Thursday, May 17, 2007

ಟಿಕ್ಲಿ ಕುಂಕುಮ ನುಂಗಿತ್ತ...



ಕೋಡಗನ ಕೋಳಿ ನುಂಗಿತ್ತ ನೋಡವ್ವ ತಂಗಿ... ಹಾಡು ಕೇಳಿದ್ದೀರಲ್ಲ. ಕೋಡಗನ ಕೋಳಿ ನುಂಗಲು ಸಾಧ್ಯವೊ ಇಲ್ಲವೊ? ನೀವೇ ಯೋಚನೆ ಮಾಡಿ. ನನಗಂತೂ ಪುರುಸೊತ್ತಿಲ್ಲ. ಆದರೆ ಎಷ್ಟೋ ಸಂಗತಿಗಳು ನಮ್ಮ ನಿಮ್ಮ ನಡುವಿನ ಹಲವನ್ನು ನುಂಗಿ ನೀರು ಕುಡಿದಿವೆ. ಎಷ್ಟು ನುಣ್ಣಗೆ ಅಂದರೆ ಅವು ಒಂದನ್ನೊಂದು ನುಂಗುತ್ತಿರುವುದು ಅಥವಾ ನುಂಗಿವೆ ಅಂತ ನನಗೆ-ನಿಮಗೆ ಗೊತ್ತೇ ಆಗಿಲ್ಲ.
ನನ್ನ ಅಲ್ಲಲ್ಲ ನಮ್ಮೆಲ್ಲರ ಅಜ್ಜಿ ಹಣೆಗೆ ಕುಂಕುಮ ಇಡುತ್ತಿದ್ದರು. ಬರೋಬ್ಬರಿ ಒಂದು ರೂಪಾಯಿ ನಾಣ್ಯದಷ್ಟು ದೊಡ್ಡದು (ಉದಾ: ಪಾರ್ವತಮ್ಮ). ಅಂತಹ ಕುಂಕುಮವನ್ನು ಇಂದು ಒಂದು ಬಾಲ್ ಪೆನ್ ತುದಿಯಷ್ಟು ಅಗಲ ಇಲ್ಲದ ಟಿಕ್ಲಿ ನುಂಗಿ ಹಾಕಿದೆ. ಈಗಿನವರು ಹಣೆಗೆ ಇಟ್ಟಿದ್ದಾರೊ ಇಲ್ಲವೊ ಎಂಬುದನ್ನು ಮುಟ್ಟಿ ನೋಡಿ!! ಅಥವಾ ಅತಿ ಹತ್ತಿರದಿಂದ ನೋಡಿಯೇ ಹೇಳಲು ಸಾಧ್ಯ.
ಮುಖಕ್ಕೆ ಅರಿಶಿನ ಹಚ್ಚುತ್ತಿದ್ದರು. ಅದನ್ನು ಫ್ಯಾರ್ ಆಂಡ್ ಲೌಲಿ (ಆರು ವಾರಗಳಲ್ಲಿ ಟ್ಯೂಬ್ ಖಾಲಿ!!!) ಹೊಟ್ಟೆಗೆ ಹಾಕಿಕೊಂಡಿದೆ. ಸನ್‌ಸಿಲ್ಕ್, ಆಲ್‌ಕ್ಲಿಯರ್ (ಕಿಸೇನಾ? ಕೂದಲಾ?), ಕ್ಲಿನಿಕ್ ಪ್ಲಸ್ (ಹೇರ್ ಪ್ಲಸ್ ಅಂತ ಇಡಬಹುದಿತ್ತು), ತಲೆ ಮತ್ತು ಹೆಗಲು (ಹೆಡ್ ಆಂಡ್ ಶೋಲ್ಡರ್‍ಸ್) ಕಂಪನಿಗಳ ಶ್ಯಾಂಪೂಗಳು ಶೀಗೇಕಾಯಿ ಪುಡಿಯನ್ನು ಬಚ್ಚಲು ಮನೆಯಿಂದ ಓಡಿಸಿವೆ. ಅಪ್ಪ-ಗಂಡಂದಿರ ಕಿಸೆಗೆ ಕೈ ಹಾಕಿವೆ.
ರೆಡಿಮೇಡ್ ಬಟ್ಟೆ, ಹೊಸ ಫ್ಯಾಶನ್‌ಗಳು ಹೊಲಿಗೆಯವರ ಅನ್ನ ನುಂಗಿವೆ. ಟೀವಿ ಮನೆಯೊಳಗೆ ಬಂದು ಮನೆ ಜನರ ನಡುವಿನ ಮಾತು-ಬಾಂಧವ್ಯವನ್ನು ಮನೆಯಿಂದ ಹೊರಹಾಕಿದೆ. ರೇಡಿಯೋವನ್ನು ಮಾತಾಡದಂತೆ ಮಾಡಿದೆ. ಸಿಡಿ ಕ್ಯಾಸೆಟ್‌ಗಳನ್ನು ಸುತ್ತಿ ಆಚೆಗೆಸೆದು, ಧೂಳು ತಿನ್ನುವಂತೆ ಮಾಡಿದೆ. ಚಾನಲ್‌ಗಳು ಚಿತ್ರ ಮಂದಿರಕ್ಕೆ ಹೋಗುವ ಜನರನ್ನು ನುಂಗಿವೆ. ಟೆರಿಕೋಟ್ ಮತ್ತು ಆಧುನಿಕ ಮಾದರಿ ಸೀರೆ, ಡ್ರೆಸ್ ಮಟಿರಿಯಲ್‌ಗಳು ಗಾಂಧಿ ಅಜ್ಜನಿಗೆ ಪ್ರೀತಿಯಾಗಿದ್ದ ಹತ್ತಿ ಬಟ್ಟೆಗಳನ್ನು ಮರೆಸಿವೆ. ಸಿಗರೇಟು ಹೊಗೆಯಲ್ಲಿ ಬೀಡಿ ಕಾಣದಾಗಿದೆ. ಗ್ಯಾಸ್‌ನ ಹೀಟಿಗೆ ಮಣ್ಣಿನ ಒಲೆ ಒಡೆದೇ ಹೋಗಿದೆ. ಮಣಿನ್ಣ ಮಡಕೆ, ಅಲ್ಯೂಮಿನಿಯಂ- ತಾಮ್ರದ ಪಾತ್ರಗಳು ಸ್ಟೀಲ್ ಪಾತ್ರದ ಹೊಳಪಲ್ಲಿ ಕಾಣದಾಗಿವೆ.
ಕಾಂಕ್ರೀಟ್ ಕಾಡುಗಳು, ಮನುಷ್ಯನ ದುರಾಸೆಗಳು ಕಾಡನ್ನು ನುಂಗಿ ನೀರು ಕುಡಿದಿವೆ. ಬೇಟೆಯ ಹುಚ್ಚು ಪ್ರಾಣಿಗಳನ್ನು ಕಣ್ಣಿಗೆ ಕಾಣದಂತೆ ಮಾಡಿದೆ. ಮನುಷ್ಯನ ದುರಾಸೆ, ಅತಿ ಆಸೆ ಅಂತರ್ಜಲವನ್ನೇ ಹೀರಿ ಬಿಟ್ಟಿದೆ. ಟೆಂಪೋಗಳಿಂದ ಎತ್ತಿನ ಗಾಡಿಯೂ, ರಿಕ್ಷಾಗಳಿಂದ ಜಟಕಾ ಬಂಡಿಗಳೂ ನಾಪತ್ತೆಯಾಗಿವೆ. ಬೈಕು- ಕಾರುಗಳು ನಡೆಯುವ ಹವ್ಯಾಸ ಬಿಡಿಸಿವೆ. ವಾಹನದ ಹೊಗೆ ಶುದ್ಧ ಗಾಳಿಯನ್ನು ಸೇವಿಸದಂತೆ ಮಾಡಿದೆ. ಕ್ರಿಕೆಟ್ ಗ್ರಾಮೀಣ ಆಟಗಳಾದ ಖೊ ಖೊ, ಕಬಡ್ಡಿಗಳನ್ನು ಮೈದಾನದಿಂದ ಔಟ್ ಮಾಡಿದೆ.
ಮೊಬೈಲ್ ಪೇಜರನ್ನು ನಾಪತ್ತೆ ಮಾಡಿದೆ. ವಿದ್ಯುತ್ ಚಿಮಣಿ ಬುರಡೆಗೆ ಡಸ್ಟ್ ಮತ್ತು ರಸ್ಟ್ ಹಿಡಿಯುವಂತೆ ಮಾಡಿದೆ. ಫೋನು ಪತ್ರಗಳನ್ನು ಅಗಿದು, ನುಂಗಿದೆ. ಕಂಪ್ಯೂಟರ್ ಹಲವರ ಕೆಲಸ ಕಸಿದುಕೊಂಡಿದೆ. ಎಳನೀರು, ಎಳ್ಳು ನೀರು, ಮಜ್ಜಿಗೆಗಳ ಜಾಗದಲ್ಲಿ ಕೋಲಾಗಳು ಕುಳಿತು ಕೇಕೆ ಹಾಕಿದೆ. ಏನ್ಮಾಡೋದು...
ಕುಂಕುಮವ ಟಿಕ್ಲಿ ನುಂಗಿತ್ತ... ನೋಡವ್ವ ತಂಗಿ....
ಅರಿಶಿಣವ ಪ್ಯಾರ್ ಆಂಡ್ ಲೌಲಿ ನುಂಗಿತ್ತ...
ಬೈಕು ಪೆಟ್ರೋಲ ನುಂಗಿ, ಎಂಜಿನ್ನು ಪೆಟ್ರೋಲ ನುಂಗಿ
ಅದು ಬಿಟ್ಟ ಹೊಗೆ ನಮ್ಮನೆ ನುಂಗಿತ್ತ ನೋಡವ್ವ....

2 comments:

Enigma said...

neevu bari hengasarannu target yaake madideera? nimma prakara gandasaru yenu badlagilla? hengasaru matra kalakke thakka hange badlag barda? neevu kacchepanche utkondu office ge yakke hogalla ? gandhiji thara shirt illde yaake irolla? swlpa nimma kadenu nodi swamy

ವಿನಾಯಕ ಭಟ್ಟ said...

ಕುಂಬಳಕಾಯಿ ಕಳ್ಳ ಅಂದ್ರೆ ನೀವ್ಯಾಕ್ರಿ ಹೆಗಲು ಒರ್ಸೋಕೋತೀರಾ? ನಾನು ಬರಿ ಹುಡುಗಿಯರ ಬಗ್ಗೆ ಮಾತ್ರ ಬರೆದಿಲ್ಲ. ಸರಿಯಾಗಿ ಓದಿ. ಈಗಿನ ಕಾಲದ ಸ್ಥಿತಿ ಬಗ್ಗೆ ಬರ್ದಿದೀನಿ. ಗಾಂಧಿ ಥರ ಶರ್ಟ್ ಇಲ್ದೆ ಇರ್ಬೋದು. ಹುಡ್ಗೀರಿಗೆ ನಾಚಿಕೆ ಆದ್ರೆ ಅಂತ. ಇಷ್ಟಕ್ಕೂ ಈಗ ಹುಡ್ಗೀರೇ ಗಾಂಧಿ ಥರ ಡ್ರೆಸ್ ಮಾಡ್ತಿರೋದ್ರಿಂದ ಹುಡುಗ್ರು ಆ ಫ್ಯಾಶನ್ ಮಾಡ್ಬೇಕಂತಿಲ್ಲ ಬಿಡಿ.