ಅಚಾನಕ್ ಆಗಿ ಪ್ರೇಮಿಗಳ ದಿನ ಬಂದ ಎಸ್‌ಎಂಎಸ್ ಒಂದನ್ನು ಹೆಂಡತಿ ನೋಡಿದ ಪರಿಣಾಮ ಸಂಕಷ್ಟಕ್ಕೆ ಸಿಲುಕಿ ಇನ್‌ಸ್ಪೆಕ್ಟರ್ ಪತಿಯೊಬ್ಬರ ಕತೆ ಇದು. ಫೆ.೧೪. ಪ್ರೇಮಿಗಳ ದಿನ. ಇನ್‌ಸ್ಪೆಕ್ಟರ್ ಮನೆಯಲ್ಲಿ ಸ್ನಾನ ಮಾಡಲು ಹೋಗಿದ್ದರು. ಅಷ್ಟೊತ್ತಿಗೆ ಅವರ ಮೊಬೈಲ್ ಕಿರುಚಿಕೊಂಡಿತು. ಇನ್‌ಸ್ಪೆಕ್ಟರ್‌ನ ಪತ್ನಿ ಸುಮ್ಮನಿರುವುದು ಬಿಟ್ಟು ಹೋಗಿ ನೋಡಿಯೇ ಬಿಟ್ಟರು. ಅದೇನಿತ್ತು ಆ ಎಸ್‌ಎಂಎಸ್‌ನಲ್ಲಿ ಎಂಬುದು ಗುಟ್ಟು. ಅನುಮಾನಗೊಂಡ ಇನ್‌ಸ್ಪೆಕ್ಟರ್‌ನ ಪತ್ನಿ ಎಸ್‌ಎಂಎಸ್ ಬಂದ ನಂಬರಿಗೆ ಫೋನ್ ಮಾಡಿದರು. ಆ ಕಡೆಯಿಂದ ಮಾತನಾಡಿದ ಹುಡುಗಿ ನಾನು ರೇಖಾ ತೊಕ್ಕೊಟ್ಟಿನವಳು ಎಂದಳು. ಮತ್ಯಾವ ಪ್ರಶ್ನೆಗೂ ಸರಿಯಾಗಿ ಉತ್ತರಿಸಲಿಲ್ಲ. ಅದು ಆ ಇನ್‌ಸ್ಪೆಕ್ಟರ್‌ನ ವ್ಯಾಪ್ತಿಯ ಸ್ಥಳವೂ ಆಗಿದ್ದರಿಂದ ಪತಿಯ ಮೇಲೆ ಹೆಂಡತಿಯ ಅನುಮಾನ ಬಲಗೊಂಡಿತು. ಅಂತೂ ಇನ್‌ಸ್ಪೆಕ್ಟರ್ ಸ್ನಾನ ಮಾಡಿ ತಂಪಾಗಿ ಹೊರಬರುವಷ್ಟರಲ್ಲಿ ಹೆಂಡತಿ ಬಿಸಿಯಾಗಿದ್ದಳು.
ಸ್ನಾನ ಮಾಡಿದ್ದು ಸ್ವಚ್ಛವಾಗಲಿಲ್ಲ ಎಂಬಂತೆ ಇನ್ನೊಮ್ಮೆ ತೊಳೆದರು. ಯಾರ್ರೀ ಆಕೆ ನಿಮಗೆ ಹಾಗೆ ಎಸ್‌ಎಂಎಸ್ ಕಳುಹಿಸಿದ್ದಾಳೆ. ನಾನಿಲ್ಲಿ ಇರುವಾಗ ನಿಮಗ್ಯಾಕೆ ಇನ್ನೊಬ್ಬಳು ಎಂದು ಜಾಡಿಸಿದಳು. ಎಸ್‌ಎಂಎಸ್ ಬಗ್ಗೆ ಅರಿಯದ ಮತ್ತು ಇನ್ನೊಬ್ಬಳ ಜತೆ ಸಂಬಂಧ ಇರಿಸಿಕೊಂಡಿರದ ಇನ್‌ಸ್ಪೆಕ್ಟರ್ ಕಂಗಾಲು. ಆದರೆ ಅವರೇನು ಹೇಳಿದರೂ ಪತ್ನಿ ನಂಬುವಂತಿರಲಿಲ್ಲ. ಕಾರಣ ದಾಖಲೆಯಂತೆ ಎಸ್‌ಎಂಎಸ್ ಇತ್ತು. ಇನ್‌ಸ್ಪೆಕ್ಟರ್‌ಗೂ ಟೆನ್ಶನ್ ಆಯ್ತು. ಎಸ್‌ಎಂಎಸ್ ಬಂದ ನಂಬರಿಗೆ ಫೋನ್ ಮಾಡಿದರು. ಆದರೆ ಎಸ್‌ಎಂಎಸ್ ಮಾಡಿದ ಹುಡುಗಿಗೆ ಇದು ಇನ್‌ಸ್ಪೆಕ್ಟರ್ ನಂಬರ್ ಎಂಬುದು ಗೊತ್ತಾಗಿತ್ತು. ಆಕೆ ಫೋನ್ ರಿಸೀವ್ ಮಾಡಲಿಲ್ಲ. ತಪ್ಪಾಗಿ ಎಸ್‌ಎಂಎಸ್ ಹೋಗಿದ್ದು ಆಕೆಯೂ ಗಾಬರಿಗೊಂಡಿದ್ದಳು.
ಇನ್‌ಸ್ಪೆಕ್ಟರ್ ಅಂತೂ ಕೈಗೆ ಸಿಕ್ಕವರ ಮೊಬೈಲ್‌ನಿಂದ ಕಾಲ್ ಮಾಡುತ್ತಿದ್ದರು. ಆದರೂ ಆಕೆ ಫೋನ್ ರಿಸೀವ್ ಮಾಡುತ್ತಿರಲಿಲ್ಲ. ಕೊನೆಗೆ ಕಾಯಿನ್ ಫೋನ್‌ನಿಂದ ಕೂಡ ಮಾಡಿದರು. ಊಹುಂ. ಪ್ರಯೋಜನವಾಗಲಿಲ್ಲ. ನಂಬರ್ ಯಾರದ್ದೆಂದು ಪತ್ತೆ ಮಾಡೋಣ ಅಂದರೆ ಅವತು ಭಾನುವಾರ. ಉಳ್ಳಾಲ, ಕೊಣಾಜೆ ಠಾಣೆಗಳ ಸಬ್‌ಇನ್‌ಸ್ಪೆಕ್ಟರ್‌ಗಳಿಗೆ ತಿಳಿಸಿದ ಇನ್‌ಸ್ಪೆಕ್ಟರ್ ಮಂಗಳೂರು ಗ್ರಾಮಾಂತರ ಠಾಣೆ ಹೋದರು. ಅಲ್ಲಿಯ ಸಬ್‌ಇನ್‌ಸ್ಪೆಕ್ಟರ್ ಬೆಳ್ಳಿಯಪ್ಪರ ಮುಂದೆ ಗೋಳು ತೋಡಿಕೊಂಡರು. ಬೆಳ್ಳಿಯಪ್ಪನ ಬಳಿ ಎಸ್‌ಎಂಎಸ್ ಬಂದ ನಂಬರ್ ಹೇಳಿದರು. ನಂಬರ್ ಬರೆದುಕೊಂಡು ಬೆಳ್ಳಿಯಪ್ಪ ಸುಮ್ಮನೆ ಹೀಗೆ ಠಾಣೆಯ ಹೊರಗೆ ಬಂದು ಡಯಲ್ ಮಾಡಿದರು. ಅಲ್ಲೇ ಸಮೀಪದಲ್ಲಿ ಮೊಬೈಲ್ ರಿಂಗ್ ಆಗುತ್ತಿತ್ತು. ಬೆಳ್ಳಿಯಪ್ಪ ಮೊಬೈಲ್ ಕಟ್ ಮಾಡಿದರು. ಮೊಬೈಲ್ ರಿಂಗ್ ಕೂಡ ನಿಂತು ಹೋಯಿತು! ಮತ್ತೆ ಹಾಗೇ ಮಾಡಿದರು. ಆಗ ಗೊತ್ತಾಯಿತು ಆ ಮೊಬೈಲ್ ಲೇಡಿ ಪೊಲೀಸ್ ಒಬ್ಬರು ಎಂದು!
ಆಮೇಲೆ ವಿಚಾರಿಸಿದಾಗ ತಿಳಿಯಿತು. ಲೇಡಿ ಕಾನ್‌ಸ್ಟೇಬಲ್ ಒಬ್ಬಳು ಪ್ರೇಮಿಗಳ ದಿನದ ಅಂಗವಾಗಿ ಗೆಳತಿಯೊಬ್ಬಳಿಗೆ ಎಸ್‌ಎಂಎಸ್ ಮಾಡಲು ಎಳಸಿದ್ದಳು. ಅದೇನೋ ಹೆಚ್ಚು ಕಡಿಮೆಯಾಗಿ ಗೆಳತಿಯ ಹೆಸರಿನ ಸಮೀಪವೇ ಇದ್ದ ಇನ್‌ಸ್ಪೆಕ್ಟರ್ ಅವರ ಮೊಬೈಲ್‌ಗೆ ಹೋಗಿತ್ತು. ಹೋದರೆ ಪರವಾಗಿಲ್ಲ. ಸರ್ ಹೀಗಾಗಿದೆ. ತಪ್ಪಾಯ್ತು ಎಂದಿದ್ದರೆ ಇಷ್ಟೆಲ್ಲ ಗೊಂದಲ ಆಗುತ್ತಿರಲಿಲ್ಲ. ಅಚಿತಿಮವಾಗಿ ಇನ್‌ಸ್ಪೆಕ್ಟರ್‌ಗೆ ನಡೆದ ಘಟನೆ ವಿವರಿಸಿ, ಲೇಡಿ ಕಾನ್‌ಸ್ಟೇಬಲ್ ಸಾರಿ ಕೇಳುವುದರೊಂದಿಗೆ ಕ್ಷಮೆ ಕೇಳುವುದರೊಂದಿಗೆ ಈ ಘಟನೆ ಸುಖಾಂತ್ಯ ಕಂಡಿತು.
ಎಸ್‌ಎಂಎಸ್ ಕಳುಹಿಸೋದು ಕಳಿಸಿದ್ಲು, ನನ್ನ ಕೈಯಲ್ಲಿರೋವಾಗಲೇ ಕಳುಹಿಸಬಾರದೆ. ಎಷ್ಟು ಖುಶಿ ಪಡುತ್ತಿದ್ದೆ ಎಂದು ತನ್ನ ದುರದೃಷ್ಟವನ್ನೇ ಇನ್‌ಸ್ಪೆಕ್ಟರ್ ಹಳಿದುಕೊಂಡರು ಎಂಬುದು ಗುಟ್ಟಿನ ಸಂಗತಿ.
Friday, April 13, 2007
Subscribe to:
Post Comments (Atom)
No comments:
Post a Comment