ಅವಳು ರಾಜಧಾನಿ ಎಕ್ಸ್ ಪ್ರೆಸ್ ನಲ್ಲಿ ಹೋಗುತ್ತಿದ್ದಳು. ನಾನು ಹಂಪಿ ಎಕ್ಸ್ ಪ್ರೆಸ್ ನಲ್ಲಿ ಪಯಣಿಸುತ್ತಿದೆ.
ಎರಡೂ ರೈಲುಗಳೂ ‘ಓಡುತ ದೂರ ದೂರ. . .’
ಎರಡೂ ರೈಲು ಬೇರೆ ಬೇರೆ ದಿಕ್ಕಿನಲ್ಲಿ ಓಡುತ್ತಿತ್ತಾದರೂ, ಬಹುಶಃ ಇಬ್ಬರ ಮನಸ್ಸೂ ಒಂದೇ ದಿಕ್ಕಿನಲ್ಲಿ ವಿಚಾರ ಮಾಡುತ್ತಿತ್ತು. ಇಬ್ಬರೂ ಒಂದೊಂದು ಎಕ್ಸ್ ಪ್ರೆಸ್ ಹತ್ತಿದ್ದೆವಾದರೂ ನಮ್ಮ ಮನಸೊಳಗಿನ ದುಗುಡವನ್ನು ಯಾರ ಬಳಿಯೂ ಎಕ್ಸ್ ಪ್ರೆಸ್ ಮಾಡಲಾಗದೆ ತೊಳಲಾಡುತ್ತಿದ್ದೆವು!
ಕಾರಣ ಇಬ್ಬರ ಪಕ್ಕದಲ್ಲೂ ಹತ್ತಿರದವರು ಯಾರೂ ಇರಲಿಲ್ಲ. ಅವಳು ರಾಜಧಾನಿ ಎಕ್ಸ್ ಪ್ರೆಸ್ ರಶ್ಶಿನ ನಡುವೆಯೂ ಒಂಟಿತನ ಅನುಭವಿಸಿದರೆ, ನಾನು ಮನೆಯಲ್ಲಿ ಕೂತು ಒಂಟಿತನ ಓಡಿಸಲೆಂದೇ ವಸುಧೇಂದ್ರರ ಹಂಪಿ ಎಕ್ಸ್ ಪ್ರೆಸ್ ಹತ್ತಿದ್ದೆ!
ವಿಷಯ ಇಷ್ಟೇ. ನನ್ನ ಹೆಂಡತಿಗೆ ಮೂಡುಬಿದಿರೆ ಆಳ್ವಾಸ್ ಕಾಲೇಜಿನಲ್ಲಿ ಲೆಕ್ಚರರ್ ಕೆಲಸ ಸಿಕ್ಕಿದೆ. ಹಾಗಾಗಿ ಈಗ ಅವಳೊಂದು ತೀರ, ನಾನೊಂದು ತೀರ.
ನಾನು ಒಂದು ಫೋನು ಕೂಡ ಮಾಡದೆ ಮೋಹನ ಆಳ್ವರು ನನ್ನ ಹೆಂಡತಿಗೆ ಕೆಲಸ ಕೊಟ್ಟಿದ್ದಾರೆ. ಅವರ ಪ್ರೀತಿಗೆ ನಾನು ಮತ್ತು ಅವಳು ಇಬ್ಬರೂ ಋಣಿ. ಆಕೆ ಕನ್ನಡದಲ್ಲಿ ಎಂ.ಎ. ಮಾಡಿ ನಂತರ ಜೋಗಿ ಅವರ ಬರಹದ ಕುರಿತು ಎಂಫಿಲ್ ಪ್ರಬಂಧ ಬರೆದಿದ್ದಾಳೆ. ಇಷ್ಟೆಲ್ಲ ಕಲಿತು ಮನೆಯಲ್ಲಿ ಇರುವ ಹಾಗಾಯ್ತಲ್ಲ ಎಂಬ ಬೇಸರ. ಇಷ್ಟೆಲ್ಲ ಕಲಿತ ಮೇಲೆ ಸ್ವಲ್ಪ ದಿನವಾದರೂ ಕೆಲಸ ಮಾಡಬೇಕು. ಇಲ್ಲವಾದಲ್ಲಿ ಕಲಿತದ್ದೆಲ್ಲ ವೇಸ್ಟ್ ಎಂಬ ಚಿಂತೆ.
ಕೆಲಸವಿಲ್ಲದೆ ಮನೆಯಲ್ಲಿರಲು ಕಷ್ಟ. ಕೆಲಸಕ್ಕೆ ಹೋಗಲು ಇಷ್ಟ. ಗಂಡನ ಬಿಟ್ಟು ಬೇರೆ ಊಡಿನಲ್ಲಿ ಕೆಲಸಕ್ಕೆ ಹೋದರೆ ನಷ್ಟ!
ಈ ಗೊಂದಲದಲ್ಲೇ ದಿನ ಕಳೆದ ಆಕೆ ಅಂತೂ ಅಂತಿಮವಾಗಿ ಕೆಲಸಕ್ಕೆ ಸೇರುವ ನಿರ್ಧಾರ ಕೈಗೊಂಡಳು. ಬೇಡ ಎಂದು ಮಹಿಳಾ ಅಭ್ಯುದಯದ ವಿರೋಧಿಯಾಗಲು ನನಗೆ ಇಷ್ಟವಿರಲಿಲ್ಲ. ಆಕೆಗೆ ಕೆಲಸಕ್ಕೆ ಸೇರುವ ಉಮೇದಿ ಇತ್ತಾದರೂ, ಕೆಲಸ ಸಿಕ್ಕೇ ಬಿಟ್ಟಿತು ಅನ್ನುವಾಗ ಗಂಡನನ್ನು ಬಿಟ್ಟು ಹೋಗಬೇಕಲ್ಲ ಎಂಬ ಕಾರಣಕ್ಕೆ ಅವಳಿಗೆ ಕೆಲಸದ ಬಗ್ಗೆ ವೈರಾಗ್ಯ ಮೂಡಿಬಿಟ್ಟಿತ್ತು. ಆದರೆ ಅರ್ಜಿ ಹಾಕಿದ ಮೇಲೆ, ಆಳ್ವರು ಕೆಲಸ ಕೊಟ್ಟ ಮೇಲೆ ತಿರಸ್ಕರಿಸುವುದು ಸರಿಯಲ್ಲ ಅನ್ನಿಸಿತು.
ಆದರೆ ಕೆಲಸ ಸಿಕ್ಕಿದ ದಿನದಿಂದ ಕೆಲಸ ಸಿಕ್ಕಿತು ಎಂಬ ಸಂತೋಷಕ್ಕಿಂತ ನನ್ನ ಬಿಟ್ಟು ಹೋಗಬೇಕಲ್ಲ ಎಂಬ ದುಃಖ ಅವಳಲ್ಲಿ ಹೆಚ್ಚಾಗಿತ್ತು. ಮಾತು ಮಾತಿಗೂ ‘ಅಳುವೇ ತುಟಿಗೆ ಬಂದಂತೆ’!
ಅವಳನ್ನು ದಿಲ್ಲಿಯ ನಿಜಾಮುದ್ದೀನ್ ನಿಲ್ದಾಣದಲ್ಲಿ ತ್ರಿವೇಂದ್ರಂ ರಾಜಧಾನಿ ಎಕ್ಸ್ ಪ್ರೆಸ್ಸಿಗೆ ಹತ್ತಿಸಿ ಬಂದ ನಂತರ ಮನ, ಮನಸೆಲ್ಲ ಖಾಲಿ ಖಾಲಿ. ಹಾಗೇ ಕುಳಿತರೆ ಎಲ್ಲಿ ಕಣ್ಣಲ್ಲಿ ನೀರು ಉಕ್ಕೀತೋ ಎಂಬ ಭಯದಿಂದ ವಸುದೇಂಧ್ರದ ಹಂಪಿ ಎಕ್ಸ್ ಪ್ರೆಸ್ ಹತ್ತಿಬಿಟ್ಟೆ. ಕತೆಗಳೂ ಅದ್ಭುತವಾಗಿದೆ. ಅದು ನನ್ನ ಬೇಸರ, ದುಃಖ ನಿವಾರಿಸಿ, ಮನಸಿಗೆ ಉಲ್ಲಾಸ ನೀಡಿತು. ಅಷ್ಟರ ಮಟ್ಟಿಗೆ ನಾನು ವಸುಧೇಂದ್ರ ಅವರಿಗೆ ಋಣಿ. ಅವರು ಉತ್ತರ ಕರ್ನಾಟಕದ ಕತೆ, ಬಳ್ಳಾರಿ ಗಣಿ ಧೂಳನ್ನು ಕಣ್ಣಿಗೆ ಕಟ್ಟುವಂತೆ, ಮನ ಮುಟ್ಟುವಂತೆ ಚಿತ್ರಿಸಿದ್ದಾರೆ. ಎಂದಿನಂತೆ ಅವರ ಎಲ್ಲ ಕತೆಗಳೂ ಚೆನ್ನಾಗಿವೆ. ಆದರೆ ಕೆಂಪು ಗಿಣಿ ನೀವೆಲ್ಲ ತಪ್ಪದೆ ಓದಬೇಕಾದ ಕತೆ. ನನಗೆ ತುಂಬ ಇಷ್ಟವಾಯಿತು.
ಹೆಂಡತಿ ಇಲ್ಲದ ಬೇಸರದ ನಡುವೆಯೂ!
ಅವಳನ್ನು ರೈಲಿನಲ್ಲಿ ಕೂರಿಸಿ, ಕಣ್ಣಿಂದ ಮರೆಯಾಗುವರೆಗೂ ಟಾಟಾ ಮಾಡಿ, ಬಂದು ಕಾರಲ್ಲಿ ಕೂತರೆ ಮನಸೆಲ್ಲ ಶೂನ್ಯ. ಕಣ್ಣಲ್ಲಿ ನೀರು ಉಕ್ಕೇ ಬಿಡುತ್ತದೇನೋ ಎಂಬಂತೆ. ನಾವು ಗಂಡಸರು ನೋಡಿ. ಸಾರ್ವಜನಿಕವಾಗಿ ಅಳುವಂತಿಲ್ಲ! ಕಾರಿನಲ್ಲಿ ಕೂತು ಮನೆ ಕಡೆ ಹೊರಟರೆ ಮನೆಗೆ ಯಾಕೆ ಹೋಗಬೇಕು ಎಂಬ ಪ್ರಶ್ನೆಗೆ ಎಷ್ಟು ಹುಡುಕಿದರೂ ಕಾರಣ ಸಿಗಲಿಲ್ಲ. ಮನುಷ್ಯ ಅದೆಷ್ಟು ಬೇಗ ಪರಾವಲಂಬಿಯಾಗಿಬಿಡುತ್ತಾನೆ ಅನ್ನಿಸಿತು.
ಒಂಟಿ ಬಾಳೆಂದರೆ ನನಗೆ ಮೊದಲಿನಿಂದಲೂ ರೇಜಿಗೆ. ಎಂ.ಎ. ಮಾಡಲು ಧಾರವಾಡದಲ್ಲಿರುವ ಕರ್ನಾಟಕ ವಿಶ್ವವಿದ್ಯಾಲಯಕ್ಕೆ ಹೊರಟಾಗ ಎಲ್ಲಿ ಉಳಿಯುವುದು, ಹಾಸ್ಟೆಲ್ಲಾ? ರೂಮಾ? ಎಂಬ ಪ್ರಶ್ನೆ ಉದ್ಭವಿಸಿತು. ಆಗ ಅಲ್ಲಿರುವ ದೊಡ್ಡಪ್ಪನ ಮನೆಯಲ್ಲೇ ಉಳಿಯುವುದು ಅಂತ ನಾನೇ ಅಂದುಕೊಂಡಿದ್ದೆ. ಅವರ್ಯಾರನ್ನೂ ಕೇಳದೆ. ಅವರದ್ದು ಆಗ ಸಣ್ಣ ಮನೆ. ನನ್ನ ತಂಗಿಯರಾದ ಅವರಿಬ್ಬರು ಮಕ್ಕಳು ಬೇರೆ ಇದ್ದಾರೆ. ನಾನೂ ಒಬ್ಬ ಸೇರಿಕೊಂಡರೆ ಕಷ್ಟ ಎಂಬುದು ಗೊತ್ತಿದ್ದೂ ನಾನು ಅವರ ಮನೆಯಲ್ಲೇ ಉಳಿಯಬೇಕು ಅಂದುಕೊಂಡೆ. ಯಾಕೆಂದರೆ ನನಗೆ ಒಂಟಿಯಾಗುವ ಭಯ ಇತ್ತು.
ದೊಡ್ಡಪ್ಪ-ದೊಡ್ಡಾಯಿಯ ಆತಿಥ್ಯ, ತಂಗಿಯರ ಪ್ರೀತಿ, ಗೆಳೆಯ ಪ್ರಸನ್ನ ಹಾಗೂ ಇತರ ಕೆಲವು ಗೆಳೆಯರ ಆಪ್ತತೆ ನಡುವೆ ೨ ವರ್ಷದ ಎಂ.ಎ. ಮುಗಿದಿದ್ದೇ ಗೊತ್ತಾಗಲಿಲ್ಲ. ಅಲ್ಲಿಂದ ಮುಂದೆ ಪಯಣ ಬೆಳೆಸಿದ್ದು ಮಂಗಳೂರಿಗೆ. ವಿಜಯ ಕರ್ನಾಟಕ ವರದಿಗಾರನಾಗಿ. ಅಲ್ಲಿ ಹೆಚ್ಚು ಕಡಿಮೆ ೬ ತಿಂಗಳು ಒಂಟಿಯಾಗಿ, ಯೆಯ್ಯಾಡಿಯ ಭೋಜಣ್ಣ ಅವರ ಮನೆಯ ಸಣ್ಣ ಕೊಠಡಿಯಲ್ಲಿದ್ದೆ. ನಿಧಾನವಾಗಿ ನನ್ನ ಸಹೋದ್ಯೋಗಿ ಯೋಗೀಶ್ ಹೊಳ್ಳನ ಪರಿಚಯವಾಗಿ, ಆತ್ಮೀಯನಾಗಿ ಅವನ ಜೊತೆ ಸೇರಿಕೊಂಡೆ. ವಿಜಯ ಕರ್ನಾಟಕದಲ್ಲೇ ಕೆಲಸ ಮಾಡುವ ರಾಮ ನಮ್ಮಿಬ್ಬರನ್ನು ಸೇರಿಕೊಂಡ. ಮೊದಲ ೬ ತಿಂಗಳಲ್ಲಿ ಕೂಡ ಒಂದೆರಡು ತಿಂಗಳು ಮಾತ್ರ ಒಂಟಿ ಅನ್ನಿಸಿತು. ಅದನ್ನು ದೂರ ಮಾಡಲೆಂದೇ ಕೆಲಸಕ್ಕೆ ಅಂಟಿಕೊಂಡುಬಿಟ್ಟಿದೆ. ರೂಮಲ್ಲಿ ಊಟ-ತಿಂಡಿ ಮಾಡುತ್ತಿರಲಿಲ್ಲ. ಎಲ್ಲ ಹೊರಗೇ. ಹೀಗಾಗಿ ಬೆಳಗ್ಗೆ ೮.೦೦ ಗಂಟೆಗೆಲ್ಲ ಕಚೇರಿ ತಲುಪಿ ಬಿಟ್ಟಿರುತ್ತಿದ್ದೆ. ಆಮೇಲೆ ನಿಧಾನವಾಗಿ ಅಕ್ಕಪಕ್ಕದ ರೂಮಿನಲ್ಲಿ ಇರುತ್ತಿದ್ದ ಮಹೇಶ ಪಟ್ಟಾಜೆ, ನಾರ್ಸಿನ್ ಡಿಸೋಜ ಹಾಗೂ ಇನ್ನೂ ಕೆಲವರು ಪರಿಚಯವಾದರು. ಇದೇ ಅವಧಿಯಲ್ಲಿ ಪರಿಚಯದ ಶಿಶಿರ್ ಹೆಗಡೆ ಟ್ಯೂಶನ್‌ಗೆಂದು ಮಂಗಳೂರಿಗೆ ಬಂದವ ನನ್ನ ರೂಮಿನಲ್ಲೇ ಇದ್ದ. ಯೋಗೀಶ್ ಹಾಗೂ ರಾಮನ ಜೊತೆ ಸೇರಿಕೊಂಡ ಮೇಲಂತೂ ಒಂಟಿ ಅನ್ನಿಸಲೇ ಇಲ್ಲ. ಅವರನ್ನು ಬಿಟ್ಟು ನಾನೇ ಪ್ರತ್ಯೇಕ ಮನೆ ಮಾಡಿದ್ದು ಮದುವೆಯಾದ ಮೇಲೆಯೆ. ಆಮೇಲೆ ಹೆಂಡತಿ ಜೊತೆಯಲ್ಲಿದ್ದಳು.
ಹೀಗಾಗಿ ನನ್ನ ಇಡೀ ಜೀವನದಲ್ಲಿ ನಾನು ಒಂಟಿಯಾಗಿ ಜೀವಿಸಿದ್ದು ಬರೀ ಒಂದೆರಡು ತಿಂಗಳು ಮಾತ್ರ ಅನ್ನಬಹುದು.
ಅಷ್ಟರ ಮಟ್ಟಿಗೆ ನಾನು `ಸಂಘ' ಜೀವಿ!!!!
ಹೀಗಾಗಿ ಊಟ, ತಿಂಡಿಗೆ ನಾನು ಅವಳನ್ನೇ ಅವಲಂಬಿಸಿದ್ದೆ. ತೊಳೆಯುವ ಬಟ್ಟೆ ನೆನೆಸಿಡುತ್ತಿದ್ದಳು. ಕೆಲಸಕ್ಕೆ ಹೋರಟಾಗ, ಬಂದ ಕೂಡಲೆ ಜೂಸಿನ ಗ್ಲಾಸು ತಂದು ಕೈಗೆ ಕೊಡುತ್ತಿದ್ದಳು. ಬೆಳಗ್ಗೆ ನನ್ನಷ್ಟಕ್ಕೆ ಪೇಪರ್ ಓದುತ್ತಾ ಕೂತಿದ್ದರೆ ತಿಂದಿ, ಚಾ ತಂದು ಇಡುತ್ತಿದ್ದಳು. ರಾತ್ರಿ ಊಟದ ನಂತರ ಹಣ್ಣನ್ನು ಚೆಂದಕೆ ಕೊಯ್ದು, ಹೋಳು ಮಾಡಿ, ಫೋರ್ಕ್ ಸಮೇತ ತಂದಿಡುತ್ತಿದ್ದಳು. ಟಿವಿ ನೋಡುತ್ತ ಗುಳುಂ ಮಾಡುವುದು ಮಾತ್ರ ನನ್ನ ಕೆಲಸವಾಗಿತ್ತು.
ಆದರೆ ಈಗ?
ಅನಿವಾರ್ಯವಾಗಿ ಒಂಟಿ ಜೀವನ ನಡೆಸಬೇಕಿದೆ.
ಆದರೆ ಅವಳು ಮೂಡುಬಿದಿರೆಗೆ ಹೋಗಿದ್ದಾಳೆ ಅಂತ ನಾನು ಮೂಡು ಕೆಡಿಸಿಕೊಂಡು ಕೂರುವ ಹಾಗಿಲ್ಲವಲ್ಲ. ಬೇಸರ ಮರೆಯಲು ಸಂಗಾತಿಯಾಗಿ ಪುಸ್ತಕಗಳಿವೆ. ಓದಬೇಕೆಂದು ತಂದಿಟ್ಟುಕೊಂಡ ಸಾಕಷ್ಟು ಪುಸ್ತಕಗಳಿವೆ. ಇನ್ನೂ ಕೆಲವು ನಾನು ಓದದ ಪುಸ್ತಕಗಳನ್ನು ತರುವಂತೆ ರಾಜ್ಯಕ್ಕೆ ಹೋಗಿರುವ ಗೆಳೆಯ ಶಿವಪ್ರಸಾದ್‌ಗೆ ಹೇಳಿದ್ದೇನೆ. ಕೆಲವೊಮ್ಮೆ ಹೆಂಡತಿಯ ನೆನಪೂ ಆಗದಷ್ಟು ಕೆಲಸಗಳಿರುತ್ತವೆ. ಅಡುಗೆ ಮಾಡಲು ಕೆಲಸದವಳನ್ನು ಗೊತ್ತು ಮಾಡಿದ್ದೇನೆ. ಹಾಗಾಗಿ ಅಷ್ಟು ಕಷ್ಟವಾಗಲಿಕ್ಕಿಲ್ಲ ಅಂದುಕೊಂಡಿದ್ದೇನೆ.
ಆದರೆ ಪುಸ್ತಕ ಓದಿದಾಗ, ಟಿವಿಯಲ್ಲಿ ಏನೋ ನೋಡಿದಾಗ ಏನಾದರೂ ಹೇಳಬೇಕೆಂದರೆ ಪಕ್ಕದಲ್ಲಿ ಯಾರೂ ಇರುವುದಿಲ್ಲ ಅದೊಂದೇ ಬೇಸರ.ಪಾಯಿ
ಬಹುಶಃ ಇದಕ್ಕೇ ನರಸಿಂಹ ಸ್ವಾಮಿಯವರು `ಹೆಂಡತಿಯೊಬ್ಬಳು ಮನೆಯೊಳಗಿದ್ದರೆ ನನಗದು ಕೋಟಿ ರುಪಾಯಿ' ಅಂತ. ಅಲ್ವಾ?
24 comments:
ನೀವೂ ಮಂಗಳೂರಿಗೇ ಮತ್ತೆ ಬಂದು ಗಂಡ ಹೆಂಡತಿ ಒಂದಾಗಿ ಮಾರಾಯ್ರೇ!
ನಂಗೆ ತಲೆಬಿಸಿ ಯಾವುದು ಗೊತ್ತಾ?
ಅಡುಗೆ ಕೆಲಸದವಳು!
ಮನಸ್ಸಿನ ಭಾವನೆಗಳನ್ನು ಚೆನ್ನಾಗಿ ಬರ್ದಿದ್ದೀರಿ..ನೀವು ನಮ್ಮೂರಿಗೆ ಹೋಗಿ ಸೇರ್ಕೊಂಡುಬಿಡಿ....ಯಾವಾಗಲು ಹೆಂಡತಿ- ಗಂಡನ ಅಗತ್ಯ / ಹೆಚ್ಚು ಅರ್ಥವಾಗುವುದು ಅವರು ದೂರದಲ್ಲಿದ್ದಗಲೇ ಅಲ್ವೇ..ನಾನು ಇದ್ದೆ ೨ ವರ್ಷ ಮೈಸೂರಿನಲ್ಲಿ, ಇವರು USನಲ್ಲಿ..
ಅಡುಗೆಯವಳ ಬಗ್ಗೆ ನೀನು ತಲೆಕೆಡಿಸಿಕೊಳ್ಳಬೇಡ ಮಿಥುನ. ನನ್ನ ಹೆಂಡತಿಗೇ ಅದರ ಬಗ್ಗೆ ಚಿಂತೆಯಿಲ್ಲ. ಅಡುಗೆ ಮಾಡುವವಳು 'ಅಡಿಗೆ'ಬಾರದಂತೆ ಎಚ್ಚವಹಿಸುತ್ತೇನೆ ಎಂಬ ಭರವಸೆಯನ್ನು ಈ ಮೂಲಕ ನಿನಗೆ ನೀಡುತ್ತಿದ್ದೇನೆ.
-----
ವನಿತಾ ಅವರೆ, ದೂರದಲ್ಲಿದ್ದಾಗಲೇ ಅವರ ಅಗತ್ಯ ಅರ್ಥವಾಗಬೇಕೆಂದೇನೂ ಇಲ್ಲ. ಅವರಿರುವಾಗಲೂ ನಮಗೆ ಅದರ ಅರಿವಿರುತ್ತದೆ. ಆದರೆ ದೂರವಾದಾಗ ಅವರ ಅಗತ್ಯ ಬಹಿರಂಗವಾಗುತ್ತದೆ ಅಷ್ಟೆ.
sar,
nIvu ma0gaLUrige banni, sariyaayitalla. I bEsaravu iruvudilla. nimma sa0paadakarige hELi. kraim riporTarige sarakaari rUl gaLannu sa0paadakarige manavarike maaDikoDuvudu kaShTavaagalaaradu e0du nanna Baavane. illadiddare pati patniyannu agalisida paapa nimage e0du hELi. opputaare e0du nanna Baavane. :-) :-) :-)
nimma baravaNige e0dina0te manamuTTuva haage barediddIri.
dhanyavaadagaLu.
ನೀವು ಮಂಗಳೂರು ಬಿಟ್ಟು ದೆಹಲಿಗೆ ಹೋಗುತ್ತಿದ್ದೀರಿ ಅಂತ ಗೊತ್ತಾದಾಗಲೇ ಒಂಥರಾ ಅನಿಸಿತ್ತು ನನಗೆ. ಅದರಲ್ಲೂ ನೀವು ದೆಹಲಿಗೆ ಹೋಗಿಬಿಟ್ಟ ಮೇಲೆ ಮಂಗಳೂರಿನ ಪತ್ರಿಕೆಗಳಲ್ಲಿ ಕ್ರೈಮ್ ವರದಿಗಳು ತೀರಾ ಸಪ್ಪೆಯಾಯಿತು. (ಅಥವಾ ನನಗೆ ಹಾಗನಿಸಿತು)
ಈಗ ಸ್ವಲ್ಪ ಆಸೆ ಮೂಡಿದೆ. ನಿನ್ನ ಅರ್ದ್ಧಾಂಇಯವರು ಆಳ್ವಾಸ್ ಕಾಲೇಜಿಗೆ ಉಪನ್ಯಾಸಕರಾಗಿ ಬರುತ್ತಿದ್ದಾರೆ. ನಾನು ಓದಿದ ಕಾಲೇಜು ಅದು. ಮೂರು ವರ್ಷ ಅಲ್ಲಿ ಹೇಗೆ ಕಳೆದೆ ಎಂಬುದೇ ಗೊತ್ತಾಗಲಿಲ್ಲ. ಈಗಲೂ ಅಲ್ಲಿಯ ದಿನಗಳನ್ನು, ನಮ್ಮ ತರಗತಿಯನ್ನು, ಸಹಪಾಠಿಗಳ ಜೊತೆ ಜಗಳಮಾಡುತ್ತಿದ್ದದ್ದನ್ನು ನೆನಪಿಸಿಕೊಂಡರೆ ಒಂದಿಷ್ಟು ಖುಷಿ, ಒಂದಿಷ್ಟು ಬೇಸರ...
ಆ ಕಾಲೇಜಿಗೆ ನಾನು ಋಣಿ.
ಈಗ ಭಟ್ಟರೂ ಇನ್ನೊಂದೆರಡು ತಿಂಗಳಲ್ಲಿ ವಾಪಸ್ ಮಂಗಳೂರಿಗೇ ಬರುತ್ತಾರೆ ಅಂದುಕೊಂಡಿದ್ದೇನೆ.
ಭಟ್ರೇ, ಹೆಂಡತಿಯನ್ನು ಬಿಟ್ಟು ತುಂಬಾ ದಿನ ಇರಬೇಡಿ. ವಾಪಸ್ ಮಂಗಳೊರಿಗೇ ಬಂದುಬಿಡಿ. ಇಲ್ಲಿನ ಕೆಲವು ಕೊಳಕರ ಬಗ್ಗೆ ನೀವೊಮ್ಮೆ ಬರೆಯಬೇಕು. ಅಷ್ಟು ಅಧ್ವಾನಗಳಾಗಿವೆ ನೀವು ಇಲ್ಲಿಂದ ಹೋದಮೇಲೆ.
ಬೇಗ ಮಂಗಳೂರಿನ ಪಿವಿಎಸ್ ವೃತ್ತದ ಬಳಿಯಿರುವ ವಿಜಯ ಕರ್ನಾಟಕ ಆಫೀಸಿಗೆ ಬಂದುಬಿಡಿ.
- ವಿಜಯ್ ಜೋಶಿ,
ದಿಲ್ಲಿಗೆ ಬಂದು ಒಂದು ವರ್ಷವಷ್ಟೇ ಆಗಿದೆ. ಈಗಲೇ ಸಂಪಾದಕ ಬಳಿ ಯಾವ ಮುಖ ಇಟ್ಟುಕೊಂಡು ಮಂಗಳೂರಿಗೆ ವರ್ಗಮಾಡಿ ಎನ್ನಲಿ? ಸಂಪಾದಕರೇನೋ ನಮ್ಮ ಕಷ್ಟ ಅರ್ಥ ಮಾಡಿಕೊಳ್ಳಬಹುದು. ನಾವೂ ಅವರ ಕಷ್ಟ ಅರ್ಥ ಮಾಡಿಕೊಳ್ಳಬೇಕಲ್ಲವೇ ರೂಪಾ ಅವರೆ?
ನಿಮ್ಮ ಸಲಹೆಗೆ ಥ್ಯಾಂಕ್ಸ್
ವಿಜಯ್ ಜೋಷಿ ನಿನ್ನ ಪ್ರೀತಿಗೆ ನಾನು ಋಣಿ. ಆದರೆ ಪಿವಿಎಸ್ ಕಚೇರಿಗೆ ಯಾಕೆ ಬನ್ನಿ ಎಂದು ಹೇಳಿದೆ ಎಂಬುದು ಗೊತ್ತಾಗಲಿಲ್ಲ!!!!
ಮಂಗಳೂರಿಗೆ ಬಂದರೂ ಮೊದಲಿದ್ದ ಹುದ್ದೆಗೆ ಮರಳಲಾರೆ. ದೆಹಲಿಗೆ ಸರಿಸಮನಾದ ಹುದ್ದೆ ಅಲ್ಲಿ ಸಿಗಬೇಕಲ್ಲ???
ಒಹ್ಹ್... ನನ್ನ ಹೆಸರು ಬಂದಿದೆ ಅಲ್ಲಿ - ಜೀವನದ ಒಂದು ಮುರ್ಕಿಯಲ್ಲಿ. :-) ನನಗೆ ಬಂದು ಉಳಿದ ನೆನಪು ಇನ್ನು ಹಸಿ ಹಸಿಯಾಗಿ ಇದೆ. ಕೆಲವೊಮ್ಮೆ ನಾನು ಆಫೀಸಿಗೆ ಹೊಗುವ ಮುನ್ನ ನನ್ನ ಬೈಕ್ ಅನ್ನು ಒರೆಸುತ್ತೇನೆ - ಆಗ ನನಗೆ ತಪ್ಪದೇ ನೆನಪಾಗುವುದು ನೀನು. ತುಂಬಾ ಚೊಕ್ಕಟವಾಗಿರುತ್ತಿತ್ತು - ಹೀರೋ ಹೋಂಡಾ ಪ್ರತೀ ದಿನ ಒರೆಸುತ್ತಿದ್ದೆ. ಆಮೇಲೆ ನಾನು ಅಲ್ಲಿರುವ ಸಮಯದಲ್ಲೇ ಒಂದು ಷೂ (ನೀಲಿ ಬಣ್ಣದ್ದು Nike ಅಂಥ ನೆನಪು ) ತಗೊಂಡಿದ್ದೆ ನೀನು ಅದಿನ್ನು ನೆನಪಿದೆ. ನಾನು ಇದರ ಸೋಲ್ ಗಟ್ಟಿ ಇಲ್ಲ ಅಂದಿದ್ದೆ - ಅದಾದ ಮೇಲೆ ನನಗೆ ಆ ಥರಹದ ಷೂ ನೋಡಿದಾಗಲೆಲ್ಲ ಅದು ಗಟ್ಟಿ ಬರೊತ್ತೆ ಅಂಥ ನೀನು ಹೇಳಿದ ನೆನಪು. ಮತ್ತೆ ಮತ್ತೆ ಮತ್ತೆ ಅಕ್ಕ ಪಕ್ಕದ ಮನೆಯವರು - ಹೊಸ ದಿಗ್ಂತದವರು ಒಬ್ಬರು - ಅವರು ನನಗೆ ಒಂದಿಷ್ಟು ಪುಸ್ತಕ ಕೊಟ್ಟಿದ್ದರು ಹೀಗೆ ಎಲ್ಲ ಹಸಿ ಹಸಿ - - ಲೇಖನ ತುದಿಯಲ್ಲಿ ಖುಷಿ ಕೊಟ್ಟಿತು(happy ending!) - ಮಿಥುನನಿಗೆ ಕೊಟ್ಟ ಉತ್ತರದ ಬಗ್ಗೆ ಹೇಳಿದ್ದು. ಒಳ್ಳೆಯ ಮಜ ಉತ್ತರಿಸಿದ್ದೀರಿ ಬಿಡಿ...
ಹಹ್ಹಹ್ಹ... ಮರೆಯಲು ಹೇಗೆ ಸಾದ್ಯ? ಆ ನೀಲಿ ನೈಕ್ ಶೂ, ಅದರ ಸೋಲ್ ನಿಜಕ್ಕೂ ತುಂಬ ಚೆನ್ನಾಗಿತ್ತು. ಅದೆಷ್ಟೋ ವರ್ಷ ಹಾಕಿದನಂತರವೂ ಹಾಳಾಗಲಿಲ್ಲ. ಆಮೇಲೆ ಬೇಸರ ಬಂದು ನಾನೇ ಬಿಟ್ಟೆ.
ಈಗ ಬೈಕ್ ಇಲ್ಲ. ಕಾರು. ಅದು ಕೂಡ ಚೊಕ್ಕವಾಗಿರಬೇಕು ನನಗೆ. ಗಾಡಿ ಗಲೀಜಾಗಿದ್ದರೆ ಈ ಬಾಡಿ ಒಳಗೆ ಕೂರೋದೇ ಇಲ್ಲ!!
ಮಿಥುನ ನನ್ನ ಆತ್ಮೀಯ ಗೆಳೆಯ. ಅವನ ಹೆಸರಿನ ಮಹಿಮೆಯೋ ಏನೊ ಆತನಿಗೆ ಸದಾ ಮೈಥುನದ ಮನಸು. ಆದರೆ ಮಾತಷ್ಟೆ ಹಾಗೆ. ಮನುಷ್ಯ ತುಂಬ ಒಳ್ಳೆಯವನು. ಅವನ ಮನೆ ಕಟೀಲಿಗೆ ಹತ್ತಿರವಾದ್ದರಿಂದ ಸ್ವಲ್ಪ ಕೀಟಲೆ ಅಷ್ಟೆ.
ಕರ್ಮ ಕರ್ಮ!
abba, bhattru mangalorige B.C aagi baruva swalpa hopes eega bantu
ಹ ಹ್ಹ ಹ್ಹ... ನಿಮ್ಮ ಹಾರೈಕೆ ಆದಷ್ಟು ಬೇ ಗಕೈಗೂಡಲಿ ಅಂತ ಆಶಿಸಲೇ ನರೇಶ್?
Neenu andhiddhu nija. esto sandharbhadhali joragi alona annisidharoo alokagolla. mostly 'ego' adda barutthe andhkothene. ee bhaavane comparaticely guysge swalpa hechchu andhkothene. Haagenilla antha punah comment maadbeda. mostly avaru beledha environment and the harmones kooda idhakke karana irabahudhu. But anthaha situation bandhaga ondhu media beku to express urself/ourself alva. chennagi andhidheeya. ee ninna expressing urself method nodidhodane(odhi) Rajadhani express nalli hodhavaru return ticket immediate aagi thagondilvalla!!! Life hi aisa hai!!!!
MANADA MATHU KELI ATHANKA SHURUVAGIDE.. HEEEGELLA IRUTHE ALVA?
ವಿನಾಯಕ್ ಸಾರ್ ,
ನಿಮಗೆ ಹಾಗೂ ನಿಮ್ಮ ಮನೆಯವರೆಲ್ಲರಿಗೂ ಶ್ರೀ ಕೃಷ್ಣ ಜನ್ಮಾಷ್ಟಮಿಯ ಹಾರ್ದಿಕ ಶುಭಾಶಯಗಳು . ಶ್ರೀ ಕೃಷ್ಣನು ತಮಗೆ ಸಕಲ ಸೌಭಾಗ್ಯವನ್ನು ಕೊಟ್ಟು ಹರಸಲಿ ಎ೦ದು ಈ ಶುಭ ಸ೦ದರ್ಭದಲ್ಲಿ ಹಾರೈಸುತ್ತೇನೆ
ರೂಪಾ
ವಿನಾಯಕ್ ಸರ್,
ಹೇಗಿದ್ದೀರಿ? ನಿಮ್ಮ ಬರಹಗಳು ಈಗ ಸಧ್ಯ ವಿ. ಕ ದಲ್ಲಿ ಬ೦ದಿಲ್ಲ , ಬ್ಲಾಗ್ ಅಪ್ ಡೇಟ್ ಮಾಡಿಲ್ಲ ? ನೀವು ಸೌಕ್ಯ ತಾನೇ ?
ವಿನಾಯಕ್ ಸರ್,
ಹೇಗಿದ್ದೀರಿ? ನಿಮ್ಮ ಬರಹಗಳು ಈಗ ಸಧ್ಯ ವಿ. ಕ ದಲ್ಲಿ ಬ೦ದಿಲ್ಲ , ಬ್ಲಾಗ್ ಅಪ್ ಡೇಟ್ ಮಾಡಿಲ್ಲ ? ನೀವು ಸೌಕ್ಯ ತಾನೇ ?
today's v.k article is super sir ..
ನೀವು ಊರು ಸೇರಿಕೊಳ್ಳಿ ಸರ್,
ಚೆಂದವಾಗಿ ಬರೆದಿದ್ದೀರ
VAKRADANTHARE,
READ YOUR BLOGS WHEN TIME PERMITS, READ UR ARTICLES IN VK, NEVER FIND 'VAKRAVAGIRUA DANTA'ANYWHERE IN BETWEEN, EVERYTHING IS STARIGHT,KEEP GOING,BETS OF LUCK
ಬ್ಲಾಗು ಬೇಸರವಾಯಿತೇಕೆ ಭಟ್ಟರೇ.. ಹೊಸದೇನೂ ಇಲ್ಲ ??
ನಿಮ್ಮ ಮನಸ್ಸಿನ ಒಂಟಿತನವನ್ನು ಚೆನ್ನಾಗಿ ವಿವರಿಸಿದ್ದೀರಿ. ಆದರೆ ಇದೇ ಬ್ಲಾಗನ್ನೇ ಕಡೆಯದಾಗಿ ಮಾಡುವದು ಸರಿಯಲ್ಲವೆಂದು ನನ್ನ ಭಾವನೆ. ನಾವೆಲ್ಲರೂ ಕುತೂಹಲದಿಂದಿದ್ದೇವೆ.
visit http://www.mediamirchy.blogspot.com/
battare channagi baredidiri. itichege blog bareyudu nillisiddu yake mare!
Post a Comment