ಕಾರಂತರ ಬಗ್ಗೆ ಇಷ್ಟ್ಯಾಕೆ ತಾತ್ಸಾರ ಅಂತ?
ವಿಶ್ವವಿದ್ಯಾಲಯಕ್ಕೆ ಡಾ. ಶಿವರಾಮ ಕಾರಂತರ ಹೆಸರಿಡುವ ಪ್ರಸ್ತಾವನೆ ಜೀವ ಕಳೆದುಕೊಂಡಿದೆ. ಪಿಲಿಕುಳ ನಿಸರ್ಗ ಧಾಮಕ್ಕೆ ಕಾರಂತರ ಹೆಸರಿಡಿ ಎಂದು ಸರಕಾರ ಆದೇಶಿಸಿದರೆ ಜಿಲ್ಲಾಡಳಿತ ಒಂದು ವಿಭಾಗಕ್ಕೆ ಅವರ ಹೆಸರಿಟ್ಟು ಸುಮ್ಮನಾಗಿದೆ. ತವರು ಜಿಲ್ಲೆಯಲ್ಲೇ ಇಂತಹ ಸ್ಥಿತಿ!ಕಾರಂತರ ಹೆಸರಿನಲ್ಲಿ ಪುತ್ತೂರಿನಲ್ಲಿ ಬಾಲವನ ಇದೆ. ಅದು ಕಾರಂತರ ನೆನಪಿಗಿಂತ ಹೆಚ್ಚಾಗಿ ಮಾಸಿ ಹೋಗಿದೆ. ವಿಶ್ವವಿದ್ಯಾಲಯದಲ್ಲಿ ಹಾಗೂ ಪುತ್ತೂರು ವಿವೇಕಾನಂದ ಕಾಲೇಜಿನಲ್ಲಿ ಕಾರಂತ ಅಧ್ಯಯನ ಪೀಠ ಇದೆ. ಇಷ್ಟೇ ಕಾರಂತರಿಗೆ ತವರು ಜಿಲ್ಲೆ ಕೊಟ್ಟಿದ್ದು! ಈಗ ಪಿಲಿಕುಳ ನಿಸರ್ಗ ಧಾಮಕ್ಕೆ ಅವರ ಹೆಸರಿಡಿ ಎಂದು ಸರಕಾರ ಆದೇಶ ನೀಡಿ ಏಳು ವರ್ಷವಾದರೂ ಅದು ಜಾರಿಯಾಗಿಲ್ಲ. ಅದಕ್ಕೂ ಹೋರಾಟ ಮಾಡಬೇಕಾದ ಸ್ಥಿತಿ?ಡಾ. ಶಿವರಾಮ ಕಾರಂತರಿಂದ ಜಿಲ್ಲೆಗೆ ಸಾಕಷ್ಟು ಹೆಸರು ಬಂದಿದೆ. ರಾಜ್ಯಕ್ಕೆ eನಪೀಠ ಒದಗಿಸಿಕೊಟ್ಟವರು. ಕಾರಂತರು ಕೇವಲ ಸಾಹಿತ್ಯಕ್ಕೆ ಸೀಮಿತವಾಗಿರದೆ ಪರಿಸರದ ಬಗ್ಗೆ ಅಪಾರ ಪ್ರೀತಿ ಹೊಂದಿದ್ದರು. ಪರಿಸರ ಪರ ಹೋರಾಟಗಳಲ್ಲಿ ತೊಡಗಿಸಿಕೊಂಡಿದ್ದರು. ಇಂತಹ ಕಾರಂತರ ಕುರುಹು, ನೆನಪು ಜಿಲ್ಲೆಯಲ್ಲಿ ಅಳಿಸಿ ಹೋಗಬಾರದು. ಅಂತಹ ಸಾಹಿತಿಯ ಹೆಸರು ಜನ ಮಾನಸದಲ್ಲಿ ಹಚ್ಚ ಹಸುರಾಗಿ ಇರಬೇಕು ಎಂಬ ಕಾಳಜಿಯಿಂದ ಕನ್ನಡ ಸಾಹಿತ್ಯ ಪರಿಷತ್ ಮಾಜಿ ಅಧ್ಯಕ್ಷರಾದ ಹರಿಕೃಷ್ಣ ಪುನರೂರು ಹಾಗೂ ಮಾಜಿ ಶಾಸಕ ಕುಂಬ್ಳೆ ಸುಂದರ ರಾವ್ ಅವರು ಪಿಲಿಕುಳ ನಿಸರ್ಗ ಧಾಮಕ್ಕೆ ಡಾ. ಶಿವರಾಮ ಕಾರಂತರ ಹೆಸರಿಡಬೇಕೆಂದು ಸರಕಾರಕ್ಕೆ ೧೯೯ರಲ್ಲಿ ಪ್ರಸ್ತಾವನೆ ಸಲ್ಲಿಸಿದ್ದರು.ಅದನ್ನು ಸರಕಾರ ಪರಿಗಣಿಸಿ, ಕಾರಂತರ ಜನ್ಮ ಸ್ಥಳ ಮತ್ತು ಕರ್ಮ ಸ್ಥಳಕ್ಕೆ ಸಮೀಪದಲ್ಲಿರುವ ಪಿಲಿಕುಳ ನಿಸರ್ಗ ಧಾನಕ್ಕೆ ಕಾರಂತರ ಹೆಸರು ಇಡಬಹುದು. ಅವರು ಪರಿಸರ ಪ್ರೇಮಿಯೂ ಆಗಿದ್ದರಿಂದ ಇದು ಸೂಕ್ತ ಎಂಬ ನಿರ್ಧಾರಕ್ಕೆ ಬಂದು ೧೯೯೯ರಲ್ಲಿಯೇ ಪಿಲುಕುಳ ನಿಸರ್ಗ ಧಾಮಕ್ಕೆ ಡಾ. ಶಿವರಾಮ ಕಾರಂತ ನಿಸರ್ಗ ಧಾಮ ಎಂದು ಹೆಸರಿಡಲು ಆದೇಶ ಹೊರಡಿಸಿತು. ಆದರೆ ಕಾರಂತರ ಬಗ್ಗೆ ಜಿಲ್ಲಾಡಳಿತಕ್ಕಿರುವ ಅಸಡ್ಡೆ, ಪಿಲಿಕುಳಕ್ಕೆ ಕಾರಂತರ ಹೆಸರಿಡಲು ಇಷ್ಟವಿಲ್ಲದ ಕೆಲವು ಅಧಿಕಾರಿಗಳ ನಿರಾಸಕ್ತಿಯಿಂದ ಹಲವು ವರ್ಷ ಕಾರಂತರ ಹೆಸರು ಇಡಲಾಗಲಿಲ್ಲ. ೨೦೦೬ರಲ್ಲಿ ಕೆಲವರು ಇದನ್ನು ಮತ್ತೆ ನೆನಪಿಸಿದಾಗ ಪಿಲಿಕುಳದಲ್ಲಿರುವ ಬಯಾಲಾಜಿಕಲ್ ಪಾರ್ಕ್‌ಗೆ (ಪ್ರಾಣಿ ಸಂಗ್ರಹಾಲಯ) ಶಿವರಾಮ ಕಾರಂತರ ಹೆಸರಿಟ್ಟು ಸುಮ್ಮನಾಗಿದೆ.ಈ ಬಗ್ಗೆ ಹರಿಕೃಷ್ಣ ಪುನರೂರು ಅವರು ಮತ್ತೆ ಸರಕಾರಕ್ಕೆ ಪತ್ರ ಬರೆದಾಗ ‘ಪಿಲಿಕುಳ ನಿಸರ್ಗ ಧಾಮದ ವಿಭಾಗವೊಂದಕ್ಕೆ ಕಾರಂತರ ಹೆಸರಿಡಲಾಗಿದೆ. ಇಲ್ಲಿಗೆ ಈ ವಿಷಯ ಮುಕ್ತಾಗೊಂಡಂತಾಗಿದೆ’ ಎಂಬ ಉತ್ತರ ಬಂದಿದೆ. ಈ ಮೂಲಕ ಸಾಹಿತಿ, ಕಲಾವಿದ ಶಿವರಾಮ ಕಾರಂತರಿಗೆ ಜಿಲ್ಲಾಡಳಿತ ಮತ್ತು ಸರಕಾರ ಅವಮಾನ ಮಾಡಿವೆ. ಈ ಬಗ್ಗೆ ವೈದ್ಯಕೀಯ ಶಿಕ್ಷಣ ಸಚಿವ ಡಾ. ವಿ.ಎಸ್. ಆಚಾರ್ಯ ಅವರು ಮುಖ್ಯಮಂತ್ರಿ ಅವರಿಗೆ ಪತ್ರ ಬರೆದಿದ್ದಾರೆ. ಇದನ್ನು ಗಮನಿಸಿ ಆದ ತಪ್ಪು ಸರಿಪಡಿಸಿ, ಇಡೀ ಪಿಲಿಕುಳ ನಿಸರ್ಗ ಧಾಮಕ್ಕೆ ಡಾ. ಶಿವರಾಮ ಕಾರಂತರ ಹೆಸರಿಡುವಂತೆ ಸಂಬಂಧಪಟ್ಟ ಇಲಾಖೆಗೆ ಸೂಚಿಸಲಾಗಿದೆ. ಪರಿಣಾಮ ಶೂನ್ಯ.ಕುವೆಂಪು ನೆನಪಿಗೆ ವಿಶ್ವವಿದ್ಯಾಲಯವಿದೆ. ಕೊಪ್ಪದ ಸಮೀಪ ಕುವೆಂಪು ವಾಸಿಸುತ್ತಿರುವ ಮನೆಯನ್ನು ಶ್ರೀಶೈಲ ಎಂದು ಹೆಸರಿಟ್ಟು ಚೆನ್ನಾಗಿ ಕಾಪಾಡಲಾಗಿದೆ. ಕುವೆಂಪು ಹೆಸರಿನಲ್ಲಿ ಪ್ರತಿಷ್ಠಾನ ಕೂಡ ಸ್ಥಾಪನೆಯಾಗಿದೆ. ಇದೆಲ್ಲವನ್ನೂ ಸರಕಾರವೇ ಮಾಡಿದೆ. ಏನಿದೆ ಕಾರಂತರದ್ದೂ ಅಂತ? ಹಡುಕಿದರೆ ಕಾಣುವುದು ಒಂದೇ ಒಂದು ಅದು ಪುತ್ತೂರಿನಲ್ಲಿರುವ ಕಾರಂತರ ಬಾಲವನ. ಅದರಲ್ಲಿ ಕಾರಂತರ ಕುರುಹೂ ಇಲ್ಲ. ಕಾರಂತರು ನಿರ್ಮಿಸಿದ ಗ್ರಂಥಾಲಯ, ಕಾಡು ಇಲ್ಲವಾಗಿದೆ. ಕಾಡು ಕಡಿದು ಈಜುಕೊಳ ಮಾಡಲಾಗಿದೆ. ಪರಿಸರ ಪ್ರೇಮಿ ಡಾ. ಶಿವರಾಮ ಕಾರಂತರ ನೆನಪಿಗಾಗಿ ಇರುವ ಬಾಲವನದಲ್ಲಿ ಕಾಡು ಕಡಿದು ಈಜುಕೊಳ ನಿರ್ಮಿಸುವುದು ನಾವು ಕಾರಂತರಿಗೆ ತೋರಿಸುವ ಗೌರವ!ಕಾರಂತರು ಬಾಲವನದ ಪ್ರದೇಶದಲ್ಲಿ ೪೦ ವರ್ಷ ವಾಸವಾಗಿದ್ದರು. ಕಾದಂಬರಿ, ಯಕ್ಷಗಾನ, ಸಿನೆಮಾ ಹೀಗೆ ಎಲ್ಲದರಲ್ಲೂ ಕಾರಂತರು ತೊಡಗಿಕೊಂಡಿದ್ದು, ಇದೇ ಬಾಲವನದಲ್ಲಿದ್ದುಕೊಂಡು. ಕಾರಂತರು ಹುಟ್ಟಿದ್ದು ಕೋಟದಲ್ಲಾದರೂ ಅವರ ಕರ್ಮ ಭೂಮಿ ಪುತ್ತೂರಿನ ಬಾಲವನ. ಇದೇ ಪುತ್ತೂರಿನ ವಿವೇಕಾನಂದ ಕಾಲೇಜಿನಲ್ಲಿ ಕಾರಂತ ಅಧ್ಯಯನ ಪೀಠ ಇದೆ. ಅದರ ಮೂಲಕ ವರ್ಷಕ್ಕೊಂದು ಕಾರಂತ ಪ್ರಶಸ್ತಿ ನೀಡಲಾಗುತ್ತದೆ. ಮಂಗಳೂರು ವಿಶ್ವವಿದ್ಯಾಲಯದಲ್ಲಿ ಕಾರಂತ ಅಧ್ಯಯನ ಪೀಠ ಇದೆ.ಬಾಲವನವನ್ನು ಕಾರಂತರು ೧೯೭೦ರಲ್ಲಿ ಸರಕಾರಕ್ಕೆ ಕೊಟ್ಟರು. ಸರಕಾರ ಅದನ್ನೂ ಸರಿಯಾಗಿ ಉಳಿಸಿಕೊಳ್ಳಲಿಲ್ಲ. ಅವರ ಹೆಸರಿನಲ್ಲಿ ಪ್ರಶಸ್ತಿ ಕೊಡುತ್ತಿರುವುದು ಒಂದು ಕಾಲೇಜು. ಇದು ಸರಕಾರ ಕಾರಂತರ ಬಗ್ಗೆ ತೋರಿಸಿದ ಕಾಳಜಿ!ಸರಕಾರಕ್ಕೆ eನಪೀಠ ಪ್ರಶಸ್ತಿ ವಿಜೇತ ಸಾಹಿತಿ ಡಾ. ಶಿವರಾಮ ಕಾರಂತರ ಬಗ್ಗೆ ಯಾಕಿಷ್ಟು ಅನಾದರ? ಸರಕಾರ ಬಿಡಿ. ನಮ್ಮದೇ ಜಿಲ್ಲಾಡಳಿತಕ್ಕೆ ಕಾರಂತರ ಬಗ್ಗೆ ಅಸಡ್ಡೆ. ಶಾಸಕ ಯೋಗೀಶ್ ಭಟ್, ಸಚಿವ ಬಿ. ನಾಗರಾಜ ಶೆಟ್ಟಿ ಈ ಬಗ್ಗೆ ಕಿಂಚಿತ್ತು ಆಸಕ್ತಿ ಕೂಡ ತೋರಿಸಿಲ್ಲ. ಇಷ್ಟು ಬೇಗ ಕಾರಂತರು ನಮಗೆಲ್ಲ ಬೇಡವಾಗಿ ಹೋದರೆ?
No comments:
Post a Comment