಾಲೆಯ ಮುಖ್ಯಸ್ಥ ಫಾದರ್ ನೋಡುತ್ತಾನೆ. ಆತನಿಗೆ ಆ ಮುದುಕಪ್ಪನ ಮೊಮ್ಮಗಳನ್ನು ಶಾಲೆಗೆ ಸೇರಿಸಿಕೊಳ್ಳಲಾಗದಿರುವುದಕ್ಕೆ ಬೇಸರವಾಗುತ್ತದೆ. ಅಂತಹವರಿಗೂ ಕಲಿಯಲು ಅವಕಾಶ ಸಿಗುವಂತಾಗಬೇಕು ಎಂದು ಆಶಿಸುತ್ತಾನೆ. ಅದಕ್ಕೆ ಆತ ಒಂದು ಐಡಿಯಾ ಮಾಡುತ್ತಾನೆ. ತನ್ನ ಶಾಲೆಯಲ್ಲಿ ಶಿಕ್ಷಕರು ಕಲಿಸುವಾಗ ಅವರ ಎದುರು ಮೊಬೈಲ್‌ಗಳನ್ನು ಇಡುತ್ತಾನೆ. ಈ ಮೊಬೈಲ್‌ನಲ್ಲಿ ಹಳ್ಳಿಯ ಕೆಲವೆಡೆ ಜಾಗ ಗುರುತಿಸಿ, ಅಲ್ಲಿಟ್ಟ ಮೊಬೈಲ್‌ಗೆ ಸಂಪರ್ಕ ಕಲ್ಪಿಸುತ್ತಾನೆ. ಮೊಬೈಲ್ ಎದುರು ಮಕ್ಕಳು ಕುಳಿತು ಶಾಲೆ ಕಲಿಯುತ್ತಾರೆ. ಹೀಗೆ ಮೊಬೈಲ್ ಎದುರಲ್ಲಿ ಕುಳಿತು ಕಲಿತ ಲಕ್ಷ್ಮಿ ರಾಧಾ ಉತ್ತಮ ವಿದ್ಯಾರ್ಥಿನಿ ಬಹುಮಾನ ಗೆಲ್ಲುತ್ತಾಳೆ.

ಇಷ್ಟು ಕಾನ್ಸೆಪ್ಟು. ಅದಕ್ಕೆ ಅಂದವಾದ ಹಿನ್ನೆಲೆ ಸಂಗೀತ. ಓಹೊಹೊ ಓಹೊಹೊ ಓಹೊಹೋಹೊ ಎಂಬ ಮಕ್ಕಳ ಧ್ವನಿ. ಒಂದಷ್ಟು ಇಷ್ಟವಾಗಬಲ್ಲ ದೃಶ್ಯ. ಅಭಿಷೇಕ್ ಬಚ್ಚನ್‌ಗೆ ಇಲ್ಲಿ ಫಾದರ್ ಪಾತ್ರ.
ಇದು ಇವತ್ತಷ್ಟೇ ಇಡುಗಡೆಯಾದ (ಚಿತ್ರವಲ್ಲ) ಜಾಹೀರಾತು. ಐಡಿಯಾ ಮೊಬೈಲ್‌ನದ್ದು. ಬಹುಶಃ ನನಗೆ ಗೊತ್ತಿರುವ ಮಟ್ಟಿಗೆ ಇದೇ ಮೊದಲ ಬಾರಿಗೆ ಚಲನಚಿತ್ರ ಬಿಡುಗಡೆ ಮಾಡುವಾಗ ಜಾಹೀರಾತು ಪ್ರಕಟಿಸುತ್ತಾರಲ್ಲ ಹಾಗೆ ಜಾಹೀರಾತು ಪ್ರಕಟಿಸಿದ್ದರು. ಇಂದು ರಾತ್ರಿ ೯.೩೦ಕ್ಕೆ ಬಿಡುಗಡೆ ಎಂದು ಇಲ್ಲಿನ ಪತ್ರಿಕೆಗಳಲ್ಲಿ ಪ್ರಕಟವಾಗಿತ್ತು. ಸೋಮವಾರ (೩೦-೦೬-೦೮) ರಾತ್ರಿ ಟಿವಿ ಚಾನಲ್‌ಗಳಲ್ಲಿ (ನಾನು ನೋಡಿದ್ದು ಫಿಲ್ಮಿ ಚಾನಲ್) ೧೦-೧೫ ನಿಮಿಷ ನಿರಂತರವಾಗಿ ಈ ಜಾಹೀರಾತನ್ನು ಮತ್ತೆ ಮತ್ತೆ ತೋರಿಸಲಾಯಿತು.
ರಾತ್ರಿ ಈ ಜಾಹೀರಾತು ನೋಡಿದಾಗ ಅರೆ ಹೊಸತು ಅನ್ನಿಸಿತು. ಇಷ್ಟವಾಯಿತು. ಮತ್ತೆ ಮತ್ತೆ ಅದನ್ನೇ ನೋಡುತ್ತ ನೋಡುತ್ತ ಬೆಳಗ್ಗೆ ಪತ್ರಿಕೆಯಲ್ಲಿ ನೋಡಿದ ಜಾಹೀರಾತು ನೆನಪಾಯಿತು. ಥಟ್ಟನೆ ಪತ್ರಿಕೆ ತೆಗೆದುನೋಡಿದೆ. ಹೌದು ಅದೇ ಜಾಹೀರಾತು. ವ್ಹಾಟೆ ಎನ್ ಐಡಿಯಾ ಸರ್ ಜಿ!
ಏನು ಐಡಿಯಾ ನೋಡಿ!
ನಾನು ಕಲಿತ ಪತ್ರಿಕೋದ್ಯಮ ಪದವಿಯಲ್ಲಿ ಜಾಹೀರಾತು ಒಂದು ವಿಷಯ. ಈಗಲೂ ಪತ್ರಿಕೋದ್ಯಮದಲ್ಲಿದ್ದರೂ ನನಗೆ ಜಾಹೀರಾತಿನ ಬಗ್ಗೆ ಯಾಕೋ ವಿಶೇಷ ಆಸಕ್ತಿ. ನೀವೆಲ್ಲ ರಿಮೋಟ್ ಹಿಡಿದೇ ಟಿವಿ ಮುಂದೆ ಕುಳಿತುಕೊಳ್ಳುತ್ತೀರಿ. ಜಾಹೀರಾತು ಬಂದಾಕ್ಷಣ ಚಾನಲ್ ಬದಲಿಸಲು. ಆದರೆ ನಾನು? ಚಾನಲ್ ಬದಲಿಸುವುದು ಕಡಿಮೆ. ಜಾಹೀರಾತನ್ನೂ ಕಾರ್ಯಕ್ರಮದಷ್ಟೇ ಅಥವಾ ಅದಕ್ಕಿಂತ ಹೆಚ್ಚು ಆಸಕ್ತಿಯಿಂದ ನೋಡುತ್ತೇನೆ. ನೀವೂ ಸರಿಯಾಗಿ ಗಮನಿಸಿ ನೋಡಿ ದಾರಾವಾಹಿ ಅಥವಾ ಇತರೆ ಕಾರ್ಯಕ್ರಮ ನಿರ್ಮಿಸಿರುವುದಕ್ಕಿಂತ ಹೆಚ್ಚಿನ ಬುದ್ದಿವಂತಿಕೆ ಮತ್ತು ಚಾಕಚಕ್ಯತೆಯಿಂದ ಜಾಹೀರಾತು ನಿರ್ಮಿಸಿರುತ್ತಾರೆ.
ವಿಐಪಿ ಸೂಟ್‌ಕೇಸ್ ಜಾಹೀರಾತು ನಂಗಿನ್ನೂ ನೆನಪಿದೆ. ಹಡುಗಿಯೊಟ್ಟಿಗೆ ಒಬ್ಬ ಹುಡುಗ ಕಾರಿನಲ್ಲಿ ಹೋಗುತ್ತಿರುತ್ತಾನೆ. ಕಾರು ಕೆಟ್ಟು ನಿಲ್ಲುತ್ತದೆ. ಕೊಂಚ ಹೊತ್ತಿನಲ್ಲಿ ಬಂದ ಹುಡುಗನ ಬೈಕ್ ಹತ್ತಿ ಹುಡುಗಿ ಕಾರಿನ ಹುಡುಗನಿಗೆ ಟಾಟಾ ಮಾಡುತ್ತಾಳೆ. ಅದರ ನಂತರ ಈತ ಕಾರಿನಲ್ಲಿದ್ದ ಸೂಟ್‌ಕೇಸ್ ತೆಗೆದು, ಬಂದ ಲಾರಿಗೆ ಚತ್ರಿ ಮೂಲಕ ಸಂಪರ್ಕ ಕಲ್ಪಿಸಿ, ಸೂಟ್‌ಕೇಸ್ ಮೇಲೆ ತಾನು ಕುಳಿತುಕೊಳ್ಳುತ್ತಾನೆ. ಅದು ಚಕ್ರ ಇರುವ ಸೂಟ್‌ಕೇಸ್. ಸ್ವಲ್ಪ ದೂರ ಹೋಗುವಷ್ಟರಲ್ಲಿ ಲಾರಿ ಟಾಟಾ ಮಾಡಿ ಹೋಗಿದ್ದ ಹುಡುಗಿ ಕುಳಿತಿದ್ದ ಬೈಕನ್ನು ಓವರ್‌ಟೇಕ್ ಮಾಡುತ್ತದೆ. ಈತ ಅವಳಿಗೆ ಟಾಟಾ ಮಾಡುತ್ತಾನೆ. ಅದಕ್ಕೆ ಹಿಂದಿಯ ಹಳೆಯ ಹಾಡಾದ ಸುಹಾನಾ ಸಫರ್ ಹೇ ಯೆ ಮೋಸಂ ಹಸಿ... ಹಾಡು.
ನೋಡಿ ಎಂತಹ ಅದ್ಭುತ ಕಲ್ಪನೆ. ಹಾಗಾಗಿಯೇ ಇಂದಿಗೂ ಮರೆತಿಲ್ಲ.
ಬ್ರು ಕಾಫೀಯ, ಓಟು ಕೇಳಲು ಬಂದ ರಾಜಕಾರಣಿಗೇ ಪ್ರಶ್ನೆ ಕೇಳುವ ಚಹಾದ ಜಾಹೀರಾತುಗಳು ಇಂದಿಗೂ ನೆನಪಿನಲ್ಲಿವೆ. ಆತ ಸಹಾರಾ ವಿಮೆ ಮಾಡಿಸುತ್ತಾನೆ. ನಂತರ ಸ್ಕೂಟರ್ ಹತ್ತಿ ಬೆಟ್ಟದ ಬಳಿ ಹೋಗಿ ಕುಳಿತು ಸಾಂಬಾ, ವಾಂಬಾ ಎಲ್ಲಿದ್ದೀಯಾ ಇಳಿದು ಬಾ. ನಿನ್ನಮ್ಮನ ಎದೆ ಹಾಲು ಕುಡಿದಿದ್ದರೆ ಇಳಿದು ಬಾ ಎಂದು ಸವಾಲು ಹಾಕುವ ಸಹಾರಾ ಸಂಸ್ಥೆ ಜಾಹೀರಾತೂ ತಕ್ಕಮಟ್ಟಿಗಿದೆ.

ಜಾಹೀರಾತು ವಲಯದಲ್ಲಿ ಕೆಲವರನ್ನು ಆಕರ್ಷಿಸಿದ ಮತ್ತು ಖುಶಿ ಕೊಟ್ಟಿದ್ದು ಪೆಪ್ಸಿ, ಕೋಕ್ ಸಂಸ್ಥೆಗಳ ಜಾಹೀರಾತು ಸಮರ. ಅದು ಇಂದಿಗೂ ಮುಂದುವರೆದಿದೆ. ಥಮ್ಸ್ ಅಪ್‌ಗಾಗಿ ಅಕ್ಷಯ್ ಕುಮಾರ್ ಮಂಗನಂತೆ ಎಲ್ಲೆಲ್ಲೊಂದೋ ಹಾರಿ, ಮೆಟ್ಟಿಲ ಮೇಲೆ ಜಾರಿ, ರಸ್ತೆಗಳ ನಡುವೆ ತೂರಿ ಲಾರಿಯಲ್ಲಿದ್ದ ಬಾಟಲಿ ಎಗರಿಸುತ್ತಾನೆ. (ಕುರ್‌ಕುರೆ ಜಾಹೀರಾತಿನಲ್ಲಿ ಜೂಹಿ ಹೀಗೆ ಪ್ಯಾಂಕು ಪ್ಯಾಂಕು ಎಂಬ ಮೀನು ಮಾರಾಟದ ಹಾರ್ನು ಕೇಳಿ ಯಾಹೀ ಅಂತ ಹಾರಿದ್ದೂ ನಿಮಗೆ ನೆನಪಿರಬಹುದು) ಇದೇ ಜಾಹೀರಾತು ಇರಿಸಿಕೊಂಡು ಪೆಪ್ಸಿಯವರು ಈಗ ಹೊಸ ಜಾಹೀರಾತು ಮಾಡಿದ್ದಾರೆ.
ಅಂಕಲ್ ಈ ವಯಸ್ಸಿನಲ್ಲಿ ಕೋಲ್ಡ್‌ಡ್ರಿಂಕ್ಸ್‌ಗಾಗಿ ಕಟ್ಟಡದಿಂದ ಕಟ್ಟಡಕ್ಕೆ ಹಾರಿ ಕೈಕಾಲು ಮುರಿದುಕೊಳ್ಳಬೇಡ. ಯಾಕೆಂದರೆ ವಯಸ್ಸಾದ ಮೇಲೆ ಮುರಿದ ಎಲುಬು ಕೂಡಿಕೊಳ್ಳುವುದು ಲೇಟು. ಅದನ್ನು ಪೆಪ್ಸಿ ಕುಡಿ. ಎಲ್ಲ ಕಡೆ ಸಿಗುತ್ತೆ ಎಂದು ಜಾಹೀರಾತು ಮಾಡಿ ಥಮ್ಸ್‌ಅಪ್‌ಗೆ ಟಾಂಗ್ ನೀಡಿದ್ದಾರೆ.
ಕೆಲವು ವರ್ಷದ ಹಿಂದಂತೂ ಇದು ಪರಾಕಾಷ್ಠೆಯ ತುದಿ ತಲುಪಿತ್ತು. ನೋಡುಗರಾದ ನಮಗೋ ಮಜವೊ ಮಜಾ.
ಮಾನ ಹಕ್ಕು, ನಾಯಿ ಹಕ್ಕುಗಳು ಏನೇ ಹೇಳಲಿ ನಂಗಂತೂ ಹಚ್ ಜಾಹೀರಾತು ಇಷ್ಟ. ಹಚ್ ಸಂಸ್ಥೆಯ ಗ್ರಾಹಕ ಸೇವಾ ಕೇಂದ್ರ ಯಾವಾಗಲೂ ನಿಮಗೆ ಸಹಾಯ ಮಾಡಲು ಸಿದ್ಧವಾಗಿರುತ್ತದೆ ಎಂದು ನಾಯಿಯ ಸಹಾಯದ ಮೂಲಕ ಎಷ್ಟು ಅಂದವಾಗಿ ತೋರಿಸಿದ್ದಾರೆ. ಅದನ್ನು ನೋಡಿ ಖುಶಿ ಪಡುವುದು ಬಿಟ್ಟು ಅದ್ಯಾರೋ ಕೇಸು ಹಾಕಿದ್ದಾರಂತೆ. ಅದರ ಪರಿಣಾಮ ಹಚ್ ಕಂಪನಿಯವರು ಕೆಲವು ದಿನ ಕಂಪ್ಯೂಟರ್ ನಾಯಿಯನ್ನೂ ತೋರಿಸಿ ಚಟ ತೀರಿಸಿಕೊಂಡರು. ಈಗ ಮತ್ತೆ ಜೀವಂತ ನಾಯಿಯನ್ನೇ ತೋರಿಸುತ್ತಿದ್ದಾರೆ.
ಸರಿಯಾಗಿ ಗಮನಿಸಿ ನೋಡಿ. ಜಾಹೀರಾತು ಮಾಡಲು ಭಾರೀ ಬುದ್ದಿವಂತಿಕೆ ಬೇಕು. ನಿಮ್ಮ ಕಲ್ಪನೆಗಳು ಏನೇ ಇದ್ದರೂ ೧-೨ ನಿಮಿಷದಲ್ಲಿ ಮುಗಿಸಬೇಕು. ಅದು ಗ್ರಾಹಕರ ಮನಸ್ಸಿನ ಮೇಲೆ ಪರಿಣಾಮ ಬೀರಿ, ಅವರು ಆ ವಸ್ತುವನ್ನು ಕೊಳ್ಳುವಂತಾಗಬೇಕು. ನನಗಂತೂ ಬಹುತೇಕ ಜಾಹೀರಾತುಗಳು ಅದ್ಭುತ ಅಂತಲೇ ಅನ್ನಿಸುತ್ತವೆ. ಮೊದಲಾದರೆ ಒಂದು ಜಾಹೀರಾತು ಮಾಡಿದರೆ ಕನಿಷ್ಟ ೬ ತಿಂಗಳು, ಒಂದು ವರ್ಷ ಅಥವಾ ಅದಕ್ಕಿಂತ ಹೆಚ್ಚು ಸಮಯ ನಿಭಾಯಿಸಹುದಿತ್ತು. ಆದರೆ ಈಗ ಹಾಗಿಲ್ಲ. ಒಂದೆರಡು ತಿಂಗಳು. ಅಷ್ಟಕ್ಕೆ ಅದು ಹಳೆತು. ಮತ್ತೆ ಹೊಸ ಸ್ಲೋಗನ್, ಹೊಸ ಕಲ್ಪನೆ, ಹೊಸ ಜಾಹೀರಾತು. ಒಂದೊಂದು ಸಂಸ್ಥೆಯೂ ಜಾಹೀರಾತಿನ ಮೇಲೆ ಕೋಟಿಗಟ್ಟಲೆ ದುಡ್ಡು ಚೆಲ್ಲುತ್ತಿವೆ.
ಇದರ ಪರಿಣಾಮ ಬೇಕಾದಷ್ಟು ಜಾಹೀರಾತು ಏಜೆನ್ಸಿಗಳು ಹುಟ್ಟಿಕೊಂಡಿವೆ. ಒಂದು ಸ್ಲೋಗನ್‌ಗೆ, ಒಂದು ಕಲ್ಪನೆಗೆ ಇಲ್ಲಿ ಕೋಟಿಗೂ ಮೀರಿದ ಬೆಲೆಯಿದೆ. ಇದಕ್ಕೇ ಇರಬೇಕು ನನಗೂ ಜಾಹೀರಾತಿನತ್ತ ಸೆಳೆತ!
ಹಾಗಂತ ಕೆಟ್ಟ ಜಾಹೀರಾತುಗಳೇ ಇಲ್ಲವೆಂದಲ್ಲ. ಲೇಯ್ಸ್ ಚಿಪ್ಸ್‌ನ ಬಾಯಿ ಕಳೆದು ಆ... ಎಂದರಚುವ ಹೊಸ ಜಾಹೀರಾತು ಸ್ವಲ್ಪವೂ ಚೆನ್ನಾಗಿಲ್ಲ. ಅವರ ಮುಸುಡಿಗಳನ್ನು ನೋಡಿದರೆ ಲೇಯ್ಸ್ ಬಿಡಿ ಜನ ಬೇರೆ ಯಾವ ಚಿಪ್ಸೂ ತಿನ್ನದಂತಾಗಿದೆ. ಒಳ್ಳೆಯ ಜಾಹೀರಾತುಗಳು ಇಂತಹ ಕೆಟ್ಟ ಜಾಹೀರಾತುಗಳನ್ನು ಮರೆಸಿ ಮನಸ್ಸಿಗೆ ಮುದ ನೀಡುತ್ತವೆ. ಅದೇ ಸಂತೋಷ.
(ನನಗೆ ಈ ಮೇಲ್ ಮೂಲಕ ಬಂದಿದ್ದ, ಸಂಗ್ರಹಿಸಿಟ್ಟಿದ್ದ ಕೆಲವು ಉತ್ತಮ ಜಾಹೀರಾತು ಫೋಟೋಗಳಿದ್ದವು. ಅವುಗಳನ್ನು ಈ ಲೇಖನದ ಜತೆ ಪ್ರಕಟಿಸಿದ್ದೇನೆ. ನೀವಾ ಹೇರ್ ಕ್ರೀಂ ಜಾಹೀರಾತು ನೋಡಿ,ನೀವು ಸತ್ತು ಮಣ್ಣಲ್ಲಿ ಮಣ್ಣಾದರೂ ಕೂದಲು ಹಾಗೇ ಇರುತ್ತದೆ! ಪೆಡಿಗ್ರೀ ತಿಂದರೆ ನಾಯಿ ಹೆಗ್ಗಣದಂತೆ ಟಾರ್ ರಸ್ತೆಯನ್ನೂ ಅಗೆದು ತೆಗೆಯಲ್ಲದು... ಹೀಗೆ. ನಿಮಗೆ ಇಷ್ಟವಾಗಬಹುದು ಅಂದುಕೊಂಡಿದ್ದೇನೆ)

Thursday, June 26, 2008

ಶಾಲಭಂಜಿಕೆ ಓದಲೇಕೆ ಅಂಜಿಕೆ?



ಅದೇನೋ ಅಂಜಿಕೆ. ಶಾಲಭಂಜಿಕೆ ಎಂಬ ಹೆಸರು, ಅದರಲ್ಲಿನ ಅಪರೂಪದ ಸೆಳೆತಕ್ಕೆ ಸಿಕ್ಕೇ ಅದನ್ನು ತಂದಿದ್ದೆ. ಅದೇ ಅಪರೂಪತ್ವ ಅದನ್ನು ಓದಲು ಅಡ್ಡಿಯಾಯಿತು!

ಇದರ ಪರಿಣಾಮ ಶಾಲಭಂಜಿಕೆ ಪುಸ್ತಕ ಕಪಾಟಿನಲ್ಲಿ ಇತರ ಪುಸ್ತಕಗಳ ನಡುವೆ ಕಣ್ಣಾಮುಚ್ಚಾಲೆ ಆಡುವವರಂತೆ ಅಡಗಿ ಕುಳಿತಿತ್ತು. ಸಾಕಷ್ಟು ಹೊಸ ಪುಸ್ತಕಗಳನ್ನು ತರುತ್ತಿದ್ದೆನಾದ್ದರಿಂದ ಹಳೆಯ ಪುಸ್ತಕಗಳು ನೆನಪಿನಾಳದಲ್ಲಿ ಹೂತುಹೋಗುತ್ತಿದ್ದವು. ಅದನ್ನು ಎಂದೂ ಕೆದಕುತ್ತಿರಲಿಲ್ಲ.

ಆದರೀಗ ದಿಲ್ಲಿಗೆ ಬಂದ ಮೇಲೆ ಹೊಸ ಪುಸ್ತಕಗಳು ಸಿಗದು. ಹೀಗಾಗಿ ಓದದೇ ಕಪಾಟಿನಲ್ಲಿಟ್ಟ ಪುಸ್ತಕಗಳಿಗೆ ಬಿಡುಗಡೆಯ ಭ್ಯಾಗ್ಯ. ಅಂತಹ ಓದದೇ ಉಳಿದ ಪುಸ್ತಕಗಳ ನಡುವಿಂದ ಅಂಜಿಕೆಯಿಂದಲೇ ಕೈಗೆತ್ತಿಕೊಂಡ ಪುಸ್ತಕ ಶಾಲಭಂಜಿಕೆ.

ಲೇಖಕರು ನನ್ನ ಮಟ್ಟಿಗೆ ಹೊಸಬರು. ಡಾ. ಕೆ.ಎನ್. ಗಣೇಶಯ್ಯ. ಅವರ ಬಗ್ಗೆ ಕೇಳಿದ್ದಿಲ್ಲ. ಓದಿದ್ದಂತೂ ಮೊದಲೇ ಇಲ್ಲ. ಆದರೆ ಶಾಲಭಂಜಿಕೆ ಎಂಬ ಹೆಸರೇ ವಿಚಿತ್ರವಾಗಿದೆ. ಪುಸ್ತಕವೂ ವಿಚಿತ್ರವಾಗಿಯೇ ಇರಬಹುದು ಎಂದುಕೊಂಡೇ ಅತ್ರಿ ಬುಕ್‌ಸ್ಟಾಲ್‌ನಿಂದ ಕೊಂಡುತಂದಿದ್ದೆ. ಹಾಗೇ ಇಟ್ಟಿದ್ದೆ. ನಿನ್ನೆ ಕೂಡ ಪುಸ್ತಕ ತೆರೆದಾಗ ಮನದಲ್ಲಿ ಶಾಲಂಜಿಕೆ ಬಗ್ಗೆ ಅಂಜಿಕೆ ಇದ್ದೇ ಇತ್ತು. ಆದರೆ ಓದುತ್ತ ಹೋದಂತೆ ಅಂಜಿಕೆ ದೂರವಾಗಿ ಆಸಕ್ತಿ ಕೆರಳಿತು. ಪುಟ ಪುಟದಲು ಪುಟಿದೆದ್ದಿತು...

ಈ ಪುಸ್ತಕದಲ್ಲಿರುವ ೮ ಕತೆಗಳು ಒಂದಷ್ಟು ಇತಿಹಾಸ ಜ್ಞಾನ, ಹಲವು ದೇಶದ ಕೇಳರಿಯದ ವಿಷಯಗಳ ಜತೆಗೆ ರೋಚಕ ತಿರುವುಗಳನ್ನು ಒದಗಿಸುತ್ತವೆ. ಇಲ್ಲಿನ ಕಥೆಗಳ ವಿಶೇಷವೆಂದರೆ ಪ್ರತಿ ಕಥೆಯೂ ಸತ್ಯಘಟನೆಗಳೊಂದಿಗೆ, ಇತಿಹಾಸದೊಂದಿಗೆ ಥಳಕು ಹಾಕಿಕೊಂಡಿವೆ. ಕೆಲವು ಕತೆಗಳಂತೂ ಗಣೇಶಯ್ಯ ಬರೆದಿದ್ದೇ ಸತ್ಯವಿರಬಹುದೇ ಅನ್ನಿಸಿಬಿಡುತ್ತದೆ. ಈ ಕಥೆಗಳು ಓದಿನ ಸುಖದ ಜತೆಗೆ ಒಂದಷ್ಟು ಜ್ಞಾನವನ್ನೂ ಅರಿಯದಂತೆ ನಿಮ್ಮ ತಲೆಯೊಳಗೆ ತುರುಕಿಬಿಡುತ್ತವೆ.

ನಂಜಾದ ಮಧು ಕಥೆಯಲ್ಲಿ ಜೇನುಹುಳಗಳು ಜೇನು ಸಂಗ್ರಹಿಸಿ ಬಂದ ನಂತರ ಗೂಡಿನಲ್ಲಿ ನೃತ್ಯ ಮಾಡುತ್ತವೆ. ಈ ನೃತ್ಯದ ಮೂಲಕ ಅವು ಇತರ ಹುಳುಗಳಿಗೆ ತಾನು ಜೇನಿನ ಮರ ಇರುವ ದಿಕ್ಕು ಮತ್ತು ದೂರವನ್ನು ತಿಳಿಸುತ್ತವೆ. ಜೇನು ಮೆದ್ದು ಗೊತ್ತಿದ್ದರೂ ಈ ವಿಷಯ ನನಗೆ ತಿಳಿದಿರಲಿಲ್ಲ. ಬಹುಶಃ ಜೇನು ಸಾಕುವ, ತಿನ್ನುವ ಎಷ್ಟೋ ಜನರಿಗೆ ಗೊತ್ತಿಲ್ಲ. ಆದರೆ ಈ ಕಥೆ ಮೂಲಕ ಅದು ಗೊತ್ತಾಯಿತು. ಅದೇರೀತಿ ಹುಲಿಯ ಮಡಿಲ ಹುಳು ಮೂಲಕ ಶ್ರೀಲಂಕಾದಿಂದ ಕಾಫಿ ಹಣ್ಣಿನ ಹುಳುಗಳು ಭಾರತಕ್ಕೆ ಬಂದಿದ್ದು, ಪರಾಗ ತ್ಯಾಗದ ಮೂಲಕ ಆಯಿಲ್ ಪಾಮ್ ಗಿಡಗಳ ವಿಷಯ ತಿಳಿಯುವಂತಾಯಿತು.

ಇದರ ಜತೆಗೆ ಅನಿರೀಕ್ಷಿತ, ಅನೂಹ್ಯ ತಿರುವುಗಳು ಕತೆಯನ್ನು ಓದೆಬಲ್ ಆಗಿಸಿವೆ. ತಡ ಇನ್ನೇಕೆ? ಶಾಲಭಂಜಿಕೆ ಓದಲು ಬೇಡ ಅಂಜಿಕೆ. ಹಾಗಂತ ನಿಮಗೆಲ್ಲ ತಿಳಿಸಲು ಇದನ್ನು ಇಲ್ಲಿ ಬ್ಲಾಗಿಸಿದ್ದೇನೆ.

ಗಣೇಶಯ್ಯ ಕೃಷಿ ವಿಶ್ವವಿದ್ಯಾಲಯದಲ್ಲಿ ಪ್ರಾಧ್ಯಾಪಕರಂತೆ. ಅವರು ಕತೆ ಬರೆದಷ್ಟೇ ಆಸಕ್ತಿಕರವಾಗಿ ಪಾಠ ಮಾಡಿದಲ್ಲಿ ಅವರ ಬಳಿ ಕಲಿತವರು ಪುಣ್ಯವಂತರು. ಯಾಕೆಂದರೆ ನಮ್ಮ ವಿಶ್ವವಿದ್ಯಾಲಯದ ಹೆಚ್ಚಿನ ಪ್ರಾಧ್ಯಾಪಕರು ಆಸಕ್ತಿ ಮೂಡಿಸುವಂತೆ ಕಲಿಸುವುದನ್ನೇ ಮರೆತಿದ್ದಾರೆ. ಬರೆಯುವುದಂತೂ ಗೊತ್ತೇ ಇಲ್ಲ ಬಿಡಿ. ಇದಕ್ಕೆ ಗಣೇಶಯ್ಯ ಅಪವಾದದಂತಿದ್ದಾರೆ.

Saturday, June 21, 2008

ಅಂದು ನೋಡಿದ ದಿಲ್ಲಿ ಹಾಗೇ ಇದೆ ಇಲ್ಲಿ


ಶಾಂತವಾದ, ಹಳೆಯ ಬೆಂಗಳೂರನ್ನು ನೆನಪಿಸುವ ಸೌತ್ ಎವಿನ್ಯು. ಚಿಕ್ಕ ಓಣಿಯಂತಿರುವ ಮೈಸೂರು ಕೆಫೆ. ನಮ್ಮೂರ ಹೆದ್ದಾರಿಯನ್ನೂ ಮೀರಿಸುವಷ್ಟು ಅಗಲವಿರುವ, ವಾಹನಗಳೆಲ್ಲಿ ಜಾರಿಬಿಡುತ್ತವೋ ಅನ್ನುವಂತಹ ರಸ್ತೆಗಳು. ಸೌತ್ ಎವಿನ್ಯುವಿನ ಅಗಲವಾದ ರಸ್ತೆಯಲ್ಲಿ ನಡೆಯುತ್ತಿದ್ದರೆ ಕಣ್ಣೆದುರಿಗೆ ರಾಷ್ಟ್ರಪತಿ ಭವನದ ಭವ್ಯ ದೃಶ್ಯ.

ಅಂದು ನೋಡಿದ, ಮನಸಲ್ಲಿ ಅಚ್ಚೊತ್ತಿದ್ದ ದಿಲ್ಲಿ ಚಿತ್ರಕ್ಕೆ ಈಗಿನ ಚಿತ್ರ ಕರೆಕ್ಟಾಗಿ ಮ್ಯಾಚ್ ಆಗುತ್ತಿದೆ!
೮ ವರ್ಷದ ಹಿಂದೆ ವಿದ್ಯಾರ್ಥಿಯಾಗಿ ದಿಲ್ಲಿಗೆ ಬಂದಿಳಿದಿದ್ದೆ. ಆಗ ರಾಜಧಾನಿ ಮಂಜಿನ ಮುಸುಕು ಹೊದ್ದು ಮಲಗಿದಂತಿತ್ತು. ಮಂಜಿನ ಮಬ್ಬು ಮಬ್ಬು ಮುಸುಕಿನಲ್ಲಿ ರಾಷ್ಟ್ರಪತಿ ಭವನ ನೋಡಿದ್ದೆ. ಮೊದಲ ಬಾರಿ. ಮಂಜು ಮುಸಿಕಿದ ಹಾದಿಯಲ್ಲೇ ನಡೆದುಕೊಂಡು ನಾವು ನಾಲ್ಕೈದು ಮಂದಿ ಇಂಡಿಯಾ ಗೇಟ್‌ಗೆ ನಡೆದುಕೊಂಡು ಹೋಗಿದ್ದೆವು. ಆಹಾ ಎಂಥಾ ಬೆರಗು!

ಆಗಲೂ ಈಗಲೂ ದಿಲ್ಲಿಗೆ ಎಂದು ಹೊರಟು ಬಂದಿಳಿದಿದ್ದು ನಿಜಾಮುದ್ದೀನ್ ರೈಲ್ವೆ ನಿಲ್ದಾಣಕ್ಕೆ. ಅಲ್ಲಿಂದ ಪಯಣ ಸೌತ್ ಎವಿನ್ಯುಗೆ. ಆಗ ಬಂದಾಗ ಸಂಸದ ಸನದಿ ಅವರ ಮನೆಯಲ್ಲಿ ಉಳಿದಿದ್ದೆವು. ಈ ಬಾರಿ ಧಾರವಾಡ ಉತ್ತರ ಕ್ಷೇತ್ರದ ಸಂಸದ ಪ್ರಹ್ಲಾದ ಜೋಷಿ ಅವರ ಮನೆಯಲ್ಲಿ. ಒಬ್ಬನೇ ರೈಲಿನಲ್ಲಿ ಬಂದು ನಿಜಾಮುದ್ದೀನ್‌ನಲ್ಲಿ ಇಳಿದು, ರಿಕ್ಷಾ ಹತ್ತಿ ಸೌತ್‌ಎವಿನ್ಯುಗೆ ಬಂದಿಳಿದೆ. ಅದೊಂದು ಅಪರಿಚಿತ, ಹೊಸ ಜಾಗ ಅನ್ನಿಸಲೇ ಇಲ್ಲ. ನಾನು, ನನ್ನ ಮತ್ತು ಗೆಳೆಯರ ಅಧ್ಯಯನ ಪ್ರವಾಸದ ಗೆಜ್ಜೆ ಗುರುತುಗಳು ಸ್ಪಷ್ಟವಾಗಿ ಅಲ್ಲಿ ಕಾಣುತ್ತಿದ್ದವು. ಸಮೀಪದಲ್ಲಿರುವ ಸರ್ದಾರ್ಜಿಯ ಪರಾಟ ಹೋಟೆಲ್, ಹಾಲಿನ ಡೇರಿ, ತರಕಾರಿ ಅಂಗಡಿ, ಗೆಳೆಯರು ಕುಳಿತು ಸುದ್ದಿ ಹೇಳಿದ, ಪ್ರೀತಿಯ ವಿಷಯಕ್ಕೆ ಜಗಳ ಮಾಡಿದ ಕಟ್ಟೆ ಹೀಗೆ ಎಲ್ಲವೂ ಪರಿಚಿತ ಅನ್ನಿಸಿತು. ಸೌತ್ ಎವಿನ್ಯು ವಿಶೇಷವೇ ಅದು. ದಕ್ಷಿಣ ಭಾರತದವರ ಮಟ್ಟಿಗೆ ಸೌತ್ ಎವಿನ್ಯು ನಮ್ಮದೇ ಊರಿನಂತೆ ಅನ್ನಿಸುತ್ತದೆ. ಸೌತ್ ಎವಿನ್ಯು ಒಂದರ್ಥದಲ್ಲಿ ದಿಲ್ಲಿಯ ಕರ್ನಾಟಕ. ಕರ್ನಾಟಕದವರು ಬಂದರೆ ಉಳಿಯುವುದು ಸೌತ್ ಎವಿನ್ಯುದಲ್ಲೇ ಹೆಚ್ಚು. ಅಲ್ಲಿದ್ದರೆ ನಿಮಗೆ ಕರ್ನಾಟಕದಿಂದ ಬಹಳ ದೂರದಲ್ಲಿದ್ದೇವೆ ಎಂಬ ಅನುಭವವೇ ಆಗದು.

೮ ವರ್ಷ ಹಿಂದಿನ ಅಧ್ಯಯನ ಪ್ರವಾಸ ನನ್ನ ದಿಲ್ಲಿ ಉದ್ಯೋಗದ ಪ್ರಯಾಸ ಕಡಿಮೆ ಮಾಡಿತು.
ನಿಜ ಹೇಳಬೇಕೆಂದರೆ ಸಂಪಾದಕು ದಿಲ್ಲಿಯಲ್ಲಿ ವರದಿಗಾರನಾಗುವ ಅವಕಾಶ ಇರುವ ಬಗ್ಗೆ ತಿಳಿಸಿದಾಗ ನಾನು ಒಪ್ಪಿಕೊಳ್ಳಲು ಅಧ್ಯಯನ ಪ್ರವಾಸವೇ ಕಾರಣ. ನನಗೆ ರಶ್ ಅಂದರೆ ಆಗದು. ಟ್ರಫಿಕ್ ಜಾಂ, ಎಲ್ಲಿ ನೋಡಿದರಲ್ಲಿ ರಶ್. ಹೀಗಾದರೆ ನೆಮ್ಮದಿಯ ಜೀವನ ಅಸಾಧ್ಯ. ನನ್ನ ಮಟ್ಟಿಗೆ. ಆದರೆ ಅಧ್ಯಯನ ಪ್ರವಾಸಕ್ಕೆ ಬಂದಾಗ ನೋಡಿದ ದಿಲ್ಲಿ, ಇಲ್ಲಿನ ಅಗಲವಾದ ರಸ್ತೆ, ಸಿಗ್ನಲ್‌ಗಳ ಬದಲು ವೃತ್ತಗಳು, ಮಂಜು ಮುಸಿಕಿದ ವಾತಾವರಣ ಇವೆಲ್ಲ ನನ್ನನ್ನು ಆಕರ್ಷಿಸಿದ್ದವು. ದಿಲ್ಲಿಯಲ್ಲಿ ವರದಿಗಾರನಾಗಲು ಒಪ್ಪಿಕೊಳ್ಳಲು ಇದೂ ಒಂದು ಕಾರಣವಾಯಿತು. ಬಹುಶಃ ಅಧ್ಯಯನ ಪ್ರವಾಸದ ನೆಪದಲ್ಲಿ ದಿಲ್ಲಿ ನೋಡದೇ ಹೋಗಿದ್ದರೆ ಇಲ್ಲಿಗೆ ಬರಲು ಮನಸ್ಸು ಒಪ್ಪುತ್ತಿರಲಿಲ್ಲವೇನೊ. ಅಥವಾ ಬಂದರೂ ಸ್ವಲ್ಪ ಕಷ್ಟವಾಗುತ್ತಿತ್ತೇನೊ.
ಹಾಗಂತ ದಿಲ್ಲಿಯಲ್ಲಿ ಟ್ರಾಫಿಕ್ ಜಾಂ ಇಲ್ಲ. ರಸ್ತೆಗಳಲ್ಲಿ ಹೊಂಡಗಳೇ ಇಲ್ಲ ಎಂದು ನಾನುಹೇಳುತ್ತಿಲ್ಲ. ಇಲ್ಲೂ ಆಗಾಗ ಟ್ರಾಫಿಕ್ ಜಾಂ ಸಿಗುವುದಿದೆ. ಆದರೆ ಬೆಂಗಳೂರಿನಷ್ಟಲ್ಲ! ಇಲ್ಲೂ ಹೊಂಡಗಳಿವೆ ಆದರೆ ರಾಷ್ಟ್ರೀಯ ಹೆದ್ದಾರಿ ೧೭ ಮತ್ತು ೪೮ರಷ್ಟಲ್ಲ!!
ಅದೇ ಸಮಾದಾನ. ಇನ್ನೂ ಒಂದು ಸಮಾದಾನವೆಂದರೆ ಪೆಟ್ರೋಲ್, ಡೀಸೆಲ್ ಬೆಲೆ ಉಳಿದ ಕಡೆಗಿಂತ ಕಡಿಮೆ ಇದೆ!

Monday, June 16, 2008

ಪದ್ಮಪ್ರಿಯಾ ಸಾವಿಗೊಂದು ಬೆನ್ನುಡಿ...


ಕೊಂಚ ಸಹನೆ, ಶಾಸಕರ ಮಾನದ ಬಗೆಗಿದ್ದ ಕಾಳಜಿಯ ಒಂದಷ್ಟಾದರೂ ಪದ್ಮಪ್ರಿಯಾಳ ಭಾವನೆಯ ಬಗ್ಗೂ ಇರುತ್ತಿದ್ದರೆ ಬಹುಶಃ ಅವಳು ಜೀವನಕ್ಕೆ ದುರಂತ ಅಂತ್ಯ ಕಾಣಿಸಿಕೊಳ್ಳಬೇಕಾಗಿರಲಿಲ್ಲ.
ಪದ್ಮಪ್ರಿಯಾ ಮತ್ತು ಅತುಲ್ ನಡುವಿನ ಪ್ರೇಮ ತೀರ ಗುಪ್ತವಾಗೇನೂ ಉಳಿದಿರಲಿಲ್ಲ. ಸ್ವತಃ ರಘುಪತಿ ಭಟ್ ಸೇರಿದಂತೆ ಎಲ್ಲರಿಗೂ ಗೊತ್ತಿತ್ತು. ಅಧಿಕೃತವಾಗಲ್ಲದಿದ್ದರೂ ಅನಧಿಕೃತವಾಗಿ, ಗಾಳಿಸುದ್ದಿಯಾಗಿ ಅದು ಉಡುಪಿ ಜನರ ಬಾಯಿ- ಕಿವಿಯಲ್ಲಿ ಸುಳಿದಾಡುತ್ತಿತ್ತು. ಇದರಿಂದಾಗಿಯೇ ಪದ್ಮಪ್ರಿಯಾ ನಾಪತ್ತೆಯಾದಾಗ ಉಡುಪಿ ಜನ ಕಣ್ಣು ತಿರುಗಿಸಿದ್ದು ಅತುಲ್ ಕಡೆಗೆ.
ಇಡೀ ಘಟನೆಯಲ್ಲಿ ಸ್ವತಃ ಪದ್ಮಪ್ರಿಯಾ, ಅತುಲ್, ಶಾಸಕರ ರಘುಪತಿ ಭಟ್ ಮತ್ತು ನಮ್ಮ ಸರಕಾರ ಹೀಗೆ ಎಲ್ಲರೂ ಕೊಂಚ ಎಡವಿದವರೇ. ಪದ್ಮಪ್ರಿಯಾ ಗೃಹಿಣಿ. ಆಕೆಯ ಸ್ವಂತ ಭಾವನೆಗಳಿಗೆ ಬೆಲೆ ಖಂಡಿತ ಇದೆ. ಅದನ್ನೇ ಆಕೆ ಇನ್ನಷ್ಟು ಸಹನೆಯಿಂದ, ವ್ಯವಸ್ಥಿತವಾಗಿ ಸಾಧಿಸಿಕೊಳ್ಳಹುದಿತ್ತು. ಮಕ್ಕಳ ಬಗ್ಗೆ ಕೊಂಚ ಯೋಚಿಸಬಹುದಿತ್ತು. ರಘುಪತಿ ಭಟ್ಟರಿಂದ ವಿಚ್ಛೇದನ ಪಡೆದು ತನಗೆ ಇಷ್ಟವಾದಂತೆ ಜೀವನ ನಡೆಸಹುದಿತ್ತು. ಇಲ್ಲವೇ ಹೇಗೂ ಇಬ್ಬರ ಸಂಬಂಧ ಹದಗೆಟ್ಟಿದ್ದೇ ಆದರೆ ಗಂಡನನ್ನು ಒಪ್ಪಿಸಿಯೇ ಇಷ್ಟಪಟ್ಟವರ ಜತೆ ಹೋಗಬಹುದಿತ್ತು. ಇದ್ಯಾವುದನ್ನೂ ಮಾಡದೆಯೂ ಹೋಗುವ ಕೊನೆಯ ಕ್ಷಣದಲ್ಲಿ ಒಂದು ಸಣ್ಣ ಚೀಟಿ ಬರೆದಿಟ್ಟು ಹೋಗಿದ್ದರೂ ಇಷ್ಟು ಗೊಂದಲ, ಕುತೂಹಲ ಸೃಷ್ಟಿಯಾಗುತ್ತಿರಲಿಲ್ಲ.
ಇನ್ನು ಅತುಲ್. ಅವರ ನಡುವಿನ ಸಂಬಂಧ, ಭಾವನೆಗಳು ಏನೇ ಇರಲಿ. ಆತನಿಗೂ ಜವಾದಾರಿಗಳಿವೆ. ಆತನೂ ಸಂಸಾರಸ್ಥ. ಆತ ಆಕೆಗೆ ತಿಳಿಹೇಳಬಹುದಿತ್ತು ಮತ್ತು ತಿಳಿಹೇಳಬೇಕಿತ್ತು. ಆತನೂ ಅದನ್ನು ಮಾಡಲಿಲ್ಲ. ಅಥವಾ ಆತ ಬುದ್ದಿ ಹೇಳಿದರೂ ಈಕೆ ಕೇಳಲಿಲ್ಲವೊ. ಇನ್ನು ಶಾಸಕ ಭಟ್ಟರ ಮನಸ್ಥಿತಿ ಅರ್ಥವಾಗದ್ದು. ಅವರಿಗೆ ಕೌಟುಂಬಿಕ ಸಂಬಂಧ ಹೇಗೇ ಇರಲಿ ಸಾರ್ವಜನಿಕರಿಗೆ ಅದು ಚೆನ್ನಾಗಿಯೇ ಕಾಣಬೇಕು. ಒಬ್ಬ ಶಾಸಕನಾಗಿ ಅದು ಅನಿವಾರ್ಯ. ಇದೇ ಕಾರಣಕ್ಕೆ ಅವರು ವಿಚ್ಛೇದನ ಬೇಡಿಕೆ ಮುಂದೂಡುತ್ತ ಬಂದಿದ್ದರು ಎಂಬುದು ಸುದ್ದಿ. ಒಬ್ಬ ರಾಜಕಾರಣಿಗೆ ಹೆಂಡತಿಕೊಡುವ ವಿಚ್ಛೇದನ ಸೋಲಿಗೂ ಕಾರಣವಾಗಿಬಿಡಹುದು. ಪತ್ನಿ ತಿರಸ್ಕರಿಸಿದಂತೆ ಜನವೂ ತಿರಸ್ಕರಿಬಿಟ್ಟರೆ? ಎಂಬ ಭಯ.
ಇನ್ನು ಸರಕಾರ. ಅದಕ್ಕೆ ಅದರ ಮರ್ಯಾದೆ, ಅದಕ್ಕಾಗುವ ಇರುಸುಮುರುಸುಗಳನ್ನು ತಪ್ಪಿಸಿಕೊಳ್ಳುವುದಷ್ಟೇ ಮುಖ್ಯ. ಅವರು ಶಾಸಕರೇ ಆಗಿರಲಿ, ಅವರ ಪತ್ನಿಯೇ ಆಗಿರಲಿ ಅದನ್ನೊಂದು ಪರಾರಿ ಪ್ರಕರಣವನ್ನಷ್ಟೇ ಆಗಿ ನೋಡುವುದು ಸರಕಾರದಿಂದಲೂ ಸಾಧ್ಯವಾಗಲಿಲ್ಲ. ಸಾಧ್ಯವಾಗುವುದೂ ಇಲ್ಲ. ಶಾಸಕರ ಪತ್ನಿ ಪರಾರಿಯನ್ನು ಸರಕಾರ ತನ್ನ ಪ್ರತಿಷ್ಠೆಯ ವಿಷಯ ಮಾಡಿಕೊಳ್ಳದೇ ಹೋಗಿದ್ದರೆ ಬಹುಶಃ ಸಮಸ್ಯೆ ನಿಧಾನವಾಗಿ ಬಗೆಹರಿಯುತ್ತಿತ್ತೇನೊ. ಅದೂ ಆಗಲಿಲ್ಲ. ಸರಕಾರ ಮತ್ತು ಅದರ ಸಕಲ ಅಂಗಗಳು ಶಾಸಕರ ಮಾನ ಕಾಪಾಡುವ ಮೂಲಕ ತಮ್ಮ ಮಾನವನ್ನೂ ಕಾಪಾಡಿಕೊಳ್ಳುವ ಆತುರದಲ್ಲಿದ್ದವು. ಹಾಗಿಲ್ಲದೇ ಹೋಗಿದ್ದಲ್ಲಿ ಕರ್ನಾಟಕ ಪೊಲೀಸರು ದಿಲ್ಲಿ ಪೊಲೀಸರ ಸಹಾಯ ಪಡೆದುಕೊಳ್ಳುತ್ತಿದ್ದರು. ಹಾಗೆ ಮಾಡಿದ್ದರೆ ಪದ್ಮಪ್ರಿಯಾ ಉಳಿಯುತ್ತಿದ್ದಳೇನೊ.
ಇದರಲ್ಲಿ ಮಾಧ್ಯಮಗಳ ಪಾಲು ತುಂಬ ಕಡಿಮೆ. ಆದರೂ ಸ್ವಲ್ಪ ಇದೆ. ಪದ್ಮಪ್ರಿಯಾ ಆತ್ಮಹತ್ಯೆ ಮಾಡಿಕೊಂಡ ಮನೆಯಲ್ಲಿ ಕನ್ನಡದ ಸುದ್ದಿ ಚಾನಲ್ ಒಂದು ಚಾಲೂ ಆಗಿತ್ತು. ಆಕೆ ಅದನ್ನೇನಾದರೂ ನೋಡಿ ತಕ್ಷಣಕ್ಕೆ ಆತ್ಮಹತ್ಯೆ ನಿರ್ಧಾರ ತೆಗೆದುಕೊಂಡಳೇ? ಎಂಬ ಅನುಮಾನವೂ ಇದೆ. ಯಾಕೆಂದರೆ ಚಾನಲ್‌ನವರು ಟಿಆರ್‌ಪಿ ಗಳಿಸುವ ಗಡಿಬಿಡಿಯಲ್ಲಿ ಸುದ್ದಿಯನ್ನು ಬ್ರೇಕ್ ಮಾಡುವ ಆತುರದಲ್ಲಿ ಬಾಯಿಗೆ ಬಂದಿದ್ದನ್ನೆಲ್ಲ ಒದರುತ್ತಲೇ ಇರುತ್ತಾರೆ. ಅದು ಆ ಪ್ರಕರಣಕ್ಕೆ ಸಂಬಂಧಿಸಿದವರ ಮೇಲೆ ಯಾವ ಪರಿಣಾಮ ಬೀರೀತು ಎಂಬುದು ಅವರಿಗೆ ಮನಸ್ಸಿನಲ್ಲಿ ಇರುವುದೇ ಇಲ್ಲ.ಈ ಎಲ್ಲ ಕಾರಣಗಳೂ ಸೇರಿ ಉಡುಪಿ ಶಾಸಕ ರಘುಪತಿ ಭಟ್ಟರ ಪತ್ನಿ ದಿಲ್ಲಿಯ ಮನೆಯೊಂದರಲ್ಲಿ ನೇಣುಬಿಗಿದು ಆತ್ಮಹತ್ಯೆ ಮಾಡಿಕೊಳ್ಳುವಂತಹ ಅನಿರೀಕ್ಷಿತ ಅಂತ್ಯ ಕಾಣುವಂತಾಯಿತು.
ಯಾವುದೇ ವಿಷಯವಿರಲಿ ಅದು ಅದರ ವ್ಯಾಪ್ತಿ ಮೀರಿ ಬೃಹತ್ತಾಗಿ ಬೆಳೆದಾಗ ಅನಾಹುತಗಳು ಸಂಭವಿಸುತ್ತವೆ. ಪದ್ಮಪ್ರಿಯಾ ವಿಷಯದಲ್ಲಿ ಆಗಿದ್ದೂ ಇದೇ.
ಪದ್ಮಪ್ರಿಯಾ ಸಾವು ಯಾಕೋ ಬೇಸರ ಉಂಟುಮಾಡಿದೆ. ಛೆ ಹೀಗಾಗಬಾರದಾಗಿತ್ತು ಅನಿಸುತ್ತಿದೆ. ಆದರೂ ಹಾಗಾಗಿ ಹೋಗಿದೆ. ನನಗೆ ಇಂತಹ ದುಃಖದಲ್ಲೂ ಒಂದು ಹಾಸ್ಯ ಕಾಣಿಸುತ್ತಿದೆ. ಅದೇನೆಂದರೆ ಭಾನುವಾರ ಬೆಳಗ್ಗೆ ಟಿವಿ ಚಾನಲ್ ಮತ್ತು ಪತ್ರಿಕೆಗಳಲ್ಲಿ ಪದ್ಮಪ್ರಿಯಾ ಕೋಲಾರದಲ್ಲಿ ಪತ್ತೆ. ಉಡುಪಿಗೆ ರವಾನೆ, ಮಂಗಳೂರಿನ ಬಿಜೆಪಿ ಮುಖಂಡರೊಬ್ಬರ ಮನೆಯಲ್ಲಿ ಮನವೊಲಿಕೆ ಮುಂತಾದ ಸುದ್ದಿಗಳನ್ನು ಪ್ರಕಟವಾಗಿದ್ದವು. ಪ್ರಕಟವಾಗುತ್ತಲೇ ಇದ್ದವು. ಆಕೆ ದಿಲ್ಲಿಯ ಮನೆಯೊಂದರಲ್ಲಿ ಕುಳಿತು ಇದನ್ನೆಲ್ಲ ನೋಡುತ್ತಿದ್ದಳು!
ಆಕೆಗೆ ಈ ಮಾಧ್ಯಮಗಳು ಅದೆಷ್ಟು ಸುದ್ದಿ ಬಿತ್ತರಿಸುತ್ತವೆ ಅನ್ನಿಸಿರಬೇಕಲ್ಲ. ಹೀಗೆ ಅನ್ನಿಸಿಯೂ ಅದೇ ಮಾಧ್ಯಮ ಬಿತ್ತರಿಸಿದ ಸುದ್ದಿ ನಂಬಿ ಆತ್ಮಹತ್ಯೆಗೆ ಮನಸ್ಸು ಮಾಡಿರಬಹುದಾ? ಅನುಮಾನ. ಆದರೂ ಸಾಯುವ ಮುಂಚೆ ಮಾಧ್ಯಮಗಳಲ್ಲಿ ಪ್ರಕಟವಾದ ಪದ್ಮಪ್ರಿಯಾ ಕೋಲಾರದಲ್ಲಿ ಪತ್ತೆ ಸುದ್ದಿ ನೋಡಿ ಆಕೆ ನಕ್ಕಿರಬಹುದಲ್ಲಾ...

Saturday, June 07, 2008

ಮಂಜುನಾಥ ಕಲ್ಮನಿಯಿಂದ ಕಲಿಯಬೇಕಾದ್ದು...

ಆತ ಸಾಫ್ಟ್‌ವೇರ್ ಎಂಜಿನಿಯರ್. ಹಣ, ಉತ್ತಮ ಜೀವನ ಹುಡುಕಿ ಅಮೆರಿಕಕ್ಕೆ ಹೋಗಿದ್ದ. ವೆದರ್ ಡಾಟ್ ಕಾಂನಲ್ಲಿ ಕೆಲಸ ಮಾಡಲು. ತಂದೆ- ತಾಯಿ, ಊರು, ರಾಜ್ಯ ಎಲ್ಲದರಿಂದ ದೂರವಾಗಿ, ಹಣಕ್ಕೆ ಹತ್ತಿರವಾಗಲು ಹೊರಟ. ಡಾಟ್ ಕಾಂ ಮುಚ್ಚಿತು. ಬದುಕುಮಗುಚಿತು. ಜೀವನದ ಆಸೆಗೆ ಕಾಮಾ (ಅಲ್ಪವಿರಾಮ) ಬಿತ್ತು. ಅದೇ ಟೆನ್ಶನ್‌ನಲ್ಲಿ ಕಾರು ಓಡಿಸುವಾಗ ಅದು ರಸ್ತೆ ಬದಿ ಮರಕ್ಕೆ ಗುದ್ದಿತು. ಕುತ್ತಿಗೆಗಿಂತ ಕೆಳಗೆ ದೇಹ ನಿಯಂತ್ರಣ ಕಳೆದುಕೊಂಡಿತು. ಹಾಗೇ ಆರು ವರ್ಷ ಅಮೆರಿಕದಲ್ಲಿ ಜೀವಚ್ಛವಾಗಿದ್ದ ಮಂಜುನಾಥ ಕಲ್ಮನಿ. ಮನೆಯವರು ಒಬ್ಬರೂ ಹೋಗಲಿಲ್ಲ. ಯಾಕೆಂದರೆ ಮಂಜುನಾಥ ಕಲ್ಮನಿ ಅಮೆರಿಕಕ್ಕೆ ಹೋದ ನಂತರ ಮನೆಯವರ ಸಂಪರ್ಕವನ್ನೇ ಹೆಚ್ಚುಕಡಿಮೆ ಕಳೆದುಕೊಂಡಿದ್ದ.
ದುಡ್ಡು ಆ ಮಟ್ಟಕ್ಕೆ ಮುಟ್ಟಿಸಿತ್ತು.
ಅವನ ನಸೀಬು ಚೆನ್ನಾಗಿತ್ತು. ೨೦೦೮ರಲ್ಲಿ ವೀಸಾ ಅವಧಿ ಮುಗಿಯಿತು. ಅದೇ ಕಾರಣಕ್ಕೆ ಅಮೆರಿಕ ಆಂಬುಲೆನ್ಸ್ ವಿಮಾನದಲ್ಲಿ ಮಂಜುನಾಥ ಕಲ್ಮನಿಯನ್ನು ಹೊತ್ತುಕೊಂಡು ಬಂದು ದಿಲ್ಲಿಯಲ್ಲಿ ಇಳಿಸಿಹೋಯಿತು. ಅವತ್ತಿನಿಂದ ದಿಲ್ಲಿಯ ಸಫ್ತರ್‌ಜಂಗ್ ಆಸ್ಪತ್ರೆ ಮಂಜುನಾಥ ಕಲ್ಮನಿಯ ಮನೆಯಾಯಿತು. ಮಗ ಏನೇ ಮಾಡಿರಲಿ, ಹೆತ್ತ ಕರುಳು ಕೇಳಬೇಕಲ್ಲ. ಮನೆಯವರು ಮಂಜುನಾಥ ಕಲ್ಮನಿ ನೋಡಲು ಆರಂಭದಲ್ಲಿ ಹಿಂಜರಿದರೂ, ತಾಯಿ ಕಣ್ಣೀರು ಹಾಕುತ್ತ ದಿಲ್ಲಿಗೆ ಆಗಮಿಸಿದಳು. ೮ ವರ್ಷದ ನಂತರ ಮಗನನ್ನು ನೋಡಿದಳು. ೩ ತಿಂಗಳು ಮಗನ ಆರೈಕೆ ಮಾಡಿದರು. ಕೊನೆಗೂ ಮಂಜುನಾಥ ಕಲ್ಮನಿ ಮೇ ೪ರಂದು ಕೊನೆಯುಸಿರೆಳೆದ.
ಇದು ಕರಳು ಹಿಂಡುವ ಕತೆ. ನಾಗತಿಹಳ್ಳಿ ಯಂಥವರು ಈಕತೆಯನ್ನು ಅಮೆರಿಕಾ ಅಮೆರಿಕಾ ಭಾಗ ೧ ಸಿನಿಮಾ ಮಾಡಬಹುದು.
ಇದರಲ್ಲಿ ಒಂದು ವಿಷಯವಿದೆ. ಹೆಚ್ಚಿನ ಮಾಧ್ಯಮಗಳಲ್ಲಿ ಮಂಜುನಾಥ ಕಲ್ಮನಿ ಪರ ವರದಿ ಪ್ರಕಟವಾದವು. ಆತನನ್ನು ಮನೆ ತಲುಪಿಸಲು ಸರಕಾರ ಜವಾಬ್ದಾರಿ ವಹಿಸಬೇಕು ಎಂಬರ್ಥದ ವರದಿಗಳೂ ಬಂದವು.
ಯಾಕೆ? ಯಾಕೆ? ಮಂಜುನಾಥ ಕಲ್ಮನಿ ದೇಶಕ್ಕಾಗಿ ಹೋರಾಡಲು ಅಮೆರಿಕಕ್ಕೆ ತೆರಳಿದ್ದ ಯೋಧನೆ? ಅಮೆರಿಕದಿಂದ ಕೆಲವು ಮಾಹಿತಿಗಳನ್ನು ದೇಶಕ್ಕೆ ಒದಗಿಸುತ್ತಿದ್ದ ಗುಪ್ತಚರನೇ? ದೇಶಕ್ಕೆ, ರಾಜ್ಯಕ್ಕೆ ಹೆಸರು ತಂದ ವ್ಯಕ್ತಿಯೆ? ದೇಶ, ರಾಜ್ಯ ಬಿಡಿ ಮನೆಯವರಿಗಾಗಿ ಏನಾದರೂ ತ್ಯಾಗ ಮಾಡಿದವನೇ? ಊಹುಂ. ಆತ ಉದ್ಯೋಗ ಅರಸಿ ಹೋದ ಒಬ್ಬ ವ್ಯಕ್ತಿ ಅಷ್ಟೆ. ಅದೂ ಮನೆಯವರಿಂದ ದೂರವಾಗಿ! ಮಾನವೀಯ ನೆಲೆಯಲ್ಲಿ ಸರಕಾರ ಸಹಾಯ ಮಾಡಬಹುದೇ ಹೊರತು, ಕರ್ತವ್ಯದ ನೆಲೆಯಲ್ಲಲ್ಲ. ಆ ನೆಲೆಯಲ್ಲಿ ಸರಕಾರ ಸಾಕಷ್ಟು ಮಾಡಿತು.
ಆದರೂ ಅವರ ಮನೆಯವರಿಗೆ ಅದು ಸಾಕಾಗಿಲ್ಲ. ಸರಕಾರ ಅಷ್ಟು ವೆಚ್ಚ ಮಾಡಿ ಆತನನ್ನು ವಿಮಾನದಲ್ಲಿ ಊರಿಗೆ ತಲುಪಿಸಬೇಕಿತ್ತು. ಮನೆಯವರಿಗೆ ಪರಿಹಾರ ಸಿಗಬೇಕಿತ್ತು ಎಂಬೆಲ್ಲ ಭಾವನೆ ಇದ್ದಂತಿದೆ.
ನಮ್ಮದೇ ರಾಜ್ಯದಲ್ಲಿ ಎಷ್ಟು ಮಂದಿ ಬಡವರಿದ್ದಾರೆ. ಅನಾರೋಗ್ಯಕ್ಕೆ ಚಿಕಿತ್ಸೆ ಪಡೆಯಲಾಗದೆ ನರಳುತ್ತಿದ್ದಾರೆ. ಸರಕಾರ ಅವರಿಗೆಲ್ಲ ದಿಲ್ಲಿಯ ಸಫ್ತರ್‌ಜಂಗ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸುತ್ತದೆಯೇ? ಇಲ್ಲ. ಆದರೂ ಮಂಜುನಾಥ ಕಲ್ಮನಿಗೆ ಕೊಡಿಸಿತು. ಎಷ್ಟು ಜನ ಔಷಧಿಗೆ ದುಡ್ಡಿಲ್ಲದೆ ಪರದಾಡುತ್ತಿದ್ದಾರೆ. ಅವರಿಗೆಲ್ಲ ಸರಕಾರ ಸಹಾಯ ಮಾಡಲು ಸಾಧ್ಯವಾಗುತ್ತಿಲ್ಲ. ಹಾಗಿರುವಾಗ ಮಂಜುನಾಥ ಕಲ್ಮನಿಗೆ ಸರಕಾರ ಅದನ್ನೆಲ್ಲ ಮಾಡಬೇಕು ಎಂದು ಮಾಧ್ಯಮದವರು ಬಯಸುವುದೇಕೆ? ತಪ್ಪಲ್ಲವೇ?
ನಾವು ಪತ್ರಕರ್ತರು ಇನ್ನು ಮುಂದಾದರೂ ವರದಿ, ವಿಶೇಷ ವರದಿಯ ಕೊನೆಯಲ್ಲಿ ಇನ್ನು ಮುಂದಾದರೂ ಸರಕಾರ ಇದರ ಬಗ್ಗೆ ಗಮನ ಹರಿಸಬೇಕು ಎಂದು ಬರೆಯುವುದನ್ನು ನಿಲ್ಲಿಸಬೇಕು. ಇದು ನನ್ನ ಮನವಿ. ನಿಜವಾಗಿಯೂ ಸರಕಾರ ಗಮನ ಹರಿಸುವ್ ಅಗತ್ಯವಿದ್ದಲ್ಲಿ ಜಾಡಿಸಿ ಬರೆಯಿರಿ ಬೇಡ ಅನ್ನುವವರಾರು...

Saturday, May 24, 2008

ಅಲ್ಲಿಂ‘ದಿಲ್ಲಿ’ಗೆ ಬಂದಾಯ್ತು...


ಮಂಗಳೂರಿನಿಂದ ನನ್ನ ಬ್ಲಾಗಿನ ಕೊನೆಯ ಪೋಸ್ಟ್ "ಬಯಸದೆ ಬಂದ ಭಾಗ್ಯ’! ಅಂಥದ್ದೇ ಭಾಗ್ಯ ನನ್ನನ್ನು ಅಲ್ಲಿಂ‘ದಿಲ್ಲಿ’ಗೆ ತಂದು ನಿಲ್ಲಿಸಿದೆ. ಅವಕಾಶ ಬಾಗಿಲು ತಟ್ಟಿದಾಗ ಬಿಡಬಾರದು ಅಂತಾರೆ. ಆದರೆ ಅವಕಾಶಕ್ಕೆ ಬಾಗಿಲು ತಟ್ಟುವ ಅವಕಾಶವನ್ನೂ ನಾನು ಕೊಡಲಿಲ್ಲ. ಯಾಕೆಂದರೆ ಬಾಗಿಲು ತೆರೆದೇ ಇತ್ತು!!

ಆ ಅವಕಾಶದ ಮೂಲಕವೇ ಮಂಗಳೂರು ಬಿಟ್ಟು ದಿಲ್ಲಿಗೆ ಬಂದಾಯ್ತು. ನಾನು ಮಂಗಳೂರು ಬಿಟ್ಟಿದ್ದರಿಂದ ಕೆಲವರಿಗೆ ಸಂತೋಷವಾಗಿದೆ. ವಿಪರ್ಯಾಸವೆಂದರೆ ನನ್ನ ವರ್ಗಾವಣೆಯಿಂದ ನನಗೂ ಸಂತೋಷವೇ ಆಗಿದೆ! ಅದು ಅವರಿಗೆ ಸ್ವಲ್ಪ ಬೇಸರ ತಂದಿದೆ!!

ನನ್ನ ವರ್ಗ ಹಲವರಿಗೆ ಬೇಸರ ತಂದಿದೆ. ಅವರು ನನ್ನನ್ನು ನಿಜವಾಗಿಯೂ ಪ್ರೀತಿಸಿದವರು. ನನಗೂ ಅಂತಹ ಗೆಳೆಯರನ್ನು ಬಿಟ್ಟು ಬರಲು ನಿಜಕ್ಕೂ ಬೇಸರವೇ. ಆದರೆ ಒಂದೇ ಊರು, ಒಂದೇ ನಮೂನೆಯ ಕೆಲಸ ನಮ್ಮ ಉತ್ಸಾಹ, ಜೀವನ ಪ್ರೀತಿ ಹಾಳು ಮಾಡುವ ಮೊದಲು ಆ ಊರು ಬಿಟ್ಟರೆ ಒಳ್ಳೆಯದು. ಯಾವುದೇ ಊರಿಗೆ ಹೊಸದಾಗಿ ಹೋದಾಗ ಚೆನ್ನಾಗೇ ಇರುತ್ತದೆ. ಎಲ್ಲರೂ ಒಳ್ಳೆಯವರೇ ಆಗಿರುತ್ತಾರೆ. ಊರುತುಂಬ ಸುಂದರವಾಗಿ ಕಾಣುತ್ತದೆ. ನಿಧಾನವಾಗಿ ಜಾತಿ, ಅಸೂಯೆ, ಏನೇನೋ ರಾಜಕೀಯಗಳು ಆರಂಭವಾಗುತ್ತವೆ. ಹಾಗಾದಾಗ ಅಂತಹ ಸ್ಥಳದಲ್ಲಿ ವಿಶೇಷವಾಗಿ ನನಗೆ ಕೆಲಸ ಮಾಡುವುದು ಕಷ್ಟ.

ಏಕೆಂದರೆ ನಾನು ಎದುರಿನಿಂದ ಚೂರಿ ಹಾಕುವುದನ್ನಾದರೂ ಸಹಿಸಿಕೊಂಡೇನು ಹಿಂದಿನಿಂದ ಚೂರಿ ಹಾಕುವವರನ್ನು ಸಹಿಸಿಕೊಳ್ಳಲಾರೆ. ಕೆಲವೊಮ್ಮೆ ಹಿಂದಿನಿಂದ ಚೂರಿ ಹಾಕುವವರ ಚಾಲಾಕಿತನ ಮೀರಿಸಿ ಅವರ ಹಿಂದಿನಿಂದ ಇರಿಯಬೇಕಾದ ಅನಿವಾರ್ಯವೂ ಉಂಟಾಗಿಬಿಡುತ್ತದೆ.

ನಾನು ವರ್ಗವಾಗಿದ್ದಕ್ಕೆ ಫೋನ್ ಮೂಲಕ, ಈಮೇಲ್ ಮೂಲಕ ಬೇಸರ ವ್ಯಕ್ತಪಡಿಸಿ, ರಾಜ್ಯದಲ್ಲೇ ಇರಿ ಅಂತ ಒತ್ತಾಯಿಸಿದವರು ಸಾಕಷ್ಟು ಮಂದಿ. ಮಂಗಳೂರು ಬೇಸರ ಬಂದರೆ ಬೆಂಗಳೂರಿಗೆ ಹೋಗಿ. ಅದು ಬಿಟ್ಟು ದೂರದ ದಿಲ್ಲಿಗೆ ಯಾಕೆ ಹೊಗ್ತೀರಿ ಅಂದವರು ಕೆಲವರು. ಒಳ್ಳೆ ಅವಕಾಶ ಹೋಗಿ ಬನ್ನಿ ಅಂದರು ಇನ್ನು ಕೆಲವರು. ಅವರಿಗೆ ನಾನು ಚಿರಋಣಿ. ಹಾಗೆಯೇ ವರ್ಗವಾದ್ ಮೇಲೆ ಒಂದೂ ಫೋನ್ ಮಾಡದೆ ಪೀಡೆ ತೊಲಗಿತು ಎಂದು ಸಂತೋಷ ಪಟ್ಟವರೂ ಇದ್ದಾರೆ. ಅವರಿಗೂ ನಾನು ಋಣಿ. ಒಟ್ಟಿಗಿದ್ದಾಗೆಲ್ಲ ಭಾರೀ ಚೆನ್ನಾಗಿ ವರ್ತಿಸಿ, ವರ್ಗವಾದ ಮೇಲಾದರೂ ನಿಜ ಬಣ್ಣ ತೋರಿಸಿದರಲ್ಲ. ಅದಕ್ಕೆ.

ಅಂಥವರ ಬಗ್ಗೆ ಮಾತಾಡುವುದಕ್ಕಿಂತ ನನ್ನ ಆತ್ಮೀಯರ ಬಗ್ಗೆ ಮಾತಾಡುವುದು ನಂಗಿಷ್ಟ.

ಮಂಗಳೂರು ನನಗೆ ೬ ವರ್ಷದಲ್ಲಿ ಸಾಕಷ್ಟು ಕಲಿಸಿದೆ. ಒಳ್ಳೆಯದನ್ನೇ ಕಲಿಸಿದೆ. ಸಾಕಷ್ಟು ಒಳ್ಳೆ ಗೆಳೆಯರನ್ನು ದಯಪಾಲಿಸಿದೆ. ಬಹುಶಃ ನಾನು ಮಂಗಳೂರಿಗೆ ಹೋಗದೆ ಇದ್ದಲ್ಲಿ ನನ್ನ ಜೀವನದ ಅತ್ಯುತ್ತಮ ಗೆಳೆಯರನ್ನು ನಾನು ಮಿಸ್ ಮಾಡಿಕೊಳ್ತಾ ಇದ್ದೆ ಅನ್ನಿಸ್ತಾ ಇದೆ. ಎಷ್ಟೊಂದು ಮಾಹಿತಿದಾರರು, ಒಂದು ಸಕೆಂಡ್ ಕೂಡ ಯೋಚನೆ ಮಾಡದೆ ಎಂಥ್ಥದ್ದೇ ಸಹಾಯಕ್ಕೂ ಸಿದ್ಧರಾಗುತ್ತಿದ್ದ ಗೆಳೆಯರು ನನಗೆ ಮಂಗಳೂರಿನಲ್ಲಿ ದಕ್ಕಿದ್ದರು. ಅವರ ಋಣ ನಾನೆಂದಿಗೂ ತೀರಿಸಲಾರೆ.

ಲ್ಯಾನ್ಸಿ, ಮಂಜು ನೀರೇಶ್ವಾಲ್ಯ, ನರೇಶ್ ಶೆಣೈ, ಗುರುವಪ್ಪ ಬಾಳೆಪುಣಿಯಂತಹ ಗೆಳೆಯ್ರನ್ನು, ಕುಂಟಿನಿಯಂತಹ ಅಣ್ಣನನ್ನು ಗಿಟ್ಟಿಸಿಕೊಂಡೆ. ಕನಿಷ್ಟ ದಿನಕ್ಕೊಂದು ಸಾರಿಯಾದರೂ ಫೋನಲ್ಲಿ ಮಾತಾಡುತ್ತ ಪ್ರೋತ್ಸಾಹ ನೀಡುತ್ತ, ಜೋಕ್ ಮಾಡುತ್ತಿದ್ದರು ಕುಂಟಿನಿ. ನಾನು ಮತ್ತು ವೇಣುವಿನೋದ್ ಸುದ್ದಿ ಯಾವತ್ತಿಗೂ ಹಂಚಿಕೊಂಡಿರಲಿಲ್ಲ. ಆದರೆ ನಮ್ಮಲ್ಲಿ ಒಂದು ಆತ್ಮೀಯತೆ ಇತ್ತು. ನನ್ನ ಲೇಖನಗಳಿಗೆ ಸ್ಪಂದಿಸುವ, ಪ್ರತಿಕ್ರಿಯಸುವ ಅವನ ಸಹೃದಯತೆ ಎಲ್ಲರಲ್ಲೂ ಇರುವಂಥದ್ದಲ್ಲ. ಅವರೆಲ್ಲ ದಿಲ್ಲಿಯಲ್ಲಿ ಕ್ಷಣ ಕ್ಷಣಕ್ಕೂ ನೆನಪಾಗುತ್ತಾರೆ. ಅವರಿಗೂ ಒಂದಲ್ಲ ಒಂದು ಕ್ಷಣದಲ್ಲಿ ನಾನು ನೆನಪಾಗುತ್ತಿರಬಹುದು. ಹಾಗಿತ್ತು ನಮ್ಮ ಆತ್ಮೀಯತೆ.

ಕಚೇರಿಯೊಳಗೂ ಸಾಕಷ್ಟು ಆತ್ಮೀಯರಿದ್ದಾರೆ. ಆದರೆ ಅವರ ಹೆಸರು ಹಾಕಿದರೆ ಅವರಿಗೆ ಅದು ತಿರುಮಂತ್ರವಾದೀತು. ಅದಕ್ಕೆ ಅವರ ಹೆಸರು ನನ್ನ ಮನಸ್ಸಿನಲ್ಲೇ ಇರಲಿ. ಇಷ್ಟೇ ಅಲ್ಲ. ಸಾಕಷ್ಟು ಮಂದಿ ಇದ್ದಾರೆ. ನನ್ನನ್ನು ಅನವಶಕ್ಯವಾಗಿ ಮೆಚ್ಚಿಕೊಂಡವರು, ವಿನಾಕಾರಣ ಪ್ರೀತಿಸಿದವರು, ಸಕಾರಣವಾಗಿ ದ್ವೇಷಿಸುವವರು ಎಲ್ಲರೂ ಮಂಗಳೂರಿನಲ್ಲಿ ನನಗೆ ದೊರೆತರು. ಇವತ್ತಿಗೂ ಮಂಗಳೂರಿನಲ್ಲಿ ಏನಾದರೂ ಕ್ರೈಂ ಆದರೆ ಭಟ್ಟರೆ ‘ನೀವಿರಬೇಕಿತ್ತು’ ಎನ್ನುವ ಜನರಿದ್ದಾರಲ್ಲ. ಅಷ್ಟು ಸಾಕು. ನಾನು ಮಂಗಳೂರಿನಲ್ಲಿ ೬ ವರ್ಷ ಕೆಲಸ ಮಾಡಿದ್ದು ಸಾರ್ಥಕ.

ಲ್ಯಾನ್ಸಿ ಮತ್ತು ನನ್ನ ಗೆಳೆತನ ವಿವರಿಸಲಾಗದ್ದು. ನಾವಿಬ್ಬರೂ ಪ್ರತಿ ದಿನ ಸಂಜೆ ಇಂದ್ರಭವನದಲ್ಲಿ ಚಹಾ ಕುಡಿಯಲು ಹೋಗುತ್ತಿದ್ದೆವು. ಕೆಲಸ ಒತ್ತಡ ಹೆಚ್ಚಿದ್ದ ದಿನ ಮತ್ತು ಭಾನುವಾರ ಇಂದ್ರಭವನ ಬಂದ್ ಇದ್ದ ದಿನ ಬಿಟ್ಟರೆ ಉಳಿದ ದಿನ ನಾವು ಇಂದ್ರಭವನ ಭೇಟಿ ತಪ್ಪಿಸುತ್ತಿರಲಿಲ್ಲ. ನೋಡೋರಿಗೆ ಚಾ ಕುಡಿಯೋ ಚಟ ಅನ್ನಿಸಿದರೂ ನಮ್ಮಿಬ್ಬರ ಪಾಲಿಗೆ ಚಾ ಕೇವಲ ನೆಪ. ಅದೇನಿದ್ದರೂ ನಮ್ಮೆ ಭೇಟಿಗೊಂದು ನೆಪವಾಗಿತ್ತು. ನನ್ನ ವರ್ಗಾವಣೆಯಿಂದ ನಮ್ಮಿಬ್ಬರಿಗೂ ಪ್ರತಿ ದಿನ ಸಂಜೆಯ ಚಾ ತಪ್ಪಿದೆ. ನಂಗೊತ್ತು ಲ್ಯಾನ್ಸಿ ನನ್ನ ಬಿಟ್ಟು ಬೇರೆ ಯಾರೊಂದಿಗೂ ಪ್ರತಿ ದಿನ ಚಾ ಕುಡಿಯುವಷ್ಟು ಆತ್ಮೀಯತೆ ಹೊಂದಿಲ್ಲ.

ನಾನು ಮಂಗಳೂರಿಗೆ ಹೋದಾಗ ಆರಂಭದಲ್ಲಿ ಆತ ಅದೆಷ್ಟು ಸಹಾಯ ಮಾಡಿದ್ದನೋ ಅದಕ್ಕಿಂತ ಹೆಚ್ಚಿನ ಸಹಾಯ ನಾನು ವರ್ಗವಾಗಿ ದಿಲ್ಲಿಗೆ ಬಂದ ನಂತರ ಮಾಡಿದ್ದಾನೆ. ನಾನು ಬಂದ ನಂತರ ನನ್ನ ಮನೆಯ ವಸ್ತುಗಳನ್ನೆಲ್ಲ ತಾನೇ ಮುಂದೆ ನಿಂತು ಪ್ಯಾಕ್ ಮಾಡಿಸಿ ಕಳುಹಿಸಿದ್ದಾನೆ. ಆತನಿಗೆ ತುಂಬ ಸಹನೆ. ಆತ ಗೆಳೆಯನಿಗೆ ಅಷ್ಟು ಸ್ಪಂದಿಸಬಲ್ಲ, ಎಲ್ಲ ಕೆಲಸಗಳ ನಡುವೆಯೂ ಗೆಳೆಯರ ಬೇಡಿಕೆ ಈಡೇರಿಸಬಲ್ಲ. ನಾನಂತೂ ಪ್ರತಿಯೊಂದಕ್ಕೂ ಆತನನ್ನೇ ಅವಲಂಬಿಸಿಬಿಟ್ಟಿದ್ದೆ. ಎಷ್ಟೋ ಸಾರಿ ಸಿಲ್ಲಿ ಕಾರಣಗಳಿಗೆ ಆತನಿಗೆ ಫೋನ್ ಮಾಡುತ್ತಿದ್ದೆ. ಹೊತ್ತಲ್ಲದ ಹೊತ್ತಲ್ಲಿ ಆತನ ಸಹಾಯ ಕೇಳುತ್ತಿದೆ.

ಬಹುಶಃ ಅಂತಹ ಒಬ್ಬ ಗೆಳೆಯನ್ನು ನಾನು ಭವಿಷ್ಯದಲ್ಲಿ ಪಡೆಯುವುದು ನನಗಂತೂ ಅನುಮಾನ. ಯಾಕೆಂದರೆ ಅಂತಹ ಗೆಳೆಯರು ಮತ್ತೆ ಮತ್ತೆ ಸಿಗುವುದಿಲ್ಲ.

ಮಂಗಳೂರಿನ ಎಲ್ಲ ನನ್ನ ಆತ್ಮೀಯರ ಪ್ರೀತಿಗೆ, ಅಗಾಧ ಗೆಳೆತನಕ್ಕೆ ನಾನು ಅರ್ಹನಾಗಿದ್ದೆನೋ ಇಲ್ಲೆವೋ, ನನಗೆ ಅನುಮಾನವಿದೆ. ಆದರೆ ಅವರ ಗೆಳೆತನ ನನ್ನ ಮಂಗಳೂರಿನ ಜೀವನವನ್ನು ಸುಂದರವಾಗಿಸಿತು, ಸಿಹಿಯಾಗಿಸಿತು ಎಂಬುದಂತೂ ಸತ್ಯ. ಇವತ್ತಿಗೂ ನನ್ನ ಮನಸ್ಸು ಮಂಗಳೂರನ್ನು ನೆನಪಿಸಿಕೊಳ್ಳುತ್ತಿದ್ದರೆ ಅದು ಅವರಿಂದಾಗಿ. ಮುಂದೆದಾದರೂ ಅವಕಾಶ ಸಿಕ್ಕರೆ ಮಂಗಳೂರಿಗೆ ಹೋಗಬೇಕು ಅನ್ನಿಸಿದರೆ ಅದೂ ಅವರಿಂದಾಗಿಯೇ.

Friday, May 23, 2008

ಕಣ್ಣೀರ ಧಾರೆ ಇದೇಕೆ? ಇದೇಕೆ...?


ಮಂಗಳೂರು ಬಿಟ್ಟು ರೈಲು ನಿಧಾನಕ್ಕೆ ಹೊರಡುತ್ತಿದ್ದಂತೆ ಹೊಟ್ಟೆಯೊಳಗೇನೋ ತಳಮಳ. ಮಂಗಳೂರು ಬಿಟ್ಟು ದಿಲ್ಲಿಗೆ ಹೋಗೇಕೆಂಬುದು ತೀರ್ಮಾನವಾಗಿ ಕೆಲ ದಿನಗಳು ಕಳೆದಿತ್ತು. ಮನಸ್ಸು ಮರುಗಿರಲಿಲ್ಲ. ಹೊಸ ಊರು ನೋಡುವ ಸುಖ ಹಳೆ ಊರು ಬಿಡುವ ದುಃಖ ಮರೆಸಿತ್ತು.

ಆದರೆ ರೈಲು ಮಂಗಳೂರು ನಿಲ್ದಾಣದಿಂದ ಚಲಿಸಲಾರಂಭಿಸಿದಂತೆ, ಕಳುಹಿಸಲು ಬಂದಿದ್ದ ಹೆಂಡತಿ ಸಿಂಧು, ಗೆಳೆಯ ಲ್ಯಾನ್ಸಿ ದೂರವಾಗುತ್ತ ಕೈಬೀಸುತ್ತಿದ್ದಂತೆ ಕಣ್ಣು ಕೊಳವಾಯಿತು. ಕೈಬೀಸುತ್ತಿದ್ದವರ ಮತ್ತು ಮಂಗಳೂರಿನ ಚಿತ್ರ ಮಸುಕಾಯಿತು.

ಯಾಕೋ ಇದ್ದಕ್ಕಿದ್ದಂತೆ ನಾನು ಒಂಟಿ ಅನ್ನಿಸಿ ದುಃಖ ಒತ್ತರಿಸಿಬಂತು. ಕಣ್ಣೋಟಕ್ಕೆ ನಿಲುಕುವವರೆಗೂ ಅವರಿಬ್ಬರನ್ನು ನೋಡುತ್ತಿದ್ದೆ. ರೈಲು ಮಂಗಳೂರು ಬಿಟ್ಟು ದೂರ ಓಡುತ್ತಿದ್ದರೂ ಮನಸ್ಸು ಮಾತ್ರ ಹಿಂದಕ್ಕೋಡಬಯಸುತ್ತಿತ್ತು. ಇದ್ದಕ್ಕಿದ್ದಂತೆ ದಿಲ್ಲಿಯೂ ಬೇಡ, ಬಡ್ತಿಯೂ ಬೇಡ, ಮಂಗಳೂರಲ್ಲೇ ಉಳಿದುಬಿಡೋಣ ಅನ್ನಿಸೋಕೆ ಶುರುವಾಯಿತು. ರೈಲು ಹಾಳಾಗಿ ಪ್ರಯಾಣವೇ ರದ್ದಾಗಿಬಿಡಾರದೆ ಅನ್ನಿಸಿತು.

ಬೇಕಾದಷ್ಟು ಪ್ರೀತಿ ಮಾಡೋ ಗೆಳೆಯರು. ಎಲ್ಲರಿಗಿಂತ ಮೊದಲು ಸುದ್ದಿಕೊಡೋ ಮಾಹಿತಿದಾರರು. ಸಾಕು ಸಾಕೆನ್ನುವಷ್ಟು ಪ್ರೀತಿ ಮಾಡೋ ಹೆಂಡತಿ. ಇವನ್ನೆಲ್ಲ ಹಿಂದೆ ಬಿಟ್ಟು ನಾನು ದಿಲ್ಲಿಗೆ ಹೊರಟಿದ್ದೆ. ಜೀವನದಲ್ಲಿ ಮಹಾತ್ವಾಕಾಂಕ್ಷೆಗಳನ್ನು ಇರಿಸಿಕೊಳ್ಳದ, ದೊಡ್ಡ ಹುದ್ದೆಯ ಕನಸೂ ಕಾಣದ, ಇದ್ದುದರಲ್ಲೇ ಇದ್ದಷ್ಟು ದಿನ ನನ್ನವರೊಂದಿಗೆ ಹಾಯಾಗಿದ್ದುಬಿಡುವ ಮನಸ್ಥಿತಿಯ ನಾನು ದಿಲ್ಲಿಗೆ ಹೋಗಲು ಯಾಕೆ ಒಪ್ಪಿಕೊಂಡೆ ಎಂಬುದು ನನಗೀಗಲೂ ಪ್ರಶ್ನೆಯೇ. ಬಹುಶಃ ದಿಲ್ಲಿಯ ಬಗೆಗಿದ್ದ ಸುಂದರ ಕಲ್ಪನೆ ಮತ್ತು ವರದಿಗಳ ಮೂಲಕ ಕೊಂಚ ಹೆಸರು ಮಾಡಬಹುದು, ಒಂದಷ್ಟು ಸುಂದರ ಸ್ಥಳಗಳನ್ನು ನೋಡಬಹುದು ಎಂಬುದೇ ಇದಕ್ಕೆ ಕಾರಣವೇನೊ. ಅಥವಾ ಮಂಗಳೂರು ನಿಧಾನಕ್ಕೆ ಬೋರಾಗಲಾರಂಭಿಸಿತ್ತೊ.

ಆದರೂ ಮಂಗಳೂರು ಬಿಡುವಾಗ ಮುಳು ಮುಳು ಅತ್ತಿದ್ದು ನಿಜ. ಯಾಕೆಂದರೆ ನನಗೆ...

ಒಂಟಿ ಒಂಟಿಯಾಗಿರುವುದು

ಬೋರೋ ಬೋರು...

ದಿಲ್ಲಿಗೆ ಹೋಗುವುದು ಮತ್ತು ಹೆಂಡತಿ ಸ್ವಲ್ಪ ಸಮಯ ಬಿಟ್ಟು ಬರುವುದು ಎಂದು ತೀರ್ಮಾನ ಆದಾಗಿನಿಂದ ಹೆಂಡತಿ ಆಗಾಗ ಅಳುತ್ತಿದ್ದಳು. ಯಾಕೆಂದರೆ ಮದುವೆಯಾಗಿ 2 ವರ್ಷದಲ್ಲಿ ನಾವಿಬ್ಬರೂ ೧ ವಾರಕ್ಕಿಂತ ಹೆಚ್ಚು ಬಿಟ್ಟಿದ್ದಿದ್ದೇ ಇಲ್ಲ. ಅವಳಿಗೆ ಧೈರ್ಯ ಹೇಳಿ, ಹೇಳಿ ದಿಲ್ಲಿಗೆ ಹೊರಡುವ ದಿನ ಬರುವಷ್ಟರಲ್ಲಿ ನಾನೇ ಅಳುವ ಸ್ಥಿತಿ ತಲುಪಿದ್ದೆ. ದಿಲ್ಲಿಗೆ ಹೋದರೆ ಮನೆಗೆ ಬರೋದು ವರ್ಷಕ್ಕೊಂದೇ ಸಲ ಎಂಬುದು ನೆನೆದೇ ಅಪ್ಪ-ಅಮ್ಮ ಬೇಜಾರು ಮಾಡಿಕೊಂಡಿದ್ದಾರೆ. ಫೋನು ಮಾಡಿದರೆ ಮಾತಾಡಲಾಗದಷ್ಟು ದುಃಖ.

ಅವರಿಗೆಲ್ಲ ಸಮಾದಾನ ಮಾಡುತ್ತ ಮಾಡುತ್ತ ನಾನೇ ಸಮಾದಾನ ಮಾಡಿಸಿಕೊಳ್ಳುವ ಸ್ಥಿತಿ ತಲುಪಿದ್ದೆ. ಆದರೆ ನಾನು ಧೈರ್ಯ ಹೇಳುವುದು ಬಿಟ್ಟು ಅತ್ತರೆ ಅವರು ಇನ್ನಷ್ಟು ಅತ್ತಾರು ಎಂಬ ಕಾರಣಕ್ಕೆ ದುಃಖ ಹೊರಗೆಡಹಿರಲಿಲ್ಲ. ಅಲ್ಲದೆ ವರ್ಗಾವಣೆಯಿಂದಾಗಿ ಮಾಡೇಕಾಗಿದ್ದ ಕೆಲಸಗಳೂ ಸಾಕಷ್ಟಿದ್ದವು. ಹೀಗಾಗಿ ದುಃಖಿಸಲು ಸಮಯವೂ ಸಿಕ್ಕಿರಲಿಲ್ಲ.

ರೈಲು ಮಂಗಳೂರು ಬಿಡುತ್ತಿದ್ದಂತೆ ಅಳುವೇ ತುಟಿಗೆ ಬಂದಂತೆ...ಏನು ಮಾಡಿದರೂ ಅಳು ತಡೆಯದಾದೆ. ಸುಮ್ಮನೆ ಕುಳಿತು ಅತ್ತೆ. ರೈಲು ಮಂಗಳೂರು ಬಿಟ್ಟು ೩ ತಾಸು ಕಳೆದರೂ ಕಣ್ಣು ಮಾತ್ರ ಒಣಗಲೇ ಇಲ್ಲ.

ಕಣ್ಣೀರ ಧಾರೆ

ಇದೇಕೆ ಇದೇಕೆ...

ಹಾಗಂತ ಕೇಳಲು ಅಲ್ಲಿ ಯಾರೂ ಇರಲಿಲ್ಲ. ಅಂತೂ ಸಮಾದಾನವಾಗುವ ಹೊತ್ತಿಗೆ ನನ್ನ ಹಿಂದಿನ ಸೀಟಿನಿಂದಲೂ ಮೂಗು ಸೇರಿಸುವ ಸೊರ್ ಸೊರ್ ಶಬ್ದ ಕೇಳತೊಡಗಿತು. ನೀನೊಬ್ಬನೇ ಅಲ್ಲ ಊರು ಬಿಟ್ಟು ಹೊರಟ ಎಲ್ಲರಿಗೂ ಹೀಗೇ ಆಗುತ್ತದೆ ಎಂದು ಸೊರ್ ಸೊರ್ ಶಬ್ದವೇ ಸಮಾದಾನ ಮಾಡಿದಂತಾಗಿ ನಿಧಾನವಾಗಿ ಜೋಗಿ ಕತೆಗಳು ಪುಸ್ತಕ ಕೈಗೆತ್ತಿಕೊಂಡೆ. ಮನಸ್ಸು ಕತೆಗಳಲ್ಲಿ ಮುಳುಗಲಾರಂಭಿಸಿತು. ರೈಲು ದಿಲ್ಲಿಯತ್ತ ನನಗಿಂತ ಅರ್ಜೆಂಟಿನಲ್ಲಿ ಓಡಲಾರಂಭಿಸಿತು.

Thursday, March 27, 2008

ಬಯಸದೇ ಬಂದ ಭಾಗ್ಯ!

ಇದು ಹಳೆಯ ಕನ್ನಡ ಸಿನಿಮಾ ಹೆಸರು. ಈಗ ಯಾಕೋ ನನಗೆ ಮತ್ತೆ ಮತ್ತೆ ನೆನಪಾಗುತ್ತಿದೆ. ನನಗಾಗೇ ಹೇಳಿದ್ದೇನೋ ಅನ್ನಿಸ್ತಿದೆ. ಕಾರಣ ನನಗೆ ಬಯಸದೇ ಕೆಲವು ಭಾಗ್ಯಗಳು ಒಲಿದುಬಂದಿವೆ. ಅದ್ಯಾರೋ ದೊಡ್ಡವರು ಕನಸು ಕಾಣುವುದು ಕಲಿಯಿರಿ. ನಂತರ ಅದನ್ನು ನನಸು ಮಾಡಲು ಯತ್ನಿಸಿ ಎಂದಿದ್ದಾರಂತೆ. ಆದರೆ ಕಂಡ ಕನಸು ಪ್ರಯತ್ನವಿಲ್ಲದೇ ನನಸಾದಾಗ ಅದನ್ನು ಬಯಸದೇ ಬಂದ ಭಾಗ್ಯ ಅನ್ನಬಹುದೇನೊ.
ಅದೊಂದು ದಿನ ಮಧ್ಯಾಹ್ನದ ಹೊತ್ತಿಗೆ ಕಚೇರಿಯಿಂದ ಕೃಷ್ಣ ಭಟ್ಟರು ಫೋನ್ ಮಾಡಿ "ಭಟ್ರೆ ಹೊಸ ವರುಷಕ್ಕೆ ನಿಮ್ಮ ಕನಸೇನು?' ಅಂದರು. ನಿಜಕ್ಕೂ ನಾನು ಯಾವ ಕನಸೂ ಕಂಡಿರಲೇ ಇಲ್ಲ. ಸಾಪ್ತಾಹಿಕಕ್ಕೆ ಕೇಳ್ತಿದಾರೆ ಅಂದರು. ತಕ್ಷಣಕ್ಕೆ ಮನಸ್ಸಿಗೆ ಅನ್ನಿಸಿದ್ದು ಬರೆದುಕೊಟ್ಟೆ. ಅದು ಪ್ರಕಟವೂ ಆಯ್ತು.
ನಾನೋ ಕಂಡ ಅಥವಾ ಹೇಳಿಕೊಂಡ ಕನಸು ನನಸು ಮಾಡಲು ಒಂಚೂರು ಯತ್ನಿಸಿರಲಿಲ್ಲ. ಅಷ್ಟರಲ್ಲಿ ಒಂದು ದಿನ ಆರ್ ಟಿಒ ಇನ್ಸ್ಪೆಕ್ಟರ್ ಕೇಶವ ಧರಣಿ ಸಿಕ್ಕಿದವರು "ನೀವು ಅವತ್ತು ಅಪಘಾತಗಳ ಬಗ್ಗೆ ಸರಣಿ ಲೇಖನ ಬರೆದಿದ್ದಿರಲ್ಲ. ಕೆಲವು ನನ್ನಲ್ಲಿವೆ. ಎಲ್ಲವೂ ಇದ್ದರೆ ಕೊಡಿ. ಈ ಬಾರಿಯ ರಸ್ತೆ ಸುರಕ್ಷತಾ ಸಪ್ತಾಹದ ಸಮಾರೋಪ ಸಮಾರಂಭದಲ್ಲಿ ಪುಸ್ತಕ ಮಾಡಿ ಬಿಡುಗಡೆ ಮಾಡುವ. ಲೇಖನಗಳು ತುಂಬಾ ಚೆನ್ನಾಗಿದ್ದವು' ಅಂದರು. ಹುಂ. ಅಂದೆ. ಹಾಗಂದ ತಪ್ಪಿಗೆ ಹಳೆಯ ಲೇಖನಗಳನ್ನೆಲ್ಲ ಸ್ವಲ್ಪ ತಿದ್ದಿ, ಅಪ್ ಗ್ರೇಡ್ ಮಾಡಿ ಕೊಟ್ಟೆ. ಪುಸ್ತಕವಾಗಿ ಬಿಡುಗಡೆಯೂ ನಡೆದುಹೋಯಿತು. ಸರಿಯಾಗಿ ನನಗೂ ಗೊತ್ತಾಗದೆ!
ಇವತ್ತು ಗೋಪಾಲಕೃಷ್ಣ ಕುಂಟಿನಿ ಫೋನ್ ಮಾಡಿ "ಭಟ್ರೆ ನಿಮ್ಮ ಬ್ಲಾಗಿನ ಬಗ್ಗೆ ಕೆಂಡಸಂಪಿಗೆ ಡಾಟ್ ಕಾಂನಲ್ಲಿ ಚೆನ್ನಾಗಿ ಬರೆದಿದ್ದಾರೆ' ಅಂದರು. ನೋಡಿದರೆ ಹೌದು. ಏನೋ ನಮ್ಮ ತೆವಲಿಗೆ ಪುರುಸೊತ್ತಾದಾಗ ಬರೆದು ಬ್ಲಾಗಿಸುತ್ತೇವೆ. ಪಾಪ ನಾಲ್ಕೈದು ಜನ ಓದಿ ಕಾಮೆಂಟಿಸ್ತಾರೆ ಅಂದ್ಕೊಡಿದ್ದೆ. ಆದರೆ ಈ ಅನಿರೀಕ್ಷಿತ ಹೊಗಳಿಕೆ ಬಂದಿದೆ. ಕೆಂಡಸಂಪಿಗೆ ಡಾಟ್ ಕಾಂ ಮಾಲಿಕರಿಗೆ ನಾನು ಋಣಿ. ನನ್ನ ಬ್ಲಾಗಿನ ಬಗ್ಗೆ ಬರೆದಿದ್ದಕ್ಕೆ, ನನ್ನನ್ನು ಹುರಿದುಂಬಿಸಿದ್ದಕ್ಕೆ.
ಅವರು ನನ್ನ ಬ್ಲಾಗಿನ ಮೇಲೆ ಅಷ್ಟು ಬರೆದ ಮೇಲೂ ನಾನು ತುಂಬ ದಿನ ಬ್ಲಾಗು ಅಪ್ ಡೇಟ್ ಮಾಡದಿದ್ದರೆ ಹೇಗೆ? ಅನ್ನಿಸಿ ಭಾರೀ ಹುರುಪಿನಲ್ಲಿ ಕುಂತ ಮೆಟ್ಟಿನಲ್ಲಿ 3 ಲೇಖನ ಬರೆದು ಹಾಕಿದ್ದೇನೆ. ಓದಿಕೊಳ್ಳುವ ಇಷ್ಟ-ಕಷ್ಟ ನಿಮಗಿರಲಿ.

ಒಂದು ಬದಿ ಕಡಲು: ಸಮಯ ಮಾಡಿಕೊಳ್ಳಿ ಓದಲು

ಚುಕು ಬುಕು ರೈಲು ಹಳಿಗಳ ಮೇಲೆ ಗಡಗಡ ಸದ್ದು ಮಾಡುತ್ತ ಮಂಗಳೂರಿನಿಂದ ಗೋವೆಯ ಕಡೆಗೆ ಹೊರಟಿತ್ತು. ರೈಲಿನಲ್ಲಿ ಹೋಗುವಾಗ ಒಂದು ಬದಿಗೆ ಕಡಲೇ! ನಾನು ರೈಲಿನಲ್ಲಿ ಕುಳಿತು ವಿವೇಕ ಶ್ಯಾನುಭಾಗರ ಒಂದು ಬದಿ ಕಡಲು ಓದುತ್ತಿದ್ದೆ.
ನನ್ನ ಊರಿಗೆ ಹತ್ತಿರದಲ್ಲೇ ಇರುವ ಹೊನ್ನಾವರ ಒಂದು ಬದಿ ಕಡಲು ಕಾದಂಬರಿ ನಡೆಯುವ ಸ್ಥಳವಾದ್ದರಿಂದಲೋ ಏನೋ ಇಲ್ಲೇ ಎಲ್ಲೋ ನನ್ನ ಮನೆಯ ಪಕ್ಕದಲ್ಲಿಯೇ ಈ ಘಟನೆಗಳು ಸಂಭವಿಸಿದವೇನೋ ಅನ್ನಿಸಿಬಿಟ್ಟಿತು. ರೈಲಿನಲ್ಲಿ ಊರಿಗೆ ಹೋಗಿ, ಎರಡು ದಿನ ಬಿಟ್ಟು ಬರುವಾಗ ಹೀಗೆ ರೈಲಿನಲ್ಲಿಯೇ ವಿವೇಕ ಶ್ಯಾನುಭಾಗರ ಒಂದು ಬದಿ ಕಡಲು ಓದಿ ಮುಗಿಸಿದ್ದೇನೆ.
ಊರಿಗೆ ಹೋಗಿ ಬಂದ ಖುಶಿ ಒಂದೆಡೆಯಾದರೆ, ಕಾದಂಬರಿ ಓದಿದ ತೃಪ್ತಿ ಇನ್ನೊಂದೆಡೆ. ಹೀಗಾಗಿಯೇ ಊರಿಗೆ ಹೋಗಿ ಬಂದರೆ ಮನಸ್ಸು ತುಂಬ ಖುಶ್ ಖುಶ್!
ವಿವೇಕ ಶ್ಯಾನುಭಾಗರು ಸಾಕಷ್ಟು ಬರೆದಿದ್ದಾರೆ. ಸತ್ಯ ಹೇಳ್ತೇನೆ. ನಾನು ಉತ್ತರ ಕನ್ನಡದವನಾಗಿಯೂ ಅವರ ಒಂದೇ ಒಂದು ಪುಸ್ತಕ ಓದಿರಲಿಲ್ಲ. ಒಂದು ಬದಿ ಕಡಲು ಓದಿದೆ ನೋಡಿ, ಅವರು ಇಷ್ಟವಾಗಿಬಿಟ್ಟರು. ಕಾದಂಬರಿಯಂತೆ!
ಕಾದಂಬರಿಯುದ್ದಕ್ಕೂ ಉತ್ತರ ಕನ್ನಡದ ಜನಜೀವನ, ಅವರ ವರ್ತನೆಗಳೂ, ಎರಡೂ ಮನೆಯ ನಡುವೆ ಪಾಗಾರವೂ, ಬಾಂದುಕಲ್ಲೂ ಇರದ ಗಡಿಗಳು, ಅವರ ಜಗಳಗಳು, ಅಲ್ಲೇ ಒಳಗಿನ ಪ್ರೀತಿ ಎಲ್ಲವೂ ಸಹಜವಾಗಿ ಕಾದಂಬರಿಯಲ್ಲಿ ಬೆರೆತುಹೋಗಿದೆ. ಉತ್ತರ ಕನ್ನಡ ಕೆಲವು ಅಪರೂಪದ ಶಬ್ದಗಳು ಕೂಡ ಕಾದಂಬರಿಯಲ್ಲಿ ನಿಮಗೆ ಲಭ್ಯ.
ನೀವು ಉತ್ತರ ಕನ್ನಡದವರಾಗಿದ್ದರೂ ಈ ಕಾದಂಬರಿ ಓದಿ. ಉತ್ತರ ಕನ್ನದವರಾಗಿರದಿದ್ದರೂ ಅದನ್ನು ಓದಿ!! ನೀವು ಉತ್ತರ ಕನ್ನಡದವರೇ ಆಗಿದ್ದರೆ ನಿಮಗೆ ಕಾದಂಬರಿ ಆಪ್ತ ಅನ್ನಿಸೀತು. ನೀವು ಉತ್ತರ ಕನ್ನಡದವರಲ್ಲದೇ ಇದ್ದಲ್ಲಿ ಕಾದಂಬರಿ ನಿಮಗೆ ಉತ್ತರ ಕನ್ನಡದ ಜನ ಜೀವನದ ಪರಿಚಯ ಮಾಡಿಸೀತು. ಕಾದಂಬರಿ ಓದಿದವನಾಗಿ ಧೈರ್ಯದಿಂದ ಹೇಳಬಲ್ಲೆ ಒಂದು ಬದಿ ಕಡಲು ನಿಮಗೆ ಖಂಡಿತ ಇಷ್ಟವಾಗುತ್ತದೆ.

ರೇಸ್: ನೋಡಿದ್ರೆ ಆಗಲ್ಲ ಲಾಸ್!

ಒಂದೆಡೆ ಸಂತೋಷ. ಇನ್ನೊಂದೆಡೆ ದುಗುಡ!
ಒಂದೊಳ್ಳೆ ಸಿನಿಮಾ ನೋಡಿದ ಸಂತೋಷ. ಕನ್ನಡದಲ್ಲಿ ಇಂತಹ ಸಿನಿಮಾಗಳು ಯಾಕೆ ಬರ್ತಾ ಇಲ್ಲ ಎಂಬ ಕೊರಗು! ಹಿಂದಿಯ ರೇಸ್ ಸಿನಿಮಾ ನೋಡಿ ಹೆಂಡತಿಯ ಕೈ ಹಿಡಿದು ಹೊರಬರುತ್ತಿದ್ದರೆ ಮನಸ್ಸಿನಲ್ಲಿ ದ್ವಂದ್ವ!!
ಅದೆಷ್ಟು ಚೆನ್ನಾಗಿದೆ ಚಿತ್ರ. ಕಥೆಯೇನು ಅಂತಹ ಮಹಾನ್ ಅಲ್ಲ. ಆದರೆ ಚಿತ್ರದ ತುಂಬ ಅದ್ಭುತ ತಿರುವುಗಳು, ಅನೂಹ್ಯ ಒಳಸುಳಿಗಳು, ಸಖತ್ ಸ್ಟಂಟ್‌ಗಳು, ಎಲ್ಲೂ ಅನಗತ್ಯ ಎನಿಸದ ದೃಶ್ಯಗಳು ಚಿತ್ರವನ್ನು ಉಸಿರು ಬಿಗಿ ಹಿಡಿದು ನೋಡುವಂತೆ ಮಾಡಿವೆ. ರೇಸ್ ಸಿನಿಮಾ ಪೋಸ್ಟರ್‌ನಲ್ಲಿ ಬಿಪಾಶಾ (‘ಬಿ’ಪಿ ಏರಿಸಿ ಜೀವಕ್ಕೆ ‘ಪಾಶಾ’ ಹಾಕುವವಳು ಎನ್ನಬಹುದೇ?) ಪೋಸ್ಟರ್ ನೋಡಿ ಸಿನಿಮಾಕ್ಕೆ ಹೋದರೂ, ಹೊರಬರುವಾಗ ಅದೊಂದು ಬಿಟ್ಟು ಉಳಿದೆಲ್ಲ ನಿಮ್ಮ ಮನಸ್ಸಿನಲ್ಲಿ ಅಚ್ಚೊತ್ತಿರುತ್ತದೆ. ಸಿನಿಮಾ ನೋಡಿ ಹೊರಬಂದವರು ಅಬ್ಬಾಸ್ ಮಸ್ತಾನ್‌ಗೆ ಒಂದು ಶಬ್ಬಾಸ್ ಕೊಡ್ತಾರೆ. ಆರಂಭದಿಂದ ಅಂತ್ಯದವರೆಗೆ ಆಸಕ್ತಿ ಕೆರಳಿಸುವಂತೆ ಸಿನಿಮಾ ನಿರೂಪಿಸುತ್ತ ಹೋಗಿದ್ದಾನೆ ನಿರ್ದೇಶಕ. ಒಂದೆರಡು ಹಾಡುಗಳು ಮಾತ್ರ ಹೆಚ್ಚಿನಿಸುವಂತಿದ್ದವು.
ಇದು ಖಂಡಿತ ಸಖತ್ ಸಿನಿಮಾ. ಸಮಯ ಸಿಕ್ಕರೆ ನೋಡಿ. ರೇಸ್ ಸಿನಿಮಾ ನೋಡಿದರೆ ಖಂಡಿತ ಆಗಲ್ಲ ಲಾಸ್!
ಒಳ್ಳೆ ಸಿನಿಮಾ ನೋಡಿಯಾದ ಮೇಲೆ ನಿಂಗ್ಯಾಕಪ್ಪ ದುಗುಡ ಅಂತ ಕ್ಯಾತೆ ತೆಗಿಬೇಡಿ. ಇತ್ತೀಚೆಗೆ ರವಿ ಬೆಳೆಗೆರೆ ಅಭಿನಯದ ವಾರಸ್ದಾರ ನೋಡ್ದೆ. ನಾನು ಬೆಳೆಗೆರ ಅವರ ಅಭಿಮಾನಿ. ಅವರ ಎಲ್ಲ ಕಾದಂಬರಿ ಓದಿ ಮೆಚ್ಚಿದವನು. ತುಂಬ ಆಸೆಯಿಂದ ವಾರಸ್ದಾರಕ್ಕೆ ಹೋದರೆ, ಆದದ್ದು ನಿರಾಸೆ!
ನಿಜಕ್ಕೂ ಚಿತ್ರ ಚೆನ್ನಾಗಿಲ್ಲ. ಬೆಳೆಗೆರೆ ಅವರ ಮೇಲಿನ ಪ್ರೀತಿಯಿಂದಲೋ ಏನೋ ಮಾಧ್ಯಮಗಳು ಚಿತ್ರವನ್ನು ತೆಗಳಿಲ್ಲ. ಆದರೆ ಹೊಗಳಲೂ ಇಲ್ಲ! ಇಲ್ಲಿ ಬೆಳೆಗೆರೆಯ ತಪ್ಪಿಲ್ಲ. ಅವರ ನಟನೆ ಗುಡ್. ಆದರೆ ನಿರ್ದೇಶಕ ಗುರುದೇಶಪಾಂಡೆ ಎಡವಿದ್ದಾರೆ. ಅಷ್ಟೇ ಅಲ್ಲ ಎಡವಿ ಮುಗ್ಗರಿಸಿ ಬಿದ್ದಿದ್ದಾರೆ!
ವಾರಸ್ದಾರ ಹಿಂದಿಯ ಸರ್ಕಾರ್ ಸಿನಿಮಾ ಹೋಲುತ್ತದೆ. ಸರ್ಕಾರ್ ಸಿನಿಮಾಕ್ಕೆ ಹೋಲಿಸದೇ ಇದ್ದರೂ ವಾರಸ್ದಾರ ಚೆನ್ನಾಗಿಲ್ಲ. ಇನ್ನು ಸರ್ಕಾರ್ ನೋಡಿ ಹೋದರಂತೂ ಕತೆ ಮುಗಿದಂತೆಯೇ. ಸರ್ಕಾರ್ ಸಿನಿಮಾದಲ್ಲಿ ಅಮಿತಾಬ್ ನಟನೆ, ಉಂಟೋ ಇಲ್ಲವೋ ಎಂಬಷ್ಟೇ ಮಾತು, ಕೇವಲ ಕೈ, ಬಾಯಿ, ಕಣ್ಣು ಇಷ್ಟನ್ನೇ ತೋರಿಸುವ ಕ್ಯಾಮರಾ ವರ್ಕ್, ಭೂಗತ ಜಗತ್ತಿನ ಒಳಸುಳಿಗಳು ಚೆನ್ನಾಗಿ ಬಿಂಬಿತವಾಗಿವೆ. ರವಿ ಬೆಳೆಗಯಂತಹ ಒಬ್ಬ ಭೂಗತ ಲೋಕದ ಪರಿಚಯ ಇದ್ದವರಾಗಿ, ಭೂಗತ ಲೋಕದಲ್ಲಿ ಗೆಳೆಯರನ್ನು ಹೊಂದಿದವರಾಗಿ ವಾರಸ್ದಾರ ಚಿತ್ರವನ್ನು ಇನ್ನಷ್ಟು ಚೆನ್ನಾಗಿ ಮಾಡಬಹುದಿತ್ತು. ಆದರೆ ಬೆಳೆಗೆರೆ ಅಷ್ಟಾಗಿ ಅತ್ತ ತಲೆ ಹಾಕದಿರುವುದು ಇದಕ್ಕೆ ಕಾರಣವೂ ಇರಬಹುದು. ಅದಕ್ಕೇ ಹೇಳಿದ್ದು ನಿರ್ದೇಶಕ ಎಡವಿದ್ದಾನೆ ಎಂದು. ಚಿತ್ರ ನೋಡಿ ನಿಜಕ್ಕೂ ಬೇಜಾರಾಯಿತು.
ಗುರು ದೇಶಪಾಂಡೆ ಇನ್ನು ಮುಂದಾದರೂ ಸುಧಾರಿಸಿಕೊಳ್ಳಲಿ. ಒಳ್ಳೆ ಚಿತ್ರ ನೀಡಲಿ. ಅದನ್ನು ಕನ್ನಡದ ಜನ ನೋಡಲಿ.

Sunday, March 09, 2008

ಅಂಚಿ, ಇಂಚಿ ಎಲ್ಲಿ ಹೋದರೂ ಬೇಕು ಸಂಚಿ!

ಸಂಚಿ! ಅಲಿಯಾಸ್ ಚಂಚಿ!! ಯಾನೆ ಕವಳ್ಚಂಚಿ!!!
ಉತ್ತರ ಕನ್ನಡದವರಿಗೆ ಈ ಶಬ್ದ ಚಿರಪರಿಚಿತ. ಕವಳ ಸಂಚಿ ಎಂಬುದು ಉತ್ತರ ಕನ್ನಡದ ಕರಾವಳಿಯಲ್ಲಿರುವ ಹಾಲಕ್ಕಿ ಜನಾಂಗದವರ ದೇಹದ್ದೇ ಒಂದು ಅವಿಭಾಜ್ಯ ಅಂಗ!
ಅಂಗಿ ಇಲ್ಲದಿದ್ದರೂ ನಡೆದೀತು. ಸಂಚಿ ಇಲ್ಲದೇ ಸಾಧ್ಯವಿಲ್ಲ. ಮುಂಡು ಹರಿದಿದ್ದರೂ ಆದೀತು. ಸಂಚಿ ಸರಿಯಾಗಿ ಇರಬೇಕು. ಅಂಚಿ(ಅಲ್ಲಿ), ಇಂಚಿ (ಇಲ್ಲಿ) ಎಲ್ಲೇ ಹೋದರೂ ಅವರ ಸೊಂಟಕ್ಕೆ ಸಂಚಿ ಇರಲೇಬೇಕು. ಪ್ಯಾಂಟು ಹೊಲಿದು, ಉಳಿದ ಬಟ್ಟೆಯಿಂದ ಸಂಚಿ ಮಾಡುವುದು ಹೆಚ್ಚು ಜನಪ್ರಿಯ.
ಇದರಲ್ಲಿ ಒಂದು ಸುಣ್ಣದ ಡಬ್ಬ. ಒಂದಷ್ಟು ವೀಳ್ಯದೆಲೆ. ೩-೪ ಅಡಕೆ. ೧ ತಂಬಾಕಿನ ಎಸಳು. ಇವಿಷ್ಟು ಇರಲೇಬೇಕು. ಇಲ್ಲದಿದ್ದರೆ ಸಂಚಿಗೆ ಮರ್ಯಾದೆಯಿಲ್ಲ. ಬೆಲೆಯೂ ಇಲ್ಲ.
ಇತ್ತೀಚೆಗೆ ಊರಿಗೆ ಹೋಗುವಾಗ ರೈಲಿನಲ್ಲಿ ಕಿಟಕಿಯ ಹೊರಗೆ ಕಣ್ಣು ನೆಟ್ಟು ಕುಳಿತಿದ್ದಾಗ ಹೊನ್ನಾವರ ಸಮೀಪ ಒಬ್ಬ ಸಂಚಿ ಹಿಡಿದು ಹೋಗುವುದು ಕಾಣಿಸಿತು. ಪಕ್ಕದಲ್ಲಿದ್ದ ಹೆಂಡತಿಗೆ ಸಂಚಿಯ ಕುರಿತು ಹೇಳಿದೆ. ಆಕೆ ಕನ್ನಡ ಎಂ.ಎ. ಹಾಗಾಗಿ ಸಂಚಿ ಎಂದ ಕೂಡಲೆ ಆಕೆಗೆ ಸಂಚಿ ಹೊನ್ನಮ್ಮ ನೆನಪಾದಳು.
ನೋಡಿ ಎಲ್ಲಿಂದೆಲ್ಲಿಯ ಸಂಬಂಧ!
ಎಲ್ಲಿಯ ಹಾಲಕ್ಕಿ ಜನಾಂಗದವರ ಕವಳ ಸಂಚಿ, ಎಲ್ಲಿ ‘ಹದಿಬದೆಯ ಧರ್ಮ’ ಬರೆದ ಸಂಚಿ ಹೊನ್ನಮ್ಮ!
ಸಂಬಂಧ ಇದೆ! ಅದು ಸಂಚಿಯದ್ದು. ರಾಜ ಮಹಾರಾಜರೂ ಕವಳ ಹಾಕುತ್ತಿದ್ದರು. ಥೂ! ಅಲ್ಲ ವೀಳ್ಯ ಹಾಕುತ್ತಿದ್ದರು. ಅದಕ್ಕೆ ಅಗತ್ಯ ಪರಿಕರಗಳು ಸಂಚಿಯಲ್ಲಿ ಇರುತ್ತಿದ್ದವು. ಅದನ್ನು ಹಿಡಿದುಕೊಳ್ಳಲು ಒಬ್ಬ ಆಳು ಬೇಕಲ್ಲ. ಆ ಕೆಲಸಕ್ಕೆ ಹೊನ್ನಮ್ಮ ಇದ್ದಳಂತೆ!
ಉತ್ತರ ಕನ್ನಡದ ಕರಾವಳಿಯಲ್ಲಿ ಸಂಚಿ ಚಂಚಿಯಾಗಿದೆ. ನನ್ನ ಅಮ್ಮ ಪ್ರಾಥಮಿಕ ಶಾಲೆ ಶಿಕ್ಷಕಿಯಾಗಿ ಸೇರುವ ಮೊದಲು ಮನೆಯಲ್ಲೇ ಹೊಲಿಗೆ ಮಾಡುತ್ತಿದ್ದಳು. ಆಗೆಲ್ಲ ಆಳುಗಳದ್ದು (ಕೆಲಸಕ್ಕೆ ಬರುವವರದ್ದು) ಒಂದೇ ವರಾತ. ಅಬ್ಬೇರೆ (ಹೆಂಗಸರನ್ನು ಕೆಲಸದವರು ಕರೆಯುವುದೇ ಹೀಗೆ. ಗಂಡಸರು ಅಥವಾ ಮನೆಯ ಯಜಮಾನರನ್ನು ವಡಿದೀರು ಎಂದು ಕರೆಯುವುದು ರೂಢಿ) ಒಂದು ಚೆಂಚಿ ಹೊಲ್ಕೊಡ್ರಾ! ಅಬ್ಬೇರು ಹೊಲಿದು ಕೊಡುವ ಒಂದು ಚೆಂಚಿಗಾಗಿ ಅವರು ಯಾವ ಕೆಲಸ ಮಾಡಲೂ ಸಿದ್ಧರಿದ್ದರು. ಹೊಸ ಚೆಂಚಿ ಅವರ ಮುಖದಲ್ಲಿ ಅಪ್ಪ ಚಾಕಲೇಟು ತಂದಾಗ ಮಕ್ಕಳ ಮುಖದಲ್ಲಿ ಉಂಟಾಗುವಷ್ಟು ಸಂತಸ ಮೂಡಿಸುತ್ತಿದ್ದುದು ನಂಗೀಗಲೂ ನೆನಪಿದೆ. ಚಂಚಿ ಹೊಲಿದುಕೊಟ್ಟ ಅಬ್ಬೇರಿಗೆ ಅವರ ನಿಷ್ಟೆ ಒಂದು ಕೆ.ಜಿ. ಜಾಸ್ತಿಯೇ.
ಕಾರಂತರ ಜ್ಞಾನಪೀಠ ವಿಜೇತ ಕೃತಿ ಮೂಕಜ್ಜಿಯ ಕನಸಿನಲ್ಲೂ ಸಂಚಿಯ ಪ್ರಸ್ತಾಪ ಬರುತ್ತದೆ. ನೋಡಿ ಎಲ್ಲಿಯ ಸಂಚಿ, ಎಲ್ಲಿಯ ಜ್ಞಾನಪೀಠ ಪ್ರಶಸ್ತಿ ಪಡೆದ ಕಾದಂಬರಿ! ಅಲ್ಲೂ ಸಂಚಿಗೆ ಬೆಲೆ ಇದೆ.
ರಾಜ ಮಹಾರಾಜರೂ ಕವಳ ಹಾಕುತ್ತಿದ್ದರು ಮತ್ತು ಅವರು ಕವಳದ ವಸ್ತುಗಳನ್ನು ಇರಿಸಿಕೊಳ್ಳುತ್ತಿದ್ದ ಚೀಲವನ್ನೂ ಸಂಚಿ ಎಂದು ಕರೆಯುತ್ತಿದ್ದರು. ಆ ಸಂಚಿ ಹಿಡಿದುಕೊಳ್ಳುತ್ತಿದ್ದ ಹೊನ್ನಮ್ಮ ಒಂದು ಕೃತಿಯನ್ನೂ ರಚಿಸಿದ್ದಾಳೆ ಎಂಬುದು ಕವಳದ ಸಂಚಿ ಇರಿಸಿಕೊಳ್ಳುವವರಿಗೆಲ್ಲ ನಿಜಕ್ಕೂ ಹೆಮ್ಮೆಯ ಸಂಗತಿ. ಆದರೆ ಈ ಸಂಗತಿ ಅವರಿಗೆ ಗೊತ್ತಿಲ್ಲ! ಆದರೂ ಅವರಿಗೆ ಸಂಚಿ ಹೊಂದುವುದು ಹೆಮ್ಮೆಯ ಸಂಗತಿಯೇ ಆಗಿದೆ ಎಂಬುದು ನಿಜಕ್ಕೂ ಹೆಮ್ಮೆಯ ಸಂಗತಿ!!

Friday, March 07, 2008

ಮಂಜು ಮುಸುಕಿದ ಹಾದಿಯಲ್ಲಿ...

ಇಬ್ಬನಿ ತಬ್ಬಿದ ಇಳೆಯಲಿ
ರವಿ ತೇಜ ಕಣ್ಣ ತೆರೆದು
ಬಾನಕೋಟಿ ಕಿರಣ
ಇಳಿದು ಬಂತು ಭೂಮಿಗೆ...

೩ ದಿನದಿಂದ ಮಂಗಳೂರಿನಲ್ಲೂ ಮಂಜು ಸುರಿವ ಮುಂಜಾವು. ಮಂಗಳೂರಲ್ಲಿ, ಅದೂ ಮಾರ್ಚ್ ತಿಂಗಳಲ್ಲಿ ಮಂಜು ಸುರಿಯುವುದು ಅಪರೂಪದಲ್ಲಿ ಅಪರೂಪ. ಫೆಬ್ರವರಿಯಲ್ಲೇ ಮಂಗಳೂರಿನಲ್ಲಿ ಬೆವರು ಸುರಿಯುವ ಸಮಯ. ಆದರೆ ಈ ವರ್ಷ ಮಾರ್ಚ್‌ನಲ್ಲೂ ಮಂಜು ಸುರಿಯುವ ಸಮಯ!
ಮಂಜು ಮುಸುಕಿದ ಹಾದಿಯಲ್ಲಿ ಬೆಳ್ಳಂಬೆಳಗ್ಗೆ ಸ್ವೆಟರ್ ಹಾಕಿ, ಮಫ್ಲರ್ ಸುತ್ತಿ ವಾಕಿಂಗ್ ಮಾಡುವ ಮೋಜು ಮಡಿಕೇರಿಯವರಿಗೆ ಹಾಗೂ ಘಟ್ಟದ ಮೇಲಿನವರಿಗೆ ಮಾತ್ರ ಸಾಧ್ಯ. ಘಟ್ಟದ ಮೇಲಿನವರಿಗೆ ಘನಘೋರ ಚಳಿಗಾಲ ಇರುವಾಗ ಮಂಗಳೂರಿನಲ್ಲಿ ಬೆಳಗ್ಗೆ ಮಾತ್ರ ಚುಮುಚುಮು ಚಳಿ. ಅದನ್ನು ಚಳಿ ಅನ್ನುವುದಕ್ಕಿಂತ ತಂಪು ಎನ್ನುವುದು ಹೆಚ್ಚು ಸೂಕ್ತ. ೯.೦೦ ಗಂಟೆಯ ನಂತರ ಸಖತ್ ಹಾಟ್ ಮಗಾ!
ಈ ಬಾರಿ ಪರಿಸ್ಥಿತಿ ಬದಲಾಗಿದೆ. ಚಳಿ ಇತ್ತು. ಈಗ ನೋಡಿದರೆ ಮಂಜು ಮುಸುಕಿದ ಹಾದಿಯೂ!
ಗೆಳೆಯ ವೇಣು ಕರಾವಳಿಯವನೇ. ಆದರೆ ಅವನಿಗೆ ಕಾಡು ತಿರುಗುವ ಹವ್ಯಾಸ. ಹಾಗಾಗಿ ಅವರು ಕರಾವಳಿಯಲ್ಲಿದ್ದೂ ತಮ್ಮ ಬ್ಲಾಗಿಗೆ ಕಾಶ್ಮೀರದಲ್ಲಿರೋರ ಥರ ‘ಮಂಜು ಮುಸುಕಿದ ದಾರಿಯಲ್ಲಿ’ ಎಂಬ ಹೆಸರು ಕೊಟ್ಟಿದ್ದಾನೆ. ಪ್ರಕೃತಿ ಮಂಗಳೂರಿನ ದಾರಿಗೇ ಮಂಜು ಮುಸುಕುವ ಮೂಲಕ ಅವರ ಆಸೆಯನ್ನೂ ಈಡೇರಿಸಿದೆ.
ಅಣ್ಣ ಗೋಪಾಲಕೃಷ್ಣ ಕುಂಟಿನಿ ನಾಲ್ಕೇ ಸಾಲು ಕವನಗಳನ್ನು ಬರೆಯುತ್ತಿದ್ದಾರೆ. ಕವಿಯಾಗುವ ಅಪಾಯದ ಮುನ್ಸೂಚನೆ ತೋರುತ್ತಿದ್ದಾರೆ. ಕೆಲವು ನನಗೆ ಅರ್ಥವಾಗದಿದ್ದರಿಂದ ಅವುಗಳು ಅಧ್ಬುತ ಎನ್ನಲು ಅಡ್ಡಿಯಿಲ್ಲ. ಇನ್ನು ಹಲವು ಅರ್ಥವಾಗಿದ್ದರಿಂದ ನಿಜಕ್ಕೂ ಅದ್ಭುತ ಅನ್ನಿಸುತ್ತವೆ. ಅವರೇ ಬರೆದ ಇಬ್ಬನಿ ಕುರಿತ ನಾಲ್ಕು ಸಾಲು ಹೀಗಿದೆ...
ಎಲೆಗಳಲ್ಲಿದ್ದ ರಾತ್ರಿ ಇಬ್ಬನಿ
ಕತ್ತಲಿನ ಅಚ್ಚರಿಗಳನ್ನು
ಹಗಲಿಗೆ ಹೇಳದೆ
ಆರಿಹೋಯಿತು.... ಎಂಥ ಚಂದ, ಎಂಥ ಅಂದ!
ಜಿ.ಪಿ. ರಾಜತ್ನಂ ಅವರು ಮಡಿಕೇರಿ ಮೇಲೆ ಮಂಜು ಕವನದಲ್ಲಿ...
ಮಡಿಕೇರಿ ಮೇಲ್ ಮಂಜು
ಭೂಮಿನ್ ತಬ್ಬಿದ ಮೋಡಿದ್ದಂಗೆ
ಬೆಳ್ಳಿ ಬಳಿದಿದ್ ರೋಡಿದ್ದಂಗೆ
ಸಾಫಾಗಿ ಅಳ್ಳಾಟಿಟ್ಟಿಲ್ದಂಗೆ
ಮಡಗಿದ್ದಲ್ಲೆ ಮಡಗಿದ್ದಂಗೆ.... ಎಂದು ಬರೆಯುತ್ತಾರೆ.
ಈ ಎಲ್ಲ ಕವಿತೆಗಳನ್ನು ನೆನಪಿಗೆ ತರುವಂತೆ ಮಂಗಳೂರಿಗೂ ಮಂಜು ಕವಿದಿದೆ. ಮಂಗಳೂರನ್ನೇ ಬಿಳಿ ಮೋಡ ತಬ್ಬಿದ ಹಾಗೆ, ರಸ್ತೆಗಳಿಗೆಲ್ಲ ಬೆಳ್ಳಿ ಮೆತ್ತಿದ ಹಾಗೆ...
ಮಂಗಳೂರಿಗೂ ಕವಿದ ಮಂಜು ನನಗೆ ಮುದ ನೀಡಿತು. ಇದೆಲ್ಲದರ ಜತೆ ನನ್ನ ಕೆಲವು ಹಳೆ ನೆನಪುಗಳನ್ನು ಸ್ಮೃತಿ ಪಟಲದ ಎದುರು ತಂದು ನಿಲ್ಲಿಸಿತು. ನಾನು ಜರ್ನಲಿಸಂ ಕಲಿಯುವಾಗ ದಿಲ್ಲಿ ಸೇರಿದಂತೆ ಉತ್ತರ ಭಾರತಕ್ಕೆ ಪ್ರವಾಸ ತೆರಳಿದ್ದೆವು. ದೆಹಲಿಯಲ್ಲಿ ದಟ್ಟವಾದ ಮಂಜು. ನಾವು ಒಂದು ರಾತ್ರಿ ಒಳಗೆ ಕುಳಿತು ಹರಟುತ್ತಿದ್ದಾಗ ನನ್ನ ಸಹಪಾಠಿ ಲಕ್ಷ್ಮಣ ನಾಯಕ ಒಂದು ಕವಿತೆ ಬರೆದಿದ್ದೇನೆ ಎಂದ.
ಇಬ್ಬನಿ
ನೀನೊಂದು ಕಂಬನಿ... ಹೀಗೆ (ಈಗ ಸರಿಯಾಗಿ ನೆನಪಿಲ್ಲ) ಒಟ್ಟಾರೆ ಅಂತ್ಯ ಪ್ರಾಸದಲ್ಲಿ, ಕೇಳಲು ತುಂಬ ತ್ರಾಸವಾಗಿ ಸಾಗಿತ್ತು. ನಾನು ಮತ್ತು ಆಪ್ತ ಗೆಳೆಯ ಪ್ರಸನ್ನ ಹಿರೇಮಠ ಕೇಳಿ ಒಳಗೊಳಗೇ ನಕ್ಕರೂ, ತುಂಬ ಚೆನ್ನಾಗಿದೆ ಎಂದು ಹುರಿದುಂಬಿಸಿ ಎಲ್ಲರೆದರೂ ಕವನ ಓದಲು ಹೇಳಿದವು. ಆತ ಓದಿದ. ಅದರ ಪರಿಣಾಮ ಎಲ್ಲರೂ ನಕ್ಕಿದ್ದಲ್ಲದೆ, ಆತನಿಗೆ ‘ಇಬ್ಬನಿ’ ಎಂದೇ ಕರೆಯಲಾರಂಭಿಸಿದರು. ಪ್ರವಾಸ ಮುಗಿದು ತರಗತಿಗೆ ಬಂದಾಗ ಎಲ್ಲರೂ, ಅವರವರ ಅನುಭವನ ಕಥನ ಹೇಳಬೇಕಿತ್ತು. ಆಗ ಲಕ್ಷ್ಮಣ ನಾಯ್ಕ ವೇದಿಕೆಯ ಮೇಲೆ ಹೋಗಿ ನಿಂತಾಗ ನಾವು ಹಿಂದಿನಿಂದ ‘ಇಬ್ಬನಿ’ ಎಂದು ಕೂಗಿದ್ದೇ ತಡ ಕ್ಲಾಸಿನಲ್ಲಿದ್ದವರ ನಗೆಯ ಅಣೆಕಟ್ಟು ಒಡೆದಿತ್ತು.
ತನ್ನಷ್ಟಕ್ಕೆ ಸದ್ದಿಲ್ಲದೆ, ನಾವು ಬರೆಯದೆ ಹೋದರೆ ಸುದ್ದಿಯೂ ಇಲ್ಲದೆ ಸುರಿಯುವ, ಮೇಸ್ಟ್ರು ಬರುತ್ತಿದ್ದಂತೆ ಸದ್ದಿಲ್ಲದೆ ಸರಿಯಾಗಿ ಕುಳಿತುಕೊಳ್ಳುವ ಮಕ್ಕಳಂತೆ ಸೂರ್ಯ ಬರುತ್ತಿದ್ದಂತೆ ಸದ್ದಿಲ್ಲದೆ ಸರಿದೂ ಹೋಗುವ ಇಬ್ಬನಿ ನಮ್ಮ ಮನಸೊಳಗೆ ಅದಷ್ಟು ನೆನಪಿನ ಹನಿಗಳನ್ನು ಬಿಟ್ಟುಹೋಗಬಲ್ಲದು!
ಚಿತ್ರಗಳು: ಜಿ.ಕೆ. ಹೆಗಡೆ

Wednesday, February 13, 2008

ಅವ್ವ: ಯವ್ವಾ ಯವ್ವಾ ಎಷ್ಟು ಚೆನಾಗೈತವ್ವ!

ಆಡಂಬರವಿಲ್ಲ. ಭಾರೀ ಸುಂದರ ಸೀನುಗಳಿಲ್ಲ. ಅನಗತ್ಯ ಹಾಡುಗಳಿಲ್ಲ. ಡೈಲಾಗುಗಳಂತೂ ನಾವು ನೀವು ಆಡುವ ಮಾತುಗಳೇ.
ಇದಕ್ಕಾಗಿಯೇ ನೀವು ‘ಅವ್ವ’ಳನ್ನೊಮ್ಮೆ ನೋಡಬೇಕು!
ಇವತ್ತು ನಾನು- ಹೆಂಡತಿ ಅವ್ವ ಸಿನಿಮಾ ನೋಡಿ ಬಂದೆವು. ಚೆನ್ನಾಗಿದೆ. ನಾನು ಅವ್ವಳನ್ನು ನೋಡುವ ಆಸಕ್ತಿಯಲ್ಲಿರಲಿಲ್ಲ. ಆದರೆ ನನ್ನ ಹೆಂಡತಿ ಎಂ.ಎ. ಕಲಿಯುವಾಗ ಮುಸ್ಸಂಜೆಯ ಕಥಾ ಪ್ರಸಂಗ ಕಾದಂಬರಿ ಪಠ್ಯವಾಗಿತ್ತು. ಆಕೆ ಸಿನಿಮಾ ನೋಡಲೇಬೇಕು ಅಂದಳು. ಅದಕ್ಕೆ ಹೋದೆ. ಈಗ ಅನ್ನಿಸುತ್ತಿದೆ ಆಕೆ ಸಿನಿಮಾಕ್ಕೆ ಹೋಗಬೇಕೆಂದು ಕಾಟಕೊಡದಿದ್ದರೆ ನಾನು ಒಂದೊಳ್ಳೆ ಸಿನಿಮಾ ತಪ್ಪಿಸಿಕೊಳ್ಳುತ್ತಿದೆ. ಹಾಗಾಗಿ ಹೆಂಡತಿಯರು ಕಾಟಕೊಡುವುದೂ ಕೆಲವು ಬಾರಿ ಒಳ್ಳೆಯದೇ!
ಲಂಕೇಶ ಕತೆಯನ್ನು ಓದುವದಕ್ಕಿಂತ ನೋಡುವುದನ್ನು ಚೆಂದವಾಗಿಸಿದ್ದಾರೆ ಮಗಳು ಕವಿತಾ. ಕೊಂಚ ಹಾಸ್ಯ, ಗಂಭೀರ, ಸಹಜ ಮಿಶ್ರಣದ ಒಂದು ಹಳ್ಳಿಯಲ್ಲಿ ನಡೆಯುವ ಕತೆ. ಒಂದೇ ಪರಿಸರದಲ್ಲಿ ಸಿಗುವ ಸಹಜವಾದ ಪ್ರಕೃತಿ ಸೌಂದರ್ಯವನ್ನು ಚಿತ್ರಕ್ಕೆ ತಕ್ಕನಾಗಿ ಬಳಸಿಕೊಳ್ಳಲಾಗಿದೆ. ಹೊರತು ಸುಂದರ ದೃಶ್ಯಗಳಿಗಾಗಿ ಸಿನಿಮಾ ಬಳಸಿಕೊಳ್ಳಲಾಗಿಲ್ಲ ಎಂಬುದು ಚಿತ್ರದ ಪ್ಲಸ್ ಪಾಯಿಂಟ್. ಹಿಂಭಾಗದಲ್ಲಿ ಬಿಸಿಲಿರುವ ಮರದ ಎದುರು ಒಂದು ದೃಶ್ಯ, ಕೆರೆಯ ಏರಿ ಮೇಲೆ ಸೈಕಲ್ ಓಡಿಸುವುದು ಇವೆಲ್ಲ ಕತೆಗೆ, ಹಳ್ಳಿ ಪರಿಸರಕ್ಕೆ ತಕ್ಕಂತೆ ಮೂಡಿಬಂದಿವೆ. ಎಲ್ಲೂ ಅನಗತ್ಯ ಹಾಡು, ದೃಶ್ಯ ತುರುಕಿಸಲಾಗಿಲ್ಲ.
ಡೈಲಾಗುಗಳು ಸೋಕಾಲ್ಡ್ ಸುಸಂಕೃತರು ಎನಿಸಿಕೊಂಡವರಿಗೆ ಅಸಭ್ಯ, ಅಸಹ್ಯ ಅನಿಸಬಹುದು. ಅದಕ್ಕೆ ಸೆನ್ಸಾರ್ ಮಂಡಳಿ ಚಿತ್ರಕ್ಕೆ ‘ಎ’ ಸರ್ಟಿಪಿಕೇಟ್ ನೀಡಿದೆ! ಆದರೆ ಕತೆ ನಡೆಯುವುದು ಬಯಲು ಸೀಮೆಯಲ್ಲಿ. ಅಲ್ಲಿಯದ್ದೇ ಭಾಷೆ, ಶೈಲಿ ಬಳಸಿಕೊಳ್ಳಲಾಗಿದೆ. ಅಲ್ಲಿ ನಿಮ್ಮವ್ವನ್, ಬೋಳಿ ಮಗನೆ, ಬೋಸುಡಿ ಮಗನೆ ಎಂಬುದೆಲ್ಲ ಬೈಗುಳಗಳಲ್ಲ. ಮಾತಿನ ಆರಂಭದಲ್ಲಿ ಬರುವ ವಿಶೇಷಣಗಳು ಅವು. ಅವನ್ನು ಒಂದು ಜನರ ಭಾಷೆ ಎಂದು ಪರಿಗಣಿಸಿದರೆ ಸಾಕು. ಹಾಗಿರುವುದರಿಂದಲೇ ಚಿತ್ರ ಸಹಜ ಅನ್ನಿಸುವುದು.
ಒಮ್ಮೆ ನಾಯಕನ ಗೆಳೆಯ ಕೊಟ್ಟ ಹಣವನ್ನು ನಾಯಕಿ ಕುಪ್ಪುಸದೊಳಗೆ ಇರಿಸಿಕೊಳ್ಳುತ್ತಾಳೆ. ‘ಅದ್ಕೇ ನೋಡು ಹೆಂಗಸ್ರ ಕೈಲಿ ದುಡ್ಡು ಬೆಚ್ಚಗಿರತ್ತಂತೆ...’ ಅನ್ನುತ್ತಾನೆ ನಾಯಕ ವಿಜಯ್. ಎಲ್ಲರೊಟ್ಟಿಗೆ ಕುಳಿತು ಸಿನಿಮಾ ನೋಡುವಾಗ ಇದು ಸ್ವಲ್ಪ ಇರಿಸುಮುರಿಸು ಉಂಟು ಮಾಡುತ್ತದಾದರೂ, ವಿಷಯ ಸತ್ಯವೇ ಅಲ್ಲವೇ?
ಚಿತ್ರದಲ್ಲಿರೋದು ಎರಡೇ ಹಾಡು. ಒಂದು ‘ಗುರುವೇ ನಿನ್ನಾಟ ಬಲ್ಲವರು ಯಾರ್‍ಯಾರೊ’ ಇಂಪಾಗಿದೆ. ಇನ್ನೊಂದು ಹಾಡು ಹಿಂದಿಯದ್ದು, ‘ಆ ಆ ಆಜಾ ಆ ಆ ಆ ಆಜಾ’ ಇದರಲ್ಲಿ ನೃತ್ಯ ಉತ್ತಮವಾಗಿದೆ. ಇಕ್ಬಾಲ್ ಕುತ್ತಿಗೆ ಕುಣಿಸುವ ನೃತ್ಯದಲ್ಲಿ ಶಮ್ಮಿಕಪೂರ್‌ನನ್ನೂ ಮೀರಿಸಿದ್ದಾರೆ. ಇದೊಂದು ನೃತ್ಯಕ್ಕಾಗಿಯಾದರೂ ನೀವು ಸಿನಿಮಾ ನೋಡಬೇಕು. ನಕ್ಕು ನಕ್ಕು ಸುಸ್ತಾಗುವುದು ಖಂಡಿತ.
ಸಾವಂತ್ರಿಯಾಗಿ ನಾಯಕಿ, ಬ್ಯಾಡರ ಮಂಜನಾಗಿ ವಿಜಯ್, ಅವ್ವಳ ಪಾತ್ರದಲ್ಲಿ ಶೃತಿ ಉತ್ತಮ ಅಭಿನಯ ನೀಡಿದ್ದಾರೆ. ವಿಜಯ್‌ಗೆ ಇಂತಹ ಹಳ್ಳಿ ಹುಡುಗುನ ಪಾತ್ರ ಸಹಜವಾಗಿ ಒಪ್ಪುತ್ತದೆ. ಆತ ಇಂತಹ ಪಾತ್ರಗಳಲ್ಲಿ ಸಹಜವಾಗಿ ನಟಿಸುತ್ತಾನೆ. ಶೃತಿಯಂತಹ ನಟಿಯ ಬಾಯಲ್ಲಿ ಕೆಟ್ಟ ಶಬ್ದದ ಡೈಲಾಗುಗಳು, ಅಳುಮುಂಜಿ ಪಾತ್ರಕ್ಕೇ ಸೀಮಿತವಾಗಿದ್ದ ಅವರನ್ನು ಮಾಂಕಾಳಿ ಪಾತ್ರದಲ್ಲಿ ನೋಡುವುದು ಒಂದು ಅಪರೂಪವೇ. ಆದರೂ ಶೃತಿಯ ಬದಲು ಉಮಾಶ್ರಿ ಅವ್ವಳ ಪಾತ್ರವನ್ನು ಇನ್ನೂ ಚೆನ್ನಾಗಿ ನಿಭಾಯಿಸುತ್ತಿದ್ದರೇನೋ ಅನ್ನೋದು ನನ್ನ ಭಾವನೆ.
ನಾಯಕಿ ಸಾವಂತ್ರಿಯ ಗೆಳತಿ ಶಿವಿ ಸಾಯುತ್ತಾಳೆ. ಆಕೆ ಯಾಕೆ ಸಾಯುತ್ತಾಳೆ? ಎಂಬುದು ಗೊತ್ತಾಗುವುದಿಲ್ಲ. ಆದರೆ ಆಕೆಯ ಸಾವಿಗೆ ಜನ ಏನೇನೋ ಮಾತಾಡಿಕೊಳ್ಳುತ್ತಾರೆ. ಆಕೆ ಸತ್ತಾಗ ಮನೆಯವರು, ಅಕ್ಕಪಕ್ಕದವರು ಅಳುವುದನ್ನು ಹಾಗೂ ಚಿತ್ರ ಮುಗಿಯುತ್ತ ಬರುವಾಗ ನಾಯಕ- ನಾಯಕಿಯ ಸರಸವನ್ನು ಸ್ವಲ್ಪ ಹೆಚ್ಚೇ ಎನ್ನುವಷ್ಟು ತೋರಿಸಲಾಗಿದೆ. ಎರಡೂ ಬಹುಶಃ ಅನಗತ್ಯವಾಗಿತ್ತು.
ಚಿತ್ರದುದ್ದಕ್ಕೂ ಬೈಗುಳ ಕೇಳಿರುತ್ತೀರಿ. ಅಂತ್ಯದಲ್ಲಿ ಪ್ರೇಕ್ಷಕರಿಗೂ ಬೈಗುಳವೇ!?
ಸಾಮಾನ್ಯವಾಗಿ ಚಿತ್ರದ ಕೊನೆಯಲ್ಲಿ ಇನ್ನೊಮ್ಮೆ ನೀವೂ ಬನ್ನಿ, ನಿಮ್ಮವರನ್ನೂ ಕರೆತನ್ನಿ ಎಂದೆಲ್ಲ ಹೇಳುವುದು ಸಾಮಾನ್ಯ. ಆದರೆ ಅವ್ವ ಮಾತ್ರ ಏನು ಕೋತಿ ಕುಣಿತೈತ್ರಾ ಇಲ್ಲಿ. ಹ್ವೋಗಿ ಹ್ವೋಗಿ ಕೆಲಸ ನೋಡ್ವೋಗಿ ಎಂದು ಬೀಳ್ಕೊಡುತ್ತಾಳೆ!ಹೋಗಿ ನೋಡಿ ಖುಶಿಪಟ್ಟು, ಉಗಿಸ್ಕೊಂಡು ಬನ್ನಿ! ದುಡ್ಕೊಟ್ಟು ಉಗಿಸ್ಕೊಳ್ಳೋದು ಅಂದ್ರೆ ಏನೂಂತ ನಿಮಗೂ ಸ್ವಲ್ಪ ಗೊತ್ತಾಗ್ಲಿ...!!

Tuesday, February 12, 2008

ಅವರ ಪ್ರೀತಿ ಮದುವೆಯಲ್ಲಿ ಅಂತ್ಯವಾಯಿತು!



ಗಣೇಶ್ ಮತ್ತು ಶಿಲ್ಪಾ ೨ ವರ್ಷದ ಹಿಂದೆ ಭೇಟಿಯಾದರು. ಪರಿಚಯ ಪ್ರೇಮಕ್ಕೆ ತಿರುಗಿತು. ಅದೀಗ ಮದುವೆಯಲ್ಲಿ ಮುಕ್ತಾಯವಾಗಿದೆ!
ಹಾಗಂತ ಟಿವಿ ೯ನಲ್ಲಿ ಒದರುತ್ತಿದ್ದರು. ನಮ್ಮದೇ ವಿಜಯ ಕರ್ನಾಟಕ ಪತ್ರಿಕೆಯಲ್ಲೂ ಹಾಗೇ ಬಂದಿದೆ ಅನ್ನಿ. ಹಾಸ್ಯಕ್ಕೆ ಅವರ ಪ್ರೀತಿ ಮದುವೆಯಲ್ಲಿ ಅಂತ್ಯವಾಯಿತು ಅನ್ನುವುದು ವಾಡಿಕೆ. ಆದರೆ ನಿಜವಾಗಿಯೂ ಸುದ್ದಿ ನಿರೂಪಿಸುವಾಗಲೂ ಹಾಗೆ ಹೇಳಬೇಕೆ?

ಜೋಗಿಯವರು ಜಾನಕಿ ಕಾಲಂನಲ್ಲಿ ಬರೆದ ‘ಪ್ರೀತಿಯೆಂಬ ಮಾಯಾಂಜಿಕೆಯೂ ಮನಸ್ಸೆಂಬ ವೈದಹಿಯೂ’ ಲೇಖನದಲ್ಲಿ ಪ್ರೀತಿಯ ಬಗೆಗೆ ಹಾಸ್ಯಮಯವಾಗಿ, ವಿಶೇಷವಾಗಿ ಮತ್ತು ವಿಶಿಷ್ಟವಾಗಿ ಬರೆದಿದ್ದಾರೆ. ಓದಿರದೇ ಇದ್ದರೆ ಒಮ್ಮೆ ಓದಿ.
ಅವರು ಬರೆಯುತ್ತಾರೆ...

ಪ್ರೀತಿಸದೇ ವರ್ಷಾನುಗಟ್ಟಲೆ ಸಂತೋಷವಾಗಿ ಇದ್ದುಬಿಡಬಹುದು. ಪ್ರೀತಿಸುತ್ತಲೂ ಸಂತೋಷವಾಗಿರಬಹುದು. ಆದರೆ ಪ್ರೀತಿ ಏನನ್ನೋ ಬೇಡುತ್ತದೆ. ಏನನ್ನೋ ಕಾಡುತ್ತದೆ. ಸುಮ್ಮನಿದ್ದವರನ್ನು ಮದುವೆಗೆ ದೂಡುತ್ತದೆ. ಮದುವೆಯಾದರೆ ಪ್ರೀತಿ ಉಳಿಯುತ್ತದೆ ಅಂದುಕೊಳ್ಳುತ್ತಾರೆ. ಮದುವೆಯೆಂಬ ಪಂಜರದಲ್ಲಿ ಪ್ರೀತಿಯನ್ನು ಬಂಧಿಸಲು ಯತ್ನಿಸುತ್ತಾರೆ. ಆದರೆ ಗಿಣಿಯು ಪಂಜರದೊಳಿಲ್ಲ ಎಂಬುದು ಆಮೇಲೆ ತಿಳಿಯುತ್ತದೆ’... ಹೀಗೆ ಸಾಗುತ್ತದೆ ಬರವಣಿಗೆ.
ಅಂತ್ಯ ಇನ್ನೂ ರೋಚಕ!

‘ಮದುವೆಗೆ ಮೊದಲು ಐ ಲವ್‌ ಯು ಅನ್ನುವುದು ಹೇಗೆ ಎಂಬ ಸಂಕಟ. ಮದುವೆಯಾದ ನಂತರ ಐ ಲವ್ ಯು ಅನ್ನಬೇಕಲ್ಲ ಎಂಬ ಪ್ರಾಣಸಂಕಟ. ಮದುವೆಗೆ ಮೊದಲು ಎಲ್ಲಿ ಪ್ರೀತಿಸ್ತೀನಿ ಅಂದುಬಿಡುತ್ತಾನೋ ಎಂಬ ಭಯ. ಆಮೇಲೆ ಎಲ್ಲಿ ಪ್ರೀತಿಸುತ್ತೇನೆ ಅನ್ನೋದಿಲ್ಲವೋ ಎಂಬ ಭಯ. ಮೊದಲು ಪ್ರೀತಿಸಲಿ ಅನ್ನೋ ಆಸೆ. ನಂತರ ಪ್ರೀತಿಸೋದಿಲ್ಲ ಎಂಬ ಗುಮಾನಿ.

ಒಮ್ಮೆ ಐ ಲವ್ ಯು ಅಂದೆ. ಥ್ಯಾಂಕ್ಯು ಅನ್ನುವ ಉತ್ತರ ಬಂತು. ಮದುವೆಯಾದ ಮೇಲೆ ಅದನ್ನೇ ಅಂದೆ ನೋ ಮೆನ್ಶನ್ ಪ್ಲೀಸ್ ಅನ್ನುವ ಉತ್ತರ ಬಂತು. ಐ ಹೇಟ್ ಯು ಅಂದೆ. ಸೇಮ್ ಟು ಯು ಎಂಬ ಮರುತ್ತರ ಬಂತು. ಸಧ್ಯ ಇಬ್ಬರೂ ಪ್ರೀತಿಸುತ್ತಿಲ್ಲ. ಆದ್ದರಿಂದ ಸುಖವಾಗಿದ್ದೇವೆ ಅಂದುಕೊಂಡೆ’ ಎಂದು ಬರೆಯುತ್ತಾರೆ ಜೋಗಿ. ಪ್ರೀತಿಯ ಬಗ್ಗೆ ಇಷ್ಟು ಅದ್ಭುತವಾಗಿ, ಹಾಸ್ಯಮಿಶ್ರಿತ ಸತ್ಯ ವಿವರಿಸಿದ್ದನ್ನು ನಾನಂತೂ ಎಲ್ಲೂ ಓದಿಲ್ಲ.

ಇಷ್ಟೆಲ್ಲ ನೆನಪಾದದ್ದು ಗಣೇಶ್ ಮದುವೆಯಿಂದ. ಟಿವಿ೯ ಚಾನಲ್‌ನಲ್ಲಂತೂ ಇಡೀ ದಿನ ಅದೇ ಸುದ್ದಿ. ಸಂಜೆಯ ನಂತರ ಬೇರೆ ವಿಷಯವೇ ಇಲ್ಲ. ರಾತ್ರಿ ೧೦.೦೦ ಗಂಟೆಗೆ ಇದೆಂಥಾ ಮದುವೆ!? ಎಂಬ ಕಾರ್ಯಕ್ರಮ. ಯಾಕೆ? ಒಬ್ಬ ಸಿನಿಮಾ ಸ್ಟಾರ್‌ನ ಖಾಸಗಿ ಜೀವನದ ಬಗ್ಗೆ ಯಾಕಿಷ್ಟು ಆಸಕ್ತಿ? ಆತನ ಮದುವೆಯನ್ನು ಇದೆಂಥಾ ಮದುವೆ ಎಂದು ಪ್ರಶ್ನಿಸಲು ಮಾಧ್ಯಮಕ್ಕೆ ಅಧಿಕಾರ ಕೊಟ್ಟವರು ಯಾರು? ಮಾಧ್ಯಮದ ಮಂದಿ ಹದ್ದುಮೀರಿ ವರ್ತಿಸುತ್ತಿದ್ದಾರಾ? ಎಂಬೆಲ್ಲಾ ಪ್ರಶ್ನೆಗಳು ಪತ್ರಕರ್ತನಾದ ನನ್ನಲ್ಲಿಯೇ ಮೂಡುತ್ತಿದೆ.

ಮಾಧ್ಯಮಗಳ ಮತ್ತು ಮಾಧ್ಯಮದಲ್ಲಿರುವ ಕೆಲವರ ಅತ್ಯಾಸಕ್ತಿಯ ಪರಿಣಾಮ ಪ್ರಸಿದ್ಧ ವ್ಯಕ್ತಿಗಳ ಖಾಸಗಿ ಜೀವನ ಹಾಳಾಗಿದೆ. ಖಾಸಗಿ ಜೀವನ ಎಂಬ ಶಬ್ದವೇ ಅವರ ಮಟ್ಟಿಗೆ ಅರ್ಥ ಕಳೆದುಕೊಳ್ಳುತ್ತಿದೆ. ಸಿನಿಮಾ ನಟಿಯರು ಬಂದರೆ ಸಾಕು ಮಧ್ಯಮದವರು ಮುತ್ತುತ್ತಾರೆ. ಮಂಗಳೂರಿಗೆ ಐಶ್ವರ್ಯಾ ರೈ ಬಂದರೆ ಎಲ್ಲ ಮಾಧ್ಯಮ ಪ್ರತಿನಿಧಿಗಳು ಐಶ್ವರ್ಯಾ ರೈ ಇರುವ ಹೋಟೆಲ್ ಎದುರು ಒಂದಿಡೀ ದಿನ ಕಾದು ಕುಳಿತಿರುತ್ತಾರೆ. (ಸಾಮಾನ್ಯರು ಪತ್ರಿಕಾಗೋಷ್ಠಿ ೫ ನಿಮಿಷ ತಡವಾದರೆ ಬೊಬ್ಬೆಹೊಡೆಯುತ್ತಾರೆ!). ಆಕೆಯೋ ಪತ್ರಕರ್ತರನ್ನು ಬಳಿಯೂ ಬಿಟ್ಟುಕೊಳ್ಳುವುದಿಲ್ಲ. ಇದೆಂಥ ಕರ್ಮ ಪತ್ರಕರ್ತರದ್ದು!

ಖಾಸಗಿ ಜೀವನ. ಅವರವರದ್ದು ಅವರವರಿಗೆ. ಒಬ್ಬೆ ಒಳ್ಳೆ ನಟನಾದರೆ ಅವನ ನಟನೆ ಇಷ್ಟಪಡೋಣ. ಲೇಖಕನ ಲೇಖನ ಇಷ್ಟಪಡೋಣ. ಅವರ ಪ್ರೀಮ, ಕಾಮದ ಖಾಸಗಿ ಜೀವನವನ್ನಲ್ಲ. ಸಾರ್ವಜನಿಕ ಜೀವನದಲ್ಲಿ ಇರುವವರು ಉತ್ತಮ ನಡತೆ, ಆದರ್ಶ ಜೀವನ ನಡೆಸಬೇಕು ಎಂದು ಬಯಸುವುದು ತಪ್ಪಲ್ಲ. ಆದರೆ ಹಾಗೇ ಇರಬೇಕು ಎಂದು ನಿರ್ದೇಶಿಸುವುದು ಸರಿಯಲ್ಲ.

ಗಣೇಶ್ ಇಷ್ಟ ಪಟ್ಟ ಹುಡುಗಿಯನ್ನು ಮದುವೆಯಾಗಿದ್ದಾರೆ. ವಿಚ್ಛೇದಿತೆಯನ್ನು ಮದುವೆಯಾಗಲು ಅಂತಹ ಮನಸ್ಥಿತಿ ಬೇಕು ಎಂಬುದು ಸತ್ಯ. ಆದರೆ ಆಕೆಗೆ ಆತನ ಜೀವನ ಕೊಟ್ಟ, ಬಾಳು ಕೊಟ್ಟ ಎಂಬುದು ಸುಳ್ಳು. ಯಾಕೆಂದರೆ ಜೀವನ ಆಕೆಯದು. ವಿಚ್ಛೇದಿತರಾಗಿ ಮದುವೆಯಾಗದೇ ಇರುವವರೂ ಬಾಳು ನಡೆಸುತ್ತಿದ್ದಾರೆ. ಅಥವಾ ಆಕೆ ವಿಚ್ಛೇದಿತೆ. ಬಾಳು ಕತ್ತಲಲ್ಲಿದೆ ಎಂದು ಗಣೇಶ ಮದುವೆಯಾಗಿದ್ದಲ್ಲ. ಇಬ್ಬರೂ ಪರಸ್ಪರ ಇಷ್ಟಪಟ್ಟು ಮದುವೆಯಾಗಿದ್ದಾರೆ. ಅದನ್ನೊಂದು ದೊಡ್ಡ ಆದರ್ಶವೆಂದಾಗಲಿ, ಟಿವಿ೯ ಚಾನಲ್ ಥರ ಇದೆಂಥಾ ಮದುವೆ ಎಂದಾಗಲಿ ಬಿಂಬಿಸುವ, ಭಾರೀ ಪ್ರಚಾರ ಕೊಡುವ ಅಗತ್ಯಗಳು ನನಗಂತೂ ಸರಿ ಅನಿಸುತ್ತಿಲ್ಲ. ಏನಂತೀರಾ?

ಹೆಂಡತಿಗೂ ನದಿಯ ಗು(ಹ)oಗು

ನಾನಿನ್ನೂ ಜೋಗಿಯವರ ನದಿಯ ನೆನಪಿನ ಹ(ಗು)ಂಗಿನಿಂದ ಹೊರಬಂದಿಲ್ಲ. ಆಗಲೇ ನನ್ನ ಹೆಂಡತಿ ನದಿಯ ಗುಂಗಿಗೆ ಸಿಲುಕಿದ್ದಾಳೆ. ಸಾಮಾನ್ಯವಾಗಿ ಆಕೆ ಓದುವುದು ತುಸು ನಿಧಾನ. ದಿನವೂ ಅಷ್ಟಷ್ಟೇ ಪುಟಗಳನ್ನು ಓದುತ್ತ ಹೋಗುವುದು ಆಕೆ ಅಭ್ಯಾಸ. ಆದರೆ ಜೋಗಿಯವರ ನದಿಯ ನೆನಪಿನ ಹಂಗು ಪುಸ್ತಕ ಹಿಡಿದ ಆಕೆ ಅದನ್ನು ಕೆಳಗೇ ಇಡುತ್ತಿಲ್ಲ.
ಫೆ.೧೧ರಂದು ಓದಲು ಆರಂಭಿಸಿದವಳು ಫೆ.೧೨ಕ್ಕೆ ಮುಗಿಸುವ ಹಂತಕ್ಕೆ ಬಂದಿದ್ದಾಳೆ! ದಾರವಾಹಿಯನ್ನೂ ನೋಡದೆ, ಇಂಟರ್‌ನೆಟ್ ಆನ್ ಮಾಡದೆ ಪುಸ್ತಕಕ್ಕೆ ಅಂಟಿ ಕೂತಿದ್ದಾಳೆ.
ಇವತ್ತೇ ಮುಗಿಸಿಬಿಡುವಷ್ಟು ಇಂಟರೆಸ್ಟಿಂಗ್ ಆಗಿದ್ಯೇನೆ ಅಂದೆ? ಅದಕ್ಕೆ ಹೌದು ಅಂದಳು. ಆದರೆ ಅವಳಿಗೆ ಇಂದೇ ಓದಿ ಮುಗಿಸುವದೂ ಇಷ್ಟವಿಲ್ಲ ಯಾಕೆಂದರೆ ಮುಗಿದೇ ಹೋಗುತ್ತಲ್ಲ ಎಂಬ ಬೇಜಾರು!
ನೋಡಿ ಜೋಗಿ ಯಾರ್‍ಯಾರನ್ನೋ ಎಂಥೆಂಥ ಸಂಕಷ್ಟಕ್ಕೆ ಸಿಲುಕಿಸಿದ್ದಾರೆ!

Monday, February 11, 2008

ನದಿಯ ನೆನಪಿನ ಗು(ಹ)೦ಗಿನಲ್ಲಿ...


ಅದೊಂದು ಕೊಲೆ ಪ್ರಕರಣ. ನಾನು ಮಂಗಳೂರಿಗೆ ಬರುವ ಮೊದಲೇ ಅದು ನಡೆದಿತ್ತಾದರೂ, ಕ್ರೈಂ ರಿಪೋರ್ಟರ್ ಆಗಿ ನಾನು ಹಳೆಯ ಕ್ರೈಂಗಳ ಕಥಾನಕ ಬರೆಯುತ್ತಿದ್ದಾಗ, ಗೋಪಾಲಕೃಷ್ಣ ಕುಂಟಿನಿ ಸಲಹೆಯಂತೆ ಆ ಕೊಲೆಯ ಬಗ್ಗೆ ಬರೆದಿದ್ದೆ.

ಆದೇ ಕೊಲೆಯ ಸುತ್ತಮುತ್ತ ಜೋಗಿಯ ನದಿಯ ನೆನಪಿನ ಹಂಗು ಕಾದಂಬರಿ ಹಬ್ಬಿಕೊಂಡಿದೆ. ಕೊಲೆಯಾದಾತ ಜೋಗಿ ಮತ್ತು ಕುಂಟಿನಿಯ ಗೆಳೆಯನೂ ಆಗಿದ್ದ. ದಕ್ಷಿಣ ಕನ್ನಡದವರ ಮಟ್ಟಿಗೆ ಈ ಕಾದಂಬರಿ ನಮ್ಮ ಸುತ್ತಲಿನಲ್ಲೇ ನಡೆದ ಘಟನೆ ಎಂಬಷ್ಟು ಆಪ್ತವಾಗುವಂಥದ್ದು. ಕೊಲೆಯ ಸುತ್ತ ಹಲವಾರು ಘಟನೆಗಳು ಸೃಷ್ಟಿಯಾಗುತ್ತವೆ. ಹೆಚ್ಚಿನವೆಲ್ಲ ಸತ್ಯ ಘಟನೆಗಳೇ. ಅದನ್ನು ಜೋಗಿ ಕತೆ ಎಂಬಂತೆ ವಿವರಿಸಿದ್ದಾರೆ. ಸ್ಥಳಗಳು ಅದೇ, ಹೆಸರುಗಳು ಮಾತ್ರ ಬೇರೆ ಬೇರೆ.

ಸುಬ್ರಹ್ಮಣ್ಯ ಮಠದ ಸ್ವಾಮೀಜಿ ಮದುವೆಯಾದ ಘಟನೆಯೂ ಕಾದಂಬರಿಯಲ್ಲಿ ಬರುತ್ತದೆ. ಸ್ವಾಮೀಜಿಯ ತುಮುಲ, ಅವರ ಮದುವೆಗೆ ಉಂಟಾಗುವ ಅಡ್ಡಿಗಳು, ಸ್ವಾಮೀಜಿಯಾಗಿಯೇ ಇರಿ, ಹುಡುಗಿಯೊಂದಿಗಿನ ಸಂಬಂಧ ಮುಂದುವರಿಸಿ ಎಂಬಂಥ ಮರ್ಯಾದೆ ಉಳಿಸುವ ಸಲಹೆಗಳನ್ನೆಲ್ಲ ಜೋಗಿ ಸ್ವಾರ್‍ಯಸ್ಯವಾಗಿ ವಿವರಿಸಿದ್ದಾರೆ.

ಸರಾಗವಾಗಿ ಓದಿಸಿಕೊಂಡು ಹೋಗುವ ಕಾದಂಬರಿ ನಂಗಂತೂ ಖುಷಿಕೊಟ್ಟಿದೆ. ನೀವೂ ಓದಿ. ನಿಮಗೂ ಇಷ್ಟವಾಗುವುದು ಖಂಡಿತ.

ಜೋಗಿ ಸಿಕ್ಕಾಬಟ್ಟೆ ಬರೆಯುತ್ತಾರೆ. ಅವರು ಎಷ್ಟು ಬರೆಯುತ್ತಾರೆಂದರೆ ಅವರು ಒಂದು ವಾರದಲ್ಲಿ ಬರೆದಷ್ಟನ್ನು ನಾವು ಒಂದು ವಾರದಲ್ಲಿ ಓದಲು ಸಾಧ್ಯವಿಲ್ಲ. ಅಷ್ಟು ಬರೆಯುತ್ತಾರೆ. ಅವರು ಬರೆಯುತ್ತಲೇ ಇರಲಿ. ಅದರಲ್ಲಿ ಒಂದಷ್ಟನ್ನಾದರೂ ಓದಿ ಖುಷಿಪಡಲು ನಮಗೆ ಸಮಯ ಸಿಗಲಿ!

Wednesday, January 30, 2008

ಹಿಡಿವ ಬಸ್ಸು ಬಿಟ್ಟು, ಬಿಡುವ ಬಸ್ಸು ಹಿಡಿದು...

ಎಂಥೆಂಥದ್ದೋ ಪ್ರಕರಣಗಳ ಆರೋಪಿಗಳನ್ನು, ಚಾಲಾಕಿಗಳನ್ನು ಹಿಡಿಯುವ ಪೊಲೀಸರು ಒಮ್ಮೊಮ್ಮೆ ಎಡವಟ್ಟು ಮಾಡಿಬಿಡುತ್ತಾರೆ. ಹೋಳಿದ್ದೊಂದನ್ನು ಬಿಟ್ಟು ಇನ್ನೆಲ್ಲವನ್ನು ಅಚ್ಚುಕಟ್ಟಾಗಿ ಮಾಡಿ ಇಕ್ಕಟ್ಟಿಗೆ ಸಿಲುಕುತ್ತಾರೆ.
ಒಂದು ದಿನ (ಎರಡು ವರ್ಷದ ಹಿಂದೆ) ನಡೆದ ಈ ಘಟನೆ ಅದಕ್ಕೊಂದು ಸಾಕ್ಷಿ.
ಬೆಳಗಾಂನ ನಾಗರಿಕ ಹಕ್ಕು ಜಾರಿ ನಿರ್ದೇಶನಾಲಯದ ಎಸ್ಪಿ ಮಂಗಳೂರಿಗೆ ಬಂದಿದ್ದರು. ರಾತ್ರಿ ಬಸ್ಸಿಗೆ ಮರಳಿ ಬೆಳಗಾಂಗೆ ಹೋಗಬೇಕಿತ್ತು. ೧೦.೦೦ ಗಂಟೆ ಬಸ್‌ಗೆ ಟಿಕೆಟ್ ಬುಕ್ ಆಗಿತ್ತು. ಅವರು ಎಲ್ಲೆಲ್ಲೋ ಹೋಗಿ, ಏನೇನೋ ಹಕ್ಕುಗಳನ್ನು ಜಾರಿ ಮಾಡಿ ಮರಳಿ ಮಂಗಳೂರಿಗೆ ಬರುವಾಗ ರಾತ್ರಿ ೮.೩೦ ಗಂಟೆ ಆಗಿಬಿಟ್ಟಿತ್ತು. ಅವರನ್ನು ಭೇಟಿ ಮಾಡಲು ಹೆಚ್ಚುವರಿ ಎಸ್ಪಿ ಲೋಕೇಶ್ ಕುಮಾರ್, ಡಿವೈಎಸ್ಪಿ ಎಸ್.ಎಂ. ಮಂಟೂರ್ ಹಾಗೂ ಮಂಗಳೂರು ಗ್ರಾಮಾಂತರ ಸರ್ಕಲ್ ಇನ್‌ಸ್ಪೆಕ್ಟರ್ ಉದಯ್ ನಾಯ್ಕ್ ಕಾದು ಕುಳಿತಿದ್ದರು.
ಭೇಟಿ ಅಂದರೆ ಸುಮ್ಮನೆ ಆಗುತ್ಯೆ? ಸ್ವಲ್ಪ ಹೊತ್ತಿನ ಹರಟೆಯ ನಂತರ ಊಟ ಮಾಡಲು ಹೋದರು. ಎಷ್ಟೇ ಬೇಗ ಬೇಗ ಆರ್ಡರ್ ಮಾಡಿ ತರಿಸಿಕೊಂಡು ಊಟ ಮಾಡಿದರೂ ೧೦.೦೦ ಗಂಟೆ ಆಗಿಬಿಟ್ಟಿತ್ತು. ಬಸ್ ತಪ್ಪಿಹೋಗುತ್ತಲ್ಲ? ಪೊಲೀಸ್ ಬುದ್ದಿ ಕರ್ಚು ಮಾಡಿ ಕೂಡಲೆ ಸಂಚಾರ ವಿಭಾಗ ಪೊಲೀಸರಿಗೆ ವಯರ್‌ಲೆಸ್ ಮೂಲಕ ಮಾಹಿತಿ ನೀಡಿ ಬಸ್ ನಿಲ್ಲಿಸುವಂತೆ ಸೂಚಿಸಲಾಯಿತು.
ಹೆಚ್ಚುವರಿ ಎಸ್ಪಿ, ಡಿವೈಎಸ್ಪಿ ಅವರ ವಾಹನ ಕೆಂಪು ಲೈಟ್ ಹಾಕಿಕೊಂಡು ಸರ್ವೀಸ್ ಬಸ್ ನಿಲ್ದಾಣದ ಬಳಿ ನಿಲ್ಲಿಸಲಾದ ಬಸ್ ಬಳಿಗೆ ಹೋಗುವಾಗ ೧೦-೧೫ ನಿಮಿಷ ವಿಳಂಬವಾಗಿತ್ತು. ಅಲ್ಲಿ ಹೋಗಿ ನೋಡಿದರೆ ಸಂಚಾರ ಪೊಲೀಸರು ಎರಡು ಬಸ್ ಹಿಡಿದು ನಿಲ್ಲಿಸಿದ್ದರು. ಹಿರಿಯ ಅಧಿಕಾರಿಗಳ ವಾಹನ ಬಂದ ತಕ್ಷಣ ಸೆಲ್ಯೂಟ್ ಹೊಡೆದ ಒಬ್ಬ ಸರ್ ಎರಡೂ ಬಸ್ ನಿಲ್ಲಿಸಿದ್ದೇವೆ ಎಂದ ವರದಿ ಒಪ್ಪಿಸಿದ. ಹೋಗಿ ನೋಡಿದರೆ ಬೇಕಾದ ಬಸ್ಸೇ ಇರಲಿಲ್ಲ. ಸಂಚಾರ ಪೊಲೀಸರು ಗಡಿಬಿಡಿಯಲ್ಲಿ ಬೆಂಗಳೂರು ಹಾಗೂ ಹುಬ್ಬಳ್ಳಿಗೆ ಹೋಗುವ ಬಸ್ ಹಿಡಿದು ನಿಲ್ಲಿಸಿದ್ದರು. ಬೆಳಗಾಂಗೆ ಹೋಗುವ ಬಸ್ ಹೋಗಿಯಾಗಿತ್ತು!!
ನಗರ ಸಂಚಾರ ಮುಗಿಸಿ ಹೊರ ಹೋಗುತ್ತಿದ್ದ ಬಸ್ಸನ್ನು ಕೆಎಸ್‌ಆರ್‌ಟಿಸಿ ಬಳಿ ಕೊನೆಗೆ ಅಂತೂ ಇಂತೂ ಹಿಡಿದು ಬೆಳಗಾಂ ನಾಗರಿಕ ಹಕ್ಕು ಜಾರಿ ನಿರ್ದೇಶನಾಲಯ ಎಸ್ಪಿಯವರನ್ನು ಹತ್ತಿಸಿದ ಅವರ ಗೆಳೆಯರು ಕೊನೆಗೂ ಸಿಕ್ಕೆದೆಯಲ್ಲ ಖಾಸಗಿ ಬಸ್ಸೆ ಎಂದು ನಿಟ್ಟುಸಿರು ಬಿಟ್ಟರು!!
ಇದು ನನಗೆ ಹೇಗೆ ಗೊತ್ತಾಯಿತು ಅಂದ್ರೆ, ನಾನು ಮನೆಗೆ ಮರಳುವಾಗ ಈ ಮೂವರು ಪೊಲೀಸ್ ಅಧಿಕಾರಿಗಳು ಆಗಷ್ಟೇ ಗೆಳೆಯನನ್ನು ಬಸ್ ಹತ್ತಿಸಿ, ಉಫ್! ಅಂತ ಉಸಿರು ಬಿಟ್ಟು, ರಸ್ತೆ ಬದಿಗೆ ಸುದ್ದಿ ಹೇಳುತ್ತ ನಿಂತಿದ್ದರು. ನಾನು ಬೈಕ್ ನಿಲ್ಲಿಸಿ ಮಾತನಾಡಿಸಿದಾಗ ಇದೆಲ್ಲ ಪುರಾಣ ಹೊರಬಿತ್ತು.

Tuesday, January 22, 2008

ಹೊಂಗನಸು ಅಲ್ಲವಿದು ಕೆಟ್ಟ ಕನಸು!

ಆ ಮನೆಯ ಯಜಮಾನ ಆಗಷ್ಟೇ ಸತ್ತಿರುತ್ತಾನೆ. ಅಂತ್ಯ ಸಂಸ್ಕಾರಕ್ಕೆಂದು ಆತನ ಹೆಣವನ್ನು ಗುಡ್ಡದ ಮೇಲೆ ತೆಗೆದುಕೊಂಡು ಹೋಗಿ ಇಟ್ಟಿರುತ್ತಾರೆ. ಆಗ ಅಷ್ಟೂ ಹೊತ್ತು ನಿಮಗೆ ಗೊತ್ತಿಲ್ಲದ ಒಬ್ಬ ವ್ಯಕ್ತಿ ಬರುತ್ತಾನೆ. ಸತ್ತವನ ಹೆಂಡತಿ ಬಳಿ ಹೋಗಿ, ಏನಿಲ್ಲ ವರ್ಷದೊಳಗೆ ಮನೆಯಲ್ಲಿ ಶುಭ ಕಾರ್ಯ ನೆರವೇರಿದರೆ ಎಲ್ಲ ಸರಿ ಹೋಗುತ್ತದೆ. ನಿನ್ನ ಮಗಳಿಗೆ ಒಂದು ಸಂಬಂಧ ಇದೆ ನೋಡಲೆ? ಎನ್ನುತ್ತಾನೆ.
ಇಂತಹ ಘಟನೆ, ಸನ್ನಿವೇಶವನ್ನು ನೀವೆಲ್ಲೂ ನೋಡಿಲ್ಲವೆಂದರೆ ಖಂಡಿತ ಹೊಂಗನಸು ಸಿನಿಮಾ ನೋಡಿ. ಅದರಲ್ಲಿ ಅಪ್ಪನ ಹೆಣ ಇರಿಸಿಕೊಂಡೇ ಮಗಳ ಮದುವೆ ಮಾತನಾಡುವ ಸನ್ನಿವೇಶ ಇದೆ! ನಿಮಗೆ ಇಷ್ಟವಾಗಬಹುದು!!
ಚಿತ್ರದ ನಾಯಕ ಮತ್ತು ನಾಯಕಿ ಹಳ್ಳಿ ಮತ್ತು ನಗರದಲ್ಲಿ ವಾಸವಾಗಿರುವವರು. ಆದರೆ ಹಾಡಲ್ಲಿ ಮಾತ್ರ ಇವರು ಟೈಗರ್ ಪ್ರಭಾಕರ್‌ನ ‘ಕಾಡಿನ ರಾಜ’ ಅಥವಾ ಎಂ.ಪಿ. ಶಂಕರ್‌ನ ಚಿತ್ರಗಳಲ್ಲಿ ಕಾಣುತ್ತಿದ್ದ ‘ಜುಂಬಲಿಕ್ಕಾ ಜುಂಬಿಕ್ಕಾ ಜುಂಬ ಜುಂಬಾಲೆ’ ಹಾಡಿನ ನಮೂನೆಯ ಕಾಡು ಮನುಷ್ಯರ ಬಟ್ಟೆ ಧರಿಸಿ ಬೆರಗು ಮೂಡಿಸುತ್ತಾರೆ. ಇನ್ನು ನಾಯಕಿಯೋ? ಅವಳ ಮುಖ, ನಟನೆ ನಿರ್ದೇಶಕರಿಗೇ ಚೆಂದ.
ನಾಯಕನ ಜತೆ ನಾಯಕಿ ಹಾಗೂ ಗೆಳತಿಯರು ಕೇರಳಕ್ಕೆ ಓಣಂಗಾಗಿ ತೆರಳುತ್ತಾರೆ. ಆಗ ಚಹಾ ತೋಟದಿಂದ ಕಂಗೊಳಿಸುವ ಮುನಾರ್ ತೋರಿಸಲಾಗುತ್ತದೆ. ನಂತರ ಕೆಲವೇ ಕ್ಷಣದಲ್ಲಿ ಆ ಮನೆಯ ಮಾಲಿಕ ಕನ್ನಡದಲ್ಲಿ ಮಾತನಾಡಿ ಬೆಚ್ಚಿ ಬೀಳಿಸುತ್ತಾನೆ. ಅವರದ್ದೇ ಬಾಯಲ್ಲಿ "ಕಾಸರಗೋಡು ಮೊದಲು ಕರ್ನಾಟಕದ ಭಾಗವಾಗಿತ್ತು. ನೀವು ಅದನ್ನು ಉಳಿಸಿಕೊಳ್ಳಲಿಲ್ಲ.’ ಎಂಬ ಡೈಲಾಗುಗಳನ್ನು ನಿರ್ದೇಶಕ ಮಹಾಶಯರು ಹೇಳಿಸುತ್ತಾರೆ. ಆದರೆ ಕಾಸರಗೋಡಿನಲ್ಲಿ ಚಹಾ ತೋಟವೇ ಇಲ್ಲ!
ಇಡೀ ಸಿನಿಮಾದಲ್ಲಿ ನಗು ಬರೋದು ಒಂದೆರಡು ಕಡೆ ಮಾತ್ರ. ಶರಣ್ ಫೋಟೋಗ್ರಾಫರ್ ಆಗಿ ನಗಿಸುತ್ತಾನೆ. ಅರ್ಧ ಸಿನಿಮಾದಿಂದ ಈತ ಕಾಣೆ. ಅಟ್ ಲೀಸ್ಟ್ ಸಿನಿಮಾದ ಅಂತ್ಯದಲ್ಲಿ ನಡೆಯುವ ಮದುವೆಗೆ ಫೋಟೋ ತೆಗೆಯುವ ಆರ್ಡರನ್ನಾದರೂ ಆತನಿಗೆ ನಿರ್ದೇಶಕರು ದಯಪಾಲಿಸ ಬಹುದಿತ್ತು.!
ನಿಜ ಹೇಳೇಕೆಂದರೆ ಹೊಂಗನಸು ಚಿತ್ರಕ್ಕೆ ಈ ಹೆಸರು ಸ್ವಲ್ಪವೂ ಹೊಂದಿಕೊಳ್ಳುವುದಿಲ್ಲ. ಬದಲಾಗಿ ಈ ಚಿತ್ರಕ್ಕೆ ‘ಅತ್ಗೆಗಾಗಿ’ ಎಂದು ಇಟ್ಟಿದ್ದರೆ ಅತ್ಯಂತ ಸೂಕ್ತವಾಗಿತ್ತು. ಯಾಕೆಂದರೆ ನಾಯಕ ಸಿನಿಮಾದುದ್ದಕ್ಕೂ ಆತ ಏನೇ ಮಾಡಿದರೂ ಅದು ಅತ್ತಿಗೆಗಾಗಿ. ಅದೂ ಅಣ್ಣನನ್ನು ಮದುವೆಯಾಗದ!
ಅನಂತನಾಗು ಮತ್ತು ರಮೇಶ್ ಭಟ್ ಗೆಳೆಯರು. ಚಿಕ್ಕವರಿರುವಾಗಲೇ ಅನಂತನಾಗಿನ ಹಿರಿಯ ಮಗನಿಗೂ, ರಮೇಶ ಭಟ್ ಮಗಳಿಗೂ ಮದುವೆ ಎಂದು ಮಾತಾಡಿಕೊಂಡಿರುತ್ತಾರೆ. ಇದನ್ನು ಮದುವೆಯಾಗಬೇಕಾದ ಹಿರಿಯ ಮಗಿನಿಂದ ಕಿರಿಯ ಮಗ (ಚಿತ್ರದ ನಾಯಕ) ಹೆಚ್ಚು ನೆನಪಿಟ್ಟುಕೊಳ್ಳುತ್ತಾನೆ. ಅಂದಿನಿಂದಲೇ ಅವನ ವರ್ತನೆಗಳು ಅತ್ತಿಗೆಯನ್ನು ಬೆಂಬಲಿಸುತ್ತದೆ. ಎಷ್ಟರ ಮಟ್ಟಿಗೆ ಅಂದರೆ ಅವಳನ್ನು ಎಲ್ಲರೂ ಸಾಗರ್‌ನ (ಚಿತ್ರದಲ್ಲಿ ನಾಯಕ ಹೆಸರು) ಅತ್ತಿಗೆ ಎಂದೇ ಕರೆಯುತ್ತಾರೆ. ಇವನೋ ಅತ್ತಿಗೆಗಾಗಿ ಏನೂ ಮಾಡಬಲ್ಲ. ಅಥವಾ ಆತ ಏನೇ ಮಾಡಿದರೂ ಅದು ಅತ್ತಿಗೆಗಾಗಿ (ಕಡಗೆ ಅಣ್ಣ ಇದೇ ಕಾರಣಕ್ಕೆ ಅವಳನ್ನು ಮದುವೆಯಾಗಲು ಒಪ್ಪುವುದಿಲ್ಲ.) ಅತ್ತಿಗೆಗಾಗಿಯೇ ಒಂದು ಹುಡುಗಿಯನ್ನು ಹುಡುಕಿ, ಪ್ರೀತಿಸಿ ಮದುವೆಯಾಗುತ್ತಾನೆ!
ಸಿನಿಮಾ ಆರಂಭವಾಗಿ ಅರ್ಧ ಮುಗಿಯುವವೆಗೂ ಈ ಸುದ್ದಿಯೇ ಇರುವುದಿಲ್ಲ. ನಾಯಕ- ನಾಯಕಿ ಆಕಸ್ಮಿಕವಾಗಿ ಒಂದೆರಡು ಬಾರಿಯಲ್ಲ ಪ್ರೇಕ್ಷಕರಿಗೆ ಬೇಜಾರು ಬರುವಷ್ಟು ಬಾರಿ ಭೇಟಿಯಾಗುತ್ತಾರೆ. ಅಂತೂ ಅರ್ಧ ಮುಗೀತು ಅಂತ ಹೊರ ಹೋಗಿ ಬಂದು ಕುಳಿತರೆ, ಮೊದಲಿನರ್ಧಕ್ಕೆ ಸಂಬಂಧವೇ ಇಲ್ಲದಂತೆ ಕತೆ ಮುಂದುವರಿಯುತ್ತದೆ. ಹೆಚ್ಚು ಕಮ್ಮಿ ಸಿನಿಮಾ ಮುಗಿಯುವವರೆಗೂ ಪ್ರೇಕ್ಷಕರಿಗೆ ಎರಡು ಸಿನಿಮಾ ನೋಡಿದ ಅನುಭವವಾದರೆ, ಆರಂಭದಿಂದ ಮಧ್ಯಂತರವರೆಗೆ ಹಾಗೂ ಮಧ್ಯಂತರದಿಂದ ಅಂತ್ಯದವರೆಗೆ ಎರಡು ಸಿನಿಮಾಗಳನ್ನು ನಿರ್ಮಿಸಿ, ಎರಡನ್ನೂ ಜೋಡಿಸಿದರೆ ಹೇಗಾಗುತ್ತದೆ? ಹಾಗಾಗಿಗೆ ಎಂದು ‘ಹೊಂಗನಸು’ ಸಿನಿಮಾ ಮುಗಿಯುವ ಹೊತ್ತಿಗೆ ಅನಿಸಿರುತ್ತದೆ.
‘ಹೊಂಗನಸು’ ಸಿನಿಮಾವನ್ನು ಪ್ರೇಕ್ಷಕರು ಒಂದು ಕೆಟ್ಟ ಕನಸು ಎಂದು ಮರೆಯಬೇಕಾದ ಸ್ಥಿತಿ ಇದೆ. ಮಂಗಳವಾರ ‘ಗಾಳಿಪಟ’ ಸಿನಿಮಾ ನೋಡಲೆಂದು ಹೋಗಿದ್ದೆವು. ಟಿಕೆಟ್ ಸಿಗದೆ ನಮ್ಮ ಆಸೆಗಳು ದಾರ ಹರಿದ ಗಾಳಿಪಟದಂತೆ ಎಲ್ಲೆಲ್ಲೋ ಸುತ್ತಾಡಿ ಅಂತಿಮವಾಗಿ ಹೊಂಗನಸಾಗಿ ಮಾರ್ಪಾಟಾದವು. ಈಗ ಆ ಹೊಂಗನಸನ್ನು ಕೆಟ್ಟ ಕನಸೆಂದು ಮರೆಯಬೇಕಾಗಿದೆ.
ಆದರೆ ಸಿನಿಮಾಕ್ಕೆ ಹೋಗುವಾಗ ತಲೆನೋವೆಂದು ಹೇಳುತ್ತಿದ್ದ ನನ್ನ ಹೆಂಡತಿಗೆ ಹೊಂಗನಸು ನೋಡಿ ಹೊರಬರುವಾಗ ತಲೆ ನೋವು ಮಂಗಮಾಯವಾಗಿದ್ದು ಮಾತ್ರ ಸತ್ಯ. ಅಷ್ಟರ ಮಟ್ಟಿಗೆ ನಿರ್ದೇಶಕ ಯಶಸ್ವಿಯಾಗಿದ್ದಾನೆ.
ಗೂಗ್ಲಿ: ಹೊಂಗನಸಿನಂತಹ ಸಿನಿಮಾಗಳನ್ನೂ ನೋಡಬೇಕು. ಯಾಕೆಂದರೆ ಒಳ್ಳೆಯ ಸಿನಿಮಾಕ್ಕೂ ಕೆಟ್ಟ ಸಿನಿಮಾಕ್ಕೂ ಇರುವ ವ್ಯತ್ಯಾಸ ಅರಿಯಲು.

Friday, January 18, 2008

ಸಿನಿಮಾ ನೋಡಿ ಅಳದೇ ಅದೆಷ್ಟು ವರ್ಷವಾಗಿತ್ತು!


ಸಿನಿಮಾ ನೋಡಿ ನಾನು ಅತ್ತಿದ್ದು ಯಾವಾಗ?

ಎಷ್ಟು ಪ್ರಯತ್ನಪಟ್ಟರೂ ನೆನಪಾಗುತ್ತಿಲ್ಲ.

ನನಗೆ ತಿಳಿಯಲು ಆರಂಭವಾದಾಗಿನಿಂದ ಸಿನಿಮಾ ನೋಡಿ ಅತ್ತಿದ್ದು ಹೆಚ್ಚೆಂದರೆ ಒಂದೆರಡು ಬಾರಿ ಮಾತ್ರ. ಹೈಸ್ಕೂಲ್ ದಾಟಿದ ಮೇಲೆ ಸಿನಿಮಾ ನೋಡಿ ಅತ್ತ ದಾಖಲೆಯೇ ಇಲ್ಲ.

ಆದರೆ ಮೊನ್ನೆ ಅತ್ತುಬಿಟ್ಟೆ. ತಾರೆ ಜಮೀನ್ ಪರ್ ಸಿನಿಮಾ ನೋಡಿ ಅತ್ತುಬಿಟ್ಟೆ. ಅತ್ತುಬಿಟ್ಟೆ ಅನ್ನುವುದಕ್ಕಿಂತ ಹಲವು ಬಾರಿ ಅಳು ಬಂತು ಅನ್ನುವುದು ಹೆಚ್ಚು ಸೂಕ್ತ.

ಸಾಮಾನ್ಯವಾಗಿ ಸಿನಿಮಾ ನೋಡಿ ನಾನು ಅಳುವುದಿಲ್ಲ. ಸಿನಿಮಾವನ್ನು ಕೇವಲ ಸಿನಿಮಾ ಎಂದು ನೋಡಿದವನು ನಾನು. ಅದರಲ್ಲೂ ಒಬ್ಬ ಪತ್ರಿಕೋದ್ಯಮ ವಿದ್ಯಾರ್ಥಿಯಾಗಿ, ಸಿನಿಮಾ ನೋಡುವುದು ಹೇಗೆ ಎಂಬುದನ್ನು ಮೇಸ್ಟ್ರರಿಂದ ಹೇಳಿಸಿಕೊಂಡವನಾಗಿ ಸಿನಿಮಾದೊಳಗೆ ಭಾವನಾತ್ಮಕವಾಗಿ ಸೇರಿ ಹೋಗುವುದು ಬಹಳ ಕಡಿಮೆ. ಆದರೆ ತಾರೆ ಜಮೀನ್ ಪರ್ ನೋಡುವಾಗ ಮಾತ್ರ ಅದು ಸಾಧ್ಯವೇ ಆಗಲಿಲ್ಲ.

ಯಾಕಿರಬಹುದು?

ನಾನೂ ಚಿಕ್ಕವನಿರುವಾಗ ಬೇಕಾದಷ್ಟು ಬಾರಿ ಅಪ್ಪನಿಂದ ಬೈಸಿ, ಹೊಡೆಸಿಕೊಂಡಿದ್ದಕ್ಕಾ? ಕಡಿಮೆ ಮಾರ್ಕ್ಸ್ ತಗೊಂಡೆ ಎಂದು ಬೈಸಿಕೊಂಡಿದ್ದಕ್ಕಾ? ಹೆಚ್ಚು ಮಾರ್ಕ್ಸ್ ಪಡೆಯದೇ, ಓದದೇ, ಕ್ರಿಕೆಟ್ ಆಡಿದ್ದಕ್ಕೆ ಒಂದಿಡೀ ದಿನ ಮನೆಯ ಹೊರಗೇ ನಿಲ್ಲುವ ಶಿಕ್ಷೆ ಅನುಭವಿಸಿದ್ದಕ್ಕಾ? ಇದೆಲ್ಲದರ ಪರಿಣಾಮ ನಾನು ತಾರೆ ಜಮೀನ್ ಪರ್ ಹಿರೋ ಬಾಲಕನ ಜತೆ ನನ್ನನ್ನೇ ಗುರುತಿಸಿಕೊಂಡೆನಾ?

ಬಹುಶಃ ಹೌದು. ಅದರ ಪರಿಣಾಮವೇ ಕಣ್ಣು ನೀರಾಡಿದ್ದು.

ನಾನಾದರೋ ಕಲಿಯುವಾಗ ಅಷ್ಟೇನೂ ಸ್ಪರ್ಧೆ ಇರಲಿಲ್ಲ. ಕಲಿಯದಿದ್ದರೆ, ಶೇ.೮೫ಕ್ಕಿಂತ ಹೆಚ್ಚು ಮಾರ್ಕ್ಸ್ ಪಡೆಯದಿದ್ದರೆ ಕೆಲಸ ಸಿಗದೇ ನಿಷ್ಪ್ರಯೋಜಕ ಎನಿಸಿಕೊಳ್ಳಬೇಕಾದ ಸ್ಥಿತಿ ಬರುತ್ತದೆ ಎಂಬ ಸ್ಥಿತಿ ಇರಲಿಲ್ಲ. ಈಗಿನ ಹಾಗೆ ೧೦೦ಕ್ಕೆ ೯೯, ೯೮ ಮಾರ್ಕ್ಸ್‌ಗಳೂ ಆಗ ಸಿಗುತ್ತಿರಲಿಲ್ಲ. ನಾನು ಯಾರ ಬಳಿಯೂ ಟ್ಯೂಶನ್ ಹೇಳಿಸಿಕೊಳ್ಳದೆ ಎಂಎ ಮುಗಿಸಿದೆ. ಈಗ ನೋಡಿದರೆ ೧-೨-೩ನೇ ತರಗತಿಗೇ ಟ್ಯೂಶನ್. ಎಸ್ಸೆಸ್ಸೆಲ್ಸಿ, ಪಿಯುಸಿ ಮಕ್ಕಳಿಗಂತೂ ಬೆಳಗ್ಗೆ ಟ್ಯೂಶನ್, ನಂತರ ಕ್ಲಾಸು. ಅದರ ನಂತರ ಮತ್ತೆ ಸಂಜೆ ಟ್ಯೂಶನ್, ರಜೆಯಲ್ಲಿ ಟ್ಯೂಶನ್. ಆ ಮಕ್ಕಳ ಮೇಲೆ ಅದೆಷ್ಟು ಒತ್ತಡ ಇರಬಹುದು? ಶೇ.೯೦, ೮೦ ಅಂಕ ಪಡೆಯುವ ಮಕ್ಕಳು ಒಳಗೊಳಿಂದೊಳಗೆ ಅದೆಷ್ಟು ಕುಸಿಯುತ್ತಿರಬಹುದು? ಕಲ್ಪನೆಗೂ ನಿಲುಕದ್ದು.

ಹೆಚ್ಚು ಅಂಕ ಪಡೆಯಲು ಮಕ್ಕಳ ಮೇಲೆ ಒತ್ತಡ ಹೇರುವ ಪಾಲಕರು ತಾರೆ ಜಮೀನ್ ಪರ್ ಸಿನಿಮಾ ನೋಡುವುದೊಳಿತು.

Tuesday, January 15, 2008

ಮನಸು ಮರೆಯದ ಮುನಾರ್

ಮೈ ಕೊರೆವ ಚಳಿ, ನೋಡಿದಲ್ಲೆಲ್ಲ ಹಚ್ಚ ಹಸಿರು. ಜತೆಯಲ್ಲಿ ಪ್ರೇಯಸಿಯ (ಹೆಂಡತಿಯದ್ದೂ ಆಗಬಹುದು) ಬೆಚ್ಚನೆಯ ಉಸಿರು. ಸ್ವರ್ಗಕ್ಕೆ ಕಿಚ್ಚು ಹಚ್ಚಲು ಇನ್ನೇನು ಬೇಕು?

ಒಂದಲ್ಲ ಎರಡಲ್ಲ 22 ಸಾವಿರ ಹೆಕ್ಟೇರ್ ಚಹಾ ತೋಟ! ಕಣ್ಣೋಟದುದ್ದಕ್ಕೂ ಸಮತಟ್ಟಾದ ಹಸಿರು! ಹದವಾಗಿ ಸುರಿಯುವ ಮಂಜು. ಅದರಿಂದುಂಟಾದ ಮಸುಕು ವಾತಾವರಣ. ಹತ್ತಿಯುಂಡೆಗಳಂತೆ ಕೈಗೆಟಕುವಷ್ಟು ದೂರದಲ್ಲಿ ಕಾಣುವ ಮೋಡಗಳು. ಸಿನಿಮಾಗಳಲ್ಲಿ ಹೊಗೆ ಹಾಕಿ ತೋರಿಸುವ ದೇವಲೋಕದ ಚಿತ್ರ ನೆನಪಾಗುತ್ತದೆ.
ಇದೆಲ್ಲ ಇಲ್ಲದೆ ಅದನ್ನು ದೇವರನಾಡು ಎಂದು ಕರೆಯುತ್ತಾರಾ?

ನಾನು ಕೇರಳದ ಮುನಾರ್ಗೆ ಹೋಗಿ ಬಂದು ಆಗಲೇ ಏಳು ತಿಂಗಳಾಯಿತು. ಮನಸಲ್ಲಿ ಮಾತ್ರ ಮುನಾರ್ ಸ್ವಲ್ಪವೂ ಮಸುಕಾಗಿಲ್ಲ. ಅಷ್ಟರಲ್ಲೇ ಮತ್ತೊಮ್ಮೆ ಮುನಾರ್‌ಗೆ ಹೋಗುವ ಆಸೆ ಮನಸಲ್ಲಿ. ಮುನಾರ್ ನಿಜಕ್ಕೂ ಕಣ್ಣು- ಮನಸ್ಸುಗಳಿಗೆ ಹಬ್ಬ! ನನ್ನ ಗೆಳೆಯ ಮಂಜು (ಮಿಸ್ಟ್ ಅಲ್ಲ) ಮುನಾರಿನ ಮಂಜಿನ ನಡುವೆ ತೆಗೆದ ಚಿತ್ರಗಳು ಆಗಾಗ ಮುನಾರ್ ನೆನಪನ್ನು ಹಸಿರಾಗಿಸಿ, ಮನಸನ್ನು ಹಸಿ ಮಾಡುತ್ತಲೇ ಇರುತ್ತವೆ.
ಮುನಾರ್ನಲ್ಲಿರುವ ರಾಜಮಲೈ ನಿಜಕ್ಕೂ ಭೂಲೋಕದ ಸ್ವರ್ಗ. ಅಪರೂಪದ ಮತ್ತು ವಿನಾಶದಂಚಿನಲ್ಲಿರುವ ನೀಲಗಿರಿ ಥಾರ್ ಹೆಸರಿನ ಆಡು ಜಾತಿಗೆ ಸೇರಿದ ಪ್ರಾಣಿಗಳು ಇಲ್ಲಿ ಮಾತ್ರ ಇವೆ. ಅತಿ ಎತ್ತರದ ಬೆಟ್ಟದ ಮೇಲಿರುವ ಈ ಸ್ಥಳಕ್ಕೆ ಅರಣ್ಯ ಇಲಾಖೆ ವಾಹನದಲ್ಲಿ ನಿಮ್ಮನ್ನು ಕರೆದುಕೊಂಡು ಹೋಗಿ ಬಿಡಲಾಗುತ್ತದೆ. ಅಲ್ಲಿ ಎಷ್ಟೊತ್ತು ಬೇಕಾದರೂ ನೀವು ಇರಬಹುದು. ಯಾರೂ ತಕರಾರು ಮಾಡುವುದಿಲ್ಲ.

ಈ ಸ್ಥಳದ ವಿಶೇಷತೆಯೆಂದರೆ ಪ್ರತಿ ೧೫ ನಿಮಿಷಕ್ಕೊಮ್ಮೆ ಇಲ್ಲಿ ವಾತಾವರಣ ಬದಲಾಗುತ್ತದೆ. ಅರೆಕ್ಷಣಕ್ಕೆ ಮಂಜು ಆವರಿಸಿಕೊಂಡು ಕೈ ಅಳತೆ ಅಂತರದಲ್ಲಿದ್ದವರು ಕಾಣದಂತಾಗುತ್ತದೆ. ಮಂಜೇ ಮಳೆಯಾಗಿ ಬದಲಾಗುತ್ತದೆ. ನಿಧಾನವಾಗಿ ಮಂಜು ಸರಿದು ತಿಳಿಯಾಗುತ್ತದೆ. ಮಂಜು ನಿಧಾನವಾಗಿ ಆಗಮಿಸಿ, ನಿಮ್ಮನ್ನಾವರಿಸಿ ಆಚೆ ಹೋಗುವುದನ್ನು ಇಲ್ಲಿ ಅನುಭವಿಸಬಹುದು.

ಇಲ್ಲಿ ಹೋದರೆ ಸಮಯ, ಮನೆ, ಕೆಲಸ, ಕೊನೆಗೆ ಪಕ್ಕದಲ್ಲಿರುವ ಹೆಂಡತಿ ಎಲ್ಲವೂ ಮರೆತೇ ಹೋಗುತ್ತದೆ. ಕೇರಳ ಸರಕಾರ ಅನುಮತಿ ಕೊಟ್ಟರೆ ಅಲ್ಲೇ ಸಣ್ಣದೊಂದು ಗುಡಿಸಲು ಕಟ್ಟಿಕೊಂಡು ಇದ್ದುಬಿಡೋಣ ಅನಿಸುವಷ್ಟು ಚೆಂದಗಿದೆ ಆ ಸ್ಥಳ.

ಹತ್ತಿರದಲ್ಲೇ ಒಂದೆರಡು ಡ್ಯಾಂಗಳಿವೆ. ಸಂಜೆಯಾದರೆ ಅದರ ಹಿನ್ನೀರು ಪ್ರದೇಶದಲ್ಲಿ ಆನೆಗಳು ನೀರಿಗೆಂದು ಬೆಟ್ಟ ಇಳಿದು ಬರುತ್ತವೆ. ಜತೆಗೇ ಮರಿಗಳೂ ಇದ್ದರೆ ಅದು ನಿಮಗೆ ಬೋನಸ್.

ಮುನಾರ್ ಬಹಳ ದೂರವೇನಿಲ್ಲ. ಮಂಗಳೂರಿನಿಂದ ೫೩೦ ಕಿ.ಮೀ. ಮಂಗಳೂರಿನಿಂದ ರೈಲಿನಲ್ಲಿಯೂ ಪ್ರಯಾಣಿಸಬಹುದು. (ಪೂರ್ತಿ ಮುನಾರ್‌ವರೆಗೆ ಅಲ್ಲ). ಆದರೆ ನಾವೇ ವಾಹನ ಮಾಡಿಸಿಕೊಂಡು ಹೋದರೆ ಅದರ ಮಜವೇ ಬೇರೆ. (ನಾವು ಸ್ಕಾರ್ಪಿಯೋ ತೆಗೆದುಕೊಂಡು ಹೋಗಿದ್ದೆವು.) ಕೇರಳ ನೋಡಿ ಕಲೀಬೇಕು ಕಣ್ರೀ ನಾವು ಕರ್ನಾಟಕದೋರು.

ಮುನಾರ್ ಎಂಬ ಊರನ್ನು ಆವರಿಸಿಕೊಂಡಿರುವ 22 ಸಾವಿರ ಹೆಕ್ಟೇರ್ ಚಹಾ ತೋಟ ಟಾಟಾದವರಿಗೆ ಸೇರಿದ್ದು. ಖಾಸಗಿಯವರಿಗೆ ಚಹಾ ತೋಟ ಮಾಡಲು ಕೊಟ್ಟೂ, ಅದನ್ನು ಪ್ರವಾಸಿ ತಾಣವಾಗಿ ಮಾಡುವಲ್ಲಿ ಮತ್ತು ಯಾವ ಪ್ರವಾಸಿಗರಿಗೂ ಅದೊಂದು ಖಾಸಗಿ ಚಹಾ ತೋಟ ಎಂಬ ಭಾವನೆ ಬರದ ರೀತಿಯಲ್ಲಿ ನಿಭಾಯಿಸಲಾಗಿದೆ. ಚಹಾ ತೋಟಗಳ ಮೇಲಿನ ಗುಡ್ಡದಲ್ಲಿ ರಾಜಮಲೈನಂತರ ಸುಂದರ ಸ್ಥಳವಿದೆ. ಅಲ್ಲಿ ನೀಲಗಿರಿ ಥಾರ್ ಎಂಬ ಅಪರೂಪದ ಪ್ರಾಣಿಗಳ ವಂಶವೃದ್ಧಿ ನಡೆದಿದೆ.
ನಮ್ಮ ರಾಜ್ಯದಲ್ಲೂ ಪ್ರವಾಸಿ ತಾಣಗಳಿವೆ. ಅವುಗಳನ್ನು ಜನರಿಗೆ ಸರಿಯಾಗಿ ಬಿಂಬಿಸಲು, ಸೌಲಭ್ಯ ಕಲ್ಪಿಸಲು ನಮ್ಮ ಸರಕಾರಕ್ಕೆ ಸಾಧ್ಯವಾಗಿಲ್ಲ. ನನ್ನ ಜಿಲ್ಲೆಯಾದ ಉತ್ತರ ಕನ್ನಡಕ್ಕೆ ಜಲಪಾತಗಳ ತವರೂರು ಎಂಬ ಹೆಸರಿದೆ. ಜೋಗ ಜಲಪಾತವನ್ನೂ ಮೀರಿಸುವಷ್ಟು ಸುಂದರವಾಗಿರುವ, ಹೆಚ್ಚು ನೀರಿರುವ ಜಲಪಾತಗಳು ಉತ್ತರ ಕನ್ನಡ ಜಿಲ್ಲೆಯಲ್ಲಿದೆ. ಆದರೆ ಅಲ್ಲಿಗೆ ಹೊರಟಿರೋ, ಒಂದು ರಸ್ತೆಗೂ ಸರಿಯಾದ ಬೋರ್ಡ್ ಇಲ್ಲ. ಹೊಸಬರು ನೇರವಾಗಿ ಜಲಪಾತದ ದಾರಿಗೆ ಹೋಗುವುದು ಸಾಧ್ಯವೇ ಇಲ್ಲ. ರಸ್ತೆಗಳ ಬಗ್ಗೆ ಮಾತಾಡದಿರುವುದೇ ಒಳ್ಳೆಯದು. ಯಾಣದಂತಹ ಪ್ರವಾಸಿ ತಾಣ ಪ್ರಸಿದ್ಧವಾಗಬೇಕಾದರೆ ನಮ್ಮೂರ ಮಂದಾರ ಹೂವೆ ಚಿತ್ರದಲ್ಲಿ ಅದನ್ನು ತೋರಿಸಬೇಕಾಯಿತು.
ಕೇರಳವನ್ನು ಸ್ವಲ್ಪ ಮಟ್ಟಿಗಾದರೂ ಅನುಸರಿಸಿದರೆ ಕರ್ನಾಟಕವೂ ದೇವರ ರಾಜ್ಯವಾದೀತು. ಏನಂತೀರಾ?

Thursday, January 03, 2008

ಮಾಂಸಾಹಾರಿ ಆಡು


ಆಡಿನ ಮಾಂಸ ಮನುಷ್ಯ ತಿನ್ನೋದು ಗೊತ್ತು. ಆಡು ಮಾಂಸ ತಿನ್ನೋದೇ?

ನಂಬಲಸಾಧ್ಯ. ಆದರೆ ನಂಬದೆ ಬೇರೆ ದಾರಿಯಿಲ್ಲ. ದೇವಸ್ಥಾನಗಳ ರಾಜ್ಯ ಎಂದೇ ಹೆಸರಾಗಿರುವ ಓರಿಸ್ಸಾದಲ್ಲಿ ಇಂತಹದ್ದೊಂದು ಆಡಿದೆ. ಅದು ಮಾಂಸವನ್ನೂ ತಿನ್ನುತ್ತದೆ ಸಾರಾಯಿ ಕುಡಿದು ಟೈಟೂ ಆಗುತ್ತದೆ. ಈ ವಿಶೇಷತೆಯೇ ಈ ಆಡಿನ ದೀರ್ಘಾಯಸ್ಸಿನ ಮೂಲ!

ಓರಿಸ್ಸಾದ ರಾಜಧಾನಿ ಭುವನೇಶ್ವರದಿಂದ ೩೫೦ ಕಿ.ಮೀ. ದೂರದಲ್ಲಿ ಹೆದ್ದಾರಿ ಬದಿಯಲ್ಲೇ ಇರುವ ಸನಾ ಬಡಾ ದಾಬಾದಲ್ಲಿದೆ ಈ ಆಡು. ಅದರ ಹೆಸರು ಮಂಟು. ಎರಡೂವರೆ ವರ್ಷದ ಈ ಮಂಟುವಿಗೆ ಬೇಯಿಸಿದ ಮಾಂಸ ತಿನ್ನುತ್ತದೆ. ದಾಬಾದಲ್ಲಿ ಆಡು ಕಡಿದು ಬೇಯಿಸಿ ಮಾಡುವ ಮಾಂಸವನ್ನೇ ಈ ಆಡು ತಿನ್ನುತ್ತದೆ. ಇದು ಮಾತು ಕೂಡ ಕೇಳುತ್ತದೆ. ಟೈಟಾದಾಗ ಕೂಡ! ಸತ್ತಂತೆ ಮಲಗಲು, ಹೊಡೆದಾಟದ ಪೋಸು ನೀಡಲು ಹೇಳಿದರೆ ಅರೆ ಕ್ಷಣದಲ್ಲಿ ಮಾಡಿ ತೋರಿಸುತ್ತದೆ ಈ ಆಡು.

ದಾಬಾದ ಮಾಲಿಕ ಸನಾ ನಾಯಕ್ ದಾಬಾದಲ್ಲಿ ಅಡುಗೆಗೆಂದೇ ಆಡು ಸಾಕುತ್ತಾರೆ. ಆದರೆ ಈ ವಿಶೇಷತೆ ಇರುವುದರಿಂದ ಮಂಟುವನ್ನು ಕಡಿದು ಅಡುಗೆ ಮಾಡಿಲ್ಲ. ಈ ಆಡಿನ ಆಕರ್ಷಣೆಗೆ ಜನ ಬರುತ್ತಾರೆ. ಜನ ಆಡಿನೊಂದಿಗೆ ಆಹಾರ ಹಂಚಿಕೊಳ್ಳುತ್ತಾರೆ ಎನ್ನುತ್ತಾನೆ ಮಾಲಿಕ.ಇಷ್ಟೇ ಅಲ್ಲ, ಗ್ರಾಕರ ಆಕರ್ಷಣೆಯ ಕೇಂದ್ರವಾಗಿರುವ ಈ ಆಡಿನ ಮದುವೆಯನ್ನು ಧಾಂ ಧೂಂ ಜೋರಾಗಿ ನಡೆಸಲು ಮಾಲಿಕ ಸಿದ್ಧತೆ ನಡೆಸಿದ್ದಾನೆ. ಸಚಿವರು, ಶಾಸಕರನ್ನೂ ಕರೆಸುವ ಯೋಚನೆ ಮಾಡಿದ್ದಾನೆ. ಅನುರೂಪವಾದ ಹೆಣ್ಣು (ಆಡು) ಸಿಗಬೇಕಷ್ಟೆ!