Tuesday, January 15, 2008

ಮನಸು ಮರೆಯದ ಮುನಾರ್

ಮೈ ಕೊರೆವ ಚಳಿ, ನೋಡಿದಲ್ಲೆಲ್ಲ ಹಚ್ಚ ಹಸಿರು. ಜತೆಯಲ್ಲಿ ಪ್ರೇಯಸಿಯ (ಹೆಂಡತಿಯದ್ದೂ ಆಗಬಹುದು) ಬೆಚ್ಚನೆಯ ಉಸಿರು. ಸ್ವರ್ಗಕ್ಕೆ ಕಿಚ್ಚು ಹಚ್ಚಲು ಇನ್ನೇನು ಬೇಕು?

ಒಂದಲ್ಲ ಎರಡಲ್ಲ 22 ಸಾವಿರ ಹೆಕ್ಟೇರ್ ಚಹಾ ತೋಟ! ಕಣ್ಣೋಟದುದ್ದಕ್ಕೂ ಸಮತಟ್ಟಾದ ಹಸಿರು! ಹದವಾಗಿ ಸುರಿಯುವ ಮಂಜು. ಅದರಿಂದುಂಟಾದ ಮಸುಕು ವಾತಾವರಣ. ಹತ್ತಿಯುಂಡೆಗಳಂತೆ ಕೈಗೆಟಕುವಷ್ಟು ದೂರದಲ್ಲಿ ಕಾಣುವ ಮೋಡಗಳು. ಸಿನಿಮಾಗಳಲ್ಲಿ ಹೊಗೆ ಹಾಕಿ ತೋರಿಸುವ ದೇವಲೋಕದ ಚಿತ್ರ ನೆನಪಾಗುತ್ತದೆ.
ಇದೆಲ್ಲ ಇಲ್ಲದೆ ಅದನ್ನು ದೇವರನಾಡು ಎಂದು ಕರೆಯುತ್ತಾರಾ?

ನಾನು ಕೇರಳದ ಮುನಾರ್ಗೆ ಹೋಗಿ ಬಂದು ಆಗಲೇ ಏಳು ತಿಂಗಳಾಯಿತು. ಮನಸಲ್ಲಿ ಮಾತ್ರ ಮುನಾರ್ ಸ್ವಲ್ಪವೂ ಮಸುಕಾಗಿಲ್ಲ. ಅಷ್ಟರಲ್ಲೇ ಮತ್ತೊಮ್ಮೆ ಮುನಾರ್‌ಗೆ ಹೋಗುವ ಆಸೆ ಮನಸಲ್ಲಿ. ಮುನಾರ್ ನಿಜಕ್ಕೂ ಕಣ್ಣು- ಮನಸ್ಸುಗಳಿಗೆ ಹಬ್ಬ! ನನ್ನ ಗೆಳೆಯ ಮಂಜು (ಮಿಸ್ಟ್ ಅಲ್ಲ) ಮುನಾರಿನ ಮಂಜಿನ ನಡುವೆ ತೆಗೆದ ಚಿತ್ರಗಳು ಆಗಾಗ ಮುನಾರ್ ನೆನಪನ್ನು ಹಸಿರಾಗಿಸಿ, ಮನಸನ್ನು ಹಸಿ ಮಾಡುತ್ತಲೇ ಇರುತ್ತವೆ.
ಮುನಾರ್ನಲ್ಲಿರುವ ರಾಜಮಲೈ ನಿಜಕ್ಕೂ ಭೂಲೋಕದ ಸ್ವರ್ಗ. ಅಪರೂಪದ ಮತ್ತು ವಿನಾಶದಂಚಿನಲ್ಲಿರುವ ನೀಲಗಿರಿ ಥಾರ್ ಹೆಸರಿನ ಆಡು ಜಾತಿಗೆ ಸೇರಿದ ಪ್ರಾಣಿಗಳು ಇಲ್ಲಿ ಮಾತ್ರ ಇವೆ. ಅತಿ ಎತ್ತರದ ಬೆಟ್ಟದ ಮೇಲಿರುವ ಈ ಸ್ಥಳಕ್ಕೆ ಅರಣ್ಯ ಇಲಾಖೆ ವಾಹನದಲ್ಲಿ ನಿಮ್ಮನ್ನು ಕರೆದುಕೊಂಡು ಹೋಗಿ ಬಿಡಲಾಗುತ್ತದೆ. ಅಲ್ಲಿ ಎಷ್ಟೊತ್ತು ಬೇಕಾದರೂ ನೀವು ಇರಬಹುದು. ಯಾರೂ ತಕರಾರು ಮಾಡುವುದಿಲ್ಲ.

ಈ ಸ್ಥಳದ ವಿಶೇಷತೆಯೆಂದರೆ ಪ್ರತಿ ೧೫ ನಿಮಿಷಕ್ಕೊಮ್ಮೆ ಇಲ್ಲಿ ವಾತಾವರಣ ಬದಲಾಗುತ್ತದೆ. ಅರೆಕ್ಷಣಕ್ಕೆ ಮಂಜು ಆವರಿಸಿಕೊಂಡು ಕೈ ಅಳತೆ ಅಂತರದಲ್ಲಿದ್ದವರು ಕಾಣದಂತಾಗುತ್ತದೆ. ಮಂಜೇ ಮಳೆಯಾಗಿ ಬದಲಾಗುತ್ತದೆ. ನಿಧಾನವಾಗಿ ಮಂಜು ಸರಿದು ತಿಳಿಯಾಗುತ್ತದೆ. ಮಂಜು ನಿಧಾನವಾಗಿ ಆಗಮಿಸಿ, ನಿಮ್ಮನ್ನಾವರಿಸಿ ಆಚೆ ಹೋಗುವುದನ್ನು ಇಲ್ಲಿ ಅನುಭವಿಸಬಹುದು.

ಇಲ್ಲಿ ಹೋದರೆ ಸಮಯ, ಮನೆ, ಕೆಲಸ, ಕೊನೆಗೆ ಪಕ್ಕದಲ್ಲಿರುವ ಹೆಂಡತಿ ಎಲ್ಲವೂ ಮರೆತೇ ಹೋಗುತ್ತದೆ. ಕೇರಳ ಸರಕಾರ ಅನುಮತಿ ಕೊಟ್ಟರೆ ಅಲ್ಲೇ ಸಣ್ಣದೊಂದು ಗುಡಿಸಲು ಕಟ್ಟಿಕೊಂಡು ಇದ್ದುಬಿಡೋಣ ಅನಿಸುವಷ್ಟು ಚೆಂದಗಿದೆ ಆ ಸ್ಥಳ.

ಹತ್ತಿರದಲ್ಲೇ ಒಂದೆರಡು ಡ್ಯಾಂಗಳಿವೆ. ಸಂಜೆಯಾದರೆ ಅದರ ಹಿನ್ನೀರು ಪ್ರದೇಶದಲ್ಲಿ ಆನೆಗಳು ನೀರಿಗೆಂದು ಬೆಟ್ಟ ಇಳಿದು ಬರುತ್ತವೆ. ಜತೆಗೇ ಮರಿಗಳೂ ಇದ್ದರೆ ಅದು ನಿಮಗೆ ಬೋನಸ್.

ಮುನಾರ್ ಬಹಳ ದೂರವೇನಿಲ್ಲ. ಮಂಗಳೂರಿನಿಂದ ೫೩೦ ಕಿ.ಮೀ. ಮಂಗಳೂರಿನಿಂದ ರೈಲಿನಲ್ಲಿಯೂ ಪ್ರಯಾಣಿಸಬಹುದು. (ಪೂರ್ತಿ ಮುನಾರ್‌ವರೆಗೆ ಅಲ್ಲ). ಆದರೆ ನಾವೇ ವಾಹನ ಮಾಡಿಸಿಕೊಂಡು ಹೋದರೆ ಅದರ ಮಜವೇ ಬೇರೆ. (ನಾವು ಸ್ಕಾರ್ಪಿಯೋ ತೆಗೆದುಕೊಂಡು ಹೋಗಿದ್ದೆವು.) ಕೇರಳ ನೋಡಿ ಕಲೀಬೇಕು ಕಣ್ರೀ ನಾವು ಕರ್ನಾಟಕದೋರು.

ಮುನಾರ್ ಎಂಬ ಊರನ್ನು ಆವರಿಸಿಕೊಂಡಿರುವ 22 ಸಾವಿರ ಹೆಕ್ಟೇರ್ ಚಹಾ ತೋಟ ಟಾಟಾದವರಿಗೆ ಸೇರಿದ್ದು. ಖಾಸಗಿಯವರಿಗೆ ಚಹಾ ತೋಟ ಮಾಡಲು ಕೊಟ್ಟೂ, ಅದನ್ನು ಪ್ರವಾಸಿ ತಾಣವಾಗಿ ಮಾಡುವಲ್ಲಿ ಮತ್ತು ಯಾವ ಪ್ರವಾಸಿಗರಿಗೂ ಅದೊಂದು ಖಾಸಗಿ ಚಹಾ ತೋಟ ಎಂಬ ಭಾವನೆ ಬರದ ರೀತಿಯಲ್ಲಿ ನಿಭಾಯಿಸಲಾಗಿದೆ. ಚಹಾ ತೋಟಗಳ ಮೇಲಿನ ಗುಡ್ಡದಲ್ಲಿ ರಾಜಮಲೈನಂತರ ಸುಂದರ ಸ್ಥಳವಿದೆ. ಅಲ್ಲಿ ನೀಲಗಿರಿ ಥಾರ್ ಎಂಬ ಅಪರೂಪದ ಪ್ರಾಣಿಗಳ ವಂಶವೃದ್ಧಿ ನಡೆದಿದೆ.
ನಮ್ಮ ರಾಜ್ಯದಲ್ಲೂ ಪ್ರವಾಸಿ ತಾಣಗಳಿವೆ. ಅವುಗಳನ್ನು ಜನರಿಗೆ ಸರಿಯಾಗಿ ಬಿಂಬಿಸಲು, ಸೌಲಭ್ಯ ಕಲ್ಪಿಸಲು ನಮ್ಮ ಸರಕಾರಕ್ಕೆ ಸಾಧ್ಯವಾಗಿಲ್ಲ. ನನ್ನ ಜಿಲ್ಲೆಯಾದ ಉತ್ತರ ಕನ್ನಡಕ್ಕೆ ಜಲಪಾತಗಳ ತವರೂರು ಎಂಬ ಹೆಸರಿದೆ. ಜೋಗ ಜಲಪಾತವನ್ನೂ ಮೀರಿಸುವಷ್ಟು ಸುಂದರವಾಗಿರುವ, ಹೆಚ್ಚು ನೀರಿರುವ ಜಲಪಾತಗಳು ಉತ್ತರ ಕನ್ನಡ ಜಿಲ್ಲೆಯಲ್ಲಿದೆ. ಆದರೆ ಅಲ್ಲಿಗೆ ಹೊರಟಿರೋ, ಒಂದು ರಸ್ತೆಗೂ ಸರಿಯಾದ ಬೋರ್ಡ್ ಇಲ್ಲ. ಹೊಸಬರು ನೇರವಾಗಿ ಜಲಪಾತದ ದಾರಿಗೆ ಹೋಗುವುದು ಸಾಧ್ಯವೇ ಇಲ್ಲ. ರಸ್ತೆಗಳ ಬಗ್ಗೆ ಮಾತಾಡದಿರುವುದೇ ಒಳ್ಳೆಯದು. ಯಾಣದಂತಹ ಪ್ರವಾಸಿ ತಾಣ ಪ್ರಸಿದ್ಧವಾಗಬೇಕಾದರೆ ನಮ್ಮೂರ ಮಂದಾರ ಹೂವೆ ಚಿತ್ರದಲ್ಲಿ ಅದನ್ನು ತೋರಿಸಬೇಕಾಯಿತು.
ಕೇರಳವನ್ನು ಸ್ವಲ್ಪ ಮಟ್ಟಿಗಾದರೂ ಅನುಸರಿಸಿದರೆ ಕರ್ನಾಟಕವೂ ದೇವರ ರಾಜ್ಯವಾದೀತು. ಏನಂತೀರಾ?

5 comments:

ರಾಜೇಶ್ ನಾಯ್ಕ said...

ವಿನಾಯಕ,
ಕರ್ನಾಟಕವನ್ನು ಸ್ವಲ್ಪ ಹೆಚ್ಚೇ ತೆಗಳಿದ್ದೀರಾ....
ಕೇರಳ ಚೆನ್ನಾಗಿರಬಹುದು. ಆದರೆ ಕರ್ನಾಟಕದೊಂದಿಗೆ ಹೋಲಿಕೆ ಯಾಕೆ?

ವಿಕ್ರಮ ಹತ್ವಾರ said...

ನೀವು ನಿಂತಿರೋದು echo point ಅಂತ ಕಾಣುತ್ತೆ. ಆ ಜಾಗ ಇಷ್ಟ ಆಗಿತ್ತು. ನಾವು ಮುನ್ನಾರಿಗೆ ಹೋದಾಗ ಭಯಂಕರ ಬಿಸಿಲು. ಚಹಾ ತೋಟ ಅರ್ಧಗಂಟೆಯ ಮೇಲೆ ಬೋರು. ಅಲ್ಲೊಂದು ಜಲಪಾತ ಕೂಡ ಇದೆ. ಸುಮಾರು ದೂರ ನಡೆಯಬೇಕು. ಮೊದಲ ಭೇಟಿ ನನಗೆ ಅಂತ ಖುಷಿ ಕೊಡಲಿಲ್ಲ. ಇಲ್ಲೀವರೆಗೆ ಬಂದದ್ದು ಕುರಿ ನೋಡೋದ್ದಕ್ಕಾ?! ಅಂತ ಪೆಚ್ಚಾಗಿದ್ದೆ. ಇನ್ನೊಮ್ಮೆ ಚಳಿಗಾಲದಲ್ಲಿ ಹೋದಾಗ ಹೇಗಿರುತ್ತೆ ನೋಡಬೇಕು.

ವಿನಾಯಕ ಭಟ್ಟ said...

ಮುನಾರ್ನಲ್ಲಿ ಒಂದೆಡೆ ಕುಳಿತಿರಬಾರದು. ಸುತ್ತಾಡಬೇಕು. ಡ್ಯಾಂಗಳಿವೆ, ಬೆಟ್ಟಗಳಿವೆ. ಅವುಗಳನ್ನು ಕುರಿಗಳು ಅಂದುಕೊಂಡರೆ ನಿಮಗನ್ನಿಸಿದ್ದು. ಸರಿ. ಪರಿಸರದ ಸೌಂದರ್ಯ ಸವಿಯುವವರಿಗೆ ಮುನಾರ್ ಸೂಪರ್.

ರಾಜೇಶ ನಾಯ್ಕರೇ ಬೇಜಾರಾಗಬೇಡಿ. ಇದ್ದ ವಿಷ್ಯ ಹೇಳಿದ್ದೇನೆ. ಇದ್ದದ್ದು ಇದ್ದಂಗೆ ಬಂದು ಎದೆ ಮೇಲೆ ಒದ್ರು ಅಂದ ಹಾಗಾಯ್ತು ನಿಮ್ಮ ಮಾತು. ಹೋಲಿಕೆ ಯಾಕೆ ಬೇಡ. ಒಳ್ಳೇದಕ್ಕೆ ಯಾಕೆ ಮತ್ಸರ? ಅವರಿಂದ ಒಳ್ಳೆಯದನ್ನು ಪಡೆದು ನಾವೂ ಒಳ್ಳೆಯದಾಗೋಣ. ತೆಗಳಿದುದರ ಹಿಂದೆ ಕರ್ನಾಟಕವೂ ಕೇರಳದ ಷ್ಟೇ ಉತ್ತಮ ಪ್ರವಾಸಿ ತಾಣವಾಗಲಿ ಎಂಬ ಆಸೆ ಇದೆ. ತಿಳ್ಕೊಳಿ.

ರಾಜೇಶ್ ನಾಯ್ಕ said...

ವಿನಾಯಕ,
ಇದ್ರಲ್ಲಿ ತಿಳ್ಕೊಳ್ಳೊದೇನು ಬಂತು? ಕನ್ನಡಿಗನಾಗಿ ಕರ್ನಾಟಕ ಉತ್ತಮವಾಗದಿರಲಿ ಎಂಬ ವಿಚಾರ ನಿಮ್ಮಲ್ಲಿ ಬರಲು ’ಸಾಧ್ಯ’ವೇ? ಆದರೆ ಮುನ್ನಾರ್-ನ್ನು ನೋಡಿ ಕರ್ನಾಟಕವನ್ನು ಹೋಲಿಸಿದ್ದು ಸರಿಯೆನಿಸಲಿಲ್ಲ. ಮುನ್ನಾರ್-ನಲ್ಲಿ ದಟ್ಟ ಕಾಡನ್ನು ಕಡಿದು ಟೀ ಎಸ್ಟೇಟ್-ಗಳನ್ನು ನಿರ್ಮಿಸಲಾಗಿದೆ. ಟೀ ಎಸ್ಟೇಟ್-ಗಳು ಬಂದ ಮೇಲೆ ರೆಸಾರ್ಟ್-ಗಳು ಬಂದವು. ಆಮೇಲೆ ಪ್ರವಾಸಿಗರು. ಮುನ್ನಾರ್-ನ ಸುತ್ತ ಮುತ್ತ ಬೆಟ್ಟ ಗುಡ್ಡಗಳು ಇವೆ. ಆದರೆ ಬರೀ ಬೆಟ್ಟ ಗುಡ್ಡಗಳಿದ್ದ ಮಾತ್ರಕ್ಕೆ ರೆಸಾರ್ಟ್-ಗಳು ಬರುತ್ತಿರಲಿಲ್ಲ. ಅಲ್ಲೇ ಪಕ್ಕದಲ್ಲೊಂದು ಅಣೆಕಟ್ಟು. ಮತ್ತೆ ಹಿನ್ನೀರು. ಇದೆಲ್ಲಾ ಚಂದವೇ? ಕಾಡು ಮುಳುಗಿಸುವ ಹಿನ್ನೀರಿನ, ಬದುಕು ತಲ್ಲಣಿಸುವ ಅಣೆಕಟ್ಟಿನ ಮತ್ತು ಕಾಡು ಕಡಿದು ನಿರ್ಮಿಸಲಾಗಿರುವ ಎಸ್ಟೇಟುಗಳ ನೋಟ ಮೆಚ್ಚಲು ಹೇಗೆ ಸಾಧ್ಯ? ಇದೇ ಕಾರಣಕ್ಕೆ ಹೋಲಿಕೆ ಬೇಡ ಎಂದು ನಾನು ಬರೆದದ್ದು. ಎಲ್ಲಾ ಸಮಯದಲ್ಲಿ ವಿಷಯಗಳು ಕಣ್ಣಿಗೆ ಕಂಡ ಹಾಗೆ ಇರುವುದಿಲ್ಲ. ಆಗ ವಕ್ರವಾಗಿ ಯೋಚಿಸಬೇಕಾಗುತ್ತದೆ. ವಕ್ರವಾಗಿ ಯೋಚಿಸದಿರುವುದೇ ಅಪರಾಧ ಎಂದು ಬರೆದಿದ್ದೀರಾ.... ಆದರೆ ತಾವು ಮುನ್ನಾರ್-ನ ನಕಲಿ ಅಂದಕ್ಕೆ ಮಾರುಹೋಗಿ ಬಹಳ ಸರಳವಾಗಿ, ನೇರವಾಗಿ ಯೋಚಿಸಿರುವಂತಿದೆ.

ಶ್ರೀನಿಧಿ.ಡಿ.ಎಸ್ said...

nimma odade uLida ella barahagaLannoo ivattu koothu odiddene:)