ಉಳ್ಳಾಲದ ಮನೆಯೊಂದರಲ್ಲಿ ಏನು ಮಾಡಿದರೂ ನಿಲ್ಲದ ತೆಂಗಿನ ಕಾಯಿ ಕಳವು. ಅಜ್ಜ- ಅಜ್ಜಿ ಮಾತ್ರ ಇರುವ ಆ ಮನೆ ಮೇಲೆ ಕಳ್ಳರ ಕಣ್ಣು ಶಾಶ್ವತವಾಗಿ ನೆಟ್ಟಿರುತ್ತಿತ್ತು. ಅಜ್ಜ- ಅಜ್ಜಿ ಬೆಳಗ್ಗೆ ಏಳುವುದರೊಳಗೆ ತೆಂಗಿನಕಾಯಿಗಳು ನಾಪತ್ತೆಯಾಗಿ ಬಿಡುತ್ತಿದ್ದವು!
ಈ ಸಮಸ್ಯೆ ಕುರಿತು ಅವರು ಪೊಲೀಸರ ಬಳಿ ದೂರಿಕೊಂಡರು. ಸರಿ ಪೊಲೀಸರು ರಾತ್ರಿ ಅವರ ಮನೆ ಬಳಿ ಗಸ್ತು ಮಾಡುತ್ತಿದ್ದರು. ಆದರೂ ಕಳವು ನಿರಂತರವಾಗಿತ್ತು. ಏನು ಮಾಡಿದರೂ ಹೆಚ್ಚಿನ ತೆಂಗಿನಕಾಯಿಗಳು ಕಳ್ಳತನ ಆಗುವುದರಿಂದ ಮರವನ್ನೇ ಕಡಿಸಿಬಿಡಿ ಎಂಬ ಪೊಲೀಸರ ಸಲಹೆಗೆ ಅಜ್ಜ ಒಪ್ಪಲಿಲ್ಲ. ಪೊಲೀಸರಿಗೆ ಅಜ್ಜನ ಕಾಟ ತಪ್ಪಲಿಲ್ಲ. ಅಜ್ಜಾ ನಿಮ್ಮ ಮನೆ ಕಂಪೌಂಡೆಲ್ಲ ಕಾಣುವ ಹಾಗೆ ಲೈಟ್ ಹಾಕಿಸಿ, ಆಗ ಕಳ್ಳರು ಬರುವುದಿಲ್ಲ. ಬಂದರೂ ಲೈಟ್ ಇರುವುದರಿಂದ ಕಾಣಿಸುತ್ತಾರೆ ಎಂದು ಪುಕ್ಕಟೆ ಸಲಹೆ ಎಸೆದರು.
ಮಾತು ನಂಬಿದ ಅಜ್ಜ ಲೈಟ್ ಹಾಕಿಸಿದ. ಸಲಹೆಯನ್ನು ಸ್ವಲ್ಪ ಜೋರಾಗಿಯೇ ಜಾರಿಗೆ ತಂದ ಅಜ್ಜ ೧೦೦ ವೋಲ್ಟ್‌ನ ಬಲ್ಬ್ ಹಾಕಿ ಇಡೀ ಕಂಪೌಂಡ್ ಜಗಜಗಿಸುವಂತೆ ಮಾಡಿದ. ಆದರೂ ಕಳವು ನಡೆಯುತ್ತಿತ್ತು. ಒಂದು ತಿಂಗಳು ಹೀಗೇ ಕಳೆಯಿತು. ಬಿಲ್ ಬರುವಾಗ ೧೦೦ ವೋಲ್ಟಿನ ಬಲ್ಬ್‌ನ ಶಕ್ತಿ ಗೊತ್ತಾಗಿತ್ತು. ಬಿಲ್ ಅಜ್ಜನಿಗೆ ಶಾಕ್ ಕೊಟ್ಟಿತ್ತು. ಪೊಲೀಸ್ ಠಾಣೆಗೆ ಕರೆ ಮಾಡಿದ ಅಜ್ಜ "ಲೈಟ್ ಹಾಕಿಸಿದ್ದರಿಂದ ಕಳ್ಳತನ ನಿಲ್ಲಲಿಲ್ಲ. ಬದಲಾಗಿ ಬಿಲ್ ಹೆಚ್ಚು ಬಂದಿದೆ. ಲೈಟ್ ಹಾಕಿದರೂ ತೆಂಗಿನಕಾಯಿ ಕಳವು ಮುಂದುವರಿದಿರುವುದರಿಂದ ಲೈಟ್ ತೆಗೆಸುತ್ತೇನೆ’ ಅಂದ. ಅಂದಂತೆ ಮಾಡಿಯೂ ಬಿಟ್ಟ.
ಪೊಲೀಸರಿಗೂ ಅಜ್ಜನ ದೂರು ಕೇಳಿ ಬೇಜಾರಾಗಿತ್ತು. ಕನಿಕರವೂ ಮೂಡಿತ್ತು. ಅಜ್ಜನ ಮನೆಯ ತೆಂಗಿನಕಾಯಿ ಕಳುವು ಮಾಡುವವರನ್ನು ಹಿಡಿಯಲು ನಿರ್ಧರಿಸಿದರು. ಐನಾತಿ ಐವಿಯಾ ಮಾಡಿದರು. ಯೋಜನೆಯಂತೆ ಒಂದಷ್ಟು ತೆಂಗಿನ ಕಾಯಿಗಳನ್ನು ಮರದ ಕೆಳಗೇ ಇಟ್ಟಿದ್ದರು. ಅದನ್ನು ಕಳ್ಳರು ತೆಗೆದುಕೊಂಡು ಹೋಗುವಾಗ ಅವರನ್ನು ಅಡಗಿ ಕುಳಿತ ಪೊಲೀಸರು ಹಿಡಿಯುವುದು ಯೋಜನೆ. ಕಳ್ಳರನ್ನು ಹಿಡಿಯುವ ಕನಸು ಕಾಣುತ್ತ ಅಜ್ಜ ಹಾಯಾಗಿ ಮಲಗಿದ.
ಬೆಳಗ್ಗೆ ಎದ್ದು ನೋಡಿದರೆ ತೆಂಗಿನ ಕಾಯಿ ಇಲ್ಲ. ಹಾಗಾದರೆ ಕಳ್ಳನನ್ನು ಪೊಲೀಸರು ಹಿಡಿದಿರಬಹುದು ಎಂದು ಖುಶಿಯಲ್ಲಿ ಪೊಲೀಸ್ ಠಾಣೆಗೆ ಫೋನಾಯಿಸಿದ. ಆದರೆ ಹಿಂದಿನ ದಿನ ರಾತ್ರಿ ಉಳ್ಳಾಲ ಪರಿಸರದಲ್ಲಿ ಕೊಲೆ ನಡೆದದ್ದರಿಂದ ತೆಂಗಿನಕಾಯಿ ಕಳ್ಳನ ಹಿಡಿಯಲು ಕಾದು ಕೂರಬೇಕಿದ್ದ ಪೊಲೀಸರು ಬಂದೇ ಇರಲಿಲ್ಲ! ಮನೆಯೊಳಗೆ ಭದ್ರವಾಗಿದ್ದ ತೆಂಗಿನಕಾಯಿಗಳೂ ಕಳ್ಳರ ಪಾಲಾಗಿದ್ದವು!
ಹೇಗಿದೆ? ಕಳ್ಳ ಪೊಲೀಸ್ ಆಟ?
Tuesday, May 01, 2007
Subscribe to:
Post Comments (Atom)
No comments:
Post a Comment