ನಗರದ ಮಧ್ಯದಲ್ಲೊಂದು ಅರ್ಧ ನಿರ್ಮಿತ ಮನೆ. ಗವ್ವೆನ್ನುವ ರಾತ್ರಿಯ ಕತ್ತಲು. ನೀರವ ಮೌನ. ಕಿಟಾರನೆ ವಿಕಾರವಾಗಿ ಕಿರುಚಿದ ಸದ್ದು ಮೌನ ಸೀಳಿಕೊಂಡು ಹೊರಡುತ್ತದೆ. ಮಲಗಿದ್ದವರು ಬೆಚ್ಚಿ ಕಣ್ಣು ಬಿಡುತ್ತಾರೆ. ಎಚ್ಚರಿದ್ದವರು ಹೆದರಿ ಮುದುರಿಕೊಳ್ಳುತ್ತಾರೆ.
ಮತ್ತದೇ ಮೌನ. ಕೊಂಚ ಹೊತ್ತು ಅಷ್ಟೆ. ಮತ್ತೆ ಕೇಳುತ್ತದೆ ಮಗು ಅಳುವ ಸದ್ದು, ಬೆಕ್ಕು ದೀರ್ಘವಾಗಿ ಕೂಗುವ ಸದ್ದು. ಯಾರೂ ತೋಡಿನ ನೀರಲ್ಲಿ ನಡೆದಾಡಿದ ಸಪ್ಪಳ. ಇಷ್ಟಾದ ಮೇಲೆ ರಾತ್ರಿ ಪೂರ ನಿದ್ರೆ ಇಲ್ಲ ಕಣ್ಣಿಗೆ...
ಇದು ‘ಡರ್ ನಾ ಮನಾಹೆ’ ಎಂಬ ಹಿಂದಿ ಚಲನಚಿತ್ರದ ಕತೆಯಲ್ಲ. ಕನ್ನಡದ ‘ಮೋಹಿನಿ’ ಸಿನಿಮಾ ಕತೆಯೂ ಅಲ್ಲ. ಬದಲಾಗಿ ಆಧುನಿಕ ಜಗತ್ತಿನತ್ತ ದಾಪುಗಾಲಿಕ್ಕುತ್ತಿರುವ ಮಂಗಳೂರಿನಲ್ಲಿರವ ಬಲ್ಲಾಳ್ಭಾಗ್ ನಿವಾಸಿಗಳ ನಿತ್ಯದ ಕತೆ. ಈಗ ಬಳ್ಳಾಲ್ಭಾಗ್ ತುಂಬೆಲ್ಲ ಇದೇ ಸುದ್ದಿ. ಇಷ್ಟು ದಿನ ಯಾರೂ ಗಮನಿಸದೇ ಖಾಲಿ ಬಿದ್ದಿದ್ದ ಮನೆ ಬಗ್ಗೆ ಈಗ ಎಲ್ಲರಿಗೂ ಕುತೂಹಲ ಮಿಶ್ರಿತ ಭಯ. ಹೋಗುವಾಗೊಮ್ಮೆ, ಬರುವಾಗೊಮ್ಮೆ ಆ ಮನೆಯತ್ತ ದೃಷ್ಟಿ ಹಾಯಿಸದೆ ಹೋಗುವುದಿಲ್ಲ. ಮಕ್ಕಳಂತೂ ಈ ಮನೆಯ ಬಳಿ ಹೋಗುವಾಗ ಗುಂಪಾಗಿಯೇ ಹೋಗುತ್ತಾರೆ. ತಪ್ಪಿಯೂ ಅತ್ತ ನೋಡುವುದಿಲ್ಲ. ಊಟ ಮಾಡದೆ ರಚ್ಚೆ ಹಿಡಿದ ಮಕ್ಕಳನ್ನು ಗುಮ್ಮ ಬರುತ್ತೆ ಅಂತ ಹೆದರಿಸುತ್ತಿದ್ದ ಅಮ್ಮಂದಿರಿಗೂ ಈಗ ಗುಮ್ಮನ ಭಯ!
ಬಲ್ಲಾಳ್ಭಾಗ್ನಲ್ಲಿರುವ ಶ್ರೀದೇವಿ ಕಾಲೇಜಿನ ಬಳಿ ಒಂದು ಅರೆ ನಿರ್ಮಿತ ಮನೆಯಿದೆ. ಅಲ್ಲಿಂದ ಮಧ್ಯಾರಾತ್ರಿ ನಂತರ ನಂತರ ಮಹಿಳೆ ಭಯಾನಕವಾಗಿ ಕಿರುಚಿದ, ಮಗು ಅತ್ತ, ಬೆಕ್ಕು ವಿಕಾರವಾಗಿ ಕೂಗಿದ, ಯಾರೋ ನೀರಲ್ಲಿ ನಡೆದಾಡಿದಂತೆ ಅನಿಸುವ ಸದ್ದುಗಳು ಕೇಳುತ್ತಿವೆ ಎಂಬುದು ಬಲ್ಲಾಳ ಭಾಗ್ ನಿವಾಸಿಗಳ ಅಂಬೋಣ.
ಕಾಲೇಜಿನಲ್ಲಿ ಕಾವಲುಗಾರ ಕದಂ ಪ್ರಕಾರ ‘ಒಂದು ವಾರದಿಂದ ಈ ಸದ್ದು ಕೇಳುತ್ತಿದೆ. ಮೊದ ಮೊದಲು ಕೆಲವರು ಹೇಳಿದಾಗ ನಾನೂ ನಂಬಲಿಲ್ಲ. ಅದಕ್ಕಾಗಿ ಎಚ್ಚರಿದ್ದು ನೋಡಿದಾಗ ಸದ್ದು ಕೇಳಿಸಿದೆ. ಯಾರೂ ಮನೆಯತ್ತ ಹೋದದ್ದು, ಬಂದದ್ದು ಕಾಣಲಿಲ್ಲ. ಸದ್ದು ಮಾತ್ರ ಕೇಳಿಸಿತು. ಅತ್ಯಂತ ಭಯಾನಕ ಸದ್ದು’ ಎಂದು ಆತ ವಿವರಿಸಿದ್ದಾನೆ.
ಸಮೀಪದಲ್ಲಿ ವಾಸವಾಗಿರುವ ವಿದ್ಯಾರ್ಥಿಯೊಬ್ಬ ‘ಇಂತಹ ಸದ್ದು ಕೇಳಿಸುತ್ತದೆ. ನನಗೆ ಇಂತಹ ಸಂಗತಿಗಳಲ್ಲಿ ನಂಬಿಕೆ ಇರಲಿಲ್ಲ. ಆದರೂ ಸದ್ದು ಕೇಳಿದ ಮೇಲೆ ವಿಚಿತ್ರ ಅನ್ನಿಸುತ್ತಿದೆ. ನಂಬಲೂ ಆಗುತ್ತಿಲ್ಲ, ನಂಬದಿರಲೂ ಆಗುತ್ತಿಲ್ಲ’ ಎಂದು ವಿವರಿಸಿದ್ದಾನೆ.
ಪೊಲೀಸರು, ಪತ್ರಕರ್ತರು, ಒಂದಿಬ್ಬರು ಸಾರ್ವಜನಿಕರು ಮನೆಯೊಳಗೆ ಹೋಗಿ ನೋಡಿದರು. ಅಲ್ಲಿ ಯಾರೂ ಇರಲಿಲ್ಲ. ಆದರೆ ಮಾಡಿದ ಶೌಚ, ಕೆಲವು ಖಾಲಿ ಮದ್ಯದ ಬಾಟಲಿಗಳು ಕಂಡುಬಂದಿವೆ. ಇದರಿಂದಾಗಿ ಜನ ಅಲ್ಲಗೆ ಹೋಗಿ ಬರುತ್ತಿದ್ದಾರೆ ಎಂಬುದು ಸಾಬೀತಾಗಿದೆ. ಒಂದೆರಡು ಸಿಗರೇಟ್ ಬಾಕಿ ಇದ್ದ ಪ್ಯಾಕ್ ಕೂಡ ದೊರೆತಿದೆ. ಸಮೀಪವೇ ವಿದ್ಯಾರ್ಥಿನಿಯರ ವಸತಿ ನಿಲಯ ಇರುವುದರಿಂದ ಕೀಟಲೆಗಾಗಿ ಅಥವಾ ಮದ್ಯಪಾನ ಮಾಡಿ ಕಿಡಿಗೇಡಿಗಳು ಇಂತಹ ಕೃತ್ಯ ಎಸಗುತ್ತಿರಬಹುದೇ?ಜಾಗ ಅಥವಾ ಅರೆ ನಿರ್ಮಿತ ಕಟ್ಟಡದ ಮಾಲೀಕರ ವಿರೋಧಿಗಳು ಅಥವಾ ಅದಕ್ಕೆ ಸಂಬಂಧಿಸಿದ ವಿವಾದದಿಂದಾಗಿಯೂ ಇಂತಹ ಹೆದರಿಸುವ ಕೃತ್ಯಗಳು ನಡೆಯುವ ಸಾಧ್ಯತೆ ಅಲ್ಲಗಳೆಯುವಂತಿಲ್ಲ. ಹಲವು ಸಮಯದಿಂದ ಖಾಲಿ ಇರುವ ಈ ಮನೆಯಲ್ಲಿ ಅನೈತಿಕ ಚಟುವಟಿಕೆ ನಡೆಯುತ್ತಿದ್ದು, ರಾತ್ರಿ ಸಾರ್ವಜನಿಕರಾರೂ ಸಮೀಪಕ್ಕೆ ಬರಬಾರದು ಎಂಬ ಉದ್ದೇಶದಿಂದ ಹೀಗೆ ಹೆದರಿಕೆ ಹುಟ್ಟಿಸುವ ತಂತ್ರವಾಗಿಯೂ ಇಂತಹ ಕೃತ್ಯ ನಡೆಯುವ ಸಾಧ್ಯತೆ ಖಂಡಿತ ಇದೆ.ಈ ಎಲ್ಲ ಕಾರಣಗಳಿಗೆ ಇಂತಹ ಭೂತ ಚೇಷ್ಟೆಗಳು ನಡೆಯಬಹುದು.
ವಿಚಾರವಾದಿ ಎಂದು ತನ್ನನ್ನು ತಾನು ಕರೆದುಕೊಳ್ಳುವ ನರೇಂದ್ರ ನಾಯಕ್ ಎಂಬವರು ಶನಿವಾರ ರಾತ್ರಿ ಈ ಪರಿಸರದಲ್ಲಿ ಉಳಿದು, ಅದೇನು ಶಬ್ದ ಎಂದು ನೋಡುವುದಾಗಿ ಹೇಳಿದ್ದಾರೆ. ನರೇಂದ್ರ ನಾಯಕ್ ಹೀಗೆ ಪವಾಡಗಳನ್ನು ಬಯಲು ಮಾಡುವಲ್ಲಿ ಸಿದ್ಧ ಹಸ್ತರು. ಆಗಾಗ ಶಾಲೆ- ಕಾಲೇಜುಗಳಲ್ಲಿ ಅವರು ಕಾರ್ಯಕ್ರಮವನ್ನೂ ಮಾಡುತ್ತಾರೆ. ಅವರಿಂದಾದರೂ ಈ ಭೂತ ಚೇಷ್ಟೆಯ ಹಿಂದಿನ ರಹಸ್ಯ ಬಯಲಾಗಬಹುದಾ? ಕಾದು ನೋಡೋಣ. ಬಯಲಾದ ರಹಸ್ಯದ ಬಗ್ಗೆ ತಿಳಿದಲ್ಲಿ ಮತ್ತೆ ಬ್ಲಾಗಿಸಲಾಗುವುದು.
1 comment:
ಪೋಲೀಸರನ್ನೂ ಮೀರಿಸುವ ಕ್ರೈಂ ಒಡನಾಟ ನಿಮ್ಮದು. ಅಪರಾಧ ಪತ್ತೆ ವಿಭಾಗದಲ್ಲಿ ನೀವು ಮಾಡುತ್ತಿರುವ ವರದಿಗಾರಿಕೆ ಅನನ್ಯವಾದುದು.
ಅಂದ ಮೇಲೆ ಅದನ್ನು ನಮಗೆಲ್ಲಾ ಕೊಡಮಾಡಬಾರದಾ?
ಕ್ರೈಂ ವರದಿಗಾರಿಕೆಯ ಕಥನ ಶುರುಮಾಡಿ ಭಟ್ಟರೇ.
ಸಿಂಧುಗೆ ಹೇಳಬೇಡಿ.
-ಕುಂಟಿನಿ
Post a Comment