ಅದು ಮಂಗಳೂರಲ್ಲಿ ನಡೆದ ಭೂಗತ ಲೋಕದ ದೊಡ್ಡ ವ್ಯಕ್ತಿಯ ಮೊದಲ ಕೊಲೆ!
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಹೆಚ್ಚು ಚರ್ಚೆಗೊಳಗಾದ ಕೊಲೆ. ಜನರನ್ನು ಒಮ್ಮೆ ಬೆಚ್ಚಿ ಬೀಳಿಸಿದ ಕೊಲೆ. ಅದು ಭೂಗತ ಲೋಕದ ಸಂಪರ್ಕ ಹೊಂದಿದ್ದ ಉದ್ಯಮಿ ಅಮರ್ ಆಳ್ವ ಕೊಲೆ.
೧೬ ವರ್ಷಗಳ ಹಿಂದೆ ನಡೆದ ಈ ಕೊಲೆ ಇಂದಿಗೂ ಜನರ ಮನದಲ್ಲಿದೆ. ಅಮರ್ ಆಳ್ವ ಆಗಾಗ ಮಿಲಾಗ್ರಿಸ್‌ನಲ್ಲಿದ್ದ ಸೂಪರ್ ಮಾರ್ಕೆಟ್‌ಗೆ ಬರುತ್ತಿದ್ದ. ಅದನ್ನು ಹಂತಕರು ಗಮನಿಸಿದ್ದರು. ೧೯೯೨ರ ಜುಲೈ ೧೪ರಂದು ಸಂಜೆ ಅಮರ್ ಆಳ್ವ ಕೆಲವೇ ಹೊತ್ತಿನಲ್ಲಿ ತಾನು ಹಂತಕರ ಗುಂಡಿಗೆ ಗುರಿಯಾಗಲಿದ್ದೇನೆ ಎಂಬ ಅರಿವಿಲ್ಲದೇ ಗೆಳೆಯರೊಂದಿಗೆ ಹರಟುತ್ತಿದ್ದ.
ಆಗ ಸಿಡಿಯಿತು ಗುಂಡು...!
ನಾಲ್ಕು ಜನರಿದ್ದ ಹಂತಕ ಪಡೆ ಯದ್ವಾತದ್ವಾ ಗುಂಡು ಹಾರಿಸಿತು. ಅಮರ್ ಆಳ್ವರ ಅವರ ಕಡೆಯವರೂ ಗುಂಡು ಸಿಡಿಸಿದರು. ಗುಂಡು ತಾಗಿ ಗಾಯಗೊಂಡ ಅಮರ್ ಆಳ್ವ ಫಳ್ನೀರ್ ಕಡೆ ಓಡಿದ. ಹಂತಕರು ಅಟ್ಟಿಸಿಕೊಂಡು ಹೋದರು. ರಸ್ತೆ ಮದ್ಯದಲ್ಲಿ ಬಿದ್ದ ಅಮರ್ ಆಳ್ವನಿಗೆ ಕಡಿದರು. ಇನ್ನು ಆತ ಬದುಕಲಾರ ಎಂಬುದು ಗ್ಯಾರಂಟಿಯಾದಾಗ ಹಂತಕ ಪಡೆ ರಿಕ್ಷಾ ಹತ್ತಿ ಪರಾರಿಯಾಯಿತು. ಅಮರ್ ಆಳ್ವನನ್ನು ಆಸ್ಪತ್ರೆಗೆ ಸೇರಿದರೂ ಪ್ರಯೋಜನವಾಗಲಿಲ್ಲ. ಅವರ ತಲೆಗೆ ಗುಂಡು ತಾಗಿದ್ದರೆ, ಕುತ್ತಿಗೆ, ಕೈ ಮೇಲೆಲ್ಲ ಕಡಿದ ಗಾಯಗಳಿದ್ದವು.
ಈ ಘಟನೆಯಲ್ಲಿ ಮಂಜುನಾಥ ಶೆಟ್ಟಿ, ಜಗನ್ನಾಥ್ ಶೆಟ್ಟಿ, ವಿಜಯ ನಾಯ್ಕ್, ರಮೇಶ್ ಭಟ್, ಕೇದಾರನಾಥ್, ಸುದರ್ಶನ್, ಬಾಲಕೃಷ್ಣ ರಾವ್ ಗಾಯಗೊಂಡಿದ್ದರು. ಕೆಲವರು ಅಮರ್ ಆಳ್ವನೊಟ್ಟಿಗೆ ಸಂಬಂಧ ಇಲ್ಲದವರೂ ಇದ್ದರು.ಇಷ್ಟೆಲ್ಲ ನಡೆದದ್ದು ಸಂಜೆ ೭.೪೫ಕ್ಕೆ. ಕೊಲೆ ಸುದ್ದಿ ಹಬ್ಬುತ್ತಿದ್ದಂತೆ ಅಮರ್ ಆಳ್ವ ಅವರ ಶವ ಇರಿಸಿದ್ದ ಸಿಟಿ ಆಸ್ಪತ್ರೆ ಎದುರು ಅಪಾರ ಸಂಖ್ಯೆಯ ಜನ ಸೇರಿದ್ದರು. ಮಂಗಳೂರು ಭಾಗಶಃ ಬಂದ್ ಆಗಿತ್ತು. ಮೆರವಣಿಗೆಯಲ್ಲಿಯೆ ಅಮರ್ ಆಳ್ವ ಶವ ಮನೆಗೆ ತೆಗೆದುಕೊಂಡು ಹೋಗಿ, ಅವತ್ತೇ ಅಂತ್ಯ ಸಂಸ್ಕಾರ ಮಾಡಲಾಯಿತು. ಮಂಗಳೂರು ಮಟ್ಟಿಗೆ ದೊಡ್ಡ ಹೆಸರು ಮಾಡಿದ್ದ ಅಮರ್ ಆಳ್ವ ಕತೆ ಮುಗಿದೇಹೋಗಿತ್ತು.
ಕೊಲೆ ನಡೆದ ಸ್ಥಳದಲ್ಲಿ ಎರಡು ಜೀವಂತ ಹಾಗೂ ಐದು ಖಾಲಿ ಗುಂಡುಗಳು ದೊರಕಿದ್ದವು.
ಸಿಕ್ಕಿಬಿದ್ದ ಆರೋಪಿ: ಅಮರ್ ಆಳ್ವನ ಕಡೆರಯವರು ಹಾರಿಸಿದ ಗುಂಡಿನಿಂದ ಹಂತಕ ಪಡೆಯ ಒಬ್ಬ ಗಾಯಗೊಂಡಿದ್ದ. ಹಾಗೆ ಪೊಲೀಸರು ಆಸ್ಪತ್ರೆಗಳ ಮೇಲೆ ಕಣ್ಣಿಟ್ಟರು. ಪರಾರಿಯಾಗುವ ದಾರಿಯಲ್ಲಿ ಗಾಯಗೊಂಡ ಆರೋಪಿ ಕಿನ್ನಿಗೋಳಿಯ ಆಸ್ಪತ್ರೆಯೊಂದರಲ್ಲಿ ದಾಖಲಾಗಿದ್ದ. ಸ್ಥಿತಿ ಗಂಭೀರವಾಗಿದ್ದರಿಂದ ಆತನನ್ನು ಮಣಿಪಾಲ ಆಸ್ಪತ್ರೆಗೆ ದಾಖಲಿಸಲಾಯಿತು. ಆತನ ಹೆಸರು ಯತೀಶ ಶೆಟ್ಟಿ. ಸುಳ್ಳು ಹೆಸರು, ವಿಳಾಸ ನೀಡಿ ಈತನನ್ನು ಆಸ್ಪತ್ರೆಯಲ್ಲಿ ಇಡಲಾಗಿತ್ತಾದರೂ ಪೊಲೀಸರಿಗೆ ಗೊತ್ತಾಗಿಬಿಟ್ಟಿತ್ತು. ಎರಡು ದಿನ ಬಿಟ್ಟು ಆತನನ್ನು ಪೊಲೀಸರು ವಿಚಾರಣೆಗೆ ಗುರುಪಡಿಸಿದರು. ಆಗ ಇತರ ಆರೋಪಿಗಳಾದ ಮುರಳಿ ಯಾನೆ ಮುರಳೀಧರ, ಶ್ರೀಕರ, ಬಾಲಕೃಷ್ಣ ಶೆಟ್ಟಿ ಯಾನೆ ಬಾಲೇಶ ಎಂಬವರೊಂದಿಗೆ ಸೇರಿ ಅಮರ್ ಆಳ್ವನನ್ನು ಕೊಲೆ ಮಾಡಿದ್ದಾಗಿ ಒಪ್ಪಿಕೊಂಡ.
ಕಾರಣ: ೧೯೯೧ರ ಡಿಸೆಂಬರ್ ೩೧ರಂದು ಉಡುಪಿಯ ಎಂಜಿಎಂ ಕಾಲೇಜು ಬಳಿ ಬಶೀರ್ ಎಂಬವರು ತೆಗೆದುಕೊಂಡು ಹೋಗುತ್ತಿದ್ದ ೬ ಲಕ್ಷ ರೂ.ಗಳನ್ನು ಯಾರೋ ಅಪಹರಿಸಿದ್ದರು. ಆರೋಪಿಗಳನ್ನು ಪತ್ತೆ ಹಚ್ಚಿ ಹಣ ವಾಪಸ್ ಕೊಡಿಸುವಂತೆ ಬಶೀರ್ ಪುರುಷೋತ್ತಮ ಶೆಟ್ಟಿ ಎಂಬವರ ಬಳಿ ಕೇಳಿಕೊಂಡಿದ್ದ. ಯತೀಶ್, ಮುರುಳಿ ಹಾಗೂ ಇತರರೆ ಆ ಹಣ ಅಪಹರಿಸಿದ್ದು ಎಂಬುದನ್ನು ಪತ್ತೆ ಮಾಡಿದ ಪುರುಷೋತ್ತಮ ಶೆಟ್ಟಿ, ಅವರಿಂದ ಹಣ ವಾಪಸ್ ಕೊಡಿಸುವಂತೆ ಅಮರ್ ಆಳ್ವನಿಗೆ ವಿನಂತಿಸಿದ್ದ. ಅವನ ವಿನಂತಿಯಂತೆ ಅಮರ್ ಆಳ್ವನ ಸಹಚರರು ಯತೀಶನಿಗೆ ಹಣ ಕೊಡುವಂತೆ ಬೆದರಿಸಿದ್ದರು. ಒಮ್ಮೆ ಯತೀಶ ಇಲ್ಲದಾಗ ಆತನ ಮನೆಗೆ ಹೊದ ಕೆಲವರು ಬಂದೂಕು ತೋರಿಸಿ ಹೆದರಿಸಿ ಬಂದಿದ್ದರು. ಇದರಿಂದ ಹೆದರಿದ ಯತೀಶ ಹಾಗೂ ಸಂಗಡಿಗರು ಮುಂಬಯಿ, ಗೋವಾಕ್ಕೆ ಹೋಗಿ ಅಡಗಿಕೊಂಡರು. ಅಲ್ಲೂ ಅಮರ್ ಆಳ್ವ ಅನುಚರರು ಅವರನ್ನು ಬೆಂಬತ್ತಿದರು. ಯತೀಶನಿಗೆ ದಿನ ಕಳೆದಂತೆ ಅಭದ್ರತೆ ಕಾಡತೊಡಗಿತ್ತು. ತಾನು ಎಷ್ಟೊತ್ತಿಗೆ ಅಮರ್ ಆಳ್ವ ಸಂಗಡಿಗರಿಂದ ಕೊಲೆಯಾಗಿ ಬಿಡತ್ತೇನೊ ಎಂಬ ಆತಂಕ.
ಈ ಆತಂಕದಿಂದಾಗಿಯೇ ಆತನ ತಲೆಯಲ್ಲಿ ಅಮರ್ ಆಳ್ವನನ್ನು ಮುಗಿಸದೆ ತಾನು ಸಮಾಧಾನದಿಂದಿರುವುದು ಸಾಧ್ಯವೇ ಇಲ್ಲ ಎಂಬ ಅರಿವು ಮೂಡಿತು. ತಕ್ಷಣ ಆತ ಮುಂಬಯಿಯ ಕೆಲವು ಭೂಗತ ಲೋಕದ ವ್ಯಕ್ತಿಗಳನ್ನು ಸಂಪರ್ಕಿಸಿದ. ಅವರಲ್ಲಿ ಬಲ್ಲಾಳ್‌ಭಾಗ್ ರಘು ಎಂಬವನ ಮೂಲಕ ಮೂಲಕ ದುಬೈನಲ್ಲಿರುವ ಅಮರ್ ಆಳ್ವನ ವಿರೋಧಿ ಅಶೋಕ್ ಶೆಟ್ಟಿಯ ಸಂಪರ್ಕ ಸಿಕ್ಕಿತು. ಅಮರ್ ಆಳ್ವನ ಕೊಲೆ ಮಾಡುವ ಯತೀಶ ಐಡಿಯಾಕ್ಕೆ ಅಶೋಕ್ ಶೆಟ್ಟಿ ಹಣ ಒದಗಿಸಿ ನೀರೆರೆದ. ಅಮರ್ ಕೊಲೆ ಸ್ಕೆಚ್ ರೆಡಿಯಾಯ್ತು.
ಯೋಜನೆಯಂತೆ ೧೯೯೨ರ ಜೂ.೧೧ರಂದು ಅಂದರೆ ಅಮರ್ ಆಳ್ವನ ಕೊಲೆಯಾಗುವ ೩೩ ದಿನ ಮೊದಲು ಯತೀಶ ಹಾಗೂ ಸಂಗಡಿಗರು ಬಂದೂಕುಗಳೊಂದಿಗೆ ಮಂಗಳೂರಿನಲ್ಲೊಂದು ಬಾಡಿಗೆ ಮನೆ ಪಡೆದು ಠಿಕಾಣಿ ಹೂಡಿದರು. ಅವರಲ್ಲಿ ಇಬ್ಬರು ಹಂಪನಕಟ್ಟೆಯಲ್ಲಿರುವ ಹೋಟೆಲ್ ಒಂದರಲ್ಲಿ ರೂಂ ಮಾಡಿ ಅಮರ್ ಆಳ್ವನ ಚಲನವಲನ ವೀಕ್ಷಿಸುತ್ತಿದ್ದರು. ಅಮರ್ ಆಳ್ವ ಆಗಾಗ ಮಿಲಾಗ್ರಿಸ್‌ನ ಸೂಪರ್ ಮಾರ್ಕೆಟ್‌ಗೆ ಬರುತ್ತಿರುವುದು ಅವರ ಕಣ್ಣಿಗೆ ಬಿದ್ದಿತ್ತು. ಒಮ್ಮೆ ಅಮರ್ ಆಳ್ವ ಕೊಲೆ ಮಾಡಲು ಹಂತಕರು ನಿರ್ಧರಿಸಿದ್ದರಾದರೂ ಹೆಂಡತಿ- ಮಕ್ಕಳು ಜತೆಯಲ್ಲಿದ್ದರು. ಅವತ್ತು ಅಮರ್ ಆಳ್ವ ಬದುಕಿದ್ದ. ಆದರೆ ಜು.೧೪ರಂದು ಹಂತಕರು ಯಾವುದೇ ದಾಕ್ಷಿಣ್ಯ ತೋರಲಿಲ್ಲ. ಗುಂಡು ಹಾರಿಸಿಯೇ ಬಿಟ್ಟರು.
ಪೊಲೀಸರು ಅಮರ್ ಆಳ್ವ ಪ್ರಕರಣದಲ್ಲಿ ಒಟ್ಟು ೭ ಮಂದಿ ಆರೋಪಿಗಳನ್ನು ಗುರುತಿಸಿದರು. ಅವರಲ್ಲಿ ಯತೀಶ, ಮುರಳಿ, ಶ್ರೀಕರ ಹಾಗೂ ಬಾಲಕೃಷ್ಣನನ್ನು ಬಂಧಿಸಿದರು. ಉಳಿದವರು ನಾಪತ್ತೆಯಾಗಿಯೇ ಉಳಿದರು. ದುಬೈನಲ್ಲಿರುವ ಅಶೋಕ ಶೆಟ್ಟಿ ಗಡಿಪಾರಿಗೆ ದಾಖಲೆಗಳನ್ನು ಕಳುಹಿಸಿದರು. ಅದಕ್ಕೆ ಇವತಿನವರೆಗೂ ಉತ್ತರ ಬಂದಿಲ್ಲ.ಪ್ರಕರಣ ವಿಚಾರಣೆ ನಡೆಸಿದ ನ್ಯಾಯಾಲಯ ಅಮರ್ ಆಳ್ವ ಕೊಲೆಯ ಬಂಧಿತ ನಾಲ್ಕು ಮಂದಿ ಆರೋಪಿಗಳನ್ನು ದೋಷಮುಕ್ತಗೊಳಿಸಿ ತೀರ್ಪು ನೀಡಿತು. ಹಂಪನಕಟ್ಟೆಯಂಥ ಸಾರ್ವಜನಿಕ ಸ್ಥಳದಲ್ಲಿ ಹಲವಾರು ಕಣ್ಣುಗಳ ಎದುರೇ ಕೊಲೆ ನಡೆದರೂ ಸರಿಯಾದ ಸಾಕ್ಷಿ ಯಾರೂ ಇರಲಿಲ್ಲ. ಇದ್ದರೂ ಹೇಳಲಿಲ್ಲ. ಭೂಗತ ಲೋಕದ ಮಂದಿಗೆ ಹೆದರಿದ ಜನ ಸಾಕ್ಷಿ ಹೇಳಲು ಹೆದರುತ್ತಾರೆ. ಅಮರ್ ಆಳ್ವ ಪ್ರಕರಣದಲ್ಲಿ ಆದದ್ದೂ ಅದೇ. ಭುಹುಶಃ ಸುಬ್ಬರಾವ್ ಪ್ರಕರಣದಲ್ಲೂ ಆಗುವುದು ಅದೇ.
Tuesday, July 31, 2007
Subscribe to:
Post Comments (Atom)
6 comments:
ಅದೊಂದು ಸಿನಿಮೀಯ ಶೈಲಿಯಲ್ಲಿ ನಡೆದ ಕೊಲೆ, ಆಗ ನಾನು ಕೇರಳದ ಕಾಸರಗೋಡಿನಲ್ಲಿದ್ದೆ. ಆಗ ಮಂಗಳೂರಿನ ಪ್ರಮುಖ ಸಂಜೆಪತ್ರಿಕೆ ಮಂಗಳೂರು ಮಿತ್ರದಲ್ಲಿ ಅಮರ ಆಳ್ವ ಹತ್ಯೆ ಸುದ್ದಿ ಓದಿದ್ದೆ, ಮರೆತಿದ್ದೆ. ಈಗ ಡಿಟೇಲಾಗಿ ತಿಳಿಸಿದ್ದಕ್ಕೆ ಥ್ಯಾಂಕ್ಸ್ :)
thanks for detailed news
ಅಭಿಪ್ರಾಯಕ್ಕೆ ಧನ್ಯವಾದಗಳು.
I am one among your blog visitor, please don`t use news repor syle.anyway i like this article.
muddu.periyalu
ಸುದ್ದಿ ಮಾದರಿ ಬಳಸುವುದಿಲ್ಲ. ಸೆನ್ಸೇಶನಲ್ ಪ್ರಕರಣವಾದ್ದರಿಂದ ಜನ ಓದಲಿ ಅಂತ ಹಾಕಿದೆ.
Post a Comment