ಕ್ರಿಕೆಟ್ಟು, ಫಿಲ್ಮು ನೋಡುವಾಗ ಪಕ್ಕನೆ ಕರೆಂಟ್ ಹೋಗೋದು, ಹಾರೋ ಹೆಲಿಕಾಪ್ಟರ್ಗಳು ತಟ್ಟನೆ ಕೆಳಗಿಳಿಯೋದು ಎರಡೂ ಇತ್ತೀಚೆಗೆ ಹೆಚ್ಚಾಗ್ಬಿಟ್ಟಿವೆ. ಒಂದು ವರ್ಷದ ಹಿಂದೆ ಶಿರಸಿಯಲ್ಲಿ ಒಂದು ಹೆಲಿಕಾಪ್ಟರ್ ಬಂದು ಮರದ ಮೇಲೆ ಪವಡಿಸಿತ್ತು. ಕಳೆದ ವಾರ ಸೋನಿಯಾ ಗಾಂಧಿಯ ಕಾರ್ಯಕ್ರಮದಲ್ಲಿ ಒಂದು ಹೆಲಿಕಾಫ್ಟರ್ ಗಡಿಬಿಡಿಯಲ್ಲಿ ಕೆಳಗಿಳಿಯಿತು. ಹಿಂದಿನ ವಾರ ಹೀಗೆ ಗಡಿಬಿಡಿ ಮಾಡಿದ ಚಿಕ್ಕ ವಿಮಾನ ಸೌಂದರ್ಯ ಸೇರಿದಂತೆ ನಾಲ್ಕು ಜನರ ಜೀವ ತಗೊಂಡು ಹೋಯ್ತು.
ಇತ್ತೀಚೆಗೆ ಮುಖ್ಯಮಂತ್ರಿ ಕುಮಾರಸ್ವಾಮಿ ಎರಡು ಬಾರಿ ಇಳಿಯಬೇಕಾದಲ್ಲಿ ಇಳಿಯದೆ ಇನ್ನೆಲ್ಲೋ ಇಳಿದರು. ಒಮ್ಮೆ ಕೆರೆಯಲ್ಲಿ ಹೆಲಿಕಾಫ್ಟರ್ ಇಳಿದರೂ, ನೀರಿಲ್ಲದೇ ಇದ್ದುದರಿಂದ ಬಚಾವಾದರು.ಈ ಹೆಲಿಕಾಫ್ಟರ್ಗಳು ಯಾಕ್ಬೀಳ್ತವೆ? ಹಾರೋವಾಗ ಇದ್ದಕ್ಕಿಂದ್ದಂಗೆ ಭೂಮಿಗೆ ಗುರುತ್ವಾಕರ್ಷಣ ಶಕ್ತಿ ಇದೆ ಅಂತ ಅದ್ಕೆ ನೆನಪಾಗಿ ಬಿಡುತ್ತಾ? ಅಥವಾ ಈ ರಾಜಕಾರಣಿಗಳಿಗೆ ಒಂದು ಪಾಠ ಕಲ್ಸೋಣ ಅಂತ ವಿಚಾರ ಮಾಡುತ್ತಾ? ಹೋಗ್ತಿದ್ದಂಗೆ ಸುಸ್ತಾಗಿ ಬಿಡುತ್ತಾ? ಗೊತ್ತಾಗಿಲ್ಲ.
ಈ ಹೆಲಿಕಾಪ್ಟರ್ಗಳು ಬೀಳೋ ಬಗ್ಗೆ ಒಂದು ಜೋಕಿದೆ. ಒಬ್ಬ ಹೆಲಿಕಾಪ್ಟರ್ ಚಲಾಯಿಸ್ಕೊಂಡು ಹಿಮಾಲಯದ ಮೇಲೆ ಹೋಗ್ತಿದ್ನಂತೆ. ಆಗ ಚಳಿ ಆಯ್ತು ಅಂತ ಹೆಲಿಕಾಪ್ಟರ್ನ ಫ್ಯಾನ್ (ಮೇಲೆ ತಿರುಗುತ್ತಾ ಇರುತ್ತಲ್ಲ) ಆಫ್ ಮಾಡಿಬಿಟ್ನಂತೆ. ಹಾಗೆ ಮೇಲೆ ಹಾರಾಡ್ತಿದ್ದವ ಕೆಳಗೆ ಬರೋದ್ಕಿಂತ ಮೇಲೆ ಹೋಗೋದೆ ಹತ್ರ ಹಂತ ಮೇಲೇ ಹೋಗ್ಬಿಟ್ನಂತೆ.ಈ ಹೆಲಿಕಾಪ್ಟರ್ಗಳು ಒಂಥರಾ ವಿಚಿತ್ರ. ಅದರಲ್ಲಿ ಯಾರೇ ಕುಳಿತಿರಲಿ. ಎಲ್ಲೇ ಹಾರುತ್ತಿರಲಿ ಇಳೀಬೇಕು ಅನ್ನಿಸಿದರೆ ಯಾರ ಮಾತೂ ಕೇಳದೇ ಅಲ್ಲೇ ತಕ್ಷಣ ಇಳಿದೇ ಬಿಡುತ್ವೆ. ಹೆಲಿಕಾಪ್ಟರ್ರೇ ಹಾಗೆ. ಅದು ಯಾರನ್ನೂ ಕ್ಯಾರ್ ಮಾಡಲ್ಲ. ಒಪ್ತೀರಿ ತಾನೆ. ಒಪ್ಲೇ ಬೇಕು. ಹಂಗಿದೆ ಹೆಲಿಕಾಪ್ಟರ್ ಮಹಿಮೆ.
ನಮ್ಮ ಯು.ಬಿ. ಕಂಪನಿ ಮಾಲಿಕ ಹಂಗನ್ನೋದಕ್ಕಿಂತ ಜನತಾಪಕ್ಷದ ಸಂಸ್ಥಾಪಕ ಅನ್ನೋದು ಸೂಕ್ತ. ಇಲೆಕ್ಷನ್ ಹತ್ರ ಬಂತಲ್ಲಾ ಅದ್ಕೆ. ಅವರ್ನ ಹೊತ್ಕೊಂಡು ಹೊಂಟಿದ್ದ ಹೆಲಿಕಾಪ್ಟರ್ ಇದ್ದಂಕ್ಕಿಂದ್ದಂಗೆ ಕೆಳಗಿಳಿದು ಬಿಡ್ತು. ಜನರಿಗೆ ಬಿಯರ್ ಕುಡಿಸಿದ ಪುಣ್ಯ ಮಲ್ಯ ಸಾಹೇಬ್ರು ಬಚಾವಾದ್ರು. ನಮ್ಮ ಮಾಜಿ ಪ್ರಧಾನಿ ಮುರಾರ್ಜಿ ದೇಸಾಯಿ ಅವರಿದ್ದಾರಲ್ಲ. ಅವರನ್ನೂ ಈ ಹೆಲಿಕಾಪ್ಟರ್ ಒಮ್ಮೆ ಕೆಳಗಿಳಿಸಿಬಿಟಿತ್ತು. ಮೊರಾರ್ಜಿ ಅವರು ಹಿಂಗೆ ಹಾರ್ಕೊಂಡು ಹೊಯ್ತಾ ಇರೋವಾಗ ಆ ಹೆಲಿಕಾಫ್ಟರ್ಗೆ ಎನನ್ಸಿತೋ ಏನೋ ಚಾಲಕನ ಮಾತು ಕೇಳದೆ ಹಠ ಹಿಡೀತು. ಅದರ ಹಠಕ್ಕೆ ಚಾಲಕ ಬಗ್ಗಿದನೋ ಇಲ್ಲವೋ ಹೆಲಿಕಾಪ್ಟರ್ ಕೆಳಗಿಳಿದಿತ್ತು.
ಇಳಿದು ಇಳಿದು ಲ್ಯಾಂಡ್ ಆದ್ದು ಎಲ್ಲಿ ಗೊತ್ತಾ? ಪಕ್ಕಾ ಕೆಸರು ಗದ್ದೆಯಲ್ಲಿ. ಅದೂ ನಾಟಿ ಕೆಲಸ ಮಾಡುತ್ತಿದ್ದವರ ಎದುರಲ್ಲೇ!ಪ್ರಧಾನಿಯಾದರೇನು? ಅನಿವಾರ್ಯ. ಕೆಸರಲ್ಲಿ ಇಳೀಲೇ ಬೇಕು. ಹಾರೋ ಲೋಹದ ಹಕ್ಕಿಯೊಂದು ಪಕ್ಕನೆ ಗದ್ದೆಯಲ್ಲೇ ಇಳಿದದ್ದು ಕಂಡು ಜನ ಬೆರಗಾಗಿ ನೋಡುತ್ತಿರುವಂತೆ ಮುರಾರ್ಜಿ ಕೆಸರು ಗದ್ದೆಯಲ್ಲಿ ಪಚಪಚನೆ ನಡೆದು ಬಂದರು. ಬಿಳಿ ಧೋತಿ ಉಟ್ಟ ಮನುಷ್ಯ ಗದ್ದೆಯಲ್ಲಿ ಬಂದಿದ್ದು ನೋಡಿ ಅಲ್ಲಿರೋರಿಗೆಲ್ಲ ಆಶ್ಚರ್ಯ. ಅವರಿಗೇನು ಗೊತ್ತು ದೇಶದ ಪ್ರಧಾನಿ ಇಳ್ದು ಬರ್ತಿರೋದು ಅಂತ!! ಎದ್ನೋ ಬಿದ್ನೋ ಅಂತ ಸ್ಥಳಕ್ಕೆ ಧಾವಿಸಿದ ಪೊಲೀಸರು ಅವರನ್ನು ಕರೆದುಕೊಂಡು ಹೋದರು.
ಹುಬ್ಬಳ್ಳಿ ಸಮೀಪ ರಾಜೀವ ಗಾಂಧಿ ಅವರ ಹೆಲಿಕಾಪ್ಟರ್ ಇಳಿದಾಗ ಅವರು ರಸ್ತೆವರೆಗೆ ನಡೆದುಕೊಂಡು ಬಂದು ಹೋಗುತ್ತಿರುವ ವಾಹನಕ್ಕೆ ಕೈ ಮಾಡಿ ಹತ್ತಿ ಹುಬ್ಬಳ್ಳಿ ತಲುಪಿದ್ದರು. ಬುಲೆಟ್ಪ್ರೂಫ್ ಕಾರಿಲ್ಲ. ಬೆಂಗಾವಲು ಪಡೆಯಿಲ್ಲ. ಏನೂ ಇಲ್ಲ. ಸಾದಾ ಮನುಷ್ಯನಂತೆ ರಸ್ತೆ ಬದಿಗೆ ನಿಂತು ಕೈ ಮಾಡಿದ್ದರು. ರಾಜೀವ ಗಾಂಧಿ ಅಂತ ಗುರುತಿಸಿದ ಯಾರೋ ಕಾರು ನಿಲ್ಲಿಸಿದ್ದರು.
ಇದೆಲ್ಲದಕ್ಕಿಂತ ಇಂಟರೆಸ್ಟಿಂಗ್ ಆದ ವಿಷ್ಯ ಇನ್ನೊಂದಿದೆ. ಮಾಜಿ ಮುಖ್ಯಮಂತ್ರಿ ದಿವಂಗತ ರಾಮಕೃಷ್ಣ ಹೆಗಡೆ. ಅವರನ್ನೂ ಹೆಲಿಕಾಪ್ಟರ್ ಕೆಳೆಗಿಳಿಸದೇ ಬಿಟ್ಟಿಲ್ಲ. ಒಮ್ಮೆ ರಾಮಕೃಷ್ಣ ಹೆಗಡೆ ಅವರಿದ್ದ ಹೆಲಿಕಾಪ್ಟರ್ ಕಡೂರಿನ ಪಂಚನಹಳ್ಳಿಯಲ್ಲಿ ಕೆಳಗಿಳೀತು. ಪುಣ್ಯಕ್ಕೆ ಮೈದಾನದಲ್ಲೇ ಇಳಿದಿತ್ತು. ಮುಖ್ಯಮಂತ್ರಿ ಅಲ್ವಾ? ಕೆಲವರಿಗೆ ಪರಿಚಯ ಇತ್ತು. ಒಂದು ಮನೆಗೆ ಕರೆದುಕೊಂಡು ಹೋಗಿ ಕೂರಿಸಿದ್ರು. ಚಹಾನೂ ಕೊಟ್ರು. ಹೀಗೆ ಮಾತಾಡ್ತಾ ಮಾತಾಡ್ತಾ ಹೇಗೂ ಹೆಲಿಕಾಪ್ಟರ್ ಮಹಿಮೆಯಿಂದ ಪಂಚನಹಳ್ಳಿಯಲ್ಲಿ ಇಳಿದ್ದೀರಿ. ಸುರಕ್ಷಿತವಾಗೂ ಇದ್ದೀರಿ. ಅದರ ನೆನಪಿಗೆ ಊರಿಗೆ ಏನಾದರೊಂದು ಯೋಜನೆ ಘೋಷಣೆ ಮಾಡಿ ಅಂತ ಯಾರೋ ಸಲಹೆ ಮುಂದಿಟ್ಟರು.
ಮುಖ್ಯಮಂತ್ರಿ ಅಲ್ವಾ? ಏನ್ಬೇಕೋ ಕೇಳಿ ಅಂದ್ಬಿಟ್ರು ಹೆಗಡೆ. ಸರಿ ಜನ ಕಾಲೇಜು ಕೇಳಿದ್ರು. ಹೆಗಡೆ ತಥಾಸ್ತು ಅಂದ್ರು. ಇಂದು ಹೆಗಡೆ ಇಲ್ಲ. ಆದರೆ ಅಂದು ಅವರ ಹೆಲಿಕಾಪ್ಟರ್ ಇಳಿದ ಪಂಚನಹಳ್ಳಿ ಮೈದಾನದಲ್ಲಿ ಸರಕಾರಿ ಕಾಲೇಜು ಇದೆ. ಅದನ್ನು ನೋಡಿದಾಗೆಲ್ಲ ಅಲ್ಲಿನವರಿಗೆ ರಾಮಕೃಷ್ಣ ಹೆಗಡೆ ನೆನಪಿಗೆ ಬರ್ತಾರೆ.
ಹೆಲಿಕಾಪ್ಟರ್ ಬಿದ್ದು ಏನಾದರೊಂದು ಲಾಭ ಆಗೋ ಹಾಗಿದ್ರೆ ನಮ್ಮೂರಲ್ಲೂ ಒಂದು ಹೆಲಿಕಾಫ್ಟರ್ ಬೀಳ್ಲಿ ಅಥವಾ ಇಳೀಲಿ ಅಂತ ದೇವರಲ್ಲಿ ಪ್ರಾರ್ಥಿಸೋಕೆ ಶುರುಮಾಡ್ಬೇಡಿ!ಒಂದ್ಮಾತ್ ಹೇಳಿ. ಮೇಲೇರಿದವನು ಕೆಳಗಿಳಿಯಲೇ ಬೇಕು ಅಂತ ಎಲ್ಲೆಂದರಲ್ಲಿ ಇಳಿಯೋ ಇಂಥ ಹೆಲಿಕಾಫ್ಟರ್ ನೋಡಿಯೇ ಹೇಳಿದ್ದಾರಾ?
4 comments:
ಮೇ ತಿಂಗಳಲ್ಲಿ 'ರಿಸಲ್ಟು' ಬರೆದ ಮೇಲೆ ೨ ತಿಂಗಳು ನೀವು ಮಾಯ! ಆಗಾಗ ಬಂದು ಇಣುಕಿ ನೋಡಿ ಹೋಗುತ್ತಿದ್ದೆ. ಈಗ ನೋಡಿದಾಗ ೩ ಬರಹಗಳು ೬ ದಿನಗಳ ಅಂತರದೊಳಗೆ! ಜೋಗಿ ಬಗ್ಗೆ, ಹೆಲಿಕಾಪ್ಟರ್ ಬಗ್ಗೆ ಮತ್ತು ಪ್ರಶಸ್ತಿ ಪಡೆದ ಚಲನಚಿತ್ರಗಳ ಬಗ್ಗೆ ಓದಿ ಬಹಳಷ್ಟು ತಿಳಿಯಿತು.
ಹೇಳಿಕೇಳಿ ಪತ್ರಕರ್ತ, ಬರಹಗಳು ಚೆನ್ನಾಗಿವೆ, ಹೀಗೇ ಬ್ಲಾಗಿಸುತ್ತಿರಿ :)
batre, HELICOPTER HEEGE HARUTHIRALI.. HAAGE SUMMANE..
- KRISHNA BHAT
ಚೆನ್ನಾಗಿದೆ ಹೆಲಿಕಾಪ್ಟರ್ ಮಹಿಮೆ :D
Post a Comment