
ಕಾಶ್ಮೀರಿಗಳೆಲ್ಲ ಭಾರತದ ಪ್ರಜೆಗಳು. ಆದರೆ ಭಾರತದ ಪ್ರಜೆಯೊಬ್ಬ ಕಾಶ್ಮೀರಿಯಾಗಲು ಸಾಧ್ಯವಿಲ್ಲ! ನೀವು ಎಂದಿಗೂ ಕಾಶ್ಮೀರದ ಚುನಾವಣೆಯಲ್ಲಿ ಮತ ಚಲಾಯಿಸಲಾರಿರಿ. ಅಲ್ಲಿ ಭೂಮಿ ಕೊಳ್ಳಲಾರಿರಿ. ಅದೇ ಒಬ್ಬ ಕಾಶ್ಮೀರಿ ಪ್ರಜೆ ಹಂಪಿಗೆ ಬಂದು ಮತದಾರರ ಗುರುತುಪತ್ರ ಪಡೆಯಬಲ್ಲ. ವಿಜಾಪುರದಲ್ಲಿ ಭೂಮಿ ಖರೀದಿಸಿ, ಗಲ್ಲಿಯಲ್ಲಿ ವ್ಯಾಪಾರಿಯಾಗಲ್ಲ.
೬೧ ವರ್ಷದಲ್ಲಿ ಜಮ್ಮು-ಕಾಶ್ಮೀರ ಒಬ್ಬೇ ಒಬ್ಬ ಹಿಂದೂ ಮುಖ್ಯಮಂತ್ರಿಯನ್ನು ಕಂಡಿಲ್ಲ. ಒಬ್ಬ ಹಿಂದುವೂ ಪ್ರಮುಖ ಖಾತೆಯ ಸಚಿವನಾಗಲಿಲ್ಲ. ಕೇಂದ್ರ ಸರಕಾರ ಈ ರಾಜ್ಯದ ಪ್ರಜೆಗಳಿಗೆ ವರ್ಷಕ್ಕೆ ತಲಾ ೯,೭೫೪ ರೂ. ದೊರೆಯುವಷ್ಟು ಅನುದಾನ ನೀಡುತ್ತದೆ. ಬಿಹಾರದಂತಹ ರಾಜ್ಯಕ್ಕೆ ದಕ್ಕುವುದು ತಲಾ ೮೭೬ ರೂ.ನಷ್ಟು ಅನುದಾನ ಮಾತ್ರ. ಇಷ್ಟಾಗಿಯೂ ವಿದೇಶಾಂಗ, ಭದ್ರತೆ ಹಾಗೂ ಸಂಪರ್ಕ ಸಂಬಂಧಿ ಕಾನೂನುಗಳುನ್ನು ಬಿಟ್ಟರೆ ದೇಶದ ಅತ್ಯುನ್ನತ ಕೇಂದ್ರವಾದ ಲೋಕಸಭೆ ಜಾರಿ ಮಾಡಿದ ಕಾನೂನುಗಳು ಕಾಶ್ಮೀರಕ್ಕೆ ಲಾಗೂ ಆಗುವುದಿಲ್ಲ!
ವಿಶೇಷ ರಾಜ್ಯದ ಸವಲತ್ತುಗಳನ್ನು ಕಾಶ್ಮೀರ ಇಷ್ಟೂ ವರ್ಷ ತಕರಾರಿಲ್ಲದೆ, ಸುಖದಿಂದ ಅನುಭವಿಸಿಕೊಂಡುಬಂದಿದೆ. ಇಷ್ಟೆಲ್ಲ ಅನುಭವಿಸಿದ ಕಾಶ್ಮೀರಿಗಳು ಮಾಡಿದ್ದೇನು?
೬೧ನೇ ಸ್ವಾತಂತ್ರ್ಯೋತ್ಸವದ ದಿನ ಶ್ರೀನಗರದ ಲಾಲ್ಚೌಕ್ನಲ್ಲಿ ಹಾರಿಸಲಾಗಿದ್ದ ಭಾರತ ಧ್ವಜವನ್ನು ಕೆಲವೇ ಕ್ಷಣದಲ್ಲಿ ಇಳಿಸಿ, ಪಾಕಿಸ್ಥಾನ ಧ್ವಜ ಹಾರಿಸಿದರು. ಪಾಕಿಸ್ಥಾನಕ್ಕೆ ಜಯಕಾರ ಕೂಗಿದರು. ಭಾರತದ ಸೈನ್ಯ ಜಮ್ಮು-ಕಾಶ್ಮೀರ ಹೆದ್ದಾರಿಯನ್ನು ಸಂಚಾರಕ್ಕೆ ಮುಕ್ತವಾಗಿರಿಸಿತ್ತು. ಸರಕಾರಿ ಅಧಿಕೃತ ದಾಖಲೆಗಳ ಪ್ರಕಾರ ಆಗಸ್ಟ್ ತಿಂಗಳ ೧ ರಿಂದ ೧೦ನೇ ತಾರೀಕಿನವರೆಗೆ ೩,೦೭೨ ಲಾರಿಗಳು ಔಷಧಿ ಸೇರಿದಂತೆ ಅಗತ್ಯ ವಸ್ತುಗಳನ್ನು ಶ್ರೀನಗರಕ್ಕೆ ತಲುಪಿಸಿವೆ. ೨,೧೪೨ ಲಾರಿಗಳು ಕಾಶ್ಮೀರದಿಂದ ಹಣ್ಣು ತುಂಬಿಕೊಂಡು ಲಖನಪುರ ದಾಟಿ ದೇಶದ ಇತರ ಭಾಗಗಳಿಗೆ ಪ್ರಯಾಣ ಬೆಳೆಸಿವೆ. ಜುಲೈ ತಿಂಗಳಲ್ಲಿ ೨೫,೬೫೩ ಲಾರಿಗಳು ಈ ರಾಜ್ಯ ಪ್ರವೇಶಿಸಿ, ೧೫,೪೦೧ ಲಾರಿಗಳು ಹೊರಹೋಗಿವೆ. ಹೀಗಿದ್ದೂ ತಮ್ಮ ಬೆಳೆಗಳನ್ನು ಪಾಕಿಸ್ಥಾನದ ಮುಜಫಾರಾಬಾದಿಗೆ ತೆಗೆದುಕೊಂಡು ಹೋಗಿ ಮಾರಾಟ ಮಾಡುತ್ತೇವೆ ಎಂದು ಹೆದರಿಸಿದರು.
ಪ್ರತ್ಯೇಕತಾವಾದಿಗಳ ನಾಯಕ ಸಯ್ಯದ್ ಅಲಿ ಗೀಲಾನಿ ಸಾರ್ವಜನಿಕವಾಗಿ `ಪಾಕಿಸ್ತಾನ ಸೇರಬಯಸುತ್ತೇವೆ. ಕಾಶ್ಮೀರಿಗಳೆಲ್ಲ ಪಾಕಿಸ್ತಾನಿಗಳು' ಎಂದ. ಕಾಫಿರರೇ ಕಾಶ್ಮೀರ ಬಿಟ್ಟು ತೊಲಗಿ ಎಂದು ಘೋಷಣೆ ಮೊಳಗಿತು. ನಮ್ಮ ತೆರಿಗೆ ದುಡ್ಡಿನಲ್ಲಿ ಇಷ್ಟು ವರ್ಷ ಸಕಲ ಸವಲತ್ತು ನೀಡಿ ಸಾಕಿದ್ದಕ್ಕೆ ಈಗ ದಕ್ಕಿದ್ದು `ಕಾಫಿರರು' ಎಂಬ ಬಿರುದು!
ನಮ್ಮ ಕೇಂದ್ರ ಸರಕಾರ ಮಾತ್ರ ಇನ್ನೂ `ಪಾಪ ಕಾಶ್ಮೀರಿ ಮುಸ್ಲಿಮರಿಗೆ ಬೇಸರವಾಗುತ್ತದೆ. ಹಾಗಾದರೆ ಮುಂಬರುವ ಲೋಕಸಭೆ ಚುನಾವಣೆಯಲ್ಲಿ ಮುಸ್ಲಿಮರ ಮತಗಳು ಸಿಗದೇ ಹೋಗುತ್ತದೆ' ಎಂದು ಮಾತಾಡದೆ ಸುಮ್ಮನೆ ಕುಳಿತಿತು.`ಪಾಕಿಸ್ತಾನದ ಮುಜಫರಾಬಾದಿಗೆ ಹೋಗುವವರು ಹೋಗಬಹುದು. ಆದರೆ ಮರಳಿ ಬರುವಂತಿಲ್ಲ. ಅವರು ಅಲ್ಲೇ ಉಳಿಯಲಿ' ಎಂದು ಹೇಳುವ, `ಪಾಕಿಸ್ತಾನ ಧ್ವಜ ಹಾರಿಸಿದವನಿಗೆ ಗುಂಡಿಕ್ಕಲು ಹಿಂಜರಿಯುವುದಿಲ್ಲ' ಎಂದಬ್ಬರಿಸುವ ಒಬ್ಬ ಗಂಡು ಕೇಂದ್ರ ಸರಕಾರದಲ್ಲಿ ಕಾಣಲಿಲ್ಲ.
ಹಾಗೇನಾದರೂ ಹೇಳಿದ್ದಲ್ಲಿ ಮುಜಫರಾಬಾದಿಗೆ ಹೊರಟವರ ಬಾಯಿ ಕಟ್ಟಿಹೋಗುತ್ತಿತ್ತು. ರಾಲಿ ಸದ್ದಿಲ್ಲದೆ ನಿಂತುಹೋಗುತ್ತಿತ್ತು. ಅಷ್ಟರ ಹೊರತಾಗಿಯೂ ಅವರು ಹೋಗಿದ್ದರೆ ದೇಶಕ್ಕೆ ನಷ್ಟವೇನೂ ಆಗುತ್ತಿರಲಿಲ್ಲ ಬಿಡಿ.
ಪ್ರತ್ಯೇಕತೆಯ ಕೂಗು ಭಾರತಕ್ಕೆ ಹೊಸದಲ್ಲ. ನಾಗಾಲ್ಯಾಂಡ್, ಆಸ್ಸಾಂ, ಮಿಜೋರಾಂ, ತಮಿಳುನಾಡು, ಪಂಜಾಬ ಕೂಡ ಪ್ರತ್ಯೇಕವಾಗಬಯಸಿದ್ದವು. ಆದರೆ ಭಾರತದ ಪ್ರಜಾಪ್ರಭುತ್ವ ವ್ಯವಸ್ಥೆ ಅವಕ್ಕೆಲ್ಲ ಒಂದು ಪರಿಹಾರ ಕಂಡುಕೊಂಡಿದೆ. ಆ ಮೂಲಕ ಏಕಾಗ್ರತೆ ಉಳಿಸಿಕೊಂಡು, ಅವರನ್ನೂ ದೇಶದೊಳಗೊಂದಾಗಿಸಿದೆ. ಕ್ರೂರ, ಅತಿಕ್ರೂರವಾಗಿ ಶಕ್ತಿಯ ಬಳಕೆ, ಪ್ರತ್ಯೇಕತಾವಾದಿ ನಾಯಕರನ್ನು ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ತೊಡಗಿಸಿಕೊಂಡಿದ್ದು ಹಾಗೂ ಉದಾರ ಅನುದಾನ ಹೀಗೆ ೩ ವಿಧಾನಗಳ ಮೂಲಕ ಪ್ರತ್ಯೇಕತೆಯ ಸದ್ದಡಗಿಸಲಾಗಿದೆ. ಇದರ ಪರಿಣಾಮ ನಾಗಾಗಳು ಕೂಡ ಈಗ ರಾಜ್ಯದ ಗಡಿ ವ್ಯತ್ಯಾಸಕ್ಕೆ ಹೋರಾಟ ಸೀಮಿಗೊಳಿಸಿದ್ದಾರೆ. ತಮಿಳುನಾಡಿನ ಹಿಂದಿ ವಿರುದ್ಧದ ಪ್ರತಿಭಟನೆ ಈಗ ಮಸುಕು ನೆನಪು ಮಾತ್ರ.
ಆದರೆ ಕಾಶ್ಮೀರ? ಊಹುಂ. ಕೇಂದ್ರ ಉದಾರವಾಗಿ ಹಣ ನೀಡಿದೆ. ವಾರ್ಷಿಕ ಅನುದಾನದ ಜತೆಗೆ ೨೦೦೪ರಲ್ಲಿ ೫೦,೦೦೦ ಕೋಟಿ ವಿಶೇಷ ಅನುದಾನ ನೀಡಿದೆ. ವಿಶೇಷ ಸ್ಥಾನಮಾನ ಮೊದಲಿಂದಲೂ ಇದೆ. ಎಲ್ಲವನ್ನೂ ಪಡೆದು ಅನುಭವಿಸುತ್ತಲೇ ಕಾಶ್ಮೀರಿಗಳು ರಾಜಕೀಯ ಸ್ವಾತಂತ್ರ್ಯ ಇಲ್ಲ ಎಂದರು. ಅದನ್ನೂ ಕೊಡಲಾಯಿತು. ೨೦೦೪ರಲ್ಲಿ ವಿಶ್ವವೆ ಮೆಚ್ಚುಗೆ ವ್ಯಕ್ತಪಡಿಸುವಂತೆ ಚುನಾವಣೆಯೂ ನಡೆಯಿತು. ಇದಕ್ಕಿಂತ ಹೆಚ್ಚಿನದೇನನ್ನು ಕೊಡಲು ಸಾಧ್ಯ? ಪಾಕ್ ಆಕ್ರಮಿತ ಕಾಶ್ಮೀರಕ್ಕೆ ಇದೆಲ್ಲ ದಕ್ಕಿದೆಯೇನು?ಆದರೂ ಕಾಶ್ಮೀರಿಗಳಿಗೆ ಸಮಾದಾನವಿಲ್ಲ. ಅಮರನಾಥ ದೇವಸ್ಥಾನ ಮಂಡಳಿಗೆ ಭೂಮಿ ಕೊಟ್ಟಿದ್ದನ್ನೆ (ಪುಕ್ಕಟೆ ಕೊಟ್ಟಿದ್ದೂ ಅಲ್ಲ) ನೆಪಮಾಡಿ ದೊಡ್ಡ ಗಲಾಟೆ ಎಬ್ಬಿಸಿದರು. ಅವರ ೨ ದಿನದ ಪ್ರತಿಭಟನೆಗೆ ಹೆದರಿದ ಸರಕಾರ ಭೂಮಿ ಹಿಂಪಡೆಯಿತು. ಅಲ್ಲಿಗೆ ಕಾಶ್ಮೀರಿಗಳ ಪ್ರತಿಭಟನೆ ನಿಲ್ಲಬೇಕಿತ್ತು. ಹಾಗಾಗಲಿಲ್ಲ. ಈಗ ಅಮರನಾಥ ಭೂ ವಿವಾದ ಕಾಶ್ಮೀರಿಗರ ಬೇಡಿಕೆಯಾಗಿ ಉಳಿದಿಲ್ಲ. ಅವರದ್ದು ಮತ್ತದೇ ಪ್ರತ್ಯೇಕತೆಯ ಕೂಗು.
ಕಾಶ್ಮೀರ ಭಾರತದ ತಲೆ ಇದ್ದಂತೆ ಎಂದು ಅದ್ಯಾವ ಮಹಾನುಭಾವರು ಹೇಳಿದರೋ? ಕಾಶ್ಮೀರ ಸದಾ ದೇಶಕ್ಕೆ ತಲೆನೋವಾಗೇ ಉಳಿದಿದೆ. ಇನ್ನೂ ಎಷ್ಟು ದಿನ ಅದನ್ನು ಸಹಿಸಿಕೊಳ್ಳುವುದು? ಇನ್ನೆಷ್ಟು ವರ್ಷ ವಿಶೇಷ ರಾಜ್ಯದ ಕಿರೀಟ ತೊಡಿಸುವುದು? ಅಥವಾ ದೇಶವಿರುವಷ್ಟು ಕಾಲವೂ ಕಾಶ್ಮೀರ ವಿಶೇಷ ರಾಜ್ಯವಾಗೇ ಉಳಿಯಬೇಕೇ?
ವಿಶೇಷ ರಾಜ್ಯ ಎಂಬ ನೆಪದಲ್ಲಿ ಕಾಶ್ಮೀರಕ್ಕೆ ಸಿಗುವ ಸವಲತ್ತುಗಳನ್ನು ನೋಡಿದರೆ ಎಲ್ಲ ರಾಜ್ಯಗಳು `ನಮ್ಮನ್ನೂ ವಿಶೇಷ ರಾಜ್ಯ ಎಂದು ಘೋಷಿಸಿ' ಎಂದು ಹೋರಾಟ ಆರಂಭಿಸುವ ಅಪಾಯವಿದೆ. ಭಾರತದೊಂದಿಗೆ ಸೇರಿದ ೬೧ ವರ್ಷಗಳ ನಂತರವೂ ಕಾಶ್ಮೀರದ ಜನ ಭಾರತದೊಂದಿಗೆ ಮಾನಸಿಕವಾಗಿ ಬೆರೆತೇ ಇಲ್ಲ. (ಭಾರತದ ಪರವಾಗಿದ್ದ ಪಂಡಿತರನ್ನೆಲ್ಲ ಅಲ್ಲಿಂದ ಓಡಿಸಲಾಗಿದೆ ಬಿಡಿ) ಅದೆಲ್ಲಕ್ಕಿಂತ ಹೆಚ್ಚಾಗಿ ಅವರು ಪ್ರತ್ಯೇಕತೆಯ ಅಸ್ತ್ರವನ್ನು ದೇಶವನ್ನು ಹೆದರಿಸಲೆಂದೇ ಬಳಸಿಕೊಂಡುಬಂದಿದ್ದಾರೆ.`ಸಣ್ಣ ಮಕ್ಕಳು ಆಟವಾಡುವಾಗ ನೀನು ಹಂಗೆಲ್ಲ ಮಾಡಿದರೆ ನಾನು ಬರಲ್ಲ ಅಂತ ಮುಖ ತಿರುಗಿಸುತ್ತಾರಲ್ಲ, ವಯಸ್ಸಿಗೆ ಬಂದ ಮಗ ಅಪ್ಪನನ್ನು ಮನೆ ಬಿಟ್ಟುಹೋಗುತ್ತೇನೆಂದು ಹೆದರಿಸುತ್ತಾನಲ್ಲ ಹಾಗೆ...
ಕಾಶ್ಮೀರಿಗಳು ಭಾರತದೊಂದಿಗಿದ್ದೇ ಸುಖವಾಗಿದ್ದಾರೆ. ಹಾಗೊಮ್ಮೆ ಅವರು ಸುಖವಾಗಿಲ್ಲವಾಗಿದ್ದರೆ ಹಿಂಸೆಗೆ ಹೆದರಿ ಪಂಡಿತರು ಕಾಶ್ಮೀರ ತೊರೆದಂತೆ ಅವರೂ ಕಾಶ್ಮೀರ ಬಿಟ್ಟು ಹೋಗುತ್ತಿದ್ದರು. ಪಾಕ್ ಆಕ್ರಮಿತ ಕಾಶ್ಮೀರದ ಸ್ಥಿತಿ ನೋಡಿ ಪಾಕಿಸ್ತಾನಕ್ಕೆ ಸೇರಿದರೆ ಏನಾಗುತ್ತದೆ ಎಂಬುದನ್ನು ಅವರು ಅರಿತಿದ್ದಾರೆ. ಹಾಗಾಗಿ ಪಾಕಿಸ್ತಾನ ಸೇರುವುದು ಇಷ್ಟವಿಲ್ಲ. ಸ್ವತಂತ್ರ್ಯ ರಾಷ್ಟ್ರ ಅನ್ನುತ್ತಾರೆ. ಒಂದೊಮ್ಮೆ ಕಾಶ್ಮೀರಕ್ಕೆ ಸ್ವಾತಂತ್ರ್ಯ ಕೊಟ್ಟರೆ ಪಾಕಿಸ್ತಾನ ಅದನ್ನು ಬಿಟ್ಟೀತೇ? ಹಾಗೊಮ್ಮೆ ಬಿಟ್ಟರೂ ಒಂದು ರಾಷ್ಟ್ರವಾಗಿ, ಪ್ರಜೆಗಳು ಸುಖವಾಗಿ ಬದುಕುವ ರಾಷ್ಟ್ರವಾಗಿ ಉಳಿಯಲು ಸಾಧ್ಯವಾದೀತೇ?
ಇದೆಲ್ಲ ಆಗದ ಮಾತು ಎಂಬುದು ಕಾಶ್ಮೀರಿಗಳಿಗೂ ಗೊತ್ತಿದೆ. ನ್ಯಾಶನಲ್ ಕಾನ್ಫರೆನ್ಸ್ ಪಕ್ಷದ ಮುಖ್ಯಸ್ಥ ಫಾರೂಕ್ ಅಬ್ದುಲ್ಲಾ `ಪ್ರತ್ಯೇಕತೆಯ ಕೂಗು ಕ್ಷೀಣಿಸುತ್ತದೆ. ಸ್ವತಂತ್ರ್ಯ ರಾಷ್ಟ್ರವಾಗಿ ಉಳಿಯುವುದು ಸಾಧ್ಯವಿಲ್ಲ. ಮಾತುಕತೆ, ಹೊಂದಾಣಿಕೆಯಲ್ಲಿ ಮುಕ್ತಾಯವಾಗಲಿದೆ' ಎಂದು ಹೇಳಿರುವುದು ಇದಕ್ಕೆ ಸಾಕ್ಷಿ.
ಆದರೇನು ಮಾಡುವುದು ಅವರಿಗೆ ಹಠ ಮಾಡಿ ರೂಢಿಯಾಗಿದೆ. ಕೆಲವು ಮಕ್ಕಳು ರಚ್ಚೆ ಹಿಡಿಯುತ್ತಾರಲ್ಲ ಹಾಗೆ. ಆಗಾಗ ನಾವು ಪಾಕಿಸ್ತಾನಕ್ಕೆ ಸೇರುತ್ತೇವೆ ಅನ್ನುವುದು. ಸ್ವಾತಂತ್ರ್ಯ ಕೊಡಿ ಅನ್ನುವುದು. ಅದಕ್ಕೆ ಹೆದರಿ ದಿಲ್ಲಿ ದೊರೆಗಳು ಕೊಡುವ ವಿಶೇಷ ಕೊಡುಗೆ ಸ್ವೀಕರಿಸಿ ಸುಮ್ಮನಾಗುವುದು. ಅವರಿಗೆ ಹಠ ಮಾಡುವ ಚಟ, ಇವರಿಗೆ ಸಮಾದಾನ ಮಾಡುವ ಸಂಭ್ರಮ!
ಸಾಕು, ಇಷ್ಟು ವರ್ಷ ಅವರನ್ನು ವಿಶೇಷವಾಗಿ ಸಲಹಿದ್ದು ಸಾಕು. ಸ್ವಾತಂತ್ರ್ಯ ಬಂದಾಗ, ಅದ್ಯಾವುದೋ ಅನಿವಾರ್ಯ ಸ್ಥಿತಿಯಲ್ಲಿ ಭಾರತಕ್ಕೆ ಸೇರಿದಾಗ ಇದ್ದ ಜನಾಂಗ ಈಗಿಲ್ಲ. ಈಗ ಕಾಶ್ಮೀರದಲ್ಲಿರುವುದು ಹೊಸ ಜನಾಂಗ. ಚಾನಲ್ಗಳಲ್ಲಿ ನೋಡಿದರೆ ೧೫-೪೦ ವರ್ಷದವರೇ ಪ್ರತಿಭಟನೆಗಳಲ್ಲಿ ಕಾಣಸಿಗುತ್ತಾರೆ. ಅಂದರೆ ಅವರು ಹುಟ್ಟಾ ಭಾರತೀಯರು. ಭಾರತಕ್ಕೆ ಕಾಶ್ಮೀರ ಸೇರುವಾಗ ಇದ್ದ ಜನರಿಗೆ ವಿಶೇಷ ಸೌಲಭ್ಯಗಳನ್ನು ಕೊಡುವುದು ನ್ಯಾಯಯುತ. ಒಪ್ಪಿಕೊಳ್ಳೋಣ. ಈಗಿನವರಿಗೂ ಅದನ್ನು ನೀಡುವ ಅಗತ್ಯ ಖಂಡಿತ ಇಲ್ಲ.
ಕಾಶ್ಮೀರ ವಿಶೇಷ ರಾಜ್ಯವಾಗಿ ಮೆರಿದಿದ್ದು ಸಾಕು. ಅದನ್ನೂ ದೇಶದ ಇತರ ರಾಜ್ಯಗಳಂತೆ ಪರಿಗಣಿಸುವತಾಗಲಿ. ಅವರೂ ನಮ್ಮ ಹಾಗೆ ಹೊಂಡದಿಂದ ಕೂಡಿದ, ರಸಗೊಬ್ಬರ ಸಿಗದ, ನಮ್ಮ ರಾಜ್ಯಗಳಷ್ಟೇ ಅನುದಾನ ಪಡೆಯುವ, ದಕ್ಕಬೇಕಾದ್ದನ್ನೂ ಹೋರಾಟ ಮಾಡಿಯೇ ದಕ್ಕಿಸಿಕೊಳ್ಳಬೇಕಾದ ಸ್ಥಿತಿ ಅನುಭವಿಸಲಿ. ಆಗ ಅವರ ಹಠ ಕಡಿಮೆಯಾದೀತು.
ಬಗ್ಗಿದವನ ಬೆನ್ನಿಗೊಂದು ಗುದ್ದು ಎಂದು ಹಳೇ ಮಾತಿದೆ. ಹಾಗೆ ದಿಲ್ಲಿಯಲ್ಲಿನ ಕೇಂದ್ರ ಸರಕಾರಗಳು ಕಾಶ್ಮೀರಿಗಳ ಎದುರು ಬಗ್ಗಿದ್ದಷ್ಟೇ ಅಲ್ಲ ಕುಕ್ಕುರುಗಾಲಿನಲ್ಲಿ ಕುಳಿತಿದೆ. ಅದಕ್ಕೇ ಅವರು ಆಗಾಗ ಗುದ್ದುತ್ತಿರುತ್ತಾರೆ. ಕೇಂದ್ರ ಸರಕಾರ ಸೆಟೆದು ನಿಂತುಕೊಳ್ಳಲಿ. ದೇಶದ ಮುಸ್ಲಿಮರಿಗೆಲ್ಲಿ ಬೇಸರವಾಗುತ್ತದೋ ಎಂದು ಅಂಜುವ ಅಗ್ಯವಿಲ್ಲ. ಯಾಕೆಂದರೆ ಕಾಶ್ಮೀರಿ ಮುಸ್ಲಿಮರ ಬಗ್ಗೆ ದೇಶದ ಇತರೆಡೆಯ ಮುಸ್ಲಿಮರೇನು ವಿಶೇಷ ಒಲವು ಹೊಂದಿಲ್ಲ. ಇದು ಮೊದಲು ಮತ್ತು ಈಗ ಸಾಬೀತಾಗಿದೆ. ಹಾಗಾಗಿ ಕೇಂದ್ರ ಸರಕಾರ ಧೈರ್ಯದಿಂದ ಈ ನಿರ್ಧಾರ ತೆಗೆದುಕೊಳ್ಳಬಹುದು.
ಇಷ್ಟೆಲ್ಲ ಆದ ನಂತರವೂ ಕಾಶ್ಮೀರಕ್ಕೆ ವಿಶೇಷ ಸ್ಥಾನ-ಮಾನ ಮುಂದುವರಿಸಿದರೆ, ವಿಶೇಷ ಸ್ಥಾನಮಾನದ ಆಸೆಗಾಗಿ ಪ್ರತ್ಯೇಕತೆಯ ಪೀಪಿ ಮೊಳಗಿಸುವಂತೆ ಇತರೆ ರಾಜ್ಯಗಳಿಗೆ ನಾವೇ ಪ್ರೋತ್ಸಾಹ ನೀಡಿದಂತಾಗುತ್ತದೆ.
3 comments:
ವಿನಾಯಕ,
ಓಳ್ಳೆಯ ಲೇಖನ. ಆದರೆ ಈಗಿನ ನಪುಂಸಕ ಸರಕಾರಕ್ಕೆ ಆ ಧೈರ್ಯ ಎಲ್ಲಿ? ಇದಕ್ಕೂ ಮೊದಲು ಎನ್.ಡಿ.ಎ ಸರಕಾರವಿದ್ದಾಗ ಅದಾದರೂ ಏನಾದರೂ ಮಾಡಿತ್ತೇ? ಕಾಶ್ಮೀರಿಗಳ ಸೊಕ್ಕು ದಿನ ಕಳೆದಂತೆ ಹೆಚ್ಚಾಗುತ್ತಿದೆ. ಆದರೆ ದೇಶದ ಸರಕಾರ ಮಾತ್ರ ದಿವ್ಯ ಮೌನ ವಹಿಸಿದೆ. ಸ್ವಲ್ಪ ದಿಟ್ಟ ಮಾತುಗಳನ್ನು ಆಡಲು ಸರಕಾರ ಕಲಿತಿದ್ದರೆ ಒಳ್ಳೆಯದಿತ್ತು.
ನೀವು ಹೇಳಿದ್ದು ಸರಿ.
ಮಂಗಳೂರಿನಲ್ಲಿ ಸಣ್ಣ ಘಟನೆಗಳಿಗೂ ಮೈಲೇಲೆ ಬಂದಂತೆ ವರ್ತಿಸುವ ಮಾನವ ಹಕ್ಕುಗಳ ಆಯೋಗ, ಮಾನವ ಹಕ್ಕು ಸಂಘಟನೆಗಳು ಕಾಶ್ಮೀರ ವಿಚಾರದಲ್ಲಿ ಏಕೆ ಕುರುಡರಾಗಿದ್ದರೆನೋ? ಕಾಶ್ಮೀರದಲ್ಲಿ ನಡೆಯುತ್ತಿರುವುದು ನಡೆದದ್ದು ಕಾಶ್ಮೀರಿ ಪಂಡಿತರ genocide ಅಂತ ತಿಳಿದಿದ್ದಿರೂ ಮೌನವಾಗಿರುವ ಪ್ರತಿಯೊಬ್ಬರೂ ಹೇಡಿಗಳೇ. ನಮ್ಮದೇ ಸಹೋದರ ಜನಾಂಗದ ಸರ್ವನಾಶ ಆಗುತ್ತಿದ್ದರು ಅದನ್ನು ಎತ್ತಿ ಹೇಳಲು ಫ್ರಂಕ್ವೆ ಗೊತಿಯೇ ಫ್ರಾನ್ಸ್ ನಿಂದ ಬರಬೇಕೆ. ಕಾಶ್ಮೀರ ಮರಳಿ ಪಂಡಿತರ ಕೈಗೆ ಸಿಕ್ಕಾಗ ಮಾತ್ರ ಕಾಶ್ಮೀರ ಭಾರತದ ಕಾಶ್ಮೀರ ಅನಿಸುತ್ತದೆ. ಅಲ್ಲಿ ತನಕ ನಮ್ಮ ಕಾಶ್ಮೀರಕ್ಕೂ ಪಾಕಿಸ್ತಾನದ ಆಜಾದಿ ಕಾಶ್ಮೀರಕ್ಕೂ ವ್ಯತ್ಯಾಸವಿರದು
Post a Comment