Thursday, August 09, 2007

ಮನೆಗಳ ಮನಗಳಲಿ ಜಿನುಗುತಿರುವ ಹನಿ ಸೋನೆಗಳು

ಇಡೀ ದಿನ ಜಿಟಿಜಿಟಿ ಮಳೆ. ದಿನವಿಡೀ ಬಿಟ್ಟೂ ಬಿಡದೆ ಕಾಡುವಂಥ ಪ್ರೇಮಿಯ ಮಳೆ. ಬಸ್ ಸ್ಟ್ಯಾಂಡ್ ಎದುರಿರುವ ಅಂಗಡಿಯಲ್ಲಿ ಚಾಕಲೇಟು ಕೊಡಿಸುವಂತೆ ಅಮ್ಮನ ಸೆರಗು ಜಗ್ಗಿ ರಚ್ಚೆ ಹಿಡಿದ ಮಗುವಿನಂಥ ಮಳೆ. ಮೊಬೈಲ್‌ಗೆ ಬಂದು ಬೀಳುವ ಪ್ರೇಮಿಯ ಸಾಕೆನಿಸುವಷ್ಟು ಎಸ್‌ಎಂಎಸ್‌ನಂಥ ಮಳೆ. ಹೊದ್ದು ಮಲಗುವಂತೆ ಮುದ್ದು ಮಾಡುವ ಮಳೆ. ಭಾವನೆಗಳ ನೆರೆ ಉಕ್ಕಿಸುವ ಮಳೆ. ನೆನಪುಗಳ ಸೆಳೆದು ತರುವ ಮಳೆ.
ಕಳೆದೆರಡು ವರ್ಷದಿಂದ ಮಂಗಳೂರಲ್ಲಿ ಈ ರೀತಿಯ ಮಳೆಯೇ ಇರಲಿಲ್ಲ. ಬರ್ರನೆ ಬಂದು ಸರ್ರನೆ ಹೋಗುತ್ತಿತ್ತು. ಆದರೆ ಈ ಬಾರಿ ಮತ್ತೆ ಹಿಂದಿನ ವೈಭವ ಪಡೆದುಕೊಂಡಿದೆ. ಈ ಮಳೆಯೇ ಕವನಗಳ ಗಾಳಕ್ಕೆ ನನ್ನನ್ನು ಸಿಕ್ಕಿಸಿದ್ದು.
ಕೆರೆಗಳ ಉಕ್ಕಿಸಿ, ತೊರೆಗಳ ಸೊಕ್ಕೊಸಿ
ಗುಡ್ಡವ ಬೆಟ್ಟವ ಕೊರೆಕೊರೆದು
ಕಡಲಿನ ತೆರೆಗಳ ರಿಂಗಣ ಗುಣಿಯಿಸಿ
ಮೊರೆಮೊರೆವುದದೋ ಸರಿ ಸುರಿದು...
ಮಧ್ಯಾಹ್ನದ ಹೊತ್ತಿಗೇ ರಾತ್ರಿ ಸೃಷ್ಟಿಸುವ ಆಷಾಢದ ಕಪ್ಪು ಮೋಡ. ಎಡಬಿಡದೆ ಸುರಿಯುವ ಮಳೆ. ತುಂಬಿದ ಕೆರೆ, ನೆರೆ ಉಕ್ಕಿಸಿದ ನದಿ. ಇವೆಲ್ಲ ನೋಡುವಾಗ ಕಡೆಂಗೊಡ್ಲು ಶಂಕರ ಭಟ್ಟರ ಈ ಕವಿತೆ ನೆನಪಾಗದಿದ್ದೀತೆ?
ಸತತ ಮೂರು ದಿನದಿಂದ ಬಿಡದೆ ಸುರುಯುತ್ತಿದೆ ಮಳೆ. ಪತ್ರಿಕೆ, ಟಿವಿ ಎಲ್ಲಿ ನೋಡಿದರೂ ನೀರು. ಹೆದ್ದಾರಿಯಲ್ಲೂ ತೆಪ್ಪ ಹಾಕಿ ಹೋಗಬೇಕಾದ ಸ್ಥಿತಿ. ಕಡೆಂಗೊಡ್ಲು ಶಂಕರ ಭಟ್ಟರು ಬರೆದಂತೆ...
‘ಹಗಲಿರುಳೆನ್ನದೆ ಹೊಡೆಯುವ ಜಡಿಮಳೆ
ಬಡಿಕೋಲ್ ಮಿಂಚಿನ ಲಾಗುಗಳು
ಮನೆಗಳ ಮನಗಳ ಒಳಗೂ ಹೊರಗೂ
ಜಿನುಗಿತಿರುವ ಹನಿ ಸೋನೆಗಳು...’
ಇದು ಮಳೆಯ ಅದ್ಭುತ ವರ್ಣನೆ. ಬಹುಶಃ ಮಳೆಯ ಬಗ್ಗೆ ಬರೆಯದ ಕವಿಗಳು ಇಲ್ಲವೇ ಇಲ್ಲ ಅಂದರೂ ತಪ್ಪಲ್ಲ. ಒಬ್ಬೊಬ್ಬ ಕವಿಗೂ ಮಳೆ ಹಲವು ಥರ. ಅವರವರ ಭಾವಕ್ಕೆ ತಕ್ಕಂತೆ. ದಕ್ಷಿಣ ಕನ್ನಡದವರೇ ಆದ ಇನ್ನೊಬ್ಬ ಕವಿ ಸುಬ್ರಾಯ ಚೊಕ್ಕಾಡಿ ಅವರು ಮಳೆಗಾಲದ ರಾತ್ರಿಯನ್ನು ಸೊಗಸಾಗಿ ವರ್ಣಿಸಿದ್ದಾರೆ. ಮಳೆ ಬರುವುದು ಅವರಿಗೆ ಆಕಾಶ ಬಿಕ್ಕುತಿರುವಂತೆ ಭಾಸವಾಗಿದೆ.
ಆಕಾಶ ಬಿಕ್ಕುತಿದೆ
ಮುಗಿಲ ಮುಸುಕ ಮರೆಗೆ
ಮಾತಿರದ ತಾರೆಗಳು
ಅಡಗಿ ಕುಳಿತ ಗಳಿಗೆ...
ಸೂರ್ಯ ಚಂದ್ರರಿರದೆ
ರಿದ ಕಪ್ಪು ಸುತ್ತ ಚೆಲ್ಲಿ
ಹಸಿರ ಉಸಿರು ಅಡಗಿ ಹೋಗಿ
ಹೊಳೆವ ದಾರಿಯಲ್ಲಿ...
ಕಪ್ಪುಗಟ್ಟಿದ ಮೋಡ, ಸುರಿವ ಮಳೆಯ ನಡುವೆ ಮನೆಯೊಳಗೆ ಬೆಚ್ಚಗೆ ಕುಳಿತು ಈ ಹಾಡನ್ನು ಸಿ. ಅಶ್ವಥ್ ಅವರ ಕಂಠದಲ್ಲಿ ಕೇಳುತ್ತಿದ್ದರೆ ಸ್ವರ್ಗಕ್ಕೆ ಮೂರೇಗೇಣು. ಈ ಹಾಡು ಅಂತಲ್ಲ ಮಳೆಯ ಕುರಿತ ಹಾಡುಗಳೇ ಹಾಗೆ ಮಳೆಯಂತೆ. ಕೇಳುತ್ತಿದ್ದರೆ ಭಾವನೆಗಳ ಲೋಕದಲ್ಲಿ ಮುಳುಗಿ ಹೋಗುತ್ತೇವೆ. ನೆನಪುಗಳಲ್ಲಿ ತೋಯ್ದು ಬಿಡುತ್ತೇವೆ. ಸಮಯ, ಕೆಲಸ, ಊಟ, ತಿಂಡಿ ಯಾವುದರ ಪರಿವೆಯೇ ಇರುವುದಿಲ್ಲ.
ಮಳೆಗಾಲ ಅದೆಷ್ಟು ಸುಂದರ! ಕವಿಯ ಕಲ್ಪನೆ ಅದಕ್ಕಿಂತ ಚೆಂದ!!
ಮಳೆಯ ಕುರಿತು ಹಾಡುಗಳನ್ನು ಹುಡುಕುತ್ತ ಹೊರಟರೆ ಓದಲು ಸಮಯ ಸಾಲದು. ಯಾಕೆಂದರೆ ಮಳೆಯ ಬಗ್ಗೆ ಬರೆಯದ ಕವಿಗಳಿಲ್ಲ. ಯಾಕೆಂದ್ರೆ ಮಳೆಗಾಲಕ್ಕೂ ಪ್ರೇಮಕ್ಕೂ ಅಂಟಿದೆ ನಂಟು. ಪ್ರೇಮಕ್ಕೂ ಕವಿಗಳಿಗೂ ಬಿಡಲಾರದ ಅಂಟು. ಈ ಬಗ್ಗೆ ತುಂಟ ಕವಿ ಎಂದೇ ಹೆಸರಾಗಿರುವ ಬಿ.ಆರ್. ಲಕ್ಷ್ಮಣ ರಾವ್ ಒಂದು ಕವನ ಬರೆದು ಮಳೆಯನ್ನೇ ವಿನಂತಿಸಿದ ಪರಿ ನೋಡಿ...
ಬಾ ಮಳೆಯೆ ಬಾ
ಅಷ್ಟು ಬಿರುಸಾಗಿ ಬಾರದಿರು
ನನ ನಲ್ಲೆ ಬರಲಾಗದಂತೆ
ಅವಳಿಲ್ಲಿ ಬಂದೊಡನೆಯೆ
ಬಿಡದೆ ಬಿರುಸಾಗಿ ಸುರಿ
ಹಿಂತಿರುಗಿ ಹೋಗದಂತೆ...
ಮಳೆಯಲ್ಲಿ ಜನ ನೆನೆಯಲು ಬಯಸಿದರೆ ಪ್ರೀತಿಯಲ್ಲಿ ತೋಯಲು ಇಷ್ಟಪಡುತ್ತಾರೆ. ಸಿನಿಮಾಗಳಲ್ಲೂ ಪ್ರೇಮಿಗಳಿಬ್ಬರು ಹಾಡುವಾಗ ಮಳೆ ಬರಿಸಲಾಗುತ್ತದೆ. ಪ್ರೇಮಿಗಳಿಬ್ಬರು ಮಳೆ ಬಂದು ಒಂಟಿ ಕಾಲಿ ಮನೆ ಹೊಕ್ಕಿದಾಗ ಛಟೀರನೆ ಹೊಡೆದ ಮಿಂಚಿನಿಂದ ಹೆದರಿದ ಪ್ರೇಯಸಿ ಪ್ರಿಯಕರನನ್ನು ಅಪ್ಪಿ... ಮುಂದೇನಾಗುತ್ತದೆ ನೀವೇ ಕಂಡಿದ್ದೀರಿ ಅಥವಾ ಊಹಿಸಬಲ್ಲಿರಿ. ಬೈಕಲ್ಲಿ ಒದ್ದೆಯಾದ ಪ್ರೇಮಿಗಳು ಗಟ್ಟಿಯಾಗಿ ಅಪ್ಪಿಕೊಂಡು ಹೋಗುತ್ತಿದ್ದರೆ ನೋಡುಗರ ಹೊಟ್ಟೆ ತಂಪಾದ ಮಳೆಯಲ್ಲೂ ಧಗಧಗನೆ ಉರಿಯುತ್ತದೆ. ಬಹುಶಃ ಸಮೀಕ್ಷೆ ನಡೆಸಿದರೆ ಹೆಚ್ಚಿನ ಪ್ರೇಮಗಳು ಅರಳೋದೇ ಮಳೆಗಾಲದಲ್ಲಿ. ಯಾಕೆಂದರೆ ಬಯಕೆಗಳು ಅರಳೋದು ಈ ಕಾಲದಲ್ಲೇ. ಅದಕ್ಕೆ ರಾಷ್ಟ್ರಕವಿ ಬಿರುದು ಪಡೆದ ಜಿ.ಎಸ್. ಶಿವರುದ್ರಪ್ಪ ಅವರು...
ಮುಂಗಾರಿನ ಅಭಿಷೇಕಕೆ
ಮಿದುವಾಯಿತು ನೆಲವು
ಹಗೆಯಾರಿದ ಹೃದಯದಲ್ಲಿ
ಪುಟಿದೆದ್ದಿತು ಚೆಲುವು
ಬಾಯಾರಿದ ಬಯಕೆಗಳಲ್ಲಿ

ಥಳಥಳಿಸುವ ನೀರು
ಕಣ್ಣಿಗೆ ತಣ್ಣಗೆ ಮುತ್ತಿಡುತಿದೆ
ಪ್ರೀತಿಯರ್ಥ ಹಸಿರು
ಮೈಮನಗಳ ಕೊಂಬೆಯಲ್ಲಿ
ಹೊಮ್ಮುವ ದನಿ ಇಂಪು
ನಾಳೆಗೆ ನನಸಾಗುವ
ಕನಸಿನ ಹೂ ಅರಳುವ ಕಂಪು... ಅಂದಿದ್ದಾರೆ.
ಮಳೆಗಾಲದಲ್ಲಿ ಅರಳುವ ಪ್ರೇಮದ ಬಗ್ಗೆ ಇನ್ನೊಬ್ಬ ಕವಿ...
ಮುಂಗಾರು ಮೋಡ ಕವಿದಾಗ
ಸಿಂಗಾರಿ ನಿನ್ನ ನೆನಪಾದಾಗ
ಹನಿ ಹನಿ ಜಿನುಗಲು
ಮುತ್ತಿನ ಮಣಿಗಳು
ಮನದಲ್ಲಿ ಏನೋ ಆವೇಗ... ಅಂದಿದ್ದಾನೆ. ಕಾಳಿದಾಸನ ಮೇಘ ಸಂದೇಶ ಕಾವ್ಯದಲ್ಲಿ ಮಳೆಗಾಲದಲ್ಲಿ ಪ್ರೇಮಿಯೊಬ್ಬನ ವಿರಹ ಮನೋಜ್ಞ ವರ್ಣನೆಯಿದೆ. ಈಗ ಎರಡು ಮೂರು ದಿನದಿಂದ ಬಿಡದೆ ಸುರಿಯುತ್ತಿರುವ ಮಳೆ ನೋಡಿದಾಗ ಪತ್ರಕರ್ತ ಚಿದಂಬರ ಬೈಕಂಪಾಡಿ ಅವರ ಹಾಡೊಂದು ನೆನಪಾಗುತ್ತಿದೆ. ಬಹುಶಃ ಚಿದಂಬರ ಪತ್ರಕರ್ತರೂ ಆಗಿರುವುದರಿಂದ ಅವರಿಗೆ ಮಳೆಯಿಂದಾಗಿ ಅನಾಹುತಗಳನ್ನು ವರ್ಣಿಸಿದ್ದಾರೆ. ಮನೆ ಬೀಳುವುದು, ರಸ್ತೆ ಹಾಳಾಗುವುದು ಎಲ್ಲವೂ ಕವನವಾಗಿವೆ ನೋಡಿ..
ನಿನ್ನೆ ಮಳೆ ಬಂತು
ಬೇಡವೆನ್ನುವಷ್ಟು
ಆಗಸವೇ ತೂತಾದಂತೆ
ಕುಸಿದು ಬೀಳುವಂತೆ
ಮನೆಯ ಮಾಡು
ಮಳೆ ಹನಿಗಳು...
ಯಾರೂ ಪ್ರಶ್ನಿಸದ
ಕಳಪೆ ಕಾಮಗಾರಿಯನ್ನು
ಪ್ರಶ್ನಿಸಿದಂತಿತ್ತು ಮಳೆ;
ಸಾಲು ಸಾಲು ಮನೆಗಳು
ನೆಲಕಚ್ಚಿದಾಗ-
ಚರಂಡಿಯನ್ನೇ ಮರೆಮಾಚಿದಾಗ
ಕರಗಿ ಇಟ್ಟಿಗೆ...
ಮಳೆ ಬಂತು
ಬೇಡಬೇಡವೆನ್ನುವಷ್ಟು
ಮಕ್ಕಳು ಶಾಲೆ ಮರೆವಷ್ಟು
ದೋಣಿಯಾಟ ಹಿತವೆನಿವಷ್ಟು...... ಎಂದು ಬರೆಯುತ್ತಾರೆ ಅವರು. ಬಾಲ್ಯ ನೆನಪಿಸುತ್ತಾರೆ. ಈಗಿನ ಮಕ್ಕಳಿಗೆಲ್ಲಿಯ ದೋಣಿಯಾಟ? ಅವರಿಗದು ಮರೆತೇ ಹೋಗಿದೆ. ಅವರಿಗಿಷ್ಟವಿದ್ದರೂ ಮಕ್ಕಳಾಡುವ ದೋಣಿಯಾಟಕ್ಕೆ ಅಪ್ಪ- ಅಮ್ಮಂದಿರ ಬಿರುಗಾಳಿ ಅಡ್ಡಿಯಾಗುತ್ತದೆ.ಅದೇನೇ ಇರಲಿ ಮಳೆ ಒಬ್ಬೊಬ್ಬ ಕವಿಗೆ ಒಂದೊಂದು ರೀತಿ. ಒಬ್ಬೊರಿಗೆ ಆಕಾಶ ಬಿಕ್ಕಿದಂತೆ, ಇನ್ನೊಬರಿಗೆ ಭೂಮಿ ಮೆದುವಾದಂತೆ, ಇನ್ನೊಬ್ಬರಿಗೆ ಮಾಯದಮಥ ಮಳೆಯಂತೆ ಕಂಡಿದೆ. ಮತ್ತೊಬ್ಬ ಕವಿ ಮಳೆಯಿಂದ ನಮ್ಮೊಳಗಿನ ಸ್ವಾರ್ಥ, ದುರಾಸೆಗಳೇ ಮಳೆಯಲ್ಲಿ ಕೊಚ್ಚಿ ಹೋಗಲಿ ಅಂದಿದ್ದಾರೆ.
ಸುರಿಯಲಿ, ತಂಪೆರೆಯಲಿ
ಅವಳ ಪ್ರೀತಿಯ ಮಳೆ
ಹರಿಯಲಿ ಬೋರ್ಗರೆಯಲಿ
ಬತ್ತಿದೆದೆಗಳಲೀ ಹೊಳೆ
ಕೊಚ್ಚಿ ಹೋಗಲಿ ಸ್ವಾರ್ಥ ದುರಾಸೆ
ಸ್ವಚ್ಛವಾಗಲಿ ಇಳೆ
ಚಿಮ್ಮಲಿ ಹಚ್ಚನೆ ಹಸಿರು...
ಕವಿಯ ಆಶಯಗಳು ಈಡೇರಲಿ. ಜನಕ್ಕೆ ಮಳೆಯ ಸಂತಸ ಅನುಭವಿಸುವ ಸಮಯ ದೊರೆಯಲಿ. ಪ್ರೇಮ ಅರಳಿ ದ್ವೇಷ ಮರೆಯಲಿ. ಟಿಪ್ ಟಿಪ್ ಬರಸಾ ಪಾನಿಯಲ್ಲಿ ನೆನೆಯುತ್ತ ಮಕ್ಕಳು ದೋಣಿ ಬಿಟ್ಟು ಹರ್ಷಿಸಲಿ.

4 comments:

ಗಿರೀಶ್ ರಾವ್, ಎಚ್ (ಜೋಗಿ) said...

ಜಿಪುಣ ಸೂರ್ಯ ಪ್ರಾಣಬಿಟ್ಟ
ವರುಷಪೂರ್ತಿ ಹೀರಿದ್ದನ್ನು
ಅವನ ಹೆಂಡತಿ ಮಕ್ಕಳು ದಾನ ಮಾಡುತ್ತಿದ್ದಾರೆ
ಮಳೆ
-ಜೋಗಿ

ವಿನಾಯಕ ಭಟ್ಟ said...

ಪೋಸ್ಟ್ ಮಾಡಿ ತಾಸಾಗಿಲ್ಲ ಆಗ್ಲೇ ನೋಡಿ, ಕಾಮೆಂಟ್ ಹಾಕಿದ್ದೀರಾ. ಧನ್ಯನಾದೆ ಶಿವಾ

minugutaare said...

chennaagigide guru. hengide?

dinesh said...

nice