'ಮುಸ್ಲಿಮರು ಪುಂಡಾಟಿಕೆ ನಡೆಸಿದರೆ ಬಕ್ರೀದ್, ಈದ್ ಮಿಲಾದ್ ಆಚರಿಸುವುದು ಕಷ್ಟವಾದೀತು. ನನ್ನ ಮೇಲೆ ೬೩ ಕ್ರಿಮಿನಲ್ ಪ್ರಕರಣಗಳಿವೆ. ಚುನಾವಣಾ ಆಯೋಗ ಇನ್ನೊಂದು ಪ್ರಕರಣ ದಾಖಲಿಸಲಿ. ನನಗೆ ಅಲ್ಪಸಂಖ್ಯಾತರ ಒಂದೇ ಒಂದು ಮತವೂ ಬೇಡ’ ಇಂತಹ ಹೇಳಿಕೆಯನ್ನು ಉತ್ತರ ಕನ್ನಡದ ಸಂಸದನೊಬ್ಬನಿಂದ ಯಾರೂ ಖಂಡಿತ ನಿರೀಕ್ಷಿಸಿರಲಿಲ್ಲ.
ದಕ್ಷಿಣ ಕನ್ನಡ ಅಥವಾ ಉಡುಪಿ, ಚಿಕ್ಕಮಗಳೂರು ಜಿಲ್ಲೆಯ ರಾಜಕಾರಣಿಗಳು ಈ ರೀತಿ ಹೇಳಿದರೆ, ಅವರು ಯಾಕೆ ಹಾಗೆ ಹೇಳಿದರು ಎಂಬುದನ್ನು ಅರ್ಥ ಮಾಡಿಕೊಳ್ಳಬಹುದು. ಆದರೆ ಉತ್ತರ ಕನ್ನಡದಂತಹ ಜಿಲ್ಲೆಯ ರಾಜಕಾರಣಿಗಳಿಗೆ ಖಂಡಿತ ಇಂತಹ ಹೇಳಿಕೆಗಳ ಅಗತ್ಯವಿಲ್ಲ. ಯಾಕೆಂದರೆ ಉತ್ತರ ಕನ್ನಡದಲ್ಲಿ ಅಂತಹ ಹೇಳಿಕೆಗಳಿಂದ ಓಟು ಪಡೆಯಲು ಸಾದ್ಯವಿಲ್ಲ. ಆದರೆ ಅನಂತಕುಮಾರ ಹೆಗಡೆಯಂತಹ ಸಂಸದರಿಂದ ಇನ್ನೇನು ನಿರೀಕ್ಷಿಸಲು ಸಾದ್ಯ?
ಚುನಾವಣೆಗಳು ಬಂದಾಗ ರಾಜಕೀಯ ನಾಯಕರುಗಳಿಗೆ ಜಾತಿ, ಧರ್ಮ ಎಲ್ಲ ನೆನಪಾಗುತ್ತದೆ. ಹಾಗೆಯೇ ಪರಸ್ಪರ ಟೀಕೆಗಳು ಕೇಳಿಬರುತ್ತವೆ. ಅದು ಸಾಮಾನ್ಯ. ಆದರೆ ೩ ಬಾರಿ ಉತ್ತರ ಕನ್ನಡದಿಂದ ಸಂಸದರಾಗಿ ಆಯ್ಕೆಯಾಗಿರುವ ಅನಂತ ಕುಮಾರ್ ಹೆಗಡೆಗೆ ಚುನಾವಣೆಗೆ ೬ ತಿಂಗಳಿರುವಂತೆ ದಿಢೀರನೆ ಮುಸ್ಲಿಂ ವಿರೋಧಿ ಭಾವ ಜಾಗೃತವಾಗಿಬಿಟ್ಟಿದೆ. ಹೋದಲ್ಲೆಲ್ಲ ಮುಸ್ಲಿಮರನ್ನು ಬಯ್ಯುವುದೇ ಅವರ ಏಕಂಶ ಕಾರ್ಯಕ್ರಮ. ಅಲ್ಪಸಂಖ್ಯಾತರ ಒಂದೇ ಒಂದು ಮತ ಬೇಡ. ನಾನು ಬಹುಸಂಖ್ಯಾತರ ಮತದಿಂದಲೇ ಗೆದ್ದು ಬರುತ್ತೇನೆ ಎಂಬ ಅಹಂಕಾರದ ಮಾತುಗಳನ್ನಾಡಿದ್ದಾರೆ. ಇರಲಿ ಅನಂತ ಕುಮಾರ ಹೆಗಡೆ ಅವರು ಬಹುಸಂಖ್ಯಾತರ ಮತದಿಂದಲೇ ಗೆದ್ದುಬರಲಿ. ಅವರು ಯಾರ ಮತದಿಂದಲೇ ಗೆದ್ದು ಬಂದರೂ ಅವರು ಇಡೀ ಜಿಲ್ಲೆಯ ಸಂಸದ ಎಂಬುದನ್ನು ಅವರು ಮರೆಯಬಾರದು. ಗೆದ್ದುಬಂದ ಮೇಲೆ ಮತ ಹಾಕಿದವನಿಗೂ, ಮತ ಹಾಕದವನಿಗೂ ಅವರೇ ಸಂಸದರು ಎಂಬ ಸರಳ ಸತ್ಯವನ್ನು ಅವರು ಮರೆತಂತಿದೆ.
ಉತ್ತರ ಕನ್ನಡ ಶಾಂತಿಯುತ ಜಿಲ್ಲೆ. ಜಿಲ್ಲೆಯಲ್ಲಿ ಸಾಕಷ್ಟು ಹೋರಾಟಗಳು ನಡೆದಿವೆಯಾದರೂ, ಯಾವುದೂ ತೀವ್ರ ಹಿಂಸಾರೂಪ ತಾಳಿದ್ದಿಲ್ಲ. ಭಟ್ಕಳದಲ್ಲಿ ಘೋರ ಗಲಭೆ ಆಗಿಲ್ಲವೇ? ಅಂತ ನೀವು ಕೇಳಬಹುದು. ಹೌದು ಭಟ್ಕಳದಲ್ಲಿ ಗಲಭೆಯಾಗಿದೆ. ಆದರೆ ಅದು ಭಟ್ಕಳ ದಾಟಿ ಬಂದಿಲ್ಲ. ಭಟ್ಕಳ ಹೊತ್ತಿ ಉರಿಯುತ್ತಿದ್ದಾಗಲೂ ಪಕ್ಕದ ಹೊನ್ನಾವರ, ಕುಮಟಾಗಳಲ್ಲಿ ಜನಜೀವನ ಸಾಮಾನ್ಯವಾಗಿತ್ತು. ಇಲ್ಲೆಲ್ಲ ಯಾವ ಮುಸ್ಲಿಮನಾಗಲಿ, ಹಿಂದುವಾಗಲಿ ಭಯ ಭೀತನಾಗಲಿಲ್ಲ. ಭಟ್ಕಳದಲ್ಲಿ ಗಲಭೆಯಾಯಿತು ಎಂದು ತಾವೂ ಗಲಭೆಗಿಳಿಯಲಿಲ್ಲ.
ಹಾಗೆಯೇ ಭಟ್ಕಳದ ಇನ್ನೊಂದು ವಿಶೇಷವೆಂದರೆ ಬೇರೆಡೆಯ ಕೋಮು ಗಲಭೆಗಳು ಕೂಡ ಭಟ್ಕಳದಲ್ಲಿ ಪ್ರತಿಫಲನಗೊಳ್ಳುವುದಿಲ್ಲ.
ರಾಮಜನ್ಮ ಭೂಮಿ ಚಳವಳಿ ಸಂದರ್ಭದಲ್ಲಿ ಇಟ್ಟಿಗೆ ಸಂಗ್ರಹದಲ್ಲೂ ಉತ್ತರ ಕನ್ನಡದಲ್ಲಿ ಒಳ್ಳೆಯ ಪ್ರತಿಕ್ರಿಯೆ ಸಿಕ್ಕಿರಬಹುದು. ಹಾಗಂದಾಕ್ಷಣ ಉತ್ತರ ಕನ್ನಡದ ಜನ ಮುಸ್ಲಿಂ ವಿರೋಧಿಗಳು ಅಂತ ತೀರ್ಮಾನಿಸಬೇಕಿಲ್ಲ. ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣವಾಗಬೇಕು ಎಂಬ ಆಸೆ ಇರಬಹುದು. ಹಾಗಂದಾಕ್ಷಣ ಅವರೆಲ್ಲ ಮುಸ್ಲಿಮರನ್ನು ವಿರೋಧಿಸುತ್ತಾರೆ ಎಂದು ಅರ್ಥೈಸುವ ಅಗತ್ಯ ಖಂಡಿತ ಇಲ್ಲ. ಉತ್ತರ ಕನ್ನಡದ ಜನ ಸೌಹಾರ್ದದಿಂದಲೇ ಜೀವನ ನಡೆಸುತ್ತಿದ್ದಾರೆ. ದೊಡ್ಡ ಗಲಭೆ ನಂತರ ಭಟ್ಕಳದಲ್ಲೂ ಗಲಭೆಗಳಾಗಿಲ್ಲ. ಜಿಲ್ಲೆಯ ಬೇರೆ ಪ್ರದೇಶದಲ್ಲಿ ಕೂಡ ಗಲಭೆಯ ಇತಿಹಾಸ ಇಲ್ಲ. ಅನಂತಕುಮಾರ ಹೆಗಡೆಯ ಕ್ಷೇತ್ರದೊಳಗೇ ಇರುವ ಕುಮಟ ತಾಲೂಕಿನ ಚಂದಾವರಕ್ಕೊಮ್ಮೆ ಹೋಗಿ ನೋಡಲಿ ಅವರು. ಅಲ್ಲಿ ಸಾಕಷ್ಟು ಮುಸ್ಲಿಮರಿದ್ದಾರೆ. ಹಿಂದುಗಳೂ ಇದ್ದಾರೆ. ಇಬ್ಬರ ಜನಜೀವನ ಎಷ್ಟು ಹಾಸುಹೊಕ್ಕಾಗಿದೆಯೆಂದರೆ ನೀವು ಹಿಂದು-ಮುಸ್ಲಿಂ ವ್ಯತ್ಯಾಸ ಗುರುತಿಸುವುದೂ ಕಷ್ಟ. ಮಾತಿನಿಂದ ಗೊತ್ತು ಮಾಡಬಹುದಷ್ಟೆ. ಈವರೆಗೆ ಒಂದೇ ಒಂದು ಅತಿರೇಕದ ಘಟನೆ ಅಲ್ಲಿ ನಡೆದಿದ್ದರೆ ಹೇಳಿ. ಊಹುಂ. ಅಲ್ಲಿ ಸದಾ ಶಾಂತಿ. ರಾಮಜನ್ಮಭೂಮಿ ಗಲಾಟೆ ಸಂದರ್ಭದಲ್ಲೂ ಉತ್ತರ ಕನ್ನಡ ಶಾಂತವಾಗೇ ಇತ್ತು. ಚಂದಾವರ ಕೂಡ!
ಅನಂತಕುಮಾರ ಹೆಗಡೆ ಹೆಚ್ಚು ಮತ ಪಡೆದು, ಚುನಾವಣೆ ಗೆದ್ದು ಜಿಲ್ಲೆಯನ್ನು ದೇಶದ ಉನ್ನತ ಸ್ಥಾನವಾಗ ಲೋಕಸಭೆಯಲ್ಲಿ ಪ್ರತಿನಿಧಿಸುವ ಅಧಿಕಾರ ಪಡೆದಿರಬಹುದು. ಹಾಗಂತ ಜಿಲ್ಲೆಯ ನೆಮ್ಮದಿ, ಸೌಹಾರ್ದ, ಶಾಂತಿ ಕೆಡಿಸುವ ಅಧಿಕಾರವನ್ನು ಅವರಿಗೆ ಯಾರೂ ಕೊಟ್ಟಿಲ್ಲ. ಅದಕ್ಕೆ ಉತ್ತರ ಕನ್ನಡದ ಜನ ಅವಕಾಶ ಕೊಡಲೂಬಾರದು.
ನನ್ನನ್ನು ಬಹಳ ಕಾಡುತ್ತಿರುವ ಇನ್ನೊಂದು ಪ್ರಶ್ನೆಯೆಂದರೆ ನೀವು ಹಿಂದೂ ಪರವಾಗಿರಬೇಕು ಅಥವಾ ಹಿಂದೂ ಪರ ಎಂದು ತೋರಿಸಿಕೊಳ್ಳಬೇಕು ಎಂದಾದರೆ ಮುಸ್ಲಿಮರನ್ನು ವಿರೋಧಿಸಲೇ ಬೇಕೆ? ಮುಸ್ಲಿಂ ವಿರೋಧಿಗಳೆಲ್ಲ ಹಿಂದೂ ಪರವೇ?
ಇತ್ತೀಚೆಗೆ ಇಂತಹ ಅಪಾಯಕಾರಿ ಬೆಳವಣಿಗೆ ಕಾಣುತ್ತಿದೆ. ಮುಸ್ಲಿಮರನ್ನು ಟೀಕಿಸಿದಾಕ್ಷಣ ಆತ ಹಿಂದೂ ಪರವಾಗಿಬಿಡುತ್ತಾನೆ ಅಥವಾ ಹಿಂದುಗಳನ್ನು ಟೀಕಿಸಿದಾಕ್ಷಣ ಅಥವಾ ಮುಸ್ಲಿಮರನ್ನು ವಿರೋಧಿಸಿ ಭಾಷಣ ಮಾಡಿದ್ದನ್ನು ಖಂಡಿಸಿದಾಕ್ಷಣ ಆತ ಮುಸ್ಲಿಂ ಪರವಾಗಿಬಿಡುತ್ತಾನೆ. ಆದರೆ ಅನಂತಕುಮಾರ ಹೆಗಡೆಯಂತಹ ರಾಜಕಾರಣಿಗಳಿಗೆ ಮುಸ್ಲಿಮರನ್ನು ವಿರೋಧಿಸದೆಯೂ ಹಿಂದೂ ಪರವಾಗಿರಬಹುದು ಎಂಬುದು ಯಾಕೆ ಅರ್ಥವಾಗುತ್ತಿಲ್ಲ? ಅನಂತ ಕುಮಾರ್ ಹೆಗಡೆ ‘ಅಲ್ಪಸಂಖ್ಯಾತರ ಒಂದು ಮತವೂ ಬೇಡ’ ಎಂದು ಹೇಳಿದ್ದರಿಂದ ಹಾಗೂ ಅವರು ಕೋಮು ದ್ವೇಷ ಮೂಡಿಸುವ ಮಾತುಗಳಾಡಿದ್ದರಿಂದ ಅವರನ್ನು ಕೆಲವು ಪ್ರಶ್ನೆ ಕೇಳಲೇ ಬೇಕಾಗಿದೆ.
ಅನಂತಕುಮಾರ್ ಹೆಗಡೆ ಅವರು ಮಹಾನ್ ಮುಸ್ಲಿಂ ವಿರೋಧಿಯಾಗಿದ್ದರೆ ಅಥವಾ ಹಿಂದು ಪರವಾಗಿದ್ದರೆ ಸಂಸದರಾಗಿರುವಾಗ ಅವರು ಅದಕ್ಕಾಗಿ ಏನು ಮಾಡಿದ್ದಾರೆ? ಭಟ್ಕಳದಲ್ಲಿ ಉಗ್ರಗಾಮಿ ಚಟುವಟಿಕೆಗಳು ಇರುವ ಬಗ್ಗೆ ಗಲಭೆ ನಂತರ ತನಿಖೆಗೆ ನೇಮಕಗೊಂಡ ನ್ಯಾಯಮೂರ್ತಿ ಜಗನ್ನಾಥ ಶೆಟ್ಟಿ ಆಯೋಗ ವರದಿಯಲ್ಲಿ ಪ್ರಸ್ತಾಪಿಸಿದೆ. ಅದರ ಬಗ್ಗೆ ಲೋಕಸಭೆಯಲ್ಲಿ ಗಮನ ಸೆಳೆದರೆ? ಗೃಹ ಇಲಾಖೆ ಗಮನಕ್ಕೆ ತಂದರೆ? ಈಗಂತೂ ರಾಜ್ಯದಲ್ಲಿ ಅವರದ್ದೇ ಬಿಜೆಪಿ ಸರಕಾರವಿದೆ ಅದರ ಬಗ್ಗೆ ಏನಾದರೂ ಪ್ರಯತ್ನ ಮಾಡಿದರೇ? ಭಟ್ಕಳದಲ್ಲಿ ನಡೆದ ಡಾ. ಚಿತ್ತರಂಜನ್ ಹಾಗೂ ತಿಮ್ಮಪ್ಪ ಶೆಟ್ಟಿ ಕೊಲೆ ಪ್ರಕರಣಗಳು ಇನ್ನೂ ಬಗೆಹರಿದಿಲ್ಲ. ಇಬ್ಬರೂ ಭಟ್ಕಳದಲ್ಲಿ ಹಿಂದೂ ನಾಯಕರಾಗಿದ್ದರು. ಅವರ ಕೊಲೆಗಾರರ ಪತ್ತೆಗೆ ಅನಂತಕುಮಾರ್ ಹೆಗಡೆ ಯಾರ ಮೇಲಾದರೂ ಒತ್ತಡ ಹಾಕಿದ್ದಾರೆಯೇ?ಅವರು ಅಷ್ಟು ಮುಸ್ಲಿಂ ವಿರೋಧಿ ಹಾಗೂ ಹಿಂದುಗಳ ಪರವಾಗಿದ್ದರೆ ಈ ನಾಯಕರ ಕೊಲೆಗಾರರ ಪತ್ತೆಗೆ ಒತ್ತಾಯಿಸಿ ಹೋರಾಟಗಳನ್ನು ಯಾಕೆ ರೂಪಿಸಲಿಲ್ಲ? ಡಾ. ಚಿತ್ತರಂಜನ್ ಕೊಲೆ ಪ್ರಕರಣದ ತನಿಖೆ ಸಿಬಿಐ ವಶದಲ್ಲಿದೆ. ದಿಲ್ಲಿಯಲ್ಲಿ ಸಿಬಿಐ ಅಧಿಕಾರಿಗಳ ಮೇಲೆ ತನಿಖೆ ಚುರುಕುಗೊಳಿಸಲು ಅನಂತಕುಮಾರ ಹೆಗಡೆ ಒತ್ತಡ ತರಬಹುದಿತ್ತು. ಲೋಕಸಭೆಯಲ್ಲಿ ಈ ಬಗ್ಗೆ ಮಾತನಾಡಿ, ಪ್ರಶ್ನೆ ಕೇಳಿ ತನಿಖೆ ಯಾವ ಹಂತದಲ್ಲಿದೆ ಎಂಬುದನ್ನು ಇಡೀ ದೇಶಕ್ಕೆ ತಿಳಿಸಬಹುದಿತ್ತು. ಮುಸ್ಲಿಮರ ಕಟ್ಟರ್ ವಿರೋಧಿಯಂತೆ ಈಗ ವೀರಾವೇಷದ ಭಾಷಣ ಮಾಡುತ್ತಿರುವ ಅವರು ಇದನ್ನೆಲ್ಲ ಯಾಕೆ ಮಾಡಲಿಲ್ಲ?
ಮುಂಬಯಿ ಮೇಲೆ ದಾಳಿಯಾಯಿತು. ಮುಂಬಯಿಯಂತೆಯೇ ಕಾರವಾರವೂ ಸಮುದ್ರ ತೀರದಲ್ಲಿದೆ. ಕಾರವಾರದಲ್ಲಿ ಅಣುವಿದ್ಯುತ್ ಸ್ಥಾವರವಿದೆ. ಅಲ್ಲಿಗೂ ಉಗ್ರರು ದಾಳಿ ಮಾಡಬಹುದು. ಗೋಕರ್ಣ, ಮುರ್ಡೇಶ್ವರ ಮುಂತಾದ ಪ್ರಸಿದ್ಧ ಧಾರ್ಮಿಕ ಹಾಗೂ ಪ್ರವಾಸಿ ಸ್ಥಳಗಳು ಕರಾವಳಿಯಲ್ಲಿವೆ. ಅಲ್ಲಿಗೂ ದಾಳಿ ನಡೆಯಬಹುದು. ಹೀಗಿದ್ದರೂ ಅನಂತಕುಮಾರ್ ಹೆಗಡೆ ಈ ಎಲ್ಲ ವಿಷಯಗಳ ಬಗ್ಗೆ ಲೋಕಸಭೆಯಲ್ಲಿ ಯಾಕೆ ದೇಶದ ಗಮನ ಸೆಳೆಯಲಿಲ್ಲ? ಕರಾವಳಿ ರಕ್ಷಣಾ ಪಡೆ ಠಾಣೆಗೆ ಬರಬೇಕಾದ ಬೋಟು ಮುಂತಾದ ಸೌಲಭ್ಯಗಳನ್ನು ಇನ್ನೂ ಕೇಂದ್ರ ಸರಕಾರ ಒದಗಿಸಿಲ್ಲ. ಅವುಗಳ ಬಗ್ಗೆ ಯಾಕೆ ಒಮ್ಮೆಯೂ ಅನಂತ ಕುಮಾರ್ ಮಾತಾಡಲಿಲ್ಲ? ಕರಾವಳಿ ಮೂಲಕ ಅಕ್ರಮ ಚಟುವಟಿಕೆ ನಡೆಯಬಹುದು, ಸ್ಪೋಟಕಗಳೂ ಬರಬಹುದು. ಆದ್ದರಿಂದ ಕರಾವಳಿ ಭದ್ರತೆ ಬಗ್ಗೆ ಏಕೆ ಕೇಂದ್ರ ಸರಕಾರದ ಗಮನ ಸೆಳೆಯಲಿಲ್ಲ?
ಅನಂತಕುಮಾರ ಹೆಗಡೆ ಅವರ ೫ ವರ್ಷದ ಇತಿಹಾಸ ನೋಡಿದರೆ ಇದ್ಯಾವುದನ್ನೂ ಅವರು ಲೋಕಸಭೆಯಲ್ಲಿ ಚರ್ಚಿಸಿಲ್ಲ. ಇತರೆ ಕಾರ್ಯಕ್ರಮಗಳಲ್ಲೂ ಮಾತಾಡಿಲ್ಲ. ಇದೆಲ್ಲ ಹೋಗಲಿ ಸಂಸದರಾಗಿ ೩ನೇ ಬಾರಿಗೆ ಆಯ್ಕೆಯಾಗಿರುವ ಅನಂತಕುಮಾರ ಹೆಗ್ಡೆ ಅವರಿಗೆ ಮತ ನೀಡಿದ ಜನರ ಕೈಗೆ ಎಷ್ಟು ಸಿಗುತ್ತಾರೆ? ತಮ್ಮ ಮೊಬೈಲ್‌ನಲ್ಲಿ ನಂಬರ್ ಇಲ್ಲದವರ ದೂರವಾಣಿ ಕರೆ ಸ್ವೀಕರಿಸದ ಸಂಸದರಿಂದ ಜನಕ್ಕೆ ಎಷ್ಟು ಉಪಯೋಗವಾದೀತು?ಇವುಗಳನ್ನೆಲ್ಲ ಹೇಗಾದರೂ ಉತ್ತರ ಕನ್ನಡದ ಜನ ಸಹಿಸಿಕೊಂಡಿರಬಹುದು. ಯಾಕೆಂದರೆ ಉತ್ತರ ಕನ್ನಡದ ಯಾವ ರಾಜಕಾರಣಿಯೂ ಜಿಲ್ಲೆಗೆ ಮಾಡಿದ ಸಹಾಯ ಅಷ್ಟರಲ್ಲೇ ಇದೆ. ಉತ್ತರ ಕನ್ನಡದ ಜನ ಕೂಡ ರಾಜಕಾರಣಿಗಳ ಬೆನ್ನು ಬಿದ್ದು ಕೆಲಸ ಮಾಡಿಸಿಕೊಳ್ಳುವ ಬಗ್ಗೆ ತೀವ್ರ ಆಸಕ್ತಿ ಹೊಂದಿದವರೇನಲ್ಲ. ರಸ್ತೆಗಳು ಹಾಳಾಗಿದ್ದರೆ ಶಾಪ ಹಾಕಿಯಾರು ಹೊರತು ಹೋರಾಟ, ಗಲಾಟೆಗಳಿಗೆ ಇಳಿಯುವವರಲ್ಲ. ಇದ್ದುದರಲ್ಲೇ ಸುಖವಾಗಿದ್ದಾರೆ ಉತ್ತರ ಕನ್ನಡದ ಜನ. ಕೆಲಸ ಮಾಡದ ರಾಜಕಾರಣಿಗಳನ್ನಾದರೂ ಕ್ಷಮಿಸಬಹುದು. ಆದರೆ ಜಿಲ್ಲೆಯ ಶಾಂತಿ, ನೆಮ್ಮದಿಯನ್ನೇ ಕದಡ ಹೊರಟರೆ ಅದನ್ನು ಕ್ಷಮಿಸುವುದು ಅಪಾಯಕಾರಿ.
೧೯೯೬ರಲ್ಲಿ ಅನಂತಕುಮಾರ ಹೆಗಡೆ ಲೋಕಸಭೆ ಚುನಾವಣೆಗೆ ನಿಂತಾಗ ಅವರಿಗಿದ್ದ ಒಂದೇ ಒಂದು ಅರ್ಹತೆ ಎಂದರೆ ‘ಅವರು ಹುಬ್ಬಳ್ಳಿ ಈದ್ಗಾ ಮೈದಾನದಲ್ಲಿ ದೇಶದ ಧ್ವಜ ಹಾರಿಸಿದ್ದರು’ ಎಂಬುದು ಮಾತ್ರ. ಆಗ ಪೋರ ನೋಡಲೂ ಚೆಂದವಿದ್ದ. ಭರವಸೆ ಮೂಡಿಸುವಂತಿದ್ದ. ಮಾತಿನ ಮನೆ ಕಟ್ಟುತ್ತಿದ್ದ. ಕಾಂಗ್ರೆಸ್‌ನ ಮುದಿ ಸಂಸದರನ್ನು ನೋಡಿ ನೋಡಿ ಜನರಿಗೂ ಸಾಕಾಗಿತ್ತು. ಅದಕ್ಕೆ ಸರಿಯಾಗಿ ಭಟ್ಕಳದಲ್ಲಿ ಶಾಸಕ ಡಾ. ಚಿತ್ತರಂಜನ್ ಅವರ ಕೊಲೆಯಾಯಿತು. ಅನುಕಂಪದ ಅಲೆಯಲ್ಲಿ ತೇಲಿದ ಅನಂತಕುಮಾರ್ ಹೆಗಡೆ ಗೆದ್ದುಬಿಟ್ಟರು. ಆದರೆ ಉತ್ತರ ಕನ್ನಡದ ಜನ ಅವರ ಮೇಲಿರಿಸಿದ್ದ ನಂಬಿಕೆ, ನಿರೀಕ್ಷೆಗಳನ್ನೆಲ್ಲ ಅವರು ಹುಸಿಗೊಳಿಸಿದ್ದಾರೆ. ಜನರ ಕಷ್ಟಗಳಿಗೆ ಸ್ಪಂಧಿಸುವುದು ಬಿಡಿ, ಜನರಿಗೆ ಸ್ಪಂದಿಸುವುದನ್ನೇ ಅವರು ಮರೆತಿದ್ದಾರೆ. ಅದರ ನಂತರ ಅವರ ಕೆಲಸಕ್ಕಿಂತ ಹೆಚ್ಚಾಗಿ ಕಾಂಗ್ರೆಸ್‌ನ ಅಸಮರ್ಥ ಅಭ್ಯರ್ಥಿಯ ಕಾರಣದಿಂದಲೇ ಅವರು ಗೆಲ್ಲುತ್ತಿದ್ದಾರೆ.
ಸದ್ಯದ ಸ್ಥಿತಿ ಗಮನಿಸಿದರೆ ಅನಂತಕುಮಾರ್ ಹೆಗಡೆ ಅವರ ಹೇಳಿಕೆ ‘ತಪ್ಪು ಮುಚ್ಚಿಕೊಳ್ಳುವ’ ಸಾಧನವಾಗಿ ಕಾಣುತ್ತಿದೆ. ತಾವು ಐದು ವರ್ಷದಲ್ಲಿ ಕೆಲಸ ಮಾಡದೆ ಇರುವುದನ್ನು, ಜನರ ಕೈಗೆ ಸಿಗದಿರುವುದನ್ನು ಮುಸ್ಲಿಂ ವಿರೋಧಿ ಭಾಷಣದ ಮೂಲಕ ಮುಚ್ಚಿಹಾಕಲು ಯತ್ನಿಸುತ್ತಿದ್ದಾರೆ ಎಂಬುದು ಸ್ಪಷ್ಟ. ಇಷ್ಟಕ್ಕೇ ಸುಮ್ಮನಾಗದ ಅವರು ‘ನಾನು ಪಾಕಿಸ್ತಾನ, ಅಪಘಾನಿಸ್ತಾನದ ಜನರ ಬಳಿ ಮತ ಕೇಳುತ್ತಿಲ್ಲ. ನಾನು ಹಿಂದುಸ್ತಾನದ ಜನರ ಬಳಿ ಮತ ಕೇಳುತ್ತಿದ್ದೇನೆ’ ಅಂದಿದ್ದಾರೆ. ಆದರೆ ಹಿಂದುಸ್ತಾನದಲ್ಲಿ ಹಿಂದುಗಳಲ್ಲದೆ ಬೇರೆ ಧರ್ಮದವರೂ ಇದ್ದಾರೆ ಎಂಬುದನ್ನು ಅವರು ಮರೆತಂತಿದೆ. ಚುನಾವಣೆಯಲ್ಲಿ ತಮ್ಮ ಗೆಲುವಿಗಾಗಿ ಅವರು ಜಿಲ್ಲೆಯ ಶಾಂತಿ, ಸೌಹಾರ್ದವನ್ನೇ ಬಲಿಕೊಡಲು ಹೊರಟಿದ್ದಾರೆ.ಅವರು ಕೋಮು ಪ್ರಚೋದಿ ಭಾಷಣ ಮಾಡಿದ್ದರ ಬಗ್ಗೆ ಕೆಪಿಸಿಸಿ ಅಧ್ಯಕ್ಷ ಆರ್.ವಿ. ದೇಶಪಾಂಡೆ ಚುನಾವಣಾ ಆಯೋಗಕ್ಕೆ ದೂರು ನೀಡಿದರೆ, ‘ರಿಯಾಜ್ ಭಟ್ಕಳ ದೇಶಪಾಂಡೆ ಸಾಕುಮಗನಾ?’ ಎಂಬ ಪ್ರತಿಕ್ರಿಯೆ ನೀಡಿದ್ದಾರೆ. ಕೋಮು ದ್ವೇಷದ ಭಾಷಣದ ವಿರುದ್ಧ ದೂರು ನೀಡಿಬಿಟ್ಟರೆ ‘ರಿಯಾಝ್ ಭಟ್ಕಳನ ಬೆಂಬಲಿಗರಾಗಿಬಿಡುತ್ತಾರಾ?’ ರಿಯಾಝ್ ಭಟ್ಕಳನ ವಿರುದ್ಧ ಮಾತನಾಡಲಿಲ್ಲ ಅಂದಾಕ್ಷಣ ಅವರೆಲ್ಲ ಆತನ ಬೆಂಬಲಿಗರು ಅಂತ ಅರ್ಥೈಸುವುದು ಮೂರ್ಖತನ. ಹಾಗೇನಾದರೂ ಅರ್ಥೈಸಿದರೆ ಅದನ್ನು ‘ಅಪ್ರಬುದ್ಧ ಮತ್ತು ಸಮತೋಲನ ತಪ್ಪಿದ ಮನಸ್ಸು’ ಎಂದು ಕರೆಯಬೇಕಾಗುತ್ತದೆ. ರಿಯಾಝ್ ಭಟ್ಕಳ ಹಾಗೂ ಕೆಲವರು ಉಗ್ರಗಾಮಿ ಚಟುವಟಿಕೆಯಲ್ಲಿ ತೊಡಗಿದ್ದಾರೆ ಎಂದಾಕ್ಷಣ ಜಿಲ್ಲೆಯ ಮುಸ್ಲಿಮರನ್ನೆಲ್ಲ ಉಗ್ರಗಾಮಿ ಚಟುವಟಿಕೆಯಲ್ಲಿ ತೊಡಗಿದ್ದಾರೆ ಅಂದುಕೊಳ್ಳಬೇಕಿಲ್ಲ. ಅವರ ವಿರುದ್ಧ ಮಾತನಾಡದವರೆಲ್ಲ ಉಗ್ರಗಾಮಿಗಳ ಬೆಂಬಲಿಗರು ಅಂತ ತೀರ್ಮಾನಿಸುವುದು ಮೂರ್ಖತನ.
ರಿಯಾಜ್ ಭಟ್ಕಳ ಸೇರಿದಂತೆ ಭಟ್ಕಳದ ಕೆಲವರು ಉಗ್ರಗಾಮಿ ಚಟುವಟಿಕೆಯಲ್ಲಿದ್ದಾರೆ ಎಂಬುದು ಗುಪ್ತಚರ ಇಲಾಖೆ ಮಾಹಿತಿ. ಆತನ ಬಂಧನಕ್ಕೆ ಪೊಲೀಸರು ಯತ್ನಿಸುತ್ತಿದ್ದಾರೆ. ಕಾನೂನಿದೆ. ಉಗ್ರಗಾಮಿಗಳನ್ನು ಎಲ್ಲರೂ ವಿರೋಧಿಸಬೇಕು ಎಂಬುದು ನಿರ್ವಿವಾದ. ಹಾಗೆಯೇ ಅನಗತ್ಯವಾಗಿ ಜನರಲ್ಲಿ ಕೋಮು ದ್ವೇಷ ಬಿತ್ತಿ, ಶಾಂತ ಜಿಲ್ಲೆಯ ನೆಮ್ಮದಿ ಕೆಡಿಸುವ ಅನಂತಕುಮಾರ ಹೆಗಡೆಯಂತಹ ರಾಜಕಾರಣಿಗಳನ್ನೂ ವಿರೋಧಿಸಬೇಕಾಗುತ್ತದೆ.ಇಲ್ಲವಾದಲ್ಲಿ ಉತ್ತರ ಕನ್ನಡ ಜಿಲ್ಲೆ ಕೂಡ ಇನ್ನೊಂದು ಕೋಮು ಸೂಕ್ಷ್ಮ ಜಿಲ್ಲೆಯಾಗಿ, ನೆಮ್ಮದಿ ಕಳೆದುಕೊಳ್ಳುವ ಅಪಾಯವಿದೆ.
7 comments:
ದಕ್ಷಿಣ ಕನ್ನಡದ ಹೆಸರು ಹಾಳು ಮಾಡಿಯಾಯ್ತು ಈಗ ಉತ್ತರ ಕನ್ನಡದ ಮೇಲೆ ಕಣ್ಣೂ ಬಿದ್ದಿದೆ!
ಸರಿಯಾಗೇ ಬರೆದಿದ್ದೀರಿ...ವಿನಾಕಾರಣ ಏನೇನೋ ಹೇಳಿಕೆ ಕೊಟ್ಟು ಯಾಕಾಗಿ ವಿವಾದಕ್ಕೆ ಸಿಕ್ತಾರೋ ಇವರೆಲ್ಲ.
every thing is publicity.. if their comments are not like that no one will remember them ... no interviews in paper and news ... of so called hero(Zero) !!! !!! :-) :-)
ನಮ್ಮ ಮಾಧ್ಯಮಗಳು ಬರೀ ಇಂತಹ ಹೇಳಿಕೆಗಳಿಗೆ, ವ್ಯಕ್ತಿಗಳಿಗೆ ಅನಗತ್ಯ ಅದ್ದೂರಿ ಪ್ರಚಾರ ಕೊಡುವುದರಿಂದ ಸಹಜವಾಗಿ ಇಂತವೆಲ್ಲಾ ಅಗುತ್ತವೆ.
ಸರಿಯಾಗಬೇಕಾಗಿರುವುದು ಮಾಧ್ಯಮಗಳು.
ಸುಮ್ನೆ ಬಾಯಿ ಮುಚ್ಚಿಕೊಂಡು ಇದ್ದಿದ್ರೆ ಹೆಗಡೆಗೆ ಮುಸ್ಲಿಮರ ಒಂದೆರಡು ವೋಟಾದ್ರೂ ಬೀಳ್ತಿತ್ತೇನೋ! ಅಧಿಕಪ್ರಸಂಗಿ!
ಪ್ರತಿಕ್ರಿಯೆಗಾಗಿ ಧನ್ಯವಾದಗಳು ಗಳೆಯರೆ.....
he is vinning there bcz of interior fighting of congress... nothing else....
i belongs to bhatkal.... nimma lekhana tumbaa chennagide....
satyakke hattiravaagide....
aadare allina musleemara upatala, vartane namma nemmadi kedisuttade sir.....
Post a Comment