ಅದೊಂದು ಸಿನಿಮಾ ಅಂತ ಅನ್ನಿಸಲೇ ಇಲ್ಲ. ಸಾಕ್ಷ್ಯಚಿತ್ರದಂತಿತ್ತು.
ಫಿರಾಕ್ ಸಿನಿಮಾ ನೋಡಬೇಕು ಅಂತ ಯಾಕೋ ಅನ್ನಿಸಿತ್ತು. ಸಾಮಾನ್ಯವಾಗಿ ಬಿಡುಗಡೆಯ ಮೊದಲ ದಿನ ಚಿತ್ರಮಂದಿರದತ್ತ ಸುಳಿಯದ ನಾನು ‘ಫಿರಾಕ್’ ಬಿಡುಗಡೆಯಾದ ಮೊದಲ ದಿನವೇ ನೋಡಿಬಿಟ್ಟೆ!
ಸತ್ಯವಾಗಿ ಹೇಳ್ತೀನಿ ಬೋರ್ ಬರಲಿಲ್ಲ. ಜೋರ್ ಇಷ್ಟವಾಗಲೂ ಇಲ್ಲ. ಗುಜರಾತ್ ನ ಮಲ್ಟಿಫ್ಲೆಕ್ಸ್ ಗಳು ಈ ಚಿತ್ರ ತೋರಿಸಲು ನಿರಾಕರಿಸಿವೆ ಎಂಬ ಸುದ್ದಿಯಿಂದ ಈ ಸನಿಮಾದಲ್ಲಿ ‘ಎಂಥದೋ’ ಇದೆ ಅಂದುಕೊಂಡೆ. ಅದರಲ್ಲೂ ಗುಜರಾತ್ನ ಗೋದ್ರಾ ಗಲಭೆ ನಂತರದ ಸಂಗತಿಯ ಸಿನಿಮಾ ಅಂದಾಗ ಸಹಜವಾಗಿ ಕುತೂಹಲ ಮೂಡಿತ್ತು. ಆ ಕುತೂಹಲ ತಣಿಯಿತು. ಗುಜರಾತ್ ನ ಮಲ್ಟಿಫ್ಲೆಕ್ಸ್ ಗಳು ಈ ಚಿತ್ರ ತೋರಿಸಲು ಯಾಕೆ ನಿರಾಕರಿಸಿವೆ ಎಂಬುದೂ ತಿಳಿಯಿತು. ಈ ಸಿನಿಮಾ ಮಲ್ಟಿಫ್ಲೆಕ್ಸ್ ಗಳಲ್ಲಿ ತೋರಿಸುವ ಗುಣಮಟ್ಟ ಹೊಂದಿಲ್ಲ.
ಸ್ವಲ್ಪ ಮಟ್ಟಿಗೆ ಗಲಭೆ ನಂತರದ ಪರಿಸ್ಥಿತಿಯನ್ನು ಬಿಂಬಿಸಲು ನಿರ್ದೇಶಕಿ ನಂದಿತಾ ದಾಸ್ ಸಫಲರಾಗಿದ್ದಾರೆ. ಆದರೆ ಆಕೆಯ ಮೊದಲ ಚಿತ್ರವಾದ್ದರಿಂದ ಅವರಿನ್ನೂ ಸಾಕ್ಷ್ಯ ಚಿತ್ರದ ಗುಂಗಿನಿಂದ ಹೊರಬಂದಿಲ್ಲ ಎಂಬುದು ಕಾಣುತ್ತಿತ್ತು.
ಚಿತ್ರದ ಆರಂಭದಲ್ಲಿ ಟಿಪ್ಪರ್ ಲಾರಿಯೊಂದರಲ್ಲಿ ಹೆಣಗಳನ್ನು ತಂದು ಕಲ್ಲು ಸುರಿದಂತೆ ಸುರಿವ ದೃಶ್ಯ ನಿಮ್ಮನ್ನು ಕಲಕಿ ಹಾಕಿಬಿಡುತ್ತದೆ. ನಿಮ್ಮ ಮನಸ್ಸಿನಲ್ಲಿ ಅಚ್ಚೊತ್ತಿ ಕುಳಿತುಬಿಡುತ್ತದೆ. ಆದರೆ ಹೀಗೇ ಇಡೀ ಸಿನಿಮಾ ಮನಸಿನಲ್ಲಿ ಅಚ್ಚೊತ್ತುವಂತೆ ಮಾಡುವಲ್ಲಿ ನಂದಿತಾ ವಿಫಲರಾಗಿದ್ದಾರೆ.
ಹಿಂದು-ಮುಸ್ಲಿಮರ ಗೆಳೆತನ. ಒಳ್ಳೆಯ ಹಿಂದು-ಮುಸ್ಲಿಂ, ಕೆಟ್ಟ ಹಿಂದು-ಮುಸ್ಲಿಂ ಇಬ್ಬರನ್ನೂ ತೋರಿಸಿದ್ದಾಳೆ ನಂದಿತಾ. ಆದರೆ ಪೊಲೀಸರನ್ನು ಮಾತ್ರ ಕೆಟ್ಟದಾಗಿ ಚಿತ್ರಿಸಿದ್ದಾಳೆ. ಎಲ್ಲೋ ಒಂದಿಬ್ಬರು ಪೊಲೀಸರು ಗುಜರಾತ್ ಗಲಭೆ ಸಂದರ್ಭ ಕೆಟ್ಟದಾಗಿ ನಡೆದುಕೊಂಡಿರಬಹುದು. ಆದರೆ ಎಲ್ಲ ಪೊಲೀಸರು ಹಾಗಲ್ಲ ಎಂಬುದನ್ನು ತೋರಿಸಲು ನಂದಿತಾ ಮರೆತಿದ್ದಾಳೆ. ಗಲಭೆಯ ಒಂದು ತಿಂಗಳ ನಂತರದ ಕತೆ ಅನ್ನುತ್ತಾಳೆ. ಹಾಗೆಯೇ ಪೊಲೀಸ್ ಒಬ್ಬನ ಬಾಯಲ್ಲಿ ಮುಸ್ಲಿಮನೊಬ್ಬನಿಗೆ ‘ಹೋಗು ಹೋಗು ಪಾಕಿಸ್ತಾನಕ್ಕೇ ಹೋಗು. ಇಲ್ಯಾಕೆ ಇದೀಯಾ’ ಎಂದು ಹೇಳಿಸುತ್ತಾರೆ ನಂದಿತಾ.
ಹೀಗಾಗಿ ಪಾಕಿಸ್ತಾನದಲ್ಲಿ ನಡೆದ ಚಲನಚಿತ್ರೋತ್ಸವದಲ್ಲಿ ಪ್ರಥಮ ಬಹುಮಾನ ಬಂದುದರಲ್ಲಿ ಆಶ್ಚರ್ಯವಿಲ್ಲ!
ನೀವೇ ಹೇಳಿ ಯಾವ ಪೊಲೀಸ್ ಹೀಗೆ ಹೇಳಲು ಸಾದ್ಯ?
ಅಕಸ್ಮಾತ್ ಒಬ್ಬ ಹೇಳಿದ್ದರೂ, ಅದನ್ನು ಎಲ್ಲ ಪೊಲೀಸರಿಗೆ ಅನ್ವಯಿಸುವ ಅಗತ್ಯವಿರಲಿಲ್ಲ. ಇಡೀ ಚಿತ್ರದುದ್ದಕ್ಕೂ ಪೊಲೀಸರನ್ನು ಕೆಟ್ಟದಾಗಿಯೇ ಚಿತ್ರಿಸಿರುವ ನಂದಿತಾ, ಪೊಲೀಸರ ಮೇಲೆ ಸಮಾಜಕ್ಕೆ ನಂಬಿಕೆ ಹೋಗುವಂತೆ ಮಾಡುವುದು ಎಷ್ಟು ಅಪಾಯಕಾರಿ ಎಂಬುದನ್ನು ಮರೆತಂತೆ ಕಾಣುತ್ತಾರೆ.
ಆದರೂ ಎಂದಿನಂತೆ ನಾಸಿರುದ್ದೀನ್ ಷಾ ನಟನೆ ಇಷ್ಟವಾಯಿತು. ವಯಸ್ಸಾದ ಉಸ್ತಾದನ ವೇಷದಲ್ಲಿ ಅವರ ಬಾಡಿ ಲಾಂಗ್ವೇಜ್ ನೋಡಲಾದರೂ ಸಿನಿಮಾ ನೋಡಬಹುದು. ಉಳಿದಂತೆ ಗಲಭೆ ನಂತರ ತಂದೆ-ತಾಯಿ ಕೊಲೆಯಾದದ್ದನ್ನು ಕಣ್ಣಾರೆ ಕಂಡ ಮುಸ್ಲಿಂ ಬಾಲಕನೊಬ್ಬನ ತಳಮಳಗಳು ಚೆನ್ನಾಗಿ ಮೂಡಿಬಂದಿವೆ. ಆತನನ್ನು ಮೋಹನನನ್ನಾಗಿ ಮಾಡಿ ಮನೆಯಲ್ಲಿಟ್ಟುಕೊಳ್ಳಲು ಯತ್ನಿಸುವ ಹಿಂದು ತಾಯಿಯೊಬ್ಬಳ ತವಕ, ಅವಳ ತುಡಿತ, ಗಾಬರಿ ಚೆನ್ನಾಗಿ ಮೂಡಿಬಂದಿದೆ. ಗಲಭೆ ನಂತರದ ಕೆಲವು ದೃಶ್ಯಗಳು ಕೂಡ ಮನಕಲಕುವಂತಿದೆ.
ಆದರೂ ಸಿನಿಮಾದುದ್ದಕ್ಕೂ ಬೆರಳು ಹಾಕಿಕೊಂಡರೂ ಕಣ್ಣಿಂದ ನೀರು ಬರುವುದಿಲ್ಲ!ಮಾರ್ಚ್ ೧೮ರಂದು ಹೊಸದಿಲ್ಲಿಯಲ್ಲಿ ‘ಫಿರಾಕ್’ ಚಿತ್ರ ಪ್ರದರ್ಶನವಿತ್ತು. ಅದರಲ್ಲಿ ಅವಳ ತಂದೆ ಪ್ರಸಿದ್ಧ ಕಲಾವಿದ ಜತಿನ್ ದಾಸ್ ಕಣ್ಣೀರ್ ಗರೆದರು ಎಂದು ಮಾಧ್ಯಮಗಳಲ್ಲಿ ವರದಿಯಾಗಿತ್ತು. ಅದೇನು ಮಗಳು ಇಂತಹ ಸಿನಿಮಾ ಮಾಡಿದ್ದಾಳೆ ಅಂತ ಅತ್ತರೋ? ಜನ ನೋಡಲಿಕ್ಕಿಲ್ಲ ಅಂತ ಅನಿಸಿ ಅತ್ತರೋ? ಇಲ್ಲ ದೃಶ್ಯ ನೋಡಿ ಅತ್ತರೋ? ಎಂಬುದು ಸ್ಪಷ್ಟವಾಗಿಲ್ಲ. ಸಿನಿಮಾ ಮುಸ್ಲಿಂ ಪರ ಎಂಬ ಆರೋಪಕ್ಕೆ ಉತ್ತರಿಸಿರುವ ನಂದಿತಾ ‘ಗಲಭೆ ನಂತರ ಮುಸ್ಲಿಮರ ಕಷ್ಟಗಳನ್ನು ಚಿತ್ರಿಸಿದ್ದೇನೆ’ ಎಂದಿದ್ದಾರೆ. ಗಲಭೆ ಅಂದ ಮೇಲೆ ಎರಡೂ ಕಡೆಯವರಿಗೆ ಹಾನಿಯಾಗಿರುತ್ತದೆ. ದೇಶದ ಯಾವುದೇ ಕೋಮುಗಲಭೆ ತೆಗೆದು ನೋಡಿ ಅದರಲ್ಲಿ ಒಂದೇ ಕೋಮಿನ ಜನ ಸತ್ತಿರುವುದಿಲ್ಲ ಅಥವಾ ಒಂದೇ ಕೋಮಿನ ಜನರಿಗೆ ಹಾನಿಯಾಗಿರುವುದಿಲ್ಲ. ಲೆಕ್ಕಾಚಾರ ಯಾವಾಗಲೂ ಸಮನಾಗಿಯೇ ಇರುತ್ತದೆ.
ಆರೋಪಗಳೇನೆ ಇರಲಿ. ಸಿನಿಮಾ ನೋಡಿದರೆ ನಿಮಗದು ಸಂಪೂರ್ಣ ಮುಸ್ಲಿಂ ಪರ ಅನಿಸುವುದಿಲ್ಲ. ಸಂಗತಿಗಳನ್ನು ‘ಬ್ಯಾಲೆನ್ಸ್’ ಮಾಡಲು ನಂದಿತಾ ಯತ್ನಿಸಿದ್ದಾರೆ. ಆದರೆ ಯಾವುದನ್ನೂ ಸರಿಯಾಗಿ ಹೇಳಿಲ್ಲ. ಅಂತಿಮವಾಗಿ ಪೊಲೀಸರನ್ನು ಕೆಟ್ಟದಾಗಿ ಚಿತ್ರಿಸಿದ್ದಾರೆ. ನಾಸಿರುದ್ದೀನ್ ಷಾ, ಪರೇಶ್ ರಾವಲ್ ಅವರಂತಹ ನಟರನ್ನು ಸರಿಯಾಗಿ ಬಳಸಿಕೊಳ್ಳಲೂ ನಿರ್ದೇಶಕಿಯಾಗಿ ನಂದಿತಾ ವಿಫಲರಾಗಿದ್ದಾರೆ.
ಈ ಸಿನಿಮಾಕ್ಕೆ ಕ್ಷಮಿಸಿ ಸಾಕ್ಷ್ಯಚಿತ್ರಕ್ಕೆ ೫ ಚಲನಚಿತ್ರೋತ್ಸವ ಪ್ರಶಸ್ತಿಗಳು ಬಂದಿವೆ. ಪ್ರಶಸ್ತಿ ಬಂದ ಸಿನಿಮಾಗಳನ್ನು ನೋಡುವ ಗೀಳಿನವರಾಗಿದ್ದರೆ ಆ ಕಾರಣಕ್ಕಾದರೂ ನೀವು ಇದನ್ನು ನೋಡಬಹುದು. ಇಲ್ಲವಾದಲ್ಲಿ ನೀವು ತುಂಬ ಬುದ್ದಿವಂತರು ಅಂತ ನೀವಂದುಕೊಂಡಿದ್ದರೆ ತಪ್ಪದೆ ನೋಡಿ. ಯಾಕೆಂದರೆ ಬಹುತೇಕ ದೃಶ್ಯಗಳು, ಡೈಲಾಗ್ಗಳ ಅರ್ಥ ಸೂಚ್ಯವಾಗಿದೆ. ಆದ್ದರಿಂದ ಸಾಮಾನ್ಯ ನೋಡುಗ ಅರ್ಥ ಮಾಡಿಕೊಳ್ಳುವುದು ಕಷ್ಟ. ಸಿನಿಮಾ ಮುಗಿದಾಗ ನನ್ನ ಅಕ್ಕಪಕ್ಕದಲ್ಲಿದ್ದವರೆಲ್ಲಾ ‘ಮುಗಿದೇ ಹೋಯಿತಾ’ ಎಂಬರ್ಥದ ಮುಖಮುದ್ರೆ ಹೊತ್ತು ‘ಅರ್ಥವೇ ಆಗಲಿಲ್ಲ’ ಎಂಬಂತೆ ಕೈ ತಿರುಗಿಸದ್ದೇ ಇದಕ್ಕೆ ಸಾಕ್ಷಿ.
ಅವರಿಗಿಂತ ನಾನೇ ಬುದ್ದಿವಂತ ಅಂತ ಸಾಮಾದಾನ ಮಾಡಿಕೊಂಡು ಹೊರಬಂದೆ.
ನನ್ನ ಬುದ್ದಿಗೆ ದಕ್ಕಿದಷ್ಟನ್ನು ಬರೆದಿದ್ದೇನೆ. ನಾನು ಬುದ್ದಿವಂತನಲ್ಲ. ತುಂಬ ವಿಚಾರವಾದಿಗಳ, ಸಾಹಿತ್ಯಿಕ, ಸೂಚ್ಯಾರ್ಥವುಳ್ಳ ಸಿನಿಮಾಗಳು ನನಗಿಷ್ಟವಾಗುವುದಿಲ್ಲ. ಸಿನಿಮಾಗಳನ್ನು ಶುದ್ಧ ಮನೋರಂಜನೆ ದೃಷ್ಟಿಯಿಂದ ನೋಡುವ ನಾನು ಜಗ್ಗೇಶ್ ರ ಹಳೆ ಸಿನಿಮಾಗಳನ್ನು ಇಷ್ಟಪಟ್ಟವ. ಅದಿಲ್ಲವಾದರೆ ಪೊಲೀಸ್ ಕತೆಗಳು ನಂಗಿಷ್ಟ. ಈಗೀಗ ನನ್ನ ಬುದ್ದಿ ಬೆಳೆಯುತ್ತಿರುವ ಅಥವಾ ಕೆಡುತ್ತಿರುವ ಲಕ್ಷಣವೋ ಏನೊ ‘ಫೀರಾಕ್’ನಂತಹ ಸಿನಿಮಾಗಳನ್ನು ನೋಡಲಾರಂಭಿಸಿದ್ದೇನೆ. ಸರಿಯಾಗಿ ಅರ್ಥವಾಗಲಿಲ್ಲ ಅನ್ನೋದು ಬೇರೆ ಮಾತು. ಹೀಗಾಗಿ ನೀವು ನೋಡಿ. ಬುದ್ದಿವಂತರಾಗಿದ್ದರೆ ನಿಮಗೆ ಖಂಡಿತಾ ಅರ್ಥವಾದೀತು.
ಒಂದು ಸಾಲು ವಿಮರ್ಶೆ: ಫಿರಾಕ್ ಸಿನಿಮಾ ನೋಡಲು ದುಡ್ಡು ಖರ್ಚು ಮಾಡಿದರೆ ಮಾತ್ರ ಸಾಲದು, ಬುದ್ದಿಯನ್ನೂ ಖರ್ಚು ಮಾಡಬೇಕು!
2 comments:
ಹೊಸ ಸಿನೆಮಾ ರುಚಿ ಹಿಡಿಸುತ್ತೀ ಮಾರಾಯ
ಸಿನೆಮೇ ಅರ್ಥವಾಗದಿದ್ದರೂ ನಿಮ್ಮ ಬರಹ ಅರ್ಥವಾಯಿತು. ಹಾಗಾಗಿ ಸಿಮೆಮಾಕ್ಕೆ ಹೋಗುವ ಸಮಯ, ಹಾಕುವ ಹಣ ಎರಡೂ ಉಳಿಸಿದ್ದಕ್ಕೆ ಥ್ಯಂಕ್ಸ್. ಯಾಕಂದ್ರೆ ಈಗ melt down ಕಾಲವಲ್ಲ!!!
Post a Comment