Saturday, May 19, 2007
ಪರೀಕ್ಷೇಲಿ ಫೇಲು: ನೇಣಾಗದಿರಲಿ ಶಾಲು
ಎಸ್ಸೆಸ್ಸೆಲ್ಸಿಯಲ್ಲಿ ಬಂಪರ್ ಬೆಳೆ ಬಂದರೂ, ಪಿಯುಸಿಯಲ್ಲಿ ಶೇ.೪೯.೩೬ ಶೇ. ವಿದಯಾರ್ಥಿಗಳು ಅನುತ್ತೀರ್ಣರಾಗಿದ್ದಾರೆ. ಅಂದರೆ ೨,೨೫,೬೭೩ ವಿದ್ಯಾರ್ಥಿಗಳು ಅನುತ್ತೀರ್ಣರಾಗಿದ್ದಾರೆ. ಇಷ್ಟು ದೊಡ್ಡ ಮೊತ್ತದ ವಿದ್ಯಾರ್ಥಿಗಳ ಮನಸ್ಥಿತಿ ಹೇಗಿರಬಹುದು ಎಂಬುದನ್ನು ವಿಚಾರ ಮಾಡಿದರೆ ಮನಸ್ಸು ಕಲ್ಲವಿಲವಾಗುತ್ತದೆ. ಅವರ ಬದುಕಿನ ಬಗ್ಗೆ ಮನಸ ತುಂಬ ಆತಂಕ. ಪಿಯುಸಿ ಫಲಿತಾಂಶ ಬಂದ ಎರಡೇ ದಿನದಲ್ಲಿ ರಾಜ್ಯದಲ್ಲಿ ಆರು ಮಂದಿ ವಿದ್ಯಾರ್ಥಿಗಳು ಆತ್ಮಹತ್ಯೆ ಮೂಲಕ ಜೀವನ ಅಂತ್ಯಗೊಳಿಸಿದ್ದಾರೆ.
ಪರೀಕ್ಷೆಯಲ್ಲಿ ವಿಫಲವಾದ ವಿದ್ಯಾರ್ಥಿ ಮಾನಸಿಕವಾಗಿ ಕುಗ್ಗಿ ಹೋಗುತ್ತಾನೆ. ಮನೆಯವರ ಮುಖ ನೋಡಲು, ಪಕ್ಕದ ಮನೆಯವರೊಡನೆ ಮಾತಾಡಲು, ಗೆಳೆಯರೊಂದಿಗೆ ಮಾತಾಡಲೂ ಆಗದ ಸ್ಥಿತಿ ತಲುಪಿಬಿಡುತ್ತಾರೆ. ಮನೆಯವರ ಕೆಂಗಣ್ಣು, ಪಕ್ಕದ ಮನೆಯವರ ಕೀಟಲೆ ಮಿಶ್ರಿತ ಓರೆಗಣ್ಣ ನೋಟ, ಸಂಬಂಧಿಕರ ಚಚ್ಚುಮಾತು, ಫೇಲಾದ್ದರಿಂದ ಮನಸ್ಸಿನಲ್ಲಿ ಉಂಟಾದ ಸೋಲಿನ ಭಾವನೆ, ಪಾಸಾಗುವ ಮೂಲಕ ಗೆದ್ದ ಗೆಳೆಯ ಇವೆಲ್ಲ ವಿದ್ಯಾರ್ಥಿ ಮನಸ್ಸಿನ ಮೇಲೆ ನಿಯಂತ್ರಿಸಲಾಗದ ಪರಿಣಾಮ ಬೀರುತ್ತವೆ.
ಇದಕ್ಕೆಲ್ಲ ಪರೀಕ್ಷೆಯನ್ನು ನಾವು ನೋಡುವ, ಅದರಲ್ಲಿ ಅನುತ್ತೀರ್ಣರಾದರೆ ಜೀವನೇ ಮುಗಿದು ಹೋಯಿತು ಎಂಬಂತೆ ವರ್ತಿಸುವ ನಮ್ಮ ವರ್ತನೆಗಳೇ ಕಾರಣ. ಪಾಲಕರಿಗೆ ಮಕ್ಕಳ ಮೇಲೆ ಹೆಚ್ಚಿದ ನಿರೀಕ್ಷೆ, ಮಕ್ಕಳು ಪರೀಕ್ಷೆಯಲ್ಲಿ ಪಡೆದ ಅಂಕಗಳನ್ನೇ ಪಾಲಕರು ಪ್ರತಿಷ್ಠೆಯ, ಅಂತಸ್ತಿನ ಪ್ರಶ್ನೆಯಾಗಿಸಿಕೊಂಡಿರುವುದು, ಹೆಚ್ಚಿದ ಸ್ಪರ್ಧೆ ಮಕ್ಕಳನ್ನು ಪರೀಕ್ಷೆಯಲ್ಲಿ ಹಾಗೂ ಫಲಿತಾಂಶದ ಸಮಯದಲ್ಲಿ ಅಪಾರ ಒತ್ತಡಕ್ಕೆ ಸಿಲುಕಿಸುತ್ತಿದೆ.
ಆ ಗೊಂದಲ, ಒತ್ತಡದಲ್ಲಿ ಈ ಎಲ್ಗ ಕಷ್ಟಕ್ಕೂ ಪರಿಹಾರದ ಸುಲಭ ಮಾರ್ಗವಾಗಿ ಅವರಿಗೆ ಕಾಣಿಸುವುದು ಆತ್ಮಹತ್ಯೆ ಮಾತ್ರ. ತಾನು ಪರೀಕ್ಷೆಯಲ್ಲಿ ಅನುತ್ತೀರ್ಣರಾಗಿದ್ದರಿಂದ ತಂದೆ-ತಾಯಿ ಗೌರವ ಹಾಳಾಗಿದೆ. ಇದ್ದು ಅವರಿಗೆ ಇನ್ನಷ್ಟು ಅವಮಾನ ಕೊಡುವುದಕ್ಕಿಂತ ಸಾಯುವುದೇ ಮೇಲು ಅಂತ ಅವರ ಸಣ್ಣ ಮನಸ್ಸು ದೊಡ್ಡ ತೀರ್ಮಾನ ತೆಗೆದುಕೊಂಡು ಬಿಡುತ್ತದೆ. ಹೆದರಿದವನಿಗೆ ಹೂವೂ ಹಾವಾಗುವಂತೆ ಆತ್ಮಹತ್ಯೆಯತ್ತ ಮುಖ ಮಡಿದವರಿಗೆ ಶಾಲೂ ನೇಣಾಗುತ್ತದೆ.
ಈ ವಿಷಯದಲ್ಲಿ ಮಕ್ಕಳಿಗಿಂತ ಪಾಲಕರಿಗೆ ಹೆಚ್ಚು ತಿಳವಳಿಕೆ ಇರಬೇಕಾದ್ದು ಅಗತ್ಯ. ಯಾಕೆಂದರೆ ಪಾಲಕರು ಹಿರಿಯರು. ಜೀವನ ಅರಿತವರು. ಮಕ್ಕಳು ಪರೀಕ್ಗಷೆಯಲ್ಲಿ ಫೇಲಾಗಿರುವುದನ್ನೇ ದೊಡ್ಡ ರಂಪ ಮಾಡಬಾರದು. ಫಲಿತಾಂಶ ಬಂದಾಗಿದೆ. ರಂಪ ಮಾಡಿ ಪ್ರಯೋಜನವೇನೂ ಇಲ್ಲ ಎಂಬುದನ್ನು ಅರಿಯಬೇಕು. ನಿಮಗಿಂತ ಕೆಟ್ಟ ಮನಸ್ಥಿತಿಯಲ್ಲಿ ಮಕ್ಕಳಿರುತ್ತಾರೆ ಎಂದು ಅರ್ಥ ಮಾಡಿಕೊಳ್ಳಬೇಕು. ಇದನ್ನು ಅರಿಯದೆ ಪಾಲಕರು ಪರೀಕ್ಷೆಯಲ್ಲಿ ಅನುತ್ತೀರ್ಣರಾದ ಮಕ್ಕಳನ್ನು ಹಿಗ್ಗಾಮುಗ್ಗಾ ಬಯ್ಯುತ್ತಾರೆ. ಇಷ್ಟೆಲ್ಲ ವ್ಯವಸ್ಥೆ ಮಾಡಿಕೊಟ್ಟೂ ನೀನು ಇಷ್ಟೇ ಮಾಡಿದ್ದು, ಆಚೆ ಮನಯೆ ಹುಡುಗಿ ಅಥವಾ ಹುಡುಗನ್ನು ನೋಡು ಎಂದು ಹೋಳಿಕೆ ಮಾಡಿ ಜರೆಯುತ್ತಾರೆ. ಈತ ಬದುಕಿರುವುದೇ ವೇಸ್ಟು ಎಂಭರ್ಥದಲ್ಲಿ ಬಯ್ಯುತ್ತಾರೆ. ಇದು ಮಕ್ಕಳ ಮೇಲೆ ಎಂಥ ಪರಿಣಾಮ ಬೀರಬಹುದು ಎಂಬುದನ್ನು ಆ ಕ್ಷಣಕ್ಕೆ ಅವರು ಗಮನಿಸುವುದಿಲ್ಲ. ನಂತರ ಮಕ್ಕಳು ಆತ್ಮಹತ್ಯೆ ಮಾಡಿಕೊಂಡರೆ, ಮನೆ ಬಿಟ್ಟು ಹೋದರೆ ಆಗ ಗೋಳೋ ಎಂದು ಕಣ್ಣೀರಿಡುತ್ತ ಪರಿತಪಿಸುತ್ತಾರೆ.
ತಮ್ಮ ಮಕ್ಕಳು ಆತ್ಮಹತ್ಯೆ ಮಾಡಿಕೊಳ್ಳಬಹುದೆಂದು ಯಾರೂ ಎಣಿಸಿರುವುದಿಲ್ಲ. ಆದರೆ ಮಕ್ಕಳು ಪರೀಕ್ಷೆಯಲ್ಲಿ ಅನುತ್ತೀರ್ಣರಾದರೆ ಹದಿನೈದು ದಿನದ ಮಟ್ಟಿಗಾದರೂ ಅವರನ್ನು ಏಕಾಂಗಿಯಾಗಿ ಬಿಡದಿರುವುದು ಒಳ್ಳೆಯದು. ಏಕಾಂಗಿಯಾದರೆ ಮಕ್ಕಳಿಗೆ ಆತ್ಮಹತ್ಯೆ ಮಾಡುವ ಅವಕಾಶ ದೊರೆತಂತಾಗುತ್ತದೆ. ಏಕಾಂಗಿಯಾಗಿರುವಾಗ ಇಲ್ಲದ ಆಲೋಚನೆಗಳೂ ಮಕ್ಕಳ ತಲೆಯಲ್ಲಿ ಬಂದು ಅವರು ಆತ್ಮಹತ್ಯೆ ನಿರ್ಧಾರದತ್ತ ನಡೆದು ಹೋಗುವಂತೆ ಮಾಡುತ್ತದೆ. ಅದರ ಬದಲು ಯಾರಾದರೂ ಸದಾ ಅವರ ಜತೆ ಇದ್ದರೆ ಮನಸ್ಸಿಗೂ ಸ್ವಲ್ಪ ಸಮಾದಾನ. ಆತ್ಮಹತ್ಯೆ ಅವಕಾಶಗಳೂ ದೊರೆಯುವುದಿಲ್ಲ.
ಇದೆಲ್ಲಕ್ಕಿಂತ ಮುಖ್ಯವಾಗಿ ನಮ್ಮ ಪಾಲಕರು ಮಕ್ಕಳನ್ನು ಇಂತಹ ಸನ್ನಿವೇಶಕ್ಕೆ ಸಿದ್ಧಗೊಳಿಸುವುದನ್ನು, ಸ್ವತಃ ತಾವು ಸಿದ್ಧಗೊಳ್ಳುವುದನ್ನು ಕಲಿಯಬೇಕಿದೆ. ಯಾರೂ ತಮ್ಮ ಮಕ್ಕಳು ಫೇಲಾಗಲೆಂದು ಬಯಸುವುದಿಲ್ಲ. ಆದರೆ ಒಂದೊಮ್ಮೆ ಫೇಲಾದರೆ ಎಂಬುದನ್ನೂ ಚಿಂತಿಸಿಟ್ಟುಕೊಂಡರೆ ಅಷ್ಟು ಸಮಸ್ಯೆಯಾಗಲಾರದು.
ಪ್ರತಿ ಪಾಲಕರು ಪರೀಕ್ಷೆಗೆ, ಫಲಿತಾಂಶ ನೋಡಲು ಹೋಗುವ ಮಕ್ಕಳನ್ನು ಕೂರಿಸಿ ಒಂದೈದು ನಿಮಿಷ ಮಾತಾಡಬೇಕು. ‘ಪರೀಕ್ಷೆ ಫಲಿತಾಂಶವೊಂದೇ ಮುಖ್ಯವಲ್ಲ. ಪರೀಕ್ಷೆಯಲ್ಲಿ ಫೇಲಾದ ಎಷ್ಟೋ ಜನ ಜೀವನದ ಪರೀಕ್ಷೆಯಲ್ಲಿ ಪಾಸಾಗಿದ್ದಾರೆ. ಪರೀಕ್ಷೆಯಲ್ಲಿ ಅತ್ಯಂತ ಕಡಿಮೆ ಅಂಕ ತೆಗೆದುಕೊಂಡವರು ಜೀವನ ಪರೀಕ್ಷೆಯಲ್ಲಿ ಫಸ್ಟ್ ರೆಂಕ್ ಪಡೆದಿದ್ದಾರೆ. ಎಂಬಿಎ ಕಲಿಯದ ವಿಜಯ ಸಂಕೇಶ್ವರ ಅಷ್ಟು ದೊಡ್ಡ ವಿಆರ್‌ಎಲ್ ಸಂಸ್ಥೆ ಸ್ಥಾಪಿಸಿದ್ದಾರೆ. ಕಾಲೇಜಿಗೂ ಹೋಗದ ಆರ್.ಎನ್. ಶೆಟ್ಟಿ ಯಶಸ್ವೀ ಉದ್ಯಮಿಯಾಗಿದ್ದಾರೆ. ಇವುಗಳನ್ನು ಮಕ್ಕಳಿಗೆ ಹೇಳಬೇಕು.’ ಪರೀಕ್ಷೆ ಫಲಿತಾಂಶ ಜೀವನದ ಒಂದು ಭಾಗ. ಪರೀಕ್ಷೆ ಮುಂದಿನ ವರ್ಷವೂ ಬರುತ್ತದೆ ಎಂಬುದನ್ನೂ ಅವರಿಗೆ ಅರುಹಬೇಕು. ಆಗ ಫಲಿತಾಂಶ ನೋಡಲು ಹೋಗುವ ಮಕ್ಕಳ ಮನಸ್ಸು ಸ್ವಲ್ಪ ತಿಳಿಯಾದೀತು.
ಇನ್ನಾದರೂ ಪಾಲಕರು ತಮ್ಮ ಮಕ್ಕಳ ಬಗೆಗಿರುವ ಅತೀ ಆಸೆ ಬಿಡಬೇಕು. ಮಕ್ಕಳು ಎಂಜಿನಿಯರ್ ಆಗಬೇಕು, ವೈದ್ಯನಾಗಬೇಕು. ಆ ಮೂಲಕ ತಾನು ಸಮಾಜದಲ್ಲಿ ಪ್ರತಿಷ್ಠೆ ಹೆಚ್ಚಿಸಕೊಳ್ಳಬೇಕು ಎಂಬ ಆಸೆ ಮನಸ್ಸಿನಲ್ಲಿದ್ದರೆ, ನೀವೇ ಇಟ್ಟುಕೊಳ್ಳಿ. ಅದನ್ನು ಮಕ್ಕಳ ಮೇಲೆ ಹೇರಲು ಹೋಗಬೇಡಿ. ಎಂಜಿನಿರಿಂಗ್, ವೈದ್ಯ, ಸಾಫ್ಟ್‌ವೇರ್ ಅಲ್ಲದೇ ಪ್ರಪಂಚದಲ್ಲಿ ಸಾಕಷ್ಟು ವೃತ್ತಿಗಳಿವೆ ಮತ್ತು ಆ ವೃತ್ತಿ ಮಾಡುವ ಜನರು ನೆಮ್ಮದಿಯ ಜೀವನ ಸಾಗಿಸುತ್ತಿದ್ದಾರೆ ಎಂಬುದನ್ನು ಪಾಲಕರು ಅರ್ಥ ಮಾಡಿಕೊಂಡು,ಅದನ್ನು ಮಕ್ಕಳಿಗೂ ಅರ್ಥ ಮಾಡಿಸಬೇಕು.
ಇದನ್ನೆಲ್ಲ ಪಾಲಕರು ಅರ್ಥ ಮಾಡಿಕೊಂಡರೆ ಮಾತ್ರ ಫಲಿತಾಂಶದ ನಂತರ ಮಕ್ಕಳನ್ನು ಆವರಿಸುವ ಆತಂಕ, ಆತ್ಮಹತ್ಯೆಯ ಸನ್ನಿ ನಿವಾರಣೆಯಾದೀತು. ಒಂದಷ್ಟು ಎಳೆ ಜೀವಗಳು ಉಳಿದೀತು.
Subscribe to:
Post Comments (Atom)
1 comment:
ಉತ್ತಮ ಲೇಖನ ...
ನೀವೆನ್ನುತ್ತಿರುವುದು ೧೦೦% ಸರಿ...
ಈಗಿನ ಸ್ಪರ್ಧಾತ್ಮಕ ಯುಗದಲ್ಲಿ ತಾಳ್ಮೆಯೇ ಇಲ್ಲವಾಗುತ್ತಿದೆ..
ತಾಳಿದವನು ಬಾಳಿಯಾನು ಎಂದು ಹಿಂದಿನವರು ಹೇಳಿಲ್ಲವೇ..
ಪ್ರತಿಯೊಬ್ಬರಲ್ಲೂ ಅವರವರದ್ದೇ ಆದ ಪ್ರತಿಭೆಗಳಿರುತ್ತವೆ ಎಂಬುದನ್ನು ಯಾರೂ ಮರೆಯಬಾರದು ಆದ್ದರಿಂದ ಯಾರೂ ಯಾವ ಸಂದರ್ಭದಲ್ಲೂ ಎದಗುಂದಬೇಕಾದ್ದಿಲ್ಲ..
ಮನಸ್ಸಿದ್ದರೆ ಮಾರ್ಗವಿದೆ ಎಂಬುದನ್ನು ನೆನಪಿಟ್ಟು ಮರಳಿಯತ್ನವ ಮಾಡಬೇಕು ಏನಂತೀರ ?
Post a Comment