Sunday, August 05, 2007

ಹೆಂಡತಿಯೊಬ್ಬಳು ಮನೆಯೊಳಗಿದ್ದರೆ...!

ಹೆಂಡತಿಯೊಬ್ಬಳು ಮನೆಯೊಳಗಿದ್ದರೆ
ನನಗದು ಕೋಟಿ ರೂಪಾಯಿ
ಹೆಂಡತಿಯೊಬ್ಬಳು ಮನೆಯೊಳಗಿದ್ದರೆ
ನಾನೂ ಒಬ್ಬ ಸಿಪಾಯಿ...
ಹಾಗಂತ ಪ್ರೇಮ ಕವಿ ಮೈಸೂರು ಕೆ.ಎಸ್. ನರಸಿಂಹ ಸ್ವಾಮಿ ಹಾಡಿದ್ದು ಅದೆಷ್ಟು ಸತ್ಯ ಅಂತ ಈಗ ಅರ್ಥವಾಗ್ತಿದೆ.
ಮನುಷ್ಯ ಅದೆಷ್ಟು ಬೇಗ ಒಂದು ವಾತಾವರಣಕ್ಕೆ, ವ್ಯವಸ್ಥೆಗೆ ಹೊಂದಿಕೊಂಡು ಬಿಡುತ್ತಾನೆ ಅಲ್ವಾ? ನಂಗೆ ಮದುವೆಯಾಗಿ ಒಂದು ವರ್ಷದ ಎರಡು ತಿಂಗಳಾಯಿತಷ್ಟೇ. ಈಗಲೇ ಹೆಂಡತಿ ಮನೆಯಲ್ಲಿಲ್ಲದಿದ್ದರೆ ಬೋರು ಬೋರು. ಐದಾರು ವರ್ಷ ರೂಂ ಮೇಟ್‌ಗಳೊಟ್ಟಿಗೆ ಇದ್ದು, ಹೋಟೆಲ್‌ನಲ್ಲೇ ಊಟ ಮಾಡಿ ಜೀವನ ಸಾಗಿಸಿ, ಕರೆದು ಕಟ್ಟುವವರಿಲ್ಲ, ತುರಿಸಿ ಹುಲ್ಲು ಹಾಕುವವರಿಲ್ಲ ಎಂಬಂತಿದ್ದೆ. ಈಗ ಕೇವಲ ಒಂದು ವರ್ಷದ ಹೆಂಡತಿ ಕೈ ಅಡುಗೆಯ ಊಟ ಹೋಟೆಲ್ ಹತ್ತಿರ ಹೋಗಲೂ ಬಿಡುತ್ತಿಲ್ಲ. ಹೆಂಡತಿ ಇಲ್ಲದಿದ್ದರೂ ಅಡುಗೆ ಮಾಡಿಟ್ಟು ಹೋಗು ಎಂದು ಹೇಳಿ ಮನೆಯಲ್ಲೇ ಊಟ ಮಾಡುವ ತವಕ.
ಅವಳೆಷ್ಟೇ ಅಡುಗೆ ಮಾಡಿಟ್ಟು ಹೋದರೂ ಅವಳ ಜತೆ ಪಕ್ಕದಲ್ಲಿ ಕೂತು ಉಂಡಂಗೆ ಆಗುತ್ತದೆಯೇ? ಅವಳೇ ಬಡಿಸಿ ತಂದುಕೊಂಟ್ಟಂಗೆ ಇರುತ್ತದೆಯೇ? ಊಹುಂ.
ಅದಕ್ಕೆ ಹೇಳಿದ್ದು ಕೆಎಸ್‌ನ ‘ಹೆಂಡತಿಯೊಬ್ಬಳು ಮನೆಯೊಳಗಿದ್ದರೆ ನನಗದು ಕೋಟಿ ರೂಪಾಯಿ’ ಅಂತ. ಇಷ್ಟೆಲ್ಲ ಬರೆಯುವಾಗ ನನ್ನ ಹೆಂಡತಿ ಮನೆಯಲ್ಲಿಲ್ಲ ಅಂತ ನಿಮಗೂ ಅರ್ಥವಾಗಿರಹುದು. ಹೌದು ಅವಳು ಎರಡು ದಿನದ ಮಟ್ಟಿಗೆ ಅಪ್ಪನ ಮನೆಗೆ ಹೋಗಿದ್ದಾಳೆ. ಹೆಂಡತಿ ಇಲ್ಲದಾಗಿನ ಕಷ್ಟ ಅರ್ಥವಾಗುತ್ತಿದೆ.
ಬೆಳಗ್ಗೆ ನಾನು ಕೆಲಸ ಮುಗಿಸಿ ಬರುವಷ್ಟರಲ್ಲಿ ಅಥವಾ ಮನೆಯಲ್ಲೇ ಕುಳಿತು ಕೆಲಸ ಮುಗಿಸುವಷ್ಟರಲ್ಲಿ ತಿಂಡಿ ರೆಡಿ. ಮಧ್ಯಾಹ್ನ- ರಾತ್ರಿಯ ಬಿಸಿ ಬಿಸಿ ಊಟ, ಮಧ್ಯದಲ್ಲೆಲ್ಲಾದರೂ ಏನಾದರು ತಿಂಡಿ ಹೀಗೆ ಏನೇ ಇರಲಿ ಹೆಂಡತಿ ಕೈಗೆ ತಂದಿಟ್ಟು ರೂಢಿ ಮಾಡಿಸಿಬಿಟ್ಟಿದ್ದಾಳೆ. ಹೊರಗೆ ಹೋಗಿ ಬರುವಷ್ಟರಲ್ಲಿ ಮನೆಯೂ ಸ್ವಚ್ಛ ಸ್ವಚ್ಛ. ಈಗ ಅವಳಿಲ್ಲದಿದ್ದರೆ ಊಟವೂ ಬೇಡ, ತಿಂಡಿಯೂ ಬೇಡ ಅನ್ನೋ ಸ್ಥಿತಿ. ಮನೆಯೋ ಕಸದ ಗೂಡು. ನಾನು ಊಟ ಮಾಡಿದ ಬಟ್ಟಲು ನಾನೇ ತೊಳೆಯೋದು. ಆದರೆ ಅನ್ನ, ಸಾಂಬಾರಿಗೆ ಹಾಕಿದ ಹುಟ್ಟು, ಖಾಲಿಯಾದ ಪಾತ್ರ ತೊಳೆಯೋಕೆ ಬೇಜಾರು. ಆಮೇಲೆ ತೊಳೆದರಾಯಿತು ಅಂತ ಸಿಂಕ್‌ನಲ್ಲೇ ಇಡೋ ಆಲಸಿತನ. ಎರಡು ದಿನ ಹೀಗೇ ದೂಡಿದರೆ ಸಿಂಕ್ ತುಂಬ ಪಾತ್ರ! ಅಯ್ಯೋ ಇಷ್ಟು ಪಾತ್ರ ತೊಳೀಬೇಕಾ ಅನ್ನಿಸುತ್ತೆ. ಆದ್ರೂ ತೊಳೀತೇನೆ ಅದು ಬೇರೆ ಮಾತು. ಹಸಿವಾಯಿತು ಊಟ ಮಾಡುವ ಅಂತ ಅಡುಗೆ ಕೋಣೆಗೆ ಹೋದ ಮೇಲೆ ನೆನಪಾಗುತ್ತೆ ಅನ್ನ, ಸಾಂಬಾರ್ ಬಿಸಿ ಮಾಡಿಲ್ಲ ಅಂತ. ನಂತರ ಬಿಸಿ ಮಾಡಿ ಊಟ ಮಾಡುವಷ್ಟರಲ್ಲಿ ಊಟದ ಮೂಡೇ ಇರುವುದಿಲ್ಲ.
ಎಷ್ಟೋ ಮನೆಗಳನ್ನು ಹೊಕ್ಕಿದ ಕೂಡಲೆ ಗೊತ್ತಾಗುತ್ತದೆ ‘ಅವರ ಹೆಂಡತಿ ಮನೆಯಲ್ಲಿಲ್ಲ’ ಅಂತ. ಹೆಂಡತಿ ಮನೆಯಲ್ಲಿದ್ದಾಗ ಗೆಳೆಯರೋ, ಸಂಬಂಧಿಕರೋ ಬಂದರೆ ಚಿಂತೆಯಿಲ್ಲ. ಆದರೆ ಅವಳಿಲ್ಲದಾಗ ಯಾರಾದರೂ ಬಂದರೆ ಮನೆಗೆ ಕರೆಯದೇ ಸಾಗಹಾಕುವುದು ಹೇಗೆ ಎಂದು ಯೋಚಿಸಬೇಕಾಗುತ್ತದೆ. (ಹೆಂಡತಿ ಇಲ್ಲದಾಗೇ ಮನೆಗೆ ಕರೆತರುವ ಫ್ರೆಂಡ್ಸ್ ಆದರೆ ತೊಂದರೆಯಿಲ್ಲ)
ಇದನ್ನೆಲ್ಲ ಅನುಭಿಸಿದ ಮೇಲೆ ನಿಜಕ್ಕೂ ಹೆಂಡತಿಯೊಬ್ಬಳು ಮನೆಯೊಳಗಿದ್ದರೆ ನನಗದು ಕೋಟಿ ರೂಪಾಯಿ ಅನ್ನಿಸುತ್ತಿದೆ. ಹೆಂತಿಯೊಬ್ಬಳು ಮನೆಯೊಳಗಿದ್ದರೆ ನಾನೂ ಒಬ್ಬ ಸಿಪಾಯಿ ಅಂತ ಕೆಎಸ್‌ನ ಹೇಳಿದ್ದು, ಮನೆ ಕೆಲಸ ಮಾಡುತ್ತೇನೆಂದಲ್ಲ. ಬದಲಾಗಿ ಹೆಂಡತಿ ಇದ್ದರೆ ಮನೆ ಬದಿಗೆ ನಿಶ್ಚಿಂತೆ. ಹಾಗಾಗಿ ಮಾಡುವ ಕೆಲಸದಲ್ಲಿ ಸಿಪಾಯಿಯಂತೆ ದುಡಿಯಬಹುದು ಎಂಬರ್ಥದಲ್ಲಿ ಇರಬಹುದಾ?
(ಕೆಲವರು ಹೆಂಡತಿಯೊಟ್ಟಿಗಿದ್ದು ಬೇಜಾರು ಬಂದಾಗ ಅವರನ್ನು ಅಪ್ಪನ ಮನೆಗೆ ಕಳುಹಿಸಿ ಹಾಯಾಗಿ ಇರುವವರಿದ್ದಾರೆ. ಸಧ್ಯ ನನಗಂಥ ಸ್ಥಿತಿ ಬಂದಿಲ್ಲ!)

8 comments:

DVKINI said...

i agree 100%

ಶ್ರೀನಿಧಿ.ಡಿ.ಎಸ್ said...

ಪಾಪ!ಏನನ್ಯಾಯ! ಛೆ ಛೆ!:)

Anusha Vikas said...

Well. I should be in full agreement for some obvious reasons! ;)

--------------------
http://quillpad.in/kannada/
The one true Indian site to Offer Kannada language solutions with middle english options.
Fast, Reliable and comfortable! Intuitive! :-)

ವಿನಾಯಕ ಭಟ್ಟ said...

Tahanks for comments

ಗಿರೀಶ್ ರಾವ್, ಎಚ್ (ಜೋಗಿ) said...

ನಾನೊಂದು ಬರೆದಿದ್ದೆ. ಇದ್ದಕ್ಕಿದ್ದ ಹಾಗೆ ಮಾಯವಾಯಿತು. ಎಲ್ಲಿಗೆ ಹೋಯ್ತೋ ಏನೋ.
ಲೇಖನ ಚೆನ್ನಾಗಿದೆ. ಹೆಂಡತಿಯನ್ನು ಎಲ್ಲಿ ನಿಜವಾಗಿಯೂ ಗಾಢವಾಗಿ ಪ್ರೀತಿಸತೊಡಗುತ್ತೇನೋ ಏನೋ ಅಂತ ಭಯ ಶುರುವಾಗುವ ವಯಸ್ಸು ನನ್ನದು. ಹೆಂಡತಿಯನ್ನೂ ಪ್ರೀತಿಸತೊಡಗಿದರೆ ಕ್ರಿಯಾಶೀಲತೆ ಕೊನೆಗೊಂಡಿತು ಅಂತ ಅರ್ಥ ಅಂತಿದ್ದರು ವೈಯನ್ರೆ. ತಮಾಷೆಯೆಂದರೆ ಕೆಎಸ್ ನರಸಿಂಹಸ್ವಾಮಿ ಒಂದಿರುಳು ಕನಸಿನಲಿ ನನ್ನವಳ ಕೇಳಿದೆನು ಎಂದು ಬರೆದಾಗ ಪುತಿನ ಗೇಲಿ ಮಾಡಿದ್ದರಂತೆ. ಕನಸಲ್ಲೂ ನಿಮ್ಮವಳೇ ಬರ್ತಾರಲ್ಲ ಸ್ವಾಮೀ ಅಂತ.
ಗುಡ್ ಮೆಮರಿ
ಥ್ಯಾಂಕ್ಯೂ ವಿನಾಯಕ್.
-ಜೋಗಿ

ವಿನಾಯಕ ಭಟ್ಟ said...

ನನಗೂ ನಿಮಗೂ ಇರೋ ವ್ಯತ್ಯಾಸ ಇಲ್ಲಿ ತಿಳೀತಾ ಇದೆ. ನೀವಾಗಿದ್ರೆ ಹೆಂಡತಿಯೊಬ್ಬಳು ಮನೆಯೊಳಗಿದ್ದರೆ... ಎಂಬುದಕ್ಕೆ ಒಂದು ಪುಟ ಲೇಖನ ಬರೆದು ಸಾಪ್ತಾಹಿಕಕ್ಕೆ ಹಾಕ್ತಿದ್ರೇನೊ. ಅನುಭವ, ವಿಧ್ವಾಂಸರ ಪರಿಚಯ ಎಷ್ಟು ಸಹಾಯ ಮಾಡುತ್ತೆ ಅಲ್ವಾ? ನೀವು ಹೇಳಿದ್ದನ್ನಾ ಮುಂದಾದ್ರೂ ಲೇಖನಗಳಲ್ಲಿ ಬಳಸ್ಕೋಬಹುದು.

ಚಿತ್ರಾ ಸಂತೋಷ್ said...

ಹೀಗೂ ಆಗುತ್ತಾ ಮಾರಾಯ್ರೆ..?ಶಿವ ಶಿವಾ....

Anonymous said...

ಮನೆ ಕಸ ಗುಡಿಸಬಾರದಾ...ದಯಮಾಡಿ ಮನಿಮ್ಮ ಹೆಂಡತಿ ಮನೆಗೆ ಬರೋದ್ರಲ್ಲಿ ಪಾತ್ರೆ ಕ್ಲಿನ ಮಾಡಿ...
ಇದು ಒಂದು ಹೆಂಡತಿಯ ಅಳಲು ಃ(