Friday, March 07, 2008

ಮಂಜು ಮುಸುಕಿದ ಹಾದಿಯಲ್ಲಿ...

ಇಬ್ಬನಿ ತಬ್ಬಿದ ಇಳೆಯಲಿ
ರವಿ ತೇಜ ಕಣ್ಣ ತೆರೆದು
ಬಾನಕೋಟಿ ಕಿರಣ
ಇಳಿದು ಬಂತು ಭೂಮಿಗೆ...

೩ ದಿನದಿಂದ ಮಂಗಳೂರಿನಲ್ಲೂ ಮಂಜು ಸುರಿವ ಮುಂಜಾವು. ಮಂಗಳೂರಲ್ಲಿ, ಅದೂ ಮಾರ್ಚ್ ತಿಂಗಳಲ್ಲಿ ಮಂಜು ಸುರಿಯುವುದು ಅಪರೂಪದಲ್ಲಿ ಅಪರೂಪ. ಫೆಬ್ರವರಿಯಲ್ಲೇ ಮಂಗಳೂರಿನಲ್ಲಿ ಬೆವರು ಸುರಿಯುವ ಸಮಯ. ಆದರೆ ಈ ವರ್ಷ ಮಾರ್ಚ್‌ನಲ್ಲೂ ಮಂಜು ಸುರಿಯುವ ಸಮಯ!
ಮಂಜು ಮುಸುಕಿದ ಹಾದಿಯಲ್ಲಿ ಬೆಳ್ಳಂಬೆಳಗ್ಗೆ ಸ್ವೆಟರ್ ಹಾಕಿ, ಮಫ್ಲರ್ ಸುತ್ತಿ ವಾಕಿಂಗ್ ಮಾಡುವ ಮೋಜು ಮಡಿಕೇರಿಯವರಿಗೆ ಹಾಗೂ ಘಟ್ಟದ ಮೇಲಿನವರಿಗೆ ಮಾತ್ರ ಸಾಧ್ಯ. ಘಟ್ಟದ ಮೇಲಿನವರಿಗೆ ಘನಘೋರ ಚಳಿಗಾಲ ಇರುವಾಗ ಮಂಗಳೂರಿನಲ್ಲಿ ಬೆಳಗ್ಗೆ ಮಾತ್ರ ಚುಮುಚುಮು ಚಳಿ. ಅದನ್ನು ಚಳಿ ಅನ್ನುವುದಕ್ಕಿಂತ ತಂಪು ಎನ್ನುವುದು ಹೆಚ್ಚು ಸೂಕ್ತ. ೯.೦೦ ಗಂಟೆಯ ನಂತರ ಸಖತ್ ಹಾಟ್ ಮಗಾ!
ಈ ಬಾರಿ ಪರಿಸ್ಥಿತಿ ಬದಲಾಗಿದೆ. ಚಳಿ ಇತ್ತು. ಈಗ ನೋಡಿದರೆ ಮಂಜು ಮುಸುಕಿದ ಹಾದಿಯೂ!
ಗೆಳೆಯ ವೇಣು ಕರಾವಳಿಯವನೇ. ಆದರೆ ಅವನಿಗೆ ಕಾಡು ತಿರುಗುವ ಹವ್ಯಾಸ. ಹಾಗಾಗಿ ಅವರು ಕರಾವಳಿಯಲ್ಲಿದ್ದೂ ತಮ್ಮ ಬ್ಲಾಗಿಗೆ ಕಾಶ್ಮೀರದಲ್ಲಿರೋರ ಥರ ‘ಮಂಜು ಮುಸುಕಿದ ದಾರಿಯಲ್ಲಿ’ ಎಂಬ ಹೆಸರು ಕೊಟ್ಟಿದ್ದಾನೆ. ಪ್ರಕೃತಿ ಮಂಗಳೂರಿನ ದಾರಿಗೇ ಮಂಜು ಮುಸುಕುವ ಮೂಲಕ ಅವರ ಆಸೆಯನ್ನೂ ಈಡೇರಿಸಿದೆ.
ಅಣ್ಣ ಗೋಪಾಲಕೃಷ್ಣ ಕುಂಟಿನಿ ನಾಲ್ಕೇ ಸಾಲು ಕವನಗಳನ್ನು ಬರೆಯುತ್ತಿದ್ದಾರೆ. ಕವಿಯಾಗುವ ಅಪಾಯದ ಮುನ್ಸೂಚನೆ ತೋರುತ್ತಿದ್ದಾರೆ. ಕೆಲವು ನನಗೆ ಅರ್ಥವಾಗದಿದ್ದರಿಂದ ಅವುಗಳು ಅಧ್ಬುತ ಎನ್ನಲು ಅಡ್ಡಿಯಿಲ್ಲ. ಇನ್ನು ಹಲವು ಅರ್ಥವಾಗಿದ್ದರಿಂದ ನಿಜಕ್ಕೂ ಅದ್ಭುತ ಅನ್ನಿಸುತ್ತವೆ. ಅವರೇ ಬರೆದ ಇಬ್ಬನಿ ಕುರಿತ ನಾಲ್ಕು ಸಾಲು ಹೀಗಿದೆ...
ಎಲೆಗಳಲ್ಲಿದ್ದ ರಾತ್ರಿ ಇಬ್ಬನಿ
ಕತ್ತಲಿನ ಅಚ್ಚರಿಗಳನ್ನು
ಹಗಲಿಗೆ ಹೇಳದೆ
ಆರಿಹೋಯಿತು.... ಎಂಥ ಚಂದ, ಎಂಥ ಅಂದ!
ಜಿ.ಪಿ. ರಾಜತ್ನಂ ಅವರು ಮಡಿಕೇರಿ ಮೇಲೆ ಮಂಜು ಕವನದಲ್ಲಿ...
ಮಡಿಕೇರಿ ಮೇಲ್ ಮಂಜು
ಭೂಮಿನ್ ತಬ್ಬಿದ ಮೋಡಿದ್ದಂಗೆ
ಬೆಳ್ಳಿ ಬಳಿದಿದ್ ರೋಡಿದ್ದಂಗೆ
ಸಾಫಾಗಿ ಅಳ್ಳಾಟಿಟ್ಟಿಲ್ದಂಗೆ
ಮಡಗಿದ್ದಲ್ಲೆ ಮಡಗಿದ್ದಂಗೆ.... ಎಂದು ಬರೆಯುತ್ತಾರೆ.
ಈ ಎಲ್ಲ ಕವಿತೆಗಳನ್ನು ನೆನಪಿಗೆ ತರುವಂತೆ ಮಂಗಳೂರಿಗೂ ಮಂಜು ಕವಿದಿದೆ. ಮಂಗಳೂರನ್ನೇ ಬಿಳಿ ಮೋಡ ತಬ್ಬಿದ ಹಾಗೆ, ರಸ್ತೆಗಳಿಗೆಲ್ಲ ಬೆಳ್ಳಿ ಮೆತ್ತಿದ ಹಾಗೆ...
ಮಂಗಳೂರಿಗೂ ಕವಿದ ಮಂಜು ನನಗೆ ಮುದ ನೀಡಿತು. ಇದೆಲ್ಲದರ ಜತೆ ನನ್ನ ಕೆಲವು ಹಳೆ ನೆನಪುಗಳನ್ನು ಸ್ಮೃತಿ ಪಟಲದ ಎದುರು ತಂದು ನಿಲ್ಲಿಸಿತು. ನಾನು ಜರ್ನಲಿಸಂ ಕಲಿಯುವಾಗ ದಿಲ್ಲಿ ಸೇರಿದಂತೆ ಉತ್ತರ ಭಾರತಕ್ಕೆ ಪ್ರವಾಸ ತೆರಳಿದ್ದೆವು. ದೆಹಲಿಯಲ್ಲಿ ದಟ್ಟವಾದ ಮಂಜು. ನಾವು ಒಂದು ರಾತ್ರಿ ಒಳಗೆ ಕುಳಿತು ಹರಟುತ್ತಿದ್ದಾಗ ನನ್ನ ಸಹಪಾಠಿ ಲಕ್ಷ್ಮಣ ನಾಯಕ ಒಂದು ಕವಿತೆ ಬರೆದಿದ್ದೇನೆ ಎಂದ.
ಇಬ್ಬನಿ
ನೀನೊಂದು ಕಂಬನಿ... ಹೀಗೆ (ಈಗ ಸರಿಯಾಗಿ ನೆನಪಿಲ್ಲ) ಒಟ್ಟಾರೆ ಅಂತ್ಯ ಪ್ರಾಸದಲ್ಲಿ, ಕೇಳಲು ತುಂಬ ತ್ರಾಸವಾಗಿ ಸಾಗಿತ್ತು. ನಾನು ಮತ್ತು ಆಪ್ತ ಗೆಳೆಯ ಪ್ರಸನ್ನ ಹಿರೇಮಠ ಕೇಳಿ ಒಳಗೊಳಗೇ ನಕ್ಕರೂ, ತುಂಬ ಚೆನ್ನಾಗಿದೆ ಎಂದು ಹುರಿದುಂಬಿಸಿ ಎಲ್ಲರೆದರೂ ಕವನ ಓದಲು ಹೇಳಿದವು. ಆತ ಓದಿದ. ಅದರ ಪರಿಣಾಮ ಎಲ್ಲರೂ ನಕ್ಕಿದ್ದಲ್ಲದೆ, ಆತನಿಗೆ ‘ಇಬ್ಬನಿ’ ಎಂದೇ ಕರೆಯಲಾರಂಭಿಸಿದರು. ಪ್ರವಾಸ ಮುಗಿದು ತರಗತಿಗೆ ಬಂದಾಗ ಎಲ್ಲರೂ, ಅವರವರ ಅನುಭವನ ಕಥನ ಹೇಳಬೇಕಿತ್ತು. ಆಗ ಲಕ್ಷ್ಮಣ ನಾಯ್ಕ ವೇದಿಕೆಯ ಮೇಲೆ ಹೋಗಿ ನಿಂತಾಗ ನಾವು ಹಿಂದಿನಿಂದ ‘ಇಬ್ಬನಿ’ ಎಂದು ಕೂಗಿದ್ದೇ ತಡ ಕ್ಲಾಸಿನಲ್ಲಿದ್ದವರ ನಗೆಯ ಅಣೆಕಟ್ಟು ಒಡೆದಿತ್ತು.
ತನ್ನಷ್ಟಕ್ಕೆ ಸದ್ದಿಲ್ಲದೆ, ನಾವು ಬರೆಯದೆ ಹೋದರೆ ಸುದ್ದಿಯೂ ಇಲ್ಲದೆ ಸುರಿಯುವ, ಮೇಸ್ಟ್ರು ಬರುತ್ತಿದ್ದಂತೆ ಸದ್ದಿಲ್ಲದೆ ಸರಿಯಾಗಿ ಕುಳಿತುಕೊಳ್ಳುವ ಮಕ್ಕಳಂತೆ ಸೂರ್ಯ ಬರುತ್ತಿದ್ದಂತೆ ಸದ್ದಿಲ್ಲದೆ ಸರಿದೂ ಹೋಗುವ ಇಬ್ಬನಿ ನಮ್ಮ ಮನಸೊಳಗೆ ಅದಷ್ಟು ನೆನಪಿನ ಹನಿಗಳನ್ನು ಬಿಟ್ಟುಹೋಗಬಲ್ಲದು!
ಚಿತ್ರಗಳು: ಜಿ.ಕೆ. ಹೆಗಡೆ

3 comments:

Sushrutha Dodderi said...

ವಿನಾಯಕ ಭಟ್ಟರಿಗೆ ನಮಸ್ಕಾರ. ಹೇಗಿದ್ದೀರಿ?

ನಿಮಗೆ ಗೊತ್ತಿರೋ ಹಾಗೆ, ನಾವೆಲ್ಲ ಎಷ್ಟೋ ಕಾಲದಿಂದ ಅಂತರ್ಜಾಲದಲ್ಲಿ ಬರೀತಿದೀವಿ, ಓದ್ತಿದೀವಿ, ಪ್ರತಿಕ್ರಿಯಿಸಿಕೊಳ್ತಿದೀವಿ, ಮೇಲ್-ಸ್ಕ್ರಾಪ್-ಚಾಟ್ ಮಾಡ್ಕೊಳ್ತಿದೀವಿ.. ಆದ್ರೆ ನಮ್ಮಲ್ಲಿ ಬಹಳಷ್ಟು ಜನ ಪರಸ್ಪರ ಪರಿಚಯ ಮಾಡಿಕೊಂಡಿಲ್ಲ, ಮುಖತಃ ಭೇಟಿ ಆಗಿಲ್ಲ. ಇರಾದೆ ಇದ್ರೂ ಅದು ಸಾಧ್ಯ ಆಗಿಲ್ಲ!

ಇಂತಿದ್ದಾಗ, ನವ ಪ್ರಕಾಶನ ಸಂಸ್ಥೆ ’ಪ್ರಣತಿ’, ಅಂತರ್ಜಾಲದಲ್ಲಿ ಕನ್ನಡ ಬಳಸುವ ಮತ್ತು ಓದುವ ಎಲ್ಲರನ್ನು ಒಂದೆಡೆ ಸೇರಿಸುವ ಈ ಕಾರ್ಯಕ್ಕೆ ಮುಂದಾಗಿದೆ. ನಾಡಿದ್ದು ಭಾನುವಾರ ನಾವೆಲ್ಲ ಪರಸ್ಪರ ಭೇಟಿಯಾಗುವ ಅವಕಾಶ ಒದಗಿ ಬಂದಿದೆ.

ಡೇಟು: ೧೬ ಮಾರ್ಚ್ ೨೦೦೮
ಟೈಮು: ಇಳಿಸಂಜೆ ನಾಲ್ಕು
ಪ್ಲೇಸು: ಇಂಡಿಯನ್ ಇನ್‍ಸ್ಟಿಟ್ಯೂಟ್ ಆಫ್ ವರ್ಲ್ಡ್ ಕಲ್ಚರ್‌, ಬಸವನಗುಡಿ, ಬೆಂಗಳೂರು

ಆವತ್ತು ನಮ್ಮೊಂದಿಗೆ, ಕನ್ನಡದ ಮೊದಲ ಅಂತರ್ಜಾಲ ತಾಣದ ರೂವಾರಿ ಡಾ| ಯು.ಬಿ. ಪವನಜ, ’ದಟ್ಸ್ ಕನ್ನಡ’ದ ಸಂಪಾದಕ ಎಸ್.ಕೆ. ಶ್ಯಾಮಸುಂದರ್, ’ಸಂಪದ’ದ ಹರಿಪ್ರಸಾದ್ ನಾಡಿಗ್, ’ಕೆಂಡಸಂಪಿಗೆ’ಯ ಅಬ್ದುಲ್ ರಶೀದ್ ಸಹ ಇರ್ತಾರೆ, ಮಾತಾಡ್ತಾರೆ.

ಎಲ್ಲರೊಂದಿಗೆ ಒಂದು ಸಂಜೆ ಕಳೆಯುವ ಖುಶಿಗೆ ನೀವೂ ಪಾಲುದಾರರಾಗಿ ಅಂತ, ’ಪ್ರಣತಿ’ಯ ಪರವಾಗಿ ಪ್ರೀತಿಯಿಂದ ಆಹ್ವಾನಿಸುತ್ತಿದ್ದೇನೆ. ಈ ಕಾರ್ಯಕ್ರಮದ ಬಗ್ಗೆ ನಿಮ್ಮ ಸ್ನೇಹಿತರಿಗೂ ತಿಳಿಸಿ. ಅವರನ್ನೂ ಕರೆದುಕೊಂಡು ಬನ್ನಿ.

ಅಲ್ಲಿ ಸಿಗೋಣ,
ಇಂತಿ,

ಸುಶ್ರುತ ದೊಡ್ಡೇರಿ

ರಾಧಾಕೃಷ್ಣ ಆನೆಗುಂಡಿ. said...

ಮಂಗಳೂರು ಬಿಟ್ಟ ಮೇಲೆ ಅದೇನೋ ಕಳೆದು ಹೋದ ಅನುಭವ. ಈಗ ನಿಮ್ಮ ಲೇಖನ ಓದಿದ ಮೇಲೆ ಮತ್ತೆ ಕಳೆದು ಹೋದ ನೆನಪುಗಳು ಒತ್ತರಿಸುತ್ತಿದೆ.

ಸುಧೇಶ್ ಶೆಟ್ಟಿ said...

ಚಿತ್ರಗಳು ತು೦ಬಾ ಚೆನ್ನಾಗಿ ಬ೦ದಿವೆ. ನಮ್ಮ ಮ೦ಗಳೂರು ಇಷ್ಟು ಚೆನ್ನಾಗಿದ್ಯಾ?