Saturday, July 21, 2007

ಮುಂಗಾರು- ದುನಿಯಾ- ಕಹಾನಿಯಾ

ಎಷ್ಟೋ ದಿನದಿಂದ ಬರೀಬೇಕು ಅಂದ್ಕೊಂಡಿದ್ದೆ. ಆಗಿರ‍ಲಿಲ್ಲ. ಅಥವಾ ಆಲಸಿತನ ಅಂತಾದರೂ ಅಂದ್ಕೊಳ್ಳೀ. ಈಗ ಮುಂಗಾರು ಮಳೆ ಅತ್ಯುತ್ತಮ ಚಿತ್ರ, ದುನಿಯಾ ಎರಡನೇ ಅತ್ಯುತ್ತಮ ಚಿತ್ರ ಅಂತ ಪ್ರಶಸ್ತಿ ಪಡೆದಿವೆ. ಈಗಲೂ ಬರೆಯದೇ ಹೋದರೆ ಮನಸಿನ್ಯಾಗಿನ ಮಾತು ಮನಸಲ್ಲೇ ಉಳಿಯುವ ಸಾಧ್ಯತೆಯಿದೆ.ಮುಂಗಾರು ಮಳೆಗೆ ಜನ ತೋಯ್ದು ಹೋಗಿದ್ದಾರೆ.
ದುನಿಯಾದಲ್ಲಿ ಜನ ಜೀವಿಸುತ್ತಿದ್ದಾರೆ. ಬ್ಲಾಗುಗಳ ಲೋಕದಲ್ಲಿ ಇಣುಕಿದರೂ ಮುಂಗಾರು ಮಳೆಯದ್ದೇ ಸಿಂಚನ. ಮುಂಗಾರು ಮಳೆಯನ್ನು ಹೊಗಳದ ಬ್ಲಾಗೋತ್ತಮರೇ ಇಲ್ಲ ಎಂದರೂ ತಪ್ಪಿಲ್ಲ. ಆದರೆ ನಾನು ಹೇಳ್ತೀನಿ ಮುಂಗಾರು ಮಳೆಗಿಂತ ದುನಿಯಾ ಒಳ್ಳೆಯ ಚಿತ್ರ. ಜೀವನಕ್ಕೆ ಹತ್ತಿರವಾದ ಚಿತ್ರ.ಮುಂಗಾರು ಮಳೆ ಮತ್ತು ದುನಿಯಾ ಎರಡೂ ಸಿನೆಮಾ ನೋಡಿದವನಾಗಿ ನಾನು ಈ ಮಾತು ಹೇಳುತ್ತಿದ್ದೇನೆ. ಮುಂಗಾರು ಮಳೆಯಂತಹ ಚಿತ್ರ ಇರುವಾಗ ಅದಕ್ಕೆ ಸರಿಸಮನಾಗಿ ಶತಕ ಬಾರಿಸಿದ್ದು ದುನಿಯಾದ ಸಾಧನೆ.
ಮುಂಗಾರು ಮಳೆ ಚಿತ್ರ ನೋಡಿದ್ದರೆ ನೆನಪಿಸಿಕೊಳ್ಳಿ. ಗೆಳತಿಯರು ಮದುವೆಗೆ ಬರುತ್ತಾರೆಂದು ನಾಯಕಿ ರೈಲು ನಿಲ್ದಾಣಕ್ಕೆ ಹೊರಟು ನಿಲ್ಲುತ್ತಾಳೆ. ಆಕೆ ಇರುವುದು ಮಡಿಕೇರಿಯಲ್ಲಿ. ಅಲ್ಲಿಗೆ ಹತ್ತಿರ ರೈಲ್ವೆ ನಿಲ್ದಾಣವೆಂದರೆ ಮೈಸೂರು ಅಥವಾ ಮಂಗಳೂರು. ಈ ಎರಡೂ ಊರುಗಳಿಗೆ ಹೋಗುವಾಗಲೂ ಜೋಗ ಸಿಗುವುದಿಲ್ಲ. ಜೋಗ ಇರುವುದು ಉತ್ತರ ಕನ್ನಡ ಹೊನ್ನಾವರದಿಂದ ಸಾಗರಕ್ಕೆ ಅಥವಾ ಶಿವಮೊಗ್ಗಕ್ಕೆ ಹೋಗುವ ರಸ್ತೆಯಲ್ಲಿ. ಆದರೂ ನಾಯಕ- ನಾಯಕಿ ಜೋಗಕ್ಕೆ ಹೋಗುತ್ತಾರೆ. ಇರಲಿ ಅಂದ-ಚೆಂದಕ್ಕೆ ತೋರಿಸಿದ್ದಾರೆ ಅಂದುಕೊಳ್ಳೋಣ.ಹೀಗೆ ನಾಯಕಿ ಗೆಳತಿಯರನ್ನು ಕರೆತರಲು ಹೊರಟಾಗ ಅವಳಪ್ಪ ‘ನೀನು ಮದುಮಗಳು. ಒಬ್ಬಳೇ ಹೋಗಬೇಡ’ ಅಂತ ಹೇಳಿ ಜತೆಯಲ್ಲಿ ಗಣೇಶನನ್ನು ಕಳುಹಿಸುತ್ತಾನೆ. ಅವರು ಜೋಗ-ಗೀಗ ಎಲ್ಲೋ ಸುತ್ತಾಡಿ, ಕುಡಿದು ತೂರಾಡಿ, ಮಯ್ಯಿ-ಮನಸು ಎರಡನ್ನೂ ರಾಡಿ ಮಾಡಿಕೊಂಡು ಎಷ್ಟೋ ಹೊತ್ತಿನ ನಂತರ ಮನೆಗೆ ಮರಳಿ ಬರುತ್ತಾರೆ.
ಅಷ್ಟರಲ್ಲಿ ಗೆಳತಿಯರು ಮನೆ ತಲುಪಿರುತ್ತಾರೆ. ಗೆಳತಿಯರನ್ನು ಕರೆತರಲು ಮನೆಯಿಂದ ಹೋಗುವಾಗ ನಾಯಕಿಯನ್ನು ಒಬ್ಬಳೆ ಕಳುಹಿಸಲು ಒಪ್ಪದ ಅಪ್ಪ ಗೆಳತಿಯರು ಮನೆಗೆ ಬಂದು ಎಷ್ಟೋ ಹೊತ್ತಾದ ನಂತರ ಮನೆಗೆ ಮರಳಿದ ಮಗಳನ್ನು ಏಕೆ? ಏನು? ಎಲ್ಹೋಗಿದ್ರಿ? ಅಂತ ಕೇಳೋದಿಲ್ಲ.ಕೆಲವು ಮನೆಗಳಲ್ಲಿ ಮಗಳು ಕಾಲೇಜಿಂದ ಬರುವಾಗ ೧೫ ನಿಮಿಷ ತಡವಾದರೆ ರಂಪವೆದ್ದು ಹೋಗುತ್ತದೆ. ಅಫ್‌ಕೋರ್ಸ್ ಮುಂಗಾರು ಮಳೆಯ ಥರ ಆಗಿದ್ದರೆ ಯಾರ ಮನೆಯಲ್ಲಾದರೂ ಕೇಳಿರೋರು. ಬೈದಿರೋರು.
ಇದಕ್ಕಿಂತ ತರ್ಕದ ವಿಷಯ ಇನ್ನೊಂದಿದೆ. ನಾಯಕಿಯನ್ನು ಮದುವೆಯಾಗಲು ಬರುವ ಮಿಲಿಟ್ರಿ ಮಾಮ ಹಾಗೂ ಗೆಳೆಯರು ಮದುವೆ ಹಿಂದಿನ ದಿನವಷ್ಟೇ ಮದುವೆ ಮನೆ ಕಡೆ ಬರುತ್ತಿರುತ್ತಾರೆ. ಅವರನ್ನು ದಾರಿಯಲ್ಲಿ ಅಡ್ಡಗಟ್ಟಿ ಹಲ್ಲೆ ನೆಡೆಸಲಾಗುತ್ತದೆ. ಮಿಲ್ಟ್ರಿ ಮಾಮನ ಗೆಳೆಯರೆಲ್ಲ ಎಚ್ಚರ ತಪ್ಪಿ ಬಿದ್ದಿರುವ ದೃಶ್ಯವನ್ನು ಕೂಡ ನಿಮಗೆ ತೋರಿಸಲಾಗುತ್ತದೆ. ಆದರೆ ಮರುದಿನ ಬೆಳಗ್ಗೆ ಮದುವೆಗೆ ಬರುವಾಗ ಮಿಲ್ಟ್ರಿ ಮಾಮ ಅಥವಾ ಅವನ ಗೆಳೆಯರು ಮರ್ಯಾದೆಗೂ ಒಂದು ಚಿಕ್ಕ ಬ್ಯಾಂಡೇಜ್ ಹಾಕಿಕೊಂಡಿರುವುದಿಲ್ಲ. ಇದಪ್ಪ ಸಿನೆಮಾ ಅಂದ್ರೆ!!
ಈ ಕಾರಣಗಳನ್ನು ಇರಿಸಿಕೊಂಡು ನೋಡಿದರೆ ಮುಂಗಾರು ಮಳೆಗೆ ಮಾರ್ಕ್ಸ್ ಕಟ್. ಅದೇನೇ ಇರಲಿ ಜನ ಮೆಚ್ಚಿದ್ದಾರೆ. ತಜ್ಞರು ಪ್ರಶಸ್ತಿ ಕೊಟ್ಟಿದ್ದಾರೆ. ಆದರೂ ನನ್ನದೊಂದು ಸಣ್ಣ ಕ್ಯಾತೆ ಇರಲಿ. ಮುಂದಾದರೂ ಯೋಗರಾಜ ಭಟ್ಟರು ಅವರ ಸಿನಿಮಾದಲ್ಲಿ ಅಲ್ಲಲ್ಲಿ ಇಂತಹ ಸಿಲ್ಲಿ ಮಿಸ್ಟೇಕ್ ಮಾಡದಿರಲಿ.

4 comments:

ಶ್ರೀನಿಧಿ.ಡಿ.ಎಸ್ said...

olle vimarshe-cum - lekhana!:)

Lanabhat said...

ಹೌದು ನೀವಂದಿದ್ದು ಖಂಡಿತಾ ಸತ್ಯ...

ಮುಂಗಾರುಮಳೆಯಲ್ಲಿ ನೀವೆಂದಿರುವ ಎಲ್ಲಾ ತಪ್ಪುಗಳನ್ನೂ ಊಹಿಸಿಕೊಂಡಾಗ ತುಸುಚಿತ್ರದ ಮೇಲಿದ್ದ ಅಭಿಮಾನ ಕಡಿಮೆಯಾಯಿತು..

ಆದರೆ ಚಿತ್ರದ ಓಟ ಇದೆಲ್ಲವನ್ನೂ ಮರೆಮಾಚಿ ಪ್ರೇಕ್ಷಕನನ್ನು emotional mood ಗೆ ಇಳಿಸಿ ಬಿಟ್ಟಿರುತ್ತದಾದ್ದರಿಂದ ಇವನ್ನು ಹೆಚ್ಚಾಗಿ ಯಾರೂ ಗಮನಿಸಿರುವುದಿಲ್ಲ..

ಇನ್ನು ದುನಿಯಾ ಚಿತ್ರ ಒಂದು ಅತಿರೇಕ....

ದುನಿಯಾಕ್ಕಿಂತ ಮುಂಗಾರು ಮಳೆ ಚೆನ್ನಾಗಿದೆ(ತಪ್ಪುಗಳು ಆಗಿದ್ದರೂ)

ವಿನಾಯಕ ಭಟ್ಟ said...

ದುನಿಯಾ ಅತಿರೇಕ ಅಂತ ಅನ್ನಿಸಲ್ಲ. ಹಾಗೆ ನೋಡಿದರೆ ಮುಂಗಾರು ಮಳೆಯೇ ಅತಿರೇಕ. ಆದ್ರೂ ಚಿತ್ರ ಚೆನ್ನಾಗಿದೆ ಅಂತ ಒಪ್ಕೊಳ್ಳೆ ಬೇಕು.ದುನಿಯಾ ಚಿತ್ರದ ಡೈಲಾಗ್ ಗಳು, ಮುಂ ಮಳೆಗಿಂತ ಚೆನ್ನಾಗಿವೆ.

ವಿನಾಯಕ ಭಟ್ಟ said...

ಸಕಲೇಶಪುರದಲ್ಲಿ ಶೂಟಿಂಗ್ ಮಾಡಿ ಮಡಿಕೇರಿ ಅಂತ ತೋರಿಸಿದ್ದೂ ಅಲ್ಲದೆ, ಸಕಲೇಶಪುರದ ಹೆಸರೂ ಇಲ್ಲದಿರುವುದಕ್ಕೆ ಯೋಗರಾಜ ಭಟ್ಟರು ಕ್ಷಮೆ ಕೂಡ ಕೇಳಿದ್ದಾರೆ. ಜನರಿಗೆ ಯಾಕೆ ಸುಳ್ಳು ತೋರಿಸಬೇಕು?